ಹೋದ ದಶಕದಲ್ಲಿ ಶ್ರೀಲಂಕಾದಿಂದ ನಿರಾಶ್ರಿತನಾಗಿ ಬಂದು ಸಿಡ್ನಿಯಲ್ಲಿ ಇವನು ಅಂಗಡಿಯಿಟ್ಟಿದ್ದಾನೆ. ಇವನ ಅಂಗಡಿಯಲ್ಲಿ ನಮಗೆ ಬೇಕಾದ್ದೆಲ್ಲವೂ ಸಿಗುತ್ತದೆ. ಏನನ್ನೂ ಇಲ್ಲ ಅನ್ನುವುದಿಲ್ಲವೆಂಬ ಅವನನ್ನು ನೋಡಿದರೆ ನಮ್ಮ ಮನೆ ಬೀದಿಯ ಮೂಲೆಯಲ್ಲಿದ್ದ ಪೆಟ್ಟಿಗೆ ಅಂಗಡಿ ನೆನಪಾಗುತ್ತದೆ. ಅಷ್ಟು ಪುಟ್ಟ ಅಂಗಡಿಯಲ್ಲಿ ಕೇಳಿದ್ದೆಲ್ಲಾ ಸಿಗುವುದು ಸೋಜಿಗವಾಗುತ್ತಿತ್ತು. ಇಲ್ಲೂ ಅಂತಹದೇ ಅಂಗಡಿ ಇರುವುದು ನೋಡಿ, ಎಲ್ಲ ಊರಲ್ಲೂ, ಎಲ್ಲ ಬಗೆಯ ಜನರ ನಡುವೆಯೂ ಇಂತಹ “ಕಾಮಧೇನು”ಗಳು ಇರುವುದು ಸೋಜಿಗವಾಗಬೇಕಿಲ್ಲ ಅನಿಸುತ್ತದೆ.
ಈ ಶ್ರೀಲಂಕದ ತಮಿಳಿನವನ ಜತೆ ಮಾತಾಡುತ್ತಿದ್ದರೆ ಅವನ ಪ್ರೀತಿ ಅಸಹನೆಯ ಹರಹು (ಸ್ಪೆಕ್‌ಟ್ರಂ) ತಿಳಿಯುತ್ತದೆ. ಇತ್ತೀಚೆಗೆ ಇಂಡಿಯದಿಂದ ಬೇಳೆ ಕಾಳು, ಅಕ್ಕಿಯ ಅಮದಿಗೆ ತಡೆಯಾಗಿತ್ತು. ಅಂಗಡಿಯಲ್ಲಿ ಅದರ ಬೆಲೆಗಳು ಏರುತ್ತಿದ್ದವು. ಆಗ ಥಾಯ್ಲಾಂಡಿನ ಅಕ್ಕಿ, ಪಾಕಿಸ್ತಾನದ ಅಕ್ಕಿಯತ್ತ ನಮ್ಮ ಕಣ್ಣು ಹಾಯತೊಡಗಿತು. ಅವುಗಳಲ್ಲಿ ಯಾವುದು ಚೆನ್ನಾಗಿರುತ್ತದೆ ಎಂದು ಅಂಗಡಿಯವನಿಗೆ ಗೊತ್ತಿರುತ್ತದೆ ಎಂಬುದು ನಮ್ಮ ಅಂದಾಜು. ಆದರೆ ಅವನ ಉತ್ತರದಲ್ಲಿ ಅಕ್ಕಿಯ ಬಗ್ಗೆಗಿಂತ ಬೇರೆಯೇ ಸಂಗತಿಗಳು ಗೋಚರವಾಗುತ್ತಿತ್ತು. ಥಾಯ್ಲಾಂಡಿನ ಅಕ್ಕಿ ತಗೋಬೇಡಿ ನಮ್ಮ ಅಡುಗೆಗೆ ಅದು ಸರಿಹೋಗುವುದಿಲ್ಲ ಎಂದು ನಿರಾಳವಾಗಿ ಹೇಳಿ ಬಿಡುತ್ತಿದ್ದ. ಇಂಡಿಯಾದಿಂದ ಬರುವ “India Gate” ಅಥ್ವಾ “Camel brand” ಅಕ್ಕಿ ಬೆಲೆ ಸಿಕ್ಕಾಪಟ್ಟೆ ಜಾಸ್ತಿಯಾಗಿದೆಯಲ್ಲಾ, ಪಾಕಿಸ್ತಾನದ ಅಕ್ಕಿ ಹೇಗೆ ಎಂದು ಕೇಳಿದೆ. ಒಂದು ನಾಕು ಡಾಲರ್ ಜಾಸ್ತಿಯಾದರೂ ಇಂಡಿಯಾದ ಅಕ್ಕಿ ತಗೊಳ್ಳಿ, ಪಾಕಿಸ್ತಾನದ ಅಕ್ಕಿ ಯಾಕೆ ತಗೋತೀರ ಎಂದು ಮುಖ ಕಿವುಚುತ್ತಿದ್ದ. ಯಾಕೆಂದು ಹೇಳುತ್ತಿರಲಿಲ್ಲ. ತಾನು ಹೇಳದೇ ಅರ್ಥವಾಗುವ ಮಾತದು ಎಂಬಂತೆ ನೋಡುತ್ತಿದ್ದ. ಅಕ್ಕಿ ಹೇಗಿರುತ್ತದೆ ಎಂದು ಮಾತ್ರ ಹೇಳುತ್ತಿರಲಿಲ್ಲ. ಒಂದೊಮ್ಮೆ ಪರವಾಗಿಲ್ಲ ನೋಡೋಣ ಎಂದು ಪಾಕಿಸ್ತಾನದ ಅಕ್ಕಿಯೇ ಇರಲಿ ಅಂದಾಗ ನನಗೇನು, ಏನಾದರೂ ಮಾಡಿಕೊಳ್ಳಿ ಎಂಬಂತೆ ಮುಖ ಮಾಡಿ, ಭುಜ ಕುಣಿಸಿದ್ದ.
ಹಿಂದೊಮ್ಮೆ ಇವನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮುದುಕನೊಬ್ಬ ಇದ್ದಕ್ಕಿದ್ದಂತೆ ಮಾಯವಾದ. ಆ ತಮಿಳು ಮುದುಕನಂತೂ ತುಂಬಾ ಸಿಡುಕಿನವ. ಅವನು ಇಲ್ಲದ್ದು ಸೋಜಿಗವಾದರೂ ಹೆಚ್ಚೇನೂ ಯಾರಿಗೂ ಬೇಸರವಾದಂತೆ ಕಾಣಲಿಲ್ಲ. ಅವನ ಬಗ್ಗೆ ಹಲವು ಗುಸುಗುಸುಗಳೂ ಇದ್ದವು. ಅವನಿಗೆ ವೀಸಾ ಇರಲಿಲ್ಲವಂತೆ – ಹಿಡಿದು ಒಳಗೆ ತಳ್ಳಿದ್ದಾರೆ ಎನ್ನುವುದರಿಂದ ಹಿಡಿದು, ಪೆನ್ಷನ್ ಈಸ್ಕೊಂಡು, ಇಲ್ಲಿ ಕೆಲಸ ಮಾಡ್ತಾ ಟ್ಯಾಕ್ಸ್ ಆಫೀಸಿನವರ ಕೈಗೆ ಸಿಕ್ಕಿಬಿದ್ದಿದ್ದಾನೆ ಎಂದು ಹಲವು ವರ್ಶನ್‌ಗಳಿದ್ದವು. ಯಾವುದು ನಿಜವೋ ಯಾರಿಗೆ ಗೊತ್ತು. ಅಂಗಡಿಯವ ಮಾತ್ರ ಏನೂ ಹೇಳದೆ ಬಾಯಿ ಬಿಗಿದುಕೊಂಡಿರುತ್ತಿದ್ದ. ಕೆಲಸ ಬಿಟ್ಟುಬಿಟ್ಟ, ಈಗ ಎಲ್ಲಿದ್ದಾನೋ ಗೊತ್ತಿಲ್ಲ ಎಂದಷ್ಟೇ ಅವನ ಹೇಳಿಕೆ. ಹೆಚ್ಚು ಕೆದಕಿದರೆ ಹೋಗಲಿ ಬಿಡಿ ನಮಗ್ಯಾಕೆ ಎಂದು ಹೇಳಿ ಮಾತು ತಿರುಗಿಸಿಬಿಡುತ್ತಿದ್ದ. ಆ ಮುದುಕನ ಜಾಗದಲ್ಲೀಗ ಪಟಪಟನೆ ಮಾತಾಡುವ, ತುಸು ಅಧಿಕಪ್ರಸಂಗ, ತುಸು ತಲೆಹರಟೆ ಮಾಡುತ್ತಾ ಒಟ್ಟಾರೆ ಗೆಲುವಾಗಿರುವ ಹೊಸ ತಲೆಮಾರಿನ ಶ್ರೀಲಂಕದ ಹುಡುಗ ಸೇರಿಕೊಂಡಿದ್ದಾನೆ. ಕೆಲವೊಮ್ಮೆ ಇದ್ದಕ್ಕಿದ್ದಂತೆ ಗಂಭೀರವಾಗಿದ್ದರೂ ಮಾತಿಗೆ ನಗುತ್ತಲೇ ಉತ್ತರಿಸುತ್ತಾನೆ. ಒಳಹೊರಗೆ ಓಡಾಡಿಕೊಂಡು ಬೇರೆ ಬೇರೆ ಅಕ್ಕಿಗಳ ಬಗ್ಗೆ ಆಳವಾದ ಜ್ಞಾನವಿರುವವನಂತೆ ಭಾಷಣ ಬಿಗಿಯುವುದು ಕೇಳಿ ನಗುಬರುತ್ತದೆ. ಆ ಸಿಡುಕು ಮುದಕನಿಗಿಂತ ಈ ಹುಡುಗ ಸಾವಿರಪಾಲು ಪರವಾಗಿಲ್ಲ ಅನಿಸುತ್ತದೆ.
ಒಂದು ಭಾನುವಾರದ ಮಧ್ಯಾಹ್ನ ಹೆಚ್ಚು ಜನರಿಲ್ಲದ ಹೊತ್ತಲ್ಲಿ ಈ ಅಂಗಡಿಯ ತಮಿಳಿನವ ಮಾತಿಗೆ ಸಿಕ್ಕಿದ್ದ. ಹಲವು ದಿನಗಳಿಂದ ಗೊತ್ತಿದ್ದರೂ ಹೀಗೆ ಮಾತಿಗೆ ಸಿಕ್ಕಿರಲಿಲ್ಲ. ಈಗ ಮೂವತ್ತರ ನಡುವಿನಲ್ಲಿರುವ, ಸಣ್ಣ ಆಕೃತಿಯ ಅವನು ಶ್ರೀಲಂಕಾದಿಂದ ಹುಡುಗನಾಗಿ ಓಡಿ ಬಂದದ್ದು, ಈಗ ಎರಡು ಅಂಗಡಿ ನಡೆಸುತ್ತಿರುವುದು, ನಾಕಾರು ಜನರನ್ನು ಕೆಲಸಕ್ಕಿಟ್ಟುಕೊಂಡಿರುವುದು, ಇಂಡಿಯಾದಿಂದ ಅಮದು ಮಾಡಿಕೊಳ್ಳುವಾಗಿನ ಲಂಚಕೋರತನ ಹಾಗು ಕಷ್ಟ ಕೋಟಲೆಗಳು ಎಲ್ಲ ವಿವರಿಸಿದ. ಅವನು ಶ್ರೀಲಂಕಾದಿಂದ ತಪ್ಪಿಸಿಕೊಂಡು ಓಡಿದ ಬಗ್ಗೆ ಮಾತು ತಿರುಗಿದಾಗ ಅವನ ದನಿ ತಗ್ಗಿತು. ಅಂಗಡಿಯಲ್ಲಿ ಯಾರೂ ಇರಲಿಲ್ಲವಾದರೂ, ಆ ಸಂಗತಿಗೆ ಸರಿ ಹೊಂದುವಂತಹ ತಗ್ಗಿಸಿದ ದನಿ ಬೇಕೆಂಬಂತಿತ್ತು.
“ಶ್ರೀಲಂಕಾದ ತಮಿಳರಿಗೆ ನಿಜವಾಗಿಯೂ ಯಾರೂ ಆಗಿಬಂದಿಲ್ಲ. ನಮ್ಮ ನುಡಿ, ಆಚಾರ-ವಿಚಾರಕ್ಕೆ ಅಡ್ಡಿ ಬರದಿದ್ದರೆ ಸಾಕಿತ್ತು. ಅಷ್ಟು ಸಣ್ಣ ವಿಷಯ ಕೇಳುವುದೂ ವಿಪರೀತ ಅಂದುಬಿಟ್ಟರೆ, ಆಗ ಬಂದ ಸಿಟ್ಟಲ್ಲಿ ವಿಪರೀತವಾಗಿ ಕೇಳುವುದು ಸಹಜವಾಗುತ್ತದೆ ಅಲ್ಲವೆ” ಅಂದ. “ಹಲವು ವರ್ಷಗಳಿಂದ ನಡೆಯುತ್ತಾ ಬಂದಿದ್ದ ಚಳವಳಿಯನ್ನು ಕ್ಯಾರೆ ಅಂದಿರಲಿಲ್ಲ. ಬಂದೂಕು ಕೈಗೆತ್ತಿಕೊಂಡಾಗ ಎಲ್ಲರೂ ನ್ಯಾಯ ಹೇಳುವವರೇ. ಶ್ರೀಲಂಕಾದ ಸೈನ್ಯದ ವಿಪರೀತಗಳು ಹೆಚ್ಚುತ್ತಾ ಹೋದಂತೆ, ತಮಿಳರ ಮನಸ್ಸೂ ಗಟ್ಟಿಯಾಗುತ್ತಾ ಹೋಯಿತು” ಅನ್ನುತ್ತಾನೆ. “ನಂತರ ಬಂದ ಇಂಡಿಯಾದ ಸೈನ್ಯ ತುಸುವಾದರೂ ಶಾಂತಿ ಮಾನ ಮರ್ಯಾದೆ ಕಾಪಾಡಬಹುದು ಅಂದುಕೊಂಡಿದ್ದ ನಾವು ಕಂಗೆಟ್ಟು ಅತ್ಯಂತ ನಿರಾಶರಾದೆವು. ಇಂಡಿಯಾದ ಸೈನಿಕರೇ ತಮಿಳರನ್ನು ಕೊಚ್ಚಿಹಾಕಿ, ಮನೆಗಳ ಒಳಗೆ ಬಾಂಬೆಸೆದು ಮಕ್ಕಳು ಮರಿಯೆನ್ನದೆ ಕೊಂದು ಅತ್ಯಂತ ಕ್ರೂರವಾಗಿ ನಡಕೊಂಡಿದ್ದರು. ನಮ್ಮ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮಾಡಿದ್ದನ್ನು ಕಣ್ಣಾರೆ ನೋಡಿದ್ದೇನೆ” ಎಂದಾಗ ಅವನ ಮನಸ್ಸಿನ ಆಳದ ಗೊಂದಲ ಧುತ್ತೆಂದು ಎದುರಾಯಿತು. ಎಷ್ಟಾದರೂ ಇಂಡಿಯಾದ ಅಕ್ಕಿಯನ್ನು ಕೊಳ್ಳಿ ಎಂದವನು ಇವನೇ ಅಲ್ಲವೆ ಅನಿಸಿದಾಗ ಹೊಳೆದದ್ದು : ಒಂದು ದೇಶದ ಜನರಿಗೂ ಅದರ ಸೈನ್ಯಕ್ಕೂ ಇರುವ ಅಜಗಜಾಂತರವನ್ನು ಇವನ ಸ್ವಂತ ಅನುಭವ ಕಲಿಸಿದೆ. ಆ ವ್ಯತ್ಯಾಸ ಅರ್ಥವಾಗಲು ಪಂಡಿತನಾಗಲೀ, ನಿಷ್ಣಾತನಾಗಲೀ, ವಿಜ್ಞಾನಿಯಾಗಲೀ ಆಗಬೇಕಿಲ್ಲ ಅಂತ. ಆದರೆ ಇವನ ಅದೇ ಅನುಭವದ ಬೆಳಕು ಪಾಕಿಸ್ತಾನದ ಕಣಿವೆಗಳಲ್ಲಿ ಅಕ್ಕಿ ಬೆಳೆಯುವ ಮಂದಿಯ ಬಗ್ಗೆಯೂ ವಿಸ್ತರಿಸಿಲ್ಲವಲ್ಲ, ಏಕಿರಬಹುದು ಎಂದು ಕೇಳಿಕೊಂಡೆ. ಸ್ವಂತ ಅನುಭವವನ್ನೂ ಅಲ್ಲಗಳೆಯಬಲ್ಲ, ಅದರ ಬೆಳಕಲ್ಲಿ ನೋಡಗೊಡದ ಪೂರ್ವನಿರ್ಧಾರಗಳು ಅದೆಷ್ಟು ಆಳ ಮತ್ತು ಗಟ್ಟಿ ಇರಬಹುದು ಎಂದು ಅಚ್ಚರಿಗೊಂಡೆ.
ತಮಿಳು ಹುಲಿಗಳ ಜತೆ ಸೇರಿದರೆ ಬದುಕಿಲ್ಲ ಎಂದು ಅರಿವಾಗಿ ಮದ್ರಾಸಿಗೆ ತಪ್ಪಿಸಿಕೊಂಡು ಬಂದನಂತೆ. ಅಲ್ಲಿಂದ ಆಸ್ಟ್ರೇಲಿಯಕ್ಕೆ ಬಂದು ನೆಲೆ ನಿಂತಿದ್ದೀನಿ ಎಂದು ನಿಟ್ಟುಸಿರುಬಿಟ್ಟು ಮಾತು ಮುಗಿಸಿದ. ಜನರಿಲ್ಲದ ಅಂಗಡಿಯಲ್ಲಿ ಅರ್ಧ ನಗುವಿನ ಅರ್ಧ ವಿಷಾದದ ಮುಖ ಹೊತ್ತು, ಕುರಚಲು ಗಡ್ಡದ, ಪುಟ್ಟ ಆಕೃತಿಯ ಅವನು ನೋಡುತ್ತಾ ನಿಂತುಬಿಟ್ಟ.
ಆಸ್ಟ್ರೇಲಿಯಾದ ನಿವಾಸಿಯಾಗಿರುವ ಅನಿವಾಸಿ ಕನ್ನಡ ಬರಹಗಾರ, ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ.ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಕ್ಷೇತ್ರಗಳಲ್ಲಿ ಅತೀವ ಆಸಕ್ತಿ ಉಳ್ಳವರು. ‘ಮುಖಾಮುಖಿ’ ಹಾಗೂ ‘ತಲ್ಲಣ’ ಇವರಿಗೆ ಹೆಸರು ತಂದುಕೊಟ್ಟ ಚಲನಚಿತ್ರಗಳು.