ಅವತ್ತೆ ಹುಚ್ಚರಾಮ ನಿಶ್ಚಯಿಸಿಬಿಟ್ಟ. ಅವ್ವಗೆ ಹೇಳಿ ತಾನು ಹ್ಯಾಂಗಾದರೂ ಮಾಡಿ ಯಾವ ಹೆಂಗ್ಸನ್ನಾದರೂ ಲಗ್ನ ಆಗಿ ಬಿಡಬೇಕು. ನಾಳೆಯೇ ಅವ್ವಳನ್ನು ಕೇಳಿಬಿಡಬೇಕು. ಅವ್ವ ಯಾರನ್ನಾದರೂ ತಂದು ನನಗೆ ಗಂಟು ಹಾಕಿಯೇ ಹಾಕುತ್ತಾಳೆ ಎಂಬ ಭರವಸೆಯೊಂದಿಗೆ ಆತ ಅವತ್ತು ಮಲಗಲು ಪ್ರಯತ್ನಿಸಿದ. ಆದರೆ ಮಲಗಲು ಪ್ರಯತ್ನಿಸಿದ್ದೆ ಬಂತು. ನಿದ್ದೆ ಹತ್ತಿರ ಸುಳಿಯಲಿಲ್ಲ. ‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ಹನಮಂತ ಹಾಲಿಗೇರಿ ಬರೆದ “ಸಕಲರೋಳು ಲಿಂಗಾತ್ಮಾ ಕಾಣಾ” ಕಥೆ ನಿಮ್ಮ ಈ ಭಾನುವಾರದ ಓದಿಗೆ

`ಹುಚ್ಚನಿಗೂ ಹುಡುಗಿಯರ ಖಯಾಲಿ’ ಎಂಬ ಶಿರ್ಷಿಕೆ ಹೊತ್ತ ಸುದ್ದಿಯೊಂದು ಟಿವಿಯಲ್ಲಿ ಬಿತ್ತರಗೊಳ್ಳುತ್ತಿದ್ದುದನ್ನು ನೋಡಿದ ರತ್ನ ಇನ್ನೇನೂ ಹೋಗಿ ಮಲಗಬೇಕೆಂದವಳು ಕ್ಷಣ ನಿಂತು ನೋಡಿದಳು. ಒಮ್ಮೆಲೆ ಪರಿಚಿತ ಮುಖವೊಂದು ಟಿವಿ ಪರದೆಯನ್ನು ಆವರಿಸಿದಾಗ ತಕ್ಷಣಕ್ಕೆ ಗಾಬರಿಯಾಗಿ ಯಲ್ಲವ್ವಜ್ಜಿಯನ್ನು ಕೂಗಿದಳು. ಒಡೋಡುತ್ತ ಬಂದ ಮುದುಕಿ ಟಿವಿಯಲ್ಲಿ ತನ್ನ ಮಗ ಹುಚ್ಚರಾಮನನ್ನು ವಿಚಿತ್ರ ದೃಶ್ಯಗಳಲ್ಲಿ ನೋಡುತ್ತಾ ನಿಂತಲ್ಲಿಯೆ ಕುಸಿದು ಕುಳಿತಳು.

ಟಿವಿಯ ಪರದೆಯ ಮೇಲೆ ಒಂದು ಮಂಡಂಗಿ ಮತ್ತು ದೊಗಳೆ ಪ್ಯಾಂಟನ್ನು ಹಾಕಿಕೊಂಡಿದ್ದ ನೋಡಲು ಹುಚ್ಚನಂತಿದ್ದ ಒಬ್ಬ ವ್ಯಕ್ತಿಯ ಎದೆಯ ಮೇಲಿನ ಅಂಗಿಯನ್ನು ಒಂದಿಬ್ಬರು ಹುಡುಗರು ಹಿಡಿದುಕೊಂಡಿದ್ದರು. ನೋಡಲಿಕ್ಕೆ ಕಾಲೇಜು ಕನ್ಯೆಯರಂತೆ ಕಾಣುತ್ತಿದ್ದ ಐದಾರು ಹುಡುಗಿಯರು ಸರತಿಯಂತೆ ಒಬ್ಬರಾದ ಮೇಲೆ ಒಬ್ಬರು ಆ ಅರೆ ಹುಚ್ಚನ ಹೊಟ್ಟೆ, ಮುಖ ಮೋತಿಗಳೆನ್ನದೆ ಎಲ್ಲೆಂದರಲ್ಲಿ ಜಜ್ಜುತ್ತಿದ್ದರು. ಒಬ್ಬ ವೀರನಾರಿಯಂತೂ ಕೈಯಲ್ಲಿ ತನ್ನ ಹೈಹಿಲ್ಡ್ ಚಪ್ಪಲಿ ಹಿಡಿದು ಅವನ ಮುಖದ ಮೇಲೆ ಕುಕ್ಕುತ್ತಿದ್ದಳು. ಆ ಹುಚ್ಚನ ತುಟಿ ಹರಿದು ರಕ್ತ ಜಿನುಗತೊಡಗಿತು. ಸುತ್ತಲು ನಿಂತಿದ್ದ ಹುಡುಗರಂತೂ `ನಿಮ್ಮೌವನ ನಿನಗ ಅಕ್ಕತಂಗ್ಯಾರ ಅದಾರಿಲೊ? ನೋಡಾಕ ಹುಚ್ಚ ಇದ್ದಾಂಗದಿ. ನಿನಗ ಹುಡುಗ್ಯಾರ ಬೇಕಲೆ ಮಗನ’ ಅಂದು ಬೈಯತ್ತಲೆ ಸಿನೆಮಾದಲ್ಲಿನ ಹೀರೋಗಳು ಖಳನಾಯಕರನ್ನು ಗುಮ್ಮುವಂತೆ ಆ ಹುಚ್ಚನ ಮೆದುವಾದ ಜಾಗದಲ್ಲಿ ಗುಮ್ಮುತ್ತಿದ್ದರು. ಆ ಹುಚ್ಚ `ಅವ್ವವ್ವೋ ಎಪ್ಪಪ್ಪೋ’ಎಂದಾಗಲೆಲ್ಲ ಇವರಿಗೆ ಮತ್ತಷ್ಟು ಹುರುಪು ಬರುತ್ತಿತ್ತು. ಅದರಲ್ಲಿಯೂ ತಮ್ಮ ಕಾಲೇಜು ಹುಡುಗಿಯರ ಮುಂದೆ ತಮ್ಮ ಪೌರುಷದ ಪರಾಕ್ರಮ ಪ್ರದರ್ಶಿಸಲು ಸಿಕ್ಕ ಅವಕಾಶವನ್ನು ಅವರು ಸರಳವಾಗಿ ಬಿಟ್ಟು ಕೋಡಬೇಕೆ?

ಇಂತಹ ದೃಶ್ಯಗಳನ್ನು ರಿಪೀಟು ಮಾಡಿ ತೋರಿಸಿ ತಾನೆ ಬೋರುಪಟ್ಟುಕೊಂಡ ನಮ್ಮ ಪ್ರಜಾಪ್ರಭುತ್ವದ ನಾಲ್ಕನೆ ಆಧಾರಸ್ಥಂಭ ಎನಿಸಿಕೊಂಡಿರುವ ಟಿವಿವಾಹಿನಿ ದೃಶ್ಯಕರ್ತ ಇದಕ್ಕೆ ಸ್ವಲ್ಪ ಒಗ್ಗರಣಿ ಹಾಕೋನು ಅನಕೊಂಡು ಸುತ್ತ ಮುತ್ತಲಿನ ಹುಡುಗ ಹುಡುಗಿಯರನ್ನು ಆ ಅರೆಹುಚ್ಚ ಮಾಡಿದ ಆವಾಂತರಗಳೆನು ಅನ್ನುವುದರ ಬಗ್ಗೆ ಬೈಟ್ ತೆಗೆದುಕೊಳ್ಳಲು ಸಿದ್ಧನಾದ. ತಮ್ಮ ಮುಖಾರವಿಂದವೂ ಟಿವಿಯಲ್ಲಿ ಬರುತ್ತದೆ ಎಂದೊಂಡನೆ ಫುಲ್ ಖುಷಿಯಾದ ಹುಡುಗರು ತಮ್ಮ ಕ್ರಾಪು, ಬಟ್ಟೆಗಳನ್ನು ನೀವಿಕೊಂಡು ನಿಂತಲ್ಲಿಯೆ ರಿಹರ್ಸಲ್ ನಡೆಸಿ ತಯಾರಾದರು. ಆದರೆ ದೃಶ್ಯಕರ್ತ ಹುಡುಗರನ್ನು ಪಕ್ಕಕ್ಕೆ ಸರಿಸಿ ಕನ್ಯಾಮಣಿಗಳನ್ನು ಮುಂದಕ್ಕೆ ಕರೆದಾಗ ಹುಡುಗರು ಕೊಂಚ ನಿರಾಶರಾಗಿ ಅಲ್ಲಿಯೆ ಗುಂಪುಗಟ್ಟಿದರು.

ಕೈಯಲ್ಲಿ ಚಪ್ಪಲಿ ಹಿಡಿದುಕೊಂಡಿದ್ದ ಆ ವೀರರಮಣಿಯು ಆ ಅರೆ ಹುಚ್ಚನಿಗೆ ಹೊಡೆದದ್ದು ಸಾಕೆನಿಸಿಯೋ, ಟಿವಿ ವಾಹಿನಿಯಲ್ಲಿ ತನ್ನ ಅರಳುವ ಮುಖ ತೊರಿಸುವ ಸದ್ದುದ್ದೇಶಕ್ಕೊ ಅಥವಾ ತನ್ನ ಬಾಯಿ ಚಪಲ ತಣಿಸಿಕೊಳ್ಳುವುದಕ್ಕೊ ದಿಡೀರ್ ಎಂದು ಬಂದು ಕ್ಯಾಮರಾ ಮುಂದೆ ಪ್ರತಿಷ್ಠಾಪಣೆಗೊಂಡಳು. ಎರಡು ಸಲ ಕೆಮ್ಮಿ ಧ್ವನಿ ಸರಿಪಡಿಸಿಕೊಂಡು `ಮಯ್ ನೇಮ್ ಇಜ್ ನಳಿನಿ ಅಂತ. ಎವರಿಡೇ ಮಾರ್ನಿಂಗ್ ಆ್ಯಂಡ್ ಆಫ್ಟರ್‍ನೂನ್ ನಾವು ಈ ಸೈಡ್‌ನಿಂದ ಆ ಸೈಡ್‌ಗೆ ಈ ಬ್ರೀಡ್ಜ್ ಇನಸೈಡ್‌ನಿಂದ ಕಾಲೇಜಿಗೆ ಹೋಗುತ್ತಿದ್ದೆವು. ಕೆಲವು ದಿನಗಳೆ ಹಿಂದೆ ಈ ಮ್ಯಾಡ ಮ್ಯಾನ್ ಇಲ್ಲಿ ಬ್ರಿಡ್ಜ್ ಇನಸೈಡನಲ್ಲಿ ನಿಂತು ಹುಡುಗೀರನ ಚುಡಾಯಿಸುತ್ತಿದ್ದಾನೆ. ಫಸ್ಟ್ ನಾವು ಕೇರ್ ಮಾಡಲಿಲ್ಲ. ಬಟ್‌ ಎವರಿಡೆ ಈ ಸ್ಟುಪಿಡ್ ಜಾಸ್ತಿ ಹುಚ್ಚಾಟ ನಡೆಸಿದ. ಹುಡುಗೀರನ ಫಾಲೋ ಮಾಡೋದು, ಸ್ಮೆಲ್ ಮಾಡೋದು’ ಮುಂತಾದ ರೀತಿಯಲ್ಲಿ ಕಿರಿಕಿರಿ ಮಾಡುತ್ತಿದ್ದ ಎಂದು ಆ ವೀರ ರಮಣಿ ತನ್ನದೆಯಾದ ಕಂಗ್ಲೀಷ್ ಭಾಷೆಯಲ್ಲಿ ಹೇಳುತ್ತಿರಬೇಕಾದರೆ ಒಬ್ಬ ಅವಳನ್ನೆ ತನ್ನ ಆಸೆಗಣ್ಣುಗಳಿಂದ ನೋಡುತ್ತ `ಅಷ್ಟೆ ಅಲ್ಲ ಸರ್ ಯಾವಾಗಲೂ ತೊಡೆಸಂದಿಯಲ್ಲಿ ಕೈ ಇಟ್ಟುಕೊಂಡಿರತ್ತಿದ್ದ. ಇನ್ನೊಂದು ವಿಷಯ ಸರ್, ಒಂಟಿ ಹುಡುಗೀರು ಕಂಡ್ರೆ ಇವನು ಒಮ್ಮೊಮ್ಮೆ ತನ್ನ ಈ ದೊಗಳೆ ಪ್ಯಾಂಟನ್ನು ಬಿಚ್ಚುತ್ತಿದ್ದ ಸರ್’ ಎಂದು ದೃಶ್ಯಕರ್ತನ ಕಿವಿಯ ಹತ್ತಿರ ಬಂದು ಮಹಾನ್ ಗುಟ್ಟೊಂದನ್ನು ಉಸುರಿದ.

ಪ್ರಮೋಷನ್ ಆಸೆಯಿಂದ ವಿಭಿನ್ನ ಶೈಲಿಯ ಹಸಿಬಿಸಿ ಸುದ್ದಿಗಾಗಿ ತುಡಿಯುತ್ತಿದ್ದ ಆ ದೃಶ್ಯಕರ್ತನು ಪ್ಯಾಂಟು ಬಿಚ್ಚುವ ಶಬ್ದ ಕಿವಿಗೆ ಬಿದ್ದೊಡನೆ ಇದನ್ನು ಪ್ರಾಕ್ಟಿಕಲ್ ಸಮೇತ ಟಿವಿಯಲ್ಲಿ `ಬಿಸಿಬಿಸಿಯಾಗಿ ತೋರಿಸಿದರೆ’ ಎಂಬ ವಿಚಾರ ಹೊಳೆದು, ತಕ್ಷಣವೆ ಅದನ್ನು ಕೃತಿಗೆ ಇಳಿಸುವಲ್ಲಿ ಕಾರ್ಯಪ್ರವೃತ್ತನಾದನು. ಯಾವ ಹುಡಗನು ತನ್ನ ಕಿವಿಯಲ್ಲಿ ಉಸುರಿದ್ದನೊ ಅದೆ ಹುಡುಗ ಮತ್ತು ಆ ಹುಡುಗನ ಗೆಳೆಯರನ್ನು ಸಾಧನವನ್ನಾಗಿ ಮಾಡಿಕೊಳ್ಳಲು ನಿರ್ಧರಿಸಿದನು. ಈ ಕೆಲಸಕ್ಕೆ ಕೆಲವು ಹುಡುಗರು ಹೇಸಿಗೆ ಪಟ್ಟುಕೊಂಡು ಹಿಂದಕ್ಕೆ ಸರಿದರು. ಮತ್ತೆ ಕೆಲವರು ತಮ್ಮ ಮುಖಾರವಿಂದ ಟಿವಿಯಲ್ಲಿ ಅರುಳುತ್ತದೆ ಎಂಬ ಆಸೆಗೆ ಬಿದ್ದು ಆ ಅರೆ ಹುಚ್ಚನ ಮೇಲೆ ದಾಳಿ ನಡೆಸಿ `ಹ್ಯಾಂಗ ಪ್ಯಾಂಟು ಬಿಚ್ಚುತ್ತಿದ್ದಿ ಈಗ ತೋರಿಸು ಮಗನ’ ಅನಕೋತ ಅವನಿಗೆ ಗುದ್ದತೊಡಗಿದರು. ಇನ್ನು ತನಗೆ ಬೇರೆ ದಾರಿಯೆ ಇಲ್ಲ ಎನಿಸಿದಾಗ ಆ ಹುಚ್ಚ ನಿಧಾನಕ್ಕೆ ತನ್ನ ಪ್ಯಾಂಟು ಬಿಚ್ಚತೊಡಗಿದ. ದೃಶ್ಯಗಳನ್ನು ನೋಡುತ್ತಿದ್ದ ಆ ಅರೆ ಹುಚ್ಚನ ಮುಪ್ಪಾನು ಮುದುಕಿ ಯಲ್ಲವ್ವನ ಕಣ್ಣಾಲಿಗಳು ತೇವಗೊಂಡು ಟಿವಿಯಲ್ಲಿನ ದೃಶ್ಯಗಳು ಮಸುಕು ಮಸುಕಾಗತೊಡಗಿದವು.

*****

ಬಾಗಲಕೋಟೆಯ ಉದಗಟ್ಟಿ ಹಳ್ಳಿಯಲ್ಲಿ ಯಲ್ಲಮ್ಮಜ್ಜಿ ಮನೆತನವು ತಲೆತಲಾಂತರದಿಂದಲೂ ದುರಗವ್ವನ ಗುಡಿಯ ಪೂಜಾರಿಕೆ ಮಾಡಿಕೊಂಡು ಬರುತ್ತಿದೆ. ಇತ್ತ ಹುಚ್ಚನೂ ಅಲ್ಲದ ಅತ್ತ ಶ್ಯಾನಾನೂ ಅಲ್ಲದ ಕನಕಪ್ಪನಿಗೆ 38 ವರ್ಷಗಳ ಹಿಂದೆ ಈ ಯಲ್ಲಮ್ಮಜ್ಜಿಯನ್ನು ಮದುವೆ ಮಾಡಿಕೊಡಲಾಗಿತ್ತು. ಅಷ್ಟೆನೂ ಅನಕೂಲಸ್ತರಲ್ಲದ ಯಲ್ಲಮ್ಮಜ್ಜಿಯ ತವರು ಮನೆಯವರು ದುರಗವ್ವನ ಪೂಜಾರಿಕೆಗೆ ಮರುಳಾಗಿ ಹುಡುಗ ಸ್ವಲ್ಪ ಮಬ್ಬ ಇದ್ರೂ ಮಗಳು ಸುಖವಾಗಿರತಾಳ ಅನಕೊಂಡು ಮದುವಿ ಮಾಡಿಕೊಟ್ಟಿದ್ದರು. ಯಲ್ಲವ್ವ ದುರಗವ್ವನ ಗುಡಿ ಪೂಜಾರಿಕೆ ನಿಭಾಯಿಸುತ್ತಲೆ ಹುಚ್ಚ ಗಂಡನೊಂದಿಗೆ ಬಿಗಿಯಾಗಿ ಬದುಕು ಸಾಗಿಸುತ್ತಾ ಸರೀಕರೊಂದಿಗೆ ಹೌದೌದು ಎನಿಸಿಕೊಂಡಿದ್ದಳು. ತಿಂಗಳೊಳಗ ನಾಕ ದಿನ ಊರಾಗಿದ್ದರ ಹತ್ತಾರು ದಿನ ಭಕ್ತರ ಮನೆಗೆ ಭಿಕ್ಷಾ ಬೇಡಾಕ ದೇಶಾಂತರ ಹೋಗುತ್ತಿದ್ದ ಕನಕಪ್ಪ, ಯಲ್ಲಮ್ಮಜ್ಜಿ ಬದುಕಿಗೆ ಒಂದು ಹೆಣ್ಣು ಮತ್ತು ಎರಡು ಗಂಡು ಮಕ್ಕಳನ್ನು ಜೋಡು ಮಾಡಿದ ನಂತರ ಒಂದಿನ ದೇಶಾಂತರ ಹೋದವ ಇಲ್ಲಿಯವರೆಗೆ ಬಂದಿರಲೆ ಇಲ್ಲ.

ಯಾರಿದ್ರೆನು ಬಿಟ್ರೆನು ಕಾಲ ಉರುಳಿಕೋತ ಹೋದಂಗ ಯಲ್ಲಮ್ಮಜ್ಜಿ ಮಕ್ಕಳು ದೊಡ್ಡಾರಾದ್ರು. ಮಗಳು ರುಕುಮವ್ವಳಿಗೆ 15 ತುಂಬಿ ದೊಡ್ಡಾಕಿ ಆದ ಮ್ಯಾಲ ಪಕ್ಕದ ಹಳ್ಳಿಯ ದೂರದ ಸಂಬಂಧಿಕರ ಹುಡುಗನೊಬ್ಬನಿಗೆ ಮದುವಿ ಮಾಡಿ ಕೊಟ್ಟಿದ್ಲು. ಹಿರೆ ಗಂಡಮಗ ಪರಲಾದನ್ನು ಬಾಗಲಕೋಟಿ ಶಾಲಿಯೊಳಗ ಓದಾಕ ಹಾಕಿದಳು. ಆದ್ರ ಯಲ್ಲಮ್ಮಜ್ಜಿಗೆ ಸಣ್ಣ ಮಗಂದ ಚಿಂತಿ. ಹುಡುಗ ಯಾವ ಯಾವ ವಯಸ್ಸಿಗೆ ಏನೇನೂ ಕಲಕೋಬೇಕಿತ್ತೊ ಅದನ್ನು ಕಲಕೊಳ್ಳಲಿಲ್ಲ ಅನ್ನೋಕ್ಕಿಂತ ಅದ್ಯಾವದೂ ಅಂವಂಗ ತಲಿಗೆ ಹತ್ತಲ್ಲಿಲ್ಲ ಅಂತ ಹೇಳಬೇಕು. ಹುಡುಗನಿಗೆ 12 ವರ್ಷ ಮುಗದ ಮ್ಯಾಲೂ ಅಂವನ ಮುಕಳಿ ತೊಳೆಯೋದ್ರಿಂದ ಹಿಡಿದು ಎಲ್ಲ ಸೇವೆಗಳನ್ನು ಯಲ್ಲವ್ವನ ಮಾಡಬೇಕಿತ್ತು. ಚಡ್ಡಿ ಕಸಿನೂ ಆಕಿನ ಕಟ್ಟಬೇಕು. ಇನ್ನೂ ಚಂದಂಗ ಮಾತಾಡಾಕ ಬರದ ಹುಚ್ಚ ರಾಮನಿಗೆ ಇನ್ನ ಶಾಲಿಯೋಳಗ ಸರಸೋತಿಯಾದ್ರು ಹ್ಯಾಂಗ ಒಲಿತಾಳ. ಹಿಂಗಾಗಿ ಆತ ಯಾವಾಗಲೂ ಯಲ್ಲವ್ವಗ ಜೋಡಿಯಾಗಿ ಮನಿಯೊಳಗ ಬಿದ್ದಿರತಿದ್ದ.

ರುಕಮವ್ವಳ ಮಗಳು ರತ್ನಾಳನ್ನು ಸೈತ ಮುದುಕಿ ತನ್ನ ಮನಿಯಾಗ ತಂದ ಇಟಕೊಂಡು ಸಾಲಿ ಕಳಸತಿದ್ಲು. ತನ್ನ ಇಬ್ಬರ ಗಂಡ ಮಕ್ಕಳೊಳಗ ಯಾರೊಬ್ಬರಿಗಾದರೂ ಮೊಮ್ಮಗಳನ್ನು ಗಂಟು ಹಾಕ್ಕೊಬೇಕು ಅನ್ನೋದು ಯಲ್ಲವ್ವಳ ಆಸೆಯಾಗಿತ್ತು. ಆದ್ರ ಪರಲಾದ `ರತ್ನ ಕರ್ರಗ ಅದಾಳ ನಾನು ಆಕಿನ ಮದುವಿ ಆಗಂಗಿಲ್ಲ’ ಅಂತ ಮೊದಲ ಹೇಳಿದ್ದ. ಇನ್ನ ಪಾಪ ಸಣ್ಣಾಂವ `ರಾಮಣ್ಣ ಹುಚ್ಚ ಅದಾನ. ನಾನು ಅವಂಗ ನನ್ನ ಮಗಳನ್ನು ಕೊಡೂದಿಲ್ಲ’ ಅಂತ ಶಾರವ್ವ ಹೇಳಿದ್ದಳು.

ಇದ್ಯಾವುದರ ಪರಿವೆ ಇಲ್ಲದ ರಾಮಣ್ಣ ತನ್ನ ಅಕ್ಕನ ಮಗಳು ರತ್ನಳೊಡನೆ ಯಾವಾಗಲು ಆಟದಲ್ಲಿ ಮಗ್ನನಾಗಿರುತ್ತಿದ್ದನು. ಈಗೀಗ ಮುಂಜಾನಿ ಹೊಳಿ ಕಡೆ ಹೇಲಾಕ ಹೋದ ಮ್ಯಾಲ ತನ್ನ ಮುಕುಳಿ ತಾನ ತೊಳಕೊತಿದ್ದನಾದರೂ, ಅಂವನ ಚಡ್ಡಿಯ ಕಸಿಯನ್ನು ಯಲ್ಲವ್ವ ಅಥವಾ ಅವಳ ಮೊಮ್ಮಗಳು ರತ್ನಾ ಕಟ್ಟಬೇಕಾಗುತ್ತಿತ್ತು.

*****

ಬಾಗಲಕೊಟೆಯೊಳಗ ರೂಂ ಮಾಡಿ ಮನಿಯಿಂದ ಬುತ್ತಿ ತರಿಸಿಕೊಂಡು ಕಾಲೇಜು ಓದುತಿದ್ದ ಪರಲಾದನ ಕೈಯಿಂದ ಏನೂ ಮಾಡಿದರೂ ಹನ್ನಾಡನೆತ್ತೆ ಪಾಸಾಗದೆ ಲಗಾ ಹೊಡೆಯುವುದು ತಪ್ಪಿರಲಿಲ್ಲ. `ಇಂವ ಪಾಸ ಆಗಿ ಎನ್ ನೋಕ್ರಿ ಹಿಡಿಯೋದು ಕೆಟ್ಟೇತಿ. ಬೇಕಾದ್ರ ಊರಿಗೆ ಬಂದು ಪೂಜಾರಿಕೆ ಮಾಡಲಿ’ ಎಂದು ಯಲ್ಲವ್ವ ಅವನಿಗೆ ಬುತ್ತಿ ಕಟ್ಟಿ ಕಳಸೋದನ್ನು ನಿಲ್ಲಿಸಿಬಿಟ್ಟಳು. ಆದರೆ ಏನೇನೋ ಕಥಿ ಹೇಳಿ ಊರಿಗೆ ಬಂದಾಗೊಮ್ಮೆ ಯಲ್ಲವ್ವನ ಹಂತ್ಯಾಕ ರೊಕ್ಕ ಉಚ್ಚುತ್ತಿದ್ದ ಪರಲಾದ, ತನ್ನ ರೂಮಿನ ಪಕ್ಕದ `ಲಿಂಗೇಶ್ವರ’ ಖಾನಾವಳಿಯಲ್ಲಿ ತಿಂಗಳ ಚೀಟಿ ಹರಿಸಿ ಊಟ ಮಾಡುತ್ತಿದ್ದ. ಖಾನಾವಳಿ ಮಾಲಕಗ ಚಸ್ಮಾ ಬಂದಿದ್ದರಿಂದ ಖಾನಾವಳಿ ಕ್ಯಾಷಿಯರ್ ಸೀಟಿನಲ್ಲಿ ಕೂಡ್ರುತ್ತಿದ್ದ ಮಾಲಕನ ಮಗಳು ರಾಧಾ ಮತ್ತು ಪರಲಾದನ ನಡುವೆ ಗೆಳೆತನ ಬೆಳೆದು, ಅದೂ ಮದುವೆಯಾಗುವಷ್ಟರ ಮಟ್ಟಿಗೆ ಮುಂದುವರೆಯಿತು. ಕೊನೆಗೊಂದು ಒಂದು ದಿನ ಆ ರಾಧಾಳನ್ನೆ ಮದುವೆಯಾದ ಪರಲಾದ ರಾಧಾಳ ಕ್ಯಾಷಿಯರ್ ಸೀಟಿನಲ್ಲಿ ತಾನು ಕೂಡ್ರತೊಡಗಿದ.

*****

ಹುಚ್ಚ ರಾಮ ರತ್ನಳನ್ನು ಬಾಳ ಹಚಗೊಂಡಿದ್ದ. ರತ್ನ ಸಾಲಿಗೆ ಹೋಗುವ ಮುಂಚೆ ಎರಡು ತಾಸು ಊರ ಹೊರಗಿನ ತಿಪ್ಪಿಯೊಳಗ ಎಮ್ಮಿ ಮೇಸಬೇಕಿತ್ತು. ಅವಳು ಎಮ್ಮಿ ಮೇಸಾಕ ರಾಮನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ದಳು. ಇಬ್ಬರು ಅಲ್ಲಿ ಕುಂಟಿಬಿಲ್ಲೆ, ಅಂಡ್ಯಾಳ, ಮಣಪತ್ತ, ಲಗೋರಿ, ಮರಕೋತಿಯಾಟ ಮುಂತಾದವುಗಳನ್ನು ಆಡುತ್ತಿದ್ದರು.

ಹಿಂಗ ಆಡಕೋತ ಮೈಮರೆತಾಗ ಕೆಲವೊಮ್ಮೆ ಎಮ್ಮಿಗೊಳು ಪಕ್ಕದ ಎರಿಹೊಲ ಹೊಕ್ಕು ತುಡುಗತನ ಮಾಡಿದಾಗ ಹೊಲದ ಯಜಮಾನರು ಎಮ್ಮಿಗಳನ್ನು ಕೊಂಡವಾಡಕ್ಕ ಹಾಕಿ ಯಲ್ಲವ್ವನಿಗೆ ಹೇಳಿ ಕಳುಹಿಸುತ್ತಿದ್ದರು. ಆಗೆಲ್ಲ ದಂಡ ಕಟ್ಟಿ ಎಮ್ಮಿ ಬಿಡಿಸಿಕೊಂಡು ಬರುತ್ತಿದ್ದ ಯಲ್ಲವ್ವ `ಎಮ್ಮಿ ತುಡಗ ಮಾಡಾಕ ಬಿಟ್ಟು ಎಲ್ಲಿ ಹರಗ್ಯಾಡಾಕ ಹೋಗಿದ್ದಿ ಹಡಿಬಿಟ್ಟಿ’ ಅಂತ ಬಡಿಯುತ್ತಿದ್ದಾಗ ರಾಮ ಅವಸರವಾಗಿ ಅವಳ ಕೈಯಿಂದ ಬಡಿಗೆ ಕಸದೊಗೆದು ಅಳುತ್ತ ಅಡ್ಡ ನಿಂತು `ಬಾಡ ಬಾಡ’ ಎಂದು ಕಣ್ಣಲ್ಲಿ ನೀರು ತಂದುಕೊಂಡು ಎಬಡಿಸುತ್ತಿದ್ದ.

ರತ್ನ ಮೈನರೆದು ಇದ್ದುದುರಾಗ ಚಲೋ ಮನೆತನ ಬಂದಾಗ ಯಲ್ಲವ್ವ ಮದುವಿ ಮಾಡಿಕೊಟ್ಟಿದ್ದಳು. ರತ್ನ ಲಗ್ನ ಆಗಿ ಹೋದ ಮ್ಯಾಲ ಹುಚ್ಚರಾಮನಿಗೆ ಸಂಗಾತಿಗಳ್ಯಾರು ಸಿಕ್ಕದಂತಾಗಿ ಏಕಾಂಗಿ ಭಾವ ಕಾಡತೊಡಗಿತು. ಇಷ್ಟರಲ್ಲಾಗಲೆ ಆತ ವಯಸ್ಸಿಗೆ ಬಂದದ್ದರಿಂದ ಹುಚ್ಚನೆಂದು ಕನಿಕರ ತೋರದ ಹರೆಯದ ಕಾವು ಏಕಾಂಗಿ ಭಾವದೊಂದಿಗೆ ಮೇಳೈಸಿ ಸುಡುವುದಕ್ಕೆ ಸುರು ಹಚ್ಚಿಕೊಂಡಿತು.

*****

ಹುಚ್ಚುರಾಮ ಮೊದಲಿನಿಂದಲೂ ಮನೆಯ ಹೊರಗಿನ ಕಟ್ಟೆಯ ಮೇಲೆ ಮಲಗಿರುತ್ತಿದ್ದ. ಇತ್ತೀಚೆಗೆ ಅವನ ಕೈಗಳು ತೊಡೆಗಳ ಸಂದಿಯೊಳಗೆ ಸೇರಿಕೊಂಡು ಮಿಸುಕಾಡುತ್ತಿದ್ದವು. ಅಪ್ರಯತ್ನಪೂರ್ವಕವಾಗಿ ಶುರುವಾದ ಈ ಮಿಸುಗುಡುವಿಕೆ ಆನಂತರದಲ್ಲಿ ಅಭ್ಯಾಸವಾಗಿ ಪರಿವರ್ತನೆಗೊಂಡಿತ್ತು. ಕೈಗಳ ಮಧ್ಯದಲ್ಲಿ ಸಿಕ್ಕಿಕೊಳ್ಳವ ಆತನ ಪುರುಷತ್ವಕ್ಕೆ ಅದೇನೊ ಅವ್ಯಕ್ತ ಆನಂದವಾಗುತ್ತಿತ್ತು. ತಟ್ಟಿನಂತಹ ತನ್ನೆರಡು ಕೌದಿಗಳೊಳಗೆ ಈ ಮಿಸುಗುಡುವಿಕೆ ಮತ್ತು ಸುಖದ ನರುಳುವಿಕೆ ದಿನನಿತ್ಯವು ಮರುಕಳಿಸುತ್ತಿತ್ತು.

ಒಂದು ಮಧ್ಯ ರಾತ್ರಿ ಆ ಹರಕು ತಟ್ಟಿನೊಳಗೆ ಚಪಾತಿ ಬಣ್ಣದ ಮೃದು ಮಧುರ ಕೈಗಳೆರಡು ಅವನ ತೊಡೆ ಸಂದಿಯನ್ನು ಬಳಸಿದವು. ಕಿನಿಕಿನಿಯ ಬಳೆ ಶಬ್ದ ಹೊರಡಿಸುತ್ತಿದ್ದ ಆ ಕೈಗಳು ಹೆಣ್ಣಿನವು ಎನ್ನುವುದು ಆ ಹುಚ್ಚು ರಾಮನಿಗೂ ಅರ್ಥವಾಯಿತು. ಹಿಂದೆಂದೂ ಅನುಭವಿಸದ ಸುಖವೊಂದು ಅವನ ಮೈಯಡರಿ ಮತ್ತೇರಿಸಿತೊಡಗಿತ್ತಾದರೂ ಅವನಿಗೆ ಮುಂದೆನು ಮಾಡಬೇಕೆಂಬುದು ಗೊತ್ತಾಗದಾಯಿತು. ಆದರೆ ಆ ಅನುಭವಿ ಹೆಣ್ಣು ಅವನಿಗೆ ತನ್ನ ಅನುಭವವನ್ನೆಲ್ಲಾ ಉಣಬಡಿಸಿದ್ದಳು. ಮೇವು ಹಸಿರಾಗಿತ್ತು. ಎತ್ತು ಹಸಿದಿತ್ತು.

ರತ್ನಳದೆ ವಯಸ್ಸಿನ ಪಕ್ಕದ ಮನೆಯ ಶಾರಿ ಪಂಚಮಿ ಹಬ್ಬಕ್ಕೆಂದು ತವರ ಮನೆಗೆ ಬಂದಿದ್ದಳು. ಅವಳ ಗಂಡ ಮಿಲಿಟರಿಗೆ ಸೇರಿದ್ದರಿಂದ ಗಂಡನೊಂದಿಗಿನ ಒಂದು ಅಪೂರ್ವ ಸಮಾಗಮಕ್ಕಾಗಿ ಅವಳು ಐದಾರು ತಿಂಗಳಗಳವರೆಗೆ ಕೆಲವೊಮ್ಮೆ ಇಡಿ ವರ್ಷದವರೆಗೆ ಕಾಯಬೇಕಿತ್ತು. ಕಳೆದ ತಿಂಗಳು ಬಂದು ಹೋಗಿದ್ದ ಅವಳ ಮಿಲಟರಿ ಗಂಡ ತಿಂಗಾಳುಗಟ್ಟಲೆಯ ತನ್ನ ಹಸಿವನ್ನು ಒಂದು ವಾರದಲ್ಲಿಯೆ ನೀಗಿಸಿಕೊಂಡು ಮತ್ತೆ ದೂರ ದೇಶಕ್ಕೆ ಮರಳಿ ಹೋಗಿದ್ದ. ಭರತ ದೇಶದ ವೈವಿಧ್ಯಮಯ ಸಂಸ್ಕೃತಿಯ ತನ್ನ ಮಿಲಿಟರಿ ಗೆಳೆಯರಿಂದ ಕೇಳಿ ತಿಳಿದಿದ್ದ ವಿವಿಧ ನಮೂನಿಯ ರತಿ ಮಜ್ಜನದ ಭಂಗಿಗಳನ್ನು ಶಾರಿಯ ಮೇಲೆ ಪ್ರಯೋಗಿಸಿದ್ದ. ಆತ ಹೋದ ಮೇಲೆ ಅವಳಿಗೆ ಸಹಜವಾಗಿ ಆ ಭಂಗಿಗಳೆಲ್ಲವೂ ರಾತ್ರಿಯೆಲ್ಲ ಕಾಡತೊಡಗಿದವು. ಅಂತಹ ಕಾಡುವ ಆ ಒಂದು ರಾತ್ರಿಯಲ್ಲಿಯೆ ಅವಳಿಗೆ ಮಲಗಲಿಕ್ಕೆ ಅಸಾಧ್ಯವೆನಿಸಿ ಒಂದಕ್ಕೆ ಮಾಡುವ ನೆಪದಲ್ಲಿ ಎದ್ದು ಹೊರ ಬಂದಿದ್ದಳು.

ಅವಳು ತನ್ನ ಸೀರೆ ಎತ್ತಿ ತಾಮ್ರದ ತತ್ರಾಣಿ ಗಾತ್ರದ ಹಿಂಭಾಗವನ್ನು ನೆಲಕ್ಕೆ ತಂದು ಕಾಲ ಮಡಿಚುವುದಕ್ಕೂ ಹತ್ತಿರದ ಕಟ್ಟೆ ಮೇಲೆ ಮಲಗಿದ್ದ ಹುಚ್ಚರಾಮ ಮಿಸುಕಾಡುತ್ತಾ ಮುಲುಗುವುದಕ್ಕೂ ಸರಿ ಹೋಯಿತು. ಅವಳಿಗೆ ಹುಚ್ಚರಾಮನ ಮುಲುಗಾಟ ಮಿಸುಕಾಟ, ಸುಖದ ನರಳಾಟಗಳು ಅರ್ಥವಾಗಿ ಅವುಗಳಿಗೆ ಹೊಸ ಅರ್ಥವನ್ನು ಮಾಡಿಸಿದ್ದಳು.

ಮೊದಲ ದಿನ ಶಾರಿಯ ದಾಳಿಯಿಂದ ಹುಚ್ಚರಾಮ ಸ್ವಲ್ಪ ಹೆದರಿದನಾದರೂ ಅನಂತರದಲ್ಲಿ ಮುಂದಿನೆಂಟಾನು ಎಂಟು ದಿನಗಳವರೆಗೆ ಅದು ಒಂದು ರೂಡಿಯಾಗಿ ಆಮೇಲಾಮೇಲೆ ಬಿಡಲಾರದ ಚಟವಾಗಿ ಪರಿಣಮಿಸಿತು. ಆದರೆ ಹಬ್ಬ ಮುಗಿದ ಮೇಲೆ ಶಾರಿ ಮತ್ತೆ ತನ್ನ ಗಂಡನ ಮನೆಯತ್ತ ಮುಖ ಮಾಡಿದಾಗ ಹುಚ್ಚರಾಮ ಈಗ ನಿಜಕ್ಕೂ ಏಕಾಂಗಿಯಾಗಿಬಿಟ್ಟ. ಅನಾಯಾಸವಾಗಿ ಸಿಕ್ಕು ಸುಖದ ವರಸೆಯನ್ನು ನೀಡಿದ್ದ ಶಾರಿ, ಇದ್ಯಾವುದರ ಖಬರಿಲ್ಲದೆ ಹುಚ್ಚರಾಮನ ಆ ಮಿಸುಕಾಟಗಳನ್ನು ಮೊದಲಿನಂತೆ ಮಿಸುಕಾಡಲು ಬಿಟ್ಟು ನಿರ್ದಯಿಯಾಗಿ ನಿರ್ಗಮಿಸಿಬಿಟ್ಟಿದ್ದಳು.

ಹೊರಗಡೆ ಮಲಗುತ್ತಿದ್ದ ಹುಚ್ಚರಾಮ ಈಗ ಮಧ್ಯರಾತ್ರಿಗಳಲ್ಲಿ ಹುಚ್ಚು ಹಿಡಿದವನಂತೆ ಏಕಾಂಗಿಯಾಗಿ ಊರ ತುಂಬೆಲ್ಲಾ ಅಲೆದಾಡತೊಡಗಿದ್ದ. ಚಂದ್ರ ಚಲ್ಲಿದ ಹಾಲ ಬೆಳದಿಂದಳು, ಮೈದಡುವುತ್ತಿದ್ದ ತಂಗಾಳಿ, ಗೀಳಿಡುತ್ತಿದ್ದ ನಾಯಿಗಳೆಲ್ಲವುಗಳಿಂದಲೂ ಅವನೊಳಗಿನ ಕಾವು ಮತ್ತಷ್ಟು ಹೆಚ್ಚಾಗಿ ಆತ ಏನೇನೊ ಬಡಬಡಿಸುತ್ತ ನರಳುತ್ತಿದ್ದ.

*****

ಅದೆ ದಿನಗಳ ಒಂದು ಮುಂಜಾನೆ ತನ್ನ ಪ್ಯಾಟಿ ಹೆಂತಿಯೊಂದಿಗೆ ಪರಲಾದ ಉದಗಟ್ಟಿಗೆ ಪಾದಂಗೈದಿದ್ದ. ನುಣ್ಣಗೆ, ತಿಳುಗುಲಾಬಿಯ ಸೀರೆ, ತೋಳಿಗಂಟಿಕೊಂಡಿದ್ದ ಜಂಪರ್ ತೊಟ್ಟಿದ್ದ ರಾಧ ಯಾವಾಗಲೂ ತನ್ನ ಗಂಡ ಪರಲಾದನಿಗೆ ಅಂಟಿಕೊಂಡೆ ಇರುತ್ತಿದ್ದುದರಿಂದ ಸಹಜವಾಗಿಯೆ ಹುಚ್ಚರಾಮನಿಗೆ ಅಸೂಯೆಗಿಟ್ಟುಕೊಂಡಿತ್ತು. ಹುಚ್ಚುರಾಮ ತನ್ನ ಆಸೂಯೆ ಮತ್ತು ಆಸೆ ಬೆರೆತ ಕಣ್ಣುಗಳನ್ನು ಸಾಧ್ಯವಾದಾಗಲೆಲ್ಲ ಆ ಹೊಸ ಜೋಡಿಯ ಮೇಲೆಯೆ ಕೇಂದ್ರಿಕರಿಸುತ್ತಿದ್ದ.

ಅಂದು ರಾತ್ರಿ ನಿದ್ದೆ ಬರದೆ ಶಾರಿಯ ಜುಗಲಬಂದಿ ಬಗ್ಗೆಯೆ ಕನಸು ಕಾಣುತ್ತಾ ಹುಚ್ಚರಾಮ ಕಟ್ಟೆಯ ಮೇಲೆ ಮಲಗಿರಬೇಕಾದರೆ ಒಳಗಡೆ ಕೊಣೆಯ ಸಂದಿಯಿಂದ ರಾಧಾಳ ಮುಲುಕಾಟ, ಪರಲಾದನ ಏರುಸಿರನ ಪರದಾಟ, ಇಬ್ಬರ ಸುಖದ ನರಳಾಟ, ತೃಪ್ತ-ಅತೃಪ್ತದ ಎಗರಾಟಗಳು ಆ ನಿಶಬ್ದ ರಾತ್ರಿಯಲ್ಲಿ ಅಸ್ಪಷ್ಟವಾಗಿ ಕೇಳುತ್ತಾ ಕೇಳುತ್ತಾ ನಿಚ್ಚಳವಾಗತೊಡಗಿದವು. ರಾಧಾಳ ಮುಲುಕಾಟವು ಶಾರಿಯ ಮುಲುಕಾಟದೊಂದಿಗೆ ಹೋಲಿಕೆಯಾಗಿ ಹುಚ್ಚುರಾಮ ಎದ್ದು ಕುಳಿತು ಬಾಗಿಲು ಸಂದಿಗೆ ತನ್ನ ಕಣ್ಣೋಟ ತೂರಿಸಿ ನೋಡಬಾರದ್ದನ್ನು ನೋಡಿಬಿಟ್ಟ. ಬಾಯಲ್ಲಿ ಜೊಲ್ಲು ಸುರಿಯುತ್ತಿತ್ತು.

ಅವತ್ತೆ ಹುಚ್ಚರಾಮ ನಿಶ್ಚಯಿಸಿಬಿಟ್ಟ. ಅವ್ವಗೆ ಹೇಳಿ ತಾನು ಹ್ಯಾಂಗಾದರೂ ಮಾಡಿ ಯಾವ ಹೆಂಗ್ಸನ್ನಾದರೂ ಲಗ್ನ ಆಗಿ ಬಿಡಬೇಕು. ನಾಳೆಯೇ ಅವ್ವಳನ್ನು ಕೇಳಿಬಿಡಬೇಕು. ಅವ್ವ ಯಾರನ್ನಾದರೂ ತಂದು ನನಗೆ ಗಂಟು ಹಾಕಿಯೇ ಹಾಕುತ್ತಾಳೆ ಎಂಬ ಭರವಸೆಯೊಂದಿಗೆ ಆತ ಅವತ್ತು ಮಲಗಲು ಪ್ರಯತ್ನಿಸಿದ. ಆದರೆ ಮಗ್ಗಲು ಪ್ರಯತ್ನಿಸಿದ್ದೆ ಬಂತು. ನಿದ್ದೆ ಹತ್ತಿರ ಸುಳಿಯಲಿಲ್ಲ.

ಆದ್ರ ಯಲ್ಲಮ್ಮಜ್ಜಿಗೆ ಸಣ್ಣ ಮಗಂದ ಚಿಂತಿ. ಹುಡುಗ ಯಾವ ಯಾವ ವಯಸ್ಸಿಗೆ ಏನೇನೂ ಕಲಕೋಬೇಕಿತ್ತೊ ಅದನ್ನು ಕಲಕೊಳ್ಳಲಿಲ್ಲ ಅನ್ನೋಕ್ಕಿಂತ ಅದ್ಯಾವದೂ ಅಂವಂಗ ತಲಿಗೆ ಹತ್ತಲ್ಲಿಲ್ಲ ಅಂತ ಹೇಳಬೇಕು. ಹುಡುಗನಿಗೆ 12 ವರ್ಷ ಮುಗದ ಮ್ಯಾಲೂ ಅಂವನ ಮುಕಳಿ ತೊಳೆಯೋದ್ರಿಂದ ಹಿಡಿದು ಎಲ್ಲ ಸೇವೆಗಳನ್ನು ಯಲ್ಲವ್ವನ ಮಾಡಬೇಕಿತ್ತು. ಚಡ್ಡಿ ಕಸಿನೂ ಆಕಿನ ಕಟ್ಟಬೇಕು.

ನಿನ್ನೆ ರಾತ್ರಿ ನಿದ್ದೆ ಇಲ್ಲದ್ದಕ್ಕೂ ಏನೊ. ಅಂದು ಹೊತ್ತಾರೆ ಬಾಳ ತಡವಾಗಿ ಹುಚ್ಚರಾಮನಿಗೆ ಎಚ್ಚರವಾಯಿತು. ಆಗಲೆ ಎಳೆಬಿಸಿಲು ಅವನ ಹರಕು ಕೌದಿಯೊಳಗಿಂದ ತನ್ನ ಚಿತ್ತಾರ ಚೆಲ್ಲಿ ಚುರುಕು ಮುಟ್ಟಿಸತೊಡಗಿತ್ತು. ಕಣ್ಣುಜ್ಜುತ್ತಾ ಮೇಲೆದ್ದ ಹುಚ್ಚುರಾಮ ದಿನನಿತ್ಯದಂತೆ ತನ್ನ ಮನೆ ದೇವರು ದುರಗವ್ವನ ಗುಡಿ ದಿಕ್ಕಿಗೆ ಭಕ್ತಿಯಿಂದ ಕೈಮುಗಿದ. `ಎದ್ದಕೂಡ್ಲೆ ದುರಗವ್ವನಿಗೆ ಕೈ ಮುಗಿದರೆ ಆ ದೇವಿ ನಮ್ಮಂಥವರ ಕಷ್ಟ ಕಳೆದು ನಾವು ಬಯಸಿದ್ದನ್ನು ಕೊಡತಾಳ’ ಅಂತ ಅವ್ವ ಹೇಳಿದ್ದು ನೆನಪಿಗೆ ಬಂದು ಇಂದು ಗುಡಿಯಲ್ಲಿ ತನಗೂ ಹೆಂತಿ ಕೊಂಡಬೇಕೆಂದು ದುರಗವ್ವಳಲ್ಲಿ ಕೇಳಿಯೇಬಿಡಬೇಕು ಎಂದು ಆತ ನಿರ್ಧರಿಸಿದ. ತನ್ನ ಕೌದಿಯನ್ನು ಮುದ್ದೆಮಾಡಿ ಮೂಲೆಗೆ ಸರಿಸಿದ. ಹಾಸಿಕೊಂಡ ಸಣಬಿನ ಚೀಲದ ನಡುಭಾಗವು ಗುಂಡಾಕಾರದಲ್ಲಿ ಚಿತ್ರ ಮೂಡಿಸಿಕೊಂಡು ಉಚ್ಚಿಯ ಚಿಂಗ್ ವಾಸನಿ ಮೂಗಿಗೆ ಅಡರುತ್ತಿತ್ತು. ಆ ತಟ್ಟನ್ನು ತೆಗೆದು ಅಲ್ಲಿಯೆ ಗೂಟವೊಂದಕ್ಕೆ ಬಿಸಲಿಗೆ ಹಾಕಿ ಮೈ ಮುರಿದನು.

ಅಣ್ಣ ಪರಲಾದ ಹೆಂಡತಿ ರಾಧಾ, ನಿನ್ನೆ ರಾತ್ರಿ ತಾನೆನೂ ಮಾಡಿಯೆ ಇಲ್ಲ ಎನ್ನುವ ಸೋಗುಮುಖ ಮಾಡಿಕೊಂಡು, ಆ ಎಳೆ ಬಿಸಲಿನಲ್ಲಿಯೆ ತನ್ನ ಉದ್ದಗೂದಲುಗಳನ್ನು ಬಾಚಣಿಗೆಯಲ್ಲಿ ಹಿಕ್ಕಿ ಎಡಬೈತಲೆ ತೆಗದು ಹೆರಳಿನಲ್ಲಿ ಹಿಡಿದಿಡುವ ಕಾಯಕದಲ್ಲಿ ತೊಡಗಿದ್ದಳು. ಆಕೆಯ ಎದುರಿಗೆ ಕುಳಿತಿದ್ದ ಕನ್ನಡಿಯು ತನ್ನ ಮುಖದ ಮೇಲಿನ ಎಳಿ ಬಿಸಲನ್ನು ಆಕೆಯ ಮುಖಕ್ಕೆ ಉಗುಳಿ ಅವಳ ಕೆನ್ನೆಯನ್ನು ರಂಗುಗೊಳಿಸಿ ನಗುತ್ತಿತ್ತು. ಆಕೆಯ ಕೂದಲಿನ ವಯ್ಯಾರದ ಮಣಿದಾಟಗಳ ಮೇಲೆಯೆ ಕಣ್ಣಿಟ್ಟುಕೊಂಡು ಪಕ್ಕದ ಮೆಟ್ಟಿಲುಗಳ ಮೇಲೆ ಕುಳಿತಿದ್ದ ಪರಲಾದನನ್ನು ನೋಡಿ ಹುಚ್ಚರಾಮ ಮಂಕಾದ.

ಇವತ್ತು ಯಲ್ಲವ್ವಜ್ಜಿಯನ್ನು ಕೇಳಿ ಲಗ್ನದ ತಿರ್ಮಾಣವನ್ನು ಮಾಡಿಕೊಳ್ಳಲೆಬೇಕೆಂದು ರಾಮ ತನ್ನ ಮುಖದ ಮೇಲೆ ಬೊಗಸೆ ನೀರನ್ನು ಗೊಜ್ಜಿಕೊಳ್ಳದೆ ಯಲ್ಲಮ್ಮಜ್ಜಿ ಇರುವ ದುರುಗವ್ವನ ಗುಡಿಯತ್ತ ನಡೆದ. ಅವತ್ತು ಮಂಗಳವಾರ ಬೇರೆ ಇದ್ದುದರಿಂದ ಎರಡ್ಮೂರು ವರ್ಷಗಳ ಹಿಂದೆ ಮೈನರೆತಿದ್ದ ಊರ ಹುಡುಗಿಯರು ತಮಗೆ ಈವರ್ಷದ ಮದುವಿ ಸೀಜನ್ನಿನಲ್ಲಾದರೂ ಚಲೋ ಗಂಡ ಸಿಗಲಿ ಎಂದು ದುರಗವ್ವಳ ಹಂತ್ಯಾಕ ಬೇಡಿಕೊಳ್ಳಾಕ ಹರ್ಯಾಗೆದ್ದು, ಮುಸುರಿ ತೊಳದು ಜಳಕ ಮಾಡಿ ಪೇರನ್‌ಲವ್ಲಿ, ಪಾಂಡ್ಸ್ ಪೌಡರ್ ಹಚಗೊಂಡು ಇದ್ದುದರೊಳಗ ಚಲೊ ಲಂಗ ದಾವಣಿ ಹಾಕ್ಕೂಂಡು ಕೆಲವರು ದುರಗವ್ವನ ಗುಡಿ ಕಡೆ ಮುಖ ಮಾಡಿದ್ದರೆ, ಹಲವರು ಈಗಾಗಲೆ ದುರಗವ್ವನ ದರುಶನ ಭಾಗ್ಯ ಪಡೆದುಕೊಂಡು ತಮ್ಮ ಮನೆಗಳತ್ತ ಮುಖಮಾಡಿದ್ದರು. ಮುಖವೆನೂ ಮನೆ ಕಡೆ ಇದ್ದರೂ ಆ ಕಡೆ ಈ ಕಡೆ ತಮ್ಮ ಅರಳುಗಣ್ಣುಗಳನ್ನು ಚಲ್ಲುವುದು, ಎದರಾದ ಹುಡುಗರ ಎದೆಯ ಮೇಲೆ ತಮ್ಮ ಕಣ್ಣೋಟದ ಬಾಣ ಬೀಡುವುದು ಅವರ ವಯೋಸಹಜ ಚಾಂಚಲ್ಯವನ್ನು ಪ್ರತಿಪಾದಿಸುತ್ತಿತ್ತು.

ಎದುರಾದ ಹುಡುಗಿಯರ ಕಣ್ಣೋಟಗಳ ಅಂಚು ಆಗಾಗ ಹುಚ್ಚರಾಮನಿಗೂ ತಾಗುತ್ತಿದ್ದುದರಿಂದ ರಾಮ ಇವರೇನಾದರೂ ತನ್ನನ್ನು ಲಗ್ನ ಆಗಬಹುದೆ ಎನ್ನುವ ಕನಸಿಗೆ ಜಾರುತ್ತಿದ್ದ. ಕನಸಿನಲ್ಲಿಯೆ ಆ ಹುಡುಗಿಯರ ಗಂಡನಾಗುತ್ತಾ ತನ್ನ ಸೊಟ್ಟಗಾಲನ್ನು ಎಳೆದೆಳೆದು ಮುಂದಕ್ಕೆ ಒಗೆಯುತ್ತಿದ್ದ.

*****

ಈ ಊರಿಗೆ ಕಾಲಿಟ್ಟಾಗಿನಿಂದಲೂ ದುರುಗವ್ವ ತಾಯಿಯ ಪೂಜೆ ಯಲ್ಲವ್ವಳ ಹೆಗಲಿಗೆ ಬಿದ್ದಿತ್ತು. ಸೂರದಿಕ್ಕಿನಲ್ಲಿ ಬೆಳ್ಳಿ ಚುಕ್ಕಿ ಮೂಡುವ ಹೊತ್ತಿನಲ್ಲಿಯೆ ದಿನಾಲೂ ಏಳುವ ಎಲ್ಲವ್ವ ಮನೆಯ ಕಸ ಮುಸುರೆ ಮಾಡಿ ಊರ ಅಗಸೆ ಬಾಗಿಲಿನಲ್ಲಿಯ ಕೈ ಬೋರಿನಿಂದ ಒಂದು ಕೊಡ ನೀರು ತಂದು ಜಳಕ ಮಾಡಿ, ಮತ್ತೆ ಬೋರಿಗೆ ಹೋಗಿ ಮತ್ತೊಂದು ಕೊಡ ಮಡಿ ನೀರು ಹೊತ್ತು ದುರಗವ್ವನ ಗುಡಿಯತ್ತ ಸಾಗುವಳು. ದುರಗವ್ವ ನಿನ್ನೆಯಿಂದ ಹೊತ್ತಿದ್ದ ಹೂ ಮಾಲೆ, ಸೀರೆ, ಬಿಂದಿ, ಬೆಳ್ಳಿ ಕಣ್ಣು, ಮುಂತಾದವುಗಳನ್ನು ಕಿತ್ತು ಪೂಜಾ ಬುಟ್ಟಿಯಲ್ಲಿ ಇಟ್ಟುಕೊಳ್ಳುವಳು. ಬರಿಮೈ ದುರಗವ್ವಳ ಕರಿಕಲ್ಲಿನ ದೇಹವನ್ನು ಕೊಡ ನೀರು ಸುರಿದು ಜಳಕ ಮಾಡಿಸುವಳು. ತಂಬಿಗೆಯಲ್ಲಿ ತಂದಿದ್ದ ಒಳ್ಳೆಣ್ಣಿಯನ್ನು ದೇವಿಯ ಮೈಗೆ ಮೆತ್ತಿ ಕರಿಮೈ ದುರಗವ್ವ ತಳ ತಳ ಹೊಳೆಯುವಂತೆ ಮಾಡುವಳು. ಆಮೇಲೆ ಯಲ್ಲವ್ವಳಿಗೆ ಬೆಳ್ಳಿ ಕಣ್ಣು ತೊಡಿಸಿ, ಬಿಂದಿ ಇಟ್ಟು ಮಡಿಯಿಂದ ತಂದಿದ್ದ ಹಸಿರು ಸೀರೆ ಉಡಿಸಿ ಬಿಡಿ ಹೂಗಳನ್ನು ಮುಡಿಸಿ ದುರಗವ್ವ ಮುಂದೆ ಉದ್ದಕ್ಕೆ ಅಡ್ಡ ಬೀಳುವಳು. ಇದು ಹಿಂದೆ ತಲೆತಲಾಂತರದಿಂದ ನಡೆಸಿಕೊಂಡ ಬಂದ ಪದ್ಧತಿಯಾಗಿತ್ತು.

ರಾಮ ಬರೊ ಹೊತ್ತಿಗೆ ದುರಗವ್ವ ಯಲ್ಲವ್ವಳಿಂದ ಸೀರೆ ಉಡಿಸಿಕೊಂಡು ಇನ್ನೆನೊ ಎದ್ದು ಬರತಾಳೆನೊ ಅನ್ನೊಹಂಗ ಕುಳಿತಿದ್ದಳು. ಎಂದೂ ಇಲ್ಲದ ಮಗ ಇಂದು ಗುಡಿಗೆ ಬಂದಿರೋದನ್ನು ನೋಡಿದ ಯಲ್ಲವ್ವ, ಏನು ಕಿತಾಪತಿ ಮಾಡಿಕೊಂಡು ಬಂದಿರುವನೊ ಎಂದು ಗಾಬರಿಯಾದಳು. ಅವಳ ಮುಂದೆ ಬಂದು ನಿಂತ ರಾಮ `ನಂಗ ಇವತ್ತು ಲಗ್ನ ಮಾಡು’ ಎಂದು ರಾಗ ತೆಗೆದದ್ದು ಕೇಳಿ ಯಲ್ಲವ್ವಳಿಗೆ ಮತ್ತಷ್ಟು ಗಾಬರಿಯಾಯಿತು. ರಾಮ ಒಮ್ಮೆ ಹಟ ಹಿಡಿದರೆ ಅದು ಸಿಗುವವರೆಗೂ ಹಿಂದಕ್ಕೆ ಸರಿಯುವಂತವನಲ್ಲ ಎಂದು ಆಕೆಗೆ ಚನ್ನಾಗಿ ಗೊತ್ತಿತ್ತು. `ಅಣ್ಣಂಗ ಲಗ್ನ ಮಾಡಿದಂಗ ನನಗೂ ಲಗ್ನ ಮಾಡು’ ಎಂದು ಅರೆ ತೆರೆದ ಬಾಯಿಯಿಂದ ಮತ್ತೆ ಎಬಡಿಸಿದ. ಮುದುಕಿ ತಣ್ಣಗೆ `ನಿನಗ ಹೆಂತಿ ಎಲ್ಲಿಂದ ತರಲೆಪಾ. ಈ ಸಲ ತುಳಸಿಗೆರಿ ಹನುಮಪ್ಪನ ಜಾತ್ರಿಗೆ ಹೊಕ್ಕಿವಲ್ಲ. ಆಗ ಜಾತ್ರಾಗ ಒಂದು ಗೊಂಬಿ ತೊಗೊಂದು ಅದನ್ನ ಮದುವೆ ಮಾಡತೀನಿ’ ಎಂದು ತಮಾಷೆ ಮಾಡಿದಳು. ಆದರೆ ಹುಚ್ಚುರಾಮ `ನನಗ ಇವತ್ತ ಎಷ್ಟೊತ್ತಿದ್ರು ಹೆಂತಿ ಬೇಕು’ ಎಂದು ನೆಲಕ್ಕೆ ಬಿದ್ದು ಹೊರಳಾಡುತ್ತಾ ರೊಚ್ಚೆ ತೆಗೆದ. ನಾನಾ ತರದ ಸಮಾಧಾನ ಹೇಳುವಷ್ಟು ಹೇಳಿಯಾದ ಮೇಲೆಯೂ ಸುಮ್ಮನಾಗದ ರಾಮನನ್ನು ನೋಡಿ ಸಿಟ್ಟು ತಡೆಯಲಾರದೆ ಯಲ್ಲವ್ವ ಗುಮ್ಮಗೈ ಮಾಡಿಕೊಂಡು ಗುಮ್ಮತೊಡಗಿದಳು. `ಯಾವ ಇದಿ ಮಾಯದಾಗ ಹಿಂಗ ಹುಚ್ಚನಾಗಿ ಹುಟ್ಟಿದಿ. ನೆಲಕ್ಕ ಬಿದ್ದ ಗಳೆನ ನೆಗದ ಬಿದ್ದರಾ ಹೋಗಲಿಲ್ಲ’ ಎಂದು ರೋಷಗೊಂಡು ಗುದ್ದುವುದು ಮತ್ತು ಬೈಯ್ಯುವುದನ್ನು ಏಕಕಾಲಕ್ಕೆ ಮಾಡತೊಡಗಿದಳು. ರಾಮ `ಗಿಗ್ಗಿಗ್ಗೀ’ ಎಂದು ತನ್ನ ವಿಕಾರ ಧ್ವನಿ ತೆಗದು ಅಳತೊಡಗಿದ. ಗುದ್ದಿ ಗುದ್ದಿ ಸಾಕಾಗಿ ಎಂದಿನಂತೆ ತನ್ನ ಪೂಜಾ ಬುಟ್ಟಿಯನ್ನು ಕೊಡವನ್ನು ಬಗಲಲ್ಲಿ ಇಟ್ಟುಕೊಂಡು ಮನೆಯ ಕಡೆ ಹೊರಟ ಯಲ್ಲವ್ವ `ನನ್ನಮಗ ಎಲ್ಲರಾಂಗ ಶ್ಯಾನ್ಯಾ ಇದ್ದಂದ್ರ ಇವತ್ತು ಮೂರು ಮಕ್ಕಳ ತಂದಿ ಆಕ್ಕಿದ್ದ’ ಎಂದು ಮುಸಿ ಮುಸಿ ಕಣ್ಣಿರು ಒರೆಸಿಕೊಳ್ಳುತ್ತಾ ಮನೆಯ ಕಡೆ ಬಿರಬಿರನೆ ಹೋಗಿಬಿಟ್ಟಳು.

ಅಲ್ಲಿಯೆ ಬಿದ್ದು ಹೊರಳಾಡುತ್ತಿದ್ದ ರಾಮನಿಗೆ ಗುಡಿಯಲ್ಲಿ ಗುಮ್ಮನಗುಸುಕಿಯಂತೆ ಕುಳಿತಿದ್ದ ದುರಗವ್ವನ ಮೇಲೆಯೆ ಸಿಟ್ಟು ಒತ್ತರಿಸಿ ಬಂತು. ದಿನ ಬೆಳಗ್ಗೆ ಕೈಮುಗಿದರೂ ತಾನು ಬೇಡಿದ್ದನ್ನು ಕೊಡಲಾರದ ಈ ದುರಗವ್ವಳನ್ನು ಒಂದು ಕೈ ನೋಡಿಯೆ ಬಿಡಬೇಕು ಎಂದು ಕಣ್ಣೀರು ಒರೆಸಿಕೊಳ್ಳುತ್ತಲೆ ತೂರಾಡುತ್ತಾ ಮೇಲೆದ್ದು ದೇವಿ ಮೂರ್ತಿಗೆ ಎದುರಾಗಿ ನಿಂತ. `ಸರಳ ನನಗೆ ಹೆಂತಿ ಕೊಡು, ಕೊಡಲ್ಲಾ ಅಂದ್ರ ನನ್ನ ಕಡೆಯಿಂದ ಇಷ್ಟುದಿನ ಯಾಕ ಕೈ ಮುಗಿಸಿಕೊಂಡಿ, ಎಂದು ಅಳುತ್ತಲೆ ಸವಾಲು ಹಾಕಿದ. ಆದರೆ ದೇವಿ ರಾಮನೊಂದಿಗೆ ತಾನು ಮಾತಾಡುವುದಿಲ್ಲ ಎನ್ನುವಂತೆ ದಿಮ್ಮನೆ ಕುಳಿತಿದ್ದಳು. `ನಿಮ್ಮೌವಳ ನಿನ್ನ ಕೈಯಲ್ಲಿ ಹೆಂತಿ ಕೊಡಕ್ಕಾ ಆಗಲ್ಲಂದ್ರ ನಿನ ನನ್ನ ಮದುವಿಯಾಗು’ ಎಂದು ದೇವಿ ಉಟ್ಟಿದ್ದ ಸೀರೆಗೆ ಕೈ ಹಾಕುವುದಕ್ಕೂ ಹುಡುಗಿಯರಿಬ್ಬರು ದೇವಿಯ ಗುಡಿಗೆ ಬರುವುದಕ್ಕೂ ಸರಿಯಾಯಿತು.

ದೇವಿಯ ಮುಂದೆ ಉರಿಯುತ್ತಿದ್ದ ದೀಪಕ್ಕೆ ಸೀರೆ ತಾಗಿ ಕ್ಷಣಾರ್ಧದಲ್ಲಿ ಆ ದೇವಿಗೆ ಉಡಿಸಿದ್ದ ರೇಷ್ಮೆ ಸೀರೆ ಬಗ್ಗನೆ ಹೊತ್ತಿ ಉರಿಯತೊಡಗಿತು. ಹುಡುಗಿಯರಿಬ್ಬರು `ಹುಚ್ಚರಾಮ ಗುಡಿಗೆ ಬೆಂಕಿ ಹಚ್ಯಾನ ಬರ್ರೆಪೋ’ ಎಂದು ತಮ್ಮ ಬಾಯಿಗೆ ಕೈಗಳನ್ನು ತಂದು ಲಬೋ ಲಬೋ ಹೊಯ್ಯಕೊಳ್ಳಾಕ ಹತ್ತಿದರು. ನಾ ಕೂಡ ನಿ ಕೂಡ ಎಂದು ಭರ್ಜರಿಯಾಗಿಯೆ ಜನ ಸೇರಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಿ ದೇವಿಯನ್ನು ರಕ್ಷಿಸಿದರು. ರಾಮನ ಬೆನ್ನುಗಳ ಮೇಲೆ ಬಾಸುಂಡೆಗಳು ಮೂಡಿದವು.

*****

ಈ ಸುದ್ದಿ ನಿನ್ನೆಯೆ ಊರಿಗೆ ಬಂದಿದ್ದ ಪರಲಾದನಿಗೆ ಮುಟ್ಟಿ ಊರ ಜನ ತನಗೆ ಕೊಡುತ್ತಿದ್ದ ಮರ್ಯಾದೆಗೆ ಕಲ್ಲು ಬಿತ್ತಲ್ಲ ಎಂದು ಗೋಳಾಡತೊಡಗಿದರೆ ರಾಮನ ಮದುವಿಯ ಹುಚ್ಚನ್ನು ಹ್ಯಾಂಗ ಬಿಡಿಸುವುದು ಎಂದು ಯಲ್ಲವ್ವ ಚಿಂತಿಸುತ್ತಿದ್ದಳು. ಇಂದು ಹೊಡೆತ ತಿಂದದ್ದಕ್ಕಾಗಿ ಸ್ವಲ್ಪ ದಿನ ರಾಮ ಸುಮ್ಮನಿದ್ದರೂ ಆಮೇಲೆ ಓಣಿಯ ಯಾವುದಾದರು ಹುಡುಗಿಗೆ ಏನಾದರು ಅಂದು ಊರ ರಾಡಿ ಮನೆಗೆ ತಂದರೆ ತಾನು ಹೆಣ್ಣ ಹೆಂಗಸು ಏನು ಮಾಡಬೇಕು ಎಂದು ಮುದುಕಿ ಚಿಂತಿಸತೊಡಗಿದಳು. ಈ ಗೊಂದಲದ ವಾತಾವರಣದ ನಡುವೆ ಮನೆಗೆ ಸೋಸಿಯಾಗಿ ಬಂದಿದ್ದ ರಾಧಾ `ರೀ ಅತ್ತಿಯವರ, ನಮ್ಮ ಮನಿಗೆ ರಾಮಣ್ಣ ಮಾಮನ್ನ ಸ್ವಲ್ಪ ದಿನ ಕರಕೊಂಡು ಹೋಗೊನೇನ್ರಿ’ ಎಂದು ಹೊಸ ವರಾತ ತೆಗೆದಳು. ಹೆಂಡತಿಯ ಈ ಕರೆಯುವಿಕೆಯ ಹಿಂದೆ ಏನೊ ಒಂದು ಒಳಸ್ವಾರ್ಥಾರ್ಥ ಇದ್ದೆ ಇದೆ ಎಂಬುದನ್ನು ಅವಳ ಒಡನಾಟದೊಂದಿಗೆ ಕಂಡುಕೊಂಡಿದ್ದ ಪರಲಾದ ಹೆಂಡತಿಯ ಕರೆಯುವಿಕೆಗೆ ತಾನು `ಸೋ..’ ಎಂದ.

ಮೆಟ್ಟ ಬದಲಾದರೆ ಮಗ ಸುದಾರಿಸಿಯಾನು ಎಂಬ ಸಣ್ಣ ಆಸೆಯೊಂದಿಗೆ ಹಾಗೂ ಹಿರಿಮಗ ಪರಲಾದನಿರುವ ಧೈರ್ಯದೊಂದಿಗೆ ಯಲ್ಲವ್ವಜ್ಜಿ ಮಗ ಹುಚ್ಚರಾಮನನ್ನು ಕಳುಹಿಸಿಕೊಡಲು ಒಲ್ಲದ ಮನಸ್ಸಿನಿಂದ ಒಪ್ಪಿದಳು. ಇದ್ದೊಂದು ಪೈಜಾಮದಂತಹ ಚೊಣ್ಣವನ್ನು ಕಟ್ಟಿಸಿಕೊಂಡು ಹುಚ್ಚುರಾಮ ಹೊಸ ಹುರುಪಿನಿಂದಲೆ ಅವತ್ತು ಬಾಗಲಕೋಟೆಯ ಬಸ್ಸು ಹತ್ತಿದ.

*****

ಅಂದಿನಿಂದ ಹುಚ್ಚರಾಮನಿಗೆ ಬಾಗಲಕೋಟೆಯ ಹಳೆ ಬಸ್‍ಸ್ಟಾಂಡಿನ ತಿರುವಿನಲ್ಲಿ ರಾರಾಜಿಸುತ್ತಿದ್ದ ಲಿಂಗೇಶ್ವರ ಖಾನಾವಳಿಯೆ ವಾಸ್ತವ್ಯದ ಗೂಡಾಯಿತು. `ನಮ್ಮ ಮನೆಯೊಳಗಿಟ್ಟುಕೊಂಡು ಚಲೋತಂಗ ರಾಮಣ್ಣನನ್ನು ನೋಡಿಕೊಳ್ತಿವಿರಿ ಅತ್ತಿ’ ಎಂದಿದ್ದ ಯಲ್ಲವ್ವನ ಸೊಸೆಮುದ್ದು, ರಾಮಣ್ಣನಿಗೆ ಮೊದಲ ದಿನ ಮಾತ್ರ ತನ್ನ ಮನೆಯ ದರ್ಶನ ಮಾಡಿಸಿದ್ದಳು. ಆ ಮನೆಯ ಅಂಗಳದಲ್ಲಿ ಮೊದಲ ರಾತ್ರಿ ಕಳೆದ ರಾಮನನ್ನು ಮರುದಿನ ಖಾನಾವಳಿಗೆ ವರ್ಗ ಮಾಡಲಾಯಿತು.

ಖಾನಾವಳಿ ಒಂದು ಬದಿಗೆ ಒಂದು ಬಸವೇಶ್ವರ ಕಾಲೇಜಿಗೆ ಹೋಗುವ ಗೇಟ್‌ ಇದ್ದರೆ ಮತ್ತೊಂದೆಡೆ ಸುತ್ತಲಿನ ತರಾವರಿ ಹಳ್ಳಿಗಳಿಗೆ ಜನರನ್ನು ತಂದು ಸುರಿಯುತ್ತಿದ್ದ ಬಸ್ಸುಗಳ ನಿಲ್ದಾಣವಿತ್ತು. ಹೀಗಾಗಿ ಮಧ್ಯಾಹ್ನ 12 ಹೊಡೆಯಿತೆಂದರೆ ಖಾನಾವಳಿ ಫುಲ್ ರಶ್ಶಾಗುತ್ತಿತ್ತು. ಹೋಟೆಲಿನಲ್ಲಿನ ತುಂಬ ಹತ್ತಾರು ಸಪ್ಲೆಯರ್‍ಗಳ ಗುಂಪಿಗೆ ಕೈ ತುಂಬ ಕೆಲಸ. ಅದರಲ್ಲಿ ಹುಚ್ಚರಾಮ ಕೂಡ ಒಬ್ಬನಾಗಿದ್ದನಾದರೂ ಆತನ ಬಾಯಲ್ಲಿ ಯಾವಾಗಲೂ ಜೊಲ್ಲು ಸೋರುತ್ತಿದ್ದುದರಿಂದ ಮತ್ತು ನಡೆದಾಡುವಾಗ ತೂರಾಡುತ್ತಿದ್ದುದರಿಂದ ಆತ ನೆಲಕ್ಕಂಟಿಕೊಂಡೆ ನೆಲದಲ್ಲಿನ ಕೆಲಸಗಳನ್ನು ಮಾಡಬೇಕಿತ್ತು. ಊಟಕ್ಕೆ ಮೊದಲು ಬಾಯಿ ಮುಕ್ಕಳಿಸುವ ಎಲೆಯಡಿಕೆಯ ಕೆಂಪು, ನೆಲದಲ್ಲಿ ಚೆಲ್ಲಿದ್ದ ಕಸ-ಮುಸುರೆ, ಉಂಡಾದ ಮೇಲೆ ಉಗುಳಿದ್ದ ಎಂಜಲು, ಹೊಟ್ಟೆ ತುಂಬಿಯಾದ ಮೇಲೆ ಡೇಗುಗಳ ಕಸರು ಮುಂತಾದವುಗಳನ್ನು ಕೈಯಿಂದ ಬಳಿದು ಸ್ವಚ್ಚ ಮಾಡುವುದು, ನೆಲ ಒರೆಸುವುದು, ತೊಳೆಯುವುದು ಇವೆ ಮುಂತಾದವುಗಳು ಆತನ ದಿನನಿತ್ಯದ ಸೇವೆಗಳಾಗಿದ್ದವು.

ಖಾನಾವಳಿಯ ಮ್ಯಾನೆಜರ್ ಆಗಿದ್ದ ಪರಲಾದ ಯಾವಾಗಲೂ ಕ್ಯಾಶ್ ಕೌಂಟರ್‌ನಲ್ಲಿ ಕುಳಿತುಕೊಂಡಿರುತ್ತಿದ್ದ. ರಾಮಣ್ಣನ ಕೆಲಸಗಳನ್ನು ನೋಡಿಯೂ ನೋಡದಂತಿರುತ್ತಿದ್ದ ಪರಲಾದ ಕೆಲವೊಮ್ಮೆ ಯಾವ ಆಳುಗಳು ಬೈಯ್ಯಿಸಿಕೊಳ್ಳಲಿಕ್ಕೆ ಸಿಗದಿದ್ದಾಗ ರಾಮನನ್ನೆ ಬೈಯ್ದು ತನ್ನ ಚಟವನ್ನು ತೀರಿಸಿಕೊಳ್ಳುತ್ತಿದ್ದ. ಆ ಹತ್ತಾರು ಆಳುಕಾಳುಗಳಲ್ಲಿ ರಾಮ ತನ್ನ ತಮ್ಮನೆಂದು ಬೇಧ ಭಾವವನ್ನು ಎಣಿಸದೆ ಎಲ್ಲರನ್ನು ಸಮನಾಗಿ ಕಾಣುತ್ತಿದ್ದ ಮತ್ತು ಆ ಪ್ರಸಂಗ ಬರಲೆಬಾರದು ಎಂದು ಆಳುಗಳ ಮುಂದೆ ರಾಮ ತನ್ನ ತಮ್ಮನೆಂದೂ ಅಥವಾ ತನ್ನ ಊರಿನವನೆಂದೂ ಹೇಳಿಯೂ ಇರಲಿಲ್ಲ. ಹೀಗಾಗಿ ಎಲ್ಲ ಸಪ್ಲೇಯರ್‍ಗಳು ಹುಚ್ಚರಾಮನ ಮೇಲೆ ತಮ್ಮ ಯಜಮಾನಿಕೆಯನ್ನು ತೋರಿಸಿ ತಮ್ಮ ಅಧಿಕಾರದ ಅಂಹಕಾರವನ್ನು ತಣಿಸಿಕೊಳ್ಳುತ್ತಿದ್ದರು.

ಊರಲ್ಲಿ ಕೇವಲ ದನ ಅಡ್ಡಾಡಿಸಿಕೊಂಡಿದ್ದ ಹುಚ್ಚರಾಮ ಇಲ್ಲಿ ಮುಂಜಾನೆಯಿಂದ ಸರೀರಾತ್ರಿಯವರೆಗೆ ದನದಂತೆ ದುಡಿಯಲೆ ಬೇಕಿತ್ತು. ಒಮ್ಮೊಮ್ಮೆ ಊರಲ್ಲಿನ ಅವ್ವಳ ನೆನಪಾಗುತ್ತಿದ್ದರೂ ಊರಿಗೆ ಹ್ಯಾಂಗ ಹೋಗಬೇಕೆಂದು ಗೊತ್ತಾಗದೆ ಅಲ್ಲಿಯೆ ಕಣ್ಣೀರಾಗುತ್ತಿದ್ದ. ಕೆಲವೊಮ್ಮೆ ಕೆಲಸ ಮಾಡುವುದಿಲ್ಲವೆಂದೂ ಹಟ ಹಿಡಿಯುತ್ತಿದ್ದನಾದರೂ ಸಪ್ಲೇಯರ್‍ಗಳು ಬಡಿದು ಬೈಯ್ದು ಮಾಡಿ ಕಾಟ ಕೊಡುತ್ತಿದ್ದರು.

*****

ಯಲ್ಲವ್ವಳ ಮೊಮ್ಮಗಳು ರತ್ನ ಗಂಡನ ಮನೆಯಲ್ಲಿ ಚನ್ನಾಗಿಯೆ ಹೊಂದಿಕೊಂಡಿದ್ದಳಾದರೂ ಕಚ್ಚೆಹರುಕ ಗಂಡ ಮನೆಯೂಟಕ್ಕಿಂತಲೂ ಹಾದಿಬದಿಯ ಹೊಟೇಲುಗಳಲ್ಲಿ ಉಂಡು ಬರುತ್ತಿದ್ದುದೆ ಹೆಚ್ಚು. ಏನಾದರಾಗಲಿ ಗಂಡ ಗಂಡನೆ ಎಂದುಕೊಂಡ ರತ್ನ ಅಂಥವನಿಂದಲೆ ಹೊಟ್ಟೆ ಭರಿಸಿಕೊಂಡು ಮುದ್ದಾದ ಹೆಣ್ಣೊಂದನ್ನು ಹೆತ್ತಿದ್ದಳು. ಆದರೇನು ಮಾಡುವುದು ಆಕೆಯ ದುರ್ವಿಧಿಯಂಬಂತೆ ಬಲಮೊಲೆಗೆ ನಿಧಾನಕ್ಕೆ ಕ್ಯಾನ್ಸರ್‌ನಂತಹ ಗಂಟು ಬೆಳೆದು, ಅದು ಏನೂ ಮದ್ದು ಮಾಡಿದರೂ ಕರಗದೆ ಕೊನೆಗೆ ಆಪರೆಷನ್ ಮೂಲಕ ಆ ಗಂಟಿನೊಂದಿಗೆ ಪೂರ್ತಿ ಬಲ ಮೊಲೆಯನ್ನು ಕತ್ತರಿಸಬೇಕಾಗಿ ಬಂತು.

ಪೂರ್ತಿ ಬಲ ಎದೆಯ ಕತ್ತರಿಸಿಕೊಂಡು ಸಪಾಟು ಮಾಡಿಸಿಕೊಂಡದ್ದಕ್ಕಾಗಿ ರತ್ನ ಅಥವಾ ಅವಳು ಮಗಳು ಮರುಗಿದಕ್ಕಿಂತಲೂ ಹೆಚ್ಚಾಗಿ ಆಕೆಯ ಗಂಡನನ್ನು ಅದು ಬಾದಿಸತೊಡಗಿತು. ಬಲಗಡೆ ಎದೆಯೆ ಇಲ್ಲದವಳನ್ನು ಒಬ್ಬ ಹೆಂಗಸಾಗಿ ಅದು ತನ್ನ ಹೆಂಡತಿಯಾಗಿ ಒಪ್ಪಿಕೊಳ್ಳುವುದು ಅವನಿಗೆ ಬಹಳ ಕಷ್ಟವಾಗತೊಡಗಿತು. ರಾತ್ರಿ ಆತನ ಕೈ ಅಚಾನಕ್ಕಾಗಿ ಆಕೆಯ ಬಲ ಎದೆಯ ಮೇಲೆ ಹೋದರೆ ಅಲ್ಲೇನಿದೆ? ಬರೀ ಬರಡುದೊಗಲು.

ದಿನಕಳೆದಂತೆ ಗಂಡ ಎನಿಸಿಕೊಂಡವ ಮನೆಗೆ ಬರುವುದನ್ನೆ ಕಡಿಮೆ ಮಾಡತೊಡಗಿದ. ಎಲ್ಲದಕ್ಕೂ ಸಿಡಿಮಿಡಿಗುಟ್ಟತೊಡಗಿದ. ಹೊಡೆತಗಳು ಬಿದ್ದು ನೀಲಿ ಬಾರುಗಳೇಳತೊಡಗಿದವು. ಕೊನೆಗೊಮ್ಮೆ ಅವನ ಒತ್ತಾಯದಂತೆ ಡೈವೊರ್ಸ್ ಪತ್ರಗಳಿಗೆ ಸಹಿ ಮಾಡಿ, ರತ್ನ ತನ್ನ ಒಂಟಿ ಮೊಲೆಯೊಂದಿಗೆ ಹೆಣ್ಣು ಮಗುವನ್ನು ಬಗಲಲ್ಲಿಟ್ಟುಕೊಂಡು ಯಲ್ಲವ್ವಜ್ಜಿಯ ಮನೆಗೆ ಮರಳಿದ್ದಳು.

*****

ಹಗಲೆಲ್ಲ ಕೆಲಸದಲ್ಲಿ ಮೈಮರೆಯುತ್ತಿದ್ದ ಖಾನಾವಳಿ ಸಪ್ಲೆಯರ್‍ಗಳೆಲ್ಲ ರಾತ್ರಿಯಾದೊಡನೆ ಚಿಂತೇಗೀಡಾಗುತ್ತಿದ್ದರು. ಏರು, ಮಧ್ಯ, ಮಾಗಿದ ಹರೆಯದ ಹುಡುಗರೆಲ್ಲ ಆ ಹೋಟೆಲಿನಲ್ಲಿ ಸಪ್ಲೆಯರ್‍ಗಳಾಗಿ ಜಮಾಯಿಸಿದ್ದರು. ಮಾಡಲಿಕ್ಕೆ ಬೇರಾವ ಕೆಲಸಗಳು ಗೊತ್ತಿಲ್ಲದೆ ತಮ್ಮ ಮನೆಗಳ ಬಡತನ ನೀಗಲು ಒಂದಿಷ್ಟಾದರು ಸಹಾಯವಾಗಲಿ ಎಂಬ ಉದ್ದೇಶದಿಂದ ಈ ಖಾನಾವಳಿಯಲ್ಲಿ ಸಪ್ಲೆಯರ್‍ಗಳಾಗಿದ್ದರು. ರಾತ್ರಿಯಾಗುತ್ತಿದ್ದಂತೆ ಅವರಿಗೆ ಮಾಗುತ್ತಿರುವ ವಯಸ್ಸಿನ ನೆನಪಾಗಿ ವಿಚಿದ್ರಕಾರಿ ನೆನಪುಗಳು ಕಾಡತೊಡಗಿ ವಿಚಿತ್ರವಾಗಿ ಕಾವೇರುತ್ತಿದ್ದರು. ಆ ವೇಳೆಯಲ್ಲಿಯೆ ಅವರ ಕಾವನ್ನು ಮೇಲ್ನೋಟಕ್ಕೆ ತಣಿಸುವಂತೆ ಕಂಡರೂ ಹೊಕ್ಕುಳಾಳದೊಳಗಿಂದ ಜ್ವಾಲಾಮುಖಿಯ ಕಾವಿನಂತೆ ಬೋರ್ಗರೆಯಲು ಕಿಚ್ಚು ಹಚ್ಚುತ್ತಿದ್ದ ಆಯುಧವೊಂದು ಆ ಅಮಾಯಕರ ಕೈಗೆ ಸೇರಿಕೊಂಡಿತ್ತು.

ಕೈ ಬೆರಳು ತಾಗಿಸಿದರೆ ವೈವಿಧ್ಯಮಯ ಬಣ್ಣ ಕಾರುವ, ಕಿವಿಗಿಟ್ಟುಕೊಂಡರೆ ಮಧುರಭಾವಗಳನ್ನು ಕೆರಳಿಸುವ ಅಗ್ಗದ, ಆದರೆ ಅದ್ದೂರಿಯ ಮೊಬೈಲುಗಳು ಸಪ್ಲೆಯರ್‍ಗಳ ಕೈಯಲ್ಲಿ ಕಂಗೊಳಿಸತೊಡಗಿದವು. ಕಡ್ಡಿಪೆಟ್ಟಿಗೆ ಗಾತ್ರದ ಆ ಮೊಬೈಲೆಂಬೋ ವಿಶ್ವದಲ್ಲಿ ಅಂಗಿ ಬುಡ್ಡಿ ಗಾತ್ರದ ಚಿಪ್ಪೊಂದನ್ನು ಸಿಗಿಸಿದರೆ ಜಗತ್ತಿನಲ್ಲಿನ ಎಲ್ಲ ಬಿಳಿ-ಕರಿಯ ಹುಡುಗಿಯರ ಹೊಳಪುಳ್ಳ ಮೈಯನ್ನು ಇಂಚಿಂಚೂ ನೋಡುವ ಅವಕಾಶವಾಗುತ್ತಿತ್ತು. ಆ ಚಲ್ಲು ಚಲ್ಲಾದ ಹುಡುಗಿಯರು ಹುಡುಗರೊಂದಿಗೆ ಖಾಸಗಿಯಾಗಿ ಹಂಚಿಕೊಳ್ಳುತಿದ್ದ ಬಿನ್ನಾಣದ ಕ್ಷಣಗಳನ್ನು ನೋಡುತ್ತಾ ಅವರ ಬಿಸಿಯುಸಿರುಗಳನ್ನು ಕೇಳಿಸಿಕೊಳ್ಳಬಹುದಾಗಿತ್ತು. ಸಪ್ಲೆಯರ್‍ಗಳು ತಮ್ಮ ಸಂಬಳವಾದಾಗಲೆಲ್ಲ ಪಕ್ಕದ ಕಂಪ್ಯೂಟರ್ ಸೆಂಟರ್‍ಗಳಿಗೆ ನುಗ್ಗಿ ಮೂರು ರೂಪಾಯಿಗೊಂದರಂತೆ ಫಾರೆನ್ ಅಥವಾ ಲೋಕಲ್ ತಳಿಯ ಇಂತಹ ನೀಲಿ ಕ್ಲಿಪಿಂಗ್‌ಗಳನ್ನು ಹಾಕಿಸಿಕೊಳ್ಳುತ್ತಿದ್ದರು. ಪ್ರತಿದಿನ ರಾತ್ರಿ ಪರಸ್ಪರ ಹಂಚಿಕೊಂಡು ಹಾಸಿಗೆಯಲ್ಲಿ ಉರುಳಿಕೊಂಡು ನೋಡುತ್ತಿದ್ದರು. ಕೆಲವರು ತುಂಬು ಮುಸುಕೆಳೆದುಕೊಂಡು ಚಿತ್ರ ನೋಡುತ್ತಾ ಒಳಗಡೆಯೇ ಮುಲುಕುತ್ತಿದ್ದರು.

ಹಗಲೆಲ್ಲ ಸೋತು ಸುಣ್ಣವಾಗಿ ತನ್ನ ಪಾಡಿಗೆ ತಾನು ಮೂಲೆಯೊಂದರಲ್ಲಿ ಬಿದ್ದುಕೊಳ್ಳುತ್ತಿದ್ದ ಹುಚ್ಚರಾಮನಿಗೂ ಕಿಡಿಗೇಡಿ ಸಪ್ಲೆಯರ್‍ಗಳು ಒಂದು ದಿನ ದಯೆ ತೋರಿ ಮೊಬೈಲಿನಲ್ಲಿನ ನೀಲಿ ವಿಶ್ವವನ್ನು ತೋರಿಸಿದರು. ನೋಡುತ್ತಿದ್ದ ರಾಮನಿಗೆ ಜೊಲ್ಲು ಮಿಶ್ರಿತ ಬಿಸಿಯುಸಿರನ್ನು ಬಿಡತೊಡಗಿದ. ಅವನಿಗೆ ಶಾರಿಯೊಂದಿಗೆ ಕಳೆದ ಕ್ಷಣಗಳ ನೆನಪಾಗಿ ಮತ್ತೊಮ್ಮೆ ಲಗ್ನವಾಗುವ ಬಯಕೆ ಬಲವಾಗಿ ಕಾಡತೊಡಗಿತು. ಹೀಗೆ ಕಾಡುವ ದಿನಗಳಲ್ಲಿಯೆ ಬಸವೇಶ್ವರ ಕಾಲೇಜು ಎದುರಿನ ಆ ಬ್ರಿಡ್ಜ್ ಕೆಳಗೆ ಹೋಗಿ ನಿಲ್ಲಲ್ಲು ಪ್ರಾರಂಭಿಸಿದ್ದ. ಪ್ರತಿದಿನ ಬೆಳಗ್ಗೆ 7.30 ಆ ಮಬ್ಬು ಬೆಳಗುಗಳಲ್ಲಿ ಬಿಗಿಯುಡುಪು ಧರಿಸಿ ಬರುವ ಕಾಲೇಜು ಹುಡುಗಿಯರಲ್ಲಿ ಯಾರಾದರೂ ಒಬ್ಬರು ತನ್ನನ್ನು ಲಗ್ನವಾದಾರೂ… ಎಂಬ ದೂರದ ಬಯಕೆ ಅವನಿಗೆ ಅಲ್ಲಿ ನಿಲ್ಲುವಂತೆ ಮಾಡುತ್ತಿತ್ತು. ಆದರೆ ಯಾವ ಹುಡುಗಿಯರು ಅವನತ್ತ ಮೂಸುತ್ತಿರಲಿಲ್ಲವಾದ್ದರಿಂದ ಕೊನೆಯ ಪ್ರಯತ್ನವೆಂಬಂತೆ ಆತ ಹುಡುಗಿಯರನ್ನು ಕಂಡು ಹಲ್ಲುಗಿಂಜುವುದು, ತೊಡೆಯ ಸಂದಿಯಲ್ಲಿ ಕೈಯಿಟ್ಟುಕೊಂಡು ವಿಚಿತ್ರವಾಗಿ ನಗಲು ಪ್ರಯತ್ನಿಸುವುದು, ಮತ್ತು ಕಡೆಯ ಪ್ರಯತ್ನವಾಗಿ ಪೈಜಾಮಿನ ಲಾಡಿ ಬಿಚ್ಚುವುದನ್ನು ಮಾಡತೊಡಗಿದ. ಹೀಗೆ ಬಿಚ್ಚುವ ಒಂದು ಮುಂಜಾನೆಯೆ ಆತ ಟಿವಿಯೊಂದರ ದೃಶ್ಯಕರ್ತನಿಗೆ ಸಿಕ್ಕಿಬಿದ್ದಿದ್ದ. ಕಿಡಿಗೇಡಿ ಕಾಲೇಜು ಹುಡುಗನೊಬ್ಬ ಟಿವಿ ವಾಹಿನಿಗೆ ಫೋನು ಮಾಡಿ ತಿಳಿಸಿದ್ದನೆಂದು ಕಾಣುತ್ತದೆ.

*****

ಟಿವಿ ಮೇಲಿನ ಮಗನ ರಾದ್ಧಾಂತವನ್ನು ನೋಡಿ ಕಣ್ಣೀರಾದ ಯಲ್ಲವ್ವಜ್ಜಿ ಮರುದಿನ ವಸ್ತಿ ಬಸ್ಸಿಗೆ ಬಾಗಲಕೋಟೆಯ ಲಿಂಗೇಶ್ವರ ಖಾನಾವಳಿಗೆ ಓಡೋಡುತ್ತ ಬಂದಳು. ಮುದುಕಿಯ ಕಣ್ಣಲ್ಲಿ ಇನ್ನೂ ನೀರಾಡುತ್ತಿದ್ದವು. ಹೂಸಿನ ವಾಸ್ನಿ ಎಲ್ಲರಿಗೂ ಗೊತ್ತಾಗುವಂತೆ ನಿನ್ನೆಯ ಘಟನೆ ಇಡಿ ಬಾಗಲಕೋಟೆಗೆಲ್ಲ ಗೊತ್ತಾಗಿತ್ತು. ಟಿವಿಯಲ್ಲಿ ನೋಡಿದ್ದು ಸಾಕಾಗದೆ ಕೆಲವೊಬ್ಬರು ಲಿಂಗೇಶ್ವರ ಖಾನಾವಳಿಯ ಸುತ್ತಮುತ್ತ ಹಾಯ್ದು ಹುಚ್ಚರಾಮನ ದರ್ಶನಕ್ಕಾಗಿ ಹಾತೊರೆಯುತ್ತಿದ್ದರು. ಬಾಗಲಕೋಟೆಯಲ್ಲಿ ಈಗಷ್ಟೆ ಹೆಸರು ಮಾಡುತ್ತಿದ್ದ ಲಿಂಗೇಶ್ವರ ಖಾನಾವಳಿಯ ಹೆಸರನ್ನು ಈ ಹುಚ್ಚಖೋಡಿಯನ್ನು ಸೇರಿಸಿಕೊಂಡು ಕಳೆದುಕೊಳ್ಳುವಂತಾಯಿತು ಎಂದು ಪರಲಾದನ ಮಾವ ನಿನ್ನೆಯಿಂದ ವಟಗುಟ್ಟುತ್ತಿದ್ದ. ಇದರಿಂದ ಸಿಟ್ಟಿಗೆದ್ದಿದ್ದ ಪರಲಾದ `ನನ್ನ ಮರ್ಯಾದಿ ಕಳಿಯಾಕ ಹುಟ್ಟಿ ಬಂದೇನೋ ಮಳ್ಳ ನನ್ನ ಮಗನ’ ಅನಕೊಂಡು ಕೈಗೆ ಸಿಕ್ಕ ಬಡಿಗೆಯೊಂದನ್ನು ತೆಗೆದುಕೊಂಡು ಸಿಟ್ಟು ಆರುವ ತನಕ ಬಡಿದು ರಾಮ ಮೂಲೆಯೊಂದರಲ್ಲಿ ಹೋಗಿ ಬೀಳುವಂತೆ ಮಾಡಿದ್ದ. ರಾಮ ಗ್ಗೀಗ್ಗೀಗಿ ಎಂದು ಆಕಾಶಮುಖಿಯಾಗಿ ಗೀಳಿಟ್ಟಿದ್ದ.

ಮೈಯೆಲ್ಲಾ ಹಣ್ಣುಗಾಯಿ ಮಾಡಿಕೊಂಡಿದ್ದ ರಾಮ ತನ್ನ ಅವ್ವಳನ್ನು ನೋಡುತ್ತಿದ್ದಂತೆ ವಿಕಾರವಾಗಿ ಅಳುತ್ತಾ ಯಲ್ಲವ್ವಳಿಗೆ ತೆಕ್ಕೆಬಿದ್ದಿದ್ದ. ರಾಮನ ದುಬ್ಬವನ್ನು ನೆವರಿಸುತ್ತಿದ್ದ ಯಲ್ಲವ್ವ ಕೂಡ ಕಣ್ಣೀರಾದಳು. ಅಷ್ಟೊತ್ತಿಗೆ ಅಲ್ಲಿಗೆ ಬಂದ ಪರಲಾದ `ಹುಚ್ಚು ಸುಳಿಮಗ ನನ್ನ ಮರ್ಯಾದಿ ಎಲ್ಲ ಕಳದ. ನೀ ಇವತ್ತ ಬರದಿದ್ರ ಇವನೌನ ಕೊಂದ ಬಿಡತಿದ್ನಿ ಇಂವನ’ ಎಂದು ತನ್ನ ಸಿಟ್ಟನ್ನು ಕಾರಿಕೊಂಡ. ಸೊರಗಿ ಸುಣ್ಣವಾಗಿದ್ದ ಹುಚ್ಚರಾಮನನ್ನು ನೋಡಿಯೆ ಕಳವಳಗೊಂಡಿದ್ದ ಯಲ್ಲವ್ವ `ನಾ ಇನ್ನೂ ಬದಕಿನಿ ಅಪಾ. ನಾ ಹಡದ ಮಗ ನನಗೇನಾ ಬಾರಲ್ಲ. ಇರೂ ಮಟಾ ಜ್ವಾಪಾನ ಮಾಡತೀನಿ’ ಎಂದು ರಾಮನನ್ನು ಎಳೆದುಕೊಂಡು ಬಸ್ ಸ್ಟಾಂಡಿ ಕಡೆಗೆ ದಾಪುಗಾಲು ಹಾಕಿದ್ದಳು.

*****

ಹುಚ್ಚರಾಮನನ್ನು ಕರೆದುಕೊಂಡ ಬಂದು ಮತ್ತೆ ಮನೆ ತುಂಬಿಸಿಕೊಂಡ ಯಲ್ಲವ್ವ ಅವತ್ತು ರಾತ್ರಿ ಊಟವನ್ನು ಸರಿಯಾಗಿ ಮಾಡದೆ ತನ್ನ ಮಗ ಹುಚ್ಚರಾಮನ ಭವಿಷ್ಯದ ಕುರಿತು ಮೊಮ್ಮಗಳು ರತ್ನಳೊಂದಿಗೆ ಚಿಂತಿ ಮಾಡುತ್ತಾ ನಾಲ್ಕು ಮಾತನಾಡಿದಳು. `ನಾ ಇರೂವಷ್ಟು ದಿನ ಹ್ಯಾಂಗೋ ಜ್ಪಾಪಾನ ಮಾಡತೀನಿ. ನಾ ಹ್ವಾದ ಮ್ಯಾಲ ನನ್ನ ಮಗನ್ನ ಯಾರು ನೊಡಿಕೊಳ್ಳೋರು’ ಅನಕೋತ ಗೋಳಾಡಿಕೊಂಡಳು. `ಹೋಗಲಿ ಸುಮ್ಮಕಿರಮ್ಮ ಪಾಪಾ ರಾಮಣ್ಣ ಮಾಮಂದ ಅಷ್ಟ ಅಲ್ಲ. ನನ್ನ ಬಾಳ ಹದಗೆಟ್ಟ ಹೋಗೇತಿ. ಆ ದೇವರು ಹ್ಯಾಂಗ ದಾರಿ ತೊರಸತಾನೊ ಹಾಂಗ ಮಾಡಿದ್ರಾತು’ ಎಂದು ರತ್ನ ಮುಸಿ ಮುಸಿ ಅಳುತ್ತಲೆ ಯಲ್ಲವ್ವಜ್ಜಿಯನ್ನು ಸಮಾಧಾನಿಸಿದಳು.
ಹಿಂಗ ಮುದುಕಿ ಮತ್ತು ಮೊಮ್ಮಗಳು ಒಬ್ಬರಿಗೊಬ್ಬರು ಸಮಾಧಾನ ಹೇಳಿಕೊಳ್ಳುತ್ತಲೆ ಅವತ್ತು ಹಾಸಿಗೆ ಹಾಸಿಕೊಳ್ಳತೊಡಗಿದರು. ನಿನ್ನೆಯ ಹೊಡೆತದಿಂದಾಗಿ ಎದ್ದಿದ್ದ ಬಾಸುಂಡೆಗಳು ಇನ್ನು ಬಾಡದೆ ಇದ್ದಕ್ಕಾಗಿ ಹುಚ್ಚರಾಮ ನರಳುತ್ತಲೆ ಇದ್ದ. ಮೈ ಕೈ ನೋವಿನೊಂದಿಗೆ ಸ್ವಲ್ಪ ಉರಿ ಬಂದಿದ್ದವು. `ಇವತ್ತು ಹೊರಗ ಮಲಗೊದು ಬ್ಯಾಡ. ಮೈಯಾಗ ಹುಸಾರಿಲ್ಲ ಇಲ್ಲೆ ಕೋಲ್ಯಾಗ ಮಲಕೊ’ ಎಂದು ಯಲ್ಲವ್ವ ರಾಮನಿಗೆ ಹಾಸಿಕೊಟ್ಟಳು. ತಾನು ಪಡಸಾಲಿಯಲ್ಲಿಯೆ ಅಡ್ಡಾದಳು. ರತ್ನ ಕೂಡ ಪಡಸಾಲಿಯ ಒಂದು ಮೂಲಿಯೊಳಗ ಮಗಳನ್ನು ಹಾಕಿಕೊಂಡು ಅಡ್ಡಾದಳು.

ರತ್ನಳಿಗೆ ಯಲ್ಲವ್ವಜ್ಜಿಯ ಚಿಂತೆಯ ಮಾತುಗಳೆ ತಲೆಯಲ್ಲಿ ಗುಂಯಗುಡತೊಡಗಿದವು. ಆಕೆ ಒಂಟಿ ಮೊಲೆಯವಳೆಂದು ತಿರಸ್ಕರಿಸಿದ ಗಂಡ ಮತ್ತು ಹುಚ್ಚರಾಮನನ್ನು ಮನದ ತಕ್ಕಡಿಯಲ್ಲಿ ತೂಗಿ ನೋಡಿದಾಗ ತನ್ನ ಮಾಜಿ ಗಂಡನಿಗಿಂತ ಈ ಅಮಾಯಕ ರಾಮಣ್ಣ ಮಾಮನೆ ಹೆಚ್ಚು ತೂಕದವನಾಗಿ ಅವಳಿಗೆ ಗೋಚರಿಸಿದನು. ಪಾಪ ರಾಮಣ್ಣ ಮಾಮನಿಗೆ ಒಂದು ಮದುವೆಯಂತದು ಆಗಿ ಒಬ್ಬ ಹೆಂಡತಿಯಿದ್ದರೆ ಹೀಗೆ ಮರ್ಯಾದೆ ಹೋಗುವ ಪರಿಸ್ಥಿತಿ ಬರುತ್ತಿತ್ತೆ. ಅವನು ಮನುಷ್ಯ. ಮನುಷ್ಯನಿಗಿರುವ ಎಲ್ಲ ಆಸೆ, ಹಸಿವುಗಳು ಇವೆ ಎಂಬುದನ್ನು ಈ ಸಮಾಜ ಏಕೆ ಅರ್ಥ ಮಾಡಿಕೊಂಡಿಲ್ಲ. ಬುದ್ಧಿಮಾಂಧ್ಯರಿಗೆ ಕೇವಲ ಊಟ, ಬಟ್ಟೆಗಳನ್ನು ಮಾತ್ರ ನೀಡಿದರೆ ಸಾಲುವುದಿಲ್ಲ. ಅವರ ಮೈ-ಮನಸ್ಸಿಗೆ ಸಂಗಾತಿ ಬೇಕು ಎಂಬ ವಿಚಾರಗಳನ್ನು ಒಳಗೊಂಡ ಸಂಸ್ಥೆಯೊಂದು ಹೊರದೇಶಗಳಲ್ಲಿ ಇಂತಹ ಬುದ್ಧಿಮಾಂದ್ಯರಿಗಾಗಿ ಮತ್ತು ಅಂಗವಿಕಲರಿಗಾಗಿ ಲೈಂಗಿಕ ಸೇವೆಗಳನ್ನು ನೀಡಲು ಕಾರ್ಯಕರ್ತರನ್ನು ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿರುವ ಸುದ್ದಿಗಳನ್ನು ಆಕೆ ಯಾವದೊ ಸುದ್ದಿಪತ್ರಿಕೆಯೊಂದರಲ್ಲಿ ಓದಿದ್ದು ಈಗ ನೆನಪಿಗೆ ಬರತೊಡಗಿತು.

ಮಗು ಈಗಷ್ಟೆ ಮೊಲೆ ಹಾಲು ಕುಡಿದು ತುಟಿಗಂಟಿಕೊಂಡಿದ್ದ ಹಾಲಿನ ನೊರೆಯೊಂದಿಗೆ ನಿದ್ದೆಗೆ ಜಾರತೊಡಗಿತು. ಮಗುವಿನ ದುಬ್ಬ ಚಪ್ಪರಿಸುತ್ತಿದ್ದುದನ್ನು ಬಿಟ್ಟ ರತ್ನ, ನಿಧಾನಕ್ಕೆ ಎದ್ದು ಕುಳಿತಳು. ಕೋಲಿಯೊಳಗಿನ ಹುಚ್ಚರಾಮ ಇನ್ನೂ ನರಳುತ್ತಿದ್ದುದು ಅವಳಿಗೆ ಅಸ್ಪಷ್ಟವಾಗಿ ಕೇಳುತ್ತಿತ್ತು. ನಿಧಾನಕ್ಕೆ ಮೇಲೆದ್ದ ರತ್ನ, ಹುಚ್ಚರಾಮ ಮಲಗಿದ್ದ ಕೋಲಿಯ ಬಾಗಿಲನ್ನು ತಳ್ಳಿಕೊಂಡು ಒಳಹೋದಳು. ಆಕೆಯನ್ನು ಯಲ್ಲವ್ವಳ ಪ್ರಬುದ್ಧ ಕಣ್ಣುಗಳು ಮೆಚ್ಚುಗೆಯಿಂದ ಗಮನಿಸುತ್ತಿದ್ದವು.

ಮಗ್ಗುಲಲ್ಲಿ ತಡಕಾಡಿ ತಾಯಿ ಇಲ್ಲದ್ದನ್ನು ತಾಯಿ ಇಲ್ಲದ್ದನ್ನು ಕಂಡುಕೊಂಡ ಮಗು ಇನ್ನೇನು ಅಳಬೇಕೆಂದು ಬಾಯಿ ತಗೆಯುವುದರಲ್ಲಿತ್ತು. ದೂರದಲ್ಲಿ ಮಲಗಿದ್ದ ಯಲ್ಲವ್ವ ದಾವಿಸಿ ಬಂದು ಮಗುವಿನ ದುಬ್ಬವನ್ನು ಚಪ್ಪರಿಸುತ್ತಾ `ಉಊ ಲಾಲಿ.. ಸುಮ್ಮಕ ಮಕ್ಕೊಳವ್ವಾ.., ನಿನಗ ಹೊಸ ಅಪ್ಪ ಸಿಗತಾನ…, ಅಪ್ಪ ಬೇಕಂದ್ರ ಸುಮ್ಮನ ಮಕ್ಕೋಬೇಕು’ ಎಂದು ಲಾಲಿ ಹಾಡುತ್ತಾ, ದುಬ್ಬ ಚಪ್ಪರಿಸುತ್ತಾ ರಮಿಸತೊಡಗಿದಳು. ಗಾಳಿಗೆ ನಲಗುತ್ತಿದ್ದ ದೀಪ ನಿಧಾನಕ್ಕೆ ಪ್ರಶಾಂತಗೊಂಡು ಬೆಳಕು ಚಲ್ಲತೊಡಗಿತು.

*****

ಹನಮಂತ ಹಾಲಿಗೇರಿ

ಬೆಂಗಳೂರಿನ ಮಾಧ್ಯಮ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ದಿನಗಳು. ಸುದ್ದಿ ಬರೆದು ಕಳಿಸಿದ ಮೇಲೆ ರಾತ್ರಿ ಗೆಳೆಯರೊಂದಿಗೆ ಟಿವಿ ವಾರ್ತಾ ನೋಡುತ್ತಿದ್ದೆ. ಮರವೊಂದಕ್ಕೆ ಬುದ್ಧಿಮಾಂದ್ಯನನ್ನು ಕಾಲೇಜು ಯುವಕ ಯುವತಿಯರು ಛೀ ಥೂ ಎಂದು ಉಗುಳುತ್ತಾ ಹೈ ಹಿಲ್ಡ್ ಮೆಟ್ಟುಗಳನ್ನು ತಗೊಂಡು ಹೊಡೆಯುತ್ತಿದ್ದುದು ಕಾಣಿಸುತ್ತಿತ್ತು. ಆತನಿಗೆ ತುಟಿಯಲ್ಲಿ ರಕ್ತ ಒಸರುತ್ತಿದ್ದರೂ ಆ ಹುಡುಗರು ಒಬ್ಬರ ಮೇಲೊಬ್ಬರು ಜಿಗಿಜಿಗಿದು ಹೊಡೆಯುತ್ತಲೇ ಇದ್ದರು. ಟಿವಿ ನಿರೂಪಕ ಕೊರೆಯತೊಡಗಿದ್ದ. ಈ ಹುಚ್ಚ ಕಾಲೇಜು ಹುಡುಗಿಯರು ತಿರಾಗುಡತ್ತಿದ್ದ ಬ್ರಿಡ್ಜ್‌ನ ಅಂಡರ್‌ಪಾಸಿನಲ್ಲಿ ಅವರನ್ನು ನೋಡಿ ಹಲ್ಲು ಕಿಸಿಯುತ್ತಿದ್ದನಂತೆ. ಕೆಲವು ಹುಡುಗಿಯರ ಕೈ ಹಿಡಿದು ಎಳೆಯುತ್ತಿದ್ದ ಅನ್ನೋ ಆರೋಪ ಸಹ ಇದೆ. ಹೀಗಾಗಿ ಕಾಲೇಜು ವಿದ್ಯಾರ್ಥಿಗಳೇ ಆತನಿಗೆ ಗೂಸ ಕೊಡುತ್ತಿದ್ದಾರೆ.
ನನಗ್ಯಾಕೋ ನನ್ನ ಬೀಗರ ಊರಿನಲ್ಲಿದ್ದ ಬಾಲ್ಯದ ಗೆಳೆಯ ಹುಚ್ಚರಾಮ ನೆನಪಾಗತೊಡಗಿದ. ಬಾಯಲ್ಲಿ ಜೊಲ್ಲು, ಮೂಗಲ್ಲಿ ಸುಂಬಳ, ಅಂಕುಡೊಂಕು ತಿರುಗುವ ಕಣ್ಣು ಮತ್ತು ಕೈಕಾಲುಗಳು. ಕಾಲನ್ನು ಒಗೆದೂ ಒಗೆದೂ ಹೆಜ್ಜೆಯೂರುತ್ತಿದ್ದ ಆತ ಬಾಲ್ಯದಿಂದ ಹದಿ ಹರೆಯ ತಿರುಗುವವರೆಗೂ ಚನ್ನಾಗಿಯೇ ಇದ್ದ. ವಯಸ್ಸು ಮಾಗುತ್ತಿದ್ದಂತೆ ಆತನ ಹುಚ್ಚು ಹೆಚ್ಚಿತೆಂದೇ ಹೇಳಬೇಕು. ಅವನ ವಾರಿಗೆಯ ಹುಡುಗಿಯರೆಲ್ಲ ಮದುವೆಯಾಗಿ ಗಂಡಂದಿರ ಊರಿಗೆ ಹೋದರು. ಗೆಳೆಯರು ಸಹ ಮದುವೆಯಾಗಿ ಅವನ ಎದುರಿಗೆಯೇ ಚಕ್ಕಂದವಾಡತೊಡಗಿದರು. ಅವನ ನಂತರ ಹುಟ್ಟಿದ್ದ ತಮ್ಮನಿಗೆ ಮದುವೆಯಾಯಿತು. ತಮ್ಮ ಈ ಹುಚ್ರಾಮನ ಮುಂದೆಯೇ ರತಿಯಂತಿದ್ದ ಹೆಂಡತಿಯೊಡನೆ ಮುದ್ದಾಟ, ಮುಟ್ಟಾಟಗಳನ್ನೆಲ್ಲ ಜಾರಿಯಲ್ಲಿಟ್ಟಿರುತ್ತಿದ್ದ.
ಊರಿನಲ್ಲೂ ರಾಮನ ಹುಚ್ಚಿಗೆ ಕಿಚ್ಚಿಡುವವವರೇ ಜಾಸ್ತಿ ಇದ್ದರು. “ರಾಮ್ಯಾ, ನಿಂದ್ಯಾವಗಲೇ ಮದ್ವಿ ಅಂತಲೋ, ಯಾವಾಗ ಹುಗ್ಗಿ ಊಟ ಹಾಕಿಸ್ತಿ ಅಂತಲೋ ಕಿಚಾಯಿಸುತ್ತಿದ್ದರು. ರಾತ್ರಿ ಊರ ಹೊರಗೆ ಸೇರುತ್ತಿದ್ದ ಕೆಲ ಯುವಕರಂತೂ ಇವನಿಗೆ ತಮ್ಮ ಮೊಬೈಲಿನಲ್ಲಿನ ನೀಲಿ ಚಿತ್ರ ತೋರಿಸುತ್ತಾ, ಇವನ ಮುಖದ ಮೇಲಾಗುತ್ತಿದ್ದ ಬದಲಾವಣೆಗಳನ್ನು ಓದುತ್ತಾ ಮಜ ತೆಗೆದುಕೊಳ್ಳತೊಡಗಿದ್ದರು. ಹೀಗಿರುತ್ತ ಒಂದು ದಿನ ಈ ರಾಮ ತನ್ನ ಓಣಿಯಲ್ಲಿ ಒಂಟಿಯಾಗಿ ಮಲಗುತ್ತಿದ್ದ ಮುದುಕಿಯ ಗುಡಿಸಲಿಗೆ ಹೋಗಿ ಆಕೆಯ ಮೈತುಂಬಾ ತಡಕಾಡಿದನಂತೆ. ಮುದುಕಿ ಎದ್ದು, ಲಬೋ ಲಬೋ ಹೊಯ್ಕೊಂತಂತೆ. ಗುಂಪು ಸೇರಿದ ಊರು ಜನ ರಾಮನಿಗೆ ಚನ್ನಾಗಿ ತಳಿಸಿದರು. ಮರುದಿನದಿಂದ ಆತನ ಕೈಕಾಲಿಗೆ ಕಬ್ಬಿಣದ ಸರಪಳಿಗಳ ಹಾಕಿ ಮನೆಯ ಹಿತ್ತಿಲಿನ ಕೊಠಡಿಯೊಂದರಲ್ಲಿ ಕೂಡಿ ಹಾಕಲಾಯಿತು. ಕ್ರಮೇಣ ಊಟ ನಿದ್ರೆ ಕಡಿಮೆ ಮಾಡಿರುವ ಆತ ಈಗ ಅದೇ ರೂಮಿನಲ್ಲಿ ಸಾವಿಗಾಗಿ ಕಾಯುತ್ತಾ ಕಾಲ ತಳ್ಳುತ್ತಿದ್ದಾನೆ.
ಟಿವಿಯಲ್ಲಿ ಬರುತ್ತಿದ್ದ ಹುಚ್ಚನಿಗೂ ಈ ಹುಚ್ರಾಮನಿಗೂ ಅಷ್ಟೊಂದೇನೂ ಫರಕಿಲ್ಲ ಎಂದು ನನಗೆ ಅನಿಸತೊಡಗಿತು. ಹುಚ್ರಾಮ, ಟಿವಿಯಲ್ಲಿ ಕಾಣಿಸಿಕೊಂಡ ಹುಚ್ಚ ಸೇರಿದಂತೆ ನನ್ನ ಬದುಕಿನಲ್ಲಿ ಬಂದ ಹೋದ ಬುದ್ಧಿಮಾಂದ್ಯರೆಲ್ಲ ನೆನಪಿನ ಪದರುಗಳಲ್ಲಿ ಮತ್ತೆ ಕಾಣಿಸಿಕೊಳ್ಳತೊಡಗಿದರು. ಎಲ್ಲರೊಂದಿಗೆ ನಗಾಡುತ್ತಾ, ನಗಿಸುತ್ತಾ ಬಾಲ್ಯ ಕಳೆದ ಇವರು ದೊಡ್ಡವರಾಗುತ್ತಿದ್ದಂತೆ ಲೋಕನಿಂದೆಗೆ ಈಡಾಗುತ್ತಿದ್ದುದು ನನ್ನನ್ನು ಚಿಂತೆಗೀಡು ಮಾಡಿತು.
ಹುಚ್ಚರ ಲೋಕವನ್ನಿಟ್ಟುಕೊಂಡು ಕನ್ನಡ ಕಥಾ ಜಗತ್ತಿನಲ್ಲಿ ಸಾಕಷ್ಟು ಕಥೆಗಳು ಬಂದಿವೆಯಾದರೂ ಅವರ ಲೈಂಗಿಕ ಹಕ್ಕಿನ ಕುರಿತು ಇದುವರೆಗೂ ಯಾವ ಕಥೆಗಳಲ್ಲೂ ಪ್ರಸ್ತಾಪವಾಗಿಲ್ಲವೆನಿಸುತ್ತಿದೆ. ಲೈಂಗಿಕತೆಯ ಬಗ್ಗೆ ಅದರಲ್ಲೂ ಹುಚ್ಚರ ಲೈಂಗಿಕ ವಾಂಚೆಗಳ ಬಗ್ಗೆ ಚರ್ಚಿಸುವುದೇ ತಪ್ಪು ಎಂಬ ಸಣ್ಣತನ ಇನ್ನು ನಮ್ಮ ಸಮಾಜದಲ್ಲಿ ಬೇರೂರಿದೆ. ಈ ಓದಿನಿಂದ ಅಂಥವರ ಪೂರ್ವಗ್ರಹಗಳು ಬದಲಾದರೆ ಅದೇ ಈ ಕಥೆಯ ಗೆಲುವು. ಓದಿದವರಲ್ಲೂ ಈ ಹುಚ್ಚರ ಬಗ್ಗೆ ಒಂದಿಷ್ಟು ಮಾನವೀಯತೆ ಮೊಳಕೆಯೊಡೆಯಬಹುದು ಎಂಬ ಸಣ್ಣ ಆಸೆ ನನ್ನಲ್ಲಿ ಇನ್ನು ಜೀವಂತವಾಗಿರುವುದು ಕಾರಣ ಈ ಕತೆ ನನಗೆ ಬಹಳ ಇಷ್ಟವಾಗುತ್ತದೆ.