ಆ ದಿನ ಅಲ್ಲಿ ಹಾಗೆ ಆದಾಗ ಆಕೆಗೆ ಒಳಿತಾಗಲಿ ಎಂದು ಬಯಸಿದ್ದು ಅಲ್ಲಿದ್ದ ನೂರಾರು ಮನಸ್ಸುಗಳು. ಅನುಮಾನವೇ ಇಲ್ಲ. ಆದರೆ ನನ್ನ ಗಮನ ಆಕೆಯ ಇಬ್ಬರು ಹರೆಯದ ಹೆಣ್ಣುಮಕ್ಕಳಾದ ಶ್ರದ್ಧಾ ಮತ್ತು ಪೂಜಾರೆಡೆಗೆ ಇದ್ದದ್ದೂ ಸುಳ್ಳಲ್ಲ. ಇಡೀ ಗುಂಪಿನಲ್ಲಿ ಅವರಿಬ್ಬರಿಗೇ ಇಂಗ್ಲಿಷ್ ಬರುತ್ತಿದ್ದದ್ದು. ಸ್ವಂತ ತಾಯಿ ಕುಸಿದು ಬಿದ್ದಿದ್ದಾಳೆ. ಅಪ್ಪನಿಗೆ ದಿಗ್ಭ್ರಮೆಯಾಗಿದೆ. ಪುಟ್ಟ ತಮ್ಮ ಅಳುತ್ತಿದ್ದಾನೆ. ವಯಸ್ಸಾದ ನೆಂಟರಿಷ್ಟರೆಲ್ಲಾ ಆತಂಕಗೊಂಡಿದ್ದಾರೆ. ಡಾಕ್ಟರ್‌ಗಳು ಹತ್ತು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.
“ಕಂಡಷ್ಟೂ ಪ್ರಪಂಚ” ಪ್ರವಾಸ ಅಂಕಣದಲ್ಲಿ ವಿಮಾನ ಪ್ರಯಾಣದ ಒಂದು ಭಿನ್ನ ಅನುಭವವನ್ನು ಹಂಚಿಕೊಂಡಿದ್ದಾರೆ ಅಂಜಲಿ ರಾಮಣ್ಣ
ಪ್ರವಾಸ ಎಂದರೆ ಯಾವಾಗಲೂ ಕೆ.ಎಸ್. ನರಸಿಂಹಸ್ವಾಮಿ ಅವರ ಭಾವಗೀತೆಯಂತೆ ಬೇಂದ್ರೆಯವರ ನಾಕುತಂತಿಯಂತೆಯೂ ಹೌದು. ಅಲೆದಾಟ ಕಲಿಸುವ ಪಾಠಕ್ಕಿಂತ ಪಿರಿಪಠ್ಯ ಮತ್ತೊಂದಿಲ್ಲ. “ಇದನ್ನು ನಾನು ಕಲಿತೆ” ಎನ್ನುವ ಅಹಂ ಅನ್ನು ತಗ್ಗಿಸಿ “ಇದನ್ನು ನಾನು ಕಲಿಸಿದೆ” ಎಂದು ಬದುಕು ಬೆನ್ನು ತಟ್ಟಿಕೊಳ್ಳುವ ಆಕಾಶ, ಅವಕಾಶ ಎರಡೂ ಪ್ರವಾಸವೇ. ಹೀಗೆ ಒಮ್ಮೆ ಬದುಕು ಪ್ರವಾಸದಲ್ಲಿ ತನ್ನ ವಿರಾಟರೂಪ ನನಗೂ ತೋರಿತ್ತು.
ಅಸಹಾಯಕತೆಯ ಪರಮಾವಧಿ ಹೇಗಿರುತ್ತದೆ ಎನ್ನುವ ಅರಿವಾಗಿದ್ದು ಆ ದಿನ. ನೋವನ್ನೂ ಮೀರಿಹೋಗುವ ಆದರೂ ಸೂಕ್ಷ್ಮತೆಯನ್ನೂ ಉಳಿಸಿಕೊಳ್ಳುವ ಮನುಷ್ಯನ ಅಪಾರ ಶಕ್ತಿಯ ಅರಿವಾಗಿದ್ದೂ ಅದೇ ದಿನ. ಪಾರ್ಥನೆಯಲ್ಲಿ ನಂಬಿಕೆಯನ್ನು ಬಲಗೊಳಿಸಿದ ದಿನವದು.
ಜರ್ಮನಿಯಿಂದ ದೋಹಾ ನಗರದ ಕಡೆಗೆ ವಿಮಾನ ಹತ್ತಿದ್ದೆ. ಪಕ್ಕದಲ್ಲೇ ತಂದೆ, ತಾಯಿ, ಹದಿಹರೆಯದ ಮಗಳೊಬ್ಬಳು ಕುಳಿತಿದ್ದರು. ಅವರ ಮಾತುಗಳಿಂದ ತಿಳಿಯುತ್ತಿತ್ತು ಹದಿನೆಂಟು ಇಪ್ಪತ್ತು ಜನ ನೆಂಟರಿಷ್ಟರ ಗುಂಪೊಂದು ಮಹಾರಾಷ್ಟ್ರದಿಂದ ಯೂರೋಪ್ ಪ್ರವಾಸ ಬಂದಿದ್ದರು. ಆ ಹುಡುಗಿಯ ತಾಯಿಗೆ ಆರೋಗ್ಯದಲ್ಲಿ ಸಣ್ಣ ಏರುಪೇರಾಗಿ ಅವರೆಲ್ಲರೂ ಭಾರತಕ್ಕೆ ಹಿಂತಿರುಗುತ್ತಿದ್ದರು. ಹೌದು. ನಲವತ್ತು ವಯಸ್ಸಿನ ಆಕೆ ತುಂಬಾ ನಿಸ್ತೇಜರಾಗಿ, ಸುಸ್ತಾದವರಂತೆ ಇದ್ದರು. ಆದರೆ ಅದಕ್ಕಿಂತ ಹೆಚ್ಚಿನ ರೋಗಿಯಂತೆ ನನ್ನ ಸಾಮಾನ್ಯ ಕಣ್ಣಿಗೆ ಕಾಣುತ್ತಿರಲಿಲ್ಲ.
ಮುಮ್ಮಟ್ಟಿ ಅಭಿನಯದ ಮಲೆಯಾಳಂ ಸಿನೆಮಾ ನೋಡುತ್ತಿದ್ದೆ. ಆತನ ನಟನೆಗೆ ‘ಅರೆ ವಾಹ್’ ಎಂದುಕೊಳ್ಳುವಷ್ಟರಲ್ಲಿ ಗಗನಸಖಿ ವಿಮಾನದಲ್ಲಿ ಯಾರಾದರು ಡಾಕ್ಟರ್ ಇದ್ದರೆ ಕೂಡಲೇ ಸಂಪರ್ಕಿಸಬೇಕು ಎಂದು ಘೋಷಿಸಿದಳು. ಯಾರಿಗೆ ಏನಾಯಿತೋ ಎಂದುಕೊಳ್ಳುತ್ತಿರುವಾಗ ಮೂವರು ಡಾಕ್ಟರ್‌ಗಳು ನಾನಿದ್ದ ಸೀಟಿನೆಡೆಗೇ ಬಂದರು. ಆಕಡೆ ಈಕಡೆ ನೋಡುವಷ್ಟರಲ್ಲೇ ಎರಡು ಸೀಟುಗಳ ಅಂತರದಲ್ಲಿ ಕುಳಿತಿದ್ದ ಅದೇ ಪೇಲವ ಮರಾಠಿ ಹೆಂಗಸಿಗೆ ಹೃದಯಾಘಾತವಾಗಿದ್ದು ತಿಳಿಯಿತು. ರಸ್ತೆಯಲ್ಲಿ ಹೋಗುವಾಗ ಆ್ಯಂಬ್ಯುಲೆನ್ಸ್ ಸದ್ದಿಗೆ ಎಂಥಾ ಟ್ಯಾಫಿಕ್ ಜ್ಯಾಮ್‌ನಲ್ಲೂ ‘ದಾರಿ ಬಿಡುವ’ ಮನಸ್ಸಾದರೂ ಮಾಡುತ್ತೀವಿ. ರೈಲಿನಲ್ಲಿ ಇಂತಹ ತುರ್ತು ಪರಿಸ್ಥಿತಿಗಳಲ್ಲಿ ಚೈನು ಎಳೆದು ರೈಲು ನಿಲ್ಲಿಸಿಬಿಡುತ್ತೇನೆ ಎನ್ನುವ ಧೈರ್ಯವಾದರೂ ಇರುತ್ತದೆ. ಆದರೆ ವಿಮಾನ ಹಾರುವಾಗ ಉದ್ಭವಿಸುವ ತುರ್ತುಪರಿಸ್ಥಿಗಳಿಗೆ ಸಹಪ್ರಯಾಣಿಕ ಕಣ್ಣು ಮುಚ್ಚಿಕೊಂಡು ಪ್ರಾರ್ಥನೆ ಮಾಡುವುದನ್ನು ಬಿಟ್ಟು ಮತ್ತೇನನ್ನೂ ಮಾಡಲಾರ.
ವಿದ್ಯೆ, ಬುದ್ಧಿ, ಶ್ರೀಮಂತಿಕೆ, ಅಂತಸ್ತು, ಧೈರ್ಯ, ಆತ್ಮವಿಶ್ವಾಸ, ಒಳ್ಳೆಯತನ ಎಲ್ಲವೂ ಅರ್ಥವಿಹೀನವಾಗಿ ಕೇವಲ ‘ಸುಮ್ಮನಿರುವಿಕೆ’ ಎನ್ನುವುದು ತನ್ನ ಮೇಲ್ಗೈ ಸಾಧಿಸಿಬಿಡುತ್ತದೆ. ಅಂತಹ ಸಮಯದಲ್ಲಿ ಎಷ್ಟೆಷ್ಟೋ ಪದವಿಗಳನ್ನು ಹೊತ್ತ ವೈದ್ಯರುಗಳು ಕೂಡ ಪೂರಕ ಸಾಧನಗಳಿಲ್ಲದೆ ಅಸಹಾಯಕರಾಗುತ್ತಾರೆ. ಯಾವ ಪ್ರಯಾಣಿಕನೂ ತನ್ನ ಸೀಟು ಬಿಟ್ಟು ಅಲ್ಲಾಡದಂತೆ ಬೆಲ್ಟನ್ನು ಬಿಗಿಗೊಳಿಸಿಕೊಳ್ಳುವ ಅಪ್ಪಣೆಯಾಗಿತ್ತು. ಪಕ್ಕದಲ್ಲೇ ನೋವು ಉಸಿರಾಡುತ್ತಿತ್ತು. ನೋಡುತ್ತಾ ಕೂರುವುದಷ್ಟೇ ನನ್ನ ಮಿತಿಯಾಗಿತ್ತು.
ಅಲ್ಲಿದ್ದ ವೈದ್ಯರುಗಳು ವಿಮಾನದಲ್ಲಿ ಇದ್ದ ಪ್ರಾಥಮಿಕ ವೈದ್ಯಕೀಯ ಸಾಮಗ್ರಿಗಳನ್ನು ಬಳಸಿ ಆಕೆಯನ್ನು ಉಳಿಸಿಕೊಳ್ಳಲು ತಮ್ಮ ಸಂಪೂರ್ಣ ಪ್ರಯತ್ನ ಮಾಡುತ್ತಿದ್ದರು. ಬಾಹ್ಯದಿಂದ ಉಸಿರು ತುಂಬುವ ಯತ್ನ ಒಬ್ಬರದಾದರೆ, ಗಂಟಲಿನಲ್ಲಿ ಸಣ್ಣ ರಂಧ್ರ ಕೊರೆದು ಆಮ್ಲಜನಕದ ಪೈಪ್‌ಅನ್ನು ತೂರಿಸಲು ಮತ್ತೊಬ್ಬ ವೈದ್ಯನ ಪ್ರಯತ್ನ ಸಾಗುತ್ತಿತ್ತು. ಇನ್ನೊಬ್ಬ ಡಾಕ್ಟರ್ ಇಂಜೆಕ್ಷನ್ ಚುಚ್ಚುತ್ತಿದ್ದರು. ತುರ್ತಾಗಿ ವಿಮಾನವನ್ನು ಕೆಳಗಿಳಿಸಲೇಬೇಕೆನ್ನುವುದು ಆ ಮೂವರೂ ಡಾಕ್ಟರ್‌ಗಳ ಅಭಿಪ್ರಾಯವಾಯಿತು.
ನಾವು ಹಾರಾಡುತ್ತಿದ್ದ ಆಕಾಶಕ್ಕೆ ಹತ್ತಿರವಾದ ಭೂಮಿ ಇರಾಕಿನ ಬಾಗ್ದಾದ್ ಎನ್ನುವ ಊರಾಗಿತ್ತು. ಪೈಲಟ್ ಬಾಗ್ದಾದಿನ ನಿಲ್ದಾಣದಲ್ಲಿ ವಿಮಾನ ಇಳಿಸಲು ಕೋರಿಕೆ ರವಾನಿಸಿದ. ISISನ ಮುಷ್ಠಿಯಲ್ಲಿರುವ ಆ ಜಾಗದಿಂದ ಕೂಡಲೇ ಉತ್ತರ ಬಂತು “ಕೋರಿಕೆಯನ್ನು ನಿರಾಕರಿಸಲಾಗಿದೆ” ಎಂದು. ಮನುಷ್ಯತನವಿಲ್ಲದ ಜೀವಿಗಳಿಂದ ಇನ್ನೇನು ನಿರೀಕ್ಷಿಸಲಾಗುತ್ತಿತ್ತು. ಆಗಲೇ ಆಕೆಯ ಸಂಕಷ್ಟ ಶುರುವಾಗಿ ಎರಡು ಗಂಟೆಗಳಾಗಿದ್ದವು. ಕೊನೆಗೂ ದಿಕ್ಕು ಬದಲಿಸಿ ಇರಾನಿನ ಟೆಹ್‌ರಾನ್ ನಿಲ್ದಾಣಕ್ಕೆ ಸಲ್ಲಿಸಿದ ಕೋರಿಕೆ ಮಂಜೂರಾಗಿ ಅಲ್ಲಿ ವಿಮಾನ ಇಳಿಯುವಷ್ಟರಲ್ಲಿ ಮತ್ತೂ ತೊಂಭತ್ತು ನಿಮಿಷಗಳ ಸೇರ್ಪಡೆಯಾಗಿತ್ತು.
ರೈಲಿನಲ್ಲಿ ಇಂತಹ ತುರ್ತು ಪರಿಸ್ಥಿತಿಗಳಲ್ಲಿ ಚೈನು ಎಳೆದು ರೈಲು ನಿಲ್ಲಿಸಿಬಿಡುತ್ತೇನೆ ಎನ್ನುವ ಧೈರ್ಯವಾದರೂ ಇರುತ್ತದೆ. ಆದರೆ ವಿಮಾನ ಹಾರುವಾಗ ಉದ್ಭವಿಸುವ ತುರ್ತುಪರಿಸ್ಥಿಗಳಿಗೆ ಸಹಪ್ರಯಾಣಿಕ ಕಣ್ಣು ಮುಚ್ಚಿಕೊಂಡು ಪ್ರಾರ್ಥನೆ ಮಾಡುವುದನ್ನು ಬಿಟ್ಟು ಮತ್ತೇನನ್ನೂ ಮಾಡಲಾರ.
ನಿಂತ ವಿಮಾನದ ತುರ್ತು ಬಾಗಿಲುಗಳು ತೆರೆದುಕೊಂಡವು. ಇಬ್ಬರು ಅಧಿಕಾರಿಗಳು ಒಳಬಂದರು. ಇಲ್ಲಿದ್ದ ಡಾಕ್ಟರ್‌ಗಳ ಸರಿಯಾದ ಇಂಗ್ಲಿಷ್ ಅವರಿಗೆ ಅರ್ಥವಾಗದು. ಅದೊಂದು ತುರ್ತುಪರಿಸ್ಥಿತಿ ಎನ್ನುವುದನ್ನು ತಿಳಿದುಕೊಳ್ಳಲೂ ಆಗದ ಅವರಿಬ್ಬರಲ್ಲಿ ಒಬ್ಬಾತ ತನ್ನನ್ನು ವೈದ್ಯ ಎಂದು ಹೇಳಿಕೊಂಡ. ಆದರೆ ರೋಗಿಯ ಪಾಸ್ಪೋರ್ಟ್ ಪರಿಶೀಲಿಸದೆ ತಾನು ಏನೂ ಮಾಡಲಾಗುವುದಿಲ್ಲ ಎನ್ನುವುದನ್ನು ಹೇಳಿದ. ಆಕೆಯನ್ನು ವಿಮಾನದಿಂದ ಹೊರಗಿಳಿಸಿ ಆಸ್ಪತ್ರೆಗೆ ಕೊಂಡೊಯ್ಯಲು ಆ ದೇಶದ ವೀಸಾ ಇರಲೇಬೇಕು ಎನ್ನುವುದು ಅವರ ನಿಯಮವಾಗಿತ್ತು. ಅದಕ್ಕಾಗಿ ಕಾಗದಪತ್ರಗಳ ಕೆಲಸ ಸರಸರನೆ ಆರಂಭವಾಯಿತು.
ಆಕೆಯ ಜೊತೆಗೆ ಕುಟುಂಬದ ಸಹಾಯಕರೊಬ್ಬರ ಅನುಮತಿ ಪತ್ರಗಳು ತಯಾರಗಬೇಕಿದ್ದವು. ಏನೇನೋ ಮಾತುಗಳು, ಪರಿಶೀಲನೆಗಳ ನಂತರ ಆಕೆಯನ್ನು ಹೊರಗಿನ ಆ್ಯಂಬ್ಯುಲೆನ್ಸ್‌ಗೆ ಕರೆದುಕೊಂಡು ಹೋಗಲು ಮತ್ತೂ ಎರಡು ಗಂಟೆಗಳ ಸಮಯವಾಯಿತು. ಇನ್ನೊಂದೆರಡು ಗಂಟೆಗಳ ಕಾಲ ಉಳಿದ ಪ್ರಯಾಣಿಕರ ದಾಖಲೆಗಳ ಪರೀಶೀಲನೆ, ಶುಚಿಗೊಳಿಸುವಿಕೆ, ತುರ್ತು ವೈದ್ಯಕೀಯ ಸಾಮಾಗ್ರಿಗಳ ಮರುತುಂಬಿಸುವಿಕೆ ಎಲ್ಲವೂ ನಡೆದು ವಿಮಾನ ಆಕಾಶಕ್ಕೇರಿದಾಗ ಅರಿವಿಲ್ಲದಂತೆಯೇ ಗಮನ ನನ್ನ ನಿಡಿದಾದ ಉಸಿರಿನೆಡೆಗೆ ಹೋಯಿತು. ಉಹುಂ, ಅದು ನಿರುಮ್ಮಳತೆಯ ಉಸಿರಾಟವಲ್ಲ. ಹಾಗಂತ ನಿರಾಸೆಯ ಪರಾಕಾಷ್ಠತೆಯೂ ಅಲ್ಲ. ಜೀವ-ಜೀವನದ ಮತ್ತೊಂದು ಮುಖದ ಪರಿಚಯವಾಗಿದ್ದರ ಹಿಂಬರಹದಂತಿತ್ತು!
ಆ ದಿನ ಅಲ್ಲಿ ಹಾಗೆ ಆದಾಗ ಆಕೆಗೆ ಒಳಿತಾಗಲಿ ಎಂದು ಬಯಸಿದ್ದು ಅಲ್ಲಿದ್ದ ನೂರಾರು ಮನಸ್ಸುಗಳು. ಅನುಮಾನವೇ ಇಲ್ಲ. ಆದರೆ ನನ್ನ ಗಮನ ಆಕೆಯ ಇಬ್ಬರು ಹರೆಯದ ಹೆಣ್ಣುಮಕ್ಕಳಾದ ಶ್ರದ್ಧಾ ಮತ್ತು ಪೂಜಾರೆಡೆಗೆ ಇದ್ದದ್ದೂ ಸುಳ್ಳಲ್ಲ. ಇಡೀ ಗುಂಪಿನಲ್ಲಿ ಅವರಿಬ್ಬರಿಗೇ ಇಂಗ್ಲಿಷ್ ಬರುತ್ತಿದ್ದದ್ದು. ಸ್ವಂತ ತಾಯಿ ಕುಸಿದು ಬಿದ್ದಿದ್ದಾಳೆ. ಅಪ್ಪನಿಗೆ ದಿಗ್ಭ್ರಮೆಯಾಗಿದೆ. ಪುಟ್ಟ ತಮ್ಮ ಅಳುತ್ತಿದ್ದಾನೆ. ವಯಸ್ಸಾದ ನೆಂಟರಿಷ್ಟರೆಲ್ಲಾ ಆತಂಕಗೊಂಡಿದ್ದಾರೆ. ಡಾಕ್ಟರ್‌ಗಳು ಹತ್ತು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಗಗನಸಖಿಯರು, ಪೈಲೆಟ್‌ಗಳು ಏನೇನೋ ಹೇಳುತ್ತಿದ್ದಾರೆ. ಸಹಪ್ರಯಾಣಿಕರ ನೂರು ಕಣ್ಣುಗಳು ಅವರುಗಳ ಮೇಲಿದೆ. ಓಹ್, ಎಂತಹ ಪರಿಸ್ಥಿತಿ. ಆ ಹುಡುಗಿಯರಿಗೆ ತಾಯಿಯ ನೋವಿನೊಡನೆ ಕಣ್ಣೀರಾಗಲೂ ಅವಕಾಶವಿಲ್ಲ.
“ಅಮ್ಮ ನಿನಗೇನೂ ಆಗೋಲ್ಲ” ಎನ್ನುತ್ತಾ ಅವಳ ಹಣೆ ಸವರುವ ಸಾಮಿಪ್ಯವೂ ಸಾಧ್ಯವಾಗುತ್ತಿಲ್ಲ. ಕಣ್ಣುಗಳನಲ್ಲ ಕಪ್ಪುಮೋಡಗಳನ್ನು ಮುಖದಲ್ಲಿ ಹೊತ್ತು ಎಲ್ಲವನ್ನೂ ಎಲ್ಲರನ್ನೂ ನಿಭಾಯಿಸುತ್ತಿದ್ದ ಶ್ರದ್ಧಾ ಮತ್ತು ಪೂಜಾರು ಆ ಗಳಿಗೆಯಲ್ಲಿ ನನಗೆ ದೇವರಾಗಿಯೇ ಕಂಡರು. ಕೊನೆಗೆ ಪೂಜಾ ವಿಮಾನದಲ್ಲಿಯೇ ಇದ್ದು ಎಲ್ಲರನ್ನು ಭಾರತಕ್ಕೆ ಕರೆದುಕೊಂಡು ಹೋಗಬೇಕೆಂದು, ಶ್ರದ್ಧಾ ಅವರ ತಾಯ್ತಂದೆಯರೊಡನೆ ಇರಾನ್‌ನಲ್ಲಿ ಉಳಿದುಕೊಳ್ಳುವುದು ಎಂದಾಯಿತು.
ಆ ಹುಡುಗಿ ಇನ್ನೇನು ವಿಮಾನ ಇಳಿಯುವಾಗ ನಾನು ಹತ್ತಿರ ಕರೆದು “ಪೂಜಾ ನಿನ್ನ ತಂದೆಯ ತುರ್ತು ಔಷಧಿಗಳೇನಾದ್ರು ಇದ್ದರೆ ಜೊತೆಯಲ್ಲಿ ಇಟ್ಟುಕೋ. ನಿಭಾಯಿಸು. You can do it” ಎಂದು ಅವಳ ಭುಜ ತಟ್ಟಿದೆ. ನನ್ನ ಕೈಯನ್ನು ಆಪ್ತವಾಗಿ ಹಿಡಿದು ಅವಳು “ಥ್ಯಾಂಕ್ಯೂ” ಎಂದಾಗ ಇಬ್ಬರ ಮೌನವೂ ಅಲ್ಲಿ ಒಂದು ಹನಿ ಕಣ್ಣೀರಾಗಿತ್ತು. ಎಲ್ಲವನ್ನೂ ನಿಭಾಯಿಸುವ ಹೆಣ್ಣುಗಳನ್ನು ಈ ಲೋಕ ಅಷ್ಟು ಸುಲಭದಲ್ಲಿ ಒಪ್ಪುವುದಿಲ್ಲ. ಅವರಿಗೆ ದೊರಕುವ ಹತ್ತಾರು ಪದವಿ ಪಟ್ಟಗಳಿಗೂ ಕೊರತೆಯಿಲ್ಲ. ಒಂದು ಪ್ರೀತಿ ಮಾತಿಗಾಗಿ ಹಪಹಪಿಸುವ ದಾಷ್ಟ್ರ್ಯದ ಹೆಣ್ಣುಮಕ್ಕಳ ಇರುವಿಕೆಯಿಂದಲೇ ಈ ಜಗತ್ತಿನ ನೋವಿಗೆ ಸಾಂತ್ವನ ಸಿಕ್ಕುತ್ತಿರುವುದು ಉತ್ಪ್ರೇಕ್ಷೆಯಲ್ಲ. ಆದರೂ ಒಂದಷ್ಟು ಕವಿತೆಗಳಲ್ಲಿ ಇಣುಕಿ ಹಾಕುವ ಸ್ಥಾನ ಬಿಟ್ಟರೆ ಅವಳ ಧೈರ್ಯಕ್ಕೆ, ನಿಭಾಯಿಸುವ ಶಕ್ತಿಗೆ ಮಾನ್ಯತೆ ನೀಡುವಷ್ಟು, ಅವಳನ್ನು ಪ್ರೀತಿಸುವಷ್ಟು ನಾವಿನ್ನೂ ಮನುಷ್ಯರೇ ಆಗಿಲ್ಲ ಎನ್ನುವ ಸ್ವಗತ ಸಾಗುತ್ತಿತ್ತು.
ನೀರಾಡದ ಕಪೋಲ ಹೊತ್ತ ಆ ಹುಡುಗಿಯರ ಮನಸ್ಸಿನ, ನನ್ನ ಊಹೆಗೆ ಸಿಗುತ್ತಿದ್ದ ಮಗ್ಗಲುಗಳನ್ನು ತಿರುಗುಮುರುಗು ಮಾಡಿಕೊಳ್ಳುತ್ತಾ ದೋಹಾ ನೆಲ ಮುಟ್ಟಿದೆ. ಊರು ಸುತ್ತುತ್ತಿದ್ದರೂ ಆ ಯುವತಿಯರು ನೆನಪಾಗುತ್ತಿದ್ದರು ಘಳಿಗೆಘಳಿಗೆಯಲ್ಲೂ. ವಾರ ಬಿಟ್ಟು ಬೆಂಗಳೂರಿಗೆ ಬಂದು ಕುತೂಹಲದಿಂದ ಅಂತರ್ಜಾಲದಲ್ಲಿ ಹುಡುಕಿದಾಗ ಪತ್ರಿಕೆಗಳು ಈ ಘಟನೆಯ ವರದಿ ಮಾಡಿ ಆಕೆಯ ಮರಣದ ಸುದ್ದಿ ನೀಡಿದ್ದವು. ಸ್ಮಶಾನ ವೈರಾಗ್ಯಕ್ಕಿಂತ ಮಾಯೆಯಿಲ್ಲ, ಅಸಹಾಯಕತೆಗಿಂತ ನೋವಿಲ್ಲ ಎಂದುಕೊಂಡೇ ಬದುಕಿನ ಅಲೆದಾಟ ಮುಂದುವರೆಯುತ್ತಿದೆ ಹೀಗೇ.
ಅಂಜಲಿ ರಾಮಣ್ಣ ಲೇಖಕಿ, ಕವಯಿತ್ರಿ, ಅಂಕಣಗಾರ್ತಿ, ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತೆ. ‘ರಶೀತಿಗಳು – ಮನಸ್ಸು ಕೇಳಿ ಪಡೆದದ್ದು’, ‘ಜೀನ್ಸ್ ಟಾಕ್’ ಇವರ ಲಲಿತ ಪ್ರಬಂಧಗಳ ಸಂಕಲನ.
😢😢😢😢ತುಂಬ ಚಂದದ ಬರಹ ಅಂಜಲಿ
ಮೇಡಮ್, ಅಪರೂಪದ ಘಟನೆಗೆ ಸಾಕ್ಷಿಯಾಗಿದ್ದೀರಿ. ಸುಖಾಂತ್ಯ ನಿರೀಕ್ಷಿಸಿದ್ದೆವು,ಆದರೆ ದುಃಖದಲ್ಲಿ ಅಂತ್ಯವಾದದ್ದು ಮನಸ್ಸಿಗೆ ನೋವಾಯಿತು.
ಏನು ಮಾಡುವುದು ಒಪ್ಪಿಕೊಳ್ಳ ಬೇಕಾದ ಕಹಿ ವಾಸ್ತವ.