ಪೆಂಟೆಗೆ ಬಂದೆ. ತೋಟದ ಮರೆಯಲ್ಲೊಂದು ಮಾಯಾಲೋಕ ಅದು. ಪಡ್ಡೆ ಹುಡುಗ ಹುಡುಗಿಯರೆ ಹೆಚ್ಚಿದ್ದರು. ಕುಡುಕರ ಸ್ವರ್ಗ. ಮಾಂಸಕ್ಕೆ ಕಾರ ಮಸಾಲೆ ಹಚ್ಚಿ ಸೌದೆ ಬೆಂಕಿಯಲ್ಲಿ ಸುಟ್ಟು ಎಂಡಗುಡುಕರಿಗೆ ಮಾರುತಿದ್ದರು. ವಿಚಿತ್ರ ಕಂಟು ಕಮಟು ವಾಸನೆ. ಟಿಕೇಟು ಪಡೆದೆ. ಇಷ್ಟವಾದ ಬಟಾಣಿ, ಕಡಲೆ ಬೀಜ ತಿನ್ನುತ್ತ ಕೂತಿದ್ದೆ. ಹತ್ತು ಗಂಟೆಗೆ ಸಿನಿಮಾ ಆರಂಭವಾಗುತ್ತಿದ್ದುದು. ಮೈಸೂರಿನದೇ ನೆನಪು. ತಾತನೂ ಸರಿ ಇಲ್ಲ ಎನಿಸಿತ್ತು. ಯಾವತ್ತೂ ತನ್ನ ಮಕ್ಕಳ ತಪ್ಪುಗಳ ಬಿಟ್ಟುಕೊಡುತ್ತಿರಲಿಲ್ಲ.
ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯಲ್ಲಿ ಹೊಸ ಬರಹ

ಅವನು ನನ್ನ ತಮ್ಮ ಶ್ರೀನಿವಾಸ ಹುಡುಕಾಡಿ ಬಂದು ವಾರ್ತೆ ಬಿಟ್ಟು ಹೋಗಿದ್ದ. ನಾನು ಕೃಷ್ಣಪ್ಪನ ರೂಮಲ್ಲಿರುವುದ ಹೇಗೆ ಹುಡುಕಿದ್ದನೊ ಕಾಣೆ. ಬೀಗ ಹಾಕಿ ಗಂಗೋತ್ರಿಗೆ ಹೋಗಿ ಹಳೆಗೆಳೆಯರ ಕಂಡಿದ್ದೆ. ಅಶ್ವಥ ನಾರಾಯಣ ಎಂಬುವರು ಪಿಎಚ್.ಡಿ ಮಾಡುತ್ತಿದ್ದರು. ಆಳವಾದ ಓದು ಒಳನೋಟವಿದ್ದವರು. ಚರಿತ್ರೆ ವಿಷಯದಲ್ಲಿ ಪರಿಣಿತರಿದ್ದರು. ನಮ್ಮ ಹೋರಾಟಗಳಿಗೆ ಬೆಂಬಲ ನೀಡುತ್ತಿದ್ದವರು. ಸಕತ್ ಬಾಡಿ ಬಿಲ್ಡರ್. ಆದರೆ ಅವರು ಎಷ್ಟೊಂದು ಮೃದು ಹೃದಯಿ ಎಂದರೆ ನಂಬಲು ಆಗುತ್ತಿರಲಿಲ್ಲ. ನೊಂದವರ ಜೊತೆ ತಾವೂ ಅತ್ತುಬಿಡುತ್ತಿದ್ದರು. ಚಿಲಕಕ್ಕೆ ಒಂದು ಚೀಟಿಯನ್ನು ಸಿಕ್ಕಿಸಲಾಗಿತ್ತು. ಏನೆಂದು ತೆರೆದು ನೋಡಿದೆ.

`ಅಣ್ಣಾ; ನೆನ್ನೆ ರಾತ್ರಿ ದೊಡ್ಡಣ್ಣ ಆಸ್ಪತ್ರೆಯಲ್ಲಿ ತೀರಿಕೊಂಡರು. ಅವರ ಹೆಣವ ಊರಿಗೆ ಕೊಂಡೊಯ್ಯುತ್ತಿದ್ದೇವೆ. ನೀವು ಊರಿಗೆ ಬರಲೇ ಬೇಕು… ಮುಖ್ಯ ವಿಷಯಗಳಿವೆ. ದಯವಿಟ್ಟು ಬನ್ನಿ… ನಿಮ್ಮ ತಮ್ಮ ಶ್ರೀನಿವಾಸ.’

ಅವನು ಸಾಯುವುದು ಖಾತ್ರಿಯಿತ್ತು. ಅಂತೂ ಹೋದನಲ್ಲಾ ಎಂದು ಏನೇನೊ ನೆನೆದೆ. ಕೆಟ್ಟ ಕುತೂಹಲ ಬಂತು. ಅವನ ಸಾವನ್ನು ನೋಡಬೇಕು ಎಂದು ಮರುದಿನ ಬೇಗನೆ ಊರಿಗೆ ಹೊರಟೆ. ನೆಂಟರೆಲ್ಲ ಬರಬೇಕಿತ್ತು. ಹೆಣವನ್ನು ಪಡಸಾಲೆ ಮೇಲೆ ಮಲಗಿಸಿದ್ದರು. ದೇಹ ಊದಿತ್ತು. ಗಂಧ ಸಾಮ್ರಾಣಿ ಹಚ್ಚಿದ್ದರು. ಹೆಂಗಸರ ಅದೇ ಮಾಮೂಲ ರಾಗಾಲಾಪನೆ. ಇದೆಲ್ಲ ಸುಳ್ಳು ಎನಿಸಿತು. ವಿಕಾರವಾಗಿತ್ತು ಹೆಣ; ವಿಪರೀತ ಕುಡಿದು ಕೆ.ಆರ್. ಆಸ್ಪತ್ರೆಯಲ್ಲೆ ಜೀವ ಬಿಟ್ಟಿದ್ದ. ಅಂಗಾಂಗಗಳೆಲ್ಲ ವಿಫಲ ಆಗಿದ್ದವು. ಅವನ ಹೆಂಡತಿ ಹಾಗೂ ಏಕೈಕ ಪುತ್ರಿ ಶವದ ತಲೆ ಬಳಿ ಕೂತು ಶೋಕ ಮಾಡುತ್ತಿದ್ದರು. ತಾತ ಸಾವಿಗೆ ಬಂದವರತ್ತ ಗಮನ ಹರಿಸಿದ್ದ. ಅಜ್ಜಿ ಎದುರು ಪಡಸಾಲೆಯ ಆಚೆ ಮೂಲೆಯಲ್ಲಿ ಜೀವ ಹಿಡಿದು ಬಿದ್ದಿದ್ದಳು. ಆ ಬೊಮ್ಮಣಿ ಅದಾಗಲೆ ಹುಳಿ ಎಂಡದ ನಿಶೆಯಲ್ಲಿ ದುಃಖ ಕಾವ್ಯವ ಕಟ್ಟುವಂತೆ ತನ್ನ ಅಣ್ಣನ ಒಂದು ಕಾಲದ ರಾಜ ವೈಭವವನ್ನು ರಾಗಬದ್ಧವಾಗಿ ಹಾಡುತ್ತ ಎದೆ ಚಚ್ಚಿಕೊಳ್ಳುತ್ತಿದ್ದಳು. ನನ್ನ ಅಕ್ಕ ಭಾವ ಇಬ್ಬರೂ ಬಂದಿದ್ದರು. ಅಪ್ಪ ಎನಿಸಿಕೊಳ್ಳುವ ಆ ನೀಚ ಉತ್ಸಾಹದಲ್ಲಿ ಅಡ್ಡಾಡುತ್ತಿದ್ದ. ಶ್ರೀನಿವಾಸ ಬಾರಣ್ಣ ಎಂದು ಹಿತ್ತಲಿಗೆ ಕರೆದೊಯ್ದ. ಅಲ್ಲಿ ಒಂದು ಕಾಲಕ್ಕೆ ಇದ್ದ ಹಂದಿಗೂಡು ಈಗ ಸೌದೆಮನೆಯಾಗಿ ಮಾರ್ಪಟ್ಟಿತ್ತು.
ಏನೊ ಎಂದೆ. `ತಕತಿಯಣ್ಣಾ’ ಎಂದು ಎಂಡದ ಮಡಕೆಯ ತೋರಿದ. ಬೇಡ ಎಂದೆ. ತಾನೆ ಗಟಗಟನೆ ಒಂದು ತಪ್ಪಲೆ ಎಂಡವ ಮಜ್ಜಿಗೆಯಂತೆ ಕುಡಿದ. ಅವನ ಪರಿಸ್ಥಿತಿ ಹಾಗಿತ್ತು. ಸಣ್ಣದನಿಯಲ್ಲಿ ಏನೇನೊ ಹೇಳಿದ. ಅವನ ಮಾತಿಗೆ ನಿರುತ್ತರನಾಗಿದ್ದೆ. ಜೋರಾಗಿ ತಮಟೆ ನಗಾರಿ ಬಾರಿಸುತ್ತಿದ್ದರು. ಚಟ್ಟಕಟ್ಟಿ ಆಗಿತ್ತು. ದತ್ತು ಮಗ ಶ್ರೀನಿವಾಸ ಮೊದಲು ಚಟ್ಟಕ್ಕೆ ಹೆಗಲು ಕೊಡಬೇಕಿತ್ತು. ತನ್ನ ಬೆಂಬಲಕ್ಕೆ ಅಣ್ಣ ಇರಲಿ ಎಂಬುದು ಅವನ ಅಪೇಕ್ಷೆಯಾಗಿತ್ತು. ಹೆಣದ ಮುಂದೆಯೆ ನಾಟಕ ಆರಂಭವಾಗಿತ್ತು. ನನಗೆ ವಾಕರಿಕೆ ಆಗಿತ್ತು. ಆ ಹೆಣ ಕೊಳೆಯುತ್ತಿತ್ತು. ಭಾಗಶಃ ನಾನು ಅವತ್ತು ಚಲುವಾಂಬ ಆಸ್ಪತ್ರೆಯಲ್ಲಿ ತಾಯ ನೆನಪಿನಲ್ಲಿ ಹಾಗೆ ಕಾರಿಡಾರಿನಲ್ಲಿ ಮಲಗಿದ್ದಾಗ; ಈತ ಇತ್ತ ಜನರಲ್ ವಾರ್ಡಿನಲ್ಲಿ ಸಾವು ನೋವಿನ ನಡುವೆ ಕುಡಿದು ಬಿದ್ದಿದ್ದನೇನೊ… ವೈದ್ಯರು ಕಟ್ಟು ನಿಟ್ಟಾಗಿ ಕುಡಿಯಬಾರದು ಎಂದು ಎಚ್ಚರಿಸಿದ್ದರೂ ಆತ ಕದ್ದು ಕೆಳಗಿಳಿದು ಹೊರಗೆ ಹೋಗಿ ಕುಡಿದು ಬಂದು ರಕ್ತ ಕಾರಿಕೊಂಡು ಅನಾಥ ಹೆಣವಾಗಿ ಬಿದ್ದಿದ್ದ. ತಮ್ಮನೆ ಅದನ್ನೆಲ್ಲ ನಿರ್ವಹಿಸಿ ಬಾಡಿಗೆ ಕಾರಲ್ಲಿ ಹೆಣವ ಹಳ್ಳಿಗೆ ತಂದಿದ್ದ. ಅವನು ಹಾಗೆ ಸಾಯುವ ಕಾಲದಲ್ಲೂ ಸೇವೆ ಮಾಡಿದ್ದ ಶ್ರೀನಿವಾಸ. ಆ ದೊಡ್ಡಮ್ಮ ಎನಿಸಿಕೊಳ್ಳುವವಳ ಆಲೋಚನೆಯೆ ಬೇರೆ ಇತ್ತು. ಶ್ರೀನಿವಾಸನಲ್ಲಿ ಏನೊ ಆಸೆ ಮೂಡಿತ್ತು.

ಪಂಚಾಯ್ತಿ ಹೆಣದ ಮುಂದೆಯೆ ಮುಗಿಯಬೇಕು ಎಂದಿದ್ದ ನನ್ನ ಅಪ್ಪ. ಹೇಳ್ರಪ್ಪಾ… ಎಂಗೆ ಮಾಡಿರಿ ಎಂದಿತ್ತು ಪಂಚಾಯ್ತಿ. ನನ್ನ ಮಗ್ನ ದತ್ತು ತಕಂದಿರ್ಲಿಲ್ಲುವೇ; ಅಂಗಾಗಿ ಅವುನ ಕೆಲ್ಸ ನನ್ಮಗುನ್ಗೆ ಬರ್ಬೇಕು’ ಎಂದಿದ್ದ ಅಪ್ಪ. ಚಿಕ್ಕಪ್ಪಂದಿರು ಒಪ್ಪಲಿಲ್ಲ. ತಾಯಿ ಮಗಳು ಮಿಕಿ ಮಿಕಿ ನೋಡುತ್ತಿದ್ದರು. ತಾತ ಅಂತಹ ಕ್ಷೋಬೆಗಳಲ್ಲಿ ಭಾಗವಹಿಸುತ್ತಿರಲಿಲ್ಲ. ಶ್ರೀನಿವಾಸ ನನ್ನತ್ತ ನೋಡುತ್ತಿದ್ದ. ಇದೆಲ್ಲ ನನಗೆ ಸಂಬಂಧಿಸಿದ್ದಲ್ಲ ಎಂದು ಬೇಗ ಇದು ಮುಗಿದರೆ ಸಾಕು; ಗಂಗೋತ್ರಿಗೆ ಹೋಗಿ ನಿದ್ದೆ ಮಾಡಬೇಕು ಎನಿಸಿ ತಲೆ ನೋಯುತ್ತಿತ್ತು. ಅವರ ಬಲೆಯಿಂದ ತಪ್ಪಿಸಿಕೊಂಡರೆ ಸಾಕು ಎನಿಸಿತ್ತು. ಸತ್ತಾಗ ಯಾರ್ಯಾರೊ ಬರುತ್ತಾರೆ. ಈರಕ್ಕನ ಮಗನೇನಪ್ಪಾ ಎಂದು ಕೆಲವರು ಮರುಕದಲ್ಲಿ ಮತಾಡಿಸಿದರು. ಜನ ನನ್ನ ತಾಯಿ ಊರಿಂದಲು ಬಂದಿದ್ದರು. ಮಂಚಮ್ಮನ ಮನೆ ಬಳಿ ನಿಂತಿದ್ದೆ. ಹೆಂಗಸರು ಮಾತಾಡಿಕೊಳ್ಳುತ್ತಿದ್ದುದು ಕೇಳಿಸಿತು. ನನ್ನ ತಾಯಿ ಸಾವಿನ ಬಗ್ಗೆ ಗುಸುಗುಸು ಮಾತಾಡಿ ಕಹಿಯ ಘಟನೆಯ ನೆನೆಯುತ್ತಿದ್ದರು. `ಅಣ್ಣ ತಮ್ಮ ಇಬ್ರೂ ಸೇರಿ ಕೊಂದ್ರಲ್ಲಾ ಅವಳಾ… ಇವತ್ತು ನೋಡುದ್ರಾ ಯೆಂಗಾಯ್ತೂ… ಕೊಳೆತ ಯೆಣುವಾಗಿ ಬಂದು ಬಿದ್ದವನಲ್ಲಾ… ಇವತ್ತೇನು ಕುದುರೆ ಗಾಡಿಲಿ ವೋದನೇ’ ಎನ್ನುತ್ತಿದ್ದರು. ಆ ನೆನಪಿಗೆ ಇಳಿಯಲು ಮನಸ್ಸಿರಲಿಲ್ಲ. ಚಿಕ್ಕಪ್ಪರಿಗೆ ಪ್ರಾಯದ ಮಕ್ಕಳಿರಲಿಲ್ಲ. ಸಣ್ಣವರು ನಮ್ಮ ಅಣ್ಣನ ಕೆಲಸವನ್ನು ನಮ್ಮ ಮಕ್ಕಳಲ್ಲಿ ಯಾರಿಗಾದರೂ ಒಬ್ಬರಿಗೆ ಸಿಗಲಿ ಎಂದು ಹಠಹಿಡಿಯಲು ಸಾಧ್ಯವಿರಲಿಲ್ಲ. ನ್ಯಾಯೋಚಿತವಾಗಿ ದತ್ತು ಮಗನಾದವನಿಗೇ ಪರಿಹಾರದ ಕೆಲಸ ಸಿಗಬೇಕಿತ್ತು. ಅಲ್ಲಲ್ಲೆ ಗುಂಪುಗಳಾದವು. ಹೆಣವ ಸ್ಮಶಾನಕ್ಕೆ ತಂದು ಆಗಿತ್ತು. ಗುಂಡಿ ತೋಡಿದ್ದರು. ಶವ ಸಂಸ್ಕಾರ ಶಾಸ್ತ್ರಗಳ ದತ್ತು ಮಗನಾಗಿ ಶ್ರೀನಿವಾಸನೇ ಮಾಡುತ್ತಿದ್ದ. ಚಿಕ್ಕಪ್ಪರು ಅವನ ಬೆಂಬಲಕ್ಕೆ ಇರಲಿಲ್ಲ. ದೊಡ್ಡಮ್ಮ ಬಿಟ್ಟುಕೊಡಲು ತಯಾರಿರಲಿಲ್ಲ. ಮಣ್ಣು ಮಾಡಿ ಬಂದರು.

ನನ್ನ ಅಕ್ಕ ಭಾವ ಹಿತ್ತಲ ಹೊಂಗೆ ಮರದ ನೆರಳಿಗೆ ಕರೆದು ಹೇಳಿದರು… ನೋಡಪ್ಪಾ… ದೊಡ್ಡ ವಿದ್ಯಾಭ್ಯಾಸ ಮಾಡಿದ್ದಿಯೇ; ನಿಂತಮ್ಮ ಸರ್ಯಾಗಿ ವೋದಿಲ್ಲ ಅವುನ್ಗೆ, ಸರ್ಯಾದ ಕೆಲ್ಸ ಸಿಗೊಲ್ತು. ನಿನುಗಾದ್ರೆ ಸಾಯೇಬನ ಕೆಲ್ಸನೆ ಸಿಕ್ತದೆ ಎಂದು ಭಾವ ದೊಡ್ಡ ಸಲಹೆ ನೀಡಿದರು. ಮೈ ಮೇಲೆ ಹೇಸಿಗೆ ಬಿದ್ದಂತಾಗಿತ್ತು. ಚೀ; ಥೂ… ಅವನ ಕೆಲಸ ನನಗೆ ಬೇಕೇ… ಬ್ಯಾಡ ಅಸಹ್ಯ ಅದೂ ಸಾಧ್ಯವಿಲ್ಲ ನನ್ನಿಂದ. ಶ್ರೀನಿವಾಸನಿಗೇ ಕೊಡಿಸಿ ಎಂದು ಅತ್ತ ಹೋದೆ. ಅಪ್ಪನ ಸ್ವಾರ್ಥವೆ ಬೇರೆ ಇತ್ತು. ನಾಳೆ ದಿನ ತಾನು ಮೈಸೂರು ಸೇರಿ ಶ್ರೀನಿವಾಸನ ಜೊತೆ ಸುಖವಾಗಿ ಇರಬಹುದು ಎಂದು ಲೆಕ್ಕ ಮಾಡಿ ಶ್ರೀನಿವಾಸನಿಗೆ ಬೆಂಬಲಿಸಿದ್ದ. ನನ್ನ ಪ್ರಸ್ತಾಪ ಬರಲಿಲ್ಲ. ಅವರಿಗೆ ಇಷ್ಟವೂ ಇರಲಿಲ್ಲ. ನಾಳೆ ದಿನ ನಮ್ಮ ಮಾತನ್ನು ಇವನು ಕೇಳುವುದಿಲ್ಲ ಎಂದು ತಿರಸ್ಕರಿಸಿದ್ದರು. ಜಗಳವಾಗುವ ವಾತಾವರಣ ನಿರ್ಮಾಣವಾಯಿತು. `ಸೀನಾ… ಬೇಡ ಬಿಡೊ ಆ ಪಾಪಿಯ ಕೆಲಸ. ಸಾಯೊತನಕ ಅವನ ಹೆಣದ ನೆರಳಾಗಿ ಯಾಕೆ ಬದುಕಬೇಕು ನೀನೂ… ಕೊಟ್ಟರೆ ನಿನಗೆ ಒಂದು ಜವಾನ ಕೆಲಸ ಅಷ್ಟೇ ಅಲ್ಲಿ ಸಿಗೋದು. ಅದರಲ್ಲಿ ಸುಖಾ ಇದೆಯಾ… ನಾಳೆ ನೀನು ಆ ದೊಡ್ಡಮ್ಮ ಅವಳ ಅಕ್ಕತಂಗಿಯರು ಅವರ ಮಕ್ಕಳು ನೆಂಟರು… ಇವರ ಸೇವೆ ಮಾಡಿಕೊಂಡು ಅವರ ಋಣದಲ್ಲಿ ಬಿದ್ದಿರಬೇಕಾಗುತ್ತೇ… ಬೀದಿಗೆ ಎಸೆದಿದ್ದರಲ್ಲವೇ… ಈಗೇನು ಬಾರಪ್ಪಾ ಅಂತಾ ಕರ್ಕಂಡರೇ… ಬಿಟ್ಟುಬಿಡೊ ಅವರ ಸಹವಾಸವಾ… ಹೇಗೊ ಎಲ್ಲೊ ನಿನ್ನ ಅನ್ನದ ದಾರಿಯ ನೀನೇ ಕಂಡುಕೊ’ ಎಂದು ಶ್ರೀನಿವಾಸನಿಗೆ ಬುದ್ದಿ ಹೇಳಿದೆ. ಬೇಸರದಲ್ಲಿದ್ದ. ಒಪ್ಪಿಕೊಳ್ಳಲು ತಯಾರಿರಲಿಲ್ಲ. ತಾಯಿ ಮಗಳು ಒಂದಾಗಿದ್ದರು. `ನಮ್ಮಪ್ಪನಿಗೆ ಹುಟ್ಟಿದವಳು ನಾನು. ನನಗೆ ಜನ್ಮ ಕೊಟ್ಟವಳು ನನ್ನ ತಾಯಿ. ನಮ್ಮಿಬ್ಬರ ಹೊರತು ನಮ್ಮಪ್ಪನ ಕೆಲಸದಲ್ಲಿ ಯಾರಿಗೂ ಅಧಿಕಾರ ಇಲ್ಲ’ ಎಂದಿದ್ದಳು. ತಾತ ಸಮ್ಮತಿಸಿದ್ದ. ಪಂಚಾಯ್ತಿ ಮುಗಿದಿತ್ತು. ಸೂತಕದ ಮನೆಯಲ್ಲಿ ನೆಂಟರು ಉಳಿಯುವಂತಿಲ್ಲ; ಹೊರಟು ಹೋಗಿದ್ದರು.

ಅಜ್ಜಿಯ ಕಿವಿ ಮುಚ್ಚಿಹೋಗಿದ್ದವು. ಯಾರೂ ಅವಳತ್ತ ಗಮನ ನೀಡುತ್ತಿರಲಿಲ್ಲ. ಪಡಸಾಲೆ ಹಿಡಿದು ಬಹಳ ದಿನವಾಗಿತ್ತು. ಯಾರಿಗೂ ಬೇಡವಾಗಿದ್ದಳು. ತಾತ ಕೈ ಬಿಟ್ಟಿದ್ದ. ಈ ನರಕದಲ್ಲಿ ರಾತ್ರಿ ಉಳಿಯಲೊ ಬೇಡವೊ ಎಂಬ ಗೊಂದಲದಲ್ಲೇ ಕೊನೆಯ ಬಸ್ಸು ಹೊರಟು ಹೋಗಿತ್ತು. ತಮ್ಮ ಶ್ರೀನಿವಾಸನೂ ಆ ಕಾಳಮ್ಮನ ಮಗ ಕಾಳನೂ ಪೇಟೆಗೆ ಹೋಗಿದ್ದರು. ನನ್ನನ್ನೂ ಕರೆದಿದ್ದರು. ಹೋಗಿರಲಿಲ್ಲ. ಕತ್ತಲಾಗಿತ್ತು. ಬಿಕೊ ಎನ್ನುತ್ತಿತ್ತು ಬೀದಿ. ಕುರುಡಪ್ಪನ ಮನೆಯಲ್ಲಿ ಕೂತಿದ್ದೆ. ಅತ್ತೆಯರು ಮೌನದಲ್ಲಿದ್ದರು. ಅವನ ಸಾವು ಶಾಪದ ಫಲ ಎಂದಿದ್ದರು. ನನ್ನ ತಾಯ ತಾಯಿ ಶಾಪ ಹಾಕಿದ್ದು ನೆನಪಾಯಿತು. ಸತ್ತವರ ಮನೆಯಲ್ಲಿ ಒಲೆ ಹಚ್ಚುವಂತಿರಲಿಲ್ಲ. ನೆರೆಹೊರೆಯವರು ಅಡುಗೆ ಮಾಡಿ ತಂದು ಬಡಿಸುತ್ತಿದ್ದರು. ಯಾರೂ ನನ್ನನ್ನು ಗಮನಿಸಲಿಲ್ಲ. ಸಾವಿನ ನೆರಳು ಅಲ್ಲೆಲ್ಲ ಬೆಳದಿಂಗಳ ಜೊತೆ ಸರಿದಾಡುತಿತ್ತು. ಪೆಂಟೆಯ ಟೆಂಟಿನಲ್ಲಿ ಈ ರಾತ್ರಿ ಕಳೆಯಬಹುದೇ ಎಂದು ಯೋಚಿಸುತ್ತಿದ್ದೆ. ಎರಡು ಕನಸು ಸಿನಿಮ ಹಾಕಿದ್ದರು. ಮನೆಯತ್ತ ಜೋರು ಗಲಾಟೆ. ಕಿವಿ ಮೇಲೆ ಬಿತ್ತು. ಅತ್ತ ಹೋದೆ. ನನ್ನ ಪಾಪಿ ಅಪ್ಪನೂ ತಮ್ಮ ಶ್ರೀನಿವಾಸನೂ ಕೈ ಕೈ ಮಿಲಾಯಿಸುವ ಮಟ್ಟ ತಲುಪಿದ್ದರು. ಕಾರಣ ಹೇಳಬೇಕಿರಲಿಲ್ಲ. ಬೀದಿಯ ಮಬ್ಬು ಬೆಳಕಲ್ಲಿ ನಿಂತೆ. ಇಬ್ಬರೂ ಕುತ್ತಿಗೆ ಪಟ್ಟಿಯ ಹಿಡಿದು ಎಳೆದಾಡುತ್ತಿದ್ದರು. ಅಪ್ಪ ಮಕ್ಕಳ ವ್ಯವಹಾರ ನಮಗೇಕೆ ಎಂದು ಜನ ನೋಡುತ್ತಿದ್ದರು. ಮಾಯಾವಿಯಂತೆ ಶೀನನನ್ನು ಅಪ್ಪ ಎಳೆದು ಉರುಳಿಸಿ ಎದೆಯ ಮೇಲೆ ಕೂತು ಕುತ್ತಿಗೆ ಮುರಿಯಲು ತೊಡಗಿದ್ದ. ಹೇಯ್ ಎಂದು ನುಗ್ಗಿ ಹಿಂದಿನಿಂದ ಕಾಲಲ್ಲಿ ಒದ್ದಿದ್ದೆ. ಉರುಳುರುಳಿ ಬಿದ್ದಿದ್ದ. ಶ್ರೀನಿವಾಸ ಬಚ್ಚಲ ಬಳಿ ಇದ್ದ ಕಲ್ಲನ್ನು ಎತ್ತಿ ಅವನ ತಲೆ ಮೇಲೆ ಬಿಸಾಡಿದ. ಪಾಪಿ ತಪ್ಪಿಸಿಕೊಂಡಿದ್ದ. ಹಣೆಗೆ ಕಲ್ಲ ತುದಿ ಬಡಿದಿತ್ತು. ಮಂದ ಬೆಳಕಲ್ಲಿ ನೆತ್ತರು ಜಾರಿದ್ದೆ ಕಾಣಲಿಲ್ಲ. ಒಬ್ಬರಿಗೊಬ್ಬರು ರೋಷಾವೇಶದಲ್ಲಿ ಬಡಿದಾಡಿಕೊಂಡರು. ಕಾಳ ಬಂದು ಪಾಪಿಯ ಹಿಡಿದುಕೊಂಡ. ನಾನು ಶ್ರೀನಿವಾಸನ ಅತ್ತ ಎಳೆದು ಕೂರಿಸಿದ್ದೆ. ತಾತ ಓಡಿ ಬಂದಿದ್ದ. ತಾತನ ಮೇಲೂ ಶ್ರೀನಿವಾಸ ಹರಿಹಾಯ್ದ. ಆ ಪಡಸಾಲೆಯ ಮುದುಕಿ ಅರೆಹುಚ್ಚಿಯಂತೆ `ಏನೊ ಏನಾಯ್ತೂ ಯಾರ್ಬಂದ್ರೂ’ ಎಂದು ಕೇಳುತ್ತಿದ್ದಳು. `ಯಮ ಬಂದಿದ್ನಲ್ಲ ನಿನ್ಮಗನ ಕರ್ಕಂಡು ವೋಗುಕೇ ಅವ್ನ ಕಡೆಯ ಯಮ ಕಿಂಕರರು ಇನ್ನೂ ಇಲ್ಲೇ ಕುಂತವರೇ… ಇಬ್ರೆಲಿ ಯಾರು ಸಾಯ್ತರೊ ಅವುರಾ ಕರ್ಕಂಡು ವೋಗ್ಮ ಅಂತಾ ಕನಾ ಅತ್ತಾಗೋಗಿ ಕುತ್ಕೊ’ ಎಂದು ಕಾಳಮ್ಮ ಬುಸುಗುಟ್ಟಿದಳು. ಕೇರಿಯಲ್ಲಿ ಅವೆಲ್ಲ ಮಾಮೂಲು. ಅವು ಇದ್ದರೇನೇ ಜೀವನ, ಹೋರಾಟ, ಉತ್ಸಾಹ, ಆ ಸೂಳೆ ಮಗ್ನ ನಾನಿವತ್ತು ಬಿಡುದಿಲ್ಲ ಅಣ್ಣಾ… ಅವರಣ್ಣ ಸತ್ತ! ಇವನ ಯೆಣವೂ ಇವತ್ತೆ ಬೀಳ್ಬೇಕು. ಇಬ್ರೂ ಸೇರಿ ನನ್ನ ಬೀದಿ ಪಾಲು ಮಾಡುದ್ರು’ ಎಂದು ನುಗ್ಗಿ ಹೋಗಿ ದಾಳಿ ಮಾಡಲು ಯತ್ನಿಸುತ್ತಿದ್ದ. ಹಣೆಗೆ ಪೆಟ್ಟಾಗಿತ್ತು. ಹರಿಶಿಣ ಮೆತ್ತಿದ್ದರು. ಹಸಿರಕ್ತದ ವಾಸನೆ ಬಡಿಯುತ್ತಿತ್ತು. ಅಪ್ಪ ಮಗ ಇಬ್ಬರದೂ ಒಂದೇ ರಕ್ತ. ರೂಪದಲ್ಲೂ ಒಂದೇ… ನಡತೆಯಲ್ಲೂ… ನನ್ನ ತಾಯಿಯ ಹೊಟ್ಟೆಯಲ್ಲಿ ಇವನು ಕೂಡ ಹುಟ್ಟಿ ಬಂದಿದ್ದವನು ಎಂಬ ಕಾರಣಕ್ಕೆ ಶ್ರೀನಿವಾಸನ ಪರ ವಹಿಸಿದ್ದೆ.

ಆ ಚಿಕ್ಕಪ್ಪ ಮಹಾಶಯರು ಬಂದರು. ತನ್ನ ಅಣ್ಣನಿಗೆ ಹೀಗೆ ಬಡಿದಿರುವನೇ ಎಂದು ಎಗರಾಡಿದರು. ಶ್ರೀನಿವಾಸನಿಗೆ ಹೇಳಿಕೊಡಬೇಕಿರಲಿಲ್ಲ. ಎಲ್ಲ ತರದ ಕಿಡಿಗೇಡಿ ಹೊಡೆದಾಟಗಳು ಅವನಿಗೆ ಗೊತ್ತಿದ್ದವು. ಹುಚ್ಚಾಗಿದ್ದ. ಪಾಪಿ ಎಚ್ಚರ ವಹಿಸಿ ಜಾಗ ಖಾಲಿ ಮಾಡಿದ್ದ. ಶ್ರೀನಿವಾಸ ಅಬ್ಬರಿಸಿದ್ದ. ಈ ರಾತ್ರಿ ಹೆಣ ಉರುಳಿಸುವೆ ಎಂದು ಕೂಗಿದ್ದ. ಯಾರೂ ಎದುರು ಬಂದಿರಲಿಲ್ಲ. ನನಗೂ ತಲೆಕೆಟ್ಟಿತ್ತು. ಮುಗಿಸಿದರೆ ಮುಗಿಸಿಬಿಡಲಿ ಪಾಪಿಯ ಎಂದು ಉದ್ವೇಗಕ್ಕೆ ಒಳಗಾಗಿದ್ದೆ. ಎಲ್ಲವೂ ತಂತಾನೆ ತಗ್ಗಿದ್ದವು. ಕಾಳ ಶ್ರೀನಿವಾಸನನ್ನು ಕರೆದುಕೊಂಡು ಮಾರಿಗುಡಿಯತ್ತ ಹೋದ. ಕೇಡು ಕಳೆಯಿತು ಎಂದುಕೊಂಡೆ. ಏನೂ ಆಗಿಯೇ ಇಲ್ಲ ಎಂಬಂತೆ ತಿಳಿಯಾಗಿತ್ತು. ತಾತನಿಗೆ ಅಂತಹ ಅನುಭವಗಳು ಅದೆಷ್ಟಾಗಿದ್ದವೊ! ಅವುಗಳ ಜೊತೆ ಹೆಣಗಾಡಿ ದಣಿದಿದ್ದ. ಎಂತಹ ನಿರ್ಲಿಪ್ತತೆ ಆವರಿಸಿತ್ತು ಎಂದರೆ ಸತ್ತವನ ಮರೆತು ಪೆಂಟೆಗೆ ಎರಡು ಕನಸು ನೋಡಲು ಹೋಗಿದ್ದೆ. ಮಧ್ಯರಾತ್ರಿ ಮಲಗಿದ್ದಾಗ ಪಾಪಿ ಅಪ್ಪ ತಲೆ ಮೇಲೆ ಕಲ್ಲು ಎತ್ತಿಹಾಕಿ ಪರಾರಿ ಆಗಬಲ್ಲವನಾಗಿದ್ದ. ಹಾಗೆ ಜಗಳಗಳಲ್ಲಿ ಪೆಟ್ಟುತಿಂದು ಮಾಯ ಆದ ಎಂಬುದು ಅಂತದೇ ಒಂದು ಸೂಚನೆ.

ಪೆಂಟೆಗೆ ಬಂದೆ. ತೋಟದ ಮರೆಯಲ್ಲೊಂದು ಮಾಯಾಲೋಕ ಅದು. ಪಡ್ಡೆ ಹುಡುಗ ಹುಡುಗಿಯರೆ ಹೆಚ್ಚಿದ್ದರು. ಕುಡುಕರ ಸ್ವರ್ಗ. ಮಾಂಸಕ್ಕೆ ಕಾರ ಮಸಾಲೆ ಹಚ್ಚಿ ಸೌದೆ ಬೆಂಕಿಯಲ್ಲಿ ಸುಟ್ಟು ಎಂಡಗುಡುಕರಿಗೆ ಮಾರುತಿದ್ದರು. ವಿಚಿತ್ರ ಕಂಟು ಕಮಟು ವಾಸನೆ. ಟಿಕೇಟು ಪಡೆದೆ. ಇಷ್ಟವಾದ ಬಟಾಣಿ, ಕಡಲೆ ಬೀಜ ತಿನ್ನುತ್ತ ಕೂತಿದ್ದೆ. ಹತ್ತು ಗಂಟೆಗೆ ಸಿನಿಮಾ ಆರಂಭವಾಗುತ್ತಿದ್ದುದು. ಮೈಸೂರಿನದೇ ನೆನಪು. ತಾತನೂ ಸರಿ ಇಲ್ಲ ಎನಿಸಿತ್ತು. ಯಾವತ್ತೂ ತನ್ನ ಮಕ್ಕಳ ತಪ್ಪುಗಳ ಬಿಟ್ಟುಕೊಡುತ್ತಿರಲಿಲ್ಲ. ಅವರನ್ನು ರಕ್ಷಿಸುತ್ತಲೆ ಬಂದಿದ್ದ. ಯಾವುದಕ್ಕೂ ಖಚಿತ ತೀರ್ಮಾನ ಕೊಡುತ್ತಿರಲಿಲ್ಲ. ಕಾಲ ನಿರ್ಣಯಕ್ಕೆ ಬಿಟ್ಟುಬಿಡುತ್ತಿದ್ದ. ದುಷ್ಟ ಮಕ್ಕಳ ಮೇಲೆ ಅವನಿಗೂ ಕುರುಡು ಪ್ರೀತಿ ಇತ್ತು. ತೋಪಮ್ಮ ಗಾಡಿಯಿಂದ ಇಳಿದಳು. ಅವಳ ಜೊತೆಯಲ್ಲೇ ಪ್ರಾಯದ ಹೆಂಗಸರು ಲಂಗದಾವಣಿಯ ಹುಡುಗಿಯರು ಟೆಂಟಿನ ಮುಂದೆ ಖುಷಿಯಿಂದ ಇಳಿದರು. ಬಣ್ಣದ ಬೆಳಕು ಥಳುಕು ಬಳುಕನ್ನು ಅವರ ಮೇಲೆ ಚೆಲ್ಲಿತ್ತು. ತೋಪಮ್ಮ ಎದೆಗಾತಿ. ಗಂಡಸರ ಬೀಜ ಹಿಚುಕಿ ಅಲ್ಲಾಡಿಸಿ ನುಲಿದು ಎಳೆದು ಮುರಿದುಬಿಡುವಂತೆ ಜಡಿದು ಜಖುಂಗೊಳಿಸಿ ಬಲಾಢ್ಯ ಗಂಡಸನ್ನೆ ಉರುಳಿಸಿಬಿಡುತ್ತಿದ್ದಳು. ಅವಳ ಜೊತೆ ಹುಡುಗಿಯರು ಬಹು ಧೈರ್ಯದಿಂದ ತಾವೆ ಚುಡಾಯಿಸುತ್ತಿದ್ದರು. ಕಣ್ಣೆತ್ತಿ ಪ್ರತಿಕ್ರಿಯಿಸುವ ದಮ್ಮು ತಾಕತ್ತು ಯಾರಿಗೂ ಇರುತ್ತಿರಲಿಲ್ಲ. ಆಚೆ ಕೇರಿಯ ಹೆಣ್ಣು ಮಕ್ಕಳು ನನಗೆ ವರಸೆಯಾಗುತ್ತಿದ್ದರು. ಅಂದರೆ ಅತ್ತೆಯರ ಮಕ್ಕಳಾಗಿದ್ದು ಮದುವೆ ಮಾಡಿಕೊಳ್ಳಬಹುದಿತ್ತು. ಅಲ್ಲೆಲ್ಲ ಬೆಳಕು ಚೆಲ್ಲಿದ್ದರಿಂದ ತೋಪಮ್ಮ ಗುರುತು ಹಿಡಿದಳು. ನಮ್ಮ ಮನೆಗೆ ನೇರ ಸಂಬಂಧಿ ಅವಳು. ತಲೆ ಮರೆಸಿಕೊಳ್ಳಲು ಆಗಿರಲಿಲ್ಲ. ಆ ಮಧ್ಯಾಹ್ನ ಸ್ಮಶಾನದಲ್ಲಿ ಮಾತಾಡಿಸಲು ಆಗಿರಲಿಲ್ಲ. ಸೂತಕದ ಮನೆಯಿಂದ ಸಿನಿಮಾ ಮನೆಗೆ ಬಂದಿದ್ದಾನಲ್ಲಾ ಎಂದು ರೇಗುವಳು ಎಂದುಕೊಂಡಿದ್ದೆ.

`ಮೊಗಾ… ವಬ್ನೆ ಬಂದಿದ್ದಿಯಲ್ಲಪ್ಪಾ… ಬೇಜಾರೇ… ನಿಮ್ಮವ್ವ ಇದ್ದಿದ್ರೇ… ಇರ್ಲಿ ಬಿಡೂ… ಟಿಕೆಟ್ ತಕಂದಿದ್ದಿಯಪ್ಪಾ…’
`ಹೂಂ ಅಜ್ಜಿ… ಇಲ್ಲಿದೆ ನೋಡೂ’
`ಸರಿ ಸರೀ… ಇಟ್ಟುಣುಕಂದು ಬಂದಾ… ಬಾಳೆಯಣ್ಣ ತಿನ್ನಪ್ಪಾ… ಕೊಡನೇ’
`ಎಲ್ಲ ಆಯ್ತು ಅಜ್ಜೀ; ಬರೀ ಜಗಳ ಕದನ… ಅಲ್ಲಿರುಕೆ ಆಗ್ದೆ ಇಲ್ಲಿಗೆ ಬಂದೆ.’
`ಹೂಂಕಣಪ್ಪಾsss ಕೇಡುಕ್ರೂ… ಪ್ರಾಯುದ್ಮಗಾ… ನಿನುಗ್ಯಾಕದೆಲ್ಲಾ…’
`ಅದ್ಕೆ ಬಂದೆ. ನಾಳಕೆ ಮೈಸೂರ್ಗೆ ವೋಯ್ತಿನಿ.’
`ಅದೇನೇನೊ ವೋದಿದ್ದಿಯಂತಲ್ಲಪ್ಪಾ; ನಿಮ್ತಾತ ಯೇಳ್ತಿದ್ದ’

ಅಷ್ಟರಲ್ಲಿ ತೋಪಮ್ಮನ ಜೊತೆಗಿದ್ದ ಹೆಂಗಸರು ಹುಡುಗಿಯರು ಬಂದು ಸೇರಿದರು. ನಗಾಡುತ್ತಿದ್ದರು ಹುಡುಗಿಯರು. `ಚೆನ್ನಾಗಿದ್ದಿಯಪ್ಪಾ’ ಎಂದು ಮಾತಾಡಿಸಿದರು ಹೆಂಗಸರು. ಗಾಡಿಯವನು ಬೀಡಿ ಸೇದುತ್ತ ಹಸುಗಳಿಗೆ ಹುಲ್ಲು ಹಾಕಿ ಕಟ್ಟಿದ್ದ. ಆ ಹುಡುಗಿಯರಲ್ಲಿ ಆ ಒಬ್ಬಳು ಗಮನ ಸೆಳೆದಳು. ಅರೇ; ದೇವರೇ… ಅವಳೇ ಆಗ ಬಾ ಎಂದು ಕರೆದಿದ್ದವಳು. ಸೊರಗಿದ್ದಳು. ಅವಳ ಕೊರಳಲ್ಲಿ ತಾಳಿ ಕಾಣಿಸಿತು. ಒಹೊ; ಏನೇನೊ ಆಗಿದೆ ಎಂದುಕೊಂಡೆ. ನಕ್ಕಳು. `ನೆನ್ಪಿದಿಯಾ’

`ಇದೇ… ಮರೆಯೊಕಾಗುತ್ತಾ’
`ಮತ್ತೆ ನನ್ನ ನೋಡುಕೆ ಬರ್ಲಿಲ್ಲಾ’
`ಬಂದಿದ್ದೆ. ನಿಮಗೆ ಅದು ಗೊತ್ತಾಗ್ಲಿಲ್ಲ’
`ಯಾವಾಗ… ಕನ್ಸೆಲಿ ಬಂದಿದ್ರಾ…’
`ಇರ್ಬೇಕೂ… ಕನಸಿನಂತೆ ಬಂದಿದ್ದೆ’
`ಸಿಕ್ಕಿದ್ಲೇನಪ್ಪಾ’
`ಇಲ್ಲ ಅಜ್ಜಿ… ಗಾಡಿಲಿ ಮುಖ ತಿರಿವಿಕೊಂಡು ಹೊರಟೋಗಿದ್ಲು…’
`ಲೇ ಕಳ್ಳೀ… ನನ್ಗೆ ಯೇಳೇಯಿರ್ಲಿಲ್ಲವಲ್ಲೇ’
`ಕದ್ದು ಮುಚ್ಚಿ ಲವ್ ಕಣೆ ಅದೂ’
`ಯೇ ಸುಮ್ನಿರ್ರೇ ತಮಾಸೆ ಮಾಡ್ಬೇಡೀ’
`ಯೀಗ ಸಿಕ್ಕಿದ್ದಾರಲ್ಲಾ… ಯೇನ್ಮಾಡ್ತಿಯೇ’
`ತಾಳಿ ಕಟ್ಕಂದವಳಲ್ಲಾ… ಯೇನ್ಮಾಡುಕಾದದೂ’
`ಅದಾ ಅತ್ತಾಗಿಬಿಚ್ಚಿ ಮಡುಗಿದ್ರಾಯ್ತುಲುವೇನಮ್ಮಿ’
`ಯೇ ವೋಗ್ರೆ… ಆಗ್ದೆ ಇರುದ್ನೆಲ್ಲ ಮಾತಾಡಿ ಯೇನುಪಯೋಗ… ಬಾ ಅಂದಾಗ್ಲೆ ಬರ್ಲಿಲ್ಲ; ಬರ್ತಿನಿ ಅಂತಾ ವೋದೋರು ಇವರು… ಬರ್ಲೆ ಇಲ್ಲ…’
`ಪ್ರಾಯ ತುಂಬದಲ್ಲಪ್ಪಾ… ಯಾರ್ನಾರ ನೋಡ್ಕಂದಿದಿಯಾ’
`ಮುಂದೆ ನೋಡ್ಬೇಕಾಗಿ ಬಂದ್ರೆ ನೋಡ್ತಿನಜ್ಜೀ’
`ಇಲ್ಲೆಲ್ಲು ನೋಡ್ಬೇಡಾ… ಮೈಸೂರೆಲಿ ಕಂಡುಕೊ’

ಸಿನಿಮಾ ಟೆಂಟಿನ ಒಳಕ್ಕೆ ಜನ ನುಗ್ಗುತ್ತಿದ್ದರು. ತೋಪಮ್ಮ ಅವರನ್ನೆಲ್ಲ ಕರೆದುಕೊಂಡು ನಡೆದಳು. ನಾನೂ ಅದೇ ಜಾಗದಲ್ಲಿ ಟಿಕೇಟ್ ಪಡೆದಿದ್ದೆ. ಪುಂಡು ಪೋಕರಿಗಳಿಗೆ ಅಲ್ಲಿ ಅವಕಾಶ ಇರಲಿಲ್ಲ. ಸಂಸಾರಸ್ಥರು ಹಾಗೂ ಹೆಂಗಸರಿಗೇ ಮೊದಲ ಆದ್ಯತೆ ಇತ್ತು. ಕಾಲು ನೀಡಿ ಕೂರಲು ಜಾಗವಿತ್ತು. ನನ್ನ ಪಕ್ಕ ಬಾ ಎಂದು ಹುಡುಗಿಯರು ಕೈ ಹಿಡಿದು ಎಳೆದರು. ಆ ಚೆಲುವೆ ಸುಮ್ಮನೆ ಮುಖ ನೋಡಿದಳು. ಅವಳ ಜೊತೆ ಕೂತೆ. ತೋಪಮ್ಮನ ಬೆಂಗಾವಲಿತ್ತು. ಹೆಚ್ಚು ಜನರಿರಲಿಲ್ಲ. ಮುಂದೆ ನೆಲದ ಮೇಲೆ ಕೂರುವರ ಮಜವೇ ಬೇರೆ. ಎಲ್ಲ ತರದವರು ಅಲ್ಲಿದ್ದರು. `ಎರಡು ಕನಸು’ ಆರಂಭವಾಯಿತು. ಏನೊ ಬಿಸಿ ಬಿಸಿ ಉಸಿರು ಅವಳಿಗೆ. ಮುಲಾಜಿಲ್ಲ ಕೈ ಹಿಡಿದಳು. ಅವಳ ಹೆಸರು ಸಾವಿತ್ರಿ. ಪಿ.ಯು.ಸಿ ಮುಗಿಯುತ್ತಿದ್ದಂತೆಯೆ ಯಾವನೊ ಒಬ್ಬ ಇಸ್ಪೀಟ್ ರಾಜನಿಗೆ ಮದುವೆ ಮಾಡಿಬಿಟ್ಟಿದ್ದರು. ಲಡಾಸು ಲಾರಿಗಳ ಡ್ರೈವರಾಗಿದ್ದ. ಸರಿಯಾಗಿ ಕಲಿತಿರಲಿಲ್ಲ. ಜಂಬ ತೋರಿಸಿಕೊಳ್ಳಲು ಒಂದು ಬಾಲಕನೊಬ್ಬನ ಮೇಲೆ ಚಕ್ರ ಹರಿಸಿ ಊರು ಬಿಟ್ಟು ನಾಪತ್ತೆಯಾಗಿದ್ದ. `ಅವನ ವಿಷಯ ಕೇಳಬೇಡ ಬಿಡೂ… ನಿನ್ನ ವಿಷ್ಯುವ ಸಾಯುಗಂಟ ನಿಂಜೊತೆ ಕೂತು ಕೇಳ್ಬೇಕು ಅನಿಸ್ತದೆ’ ಎಂದು ಕಯ್ಯನ್ನು ತೊಡೆ ಮೇಲೆ ಇಟ್ಟುಕೊಂಡಳು. ನನಗೇನೊ ಎಚ್ಚರವಾಯಿತು. ಬೆರಳುಗಳ ಬೆರಳಿಂದ ಲಾಕ್ ಮಾಡಿದ್ದಳು. ಆದದ್ದಾಗಲಿ ಎಂದು ಧೈರ್ಯ ಮಾಡಿದೆ. ಭುಜಕ್ಕೆ ಒರಗಿದಳು. ಆಕೆಯ ಹೆಗಲ ಮೇಲೆ ಕೈ ಹಾಕಿದೆ. ನನ್ನ ಕೆನ್ನೆ ಸವರಿದಳು. ಮುತ್ತಿಕ್ಕಿದಳು. ನಾನೂ ಚುಂಬಿಸಿದೆ. ಮುಟ್ಟು ಎಂದಳು ಕಿವಿಯಲ್ಲಿ. ಎಲ್ಲೆಲ್ಲಿ ಮುಟ್ಟಬಹುದೋ ಅಲ್ಲೆಲ್ಲ ಮುಟ್ಟಿದೆ. ಮುದ್ದಿಸಿದೆ. ಮೋಹಿಸಿದೆ. ಬಿಗಿದು ಹಿಡಿದು ಆಲಂಗಿಸಿದೆ.

ಆ ನೆನಪಿಗೆ ಇಳಿಯಲು ಮನಸ್ಸಿರಲಿಲ್ಲ. ಚಿಕ್ಕಪ್ಪರಿಗೆ ಪ್ರಾಯದ ಮಕ್ಕಳಿರಲಿಲ್ಲ. ಸಣ್ಣವರು ನಮ್ಮ ಅಣ್ಣನ ಕೆಲಸವನ್ನು ನಮ್ಮ ಮಕ್ಕಳಲ್ಲಿ ಯಾರಿಗಾದರೂ ಒಬ್ಬರಿಗೆ ಸಿಗಲಿ ಎಂದು ಹಠಹಿಡಿಯಲು ಸಾಧ್ಯವಿರಲಿಲ್ಲ. ನ್ಯಾಯೋಚಿತವಾಗಿ ದತ್ತು ಮಗನಾದವನಿಗೇ ಪರಿಹಾರದ ಕೆಲಸ ಸಿಗಬೇಕಿತ್ತು. ಅಲ್ಲಲ್ಲೆ ಗುಂಪುಗಳಾದವು.

ಪಕ್ಕ ಕೂತಿದ್ದ ಹುಡುಗಿಯರು ಸಿನಿಮಾ ನೋಡುತ್ತಿರಲಿಲ್ಲ. ಮಬ್ಬುಗತ್ತಲಲ್ಲಿ ನಮ್ಮನ್ನೇ ಗಮನಿಸುತ್ತಿದ್ದರು. ಇಂಟ್ರುವಲ್‌ಗೆ ಬಿಟ್ಟರು. ಹೊರಗೆ ಹೋಗಿ ಬಂದರು. ಈ ಪುಟ್ಟ ಛೇರಲ್ಲಿ ತಿಗಣೆ ಕಾಟ… ಮುಂದೆ ಇಲ್ಲೆ ಕೆಳಗೆ ಕೂರುವ ಎಂದಳು. ಆಯ್ತು ಎಂದು ಅವಳ ಜೊತೆ ಹುಡುಗಿಯರೂ ಬಂದು ನನ್ನನ್ನು ಮಧ್ಯಕ್ಕೆ ಹಾಕಿಕೊಂಡರು. ಸಾವಿತ್ರಿಗೆ ಕಷ್ಟವಾಯಿತು. ನನ್ನ ತೊಡೆ ಮೇಲೆ ತಲೆ ಇಟ್ಟು ಮಲಗಲು ಬಯಸಿದ್ದಳು. ಹೂಂ ಎಂದಿದ್ದೆ. ಹುಡುಗಿಯರನ್ನು ಅತ್ತ ಹೋಗಿ ಎನ್ನುವಂತಿರಲಿಲ್ಲ. ವಯಸ್ಸಾದವರು ಕಾಲು ನೀಡಿ ಕೂತೊ ಮಲಗಿಯೊ ಸಿನಿಮಾ ನೋಡಲು ಅಲ್ಲಿ ಅವಕಾಶವಿತ್ತು. ಹಳ್ಳಿಯಲ್ಲಿ ಮದುವೆಯಾದ ಹೊಸಬರನ್ನು ಹಿರಿಯರೇ ಸಿನಿಮಾಗೆ ಹೋಗಿ ಬನ್ನಿ ಎಂದು ಕಳಿಸುತ್ತಿದ್ದರು. ಹತ್ತಿರ ಕೂತು ಮೈ ಚಳಿ ಬಿಟ್ಟುಬಿಡಲಿ ಎಂದು. ನನಗೂ ಹಾಗೇ ಆಗಿತ್ತು. ಇನ್ನೊಬ್ಬಳು ಬಂದಳು. ಅವಳೂ ಕೈ ಹಿಡಿದಳು. ಮತ್ತೊಬ್ಬಳೂ ಮುತ್ತಿಕ್ಕಿದಳು.
ಸರಸದಲಿ ಧ್ಯಾನಸ್ಥರಾಗಿದ್ದರು. ಮೋಹದಲ್ಲಿ ಮೈದುಂಬಿದ್ದರು. ಯಾರನ್ನು ಮುದ್ದಿಸಲಿ ಆ ಕತ್ತಲಲ್ಲಿ. ಯಾರ ಮೈಯ ಮುಟ್ಟಿದೆನೊ… ಯಾರ್ಯಾರ ಬಿಸಿಯಾದ ಕಿಬ್ಬೊಟ್ಟೆಯ ಸವರಿ ಮಿದ್ದಿಸಿದೆನೊ. ಕಿನ್ನರಿಯರ ಲೋಕದಲ್ಲಿದ್ದೆ. ಅಷ್ಟು ಕಾಲ ತಡೆದಿದ್ದ ನಾನು ತೆರೆದುಕೊಳ್ಳಲು ಮುಂದಾಗಿದ್ದೆ. ಎಲ್ಲರೂ ಹಸಿದಿದ್ದರು. ಕುದುರೆಯನೇರಿದ್ದರು. ಬಿಗಿದ ಕಟ್ಟನ್ನು ಸಡಿಲಿಸಿದ್ದರು. ಒದ್ದೆಯಾಗಿದ್ದರು. ಮೈಯ ಮರಿದು ನುಂಗಿಕೊ ಎಂದು ಹಾತೊರೆಯುತ್ತಿದ್ದರು. ಯಾರ ಕೈಯ್ಯೊ, ತೊಡೆಯೊ ಬಿಸಿಯುಸಿರೊ ಉತ್ಕಟ ಬೆದೆಯ ಬೆವರೊ… ಬಾಚಿ ಬಾಚಿ ತಬ್ಬಿದೆ. ಸಾವಿತ್ರಿ ಹಿಡಿದೆಳೆದು ಆ ಕತ್ತಲಲ್ಲಿ ಎದೆಯ ಮೇಲೆ ಮಲಗಿಸಿಕೊಳ್ಳುತ್ತಿದ್ದಳು. ಅವಳ ಎದೆ ತೊಟ್ಟು ನನ್ನ ತುಟಿಗಳಿಗೆ ಒತ್ತಿತು. ಹಾ ಎಂದು ಉಸಿರೆಳೆದುಕೊಂಡಳು. ನಾನೆಂದು ಅಷ್ಟೊಂದು ಬೆವೆತಿರಲಿಲ್ಲ. ಅದು ಯಾರ ಹೊಕ್ಕುಳೊ ಗೊತ್ತಾಗಲಿಲ್ಲ. ಚುಂಬಿಸಿದೆ. ಎದೆಗೆ ಎದೆಯ ಅದುಮಿಕೊಂಡೆ. ಆನಂದದ ನರಳಿಕೆ… ಕಾಮನೆಯ ರಸ… ಸಾಕು ಬಿಡೀ ಎಂದರೂ ಬಿಡುತ್ತಿರಲಿಲ್ಲ ಅವರು. ಏದುಸಿರು ಬಿಡುತ್ತಿದ್ದೆ. ಎದೆಯ ಸವರಿ ತಟ್ಟಿದಳು ಸಾವಿತ್ರಿ. ನಾನು ತಪ್ಪು ಮಾಡಿದೆ ಎನಿಸಲಿಲ್ಲ. ಜೀವನದಲ್ಲಿ ಮೊದಲ ಬಾರಿಗೆ ದೇವರು ಇದ್ದಾನೆ ಎನಿಸಿತು.

ಸಿನಿಮಾ ಮುಗಿದಿತ್ತು. ಬಟ್ಟೆಗಳ ಸರಿಪಡಿಸಿಕೊಂಡರು. ಸಾವಿತ್ರಿ ಕೆದರಿದ್ದ ಉದ್ದ ಕೂದಲ ಸುತ್ತಿ ಸಿಂಬಿ ಮಾಡಿಕೊಂಡಳು. ಏನೂ ಮಾಡಿಲ್ಲ ಆಗಿಲ್ಲ ಗೊತ್ತಿಲ್ಲ ಎಂಬಂತೆ ಹೊರಗೆ ಬಂದೆವು. ನಮ್ಮ ಜೊತೆಯಲ್ಲೆ ಬಾ ಎಂದು ಗಾಡಿಯಲ್ಲಿ ಕೂರಿಸಿಕೊಂಡರು. ಕಗ್ಗಾಡು ಹಳ್ಳಿ ರಸ್ತೆ, ಹಸುಗಳು ನಿದ್ದೆಯಿಂದ ಎದ್ದು ಮೆಲಕು ಹಾಕುತ್ತಲೆ ಗಾಡಿಯನ್ನು ಎಳೆಯಲು ಮುಂದಾದವು. ತೋಪಮ್ಮ ಎಲೆ ಅಡಿಕೆ ಜಗಿಯುತ್ತ…

`ನಮ್ಮೆಣ್ಣೈಕುಳ್ಗೆ ಅದೇನ್ಮಾಟ ಮಾಡಿದ್ದಿಯಪ್ಪಾ… ವಬ್ಳಾದ್ಮೆಲೆ ವಬ್ಳು ಅಂತಾ ನಿನ್ನೆ ಯಿಡ್ಕಂದಿಡ್ಕಂದು ತಿಂದ್ಬುಟ್ರಲ್ಲಪ್ಪಾ… ಇಲ್ಲೆ ಇದೇ ವೊರೆಲಿದ್ರೆ ನಿನ್ನ ಬಿಟ್ಟರೆ ಇವುರು; ಮಗುಸ್ಬುಡ್ತರೆ ಲೌಡಿರು. ನಿಬಾಯ್ಸುಕಾದದೆ ಇವುರಾ… ಯೇನ್ರಮ್ಮೀ ಯಿ ಪಾಟಿ ಬರ್ಗೆಟ್ಟಿದ್ದಿರಲ್ಲಾ… ಅವುನ್ಕತೆ ಯೇನಾಗ್ಬೇಕು…’

`ನಾವೇನು ಮಾಡ್ಲೆಯಿಲ್ಲ ಕನ್ದೊಡ್ಡವೊ… ಸುಮ್ನೆ ಯಿಡ್ಕಂದಿದ್ದೊ ಅಷ್ಟೇ’
`ಅದೇನಿಡ್ಕಂದಿದ್ದಮ್ಮೀ’

ಗೊಳ್ಳೆಂದು ಎಲ್ಲರೂ ನಕ್ಕರು. ಆ ನೀರವ ದಾರಿಯ ರಾತ್ರಿಯಲ್ಲಿ ಅವರ ಆ ಸರಸ ಸವಿಯ ನಗು ದೇವಲೋಕದ ಅಪ್ಸರೆಯರನ್ನು ಅಣಕಿಸುವಂತಿತ್ತು. ಇದು ಕನಸೊ ಭ್ರಮೆಯೊ ಎಂದು ಸಾವಿತ್ರಿಯ ಕೈ ಹಿಡಿದುಕೊಂಡೆ. ಕಿರುಬೆರಳ ಕಚ್ಚಿದಳು. ಇಲ್ಲೀಗ ಗುಟ್ಟೇನು ಇಲ್ಲ ಎಂದು ಆಕೆ ಎದೆಗೆ ಎಳೆದುಕೊಂಡಳು. ಉಳಿದವರೂ ಹಾಗೇ ಮಾಡಿದರು. ತೋಪಮ್ಮನ ಜೊತೆಗಿದ್ದರೆ ತಮ್ಮ ಹೆಣ್ಣು ಮಕ್ಕಳಿಗೆ ಯಾರಿಂದಲು ತರಲೆ ಇಲ್ಲ ಎಂದು ಹೆತ್ತವರು ನಂಬಿದ್ದರು. ನಿಜಾ! ಅವರಿಗೆ ಯಾರು ಇಷ್ಟವೊ ಅಂತವರನ್ನು ಅವರು ಮುಕ್ತವಾಗಿ ಬೇಕಾದರೆ ಬಹಿರಂಗವಾಗಿ ತಬ್ಬಿಕೊಳ್ಳಬಲ್ಲವರಾಗಿದ್ದರು. ಬಹಳ ಮುಂದಿದ್ದರು ನನ್ನ ಹಳ್ಳಿಯ ಆ ಹುಡುಗಿಯರು. ತಲೆ ಮೇಲೆ ಮಂದ ತಾರೆಗಳು ಮಿನುಗುತ್ತಿದ್ದವು. ರಾತ್ರಿಯ ಎರಡು ಗಂಟೆ ಆಗಿತ್ತು. ಅಯ್ಯೋ ದೇವರೇ ಆಗಲೇ ಊರ ದಾರಿ ಬಂದುಬಿಟ್ಟಿತೇ ಎಂದೆನಿಸಿತು.

`ಸುಖಾ ಅಂದ್ರೆ ಇಸ್ಟೆಕನಾ; ಇಳೀರ್ಲೆ ಕೆಳಾಕೆ’ ಎಂದಳು ತೋಪಮ್ಮ. ಇಳಿದೆವು. ಊರ ಮಧ್ಯದ ದಾರಿ ಅವರವರ ಮನೆಯತ್ತ ಹೊರಟು. ಸಾವಿತ್ರಿ ನಿಂತೇ ಇದ್ದಳು. ಬಂದು ತಬ್ಬಿಕೊಂಡಳು. ಅವಳ ಕಣ್ಣೀರು ಎದೆಗೆ ಏನೋ ಹೇಳಿದವು. ದಿಟ್ಟಿಸಿ ಅವಳ ಮುಖವ ನೋಡಲು ತಕ್ಕ ಬೆಳಕಿಲ್ಲ. ಅಷ್ಟೆಲ್ಲ ಮಾತಿದ್ದರೂ ಒಂದೇ ಒಂದು ಪಿಸು ಮಾತೂ ಬರುತ್ತಿಲ್ಲ. ಇಬ್ಬರಿಗೂ ಮಿಲನದ ಮನಸ್ಸಿಲ್ಲ; ವಿದಾಯದ ಹೆಪ್ಪುಗಟ್ಟಿದ ಭಾವ… ಇವರ ನೆರಳನ್ನೂ ಕೂಡ ಯಾರೂ ನೋಡದಿರಲಿ ಎಂಬಂತೆ ಗಂಜಿಗಟ್ಟಿದ ಮೋಡ ಮುಸುಕಿತ್ತು. ಗಪ್ಪಾಗಿ ಮರಗಿಡಗಳು ನೋಡುತ್ತ ನಿಂತಿದ್ದವು. ನಾಯಿ ಒಂದು ಅವಳ ಹಿಂದೆಯ ನಿಂತಿದ್ದು ತಿಳಿಯಿತು. ಭಾಗಶಃ ಅವಳ ಮನೆಯ ನಾಯಿ ಇರಬೇಕು. ನಡೀ ಮನೆಗೆ ಹೋಗೋಣ ಎಂಬಂತೆ ಸದ್ದು ಮಾಡಿತು. ನನ್ನನ್ನೂ ಒಮ್ಮೆ ಮೂಸಿ ನೆನಪಿಟ್ಟುಕೊಂಡಿತು. ಅವಳ ಹಣೆಗೆ ಮುತ್ತಿಟ್ಟೆ. ನನ್ನ ಸೊಂಟವನ್ನು ಎರಡೂ ಕೈಗಳಿಂದ ಬಳಸಿ ಬಿಗಿಯಾಗಿ ಹಿಡಿದುಕೊಂಡಿದ್ದಳು. ಬಿಡಲಾರೆ ಎಂಬಂತಿತ್ತು ಅವಳ ಬಿಗಿದ ಬೆರಳುಗಳು. ಪಿಸುದನಿಯಲ್ಲಿ ಕೇಳಿದಳು.

`ನೀವು ಮೈಸೂರೆಲಿ ಏನು ಕೆಲ್ಸ ಮಾಡ್ತಿದ್ದೀರಿ’
`ನಾನಿನ್ನೂ ಓದ್ತಾನೆ ಇದ್ದೀನಿ’
`ಇನ್ನೂ ಯೆಸ್ಟು ಓದ್ತೀರಿ? ತುಂಬಾ ಓದಿದ್ದಿರಂತೇ’
`ಓದೋದು ಕೊನೆ ತನ್ಕ ಇದೆ’

`ಗೊತ್ತೂ; ಆದ್ರೆ ಜೀವ್ನ ಅಂತಾ ಒಂದಿದೆಯಲ್ಲಾ… ನಮ್ಮಪ್ಪ ಓದುದ ಬಿಡ್ಸಿ `ನನ್ಬಾಳ ಹಾಳ್ಮಾಡ್ದ. ನಿಮ್ಮಂಗೆ ಗಂಗೋತ್ರಿಗಂಟ ಓದ್ಬೇಕು ಅನ್ಕತಿದ್ದೆ. ಆಗಿಲ್ಲ… ನಿಮ್ಮುನ್ನಾದ್ರೂ ನಾನು ನೋಡುದ್ನಲ್ಲಾ…’

`ಅಳಬೇಡ. ಕಲ್ಲು ನೀರು ಕರಗೊ ಹೊತ್ತು… ಜೀವ್ನ ಇಲ್ಗೇ ಮುಗಿದಿಲ್ಲ. ಅದು ಯಾವತ್ತೂ ಬೆಳೀತಿರ್ತದೆ’
`ಮೈಸೂರಿಗೆ ನಾಳೆ ವೋಗ್ತಿರಾ… ಹೇಳಿ… ಯಾಕೆ ಮಾತೇ ಇಲ್ಲಾ…’
`ನಾಳೆ ನಿನ್ನ ಬಿಟ್ಟು ಹೋಗ್ಬೇಕಲ್ಲಾ’
`ನಂಜೊತೆಲೆ ಇರ್ತಿರಾ’
`ಆಗುತ್ತಾ… ಸಾಧ್ಯವೇ…’
`ನಾನೆ ಕದ್ದು ನಿಮ್ಜೊತೆ ಮೈಯ್ಸೂರಿಗೆ ಬಂದ್ರೆ’
`ಆಗುತ್ತಾ… ನನ್ನಿಂದಾಗುತ್ತಾ… ನನ್ನ ಪಾಡು ನಿನ್ಗೆ ಗೊತ್ತಾ’
`ನಿಮಗೆ ಕಸ್ಟ ಆದ್ರೆ ಬೇಡ’

ಬಿಟ್ಟು ಹೋಗಲು ಅವಳಿಗೆ ಮನಸ್ಸಿಲ್ಲ. ಒಹ್! ರಾತ್ರಿಯೇ ನೀನು ಹೀಗೇ ಚಲಿಸದೆ ನಿಂತು ಬಿಡು. ತಾರೆಗಳೇ ಸಹಕರಿಸಿ… ಸೂರ್ಯನೇ ನಾಳೆ ಬಾ; ಇಂದೇ ಬರಬೇಡ ಎಂದು ಓದಿದ್ದ ಕವಿತೆಯೊಂದು ನೆನಪಾಯಿತು. ತಂಗಾಳಿಯಲ್ಲೂ ಬಿಸಿಯಾಗಿದ್ದೆವು. ಇಬ್ಬರ ಎದೆಗೂಡುಗಳು ಮಾತಾಡುತಿದ್ದವು. ಅವಳು ಮುಡಿದಿದ್ದ ಮಲ್ಲಿಗೆ ಬಾಡಿತ್ತಾದರೂ ಅವಳೇ ಸುಗಂಧ ಪುಷ್ಪವಾಗಿದ್ದಳು. ಎಷ್ಟೋ ಹೊತ್ತಿನ ತನಕ ಒಬ್ಬರನ್ನೊಬ್ಬರು ಬಿಗಿದಪ್ಪಿಕೊಂಡಿದ್ದೆವು. ನಮ್ಮಿಬ್ಬರ ಉಸಿರು ಬೇರ್ಪಡಲು ಬಿಡದಂತೆ ದಮನಿಗಳಲ್ಲೆ ಮಿಡಿಯುತ್ತಿತ್ತು. ನಿರ್ಜನ ನೀರವ ಇರುಳು. ಆಕಾಶದಲ್ಲಿ ಅನಂತ ಮೌನ. ನಿಶೆಗತ್ತಲು ತೂಕಡಿಸುತಿತ್ತು. ವಿದಾಯದ ಪಿಸುದನಿಯ ಹೊರಡಿಸಿದಳು…

`ನಾನು ಮತ್ತೆ ನಿಮ್ಗೆ ಸಿಕ್ತೀನಿ ಅಂತಾ ಗೊತ್ತಿತ್ತಾ’
`ಇಲ್ಲಾ… ನಾನಿಲ್ಲಿಗೆ ಬಂದಿದ್ದೇ ಆಕಸ್ಮಿಕ’
`ನೀವು ಸಿಕ್ಕೇ ಸಿಕ್ತೀರಿ ಅಂತಾ ನನ್ಮನ್ಸು ಯೇಳ್ತನೆ ಇತ್ತು’
`ಅದು ಹೇಗೆ… ನಾನು ಬದುಕಿರೋದೆ ಒಂದು ಪವಾಡ’
`ಬಿಡ್ತು ಅನ್ನಿ! ನಿಮ್ಮಂತೋರು ಇಲ್ದೆ ಇದ್ರೆ ಯೀ ಲೋಕಕ್ಕೆ ಅರ್ಥ ಏನು’
`ನಮ್ಮಂತವರು ಅಲ್ಪಾಯುಗಳು… ಪಾಪಿಗಳು ಚಿರಾಯುಗಳು’
`ನಿಮ್ಮ ಮ್ಯಾಲೆ ಏನೊ ವಿಶ್ವಾಸ ಇತ್ತು; ಯೇಳಕೆ ಗೊತ್ತಾಕ್ತ ಇಲ್ಲಾ… ನನ್ಮೇಲೆ ನಿಮಗೆ ವಿಶ್ವಾಸ ಬಂತಾ… ವರ್ಷಕ್ಕೆ ಒಂದ್ಸಲನಾದ್ರು ಬನ್ನಿ. ನಾನೆಲ್ಲೂ ಹೋಗಲ್ಲ… ಸಾಯಲ್ಲ… ನಿಮ್ಮನ್ನು ಕಾಯ್ತಾ ಇರ್ತೀನಿ… ಬರ್ತಿರಿ ಅಲ್ವಾ?’
`ಈ ಕ್ಷಣ ಮಾತ್ರ ನನ್ಗೆ ನಂಬಿಕೆ ಮರು ಗಳಿಗೆ ಏನಾಗ್ತಿನಿ ಅನ್ನುದೇ ಗೊತ್ತಾಗಲ್ಲ… ಹೆಂಗೆ ಹೇಳಲಿ… ಬರ್ತೀನೊ ಬರೊಲ್ಲೆನೊ ಯಾರಿಗೆ ಗೊತ್ತೂ…?ʼ
`ತಪ್ಪಿಸ್ಕೊಕೆ ಯೇಳೊ ಮಾತಾ’

`ಇಲ್ಲಾ… ನಾವಿಬ್ರು ಜೊತೆಯಾಗಿ ಬದುಕೋಕೆ ಸಾಧ್ಯ ಇಲ್ಲಾ ಅಂತ ಗೊತ್ತು. ಆದ್ರೆ ಅದಾ ಹೆಂಗೆ ಹೇಳ್ಬೇಕಂತ ತಿಳಿತಾ ಇಲ್ಲಾ’ ಸಂಸಾರ ಬ್ಯಾಡಾ… ಎಲ್ರೂ ಮಾಡ್ತರೆ ಅದಾ… ಮಕ್ಕಳೆತ್ಕೋದು, ಗಂಡುನ್ಸೇವೆ ಮಾಡುದು ಇದ್ದೇ ಅದೇ ನನ್ನ ಆತ್ಮಕ್ಕೆ ತಾಳಿ ಕಟ್ಟು… ನನ್ನ ಮನಸ್ಸಿನಲ್ಲಿ ಸದಾ ತುಂಬಿರು’ `ನೀನು ತುಂಬ ಚೆನ್ನಾಗಿ ಮಾತಾಡ್ತಿಯೇ… ಹೇಗೆ ಸಾಧ್ಯ ಆಯ್ತು ಇದೆಲ್ಲಾ…? `ಅವತ್ತು ನೀವು ಊರಿಗೆ ಬಸ್ಸಲ್ಲಿ ಬರುವಾಗ ನಾನು ನಿಮ್ಮ ಹಿಂದೆಯೆ ನಿಂತಿದ್ದೆ. ಎದೆಯಿಂದ ಒತ್ತಿದ್ದೆ. ನೀವು ಕಲ್ಲಾಗಿ ನಿಂತಿದ್ದಿರಿ. ಇವರು ಸಾಮಾನ್ಯ ಅಲ್ಲ ಅನಿಸಿತು. ಆವತ್ತಿಂದ್ಲೆ ಮನಸೆಲೇ ನಿಮ್ಜೊತೆ ಮಾತಾಡಿ ಮಾತಾಡಿ ನನಗೆ ನಾನೇ ಮರೆತು ಹೋದೆ. ಇದೆಲ್ಲ ನಿಮ್ಮಿಂದಾದ ಮಾಯೆ’.
`ಆ ದಿನ ಮದುವಣಗಿತ್ತಿಯಂತೆ ಸಿಂಗರಿಸಿದ್ದ ಗಾಡಿಯಲ್ಲಿ ಹೋಗುತ್ತಿದ್ದೆಯೆಲ್ಲಾ… ಗಾಡಿಯ ಹಿಂದೆಯೇ ದಾಪುಗಾಲಿಟ್ಟು ಬಂದಿದ್ದೆ ನಿನ್ನನ್ನೆ ದಿಟ್ಟಿಸುತ್ತ. ಆಗ ನೀನ್ಯಾಕೆ ಮುಖವ ಅತ್ತ ತಿರುಗಿಸಿದೆ… ಏನಾಗಿತ್ತು…’

`ಅದೆಲ್ಲ ಬೇಡ ಬಿಡು ಈಗಾ… ದೇವರು ಕೂಡಿಸಲೇ ಬೇಕಾದ್ದನ್ನು ಕೂಡಿಸಿಯೇ ಬಿಡುತ್ತಾನೆ. ತಡೆಯಬೇಕಾದದ್ದನ್ನು ತಡೆದೇ ತಡೀತಾನೆ… ನೀವು ದೇವರ ನಂಬಲ್ಲವೇ’

`ನಾನೆಲ್ಲೂ ದೇವರ ಕಂಡಿಲ್ಲ ಆದರೆ ನಿನ್ನಲ್ಲಿ ದೇವರ ಕಂಡಂತಾಯಿತು’
`ತಮಾಷೆ ಮಾಡ್ತಿರಾ; ನಾನೊಂದು ದೆವ್ವ… ಪೂಜೆಗೂ ಬಾರದ ಹೂವು’

`ಎಲ್ಲರೂ ಎಲ್ಲೆಲ್ಲೊ ಹೋಗಿ ದೇವರ ಕಂಡೆವೆಂದು ಪೂಜಿಸಿ ಬರಿಗೈಲಿ ಬರ್ತಾರೆ… ನಾನಿಲ್ಲಿ ಸಾಕ್ಷಾತ್ ದೇವರನ್ನೆ ಅಪ್ಪಿ ಹಿಡಿದು ಮುದ್ದಿಸುತ್ತಿರುವೆ.ʼ
`ಹಾಗೆನ್ನಬೇಡಿ ನನ್ನನ್ನಷ್ಟೇ ಮುದ್ದು ಮಾಡಿ’

ಒತ್ತಿ ಒತ್ತಿ ಮುದ್ದಿಸಿದೆ. ಮೋಹಕ್ಕೆ ದಣಿವೇ, ಇಹಪರಗಳ ಚಿಂತೆಯೇ… ಹುಂಜಗಳಿಗಿಂತಲು ಮೊದಲೇ ಪಕ್ಷಿಗಳು ಕೂಗುತ್ತವೆ ಬೆಳಗಾಗುತ್ತಿದೆ ಎಂದು. ಆ ಸದ್ದಿಗೆ ಎಚ್ಚೆತ್ತಂತೆ ನಿನ್ನ ಬಿಟ್ಟುಕೊಡಲಾರೆ ಎಂಬಂತೆ ಇನ್ನಷ್ಟು ಬಿಗಿ ಹಿಡಿದಳು. ನಾನು ಖಚಿತವಿದ್ದೆ. ಮತ್ತೆ ನಾನಿವಳ ಚುಂಬಿಸಲಾರೆ ಎಂದು. ಏನೊ ಸಂಕಟ… ಆಕಾಶದಲ್ಲಿ ಯಾರೊ ವಯಲಿನ್ ನುಡಿಸುತ್ತ ಬ್ಯಾಲೆಯ ನರ್ತಕಿಯರ ಜೊತೆ ಹಂಸ ಪಕ್ಷಿಗಳಂತೆ ತೇಲಿ ತೇಲಿ ಹೋಗುತ್ತಿದ್ದಾರೇನೊ ಎಂಬ ಭಾವನೆ ಮೂಡಿತು. ರೆಕ್ಕೆ ಬಡಿದು ಕೋಳಿಗಳು ಹೋಗಿ… ಹೊತ್ತು ಮುಗಿಯಿತು. ನಿಮಗೆ ಇದ್ದಿದ್ದು ಇಷ್ಟೇ… ಅಷ್ಟೇ ಸಾಕು ಹೋಗಿ ನಿಮ್ಮ ನಿಮ್ಮ ದಾರಿಗೆ ಎಂದು ವಿದಾಯದಲ್ಲು ಶುಭ ಕೋರುವಂತೆ ಕೂಗಿದವು. ಬಿಡಿಸಿಕೊಂಡೆವು. ಹಿಂದೆ ಹಿಂದೆಯೆ ಬಂದಳು. ಮತ್ತೆ ಹಿಡಿದು ಮುತ್ತಿಕ್ಕಿದಳು. ಅವಳಿಗೆ ಹೇಳಿದೆ…

`ದೇವರನ್ನು ಸಲಿಗೆ ಮಾಡಿಕೊಂಡರೆ ಅದಕ್ಕೆ ಅರ್ಥವಿಲ್ಲ. ದೇವರನ್ನು ಜೀವನದಲ್ಲಿ ಒಂದು ಬಾರಿ ಕಂಡರೆ ಅಷ್ಟೇ ಸಾಕು. ಮತ್ತೆ ಮತ್ತೆ ಬೆಟ್ಟಿ ಆದರೆ ಭಕ್ತನಾದವನು ಲೋಭಿಯಾಗುತ್ತಾನೆ. ಪಾಪಿಯಾಗುತ್ತಾನೆ. ಸ್ವತಃ ಅವನೇ ದೆವ್ವ ಆಗಿಬಿಡುತ್ತಾನೆ. ನಾಳೆ ನಾನು ಇನ್ನೊಬ್ಬರನ್ನು ಮದುವೆ ಆಗಬಹುದು. ಆಗ ಅದು ಬೇರೆ. ಮೊದಲಿಗೆ ನಾನು ನಿನ್ನನ್ನು ಮುಟ್ಟಿದೆನಲ್ಲಾ… ಇದು ಕೊನೆ ತನಕ ಉಳಿದಿರುತ್ತದೆ… ಮತ್ತೆ ಕಾಣುವುದಿದ್ದರೆ ಕಾಣುವ… ನಾನು ಮೈಸೂರಿಗೆ ಇವತ್ತೇ ಹೋಗ್ತೀನಿ…’ ಎಂದು ಹೇಳಿ ನನ್ನ ಅತ್ತೆಯರ ಮನೆಯತ್ತ ಬಂದೆ. ಅವರು ಮೂರು ಮಂದಿ ಬೇಗನೆ ಎದ್ದು ಸ್ನಾನ ಮಾಡಿ ಪೇಟೆಗೆ ಹೊರಡುವುದು ರೂಢಿ. ಸ್ನಾನ ಮುಗಿಸಿದ್ದರು. ಸ್ನಾನ ಮಾಡಿಕೊ ಎಂದರು.
ಮನೆಯ ಹಿಂದಿನ ಹಿತ್ತಲ ಮರೆಯಲ್ಲಿ ನೀರು ಕಾಯಿಸಿದ್ದರು. ಸುಡುಸುಡುವ ನೀರ ಮೈ ಮೇಲೆ ಸುರಿದುಕೊಂಡೆ. ಅಹಾ! ಆ ಸಾವಿತ್ರಿಯೆ ತಲೆ ತೊಳೆದು ಕೊಟ್ಟಂತಾಯಿತು. ಹಗುರಾಗಿದ್ದೆ. ಇಡೀ ರಾತ್ರಿಯ ನಿದ್ದೆಯೇ ಮಾಯವಾಗಿತ್ತು. ಹೊಸ ಮನುಷ್ಯನಾಗಿದ್ದೆ. ರಾಗಿರೊಟ್ಟಿಗೆ ಶೇಂಗಾ ಚಟ್ನಿ ಮಾಡಿದ್ದರು. ತಿಂದೆ. ಮನೆಯತ್ತ ಹೋಗಲಿಲ್ಲ. ತಾತನ ಮಾತಾಡಿಸಲು ಹೋದರೆ ಇನ್ನೇನೇನೊ ತರಲೆಗಳು ಸುತ್ತಿಕೊಳ್ಳುತ್ತವೆ ಎನಿಸಿತು. ಶ್ರೀನಿವಾಸನ ಜೊತೆ ಮಾತಾಡಬೇಕಿತ್ತು ಎಂದೆ. ಹುಡುಕಾಡಿದರು. ಸಿಗಲಿಲ್ಲ. ಬಿಡಿ; ಬೇಡ… ನೆನ್ನೆನೆ ಹೇಳಬೇಕಾದ್ದ ಹೇಳಿದ್ದೀನಿ ಎಂದು ಸರ್ಕಲ್ಲಿಗೆ ಮೊದಲ ಬಸ್ಸಿಗೇ ಹೋಗುವ ಎಂದು ಬಂದೆ. ಜನ ಕಾಯುತಿದ್ದರು. ಯಾರಿಗೂ ಮುಖಕೊಟ್ಟು ಮಾತಾಡಲಿಲ್ಲ. ಇನ್ನೇನೊ ಬಸ್ಸು ಬರುವ ಹೊತ್ತಾಯಿತು. ಅವಳು ಸಾವಿತ್ರಿ ಬಂದಿದ್ದಳು. ಬಸ್ಸಿಗಾಗಿ ಕಾಯುವಂತೆ ನಟಿಸುತ್ತ ನನ್ನನ್ನೇ ನಿರ್ಭಾವುಕ ಎಂಬಂತೆ ದಿಟ್ಟಿಸುತ್ತಿದ್ದಳು. ಜನರ ಎದಿರು ಮಾತಾಡುವಂತಿರಲಿಲ್ಲ. ಮೋಹವನ್ನು ಎಷ್ಟೊಂದು ಕಷ್ಟದಲ್ಲಿ ಕದ್ದು ಮುಚ್ಚಿ ಮಾಡಬೇಕಿದೆಯಲ್ಲಾ ಎನಿಸಿತು.

ಮನುಷ್ಯ ಮೋಹ ಕಾಮಗಳನ್ನು ಯಾಕೆ ಇಷ್ಟೊಂದು ಕಳ್ಳತನದಲ್ಲಿ ನಿರ್ವಹಿಸುವನು? ಎಲ್ಲ ದೇಶ ಕಾಲಗಳಲ್ಲು ಇದು ಹೀಗೆ ಸಾಗಿ ಬಂದಿದೆಯೇ… ಮುಕ್ತ ಮೋಹದ ಸಮಾಜಗಳ ಮಾನಸಿಕ ಸ್ಥಿತಿ ಲೈಂಗಿಕ ವಿಷಯಗಳಲ್ಲಿ ಹೇಗೆ ಬೆಳೆದು ಬಂದಿದೆ… ಯಪ್ಪಾ… ನಾನು ಏನೇನೊ ಓದಿ ಓದಿ ಕೆಟ್ಟಿರುವೆನೊ ಏನೊ ಎಂದು ಆ ವಿಷಯವ ಬಿಟ್ಟೆ. ಅವಳ ನೋಟದಲ್ಲಿ ಏನೇನು ನಿಗೂಢಗಳಿದ್ದವೊ… ನನಗೆ ಎಟುಕದಾಗಿತ್ತು. ಬಸ್ಸು ಬಂತು. ಹತ್ತಿರ ಬಂದಳು. ಬಸ್ಸೇರುವ ಜನರ ಗದ್ದಲದಲ್ಲಿ ಸಮೀಪಿಸಿ ಮಾರ್ಮಿಕವಾಗಿ ಹೇಳಿದಳು…

`ಮತ್ತೆ ಇಲ್ಲಿಗೆ ಬರಬೇಡಿ. ಬಂದರೆ ನಾನು ನಿಮ್ಮ ದಾರಿ ತಪ್ಪಿಸುವೆ… ನಾನೂ ದಾರಿ ತಪ್ಪುವೆ. ಬಂದರೂ ನನಗೆ ಕಾಣಬೇಡಿ. ನನ್ನನ್ನು ಹುಡುಕಿಕೊಂಡು ಬರಬೇಡಿ’
ಎಂದು ಹೇಳಿ ಹಿಂತಿರುಗಿ ನೋಡದೆ ಹೊರಟು ಹೋದಳು. ಅರೇ! ಇದೆಂತಹ ವಿಚಿತ್ರ ಹೆಣ್ಣು… ಪೇಟೆ ತನಕ ಜೊತೆಗೇ ಬರುವಳೇನೊ ಎಂದುಕೊಂಡಿದ್ದೆನಲ್ಲಾ ಎಂದು ಪೆಚ್ಚಾಗಿ ಬಸ್ಸಿನೊಳಕ್ಕೆ ತೂರಿಕೊಂಡೆ. ಹಿಂತಿರುಗಿ ಕಿಟಕಿಯಲ್ಲಾದರೂ ನೋಡಲು ಅವಕಾಶ ಇಲ್ಲದಂತೆ ಜಮಾಯಿಸಿದ್ದರು. ಆ ಮನೆ ಆ ಸಾವು ಆ ರಗಳೆ ಆ ಊರು ಕೇರಿ ಏನೂ ನೆನಪಾಗಲಿಲ್ಲ. ಆ ಸಾವಿತ್ರಿಯೇ ಆವರಿಸಿಕೊಂಡಿದ್ದಳು. ಒಹ್! ನನ್ನ ಒಳಗೂ ಒಬ್ಬ ಪ್ರೇಮಿ ಇದ್ದಾನೆಯೆ ಎಂದು ನಾಚಿಕೆಯಾಗಿತ್ತು. ಗಂಡಸರ ವ್ಯರ್ಥ ಚೌಕಟ್ಟುಗಳ ಆಚೆ ಇದ್ದಾಳೆ ಎನಿಸಿತು. ಅವಳಿಗೆ ಇರುವಷ್ಟು ಧೈರ್ಯ ಅರ್ಪಣೆ ನನಗಿಲ್ಲ ಎನಿಸಿ ವಿಷಾದ ನೆತ್ತಿಗೇರಿತು. ಆ ಸಿನಿಮಾ ಟೆಂಟಿನಲ್ಲಿ ಅವಳು ನನ್ನೆದೆಗೆ ಬಿಟ್ಟಿದ್ದ ನಿಟ್ಟುಸಿರು ಬೆದೆಯುಸಿರು ಈಗಲೂ ನನ್ನೊಳಗೇ ಸುಳಿದಾಡುತ್ತಿದ್ದವು. ಪೇಟೆಗೆ ಹತ್ತಿರವಿತ್ತು ನನ್ನೂರು. ಬಸ್ಸು ಇಳಿದೆ. ಆಗೊಮ್ಮೆ ಅದೇ ಬಸ್ಸಿಂದ ಬಂದಾಗ ತಪ್ಪಿಸಿ ಕಳ್ಳನಂತೆ ಇಳಿದು ಮೈಸೂರಿನ ಬಸ್ಸೇರಿ ಕುಳಿತು ಕಿಟಕಿಯ ಗ್ಲಾಸು ಮುಚ್ಚಿ ಮರೆಯಿಂದ ಸಾವಿತ್ರಿಯ ನೋಡಿದ್ದು ಸುಳಿದು ಬಂತು. ಹೆಣ್ಣು ಗಂಡಿನ ಮಾಂತ್ರಿಕ ಸೆಳೆತದ ಮಾಯೆಯ ಅಲ್ಪ ಪರಿಚಯವಾಗಿತ್ತು. ಯಾವುದೊ ನೆರಳು ಬಂದು ನನ್ನ ಪಕ್ಕದಲ್ಲೇ ಕೂತಂತಾಯಿತು. ತಾಯಿ ನೆನಪಾದಳು ಬಸ್ಸು ವೇಗವಾಗಿ ಓಡುತಿತ್ತು.

ಹಾಸ್ಟಲಿಗೆ ಬಂದೆ. ಮತ್ತದೇ ಬೇಸರ. ಅದೇ ಸಂಜೆ. ಅದೇ ಏಕಾಂತ… ಕವಿಯ ಸಾಲುಗಳ ಗುನುಗಿಕೊಂಡೆ. ಆಕಾಶದಲ್ಲಿ ನಾನೊಂದು ಬೆಳದಿಂಗಳು ಎಂದು ಬೀಗಬೇಡವೊ ಎಲೆ ಬೇವಾರ್ಸಿ ಚಂದಿರನೇ, ನಿನಗೆ ನಿನ್ನದೇ ಬೆಳಕಿಲ್ಲ. ಸುತ್ತುವವರ ಬಲದ ಹಿಂದೆ ಸುಮ್ಮನೆ ಸುತ್ತುತ್ತೀಯೆ. ಫಲವಿಲ್ಲದ ಛಲವಿಲ್ಲದ ಸ್ಥಾನವಿಲ್ಲದ ಚಲನೆ ನಿನ್ನದು. ಸೂರ್ಯ ಬಂದರೆ ಕಣ್ಮರೆಯಾಗುತ್ತೀಯೆ ಕೃಪೆ ತೋರಿದರೆ ಹಾಲು ಬೆಳದಿಂಗಳು ಎಂದು ಬೆರೆಯುತ್ತೀಯೆ. ಅಮವಾಸ್ಯೆಯ ಕಗ್ಗತ್ತಲ ಸಮಾಧಿಯಲ್ಲಿ ಮುಳುಗಿರುತ್ತೀಯೆ! ಸ್ವತಂತ್ರನೇನು ನೀನು? ಅತಂತ್ರ ಸುತ್ತುವೆ; ನಾನೇ ಸುತ್ತುತ್ತಿರುವುದು, ನಾನೇ ಕೇಂದ್ರ ಎಂದು… ಎಂಥಾ ಮಾರಾಯ ನಿನ್ನ ಪಾಡು… ಮಂಡೆ ಸರಿ ಇದೆಯೆ ನಿನಗೆ… ಶ್ಯಾಣ್ಯನೇನು; ಯಪ್ಪಾ ಯಾ ಸೀಮೆಯೋನೊ… ನೀರು ನೆರಳಿಲ್ಲದೆ ಬರಗೆಟ್ಟವನು ನೀನು… ಚಂದ ಮಾಮನೇನು ನೀನು… ಬೋಳು ಬಂಡೆಯಂತಿದ್ದೀಯೆ. ಯಾವ ಕೋಮಲೆಯರಿಗೆ ನೀನು ಮುದ್ದು ಮಾಮನೊ… ಬದುಕಿದ್ದೇನೆಂದು ಭ್ರಮಿಸಿದ್ದೀಯೆ! ಸತ್ತಿದ್ದರೂ ಸುತ್ತಾಟವ ಬಿಟ್ಟಿಲ್ಲ! ಯಾವ ತಾರಾ ಬಳಗವೂ ನಿನಗಿಲ್ಲ. ಹೋಗು ಬೇವಾರ್ಸಿಗಳ ಷಹರ ಒಂದು ಎಲ್ಲಿಯಾದರೂ ಇರಬಹುದು… ಇದೆಯಂತೆ ಅಲ್ಲಿ ಪಾಪಿಗಳ ಕೂಗು ಹಾಕಿ ಕಣ್ಣು ಮುಚ್ಚಿಸುವ ಕೂಪಾ ನಗರಿ. ಆಕಾಶದ ಒಂದು ಮೃತ ಚೆಂಡು ನೀನು… ಪುಟಿಯಲಾರೆ ಗುರಿ ಇಟ್ಟು ಎಸೆದರೂ ಗುರಿಗೆ ಬಡಿಯಲಾರೆ…

ಹಾಗೆ ಲಹರಿಯಲ್ಲಿ; ಅದೇ ಪ್ರಿಯವಾದ ರಾಮಸ್ವಾಮಿ ಸರ್ಕಲ್ಲಿನ ಕಲ್ಲು ಬೆಂಚಿನ ಮೇಲೆ ಕೂತು ಹೋಗಿ ಬರುವ ಜನರ ಗಮನಿಸುತ್ತಿದ್ದೆ. ಕೃಷ್ಣಪ್ಪ ಹಣ ತರಲು ಊರಿಗೆ ಹೋಗಿದ್ದ. ಹಿಂದಿನಿಂದ ಬಂದು `ಹಾಯ್’ ಎಂದು ಹೆಲ ಮೇಲೆ ಕೈಯಿಟ್ಟರು. ಯಾರೆಂದು ನೋಡಿದೆ. ಅದೇ ಹೈದ್ರಾಬಾದ್ ನಿಜಾಮರ ವಂಶಸ್ಥ ಖಾಲಿದ್. ಬೆಚ್ಚಿದೆ. ಆತನನ್ನು ಮರೆತೇ ಬಿಟ್ಟಿದ್ದೆ. ಸ್ವಲ್ಪ ಸ್ವಲ್ಪ ಕನ್ನಡ ಕಲಿತಿದ್ದ. ಈ ರಾತ್ರಿ ನನ್ನ ಜೊತೆ ಊಟಕ್ಕೆ ಬಾ ಎಂದು ಕರೆದ. ಹಾಸ್ಟೆಲು ಬಿಟ್ಟು ಮನೆ ಒಂದರಲ್ಲಿದ್ದ. ಮೈಸೂರು ಅರಸರ ಕಾಲದ ಹಳೆಯ ಬಂಗಲೆ ಅದು. ವಿಳಾಸ ಹೇಳುತ್ತಿದ್ದಂತೆಯೆ ಗೊತ್ತಾಗಿತ್ತು. ನಾನಲ್ಲಿಗೆ ಸಲ್ಲುವವನಾಗಿರಲಿಲ್ಲ. ಆ ಬಂಗಲೆಯಲ್ಲಿ ಅವನಿಗಾಗಿ ಆಳುಕಾಳುಗಳಿದ್ದರು. ಅದು ಕೂಡ ಅವನಿಗೆ ಬಡತನ ಎನಿಸಿತ್ತು. ಬಡತನ ಸಿರಿತನಗಳ ವ್ಯಾಖ್ಯಾನಿಸುವ ಸಾಮರ್ಥ್ಯ ನನಗೆ ಇರಲಿಲ್ಲ. ಶ್ರೀಮಂತರ ಜೊತೆ ಕೂತು ಊಟ ಮಾಡುವುದು ಕೂಡ ಶಿಕ್ಷೆ. ಅಪರಾಧವನ್ನು ಮಾಡದೆಯೇ ಸವಿಸವಿ ಎನ್ನುತ್ತ ಉಣ್ಣುವ ಶಿಕ್ಷೆಯ ಎಷ್ಟೋ ಅವತಾರಗಳನ್ನು ನಾನು ಕಂಡಿದ್ದೆ. ಅವನಿಗೆ ಹೇಳಿದೆ…

`ನಖೋ ಖಾಲಿದ್ ಸಾಬ್. ಆಫ್ ಬಹೂತ್ ಬಡಾ ಆದ್ಮಿ
ಮೇ ಏಕ್ ಚೋಟಾ ವಾಲಾ. ಬಹೂತ್ ಗರೀಬ್…
ಆಪ್ ಅಬೂಕೈಸೇ ಐ… ಟೀಕ್ ಐ… ಮಾ ಅಚ್ಚಾ ಐ…
ಡೂಯಿಂಗ್ ಸ್ಟಡೀ ವೆಲ್… ಯೂ ಆರ್ ಸೋಕೈಂಡ್’
ಎಂದು ಹೇಳಿ ಕೈ ಕುಲುಕಿದೆ. ಅವನೇ ಹಿಡಿದು ಆಲಂಗಿಸಿಕೊಂಡ. ಇಂಗ್ಲೆಂಡಿನಲ್ಲೆ ಹುಟ್ಟಿ ಬೆಳೆದಿದ್ದ. ನನ್ನ ಮುರುಕು ಭಾಷೆಯನ್ನು ವಿಸ್ತರಿಸಲಾರದೆ ಅವನನ್ನ ಕಳಿಸಿ ಬಿಟ್ಟಿದ್ದೆ.

ಹೊತ್ತು ಮೀರಿತ್ತು. ಕೃಷ್ಣಪ್ಪ ಬಂದಿರಲಿಲ್ಲ. ನಾಳೆ ಬಂದೇ ಬರುವನು. ಇಲ್ಲಿಂದ ಗಂಗೋತ್ರಿಗೆ ಹೋಗುವುದೆ ಸೂಕ್ತ ಎನಿಸಿತ್ತು. ಅಶ್ವಥ್ ನಾರಾಯಣ್ ಅವರನ್ನು ಅವತ್ತೆ ಕೋರಿಕೊಂಡಿದ್ದೆ. `ಹೇ ಬಾರಯ್ಯಾ… ನಂಜೊತೆನೆ ಇರೊ… ದೊಡ್ಡ ಹೋರಾಟಗಾರ ನೀನೂ… ನನ್ನ ರೂಮಲ್ಲಿ ಜಾಗ ಇಲ್ಲ ಅನ್ಕಂಡಿದ್ದಿಯಾ… ಬಾ… ನಾನಿದ್ದೀನಿ’ ಎಂದು ವಿಶ್ವಾಸ ತುಂಬಿದ್ದರು. ಖಾಂಝಿ ಪೀಂಜಿಗಳ ಕಂಡರೆ ಅವರಿಗೆ ಆಗುತ್ತಿರಲಿಲ್ಲ. ಫೆಲೋಷಿಪ್ ಬರುತ್ತಿತ್ತು. ಆಳವಾಗಿ ಅಧ್ಯಯನದಲ್ಲಿ ಮುಳುಗಿರುತ್ತಿದ್ದರು. ನಾಳೆ ಶಿಫ್ಟ್ ಆಗಲೇಬೇಕೆಂದು ನಿರ್ಧರಿಸಿದೆ. ಸೀಟು ಅನೌನ್ಸ್ ಆಗಲು ಮೂರು ದಿನ ಬಾಕಿ ಇದ್ದವು. ಕೃಷ್ಣಪ್ಪ ಮರುದಿನ ನಾಲ್ಕು ಗಂಟೆಗೆ ಬಂದಿದ್ದ. ಪಾರ್ಟಿ ಕೊಡಿಸಿದ್ದ. ತಡರಾತ್ರಿ ತನಕ ಅಮಲಲ್ಲಿ ಮಾತಾಡುತಿದ್ದ. ಸುಮ್ಮನೆ ಹೂಂ ಹೂಂ ಹಾ ಎನ್ನುತ್ತಿದ್ದೆ. ನನ್ನ ತಲೆಯ ಒಳಗೆ ಆ ಸಾವಿತ್ರಿಯೆ ಸುತ್ತುತ್ತಿದ್ದಳು. ನಟ್ಟಿರುಳಲ್ಲಿ ಹಾಗೆ ತಬ್ಬಿ ಹಿಡಿದು ನಿಂತು ಪಿಸುದನಿಯಲ್ಲಿ ಮಾತಾಡುತ್ತಿದ್ದುದು ಕನಸಿಗೆ ಬಂದಂತಾಗಿ ಎಚ್ಚರವಾಗುತ್ತಿತ್ತು. ಕೃಷ್ಣಪ್ಪ ಗೊರಕೆ ಹೊಡೆಯುತ್ತಿದ್ದ. ಹೊರಳಾಡಿ ಕನವರಿಸಿದ್ದೆ. ಶ್ರೀರಾಮ ದೇಗುಲದ ಗಂಟೆಗಳ ಸದ್ದು ಎಚ್ಚರಿಸಿತ್ತು. ನೆನ್ನೆ ರಾತ್ರಿ ಅವಳ ಜೊತೆ ಆ ಹಕ್ಕಿ ಆ ಕೋಳಿಗಳು ಸಾಕು ಸಾಕೂ… ಹೊತ್ತಾಯಿತು ಹೊರಡಿ ಎಂದಿದ್ದವು. ಕೃಷ್ಣಪ್ಪನ ಎಬ್ಬಿಸಿದ್ದೆ. ಗಂಗೋತ್ರಿಗೆ ಹೋಗಲು ತವಕಿಸುತ್ತಿದ್ದೆ. `ಕೃಷ್ಣಣ್ಣಾ… ಗಂಗೋತ್ರಿಗೆ ವಯ್ತಿನಿ. ನನ್ನ ಫ್ರೆಂಡು ಇದ್ದಾರೆ. ಬರ್ತಾ ಇರ್ತೀನಿ ಅಣ್ಣಾ… ನನ್ಗೆ ಉಪಕಾರ ಮಾಡಿದ್ರಿ’ ಎಂದು ಕೃತಜ್ಞತೆ ಸಲ್ಲಿಸಿದೆ. ಸಂತೋಷದಿಂದ ಕಳಿಸಿಕೊಟ್ಟ.