ಅಲ್ಲಿನ ಅರ್ಚಕರು ಒಂದು ಘಟನೆಯನ್ನು ಹೇಳಿದರು. ೧೯೯೯ ರಲ್ಲಿ ಬೆಂಗಳೂರಿನ ಒಬ್ಬ ಮಹಿಳೆಗೆ ಕನಸಿನಲ್ಲಿ ದೇವಿಯ ದರ್ಶನವಾಗಿ ತನಗೆ ಕಾಲ್ಗೆಜ್ಜೆ ನೀಡೆಂದು ತಿಳಿಸಿದಳಂತೆ. ಆದರೆ ಆ ದೇವಿ ಯಾರು, ದೇವಸ್ಥಾನ ಎಲ್ಲಿದೆ ಅನ್ನುವುದು ಆಕೆಗೆ ತಿಳಿದಿರಲಿಲ್ಲ. ಯಾವುದೋ ಪತ್ರಿಕೆಯಲ್ಲಿನ ಚಿತ್ರ ನೋಡಿ ಇದೇ ಕನಸಿನಲ್ಲಿ ಬಂದ ದೇವಿ ಎಂದು ಗುರುತಿಸಿ ತಿರುಮೀಯಚೂರಿಗೆ ಹೋಗುತ್ತಾಳೆ. ಅಲ್ಲಿ ಕಾಲ್ಗೆಜ್ಜೆಯನ್ನು ದೇವರಿಗೆ ತೊಡಿಸಿರೆಂದು ಕೇಳಿದಾಗ ಅರ್ಚಕರು ಹಾಗೆ ಹಾಕಲು ಆಗುವುದಿಲ್ಲ ಎನ್ನುತ್ತಾರೆ. ಆಕೆ ಪದೇ ಪದೇ ಕೇಳಿಕೊಂಡು ತನ್ನ ಕನಸನ್ನು ಹೇಳಿಕೊಂಡ ಮೇಲೆ ಪರಿಶೀಲಿಸಿದಾಗ ಕಾಲಿನ ಸುತ್ತ ಗೆಜ್ಜೆ ತೊಡಿಸಲು ಸಣ್ಣ ತೂತು ಇರುವುದು ಕಂಡುಬರುತ್ತದೆ.
ಗಿರಿಜಾ ರೈಕ್ವ ಬರೆಯುವ ಅಂಕಣ ‘ದೇವಸನ್ನಿಧಿ’

ಕುಂಭಕೋಣಂನಿಂದ ತಿರುಮೀಯಚೂರಿಗೆ ೩೦ ಕಿ.ಮೀ. ದೂರ. ಸುಮಾರು ಒಂದು ಗಂಟೆಯ ಪ್ರಯಾಣ. ಕಣ್ಣು ಹಾಯಿಸಿದಲ್ಲೆಲ್ಲಾ ಹಸಿರೋ ಹಸಿರು. ಕಾವೇರಿ ತನ್ನ ಹರಿವಿನ ಉದ್ದಕ್ಕೂ ಪೈರಿಗೆ ನೀರುಣಿಸಿ ಶ್ರೀಮಂತವಾಗಿಸಿದ್ದಾಳೆ. ಕಾಲುವೆಗಳ ಮೂಲಕ ನೀರಾವರಿಗೆ ತುಂಬಾ ವ್ಯವಸ್ಥಿತವಾಗಿ ಅನುಕೂಲ ಕಲ್ಪಿಸಿದ್ದಾರೆ. ತಿರುವರೂರ್ ಮತ್ತು ತಂಜಾವೂರು ಜಿಲ್ಲೆಗಳಲ್ಲಿ ದೇಶದಲ್ಲೇ ಅತಿ ಹೆಚ್ಚು ಕಾಲುವೆ ನೀರಾವರಿ ಇರುವುದು. ಬರೀ ಸಂಖ್ಯೆಗಳನ್ನು ನೋಡಿ ಅಲ್ಲ, ಒಂದೆರೆಡು ಗಂಟೆ ಅಲ್ಲಿ ಓಡಾಡಿದರೇ ತಿಳಿಯುತ್ತದೆ ಎಷ್ಟು ಒಳ್ಳೆಯ ನೀರಾವರಿ ವ್ಯವಸ್ಥೆ ಎಂದು. ಒಂದಕ್ಕೊಂದು ಅದ್ಭುತವಾಗಿ ಜೋಡಿಸಿದ್ದಾರೆ. ಅದನ್ನು ಬಳಸಿಕೊಂಡು ಸಮೃದ್ಧವಾಗಿ ಬೆಳೆದ ಪೈರು ಪಚ್ಚೆಗಳು. ಒಂದು ಗಂಟೆ ಕಳೆದಿದ್ದೇ ತಿಳಿಯದಷ್ಟು ಆಹ್ಲಾದಕರವಾದ ನೋಟ ರಸ್ತೆಯ ಎರಡೂ ಬದಿಯಲ್ಲಿ.

ತಿರುಮೀಯಚೂರು ತಮಿಳುನಾಡಿನ ತಿರುವರೂರ್ ಜಿಲ್ಲೆಯ ಪುಟ್ಟ ಹಳ್ಳಿ. ಅಲ್ಲಿನ ಮೇಘನಾಥ ದೇವಾಲಯ ಊರಿನ ಮುಖ್ಯಆಕರ್ಷಣೆ. ತೇವಾರಮ್‌, ತಮಿಳಿನ ಶೈವ ಸಂತರು ರಚಿಸಿದ ಶಿವನನ್ನು ಕುರಿತ ಸಾಹಿತ್ಯ. (ತೇವಾ ಅಂದರೆ ದೇವ, ಹಾರಮ್‌ ಅಂದರೆ ಹಾರ) ಅದರಲ್ಲಿ ಈ ದೇವಾಲಯದ ವಿವರಣೆ ಬರುತ್ತದೆ. ಇದು ಕಾವೇರಿ ತೀರದ ಮುಖ್ಯ ಶೈವ ದೇವಾಲಯಗಳಲ್ಲಿ ಒಂದು.

ಮುಖ್ಯ ದೇವರು ಶಿವನಾದರೂ ದೇವಾಲಯದ ಭಾಗವಾದ ಲಲಿತಾಂಬಿಕೆಯಿಂದ ಇದು ಲಲಿತಾಂಬಿಕೆ ದೇವಾಲಯ ಅಂತಲೇ ಪ್ರಸಿದ್ಧ. ಲಲಿತಾಸಹಸ್ರನಾಮ ಹುಟ್ಟಿದ್ದು ಇಲ್ಲಿಯೇ ಎನ್ನುವುದು ನಂಬಿಕೆ.

ಸುಮಾರು ೧೦೦೦ ವರ್ಷಗಳ ಹಳೆಯ ದೇವಾಲಯ. ಶಾಸನಗಳಿಂದ ಚೋಳರ ಕಾಲದಲ್ಲಿ ಕಟ್ಟಿಸಿದ್ದು ಅಂತ ತಿಳಿಯುತ್ತದೆ. ಆಮೇಲೆ ರಾಜೇಂದ್ರ ಚೋಳನ ಕಾಲದಲ್ಲಿ ಪುನರುಜ್ಜೀವನ ಮಾಡಿರಬಹುದು ಎನ್ನುತ್ತಾರೆ ತಜ್ಞರು. ಪಾಂಡ್ಯರ ಮತ್ತು ಚೋಳರ ಕಾಲದ ಶಾಸನಗಳು ಅಲ್ಲಿ ದೊರೆತಿವೆ.


ರಾಜಗೋಪುರವನ್ನು ದಾಟಿ ಒಳ ಹೋದರೆ ಬಲಗಡೆ ಲಲಿತಾಂಬಿಕೆಯ ದೇವಾಲಯ.. ಆ ಪ್ರಾಕಾರವನ್ನು ದಾಟಿ ಒಳ ನಡೆದರೆ ಅಲ್ಲಿ ಲಿಂಗರೂಪದಲ್ಲಿರುವ ಶಿವನ ದೇವಾಲಯ. ಅವನು ಉದ್ಭವರೂಪಿ. ದೇವಾಲಯದ ಹೊರಭಿತ್ತಿಯಲ್ಲಿ ಹಲವು ದೇವರುಗಳ ಸುಂದರ ಕೆತ್ತನೆಗಳಿವೆ. ಅಭಯ ಹಸ್ತೆ ದೇವಿಯು ಬಲಗಾಲನ್ನ ಮಡಿಚಿ ಎಡಗಾಲನ್ನು ಕೆಳಗೆ ಇಳಿ ಬಿಟ್ಟು ಶ್ರೀಚಕ್ರ ಸಿಂಹಾಸನೇಶ್ವರಿಯಾಗಿದ್ದಾಳೆ.

ಈ ದೇವಾಲಯದ ಸುತ್ತ ಹಲವು ಸ್ಥಳಪುರಾಣಗಳಿದ್ದು, ಒಂದು ಐತಿಹ್ಯ ಹೀಗಿದೆ. ಕಶ್ಯಪನ ಪತ್ನಿಯಾದ ವಿನತೆಗೆ ಅರುಣ ಹಾಗೂ ಗರುಡ ಹುಟ್ಟಿದ್ದು ಇಲ್ಲೇ. ಅಂಗವೈಕಲ್ಯದಿಂದ ಅರುಣ ಸೂರ್ಯನ ಸಾರಥಿಯಾಗುತ್ತಾನೆ. ಅವನು ಅಪ್ಪಟ ಶಿವಭಕ್ತ. ಒಮ್ಮೆ ಶಿವನನ್ನು ನೋಡಲು ಮೋಹಿನಿಯ ರೂಪ ಧರಿಸಿ ಹೋಗುತ್ತಾನೆ. ದಾರಿಯಲ್ಲಿ ಇಂದ್ರ ಅವನನ್ನು ಮೋಹಿಸಿ ವಾಲಿಯ ಜನನವಾಗುತ್ತದೆ. ವಾಪಾಸ್‌ ಬಂದ ಮೇಲೆ ಇದನ್ನು ಸೂರ್ಯನಿಗೆ ಹೇಳಿದಾಗ ಅವನು ಅರುಣನನ್ನು ಅಪಹಾಸ್ಯ ಮಾಡಿ ಮತ್ತೆ ಮೋಹಿನಿಯಾಗಿ ತೋರಿಸುವಂತೆ ಕೇಳುತ್ತಾನೆ. ಮತ್ತೆ ಮೋಹಿನಿಯಂತೆ ರೂಪ ಧರಿಸಿದಾಗ ಅವನೂ ಮೋಹಿತನಾಗಿ ಸುಗ್ರೀವನ ಜನನವಾಗುತ್ತಾನೆ. ತನ್ನ ಭಕ್ತನನ್ನು ಅಪಹಾಸ್ಯ ಮಾಡಿದ್ದಕ್ಕಾಗಿ ಶಿವ ಸೂರ್ಯನನ್ನು ಶಪಿಸುತ್ತಾನೆ. ಪಾಪ ಪ್ರಾಯಶ್ಚಿತ್ತಕಾಗಿ ಸೂರ್ಯ ತಿರುಮೀಯಚೂರಿಗೆ ಬಂದು ಶಿವನನ್ನು ಆನೆಯ ಮೇಲೆ ಮೋಡಗಳಲ್ಲಿ ಇಟ್ಟು ೭ ವರ್ಷ ಪೂಜಿಸುತ್ತಾನೆ. ಹಾಗಾಗಿಯೇ ಶಿವ ದೇವಾಲಯದ ವಿಮಾನ ಗಜಪೃಷ್ಟಾಕೃತಿಯಲ್ಲಿದೆ ಅನ್ನುತ್ತಾರೆ. ಮತ್ತು ಶಿವನಿಗೆ ಮೇಘನಾಥ ಅನ್ನುವ ಹೆಸರು ಬಂದಿದ್ದು.

ವಿಮಾನವು ಗಜಪೃಷ್ಟಾಕೃತಿಯಲ್ಲಿರುವುದು ನಿಜವೇ. ಅದನ್ನು ಸಮರ್ಥಿಸಲು ಈ ಕಥೆ ಹುಟ್ಟಿತೋ ಅಥವಾ ಕಥೆಗೋಸ್ಕರ ಶಿಲ್ಪಿಗಳು ಹೀಗೆ ವಿಮಾನದ ರಚನೆಯನ್ನು ಗಜಪೃಷ್ಟವಾಗಿ ಕಟ್ಟಿದರೋ ಗೊತ್ತಿಲ್ಲ.

ಗರ್ಭಗುಡಿ ಮತ್ತದರ ಮೇಲಿನ ಭಾಗವನ್ನು ವಿಮಾನ ಎನ್ನುತ್ತಾರೆ. ಇಲ್ಲಿ ಅದು ಆನೆಯನ್ನು ಹಿಂದಿನಿಂದ ನೋಡಿದರೆ ಹೇಗೆ ಕಾಣುತ್ತದೋ ಹಾಗೆ ದುಂಡಾಗಿದೆ. ಇದು ಚೋಳರ ದೇವಾಲಯಗಳಲ್ಲಿ ತಮಿಳುನಾಡಿನಲ್ಲಿ ಸಾಮಾನ್ಯವಾಗಿ ಕಾಣಸಿಗುವುದು.

ಮತ್ತೊಂದು ಐತಿಹ್ಯದ ಪ್ರಕಾರ ಭಂಡಾಸುರನ ವಧೆಯ ನಂತರವೂ ದೇವಿಯ ಕೋಪ ಇಳಿಯುವುದಿಲ್ಲ. ಆಗ ಶಿವ ಅವಳನ್ನು ಮನೋನ್ಮಯಿಯ (ಲಿಲತಾಸಹಸ್ರನಾಮದಲ್ಲಿ ೨೦೭ ನೇ ಹೆಸರು) ರೂಪದಲ್ಲಿ ಭೂಮಿಗೆ ಹೋಗಲು ಸಲಹೆ ನೀಡುತ್ತಾನೆ. ಈ ದೇವಾಲಯಕ್ಕೆ ಬಂದ ನಂತರ ಅವಳ ಕೋಪ ತಣಿದು ದೇವಿಯು ಪ್ರಸನ್ನಳಾಗುತ್ತಾಳೆ. ಅವಳ ಬಾಯಿಂದ ಹೊರಬಂದ ವಾಕ್‌ ದೇವತೆಗಳು ಅವಳನ್ನು ಸಹಸ್ರನಾಮಗಳಿಂದ ಪೂಜಿಸುತ್ತಾರೆ. ಅವೇ ಸಹಸ್ರನಾಮಗಳನ್ನು ಹಯಗ್ರೀವರು ಅಗಸ್ತ್ಯರಿಗೆ ಉಪದೇಶ ಮಾಡುತ್ತಾರೆ. ಹಯಗ್ರೀವ ಅಗಸ್ತ್ಯರ ಸಂವಾದವನ್ನು ಬ್ರಹ್ಮಾಂಡ ಪುರಾಣದಲ್ಲಿ ಕಾಣಬಹುದು.

ಕಾರವನ್ನು ದಾಟಿ ಒಳ ನಡೆದರೆ ಅಲ್ಲಿ ಲಿಂಗರೂಪದಲ್ಲಿರುವ ಶಿವನ ದೇವಾಲಯ. ಅವನು ಉದ್ಭವರೂಪಿ. ದೇವಾಲಯದ ಹೊರಭಿತ್ತಿಯಲ್ಲಿ ಹಲವು ದೇವರುಗಳ ಸುಂದರ ಕೆತ್ತನೆಗಳಿವೆ. ಅಭಯ ಹಸ್ತೆ ದೇವಿಯು ಬಲಗಾಲನ್ನ ಮಡಿಚಿ ಎಡಗಾಲನ್ನು ಕೆಳಗೆ ಇಳಿ ಬಿಟ್ಟು ಶ್ರೀಚಕ್ರ ಸಿಂಹಾಸನೇಶ್ವರಿಯಾಗಿದ್ದಾಳೆ.

ಅಗಸ್ಯ್ತರು ಇಲ್ಲಿಗೆ ಬಂದು ಲಲಿತಾ ಸಹಸ್ರನಾಮವನ್ನು ಹಾಡಿ ದೇವಿಯನ್ನು ಪೂಜಿಸಿದರು. ಜೊತೆಗೆ ರಹಸ್ಯನಾಮಸಹಸ್ರಂ ಅನ್ನು ಕೂಡ ರಚಿಸಿದರು ಎನ್ನುತ್ತದೆ ಐತಿಹ್ಯ. ಅಗಸ್ತ್ಯರು ತಮಿಳುನಾಡಿನ ಭಾಗದಲ್ಲಿ ಇದ್ದ ಉಲ್ಲೇಖ ಅನೇಕ ಕಡೆಗಳಲ್ಲಿ ಬರುತ್ತದೆ. ಇಂದಿನ ಪಾಂಡಿಚೇರಿಯ ಅರೋಬಿಂದ ಆಶ್ರಮ ಇರುವ ಜಾಗದಲ್ಲಿ ಹಿಂದೆ ಅಗಸ್ತ್ಯರ ಆಶ್ರಮ ಇತ್ತಂತೆ. ಪುರಾಣಗಳು ಬರೀ ಕಟ್ಟು ಕತೆಗಳಲ್ಲ. ಯಾವುದೋ ಕಾಲದಲ್ಲಿ ನಡೆದಿರಬಹುದೇನೋ ಅನ್ನಿಸುತ್ತೆ, ಅದರ ಜೊತೆ ಸಿಗುವ ಇಂತಹ ಸಂಗತಿಗಳನ್ನು ಕೇಳಿದಾಗ. ಹೀಗೆ ಲಿಲತಾಸಹಸ್ರನಾಮವನ್ನು ಮೊದಲಿಗೆ ಜಗತ್ತಿಗೆ ತಿಳಿಸಿದ ಸ್ಥಳಮಹಿಮೆ ಈ ದೇವಾಲಯದ್ದು. ಹಾಗಾಗಿ ಭಕ್ತರು ಇಲ್ಲಿ ಬಂದು ಲಿಲತಾಸಹಸ್ರನಾಮವನ್ನು ಓದುವುದು ಕಾಣುತ್ತದೆ. ನಾನೂ ಕೂಡ ಲಿಲತಾಸಹಸ್ರನಾಮದಿಂದ ಅವಳನ್ನು ನೆನೆದು ಬಂದೆ. ಅದರಲ್ಲಿ “ಭಂಡಾಸುರ ವಧೋದ್ಯುಕ್ತ ಶಕ್ತಿಸೇನಾಸಮನ್ವಿತಾ, ಭಂಡಸೈನ್ಯವಧೋದ್ಯುಕ್ತ ಶಕ್ತಿವಿಕ್ರಮಹಾರ್ಷಿತಾ” ಎಂದು ೨-೩ ಕಡೆಗಳಲ್ಲಿ ಭಂಡಾಸುರನನ್ನು ಕೊಂದ ಪ್ರಸ್ತಾಪ ಬರುತ್ತದೆ.

ಅಲ್ಲಿನ ಅರ್ಚಕರು ಒಂದು ಘಟನೆಯನ್ನು ಹೇಳಿದರು. ೧೯೯೯ ರಲ್ಲಿ ಬೆಂಗಳೂರಿನ ಒಬ್ಬ ಮಹಿಳೆಗೆ ಕನಸಿನಲ್ಲಿ ದೇವಿಯ ದರ್ಶನವಾಗಿ ತನಗೆ ಕಾಲ್ಗೆಜ್ಜೆ ನೀಡೆಂದು ತಿಳಿಸಿದಳಂತೆ. ಆದರೆ ಆ ದೇವಿ ಯಾರು, ದೇವಸ್ಥಾನ ಎಲ್ಲಿದೆ ಅನ್ನುವುದು ಆಕೆಗೆ ತಿಳಿದಿರಲಿಲ್ಲ. ಯಾವುದೋ ಪತ್ರಿಕೆಯಲ್ಲಿನ ಚಿತ್ರ ನೋಡಿ ಇದೇ ಕನಸಿನಲ್ಲಿ ಬಂದ ದೇವಿ ಎಂದು ಗುರುತಿಸಿ ತಿರುಮೀಯಚೂರಿಗೆ ಹೋಗುತ್ತಾಳೆ. ಅಲ್ಲಿ ಕಾಲ್ಗೆಜ್ಜೆಯನ್ನು ದೇವರಿಗೆ ತೊಡಿಸಿರೆಂದು ಕೇಳಿದಾಗ ಅರ್ಚಕರು ಹಾಗೆ ಹಾಕಲು ಆಗುವುದಿಲ್ಲ ಎನ್ನುತ್ತಾರೆ. ಆಕೆ ಪದೇ ಪದೇ ಕೇಳಿಕೊಂಡು ತನ್ನ ಕನಸನ್ನು ಹೇಳಿಕೊಂಡ ಮೇಲೆ ಪರಿಶೀಲಿಸಿದಾಗ ಕಾಲಿನ ಸುತ್ತ ಗೆಜ್ಜೆ ತೊಡಿಸಲು ಸಣ್ಣ ತೂತು ಇರುವುದು ಕಂಡುಬರುತ್ತದೆ. ಅಂದಿನಿಂದ ಜನರು ದೇವಿಗೆ ಗೆಜ್ಜೆ ತೊಡಿಸುವ ಹರಕೆ ಹೊತ್ತು ಬರುತ್ತಾರೆ.

ಹೀಗೆ ಭಕ್ತಿ, ನಂಬಿಕೆಗಳನ್ನು ಹೊತ್ತು ಭಕ್ತರು ಲಲಿತಾಂಬಿಕೆಯನ್ನು ಕಾಣಲು ಬರುತ್ತಾರೆ. ದೇವಿಯ ಮೂರ್ತಿ ಅಲಂಕೃತವಾಗಿ, ಸುಂದರವಾಗಿ ಸಾಕ್ಷಾತ್‌ ದೇವಿಯೇ ಕಣ್ಣ ಮುಂದೆ ಕುಳಿತಂತೆ ಕಾಣುತ್ತದೆ.

ಮೇಘನಾಥನ ಆವರಣದಲ್ಲಿ ಹೊರಭಿತ್ತಿಯಲ್ಲಿ ದಕ್ಷಿಣಾಮೂರ್ತಿ, ದುರ್ಗಾ ಮುಂತಾದ ಶಿಲ್ಪಗಳನ್ನೂ ಕಾಣಬಹುದು. ಇಲ್ಲಿನ ದುರ್ಗಾ ಎಂಟು ಕೈಗಳನ್ನು ಹೊಂದಿದ್ದಾಳೆ. ಶಂಕ ಚಕ್ರದ ಜೊತೆಗೆ ಹಲವಾರು ಆಯುಧಗಳನ್ನು ಧರಿಸಿದ್ದಾಳೆ. ಕೋಣದ ತಲೆಯ ಮೇಲೆ ನಿಂತಿರುವ ದೇವಿಯು ಶಾಂತಳಾಗಿದ್ದಾಳೆ. ಇವಳನ್ನು ಶುಕ ಬ್ರಹ್ಮ ದುರ್ಗಾ ದೇವಿ ಎನ್ನುತ್ತಾರೆ.

ಇದಲ್ಲದೆ ಈ ದೇವಾಲಯ ಮತ್ತೊಂದು ಶಿಲ್ಪಕ್ಕೆ ಪ್ರಸಿದ್ಧವಾಗಿದೆ. ಪಾರ್ವತಿಯನ್ನು ಅನುನಯಿಸುತ್ತಿರುವ ಶಿವ ಪಾರ್ವತಿಯರ ಶಿಲ್ಪ. ಇದನ್ನು ನೋಡಲೇ ನಾನು ಬೆಂಗಳೂರಿನಿಂದ ಅಲ್ಲಿಗೆ ಹೋಗಿದ್ದು. ಕಲ್ಲಿನಲ್ಲಿ ಅರಳುವ ಶಿಲ್ಪಲೋಕವೇ ಒಂದು ಸೋಜಿಗ. ಅದಕ್ಕೆ ಬೇಕಾದ ಲೆಕ್ಕಾಚಾರ, ಗಣಿತ, ಜ್ಯಾಮಿಟ್ರಿ, ಧರ್ಮ, ಪುರಾಣಗಳ ಜ್ಞಾನ, ಹೆಣ್ಣು ಗಂಡುಗಳ ಬಯೋಲಜಿ, ಅನಾಟಮಿಗಳ ಅರಿವು ಅಬ್ಬಾ ಎನಿಸುವಂತದು. ನಮ್ಮ ಹೊಯ್ಸಳರ, ಬಾದಾಮಿಯ ಚಾಲುಕ್ಯರ ದೇವಾಲಯಗಳು ಅದ್ಭುತ ಶಿಲ್ಪಲೋಕಕ್ಕೆ ಕರೆದೊಯ್ಯುವಂತಹವು. ಹೊಯ್ಸಳರ ಕುಸುರಿ ಕೆಲಸವಿಲ್ಲದ, ಚಾಲುಕ್ಯರ ಗಾತ್ರವಿಲ್ಲದ ಈ ಶಿಲ್ಪದ ವಿಶೇಷವೇನು? ಇದರ ಮುಂದೆ ಕ್ಷೇತ್ರ ಪುರಾಣೇಶ್ವರ ಎಂದು ಬರೆದಿದೆ. ಅಲ್ಲಿ ಇಬ್ಬರು ಮುಖ್ಯ ಪಾತ್ರಗಳಿವೆ. ಇನ್ನು ಇಬ್ಬರು ಪೋಷಕ ಪಾತ್ರಗಳು. ಅವನ್ನು ಗಾತ್ರದಲ್ಲಿ ಚಿಕ್ಕದಾಗಿ ತೋರಿಸಿದ್ದಾರೆ. ಹಾಗಂತ ಅವರು ನಿಜಕ್ಕೂ ಕುಳ್ಳಗೆ, ಸಣ್ಣದಾಗಿದ್ದರು ಅಂತಲ್ಲ. ನಮ್ಮ ಭಾರತೀಯ ಶಿಲ್ಪಗಳಲ್ಲಿ ಮುಖ್ಯ ಪಾತ್ರವನ್ನು ದೊಡ್ಡದಾಗಿ ತೋರಿಸಿ ಪೋಷಕ ಪಾತ್ರಗಳನ್ನು ಸಣ್ಣದಾಗಿ ಚಿತ್ರಿಸುತ್ತಾರೆ.

ಇಲ್ಲಿ ಶಿವ ಮತ್ತು ಪಾರ್ವತಿಯರು ಮುಖ್ಯ ಭೂಮಿಕೆಯಲ್ಲಿದ್ದಾರೆ. ಗಮನಿಸಿ ನೋಡಿದರೆ ಶಿವ ಒಂದು ಕೈಯನ್ನು ಮುಂದೆ ಚಾಚಿ ಅವಳನ್ನು ರಮಿಸುತ್ತಿದ್ದಾನೆ. ಅವಳು ಕೋಪದಿಂದ ಕೊಸರಿ ನಿಂತತ್ತಿದ್ದಾಳೆ.. ಅವಳ ದೇಹ, ಕಾಲು ಎರಡೂ ಶಿವನಿಂದ ದೂರ ಹೋಗಲು ಅನುವಾಗಿವೆ. ಒಂದು ಕಥೆಯ ಪ್ರಕಾರ ಸೂರ್ಯ ಭೂಮಿಗೆ ಬಂದು ಶಿವನನ್ನು ಧ್ಯಾನಿಸಿದರೂ ಅವನು ಕರುಣೆ ತೋರದಿದ್ದಾಗ ಕಿರಿಚಿದನಂತೆ. ಆಗ ಕೋಪಗೊಂಡ ಪಾರ್ವತಿಯನ್ನು ಶಿವ ಸಮಾಧಾನ ಮಾಡುತ್ತಿದ್ದಾನೆ ಅನ್ನೋದು ಆ ಕಥೆಯ ಎಳೆ.

ಇನ್ನೊಂದರ ಪ್ರಕಾರ ಶಿವ ಗಂಗೆಯನ್ನು ಧರಿಸಿದ್ದರಿಂದ ಕೋಪಗೊಂಡ ಪಾರ್ವತಿಯನ್ನು ಸಮಾಧಾನ ಮಾಡುತ್ತಿದ್ದಾನೆ. ಇದು ಸಮಂಜಸವಾದ ಕಥೆ ಎನಿಸುತ್ತದೆ. ಯಾಕೆಂದರೆ ಶಿವನ ಮತ್ತೊಂದು ಕೈ ಅವನ ಜಟೆಯನ್ನು ಹಿಡಿದಿದೆ. ಸರಿಯಾಗಿ ನೋಡಿದರೆ ಆ ಜಟೆಯಲ್ಲಿ ಕೈ ಮಗಿಯುತ್ತಿರುವ ಗಂಗೆಯಿದ್ದಾಳೆ. ಶಿವನ ಕೆಳಗೆ ಕಾಲ ಬಳಿ ಒಂದು ಸಣಕಲು ಆಕೃತಿ ಇದೆ. ಅದಕ್ಕೆ ಗಡ್ಡವಿದೆ. ಅವನು ಭಗೀರಥನಲ್ಲದೆ ಮತ್ಯಾರು ಆಗಿರಲು ಸಾಧ್ಯ? ಇದು ಗಂಗಾಧರ ಶಿವನ ಶಿಲ್ಪ. ತನ್ನ ಪೂರ್ವಿಕರಿಗೆ ಮುಕ್ತಿ ದೊರಕಿಸಲು ಭಗೀರಥ ತಪಸ್ಸು ಮಾಡಿ ದೇವಗಂಗೆಯನ್ನು ಧರೆಗಿಳಿಯಲು ಒಪ್ಪಿಸುತ್ತಾನೆ. ಆದರೆ ಅವಳ ಭೂಮಿಗಿಳಿಯುವ ರಭಸಕ್ಕೆ ಭೂಮಿ ಕೊಚ್ಚಿ ಹೋಗುವುದೆಂಬ ಭಯಕ್ಕೆ ಭಗೀರಥ ಬ್ರಹ್ಮನ ಸಲಹೆಯಂತೆ ಮತ್ತೆ ತಪಸ್ಸು ಮಾಡಿ ಗಂಗೆಯನ್ನು ಧರಿಸುವಂತೆ ಶಿವನನ್ನು ಪ್ರಾರ್ಥಿಸುತ್ತಾನೆ. ಆಗ ಶಿವ ಜಂಭದಿಂದ ವೇಗವಾಗಿ ಧುಮ್ಮಿಕ್ಕುತ್ತಿದ್ದ ಹರಿಯುತ್ತಿದ್ದ ಗಂಗೆಯನ್ನು ತನ್ನ ಜಟೆಯಲ್ಲಿ ಧರಿಸುತ್ತಾನೆ. ಈ ಕಥೆಯ ಮೂರ್ತಿರೂಪ ಈ ಗಂಗಾಧರ ಶಿಲ್ಪ. ಇದರ ವಿಶೇಷ ಆ ಕ್ರಿಯೆ ಮತ್ತು ಭಾವ ಎರಡನ್ನೂ ಕಲ್ಲಿನಲ್ಲಿ ಹೊಮ್ಮಿಸಿರುವುದು. ಶಿಲ್ಪವನ್ನು ಮುಂದಿನಿಂದ ನೋಡಿದಾಗ ಅವಳು ತುಟಿ ಕೊಂಕಿಸಿ ಕೋಪ ಪ್ರಕಟಿಸುವುದು ಕಾಣುತ್ತದೆ. ಅದೇ ಬೇರೊಂದು ಕೋನದಿಂದ ನೋಡಿದರೆ ಸುಮ್ಮಾನಕ್ಕೆ ಹುಸಿಕೋಪ ತೋರುವಂತೆ ಅವಳ ಮುಖದ ಮೇಲೆ ಒಂದು ತೆಳುನಗು ಕಾಣುತ್ತದೆ. ಶಿಲ್ಪಿಯ ಕೌಶಲ್ಯಕ್ಕೆ, ರಸಿಕತೆಗೆ ಶರಣು!

ಇದಿಷ್ಟೂ ಕೆತ್ತಿರುವುದು ಗ್ರಾನೈಟ್‌ ಕಲ್ಲಿನಿಂದ. ಶಿವನ ಜಟೆ ಮೇಲಿನ ಸೂರಿಗೆ ತಾಕಿದೆ. ಇದು ಆಕಸ್ಮಿಕ ಅನ್ನಿಸುವುದಿಲ್ಲ. ಶಿಲ್ಪಿ ಆಕಾಶದಿಂದ ಇಳಿದ ಗಂಗೆಯನ್ನು ಹಾಗೂ ಮೂರು ಲೋಕವನ್ನು ಆವರಿಸಿರುವ ಶಿವನನ್ನು ಬಿಂಬಿಸಲು ಅವನ ಜಟೆಯನ್ನು ಆಕಾಶಕ್ಕೆ ತಾಗುವ ಹಾಗೆ ಕೆತ್ತಿದ್ದಾನೆ ಅನ್ನುವುದು ನನ್ನ ಅಭಿಪ್ರಾಯ. ಬಸವಣ್ಣನವರ ಒಂದು ವಚನ ಹೀಗಿದೆ.

ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ
ಪಾತಾಳದಿಂದತ್ತತ್ತ ನಿಮ್ಮ ಶ್ರೀ ಚರಣ
ಬ್ರಹ್ಮಾಂಡಂದಿತ್ತತ್ತ ನಿಮ್ಮ ಶ್ರೀ ಮುಕುಟ
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ
ಕೂಡಲಸಂಗಮದೇವಯ್ಯ
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯ

ಇಲ್ಲಿ “ಬ್ರಹ್ಮಾಂಡಂದಿತ್ತತ್ತ ನಿಮ್ಮ ಶ್ರೀ ಮುಕುಟ” ಎನ್ನುವುದನ್ನೇ ಈ ಶಿಲ್ಪದಲ್ಲಿ ಕಾಣಬಹುದು. ಬೇರೆ ಅನೇಕ ದೇವಾಲಯಗಳಲ್ಲಿಯೂ ಗಂಗಾಧರ ಶಿವನ ಮೂರ್ತಿಯನ್ನು ಕಾಣಬಹುದು. ಚೋಳರ ಮೂರು ಮುಖ್ಯ ದೇವಾಲಯಗಳಲ್ಲಿ ಒಂದಾದ ಗಂಗೈಕೊಂಡ ಚೋಳಪುರಂನಲ್ಲೂ ಒಂದು ಗಂಗಾಧರ ಶಿಲ್ಪವಿದೆ. ಆದರೆ ತಿರುಮೀಯಚೂರಿನ ಶಿಲ್ಪದ ಕಲಾನೈಪುಣ್ಯತೆ ಬೇರೆಯವಕ್ಕಿಲ್ಲ.