Advertisement
ಕಾವಿಧಾರಿಗಳೊಂದಿಗೆ ಕಳೆದ ಕಾಲದ ಮೆಲುಕುಗಳು…

ಕಾವಿಧಾರಿಗಳೊಂದಿಗೆ ಕಳೆದ ಕಾಲದ ಮೆಲುಕುಗಳು…

ಜಿಪ್ಸಿಯಂತಿದ್ದ ಆತ ಎಲ್ಲರೊಡನೆ ಚಕ್ಕಲ್ಮಟ್ಟ್ಕೆ ಹಾಕಿಕೊಂಡು ಊಟ ಮಾಡುತ್ತಿದ್ದರು. ನನ್ನ ಕ್ಯಾಮೆರ ಲೆನ್ಸ್ ಆತನನ್ನು ನೋಡುತ್ತಿದ್ದದ್ದು ಗಮನಕ್ಕೆ ಬಂದೊಡನೆ ಒಂದು ನಗು ಒಂದು ಜ್ಞಾನ ಮುದ್ರೆಯನ್ನು ನನ್ನೆಡೆಗೆ ಬಿಸ್ಹಾಕಿದರು. ಈ ಮೇಳದ ಜಾಗದಲ್ಲಿ ಸ್ವಲ್ಪ ಹಳೇ ಹುಲಿಯಂತೆಯೇ ಕಂಡರವರು. ಕ್ಯಾಮೆರ ಮತ್ತು ಮೀಡಿಯಾವನ್ನು ಆಕರ್ಷಿಸಲು ಬೇಕಾದ ಹಾವಭಾವ ಅವರಲ್ಲಿತ್ತು ಅನ್ನಿಸಿತು.. ಮಾತು ಬೆಳೀತಾ ಬೆಳೀತಾ ಗೊತ್ತಾಯ್ತು ಆತ ಅಮೆರಿಕೆಯ ಅಲೆಮಾರಿ ಅಂತ. ಹಾಡು ನಟನೆ ಪ್ಯಾಷನ್. ಅದರಲ್ಲೇ ಜೀವನ ಕಂಡುಕೊಳ್ಳಲು ಸಾಕಷ್ಟು ಪರಿಶ್ರಮ ಹಾಕಿದರೂ ಉಹುಂ, ಯಶಸ್ಸು ಒಲ್ಲೆ ಅಂತ ಹಠ ಹಿಡಿದಿತ್ತು.
ಕಂಡಷ್ಟೂ ಪ್ರಪಂಚ ಪ್ರವಾಸ ಅಂಕಣದಲ್ಲಿ ಅಂಜಲಿ ರಾಮಣ್ಣ ಬರಹ

ಬಿಳಿ ಚರ್ಮ, ಕೋಲು ಮುಖ, ನಿಸ್ತೇಜ ಕಣ್ಣುಗಳು, ಸ್ವಲ್ಪ ದೊಡ್ಡದೇ ಎನ್ನಬಹುದಾದ ಮುಂದಿನ ಹಲ್ಲುಗಳು, ಬಡಕಲು ದೇಹ, ಆಗತಾನೆ ಹಚ್ಚಹೊಸದಾಗಿ ಮುಡಿಕೊಟ್ಟು ಹಸಿರು ನಾಳಗಳು ಎದ್ದು ಕಾಣುತ್ತಿದ್ದ ಬುರುಡೆ ಅದರ ಹಿಂದೊಂದು ಕಾಲಡಿ ಅಳತೆಯ ಗಂಟು ಕಟ್ಟಿದ ಕೆಂಚು ಕೂದಲಿನ ಜುಟ್ಟು, ಹಣೆಯಲ್ಲಿ ಊರಿ ಹಾಕಿದ್ದ ಮೂರು ನಾಮಗಳು, ಮೈಯಿಡೀ ಸುತ್ತಿದ್ದ ಸ್ಯಾಟಿನ್ ಕಾವಿ ಧೋತಿ ಮತ್ತು ಮೇಲುದಿ, ಕಾಲಲ್ಲಿ ಬಿಳಿ ಬಣ್ಣದ ಕಾಟನ್ ಚೀಲ. ಕತ್ತಲ್ಲಿ ರುದ್ರಾಕ್ಷಿ ಮಾಲೆ. ಎರಡು ದಿನಗಳಿಂದ ನನ್ನಲ್ಲಿ ಕುತೂಹಲ ಮೂಡಿಸಿದ್ದ ಯುವ ಆಕೃತಿಯ ಆತ ತಮ್ಮ ಕೋಣೆಯಿಂದ ಹೊರಬಂದರು. ಬೆಳಿಗ್ಗೆ ಹನ್ನೊಂದರ ಸಮಯ. “ಬನ್ನಿ ಕುಳಿತುಕೊಳ್ಳಿ. ಆಯ್ತಾ ಪೂಜೆ, ಭಜನೆ ಎಲ್ಲಾ” ಅಂದೆ. “ಇಲ್ಲ ನಾ ಈಗ ತಾನೆ ಎದ್ದೆ. ನೆನ್ನೆ ಸ್ವಲ್ಪ ಚಳಿ ಹೆಚ್ಚಿತ್ತು. ಅದಕ್ಕೆ ಮಲಗಿಬಿಟ್ಟಿದ್ದೆ” ಅಂದರು. ಸ್ವಲ್ಪ ಉಗ್ಗು ಉಗ್ಗು ಮಾತು. ಬಂದು ಪಕ್ಕದಲ್ಲಿ ಕುಳಿತರು. ಕಾವಿ ಸನ್ಯಾಸಿ ಮತ್ತು ಜೀನ್ಸ್‌ಧಾರಿ ನಡುವಿನ ಮಾತು ಮುಂದೆ ಹೀಗಿತ್ತು.

ಲ್ಯೂಥೇನಿಯಾ ದೇಶದ ಅಮ್ಮ ಮತ್ತು ಯೂರೋಪಿಯನ್ ಅಪ್ಪನಿಗೆ ಹುಟ್ಟಿದ ಈತ ಹುಟ್ಟು ಕ್ರಿಶ್ಚಿಯನ್ ಧರ್ಮದವ. ಆದರೆ ಈಗ ಸ್ವಾಮಿ ಜಯರಾಮ ದಾಸ್. ಇರುವುದು ನ್ಯೂಯಾರ್ಕ್‌ನಲ್ಲಿ. ಅಲ್ಲಿನ ಕಾತ್ಯಾಯಿನಿ ಮಹಾಪೀಠದ ಅಧಿಪತಿ. ಇಂಗ್ಲಿಷ್ ಮತ್ತು ಲ್ಯುಥುವೇನಿಯನ್ ಭಾಷೆ ಚೆನ್ನಾಗಿ ಬರುತ್ತೆ. ಸಂಸ್ಕೃತ ಮತ್ತು ಹಿಂದಿ ಅಲ್ಪ ಸ್ವಲ್ಪ ಅರ್ಥವಾಗುತ್ತೆ. ಹನುಮಾನ್ ಚಾಲೀಸ ಪೂರ್ತಿಯಾಗಿ ಬರುತ್ತೆ. ನಾ ಕೇಳಿದೆ “ಯಾವಾಗ ಬಂದಿರಿ ಹಿಂದು ಧರ್ಮಕ್ಕೆ?” ಆತ ಹೇಳಿದರು “ನನಗೆ 7-8 ವರ್ಷವಿದ್ದಾಗ ನನ್ನ ಅಮ್ಮ ಆಗ್ಲೇನ್ ನನ್ನನ್ನು ಇಸ್ಕಾನ್ ಮಂದಿರಕ್ಕೆ ಕರೆದುಕೊಂಡು ಹೋಗುತ್ತಿದ್ದಳು. ಆಗ್ಲಿಂದ ನನಗೆ ಭಾರತೀಯರ ಬಗ್ಗೆ ಇಲ್ಲಿನ ಆಧ್ಯಾತ್ಮದ ಬಗ್ಗೆ ಒಲವು ಬಂದಿತು.” ಕೂಡಲೇ ನನ್ನದೊಂದು ಅಸಂಬದ್ಧ ಪ್ರಶ್ನೆ “ನಿಮ್ಮ ಅಪ್ಪ ಅಮ್ಮ ಒಟ್ಟಿಗೆ ಇದ್ದಾರೆಯೇ?” ಆತ ಹೇಳಿದ್ದು “ಇಲ್ಲ ನನ್ನ ಅಪ್ಪ ಅವರ ಗರ್ಲ್‌ಫ್ರೆಂಡ್ ಜೊತೆ ಇದ್ದಾರೆ. ಆದರೆ ಎಲ್ಲಿ ಅಂತ ಗೊತ್ತಿಲ್ಲ. ನನ್ನ ಅಮ್ಮ ಬೇರೆ ಮದುವೆಯಾಗಿದ್ದಾಳೆ. ಅಮೇರಿಕೆಯಲ್ಲೇ ಇದ್ದಾಳೆ” ನಾ ಕೇಳುತ್ತಾ ಹೋದೆ ಇನ್ನೂ ಏನೇನೋ. ಆತ ಹೇಳುತ್ತಾ ಹೋದರು. ಬೇರೆ ಧರ್ಮದವರಿಗೆ ದೇವರ ಬಗ್ಗೆ ಸರಿಯಾಗಿ ಗೊತ್ತಿಲ್ಲ. ಹಿಂದುಗಳಿಗೆ ಮಾತ್ರ ಚೆನ್ನಾಗಿ ಗೊತ್ತು. ಆದರೆ ಭಾರತೀಯ ಹಿಂದುಗಳು ಧರ್ಮವನ್ನು ಸೀರಿಯಸ್ ಆಗಿ ತೊಗೊಳಲ್ಲ. ವಿದೇಶಿಯರು ಹಾಗಲ್ಲ. ದೇವರು ಒಬ್ಬನೇ ಆದರೂ ಹಿಂದು ಧರ್ಮದ ದೇವರುಗಳು ಪವರ್‌ಫುಲ್. ನಾ ಮಧ್ಯೆ ಮೂಗು ತೂರಿಸಿದೆ “ನೀವು ರಾಮಾಯಣ, ಮಹಾಭಾರತ, ಭಗವದ್ಗೀತೆಗಳನ್ನೆಲ್ಲಾ ಓದಿದ್ದೀರಾ?” “ಇಲ್ಲಾ, ಚಿಕ್ಕ ಚಿಕ್ಕ ಕಥೆ ಕೇಳಿದ್ದೇನೆ. ಅದನ್ನೇ ಪ್ರವಚನ ಮಾಡುತ್ತೇನೆ. ಓದಬೇಕು ಅನ್ನೋ ಆಸೆ ಇದೆ.. but Ganesha is so lovely” ಅಂತ ಆತ ಹೇಳಿದರು.

“ನಿಮ್ಮೂರಲ್ಲಿ ಹೀಗೆ ನೀವು ಜುಟ್ಟು ಬಿಟ್ಟುಕೊಂಡು ಓಡಾಡಿದರೆ ಜನ ಹೇಗೆ ನೋಡ್ತಾರೆ” ಅವರೆಂದರು “ಮೊದಲು ವಿಚಿತ್ರವಾಗಿ ನೋಡ್ತಾರೆ. ಆದರೆ ನಾ ಹೇಳ್ತೀನಿ, ನಾ ದೀಕ್ಷೆ ತೆಗೆದುಕೊಂಡಿದ್ದಕ್ಕೆ ಹೀಗೆ ಇರುವುದು ಅಂತ. ಈಗ ನಾನು ಕೂಡ ಗುರು”. ಅಕ್ಕ ಪಕ್ಕ ಇಣುಕಿ ನೋಡಿದೆ ಇನ್ನೂ ಎಷ್ಟು ಗುರುಗಳಿದ್ದಾರೆ ಅಂತ. “ಇದು ಭಾರತಕ್ಕೆ ನಿಮ್ಮ ಎಷ್ಟನೆಯ ಭೇಟಿ? ನೀವು ಈ ಡೇರೆಯ ಸ್ವಾಮಿಜಿಗಳ ಅನುಯಾಯಿಗಳೇನು?” ಕೇಳಿದೆ. “ಓಹ್, ನಾ ಭಾರತಕ್ಕೆ ಮೊನ್ನೆ ರಾತ್ರಿಯಷ್ಟೇ ಬಂದೆ. ಕುಂಭ ಮೇಳದ ಬಗ್ಗೆ ಇಂಟರ್ನೆಟ್‌ನಲ್ಲಿ ನೋಡಿದೆ. ಬರಬೇಕು ಅನಿಸಿತು ಬಂದೆ. ಸುಮ್ಮನೆ ಹೋಗುತ್ತಿದ್ದಾಗ ಈ ಡೇರೆಗೆ ಬಂದೆ. ತುಂಬಾ ಆತ್ಮೀಯವಾಗಿ ಸ್ವಾಗತಿಸಿದರು. ನೆನ್ನೆ ಈ ಸ್ವಾಮಿಜಿಯವರು ದೀಕ್ಷೆ ಕೊಟ್ಟು ಈ ಬಟ್ಟೆ ಕೊಟ್ಟರು. ಸಂಜೆ ನಾ ಇಲ್ಲಿ ಪ್ರವಚನವನ್ನೂ ಕೊಟ್ಟೆ.” ಅವರ ಮುಖ ಸಂತೃಪ್ತಿಯಿಂದ ಬೀಗುತ್ತಿತ್ತು. ಹಾಂ, ಆತನ ವಯಸ್ಸು ಹೇಳದಿದ್ದರೆ ಈ ಭೇಟಿ ಕಥೆಗೆ ಮೆರುಗು ಬಾರದು. ನಾ ಕೇಳಿದೆ “ನಿಮ್ಮ ವಯಸ್ಸೆಷ್ಟು?” ಅವರು ಹೇಳಿದರು “I am Twenty”. ಇಂಥ ಆಸಕ್ತಿದಾಯಕ ವಿದೇಶಿ ಗುರುಗಳು ನೂರಾರು ಸಾವಿರಾರು ಸಂಖ್ಯೆಯಲ್ಲಿ, ಕುಂಭಮೇಳದಲ್ಲಿ.

ಮತ್ತೊಂದೆಡೆ ಜಿಪ್ಸಿಯಂತಿದ್ದ ಆತ ಎಲ್ಲರೊಡನೆ ಚಕ್ಕಲ್ಮಟ್ಟ್ಕೆ ಹಾಕಿಕೊಂಡು ಊಟ ಮಾಡುತ್ತಿದ್ದರು. ನನ್ನ ಕ್ಯಾಮೆರ ಲೆನ್ಸ್ ಆತನನ್ನು ನೋಡುತ್ತಿದ್ದದ್ದು ಗಮನಕ್ಕೆ ಬಂದೊಡನೆ ಒಂದು ನಗು ಒಂದು ಜ್ಞಾನ ಮುದ್ರೆಯನ್ನು ನನ್ನೆಡೆಗೆ ಬಿಸ್ಹಾಕಿದರು. ಈ ಮೇಳದ ಜಾಗದಲ್ಲಿ ಸ್ವಲ್ಪ ಹಳೇ ಹುಲಿಯಂತೆಯೇ ಕಂಡರವರು. ಕ್ಯಾಮೆರ ಮತ್ತು ಮೀಡಿಯಾವನ್ನು ಆಕರ್ಷಿಸಲು ಬೇಕಾದ ಹಾವಭಾವ ಅವರಲ್ಲಿತ್ತು ಅನ್ನಿಸಿತು.. ಮಾತು ಬೆಳೀತಾ ಬೆಳೀತಾ ಗೊತ್ತಾಯ್ತು ಆತ ಅಮೆರಿಕೆಯ ಅಲೆಮಾರಿ ಅಂತ. ಹಾಡು ನಟನೆ ಪ್ಯಾಷನ್. ಅದರಲ್ಲೇ ಜೀವನ ಕಂಡುಕೊಳ್ಳಲು ಸಾಕಷ್ಟು ಪರಿಶ್ರಮ ಹಾಕಿದರೂ ಉಹುಂ, ಯಶಸ್ಸು ಒಲ್ಲೆ ಅಂತ ಹಠ ಹಿಡಿದಿತ್ತು. ಬೇಸರದ ಛಾಯೆ ಗಾಢವಾಗುತ್ತಾ ಹೋಗಿತ್ತು. ಮುಂದೇನು ಅನ್ನುವ ಪ್ರಶ್ನೆ ಉತ್ತರದ ತಲಾಷಿಗೂ ಬೇಡವಾಗಿತ್ತು. ಹೀಗಿರುವ ಒಂದಾನೊಂದು ದಿನ ಈ ಟಿಮ್ಮಲೋನೀ ಅನ್ನುವ ನಲವತ್ತರ ಆಸುಪಾಸಿನ ಮನುಷ್ಯ ಬಹುಮಹಡಿ ಕಟ್ಟಡದ ತುತ್ತತುದಿಗೇರಿ ನಿಂತ. ನಿರಾಶೆಯ ಕಾರ್ಮೋಡಗಳನ್ನು ಸೀಳಿ ಬಂತಂತೆ ಒಂದು ಅಶರೀರವಾಣಿ, ಹೇಳುತ್ತಾ “ಭಾರತದಲ್ಲಿದೆ ನಿನ್ನ ಭವಿಷ್ಯ”. ಕೈಯಲ್ಲಿ ಕಾಸಿಲ್ಲ. ಆದರೂ ಹಾಗೂ ಹೀಗೂ ಈತ ಸೇರಿಕೊಂಡಿದ್ದು ಮುಂಬೈ ಸಮೀಪದ ಗಣೇಶಪುರಿಯನ್ನು… ಈಗೊಂದಿಷ್ಟು ವರ್ಷಗಳ ಹಿಂದೆ. ಆತ ಈ ಕಥೆಯನ್ನು ಥೇಟ್ ದೊಡ್ಡ ದೊಡ್ಡ ಹೀರೋಯಿನ್‌ಗಳಿಗೆ ಸಿನೆಮಾ ಕಥೆಯನ್ನು ಓದಿಹೇಳುತ್ತಾರಲ್ಲಾ ಅದೇ ಶೈಲಿಯಲ್ಲಿ ವಿತ್ ಆ್ಯಕ್ಷನ್ ಕಟ್‌ಗಳ ಮೂಲಕವೇ ಹೇಳಿದರು. ಇದನ್ನೇ ಇದೇ ಮೇಳದಲ್ಲಿ ಇನ್ನೆಷ್ಟು ಕ್ಯಾಮೆರಾಗಳು ಸೆರೆಹಿಡಿದಿರುತ್ತ್ವೆ ಅಂತ ನನಗನ್ನಿಸಿತು. ಆ ಹಳ್ಳಿಯಲ್ಲಿ ಮಕ್ಕಳ ವಿದ್ಯಾಭ್ಯಾಸ ಮತ್ತು ನೈರ್ಮಲ್ಯೀಕರಣದ ಬಗ್ಗೆ ಜಾಗೃತಿ ಮೂಡಿಸುತ್ತಾ ಜೀವನ ನಡೆಸುತ್ತಿದ್ದಾರಂತೆ ಈತ. ಆತ ಝಗಮಗ ದೀಪಗಳಿಂದ ನಕ್ಷತ್ರಗಳನ್ನು ಮರೆಮಾಡಿಕೊಂಡು ನಿಂತಿದ್ದ ರಾತ್ರಿಯ ಆಕಾಶವನ್ನು ನೋಡುತ್ತಾ, ಗಡ್ಡ ಕೆರೆದುಕೊಳುತ್ತಾ “ನನ್ನ ಗುರುಗಳಾದ ಪರಮಹಂಸ ಮುಕ್ತಿಕಾನಂದ ಭಗವಾನ್ ಅವರು ಹೇಳಿದ್ದಾರೆ. ನಾನು ಒಮ್ಮೆ ಅಮೇರಿಕೆಗೆ ಹೋಗಿಯೇ ಬರಬೇಕಂತೆ. ಜನ್ಮಭೂಮಿಯ ಋಣ ತೀರಿಸಿದಾಗ ಮಾತ್ರ ನೆಮ್ಮದಿ ಸಿಗುವುದಂತೆ. ಅದಕ್ಕೆ ಅಲ್ಲಿ ಹೋಗಿ ಸ್ವಲ್ಪ ಸೇವೆ ಮಾಡಬೇಕಿದೆ. ಆದರೆ ದುಡ್ಡು ಕೂಡಿಡಬೇಕಿದೆ” ಎಂದು ಹೇಳಿ ಒಂದೊಳ್ಳೆ ಪ್ರೌಢ ನಗೆ ನಕ್ಕರು.

ಕಾರಣವಿಲ್ಲದೆಯೇ ಅರಳಿನಿಲ್ಲೋ ಈ ಮನಸ್ಸಿಗೆ ಮಾಂತ್ರಿಕನ ನೆನಪಾಯ್ತು. ಆ ದಿನ ಏರೋಪ್ಲೇನ್ ಹತ್ತಿ, ಗಗನಸಖಿಯ ವೆಲ್ಕಂ ಉಲಿತಕ್ಕೆ ಕೆನ್ನೆ ಹಿರಿದು ಮಾಡಿ ಒಳಗಡೆ ಇಟ್ಟೆ. ಅರೆ, ಕಿವಿಯಿಂದ ಕಿವಿಯವರೆಗೂ ನಗು ಮೆತ್ತಿಕೊಳ್ಳೋದೇ?! ಮೊದಲನೆ ಸೀಟಿನಲ್ಲೇ ಆತ ಒಂದು ಮಾಂತ್ರಿಕ ನಗು ಬೀರುತ್ತಾ ಕೂತಿದ್ದರು. ಅವರ ಪಕ್ಕದ ಸೀಟು ನನಗೆ ಹಂಚಿಕೆಯಾಗಿತ್ತು. ಆತ ಸರಾಗವಾಗಿ, ಸುಂದರವಾಗಿ, ನಿರಾಳವಾಗಿ, ಸಹಜವಾಗಿ ನಗುತ್ತಾ “ಬನ್ನಿ ಕುಳಿತುಕೊಳ್ಳಿ” ಅಂದರು. ನಾ ಹೆಚ್ಚು ಖುಷಿಯಿಂದ ತುಸು ಸಂಕೋಚದಿಂದ ಕುಳಿತೆ. ಹೂಂ, ಪೈಲೆಟ್ ಇಬ್ಬರು ಸೂಚನೆಯಿತ್ತರು ನಾವು ಹಾರೋಕ್ಕೆ ತಯಾರು ಅಂತ. ಕಿಟಕಿ ನೋಡುತ್ತಾ ಕೂತೆ. ಆತ ಕಣ್ಣು ಮುಚ್ಚಿ ಅದೇ ನಗುವಿನೊಂದಿಗೆ ಧ್ಯಾನಸ್ಥರಾದಂತೆ ಕಂಡರು. ಅಲಹಾಬಾದಿನಲ್ಲಿ ವಿಮಾನ ಇಳಿಯುವಾಗ ಪಾಪ ಪೈಲೆಟ್‌ಗೆ ಕೊಂಚ ನಿಯಂತ್ರಣ ತಪ್ಪಿತ್ತು. ಹಾಗಾಗಿ ಬೆನ್ನುಮೂಳೆ ಮೇಲೆ ಭಾರಬೀರುವಷ್ಟು ಧಡ್ ಧಡ್ ಅನ್ನುವ ಶಬ್ಧದೊಂದಿಗೆ, ಸಹ ಪ್ರಯಾಣಿಕರ ಹಾಕಾರ ಹೂಕಾರಗಳೊಂದಿಗೆ ಭೂಮಿ ಸ್ಪರ್ಷವಾಯ್ತು. ಆದರೆ ಆತ ಮಾತ್ರ ಮುಚ್ಚಿದ ಕಣ್ಣಿನ ತಿಳಿನಗೆಯೊಂದಿಗೇ ಇದ್ದರು. ಕಣ್ಣು ಬಿಟ್ಟೊಡನೆ ನನ್ನ ಪ್ರವರ ಕೇಳಿದರು ಕನ್ನಡದಲ್ಲಿ. ಎಲ್ಲಾ ಹೇಳಿದೆ. “ಬನ್ನಿ ನಮ್ಮೊಡನೆಯೇ ಉಳಿದುಕೊಳ್ಳಿ” ಅಂತ ಹೇಳಿ ಅವರ ಸಹಾಯಕರಿಗೆ ಸೂಚನೆಯೂ ಇತ್ತರು. ಈಗ ನಾವಿಬ್ಬರು ನಮ್ಮ ನಮ್ಮ ದಾರಿ ಹಿಡಿದೆವು.

ಹೂಂ, ಒಂದೆರಡು ದಿನಗಳ ನಂತರ ಯಾಕೋ ಮಾಂತ್ರಿಕನಂತೆ ಕಂಡ ಅವರೊಡನೆಯೇ ಇರೋಣ ಅಂತ ಕನ್ನಡದ ಮನಸ್ಸು ಮುಲುಗುಟ್ಟಿತು. ಅವರ ನೆಲೆಯನ್ನು ಹುಡುಕುತ್ತಾ ಹೊರಟೆ. ಸಿಕ್ಕಿತು. ಆಬ್ಬಬ್ಬಾ, ಒಣಗಿದ ನದಿಯ ಮರಳಮೇಲೆ ಎಂಥಾ ಅದ್ಭುತ ನಗರವದು. ಇಷ್ಟೆತ್ತರದ ಕಮಾನು, ಅಷ್ಟೆತ್ತರದ ಕಂಭಗಳು. ಒಂದಷ್ಟು ಮೇಳಗಳಲ್ಲಿ ಇವರ ಡೇರೆಗೆ ಉತ್ತಮ ಕ್ಯಾಂಪ್ ಅನ್ನುವ ಪ್ರಶಸ್ತಿಯೂ ಬಂದಿದೆ ಅಂತ ನಂತರ ತಿಳೀತು. ಅಲ್ಲಿದ್ದ ಭಕ್ತರ ಹಾವಭಾವಗಳು, ದಿರಿಸುಗಳು ಎಲ್ಲವೂ ಬೇರೆಲ್ಲೆಡೆಗಿಂತ ವಿಭಿನ್ನ. ಮೆಟ್ರೋ ಸಿಟಿಯ ಛಾಪು ಎದ್ದುಕಾಣುತ್ತಿತ್ತು. ದೊಡ್ಡ ದೊಡ್ಡ ಕಾರುಗಳು ತಂಗಿದ್ದವು. ವ್ಯವಸ್ಥೆಯಂತೂ ಒಂದಿನಿತೂ ಕೊಂಕಿಲ್ಲದ್ದು. ಬೆಂಗಳೂರಿನಂಥ ನಗರದಲ್ಲಿ ತಂದೆ ತಾಯಿ, ಒಂದು ಮತ್ತೊಂದರ್ಧ ಮಕ್ಕಳು ಇರುವ ನ್ಯೂಕ್ಲಿಯರ್ ಕುಟುಂಬದ ಒಂದು ದಿನದ ಜೀವನವೇ ಎಷ್ಟೊಂದು ಅಸ್ತವ್ಯಸ್ತ. ಆದರಿಲ್ಲಿ ಲಕ್ಷಾಂತರ ಜನರಿದ್ದರೂ ಎಲ್ಲವೂ ಭಾರೀ ಸಿಸ್ಟಮ್ಯಾಟಿಕ್! ಸಹಾಯಕರು ನನ್ನನ್ನು ಒಳಕರೆದುಕೊಂಡು ಹೋದರು. ಆತ ಅಲ್ಲಿದ್ದರು. ಅವರ ಪಕ್ಕದ ಕೋಣೆಯಲ್ಲಿಯೇ ನಾ ತಂಗಿದ್ದು. ಮತ್ತೆ ಆತ ಕನ್ನಡದಲ್ಲಿ “ಸಂಕೋಚ ಪಡಬೇಡಿ. ಆರಾಮವಾಗಿರಿ” ಅಂದರು. ಒಂದು ರಾಶಿ ಸಹಾಯಕರ ಅತೀ ಗೌರವಯುತ ನೋಟ ನನ್ನಮೇಲಾಗ. ನನಗೋ ಮುಜುಗರ.

ಮುಂದಿನೆರಡು ದಿನ ದ್ವಾರಕಾನಗರಿಯಲ್ಲಿ ಆ ನವಿಲುಗರಿಧಾರಿಯೊಡನೆ ಇದ್ದಂಥ ಅನುಭವ. ನದಿಗಳ ಸ್ವಚ್ಛತೆ ಕಾಪಾಡಿಕೊಳ್ಳಬೇಕಾದ ಮಹತ್ತ್ವ, ಸಾವಯವ ಕೃಷಿಯ ಅನಿವಾರ್ಯತೆ, ಆಧ್ಯಾತ್ಮದ ಮೂಲಕ ಯುವಕರನ್ನು ಸಬಲೀಕರಣಗೊಳಿಸುವುದು ಇವು ಅತ್ಯಂತ ತುರ್ತಾಗಿ ಆಗಬೇಕಾದ್ದು ಅಂತ ಆತ ಪ್ರಾತ್ಯಕ್ಷಿಕೆಗಳ ಮೂಲಕ ಮನವರಿಕೆ ಮಾಡಿಕೊಡುತ್ತಿದ್ದರು. ಶೃಂಗೇರಿ ಶ್ರೀಗಳು, ಸರಸ್ವತೀಪೀಠದ ಶಂಕರಾಚಾರ್ಯರಿಂದಾದಿಯಾಗಿ, ಕೈಯಲ್ಲಿ ನಲುಗಿದ ಗುಲಾಬಿ ಹಿಡಿದ ಕಟ್ಟಕಡೆಯ ಹೆಣ್ಣುಮಗಳವರೆಗೂ ಅವರ ದರ್ಶನ ಪಡೆಯಲು ಬರುತ್ತಿದ್ದರು. ಎಲ್ಲರಿಗೂ ಸಮಾನ ಆತಿಥ್ಯ. ಹೌದು, ನಾನಂತೂ ಕನ್ನಡದ, ನಮ್ಮೂರಿನ ಶ್ರೀ ಶ್ರೀ ಶ್ರೀ ರವಿಶಂಕರ್ ಗುರೂಜಿಯನ್ನು ಅಲ್ಲಿ ಕಂಡು ಆಧ್ಯಾತ್ಮಿಕವಾಗಿ ಉತ್ತೇಜಿತಗೊಂಡಿದ್ದೆ. ಏನೆಲ್ಲಾ ಆಲೋಚನೆಗಳೊಂದಿಗೆ, ಬಿರುಬಿಸಿಲಿನಲ್ಲಿ ಬೇಯುತ್ತಾ, ಕಾಲನೊಂದಿಗೆ ಹೆಜ್ಜೆ ಸೇರಿಸುತ್ತಿದ್ದಾಗ, ‘ಅದ್ಭುತಂ ರೋಮ ಹರ್ಷಣಂ’ ಎನ್ನುವಂತೆ ನನ್ನೆದುರು ಧುತ್ತೆಂದು ನಿಂತದ್ದು ನಿಗಿ ನಿಗಿ ನಾಗಾಬಾಬ! ಮುಂದೆರಡು ದಿನ ಜೋಗಿಯ ಜೊತೆ ಜೋಗತಿಯ ಜೀವನಗಾಥೆ.

About The Author

ಅಂಜಲಿ ರಾಮಣ್ಣ

ಅಂಜಲಿ ರಾಮಣ್ಣ  ಲೇಖಕಿ, ಕವಯಿತ್ರಿ, ಅಂಕಣಗಾರ್ತಿ, ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತೆ.  ‘ರಶೀತಿಗಳು - ಮನಸ್ಸು ಕೇಳಿ ಪಡೆದದ್ದು’, 'ಜೀನ್ಸ್ ಟಾಕ್' ಇವರ ಲಲಿತ ಪ್ರಬಂಧಗಳ ಸಂಕಲನ.

1 Comment

  1. H.R.Laxmivenkatesh

    ರವಿಶಂಕರ್ ಗುರೂಜಿಗಳ ಜತೆ ಮತ್ತಿತರ ವಿದೇಶಿ ಅಪ್ಪಟ ಬಿಳಿ ಸನ್ಯಾಸಿಗಳ ಹತ್ತಿರ ಮಾತುಕತೆ ಚೆನ್ನಾಗಿ ಕಾಣಿಸುತ್ತದೆ. ಅಂಜಲಿ ರಾಮಣ್ಣ ನವರ ಬರವಣಿಗೆಯ ಶೈಲಿ ಯಾರನ್ನಾದರೂ ಚೆನ್ನಾಗಿ ಓದಿಸಿಕೊಂಡು ಹೋಗುವಲ್ಲಿ ಸಾಧನೆಯನ್ನು ಕಂಡಿದೆ.
    -ಎಚ್ಚಾರೆಲ್
    (ಮುಂಬಯಿನಲ್ಲಿರುವ ವಿಕಿಪೀಡಿಯ ಸಂಪಾದಕ, ಟ್ವಿಟರ್, ಇನ್ಸ್ಟಾಗ್ರಾಮ್, ಸಂಪದ. ಕಾಮ್, ನಸುಕು.ಕಾಮ್ ನಲ್ಲಿ ಆಗಾಗ ಬರೆಯುವ ಪ್ರಭೃತಿ.

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ