ಚಿಟ್ಟೆ ಮತ್ತು ಕತ್ತರಿ
ತುಕ್ಕು ಹಿಡಿದು ಹುಡಿ ಹುಡಿಯಾಗುತ್ತಿರುವ ಆತ್ಮದೊಂದಿಗೆ ಅಪರಿಚಿತ ದೇಹವೊಂದು
ಅಂಟಿಕೊಂಡಿದೆ
ಅದನ್ನು
ನಾನೇ ಎಂದು ಇವರೆಲ್ಲಾ ನಂಬುತ್ತಾರೆ
ನಂಬಿಸುತ್ತಾರೆ.
ಸಾವಿಗೆ ಸಾವಿರ ಸಾಧ್ಯತೆಗಳ ಘಳಿ ಘಳಿಗೆಯೂ ಆವಿಷ್ಕರಿಸುವ ಈ ತಲೆಬುರುಡೆಯೊಳಗಿನ ಅರೆ ಸತ್ತ ಘಾತುಕ ಒದ್ದೊದ್ದೆ ಹಕ್ಕಿಗೆ ಹಸಿದೋ ಬೆಂದೋ ಕುಣಿಕೆಗೊಡ್ಡಿಯೋ ತೇಲಿಯೋ ಮುಳುಗಿಯೋ ಹಾರಿಯೋ..
ಸಾವೆಂಬುದನ್ನು ಕಾಮನಬಿಲ್ಲಿನಂತೆ ಕೈತುಂಬಾ ಹಿಡಿದು ಅನುಭವಿಸುವ ಧಾವಂತ
ಗುಬ್ಬಿಯ ಬಿಡುಗಣ್ಣಿನಲಿ ವಿಸ್ತಾರವಾಗುವ, ಬಂಗಾರದ ಮೀನಿನ ತುಟಿಗಂಟಿದ
ದನಿಯ ಸ್ಪರ್ಶಿಸುವ
ಮೋಡಗಳ ನಿಟ್ಟುಸಿರ ಬಣ್ಣ ಕಲಿಯುವ
ಕನಸು ಕಾಣುವ ನನಗೆ
ಅಂಗಳದ ಹಸಿರು ಹುಲ್ಲಿನ ಕಪಾಳಗಳಲ್ಲಿ ಜಿನುಗುವ ಬೆವರ ಹನಿಯೂ ಕಂಗೆಡಿಸುತ್ತದೆ
ಪೂರ್ಣಗಳ ಬೆನ್ನು ಹತ್ತುವ ನನ್ನ ಹುಚ್ಚಿನ ಬೆನ್ನಹುರಿಯಿಂದ
ಹೆಸರಿಲ್ಲದ ಭಯವೊಂದನ್ನು ಎಬ್ಬಿಸಿ ತಂದು ಕೋರೈಸುತ್ತವೆ ಮಾಂಸ ಖಂಡಗಳೊಳಗಿನ
ಕೋಶ ಕೋಶಗಳನ್ನು
ಬಿರಬಿರನೆ ಕೈ ಸುತ್ತಿಸುತ್ತಲೇ ಬುರುಗೇಳುವ
ಗುಲಾಬಿ ಬಣ್ಣದ
ಹತ್ತಿ ಮಿಠಾಯಿಯಂತೆ
ಒಂದು ಚಮಚೆಯಷ್ಟಿರುವ
ನನ್ನನ್ನು ಮರುಸೃಷ್ಟಿಸಿ ವಿಸ್ತರಿಸುವ ಮೋಡಿಯಂತೆ
ಕಂಡ ಜೋಗಿ
ಜಿಲೆಟ್ ಬೇಡು ಮತ್ತು ನಿದಿರೆ ಗೋಲಿಗಳು
ಮಾಡಿದ
ವಂಚನೆಯನ್ನು ತಿದ್ದಿಕೊಡುವ
ದೇವನಂತೆ
ತಿಳಿ ಗುಲಾಬಿ ಚಿಟ್ಟೆಗಳ ತಿನ್ನಿಸಿ ನೀಲಿ ನೀಲಿ ಕತ್ತರಿಗಳ ನುಂಗಿಸುತ್ತಲೇ
ಪ್ರೇಮದ ಅಡಕತ್ತರಿಗೆ ನನ್ನ ಎಳೆರೆಕ್ಕೆಗಳ ಸತ್ಯ ಕುಡಿಸಿ ಮಣ್ಣು ಮಾಡಿಬಿಟ್ಟ
ಎಡ ಪಾರ್ಶ್ವದ ಮೂಲೆಯೊಂದರಲ್ಲಿ ಕಾಡ ನಡುವಿನ ಬಿಸಿನೀರ ಬುಗ್ಗೆಯಂತೆ
ಸಾವಿರ ವರ್ಷಗಳಷ್ಟು ಹಳೆಯ ಕತ್ತಲು ಉಕ್ಕುತ್ತಿದೆ
ಒಳಗೊಳಗೆ
ಬುಗ್ಗೆಯಂತೆ
ಈ ಗಾಜುಗಣ್ಣನ್ನಷ್ಟೇ
ಉಳಿಸಿ ಮತ್ತೆಲ್ಲವ ಅಳಿಸುತ್ತಿರುವ ನೀರುಗುದುರೆ ತನ್ನ ಕಾರ್ಯಮುಗಿಸಿ
ಮುರಿದು ಬಿದ್ದಂತಿದೆ
ಈ ಮರಗಟ್ಟಿರುವ ಬುರುಡೆಯ ಸುತ್ತಲೂ
ಜ್ವರವೇರಿದ ಜೇನುಹುಳುಗಳಂತೆ
ಮೇಣವಾಗಿ ಸೋರಿ ಅಂಟುತ್ತಿರುವ ನನ್ನ ಮೆಡುಸಾಳ ಕೆರಳುವ
ಹೆರಳಿನಂಥ ಹೆರಳಿನಲ್ಲಿ
ಲಕ್ಷ ಲಕ್ಷ ಕವಿತೆಗಳ ನೀಳ ನೀಳ ಕಾಲುಗಳು ಸಿಕ್ಕಿ ಚೀರಾಡುತ್ತಿವೆ ಅನವರತ
ಆ….. ದೂ….ರದಲ್ಲಿದ್ದು
ಹಾಕಿದ ಲೆಕ್ಕಾಚಾರಗಳೆಲ್ಲವೂ ತಲೆಕೆಳಗಾಗಿದೆ ನಕ್ಷತ್ರದ ಉರಿಗಣ್ಣಿನ ನಿಜವ ಬೇಕಂತಲೇ ತಿಳಿಯಬಯಸದ
ನಾನು
ಬುದ್ಧಿಯನ್ನು ಮತ್ತೆ ಮತ್ತೆ ಸೋಲಿಸಿ
ಹುಟ್ಟು ಕವಿಯಂತೆ
ಸುಖಿಸುತ್ತಿದ್ದೇನೆ.
ಸಾವಿನಂಥ ಬಿಳೀ ಬಿಳೀ ಮಂಚ,
ಹಾಸಿಗೆ, ದಿಂಬು, ಗೋಡೆಗಳ
ಸಾಲಿನಲ್ಲಿ ನಡು ನಡುವೆ ನಿಂತ ನಿರ್ಭಾವ ಪೇಲವ
ಪರದೆಗಳಂತ
ಕಂಗೆಟ್ಟ ಮೈ ಚರ್ಮದಿಂದ
ಮೂಳೆಗಳು ನಿತ್ರಾಣ ಕಣ್ಣಿನಲಿ
ಬಾಗೀ ಬಾಗೀ ತಮ್ಮ ಆಹಾರಕ್ಕಾಗಿ ಹಾಹಾಕರಿಸುತ್ತಿವೆ
ಅಷ್ಟಕ್ಕು ಇಷ್ಟು ದಿನ ನಾನದರೂ ಏನು ತಿಂದೆ?
ವಂಚನೆ ವಂಚನೆ
ವಂಚನೆಗಳನ್ನಷ್ಟೇ
ನೆನಪುಗಳ ರೋಗ ಹತ್ತಿದ ಮರಕ್ಕೆ ಈ ಪರಿ
ಮುಲಾಜಿಲ್ಲದೆ ಮರೆವಿನ ಬೆಂಕಿ ಸುರಿದು
ಅಯೋಮಯಗೊಳಿಸುವ ತಾಂತ್ರಿಕ
ಚಾಕಚಕ್ಯತೆ ಇರುವ ಸುಳ್ಳಿನ ಗಿರಣಿಯ
ಎದುರು ದೈನ್ಯವಾಗಿ ಏನೇನೋ ಬೇಡುತ್ತಿರುವೆ
ಇನ್ನಾದರೂ ನಾನು
ನನಗಷ್ಟೇ ಮಾಡಿಡುವ ಅಡುಗೆಗಳೆಲ್ಲದರಲ್ಲೂ ಇನ್ನೆಲ್ಲೋ
ಬೇರೆಯದೇ ನಮೂನೆಯ ಹಸಿವು ತಣಿಯುತ್ತಿತ್ತು ಎಂದರೆ ಬಹುಶಃ ನಾನದನ್ನು ಒಪ್ಪಲು ಇನ್ನೂ ತಯಾರಿಲ್ಲ
ನಾನು ನಿರ್ಗಮಿಸಬಹುದಾದ ಸಾಧ್ಯತೆಗಳನ್ನು ಯಾವುದೋ ದೂರದಲ್ಲಿ ಬಿಟ್ಟು ಮರಳಿ
ಮುಖವೇ ಇಲ್ಲದ ಚೂಪು ಹಲ್ಲಿಗೆ ಉಸಿರ ತಿತ್ತಿಯನ್ನು ಒಟ್ಟುತ್ತಿದ್ದೇನೆ
ಆಸೆಗಳ ಕಾದ ಎಣ್ಣೆಗೆ ನನ್ನ ಮೆನಿಕ್ಯೂರ್ ಆದ ಬೆರಳುಗಳನ್ನು ಮುಳುಗೇಳಿಸಿ ಹದವಾಗಿ ಬೇಯಿಸಿ
ನನ್ನ ಎದುರೇ ಇಟ್ಟು ರುಚಿ ನೋಡುವಂತೆ ಆಸೆಯಲಿ ಕಾದು ನಿಲ್ಲುವ ಕಣ್ಣುಗಳೆಡೆಗೆ ನನ್ನೊಳಗಿನ್ನೂ ಕನಿಕರ ಉಳಿದಿದೆ- ಎಂಬುದಕ್ಕೆ ಈ ತುಂಡು ತುಂಡಾದ ಬೆರಳುಗಳು ಸಾಕ್ಷಿ ನುಡಿಯುತ್ತಿವೆ
ಈ ರಕ್ಕಸ ಕತ್ತಲಿನಿಂದ ನಾನೆಂದಾದರೂ ಬೆಳಕ ಬೀದಿಗೆ ಅನಾಮತ್ತಾಗಿ ಜಿಗಿದು ಬಚಾವಾಗಬಹುದು ಆದರೆ
ನನ್ನನ್ನೇ ನೆಚ್ಚಿಕೊಂಡು ರುಚಿಗೊಳಿಸಿ ತನ್ನ ಅಂಕೆ ಇಲ್ಲದ ಹಸಿವು
ನೀಗಿಸಿಕೊಳ್ಳುತ್ತಿರುವ ಅವನು ಅವನೇನು ಮಾಡುತ್ತಾನೆ.
ನಾನಿಲ್ಲದೆ?
ಮೌಲ್ಯ ಸ್ವಾಮಿ ಮೂಲತಃ ಮೈಸೂರಿನವರು.
ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರರು.
ಅವರ ಕವಿತೆಗಳಿಗೆ 2015ನೇ ಸಾಲಿನ ಟೊಟೊ ಪುರಸ್ಕಾರ ಲಭಿಸಿದೆ.
ರಂಗಭೂಮಿಯಲ್ಲಿ ಆಸಕ್ತಿ ಹೊಂದಿರುವ ಮೌಲ್ಯ ಹಲವು ನಾಟಕಗಳಲ್ಲಿಯೂ ಅಭಿನಯಿಸಿದ್ದಾರೆ.
‘ಸುಮ್ಮನೆ ಬಿದ್ದಿರುವ ಬಿಕ್ಕುಗಳು’ ಅವರ ಚೊಚ್ಚಲ ಕವನ ಸಂಕಲನ.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ