ಮೇಕೆಗಳೆಲ್ಲವೂ ರಸ್ತೆ ದಾಟಿದ ಮೇಲೆ ಲಾರಿ ಮುಂದಕ್ಕೆ ಚಲಿಸಲು ಆರಂಭಿಸಿತು. ಅದರದ್ದು ಈಗಲೂ ಒಂದೇ ವೇಗ. ನಿಂತುಕೊಂಡಿದ್ದವನು ಮತ್ತೆ ಲಾರಿಯಲ್ಲಿ ಕುಳಿತೆ. ಇನ್ನೊಮ್ಮೆ ನಾಯಿ ಕಡೆಗೆಯೇ ನೋಡಿದೆ. ಆಕಾಶದೆಡೆಗೆ ನೋಡುತ್ತಿದ್ದ ನಾಯಿ ತನ್ನ ಕಣ್ಣಿನಲ್ಲಿ ಏನನ್ನು ತುಂಬಿಕೊಳ್ಳುತಿತ್ತೋ, ಅದರ ಅಂತರಾತ್ಮ ಅದರೊಳಗಿನ ಪರಮಾತ್ಮ ಅದಕ್ಕೆ ಬದುಕಿನ ಯಾವ ದಿವ್ಯ ರಹಸ್ಯವನ್ನು ಹೇಳುತ್ತಿತ್ತೋ ಆ ಮೂಲಕ ಅದು ನನಗೆ ಏನನ್ನು ಪರೋಕ್ಷವಾಗಿ ತಿಳಿಸಲು ಪ್ರಯತ್ನ ಪಡುತ್ತಿದೆಯೋ ಎನ್ನುವುದು ನನಗೆ ಒಂಚೂರೂ ಗೊತ್ತಾಗಲಿಲ್ಲ. ಆದರೆ ಅದು ಮಾತ್ರ ಅದರಷ್ಟಕ್ಕೆ ಮೌನವಾಗಿ ಯಾವುದೇ ಸದ್ದುಗದ್ದಲವಿಲ್ಲದೆ ಶಾಂತವಾಗಿಯೇ ಕುಳಿತಿತ್ತು.
ಎ.ಬಿ. ಪಚ್ಚು ಕುಟ್ಟಿದಪಲ್ಕೆ ಬರೆದ ಈ ಭಾನುವಾರದ ಕಥೆ “ಮೇಘ ಮಲ್ಹಾರ” ನಿಮ್ಮ ಓದಿಗೆ
ಅವಳು ಹೇಳಿದ ಅಷ್ಟೂ ಕತೆಗಳಲ್ಲಿ ಖುಷಿ ಇರಲಿಲ್ಲ, ನಗು ಇರಲಿಲ್ಲ, ಸಂಭ್ರಮವೂ ಇರಲಿಲ್ಲ. ಗೆಲುವಂತು ಮೊದಲೇ ಇರಲಿಲ್ಲ. ಆದರೆ ಅವಳು ಹೇಳಿದ ಆ ಒಂದು ಕತೆ ಮಾತ್ರ ಉಳಿದ ಕತೆಗಳಂತಿರಲಿಲ್ಲ!
ಬಸ್ಸು ಇಲ್ಲವೇ ಆಟೋ ಸಿಕ್ಕಿದಿದ್ದರೆ ನನಗೆ ಅವಳು ಸಿಗುತ್ತಲೂ ಇರಲಿಲ್ಲ. ಅವರೆಡೂ ಸಿಗಲಿಲ್ಲ, ಕೊನೆಗೊಂದು ದೊಡ್ಡ ಲಾರಿ ಸಿಕ್ಕಿತು, ಹಾಗಾಗಿ ಅವಳು ಸಿಕ್ಕಳು. ಯಾರ ಪುಣ್ಯವೋ, ಅದೂ ಸರಿಯಾಗಿ ಗೊತ್ತಿಲ್ಲ.
ಜಗತ್ತಿನಲ್ಲಿ ಅದೆಷ್ಟು ಜನರಿದ್ದರೂ ಯಾರಿಗಾದರೂ ಯಾರಾದರೂ ಸಿಗುವುದು, ಬದುಕಿನಲ್ಲಿ ಎಲ್ಲಾದರೂ ಇಂತವರು ಇಂತವರನ್ನೇ ಪರಸ್ಪರ ಮುಖಾಮುಖಿಯಾಗಿ ಬಿಡುವುದು ನಿಜವಾಗಿಯೂ ಇದೆಲ್ಲಾ ಪುಣ್ಯವೋ, ಭಾಗ್ಯವೋ, ಪಾಪಕರ್ಮವೋ, ಇಲ್ಲ ಪೂರ್ವನಿಯೋಜಿತವೋ ಅಥವಾ ಕೇವಲ ಆಕಸ್ಮಿಕವೋ? ಗೊತ್ತಿಲ್ಲ. ನಿಜ ಹೇಳಬೇಕೆಂದರೆ ನನ್ನ ಗೊಂದಲ ಅದಾಗಿರಲಿಲ್ಲ. ಅವಳು ನನಗೆ ಸಿಕ್ಕಿದ್ದೋ ಅಥವಾ ನಾನೇ ಅವಳಿಗಾ?… ಎಂಬುದೊಂದೇ ನನ್ನಲ್ಲಿ ಹೆಚ್ಚು ಪ್ರಾಮುಖ್ಯತೆಯ ಪ್ರಶ್ನೆಯಾಗಿತ್ತು.
ಮೋಡಗಳಿಲ್ಲದ ಆಕಾಶ ಸಾಕಷ್ಟು ಶುಭ್ರವಾಗಿದ್ದರೂ, ವರ್ಷ ಋತುವಿನ ಕಾರಣ ಮುಂದೆ ಯಾವುದೇ ಕ್ಷಣದಲ್ಲಾದರೂ ಇಲ್ಲೊಂದು ಮಾಯದಂತಹ ಮಳೆ ಅವಶ್ಯವಾಗಿ ಸುರಿಯಬಹುದೆಂದು ಬಲವಾಗಿ ಅನ್ನಿಸಿತ್ತು ಹಾಗಾಗಿ ವಿಹರಿಸುತ್ತಿದ್ದ ಗುಡ್ಡದ ತುದಿಯಿಂದ ವೇಗವಾಗಿ ಇಳಿದು ಬಂದು ಆ ಟಾರು ರೋಡಿನ ಪಕ್ಕದಲ್ಲಿಯೇ ನಿಂತಿದ್ದೆ ನಾನು. ಬೆನ್ನಿನ ಮೇಲೆ ಒಂದು ಬ್ಯಾಗ್ ಎಂದಿನಂತೆ ನೇತಾಡುತ್ತಿತ್ತು. ಅಲ್ಲಿ ನಿಂತುಕೊಂಡು ಬಹಳ ಹೊತ್ತು ಕೂಡ ಆಗಿತ್ತು.
ಕ್ಷಣಗಳು ಉರುಳಿದವು. ಬಹುಶಃ ಈ ಜಗತ್ತಿನಲ್ಲಿ ಯಾರ ಅಂಕೆಗೂ ಕೂಡ ಒಳಪಡದವು ಅಂದರೆ ಸಮಯವೇ ಇರಬೇಕು. ಏಕೆಂದರೆ ಅದು ಯಾರಿಗೂ ನಿಲ್ಲುವುದಿಲ್ಲ, ಯಾರಿಗಾಗಿ ಕಾಯುವುದೂ ಇಲ್ಲ, ತನ್ನ ಪಾಡಿಗೆ ತಾನು ಒಂದೇ ವೇಗದಲ್ಲಿ ನಿರಂತರವಾಗಿ ಚಲಿಸುತ್ತಲೇ ಇರುತ್ತದೆಯಲ್ಲಾ ಎಂದು ಮನಸಿಗೆ ಅನಿಸಿತು.
ಸಂಜೆಯ ಸಮಯ. ಹಾಗಾಗಿ ಕತ್ತಲು ಕವಿಯುವ ಮೊದಲು ಯಾವುದಾದರೂ ಸೂರಿನಡಿಗೆ ಆದಷ್ಟು ಬೇಗ ಸೇರಿಕೊಳ್ಳಬೇಕು ಎಂಬ ಧಾವಂತ ನನ್ನಲ್ಲಿ ಇತ್ತೇ ಹೊರತು ಮಳೆಯ ಬಗ್ಗೆ ಭಯವಂತು ಖಂಡಿತಾ ಅಲ್ಲ.
ನಿಜ ಹೇಳಬೇಕೆಂದರೆ ಮಳೆ ಬರುವುದಾದರೆ ಒಮ್ಮೆ ಬಂದೇ ಬೀಡಲಿ, ನೆನೆದು ನಾನೂ ನೀರಾಗಿ ಬಿಡುವೆ ಎಂಬ ಮನಸ್ಥಿತಿಯೇ ನನ್ನಲ್ಲಿ ಅಧಿಕವಾಗಿತ್ತು. ಉತ್ತರಭಾರತದ ಮಳೆ ಅದೆಷ್ಟು ತಂಪು ಎನ್ನುವುದನ್ನು ಅರಿಯಲು ನನ್ನ ಮನಸ್ಸು ಕೂಡ ತುಂಬಾನೇ ಚಡಪಡಿಸುತ್ತಿತ್ತು.
ಹೀಗೆ ಯಾವುದೇ ವಾಹನ ಸಿಗದೆ ಕೈ ಕೈ ಹಿಸುಕಿಕೊಂಡು ಆ ಗುಡ್ಡದ ದಾರಿಯ ಪಕ್ಕ ನಿಂತಿದ್ದ ನನಗೆ, ಕೊನೆಗೆ ನಿಧಾನಕ್ಕೆ ಬರುತ್ತಿದ್ದ ಲಾರಿಯೇ ಒಂದಿಷ್ಟು ಸಮಾಧಾನವನ್ನು ಹೊತ್ತು ತಂದಿತ್ತು. ಕೈ ಚಾಚಿ ಒಂದಿಷ್ಟು ವಿಶೇಷ ಆಂಗಿಕ ಅಭಿನಯಗಳ ಮೂಲಕ ಆ ಲಾರಿಯನ್ನು ಅಡ್ಡ ಹಾಕಿ ನಿಲ್ಲಿಸುವಲ್ಲಿ ನಾನು ಹೇಗೋ ಸಫಲನಾದೆ. ಬ್ರೇಕ್ ಹೊಡೆದ ಲಾರಿ ನನ್ನಿಂದ ಅಷ್ಟು ದೂರ ಹೋಗಿ ನಿಂತುಕೊಂಡು ಬಿಟ್ಟಿತು. ಓಡಿ ಹೋಗಿ ಅದನ್ನು ಹಿಂದಿನಿಂದಲೇ ಹತ್ತಿಕೊಂಡೆ. ಬಹಳ ತಗ್ಗಿನಲ್ಲಿಯೇ ಇದ್ದ ಅದರ ಬಾಡಿಯ ಬಾಗಿಲನ್ನು ತೆರೆಯಬೇಕಾದ ಪ್ರಮೇಯ ಕೂಡ ನನಗೆ ಬರಲಿಲ್ಲ; ಪ್ರಯಾಸವಿಲ್ಲದ ಬಹಳ ಸಲೀಸಾದ ಹತ್ತುವಿಕೆ, ಒಂದಿಷ್ಟು ದೂರದ ಪ್ರಯಾಣಕ್ಕೆ.
ನಿಂತಿದ್ದ ಲಾರಿ ಮತ್ತೆ ಚಾಲುಗೊಂಡು ನಿಧಾನವಾಗಿ ಮುಂದಕ್ಕೆ ಮುಂದಕ್ಕೆ ಚಲಿಸತೊಡಗಿತು; ಅದರ ಹಾಡು, ಅದರ ಪಾಡು ಅದರದ್ದು.
ಮೇಲೊಂದು ಛಾವಣಿ ಇಲ್ಲದ, ಬಾಗಿಲು ಸೇರಿದಂತೆ ಮೂರೂ ಕಡೆಗಳಲ್ಲಿ ಸೊಂಟದೆತ್ತರದಷ್ಟೇ ಎತ್ತರದ ಮರದ ಗೋಡೆಗಳಿಂದ ಕೂಡಿದ್ದ ಆ ಬಹಳ ಹಳೆಯದಾದ ಲಾರಿಯೊಳಗೆ ಮೊದಲ ನೋಟಕ್ಕೆ ಒಂದು ಮೂಲೆಯಲ್ಲಿ ಒಂದಿಷ್ಟು ಕಬ್ಬಿಣ ಸಾಮಾನುಗಳ ರಾಶಿಯನ್ನು ಬಿಟ್ಟರೆ, ಬೇರೆ ಏನೂ ನನ್ನ ಕಣ್ಣಿಗೆ ಗೋಚರಿಸಲಿಲ್ಲ. ಹಾಗಾಗಿ ಆ ಲಾರಿ ನನಗೇನು ಅಂತ ವಿಶೇಷ ಅನ್ನಿಸಲಿಲ್ಲ. ಹಾಗಂತ ನಾನು ಅಂದುಕೊಂಡಿದ್ದೆ ಅಷ್ಟೇ, ಆದರೆ ಅಲ್ಲಿ ಅವಳಿದ್ದಳು; ಜೊತೆಗೆ ಅವಳದ್ದೊಂದು ವಯಸ್ಸಾದ ನಾಯಿ!
ಅವಳು ನೆಟ್ಟಗೆ ಲಾರಿಯೊಳಗೂ ಕುಳಿತುಕೊಳ್ಳದೆ ಲಾರಿಯ ತಲೆ ಎನ್ನಬಹುದಾದ ಅದರ ಟಾಪ್ ಅನ್ನೇ ಹತ್ತಿ, ಅದರ ಮೇಲಿನ ಆ ಆಯತಾಕಾರದ ಜಾಗದಲ್ಲಿ ಕುಳಿತುಕೊಂಡು ಎದುರಿನ ರಸ್ತೆಯ ಕಡೆ ಮುಖ ಮಾಡಿರುವುದು ನನಗೆ ಇನ್ನಿಲ್ಲದ ಅಚ್ಚರಿಯನ್ನು ತಂದಿತು.
ಚಲಿಸುತ್ತಿದ್ದ ಲಾರಿಯ ಒಂದು ಬದಿಯ ಮರದ ಗೋಡೆಯನ್ನು ಜಾಗ್ರತೆಯಿಂದ ಹಿಡಿದುಕೊಳ್ಳುತ್ತಾ ಲಾರಿಯೊಳಗೆಯೇ ಅದರ ಬಾಗಿಲಿನ ಈ ತುದಿಯಿಂದ ಆ ತುದಿಯವರೆಗೆ ನಿಧಾನವಾಗಿ ನಡೆದುಕೊಂಡು ಹೋಗಿ ಲಾರಿಯ ಬೆನ್ನಿನ ಭಾಗವನ್ನು ತಲುಪಿದೆ. ನನ್ನ ಎರಡೂ ಕೈಗಳನ್ನ ಅದರ ಬೆನ್ನಿನ ಮೇಲಿರಿಸಿಕೊಂಡು ಕೆಳಗಿನಿಂದಲೇ ಲಾರಿಯ ತಲೆಯ ಮೇಲೆ ಕುಳಿತಿದ್ದ ಅವಳನ್ನೊಮ್ಮೆ ಕತ್ತೆತ್ತಿ ಸೂಕ್ಷ್ಮವಾಗಿ ಗಮನಿಸಿದೆ. ಇಲ್ಲ, ಅವಳ ಬೆನ್ನಿನ ಹೊರತು ನನಗೇನೂ ಕಾಣಲಿಲ್ಲ.
ಅವಳು ಅದು ಹೇಗೆ ಅಷ್ಟು ಎತ್ತರದ ಲಾರಿಯ ಟಾಪು ಹತ್ತಿ ಅಷ್ಟೊಂದು ಆರಾಮವಾಗಿ ಕುಳಿತುಕೊಂಡಳು? ಮನಸ್ಸಿನೊಳಗೊಂದು ಸಹಜವಾದ ಪ್ರಶ್ನೆ ಹುಟ್ಟಬೇಕಿತ್ತು ಮತ್ತದು ಆ ಕ್ಷಣವೇ ಹುಟ್ಟಿಕೊಂಡು ಹೆಮ್ಮರವಾಗಿ ಬೆಳೆದು ನಿಂತಿತ್ತು. ತಾತ್ಕಾಲಿಕವಾಗಿ ಸಿಕ್ಕಿಸಿ ತೆಗೆಯಬಹುದಾದಂತಹ ಚಿಕ್ಕದೊಂದು ಏಣಿಯನ್ನು ಲಾರಿಯ ಆ ಮೇಲಿನ ಅಟ್ಟ ಹತ್ತುವುದಕ್ಕಾಗಿಯೇ ಲಾರಿಯ ತಲೆಗೆ ಸಿಕ್ಕಿಸಿ ಅದರ ಬೆನ್ನಿನ ಮೇಲೆಯೇ ನೇತುಹಾಕಿ ಇಟ್ಟಿರುವುದು ನನ್ನ ಗಮನಕ್ಕೆ ಆ ಕೂಡಲೇ ಬಂತು.
ನಾನೂ ಅದನ್ನೇ ಮೆಲ್ಲಗೆ ಹತ್ತಿಕೊಂಡು ಹೋಗಿ ಲಾರಿಯ ಆ ತಲೆಯ ಮೇಲಿನ ಭಾಗ ತಲುಪಿ, ಅಲ್ಲಿ ಕುಳಿತುಕೊಂಡಿದ್ದ ಅವಳನ್ನೊಮ್ಮೆ ಒಂದು ಬದಿಯಿಂದ ದಿಟ್ಟಿಸಿ ನೋಡಿದೆ. ಅದ್ಯಾಕೋ ಗೊತ್ತಿಲ್ಲ ಅವಳು ತನ್ನ ಎರಡೂ ಕಣ್ಣುಗಳನ್ನು ಹಾಗೇ ಭದ್ರವಾಗಿ ಮುಚ್ಚಿಕೊಂಡಿದ್ದಳು. ಹಾಗಾಗಿ ಲಾರಿ ಸಾಗುತ್ತಿದ್ದ ಅದರ ಮುಂದಿನ ಟಾರು ರೋಡು ಅವಳ ಕಣ್ಣುಗಳಲ್ಲಿ ನನಗೆ ಕಾಣಲಿಲ್ಲ. ಲಾರಿ ಹತ್ತುವ ಮೊದಲು ರಸ್ತೆಯಲ್ಲಿ ನಿಂತುಕೊಂಡಿದ್ದ ನನಗೆ ಲಾರಿಯ ತಲೆಯ ಮೇಲೆಯೇ ವಿರಾಜಮಾನಳಾಗಿದ್ದ ಅವಳದ್ದೊಂದು ಈ ದೃಶ್ಯವು ಕೂಡ ನನ್ನ ಕಣ್ಣಿಗೂ ಈ ಮೊದಲು ಬಿದ್ದಿರಲಿಲ್ಲ. ಬಹುಶಃ ಗಡಿಬಿಡಿಯಲ್ಲಿದ್ದ ನಾನು ಸರಿಯಾಗಿ ಗಮನಿಸಿರಲಿಲ್ಲ.
ಯಾಕೋ ಗೊತ್ತಿಲ್ಲ ಅವಳನ್ನು ಅಲ್ಲಿಂದ ಎಬ್ಬಿಸಿ ಕೆಳಗೆ ಬರುವಂತೆ ಮಾಡಲು ನನಗೆ ಮನಸ್ಸಾಗಲಿಲ್ಲ. ಹಾಗಾಗಿ ನಾನು ಅವಳನ್ನು ಅಲ್ಲೇ ಬಿಟ್ಟು ಮತ್ತೆ ಅಲ್ಲಿದ್ದ ಪುಟ್ಟ ಏಣಿಯ ಸಹಾಯದಿಂದ ಲಾರಿಯ ಮೇಲಿನಿಂದ ಕೆಳಗಡೆಗೆ ನಿಧಾನವಾಗಿ ಇಳಿದುಕೊಂಡು ಬಂದೆ.
ಅವಳ ಮುದಿ ನಾಯಿ ಮಾತ್ರ ಹಿಂದೆ ಸರಿಯುತ್ತಿದ್ದ ರೋಡಿನ ಕಡೆಗೇ ಮುಖ ಮಾಡಿಕೊಂಡು, ಮೇಲೆ ಕುಳಿತಿದ್ದ ಅವಳನ್ನೇ ಕಾಯುತ್ತಿರುವಂತೆ ಕೆಳಗಡೆಯೇ ಅಚಲವಾಗಿ ಕುಳಿತುಕೊಂಡಿತ್ತು ಮತ್ತದು ನಾಲಗೆ ಹೊರಗೆ ಚಾಚಿಕೊಂಡು, ಕಣ್ತೆರೆದುಕೊಂಡು ಮೇಲಿನ ಆಕಾಶವನ್ನೇ ದಿಟ್ಟಿಸಿ ನೋಡುತ್ತಿತ್ತು. ಅದರ ಪಕ್ಕದಲ್ಲಿಯೇ ಇತ್ತೊಂದು ಚಿಕ್ಕ ಸಂಗೀಸಿನ ಕೈಚೀಲ.
ಲಾರಿಯಲ್ಲಿಯೇ ಮೇಲೆ, ಕೆಳಗೆ ಮತ್ತು ಪರಸ್ಪರ ವಿರುದ್ಧ ದಿಕ್ಕಿಗೆ ಮುಖ ಮಾಡಿಕೊಂಡು ಕುಳಿತುಕೊಂಡಿದ್ದರೂ ಸಹ ಆ ನಾಯಿ ಮತ್ತು ಅವಳು ಈ ಲೋಕದ ಪರಿವೆಯೇ ಇಲ್ಲದೆ, ಎಲ್ಲೋ ಕಳೆದು ಹೋದವರಂತೆಯೇ ನನಗೆ ಕಂಡು ಬಂದರು. ಲಾರಿ ಕೂಡ ತನಗೂ ಅವರಿಬ್ಬರಿಗೂ ಸಂಬಂಧವೇ ಇಲ್ಲವೆನೋ ಎಂಬಂತೆ ತನ್ನಷ್ಟಕ್ಕೆ ನಿಧಾನವಾಗಿ ಮುಂದಕ್ಕೆ ಮುಂದಕ್ಕೆ ಸಾಗುತ್ತಿತ್ತು.
ನಾನು ಲಾರಿ ಹತ್ತಿದ ಒಂದಿಷ್ಟು ಕ್ಷಣಗಳ ನಂತರ ಮೇಲಿದ್ದ ಅವಳು ನಿಧಾನಕ್ಕೆ ಕಣ್ಣು ತೆರೆದು ಹಾಗೇ ಹಿಂದಕ್ಕೆ ತಿರುಗಿದಳು. ಅದನ್ನು ನಾನು ಗಮನಿಸಿದೆ, ಆದರೆ ನನ್ನನ್ನು ಮಾತ್ರ ಅವಳು ಸ್ವಲ್ಪವೂ ಗಮನಿಸಲಿಲ್ಲ, ಕೆಳಗಿದ್ದ ಅವಳ ನಾಯಿಯೂ ಸಹ ನನ್ನತ್ತ ಯಾವುದೇ ವಿಶೇಷ ದೃಷ್ಟಿ ಬೀರಲಿಲ್ಲ. ಬಹುಶಃ ನಾನು ಅವರಿಬ್ಬರಿಗೂ ಆಸಕ್ತಿಯ ವಿಷಯವಾಗಿರಲಿಲ್ಲ. ಈ ವಿಷಯಕ್ಕಾಗಿಯೇ ಅವರಿಬ್ಬರು ನನಗೆ ಬಹಳಷ್ಟು ಆಸಕ್ತಿಯ ವಿಷಯವಾಗಿ ಬಿಟ್ಟರು.
ಅವಳನ್ನೇ ನೋಡಿ ಕೆಳಗೆ ಬಾ ಎಂದು ಕೈಯಲ್ಲಿಯೇ ಸನ್ನೆ ಮಾಡಿ ಕರೆದೆ. ಅವಳು ಅದನ್ನು ಗಮನಿಸಿದರೂ ಅದ್ಯಾಕೋ ಕೆಳಗಿಳಿದು ಬರಲು ಮಾತ್ರ ಹಿಂದೆ ಮುಂದೆ ನೋಡಿದಳು.
ಅರ್ಧ ಏಣಿ ಹತ್ತಿ ನಾನೇ ಅವಳತ್ತ ಕೈ ಚಾಚಿದೆ. ಅವಳು ಕೊನೆಗೂ ಕೆಳಗಿಳಿದು ಬಂದಳು; ನನ್ನ ಕೈ ಹಿಡಿದುಕೊಂಡೇ ಕೆಳಗಿಳಿದು ಬಂದಳು. ಬಂದವಳೇ ಲಾರಿಯಲ್ಲಿ ಬಿದ್ದಿದ್ದ ಸಂಗೀಸಿನ ಆ ಕೈಚೀಲವನ್ನು ಕೈಗೆ ತೆಗೆದುಕೊಂಡು ಅವಳ ಆ ನಾಯಿಯ ಬಳಿಯೇ ಕುಳಿತುಕೊಂಡಳು.
ಆದರೆ ಅವಳೀಗ ಕೇವಲ ಹೊರಗಡೆ ನೋಡುತ್ತಿದ್ದಳು ಮತ್ತು ಅವಳು ಬರೀ ಹೊರ ಜಗತ್ತಿಗಷ್ಟೇ ಕಿವಿಗೊಟ್ಟವಳಂತೆ ನನ್ನ ಕಣ್ಣಿಗೆ ಕಂಡಳು.
ಲಾರಿ ಚಲಿಸುತ್ತಲೇ ಇತ್ತು. ಅದರ ವೇಗ ನೋಡುವಾಗ ಅವಸರ ಎನ್ನುವುದು ಅದರ ಶಬ್ದಕೋಶದಲ್ಲಿಯೇ ಇಲ್ಲ ಎನ್ನುವುದು ನನಗೆ ಬಹಳ ಸ್ಪಷ್ಟವಾಗಿ ಅರಿವಾಗತೊಡಗಿತು.
ಮೇ ತಿಂಗಳು ಕಳೆದು ಜೂನ್ ಕೂಡ ಮುಗಿದು ಹೋಗಿ ಜುಲೈ ತಿಂಗಳೇ ಬಂದಿದ್ದರೂ ಸಹ, ಗುಡ್ಡದ ಆ ಕಡಿದಾದ ದಾರಿಯಲ್ಲಿ ಮೇಫ್ಲವರ್ ಎಂದೇ ತಿಂಗಳೊಂದರ ಹೆಸರಿನಿಂದ ಗುರುತಿಸಿಕೊಳ್ಳುವ ಈ ಗುಲ್ ಮೊಹರ್ ಹೂಗಳು, ಇನ್ನೂ ತಮ್ಮ ಕೆಂಪು ಹೂಗಳನ್ನು ಸ್ವಲ್ಪವೂ ಉದುರಿಸದೆ ಗಾಳಿಯ ರಾಗಕ್ಕೆ ಹಾಗೇ ತಲೆದೂಗುತ್ತಾ ‘ಗರಜೆ ಗರಜೆ ಆಯೊ ಕಾರೆ ಬದರಾ, ಆಯೊರೇ ಸಾವನ್ ಮನ್ ಭಾವನ್ ಆಯೋ..’ ಎಂದು ಮೋಡಗಳಿಗೆ ಘೀಳಿಡಲು ಒತ್ತಾಯಿಸುತ್ತಾ, ಬರಬಹುದಾದ ಮಳೆಗೆ ತಂಪಗಾಗಲು ಇನ್ನಿಲ್ಲದಂತೆ ಹವಣಿಸುತ್ತಿದ್ದವು.
ಆದರೆ ಲಾರಿಯ ಹೊರಗೆ ನೋಡುತ್ತಿದ್ದ ಅವಳಿಗೆ ಆ ಕೆಂಪು ಹೂಗಳಲ್ಲಿ ಆಗಲಿ, ಅವುಗಳ ಕಾಲ ಮೀರಿ ಅರಳುವ ಅಶಿಸ್ತಿನ ವರ್ತನೆಯ ಬಗ್ಗೆ ಆಗಲಿ, ಲಾರಿ ಗುಡ್ಡದ ಇಳಿಜಾರಿನಲ್ಲಿ ಇಳಿಯುತ್ತಿದ್ದ ಸಂದರ್ಭದಲ್ಲಿ ಬೀಸಿ ಬರುತ್ತಿದ್ದ ತಂಗಾಳಿಯ ಬಗ್ಗೆ ಆಗಲಿ, ಇನ್ನೇನು ಸುರಿಯಬಹುದಾಗಿದ್ದ ಸಂಜೆಯದ್ದೊಂದು ಹಿತವಾದ ಮಳೆಯ ಬಗ್ಗೆ ಆಗಲಿ, ಆ ಎಲ್ಲಾ ಅನುಭಗಳ ಅಪರಿಮಿತ ಸುಖದಲ್ಲಾಗಲಿ, ಊಹೂಂ.. ಯಾವುದರಲ್ಲೂ ಒಂಚೂರು ಆಸಕ್ತಿ ಇರುವುದು ನನಗೆ ಎಲ್ಲೂ ಕಂಡು ಬರಲಿಲ್ಲ.
ನಾಯಿ ಇನ್ನೂ ನಾಲಗೆ ಹೊರಗೆ ಚಾಚಿಕೊಂಡು ಮೇಲಿನ ಆಕಾಶವನ್ನೇ ದಿಟ್ಟಿಸಿ ನೋಡುತ್ತಿತ್ತು. ಬರೀ ಆಕಾಶವನ್ನೇ ನೋಡುತ್ತಿದ್ದ ಅದರ ಕಣ್ಣುಗಳಲ್ಲಿ ಆಳವಾಗಿ ಇಣುಕಿ ನನ್ನನ್ನೊಮ್ಮೆ ನೋಡುವ ಪ್ರಯತ್ನವನ್ನು ಕಣ್ಣಗಲಿಸಿಯೇ ಮಾಡಿದೆ. ಬಿಳಿ ಬಣ್ಣದ ಆ ಕೃಷವಾದ ಮುದಿ ನಾಯಿ ಒಮ್ಮೆಗೆ ಗುರ್ರೆನ್ನಲೂ ಇಲ್ಲ, ಪದೇ ಪದೇ ಗುರ್ರ್.. ಗುರ್ರ್.. ಅನ್ನಲೂ ಇಲ್ಲ.
ಎಲ್ಲೋ ಧೂಳಿನಲ್ಲಿ ಹೊರಳಾಡಿ ಬಂದಿದ್ದ ಅದರ ಮೈಯ ಅಚ್ಚ ಬಿಳಿ ಬಣ್ಣವೂ ಕೂಡ ತೀರಾ ಮಸುಕಾಗಿ ಹೋಗಿತ್ತು. ಮನೆಯ ಕಂಬಕ್ಕೆ ಕಟ್ಟಿ ಹಾಕುವುದಕ್ಕಾಗಿ ಅದಕ್ಕೊಂದು ಕೊರಳಪಟ್ಟಿಯನ್ನು ಸಹ ಹಾಕಿರಲಿಲ್ಲ. ಎಂದೋ ಹಾಕಿರಬಹುದಾದಂತಹ ಅದರದ್ದೊಂದು ಗುರುತು ಕೂಡ ಅದರ ಕೊರಳಲ್ಲಿ ಎಲ್ಲಿಯೂ ಅಸ್ಪಷ್ಟವಾಗಿಯೂ ಸಹ ಮೂಡಿರಲಿಲ್ಲ.
ಲಾರಿಯೊಳಗೆ ಮತ್ತೊಮ್ಮೆ ಸರಿಯಾಗಿ ಗಮನಿಸಿದೆ. ಮೂಲೆಯಲ್ಲಿದ್ದ ಕಬ್ಬಿಣ ಸಾಮೂನುಗಳ ರಾಶಿಯಲ್ಲಿ ಒಂದಿಷ್ಟು ಸಣ್ಣ ಸರಳುಗಳು, ಬಡ್ಡು ಕತ್ತಿಗಳು, ಚಿಕ್ಕ ಚಿಕ್ಕ ಚೂರಿ ಚಾಕುಗಳೇ ಹೆಚ್ಚಾಗಿ ಇದ್ದವು. ಅದರಲ್ಲಿ ಕೆಲವೊಂದಿಷ್ಟು ಹೊಸತ್ತು ಬಿಟ್ಟರೆ ಹೆಚ್ಚಿನವು ತುಂಬಾ ಹಳೆಯದ್ದೇ. ಬಹುಶಃ ಲಾರಿಯವನದ್ದೇ ಇರಬೇಕು; ಎಲ್ಲೋ ಗುಜಿರಿಗೆ ಹಾಕಲು ತಗೊಂಡು ಹೋಗುತ್ತಿದ್ದಾನೆ ಎಂದು ಮನಸ್ಸಿನಲ್ಲಿಯೇ ಅಂದುಕೊಂಡೆ.
ಇನ್ನೂ ನಿಂತೇ ಇದ್ದ ನಾನು ಅವರಿಬ್ಬರಿಂದ ಸ್ವಲ್ಪ ದೂರದಲ್ಲಿ, ಅವರ ಎದುರಿನಲ್ಲಿಯೇ ಆ ಚಲಿಸುತ್ತಿದ್ದ ಲಾರಿಯೊಳಗೆ ಕುಳಿತುಕೊಂಡೆ. ಬೆನ್ನಿನ ಮೇಲಿದ್ದ ಬ್ಯಾಗ್ ಅನ್ನು ತೆಗೆದು ನನ್ನ ಪಕ್ಕದಲ್ಲಿಯೇ ಇಟ್ಟುಕೊಂಡು ಬಿಟ್ಟೆ.
ಕುಳಿತಲ್ಲಿಂದಲೇ ಅವಳನ್ನೊಮ್ಮೆ ಸೂಕ್ಷ್ಮವಾಗಿ ಮತ್ತು ಈ ಬಾರಿಯಂತು ಸಂಪೂರ್ಣವಾಗಿಯೇ ಗಮನಿಸಿದೆ. ಸುಕ್ಕಾದ ಹಳದಿ ಬಣ್ಣದ್ದೊಂದು ಹಳೆಯ ಕಾಟನ್ ಸೀರೆ ಉಟ್ಟುಕೊಂಡಿದ್ದ ಅವಳ ವಯಸ್ಸು ಯೌವನವನ್ನು ದಾಟಿ ಅದೆಷ್ಟೋ ಸಂವತ್ಸರಗಳೇ ಆಗಿದ್ದಂತೆ ಕಂಡವು. ನನ್ನ ವಯಸ್ಸಿನ ಎರಡರಷ್ಟು ವಯಸ್ಸನ್ನು ಕೂಡ ದಾಟಿ ಬಹಳಷ್ಟು ಮುಂದಕ್ಕೆ ಹೋಗಿದ್ದ ಅವಳು ಈ ಜಗತ್ತನ್ನು, ಅದರದ್ದೊಂದು ರೀತಿಯನ್ನು, ಅದು ಕಲಿಸಿದ ನೀತಿಯನ್ನು ಬಹಳ ಚೆನ್ನಾಗಿಯೇ ಅರ್ಥಮಾಡಿಕೊಂಡಿದ್ದಾಳೆ ಎಂದು ಮೇಲ್ನೋಟಕ್ಕೆ ನನಗೆ ತಿಳಿಯಿತು.
ಅವಳ ಪುಟ್ಟ ಮುಖದಲ್ಲಿ ಅವಳ ದೊಡ್ಡ ಸೀರೆಯಲ್ಲಿರುವಷ್ಟು ರಾಶಿ ನೆರಿಗೆಗಳೇನು ಮೂಡಿರಲಿಲ್ಲ, ಚಿಂತೆಯ ರೇಖೆಗಳು ಕೂಡ ಬಹಳಷ್ಟು ಅಸ್ಪಷ್ಟವೇ. ಆದರೆ ಸಂಪೂರ್ಣವಾಗಿ ಬೆಳ್ಳಿ ಗೆರೆಗಳಿಂದಲೇ ತುಂಬಿಹೋಗಿದ್ದ ಅವಳ ತಲೆಗೂದಲಲ್ಲಿ ಅಲ್ಲಲ್ಲಿ ಒಂದೊಂದು ಮಾಸಲು ಬಣ್ಣದ ಕಪ್ಪು ಕೂದಲು ಹೊರಗಿಣುಕಿಕೊಂಡು ಅವಳ ವೃದ್ಧ ಬದುಕಿನದ್ದೊಂದು ಸರಿಯಾದ ವಯಸ್ಸು ಹೇಳುವ ಪ್ರಯತ್ನವನ್ನು ಶಕ್ತಿ ಮೀರಿಯೇ ಮಾಡುತ್ತಿತ್ತು. ಆದರೆ ಅದರ ಮಾತಿಗೆ ನಾನು ಕಿವಿಯಾಗಲಿಲ್ಲ.
ಅವಳ ಪಕ್ಕದಲ್ಲಿಯೇ ಲಾರಿಯ ಬದಿಯ ಆ ಮರದ ಗೋಡೆಗೆ ಅಂಟಿಕೊಂಡಂತೆ ಬಿದ್ದಿದ್ದ ಕೋಲು ಒಂದು ಈ ಬಾರಿ ನನ್ನ ಗಮನ ಸೆಳೆಯಿತು. ಲಾರಿಯೊಳಗೆ ಬಂದಾಗ ನಾನು ಅದನ್ನು ಸರಿಯಾಗಿ ಗಮನಿಸಿರಲಿಲ್ಲ. ಯಾವುದೋ ಮರದಿಂದ ಮುರಿದು ತಂದಿದ್ದ ಆ ಹಸಿ ಕೋಲು ಅದು ಅವಳ ಇಳಿವಯಸ್ಸಿನ ಊರುಗೋಲು ಎಂದು ಅದರಷ್ಟಕ್ಕೆ ಸಾರಿ ಸಾರಿ ಹೇಳುತ್ತಿತ್ತು; ಬರಡಾಗಿದ್ದ ಆ ವೃದ್ಧೆ ಹಾಗೂ ಮುದಿ ನಾಯಿಗಿಂತಲೂ ಜೀವವಿಲ್ಲದ ಆ ಕೋಲೇ ಹೆಚ್ಚು ಹಸಿಯಾಗಿಯೂ, ರಸವತ್ತಾಗಿಯೂ ಇತ್ತು.
ತೋರಿಕೆಗೆ ರಸವಿದ್ದರೂ ಒಳಗೊಂದು ಜೀವಂತಿಕೆಯೇ ಇಲ್ಲದ ಅದರದ್ದೊಂದು ಬಾಳು ಕೂಡ ಬಲು ಬೇಗನೆ ಸೊರಗಿ ಹೋಗುವಂತಹದ್ದೇ ಎಂದು ನನಗೆ ಅನ್ನಿಸದೇ ಇರಲಿಲ್ಲ. ಅಲಂಕಾರವಿಲ್ಲದ ಅಹಂಕಾರವೂ ಇಲ್ಲದ ಅಷ್ಟೇನೂ ಸುಂದರವೂ ಅಲ್ಲದ ಆ ವೃದ್ಧೆಯ ಮುಖದ ಅಗಲವಾದ ಹಣೆಯ ಮೇಲಿನ ಕಾಸಗಲದ ಕುಂಕುಮದ ಬೊಟ್ಟೊಂದನ್ನು ಬಿಟ್ಟರೆ, ನನಗೆ ಎದ್ದು ಕಂಡಿದ್ದು ಎರಡೇ. ಒಂದು ಲಾರಿ ಹತ್ತುವ ಮೊದಲು ಎಲೆ ಅಡಿಕೆ ಜಗಿದು ಬಂದಿದ್ದ ಕಾರಣಕ್ಕೆ ಹೊರಗಿನ ಗುಲ್ ಮೊಹರ್ ಹೂವಿಗಿಂತಲೂ ಅಧಿಕವಾಗಿ ಕೆಂಪಗಾಗಿದ್ದ ಅವಳ ಆ ಒರಟು ತುಟಿಗಳು, ಎರಡನೆಯದ್ದು ಅವಳ ಮೂಗಿಗೆ ಸಿಕ್ಕಿಹಾಕಿಕೊಂಡು ನರಳುತ್ತಿದ್ದ ಆ ಹರಳು ಉದುರಿಸಿಕೊಂಡ ಮೂಗುತಿ.
ಕುತೂಹಲ ಹೆಚ್ಚಾಗಿ ಅವಳನ್ನು ಇನ್ನಷ್ಟು ಹಾಗೇ ಗಮನಿಸಿ ನೋಡಿದೆ.
ಅವಳ ಎರಡೂ ಕೈಯಲ್ಲಿದ್ದ ಒಂದಿಷ್ಟು ಹಸಿರು ಗಾಜಿನ ಬಳೆಗಳು ಹಸಿರಿಗಿಂತಲೂ ಹೆಚ್ಚಾಗಿ ಕಪ್ಪು ಬಣ್ಣಕ್ಕೆ ಹತ್ತಿರವಿರುವಂತೆ ಕಂಡವು. ಕಪ್ಪು ಬಣ್ಣದ್ದೇ ದಾರವೊಂದನ್ನು ದೇವರ ರಕ್ಷೆ ಗಟ್ಟಿಯಾಗಿಯೇ ಇರಲಿ ಎಂಬಂತೆ ತುಂಬಾ ಬಿಗಿಯಾಗಿಯೇ ಕಟ್ಟಿಕೊಂಡಿದ್ದಳು. ಮುಡಿಯಲ್ಲಿ ಶಾಸ್ತ್ರಕ್ಕೋ ಎಂಬಂತೆ ಸಿಕ್ಕಿಸಿಕೊಂಡಿದ್ದ ಅದು ಯಾವುದೋ ಒಂದು ಬಿಳಿ ಬಣ್ಣದ ಹೂವು ಸಂಜೆಯ ವೇಳೆಗಾಗಲೇ ಸಂಪೂರ್ಣವಾಗಿ ಬಾಡಿ ತಾನು ಇದ್ದಲ್ಲೇ ನಲುಗಿ ಹೋಗಿತ್ತು. ಆ ಹೂವಿನ ಬದಲು ಮುಖದಲ್ಲೊಂದು ನಗುವಿನ ಹೂವಾದರೂ ಅರಳಿಸಿಕೊಂಡಿದ್ದರೆ ಈ ವೃದ್ಧೆ ಇನ್ನಷ್ಟು ಚೆನ್ನಾಗಿ ಕಾಣುತ್ತಿದ್ದಳು ಎಂದು ನಾನು ಅಂದುಕೊಂಡೆ.
ಬೆಂಡೋಲೆಗೆಂದೇ ಕೊರೆದಿದ್ದ ಕಿವಿಯ ಎರಡು ರಂಧ್ರಗಳಲ್ಲಿ ಸಿಕ್ಕಿಸಿಕೊಳ್ಳಲು ಏನೂ ಇಲ್ಲದೇ ಅವೆರಡೂ ಎಲೆ ಉದುರಿಸಿಕೊಂಡ ಶಿಶಿರ ಕಾಲದ ಬೋಳು ಮರಗಳಂತೆ ಕಂಡವು. ಕೊರಳಲ್ಲಿ ಕಟ್ಟಿಕೊಂಡಿದ್ದ ಕಡಿಮೆ ಬೆಲೆಯ ಒಪ್ಪವಿಲ್ಲದ ಕರಿಮಣಿ ಸರ ಅವಳ ಬದುಕಿಗೊಬ್ಬ ಯಜಮಾನನೂ ಇದ್ದಾನೆ ಎಂಬುದನ್ನು ಸೂಚಿಸುತ್ತಿತ್ತು. ಕಾಲ ಬೆರಳಲ್ಲಿದ್ದ ಕಾಲುಂಗುರ ಮಾತ್ರ ಅಪ್ಪಟ ಬೆಳ್ಳಿಯದ್ದೇ ಆಗಿತ್ತು. ಬಂಗಾರ ಅಂತ ಅವಳ ಬಳಿ ಇದ್ದದ್ದು ಬಹುಶಃ ಮೌನ ಒಂದೇ.
ಅವಳಲ್ಲಿ ಏನು ಕಡಿಮೆ ಇದ್ದರೂ ಏನೋ ಒಂದು ಪ್ರಸನ್ನತೆ, ಅದೆಂತದೋ ಪ್ರಶಾಂತತೆ ಹಾಗೂ ನನಗೆ ಒಮ್ಮೆಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದ ನೆಮ್ಮದಿಯೊಂದು ತುಂಬಿ ತುಳುಕಾಡುತ್ತಿದ್ದದ್ದು ಮಾತ್ರ ಸತ್ಯ. ಅವಳಂತೆ ಅವಳ ನಾಯಿಯಲ್ಲೂ ಕೂಡ ಅದೆನೋ ಒಂದು ಪ್ರಕಾರದ ಸಮಾಧಾನವಿತ್ತು. ಒಂದರ್ಥದಲ್ಲಿ ಇಬ್ಬರ ನಡವಳಿಕೆಗಳೂ ಹೆಚ್ಚು ಕಡಿಮೆ ಒಂದೇ ರೀತಿ ಇದ್ದವು.
ನಾನು ಕುಳಿತಿದ್ದೆ, ಅವಳೂ ಕುಳಿತಿದ್ದಳು, ಅವಳ ಪಕ್ಕದಲ್ಲಿ ಅವಳ ನಾಯಿಯಂತು ಬಹಳಷ್ಟು ಬೆಚ್ಚಗೆ. ನಾಯಿಯಿಂದಾಗಿ ಅವಳು ಬೆಚ್ಚಗೆಯೋ ಅಥವಾ ಅವಳ ಮೈ ಶಾಖದಿಂದಾಗಿ ಆ ನಾಯಿಗೊಂದಿಷ್ಟು ಮೈ ಬಿಸಿಯೋ.. ನನಗದು ಗೊತ್ತಾಗಲಿಲ್ಲ.
ಆಕಾಶದಲ್ಲಿ ಈಗ ನಿಧಾನಕ್ಕೆ ಮೋಡಗಳು ಸಂತೆ ಸೇರಲು ಶುರು ಮಾಡಿಕೊಂಡವು. ಲಾರಿ ಮುಂದೆ ಮುಂದೆ ಹೋಗುತ್ತಿದ್ದಂತೆ ಅವುಗಳು ಹಿಂದೆ ಹಿಂದೆ ಸರಿದು ದೂರವಾದರೂ, ಮತ್ತೆ ಮತ್ತೆ ದಾರಿಯುದ್ದಕ್ಕೂ ಎದುರಾಗುತ್ತಿದ್ದ ಹೊಸ ಹೊಸ ಮೋಡಗಳು ಮಳೆ ಬರುವ ಮುನ್ಸೂಚನೆಯನ್ನು ಸ್ಪಷ್ಟವಾಗಿ ಕೊಡುತ್ತಿದ್ದವು. ಮೋಡಗಳ ಆ ವೇಗದ ಚಲನೆ ನೋಡಿ ‘ಗರಜ್ ಘುಮಡ್ ಘನ್ ಛಾಯೋ ಬದರಾ…’ ಎಂದು ಭೂಮಿಯೇ ಮೋಡಗಳನ್ನು ಒಲಿಸಿಕೊಳ್ಳಲು ಮನ ತುಂಬಿ ಹಾಡುತ್ತಿರುವಂತೆ ಭಾಸವಾಯಿತು; ನನ್ನಲ್ಲಿ ಮಳೆಯ ನಿರೀಕ್ಷೆ ಇನ್ನೂ ಅತಿಯಾಯಿತು.
ಲಾರಿಯ ಬಾಡಿಯ ಮೇಲಕ್ಕೆ ಯಾವುದೇ ಛಾವಣಿ ಇಲ್ಲದೇ ಇದ್ದುದರಿಂದ ಆ ತಣ್ಣನೆಯ ಹವೆಯಲ್ಲಿ ಸುತ್ತಲಿನ ಗುಡ್ಡದ ಪರಿಸರ ಹಾಗೂ ಮೇಲಿನ ವಿಶಾಲ ಆಕಾಶ ಮತ್ತು ಅದರಲ್ಲಿ ಅಲ್ಲಿ ಇಲ್ಲಿ ಆಟವಾಡುತ್ತಾ ಸಾಗುವ ಬಿಳಿ-ಕಪ್ಪು ಮೋಡಗಳನ್ನು ನೋಡುತ್ತಾ ಸಾಗುವುದು ನನಗಂತು ಆ ಲಾರಿಯಲ್ಲಿ ವಿಶಿಷ್ಟ ಅನುಭವವನ್ನೇ ಕೊಡುತ್ತಿತ್ತು.
ದಿನದ ಕೆಲಸ ಮುಗಿಸಿ ಮತ್ತೆ ಗೂಡು ಸೇರಲು ಹಿಂದೆ ಹಾರುವಾಗ ತಮ್ಮಿಬ್ಬರಿಗಷ್ಟೇ ಕೇಳಿದರೆ ಸಾಕು ಎಂದು ಪ್ರೇಮಭಾವದಲ್ಲಿ, ಮಳೆ ರಾಗದಲ್ಲಿ ‘ಬರಕಾ ಋತು ಆಯಿ ಹಮಾರಿ…’ ಎಂದು ಹಾಡುತ್ತಾ ಸಾಗುತ್ತಿದ್ದ ಜೋಡಿ ಕ್ರೌಂಚ ಪಕ್ಷಿಗಳು, ತನ್ನ ಪ್ರಿಯಕರನೊಂದಿಗೆ ನೃತ್ಯ ಮಾಡುವುದಕ್ಕಾಗಿ ಅಲ್ಲೇ ಎಲ್ಲೋ ಜೋರಾದ ಧ್ವನಿಯಲ್ಲಿ ಆರೋಹಣದಿಂದ ಶುರು ಮಾಡಿ ‘ಮೇಘ ಶ್ಯಾಮ್ ಘನಶ್ಯಾಮ್… ಬಾದಲ್ ಕೆ ರೂಪ್ ಶ್ಯಾಮ್ ಭೀಮ್ ರಂಗ್ ಬರಸಾಯೊ..’ ಎಂದು ಮೋಡಗಳಿಗೂ ಕೇಳಿಸುವಂತೆ ಹಾಡುತ್ತಿದ್ದ ಮರದ ಮೇಲಿನ ಹೆಣ್ಣವಿಲು, ಕೇವಲ ಪ್ರಿಯತಮನೆಲ್ಲಿ.. ಪ್ರಿಯತಮನೆಲ್ಲಿ.. ಎಂದಷ್ಟೇ ಎಲ್ಲರಲ್ಲೂ ಕೇಳುತ್ತಾ ಸ್ವಾತಿ ಮಳೆಗೆಂದು ಕಾದಿದ್ದ ವಿರಹದ ಚಾತಕ ಪಕ್ಷಿಗಾಗಿ ‘ಬೊಲೆರೇ ಪಪಿಹರಾ.. ನಿತ್ ಘನ್ ಬರ್ಸೆ.. ನಿತ್ ಮನ್ ಪ್ಯಾಸ..’ ಎಂದು ಎದೆ ತುಂಬಿ ಹಾಡುತ್ತಿದ್ದ ಪಂಚಮದ ಕೋಗಿಲೆ.. ಒಟ್ಟಿನಲ್ಲಿ ಸಂಜೆಯ ಎಲ್ಲಾ ರಾಗಗಳು ನನ್ನ ಪ್ರಯಾಣದ ಹಾದಿಯನ್ನು ಮತ್ತಷ್ಟು ಆಹ್ಲಾದಕರಗೊಳಿಸಿತ್ತು. ಆ ಸುಂದರ ಘಳಿಗೆಯಲ್ಲಿ ನನ್ನ ಮುಖದಲ್ಲೊಂದು ನಗುವಿನ ಹೂವು ತನ್ನಿಂತಾನೇ ಅರಳಿಕೊಂಡಿದ್ದು ಹೀಗೆ.
ಲಾರಿ ಮಾತ್ರ ಅದರಷ್ಟಕ್ಕೆ ಕುಲುಕುತ್ತ ನಲುಗುತ್ತ ಅದೂ ಕೂಡ ಅದರದ್ದೊಂದು ಹೃದಯದ ಹಾಡನ್ನೇ ಅದರ ಲಹರಿಯಲ್ಲಿಯೇ ಗುನುಗುತ್ತಾ ಆ ಗುಡ್ಡದ ಇಳಿಜಾರಿನ ಸೊಂಟದಿಂದ ಕೊನೆಗೂ ಇಳಿದು, ಮುಂದೆ ಸಿಕ್ಕ ಅದು ಯಾವುದೋ ಪುಟ್ಟ ಹಳ್ಳಿಯ ಶ್ವಾಸದಂತಿದ್ದ ನೇರವಾದ ರಸ್ತೆಯಲ್ಲಿ ಮುಂದಕ್ಕೆ ಮುಂದಕ್ಕೆ ಸಾಗಿತ್ತು. ರಸ್ತೆಗಳು ಕೂಡ ಬದುಕಿನಂತೆಯೇ; ಕೆಲವೊಮ್ಮೆ ಅಂಕುಡೊಂಕಾಗಿ ಇನ್ನು ಕೆಲವೊಮ್ಮೆ ನೇರವಾಗಿ ನಮಗೆದುರಾಗಿ ಬಿಡುತ್ತವೆ, ಅಥವಾ ಅಸಲಿಗೆ ಮನುಷ್ಯನ ಬದುಕಿನ ಪಥವೇ ಒಂದು ರೀತಿಯಲ್ಲಿ ಈ ರಸ್ತೆಗಳಂತೆ ಇರುವುದೇ? ನನಗೆ ಗೊಂದಲವಿದೆ.
ಲಾರಿ ಹೋಗುತ್ತಿದ್ದ ಹಳ್ಳಿಯಲ್ಲಿ ಒಂದಿಷ್ಟು ಸರಳರೇಖೆಯಂತಹ ರಸ್ತೆ ಸಿಕ್ಕರೂ ಕೂಡ ಆರಂಭದಿಂದಲೂ ಒಂದೇ ವೇಗದಲ್ಲಿ ಚಲಿಸುತ್ತಿದ್ದ ಅದು ಏಕೆ ಈಗಲೂ ತನ್ನ ವೇಗವನ್ನು ಸ್ವಲ್ಪವೂ ಹೆಚ್ಚಿಸಿಕೊಳ್ಳುತ್ತಿಲ್ಲ ಎನ್ನುವುದು ನನಗೆ ಅರ್ಥವಾಗಲಿಲ್ಲ.
ಕುಳಿತಲ್ಲಿಂದಲೇ ನನ್ನ ಮುಂದೆ ಕುಳಿತುಕೊಂಡಿದ್ದ ನಾಯಿಯನ್ನು ಮತ್ತು ಅವಳನ್ನು ಮತ್ತೊಮ್ಮೆ ನೋಡಿದೆ. ನಾನೊಬ್ಬ ಅಲ್ಲಿ ಇದ್ದೇನೆ ಎನ್ನುವುದು ಕೂಡ ಅರಿವಿಲ್ಲದಂತೆ ಅವಳು ಇನ್ನೂ ಕೇವಲ ಹೊರಗಡೆಯಷ್ಟೇ ತನ್ನ ದೃಷ್ಟಿ ನೆಟ್ಟಿದ್ದಳು. ನಾಯಿಯನ್ನು ನೋಡುವಾಗ ನನಗೆ ಅದು ಹಸಿದಿರುವಂತೆ ಕಂಡಿತು.
ಕೂಡಲೇ ನನ್ನ ಬ್ಯಾಗಿನಿಂದ ಹಾಗೇ ಬಿಸ್ಕೆಟ್ ಪ್ಯಾಕ್ ಹೊರ ತೆಗೆದು ಅದರಿಂದ ಮೂರು ಬಿಸ್ಕೆಟ್‌ಗಳನ್ನು ಅದರೆಡೆಗೆ ಎಸೆದು ಬಿಟ್ಟೆ.
ಎಸೆದ ಎರಡು ಬಿಸ್ಕೆಟ್‌ಗಳು ನೇರವಾಗಿ ನಾಯಿಯ ಮುಂದೆಯೇ ಬಿದ್ದರೆ ಮತ್ತೊಂದು ಬಿಸ್ಕೆಟ್ ನಾಯಿಯ ಪಕ್ಕವೇ ಕುಳಿತಿದ್ದ ಅವಳ ಮೇಲೆಯೇ ಬಿದ್ದು ಬಿಟ್ಟಿತು!
ಮನಸ್ಸಿಗೇನೋ ಕಸಿವಿಸಿ.
ಆದರವಳು ನನ್ನ ಆ ಒಂದು ವರ್ತನೆಯಿಂದ ಒಂಚೂರೂ ವಿಚಲಿತಳಾಗಲಿಲ್ಲ. ಕ್ರೋಧದಿಂದ ನನ್ನತ್ತ ತಿರುಗಿ ನೋಡಲು ಕೂಡ ಇಲ್ಲ… ಏನನ್ನೂ ಪ್ರತಿಕ್ರಿಯಿಸದೆ ಕೇವಲ ಹೊರಗಡೆಯಷ್ಟೇ ನೋಡುತ್ತಾ ಉಳಿದಳು!!
ಆ ನಂತರ ಅವಳ ಸೀರೆಯ ಮೇಲಿಂದ ಜಾರಿದ ಆ ಮತ್ತೊಂದು ಬಿಸ್ಕೆಟ್ ಕೂಡ ಮುದಿ ನಾಯಿಯ ಮುಂದೆಯೇ ಬಂದು ಬಿದ್ದುಬಿಟ್ಟಿತು.
ಆ ನಾಯಿ ಬಿಸ್ಕೆಟ್‌ನತ್ತ ನೋಡುವುದಲ್ಲ, ಕೊನೆಯ ಪಕ್ಷ ಅದನ್ನು ಮೂಸಿಯೂ ನೋಡಲಿಲ್ಲ!!
“ನಿನ್ನ ನಾಯಿ ಬಹುಶಃ ಬಿಸ್ಕೆಟ್ ತಿನ್ನುವುದಿಲ್ಲ ಎಂದು ಕಾಣುತ್ತದೆ… ಹಹ್ಹಾ.. ಹಹಹ್ಹಾ….” ಅಂದೆ ನಾನು ತುಸು ವ್ಯಂಗ್ಯದಿಂದಲೇ.
“ಹಾಗೇನಿಲ್ಲ, ತಿನ್ನುತ್ತದೆ. ಪ್ರೀತಿಯಿಂದ ತಿನ್ನಿಸಿದರೆ ನಾಯಿ ಏನು ಹುಲಿ ಕೂಡ ಬರೀ ಮೂರಲ್ಲ, ನೂರು ಬಿಸ್ಕೆಟ್ ತಿನ್ನುತ್ತದೆ…!” ಎಂದು ಎಲ್ಲೋ ಹೊರಗೆ ನೋಡುತ್ತಲೇ, ಆದರೆ ನನ್ನ ಮನಸ್ಸಿಗೆ ಬಹಳಷ್ಟು ನಾಟುವಂತೆಯೇ ಆ ಮಾತನ್ನು ಹೇಳಿ ಮುಗಿಸಿದ್ದಳು ಅವಳು.
ಅವಳು ಹಾಗೇಕೆ ಹೇಳಿದಳು ಎಂದು ನನಗೂ ಸರಿಯಾಗಿಯೇ ಅರ್ಥವಾಯಿತು!
ಅವಳು ಮೊದಲ ಬಾರಿ ಮೌನ ಮುರಿದು ಮಾತಾಡಿದ್ದಳು.
ಕೆಳಗಿ ಬಿದ್ದಿದ್ದ ಬಿಸ್ಕೆಟ್‌ಗಳನ್ನು ಅನ್ನು ಮತ್ತೆ ಕೈಯಲ್ಲಿ ಎತ್ತಿಕೊಂಡು ನಾಯಿಯ ಮುಂದೆ ಹಿಡಿದೆ. ಇಲ್ಲ, ನಾಯಿ ಬಿಸ್ಕೆಟ್‌ಗೆ ಬಾಯಿ ಹಾಕಲಿಲ್ಲ. ಅದು ಅದರಷ್ಟಕ್ಕೆ ಮತ್ತೆ ನಾಲಗೆ ಹೊರಗೆ ಚಾಚಿಕೊಂಡು ಮೇಲಿನ ಆಕಾಶ ನೋಡುವುದನ್ನೇ ಮುಂದುವರಿಸಿತು.
“ಬೇಡ.. ಪ್ರಯತ್ನಿಸಬೇಡ. ಅದು ತಿನ್ನಲಾರದು. ಅದು ಕೇವಲ ನಾನು ತಿನ್ನಿಸಿದರಷ್ಟೇ ತಿನ್ನುತ್ತದೆ….” ಅಂದಳು ಅವಳು.
ಅವಳು ಹೇಳಿದ್ದು ಈ ಬಾರಿ ನನಗೆ ಅರ್ಥವೇ ಆಗಲಿಲ್ಲ.
“ಯಾಕೆ ಹಾಗೆ..?” ನಾನು ಕೇಳಿದೆ.
“ಏಕೆಂದರೆ ಅದಕ್ಕೆ ಕಣ್ಣು ಸರಿಯಾಗಿ ಕಾಣುವುದಿಲ್ಲ. ಅದು ವಾಸನೆಯಿಂದಲೇ ನನ್ನನ್ನು ಗುರುತು ಹಿಡಿಯುತ್ತದೆ, ಧ್ವನಿಯಿಂದ ಗ್ರಹಿಸುತ್ತದೆ ಮತ್ತು ನಾನು ಹಾಕಿದರಷ್ಟೇ ಅದು ಏನನ್ನಾದರೂ ತಿನ್ನುತ್ತದೆ..” ಅಂದಳು ವೃದ್ಧೆ.
ನಾನು ಸರಿಯಾಗಿ ನಾಯಿಯ ಕಣ್ಣುಗಳನ್ನೇ ಮತ್ತೆ ನೋಡಿದೆ. ಅದರ ಕಣ್ಣುಗಳಲ್ಲಿ ಆಕಾಶದ ನೀಲಿಗಾಗಿ ಇನ್ನಿಲ್ಲದಂತೆ ಹಠಕ್ಕೆ ಬಿದ್ದು ತಡಕಾಡಿದೆ. ಬಣ್ಣವೇ ಇಲ್ಲದ ಅದರದ್ದೊಂದು ಬಾಳಿನಲ್ಲಿ ಬಹುಶಃ ಕಪ್ಪು ಬಿಳುಪು ಕೂಡ ಇಲ್ಲವೆನೋ ಎಂದು ಅನ್ನಿಸಿಬಿಟ್ಟಿತು. ಇದ್ದ ಒಂದಿಷ್ಟು ಜಗತ್ತಿನ ಬಣ್ಣ ಅದರ ಬಿಳಿ ಮೈಗಷ್ಟೇ ತಾತ್ಕಾಲಿಕವಾಗಿ ಅಂಟಿಕೊಂಡಿತ್ತು!
“ಪಾಪ ಕುರುಡು ನಾಯಿ..” ಅಂದೆ ನಾನು ಹಾಗೇ ಮೆಲು ಧ್ವನಿಯಲ್ಲಿ.
“ಕುರುಡು ಅದಲ್ಲ. ಈ ಜಗತ್ತು ಮತ್ತು ಕಣ್ಣಿದ್ದೂ ಇಲ್ಲದಂತೆ ವರ್ತಿಸುವ ಇಲ್ಲಿಯ ಜನಗಳು…” ಅಂದವಳೇ ಹೊರಗಡೆ ನೋಡುವುದನ್ನು ನಿಲ್ಲಿಸಿ, ನಿಧಾನಕ್ಕೆ ನನ್ನತ್ತ ತಿರುಗಿ ನನ್ನ ಕೈಯಿಂದ ಬಿಸ್ಕೆಟ್‌ಗಳನ್ನು ತನ್ನ ಕೈಗೆ ತೆಗೆದುಕೊಂಡು ನಾಯಿಗೆ ಒಂದೊಂದಾಗಿ ತಿನ್ನಿಸತೊಡಗಿದಳು. ನಾಯಿ ಎಂದಿನಂತೆ ಮೇಲಿನ ನೀಲಿ ಆಕಾಶ ನೋಡುತ್ತಲೇ ತನ್ನ ಒಡತಿ ಹಾಕುತ್ತಿದ್ದ ಬಿಸ್ಕೆಟ್‌ಗಳನ್ನು ಸಾವಕಾಶದಿಂದ ತಿನ್ನತೊಡಗಿತು.
ನಾಯಿಯ ಕಣ್ಣುಗಳಲ್ಲಿ ನನಗೆ ಅದರ ಹಲವು ದಿನಗಳ ತಣಿಯದ ಹಸಿವು ಕಂಡಿದ್ದಂತು ಸತ್ಯ. ಆದರೂ ಅದು ಹೇಗೆ ಒಂಚೂರು ಹಸಿವು ಇಲ್ಲದಂತೆ ವರ್ತಿಸಿತು? ಹಸಿವು ಇದ್ದರೂ ತಿನ್ನಲು ಅವಕಾಶವೊಂದು ಸಿಕ್ಕಾಗ ಅಷ್ಟೊಂದು ಸಮಾಧಾನ ಅದಕ್ಕೆ ಹೇಗೆ ಪ್ರಾಪ್ತಿಯಾಯಿತು?!
ನಾಯಿ ಬಿಸ್ಕೆಟ್ ತಿಂದು ಮುಗಿಸಿದ ಮೇಲೂ ತೀರ ಮೌನವಾಗಿ, ಅಷ್ಟೇ ಶಾಂತವಾಗಿ, ಸಮಚಿತ್ತ ಸಮಭಾವದಿಂದ ಒಂಚೂರು ಸದ್ದು ಮಾಡದೆಯೇ ಕುಳಿತಲ್ಲಿಯೆ ದೃಢವಾಗಿ ಕುಳಿತುಕೊಂಡು ಬಿಟ್ಟಿತು. ನಾಯಿಗೆ ತಿನ್ನಿಸಲು ಮತ್ತೆ ನಾಲ್ಕೈದು ಬಿಸ್ಕೆಟ್‌ಗಳನ್ನು ಅವಳ ಕೈಗೆ ಸುರಿದು ನನ್ನ ಕೈಯಲ್ಲಿದ್ದ ಬಿಸ್ಕೆಟ್ ಪ್ಯಾಕೇಟ್ ಅನ್ನು ಬ್ಯಾಗಿಗೆ ತುರುಕಿಕೊಂಡೆ.
ಅದು ಹೌದು, ನಾನು ನಾಯಿಗೆ ಸರಿಯಾಗಿ ಮೂರೇ ಬಿಸ್ಕೆಟ್‌ಗಳನ್ನು ಎಸೆದಿದ್ದೆ ಎನ್ನುವುದು ನನ್ನ ಕಡೆಗೆ ತಿರುಗದೆಯೇ ಕೇವಲ ಹೊರಗಡೆಯಷ್ಟೇ ನೋಡುತ್ತಿದ್ದ ಅವಳಿಗೆ ಅದು ಹೇಗೆ ಅಷ್ಟೊಂದು ನಿಖರವಾಗಿ ತಿಳಿದು ಹೋಯಿತು?!!
ಲಾರಿ ಮುಂದಕ್ಕೆ ಮುಂದಕ್ಕೆ ಅದರಷ್ಟಕ್ಕೆ ಸಾವಧಾನದಿಂದ ಸಾಗುತ್ತಲೇ ಇತ್ತು. ಲಾರಿಯೊಳಗೀಗ ಮತ್ತೆ ಗಾಢ ಮೌನ ಕವಿಯಿತು.
ಪ್ರಯಾಣ ಹೀಗೆಯೇ ಸಾಗಿದರೆ ಬಹಳಷ್ಟು ನೀರಸವಾಗುತ್ತದೆ ಎಂದು ಅನ್ನಿಸತೊಡಗಿದಾಗಲೇ ನಾನು ಅವಳಲ್ಲಿ ಅವಳ ಕತೆ ಕೇಳಲು ಆರಂಭಿಸಿದ್ದು.
ಅವಳು ಅವಳ ಸುದೀರ್ಘ ಬದುಕಿನ ಕತೆಯನ್ನು ಅಂತು ಇಂತು ಕೊನೆಗೂ ಹೇಳತೊಡಗಿದಳು.
ಅವಳು ಹೇಳಲಾರಳು ಎಂದು ನಾನು ಅಂದುಕೊಂಡಿದ್ದೆ; ಆದರೆ ಅವಳು ಹೇಳಿಯೇ ಬಿಟ್ಟಿದ್ದಳು.
ಒಂದಲ್ಲ, ಎರಡಲ್ಲ. ಅವಳದ್ದು ಹಲವಾರು ಕತೆಗಳು.
ಎಲ್ಲವೂ ನೋವಿನ ಕತೆಗಳೇ, ಅಲ್ಲಿ ಎಲ್ಲೂ ಸುಖದ ರಾಗ ನನಗೆ ಮಧುರವಾಗಿ ಕೇಳಿ ಬರಲೇ ಇಲ್ಲ. ಏಕೆಂದರೆ ಆ ವಿಷಯ ಅವಳ ಕತೆಯಲ್ಲಿಯೇ ಬರುವಂತಹದಲ್ಲ. ವಿಷಾದದ ರಾಗಗಳ ಆಲಾಪವೇ ಅಲ್ಲಿ ಅತಿಯಾಗಿತ್ತು.
ಆದರೆ ಅವಳ ಅದೊಂದು ಕತೆಯಲ್ಲಿ ಮಾತ್ರ ಅವಳು ಮೊದಲಿಗೆ ಬಹಳಷ್ಟು ನಕ್ಕಳು, ನಂತರ ಹಾಗೇ ಖುಷಿಯಿಂದ ಹಿರಿ ಹಿರಿ ಹಿಗ್ಗಿದ್ದಳು, ಕತೆ ಹೇಳುತ್ತಲೇ ಪದೇ ಪದೇ ಹೂವಿನಂತೆ ಅರಳಿದಳು, ಕೊನೆಯಲ್ಲಿ ಮಾತ್ರ ಇನ್ನಿಲ್ಲದಂತೆ ನರಳಾಡಿಯೇ ಆ ಒಂದು ದೊಡ್ಡ ಕತೆ ಮುಗಿಸಿ ಬಿಟ್ಟಳು. ಅವರೋಹಣದಲ್ಲಿ ಸುಖದ ಸ್ವರ ನಾಪತ್ತೆಯಾಗಿ ಬಿಟ್ಟಿತು.
ಅದು ಅವಳು ಮತ್ತು ಅವನ ಕತೆ.
ನಾನು ಕೇಳಬಾರದಿತ್ತು, ನನ್ನಂತವನಿಗೆ ಅದನ್ನವಳು ಹೇಳಲೂ ಬಾರದಿತ್ತು!
ಅಂತಹದ್ದೊಂದು ಕತೆ ಅವಳಲ್ಲೂ ಇರಬಹುದು ಎಂದು ನನಗೂ ಗೊತ್ತಿರಲಿಲ್ಲ, ನನ್ನಂತವನಿಗೆ ಅಂತಹದ್ದೊಂದು ಕತೆ ನಿಜಕ್ಕೂ ರುಚಿಸಲಾರದು ಎನ್ನುವುದು ಪಾಪ ಅವಳಿಗೂ ಸಹ ಗೊತ್ತಿರಲಿಲ್ಲ.
ಹಾಗಾಗಿ ಹಲವು ಕ್ಷಣಗಳವರೆಗೆ ಅಲ್ಲೊಂದು ಅಸಹನೀಯ ಮೌನವೊಂದು ಮತ್ತೆ ಕಾಲು ಚಾಚಿಕೊಂಡು ನಾನು, ನಾಯಿ ಹಾಗೂ ಅವಳ ನಡುವೆಯೇ ಪಟ್ಟು ಹಿಡಿದುಕೊಂಡು ಕುಳಿತು ಬಿಟ್ಟಿತು.
“ಅಂದ ಹಾಗೆ…. ಈಗ ಎಲ್ಲಿಗೆ ಹೋಗುತ್ತಿರುವೆ ನೀನು…?” ನಾನು ಮೌನ ಮುರಿಯಲೆಂದು ಮತ್ತೆ ಅವಳಲ್ಲಿಯೇ ಕೇಳಿದೆ.
“ಹೀಗೆ ಎಲ್ಲೆಲ್ಲೋ…ಸರಿಯಾಗಿ ನನಗೂ ಗೊತ್ತಿಲ್ಲ..” ಅಂದಳು.
“ಎಲ್ಲೆಲ್ಲೋ! ಏಕೆ.. ಏಕೆ ಹಾಗೆ..?” ವಿಪರೀತ ಗೊಂದಲಕ್ಕೆ ಬಿದ್ದು ನಾನು ಕೇಳಿದೆ.
“ಮತ್ತೆ ಅವನನ್ನು ಹುಡುಕಲು…” ಅಂದಳು ಅವಳು.
ನನಗೆ ಆಶ್ಚರ್ಯವಾಯಿತು. ಅವಳೇಕೆ ಈ ರೀತಿ ಹೇಳುತ್ತಿದ್ದಾಳೆ ಎಂದು.
ಮೌನ ಮುರಿದು ಕೆಲವು ಕ್ಷಣಗಳ ಹಿಂದೆಯಷ್ಟೇ ಮಾತು-ಕತೆಗೆ ಇಳಿದಿದ್ದ ಅವಳು ಈ ಬಾರಿಯಂತು
ವಿಚಿತ್ರವಾದ ವಿಷಯವನ್ನೇ ನನಗೆ ಹೇಳಿದ್ದಳು.
“ಅವನು ನಿನ್ನಿಂದ ದೂರವಾಗಿ ಈಗಾಗಲೇ ಹೆಚ್ಚು ಕಡಿಮೆ ನಲ್ವತ್ತು ವರ್ಷಗಳೇ ಸರಿದಿವೆ ಎಂದು ನೀನೇ ನಿನ್ನ ಅಷ್ಟುದ್ದದ ಕತೆಯಲ್ಲಿ ಈಗಷ್ಟೇ ಹೇಳಿ ಮುಗಿಸಿರುವೆ ಅಲ್ಲವೇ. ಹೇಳು, ಈಗ ಎಲ್ಲಿ ಅಂತ ಅವನನ್ನು ಹುಡುಕುವೆ, ಯಾವ ರೀತಿಯಾಗಿ ಹುಡುಕುವೆ…” ಬಹಳಷ್ಟು ಕುತೂಹಲದಿಂದಲೇ ಕೇಳಿದೆ.
“ಅವನು ಕೊಳಲು ಮಾರುತ್ತಾನೆ, ಜೊತೆಗೆ ನುಡಿಸುತ್ತಾನೆ ಕೂಡ. ಯಾವುದೇ ಸಂತೆಯಲ್ಲಿ, ಜಾತ್ರೆಯಲ್ಲಿ ಚೆನ್ನಾಗಿ ಯಾರಾದರೂ ಕೊಳಲು ನುಡಿಸುತ್ತಿದ್ದರೆ… ಅದು ಅವಶ್ಯವಾಗಿ ನನ್ನ ಯಜಮಾನನೇ ಆಗಿರುತ್ತಾನೆ..” ಅಂದಳು ಬಹಳಷ್ಟು ವಿಶ್ವಾಸದಿಂದ.
ನನಗೆ ಅವಳ ಮಾತುಗಳು ಈಗಲೂ ಚಿತ್ರ ವಿಚಿತ್ರದಂತೆಯೇ ಕಂಡಿತು.
“ಆದರೆ ಕೊಳಲು ಮಾರುವವರು ಎಲ್ಲರೂ ಸಹಜವಾಗಿಯೇ ಕೊಳಲು ನುಡಿಸುತ್ತಾರೆ… ಕೇವಲ ಕೊಳಲ ನಾದ ಕೇಳಿಯೇ ಅದು ನಿನ್ನವನೇ ಎಂದು ಹೇಗೆ ಕಂಡುಹಿಡಿಯುವೆ?…” ಮತ್ತೆ ಹುಬ್ಬೇರಿಸಿ ಕೇಳಿದೆ.
“ನನಗೆ ಅವನ ಉಸಿರಿನ ಪರಿಚಯವಿದೆ…” ಅಂದಳು ಹಾಗೇ ನಿಡುಸುಯ್ಯುತ್ತಾ, ದೀರ್ಘವಾಗಿ ಉಸಿರು ಬಿಡುತ್ತಾ. ಅವಳ ಆ ಉತ್ಕಟ ಪ್ರೀತಿ ನನ್ನ ಎದೆಯನ್ನೊಮ್ಮೆ ಆ ತಣ್ಣನೆಯ ಹವೆಯಲ್ಲೂ ಇನ್ನಿಲ್ಲದಂತೆ ಬೆಚ್ಚಗೆ ಮಾಡಿಬಿಟ್ಟಿತು.
ಹಾಗಾಗಿಯೇ ನನ್ನ ಹೃದಯದಿಂದಲೂ ನನ್ನದೊಂದು ಮನಸ್ಸಿನ ಮಾತು ನನ್ನ ಅನುಮತಿಗೂ ಕಾಯದೇ ತನ್ನಿಂತಾನೆ ಹೊರಹೊಮ್ಮಿ ಬಿಟ್ಟಿತು.
“ಹ್ಞೂಂ.. ನಾನು ಕೂಡ ಒಂದು ರೀತಿಯಲ್ಲಿ ನಿನ್ನಂತೆಯೇ. ನಾನೂ ಸಹ ಊರೂರು ಅಲೆಯುತ್ತೇನೆ. ಹೌದು… ನಿನ್ನಂತೆಯೇ ಯಾರೋ ಒಬ್ಬರನ್ನು ಪಡೆಯುವುದಕ್ಕಾಗಿ.
ಹೆಚ್ಚು ಕಡಿಮೆ ನಾಲ್ಕು ವರ್ಷಗಳ ಸಂಬಂಧ ನಮ್ಮದು. ಕೇವಲ ಎರಡು ವರ್ಷಗಳ ಹಿಂದೆಯಷ್ಟೇ ಕಡಿದುಕೊಂಡುಬಿಟ್ಟೆ. ಅದು ಕೂಡ ಸ್ವತಃ ನಾನೇ. ಆದರೆ ನನ್ನವಳಿಗೆ ಮಾತ್ರ ನಾನು ನಿಜಕ್ಕೂ ತುಂಬಾನೇ ಬೇಕಾಗಿದ್ದೆ. ನನಗೂ ಅವಳು ಬೇಕು ಎಂದು ಬಲವಾಗಿ ಅನಿಸಿದ್ದು ಅವಳು ನನ್ನಿಂದ ದೂರವಾದ ಮೇಲೆಯೇ! ಅವಳ ಪ್ರತೀ ಮಾತಿಗೂ ನಾನು ಎಗರಾಡುತ್ತಿದ್ದೆ. ಕೋಪ ಮಾಡಿಕೊಳ್ಳುತ್ತಿದ್ದೆ, ಕ್ರೋಧದಿಂದಲೇ ಪ್ರತಿಕ್ರಿಯಿಸುತ್ತಿದ್ದೆ, ಪ್ರತಿಯೊಂದಕ್ಕೂ ನನ್ನ ಸಿಟ್ಟು ನೆತ್ತಿಗೇರುತ್ತಿತ್ತು. ನಾನು ಶಿಸ್ತಿನ ಮನುಷ್ಯ. ಹಾಕಿಕೊಂಡ ನಿಯಮಗಳ ಮೇಲೆಯೇ ಸದಾ ಬದುಕಿದವನು. ನನ್ನವರು ಕೂಡ ಆ ಷರತ್ತುಗಳನ್ನು ಒಪ್ಪಬೇಕೆಂದು ಸದಾ ಬಯಸುವವನು.
ಆದರೆ ಹಾಗೆ ಆಗುತ್ತಿರಲಿಲ್ಲ. ಹಾಗಾಗಿಯೇ ಅವಳದ್ದು ಬರೀ ಕಿರಿಕಿರಿ ಎಂದೇ ನಾನು ತಿಳಿದುಕೊಂಡಿದ್ದೆ. ಆದರೆ ಅದುವೇ ಅವಳದ್ದೊಂದು ಪರಿಶುದ್ಧವಾದ ಪ್ರೇಮದ ಬಗೆ ಎಂದು ನನಗಾಗ ಗೊತ್ತೇ ಆಗಿರಲಿಲ್ಲ.
ಈಗೀಗ ಅವಳ ನೆನಪು ನನ್ನಲ್ಲಿ ಅತಿಯಾಗುತ್ತುದೆ. ತುಂಬಾ ಅಸಹಾಯಕನಾದಾಗ ಮನೆಯಲ್ಲಿರಲು, ಊರಲ್ಲಿರಲು ಸಾಧ್ಯವಾಗದೇ ಹೀಗೆ ಎಲ್ಲೆಲ್ಲೋ ಗೊತ್ತು ಗುರಿಯಿಲ್ಲದೆ ಅವಳ ನೆನಪಲ್ಲೇ ಅಲೆಯುತ್ತೇನೆ. ಅಮ್ಮ ಫೋನಿನಲ್ಲಿ ಪದೇ ಪದೇ ‘ಒಮ್ಮೆ ಮನೆಗೆ ಬಂದು ಹೋಗೋ…’ ಎಂದು ಈಗಲೂ ಹೇಳುತ್ತಲೇ ಇರುತ್ತಾಳೆ. ಅವಳ ವೇದನೆ ಅವಳದ್ದು. ಆ ನೋವಿನ ಮಾತುಗಳು ನನ್ನನ್ನು ಅತಿಯಾಗಿ ಚುಚ್ಚಿದಾಗ, ನಾನು ಮತ್ತೆ ಅನಿವಾರ್ಯವಾಗಿ ಊರ ದಾರಿ ಹಿಡಿಯುತ್ತೇನೆ….”
ಲಾರಿಯಲ್ಲಿದ್ದ ವೃದ್ಧೆ ಅವಳಾಗಿಯೇ ಕೇಳದಿದ್ದರೂ ನಾನು ಮಾತ್ರ ನನ್ನದೊಂದು ಕತೆಯನ್ನು ಅವಳಿಗೂ ಅವಳ ಪಕ್ಕದಲ್ಲಿದ್ದ ಆ ನಾಯಿಗೂ ಮೇಲಿನ ಆಕಾಶ ನೋಡುತ್ತಲೇ ಒಂದೇ ಗುಕ್ಕಿನಲ್ಲಿ ಹೇಳಿ ಮುಗಿಸಿದೆ. ಆದರೆ ಮನಸ್ಸು ಬಿಚ್ಚಿ ಅಷ್ಟು ಹೇಳಿದ ಮೇಲೂ ನಾನೇಕೆ ಸ್ವಲ್ಪವೂ ಹಗುರವಾಗಲಿಲ್ಲ!?
ವೃದ್ಧೆ ಮಾತಾಡಲು ಆರಂಭಿಸಿದಳು.
“ಆ ಮುದುಕನ ಕತೆ ಕೂಡ ಒಂದು ರೀತಿಯಲ್ಲಿ ನಿನ್ನ ಕತೆಯಂತೆಯೇ ಇತ್ತು…!”
“ಮುದುಕನೇ!.. ಯಾರು.. ಯಾರದು ಮುದುಕ ?…” ನಾನು ಕೇಳಿದೆ.
“ಗೊತ್ತಿಲ್ಲ.. ಏಕೆಂದರೆ ನಾನು ಅವನನ್ನು ನೋಡಿಲ್ಲ, ಆದರೆ ಅವಳು ಮಾತಿನ ನಡುವೆಯೇ ಅವನದ್ದೊಂದು ಕತೆಯನ್ನು ನನಗೆ ಹೇಳಿದ್ದಳು, ಹೆಚ್ಚು ಕಡಿಮೆ ಅದು ನಿನ್ನ ಕತೆಯಂತೆಯೇ ಇತ್ತು, ಹೌದು ನಿನ್ನ ಕತೆಯಂತೆಯೇ..!” ಈ ಬಾರಿ ಇನ್ನೂ ವಿಚಿತ್ರವಾಗಿ ಹೇಳಿಬಿಟ್ಟಳು ವೃದ್ಧೆ.
“ಅವಳು ಎಂದರೆ…. ಯಾರವಳು?..” ನಾನು ಏನೊಂದೂ ಅರ್ಥವಾಗದೇ ಮತ್ತೆ ಅವಳಲ್ಲಿಯೇ ಕೇಳಿದೆ.
“ಅದೇ ಆ ಯುವತಿ..” ವೃದ್ಧೆ ಹೇಳಿದಳು.
“ಯುವತಿಯೇ…! ಯಾವ.. ಯಾವ ಯುವತಿ??!” ನಾನೀಗ ಗೊಂದಲದ ಗೂಡಾಗಿ ತಲೆಕೆರೆದುಕೊಂಡೇ ಕೇಳಿದೆ
ಅವಳು ಏನೂ ಹೇಳಲಿಲ್ಲ!! ಎಂದಿನಂತೆ ಕೇವಲ ಹೊರಗೆ ನೋಡುತ್ತಲೇ ಉಳಿದು ಬಿಟ್ಟಳು!
ನಾವು ಪ್ರಯಾಣಿಸುತ್ತಿದ್ದ ಲಾರಿ ಹಳ್ಳಿಯ ರಸ್ತೆಯಲ್ಲಿ ಜಿಗಿದು ನಲಿದು ಇನ್ನು ಕೂಡ ಮಂದ ಗತಿಯಲ್ಲಿಯೇ ಸಾಗುತ್ತಿತ್ತು. ಹಾಗೇ ಕುಳಿತಲ್ಲಿಂದ ಒಮ್ಮೆ ಎದ್ದು ನಿಂತು, ಲಾರಿಯ ಮರದ ಗೋಡೆಯನ್ನು ಹಿಡಿದುಕೊಂಡು ಹೊರಗಿನ ಹಳ್ಳಿಯತ್ತ ಒಮ್ಮೆ ಸುಮ್ಮನೆ ದೃಷ್ಟಿ ಹಾಯಿಸಿದೆ.
ಲಾರಿಯ ಹೊರಗೆ ನೋಡುತ್ತಿದ್ದ ಅವಳಿಗೆ ಆ ಕೆಂಪು ಹೂಗಳಲ್ಲಿ ಆಗಲಿ, ಅವುಗಳ ಕಾಲ ಮೀರಿ ಅರಳುವ ಅಶಿಸ್ತಿನ ವರ್ತನೆಯ ಬಗ್ಗೆ ಆಗಲಿ, ಲಾರಿ ಗುಡ್ಡದ ಇಳಿಜಾರಿನಲ್ಲಿ ಇಳಿಯುತ್ತಿದ್ದ ಸಂದರ್ಭದಲ್ಲಿ ಬೀಸಿ ಬರುತ್ತಿದ್ದ ತಂಗಾಳಿಯ ಬಗ್ಗೆ ಆಗಲಿ, ಇನ್ನೇನು ಸುರಿಯಬಹುದಾಗಿದ್ದ ಸಂಜೆಯದ್ದೊಂದು ಹಿತವಾದ ಮಳೆಯ ಬಗ್ಗೆ ಆಗಲಿ, ಆ ಎಲ್ಲಾ ಅನುಭಗಳ ಅಪರಿಮಿತ ಸುಖದಲ್ಲಾಗಲಿ, ಊಹೂಂ.. ಯಾವುದರಲ್ಲೂ ಒಂಚೂರು ಆಸಕ್ತಿ ಇರುವುದು ನನಗೆ ಎಲ್ಲೂ ಕಂಡು ಬರಲಿಲ್ಲ.
ಸಂಜೆಯ ಗೋಧೂಳಿ ಲಗ್ನಕ್ಕೆ ಸರಿಯಾಗಿ ಹಟ್ಟಿಯ ಕಡೆಗೆ ಅಂಬಾ… ಅಂಬಾ.. ಅನ್ನುತ್ತಾ ಹೊರಟಿದ್ದ ಅರ್ಧಚಂದ್ರಾಕೃತಿಯ ಕೊಂಬುಗಳ ಕಾಂಕ್ರೇಜ್ ಜಾತಿಯ ವೃಷಭಗಳು ಗತ್ತಿನಿಂದ ನಡೆಯುವುದು ಅಲ್ಲಲ್ಲಿ ಕಂಡು ಬಂದವು. ನಿಧಾನಕ್ಕೆ ಬಾವಿಯ ಮೋಟಾರ್ ಪಂಪು ಚಾಲು ಆಗುವಂತಂಹ ಧ್ವನಿಯಲ್ಲಿ ಕೆನೆಯುತ್ತಿದ್ದ ನುಣುಪು ಮೈಯ ಪುಟ್ಟ ಅಶ್ವವೊಂದನ್ನು ಬಾಲಕನೊಬ್ಬ ಸಮಾಧಾನಿಸಲು ಬಹಳಷ್ಟು ಶ್ರಮಪಡುತ್ತಿದ್ದ. ಮೇಲಿನ ಆಕಾಶದಲ್ಲಿ ಗಜಗಳ ಹಿಂಡಿನಂತೆ ಗುಂಪು ಸೇರಿದ್ದ ಕರಿ ಮೋಡಗಳು ಈಗಂತು ಮರಿ ಆನೆಗಳಂತೆ ಬಹಳ ಮೆಲ್ಲಗೆ ಘೀಳಿಡಲು ಶುರು ಮಾಡಿಕೊಂಡಿದ್ದವು. ಗುಡುಗಿನ ಆ ಆರಂಭದ ಘರ್ಜನೆ, ಪ್ರಾಣಿಗಳದ್ದೊಂದು ಆ ಚಿತ್ರ ವಿಚಿತ್ರ ಇಂಚರಗಳೆಲ್ಲವನ್ನು ಪೋಣಿಸಿಕೊಂಡು ಯಾವುದಾದರೊಂದು ಮಲ್ಹಾರ್ ರಾಗದಲ್ಲಿ ಯಾರಾದರೂ ಮಳೆಯ ಹಾಡೊಂದನ್ನು, ಮಳೆಯ ಆಗಮನವನ್ನು ಸಾರುವುದಕ್ಕಾಗಿಯೇ ತುರ್ತಾಗಿ ಈಗ ಹಾಡಿದ್ದರೆ ಅದೆಂತಹ ಸುಖ ಸಿಗುತ್ತಿತ್ತು ಎಂದು ಒಳಗೊಳಗೆಯೇ ಅಂದುಕೊಂಡೆ; ಚಳಿಗೊಂದು ಬಿಸಿ ಬಿಸಿ ಚಹಾ, ಚಳಿ ಕರಗುವ ಮೊದಲೇ ಕುಡಿಯಲು ಸಿಗುವಂತೆ.
ಅಲ್ಲಿಯವರೆಗೆ ಬೇಲಿ ಬದಿಯ ಹುಲ್ಲು ಕಬಳಿಸುತ್ತಿದ್ದ ಪೋಕರಿ ಮೇಕೆಗಳ ದೊಡ್ಡ ಹಿಂಡೊಂದು ರಸ್ತೆ ದಾಟುವುದಕ್ಕಾಗಿ ರಸ್ತೆಯ ನಡುವೆಯೇ ಬಂದು ನಿಂತುಕೊಂಡವು. ಹೆಚ್ಚು ಕಡಿಮೆ ನೂರಕ್ಕೂ ಹೆಚ್ಚು ಸಂಖ್ಯೆಯಲ್ಲಿದ್ದವು ಅವು. ಲಾರಿ ಈಗ ಅನಿವಾರ್ಯವಾಗಿ ನಿಲ್ಲಲೇಬೇಕಾಯಿತು. ಮೇಕೆಗಳ ಯಜಮಾನ ನಿಧಾನಕ್ಕೆ ಅವುಗಳನ್ನು ರಸ್ತೆ ದಾಟಿಸಲು ತೊಡಗಿದ್ದೇ ಮೇ.. ಮೇ.. ಎಂದು ಕೂಗುತ್ತಲೇ ಈ ಬದಿಯಿಂದ ಆ ಬದಿಗೆ ಹೋಗುತ್ತಿದ್ದ ಅವುಗಳನ್ನು ಕಂಡಾಗ ವರ್ಷದ ಹನ್ನೆರಡು ತಿಂಗಳು ಕೂಡ ಇವುಗಳಿಗೆ ಮೇ ಒಂದೇ ತಿಂಗಳಾಗಿರಬಹುದು ಎಂದು ಅನಿಸಿತು.
ಆಗಲೇ ರಸ್ತೆ ಬದಿಯ ಅದೊಂದು ಮನೆಯ ಟೆರೇಸ್ ಮೇಲೆ ಸಿತಾರ್ ಅನ್ನು ಎದೆಗಪ್ಪಿಕೊಂಡು ಆಕಾಶದ ಮೋಡಗಳನ್ನು ಕಣ್ಣರಳಿಸಿಕೊಂಡು ನೋಡುತ್ತಾ, ಅದರೆಲ್ಲೆನೋ ಅರಸುತ್ತಾ ಮೇಘ್ ಮಲ್ಹಾರ್ ರಾಗದಲ್ಲಿ ‘ಸಾವನ್ ಕಿ ಋತು ಆಯೋ ರೆ.. ಬಡೀ ಬಡೀ ಭೂಂದನ್ ಲಾಗೇ ಬರಸನ್.. ಗಿರ್ ಗಿರ್ ಆಯೆ ಬಾದರ್ ಕಾರೇ.. ಮೋರ್ ಮೋರ್ನಿ ನಾಚತ್ ಬನ್ ಬನ್….. ‘ ಎಂದು ಹೃದಯ ಮುಟ್ಟುವಂತೆ ಹೆಣ್ಣೊಬ್ಬಳು ಮಂದ್ರವಾಗಿ ಹಾಡು ಹಾಡುತ್ತಿರುವುದು ನನ್ನ ಕಣ್ಣಿಗೆ ಬಿದ್ದಿತು. ನನ್ನ ಹೃದಯ ಇದ್ದಕ್ಕಿದ್ದಂತೆ ಮೆಲ್ಲಗೆ ಅರಳಲು ಆರಂಭಿಸಿತು. ಆನಂದದಿಂದಲೇ ಆ ಮಲ್ಹಾರ್ ರಾಗದ ಹಾಡಿಗೆ ಕಿವಿಯಾದೆ. ಎರಡು ವರ್ಷಗಳ ಹಿಂದೆ ಇಂತಹದ್ದೊಂದು ರಾಗದಲ್ಲಿ ಮಳೆ ಹಾಡು ಕೇಳಿದ್ದು ನೆನಪಾಯಿತು. ಕೆಲ ಕ್ಷಣಗಳ ಹಿಂದೆ ರೋಗಿ ಬಯಸಿದ್ದೇ ಈಗ ಸಿಕ್ಕಿಯೂ ಬಿಟ್ಟಿತ್ತು.
ಐದು ಸ್ವರಗಳ ಆರೋಹಣ ಅವರೋಹಣದಲ್ಲಿ, ಮಳೆಗಳ ಪದ ಹಾಗೂ ಸ್ವರಗಳದ್ದೊಂದು ಬಂದಿಶ್‌ನಲ್ಲಿ ಮೋಡಗಳ ನಿರಂತರ ಜಮಾವಣೆಯನ್ನು, ವಿರಹದ ನವಿಲು ಗರಿ ಅರಳಿಸಿಕೊಂಡು ತನ್ನ ಸಂಗಾತಿಯನ್ನು ಸೇರುವುದಕ್ಕೆ ಕಾತರಿಸುವ ಬಗೆಯನ್ನು, ಜೊತೆಗೆಯೇ ತನ್ನ ಪ್ರಿಯಕರನ ಬರುವಿಕೆಯನ್ನೂ ಸಹ ಆ ಸಿತಾರ್ ಹುಡುಗಿ ತನ್ನ ಸಂಜೆಯ ಹಾಡಿನಲ್ಲಿ ತುಂಬಾ ತೀವ್ರವಾಗಿ ನೆನಪಿಸಿಕೊಳ್ಳುತ್ತಿದ್ದಳು. ಅವಳ ಆ ಮಳೆಯದ್ದೊಂದು ರಾಗ ಮತ್ತವಳ ವಿಪ್ರಲಂಬನ ನೋಡಿ ಮಳೆ ಬರುವುದು ನನಗಂತು ಬಹಳಷ್ಟು ಖಾತ್ರಿಯಾಯಿತು. ಅವಳ ಸುಖಕ್ಕಾಗದರೂ ಮಳೆ ಆದಷ್ಟು ಬೇಗ ಬರಲಿ ಎಂದೇ ಆಶಿಸಿದೆ.
ಮೇಕೆಗಳೆಲ್ಲವೂ ರಸ್ತೆ ದಾಟಿದ ಮೇಲೆ ಲಾರಿ ಮುಂದಕ್ಕೆ ಚಲಿಸಲು ಆರಂಭಿಸಿತು. ಅದರದ್ದು ಈಗಲೂ ಒಂದೇ ವೇಗ. ನಿಂತುಕೊಂಡಿದ್ದವನು ಮತ್ತೆ ಲಾರಿಯಲ್ಲಿ ಕುಳಿತೆ. ಇನ್ನೊಮ್ಮೆ ನಾಯಿ ಕಡೆಗೆಯೇ ನೋಡಿದೆ. ಆಕಾಶದೆಡೆಗೆ ನೋಡುತ್ತಿದ್ದ ನಾಯಿ ತನ್ನ ಕಣ್ಣಿನಲ್ಲಿ ಏನನ್ನು ತುಂಬಿಕೊಳ್ಳುತಿತ್ತೋ, ಅದರ ಅಂತರಾತ್ಮ ಅದರೊಳಗಿನ ಪರಮಾತ್ಮ ಅದಕ್ಕೆ ಬದುಕಿನ ಯಾವ ದಿವ್ಯ ರಹಸ್ಯವನ್ನು ಹೇಳುತ್ತಿತ್ತೋ ಆ ಮೂಲಕ ಅದು ನನಗೆ ಏನನ್ನು ಪರೋಕ್ಷವಾಗಿ ತಿಳಿಸಲು ಪ್ರಯತ್ನ ಪಡುತ್ತಿದೆಯೋ ಎನ್ನುವುದು ನನಗೆ ಒಂಚೂರೂ ಗೊತ್ತಾಗಲಿಲ್ಲ. ಆದರೆ ಅದು ಮಾತ್ರ ಅದರಷ್ಟಕ್ಕೆ ಮೌನವಾಗಿ ಯಾವುದೇ ಸದ್ದುಗದ್ದಲವಿಲ್ಲದೆ ಶಾಂತವಾಗಿಯೇ ಕುಳಿತಿತ್ತು.
“ನಿಜವಾಗಿಯೂ ಅವನು ಮತ್ತೆ ಸಿಗುತ್ತಾನೆ ಎನ್ನುವ ಭರವಸೆ ನಿನಗೆ ಇದೆಯೇ..?” ಹುಬ್ಬೇರಿಸಿ ವೃದ್ಧೆಯಲ್ಲಿಯೇ ಮತ್ತೆ ಕೇಳಿದೆ ನಾನು.
“ನಂಬಿಕೆಯೇ ಜೀವನ..” ಅಂದಳು ಮತ್ತೆ ಹೊರಗೆಲ್ಲೋ ನೋಡುತ್ತಾ.
ಅದು ನನ್ನಲ್ಲಿ ಇಲ್ಲದೇ ಇರುವಂತಹದ್ದು ಮತ್ತು ಅವಳ ಆ ಕುರುಡು ನಾಯಿಯಲ್ಲಿ ಬಹಳಷ್ಟು ಹೆಚ್ಚೇ ಇರುವಂತಹದ್ದು.. ನನ್ನ ಮನಸ್ಸು ನನಗೇ ತಿವಿದು ಹೇಳಿತು!
“ಒಂದು ವೇಳೆ ಅವನು ಸಿಕ್ಕರೆ ಈಗಲೂ ನೀನು ಅವನನ್ನೇ ಒಪ್ಪಿಕೊಳ್ಳುತ್ತೀಯಾ? ನೀನು ಹಾಗೆ ಅವನನ್ನು ಕ್ಷಮಿಸಿ ಬಿಡಬಲ್ಲೆಯಾ..?” ನಾನು ಅವಸರಕ್ಕೆ ಬಿದ್ದು ಅವಳಲ್ಲಿ ಕೇಳಿದೆ.
“ಅದಕ್ಕೆ ಮೊದಲು ಅವನು ಸಿಗಬೇಕಲ್ಲವೇ..!” ಅಂದಳು ವೃದ್ಧೆ.
ಅವಳೇಕೆ ಹಾಗೆ ಹೇಳಿದಳು ಎಂದು ನನಗೆ ಗೊತ್ತಾಗಲಿಲ್ಲ!
ಅವಳು ಕೈಯಲ್ಲಿ ಹಿಡಿದುಕೊಂಡಿದ್ದ ಸಂಗೀಸಿನ ಕೈಚೀಲ ನನ್ನನ್ನು ಇನ್ನಿಲ್ಲದಂತೆ ಗಮನ ಸೆಳೆಯಿತು. ಲಾರಿಯಲ್ಲಿ ಕುಳಿತಿದ್ದರೂ ಅವಳು ಅದನ್ನು ಮಾತ್ರ ಕೈಯಲ್ಲಿಯೇ ಹಿಡಿದುಕೊಂಡಿದ್ದಳು.
“ಏನಿದೆ ಈ ಚೀಲದಲ್ಲಿ.. ನಿನ್ನವನಿಗಾಗಿ ಏನಾದರೂ..?” ಈ ಬಾರಿ ತುಸು ನಗು ಚೆಲ್ಲುತ್ತಲೇ ಅವಳಿಗೆ ವಿಶೇಷ ಪ್ರಶ್ನೆಯೊಂದನ್ನು ಕೇಳಿದೆ.
“ಹೌದು.. ಅದು ಈ ಚೀಲದಲ್ಲಿಯೇ ಇದೆ..” ಅಂದಳು.
“ಏನದು.. ಅಷ್ಟೊಂದು ವಿಶೇಷವಾದದ್ದು?” ನಾನು ಮತ್ತೆ ಕೇಳಿದೆ.
“ಕತ್ತಿ…!” ಅಂದಳು.
“ಕತ್ತಿಯೇ! ಆದರೆ ಅದು.. ಅದು ಏತಕ್ಕಾಗಿ ನಿನ್ನ ಈ ಚೀಲದಲ್ಲಿದೆ?” ತಡವರಿಸುತ್ತಲೇ ಕೇಳಿದೆ ನಾನು.
“ಕೊಲ್ಲಲು.. ಅವನು ಸಿಕ್ಕರೆ ಕಡಿದು ಕೊಲ್ಲಲು!” ಅಂದಳು ಈ ಬಾರಿ ಬಹಳಷ್ಟು ಕ್ಷುದ್ರವಾಗಿಯೇ. ಏನೇನೋ ವಿಚಿತ್ರವಾಗಿ ಮಾತಾಡುತ್ತಿದ್ದ ಅವಳೀಗ ನೇರವಾಗಿ ಕ್ರೋಧಕ್ಕೆ ಜಾರಿದ್ದಳು!
“ಕೊಲ್ಲುವೆಯಾ! ಆದರೆ.. ಆದರೆ ಏತಕ್ಕಾಗಿ?!..” ಅರ್ಥವಾಗದೆ ನಾನು ಮತ್ತೆ ತಲೆ ಕೆರೆದುಕೊಂಡು ಅವಳಲ್ಲಿ ಆ ಪ್ರಶ್ನೆ ಕೇಳಿದೆ.
“ಅವನು ನನ್ನಿಂದ ದೂರ ಹೋಗಿದ್ದಕ್ಕಾಗಿ… ನನ್ನನ್ನು ಈ ಬಾಳಿನಲ್ಲಿ ತೀರಾ ಒಂಟಿ ಮಾಡಿದ್ದಕ್ಕಾಗಿ! ಹೌದು, ಅದಕ್ಕಾಗಿಯೇ ನಲ್ವತ್ತು ವರ್ಷಗಳಿಂದಲೂ ಈ ಕತ್ತಿಯೊಂದಿಗೆ ಅವನಿಗಾಗಿ ನಾನು ಹುಡುಕಾಡುತ್ತಿದ್ದೇನೆ. ಅದಕ್ಕಾಗಿಯೇ ನನಗವನೊಮ್ಮೆ ಸಿಗಬೇಕು!..” ಎಂದವಳ ಮಾತು ಈಗಂತು ಕ್ರೋಧದಿಂದ ಮತ್ತಷ್ಟು ಗಡುಸಾಗಿತ್ತು ಹಾಗೂ ಅಷ್ಟೇ ತೀಕ್ಷ್ಣವಾಗಿ ಅವಳಿಂದ ಹೊರ ಹೊಮ್ಮಿತ್ತು.
ನನ್ನ, ಅವಳ ಮತ್ತು ಆ ಕುರುಡು ನಾಯಿಯ ನಡುವೆ ಗಾಢವಾದ ಮೌನವೊಂದು ಮತ್ತೊಮ್ಮೆ ಹೇಳದೆ ಕೇಳದೆ ರಾಜ್ಯವಾಳಲಾರಂಭಿಸಿತು.
ಮಾತಿಲ್ಲ ಕಥೆಯಿಲ್ಲ, ಅವಳದ್ದು ಒಂಚೂರು ಸದ್ದಿಲ್ಲ. ನಾಯಿಯದ್ದಂತು ಮೊದಲಿನಿಂದಲೂ ಬರೀ ಮುಗಿಯದ ಮೌನ. ಅವಳ ಕೋಲಿನದ್ದು ಮತ್ತು ಲಾರಿಯೊಳಗೆ ರಾಶಿ ಬಿದ್ದಿದ್ದ ಹಳೆಯ ಕಬ್ಬಿಣದ ಕತ್ತಿಗಳದ್ದು ಎಂದಿನಂತೆ ಲಾರಿಯೊಳಗಿನ ಎಲ್ಲಾ ಸಂಭಾಷಣೆಗಳಿಗೊಂದು ಮೂಕ ಸಾಕ್ಷಿ. ಲಾರಿಯದ್ದು ಒಂಚೂರು ಹೆಚ್ಚೂ ಆಗದ, ಅದೇ ರೀತಿ ಒಂಚೂರು ಕಡಿಮೆಯೂ ಆಗದ ಒಂದೇ ಗತಿಯ ಸಮಾಧಾನದ ಓಟ.
ಅವಳ ಕತ್ತಿಯ ವಿಷಯ ಬಂದ ಕಾರಣ, ಲಾರಿಯಲ್ಲಿ ಅದಾಗಲೇ ಒಂದು ಮೂಲೆಯಲ್ಲಿ ರಾಶಿ ಬಿದ್ದಿದ ಕತ್ತಿಗಳನ್ನು ನೋಡುತ್ತಾ ಮೌನ ಮುರಿಯಲೆಂದು ನಾನು ಹೀಗೆ ಸುಮ್ಮನೆ ಅವಳಲ್ಲಿಯೇ ಕೇಳಿದೆ..
“ಅದು ಹೌದು, ಇಷ್ಟೊಂದು ಕತ್ತಿ, ಚಾಕು, ಚೂರಿ, ಸರಳುಗಳ ರಾಶಿ ಈ ಲಾರಿಯೊಳಗಡೆಯೇ ಇದೆಯಲ್ಲಾ, ಇದೆಲ್ಲಾ ಎಲ್ಲಿಂದ? ಯಾರದ್ದಿದು..?”
ನನ್ನಂತೆಯೇ ಎಲ್ಲೋ ಲಾರಿ ಹತ್ತಿದ್ದ ಅವಳಿಗೂ ಕೂಡ ಇದು ಗೊತ್ತಿರಲು ಸಾಧ್ಯವಿಲ್ಲ ಎಂದು ನನಗೆ ಗೊತ್ತಿದ್ದರೂ ಸಹ ಸುಮ್ಮನೆ ಬಾಯಿ ಮಾತಿಗೆ ಅವಳಲ್ಲಿ ಈ ಪ್ರಶ್ನೆ ಕೇಳಿದ್ದೆ ನಾನು.
ಆದರೆ ವೃದ್ಧೆ ನನ್ನನ್ನು ಇನ್ನಿಲ್ಲದ ಆಶ್ಚರ್ಯಕ್ಕೆ ದೂಡಿದ್ದಳು; ಏಕೆಂದರೆ ಆ ಪ್ರಶ್ನೆಗೆ ಅವಳ ಬಳಿ ಉತ್ತರವಿತ್ತು!
“ಬಾಕಿ ಕತ್ತಿ, ಚಾಕು, ಸರಳುಗಳ ಬಗ್ಗೆ ನನಗೆ ಸರಿಯಾಗಿ ಗೊತ್ತಿಲ್ಲ; ಆದರೆ ಮೇಲಿರುವ ಆ ಒಂದು ಪುಟ್ಟ ಚೂರಿ ಇದೆಯಲ್ಲಾ, ಅದು.. ಅದು ಮಾತ್ರ ಅವಳದ್ದೇ..!” ಅಂದಳು.
“ಅವಳು ಅಂದರೆ.. ?” ನಾನು ಕುತೂಹಲ ತಡೆಯಲಾರದೆ ಕೇಳಿದೆ.
“ಅದೇ ಆ ಯುವತಿಯದ್ದು..!” ಅಂದಳು.
“ಯುವತಿಯೇ?! ಹೇಳು ಯಾರದು ಯುವತಿ..?” ಸ್ವಲ್ಪವೂ ಅರ್ಥವಾಗದೆ ಮತ್ತಷ್ಟು ಗೊಂದಲಕ್ಕೆ ಬಿದ್ದು ಪ್ರಶ್ನೆ ಕೇಳಿದೆ. ಆದರೆ ಅವಳು ಹೇಳಲಿಲ್ಲ! ನಾನು ಅವಳ ಉತ್ತರಕ್ಕಾಗಿ ಮತ್ತಷ್ಟು ಕಾದೆ.
ಉಹೂಂ.. ಇಲ್ಲ, ಅವಳು ಏನನ್ನೂ ಹೇಳಲೇ ಇಲ್ಲ!!
ಕ್ಷಣಗಳು ಉರುಳಿದವು..
ಲಾರಿ ನಿಧಾನವಾಗಿಯೇ ಸಾಗುತ್ತಿತ್ತು.
‘ಗರಜೆ ಘಟ ಘನ ಕರೆ ರಿ ಕರೀ…’ ಎಂಬಂತೆ ಆಕಾಶದಲ್ಲಿ ಗುಂಪು ಸೇರಿದ್ದ ಕಾರ್ಮೋಡಗಳು ಈ ಬಾರಿ ಮತ್ತಷ್ಟು ಜೋರಾಗಿ ಮದಗಜಗಳಂತೆ ಘೀಳಿಟ್ಟು ಅಲ್ಲಲ್ಲಿ ಮಿಂಚರಳಲು ಕೂಡ ಶುರುವಾದವು.
ಹಿಂದಿನ ಗ್ರಾಮದಲ್ಲಿ ಮೇಘ್ ಮಲ್ಹಾರ್ ಹಾಡಿ ತನ್ನ ಪ್ರಿಯಕರನನ್ನೂ, ಮಳೆಯನ್ನೂ ನನೆಯುತ್ತಿದ್ದ ವಿರಹಿಯ ಪ್ರಯತ್ನಕ್ಕೆ ಮಳೆ ಮೋಡಗಳು ಒಲಿಯುವ ಕ್ಷಣಗಳು ಬಹಳಷ್ಟು ಹತ್ತಿರದಲ್ಲಿದ್ದವು. ನಾನು ಆರಂಭದಲ್ಲಿ ಬಯಸಿದಂತೆಯೇ ಮಳೆಗೂ ಕೂಡ ಈಗ ಒಮ್ಮೆ ಸುರಿದು ಬಿಡುವ ತವಕ.
ಒಂದೆರಡು ಹನಿ ಅಲ್ಲಲ್ಲಿ ಬಿದ್ದೇ ಬಿಟ್ಟಿತು. ಮಳೆಯ ಮೊದಲ ಹನಿಗಳು ಅವು. ‘ಮಾನನ ಕರಿಯೆ ಗೋರಿ, ತುಮರೆ ಕಾರಣ ಆಯೋರೆ ಮೇಹಾ’- ಈ ಮಳೆ ಬಂದಿರುವುದೇ ನಿನ್ನಿಂದಾಗಿ ಎಂದು ಮೇಘ್ ಮಲ್ಹಾರ್‌ನಲ್ಲಿ ಹಾಡಿದ ಹುಡುಗಿಯನ್ನು ಮತ್ತೆ ನೆನಪಿಸಿಕೊಂಡೆ.
ಆಗಲೇ ಲಾರಿಯ ಕುಲುಕಾಟಕ್ಕೆ ವೃದ್ಧೆಯ ಸಂಗೀಸಿನ ಕೈಚೀಲದಿಂದ ಎಗರಿದ ವಸ್ತುವೊಂದು ಹಾಗೇ ಉರುಳುತ್ತಾ ನನ್ನ ಬಳಿಗೆ ಬಂದದ್ದು. ಕೈಗೆ ತೆಗೆದುಕೊಂಡು ಅದನ್ನೇ ಸರಿಯಾಗಿ ಗಮನಿಸಿ ನೋಡಿದೆ. ಅದು ಬಿದಿರಿನದ್ದೊಂದು ಹಳೆಯ ಕೊಳಲು.
ಬಹುಶಃ ಅವಳ ಆ ಯಜಮಾನನೇ ಕೊಟ್ಟಿದ್ದಿರಬೇಕು. ಅವರಿಬ್ಬರ ಪ್ರೇಮದ ಅಮರ ಮಧುರ ಸವಿ ಸವಿ ನೆನಪಿಗಾಗಿ ಎಂದು ನಾನಂದುಕೊಂಡೆ.
ಆ ಕೊಳಲನ್ನು ನೋಡುವಾಗ ನನಗೆ ಮತ್ತೆ ನನ್ನವಳೇ ನೆನಪಾದಳು. ಹಾಡು, ನೃತ್ಯಗಳೆಂದರೆ ಅವಳಿಗೂ ಪಂಚಪ್ರಾಣ. ಅವಳು ಗೆಜ್ಜೆ ಕಟ್ಟಿಕೊಂಡು ಮನಸ್ಸೋಯಿಚ್ಛೆ ನವಿಲಿನಂತೆಯೇ ಕುಣಿಯುತ್ತಿದ್ದಳು. ಸುಶ್ರಾವ್ಯವಾಗಿ ಹಾಡು ಕೂಡ ಹಾಡುತ್ತಿದ್ದಳು. ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಅಭ್ಯಾಸವು ಕೂಡ ಅವಳಿಗೆ ಬಹಳ ಚೆನ್ನಾಗಿಯೇ ಇತ್ತು. ಆದರೆ ನನಗೆ ಅವೆಲ್ಲವೂ ಕಿರಿಕಿರಿಯಾಗುತ್ತಿತ್ತು. ನಿಜ ಹೇಳಬೇಕೆಂದರೆ ನನ್ನೆಲ್ಲಾ ವರ್ತನೆಗಳು ನಿಜವಾಗಿಯೂ ಅವಳಿಗೆನೇ ಕಿರಿಕಿರಿಯಾಗುತ್ತಿದ್ದದು ಎಂದು ನನಗೆ ಅರ್ಥವಾಗಿದ್ದು ಮಾತ್ರ ಬೆಟ್ಟದ ತುದಿಯಿಂದ ಜಿಗಿದು ಅವಳು ಪ್ರಾಣ ಬಿಟ್ಟ ಮೇಲೆಯೇ!!
ಆ ದಿನದಿಂದ ಮನೆಯಲ್ಲಿ ಅವಳದ್ದೊಂದು ಘಲ್ಲೆನ್ನುತ್ತಿದ್ದ ಗೆಜ್ಜೆ, ಅವಳ ನುಡಿಯುವ ಸಿತಾರ್ ಎರಡೂ ಮಾತು ನಿಲ್ಲಿಸಿಬಿಟ್ಟವು!!
ಆಮೇಲೆಯೇ ನಾನು ಅವಳನ್ನು ಈ ಬೆಟ್ಟ ಗುಡ್ಡಗಳಲ್ಲಿ ಹುಡುಕಾಡಲು ಶುರು ಮಾಡಿದ್ದು. ಅಲ್ಲಿಯವರೆಗೆ ಅರ್ಥವಾಗದೇ ಇದ್ದ, ಕಿರಿಕಿರಿ ಎಂದು ಒಂಚೂರು ಇಷ್ಟವೇ ಪಡದ ಸಂಗೀತ ಕೂಡ ನನ್ನಂತಹ ಸಂಗೀತದ್ವೇಷಿಗೆ ಬಹಳಷ್ಟು ಹತ್ತಿರವಾದದ್ದು. ಅವಳಿಗೆ ಮಲ್ಹಾರಿ ರಾಗಗಳೆಂದರೆ ಅದರಲ್ಲೂ ಮೇಘ್ ಮಲ್ಹಾರ್ ಎಂದರೆ ಅದೆನೋ ಪ್ರೀತಿ. ವರ್ಷ ಋತು ಆರಂಭವಾಯಿತೆಂದರೆ ಸಾಕು ಮಳೆ ಮೋಡಗಳು ಕಣ್ಣಿಗೆ ಬಿದ್ದೊಡನೆ ಅವಳು ಸಿತಾರ್ ಎದೆಗಪ್ಪಿಗೊಂಡು ಸುಮ್ಮನೆ ಹಾಡುತ್ತಿದ್ದಳು. ಆ ರಾಗಗಳು ಮೇಘ್ ಮಲ್ಹಾರ್, ಶುದ್ಧ್ ಮಲ್ಹಾರ್, ಗೌಡ್ ಮಲ್ಹಾರ್, ಸೂರ್ ಮಲ್ಹಾರ್, ಮಿಯಾನ್ ಕಿ ಮಲ್ಹಾರ್, ಮೀರಾ ಕಿ ಮಲ್ಹಾರ್, ರಾಮ್ದಾಸಿ ಮಲ್ಹಾರ್, ನಟ್ ಮಲ್ಹಾರ್, ದೇಸ್ ಮಲ್ಹಾರ್, ರಾಗ್ ಮೇಘ್‌ಗಳೆಂದು ನನಗೆ ಸ್ಪಷ್ಟವಾಗಿ ಪರಿಚಯವಾಗಿದ್ದು ಕೂಡ ಅವಳು ನನ್ನ ಬಾಳಿನಿಂದ ನಿರ್ಗಮಿಸಿದ ಮೇಲೆಯೇ.
ಅವಳು ಬದುಕಿದ್ದಾಗ ಅವೆಲ್ಲಾ ರಾಗಗಳು ಮಳೆಗಾಲದ ಸಂಜೆಗೆ ನಮ್ಮನೆಯ ಖಾಯಂ ಅತಿಥಿಗಳೇ ಆಗಿ ಬಿಟ್ಟಿದ್ದವು. ಅವಳ ವಿರಹದ ಆ ಮಳೆರಾಗದ ಹಾಡುಗಳಲ್ಲಿ ನಾನು ಕೂಡ ಇದ್ದೆ ಎನ್ನುವುದು ನನಗೆ ಅವಳಿದ್ದಾಗ ಎಂದಿಗೂ ಅರಿವಿಗೇ ಬಂದಿರಲಿಲ್ಲ. ಹ್ಞೂಂ ಅದೆಂತಹ ಪಾಪಿ ಆಗಿರಬೇಡ ನಾನು. ಆಮೇಲೆ ಮಾತ್ರ ನಾನು ಅವಳ ನೆನಪಿಗಾಗಿಯೇ ಸಂಗೀತವನ್ನು, ಮಳೆಯನ್ನು, ಆ ಮಳೆರಾಗಗಳನ್ನು ಹೆಚ್ಚು ಹೆಚ್ಚು ಇಷ್ಟಪಡತೊಡಗಿದೆ; ವಿಪರ್ಯಾಸವೆಂದರೆ ಅವಳು ಬದುಕಿದ್ದಾಗ ಅಂತು ಅಲ್ಲವೇ ಅಲ್ಲ!
ನನ್ನ ವಿಪರೀತ ಕೋಪವೇ ಅವಳ ಅಪಾರ ಪ್ರೀತಿಯನ್ನು ಹಾಗೂ ಸ್ವತಃ ಅವಳನ್ನು ಕೂಡ ಕೊಂದಿದ್ದು ಎಂದು ನನ್ನ ಮನಸ್ಸು ನನಗೆ ಸಾವಿರ ಬಾರಿ ಚುಚ್ಚಿ ಚುಚ್ಚಿ ಹೇಳಿದೆ!
ಅದು ಹೌದು.. ತನ್ನ ಬಾಳಿನ ಎಲ್ಲಾ ಕಥೆ ಹೇಳಿದ ಈ ಒಂದು ವೃದ್ಧೆಗೆ ನನ್ನವಳು ಸತ್ತು ಹೋಗಿರುವ ವಿಷಯವೊಂದನ್ನು ಮಾತ್ರ ನನಗೇಕೆ ಇನ್ನೂ ಬಾಯಿ ಬಿಟ್ಟು ಹೇಳಲು ಸಾಧ್ಯವಾಗುತ್ತಿಲ್ಲ?!! ಈಗಲೂ ಅದನ್ನೊಂದನ್ನು ಇವಳಲ್ಲಿ ಹೇಳುವ ಪ್ರಯತ್ನವನ್ನು ನಾನೇಕೆ ಮಾಡುತ್ತಲೇ ಇಲ್ಲ!
ಜೀವನದಲ್ಲಿ ತುಂಬಾ ಬೇಕಾಗಿರುವವರನ್ನು ಸತ್ತು ಹೋಗಿದ್ದಾರೆ ಎಂದು ಬಾಯಿ ಬಿಟ್ಟು ಇತರರಿಗೆ ಹೇಳುವುದು ಮತ್ತು ಸತ್ತವರನ್ನು ಮತ್ತೆ ಮತ್ತೆ ಜೀವಂತವಾಗಿರಿಸುವ ಪ್ರಯತ್ನವನ್ನು ಮಾಡುವುದು.. ಎರಡೂ ನಿಜಕ್ಕೂ ತುಂಬಾನೇ ಕಷ್ಟಕರ!!
ಸುಮ್ಮನೆ ಮುಖದ ಮೇಲೆ ಈ ಹೊರ ಜಗತ್ತಿಗೆಂದು ನಗುವಿನ ಹೂವರಳಿಸುವ ನಾನು, ನನ್ನ ಹೃದಯೊಳಗೆಯೇ ಏಕೆ ಶಾಶ್ವತವಾದ ಹೂವೊಂದನ್ನು ಇನ್ನೂ ಅರಳಿಸಿ ಆನಂದಪಟ್ಟಿಲ್ಲ! ಒಳಗಿನಿಂದಲೇ ಸಂಭ್ರಮ ಪಡುವುದೆಂದರೆ ಅಷ್ಟೊಂದು ಕಷ್ಟವೇ ಬದುಕಿನಲ್ಲಿ ಅಥವಾ ಅದು ಬರೀ ವೈರಾಗಿಗಳ ಪಾಲಿನ ಸಂಗತಿಯೇ?
ಉತ್ತರ ನನಗೇ ಗೊತ್ತಿಲ್ಲ!
ಆ ಕೊನೆಯದ್ದೊಂದು ಸುತ್ತಿನ ಮೌನ ಮುಗಿದ ನಂತರ ಒಮ್ಮೆ ಹಾಗೇ ದೀರ್ಘವಾಗಿ ಉಸಿರೆಳೆದುಕೊಂಡು ಕೈಯಲ್ಲಿದ್ದ ಅವಳ ಕೊಳಲನ್ನೊಮ್ಮೆ ತುಟಿಗೆ ತಂದುಕೊಂಡು ಅದನ್ನು ನುಡಿಸುವ ಪ್ರಯತ್ನ ಮಾಡಿದೆ.
ಅದನ್ನು ಗಮನಿಸಿದ ಅವಳು ಆ ಕೂಡಲೇ ನನ್ನ ಕೈಯಿಂದ ಅವಳ ಕೊಳಲನ್ನು ರಪ್ಪನೇ ಕಸಿದುಕೊಂಡು “ಬೇಡಾ…ಇದನ್ನು ಮುಟ್ಟಬೇಡ ನೀನು, ನುಡಿಸಲು ಅಂtU ಹೋಗಲೇಬೇಡ. ಇದರೊಳಗೆ.. ಇದರೊಳಗೆ ನನ್ನವನ ಉಸಿರಿದೆ. ಹ್ಞಾನ್.. ಅವನ ಬಿಸಿ ಉಸಿರು ಈಗಲೂ ಇದರೊಳಗೆ ಭದ್ರವಾಗಿಯೇ ಇದೆ, ನಿನಗದು ಗೊತ್ತಿಲ್ಲ..” ಎಂದು ಹೇಳಿದವಳೇ ಆ ಕೊಳಲನ್ನು ಹಾಗೇ ಹಣೆಗೊತ್ತಿಕೊಳ್ಳುತ್ತಾ, ಕಣ್ಣಲ್ಲಿ ನೀರು ತುಂಬಿಕೊಂಡಳು.
“ಹ್ಞೂಂ, ನಿನ್ನವನು ನಿನಗೆ ಕೈಕೊಟ್ಟು ನಿನ್ನಿಂದ ದೂರ ಮಾತ್ರ ಆಗಲಿಲ್ಲ, ನೋಡು.. ಪ್ರೀತಿಯಿಂದ ಅವನು ನಿನಗೆ ಅವನ ನೆಚ್ಚಿನ ಕೊಳಲನ್ನು ಕೂಡ ಕೊಟ್ಟಿದ್ದಾನೆ… ನೀನು ಮಾತ್ರ ಅವನನ್ನು ಕೊಲ್ಲುವೆ, ಕಡಿಯುವೆ, ಬಡಿಯುವೆ ಎಂದು ಕೋಪದಲ್ಲಿ ಏನೇನೋ ಅರ್ಥವಿಲ್ಲದ ಮಾತುಗಳನ್ನು ಹುಚ್ಚಿಯಂತೆ ಹೇಳುತ್ತಿದ್ದೀಯ. ಹಹ್ಹಾ.. ಹುಚ್ಚಿಯಂತೆ ಅಲ್ಲ, ಹುಚ್ಚಿಯೇ ನೀನು… ಹಹ್ಹಾ.. ಹಹಹ್ಹಾ..” ಅವಳನ್ನು ಕೆಣಕುವ ಸಲುವಾಗಿ ಬೇಕೆಂದೇ ನಾನು ಆ ಮಾತುಗಳನ್ನು ಇನ್ನಷ್ಟು ವ್ಯಂಗ್ಯವಾಗಿ ನುಡಿದೆ.
“ಅವನೇನು ಕೊಟ್ಟು ಹೋಗಲಿಲ್ಲ. ನಾನೇ ಅವನ ನೆನಪಿಗಾಗಿ ಇನ್ನೂ ಇದನ್ನು ಹಾಗೇ ಇಟ್ಟುಕೊಂಡಿರುವೆ… ” ಎಂದು ಸಿಟ್ಟಿನಿಂದ ಹೇಳಿದವಳು, ಆ ಕೊಳಲನ್ನು ಜೋಪಾನವಾಗಿ ಮತ್ತೆ ತನ್ನ ಸಂಗೀಸಿನ ಚೀಲದೊಳಗೆ ತುರುಕಿಕೊಂಡಳು.
ದೂರವಾಗಿ ಹೋಗಿದ್ದರೂ ಅವನೆಡೆಗಿನ ಅವಳ ಅದೊಂದು ಗಾಢವಾದ ಸಿಟ್ಟಿನಲ್ಲಿ ಆಗಲಿ, ಕರಗದ ಆ ಕೋಪದಲ್ಲಿ ಆಗಲಿ, ಕ್ಷಮಿಸಲು ಒಪ್ಪದ ಆ ಒಂದು ವಿಚಿತ್ರ ಮನಸ್ಥಿಯಿಂದಾಗಲಿ ಅವಳಲ್ಲಿ ಒಂಚೂರು ಬದಲಾವಣೆ ಇನ್ನೂ ಆಗಿಯೇ ಇಲ್ಲ ಎಂದು ಮೇಲ್ನೋಟಕ್ಕೆ ನನಗನ್ನಿಸಿತು. ಬಹುಶಃ ಅದಕ್ಕೆ ಅಷ್ಟೂ ವರ್ಷಗಳ ಅವಳದ್ದೊಂದು ತೀವ್ರವಾದ ನೋವು ಕೂಡ ಕಾರಣವಿರಬಹುದು.
ಆದರೆ ನಾನೇಕೆ ಹೀಗೆಲ್ಲಾ ಯೋಚಿಸುತ್ತಿರುವೆ!?
“ಹಾನ್.. ನೆನಪಾಯಿತು. ಆ ಯುವತಿ ಕೂಡ ಅವಳಿಂದ ದೂರವಾಗಿದ್ದ ಅವಳ ಪ್ರಿಯಕರನ ಬಗ್ಗೆಯೇ ಬಹಳಷ್ಟು ಹೇಳುತ್ತಿದ್ದಳು..!” ವೃದ್ಧೆ ಮತ್ತೆ ಯುವತಿಯೇ ಬಗ್ಗೆ ನುಡಿದಳು.
ಎಷ್ಟೇ ಕೇಳಿದರೂ ಅದರ ಬಗ್ಗೆ, ಆ ಒಂದು ಯುವತಿಯ ಬಗ್ಗೆ ವೃದ್ಧೆ ಏನನ್ನೂ ಹೇಳುವುದಿಲ್ಲ ಎಂದು ನನಗನಿಸಿತು. ಹಾಗಾಗಿ ನಾನೂ ಸಹ ಅದರ ಬಗ್ಗೆ ಮತ್ತೆ ಏನನ್ನೂ ಅವಳಲ್ಲಿ ಕೇಳಲಿಲ್ಲ!
ಲಾರಿ ಮಾತ್ರ ಎಗರಿ ಎಗರಿ ಸಾಗುತ್ತಲೇ ಇತ್ತು.
ಆಗಲೇ ರಸ್ತೆ ಪಕ್ಕದಲ್ಲಿ ನಡೆಯುತ್ತಿದ್ದ ಅದು ಯಾವುದೋ ಒಂದು ಹಳ್ಳಿಯ ಸಂತೆಯಲ್ಲಿ ಯಾರೋ ಒಬ್ಬರು ನುಡಿಸಿದ ಕೊಳಲಿನ ನಾದ ಅಲೆ ಅಲೆಯಾಗಿ ಬಂದು ಹಾಗೇ ನನ್ನ ಕಿವಿಗೆ ಬಡಿಯಿತು… ಮತ್ತದು ಅವಳ ಕಿವಿಗೂ ಬಿದ್ದಿತು!
ಅಷ್ಟೇ..
ಬರಡಾಗಿದ್ದ ಅವಳ ಜೀವ ಹಾಗೂ ಅವಳದ್ದೊಂದು ಆ ವೃದ್ಧ ಜೀವನಕ್ಕೆ ಹೊಸ ಚೈತನ್ಯವೇ ಬಂದಂತಾಯಿತು. ಒಮ್ಮೆಲೇ ಮರದ ಕೋಲಿನ ಸಹಾಯವಿಲ್ಲದೆಯೇ ಹಾಗೇ ಚಲಿಸುತ್ತಿದ್ದ ಲಾರಿಯಲ್ಲಿ ಅವಳು ಎದ್ದು ನಿಂತಳು!
“ಲಾರಿ ನಿಲ್ಲಿಸು..” ಎಂದು ಡ್ರೈವರ್‌ಗೆ ಕೇಳುವಂತೆ ಹಿಂದಿನಿಂದಲೇ ಬಹಳ ಜೋರಾಗಿ ಬೊಬ್ಬೆ ಹೊಡೆದಳು.
ಮೇಲಿನಿಂದ ಕೇಳಿ ಬರುತ್ತಿದ್ದ ಗುಡುಗಿಗಿಂತಲೂ ಅವಳ ಈ ಒಂದು ಧ್ವನಿಯೇ ಬಹಳಷ್ಟು ಜೋರಾಗಿತ್ತು. ಅರಳುತ್ತಿದ್ದ ಕೋಲ್ಮಿಂಚುಗಳು ಅವಳ ವಾಣಿಗೊಂದು ಅಶರೀರವಾಣಿಯಂತಹ ಸ್ಪರ್ಶವನ್ನೇ ಹಿನ್ನಲೆಯಲ್ಲಿ ಒದಗಿಸುತ್ತಿದ್ದವು.
ಬ್ರೇಕ್ ಹಾಕಿದ ಲಾರಿ ಒಂದಿಷ್ಟು ದೂರ ಹೋದಮೇಲೆ ಕೊನೆಗೂ ಸಾವರಿಸಿಕೊಂಡು ನಿಂತಿತು; ಆ ವೃದ್ಧೆಗಾಗಿ.
“ಅದು.. ಅದು ಅವನೇ. ಹೌದು, ಖಂಡಿತವಾಗಿಯೂ ಅವನು ನನ್ನವನೇ.. ಆ ಕೊಳಲ ದನಿ ನನ್ನವನದ್ದೇ… ಹಹ್ಹಾ.. ಹಹಹ್ಹಾ.. ಸಿಕ್ಕಿದ; ಮತ್ತೊಮ್ಮೆ ಸಿಕ್ಕಿದ..” ಎಂದು ಕೊಳಲ ದನಿ ಇಂಪಾಗಿ ಕೇಳಿ ಬರುವ ಕಡೆಗೆಯೇ ಕೈ ತೋರಿಸುತ್ತಾ, ಜೋರಾಗಿ ಖುಷಿಯ ನಗು ಚೆಲ್ಲುತ್ತಾ, ಬಹಳ ಆತ್ಮವಿಶ್ವಾಸದಿಂದಲೇ ಹೇಳಿದಳು ವೃದ್ಧೆ!
ಭ್ರಮೆ ಅವಳಿಗೆ ಆವರಿಸಿದ್ದೋ.. ಅಥವಾ ನನಗೀಗ ಆವರಿಸುತ್ತಿದೆಯೋ ಎಂದು ನನಗೇ ಗೊತ್ತಾಗಲಿಲ್ಲ. ಏಕೆಂದರೆ ಅವಳ ಈ ರೀತಿಯದ್ದೊಂದು ತುಂಬು ಸಂಭ್ರಮವನ್ನು ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅವಳ ಆ ಸಂಭ್ರಮ ನನ್ನಲ್ಲಿ ಭಯವನ್ನೇ ಹುಟ್ಟಿಸುತ್ತಿತ್ತು.
ಮೇಲಿನ ಆಕಾಶದಲ್ಲಿ ಗುಡುಗು ಸಿಡಿಲಿನ ಸರದಿ ಮುಗಿದು ಮೋಡಗಳು ಚೆನ್ನಾಗಿ ಕರಗಿ ಈಗ ಹನಿ ಹನಿಯಾಗಿ ಉದುರುವ ಮಳೆಗೊಂದು ಸುರಿದು ಬಿಡುವ ಅವಸರ. ಮಳೆ ಬಹಳ ನಿಧಾನಕ್ಕೆಯೇ ಸುರಿಯಿತು; ಆ ನಂತರ ಅದರ ಸಂಭ್ರಮ ಕೂಡ ಅದಕ್ಕೆ ಬೇಕಾದಂತೆಯೇ, ಅದಕ್ಕೆ ಮನಸ್ಸು ಬಂದಂತೆಯೇ!
ಅವಳು ಆ ಮಳೆಯನ್ನು ಒಂಚೂರು ಲೆಕ್ಕಿಸದೇ ನಿಂತ ಲಾರಿಯಿಂದ ತನ್ನ ಸಂಗೀಸಿನ ಕೈಚೀಲ ಹಾಗೂ ತನ್ನ ಕೋಲು ಎರಡನ್ನೂ ಹಿಡಿದುಕೊಂಡು ಹೇಗೋ ಕೆಳಗಿಳಿದಳೇ ಬಿಟ್ಟಳು. ಕೆಳಗಿಳಿದವಳೇ ಆ ಮಳೆಯಲ್ಲಿ ತನ್ನ ಕೋಲು ಊರುತ್ತಾ ಬಿರುಸಾಗಿ ನಡೆಯತೊಡಗಿದಳು. ಆ ವೇಳೆಗೆ ಮಳೆ ಕೂಡ ತನ್ನ ವೇಗವನ್ನು ಹೆಚ್ಚಿಸಿಕೊಂಡಿತು.
ತನ್ನ ಒಡತಿ ಲಾರಿಯಿಂದ ಕೆಳಗಿಳಿದುದನ್ನು ಅರ್ಥ ಮಾಡಿಕೊಂಡ ಆ ಮುದಿ ನಾಯಿ ಒಂಚೂರು ಸದ್ದು ಮಾಡದೇ ಛಂಗನೆ ಲಾರಿಯಿಂದ ಕೆಳ ಜಿಗಿದು, ಅವಳ ಹಿಂದೆಯೇ ನೆಲ ಮೂಸುತ್ತಾ ಮೂಸುತ್ತಾ ಓಡತೊಡಗಿತು!
ನಾನು ಅವಳನ್ನೇ ನೋಡಿದೆ. ಅವಳಿಗೀಗ ಕೊಳಲಿನ ಧ್ವನಿ ಇನ್ನಷ್ಟು ಜೋರಾಗಿ ಬಹಳಷ್ಟು ತೀವ್ರವಾಗಿ ಕೇಳಿದಂತೆ ಭಾಸವಾಯಿತು. ನಡೆಯುವುದನ್ನು ಬಿಟ್ಟು ಹಾಗೇ ಕೋಲು ಊರುತ್ತಲೇ ನಿಧಾನಕ್ಕೆ ಓಡುವ ಪ್ರಯತ್ನದಲ್ಲಿ ತೊಡಗಿದಳು!
ನಾನು ಆಗಲೇ ಗಮನಿಸಿದ್ದು ಲಾರಿಯ ಅಲುಗಾಟಕ್ಕೆ ಅವಳ ಸಂಗೀಸಿನ ಕೈಚೀಲದಿಂದ ಉದುರಿದ್ದ ಮತ್ತೊಂದು ವಸ್ತು ಲಾರಿಯಲ್ಲಿಯೇ ಉಳಿದುಕೊಂಡಿರುವುದನ್ನು.
ಅದು ಬೇರೆ ಏನೂ ಆಗಿರದೆ ಅವಳ ಕತ್ತಿಯಾಗಿತ್ತು!
“ನಿಲ್ಲು.. ಇದೋ ನಿನ್ನ ಕತ್ತಿ ಇಲ್ಲೇ ಇದೆ. ತೆಗೆದುಕೊಂಡು ಹೋಗು ಇದನ್ನು. ನಿನಗೆ.. ನಿನ್ನ ಪ್ರೀತಿಗೆ ಮೋಸ ಮಾಡಿದ ನಿನ್ನ ಆ ಅವನನ್ನು ಇದರಿದಂಲೇ ಕತ್ತರಿಸಿ ಕೊಂದುಬಿಡು… ಅವನ ಮೇಲಿನ ನಿನ್ನ ಇಷ್ಟು ವರ್ಷಗಳ ಕೋಪ ಇವತ್ತೇ ತಣಿದು ಹೋಗಲಿ… ಅವನನ್ನು ಕ್ಷಮಿಸಬೇಡ! ಇಷ್ಟೊಂದು ವರ್ಷ ನಿನ್ನನ್ನು ಒಂಟಿ ಮಾಡಿದ ಅವನು ಖಂಡಿತವಾಗಿಯೂ ಕ್ಷಮೆಗೆ ಅರ್ಹನಲ್ಲ, ಅವನನ್ನು ನೀನು ಎಂದಿಗೂ ಕ್ಷಮಿಸಬೇಡ..” ಎಂದು ಜೋರಾಗಿ ನಾನು ಅವಳಿಗೆ ಕೂಗಿ ಕೂಗಿ ಹೇಳಿದೆ.
ಹೌದು.. ನಾನೇಕೆ ಹಾಗೆ ಹೇಳಿದೆ? ಅದರಲ್ಲೂ ನನ್ನಂತವನು!!
ನಾನು ಹೇಳಿದ್ದು ಅವಳಿಗೂ ಕೇಳಿಸಿತು. ಹೌದು, ಬಹಳ ಸ್ಪಷ್ಟವಾಗಿಯೇ ಕೇಳಿಸಿತು!
ಆದರೂ ಏನೂ ಕೇಳದವಳಂತೆ ಸಂತೆಯಲ್ಲಿ ಕೇಳಿ ಬರುತ್ತಿದ್ದ ಆ ಕೊಳಲ ನಾದದ ಕಡೆಗೆಯೇ ಕೈಯಲ್ಲಿದ್ದ ಚೀಲವನ್ನು ಗಟ್ಟಿಯಾಗಿ ಹಿಡಿದುಕೊಂಡು ಕೋಲು ಊರುತ್ತಲೇ ಕುಂಟುತ್ತಾ ಕುಂಟುತ್ತಾ ಓಡಿದಳು.
ಅದೆನೋ ಮೈ ಮರೆತವಳಂತೆ, ಯಾವುದೋ ತೀವ್ರವಾದ ಆಕರ್ಷಣೆಗೆ ಒಳಗಾದವಳಂತೆ, ಸುತ್ತಲೂ ಸುರಿಯುತ್ತಿದ್ದ ಆ ಮಳೆಯನ್ನು ಸಹ ಮೊದಲ ಬಾರಿಗೆಯೋ ಎಂಬಂತೆ ತುಂಬಾ ಇಷ್ಟಪಟ್ಟೇ ಅನುಭವಿಸುತ್ತಾ, ಅನುಭವಿಸುತ್ತಾ, ಕೊನೆಯಲ್ಲಿ ಕೈಯಲ್ಲಿದ್ದ ಅವಳ ಕೋಲನ್ನು ಸಹ ಬಲು ದೂರಕ್ಕೆ ಎಸೆದು ಬಿಟ್ಟಳು!
ಕೊನೆಯ ಬಾರಿಗೆ ಎಂಬಂತೆ ನನ್ನತ್ತ ತಿರುಗಿ ನನ್ನನ್ನೊಮ್ಮೆನೋಡಿ ಹಾಗೇ ಒಮ್ಮೆ ಜೋರಾಗಿ ನಕ್ಕಳು. ಆ ನಂತರ ಏನನ್ನೋ ಪಡೆದುಕೊಳ್ಳಲು ಮತ್ತೆನನ್ನೋ ಕಳೆದುಕೊಳ್ಳಲು ಆ ಮಳೆಯಲ್ಲಿ ಮುಂದಕ್ಕೆ ಮುಂದಕ್ಕೆ ಹದಿನೆಂಟರ ತರುಣಿಯಂತೆ ಓಡಿಯೇ ಬಿಟ್ಟಳು!
ಈ ಹೊರಗಿನ ಜಗತ್ತನ್ನು ಮೊದಲ ಬಾರಿಗೆ ಮನಸ್ಸೋಯಿಚ್ಛೆ ಅನುಭವಿಸುತ್ತಿದ್ದ ಅವಳದ್ದು ಈಗ ನಿಜವಾಗಿಯೂ ಆಂತರ್ಯದ ಸಂಭ್ರಮವೇ?!
ಪರಮ ಅಂತರ್ಮುಖಿಯಾಗಿದ್ದ ಅವಳು ಈಗ ಏತಕ್ಕಾಗಿ ಇಷ್ಟೊಂದು ಬಹಿರ್ಮುಖಿ! ಅಂದ ಹಾಗೆ ಅವಳ ಸುಖ ಈಗ ಯಾವುದರಲ್ಲಿದೆ? ಮನುಷ್ಯನ ಬದುಕಿನ ನಿಜವಾದ ಆನಂದ ಹೊರಗಿದೆಯೋ ಅಥವಾ ಅವನ ಒಳಗಡೆಯೇ ಇದೆಯೋ? ಅವಳ ಇಂತಹ ಬದಲಾವಣೆಯಾದರೂ ಈಗ ಯಾರಿಗಾಗಿ, ನಿಜವಾಗಿಯೂ ಏತಕ್ಕಾಗಿ?!
ಅವಳು ಅವಳದ್ದೊಂದು ಈ ಎಲ್ಲಾ ವರ್ತನೆಗಳ ಮೂಲಕ ಪರೋಕ್ಷವಾಗಿ ನನಗೆ ಏನನ್ನಾದರೂ ಹೇಳಲು ಬಯಸುತ್ತಿದ್ದಾಳೆಯೇ?!
ನನಗೆ ಗೊತ್ತಿಲ್ಲ!
ಆ ಮಳೆಯನ್ನು ಸೀಳುತ್ತಾ ಅವಳ ಹಿಂದೆಯೇ ಅವಳನ್ನೇ ನಂಬಿ ಬದುಕಿದ್ದ ಆ ಮುದಿ ನಾಯಿ ಕೂಡ ಓಡಿತು. ಅದರದ್ದು ಷರತ್ತುಗಳಿಲ್ಲದ ಪ್ರಿತಿ. ನನ್ನಂತೆ ಬರೀ ಕಟ್ಟುಪಾಡುಗಳದ್ದಲ್ಲ; ಕೋಪದ್ದು, ಸಿಟ್ಟಿನದ್ದಂತು ಅಲ್ಲವೇ ಅಲ್ಲ.
ಆದರೆ ಅದು ನಿಜವಾಗಿಯೂ ಅವಳ ಜೊತೆಯೇ ಹೋಗುವುದಕ್ಕಾಗಿ ಓಡಿದ್ದೋ ಅಥವಾ ಅವಳನ್ನು ಮರಳಿ ಲಾರಿಗೆನೇ ಕರೆದುಕೊಂಡು ಬರುವುದಕ್ಕಾಗಿ ಹೊರಗೆ ಹೋಗಿದ್ದೋ?!
ನನ್ನಲ್ಲಿ ಮತ್ತೆ ಗೊಂದಲಗಳು ಪ್ರತ್ಯಕ್ಷವಾದವು.
ಕಣ್ಣು ಸರಿಯಾಗಿ ಕಾಣದ ಕಾರಣದಿಂದಾಗಿ ದಾರಿಯ ಕೆಸರಿನಲ್ಲಿ ಬಿದ್ದು ಎದ್ದು ಅಲ್ಲಿಲ್ಲಿ ಒಂದಿಷ್ಟು ಹೊರಳಾಡಿದ ನಾಯಿಯ ಮೈಯ ಮಾಸಲು ಬಿಳಿಯ ಬಣ್ಣ ಈಗ ಸಂಪೂರ್ಣ ಕಿತ್ತಳೆ ಬಣ್ಣವಾಗಿ ಬದಲಾದಂತೆ ನನ್ನ ಕಣ್ಣಿಗೆ ಕಂಡಿತು. ಅದರ ಕಣ್ಣಲ್ಲಿ ಹಠಕ್ಕೆ ಬಿದ್ದು ನಾನು ಹುಡುಕಾಡಿದ್ದ ಆಕಾಶದ ನೀಲಿಗಿಂತಲೂ ಅದರ ಈ ಹೊಸ ಬಣ್ಣವೇ ಹೆಚ್ಚು ಆಕರ್ಷಕವಾಗಿತ್ತು!
ಆ ಒಂದು ತಾತ್ಕಾಲಿಕ ಕೆಸರಿನ ಬಣ್ಣ, ಅದರ ಮೈಯ ಖಾಯಂ ಮಾಸಲು ಬಣ್ಣ ಮತ್ತು ನಾನು ಎಲ್ಲದರಲ್ಲೂ ಪ್ರತಿ ನಿತ್ಯ ಹುಡುಕುತ್ತಿದ್ದ ಹಾಗೂ ನನ್ನ ಕಣ್ಣಿಗೆ ಬೀಳುತ್ತಿದ್ದ ಸುತ್ತಲ ಪ್ರಪಂಚದ ಹತ್ತಾರು ರಂಗು ರಂಗಿನ ಬಣ್ಣಕ್ಕಿಂತಲೂ, ಆ ನಾಯಿಯೊಳಗಿನ ಬಣ್ಣವಿಲ್ಲದ ಪ್ರಪಂಚದಲ್ಲಿಯೇ ಆ ಒಂದು ನಾಯಿ ಅದಕ್ಕೊಂದು ಯಾವ ಹೋಲಿಕೆ ಮಾಡುವ ಅವಕಾಶಗಳೇ ಇಲ್ಲದೆ ಹೆಚ್ಚು ಸುಖವಾಗಿದೆಯೆನೋ ಎಂದು ನನಗನಿಸಿತು.
ಕೇವಲ ತನ್ನ ಒಡತಿಯ ಕಡೆಗಿನ ಏಕೈಕ ಧ್ಯಾನ ಹಾಗೂ ಜೀವನದಲ್ಲಿ ಯಾವುದಕ್ಕೂ ಅತಿಯಾಗಿ ಪ್ರತಿಕ್ರಿಯಿಸದ ಅದುವೇ ನನಗಿಂತ ಎಲ್ಲಾ ರೀತಿಯಿಂದಲೂ ಪರಮ ಸುಖಿ ಹಾಗೂ ಗೊಂದಲರಹಿತವಾದದ್ದು ಎಂದು ಬಲವಾಗಿ ಅನ್ನಿಸಿದ್ದಂತು ಸತ್ಯ!
ಆದರೆ ವಿಚಿತ್ರವೆಂಬಂತೆ ಕೆಸರಿನಲ್ಲಿ ಮುಳುಗಿ ಎದ್ದು ಬಿದ್ದ ಆ ನಾಯಿ… ಮುಂದಕ್ಕೆ ಸಾಗಿ ಆ ವೃದ್ಧೆಯನ್ನು ಸೇರಿಕೊಳ್ಳಲಿಲ್ಲ!!
ಬದಲಿಗೆ ಲಾರಿಯಲ್ಲಿ ನಿಂತಿದ್ದ ನನ್ನದೊಂದು ವಾಸನೆಯನ್ನೇ ಅವಳ ವಾಸನೆಗಿಂತಲೂ ಪ್ರಬಲವಾಗಿ ಗ್ರಹಿಸಿಕೊಂಡು, ನನ್ನ ಜಾಡನ್ನೇ ಮೂಸಿಕೊಂಡು ಮೂಸಿಕೊಂಡು ಮತ್ತೆ ಲಾರಿಯೆಡೆಗೆಯೇ ಓಡುತ್ತಾ ಬಂದು ಬಿಟ್ಟಿತು.
ದೂರದಿಂದ ವೇಗವಾಗಿ ಓಡುತ್ತಾ ಬಂದ ಅದು ಇನ್ನು ನಿಂತೇ ಇದ್ದ ಲಾರಿಯೊಳಗೆ ಒಂದೇ ನೆಗೆತಕ್ಕೆ ಛಂಗನೆ ಹಾರಿ, ಮತ್ತೆ ಆಕಾಶ ನೋಡುತ್ತಾ ತಾನು ಹಿಂದೆ ಕುಳಿತಿದ್ದ ಸ್ಥಳದಲ್ಲಿಯೇ ತನ್ನ ನಾಲಗೆಯನ್ನು ಹೊರಗೆ ಹಾಕಿಕೊಂಡು ಆ ಮುದಿ ನಾಯಿ ಕುಳಿತುಕೊಂಡಿತು.
ಆರಂಭದಲ್ಲಿ ಹೇಗೆ ಅದು ಹೆಚ್ಚು ಕಡಿಮೆ ವೃದ್ಧೆಯಂತೆಯೇ ಸಮಚಿತ್ತ ಸಮಭಾವದಲ್ಲಿ ಧೃಡವಾಗಿ ಕುಳಿತಿತ್ತೋ, ಈಗಲೂ ಅದೇ ಭಾವದಲ್ಲಿರುವಂತೆ ಗೋಚರಿಸಿತು! ಈ ಮೂಲಕ ನಾಯಿ ನನಗೆ ಹೇಳಿದ್ದಾದರೂ ಏನನ್ನು?!
ಯಾವುದೇ ಚಿಂತೆ ಇಲ್ಲದ ಆ ವೃದ್ಧೆ ಹೊಸತೊಂದು ಹುರುಪಿನಲ್ಲಿ ಆ ಜೋರು ಮಳೆಯ ನಡುವೆಯೇ ಬಹು ದೂರ ಓಡುತ್ತಾ ಓಡುತ್ತಾ ಹಾಗೇ ನನ್ನ ಕಣ್ಣಿಂದ ಕೊನೆಗೂ ಕಣ್ಮರೆಯಾಗಿಯೇ ಬಿಟ್ಟಳು!!
ಹಾಗಾದರೆ.. ಹಾಗಾದರೆ ಈ ನಾಯಿ ನಿಜಕ್ಕೂ ಯಾರದ್ದು?!
ಲಾರಿ ಮತ್ತೆ ಚಾಲುವಾಗಿ ಹಾಗೇ ಕುಲುಕುತ್ತಾ ನಿಧಾನಕ್ಕೆ ಚಲಿಸತೊಡಗಿತು. ಈಗಲೂ ಅದರ ವೇಗ ಆರಂಭದ ವೇಗವೇ ಆಗಿತ್ತೇ ಹೊರತು ಅದರಲ್ಲಿ ಮಾತ್ರ ಒಂಚೂರು ಬದಲಾವಣೆಯಾಗಿರಲಿಲ್ಲ!
ಅವಳನ್ನು ಇಳಿಸಿಕೊಂಡು, ನನ್ನನ್ನು ನಾಯಿಯನ್ನು ಉಳಿಸಿಕೊಂಡು ಕೆಲವೊಮ್ಮೆ ನೇರವಾಗಿ ಇನ್ನು ಕೆಲವೊಮ್ಮೆ ಅಂಕುಡೊಂಕಾಗಿ, ಕೆಲವೊಮ್ಮೆ ನಿಂತರೂ, ನಿಂತ ಮೇಲೆ ಚಲಿಸಿದರೂ ಆರಂಭದಿಂದಲೂ ಹೆಚ್ಚು ಕಡಿಮೆ ಒಂದೇ ವೇಗದಲ್ಲಿ ಸಾಗುತ್ತಿರುವ ಈ ಒಂದು ಲಾರಿಯೂ ಕೂಡ ನನಗೆ ಏನನ್ನಾದರೂ ವಿವರಿಸುವ ಪ್ರಯತ್ನದಲ್ಲಿದೆಯೇ?! ಅಂದ ಹಾಗೆ ಈ ಲಾರಿಯೇ ನನಗೆ ಏಕೆ ಸಿಕ್ಕಿತು. ಇದೇ ನನ್ನನ್ನು ಹುಡುಕಿಕೊಂಡು ಬಂದಿದ್ದೇ? ಅಥವಾ ನಾನಾಗಿಯೇ ಹುಡುಕಿ ಹುಡುಕಿ ಇದೇ ಲಾರಿಯನ್ನು ಹತ್ತಿದ್ದೇ? ಅಥವಾ ನನ್ನಂತವರಿಗಾಗಿಯೇ…? ಉಹೂಂ.. ಗೊತ್ತಾಗಲಿಲ್ಲ!
ಪ್ರಯಾಣದ ಆರಂಭದಲ್ಲಿ ನಾನು ಅಂದುಕೊಂಡಂತೆಯೇ ಮೇಲಿಂದ ಈಗ ಹುಲುಸಾದ ಮಳೆ ಬಿಡದೇ ಸುರಿಯುತ್ತಿದ್ದರೂ, ಎಂದಿನಂತೆ ಅದರೊಂದಿಗೆ ಕೂಡಿಕೊಂಡು ಎಲ್ಲವನ್ನೂ, ಸುತ್ತಲಿನ ಪ್ರಕೃತಿಯನ್ನು ಸಹ ಇಂಚಿಂಚೂ ಅನುಭವಿಸಿಯೇ ತೀರಬೇಕೆನ್ನುವ ನನ್ನದೊಂದು ಮನಸ್ಥಿತಿ ಈಗ ನನ್ನಲ್ಲಿ ಒಂಚೂರು ಉಳಿದೇ ಇರಲಿಲ್ಲ.
‘ಘನ ಘೋರ ಛಾಯಿ ಘಟಾ, ಸನನ ಸನನ ಪವನ ಝಕ ಝೋರ, ಉಮಂಡ ಘುಮಂಡ ಬರಸೇ ಸಾವನ ಮೇಹಾ..’ ಎಂಬಷ್ಟು ಧಾರಾಕಾರ ಮಳೆ ಮೇಲಿಂದ ಸುರಿಯುತ್ತಲೇ ಇತ್ತು. ಎಷ್ಟೇ ಸುರಿದರೂ ಹೇಗೆ ಸುರಿದರೂ ಅದು ನನಗೆ ಅಷ್ಟೇನು ಹಿತವೂ ಅನಿಸಲಿಲ್ಲ, ಹೃದಯದೊಳಗೆ ತಂಪಾಗಿ ಇಳಿಯಲೂ ಇಲ್ಲ.
ಸಂಜೆ ಏಳರ ಬೀದಿ ದೀಪ ಅಲ್ಲೊಂದು ಇಲ್ಲೊಂದು ಎಂಬಂತೆ ಆ ದಾರಿಯಲ್ಲಿ ಉದ್ದಕ್ಕೆ ಅದರಷ್ಟಕ್ಕೆ ಉರಿಯತೊಡಗಿತು; ಯಾವ ಮುರುಕು ಗುಡಿಸಲಲ್ಲಿ ಯಾರು ದೀಪಕ ರಾಗ ಹಾಡಿದ್ದರೋ.. ಲಾರಿಯೊಳಗೂ ಬೀಳುತ್ತಿದ್ದ ಬೀದಿ ದೀಪಗಳ ಆ ಮಂದ ಬೆಳಕಲ್ಲಿಯೇ ಅವಳ ಚೀಲದಿಂದ ಉದುರಿದ್ದ ಅವಳ ಕತ್ತಿಯನ್ನು ಕೈಗೆ ತೆಗೆದುಕೊಂಡು ಅದನ್ನೇ ಮತ್ತೊಮ್ಮೆ ಸರಿಯಾಗಿ ಗಮನಿಸಿತೊಡಗಿದೆ…
ಒಂದು ಹುಲ್ಲು ಕಡ್ಡಿಯನ್ನು ಕೂಡ ತುಂಡರಿಸಲು ಸಾಧ್ಯವಾಗದಷ್ಟು ತುಕ್ಕು ಹಿಡಿದು ಹೋಗಿದ್ದ ಆ ಕತ್ತಿ, ಅದರದ್ದೊಂದು ಮರದ ಹಿಡಿಕೆ ಕೂಡ ಸವೆದು ಹೋಗಿ ಇನ್ನಿಲ್ಲದಂತೆ ಸಡಿಲಗೊಂಡು, ಕೇವಲ ಹೆಸರಿಗಷ್ಟೇ ಅದು ಕತ್ತಿಯಾಗಿ ಉಳಿದಿತ್ತು!
ಇನ್ನು ಅದರಿಂದ ಕೊಲೆ ಮಾಡುವುದಂತು ಬಹಳ ದೂರದ ಮಾತು!
ಕೊಲೆಯೇ ಮಾಡಲು ಸಾಧ್ಯವಾಗದ ಅವಳ ಈ ಕೋಪದ ಕತ್ತಿ ನನಗೆ ಹೇಳುತ್ತಿರುವುದಾದರೂ ಏನನ್ನು? ಕೋಪ ಕ್ಷಣಿಕ, ಪ್ರೀತಿಯ ಎದುರು ಎಂತಹ ದೊಡ್ಡ ಕೋಪವು ಸಹ ತುಕ್ಕು ಹಿಡಿಯಲೇಬೇಕು ಎನ್ನುವ ಪರಮ ಸತ್ಯವನ್ನೇ??
ಅಂದ ಹಾಗೆ ಅವಳ ಈ ಕತ್ತಿಯಿಂದ ಮಾತ್ರವಲ್ಲ ಬೇರೆ ಯಾವುದೇ ಹರಿತವಾದ ಆಯುಧದಿಂದಲೂ ಕೂಡ ಅವನನ್ನು… ಅವಳ ಆ ಅವನನ್ನು ಕಡಿದು ಕೊಲ್ಲಲು ಅವಳಿಗೆ ಸಾಧ್ಯವಿಲ್ಲ.. ಹಹ್ಹಾ.. ಹಹಹ್ಹಾ… ಸಾಧ್ಯವೇ ಇಲ್ಲ; ಏಕೆಂದರೆ.. ಏಕೆಂದರೆ ಅವಳೇ ಹೇಳಿದ ಆ ಒಂದು ಅವಳುದ್ದದ ಕಥೆಯಲ್ಲಿ ಅವನು ಸತ್ತು ಹೋಗಿ ಅದಾಗಲೇ ನಲ್ವತ್ತು ವರ್ಷಗಳಾಗಿದ್ದವು..! ಹೌದು.. ನಲವತ್ತು ವರ್ಷಗಳೇ ಆಗಿದ್ದವು!! ಹಹ್ಹಾ.. ಹಹಹ್ಹಾ..
ಅಷ್ಟು ಮಾತ್ರವಲ್ಲ ಅವನದ್ದೊಂದು ಸಾವಿಗೆ ಒಂದು ರೀತಿಯಲ್ಲಿ ಅವಳೂ ಸಹ ನೇರವಾಗಿ ಕಾರಣಳು! ಹಹ್ಹಾ… ಹಹಹ್ಹಾ.
ಹೂಂ.. ಹಾಗಾದರೆ ಮತ್ತೇಕೆ ಅವಳ ಈ ಒಂದು ಪ್ರಯಾಣ? ಪ್ರಯಾಣದಲ್ಲೊಂದು ಏಕೆ ಎಂದಿಗೂ ಈಡೇರದಂತಹ ಅವನ ಹುಡುಕಾಟ?!
ಸತ್ತವರನ್ನು ಎಂದಾದರೂ ಮತ್ತೆ ಕೊಲ್ಲಲು ಸಾಧ್ಯವೇ? ಅಷ್ಟು ಮಾತ್ರವಲ್ಲ ಸತ್ತು ಹೋದವರನ್ನು ಮತ್ತೆ ಜೀವಂತಗೊಳಿಸುವ ಪ್ರಯತ್ನ ಕೂಡ ಈ ಜಗತ್ತಿನಲ್ಲಿ ಸಾಧುವೇ?!
ಅವಳು ಒಂದನ್ನು ಮಾಡಲು ಹೊರಟಿದ್ದರೆ, ನಾನು ಸಹ ಮತ್ತೊಂದನ್ನೇ ಮಾಡಲು ಈಗ ಹೊರಟವನಲ್ಲವೇ!
ಒಂದು ವೇಳೆ ನನ್ನಂತೆಯೇ ಇಲ್ಲದವರನ್ನು ಹುಡುಕುವ, ನೆನಪುಗಳಲ್ಲಿಯೇ ಜೀವಂತಗೊಳಿಸುವ ಪ್ರಯತ್ನಕ್ಕೆನೇ ಈ ವೃದ್ಧೆ ಕೂಡ ಈಗ ಕೈ ಹಾಕುವುದಾದರೆ.. ಅದರೊಳಗೆ ಇರುವುದು ಸಹ ನಾನು ಅದಾಗಲೇ ಅನುಭವಿಸಿ ನೋಡಿರುವ ನೋವೊಂದೇ ಅಲ್ಲವೇ! ಮತ್ತೆ ಮತ್ತೆ ನೆನಪು ಮಾಡಿಕೊಳ್ಳುವುದರಲ್ಲಿಯೂ ಸಹ ಸುಖವೇನು ಇರುವುದಿಲ್ಲ..
ಹಹ್ಹಾ… ಹಹ್ಹಾ.. ಹಹ್ಹಾ..ಜಗತ್ತಿನಲ್ಲಿ ಎಂತೆಂತಹ ಭ್ರಮೆಗಳು!
ಒಂದು ರೀತಿಯಲ್ಲಿ ನೋಡಿದರೆ ಇಲ್ಲಿರುವ ಎಲ್ಲವೂ ಭ್ರಮೆಗಳೇ, ಎಲ್ಲವೂ ಮಿಥ್ಯವೇ, ಎಷ್ಟು ಮೋಹವೋ, ಈ ಜಗತ್ತು ಅಷ್ಟೇ ಮಾಯೆಯೂ ಕೂಡ ಹೌದು. ಇದೇ ಬದುಕಿನ ಸತ್ಯ, ಇದೇ ಬದುಕಿನ ಆನಂದ ಎಂದು ಆ ವೃದ್ಧೆಗೆ ಹೇಳಿಕೊಡಲು ನನಗೆ ಸಾಧ್ಯವಿಲ್ಲ, ಇದೊಂದೇ ಬದುಕಿನ ನೋವಿಗೆ ಕಾರಣ ಎಂದು ನನಗೆ ತಿಳಿ ಹೇಳಲು ಅವಳಿಗೂ ಕೂಡ ಸಾಧ್ಯವಿಲ್ಲ. ಕೇವಲ ನನಗೆ ಕಂಡದ್ದಷ್ಟೇ ನನ್ನ ಸತ್ಯ. ಅದೇ ರೀತಿ ಅವಳ ಅನುಭವಕ್ಕೆ ಗೋಚರಿಸಿದ್ದು ಅದು ಅವಳ ಬಾಳಿನ ಪರಮ ಸತ್ಯ.
ಹಾಗಾದರೆ ನಾಯಿಯ ಬಾಳಿನ ಸತ್ಯ?
ಒಬ್ಬೊಬ್ಬರ ಸತ್ಯ ಮಿಥ್ಯಗಳೇ ಒಂದೊಂದು ರೀತಿ ಇಲ್ಲಿ. ಕೆಲವೊಂದು ಅರ್ಥವಾಗುತ್ತದೆ. ಇನ್ನು ಕೆಲವೊಂದು ಆಗುವುದೇ ಇಲ್ಲ… ಎಲ್ಲವೂ ಅರ್ಥವಾಗಬೇಕಾಗಿಯೂ ಇಲ್ಲ. ನಮ್ಮ ಕೊಡದಲ್ಲಿ ತುಂಬಿಕೊಂಡಷ್ಟು ಕಡಲಿನ ನೀರು ನಮ್ಮದು ಅಷ್ಟೇ.. ಹಹ್ಹಾ ಹಹ್ಹಾ…
ಹಾನ್.. ಅಂದ ಹಾಗೆ ಆ ವೃದ್ಧೆ ಕೊನೆಯಲ್ಲಿ ಎಷ್ಟೇ ಆನಂದದಲ್ಲಿರುವಂತೆ ಕಂಡರೂ ಆರಂಭದಲ್ಲಿ ಸ್ಥಿತಪ್ರಜ್ಞಳಾಗಿದ್ದಾಗ ಅವಳ ಮುಖದಲ್ಲಿ ಕಂಡು ಬಂದಿದ್ದ ಆ ಒಂದು ಪ್ರಖರವಾದ ದಿವ್ಯ ತೇಜಸ್ಸು, ಈ ಹೊರ ಜಗತ್ತಿನ ಸುಖದ ಭಾಗವಾಗಿ ಅವಳೂ ಬಾಹ್ಯ ಆಕರ್ಷಣೆಗೆ ಒಳಗಾದ ಕೂಡಲೇ… ನನಗೇಕೆ ಅದು ಮತ್ತೆ ಅವಳಲ್ಲಿ ಕಂಡು ಬರಲಿಲ್ಲ!?
ಹಾಗಾದರೆ ಅದಕ್ಕಾಗಿಯೇ ನಾಯಿ ಅವಳನ್ನು ಸೇರದೆ ನನ್ನ ಬಳಿ ಉಳಿದುಕೊಂಡಿತೇ?!
ಏನು.. ಯಾವ ಬದಲಾವಣೆಯಲ್ಲಿ ಶಾಶ್ವತ ಸುಖವಿಲ್ಲ ಎನ್ನುವುದು ಈ…. ಈ ಮುದಿ ನಾಯಿಗೆ, ಕುರುಡು ನಾಯಿಗೆ ಗೊತ್ತೇ?! ಹಹ್ಹಾ.. ಹಹಹ್ಹಾ..
ಹೂಂ ಒಟ್ಟಿನಲ್ಲಿ ಮೊದಲಿಗಿಂತಲೂ ನನ್ನಲ್ಲಿ ಏನೋ ಒಂದು ಬದಲಾವಣೆ ಆಗಿದ್ದಂತು ಮಾತ್ರ ಸತ್ಯ. ಅದರ ಅರಿವಾಗಿ ಮೊದಲ ಬಾರಿಗೆ ಮನಸ್ಸನ್ನು ಸಂಪೂರ್ಣವಾಗಿ ಹಾಗೇ ಖಾಲಿ ಮಾಡಿಕೊಂಡೆ. ಹಾಗಾಗಿಯೇ ಏನೋ ಸಾಕಷ್ಟು ನಿರಾಳನಾಗಿಬಿಟ್ಟೆ ನಾನು.
ಬಹುಶಃ ಖಾಲಿ ಆದಾಗಲೇ ಒಂದಿಷ್ಟನ್ನು ತುಂಬಿಸಿಕೊಳ್ಳಲು, ಬದುಕನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು, ಘಟನೆಗಳ ಮರ್ಮವನ್ನು ವಿಶ್ಲೇಷಿಸಲು, ನಾವು ಯಾರು, ನಿಜವಾಗಿಯೂ ಯಾರು ಎಂದು ಸರಿಯಾಗಿ ತಿಳಿದುಕೊಳ್ಳಲು, ಯಾವುದರಿಂದ ನಾವು ಬಂಧಿಯಾಗಿದ್ದೇವೆ, ಅದರಿಂದ ಬಿಡಿಸಿಕೊಳ್ಳುವ ಬಗೆ ಏನು.. ಇತ್ಯಾದಿ ಇತ್ಯಾದಿಗಳನ್ನು ಅರಿಯಲು ನಮಗೆ ಸಾಧ್ಯವಾಗುವುದೋ ಏನೋ..
ಅಂದ ಹಾಗೆ ನನ್ನ ಮತ್ತು ವೃದ್ಧೆಯ ಈ ಒಂದು ಸಹಪ್ರಯಾಣದಲ್ಲಿ ಕಂಡುಬಂದಂತಹ ಮುಖ್ಯವಾದ ವ್ಯತ್ಯಾಸ ಒಂದೇ, ಅದೇನೆಂದರೆ ಅವಳು ರಾಗದ ಆರೋಹಣದಂತೆ ಆರಂಭದಲ್ಲಿ ಸಮಾಧಾನವಾಗಿ ನಿಧಾನವಾಗಿ ಮೇಲೇರಿ ಕೊನೆಗೆ ತೀವ್ರತೆಯನ್ನು ತಲುಪಿದ್ದರೆ, ನಾನು ತೀವ್ರತೆಯ ಅವರೋಹಣದಿಂದಲೇ ಶುರು ಮಾಡಿ ಕೊನೆಯ ಹಂತಕ್ಕೆ ಬಂದಾಗ ಅವಳ ಆರಂಭದಂತೆಯೇ ಇನ್ನಿಲ್ಲದಂತೆ ಶಾಂತಗೊಂಡಿದ್ದೆ.
ಯಾವುದಕ್ಕೂ ಅತಿಯಾಗಿ ಪ್ರತಿಕ್ರಿಯಿಸದ ನಾಯಿ ಒಂದೇ ಈ ಪ್ರಯಾಣದ ಆರಂಭದಲ್ಲಿ ಇದ್ದಂತೆಯೇ ಕೊನೆಯವರೆಗೂ ಸಮಭಾವದಲ್ಲಿಯೇ ಇತ್ತು.
ಮನಸ್ಸು ಈಗ ಸಾಕಷ್ಟು ತಿಳಿಯಾಗಿತ್ತು. ಅಬ್ಬರಿಸಿಕೊಂಡು ಸುರಿದಿದ್ದ ಮಳೆಯೂ ಸಹ ನಿಂತು ಹೋಗಿ ಸುತ್ತಲಿನ ವಾತಾವರಣವು ಸಹ ಬಹಳಷ್ಟು ಪ್ರಶಾಂತವಾಗಿತ್ತು. ಘರ್ಜಿಸಿದ ಎಲ್ಲಾ ಮೋಡಗಳು ಕರಗಿ ಹೋಗಿ ಆಕಾಶ ಮೊದಲಿನಂತೆಯೇ ಮತ್ತೆ ಶುಭ್ರವಾಯಿತು; ಯಾರೋ ನಿರ್ಮಲವಾಗಿ ಗುಡಿಸಿಟ್ಟಂತೆ, ಹೆಚ್ಚು ಕಡಿಮೆ ಸಧ್ಯದ ನನ್ನ ಮನಸ್ಸಿನಂತೆಯೇ.
ಮಳೆಗೆ ಮಲೀನವನ್ನು ತೊಳೆದು ಹಾಕುವ ಶಕ್ತಿ ಇದೆ ಎಂದು ಅಮ್ಮ ಹೇಳುತ್ತಿದ್ದಳು. ಅದೇ ಮಲ್ಹಾರ್ ರಾಗಗಳಿಗೆ ಮಳೆಯನ್ನೇ ಸುರಿಸಿ ಮನದ ಮಲವನ್ನೂ ಹರ ಮಾಡುವ ಶಕ್ತಿಯ ಜೊತೆ ಜೊತೆಗೆ ಜೀವ-ಭಾವವನ್ನು ತಂಪಾಗಿಸುವ ಸಾಮರ್ಥ್ಯವೂ ಇಧೆ ಎಂದು ನನ್ನವಳು ಪದೇ ಪದೇ ಹೇಳುತ್ತಿದ್ದಳು. ಇಬ್ಬರೂ ಹೇಳಿದ್ದು ಅದೆಷ್ಟು ಸರಿ ಎಂದು ನನಗೀಗ ಅರ್ಥವಾಯಿತು.
ಮಳೆಯನ್ನಾಗಲಿ, ಸಂಗೀತವನ್ನಾಗಲಿ ನೇರವಾಗಿ ಒಳಗಡೆಯೇ ಇಳಿಸಿಕೊಳ್ಳುವುದರಿಂದ ಬಹಳಷ್ಟು ಸುಖವಿದೆ. ಆ ಶಕ್ತಿ ಆ ಎರಡಕ್ಕೂ ಬಹಳಷ್ಟು ಇದೆ. ಕೇವಲ ಹೊರಗಡೆಯಷ್ಟೇ ಅವೆರಡನ್ನು ಸುರಿಯಲು ಬಿಟ್ಟರೆ ಒಳಗಿನ ಕೊಳೆಯನ್ನು ಕರಗಿಸುವ ಅವಕಾಶವನ್ನು ನಾವು ಅದು ಹೇಗೆ ಕಳೆದುಕೊಂಡು ಬಿಡುತ್ತೇವೆ ಎಂದು ಕೂಡ ನನಗೀಗ ಚೆನ್ನಾಗಿಯೇ ತಿಳಿಯಿತು.
ಕೈಯಲ್ಲಿದ್ದ ವೃದ್ಧೆಯ ಕತ್ತಿಯನ್ನು ಲಾರಿಯಲ್ಲಿದ್ದ ಕತ್ತಿಗಳ ರಾಶಿಗೆ ನಾನು ಎಸೆದೆ!
ಆ ದೊಡ್ಡ ರಾಶಿಗೆ ಇನ್ನೊಂದು ಕತ್ತಿಯ ಸೇರ್ಪಡೆ!!
ಒಳಗೊಳಗೆ ಬಹಳಷ್ಟು ಹಗುರವಾಗಿದ್ದೆ ನಾನು. ಆ ನಂತರ ಲಾರಿಯ ನೆತ್ತಿಯನ್ನು ರಪರಪನೆ ಹತ್ತಿ, ಅಲ್ಲೇ ಮೇಲ್ಗಡೆಯೇ ಕುಳಿತುಕೊಂಡು ಸುಮ್ಮನೆ ಮುಂದೆ ನೋಡತೊಡಗಿದೆ.
ಅಲ್ಲಿಯವರೆಗೆ ಲಾರಿಯಲ್ಲಿ ಕೇವಲ ಹಿಂದಿನ ದೃಶ್ಯಗಳನ್ನಷ್ಟೇ ನೋಡುತ್ತಿದ್ದ ನನಗೀಗ ಎದುರಿನಿಂದ ಬರುವ ಎಲ್ಲವೂ, ಎಲ್ಲರೂ ಲಾರಿಯ ದೀಪದ ಬೆಳಕಲ್ಲಿ, ಬೀದಿ ದೀಪದ ಸಾಲು ಪ್ರಭೆಯಲ್ಲಿ ಕಾಣಿಸತೊಡಗಿದರು. ನಾನು ಮುಂದೆ ಮುಂದೆ ಹೋಗುವಂತೆ, ಜನರು ಹಿಂದೆ ಹಿಂದೆ ಸರಿಯುವಂತೆ ಅನ್ನಿಸತೊಡಗಿತು.
ಮುದಿ ನಾಯಿ ಕೆಳಗಡೆಯೇ ಕುಳಿತುಕೊಂಡು ನನ್ನನ್ನು ಕಾಯುವಂತೆ ಹಿಂದೆ ಸರಿಯುತ್ತಿದ್ದ ರೋಡಿನ ದಿಕ್ಕಿಗೆ ಮುಖ ಮಾಡಿಕೊಂಡು ಮೇಲಿನ ಆಕಾಶವನ್ನೇ ದಿಟ್ಟಿಸಿ ನೋಡುತ್ತಿತ್ತು!
ಅದೇ ಸಮಯದಲ್ಲಿ ಯಾವುದೋ ಒಂದು ಶಿವ ಮಂದಿರದಲ್ಲಿ ಬಾರಿಸಿದ ಘಂಟೆಯ ಸದ್ದು ಹಾಗೂ ಧ್ವನಿವರ್ಧಕದಲ್ಲಿ ಹಾಕಿದ್ದ ಓಂಕಾರವು ಜೋರಾಗಿಯೇ ಕೇಳಿ ಬಂದಿತ್ತು. ಮನಸ್ಸಿಗೆ ಅದೆನೋ ಹಿತವೆನಿಸಿತು. ಶ್ರದ್ಧೆಯಿಂದ ಮಹಾದೇವನಿಗೆ ಕೈ ಮುಗಿದು ಅವನದ್ದೊಂದು ಚಿತ್ರವನ್ನು ಮನಸ್ಸಿನಲ್ಲಿ ತುಂಬಿಕೊಳ್ಳುತ್ತಾ
ಓಂಕಾರದ ಕಡೆಗೆ ಸಂಪೂರ್ಣವಾಗಿ ಕಿವಿಗೊಟ್ಟೆ.
ಎದುರಿನಿಂದ ಬರುತ್ತಿದ್ದ ವಾಹನವೊಂದರ ದೊಡ್ಡ ಬೀಮಿನ ಲೈಟು ಈಗ ನೇರವಾಗಿ ಬಂದು ನನ್ನ ಮುಖಕ್ಕೆನೇ ಪ್ರಕಾಶಮಾನವಾಗಿ ಬಡಿಯಿತು. ಆ ಪ್ರಖರ ಬೆಳಕನ್ನು ದಿಟ್ಟಿಸಿ ನೋಡುತ್ತಲೇ ನೋಡುತ್ತಲೇ ಹಾಗೇ ಕುಳಿತಲ್ಲಿಯೇ ತೆರೆದುಕೊಂಡಿದ್ದ ಕಣ್ಣನ್ನು ನಾನು ಭದ್ರವಾಗಿ ಮುಚ್ಚಿಕೊಂಡುಬಿಟ್ಟೆ. ದೇವಳದಿಂದ ಕೇಳಿ ಬರುತ್ತಿದ್ದ ಓಂಕಾರದ ಸದ್ದು ನಿಧಾನಕ್ಕೆ ನನ್ನ ಕಿವಿಗೆ ಬೀಳುವುದು ಕ್ಷೀಣವಾಗುತ್ತಾ ಹೋಯಿತು, ಮಾತ್ರವಲ್ಲ ಹೊರ ಜಗತ್ತಿನ ಯಾವುದೇ ಸದ್ದು ನನ್ನರಿವಿಗೆ ಬರಲೇ ಇಲ್ಲ, ಮನಸಿನಲ್ಲಿದ್ದ ಶಿವನ ಚಿತ್ರ ಕೂಡ ನಿಧಾನಕ್ಕೆ ಅಳಿಸಿಹೋಯಿತು. ದೀರ್ಘವಾಗಿದ್ದ ಉಸಿರಾಟದ ಉಚ್ವಾಸ ನಿಶ್ವಾಸಗಳೆರಡರ ವೇಗ ಈಗ ನಿಧಾನ ಗತಿಗೆ ತಿರುಗಿತು. ಮುಖದಲ್ಲೊಂದು ಮಂದಹಾಸ ನನಗರಿವಿಲ್ಲದೇ ಹಾಗೇ ಮೂಡಲು ಆರಂಭವಾಯಿತು.
ಕಣ್ಣು ಮುಚ್ಚಿಯೇ ಇದ್ದರೂ ಕುಳಿತಿದ್ದ ನನ್ನ ದೇಹದ ಕೆಳಗಿನಿಂದ ಮೇಲಕ್ಕೆ, ವಕ್ರ ಹಾವಿನ ರೂಪದ ಬೆಳಕೊಂದು ಬೆನ್ನುಹುರಿಯಲ್ಲಿ ಸರಳರೇಖೆಯಲ್ಲಿ ಪ್ರವಹಿಸಿದ ಅನುಭವ. ನಾನು ಅದರ ಬೆಳಕಲ್ಲಿ ಒಳಗೊಳಗೆ ನಿಧಾನಕ್ಕೆ ಅರಳುತ್ತಾ ಹೋದೆ. ಹೃದಯ ಭಾಗಕ್ಕೆ ಅದು ಬಂದು ತಲುಪಿದಾಗ ಮೊದಲ ಬಾರಿಗೆ ಅಲ್ಲೊಂದು ಬಹಳ ಸುಂದರವಾದ ಹನ್ನೆರಡು ಎಸಳುಗಳ ಪದ್ಮ ತನ್ನಿಂತಾನೆ ಅರಳಿಕೊಂಡಂತಹ ಹಿತವಾದ ಭಾವ. ಅದೆಲ್ಲ ಏನು, ಹೇಗಾಯಿತು? ಏಕಾಯಿತು? ನಿಜಕ್ಕೂ ನನಗೆ ಗೊತ್ತಾಗಲಿಲ್ಲ. ಆದರೆ ಅದು ನನಗೆ ಪರಮಾನಂದವನ್ನಷ್ಟೇ ನಿರಂತರವಾಗಿ ಕರುಣಿಸುವ ಕೆಲಸ ಮಾಡುತ್ತಿತ್ತು. ಬೆಳಕು ಇನ್ನೂ ಊರ್ಧ್ವಮುಖವಾಗಿ ಚಲಿಸಿದಂತೆ ನಾನು ಮತ್ತಷ್ಟು ಮಗದಷ್ಟು ಅರಳುತ್ತಲೇ ಒಳಗೊಳಗೆ ಬೆಳಗುತ್ತಲೇ ಹೋದೆ. ಕಣ್ಣು ತೆರೆದು ಹೊರಗಿನ ಜಂಜಡದ ಜಗತ್ತು ನೋಡುವ ಮನಸ್ಸೇ ಆಗಲಿಲ್ಲ ನನಗೆ. ನಾನು ಅದಾಗಲೇ ಅದು ಯಾವುದೋ ಆನಂದಮಯ ಜಗತ್ತಿನಲ್ಲಿದ್ದೆ.
ಎಷ್ಟೋ ಗಂಟೆಗಳ ಪ್ರಯಾಣದ ನಂತರ ಲಾರಿ ಈಗ ನಿಂತುಕೊಂಡದ್ದು ನಿಧಾನಕ್ಕೆ ನನ್ನ ಅನುಭವಕ್ಕೆ ಬಂತು. ಯಾರೋ ಲಾರಿ ಹತ್ತಿ ಮೇಲೆ ಬಂದರು. ಸ್ವಲ್ಪ ಹೊತ್ತಾದ ಮೇಲೆ ಮೆಲ್ಲಗೆ ಕಣ್ಣು ತೆರೆದು ಹಿಂದೆ ತಿರುಗಿ ಕೆಳಗಡೆ ನೋಡಿದೆ. ಒಬ್ಬ ವೃದ್ಧ ಲಾರಿಯೊಳಗೆ ಬಂದು ಅದಾಗಲೇ ನಿಂತುಕೊಂಡಿದ್ದ. ಒಂದು ಕೈಯಲ್ಲಿ ಚೀಲ ಹಾಗೂ ಮತ್ತೊಂದು ಕೈಯಲ್ಲಿ ಮರದ ಹಸಿ ಊರುಗೋಲು ಹಿಡಿದುಕೊಂಡು ನನ್ನನ್ನೇ ಎವೆಯಿಕ್ಕದೆ ಅವನು ನೋಡುತ್ತಿದ್ದ. ಅಲ್ಲೇಕೆ ಕುಳಿತಿರುವೆ.. ಇಲ್ಲಿ ಕೆಳಗಿಳಿದು ಬಾ ಎನ್ನುವಂತೆ ಆ ವೃದ್ಧ ಕೈ ಬೀಸಿ ನನ್ನನ್ನೇ ಕರೆದ.
ಅವನನ್ನು ಹೀಗೆ ಹೊರಗಿನಿಂದ ನೋಡುವಾಗ ತುಂಬಾನೇ ಖುಷಿಯಲ್ಲಿರುವಂತೆ ಕಂಡರೂ, ಅವನು ಒಳಗೊಳಗೆ ಸಂತೋಷವಾಗಿಲ್ಲ ಮತ್ತು ಮುಂದೆ ಅವನು ಹೇಳಬಹುದಾದ ಹಲವಾರು ಕತೆಗಳಲ್ಲಿ ಯಾವುದಾದರೊಂದು ಕತೆಯಲ್ಲಿ ಖಂಡಿತವಾಗಿಯೂ ಸುಖದ ರಾಗ ಹೊಮ್ಮಲಿಕ್ಕಿಲ್ಲ ಎಂದು ಆಗಲೇ ಬಲವಾಗಿ ಅನ್ನಿಸಿಬಿಟ್ಟಿತು ನನಗೆ.
ಹಾಗಾಗಿ ಇವನಿಗೊಂದಿಷ್ಟನ್ನು ಜಾಸ್ತಿ ಏನನ್ನೂ ಹೇಳದೆ ಬಲವಾಗಿ ಏನನ್ನೂ ಹೇರದೆ, ಅವನ ಅನುಭವಗಳಲ್ಲಿಯೇ ಅವನಿಗರಿವಾಗುವಂತೆ ಮಾಡಬೇಕು ಎಂದು ನಾನು ನಿರ್ಧರಿಸಿದೆ!!
ನಾನು ಬೇಕೆಂದೇ ಕೆಳಗಿಳಿಯಲು ಒಮ್ಮೆ ಹಿಂದೆ ಮುಂದೆ ನೋಡಿದೆ. ಆ ವೃದ್ಧನೇ ಅರ್ಧ ಏಣಿಯನ್ನು ಹತ್ತಿ ಕೆಳಗಡೆ ಬಾ ಎನ್ನುವಂತೆ ನನ್ನೆಡೆಗೆ ಅತಿಯಾದ ಉತ್ಸಾಹದಿಂದ ಕೈ ಚಾಚಿದ.
ನಾನು ಕೆಳಗಿಳಿದೆ. ಲಾರಿಯಲ್ಲಿಯೇ ಬಿದ್ದಿದ್ದ ನನ್ನ ಬ್ಯಾಗ್ ಅನ್ನು ಕೈಯಲ್ಲಿ ಹಿಡಿದುಕೊಂಡು ನಾಯಿ ಬಳಿಯೇ ಬಹಳ ಬೆಚ್ಚಗೆ ಕುಳಿತುಕೊಂಡೆ!
ಬ್ಯಾಗ್‌ನೊಳಗೆ ಸದಾ ಇರುತ್ತಿದ್ದ ಘಲ್ಲೆಂದು ಸದ್ದು ಮಾಡುವ ನನ್ನವಳದ್ದೊಂದು ಗೆಜ್ಜೆಯನ್ನು ಹಾಗೂ ಯಾವತ್ತೂ ಇರುತ್ತಿದ್ದ ಚಿಕ್ಕದಾದ ನೈಫ್ ಇನ್ನೂ ಬ್ಯಾಗ್‌ನೊಳಗೆಯೇ ಇರುವುದನ್ನು ಬ್ಯಾಗನ್ನು ಮೇಲಿನಿಂದಲೇ ಮುಟ್ಟಿ ಖಚಿತಪಡಿಸಿಕೊಂಡೆ!!
ನಾಯಿ ಆಗಲೂ ರಾತ್ರಿಯ ಆಕಾಶದ ಕತ್ತಲೆಯನ್ನೇ ದಿಟ್ಟಿಸಿ ನೋಡುತ್ತಾ ನಾಲಗೆ ಹೊರಗೆ ಚಾಚಿಕೊಂಡೇ ಸುಮ್ಮನೆ ಕುಳಿತಿತ್ತು. ಆ ನಂತರ ಆ ವೃದ್ಧ ತನ್ನ ಚೀಲವನ್ನು ಹಾಗೂ ಕೋಲನ್ನು ತನ್ನ ಪಕ್ಕದಲ್ಲಿಟ್ಟುಕೊಂಡು ನನ್ನ ಹಾಗೂ ನಾಯಿಯೆದುರು ಹಾಗೇ ಕುಳಿತುಕೊಂಡು ಬಿಟ್ಟ. ನಾನು ಅವನತ್ತ ಒಂಚೂರು ದೃಷ್ಟಿ ಹರಿಸದೇ ಹೊರಗಡೆಯೇ ನೋಡುತ್ತಾ ಸುಮ್ಮನೆ ಉಳಿದು ಬಿಟ್ಟೆ!
ತನ್ನ ಬಳಿಯಿದ್ದ ಚೀಲವನ್ನು ಬಿಚ್ಚಿದ ವೃದ್ಧ ಅದರೊಳಗಿದ್ದ ಮೂರು ತುಂಡು ಬ್ರೆಡ್ಡನ್ನು ನನ್ನ ಪಕ್ಕವೇ ಕುಳಿತಿದ್ದ ಹಸಿದ ನಾಯಿಯೆಡೆಗೆ ಬಿಸಾಡಿದ.
ಎರಡು ಬ್ರೆಡ್ ನೇರವಾಗಿ ಹೋಗಿ ನಾಯಿಯ ಮುಂದೆಯೇ ಬಿದ್ದರೆ ಅದರಲ್ಲಿ ಒಂದು ಬ್ರೆಡ್ ಮಾತ್ರ ಮೊದಲಿನಿಂದಲೂ ಹೊರಗಡೆಯೇ ನೋಡುತ್ತಾ ಕುಳಿತಿದ್ದ ನನ್ನ ಮೇಲೆಯೇ ಬಂದು ಬಿತ್ತು!
ಹೌದು.. ಅವನು ನಾಯಿಯೆಡೆಗೆ ಎಸೆದಿದ್ದು ಸರಿಯಾಗಿ ಮೂರು ಬ್ರೆಡ್ ಗಳನ್ನೇ!!!
ಅವನ ವರ್ತನೆಗೆ ಪ್ರತಿಕ್ರಿಯಿಸಬೇಕೆಂದು ನನಗೆ ಅನಿಸಲಿಲ್ಲ. ನನ್ನಲ್ಲೊಂದು ದಿವ್ಯ ಸಮಾಧಾನ ಅದೆಂದೋ ಮನೆ ಮಾಡಿತ್ತು.
ಆ ನಂತರ ನನ್ನ ಮೈಯ ಮೇಲೆ ಬಿದ್ದಿದ್ದ ಆ ಒಂದು ಬ್ರೆಡ್ ಮೈಯಿಂದ ಹಾಗೇ ಜಾರಿಕೊಂಡು ಹೋಗಿ ಪಕ್ಕದಲ್ಲಿ ಕುಳಿತಿದ್ದ ನಾಯಿಯ ಎದುರೇ ಬಿದ್ದು ಬಿಟ್ಟಿತು.
ನಾನು ಆಗಲೂ ಹೊರಗಡೆ ನೋಡುತ್ತಲೇ ಉಳಿದಿದ್ದೆ…!
ಕೆಲವು ಕ್ಷಣಗಳ ಮೌನದ ನಂತರ ಆ ವೃದ್ಧ ನಾಯಿಯನ್ನು ನೋಡುತ್ತಾ ವ್ಯಂಗ್ಯವಾಗಿಯೇ ಹೇಳಿದ್ದ…
“ನಿನ್ನ ನಾಯಿ ಬಹುಶಃ ಬ್ರೆಡ್ ತಿನ್ನುವುದಿಲ್ಲವೆಂದು ಕಾಣುತ್ತದೆ..ಹಹ್ಹಾ.. ಹಹಹ್ಹಾ…!!! “
ಎ.ಬಿ. ಪಚ್ಚು ಮಂಗಳೂರಿನ ಮೂಡುಬಿದಿರೆಯವರು. ಓದು, ಬರಹ, ಪ್ರವಾಸ, ಚಾರಣ, ಸಿನಿಮಾ ವೀಕ್ಷಣೆ ಹಾಗೂ ವಿಮರ್ಶೆ ಇವರ ಆಸಕ್ತಿಯ ವಿಷಯಗಳು. ಜೊತೆಗೆ ಛಾಯಾಗ್ರಹಣದಲ್ಲೂ ಆಸಕ್ತಿ ಹೊಂದಿದ್ದಾರೆ.