ಅಕ್ಟೋಬರ್ನಿಂದ ಖಿನ್ನಗೊಂಡ ಮನಸ್ಸುಗಳು ಮತ್ತೆ ಸೂರ್ಯನ ಬೆಳಕು ಹೆಚ್ಚಾಗುವುದನ್ನು ಕಾದು ಕುಳಿತಿರುತ್ತವೆ. ಚಳಿಗಾಲದ ಸಂಕ್ರಮಣ ಬದುಕಿನ ಹುರುಪನ್ನು ಹಿಂದಿರುಗಿ ಕೊಡುತ್ತದೆ. ಬಹಳ ಹಿಂದಿನ ದಿನಗಳಲ್ಲಿ ನಂಬಿಕೆಗಳು ಹುಟ್ಟುವ ಕಾಲಘಟ್ಟದಲ್ಲಿ, ಫೆಬ್ರವರಿ ಸಮಯದ ದಿನಗಳನ್ನು ವಿಶೇಷವಾಗಿ ನೋಡಲಾಗುತ್ತಿತ್ತು. ಕತ್ತಲು ಎಂಬ ದುಷ್ಟ ಶಕ್ತಿಯನ್ನು ತೊಲಗಿಸಿ, ಬೆಳಕು ಎಂಬ ಭರವಸೆಯನ್ನು ಮರುಸ್ಥಾಪಿಸಲು ಜನರು ಒಂದು ಹಬ್ಬವನ್ನು ಹುಟ್ಟು ಹಾಕಿದರು. ವಿಚಿತ್ರ ಮುಖವಾಡಗಳು, ಬಟ್ಟೆಗಳನ್ನು ಧರಿಸಿ ಭಯಂಕರವಾಗಿ ಕಾಣಿಸಿಕೊಂಡು ಊರಿನ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಕತ್ತಲೆಂಬ ದುಷ್ಟ ಶಕ್ತಿಯನ್ನು ಹೋಗಲಾಡಿಸಲು ಪ್ರಾರಂಭವಾಗಿದ್ದೇ ಈ ಹಬ್ಬ – “ಕಾರ್ನಿವಲ್”!
“ದೂರದ ಹಸಿರು” ಸರಣಿಯಲ್ಲಿ ಯೂರೋಪಿನ “ಕಾರ್ನಿವಲ್” ಆಚರಣೆಯ ಕುರಿತು ಬರೆದಿದ್ದಾರೆ ಗುರುದತ್ ಅಮೃತಾಪುರ
ಯೂರೋಪಿನ ವಿವಿಧ ದೇಶಗಳಲ್ಲಿ ಫೆಬ್ರವರಿ ಬಂತೆಂದರೆ ವಿಶಿಷ್ಟವಾದ ಆಚರಣೆಯೊಂದು ಎಲ್ಲೆಡೆ ನಡೆಯುತ್ತದೆ. ಇದೊಂದು ಸಾಂಸ್ಕೃತಿಕ ಹಬ್ಬ. ಇಟಲಿಯ ವೆನಿಸ್ನಿಂದ ಹಿಡಿದು ಜರ್ಮನಿಯ ಕೊಲೊನ್ ಊರಿನವರೆಗೂ ಪ್ರಸಿದ್ಧವಾಗಿರುವ “ಕಾರ್ನಿವಲ್” ಹಬ್ಬ ಈ ಯುಗದ “ಟ್ರೆಂಡ್ ಸೆಟ್ಟರ್” ಎಂದರೂ ತಪ್ಪಾಗಲಾರದು. ಜರ್ಮನ್ ಭಾಷೆಯಲ್ಲಿ ಈ ಹಬ್ಬವನ್ನು “ಫಾಶಿಂಗ್” ಎಂದು ಕರೆಯಲಾಗುತ್ತದೆ.
ಕ್ರಿ.ಶ. ಹದಿಮೂರನೆಯ ಶತಮಾನದಿಂದ ಹುಟ್ಟಿದ ಈ ಹಬ್ಬಕ್ಕೆ ತನ್ನದೇ ಆದ ಇತಿಹಾಸವಿದೆ. ಭೂಮಧ್ಯ ರೇಖೆಯ ಮೇಲೆ ಮೇಲೆ ಹೋದಂತೆ ದಿನದ ಬೆಳಕಿನ ಆಟವು ಪ್ರಾರಂಭವಾಗುತ್ತದೆ. ವರ್ಷದ ಎರಡು ಸಂಕ್ರಮಣ ಕಾಲದಲ್ಲಿ ವ್ಯತಿರಿಕ್ತ ಬೆಳಕಿನ ಅವಧಿಯನ್ನು ಗಮನಿಸಬಹುದು. ಡಿಸೆಂಬರ್ ಕೊನೆಯಲ್ಲಿ ಬರುವ ಸಂಕ್ರಮಣದಲ್ಲಿ ಬೆಳಕಿನ ಅವಧಿ ಅತ್ಯಂತ ಕಡಿಮೆ ಇದ್ದು, ಕಾಲ ಕ್ರಮೇಣ ಹೆಚ್ಚಾಗುತ್ತಾ ಹೋಗುತ್ತದೆ. ಜೂನ್ ಸಮಯದ ಸಂಕ್ರಮಣದಲ್ಲಿ ಅತ್ಯಂತ ಹೆಚ್ಚು ಬೆಳಕಿನ ಅವಧಿ ಇದ್ದು, ಕಾಲ ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತದೆ. ಅಕ್ಟೋಬರ್ನಿಂದ ಪ್ರಾರಂಭವಾಗುವ ಚಳಿಗಾಲ ತಡೆಯಲಾರದಷ್ಟು ಹಿಂಸೆಯಾದರೆ, ಮಾರ್ಚ್ವರೆಗೂ ಕತ್ತಲೆಯ ದಿನಗಳು ಮನಸ್ಸನ್ನು ಹೆಚ್ಚು ಖಿನ್ನಗೊಳಿಸುತ್ತವೆ. ಹೀಗೆ ಕತ್ತಲು ಕಳೆದು ಹೆಚ್ಚು ಬೆಳಕಿನ ಅವಧಿಯನ್ನು ಗಮನಿಸಬಹುದಾದ ದಿನಗಳು ಫೆಬ್ರವರಿ ಇಂದ ಪ್ರಾರಂಭವಾಗುತ್ತದೆ.
ಅಕ್ಟೋಬರ್ನಿಂದ ಖಿನ್ನಗೊಂಡ ಮನಸ್ಸುಗಳು ಮತ್ತೆ ಸೂರ್ಯನ ಬೆಳಕು ಹೆಚ್ಚಾಗುವುದನ್ನು ಕಾದು ಕುಳಿತಿರುತ್ತವೆ. ಚಳಿಗಾಲದ ಸಂಕ್ರಮಣ ಬದುಕಿನ ಹುರುಪನ್ನು ಹಿಂದಿರುಗಿ ಕೊಡುತ್ತದೆ. ಬಹಳ ಹಿಂದಿನ ದಿನಗಳಲ್ಲಿ ನಂಬಿಕೆಗಳು ಹುಟ್ಟುವ ಕಾಲಘಟ್ಟದಲ್ಲಿ, ಫೆಬ್ರವರಿ ಸಮಯದ ದಿನಗಳನ್ನು ವಿಶೇಷವಾಗಿ ನೋಡಲಾಗುತ್ತಿತ್ತು. ಕತ್ತಲು ಎಂಬ ದುಷ್ಟ ಶಕ್ತಿಯನ್ನು ತೊಲಗಿಸಿ, ಬೆಳಕು ಎಂಬ ಭರವಸೆಯನ್ನು ಮರುಸ್ಥಾಪಿಸಲು ಜನರು ಒಂದು ಹಬ್ಬವನ್ನು ಹುಟ್ಟು ಹಾಕಿದರು. ವಿಚಿತ್ರ ಮುಖವಾಡಗಳು, ಬಟ್ಟೆಗಳನ್ನು ಧರಿಸಿ ಭಯಂಕರವಾಗಿ ಕಾಣಿಸಿಕೊಂಡು ಊರಿನ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಕತ್ತಲೆಂಬ ದುಷ್ಟ ಶಕ್ತಿಯನ್ನು ಹೋಗಲಾಡಿಸಲು ಪ್ರಾರಂಭವಾಗಿದ್ದೇ ಈ ಹಬ್ಬ – “ಕಾರ್ನಿವಲ್”! ಇನ್ನೊಂದು ನಂಬಿಕೆಯ ಪ್ರಕಾರ ಕತ್ತಲೆ ಎಂಬ ಮಾಯಾವಿಯು ಮಾನವನ ಸಂತೃಪ್ತಿಯನ್ನು ನಾಶ ಮಾಡುವ ಮಾಯಾವಿ. ಇದಕ್ಕೆ ವ್ಯತಿರಿಕ್ತವಾಗಿ ಬೆಳಕು ಎಂಬ ದೈವ ಶಕ್ತಿಯು ಚೈತ್ರ ಮಾಸದ ಹೊಸ ಜೀವನವನ್ನು ದೊರಕಿಸಿ ಮಾನವನ ಸಂತೃಪ್ತಿಯನ್ನು ಹೆಚ್ಚಿಸುತ್ತದೆ.
ಒಟ್ಟಿನಲ್ಲಿ ಹೇಳಬೇಕಾದರೆ ನಮ್ಮ ಸಂಕ್ರಾಂತಿ ಮತ್ತು ಯುಗಾದಿಯನ್ನು ಒಟ್ಟುಗೂಡಿಸಿ ಮಧ್ಯ ರೇಖೆಯನ್ನು ಎಳೆದರೆ ಬರುವ ದಿನಾಂಕಗಳಲ್ಲಿ ನಡೆಯುವ ಹಬ್ಬವೇ ಈ ಕಾರ್ನಿವಲ್! ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ರೀತಿ – ನೀತಿ ಬದಲಾದರೂ, ಪ್ರಕೃತಿಯ ಬದಲಾವಣೆಯನ್ನು ಸಂಭ್ರಮಿಸುವ ಆಚರಣೆಗಳ ಸಾಮ್ಯತೆಯನ್ನು ಗಮನಿಸಬೇಕು. ಕತ್ತಲೆ ಕಳೆದು ಬೆಳಕಿನೆಡೆಗೆ ನಡೆಯುವುದು ಅಸೀಮ ಸಂಭ್ರಮಾಚರಣೆ!
ಇತ್ತೀಚಿನ ದಿನಗಳಲ್ಲಿ ಕಾರ್ನಿವಲ್ ಹಬ್ಬವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇಟಲಿಯ ವೆನಿಸ್ ಕಾರ್ನಿವಲ್ ಹಬ್ಬದ ರಾಜಧಾನಿ. ಜರ್ಮನಿಯ ಕಲೋನ್ (Colon) ಕೂಡ ಹಿಂದೆ ಬಿದ್ದಿಲ್ಲ. ಪ್ರಪಂಚದ ಹಲವಾರು ಭಾಗದಿಂದ ಕಾರ್ನಿವಲ್ ವೀಕ್ಷಿಸಲು ಜನ ಬರುತ್ತಾರೆ. ತಮ್ಮ ಪರಂಪರೆಯನ್ನು ವಿಶ್ವ ಸ್ವೀಕರಿಸುತ್ತಿರುವ ರೀತಿ ಕಂಡು ಯೂರೋಪಿನ ನಗರಗಳು ಹೆಚ್ಚು ಹೆಚ್ಚು ವಿಜೃಂಭಣೆಯಿಂದ ಕಾರ್ನಿವಲ್ ಆಚರಿಸುತ್ತವೆ.
ಜೂನ್ ಸಮಯದ ಸಂಕ್ರಮಣದಲ್ಲಿ ಅತ್ಯಂತ ಹೆಚ್ಚು ಬೆಳಕಿನ ಅವಧಿ ಇದ್ದು, ಕಾಲ ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತದೆ. ಅಕ್ಟೋಬರ್ನಿಂದ ಪ್ರಾರಂಭವಾಗುವ ಚಳಿಗಾಲ ತಡೆಯಲಾರದಷ್ಟು ಹಿಂಸೆಯಾದರೆ, ಮಾರ್ಚ್ವರೆಗೂ ಕತ್ತಲೆಯ ದಿನಗಳು ಮನಸ್ಸನ್ನು ಹೆಚ್ಚು ಖಿನ್ನಗೊಳಿಸುತ್ತವೆ. ಹೀಗೆ ಕತ್ತಲು ಕಳೆದು ಹೆಚ್ಚು ಬೆಳಕಿನ ಅವಧಿಯನ್ನು ಗಮನಿಸಬಹುದಾದ ದಿನಗಳು ಫೆಬ್ರವರಿ ಇಂದ ಪ್ರಾರಂಭವಾಗುತ್ತದೆ.
ಜರ್ಮನಿಯ ಪ್ರತಿಯೊಂದು ಊರಿನಲ್ಲೂ ನಡೆಯುವ ಕಾರ್ನಿವಲ್ ಹಬ್ಬವನ್ನು ಫಾಶಿಂಗ್ ಎಂದು ಕರೆಯಲಾಗುತ್ತದೆ. ಸ್ಟುಟ್ಟ್ ಗಾರ್ಟ್ ಸಮೀಪದ “ವೆಯ್ಲ್ ದೆರ್ ಸ್ಟಾಟ್” (Weil der Stadt ) ಎಂಬ ಪಟ್ಟಣದಲ್ಲಿ ನಡೆಯುವ ಕಾರ್ನಿವಲ್ ಕೂಡ ಸ್ಥಳೀಯರ ಅಚ್ಚು ಮೆಚ್ಚು. ಸುತ್ತ ಮುತ್ತಲಿನ ಹತ್ತಾರು ಊರುಗಳಿಂದ ಬರುವ ಜನರು ಇಲ್ಲಿನ ಕಾರ್ನಿವಲ್ ಮೆರವಣಿಗೆ ನೋಡಲು ಪ್ರವೇಶ ಶುಲ್ಕ ಪಾವತಿಸಿ ಕಾಯಬೇಕು. ಮಧ್ಯಾಹ್ನ ಎರಡು ಘಂಟೆಗೆ ಪ್ರಾರಂಭವಾಗುವ ಕಾರ್ನಿವಲ್ ಮೆರವಣಿಗೆ ನೋಡಲು ಮಕ್ಕಳು ಸಣ್ಣ ಸಣ್ಣ ಚೀಲಗಳನ್ನು ತಂದು ಕಾಯುತ್ತಿರುತ್ತಾರೆ. ಅದಕ್ಕೊಂದು ಕಾರಣವಿದೆ. ಭಯಂಕರವಾದ ಮುಖವಾಡಗಳು, ವೇಷ ಭೂಷಣಗಳನ್ನು ತೊಟ್ಟು ಬರುವ ಮೆರವಣಿಗೆಯನ್ನು ಮಕ್ಕಳು ಇಷ್ಟ ಪಡಲು ಹೇಗೆ ಸಾಧ್ಯ? ಎನ್ನುವ ಪ್ರಶ್ನೆ ನನಗೂ ಕಾಡುತ್ತಿತ್ತು. ಬರುವ ಮೆರವಣಿಗೆಯ ವಿಚಿತ್ರ ವಿಚಿತ್ರ ಭಯಂಕರ ಪಾತ್ರಗಳು ಕೈ ತುಂಬಾ ಚಾಕಲೇಟ್ಗಳನ್ನು ಮಕ್ಕಳೆಡೆಗೆ ಎಸೆಯುತ್ತವೆ. ಚಾಕಲೇಟ್ಗಳನ್ನು ಬಾಚಿಕೊಂಡು ತಿಂದು ತೇಗಿದರೂ ಮುಗಿಯದಷ್ಟು ಸಿಕ್ಕುವುದರಿಂದ ಒಂದು ಕೈ ಚೀಲದಲ್ಲಿ ತುಂಬಿಸಿಕೊಂಡು ಚಿಣ್ಣರು ಆನಂದಪಡುತ್ತಾರೆ.
ನಮ್ಮ ಗಣರಾಜ್ಯೋತ್ಸವ ಅಥವಾ ಸ್ವಾತಂತ್ರ್ಯ ದಿನಾಚರಣೆಯ ದಿನ ನಡೆಯುವ ಪೆರೇಡ್ ರೀತಿಯಲ್ಲಿ ಒಂದರ ನಂತರ ಮತ್ತೊಂದು ಟ್ಯಾಬ್ಲೋಗಳು ಬಂದಂತೆ ಇಲ್ಲಿಯೂ ಸಹ ಒಂದರ ಹಿಂದರಂತೆ ತಂಡೋಪ ತಂಡವಾಗಿ ಬರುವ ತಂಡಗಳು ತನ್ನದೇ ಆದ ಛಾಪನ್ನು ಉಳಿಸಿಕೊಂಡಿರುತ್ತವೆ. ಮೂವತ್ತಕ್ಕಿಂತಲೂ ಹೆಚ್ಚು ತಂಡಗಳು ಭಾಗವಹಿಸುವ ಈ ಸಂಭ್ರಮದಲ್ಲಿ ಮಿಂದೇಳುವ ಜನರ ಉತ್ಸಾಹ ಪ್ರಶಂಸನಾರ್ಹ. ಕೊಲೊನ್ ನಗರದಲ್ಲಿ ನಡೆಯುವ ಕಾರ್ನಿವಲ್ ಹಬ್ಬದಲ್ಲಿ ಪ್ರಸ್ತುತ ವಿಚಾರಗಳನ್ನೂ ಸಹ ಬಿಂಬಿಸಲಾಗುತ್ತದೆ. ವರ್ತಮಾನದ ರಾಜಕೀಯವನ್ನು ಅಣಕಿಸುವ, ಪರಿಸರವಾದಿಗಳ ನಿಲುವನ್ನು ಪ್ರತಿಬಿಂಬಿಸುವ ವಿಚಾರಧಾರೆಯ ಟ್ಯಾಬ್ಲೋಗಳನ್ನು ಪ್ರದರ್ಶಿಸಲಾಗುತ್ತದೆ. ಚರ್ಚೆಗೆ ಗ್ರಾಸವಾಗಿ ಸುದ್ದಿಯಲ್ಲಿ ಉಳಿಯುವ ತಂತ್ರಗಾರಿಕೆಯನ್ನು ಸಹ ತಳ್ಳಿ ಹಾಕುವ ಹಾಗಿಲ್ಲ.
ಭಾರತದಂತಹ ದೂರದ ದೇಶಗಳಿಂದ ಇಲ್ಲಿ ಬಂದಂತಹ ನಮಗೆ ಈ ಹಬ್ಬ ವಿಶೇಷ, ವಿಚಿತ್ರ ಅನ್ನಿಸಿತು. ಆಚರಣೆಗಳು ವಿಭಿನ್ನವಾದರೂ, ಬೆಳಕಿನ ಬಗೆಗಿನ ದೈವಿಕ ಭಾವನೆ, ಸಾಮ್ಯತೆಯನ್ನು ಬಿಂಬಿಸಿತು. ಕತ್ತಲೆಂಬ ದುಷ್ಟ ಶಕ್ತಿಯನ್ನು ಹೊಡೆದೋಡಿಸಲು ಭಯಂಕರವಾದ, ಹಾಸ್ಯಮಯವಾದ ಮುಖವಾಡ, ವೇಷ ಭೂಷಣಗಳನ್ನು ಹಾಕಿಕೊಂಡು ಸಂಭ್ರಮಿಸುವ ಜನರಿಗೆ ಬೆಳಕೆಂಬ ಭರವಸೆ ಹಿಂದೆ ಕಾಯುತ್ತಿರುತ್ತದೆ. ಪ್ರತಿಯೊಂದು ತಂಡದವರೂ ಸಹ ತನ್ನದೇ ವಿಶೇಷಗಳನ್ನು ಪ್ರದರ್ಶಿಸುತ್ತಾರೆ. ಈ ಹಬ್ಬಕ್ಕಾಗಿಯೇ ಇರುವ ಐತಿಹಾಸಿಕ ಪಾತ್ರಗಳು ಸಹ ಪ್ರಮುಖ ಆಕರ್ಷಣೆ. ಒಂದು ಕೈಯಲ್ಲಿ ಮರದ ಕೋಲೊಂದು ಹಿಡಿದು, ಕಿರಾ ಕಿರಾ ಶಬ್ದ ಮಾಡುವ ಗಿರಕಿಯೊಂದಿಗೆ ಬಂದು ಜನರಿಂದ ಪ್ರಶಂಸೆ ಗಿಟ್ಟಿಸುವ ರೀತಿ ಆಶ್ಚರ್ಯ ಹುಟ್ಟಿಸುತ್ತದೆ.
ಈಸ್ಟರ್ ಹಬ್ಬಕ್ಕೆ ಮುಂಚೆ ಬರುವ ಕಾರ್ನಿವಲ್ ಹಬ್ಬ ಗ್ರೀಕ್, ರೋಮನ್ ಕಾಲದಲ್ಲಿ ಕೂಡ ಉಲ್ಲೇಖಿಸಲಾಗಿದೆ. ಪಾಶ್ಚಿಮಾತ್ಯ ಜಗತ್ತಿನ ಹೆಸರಾಂತ ಹಬ್ಬಗಳೆಂದರೆ ಕ್ರಿಸ್ಮಸ್ ಮತ್ತು ಈಸ್ಟರ್ (ಗುಡ್ ಫ್ರೈಡೆ) ಎಂದಷ್ಟೇ ಗೊತ್ತಿದ್ದ ನನಗೆ ಫಾಶಿಂಗ್ ಕಾರ್ನಿವಲ್ ಒಂದು ವಿಶಿಷ್ಟ ಅನುಭವ ನೀಡಿತು. ರಡೊಲ್ಫ್ ಜೆಲ್ ಊರಿನಲ್ಲಿ ಭಾರತೀಯರ ತಂಡವೊಂದು ಭಾಗವಹಿಸಿದ್ದು ವಿಶೇಷ. ಭಾರತೀಯ ನಾರಿಯರು ಸೀರೆಯನ್ನು ಉಟ್ಟು ಮೆರವಣಿಗೆಯಲ್ಲಿ ಭಾಗವಹಿಸಿದ್ದು ಅಲ್ಲಿನ ಸ್ಥಳೀಯರಿಗೆ ಅನನ್ಯ ಅನುಭವ ನೀಡಿತು.
ಇತಿಹಾಸದ ಪುಟಗಳಲ್ಲಿ ಒಂದು ವರ್ಷವೂ ನಿಲ್ಲದ ಕಾರ್ನಿವಲ್ ಹಬ್ಬವು, ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯಿಂದ ಎರಡು ವರ್ಷ ನಿಂತು ಹೋಗಿತ್ತು. 2020 ರಲ್ಲಿ ನಡೆದ ನಾನು ಉಳಿದಿದ್ದ ಊರಿಗೆ ಇಬ್ಬರು ಇಟಾಲಿಯನ್ ಪ್ರಜೆಗಳು ಬಂದಿದ್ದರೆಂದು ಸುದ್ದಿ ಹರಡಿ ಊರಿನವರೆಲ್ಲ ಗಾಬರಿಯಾಗಿದ್ದನ್ನು ನೆನಸಿಕೊಂಡರೆ ಈಗ ನಗು ಬರುತ್ತದೆ. ನಮ್ಮ ಕನ್ನಡ ಸುದ್ದಿ ವಾಹಿನಿಗಳ ಪ್ರಕಾರ: “ಆ ದಿನಗಳಲ್ಲಿ ಇಟಾಲಿಯಲ್ಲಿ ಕೊರೋನಾ ರಣಕೇಕೆ ಹಾಕಿ, ರುದ್ರ ತಾಂಡವವಾಡುತ್ತಿತ್ತು”. ಈ ವರ್ಷ ಮತ್ತೆ ವಿಜೃಂಭಣೆಯಿಂದ ನಡೆದ ಕಾರ್ನಿವಲ್ ಹಬ್ಬ ಹಳೆಯ ಮೆರುಗನ್ನು ಮತ್ತೆ ತಂದಿತು. ಜನರು ಸಹ ಇದಕ್ಕಾಗಿ ಕಾದು ಕುಳಿತಿದ್ದರು.
ಮೂಲತಃ ದಾವಣಗೆರೆಯವರಾದ ಗುರುದತ್ ಸಧ್ಯ ಜೆರ್ಮನಿಯ ಕಾನ್ಸ್ಟೆನ್ಸ್ನಲ್ಲಿ ವಾಸಿಸುತ್ತಿದ್ದಾರೆ. ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಫೋಟೋಗ್ರಫಿ, ಪ್ರವಾಸ, ಚಾರಣ, ಪುಸ್ತಕಗಳ ಓದು ಇವರ ಹವ್ಯಾಸಗಳು..