ಭಾಳ ಸಿಹಿಸುದ್ದಿಯೇನೂ ಅಲ್ಲ. ಆದರೂ, ಕಹಿಯಂತೂ ಅಲ್ಲಲ. ತೇರಿಗೆ ಹೂವುಹಣ್ಣು ಹಾಕವರಿದ್ರ ಇವತ್ತೇ ತಗೊಂಡು ತಯಾರಾಗ್ರಿ. ನಾಳೆ ಶಿಗತಾವೋ ಇಲ್ಲೋ. ಭಯಂಕರ ತುಟ್ಟಿನು ಇರತಾವು. ಬಿಸಿಲು ಏರಾಕ ಹೊಂಟೈತಿ. ಜರಾ ಚಹಾ ಕುಡೀತಿರೇನು ನೋಡ್ರಿ, ಹೇಳುತ್ತ ತಾನೂ ಹಗುರಾದಂತೆ ಬೋಲ್ಡಿ ಬಾಬಾ ಕೊಳವೆಗೆ ತಂಬಾಕು ತುಂಬಿ ಕಿಡಿ ಹಚ್ಚಿದ. ರುಕುಮವ್ವ, ಚಂದ್ರವ್ವಳನ್ನು ಕೈಯಿಂದ ಎಳೆದುಕೊಳ್ಳುತ್ತ ಬೆನ್ನು ಸವರಿ, ಸಮಾಧಾನ ಆತಿಲ್ಲವಾ. ಸುಮ್ಮ ಜೀಂವಾ ಕಹಿ ಮಾಡ್ಕೊಂಡಕ್ಯಸಿ ಕುಂತಿದ್ದಿ, ಅಂದಳು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕೇಶವ ಮಳಗಿ ಬರೆದ ಕಥೆ “ಹೊಳೆ ಬದಿಯ ಬೆಳಗು” ನಿಮ್ಮ ಈ ಭಾನುವಾರದ ಓದಿಗೆ

ಎದೆ ಎತ್ತರದ ಗುಡ್ಡದ ಕಾಲುದಾರಿಯಿಂದ ನೋಡಿದಾಗ ಆಕಾಶದ ದಟ್ಟ ಕಪ್ಪು-ಬಿಳಿ ಮೋಡಗಳನ್ನು ನೆಲಕ್ಕೆ ತಂದು ರಾಶಿ ಒಟ್ಟಿದಂತೆ ನದಿದಂಡೆಯ ಬಂಡೆಗಳು ವಿಶಾಲವಾಗಿ ಹರಡಿದ್ದವು. ಚೆಲ್ಲಾಪಿಲ್ಲಿ ಚದುರಿದ್ದ ಪ್ರತಿ ಬಂಡೆಯೂ ಒಂದು ಬದಿಯಿಂದ ಬೋರಲು ಹಾಕಿದ ಹರಿಗೋಲಿನ ಹಾಗೆ; ಇನ್ನೊಂದು ಕಡೆಯಿಂದ ಬೇಸಿಗೆಯಲ್ಲಿ ನದಿಯ ನೀರು ಹೀರಿ ಮಗ್ಗುಲಾದ ಕೋಣಗಳ ಹಾಗೆ ಕಾಣುತ್ತಿದ್ದವು. ಮಾಘ ಮಾಸದ ಬೆಳಗಿನ ಚುರು ಚುರು ಬಿಸಿಲು, ಥರಥರ ಥಂಡಿ ಜತೆಯಾಗಿ ಬಂಡೆಗಳಿಗೆ ಮಿರುಗುವ ವಿಶೇಷ ಗುಣವನ್ನು ದಯಪಾಲಿಸಿದ್ದವು. ಇಂತಹ ಹೊಳೆವ ಕಪ್ಪು ಬಂಡೆಯೊಂದರ ತುದಿಗೆ ಕುಳಿತು ತಿಂಥಿಣಿಯ ದೈವಿಕ ನೆಲದಲ್ಲಿ ಹರಿದು ಹೋಗುತ್ತಿದ್ದ ಕೃಷ್ಣೆಯ ಜುಳುನೀರಲ್ಲಿ ಕಾಲುಗಳನ್ನು ಇಳಿಬಿಟ್ಟು ಕಣ್ಣುಚ್ಚಿ ಮೌನೇಶನನ್ನು ಧ್ಯಾನ ಮಾಡುತ್ತಿದ್ದ ಚಂದ್ರವ್ವಳಿಗೆ ಸುತ್ತಲ ಜಾತ್ರೆಯ ಜನರ ಗೌಜು-ಗದ್ದಲ, ಹರಕೆ, ಒತ್ತಾಟ ಎಲ್ಲ ಮರೆತುಹೋಗಿ ಒಂಟಿಗೇಡಿ ಬದುಕು ನೆನೆದು ಎದೆಯೊಳಗಿಂದ ದುಃಖ ನುಗ್ಗಿ ಬಂತು. ಮಗ್ಗುಲಿಗೆ ಕುಳಿತಿದ್ದ ಚೊಂಚ ರುಕಮವ್ವನ ಎರಡೂ ಕೈಗಳನ್ನು ನಡಗುತ್ತ ಹಿಡಿದುಕೊಂಡು, ರುಕ್ಕವ್ವ ಆಯಿ. ನನ ಜೀವಕ್ಕ ಭಾಳ ಒಜ್ಜೆ ಮಾಡಿದ್ಯವಾ. ಈ ಮೂರು ದಿನದಾಗ ಒಂದ್ ಅಡವಿಗಿ ಕಳಸಲಿಲ್ಲ; ಒಂದ್ ಗಿಡಕ್ಕ ಕಳಸಲಿಲ್ಲ. ಸೆರಗಿನ ನೆಳ್ಳಾಗ ಹೊಟ್ಟಿ ಕೂಸಿನ ಹಾಂಗ ಜ್ವಾಪಾನ ಮಾಡಿದ್ಯವ್ವ, ಹಣೆಬಾರ ಛಲೋ ಇಲ್ಲದ ಹೆಣ್ಹೆಂಸಿಗಿ ಯಾರ ಹಿಂಥಾ ಕಕಲಾತಿ ತೋರಿಸ್ಯಾರು? ನಿನ ಋಣಾ ದೊಡ್ಡದವ್ವಾ, ಎಂದು ಧ್ವನಿಯನ್ನು ಭಾರ ಮಾಡಿಕೊಂಡಳು.

ಅಯ್ಯ, ಏನ ಹುಚಖೋಡಿ ಇದೀಗ್ಯ… ಹುಡುಗಿ? ಒಜ್ಜ ಆಗಾಕ ನೀ ಏನ ಕಲ್ಲಿನಗತೆ ನನ ತಲೀ ಮ್ಯಾಗ ಕುಂತಿದ್ಯ ಹೆಂಗ? ಹೊಟ್ಟಿಗಿ ಬಸಿರು ಭಾರ; ಗುಳದಾಳಿ ಕಟ್ಟಿದ ಗಣಮಗಾ ಮೈಗೆ ಹೊರಿ ಅಂದ್ರ ದುನಿಯಾ ನಡೀತೈತೇನ. ಇಕಾ ನೋಡು, ಈ ಹೊಳಿ ಹರಕೊಂಡು ಹೊಂಟೈತ್ಯಲ, ಇದಕ್ಕ ಯಾವ ಒಜ್ಜಿ ಹಚ್ಚಿಯವ…? ಹೆಣದ ಭಾರ ಸೈತ ತನ್ನೊಳಗ ಇಟಗೊಳಂಗಿಲ್ಲಿದು, ಎಲ್ಲಾ ತೇಲಸತೈತಿ. ನಾಳೆ ಹುಣಮಿ. ಆಚಿ ದಡಕ್ಕ ಮೋನೇಶ್ವರನ ತೇರು ಎಳೀತಾರ. ಇಲ್ಲದ್ದು ಮನಸಿಗೆ ಹಚಗೊಂಡಕ್ಯಾಸಿ ಕುಂಡ್ರಬ್ಯಾಡ. ಇದದ್ದು-ಇಲ್ಲದ್ದು ಆ ಮೌನಪ್ಪನ ಉಡೇದಾಗ ಹಾಕಿ ಥಣ್ಣಗಾಗು. ಅಂವಾ ಭಾಳ ಜಾಗ್ರತ ಮುನಿ. ಎಲ್ಲಾರ್ನೂ ಅವರವರ ಭಾರ ಒಜ್ಜೆ ಅನ್ನಿಸಧಾಂಗ ಹುಟ್ಟು ಹಾಕಿ ದಡಾ ಮುಟ್ಟಸತಾನ. ಎಲ್ಲಾನು ಅವನ ಜೋಳಿಗಿಗಿ ಹಾಕೂದಾಟ ನಮ ಕೆಲಸ. ತೇಲುಸೂದು ಮುಣಗುಸೂದು ಅವನ ಜೋಳಗ್ಯಾಗಿಂದು, ತಿಳೀತ ಹೆಂಗ…? ನಿನಗ ದಂಡಿಗಿ ಕರಕೊಂಡು ಬಂದದ್ದು ಮುಂಜಾಲಿ ಛಂದಾಗಿ ಕಾಣಸೂ ಸೂರ್ಯನ ಬೆಳಕು ನೋಡಲಿ ಅಂತ. ಬಸುರಿ ಹೆಂಗಸು ಈ ಕೆಂಪನ ಬೆಳಕು ಕಣ್ಣ ತುಂಬಿಕೊಂಡ್ರ ನಿನಗ ಹುಟ್ಟೂ ಕೂಸಿನ ಮಾರೀನೂ ಕೆಂಪಗ ಆದೀತು ಅಂತ, ಎಂದು ಕುವ್ವಾಡ ಮಾಡಿದಳು. ನಾನಂತೂ ಕುರುಡಿ. ನಿನ ಕಣ್ಣಾಗರೆ ಈಟು ಬೆಳಕು ತುಂಬಲಿ ಎಂದ್ರು, ಬ್ಯಾಡಾಗಿದ್ದು ಹಚಕೊಂಡು ಅಳಕೊಂತ ಕುಂತಿ ಆತ್ಯು, ತ್ಯಗಿ, ತ್ಯಗಿ…. ಎನ್ನುತ್ತ ಚಂದ್ರವ್ವನ ಕೈಗಳನ್ನು ತನ್ನ ಬೊಗಸೆಗಳಿಗೆ ತೆಗೆದುಕೊಂಡು ಮೆತ್ತಗೆ ಹಿಸುಕಿದಳು. ಚಂದ್ರವ್ವ, ಸುರುಸುರು ಮಾಡುತ್ತ, ಸೆರಗಿನಿಂದ ಕಣ್ಣು-ಮೂಗು ಒರೆಸಿಕೊಳ್ಳತೊಡಗಿದಳು.

ಚೊಂಚ ಮುದುಕಿ ರುಕುಮವ್ವನ ಕಣ್ಣು ಕುರುಡಾದರೂ ಬಾಡಿದ ವಿಳ್ಳೆಯದೆಲೆಯೇ ಸಿಕ್ಕ ಸೌಭಾಗ್ಯ ಎಂದು ಅದರಿಂದಲೇ ರಸ ಹೀರಿ ಬದುಕಿ ಪಡೆದ ಮಾಗಿದ ದೇಹದ ಕಿವಿ-ನಾಲಗೆ, ಮೂಗು ಬಲು ಚುರುಕು. ಗಾಳಿ ಮೂಸಿ ಹತ್ತೂದಿಕ್ಕಿನ ಹಕೀಕತ್ತು ಆಕೆ ಹೆಕ್ಕಬಲ್ಲವಳಾಗಿದ್ದಳು. ಅಕ್ಕಪಕ್ಕ, ಹಿಂದೆಮುಂದೆ ಓಡಾಡುತ್ತಿದ್ದ ಮಂದಿ ಗುಜುಗುಜು ಉಸುರುತ್ತಿರುವುದರಲ್ಲಿ ಮಾಮೂಲಿಗಿಂತ ಗೂಢವಾದುದೇನೋ ಇದೆ ಎಂದು ಅರಿವಿಗೆ ಬಂದದ್ದೇ ಮೊಮ್ಮಗನನ್ನು- ದೊರಿ, ಏ ದೇವಪ್ಪ ದೊರಿ, ಎಲ್ಲಿ ಹೋದ್ಯೋ ಯಪ್ಪಾ, ಎಂದು ಕೂಗಿದರೂ, ಮುದುಕಿಯ ಊರುಗೋಲಿನಂತೆ ಆಜೂಬಾಜು ಓಡಾಡುತ್ತಿದ್ದ ದೇವೇಂದ್ರ ದೊರೆಯ ಎಂದಿನ ಉತ್ತರವಾದ, ಏನಬೇ ಆಯೀ, ಬರದಿದ್ದುದ್ದರಿಂದ, ಎಲ್ಲಿ ಹೋದ್ನೋ, ಬ್ಯಾಟೀ ನಾಯಿ ಹಂಗ ಮೂಸಕೊಂತ, ಎಂದು ಕುಳಿತಲ್ಲೇ ಕೈ ಸವರಿ ಸವರಿ ಮಗ್ಗುಲಲ್ಲಿ ಯಾರಾದರೂ ಇದ್ದಾರೆಯೋ, ಎಂದು ನೋಡಿದಳು.

ಅದಾಗಲೇ ಸಣ್ಣಸಣ್ಣ ತೊರೆಗಳಂತೆ ಬಣ್ಣದ ಸುದ್ದಿಗಳು ಆಚೆ ದಡದಿಂದ ಈಚೆ ದಡಕ್ಕೆ ಹರಿದು ಬರತೊಡಗಿದ್ದವು. ನಸುಕಿನಲ್ಲಿ ನದಿದಂಡೆಗೆ ಚೆರಗಿಗೆ, ಜಳಕಕ್ಕೆ ಎಂದು ಹೋದವರು ಮೊದಲು ಅದನ್ನು ನೋಡಿದ್ದರು. ಯಾರೋ ಬಟ್ಟಿ-ಸಾಮಾನಿನ ಗಂಟು ಬಿಟ್ಟು ಹೋಗಿರಬೇಕಂತ; ಜಾತ್ರಿ ಕಸಕಡ್ಡಿ ಚೀಲದಾಗ ತುಂಬಿ ಒಗೆದಿರಬೇಕಂತ ತಿಳಿದಿದ್ರಂತ. ಆಮ್ಯಾಲ ನೋಡಿದ್ರ ಮನಷಾನ ಹೆಣದ ಗತೆ ಕಂಡತಂತವಾ. ನೋಡಾಕ ಭಾಳ ಕಟ್ಟ್‌ಮಸ್ತ ಹರೇದ ಹುಡುಗ ಹಾನಂತ. ತಾನೇ ನದೀಗೆ ಹಾರಿ ಸಾಯೂ ವಯಸ್ಸಂತೂ ಅಲ್ಲೇ ಅಲ್ಲ ತಗೀ. ಇಲ್ಲಾ, ಕಾಲು ಜಾರಿ ಬಿದ್ದು, ಈಸಾಕ ಬರದೇ ನೀಗಿರಬೇಕು. ಇಲ್ಲಾ, ಯಾರರೇ ಖೂನಿಖತಲ್ ಮಾಡಿ ಒಗದಿರಬೇಕು. ಅಂತೂ ಒಂದು ಜೀವದ ಭೂಮಿ ಋಣಾ ಮುಗೀತು, ಏನ…? ನೀರು ಕುಡದು ಮೈ ಅನ್ನೂದು ಗಡತಾರ ಉಬ್ಬಿ ಕುಂತೈತ್ಯಂತವ್ವಾ. ನೋಡಿದ್ರ ಎರಡು-ಮೂರು ದಿನಾ ಆದಂಗ ಕಾಣತೈತ್ಯಂತ. ಸನೇಕ ಹೋದ್ರ ಮೂಗು ಕಿತ್ತು ಬರೂಹಾಂಗ ವಾಸನಿ ಹೊಡದು, ಉಲ್ಟಿ ಆಗಂಗೈತ್ಯಂತ. ಮಂದಿ ಮೋನಪ್ಪನ ದರ್ಶನಾ ಬಿಟ್ಟಕ್ಯಾಸಿ, ಹೆಣದ ದರ್ಶನಾ ಮಾಡಕೋಣಾಕ ಹುಚ್ಚರಗತೆ ಹೊಂಟಾರಂತ ನೋಡು. ಹೀಂಗೈತಿ ಕಥಿ, ಎಂಬಷ್ಟು ಮಾಹಿತಿ ರುಕುಮವ್ವ ಒಟ್ಟು ಹಾಕುವಲ್ಲಿಗೆ ಚಂದ್ರವ್ವ ಇದ್ದಕ್ಕಿದ್ದಂತೆ ಹುಚ್ಚಿಯಂತೆ, ಯವ್ವಾ, ನಾ ಕೆಟ್ಟೆ, ಯವ್ವಾ ನನ ಬದುಕು ಹಾಳಾತು, ಎಂದು ಜೋರಾಗಿ ಅಳತೊಡಗಿದಳು. ಅಪಶಕುನದ ಸುದ್ದಿಯ ಹಿನ್ನೆಲೆಯಲ್ಲಿ ಚಂದ್ರವ್ವಳ ಮನಸ್ಸಿನ ಸೂಕ್ಷ್ಮ ಗ್ರಹಿಸಿದ ರುಕುಮವ್ವ, ಅಯ್ಯ ನಿನ ಅಂಥಾ ಕೆಟ್ಟ ವಿಚಾರ್ಯಾಕ ಮಾಡತಿ…? ಎಂದು ಮೇಲೆ ಸಮಾಧಾನ ಹೇಳಿದರೂ ಒಳಗೇ ಅವಳ ಜೀವಕ್ಕೂ ನದಿಯ ನೀರು ಹರಿದಂತಾಗಿ ಎದೆಯೆಲ್ಲ ಥಣ್ಣಗಾಯಿತು. ಧಾವಂತ ಕಡಿಮೆ ಮಾಡಿಕೊಳ್ಳಲು ಲೇ, ಹಲ್ಕಟ್ ದೊರಿ, ಎಲ್ಲಿ ಹೋಗಿ ಕುಂತ್ಯಲೇ? ಬೇಕಾದಾಗ ಒಂದು ವಾಟಗಾ ನೀರು ಸೈತ ಕೊಡೋ ಮನೆತನ ಅಲ್ಲ ತ್ಯಗೀ ನಿಮದು, ಎಂದು ಒದರ್ಯಾಡಿದಳು. ಅವಳ ಹತಾಶೆ ತುಂಬಿದ ಮಾತಿನ ರಭಸಕ್ಕೆಂಬಂತೆ ಮೊಮ್ಮಗ ದೇವೇಂದ್ರ ಮತ್ತು ಅಲ್ಲೇ ಓಡಾಡಿಕೊಂಡಿದ್ದ ಬೋಲ್ಡಿ ಬಾಬಾ ಇಬ್ಬರೂ ಪ್ರತ್ಯಕ್ಷರಾದರು.

ಹಿಂಗ್ಯಾಕ ಗಂಟಲಾ ಹರಕೊಂತಿಗ್ಯ ರುಕ್ಮವ್ವಾ, ಅಂಥಾದ್ದೇನಾತು? ಬಾಬಾನ ಧ್ವನಿ ಕೇಳಿದ್ದೇ ಒಂದೇ ಉಸಿರಿಗೆ, ದಂಡ್ಯಾಗ ಯಾವ್ದೋ ಹೆಣಾ ತೇಲೈತ್ಯತಂಪೋ ಬಾಬಣ್ಣ. ನನ ಜೀವಾ ನಿಂದರವಲ್ದು. ಒಮ್ಮೆ ಚಂದ್ರವ್ವನ್ನ ಕರಕೊಂಡ್‌ಹೋಗಿ ನೋಡಿಕ್ಯಾಸಿ ಬರ್ಯಪಾ… ನಿಮಗ ಪುಣ್ಯಾ ಬರ್ತೈತಿ ಎಂದು ಗೋಗರೆದಳು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಬಾಬಾ, ದೇವೇಂದ್ರನಿಗೆ ಸನ್ನೆ ಮಾಡಿದ್ದೇ, ನಡೀ ಯಕ್ಕಾ, ಎನ್ನುತ್ತ ದೊರಿ, ಚಂದ್ರವ್ವಳ ಕೈಹಿಡಿದು ಎಬ್ಬಿಸಿ ಹೆಜ್ಜೆ ಇರಿಸುತ್ತ ನಡೆಸಿಕೊಂಡು ಹೋದ. ಜಲ್ದೀ ಬರ್ಯಪಾ, ಕಾಯಕೊಂತ ಕುಂತಿರತೇನಿ, ಎಂದ ರುಕುಮವ್ವ ಸೆರಗಿನಿಂದ ಗಾಳಿ ಹಾಕಿಕೊಳ್ಳತೊಡಗಿದಳು. ಆತಂಕ ಕಡಿಮೆ ಮಾಡಿಕೊಳ್ಳಲು ಚಂಚಿಯಿಂದ ಒಣಗಿದೆಲೆ, ಮೂಲೆಯಲ್ಲುಳಿದ ಅಡಿಕೆ ಹೋಳು, ಒಣಗಿದ ಸುಣ್ಣ ಗೀರಿ ಬಾಯಿಗೆ ಒಗೆದು, ಚಿಟಿಕೆಯಲ್ಲಿ ತಂಬಾಕು ಹಿಡಿದು ಮುಂದಿನ ಸ್ವಾಟೆಗೆ ಒತ್ತಿಕೊಂಡಳು.

ದಿಕ್ಕಿಲ್ಲದವರು ಅಂತ ಈ ಪರಿ ಜೀಂವಾ ತಿಂತಿಯಲ..? ಇದರಿಂದ ಭಾಳ ದೊಡ್ಡಾಂವ ಆಕ್ಕೀಯೇನು? ನಿನ್ನನ್ನೇನು ನಾವು ಬಿಡಂಗಿಲ್ಲ ತ್ಯಗೀ. ಈ ಸಲಾ ನಮ್ ಕೈಬಿಟ್ಯಂದ್ರ ಈಕಾ ಈ ನನ ಚೊಂಚ ಕೈಲೆ ಜೋಡು ನಮಸ್ಕಾರ ಹಾಕಿ, ಗಾಣಗಾಪುರದ ದತ್ತಪ್ಪಗ ನಡಕೊಣಾಕ ಸುರು ಮಾಡತೇನಿ ನೋಡತಿರು. ಭಾಳ ರೊಳ್ಳಿಗೆ ಏಳಸಬ್ಯಾಡ. ಪಾಪ, ಮಲ್ಲಾಪುರದ ಸೊಸಿ ಆ ಚಂದ್ರವ್ವ ಏನ ಮಾಡ್ಯಾಳ ನಿನಗ..? ತನ್ನ ಜೋಡಿ ಇನ್ನೊಂದು ಕೂಸು ಹೊಟ್ಯಾಗ ಇಡಕೊಂಡ ಹರೇದ ಹುಡುಗಿ. ಕೈ ತೊಳಕೊಂಡು ಬೆನ್ನ ಹತ್ತೀಯಲ… ಅಕೀ ಜೋಡಿ ನಿಂದೇನೋ? . . . ರುಕುಮವ್ವ ಮೌನೇಶ್ವರನೊಂದಿಗೆ ಸಿಟ್ಟು ಮಾಡಿಕೊಂಡು ಜಗಳಕ್ಕೆ ಇಳಿದಿದ್ದಳು.

*****

ಮೂರು ದಿನದ ಹಿಂದೆಯಷ್ಟೇ ಪರಿಚಯವಾದ ಚಂದ್ರವ್ವನ ಮೇಲೆ ರುಕ್ಕವ್ವನಿಗೆ ಇಷ್ಟೊಂದು ಕಕಲಾತಿ ಉಕ್ಕಲು ಕಾರಣ- ಅವಳನ್ನು ಕಂಡಾಗ ನೀಗಿದ ತನ್ನ ಸೊಸೆಯ ನೆನಪು ಮರುಕಳಿಸಿದ್ದು ಮತ್ತು ರುಕ್ಕವ್ವನ ತವರೂರಾದ ಕೆಂಭಾವಿಯ ಕಡೆಯ ನಾಗನೂರು ತನ್ನ ಹುಟ್ಟೂರು ಎಂದು ಚಂದ್ರವ್ವ ಹೇಳಿದ್ದು; ವಿಶೇಷವಾಗಿ ಆಕೆ ಕೂಡ ಇವರಂತೆಯೇ ಸಂಸಾರದ ತಿರುಗಣಿಯ ತಿಪ್ಪಲಿನಲ್ಲಿ ಸಿಕ್ಕು ಒದ್ದಾಡುತ್ತಿರುವುದಾಗಿತ್ತು.

ಈ ಎರಡು ದಿನಗಳಿಂದ ತನ್ನ ಚೊಂಚ ಕೈಬೀಸುತ್ತ, ಹನ್ನೆರಡು ವರ್ಷದ ಮೊಮ್ಮಗನ ಕೈಯನ್ನೇ ಊರುಗೋಲಾಗಿಸಿಕೊಂಡು ತಿಂಥಿಣಿ ಜಾತ್ರೆಯ ಮೂಲೆಮೂಲೆಯಲ್ಲಿಯೂ ಚಂದ್ರವ್ವಳ ಗಂಡ ವೆಂಕಟಪ್ಪನಿಗಾಗಿ ಆಕೆ ಹುಡುಕಿದ್ದಿದೆ. ಭಜಿ ಅಂಗಡಿ, ಮಂಡಾಳು, ಡಾಣಿ-ಕರದಂಟು, ಬೆಂಡುಬತ್ತಾಸಿನ ದುಕಾನು, ನಾಟಕ ಕಂಪನಿಯ ಟೆಂಟು, ನದಿದಂಡೆ ಹೀಗೆ ಒಂದೂ ಜಾಗ ಬಿಡದಂತೆ ಈ ಮೂವರ ಸವಾರಿ ಅಲೆದಲೆದು ಸುಸ್ತಾದದ್ದಿದೆ. ಕಾಲು ಎಳೆದು ಹಾಕುತ್ತಿರುವಾಗ ಸಂಸಾರದ ಸುಖದುಃಖ, ಮನೆತನ, ಆಮದನಿ, ವೆಂಕಟಪ್ಪ ನಾಯಕನ ಎತ್ತರ, ಬಣ್ಣ, ಮನೆಬಿಟ್ಟ ಹಿಂದಿನ ದಿನ ತೊಟ್ಟ ಧೋತರ, ಅಂಗಿಯ ಬಣ್ಣ, ಜೀರಕಿಜೋಡಿನ ಆಕಾರ, ಕಿವಿಗೆ ಹಾಕಿದ ಹಳ್ಳಿನ ಥಳಕು…. ಎಲ್ಲವನ್ನೂ ತಪಶೀಲು ಹಚ್ಚಿ ತೆಗೆದದ್ದಿದೆ. ಚಂದ್ರವ್ವ ಒದಗಿಸುತ್ತಿದ್ದ ವಿವರವನ್ನು ಒಳಗಣ್ಣಿನಿಂದ ಸೋಸಿ, ಮೊಮ್ಮಗ ದೇವೇಂದ್ರನಿಗೆ ಹುಡುಕುವ ವಿಧಾನದ ನಿರ್ದೇಶನ ನೀಡುತ್ತ ದರಪರ ಕಾಲೇಳೆಯುತ್ತ ಸೋತದ್ದಿದೆ. ನೀ ಏನ್ ಚಿಂತಿ ಮಾಡಬ್ಯಾಡ ಚಂದ್ರವ್ವ. ನಾನೂ ಸುರಪುರ ಧೊರಿಗಳ ಹುಲಿಬ್ಯಾಟಿ ಹಳಬ ಪಿಡ್ಡಪ್ಪ ನಾಯಕನ ಹೇಣತಿ ಇದ್ದೀನಿ. ನಿನ ಗಂಡ.. ನನ್ನ ಕೈಯಿಂದ ಹೆಂಗ ಜಾರಿಕೊಳ್ತಾನೋ ನೋಡತೀನಿ, ಎಂದು ಸೋಲಿಗೆ ಉತ್ಸಾಹವನ್ನೂ ತುಂಬಿದ್ದಿದೆ.

*****

ನದಿದಂಡೆಯ ಮರವೊಂದರ ಬುಡದಲ್ಲಿ ಕಂಗಾಲಾಗಿ ಕುಳಿತಿದ್ದ ಚಂದ್ರವ್ವಳನ್ನು ರುಕಮವ್ವ ಮೊದಲ ಸಲ ಭೆಟ್ಟಿಯಾದದ್ದು ಆಕಸ್ಮಿಕವೇನಲ್ಲ. ಹರದಾರಿ, ರಹದಾರಿಗಳಿಂದ ಮೌನೇಶ್ವರನ ಜಾತ್ರೆಗೆಂದು ಸಾವಿರ ಸಾವಿರ ಸಂಖ್ಯೆಯಲ್ಲಿ ಮಂದಿ ದಿನವೂ ಬಂದೇ ಬರುತ್ತಾರೆ. ಮಾಘದ ಹುಣ್ಣಿಮೆಗೆ ತೇರು ಮುಗಿದರೂ ತಿಂಗಳೊಪ್ಪತ್ತಿನ ತನಕವೂ ಜಾತ್ರೆಯ ವಾತಾವರಣವಿದ್ದೇ ಇರುತ್ತದೆ. ಮಂದಿ ಎದುರು ಸಿಕ್ಕಾಗ ನಗುವುದು, ಎಲ್ಲಿಂದ ಬಂದ್ರಿ, ಹೆಂಗ ಬಂದ್ರಿ, ಏಟ ದಿನಾ ಇರತೀರಿ, ಹೂವು-ಕಾಯಿ ಮಾಡಿಸಿದ್ರೋ ಇಲ್ಲೋ, ಇಂತಹ ಕುಶಲದ ಮಾತುಗಳನ್ನು ವಿನಿಮಯ ಮಾಡಿಕೊಳ್ಳುವುದು ರೂಢಿಯೇ. ಒಮ್ಮೆ ಸಿಕ್ಕವರು ಇನ್ನೊಮ್ಮೆ ಸಿಗುತ್ತಾರೆ ಎನ್ನುವುದು ಮಾತ್ರ ಜಾತ್ರೆಯಲ್ಲಿ ಖಾತರಿ ಇರುವುದಿಲ್ಲ. ಕಾರ್ಯಕಾರಣ ಸಂಬಂಧವೇ ಇಲ್ಲದೆ ಸಾವಿರಾರು ಜನರನ್ನು ಕಣ್ಣಲ್ಲಿ ತುಂಬಿಕೊಂಡು ಜೀವನದಲ್ಲಿ ಮತ್ತೆಂದೂ ಅವರನ್ನು ಭೇಟಿಯಾಗದಿರುವ ವಿಚಿತ್ರ ನಡೆಯುವುದು ಇಂಥಲ್ಲಿ ಮಾತ್ರ. ದೈವದ ಕೃಪೆ ಜರಾ ಜಾಸ್ತಿಯೇ ಇದ್ದಾಗ ಮಾತು ಪರಿಚಯಕ್ಕೆ ತಿರುಗಿ, ಅಂತಃಕರಣದ ಸೆಲೆ ಚಿಮ್ಮಿ ಕರಳುಗಳು ಒಂದಕ್ಕೊಂದು ಸಂಗಮಗೊಂಡು ಪವಿತ್ರವಾಗುತ್ತವೆ.

ಜಾತ್ರೆಯ ಧಾವಂತದ ಮನಸ್ಥಿತಿಯಲ್ಲಿ ರುಕಮವ್ವ ಮೊಮ್ಮಗನೊಂದಿಗೆ ಉಶ್‌ಉಶ್ ಎನ್ನುತ್ತ ದುಡುಮ್ಮನೆ ಮರದ ನೆರಳಿಗೆ ಕುಳಿತಾಗ ಚಂದ್ರವ್ವಳ ಮೈ ತಾಕಿತ್ತು. ಅಯ್ಯ, ಕುರುಡಿ ಕಣ್ಣಿಗಿಷ್ಟು ಬೆಳಕು ಹಾಕ. ಪೆಟ್ಟಾತೇನವಾ ತಂಗಿ? ಎಂದು ಕೇಳಿದಾಗ, ಇಲ್ಲ, ಅವ್ವಾ ಹಂಗೇನಿಲ್ಲ, ಎಂದ ಧ್ವನಿಯಲ್ಲಿ ಅಸಾಧ್ಯ ನೋವು, ಆಕರ್ಷಣೆಗಳನ್ನು ಏಕಕಾಲದಲ್ಲಿ ಮೂಸಿದ ರುಕುಮವ್ವ ಚಂದ್ರವ್ವನ ಮುಖ ಸವರಿದಳು, ಮೂಗಿನ ಗುಂಟ ಬಂದು ಅದರ ಉದ್ದಗಲ, ಮೂಗುಬೊಟ್ಟಿನ ಹರಳಿನ ಹೊಳಪು, ಮುಟ್ಟಿ ನೋಡಿದಳು. ಹಣೆ, ಕಿವಿಗಳಿಗೆ ಕೈಯಾಡಿಸಿ ಕಿವಿಯ ಅಗಲ ಬೆಂಡೋಲೆ, ಮೇಲೆ ಬುಗುಡಿ, ಕೆಳಗೆ ಬಂಡಿಗಾಲಿಯಾಕಾರದ ಮೂರು ಸಣ್ಣ ಛತ್ತರಗಿಗಳು, ಕೈ ಬಳೆಗಳು, ಉಟ್ಟ ಸೀರೆಯ ಮೆತ್ತನೆಯ ಸ್ಪರ್ಶದಿಂದಲೇ ರಂಗಂಪೇಟೆಯ ಟೋಪ ಸೆರಗಿನ ಸೀರೆಯೇ ಇರಬೇಕೆಂದು ಅಜಮಾಯಿಸಿ, ಯಾವುದೋ ಛಲೋ ಮಂತನದ ಹುಡುಗಿ ಅಂದುಕೊಂಡು, ಯಾರ ಮನಿಯವ್ಳವಾ ತಂಗಿ? ಎಂದು ಕುತೂಹಲ ತೋರಿದಳು. ಉತ್ತರ ಹೇಳುವ ಬದಲು ಚಂದ್ರವ್ವ ಅಳತೊಡಗಿದಾಗ ಅಯ್ಯ, ಕೂಸ, ಎಂದು ಎದೆಗವಚಿಕೊಂಡು ಸಮಾಧಾನ ಮಾಡಿದ ರುಕುಮವ್ವ, ಚಂದ್ರವ್ವನ ಕಥೆಗೆ ಕರಗಿ ಆಮೇಲೆ ಆಕೆಯನ್ನು ಒಂಟಿಯಾಗಿ ಬಿಡದೇ ತಮ್ಮ ಜೊತೆಗೆ ಎಳೆದೊಯ್ದಳು.

*****

ಹೋದ ಅರ್ಧ ತಾಸಿಗೆ ಮೊಮ್ಮಗ ದೇವೇಂದ್ರ ತೇಕುತ್ತ ಓಡಿಬರುವ ಸಪ್ಪಳ ಕೇಳಿ, ರುಕುಮವ್ವ, ಮೋನಪ್ಪಾ, ಮೋನಪ್ಪಾ ಎಂದು ಜಪಿಸಿದಳು. ಬೇ, ಆಯೀ, ಅಲ್ಲಿ ಮಂದಿ ಕಂಡಾಪಟಿ ಹಾರಬೇ. ಒಬ್ರಿಗೊಬ್ರು ಕಾಲು ತುಳಕೊಂತ… ಎಂದು ಹೇಳುವಷ್ಟರಲ್ಲಿ ಸಹನೆ ಒಡೆದು, ಸುದ್ದಿ ಏನಂತ ಹೇಳೋ, ಹಕನಾಕಿ ಎಂದು ಗದರಿದಳು. ಅದು ಚಂದ್ರಕ್ಕನ ಗಂಡನ ಹೆಣಾ ಅಲ್ಲಂತ. ನೋಡಿದ್ರ ಈ ಕಡೆ ಮಂದಿ ಹಾಂಗ ಕಾಣಂಗಿಲ್ಲಂತ. ಅದನ್ನೇ ಹೇಳಾಕಂತ ಓಡಿಕೊಂತ ಬಂದ್ರ ನನಗಾ ಬೈತೀಯಲ್ಲ…? ಎಂದು ದೇವೇಂದ್ರನೂ ಜೋರು ಮಾಡುತ್ತಲೇ, ಸಿಹಿಸುದ್ದಿಯಿಂದ ನಿರಾಳವಾದವಳಂತೆ, ಇರ್ಲಿ, ಬಾರೋ. ಈಕಾ ಹೋಗಿ ಭಜೀ ತಿನ್ನು ಎಂದು, ರೂಪಾಯಿಯ ಸಿಕ್ಕೆಯೊಂದನ್ನು ನೀಡಿದಳು. ಮರುಕ್ಷಣವೇ ದೇವೇಂದ್ರನ ಮುನಿಸು ಕರಗಿ, ಐದು ಮಿನಿಟನಾಗ ಬರತೀನಿ, ಮತ್ತ ಒದರಕೊಂತ ಕುಂಡರಬ್ಯಾಡ ನೋಡು ಮತ್ತ.. ಎಂದು ಓಡಿದ.

*

ಭಾಳ ಸಿಹಿಸುದ್ದಿಯೇನೂ ಅಲ್ಲ. ಆದರೂ, ಕಹಿಯಂತೂ ಅಲ್ಲಲ. ತೇರಿಗೆ ಹೂವುಹಣ್ಣು ಹಾಕವರಿದ್ರ ಇವತ್ತೇ ತಗೊಂಡು ತಯಾರಾಗ್ರಿ. ನಾಳೆ ಶಿಗತಾವೋ ಇಲ್ಲೋ. ಭಯಂಕರ ತುಟ್ಟಿನು ಇರತಾವು. ಬಿಸಿಲು ಏರಾಕ ಹೊಂಟೈತಿ. ಜರಾ ಚಹಾ ಕುಡೀತಿರೇನು ನೋಡ್ರಿ, ಹೇಳುತ್ತ ತಾನೂ ಹಗುರಾದಂತೆ ಬೋಲ್ಡಿ ಬಾಬಾ ಕೊಳವೆಗೆ ತಂಬಾಕು ತುಂಬಿ ಕಿಡಿ ಹಚ್ಚಿದ. ರುಕುಮವ್ವ, ಚಂದ್ರವ್ವಳನ್ನು ಕೈಯಿಂದ ಎಳೆದುಕೊಳ್ಳುತ್ತ ಬೆನ್ನು ಸವರಿ, ಸಮಾಧಾನ ಆತಿಲ್ಲವಾ. ಸುಮ್ಮ ಜೀಂವಾ ಕಹಿ ಮಾಡ್ಕೊಂಡಕ್ಯಸಿ ಕುಂತಿದ್ದಿ, ಅಂದಳು.

ಇಬ್ಬರಿಗೂ ಕುಳಿತಲ್ಲೇ ಚಹಾ ತಂದುಕೊಟ್ಟ ಬಾಬಾ ತನ್ನಷ್ಟಕ್ಕೇ ಅನ್ನುವಂತೆ ಹೇಳಿಕೊಂಡ: ಜಗತ್ತು ಬ್ಯಾಸರಾಗಿ, ವಿರಕ್ತಿ ಬಂದು ಸನ್ಯಾಸಿ ಆಕ್ಕಾರ ಅಂತ ಮಂದಿ ತಿಳದಿರತಾರ. ಹಾಂಗ ಅಲ್ಲೇ ಅಲ್ಲದು. ನಾವು ಯಾರನ್ನ ಹಚಗೊಮ್ತೀವಿ ಅವರಿಗೆ ತಾವ್ಯಾಕ ಹಾಂಗ ಇದ್ದೀವಿ ಅನ್ನೂದೇ ತಿಳಿಯೂದಿಲ್ಲ. ಹುಚಪ್ಯಾಲಿಗಳಂಗ ತಮದ್ ತಮಗ ಅಂತ ಬೇಫಿಕೀರ ಇರ್ತಾವು, ಸುಡ್ಲಿ. ಅವರ ಮ್ಯಾಲಿಟ್ಟ ಅಭಿಮಾನಕ್ಕ ಅವರಿಗೆ ಏನೂ ಆಗಬಾರದಂಥಾ ಶಕ್ತಿ ಪಡಕೋಳಾಕ ನಮ್ಮಂಥ ಸಾಧುಸಂತರು ಬೇಕಾಗತಾರು. ಎಲ್ಲಾದಕ್ಕೂ ಕಾಯಬೇಕಾಗತೈತಿ. ಆದ್ರ ಕಾಯಕೊಂತ ಕುಂಡ್ರೂದ ಕಾಯದ ಕಾಯಕ ಅನ್ನೂದು ಭಾಳ ಮಂದಿ ತಲೀ ಒಳಗ ಹೋಗಂಗಿಲ್ಲ. ಬೀಸೂ ಗಾಳಿ ಒಳಗ ಹೂವಿನ ವಾಸನಿ; ಸಾವಿನ ವಾಸನಿ ಎರಡೂ ಇರತಾವು. ಉಸುರು ಎಳಕೊಂಡ್ರ ಹೂವಿನ ವಾಸನಿ, ನಿಂದ್ರಸಿದರ ಸಾವಿನ ವಾಸನಿ ಅಂತ ತಿಳಕೊಳ್ಳುವಷ್ಟು ವಿಚಾರ ಇಲ್ಲದ ಬುದ್ಧಿಗೇಡಿ ಜಗತ್ತಿದು. . .

ಅಯ್ಯ ನಿನ…. ಏನ ಅಂತೀಯ ಬಿಡೋ ಬಾಬಣ್ಣ. ಜರಾ ತಿಳೀಯೂ ಹಾಂಗ ಹೇಳಬಾರದ…? ಎಂದು ನಗುತ್ತ ರುಕುಮವ್ವ ಹೇಳಿದಾಗ- ನಾ ನಿನಗೆಲ್ಲಿ ಹೇಳಾಕ ಬಂದೀನಿ. ಗುರುವಿನ ಜೋಡಿ ಮಾತ ನಡೆಸೀನಿ ಎಂದು ಬೋಲ್ಡಿ ಬಾಬಾ ಭಂಗಿ ಎಳೆಯುವುದರಲ್ಲಿ ನಿರತನಾದ. ಆತ ಬಿಡು. ಮಂದಿ ಗದ್ದಲ ಭಾಳ ಆದಂಘ ಕಾಣತೈತಿ. ನಾಳೆ ಒಂದೀಟು ಎಲ್ಲಿ ಗರ್ದಿ ಕಡಿಮೈತಿ ಅಂಥಲ್ಲಿ ನಮ್ಮನ್ನ ನಿಂದ್ರಸು. ಅಲ್ಲಿಂದನ ಮೋನಪ್ಪಗ ಹೂವಣ್ಣು ಒಗದು ಕೈ ಮುಗಿತೀವಿ. ಮೋನಪ್ಪ ನಮ್ ದೇವೇಂದ್ರ ದೊರಿ ಬದುಕು ದಡಕ್ಕ ಹಚ್ಚಿದನಂದ್ರ ಈ ಮುದುಕಿ ಚಿಂತಿ ಕರಗಿದಾಂಘ. ಏಳವಾ ಚಂದ್ರವ್ವ ಎಂದು ಹುಶ್ಯಹುಶ್ಯ ಎಂದು ಸೀರೆ ಜಾಡಿಸಿಕೊಳ್ಳುತ್ತ ರುಕುಮವ್ವ ಎದ್ದು ನಿಂತಳು.

ಮೇಲೆ ಸಮಾಧಾನ ಹೇಳಿದರೂ ಒಳಗೇ ಅವಳ ಜೀವಕ್ಕೂ ನದಿಯ ನೀರು ಹರಿದಂತಾಗಿ ಎದೆಯೆಲ್ಲ ಥಣ್ಣಗಾಯಿತು. ಧಾವಂತ ಕಡಿಮೆ ಮಾಡಿಕೊಳ್ಳಲು ಲೇ, ಹಲ್ಕಟ್ ದೊರಿ, ಎಲ್ಲಿ ಹೋಗಿ ಕುಂತ್ಯಲೇ? ಬೇಕಾದಾಗ ಒಂದು ವಾಟಗಾ ನೀರು ಸೈತ ಕೊಡೋ ಮನೆತನ ಅಲ್ಲ ತ್ಯಗೀ ನಿಮದು, ಎಂದು ಒದರ್ಯಾಡಿದಳು. ಅವಳ ಹತಾಶೆ ತುಂಬಿದ ಮಾತಿನ ರಭಸಕ್ಕೆಂಬಂತೆ ಮೊಮ್ಮಗ ದೇವೇಂದ್ರ ಮತ್ತು ಅಲ್ಲೇ ಓಡಾಡಿಕೊಂಡಿದ್ದ ಬೋಲ್ಡಿ ಬಾಬಾ ಇಬ್ಬರೂ ಪ್ರತ್ಯಕ್ಷರಾದರು.

ಮುಕ್ತಿಯ ಮಾರ್ಗವೆಂದರೆ ನಾಥಪಂಥದ ಸಾಧುಗಳ ಸಂಗ ಅರಸುತ್ತ ದೇಶ ಸುತ್ತುವುದು ಮತ್ತು ಅಂಥ ಗುರುವಿಗೇ ಗುರುವಾದ ಮೌನೇಶ್ವರ ದರ್ಶನವನ್ನು ವರ್ಷಕೊಮ್ಮೆ ಪಡೆಯವುದು ತನ್ನ ಬದುಕು ಎಂದುಕೊಂಡಿದ್ದ ಸನ್ಯಾಸಿಯಾದ ತಾನು ಎರಡು ದಿನಗಳಿಂದ ಈ ಇಬ್ಬರು ಹೆಂಗಸರಿಂದ ಮಡುವಿನಲ್ಲಿ ಬಿದ್ದು ಈಸುತ್ತಿದ್ದೇನೆಯೇ? ಎಂಬ ಅನುಮಾನ ಬೋಲ್ಡಿ ಬಾಬಾನಿಗೆ ಬಂತು. ನಿಸ್ತೇಜಗೊಂಡ ಗರ್ಭಿಣಿ ಹೆಂಗಸನ್ನು ಮಗ್ಗುಲಲ್ಲಿ ಕೂರಿಸಿಕೊಂಡು ಧಾವಂತ ಪಡುತ್ತಿದ್ದ ಕುರುಡಿ ಮುದುಕಿಗೆ ಖಾನಾವಳಿಯಿಂದ ರೊಟ್ಟಿ-ಉಳ್ಳಾಗಡ್ಡಿ, ಕಾರಾ-ಬಳ್ಳೊಳ್ಳಿ, ನೀರು-ಚಹಾ ತಂದುಕೊಟ್ಟದ್ದೊಂದು ನೆಪವಾಯಿತಷ್ಟೇ. ಅಲ್ಲಿಗೆ ಮರೆತು ಹೋಗುವುದಾಗಲಿಲ್ಲ. ಎಲ್ಲಿ ಹೋದರು, ಏನಾದರು ಅಂತ ಹುಡುಕಿ ನೋಡಬಾರದೇನಪಾ ಬಾಳಾ? ಸಾಧು ಅಂದರ ಹಣ್ಣಿನ ಗಿಡದ್ಹಾಂಗ. ಅಂವಾ ಬ್ಯಾರೆ ಅವರಿಗಾಗಿ ತನ್ನ ಮೈ ಸವಸಬೇಕು, ಎಂದು ಮೋನಪ್ಪನೇ ಅಶರೀರವಾಣಿಯಲ್ಲಿ ಹೇಳಿದಂತಾಗಿ ಇವರನ್ನು ಹುಡುಕಿ ಹಿಂದೆ ಬೀಳುವಂತೆ ಮಾಡಿತ್ತು. ಗುರು ಹೇಳಿದ್ದು ಪಾಲಿಸುವುದು ಭಕ್ತರ ಕೆಲಸ. ಅವನ ಮನಸ್ಸಿನಲ್ಲೇನಿದೆಯೋ ಎಂದು ಯೋಚಿಸಬಾರದು ಎಂದುಕೊಂಡು ಇವರ ನಿಗರಾಣಿಗೆ ಬಾಬಾ ಬಿದ್ದಿದ್ದ.

ಒಳ್ಳೇ ಭೇಷಾತಪಾ ಬಾಬಣ್ಣ. ನಾನೋ ಕುಡ್ಡಿ; ಮೊಮ್ಮಗ ಮಡ್ಡಿ. ನಮ್ಮಿಬ್ಬರ ನಡಬರಕ ಈ ದೊಡ್ಡ ಮಂತನದ ಹುಡುಗಿ ಸಿಕ್ಕಿಬಿದ್ಳಲ? ಅಂತ ಕಾಳಜಿ ಮಾಡಿಕೊಂಡಿದ್ದೆ, ನೀನು ಬಂದು ದಾರಿ ತೋರಿದಿ ಎಂದು ರುಕುಮವ್ವ ಕೃತಜ್ಞತೆ ಹೇಳಿದಾಗಲೂ ಮುಗುಂ ಆಗಿಯೇ ಇದ್ದ ಬಾಬಾ- ಹೆಂಗಸರ ಸೆರಗಿನ ಗಾಳಿ ಬೀಳಬಾರದಂತನೇ ದೇಶಾಂತರ ಹೊಂಟಾವ ನಾನು, ಎಂದಿದ್ದ. ಯಾಕೋ ಯಪ್ಪಾ. ಅಂಥಾದ್ದೇನ ಮಾಡೀವಿ ನಮ ಜಾತಿಯವ್ರು? ಕೇಳಿದ್ದಳು ರುಕುಮವ್ವ.

ಆಶಾದ ಮಡುವಿನಾಗ ಬಿದ್ದ ಎಲ್ಲ ಬುದ್ಧಿಗೇಡಿ ಮನಷಾರು ಮಾಡೂ ಅಂಥಾದ್ದೇ. ಲಗ್ನ ಆದ ಗಂಡ ಕೊಡೋ ಸುಖಾ ಸಾಕಾಗಲಿಲ್ಲ ಅಂತ ಸೀರಿ ಜಾಡಿಸಿಕೊಂಡು ಯಾರ ಕೂಡನೋ ಹೇಣ್ತಿ ಎದ್ದು ಹೋದ್ಳು. ಹೇಣತಿ ಹುಚ್ಚಿನಾಗ ಇನ್ನಾ ಹತ್ತಸೈತ ತುಂಬದ ಮಗನ ನಿಗಾ ವಹಿಸೂದ ಬಿಟ್ಟೆ. ಮೈಗೆ ತೊಗಲಿನ ಕಾವು ಹತ್ತಿದವನಿಗೆ ಅದರ ಬೆಂಕಿ ಒಳಗ ಸಾಯೂದು ಭಾಳ… ಛಂದ ಅನಸ್ತೈತಿ. ಅಪ್ಪ ಇಂಥಾ ಗೊಂಡಾರಣ್ಯದಾಗ ಕಳದ ಹೋಗಿದ್ದು ಸಣ್ಣ ಹುಡುಗ್ಗ ಹೆಂಗ ತಿಳೀಬೇಕು? ಅಂವಾ ಗೆಳ್ಯಾರ ಕೂಡ ಆಡಕೊಂತ ಹೋಗಿ ಭಾಂವ್ಯಾಗ ಬಿದ್ದು ನೀಗಿಹೋದ. ತನ್ನ ಮಗನ ಸಂಸಾರ ಹಳ್ಳಾ ಹಿಡೀತು ಅಂತ ಅವ್ವ ತಲಿ ಕೆಟ್ಟು ಹುಚ್ಚಿ ಆದಳು. ತೊಗಲಿನ ಸಮ್ಮಂಧೆಲ್ಲಾ ಮುಗದ ಹೋದ ಮ್ಯಾಗ ಸಂಸಾರ ಯಾಕ.. ಬೇಕಾಗತದ? ಅಂದಿನಿಂದ ಎಲ್ಲಾ ಕಡಕೊಂಡು ಓಡ್ಯಾಡಕ ಹತೇನಿ. ಈಗ ಉಳದಿರುದು ಶಿವನ ಪಾದಾ, ಆಟ… ಮತ್ತ, ಎಂದು ಸಾಮಾನ್ಯವಾಗಿ ಯಾರೊಂದಿಗೂ ಹೇಳಿಕೊಳ್ಳಲಾರದ ಸತ್ಯವನ್ನು ಈ ಹೆಂಗಸರ ಎದುರು ಸರಳವಾಗಿ ಹೇಳಿದ್ದ ಬಾಬಾ ಮನಸ್ಸು ಉದ್ವಿಗ್ನವಾಗಬಾರದೆಂದು ಕೊಳವಿಗೆ ತುಂಬಲು ಅಂಗೈಯಲ್ಲಿ ಭಂಗಿ ತೊಪ್ಪಲು ಹಾಕಿ ತಿಕ್ಕತೊಡಗಿದ್ದ.

ಬಲು ಪಾಡಾತೇಳಪ… ಗಣಮಗಾ ಇದ್ದೀ, ಅದಕ್ಕಂತನೇ ಹಿಡಕೊಳ್ಳಲಾರದ ಯಾವ ಹಗ್ಗಾ ಇರದಿದ್ರೂ ಕಡಕೊಂಡು ಹೊಂಟಿ… ದೇಶ ಸುತ್ತಿ, ನನಗ ಯಾವ ಪರಲೂ ಇಲ್ಲಂತ ಹೇಳಕೊಂತೀಗಿ. ನಮ್ಮಂಥ ನರಮಾನವರ ಹೈರಾಣಾದ್ರ ಯಾವ ಅಡವಿಗಿ ಹೋಗಬೇಕು, ಹೇಳ ಮತ್ತ್? ಬರೀ ನಿಂದೇ ಆದ್ರ ಹ್ಯಾಂಗ…? ನಮ್ ಕಥೀನೂ ಕೇಳು ಜರಾ.

ಒಂದ್ ದಿನಾನೂ ನಿಸೂರಾಗಿ ಕುಂತು ಬಾನಾ ಉಂಡಿದ್ದು ನೆಪ್ಪಿಲ್ಲ ನಂಗ. ಸುರಪುರದ ದೊರಿಗಳ ಮನಿಗೆ ಸೀರಿ ನೇಯ್ದು ಕೊಡತಿದ್ದ ರಂಗಂಪ್ಯಾಟಿ ಮನತನ ನಮದು. ವಂಶಕ್ಕ ತಕ್ಕ ಚ್ಯಾಷ್ಟಿ ಅಂತ ಗಂಡ ನೇಕಾರಿಕಿ ಬಿಟ್ಟು ದೊರಿಗಳ ತೊಡ್ಡಿಗೆ ತೂತು ಹುಡುಕ್ಕೊಂತ, ಬ್ಯಾಟಿ ಹೊಂಚಕೊಂತ ತಿರಗತಿದ್ದ. ದೊರಿಗಳ ಸಮ್ಮಂಧನ ಯಾರದೋ ಖೂನಿ ಮಾಡಿ ಜೇಲು ಸೇರಿದ. ಜೇಲಿನಾಗೆ ಕಾಮಣಿ ಬಂದು ಸತ್ತೂ ಹೋದ. ಈಕಾ, ಈ ದೇವೇಂದ್ರನ ಅಪ್ಪ, ಅದೇ ನನ್ನ ಒಡ ಹುಟ್ಟಿದ ಮಗಾ ಅಮರಪ್ಪನ್ನ ದೊಡ್ಡವನ್ನ ಮಾಡಿ, ಅವನ ಬದುಕು ದಡಕ್ಕ ಹಚ್ಚಲಿಕ್ಕೆ ಮೂಗಿನ ತುದಿ ನೆಲದ ಮಣ್ಣಿಗೆ ಮುಟ್ಟಿಸಿದ್ದೆ ನಾನು. ಮಂದಿ ತೂರಿದ ಕಲ್ಲು ಪ್ರಸಾದ, ತೂರಿದ ಮಣ್ಣು ಈಬತ್ತಿ ಅಂತ ತಿಳಕೊಂಡಕ್ಯಾಸಿ ಉಡ್ಯಾಗ ಕಟಗೊಂಡಿದ್ನಿ. ಆದ್ರೂ ಎಲ್ಲ ಛಲೋ ಆತ್ಯೇನು? ಇಲ್ಲ.

ಏನೋ ನಂದೂ ಒಂದು ಬಾಳೇ ನಡದೈತಿ ಅನ್ನೂದರಾಗ, ಬಳಗದವರ ಲಗ್ನಕ್ಕ ಅಂತ ಹೋಗಿ ಬೀಗರ ಊಟಾ ಮಾಡಿಬಂದು ಮಲಕ್ಕೊಂಡ ಮಗಾ-ಸೊಸಿ ಎದ್ದದ್ದು ಹೆಣಾ ಆಗಿ, ಸುಡಗಾಡದಾಗ. ಆ ಲಗ್ನದ ಔತಣಕ್ಕ ಅಂತ ಹೋಗಿದ್ದ ಮಂದಿವಳಗ ಹತ್ತು ಮಂದಿ ಸುಡಗಾಡ ಕಂಡ್ರು. ಏಸೋ ಮಂದಿ ದವಾಖಾನಿ ಸೇರಕೊಂಡ್ರು. ಮಗಾ-ಸೊಸಿಯ ಸಾವಿನ ಮೈಲಿಗಿ ಕಳಕೊಳ್ಳಾಕ ನೇಮಾ ಮಾಡಬೇಕಂದ್ರ ಈ ಕುಡ್ಡ ಮುದುಕಿ ಹತ್ತೇಕ ಕವಡಿನೂ ಇಲ್ಲ. ಬಾಳುವೆ ಕೊಡೋ ತ್ರಾಸು ತಡಕೊಳ್ಳಲಿಕ್ಕೆ ಆಗದೇ ಈಗಾ, ಈ ಕೈ ಸೆಟದು ಹೋದವು. ಹತ್ತ್ ದಿನಾ ಹೊರಸಿಗೆ ಸೆಟಗೊಂಡು ಬಿದ್ದಿದ್ದೆ. ಕಡೀಗೆ ವಂಶ ಬೆಳಗಸಾಕ ಇರೋ ಈ ಮೊಮ್ಮಗ ದೇವಪ್ಪನ್ನ ಸುರಪುರದ ಮಾರವಾಡಿ ಮನೀಗೆ ಐನೂರು ರೂಪಾಯಿಗೆ ಒತ್ತಿ ಹಾಕಿ ಮಗನ ನೇಮಾ ಮಾಡಿದೆ. ಊರಾಗ ಮಂತನದ ಮಾನಕ್ಕ ಅಭಿಮಾನದಿಂದ ಕಾಳು-ಕಡಿ ಕೊಟ್ರ ನನ್ನ ಹೊಟ್ಟಿಗಿ ಸಜ್ಜಿ ರೊಟ್ಟಿ, ಇಲ್ಲಂದ್ರ ನೀರು. ತಿಳೀತ…?

ಈಗ ಮೋನಪ್ಪನ ಹಂತ್ಯೇಕ ಬಂದಿರೂದು ಸೈತ ಬಡೂರ ಬಾಯಿಗೆ ಮಣ್ಣ ಹಾಕೂದ ನಿನ ಕೆಲಸೇನು ಅಂತ ಕೇಳಾಕ. ಹರೇದಾಗ ಗಂಡನ್ನ ಕರಕೊಂಡ. ವಯಸ್ಸಾದಾಗ ಮಗನ್ನ ಎಳಕೊಂಡ. ಈಗ ಮೊಮ್ಮಗನ್ನ ನುಂಗಬೇಕು ಅಂತ ಮಸಲತ್ತ್ ನಡಿಶ್ಯಾನು. ನಾನೂ ಬಿಡೂ ಹೆಂಗಸಲ್ಲ, ತಿಳೀತ…? ಎಂದು ಅರೆಚಣ ಮೌನವಾದಳು. ಹುಟ್ಟುತ್ತಿದ್ದ ಆತಂಕವನ್ನು ಯಲಡಿಕೆ ಹಾಕಿಕೊಂಡು ನಿವಾರಿಸಿಕೊಂಡಳು.

ಹೇಳೂದಿನ್ನಾ ಮುಗಿದಿಲ್ಲಪಾ ಬಾಬಣ್ಣ. ಬಂದ ಸುಖಾದುಃಖಾನೇ ನಿವಾಳಿಸಿ ಒಗದು ಬದುಕೀನಂತ, ಇನ್ನ ಅದನ್ನ ಹೇಳಾಕ ಯಾವ ಭಿಡೆನೂ ಇಲ್ಲ ನನಗ, ಎಂದು ಮತ್ತೆ ಸಿದ್ಧವಾದಳು. ನಮ್ ದೇವೇಂದ್ರನ್ನ ಒತ್ತಿ ಹಾಕಿದ ಆ ಕೆಂಪುಮೂತಿ ಮಾರ್ವಾಡಿಗಳ ಅದಾವಲ್ಲ ಸುಡ್ಲಿ… ಅರಮನಿ ಜೋಡಿ ಒಕ್ಕಲಿದ್ದ ಮನತನದಾಗ ಹುಟ್ಟಿದ ದೇವೇಂದ್ರನಂಥವಗ ಹೊಟ್ಟಿಗಿ ಸೈತ ಬರಾಬ್ಬರಿ ಹಾಕಂಗಿಲ್ಲಂತ. ಕಸಾಮುಸರಿ ಮಾಡಸತಾರಂತ. ಇವೆಲ್ಲಾ ಹೊಟ್ಯಾಗ ಹಾಕ್ಕೊಂಡು ಸೈರಣಾ ಮಾಡಿಕೊಂಡಿದ್ದೆ. ಆದ್ರ, ಆದ್ರ…. ಎಂದು ಹಲ್ಲು ಕಡಿದು ಹೇಳಿದಳು: ಅವರ ಮನಿ ಕೂಸಿನ ಬೆಳ್ಳಿ ಕಾಲ ಕಡಗ ತುಡುಗ ಮ್ಯಾಡ್ಯಾನ ಅಂತ ಅಪವಾದ ಹೊರಸ್ಯಾವ ಖೋಡಿಗಳು. ಪೋಲೀಸರ ಹತ್ರನೂ ಹೊಕ್ಕೀವಿ ಅಂತಿದ್ರು. ಮಂದಿಮನಿ ಭಂಗಾರ ಅಂದ್ರ ನಮ್ಮನಿ ಎಮ್ಮಿ ಶ್ಯಗಣಿ ಅಂತ ತಿಳಕೊಂಡ ಕುಲದವ್ರು ನಾವು. ಅವರ ಮನಿ ಕಡಗಾ ಕದ್ದು ಜಾಗೀರ್ ಮಾಡ್ಕೊಂಡಿವ್ಯ ಹೆಂಗ…? ಅದಕ್ಕ, ನಿಮ್ಮ ಒತ್ತಿ ರೊಕ್ಕಾ ಎರಡು ತಿಂಗಳದಾಗ ಕುಡತೇನಿ ಅಂತ ದೊಡ್ಡವರ ಮುಂದ ವಾಯಿದಾ ಹಾಕಿಸಿ ಮೊಮ್ಮಗನ್ನ ಕರಕೊಂಡ್ ಬಂದೀನಿ, ತಿಳೀತ..? ಈ ಮೋನಪ್ಪ ಖರೇನೆ ಜಾಗ್ರತ ಮುನಿಯಿದ್ರ ಜಾತ್ರಿ ಮುಗಿಯೂದರಾಗ ಪಾಂಚ್‌ಸೇ ರೂಪಾಯಿ ನನಗ ಕುಡತಾನ. ಮೊಮ್ಮಗನ ದಸಿಂದ ಜಾತ್ರಿ ಮುಗಿಯೂತನಾ ಇಲ್ಲೇ ಇರತೇನಿ. ಭಿಕ್ಷಾ ಬೇಡತೀನಿ, ಭಿಕ್ಷಾ… ಕೊನೆಯ ಮಾತು ಮುಗಿಸುವಾಗ ರುಕುಮವ್ವನ ಧ್ವನಿ ಹೂತು ಹೋಯಿತು. ಬೆಳಕಿರದ ಕಣ್ಣಿನಲಿ ನೀರು ಹರಿದವು.

ಆಯಿಯ ದುಃಖದ ಕಥೆಗೆ ಮೈಪೂರ ಬೆವೆತಿದ್ದ ಚಂದ್ರವ್ವ ಅವಳ ತೊಡೆಯನ್ನು ಅಲುಗಾಡಿಸುತ್ತ, ಆಯಿ, ನೀ ರೊಕ್ಕದ ಚಿಂತಿ ಯಾಕ ಮಾಡ್ತಿ..? ಮೋನಪ್ಪನ ದಯದಿಂದ ನಿನ್ನ ಮೊಮ್ಮಗನ್ನ ಮತ್ತ್ ಮನಿಗೆ ಕರಕೊಂಡು ಹೋಗತಿ ಬಿಡು, ಎಂದು ಸಮಾಧಾನ ಮಾಡಿದಳು.

ನನ್ನ ಹತ್ತೇಕ ಶಂಬರ್ ರೂಪಾಯಿ ಅದಾವ. ನಾನು ಒಟ್ಟ್ ದೋನಶೇ ಹೊಂದಿಸಿ ಕೊಡತೀನಿ. ಉಳದದ್ದು ಹೆಂಗರೆ ಜೋಡಸೂಣಂತ ಎಂದು ಬಾಬಾ ಹೇಳಿದಾಗ- ರೊಕ್ಕ ಎಲ್ಯರೆ ಸಿಕ್ಕಾವೋ ಬಾಬಣ್ಣ. ನಮ್ ಮಂತನದ ಮಗಾ ಸಿಗತಾನೇನು? ಮಾಡಿದ ಅಪವಾದ ರೊಕ್ಕಾ ಕೊಟ್ಟಮ್ಯಾಲೂ ಉಳಿಯೂದಿಲ್ಲೇನು? ಎಂದು ತೀವ್ರ ದುಃಖಿತಳಾದಳು. ಮಾತಿಗಿದು ಸಮಯವಲ್ಲವೆಂದು ಅರಿತ ಬಾಬಾ ಮೆತ್ತಗೆ ಎದ್ದು ಹೋಗಿ, ಮಣ್ಣಿನ ಕುಡಿಕೆಯಲ್ಲಿ ಚಹಾ ತಂದುಕೊಟ್ಟು, ಗಂಟಲಾ ಆರಿರಬೇಕು. ಕುಡದಕ್ಯಾಸಿ ಹೀಂಗ ಮಾತಾಡಕೊಂತ ಕುಂತಿರ್ರಿ. ನಾನು ನಮ್ಮ ದತ್ತಗುರು ಸಾಥಿಗಳು ಬಂದಾರೇನಂತ ಹುಡಕ್ಯಾಡಿ ಬರತೇನಿ. ಯಾರರೇ ಸಿಕ್ಕರ, ರಾತ್ರಿ ಸತ್ಸಂಗ ಇರತೈತಿ. ಜಪತಪ ಮಾಡತೀವಿ. ಮತ್ತ, ಮುಂಜಾಲಿ ನದಿ ಕಡೆ ಬಂದಾಗ ಭೆಟ್ಟಿ ಆಕ್ಕೀನಿ, ಎಂದು ತನ್ನ ಜೋಳಿಗೆ, ಕಮಂಡಲ, ರುದ್ರಾಕ್ಷಿ ಸರ ಎತ್ತಿಕೊಂಡು ಗದ್ದಲದಲ್ಲಿ ಕರಗಿದ.

*****

ರುಕ್ಕವ್ವ ಆಯಿ. ಹೊಟ್ಟ್ಯಾಗ ಈ ಪರಿ ಧಗಧಗ ಬೆಂಕಿ ಇಟಗೊಂಡು ಅದರ ಝಳಾನೂ ಹತ್ತಲಾರದ ಹಾಂಗ ನನಗ ಛಲೋ ಆಗಲಿ ಅಂತ ಅಡ್ಯಾಡಕತ್ತೀಯಲವ್ವ… ನಿನ್ನಂಥವರು ಏಸ.. ಮಂದಿ ಸಿಗತಾರ? ನಾನು ನಂದೇ ದೊಡ್ಡ ದುಃಖಾ ಅಂತ ತಲಿ ಮ್ಯಾಗ ಕೈ ಇಟಗೊಂಡ ಕುಂತಿದ್ದೆ, ನಿನ್ನನ್ನ, ಬಾಬಾನ್ನ ನೋಡಿದರ ಜೀವಕ್ಕ ಭಾಳ ಹಳಹಳಿ ಆಕ್ಕೈತಿ, ಎಂದು ಚಂದ್ರವ್ವ ಮೆಲುದನಿಯಲ್ಲಿ ಬಿಟ್ಟುಬಿಟ್ಟು ಹೇಳಿದಳು. ಚಂದ್ರವ್ವನ ಮನಸ್ಸು ನಿಜಕ್ಕೂ ಕಲುಕಿತ್ತು.

ಅದಕೇನ ಮಗಳ, ನರಜಲ್ಮ ಅನ್ನೂದು. ಅದನ್ನ ತಿಳಕೊಂಡು ಬಾಳುವೇ ಮಾಡದಿದ್ರ ನಾಯಿಗಳಾಗತೇವಿ. ದೇವರು ತ್ರಾಸು ಮನಷ್ಯಾರಿಗೇ ಕೊಡಾಂವ. ಕಲ್ಲಿಗಲ್ಲ. ಕಲ್ಲಿಗೆ ಏಟು ಹಾಕಿದ್ರ ಬಸವಣ್ಣ ಆಗತೈತಿ. ಮನಷ್ಯಾಗ? ಜೀವ ಹಣ್ಣಾಗಿ ಬುದ್ಧಿ ಭೆಟ್ಟಿ ಆಗತೈತಿ. ಈಗ ನಿನ್ನ ಗಂಡನ್ನ ನೋಡು. ಹುಡುಗಿನ್ನ ಮೆಚ್ಚಿದ. ಲಗ್ನಾ ಆದ. ಮೀಸಿ ತಿರುವಿ ಸುಖಾನೂ ಪಡದಾ. ಅಪ್ಪನ ಮಾತಿಗೆ ಎದುರಾಡೋ ತಾಕತ್ತಿಲ್ಲ. ಅದಕ್ಕ, ಹೇಣತಿ, ಅಕೀ ಹೊಟ್ಯಾನ ಕೂಸಿನ್ನ ಬಿಟ್ಟ್ ಗಿಚ್ಚ ಬಡದಾ. ಮಳಿ ನೀರು ನದಿ ಸೇರತೈತಿಲ್ಲ? ಹಂಗೆ ನಿನ ತಿರಬೋಕಿ ಗಂಡನ ಜೀಂವಾ ಹೊರಗ ಸುತ್ಯಾಡಿದ್ರೂ ಮನಿಗೆ ಬಂದೇ ಬರ್ತೈತಿ. ಆಗ ಅಂವಗ ಹೊರಗಿನ ಲೋಕದ ಟೊಳ್ಳು, ಇದ್ದವರ ಕಕಲಾತಿ, ಕಿಮ್ಮತ್ತು ಎರಡೂ ತಿಳಿತಾವ, ಎಂದು ರುಕುಮವ್ವ ಕೈಗಳನ್ನು ಗಾಳಿಯಲ್ಲಿ ಆಡಿಸುತ್ತ ಹೇಳಿದ ಧಾಟಿಗೆ ಚಂದ್ರವ್ವ ಬಿದ್ದುಬಿದ್ದು ನಕ್ಕಳು.

*

ಹಂಗ ನೋಡಿದ್ರ ಮಾಂವಗ ನನಮ್ಯಾಲ ಭಾಳ ಜೀಂವ ಆಯಿ. ಸಂತಿ ಚಂದವ್ವನ ಹರಕಿ ತೀರ್ಸಾಕಂತ ನಮ್ಮ ಬಳಗದವರೆಲ್ಲಾ ಹೋದಾಗ ಅವನೂ ಬಂದಿದ್ನಂತ. ನನ್ನನ್ನ ನೋಡಿ ಮನಸ ಇಟಗೊಂಡಿದ್ನಂತ. ಆಮ್ಯಾಲ ಗುರುತು-ಕೂನ ಹಿಡದು ಅವರಪ್ಪನ ಕೂಡ ಹಟಾ ಮಾಡಿ ನಾಗನೂರಿಗೆ ಕಳಿಸಿದ್ದ. ಮಾವನ ಮನಿಕಡೆ ನಾಕೆತ್ತಿನ ಕಮತ, ನೀರುಕಟ್ಟಿ ಬೆಳೆಯೋ ತ್ವಾಟ ಎಲ್ಲಾ ಇದ್ರೂ ಯಪ್ಪ, ಪರೀಕ್ಷಾ ಮಾಡವನ ಗತೆ ಇನಾ ಒಂದ್ ವರ್ಷ ಮಗಳ ದಿಬ್ಬಣ ಕಟ್ಟಂಗಿಲ್ಲ, ಅಂತ ಹೇಳಿ ಕಳಿಸಿಬಿಟ್ಟ. ಮನಸ ಆಟ ಘಟ್ಟಿಯಿದ್ರ ಕಾವತಾನ ಬಿಡ್ರಿ ಎಂದು ಮನಿಮಂದಿಗೆ ಹೇಳಿಯೂ ಇದ್ದ. ಮಾಂವನೂ ಕಡಿಮಿ ಹಟದಾವ ಅಲ್ಲ. ಲಗ್ನಾದ್ರ ಅಕೀನ್ನ ಅಂತ ಸೂಗೂರಪ್ಪಗ ಎದರ ಮೀಸಿ ತಿರುವಿ ಆಣಿ ತಿಂದಿದ್ನಂತವಾ.

ಎರಿಯೂರು, ಹೇಮಸಾಗರ, ಹೆಮ್ಮಡಗಿ, ನಾಗಸಂಪಿಗಿ, ದೇವರಕಲ್ಲು ಅಂತ ಗಂಡುಗಳು ಹುಡುಕ್ಕೊಂಡು ಬರೂಣಕಿ ಚಾಲೂ ಆದದ್ದೇ, ಯಪ್ಪ- ಹೇ, ಇಲ್ಲರಿ, ಹುಡುಗ ನಿಕ್ಕಿ ಆಗ್ಯಾನ. ಇರಾಕಿ ಒಬ್ಳ ಮಗಳು. ಇನಾ ಯಾಡ ದಿನಾ ತವರ ಮನಿ ಹಾಲು-ಮಸರು-ಬೆಣ್ಣಿ ಉಣಬೇಕಂತ ನಾವ ಇಟಗೊಂಡೀವಿ ಅಂತ ಹೇಳೂದು ಸಾಕಾಗಿ ತಾನೇ ಬೀಗತನ ಬೆಳಸಾಕ ಅವ್ವನ್ನ ಕರಕೊಂಡು ಮಲ್ಲಾಪುರಕ್ಕ ಹೋಗಿ ಮೂರ್ತ ಪಕ್ಕೀ ಮಾಡಿದ್ದ. ಈ ಸಲದ ಶಾಣ ಬಸಪ್ಪನ ಜಾತ್ರಿಗಿ ಮೂರು ವರ್ಷಾ ಆಗತಾವು ಲಗ್ನಾಗಿ. ಕೂಸು ಆಗೂದು ಜರಾ ತಡಾ ಆದ್ರು ಅತ್ತೀ ಮನಿಯವ್ರು ಖಿಸಿಮಿಸಿ ಮಾಡಲಾರದೆ ಯಾವುದಕ್ಕೂ ಕಡಿಮಿ ಮಾಡಲಾರದ ಹಾಂಗ ನೋಡಕೊಂಡರು. ನೀ ಸೊಸಿ ಅಲ್ಲ, ಮನೀ ಮಗಳು ಅಂದರು. ಆದರ, ನಿನ ಗಂಡ, ಆ ಆಪೇಶಿ ಹೇಳಿದಾಂಘ ಕುಣಿಬ್ಯಾಡ. ಅಂವಾ ಇನ್ನಾ ಹುಡಗಾಟಕಿ ಬಿಟ್ಟಿಲ್ಲ. ನಾವಿರೊ ತನಾ ನಮದ„ ಮಾತು, ಅಂತ ಬುದ್ಧಿವಾದನೂ ಹೇಳಿದ್ರು.

ಆದ್ರ ಇವಂದೆ ಮದಲಿಂದನೂ ಜರಾ ಹಟದ ಸ್ವಭಾವ. ಅದರ ಸಮ್ಮಂಧನೇ ಮಾವಗ ಇಂವಗ ಲಿಗಾಡೆ ಹತ್ತತಿರತಾವು. ಹಿರೇರ ಕೂಡ ಹಂಗ ಜಗಳಾ ಹಚಗೋಬ್ಯಾಡೋ, ಅವರು ಹೇಳೂದು ನಮ್ಮ್ ಒಳಿತಿನ ದಶಿಂದನೇ ಅಲ್ಲೇನೋ ಮಾಂವಾ ಅಂದ್ರ ಕೇಳಂಗಿಲ್ಲ. ವಯಸ್ಸಿದ್ದಾಗ ನನ್ನ ಮಾತ ನಡೀಲಿಲ್ಲಂದ್ರ ಮುದುಕಾದ ಮ್ಯಾಲ ಗೌಡಕಿ ನಡಸಲೇನು? ಗೋಟಿ ಒಡೆಸಿಕೊಂಡ ಹೋರಿಗತೆ ಹೂಂಕರಿಸಿಕೋತ ಈ ವಾಡೆದಾಗ ಅಡ್ಡ್ಯಾಡೋದು ನನಗ ಸೇರಂಗಿಲ್ಲ. ನಾನೂ ಗೌಡಕಿ ಮಾಡವನ, ಅಂತ ಬರೀ ಅಡ್ಡ ಮಾತ ಆಡತಿದ್ದ.

ಹಳೆ ಮಣ್ಣಿನ ಮನಿ ಖೆಡವಿ ಗಚ್ಚಿನ ಮನಿ ಕಟ್ಟಬೇಕು, ಮಂದಿಹಂಗ ಡಾಳಂಬ್ರಿ, ಚಿಕ್ಕೂ, ಆಪೂಸ್ ಬೇಳಿಬೇಕು, ತನ್ನ ವಯಸ್ಸಿನವರಗತೆ ಕೈಗೆ ಬಂಗಾರದ ಚೈನಿನ ವಾಚು ಕಟಗೊಂಡು, ಢಗಳ ಪ್ಯಾಂಟು, ಬುಶೆಲ್ಟು ಹಾಕ್ಕೊಂಡು, ಪಟಪಟಿ ಬಿಟಕೊಂಡು ಹೇಣತಿ ಜೋಡಿ ಕೆಂಭಾವಿ, ಕಲ್ಬುರ್ಗಿ ಅಡ್ಡಾಡಬೇಕು; ಚೈನಿ ಮಾಡಬೇಕು ಅನೂದು ಇವನ ಆಶಾ. ಆದ್ರ ಅತ್ತಿ-ಮಾವಗ ಇದ್ದೊಬ್ಬ ಮಗಾ ಅಂಥಾ ಹಾದಿ ಹಿಡದ್ರ ಕೆಡತಾನಂತ ಅಂಜಿಕಿ. ಇಂಥಾದ್ದು ಮಾಡದೇನೂ ಸುಖಾ ಪಡಬೌದಲೇ ಬೇಫಾಮ್, ಅಂತ ಮಾವ-ಅತ್ತಿ ವಾದ. ಇವರ ಜಗಳದಾಗ ನನಗ ಉಸಲ ಕಟ್ಟೂಹಾಂಗ ಮಾಡಿದ್ರು. ನೀನು ಅವರ ಕೂಡ ಸೇರಕೊಂಡಿ. ಅದಕ್ಕ, ಯಪ್ಪ ಹೇಳಿದ್ದಕ್ಕ ಕೌಲೆತ್ತಿನ ಗತೆ ಗೋಣು ಹಾಕತಿ ಅಂತ ಧುಸುಮುಸು ಮಾಡತಿದ್ದ. ಈಗ ಮನಿ ಬಿಟ್ಟು ಹೋಗಿದ್ದೂ ನನ್ನ ದಶಿಂದನೇ.

ತನ್ನ ಕೂಸು ಕಲಬುರಗಿ ದವಾಖಾನ್ಯಾಗ ಹುಟ್ಟಬೇಕು ಅಂತ ಅಂವಾ; ನಮ್ಮ ವಂಶದಾಗ ಎಲ್ಲಾರು ಹುಟ್ಟಿದ್ದೂ ಈ ಮನ್ಯಾಗೇ. ನಮ್ಮನಿ ಸೊಸಿನೇ ಇರಲಿ, ಮಗಳೇ ಇರಲಿ ಅದೇ ನಮಗ ನೇಮ. ಈ ಮೊಮ್ಮಗ ಹುಟ್ಟೂದು ಸೈತ ಬಾಣಂತಿ ಖೋಲ್ಯಾಗೇ ಅಂತ ಮಾವನ ಠರಾವು. ಇಂವಾ ಅಪ್ಪನ ಕೂಡ ವಾದಿಸಲಾರ. ಅಲ್ಲಿ ಆದ ಅವಮಾನ ನನ್ನ ಮುಂದ ತೋರಿಸಲಾರ. ತನ್ನ ಮಗಾ ಹೆಂಗ-ಎಲ್ಲಿ ಹುಟ್ಟಬೇಕಂತ ಹೇಳ್ಳಾರ. ಇವನೌನ ಯಾರೂ ಬ್ಯಾಡ ತಗೋ. ಈ ಮುದಿ ಗೌಡಗ„ ಹೆಂಗ ಅಕ್ಕಲ್ ಕಲಸಬೇಕು ಅಂತ ನನಗ ತಿಳದೈತಿ, ಅಂದಿದ್ದ ಅವತ್ತ ಮಲಕೊಳ್ಳೋದಕ್ಕಿಂತಾ ಮದ್ಲ. ಮುಂಜಾಲಿ ನೋಡಿದ್ರ ಹಾಸಿಗಿ ಖಾಲಿಯಿತ್ತು. ಅಪ್ಪನ ಕೂಡ ರಸಿಕಸಿ ಭಾಳ ಆದಮ್ಯಾಲ ನಾಟಕದ ಹುಚ್ಚು ತಲಿಗೇರಿಸಿಕೊಂಡಿದ್ದ. ಹಾಂಗೇನರೆ ಹೋಗ್ಯಾನಂತ ಅವತ್ತ್ ಕಾದ್ವಿ. ಎರಡ ದಿನಾ ಆದ್ರೂ ಬರದಿದ್ದಾಗ ಜೀಂವ ಮಳಮಳಾ ಅನ್ನಾಕ ಹತ್ತಿತು. ಮಾವಗೂ ಚಿಂತ್ಯಾಗಿ, ಈ ಮಾಕಾಲೋಡೆ ಮಗಾ ಇಷ್ಟು ನೀರಿಗಿಳಿದಾನಂದ್ರ ನಾನೇ ಸೋಲತಿದ್ನಲ. ಇವೆಲ್ಲಾ ಯಾರ ಸಮ್ಮಂಧ ನಾ ಮಾಡ್ಲಾಕ ಹತ್ತೇನಿ? ಯಾಕೋ ನನ್ನ ಕೈಕಾಲು ನಡಗಸಬೇಕಂತನ ಹೀಂಗ ಮಾಡಾಕ ಹತ್ಯಾನು ಈ ವೆಂಕಟ್ಯಾ, ಅಂತ ಮ್ಯಾಲ ಹಾರ್ಯಾಡಿದ್ರು; ಗೊತ್ತಿದ್ದ ಮಂದಿಗೆಲ್ಲಾ ಸುದ್ದಿ ಕೊಟ್ರು. ಆಳುಕಾಳು ಬಿಟ್ಟು ಸುತ್ತೂರನಾಗ ಹುಡಕ್ಯಾಡಿಸಿದ್ರು.

ಈ ಎರಡ ತಿಂಗಳಿಂದ ಅಂಥಾ ಪ್ರಯತ್ನ ನಡಸೇವಿ. ಆದ್ರ ಯಾವುದೂ ಫಲಾ ಕೊಡವಲ್ಲವು. ನನಗ ಬರಬರ್ತ ಕಾಲು ಸೇದಿಹೋದಂಗ ಆಗಲಿಕ್ಕೆ ಹತ್ಯಾವು. ಮನಸ್ಸು ಕತ್ತಲ್ಯಾಗಿ ಕುಂದ್ರತೈತಿ. ಎಲ್ಲಾ ದಿಕ್ಕಿನಾಗ ಕತ್ತಲ್ಯಾಗಿ ಉಸಲಗಟ್ಟಿದ ಹಾಂಗ ಆಕ್ಕೈತಿ. ಅಂವಾ ಕೆರಿ-ಭಾಂವಿ ಅಂತ ಏನೂ ಮಾಡಕೊಂಡಿರಲಿಕ್ಕಿಲ್ಲ ಅಲಾ, ರುಕ್ಕವ್ವ ಆಯಿ? ಎಂದು ಸಾಂತ್ವನ ಬಯಸಿದವಳಂತೆ ಚಂದ್ರವ್ವ ಕೇಳಿದಳು. ಅಯ್ಯ, ಇಂಥಾ ತುಡುಗ ಹುಡುಗ್ರು ಇರೂದ ಹೀಂಗ ಇರತಾವ. ಅಪ್ಪಗ ಬುದ್ಧಿ ಕಲಸಾಕ ಹೇಣತೀಗಿ ತ್ರಾಸು ಕೊಡೂದು. ತಲಿಗೆ ತ್ರಾಸು ಹಚ್ಚಿಸಕೊಂಡು ಹೋಗ್ಯಾನ. ಬಿಸಿ ಇಳದರ ಬಂದೇ ಬರತಾನೇಳು. ಆಣಿ ತಿಂದು ಲಗ್ನಾ ಆದ ಹೇಣತಿ, ಹುಟ್ಟಬೇಕಾದ ಮಗನ್ನ ಬಿಟ್ಟು ಎಲ್ಲಿ ಹೊಕ್ಕಾನು? ನಿನ್ನ ಮ್ಯಾಗಿನ ಹುಚ್ಚ ಅಂವಗ ಹಿಂಗ ಮಾಡಸೈತಿ, ಎಂದು ರುಕುಮವ್ವ ಸಮಾಧಾನ ಹೇಳಿದಳು.

ಏನೋ ಆಯಿ. ಅತ್ತಿ ಕೂಡ ನನ ಹೊಟ್ಟೀ ಕೂಸಿನ ಆಣಿ ಹಾಕಿ ಒಂದ್ ದಿನಕ್ಕ ಬರತೇನಿ ಅಂತ, ಜೋಡಿ ಯಾರೂ ಬರೂದು ಬ್ಯಾಡ ಅಂತ ಜಿದ್ದು ಮಾಡಿ ಇಲ್ಲಿ ಬಂದೀನಿ. ಮಾವಗ ತಿಳದ್ರ ಮಂತನದ ಕಿಮ್ಮತ್ತು, ಮರ್ಯಾದಿ ಅಂತ ಗದ್ಲಾ ಹಾಕತಾನು. ಊರ ಮಂದಿ ಏನರ„ ಮಾತಾಡಿಕೊಂಡ್ರ ಮನೀಗೆ ಛಲೋ ಏನು„? ಅದಕ್ಕ, ಏನರ ಆಗಲಿ, ನಾಳೆ ತೇರು ಎಳಿಯೂಮುಂದ ಹರಕಿ ಏರಿಸಿ ನಾ ಹೋತೀನಿ. ಮುಂದ ಏನ ಆಗತೈತ್ಯೋ ಮೋನಪ್ಪಗ ಬಿಡತೇನಿ, ಅಂದು ರುಕುಮವ್ವನ ಎರಡೂ ಕೈಗಳನ್ನು ತೆಗೆದುಕೊಂಡು ಏನು ಮಾಡುವುದೆಂದು ತಿಳಿಯದೇ ಕಣ್ಣಿಗೆ ಒತ್ತಿಕೊಂಡಳು. ರುಕ್ಕವ್ವ ಆ ಕೈಗಳನ್ನು ಹಾಗೆಯೇ ತಲೆಯವರೆಗೆ ಎಳೆದುಕೊಂಡು ಹರಿಸುವಂತೆ ಬೈತಲೇಗುಂಟ ಎಡಬಲಕ್ಕೆ ಹಾಯಿಸಿ, ಕೆಳಗಿಳಿಸಿ ಎರಡೂ ಗಲ್ಲಗಳನ್ನು ತಟ್ಟಿದಳು.

ಚಂದ್ರವ್ವನ ಮನಸ್ಸನ್ನು ತಿಳಿಗೊಳಿಸಿ ಖುಷಿಪಡಿಸಲು ಮೋನಪ್ಪನ ಭಜನಿ ಪದವನ್ನು ಗುನುಗತೊಡಗಿದಳು. ಚಂದ್ರವ್ವ, ಇಲ್ಲಿಂದ ಹೋದಮ್ಯಾಲ ನಮ್ಮ ದೇವೇಂದ್ರಗ ದಗದಕ್ಕ ಹಚ್ಚದ ಸಾಲಿಗಿ ಕಳಸಬೇಕವ. ಕಲತು ಶ್ಯಾಣ್ಯಾ ಆದನಂದ್ರ ಈ ಮುದುಕಿ ಸತ್ತಮ್ಯಾಲು ಒಂದ್ ಚಾರಣೆ ದುಡದಾನು. ಗಂಟಲಕ್ಕ ಗಾಣಾಗಿ ಬದುಕಿದ್ದು ಇಲ್ಲಿಗೇ ಸಾಕವ್ವಾ, ಎಂದು ತನ್ನ ಯೋಜನೆಯನ್ನು ಹೇಳಿದಳು. ಮರುಚಣವೇ ಚಂದ್ರವ್ವ ಏನೋ ನೆನಪಾದವಳಂತೆ ತನ್ನ ಚೀಲದಿಂದ ನೂರರ ಎರಡು ನೋಟು ತೆಗೆದು ರುಕುಮವ್ವನ ಕೈಗಿತ್ತಳು. ಬ್ಯಾಡಂದ್ರ ನನ್ನಾಣಿ ಐತಿ. ನೀ ಇದನ್ನ ತಗೊಂಡ್ಯಂದ್ರ ನನ್ನನ್ನ ಹರಿಸಿ ಅಂತ ತಿಳಕೊಂತೀನಿ. ನನಗ ರೊಕ್ಕದ ಜರೂರತ್ತಿಲ್ಲ. ಊರಿಗೆ ಹೋಗಾಕ ಗಾಡಿಖರ್ಚಿಗೆ ಅದಾವ. ಆಟು ಸಾಕು. ನಿನ್ನ ಕಕಲಾತಿ ಇಲ್ಲಿಗೆ ಮುಗಿಬಾದ್ರು. ನೀವು ನಮ್ಮೂರಿಗೆ ಬರಬೇಕು. ಮಾಂವ ಬಂದಮ್ಯಾಲ ನಾನೂ ರಂಗಂಪ್ಯಾಟಿಗೆ ಬರಾವಳ„, ಅಂದಳು. ನೋಟು ನೀಡಿ ತನ್ನ ಬೊಗಸೆಯನ್ನು ಗಟ್ಟಿಯಾಗಿ ಹಿಡಿದ ಚಂದ್ರವಳ್ವ ಹರಕೆ ನಿಜವಾಗಲಿ ಎಂದು ರುಕುಮವ್ವ ಬೇಡಿಕೊಂಡಳು. ಕತ್ತಲ ಬೀಳತಿರಬೇಕಲ? ನಡೀರಿ ಛತ್ರ ಸೇರ್ಕೊಳಂವ. ಆಮ್ಯಾಲ ಜಾಗ ಸಿಗಂಗಿಲ್ಲ ಎಂದು ಚಂದ್ರವ್ವನ ಕೈ ಹಿಡಿಯುತ್ತ ಎದ್ದು ನಿಂತಳು. ದೇವಪ್ಪ ಇಬ್ಬರ ಕೈಯನ್ನು ಎಡಬಲಕ್ಕೆಂಬಂತೆ ಹಿಡಿದು ನಡುವೆ ನಡೆಯತೊಡಗಿದ.

ಇಡೀ ರಾತ್ರಿ ಜನರ ಸದ್ದುಗದ್ದಲ, ಕೂಗು, ದೂರದಲ್ಲಿ ಕೇಳುವ ಭಜನಿ ಪದಾ, ಮಕ್ಕಳ ಚೀರುವಿಕೆಯಲ್ಲಿ ನಿದ್ರೆ-ಎಚ್ಚರಗಳಂಥ ಸ್ಥಿತಿಯಲ್ಲಿ ಚಂದ್ರವ್ವ ಬೋಲ್ಡಿ ಬಾಬಾನ ಅಲೆಮಾರಿತನದ ಹಿಂದಿನ ನೋವು, ರುಕ್ಕವ್ವ-ದೇವೇಂದ್ರರ ಯಾತನೆಗೆ ಮರುಗಿದಳು. ತನಗೆ ಕಲಬುರಗಿಯ ದವಾಖಾನೆಯಲ್ಲಿ ಮಗ ಹುಟ್ಟಿದಂತೆ, ಮಾಂವ ಕೂಸನ್ನು ಎತ್ತಿ ಮುದ್ದಾಡಿದಂತೆ; ಅತ್ತಿ-ಮಾವ ಅದನ್ನು ಕಂಡು ಖುಷಿಪಟ್ಟಂತೆ ಕಂಡು ಸುಖಿಸಿದಳು. ಜಾತ್ರೆಯಲಿ ನೆರೆದ ಪ್ರತಿಯೊಬ್ಬರಿಗೂ ಇಂಥದೇ ಸುಖದುಃಖ ಇರಬಹುದು, ಅವರೆಲ್ಲರಿಗೂ ತಾವು ಅಂದುಕೊಂಡ ಹರಕೆ ನೆರವೇರಲಿ, ಎಂದು ಕನವರಿಸಿದಳು.

*****

ಇಲ್ಲಿ ಕುಂತಿರೇನ„ ಯವ್ವಾ. ಆಚಿಕಡಿ-ಈಚಿಕಡಿ ಹುಡುಕಿ ದಣದೇನಿ. ಇಕಾ ತಗೋರಿ, ಎಂದು ಬಗಲಲ್ಲಿ ತನ್ನ ಬಡಿಗೆ ಹಿಡಿದು, ಕೊಳ್ಳಿಗೆ ಹಾಕಿದ ಜೋಳಿಗೆಗೆ ಕಮಂಡಲ ಬಿಗಿದು, ಎರಡೂ ಕೈಯಲ್ಲಿ ಮಣ್ಣಿನ ಕುಡಿಕೆಗಳಲ್ಲಿ ಚಹಾ ಹಿಡಿದುಕೊಂಡು ಬಂದ ಬೋಲ್ಡಿ ಬಾಬಾನನ್ನು ಕಂಡು ಚಂದ್ರವ್ವಳಿಗೆ ಬಹಳ ಖುಷಿಯಾಯಿತು. ನಿದ್ರೆಯಿರದಿದ್ದರೂ ಅಂದಿನ ಬೆಳಗು ಆಕೆಗೆ ದೈವಿಕ ಉಲ್ಲಾಸವನ್ನು ನೀಡಿತ್ತು. ಬಾರಪಾ ಬಾಬಣ್ಣ. ನಿನ್ನೆ ಅಂತೂ ಸೂರ್ಯ ಪರಮಾತ್ಮ ಹುಟ್ಟೂದನ್ನ ಬರಾಬ್ಬರಿ ನೋಡಲಿಲ್ಲ. ಇವತ್ ತಪ್ಪಿಸಬ್ಯಾಡ ಅಂತ ಚಂದ್ರವ್ವನ್ನ ಕರಕೊಂಡಕ್ಯಾಸಿ ಬಂದೀನಿ. ಅಕೀ ತುಂಬಿದ ಮೈಗೆ ಮೋನಪ್ಪನ ವಾಣಿ, ಕೃಷ್ಣವ್ವನ ನೀರಿನ ಹನಿ, ಸೂರಪ್ಪನ ಬೆಳಕ ಬಿದ್ರ ಭಾಳ ಛಲೋ ಆಕ್ಕೈತಿ. ಅದಿರಲಿ, ಅದೇನೋ ಸಂಗಾ-ಪಂಗಾ ಅಂತ ಹೋಗಿದ್ಯಲ, ಛಲೋ ಆತ್ಯ? ರುಕುಮವ್ವ ಕೇಳಿದಳು.

ಆಹಾ! ನಮ್ಮ ಸಾಧುಸಂತರು ಸೇರಿ ಇಡೀ ರಾತ್ರಿ ಮೋನಪ್ಪನ ಧ್ಯಾನ ಮಾಡಿದ್ವಿ. ಭಜನೀ ಪದಾ ಹೇಳಿದ್ವಿ. ಕಳದದ್ದೆಲ್ಲಾ ಸಿಕ್ಕಂಗಾಗಿ ಭಾಳ ಆನಂದ ಆತು. ನಿನಗಂತ ಪೋಟಗೀನೂ ಎತ್ತೀವಿ. ಈ ವರ್ಷ ಎಲ್ಲಾರಿಗೂ ಒಳಿತಾಗತೈತಿ, ಅಂತ ಮೋನಪ್ಪ ನಸುಕಿನಾಗ ಅಪ್ಪಣಿನೂ ಕೊಟ್ಟಾನ. ಈಗೇನಿದ್ರೂ ತೇರು ಎಳಿಯೂದನ್ನ ಖುಷಿಯಿಂದ ನೋಡೂದು, ಅಂದು, ಇನ್ನೊಂದ್ ಜರಾ ಚಹಾ ಬೇಕೇನು ಎಂದು ಕೇಳಿದ. ಬ್ಯಾಡ ಬಿಡಪ„. ಈ ಮುದಿಕಿಗಿ, ಮಮ್ಮಗ್ಗ, ಮತ್ತ ಈ ಚಂದ್ರವ್ವಗ ಮತ್ತ ಅವಳ ಕೂಸಿಗೆ ತೇರು ಎಳಿಯೂ ಮುಂದಾಗ ಹರಕಿ ಹಣ್ಣು ತೂರಲಿಕ್ಕೆ ಕೈ ಏಳುಹಾಂಗ ಜಾಗಾ ಮಾಡಿಕೊಟ್ರ ಆಟ ಸಾಕು, ಎಂದು ರುಕುಮವ್ವ ನುಡಿದಳು. ನೋಡ ಆಯಿ, ನೀ ಎಲ್ಲಿ ನಿಂತಿ ಅಲ್ಲಿಂದ ಒಗಿಯೂ ಹಣ್ಣು ಮೋನಪ್ಪಗ ಹೋಗಿ ಮುಟ್ಟತೈತಿ. ತೇರು ಎಲ್ಲಿ ನಿಂತರೂ ಕಾಣತೈತಿ. ಹರಕಿ ಎಲ್ಲಿ ಹೊತ್ತರೂ ತೀರತೈತಿ, ಮಾರುತ್ತರ ನೀಡಿದ.

ಆತ್ಯು ಬಿಡು ಬಾಬಣ್ಣ, ನಿನ್ನ ನಂಬಿಕಿ ಮಾತಿಗಿಂತ ಬ್ಯಾರೇ ಬೇಕ? ಎನ್ನುತ್ತ, ಚಂದ್ರವ್ವ ನಿನ್ನ ಹೂವು-ಹಣ್ಣು ಬೊಗಸಿ ಒಳಗ ಇಟಗೋಳವ, ಏನ ಕೇಳಬೇಕಂತ ಅದೀ ನಿಕ್ಕೀ ಮಾಡಕೋ, ಎಂದು ರಥೋತ್ಸವಕ್ಕೆ ಸಿದ್ಧಳಾದಳು.

ಭಕ್ತಜನಸಾಗರ ಸತ್ಯವದು ತಾನುಳಿದು ಸೊಲ್ಲು ಜೊಳ್ಳಾಗುವುದು ಎಂಬ ಮೌನವಾಣಿ ನಿಜವಾಗಿ ಧರೆಯು ಪಾವನವಾಗುವುದು ಎಂಬಂತೆ ಉನ್ಮತ್ತವಾಗಿತ್ತು. ಬೆಳಗಿನ ಚಳಿ-ಬಿಸಿಲಿಗೆ ನದಿಗೆ ಹೋಗಿ ಸ್ನಾನ ಮಾಡಿ ಯಾವುದೋ ಬಿಡುಗಡೆಗಾಗಿ ಕಾದವರಂತೆ ಮುಗಿಲಿನೆತ್ತರದ ತೇರನ್ನು ತದೇಕ ನೋಡುತ್ತ ಪರವಶತೆಯಲಿ ಕೈಮುಗಿಯುತ್ತಿದ್ದರು. ಭಕ್ತಿಭಾವವೇ ಉಸಿರಾಗಿದ್ದ ಅಲ್ಲಿನ ಗಾಳಿಗೆ ಹೊಸ ಸುವಾಸನೆಯೊಂದು ಒದಗಿ ಬಂದಂತಿತ್ತು.

ಮೋನಪ್ಪನ ಹೂಜಿ, ಚಪಗೊಡಲಿ, ಪರಸುಬಟ್ಟಲು, ಪರುಷಮಣಿಗಳು ಮಾಘದ ಹುಣ್ಣಿಮೆಯ ಬೆಳಗಿನ ಬೆಳಕಿನಲ್ಲಿ ಜನರಿಗೆ ಕಲಿಯುಗದ ಹೊಸ ಅರ್ಥವನ್ನು ವ್ಯಾಖ್ಯಾನಿಸುತ್ತಿದ್ದವು.

ರಥೋತ್ಸವದ ತೇರು ಕದಲತೊಡಗಿದ್ದೇ ರೂಢಿಯ ಹಾಗೆ ಆಕಾಶದಿಂದ ಹೂವು ಚಿಮ್ಮುವಂತೆ ಮಳೆ ಹನಿಯತೊಡಗಿತು. ಭಕ್ತರು ಆವೇಶಭರಿತರಾಗಿ ಉಘೇ ಉಘೇ ಎಂದು ಕೂಗಿದ ಧ್ವನಿಯ ಕಾವು ಮುಗಿಲಿನಲ್ಲಿ ಆವಿಯಾಗಿ ಮತ್ತೆ ಮಳೆಯಾಯಿತು. ಬೆಳಗು ನೀಡಿದ ದೈವಿಕ ಖುಷಿಯನ್ನು ತನ್ನ ಉಡಿಯಲ್ಲಿ ಕಟ್ಟಿ ಒಯ್ಯಲು ನಿಂತವಳಂತೆ ಚಂದ್ರವ್ವ ಭಕ್ತಿಯಿಂದ ಬೊಗಸೆಯಲ್ಲಿ ಹರಕೆಯ ಮುಡಿ ಹಿಡಿದಳು. ತನಗಿನ್ನು ಯಾವ ಚಿಂತೆಯೂ ಇಲ್ಲವೆನ್ನುವ ಹಾಗೆ ನೆಮ್ಮದಿಯಿಂದ ಆಜುಬಾಜು ನೋಡಿದಳು. ಸುಖಪಡಲೆಂದೇ ಹುಟ್ಟಿದ ಹಕ್ಕಿಯ ಮರಿಯಂತೆ ದೇವೇಂದ್ರ ಚಿಮ್ಮುತ್ತಿದ್ದ. ರುಕುಮವ್ವ ರಥೋತ್ಸವ ಕಲ್ಪಿಸಿಕೊಂಡು ಬಾಯೊಳಗಿನ ಎಲೆಯಡಿಕೆ ರಸವನ್ನು ಸುಖದಿಂದ ನಮಲುತ್ತ ತನ್ನ ಜೀವದ ಪರಿಪಾಟಲುಗಳು ಕರಗಿದಂತೆ ಗೆಲುವಾಗಿದ್ದಳು. ರಾತ್ರಿಯೆಲ್ಲ ದತ್ತಗುರುಗಳ ಸನ್ನಿಧಿಯಲ್ಲಿ ಕಳೆದ ಬೋಲ್ಡಿ ಬಾಬಾ ಇಂದೆನಗೆ ಮೌನಪ್ರಸಾದ ದೊರಕಿತು ಎಂಬ ಮುದ್ರೆಯಲಿ ಕಣ್ಮುಚ್ಚಿ ಕೈಮುಗಿದು ಅಪರೋಕ್ಷಿಯಂತೆ ಹೊಳೆಯುತ್ತಿದ್ದ.

ಚಂದ್ರವ್ವ ನಿಂತಲ್ಲಿಯೇ ತನ್ನ ಪಾದಗಳನ್ನು ಇನ್ನಷ್ಟು ಒತ್ತಿದಳು: ಅವು ನೆಲದಾಳಕ್ಕೆ ಬೇರು ಬಿಟ್ಟ ಬಳ್ಳಿಯಂತೆ ಬಳುಕಿದವು. ಕಲ್ಲುಬಂಡೆಯ ನಡುವೆ ಚಿಗರುವ ವಿಸ್ಮಯದ ಹೂವಿನ ಕುಡಿಯಂತೆ ಬೆಳೆಯುತ್ತಿದ್ದೇನೆ ಎನ್ನುವ ಭಾವ ಮೈತುಂಬಿ ಅವಳನ್ನು ಬೆಚ್ಚಗಾಗಿಸಿತು. ಆಕೆ ಗೋಣನ್ನು ಇನ್ನಷ್ಟು ಎತ್ತರಿಸಿದಳು. ಆ ಕ್ಷಣದಲ್ಲಿ ಅವಳು ಅನುಭವಿಸುತ್ತಿದ್ದ ಸುಖಕ್ಕೆ ಕೊರಳು ಟಿಸಿಲೊಡೆದು ಆಕಾಶಕ್ಕೆ ಹಬ್ಬುತ್ತ ಹೋಯಿತು. ರಥೋತ್ಸವಕ್ಕೆ ದಿವ್ಯತೆಯನ್ನು ತರಲೆಂದು ಮಾತ್ರ ತೇರಿಗೆ ಹೂವಿನ ಮಳೆ ಸುರಿಸಲು ಒಟ್ಟುಗೂಡಿದ್ದ ಮೋಡಗಳು ಆಕೆಯ ಮುಖ ಸವರಿ, ಉದಕ ಚಿಮುಕಿಸಿ ಅವಳನ್ನು ಮುಕ್ತಳನ್ನಾಗಿಸಿದವು.

ಕೇಶವ ಮಳಗಿ
ತೀರ ಜನಸಾಮಾನ್ಯರು ಅಂದುಕೊಳ್ಳುವವರಲ್ಲಿ ಅಡಗಿರುವ ಮಾನವೀಯ ಅಂಶವನ್ನು ಈ ಕಥೆ ಸೆರೆ ಹಿಡಿಯಲು ಯತ್ನಿಸುತ್ತದೆ. ತಮ್ಮತಮ್ಮ ನೋವಿನಲ್ಲಿ ನರಳುತ್ತಿದ್ದರೂ, ಯಾವುದೇ ರೀತಿಯ ಸಂಬಂಧವಿಲ್ಲದಿದ್ದರೂ ಒಬ್ಬರಿಗೊಬ್ಬರು ಆತುಕೊಳ್ಳುವ ಪರಿ ನನಗೆ ಯಾವಾಗಲೂ ವಿಸ್ಮಯವಾಗಿ ಕಾಣುತ್ತದೆ. ಇಲ್ಲಿನ ಪಾತ್ರಗಳ ಮಾನವೀಯತೆಗೆ ನಾನು ಮುಗ್ಧನಾಗಿದ್ದೇನೆ.
ಹೊಳೆ ಬದಿಯ ಬೆಳಗು ಕಥೆಯಲ್ಲಿ ಬರುವ ಚೊಂಚ ಮುದುಕಿ ರುಕ್ಕವ್ವ ಇಂಥ ಹಳ್ಳಿಯೊಂದರಲ್ಲಿ ದೊರಕಿದ ಜೀವಂತ ವ್ಯಕ್ತಿ. ಕುರುಡಿಯಾಗಿದ್ದ ಆಕೆಯ ಮಗ-ಸೊಸೆ ಮದುವೆಯೊಂದರ ಊಟಕ್ಕೆಂದು ಹೋದವರು ಹೆಣವಾಗಿದ್ದರು. ಈ ಭಾಗದ ನೀರಿನಲ್ಲಿರುವ ಫ್ಲೊರೈಡ್ ಮತ್ತು ನೈಟ್ರೇಟ್ ಅಂಶ ಇಲ್ಲಿನ ಜನರ ಬದುಕನ್ನು ನರಕವಾಗಿಸಿದೆ. ಬೇಸಿಗೆಯಲ್ಲಿ ಇದರಿಂದಾಗಿಯೇ ಜನ ಸಾಯುತ್ತಾರೆ. ಈ ವೃದ್ಧೆಯ ಮಗ-ಸೊಸೆ ಕೂಡ ಹೀಗೆಯೇ ಸತ್ತವರಾಗಿದ್ದರು. ಶಾಲೆಗೆ ಹೋಗಬೇಕಾಗಿದ್ದ ಆಕೆಯ ಹನ್ನೆರಡು ವರ್ಷದ ಮೊಮ್ಮಗನನ್ನು ಐನೂರು ರೂಪಾಯಿ ಸಾಲ ತೀರಿಸಲು ಸುರಪುರದ ಮಾರವಾಡಿ ಮನೆಯೊಂದಕ್ಕೆ ಒತ್ತೆ ಹಾಕಿದ್ದಳು. ಮುದುಕಿ ಹೆಚ್ಚುಕಮ್ಮಿ ಆ ಹಳ್ಳಿಯ ಜನ ಕರುಣೆಯ ಮೇಲೆ ನೀಡಿದ ಊಟದಿಂದ ಬದುಕಿದ್ದಳು. ಘನತೆಯಿಂದ ಬದುಕಬೇಕೆಂಬ ಅವಳ ಸಂಕಲ್ಪ ಮತ್ತು ಛಲಗಳನ್ನು ಕಾಲ ನಿರ್ದಯತೆಯಿಂದ ಕತ್ತರಿಸಿ ಹಾಕಿತ್ತು. ವೃದ್ಧೆಯ ಕಥೆ ವೃತ್ತಿಯಾಚೆಗೆ ತಿಂಗಳುಗಳ ಕಾಲ ನನ್ನನ್ನು ಕನಸು-ಎಚ್ಚರಗಳಲ್ಲಿ ಕಾಡುತ್ತಿತ್ತು. ಆಗ ಅನ್ನಿಸಿದ್ದೆಲ್ಲ ಟಿಪ್ಪಣಿ ಪುಸ್ತಕ ಸೇರುತ್ತಿತ್ತು.
ಬದುಕು ಸೃಷ್ಟಿಸುವ ದುರಂತ ಕಥೆಗಿಂತ ಗಾಢವೂ, ತೀಕ್ಷ್ಣವೂ, ಭಯಾನಕವೂ ಮತ್ತು ನೋವಿನಿಂದ ಕೂಡಿದ್ದೂ ಆಗಿರುತ್ತದೆ. ತೀರ ಸಾಮಾನ್ಯರು ಎಂದುಕೊಳ್ಳುವ, ಲೋಕದ ಘನವಿಚಾರಗಳಲ್ಲಿ ಯಾವ ಅಸ್ತಿತ್ವವನ್ನೂ ಹೊಂದಿಲ್ಲದ ಜನ ಒಬ್ಬರಿಗೊಬ್ಬರು ಆಸರೆಯಾಗುವ ಮೂಲಕವೇ ನೋವು, ಬವಣೆ, ದುರಂತ ಸೃಷ್ಟಿಸುವ ಬೇಗೆಯನ್ನು ಹೇಗೆ ಕಡಿಮೆ ಮಾಡಿಕೊಂಡರು; ಆ ಒಂದು ಕ್ಷಣದಲ್ಲಿ ದೈವಿಕದ ಎತ್ತರಕ್ಕೆ ಏರುತ್ತ ಹೇಗೆ ಮುಕ್ತಿಯನ್ನು ಪಡೆದರು ಎಂಬುದನ್ನು ಹೇಳಲು ಹೊಳೆ ಬದಿಯ ಬೆಳಗು ಕಥೆ ಪ್ರಯತ್ನಿಸುತ್ತದೆ ಅಂದುಕೊಂಡಿದ್ದೇನೆ. ಈ ಭಿತ್ತಿಯಲ್ಲಿಯೇ ಕಥಾವಸ್ತುವಿಗೆ ಅಗತ್ಯವಾದ ಭಾಷೆ, ನುಡಿಗಟ್ಟು, ಸಂಭಾಷಣೆಯನ್ನು ಹೆಣೆಯಲು; ಆ ಪ್ರದೇಶದ ಅನೇಕ ಸೂಕ್ಷ್ಮ ವಿವರಗಳು ಪ್ರತಿಫಲಿಸಲು ಪ್ರಯತ್ನಿಸಿದ್ದೇನೆ.