ನಾನು ಶೂನ್ಯವಾಗಬೇಕು

ನಾನು ಶೂನ್ಯವಾಗಬೇಕು
ಒಂದರಿಂದ ಒಂಭತ್ತರವರೆಗಿನ
‘ಅಂಕೆ’ಗಳಿಗೊಳಗಾಗದೆ
ನಾನು ನಾನಾಗಿಯೇ ಬಾಳಬೇಕು

ವಿಭಾಗಿಸಿ ಒಡೆದುಹಾಕುವ ವ್ಯಾಸಕ್ಕೆ ಬೆದರದೆ
ತ್ರಿಜ್ಯದ ಸಂಪರ್ಕವನ್ನು ಅತಿಯಾಗಿ ಹಚ್ಚಿಕೊಳ್ಳದೆ-
ಹಾಗೆಂದು ದೂರವೂ ಉಳಿಯದೆ
ಸುತ್ತ ಆವರಿಸಿ ನಿಂತ ಪರಿಧಿಗಳೆಲ್ಲವನ್ನೂ ಮೀರಿದ
ನಗುಮುಖದ ವೃತ್ತವಾಗಬೇಕು

ಸಂತಸದ ಕೂಟದಲ್ಲಿ ಕೂಡಿ ಒಂದಾಗಿ
ದುಃಖವನ್ನು ಕಳೆದು ಮತ್ತಷ್ಟು ಕಳೆದುಕೊಳ್ಳುತ್ತಾ
ಗುಣಾಕಾರ(ಗುಣ ಆಕಾರ)ದ ದ್ವಂದ್ವದಲ್ಲಿ
ತನ್ನತನವನ್ನು ಬಿಡದೆ
ಭಾ(ಬಾ)ಗಿಸುವವರ ಅಧಿಕಪ್ರಸಂಗಗಳಿಗೆ ತಲೆಕೆಡಿಸಿಕೊಳ್ಳದೆ
ಒಂದರೊಡನೆ ಇನ್ನೊಂದಾಗದೆ
ಸ್ವಂತಿಕೆಯ ಬದುಕನ್ನು ನಡೆಸಬೇಕು
ಅಸ್ಮಿತೆಯನ್ನು ಉಳಿಸಿಕೊಳ್ಳಬೇಕು

ಎಡಕ್ಕೆ ಬಂದು ಕುಳಿತವರನ್ನು ಹಿಗ್ಗಿಸದ
ಬಲಕ್ಕೆ ಬಂದು ಕುಳಿತವರ ಜೊತೆ ಸೇರದ
ಮನಃಸ್ಥಿತಿಯನ್ನು ನಾನು ಕಳೆದುಕೊಳ್ಳಬೇಕು
ಎಡ- ಬಲಗಳ ಗೊಡವೆಗೆಡೆಗೊಡದ
ನಿಮ್ನೋನ್ನತರಹಿತ ಶೂನ್ಯ ನಾನಾಗಬೇಕು

ಅದೆಂತೋ ದಕ್ಕಿಸಿಕೊಂಡ ‘ಒಂದ’ನ್ನು
ಅದರ ಮುಂದಣ ಮೆಟ್ಟಿಲುಗಳನ್ನು
ಒಂದೊಂದಾಗಿ ಹತ್ತುತ್ತಾ ಹತ್ತಾಗಿ
ಶತಕ ಬಾರಿಸಿ
ಸಹಸ್ರಾರ ತಲುಪಬೇಕು
‘ಸಾವಿರದ’ ಸಂಖ್ಯೆ ನಾನಾಗಬೇಕು