ರಜಾದಿನಗಳ ಮಧ್ಯಾಹ್ನಗಳಲ್ಲಿ ನಾನು ಆಕೆ ಮನೆಯ ಆ ನೀಲಿ ಬಾಗಿಲನ್ನ ಧಡ ಧಡ ಬಡಿಯುತ್ತ ನಿಂತು ಬಿಡುತ್ತಿದ್ದೆ, ಮೊದಮೊದಲು, ಬಾಗಿಲು ತೆಗೆದು ಆಮೇಲ್ ಬಾ ಮಾಮ ಮಕ್ಕೊಂಡಾರು ಅನ್ನುತ್ತಿದ್ದ ಅಕ್ಕ, ಆಮೇಲೆ ಒಳಗಿನಿಂದಲೇ ಕೂಗಲು ಶುರು ಮಾಡಿದಳು. ಆನಂತರ ಉತ್ತರಿಸುವ ಗೋಜಿಗೂ ಹೋಗಲಿಲ್ಲ. ಆಗೆಲ್ಲ ಸಿಕ್ಕಾಪಟ್ಟೆ ಅವಮಾನವಾಗಿ ಕಣ್ಣು ತುಂಬಿಕೊಂಡು ಮನೆಗೆ ಹೋಗುತ್ತಿದ್ದೆ. ನನ್ನ ಅಳುವಿಗೆ ಕಾರಣ ಕೇಳುವಷ್ಟು ವ್ಯವಧಾನ ಯಾರಿಗೂ ಇರಲಿಲ್ಲ. ನನ್ನ ದೋಸ್ತರಾಗಿದ್ದ ಮರಗಳು ಕೂಡ ನನ್ನ ಹತ್ತಿರ ಮಾತು ಬಿಟ್ಟಂತೆ ನನಗೆ ಭಾಸವಾಗುತ್ತಿತ್ತು, ಯಾಕೆಂದರೆ ಅಕ್ಕ ಸಿಕ್ಕಿದ್ದೇ ಸಿಕ್ಕಿದ್ದು… ಮೌನವಾಗಿ ಮಾತನಾಡುವ ಸ್ನೇಹಿತರಿಗಿಂತ ಮಾತನಾಡುವ ಜೀವಕ್ಕೆ ನಾನು ಆದ್ಯತೆ ಕೊಟ್ಟಿದ್ದು ಅವಕ್ಕೂ ಸಿಟ್ಟು ಬಂದಿತ್ತೇನೋ.
ಅಮಿತಾ ರವಿಕಿರಣ್ ಬರಹ ನಿಮ್ಮ ಓದಿಗೆ
ಇದು ನಾನು ಎಂಟನೇ ತರಗತಿಯಲ್ಲಿದ್ದ ಸಮಯ, ನಮ್ಮ ಮನೆಯ ಮುಂದೆ ಕಾರವಾರದ ಮುಲ್ಲಾಸಾಬರು ಒಂದು ಹೊಸ ಚಾಳ್ ಕಟ್ಟಿಸಿದ್ದರು. ಮೊದಲು ಅದು ಕೋಳಿ ಫಾರ್ಮ್ ಆಗಿತ್ತು, ಅಲ್ಲಿ ಗಿಲ್ಬರ್ಟ್ ಅನ್ನುವವರು ತಮ್ಮದೇ ಕೋಳಿ ಮಾಂಸದಂಗಡಿಗೆಂದು ಕೋಳಿ ಸಾಕಾಣಿಕೆ ಮಾಡುತ್ತಿದ್ದರು. ಜೊತೆಗೆ ಅಲ್ಲಿ ಮೊಟ್ಟೆಯೂ ಸಿಗುತ್ತಿತ್ತು, ಬೆಳಗಾ ಮುಂಜಾನೆ ‘ಮುನ್ಸಿಪಾಲ್ಟಿ’ ನೀರು ಬರುವ ಹೊತ್ತು ಅಮ್ಮ ನನ್ನನ್ನು ಅಥವಾ ತಂಗಿಯನ್ನು ಅಲ್ಲಿ ಮೊಟ್ಟೆ ತರಲು ಕಳಿಸುತ್ತಿದ್ದಳು, ಆ ಕೋಳಿ ಫಾರ್ಮಿಗೆ ಕೆಮ್ಮಣ್ಣಿನ ಬಣ್ಣದ ಪೈಂಟ್ ಬಳಿಯಲಾಗಿತ್ತು, ಅದರ ಬಾಗಿಲ ಮುಂದೆ ಒಂದು ಸಾರ್ವಜನಿಕ ನಳ (ನಲ್ಲಿ). ಅಲ್ಲಿ ಕೊಡಗಳ ರಾಶಿ, ಹಾಳು ಮೋರೆಯಲ್ಲಿಯೇ ನೀರ ತುಂಬಲು ಸರದಿ ಸಾಲಿನಲ್ಲಿ ನಿಂತ ತಾಂಡೆಯ ಮಂದಿ.
‘ಸಿಸ್ಟರ್ ಮನೆ’ ಎಂದೇ ನಾವು ಕರೆಯುತ್ತಿದ್ದ ಜ್ಯೋತಿ ಆರೋಗ್ಯ ಕೇಂದ್ರದವರು ಬೆಳಿಗ್ಗೆ ಊರಿಗೆಲ್ಲ ಕೇಳುವಂತೆ ಹಾಕುತ್ತಿದ್ದ ಕ್ರಿಸ್ತನ ಹಾಡುಗಳು. ಇತ್ತ ನಮಗಷ್ಟೇ ಕೇಳುವಂತೆ ಅಮ್ಮ ಹಚ್ಚುತ್ತಿದ್ದ ಧಾರವಾಡ ಆಕಾಶವಾಣಿಯ ಭಕ್ತಿ ಸಂಗೀತ ಹಿನ್ನೆಲೆಯಲ್ಲಿ ಕೇಳುತ್ತ ನಾವು ಮೊಟ್ಟೆ ತರಲು ಹೋಗುತ್ತಿದ್ದುದು ನೆನೆಸಿಕೊಂಡರೆ ಚಲನಚಿತ್ರದ ಒಂದು ತುಣುಕಲ್ಲಿ ನಾವು ಜೀವಿಸುತ್ತಿದ್ದೇವೇನೋ ಅನಿಸುತ್ತದೆ.
ಇಂಥ ಮರೆಯದ ಚಿತ್ರಗಳನ್ನ ಮೊಗೆಮೊಗೆದು ಕೊಟ್ಟ ಆ ಕೋಳಿ ಫಾರ್ಮ್ ಮುಚ್ಚಿ, ಚಾಳ ಒಂದನ್ನು ಕಟ್ಟುತ್ತಾರೆ ಎಂದು ತಿಳಿದಾಗಿನಿಂದ ನನಗೆ ಅತೀ ಹೆಚ್ಚು ಚಿಂತೆ ಆಗಿದ್ದು ಆ ಢಾಳು ಢಾಳು ಕೆಮ್ಮಣ್ಣಿನ ಬಣ್ಣದ ಗೋಡೆ ಮತ್ತು ಆ ಕೋಳಿಗಳ ಬಗ್ಗೆ. ಎಂಥ ಚಂದದ ಬಣ್ಣ, ಗೋಡೆಗೆ ಬಿಸಿಲು ತೆರೆದು ಮೆತ್ತಗೆ ಹರಡಲು ಶುರುವಾದರೆ ಆ ಗೋಡೆ ಮೈಮುರಿದು ಎದ್ದು ಕುಳಿತು ಮೆಲ್ಲಗೆ ಮತ್ತಷ್ಟು ಕೆಂಪಾಗಿ ಮುಗುಳ್ನಗುತ್ತಿದೆಯೇನೋ ಎನಿಸುತ್ತಿದುದು ನನಗೆ ಮಾತ್ರವೇನೋ. ಹಿನ್ನೆಲೆಯಲ್ಲಿ ಆ ಕೋಳಿಗಳ ಕುಚ್ ಕುಚ್ ಮಾತುಗಳು.
ಯಾವ ಕಾಲದಲ್ಲೂ ‘ಕ್ಲೋಸ್ ಫ್ರೆಂಡ್’ ಅನ್ನುವ ಬಾಂಧವ್ಯಕ್ಕೆ ನಾನು ನನ್ನನ್ನು ಒಡ್ಡಿಕೊಂಡಿಲ್ಲವಾದ್ದರಿಂದ ನನಗೆ ಈ ಮಾತಾಡದ ಗೋಡೆ, ಹಕ್ಕಿ, ಹೂವು, ಮನೆ ಮುಂದಿನ ಹುಚ್ಚುನೆಲ್ಲಿಕಾಯಿ ಗಿಡ, ಕರವೀರ, ಮದರಂಗಿ ಗಿಡಗಳು, ಮನೆ ಹಿಂದಿನ ಅಂಟವಾಳಕಾಯಿ ಮರ, ಹೂ ಬಿಟ್ಟಾಗ ಅಲ್ಲಿ ಬರುತ್ತಿದ್ದ ತರಹೇವಾರಿ ಚಿಟ್ಟೆ ಸಂಕುಲವನ್ನೇ ನಾನು ಬಹುಕಾಲ ನನ್ನ ದೋಸ್ತಿ ಅಂದುಕೊಂಡಿದ್ದೆ.
ಯಾರಾದರೂ ‘ನಿನ್ನ ಜೀವದ ಗೆಳತೀ ಯಾರ್ ಅಪ್ಪಿ?’ ಅಂದರೆ ನಾನು ನನ್ನ ಕೆನ್ನೆ ಮೇಲಿರುವ ಪುಟ್ಟ ಮಚ್ಚೆ ತೋರಿಸುತ್ತಿದ್ದೆ. ಉತ್ತರಕರ್ನಾಟಕದಲ್ಲಿ ಮಚ್ಚೆಯನ್ನ ಯಾಕೆ ಗೆಳತೀ ಎಂದು ಕರೆಯುತ್ತಾರೋ ದೇವರೇ ಬಲ್ಲ. ಕೆಲವೊಮ್ಮೆ ಮನುಷ್ಯರ ಹೆಸರು ಹೇಳಲೇಬೇಕಾಗುತ್ತಿತ್ತು. ಆಗ ಇದ್ದಿದ್ದರಲ್ಲೇ ನನಗೆ ಇಷ್ಟವಾಗುವ ಒಂದಷ್ಟು ವಾರಗೆಯ ಹುಡುಗಿಯರ ಹೆಸರು ಹೇಳಿ ಅಲ್ಲಿಂದ ತಪ್ಪಿಸಿಕೊಳ್ಳುತ್ತಿದ್ದೆ.
ಆ ಕೆಮ್ಮಣ್ಣಿನ ಬಣ್ಣದ ಗೋಡೆಗಳು ಒಂದಷ್ಟು ತಿಂಗಳುಗಳಲ್ಲಿ ಬಿಳಿ ಬಣ್ಣದ ಗೋಡೆಯಾಗಿ ಮಾರ್ಪಟ್ಟವು, ಅವಕ್ಕೆ ನೀಲಿ ಬಣ್ಣದ ಬಾಗಿಲು ಒಂಥರಾ ಚಂದ ಕಾಣುತಿತ್ತು. ಅಷ್ಟು ದಿನ ಕೋಳಿ ಮಲದ ವಾಸನೆ ಅವುಗಳ ನಿರಂತರ ಗೌಜಿನಿಂದ ಸದಾ ಬ್ಯುಸಿ ಅನ್ನುವಂತೆ ಭಾಸವಾಗುತ್ತಿದ್ದ ಈ ಜಾಗ, ಈಗ ಬಿಳಿಯುಟ್ಟ ಕಟ್ಟಡರೂಪಿ ಅಹಲ್ಯೆ ರಾಮನನ್ನು ಕಾದಂತೆ ತಾನು ಬಾಡಿಗೆದಾರರನ್ನು ಕಾಯುತ್ತಿತ್ತು.
ನಾನಿದ್ದ ಊರಿನಲ್ಲಿ ಬ್ಯಾಂಕು ಮತ್ತು ಶಾಲೆ, ಸರಕಾರೀ ಕಚೇರಿಗಳಿಗೆ ವರ್ಗವಾಗಿ ಬರುವ ನೌಕರುದಾರರಿಗೆ ಸದಾ ಬಾಡಿಗೆ ಮನೆಯ ಅಗತ್ಯ ಇದ್ದೆ ಇರುತ್ತಿತ್ತು. ಅಂಥಹುದೇ ಒಂದಷ್ಟು ಜನ ಬಾಡಿಗೆ ಕೊಟ್ಟು ಆ ಮನೆಗಳಲ್ಲಿ ಕೋಳಿಗಳ ಬದಲಿಗೆ ವಾಸಿಸಲು ಬಂದರು. ವ್ಯತ್ಯಾಸ ಎಂದರೆ ಕೋಳಿಗಳಿಗೆ ಬಾಡಿಗೆ ಇರಲಿಲ್ಲ, ತಿನ್ನಬೇಕಿತ್ತು ಕೊಬ್ಬಬೇಕಿತ್ತು, ಕೊನೆಯಲ್ಲಿ ಜೀವವನ್ನೇ ಕೊಟ್ಟು ಸೂರಿನ ಋಣ ತೀರಿಸಬೇಕಿತ್ತು. ಆದರೆ ಜನರು ಅಲ್ಲಿ ಬದುಕ ನಡೆಸಲಿದ್ದರು, ಹೊಸ ಜೀವಗಳನ್ನು ಸೃಷ್ಟಿಸಲಿದ್ದರು.
ಆ ಚಾಳಿನ ಕೊನೆಯ ಮನೆಯಲ್ಲಿ ಒಂದು ಹೊಸ ಜೋಡಿ ಬಂದು ಸಂಸಾರ ಶುರು ಮಾಡಿತು. ಗಂಡ ಘಟ್ಟದ ಕೆಳಗಿನವ, ಸರಕಾರಿ ನೌಕರಿಯಲ್ಲಿದ್ದ. ಹೆಂಡತಿ ಆಗಷ್ಟೇ ಡಿಗ್ರಿ ಮುಗಿಸಿದ್ದ ಬಯಲುಸೀಮೆ ಸುಂದರಿ. ಸುಂದರಿ ಅಂದರೆ ಈ ಜಗತ್ತು ಸಿನಿಮಾ ನಟಿಯರ ಹೋಲಿಕೆ ಕೇಳುತ್ತದೆ, ತೆಳ್ಳಗಿನ ಮಾಟ ಸಪೂರ ಸೊಂಟ, ಉಂಹೂ ಆಕೆ ಹಾಗಿರಲಿಲ್ಲ ಎತ್ತರಕ್ಕೆ ಇದ್ದ ಅವಳಿಗೆ ಉದ್ದ ಕೂದಲಿತ್ತು, ಮುಖದ ತುಂಬಾ ಮೊಡವೆಗಳು. ಆದರೆ ಆಕೆಯ ನಗು, ಆಕೆ ನಕ್ಕರೆ ಅದೇನೋ ಚಂದ, ಬೆಳಕು ಚೆಲ್ಲಿದಂತೆ. ಸಿಕ್ಕಾಪಟ್ಟೆ ಚುರುಕು.
ನಾನು ಬೆಳಿಗ್ಗೆ ರಂಗೋಲಿ ಹಾಕುವ ಹೊತ್ತಿಗೆ ಆಕೆಯು ಹೊರಗೆ ಬಂದು ರಂಗೋಲಿ ಹಾಕಲು ಬರುತ್ತಿದ್ದಳು. ರಾಮನ ತೊಟ್ಟಿಲು, ರಥ, ಶಂಖದ ಆರತಿ ಹೊಸ ಹೊಸ ಚಿತ್ತಾರಗಳು ಆಕೆ ಕೈಯ್ಯಲ್ಲಿ ಮೂಡುತ್ತಿದ್ದವು.
ನನಗೆ ಹೊಸ ಪರಿಚಯ, ಮಾತು ಶುರು ಎಂದಿಗೂ ಕಷ್ಟವೆನಿಸಿರಲೇ ಇಲ್ಲ, ಆಕೆ ಹಾಕುತ್ತಿದ್ದ ರಂಗೋಲಿ ನೋಡಿ ಅಕ್ಕ ನನಗೆ ಕಲಸ್ತೀರಿ ಇದನ್ನ ಅಂದಿದ್ದೆ? ಹಾಗೆ ಶುರುವಾದ ನಮ್ಮ ಬಾಂಧವ್ಯ, ಕ್ರೋಷೆ, ಪೇಂಟಿಂಗ್ ಅದು, ಇದು ಅಂತ ಮುಂದುವರಿಯಿತು.
ಆಕೆಯೊಂದಿಗೆ ಪೇಟೆ ತಿರುಗುವುದು, ಊರಿನ ಸುದ್ದಿಗಳನ್ನ ಆಕೆಯಲ್ಲಿ ಹೇಳಿ ಆಕೆಯ ಕಣ್ಣಲ್ಲಿ ಬೆರಗ ಹುಡುಕುವುದು, ಅದು ಕಾಣದೆ ಹೋದಾಗ ಆಕೆಯ ಆ ಮಂದಸ್ಮಿತದಲ್ಲಿ ಮತ್ತೆ ನಾನೇ ಕಳೆದು ಹೋಗಿ, ಯಬ್ಬಾ ಎಷ್ಟು ಚಂದ ನನ್ನಕ್ಕ ಅಂದುಕೊಳ್ಳುವುದು, ಸಾಮಾನ್ಯವಾಗಿ ಹೋಯಿತು.
ಎಷ್ಟೋ ಸಲ ನನಗೆ ಆಕೆ ನನ್ನ ನಿಜವಾದ ಅಕ್ಕನಾಗಬಾರದಿತ್ತೇ? ಕಡೆಗೆ ಕಸಿನ್ ಸಿಸ್ಟರ್ ಆದ್ರೂ ಆಗಬೇಕಿತ್ತು ಅನ್ನಿಸ್ತಿತ್ತು. ಆವರೆಗೆ ಮಾತಾಡದ ಗೋಡೆ, ಗಿಡ, ಕಟ್ಟಿಗೆ ಮಿಲ್ಲಿನ ಬದಿಯಲ್ಲಿ ಪೇರಿಸಿಟ್ಟ ದೊಡ್ಡ ದೊಡ್ಡ ಬೊಡ್ಡೆಗಳ ಹತ್ತಿರವೇ ನನ್ನ ಎಲ್ಲ ಮಾತು ಮೌನದಲ್ಲೇ ಮುಗಿದು ಹೋಗುತ್ತಿತ್ತು, ಈ ಅಕ್ಕ ಸಿಕ್ಕಿದ್ದೇ ನನಗೆ ಅದ್ಯಾವುದೋ ನಿಧಿ ಸಿಕ್ಕಂತೆ ಆಗಿತ್ತು. ಆದರೆ ಸಮಸ್ಯೆ ಆಗುತ್ತಿದ್ದುದು ಆಕೆಯ ಗಂಡ ಬಂದಾಗ. ಆಗ ಮಾತ್ರ ಆಕೆ ‘ನೀ ಈಗ ಮನಿಗ್ ಹೋಗ್ ಅಪ್ಪಿ ಆಮ್ಯಾಗ್ ಬಾ’ ಅನ್ನುತ್ತಿದ್ದಳು. ನನಗೆ ಅವನ ಮೇಲೆ ಎಲ್ಲಿಲ್ಲದ ಸಿಟ್ಟು ಬರುತ್ತಿತ್ತು. ಇವ ಯಾಕೆ ಬರ್ತಾನೆ ಮನೆಗೆ ಅನಿಸುತ್ತಿತ್ತು.
ಅಂಥಹುದೇ ಒಂದಷ್ಟು ಜನ ಬಾಡಿಗೆ ಕೊಟ್ಟು ಆ ಮನೆಗಳಲ್ಲಿ ಕೋಳಿಗಳ ಬದಲಿಗೆ ವಾಸಿಸಲು ಬಂದರು. ವ್ಯತ್ಯಾಸ ಎಂದರೆ ಕೋಳಿಗಳಿಗೆ ಬಾಡಿಗೆ ಇರಲಿಲ್ಲ, ತಿನ್ನಬೇಕಿತ್ತು ಕೊಬ್ಬಬೇಕಿತ್ತು, ಕೊನೆಯಲ್ಲಿ ಜೀವವನ್ನೇ ಕೊಟ್ಟು ಸೂರಿನ ಋಣ ತೀರಿಸಬೇಕಿತ್ತು. ಆದರೆ ಜನರು ಅಲ್ಲಿ ಬದುಕ ನಡೆಸಲಿದ್ದರು, ಹೊಸ ಜೀವಗಳನ್ನು ಸೃಷ್ಟಿಸಲಿದ್ದರು.
ರಜಾದಿನಗಳ ಮಧ್ಯಾಹ್ನಗಳಲ್ಲಿ ನಾನು ಆಕೆ ಮನೆಯ ಆ ನೀಲಿ ಬಾಗಿಲನ್ನ ಧಡ ಧಡ ಬಡಿಯುತ್ತ ನಿಂತು ಬಿಡುತ್ತಿದ್ದೆ, ಮೊದಮೊದಲು, ಬಾಗಿಲು ತೆಗೆದು ಆಮೇಲ್ ಬಾ ಮಾಮ ಮಕ್ಕೊಂಡಾರು ಅನ್ನುತ್ತಿದ್ದ ಅಕ್ಕ, ಆಮೇಲೆ ಒಳಗಿನಿಂದಲೇ ಕೂಗಲು ಶುರು ಮಾಡಿದಳು. ಆನಂತರ ಉತ್ತರಿಸುವ ಗೋಜಿಗೂ ಹೋಗಲಿಲ್ಲ. ಆಗೆಲ್ಲ ಸಿಕ್ಕಾಪಟ್ಟೆ ಅವಮಾನವಾಗಿ ಕಣ್ಣು ತುಂಬಿಕೊಂಡು ಮನೆಗೆ ಹೋಗುತ್ತಿದ್ದೆ. ನನ್ನ ಅಳುವಿಗೆ ಕಾರಣ ಕೇಳುವಷ್ಟು ವ್ಯವಧಾನ ಯಾರಿಗೂ ಇರಲಿಲ್ಲ. ನನ್ನ ದೋಸ್ತರಾಗಿದ್ದ ಮರಗಳು ಕೂಡ ನನ್ನ ಹತ್ತಿರ ಮಾತು ಬಿಟ್ಟಂತೆ ನನಗೆ ಭಾಸವಾಗುತ್ತಿತ್ತು, ಯಾಕೆಂದರೆ ಅಕ್ಕ ಸಿಕ್ಕಿದ್ದೇ ಸಿಕ್ಕಿದ್ದು… ಮೌನವಾಗಿ ಮಾತನಾಡುವ ಸ್ನೇಹಿತರಿಗಿಂತ ಮಾತನಾಡುವ ಜೀವಕ್ಕೆ ನಾನು ಆದ್ಯತೆ ಕೊಟ್ಟಿದ್ದು ಅವಕ್ಕೂ ಸಿಟ್ಟು ಬಂದಿತ್ತೇನೋ. ನಾನು ಪದೇ ಪದೇ ಹೋಗಿ ಆಕೆ ಮನೆ ಬಾಗಿಲು ಬಡಿಯುವುದು ಆಕೆ ಉದಾಸೀನ ಮಾಡುವುದು ಹಾಗೇ ಮುಂದುವರಿಯಿತು.
ಆಗ ಹೇಗೆ ನಾ ಈ ಹತಾಶೆ ಅವಮಾನದಿಂದ ಹೊರ ಬಂದೆನೋ ಗೊತ್ತಿಲ್ಲ. ಈಗ ನಾನು ಒಬ್ಬರ ಹೆಂಡತಿಯಾಗಿ, ಎರಡು ಮಕ್ಕಳ ತಾಯಿಯಾಗಿ ಯೋಚಿಸಿದರೆ ಆ ಅಕ್ಕನ ಕಷ್ಟಗಳು ಏನಿದ್ದಿರಬಹುದು? ಹೊಸದಾಗಿ ಮದುವೆಯಾದ ಆಕೆಯ ಆದ್ಯತೆಗಳು ಬೇರಿದ್ದವು, ನಾನು ವೃಥಾ ಆಕೆಗೆ ತೊಂದರೆ ಮಾಡಿದೆ ಅನಿಸುತ್ತದೆ.
ಆ ಹದಿಮೂರು ವರ್ಷದ ನನಗೆ ಈ ಘಟನೆ ಹೇಳಿಕೊಟ್ಟ ಪಾಠ ಅದೆಷ್ಟು ಅರ್ಥವಾಯಿತೋ, ಏನು ಅರ್ಥಮಾಡಿಕೊಂಡೆನೋ! ಆವತ್ತಿನಿಂದ ನಾನು ಯಾರಿಗೂ emotionally ಆನಿಕೊಳ್ಳುವುದು ಕಡಿಮೆ ಮಾಡಿಬಿಟ್ಟೆ. ಆದರೂ ನಾನೂ ಕೂಡ ಸಾಮಾನ್ಯಳೇ ಆ ಅಕ್ಕನ ಜಾಗೆಯಲ್ಲಿ ಅದೆಷ್ಟು ಮಂದಿ ಬಂದರು, ಹೋದರು ಯಾರೂ ಗಟ್ಟಿಯಾಗಿ ನಿಲ್ಲಲಿಲ್ಲ. ನಿಲ್ಲಬೇಕೆನ್ನುವ ನೀರಿಕ್ಷೆಯೂ ಇರಲಿಲ್ಲ. ಜನರನಡುವಿದ್ದಾಗ ಖುಷಿಯಾಗಿ ಇರುವಂತೆಯೇ, ನಾನು ಒಬ್ಬಳೇ ಇರುವಾಗ ಇನ್ನೂ ಆರಾಮ್ ಇರುತ್ತಿದ್ದೆ. ಈ ಮನಸ್ಥಿತಿಗೆ ನಾನು ಬರುವ ತನಕ, ಹಲವು ಬಾರಿ ನಾನು ಜನರನ್ನ ತೀರಾ ಮನಸಿಗೆ ಹಚ್ಚಿಕೊಂಡು, ಮನದೊಳಗೆ ಬಿಟ್ಟುಕೊಂಡು ಅವರಲ್ಲಿ ಬೇಕಾಬಿಟ್ಟಿ ಕಸಮಾಡಿ ಹೋಗಿ ಅದನ್ನ ನಾನು ಗುಡಿಸಿ ಸ್ವಚ್ಛ ಮಾಡುವ ಕರ್ಮ ಅನುಭವಿಸಿದ್ದೂ ಇದೆ.
ಈ ಸೋಶಿಯಲ್ ಮೀಡಿಯಾ ಗುಂಗಿಗೆ ಬಿದ್ದ ದಿನದಿಂದ, ಎಲ್ಲಿಂದ ಎಲ್ಲಿಗಾದರೂ ಕೈಬೆರಳು ಕೀಲಿಮಣೆಗಳಿಂದ ತಲುಪಬಹುದಾದ ದಿನಮಾನದಲ್ಲಿ, ಅಂಥಹ ಆರ್ದ್ರತೆ, ಅಂತಃಕರಣ ತೋರುವ ಹಲವು ಮನಸುಗಳು ಸಿಕ್ಕವೇನೋ ನಿಜ, ಆದರೆ ಅಲ್ಲಿಯೂ ಏನೋ ಒಂದು ಅಪಸವ್ಯ ಕಾಣುತ್ತಲೇ ಇರುತ್ತದೆ.
ಕಣ್ಣು ಮುಚ್ಚಿ ಆನಿಕೊಂಡು ಒಂದು ನಿದ್ದೆ ಮಾಡಿಬಿಡಲೇ? ಎಂದು ಎಣಿಸುವಾಗ ಪಕ್ಕದವರು ಎದ್ದು ನಡೆದು ಬಿಡುತ್ತಾರೆ. ಮತ್ತೆ ಹುಡುಕಾಟ ಶುರು.
ಅಷ್ಟಕ್ಕೂ ನಮಗೆ, ನಮ್ಮ ಮನಸಿಗೆ ಒರಗಿಕೊಳ್ಳಲು ಸದಾ ಒಬ್ಬರಲ್ಲ ಒಬ್ಬರು ಬೇಕೇ ಬೇಕು ಯಾಕೆ? ಬಸ್ಸಿನಲ್ಲಿ ಕುಳಿತಾಗ ಪಕ್ಕದವರು ನಿದ್ದೆಗೆ ಜಾರಿ ಸ್ವಲ್ಪ ಹೊತ್ತಿಗೆ ನಿಮ್ಮ ಭುಜಕ್ಕೆ ಒರಗಿಕೊಳ್ತಾರೆ, ಪರಿಚಿತರಲ್ಲದಿದ್ದರೆ ತಕ್ಷಣ ಕೊಡವಿಕೊಳ್ಳುವ ನಾವು ನಮ್ಮ ಗುರುತಿನವರಾದರೆ ಇಷ್ಟವಿರದಿದ್ದರೂ, ಈ ಆನಿಕೊಳ್ಳುವುದನ್ನ, ಒರಗಿಕೊಳ್ಳುವುದನ್ನ ಸಹಿಸಿಕೊಳ್ಳಬೇಕಾಗುತ್ತದೆ.
ಆಗೆಲ್ಲ ನನಗೆ ಮೂಡಿದ ಪ್ರಶ್ನೆ ಈ ಬರಹಕ್ಕೆ ಕಾರಣ. ನಮಗೆ ಎಮೋಷನಲ್ ಡಿಪೆಂಡೆನ್ಸಿ ಯಾಕೆ ಹುಟ್ಟಿಕೊಳ್ಳುತ್ತದೆ? ಸ್ನೇಹಿತರು /ಪ್ರೇಮಿ/ ಸಂಗಾತಿ/ ಕುಟುಂಬದವರು ನಮ್ಮನ್ನು ಬಿಟ್ಟು ಹೋದರೆ, ನಮ್ಮ ಸಾಂಗತ್ಯ ಬಿಟ್ಟು ಎದ್ದು ನಡೆದರೆ, ಎನ್ನುವ ಭಯದಲ್ಲೇ ನಾವು ಪೆಕ್ಕರು ನಗು ನಕ್ಕು, ಸರಿ ಇಲ್ಲದಾಗ್ಯೂ ಎಲ್ಲವು ಸರಿ ಇದೆ ಎಂದು ನಂಬಿ, ಮುಖವಾಡ ಧರಿಸಿ ಒಳಗೊಳಗೇ ಒರಗಿಕೊಳ್ಳಬಲ್ಲ ಇನ್ನೊಂದು ವ್ಯಕ್ತಿಯನ್ನ ಹುಡುಕುತ್ತಿರುತ್ತದೆ. ನಮಗೆ ನೋವಾದರೂ ಸರಿ ಆದರೂ ಮಂದಿಯನ್ನು ಹಚ್ಚಿಕೊಳ್ಳುವ ಆ ತುರ್ತು ಯಾಕೆ ಹುಟ್ಟಿಕೊಳ್ಳುತ್ತದೆ?
ಮನೋಶಾಸ್ತ್ರಜ್ಞರು ಇದನ್ನು ಒಂದು ಕಾಯಿಲೆ ಎಂತಲೇ ಗುರುತಿಸುತ್ತಾರೆ, ಅತಿಯಾಗಿ ಯಾರನ್ನಾದರೂ ಹಚ್ಚಿಕೊಂಡು ಜೀವನದ ಪ್ರತಿ ನಿರ್ಧಾರಕ್ಕೂ ಎದುರಿನವರ ಒಪ್ಪಿಗೆ validation ಬಯಸುವ ಮನಸ್ಥಿತಿ ಆತ್ಮವಿಶ್ವಾಸದ ಕೊರತೆ ಇದ್ದಾಗ ನಮ್ಮ ಜೀವನಕ್ರಮ, ಬದುಕಿನ ಬಗೆಗೆ ನಮಗೆ ಮೆಚ್ಚಿಗೆ ಇಲ್ಲದಾಗ ಹುಟ್ಟಿಕೊಳ್ಳುವಂಥ ಸ್ಥಿತಿ.
ನಾವು ಆನಿಕೊಳ್ಳುವ, ಒರಗಿಕೊಳ್ಳುವ ವ್ಯಕ್ತಿಗಳು ಒಳ್ಳೆ ಮನಸಿನವರಾಗಿದ್ದರೆ ಸರಿ, ಆದರೆ ಎಲ್ಲಾದರೂ ಮೋಸ ವಂಚನೆ ಮಾಡುವ ಮಂದಿ ಗಂಟು ಬಿದ್ದರೆ ಆಗುವ ಪರಿಣಾಮಗಳನ್ನು ನಾವು ನಿತ್ಯವೂ ವಾರ್ತೆ, ಸೋಶಿಯಲ್ ಮೀಡಿಯಾ ಪೋಸ್ಟ್‌ಗಳಲ್ಲಿ ಓದುತ್ತೇವೆ/ನೋಡುತ್ತೇವೆ.
ನಮ್ಮ ಸಹವಾಸ ಸಂಗತಿಗಳು ಸರಳವಾಗಿದ್ದಷ್ಟು ನಮ್ಮ ವ್ಯಕ್ತಿತ್ವ ಬೆಳೆಯುತ್ತದೆ ಎಂಬುದನ್ನ ದಾಸರು ಶತಮಾನಗಳ ಹಿಂದೆ ‘ಸಜ್ಜನರ ಸಂಗ ಎಂದಿಗಾಗುದೋ’ ಎಂದು ಹೇಳಿದ್ದನ್ನು ಇಲ್ಲಿ ನೆನೆಯಬಹುದು. ನಮ್ಮ ಸಾಂಗತ್ಯ ನಮಗೆ ಹಿತವಾಗಲು ಹವ್ಯಾಸಗಳು ತುಂಬಾ ಸಹಾಯ ಮಾಡುತ್ತವೆ. ಜೊತೆಗೆ ಒಂದುರೀತಿಯ ಅದಮ್ಯ ಆತ್ಮವಿಶ್ವಾಸ ಕೂಡ ತುಂಬುತ್ತದೆ.
ಹೊರಗಿನ ಸಖ್ಯ ಸಾಂಗತ್ಯಗಳು ಎಷ್ಟು ಮುಖ್ಯವೋ ಅಷ್ಟೇ ನಮ್ಮೊಂದಿಗಿನ ನಮ್ಮ ಸ್ನೇಹ ಕೂಡ. ಸಮಾಜಜೀವಿ ಎಂಬ ಪಟ್ಟ ಹೊತ್ತ ನಾವು ಈ ಸಮಾಜದಲ್ಲಿ ಸಾಮರಸ್ಯದಿಂದ ಇರಲು ಒಂದಷ್ಟು ಗೆಳೆತನಗಳನ್ನು, ಬಾಂಧವ್ಯಗಳನ್ನು, ಸಂಬಂಧದ ಜರೂರತ್ತುಗಳನ್ನು ಇಷ್ಟವೋ ಕಷ್ಟವೋ ಬೆಳೆಸಿಕೊಳ್ಳಲೇ ಬೇಕಾಗುತ್ತದೆ. ಅವುಗಳ ಕುರಿತಾದ ಕೆಲವು ಜವಾಬ್ದಾರಿ ಪೂರೈಸಲೇಬೇಕಾಗುತ್ತದೆ.
ಕೀಳರಿಮೆ, ಆತ್ಮವಿಶ್ವಾಸದ ಕೊರತೆ ಇದ್ದಾಗ, ನಾವು ರೂಢಿಸಿಕೊಂಡ ಮೌಲ್ಯಗಳಿಗೆ ಧಕ್ಕೆ ಆಗದಂತೆ ಬದುಕುವುದು, ದಿನವೂ ಹೊಸದೇನೂ ಸೃಷ್ಠಿಯಾಗುವ ಈ ಮಾಯಾಲೋಕದಲ್ಲಿ ಕಷ್ಟ ಸಾಧ್ಯವೇ! ದಿನ ದಿನ ಹೊಸ ಹೊಸ ಆಶ್ವಾಸನೆ, ಪ್ರೀತಿಯ ಆಮಿಷ, ಅಕ್ಕರೆಯ ಆಣೆ ಪ್ರಮಾಣಗಳು ಯಥೇಚ್ಛವಾಗಿ ಮನಸಿಗೆ ದೊರಕುವಾಗ, ಮನಸು ದೀರ್ಘ ಕಾಲದ ಮೌಲ್ಯಕ್ಕಿಂತ, ಕ್ಷಣಿಕ ಸುಖವೇ ಬೇಕೆಂದು ಹಂಬಲಿಸುವುದರಲ್ಲಿ ತಪ್ಪಿಲ್ಲ. ಆದರೆ ಅದನ್ನಷ್ಟೇ ಬಯಸಿ ಕೈಯ್ಯಲ್ಲಿರುವ ನೆಮ್ಮದಿಯನ್ನು ಕಳೆದುಕೊಂಡು ಮುಂದೆ ಪರಿತಪಿಸುವುದು ಎಷ್ಟು ಸರಿ?
ಕೆಲವು ಸಂಬಂಧಗಳು ಹಚ್ಚೆಯಂತೆ, ಒಮ್ಮೆ ಹಚ್ಚಿಕೊಂಡರೆ ಇಷ್ಟವೋ ಕಷ್ಟವೋ ಜೊತೆಗಿದ್ದು ಜೀವನ ಪೂರ್ತಿ ನಮ್ಮನ್ನು ಕಾಯುತ್ತವೆ. ಮತ್ತೆ ಹಲವು ಬಾಂಧವ್ಯಗಳು ಮದರಂಗಿಯಂತೆ ಒಂದಷ್ಟು ದಿನ ರಂಗು ರಂಗು ಮತ್ತೆ ಬಣ್ಣ ಕಳೆಯುತ್ತಾ, ಕಳೆಗುಂದುತ್ತ ಕಲೆಗಳಂತಾಗಿ ಇದ್ದರೂ ಇಲ್ಲದಂತೆ ಮಾಯವೇ ಆಗಿಬಿಡುತ್ತಾರೆ. ಮತ್ತೆ ಬಹಳಷ್ಟು ಜನ ಈ ತಾತ್ಕಾಲಿಕ ಟ್ಯಾಟ್ಯೂ ಗಳಂತೆ ಇವತ್ತಷ್ಟೇ ಚಂದ, ನಾಳೆ ಅನ್ನುವ ಹೊತ್ತಿಗೆ ಉದುರಿ ಹೋಗುತ್ತಾರೆ, ಯೋಚಿಸಬೇಕಾದವರು ನಾವು. ನಾವು ಹಚ್ಚಿಕೊಳ್ಳುತ್ತಿರುವುದು ಯಾರನ್ನ? ಹಚ್ಚಿಕೊಂಡು ಅವರ ಹುಚ್ಚು ತಲೆಗೇರುವ ಮುನ್ನ ಈ ವಿಷಯದ ಬಗ್ಗೆ ಆಗೊಮ್ಮೆ ಈಗೊಮ್ಮೆ ಯೋಚಿಸಿದರೂ, ನಮ್ಮ ಮಾನಸಿಕ ಆರೋಗ್ಯ ಚನ್ನಾಗಿರುತ್ತದೆ ಅಲ್ಲವೇ?
ಅಮಿತಾ ರವಿಕಿರಣ್ ಮೂಲತಃ ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನವರು. ಪ್ರಸ್ತುತ ಉತ್ತರ ಐರ್ಲೆಂಡ್‌ನ ರಾಜಧಾನಿ ಬೆಲ್ಫಾಸ್ಟ್‌ನಲ್ಲಿ ವಾಸಿಸುತ್ತಿದ್ದಾರೆ. ಗಾಯಕಿಯಾಗಿರುವ ಅಮಿತಾ ಅವರಿಗೆ ಜನಪದ, ಭಾವಗೀತೆ, ತತ್ವಪದಗಳನ್ನು ಹಾಡುವುದು ಖುಷಿ ಎನ್ನುತ್ತಾರೆ. ಫೋಟೋಗ್ರಫಿ, ಬರವಣಿಗೆ ಇವರ ಮೆಚ್ಚಿನ ಹವ್ಯಾಸಗಳು.
ದೊಡ್ಡಕ್ಕ, ನೀವು ಭಾವನಾತ್ಮಕ ಜೀವಿಯಾಗಿರೊದ್ರಿಂದಲೇ ಇಂತಹ ಸಣ್ಣ ಘಟನೆಗಳನ್ನು ನೆನಪಿಟ್ಟುಕೊಂಡು ಇಷ್ಟು ಚಂದದ ಬರಹ ಬರೆಯಲು ಸಾಧ್ಯವಾಗಿದ್ದು. ನನಗೂ ಬಹಳ ಬಾರಿ ನಿಮಗನಿಸಿದ್ದೇ ನನಗನಿಸಿದ್ದೇ ಇದೆ.
ನನಗೂ ಏಕಾಂಗಿಯಾಗಿರೋದು ಎಷ್ಟು ಇಷ್ಡವೋ, ಅಷ್ಟೇ ಸಮಾನಮನಸ್ಕರೊಂದಿಗೆ ಕಾಲ ಕಳೆಯುವುದು ಕೂಡ. ಹಾಗಂತ ಆತ್ಮೀಯರಾದವರೆಲ್ಲ ನಮ್ಮ ಮನಸ್ಸಿಗೆ ಇಷ್ಟವಾದವರೇ ಎಂದು ಹೇಳಕ್ಕಾಗಲ್ಲ. ಅವರೆಲ್ಲ ಎಷ್ಟು ಬೇಗ ಇಷ್ಟವಾದರೋ ಅಷ್ಟೇ ಬೇಗ ನಮ್ಮ ಬದುಕಿನ ಪುಟಗಳಿಂದ ಮರೆಯಾಗಿರುವುದು ಅಷ್ಟೇ ಸತ್ಯ. ಮರೆಯಾಗಿರುವುದಕ್ಕೆ ಕಾರಣ ಹುಡುಕುವುದಕ್ಕಿಂತ ಅವರ ಇಷ್ಟಗಳು ಏನಿತ್ತೋ, ನಾವು ನಮ್ಮ ಭಾವಗಳೊಂದಿಗೆ ಬಂದಿಸಿ ಉಸಿರುಗಟ್ಟಿಸಿದ್ದೇವೆನೋ ಅನಿಸಿದ್ದಿದೆ. ಕೆಲವರು ದೂರ ಸರಿದಿದ್ದೇ ಒಳ್ಳೆಯದಾಯಿತು ಎಂದನಿಸಿದ್ದು ಸತ್ಯ.
ಒಟ್ಟಲ್ಲಿ ಹೊಸ ಜನ, ಹೊಸ ಸ್ನೇಹಿತರೂ ಬರ್ತಾ ಹೋಗ್ತಾ ಇರ್ತಾರೆ. ಏಕೆಂದರೆ ಮನುಷ್ಯ ಸಂಘ ಜೀವಿ.
ನಿಮ್ಮ ಬರಹ ಓದುತ್ತಾ ಹೋಗುತ್ತಿದ್ದರೆ, ನನಗಾವಾಗ ಅನಿಸಿದ್ದನ್ನು ಅಕ್ಷರ ರೂಪದಲ್ಲಿ ಕಟ್ಡಿಕೊಟ್ಟಿದ್ದಿರಾ ಎಂದನಿಸಿತ್ತು. ಬಹುಷಃ ಇದು ಎಲ್ಲರಿಗೂ ಅನಿಸಿರಬಹುದು.
ಹೀಗೆ ಬರಿತಿರಿ ದೊಡ್ಡಕ್ಕ… ನೀವು ಹೀಗೆ ಬರೀತಾ ಹಾಡುತ್ತಿದ್ದರೆ ನಮ್ಮಿಬ್ಬರ ಸಂಬಂಧ ಗಟ್ಟಿಯಾಗುತ್ತಾ ಹೋಗುತ್ತೆ❤️
ಸಂಬಂಧಗಳ ವ್ಯಾಖ್ಯಾನವೇ ಪೂರ್ತಿ ಬದಲಾಗಿರುವ ಈ ಕಾಲಘಟ್ಟದಲ್ಲಿ ಇದು ಬಹಳ ಸಮಯೋಚಿತ ಬರಹ ಅನಿಸ್ತು.
ಇನ್ನು ಆಪ್ತ ಗೆಳತಿ ಯಾರು ಎಂಬ ಪ್ರಶ್ನೆ ಕೇಳಿದರೆ ಈ ಸೋಷಿಯಲ್ ಮೀಡಿಯಾ ಅದರ ಪರಿಕಲ್ಪನೆಯನ್ನು ಕೂಡ ಬದಲು ಮಾಡಿದೆಯಲ್ಲವಾ ಎಂಬುದು ಮತ್ತೆ ಮತ್ತೆ ಕಾಡುವ ಪ್ರಶ್ನೆ.
Waw…. ಲಾಸ್ಟ್ ಪ್ಯಾರಾ ತುಂಬಾ ಇಷ್ಟ ಆಯಿತು. ಬರವಣಿಗೆ ಮುಂದುವರೆಸಿ ಮೇಡಂ.
ಕಥೆಯಂತೆ ಆರಂಭವಾಗುವ ಲೇಖನ, ಮನಃಶಾಸ್ತ್ರದ ಆಳಕ್ಕಿಳಿದು ವಿಚಾರ ಮಂಥಿಸಿದೆ. ಕೋಳಿಯ ಗೂಡು, ಚಾಳಿನ ಪ್ರತಿಮೆಗಳು ಲೇಖನಕ್ಕೆ ಸುಂದರ ಮೆರಗು ನೀಡಿವೆ.
ಅದೆಷ್ಟೋ ವಿಚಾರಗಳು ನನ್ನ ಅನುಭವವನ್ನೇ ಲೇಖಕಿ ಬರೆದಿದ್ದಾರೆ ಅನಿಸೋ ಮಟ್ಟಿಗೆ ಬರಹ ಆಪ್ತವಾಗಿದೆ.
“ಜನರನಡುವಿದ್ದಾಗ ಖುಷಿಯಾಗಿ ಇರುವಂತೆಯೇ, ನಾನು ಒಬ್ಬಳೇ ಇರುವಾಗ ಇನ್ನೂ ಆರಾಮ್ ಇರುತ್ತಿದ್ದೆ”
ಈ ಸಾಲುಗಳು ಬಹಳಾ ಇಷ್ಟ ಆಯ್ತು. ನಾನು ಇವತ್ತಿಗೂ ಹೀಗೆ ಇರೋದು. ಎಲ್ಲರ ಜೊತೆ ನಗ್ತಾ ಮಾತನಾಡಿದ್ರೂ ಕುಟುಂಬದವರನ್ನ ಹೊರೆತು ಯಾರನ್ನು ಹತ್ರ ತಂದುಕೊಳ್ಳೋದಿಲ್ಲ.
ಹತ್ತಿರ ಆಗಿ “ಅಯ್ಯೋ ಇವರು ಹೀಗಾ” ಅನ್ನಿಸೋ ಹೊತ್ತಿಗೆಲ್ಲಾ ಹೃದಯದಲ್ಲೊಂದು ಆಳವಾದ ಗಾಯ ಮಾಡೇ ಬಿಟ್ಟಿರ್ತಾರೆ.
ಅದಕ್ಕಿಂತ ಹಾಡು, ಓದು, ಬರಹ, ನಿದ್ದೆ ಇವುಗಳಿಗೆ ಅನಿಕೊಂಡರೆ ಆರೋಗ್ಯವಾದರೂ ನೆಟ್ಟಗಿರುತ್ತೆ😊😊
ಮನಮುಟ್ಟುವ ಬರಹ. ಎಷ್ಟೋ ಸಲ ಈ ಜಗತ್ತಿಗೆ, ಹಲವರಿಗೆ ನಾವೂ ಕೋಳಿಗಳೇ ಅನ್ನಿಸುತ್ತದೆಯೋ ಏನೋ. ನಾವು ಒರಗುವುದು ಅಥವಾ ನಮಗೆ ಒರಗಿಕೊಳ್ಳಲು ಬಿಡುವುದು ನಮ್ಮ ಮನಸ್ಸಿಗೆ ಹತ್ತಿರ “ಅಂದುಕೊಂಡವರ”ನ್ನೇ. ಉತ್ತಮ ಮನಶ್ಶಾಸ್ತ್ರೀಯ ಅನಾಲಿಸಿಸ್ಸು.
ಸಂಬಂಧಗಳ ಮಹತ್ವ ಚೆನ್ನಾಗಿ ತಿಳಿಸಿದ್ದಿರಿ.ಭಾವನೆಗಳನ್ನು ಹಂಚಿಕೊಳ್ಳಲು ಆಪ್ತರು ಸಿಕ್ಕಾಗ ಆಗುವ ಖುಷಿಯೇ ಬೇರೆ.ಸಂಬಂಧಗಳನ್ನು ಜೀವನ ಪೂರ್ತಿ ಜೋಪಾನವಾಗಿ ಕಾಯ್ದುಕೊಂಡು ಹೋಗುವ ಕಲೆ ನಮ್ಮದಾಗಬೇಕು. ನಮ್ಮ ಸಾಂಗತ್ತ್ಯ ನಮಗೆ ಹಿತವಾಗಲು ಹವ್ಯಾಸಗಳು ತುಂಬಾ ಸಹಾಯ ಮಾಡುತ್ತವೆ, ಜೊತೆಗೆ ಒಂದು ರೀತಿಯ ಅದಮ್ಯ ಆತ್ಮ ವಿಶ್ವಾಸ ಕೂಡ ತುಂಬುತ್ತವೆ ಎನ್ನುವ ನಿಮ್ಮ ಮಾತು ತುಂಬ ಇಷ್ಟವಾಯಿತು. 🙏🙏