ಸತ್ತ ಬದುಕು

ಜೀವನ
ಅನುಭವಿಸಿದ
ಮೇಲೆ
ಅನ್ನಿಸಿತು.
ಇನ್ನೂ ಓದಬೇಕಾಗಿತ್ತು
ಓದಲಿಲ್ಲ ನಾ.
ಬರೆಯಬೇಕಿತ್ತು ನಾನು
ಬರೆಯಲಿಲ್ಲ.
ದೇಶ ಸುತ್ತಬೇಕಿತ್ತು
ಕಾಸಿನ ಮೋಹ ಬಿಡಲಿಲ್ಲ.
ಮಸ್ತಕ ತುಂಬಿಸಬೇಕಿತ್ತು
ಮದ ಬಿಡಲಿಲ್ಲ.
ಉಪಕರಿಸಬೇಕಿತ್ತು
ದ್ರೋಹ ಮುಗಿಯಲಿಲ್ಲ.
ಸ್ತ್ರೀಯ ಪೂಜಿಸಬೇಕಿತ್ತು
ಕಾರ್ಕೋಟ ಕಾಮ
ವಿರಮಿಸಲಿಲ್ಲ.
ಬದುಕಬೇಕಿತ್ತು ಆದರೆ
ಬದುಕಲಿಲ್ಲ ನಾನು.
ಬದುಕಿರುವೆ
ಸತ್ತಂತೆ.
ಸತ್ತಿರುವೆ
ಬದುಕಿದಂತೆ.
ಬುದ್ಧನಾಗಲಿಲ್ಲ
ಮನದೊಳಗಿನ
ಬುದ್ಧಿ ಹೋಗಲಿಲ್ಲ.
ಅಂಗುಲಿಮಾಲನಾಗಿದ್ದೆ
ಅಹಂ ಕಳೆಯಲೆ ಇಲ್ಲ.
ತೊಳೆಯಲು ನೋಡಿದೆ
ಕೈಗಂಟಿದ ರಕ್ತ
ತೆಳುವಾಗಲಿಲ್ಲ.
ನಾನು ಅವನಾಗಲಿಲ್ಲ,
ಇವನಾಗಲಿಲ್ಲ.
ಕನಿಷ್ಟ ಮನುಜನಾಗಲಿಲ್ಲ.
ಬದುಕಿದ್ದೂ
ಸತ್ತಿರುವೆ.
ಸತ್ತಂತೆಯೆ
ಬದುಕುತ್ತಿರುವೆ.
ನಡೆಯುತ್ತಿರುವೆ
ಸಾವಕಾಶ
ಸತ್ತ ಬದುಕನು
ಹೊತ್ತು.
ಅವಕಾಶ ಇಲ್ಲದ
ಮಸಣದ ಕಡೆ.

ಜ್ಯೋತಿ ಕುಮಾರ್ ಎಂ ಮೂಲತಃ ದಾವಣಗೆರೆ ತಾಲ್ಲೂಕು ಹಾಗೂ ಜಿಲ್ಲೆಯ ಮುದಹದಡಿ ಗ್ರಾಮದವರು.
ವೃತ್ತಿಯಲ್ಲಿ ಹೈಸ್ಕೂಲ್ ಗಣಿತ ಮೇಷ್ಟರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇವರ ಬರಹಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ