ಮುರುಳಿಯ ಹೆಸರು ಹೇಳುತ್ತಲೇ ಮೆತ್ತಗಾಗಿದ್ದ ಅಮೀನಾ ತನ್ನ ಕತೆಯನ್ನು ಎಲ್ಲಿಂದ ಆರಂಭಿಸಬೇಕೆಂದು ಯೋಚಿಸಲಾರಂಭಿಸಿದಳು ‘ನಂಗೆ ನೆನಪಿರುವಂತೆ ನನ್ನ ಅಪ್ಪ ಲಾಡ್ ಸಾಬ್ ಗುಜುರಿ ಕೆಲಸ ಮಾಡುತ್ತಿದ್ದ, ದುಡಿದದ್ದಕ್ಕಿಂತ ಸೈಕಲ್ ತುಳಿದದ್ದೇ ಹೆಚ್ಚು. ಸೈಕಲ್ಲು ಚಲಿಸಿದರೆ ನಮ್ಮ ಬದುಕೂ ಚಲಿಸುತ್ತಿತ್ತು. ಅಮ್ಮಿ ಮನೇಲಿ ಬೀಡಿಯ ಜೊತೆ ನಮ್ಮ ಬದುಕನ್ನೂ ಕಟ್ಟುತ್ತಿದ್ದಳು, ಕತ್ತರಿಸಿದ ಬೀಡಿಯ ಎಲೆಯೊಳಗಿಟ್ಟ ತಂಬಾಕು ಮೆತ್ತಗಾಗುವವರೆಗೆ ತೀಡಿ ತೀಡಿ ಕಡ್ಡಿಯಾಕಾರಕ್ಕೆ ತಂದು ಅದರ ಸೊಂಟಕ್ಕೆ ಬಣ್ಣದ ದಾರ ಕಟ್ಟಿ ನಂತರ ಬಾಯಿಯಿಂದ ತಂಬಾಕು ಉದುರದಂತೆ ಬಾಯಿಯನ್ನು ಮುಚ್ಚುವುದನ್ನು ನೋಡುವುದೇ ಒಂದು ಚಂದ.”
ಮಹಮದ್ ರಫೀಕ್ ಕೊಟ್ಟೂರು ಬರೆದ ಈ ಭಾನುವಾರದ ಕಥೆ “ಅಮೀನಾ” ನಿಮ್ಮ ಓದಿಗೆ
ಗುರುವಾರ ಹೊಸಪೇಟೆ ಸಂಪೂರ್ಣ ಸ್ತಬ್ಧ ಜವಳಿ ಅಂಗಡಿ, ಬಾಂಡೆ ಅಂಗಡಿ, ತರಕಾರಿ ಮಾರ್ಕೆಟ್ ಎಲ್ಲವೂ ರಜೆ. ಇನ್ನು ರಾತ್ರಿಯೆಂದರೆ ಕೇಳಬೇಕೇ.. ಅಂಗಡಿಗಳ ಮೆಲ್ಭಾಗದಲ್ಲಿಯೇ ಮನೆ ಕಟ್ಟಿಸಿಕೊಂಡಿರುವವರು ಕೆಳಗೆ ಇಳಿದು ಡಾಂಬರ್ ರಸ್ತೆಯನ್ನೇ ಆಟದ ಮೈದಾನವಾಗಿಸಿ ಮಕ್ಕಳು ಆಡುತ್ತಿರುತ್ತಾರೆ, ವಯಸ್ಕರು ರಸ್ತೆಯಲ್ಲಿ ಗುಂಪಾಗಿ, ಜೊತೆಯಾಗಿ ಮಾತನಾಡುತ್ತಾ ವಾಕಿಂಗ್ ಮಾಡುತ್ತಿರುತ್ತಾರೆ. ಕೆಲವರು ಮುಚ್ಚಿದ ಅಂಗಡಿಗಳ ಮುಂದೆ ಕುಳಿತು ಹರಟುತ್ತಿರುತ್ತಾರೆ. ಗೋವಿಂದಪ್ಪ ಜ್ಯೂಯೆಲರ್ಸ್ನ ಪಕ್ಕದ ಖಾಲಿ ಜಾಗದ ಪೂರ್ಣ ಹಿಂಭಾಗದ ತಗಡಿನ ಮನೆಯ ಮುಂಭಾಗದಲ್ಲಿ ಮಾತ್ರ ಯಾರೂ ಇರಲಿಲ್ಲ. ಆದರೂ ಮನೆಯ ಮುಂಭಾಗದ 20 ಅಡಿ ಜಾಗವೆಲ್ಲಾ ಬೆಳಕಾಗುವಂತೆ ದೊಡ್ಡ ಲೈಟನ್ನು ಹಾಕಿದ್ದರು. ತೆರೆದ ಬಾಗಿಲಿನಿಂದ ಗೇಟನ್ನು ನೋಡಬಹುದಿತ್ತು. ರಾತ್ರಿ 10 ಗಂಟೆಗೆ ಗೇಟನ್ನು ತೆರೆದ ಸದ್ದು ನೋಡಿ ಬಾಗಿಲಲ್ಲಿಯೇ ಕುಳಿತಿದ್ದ ಜೀನ್ಸ್ ಪ್ಯಾಂಟ್ ಮೇಲೊಂದು ಖಾದಿ ಟಾಪ್ ಧರಿಸಿ ತಲೆಗೆ ದಾವಣಿ ಹಾಕಿದ್ದ 25 ರ ಆಸು ಪಾಸಿನ ತರುಣಿ ಮನೆಯಿಂದ ಹೊರ ಬಂದು
‘ಯಾರದು….. ಹೇಳದೇ ಕೇಳದೇ ಈ ಹೊತ್ತಿನಲ್ಲಿ ನುಗ್ಗುವುದು..ʼ ಎಂದಳು.
ಅವನು ಕೈ ಮುಗಿದು ಹತ್ತಿರ ಬರುವಂತೆ ಸನ್ನೆ ಮಾಡಿ
“ನಾನೊಬ್ಬ ಪತ್ರಕರ್ತ, ನೀವು ಅಮೀನಾ ತಾನೇ..” ಎಂದನು.
ಅವಳು ಹೌದು ಎನ್ನುವಂತೆ ತಲೆಯಾಡಿಸಿ, “ನನ್ನಿಂದೇನಾಗಬೇಕು..” ಗೇಟ್ ಆಚೆ ನಿಲ್ಲಿಸಿಯೇ ಕೇಳಿದಳು.
“ನಾನು ನಿಮ್ಮ ಧೈರ್ಯ ಸಾಹಸಗಳ ಕತೆಯನ್ನು ಕೇಳಿರುವೆ, ಮುಖತಃ ಒಮ್ಮೆ ಭೇಟಿಯಾಗಬೇಕು ಎಂದು ಬಂದಿದ್ದೇನೆ.. ನಿಮ್ಮಷ್ಟು ಧೈರ್ಯ ನನ್ನಲ್ಲಿಲ್ಲ. ಒಳಗೆ ಬರಬಹುದೇ.. ದಯವಿಟ್ಟು ಇಲ್ಲ ಎನ್ನಬೇಡಿ..”
ಆದಷ್ಟು ಬೇಗ ತನ್ನನ್ನು ಒಳಗೆ ಕರೆದುಬಿಡಿ ಎನ್ನುವಂತೆ ಮತ್ತೊಮ್ಮೆ ಕೈ ಮುಗಿದ. ಅಮೀನಾಳಿಗೆ ಸಾಮಾಜಿಕ ಕಾರ್ಯಕರ್ತೆಯಾಗಿ ಪತ್ರಕರ್ತರನ್ನು ಭೇಟಿಯಾಗುವುದು ಸಾಮಾನ್ಯವಾಗಿತ್ತು. ವಾರದಲ್ಲಿ ಹಲವಾರು ವಿಚಾರಗಳಿಗೆ ಸಂಬಂಧಿಸಿದಂತೆ ಅವರೊಂದಿಗೆ ಒಡನಾಟವಿತ್ತು. ಅವನನ್ನು ನೋಡಿದೊಡನೆ ಈ ಊರಿನವನಲ್ಲ, ವಯಸ್ಸು 35 ರ ಆಸುಪಾಸು ಇರಬಹುದು ಅನಿಸಿ ಮೇಲಿನಿಂದ ಕೆಳಗೆ ನೋಡಿದಳು , ಕೆದರಿದ ಕೂದಲು, ಖಾದಿ ಜುಬ್ಬಾ , ಜೀನ್ಸ್ ಪ್ಯಾಂಟ್ ಕಣ್ಣಿಗೆ ಕನ್ನಡಕ, ಬೆನ್ನಿಗೆ ಹೊಂದಿಕೊಂಡಂತೆ ಲ್ಯಾಪ್ ಟಾಪ್- ಬ್ಯಾಗ್. ಕಣ್ಣುಗಳಲ್ಲಿ ಸ್ವಲ್ಪ ಹೆದರಿಕೆಯಿದ್ದರೂ ಅಗಲ ಕಣ್ಣುಗಳು ಅವಳನ್ನು ಆಕರ್ಷಿಸಿದವು. ಅವನ ಮೇಲೆ ಅದೇ ಕಾರಣಕ್ಕೋ ಏನೋ ನಂಬಿಕೆ ಬಂದು “ಬನ್ನಿ” ಎಂದು ತನ್ನನ್ನು ಹಿಂಬಾಲಿಸುವಂತೆ ಗೇಟ್ ತೆರೆದು ಒಳಗೆ ಹೋದಳು. ಸತೀಶ ಮತ್ತೆ ಗೇಟ್ ಹಾಕಿ ಅವಳನ್ನು ಹಿಂಬಾಲಿಸಿದ.
ಮನೆಯ ಒಳಗಡೆ ಬಂದು ಕಣ್ಣುಗಳಲ್ಲೇ ಮನೆ ಅಳತೆ ಮಾಡಿದ. ತಗಡಿನ ಛಾವಣಿಯ ಮನೆ ಸುತ್ತಲೂ ಗೋಡೆಗಳು, ಒಳಗೆ ಅಡುಗೆ ಮನೆ ಪ್ರತ್ಯೇಕಿಸಲು ಮತ್ತೊಂದು ಗೋಡೆ. ಮುಂಭಾಗದ ಕೋಣೆಯ ಮೂಲೆಯಲ್ಲಿ ಪೇರಿಸಿದ ಎರಡು ಪ್ಲಾಸ್ಟಿಕ್ ಕುರ್ಚಿಗಳನ್ನು ಎತ್ತಿ ತಂದು ಒಂದನ್ನು ಬಿಡಿಸಿ ಕೂರುವಂತೆ ಅವನ ಮುಂದೆ ದಬ್ಬಿದಳು. ಮನೆಯ ಒಳ ಭಾಗವನ್ನು ಇಂಚಿಂಚೂ ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದನು. ಒಂದು ಮೂಲೆಗೆ ಪರದೆ ಅಡ್ಡ ಕಟ್ಟಲಾಗಿತ್ತು. ಪರದೆಯ ಹಿಂಭಾಗದಲ್ಲಿ ಯಾರೋ ಮಲಗಿದ ಮಂಚವೊಂದು ಇಣುಕುತ್ತಿತ್ತು. ಅಮೀನಾ ಕುರ್ಚಿಯ ಮೇಲೆ ಕೂಡುತ್ತಿರುವುದನ್ನು ನೋಡಿ ತಕ್ಷಣವೇ
‘ಪ್ಲೀಸ್ .. ಕುಡಿಯಲು ನೀರು ಕೊಡುವಿರಾ ʼ ಎಂದ.
‘ನಿನ್ನನ್ನು ಒಳಗೆ ಬಿಟ್ಟದ್ದೇ ಹೆಚ್ಚು ಅದರಲ್ಲಿ ಮತ್ತೆ ನೀರು ಬೇರೆ ಕೇಳುತ್ತಿದ್ದೀಯಾʼ ಎನ್ನುವಂತೆ ಅವನೆಡೆ ನೋಡಿ ಅಮೀನಾ ಒಳಗೆ ಹೋಗಿ ತಂಬಿಗೆ ನೀರು ಮತ್ತು ಒಂದು ಲೋಟವನ್ನು ತಂದುಕೊಟ್ಟಳು. ನೀರು ಕುಡಿದವ ಬಾಯಿಯನ್ನು ಒರೆಸಿಕೊಂಡು
“ನನ್ಹೆಸರು ಸತೀಶ್ ಅಂತ ಬೆಂಗಳೂರಿನಿಂದ ಬಂದಿದ್ದೇನೆ. ವೃತ್ತಿಯಲ್ಲಿ ಪತ್ರಕರ್ತ. ಹೊಟ್ಟೆ ಬಟ್ಟೆಗೇನು ಕಡಿಮೆಯಿಲ್ಲ. ಹಾಗೇ ಹಂಪಿ ನೋಡೋಣಾ ಅನಿಸ್ತು ಬಂದೆ. ಸುತ್ತಾಡೋದು ಅಂದ್ರೆ ಪ್ರಾಣ… ವಾರದಿಂದ ಹಂಪಿ ಸುತ್ತುತ್ತಾ ಇದೀನಿ.. ನೋಡಿದಷ್ಟೂ ತೆರೆದುಕೊಳ್ಳುತ್ತೆ ಈ ಹಂಪಿ.. ದೇಶದ ಹಲವಾರು ಸ್ಥಳಗಳಿಗೆ ಭೇಟಿ ನೀಡಿದ್ದೇನೆ, ಈ ಅನುಭವ ವಿಶಿಷ್ಠ.. ಹಾಗೆಂದು ಇದು ಮೊದಲ ಸಲವೇನಲ್ಲ ಹಲವಾರು ಬಾರಿ ಬಂದಿದ್ದೇನೆ.ʼ
ಅಮೀನಾ ಅವನೆಡೆಗೆ ಕೆಂಗಣ್ಣಿನಿಂದ ನೋಡಲಾರಂಭಿಸಿದಾಗ, ಸತೀಶನಿಗೆ ಅರ್ಥವಾಯಿತು ತನ್ನದು ಅನವಶ್ಯಕ ಪ್ರಲಾಪ ಎಂದು ಕೂಡಲೇ ಮಾತು ಬದಲಾಯಿಸಿ,
‘ನಿಮ್ಮನ್ನು ಭೇಟಿ ಮಾಡಲು ಇದೇ ಸರಿಯಾದ ಸಮಯ ಅಂದ್ರು, ಜೊತೆಗೆ ನನಗೂ ಅನುಕೂಲಕರವಾದ ಸಮಯ ಅದಕ್ಕೆ ಈ ಹೊತ್ನಲ್ಲಿ ಬಂದೆ.. ತೊಂದ್ರೆಯಾಗಿದ್ರೆ ಕ್ಷಮೆಯಿರಲಿʼ
ಎಂದು ತನ್ನ ಮಾತುಗಳನ್ನು ಎಷ್ಟು ದೃಢತೆಯಿಂದ ಹೇಳಿದನೆಂದರೆ ನಿಮ್ಮನ್ನು ಮಾತನಾಡಿಸದೇ ಇಲ್ಲಿಂದ ಹೊರ ಹೋಗುವುದಿಲ್ಲ ಎಂಬ ಭಾವವಿತ್ತು.
ಅಮೀನಾ ಪತ್ರಕರ್ತರ ಜೊತೆ ವ್ಯವಹರಿಸುವುದು ಹೊಸದಲ್ಲ. ಅವನ ಮಾತನ್ನು ಧಿಕ್ಕರಿಸುವಂತೆ
‘ಅದೆಲ್ಲಾ ಇರಲಿ ನನ್ನ ಬಗ್ಗೆ ನಿಮಗೆ ಹೇಳ್ದೋರ್ ಯಾರು.. ʼ ಎಂದಳು.
‘ನಿಮ್ಮ ಬಗ್ಗೆ ಯಾರಿಗೆ ಗೊತ್ತಿಲ್ಲ ಮೇಡಂ..ʼ ಎಂದು ನಕ್ಕ.
‘ಏಳ್ರಿ ಮೇಲೆ.. ನಾ ಕೇಳ್ತಿರೋದೇನು… ನೀವು ಉತ್ತರ ಕೊಡೋದೇನು.. ʼ ಎಂದು ಸಿಟ್ಟಿನಿಂದ ಎದ್ದಳು.
‘ಕ್ಷಮಿಸಿ ನನ್ನ ಸ್ನೇಹಿತರೊಬ್ಬರು ಹೇಳಿದರು.. ಇಲ್ಲಿಯವರೇ ಮುರಳಿ ಅಂತ, ನಾನು ಹಂಪಿಗೆ ಹೋಗುತ್ತಿದ್ದೇನೆ ಎಂದಾಗ ನಿಮ್ಮ ಕುರಿತು ಬಹಳ ಹೆಮ್ಮೆಯಿಂದ ಹೇಳಿದ.. ಅವರು ಇಲ್ಲಿನ ಸರಕಾರಿ ಕಾಲೇಜಿನಲ್ಲಿ ಇಂಗ್ಲೀಷ್ ಉಪನ್ಯಾಸಕರಾಗಿದ್ದಾಗ ನೀವು ಅವರ ವಿದ್ಯಾರ್ಥಿನಿಯಂತೆ, ಪೇಪರಿನಲ್ಲಿ ನಿಮ್ಮ ಹೋರಾಟದ ಸುದ್ದಿಗಳನ್ನು ತೋರಿಸುತ್ತಾ ಇವಳು ನನ್ನ ವಿದ್ಯಾರ್ಥಿನಿ ಎಂದು ನಿಮ್ಮ ಕುರಿತು ಅವಾಗಾವಾಗ ಪ್ರಸ್ತಾಪಿಸುತ್ತಿದ್ದರು. ಅವರೇ ಹೇಳಿದರು… ಹೋದರೆ ನಿಮ್ಮನ್ನು ಭೇಟಿಯಾಗಿ ಬಾ ಅಂತʼ.
ಅವನ ಬಾಯಿಯೊಳಗಿನ ಮಾತು ಬಾಯಿಯಲ್ಲಿರುವಂತೆಯೇ ಅಮೀನಾಳ ಕಣ್ಣುಗಳಲ್ಲಿ ಒಮ್ಮೆಲೇ ಕರೆಂಟು ಬಂದಂತಾಗಿ ಮುಖವು ಸಂತೋಷದಿಂದ ಅರಳಿತು. ಬೆಳಗುವ ಲೈಟಿನಂತೆ ಕಣ್ಣುಗಳನ್ನು ಅಗಲ ಮಾಡಿ ಆಶ್ಚರ್ಯದಿಂದ ಮೊದಲು ಯಾಕಾದರೂ ಈ ಶನಿ ಬಂದನೋ ಎಂಬ ಭಾವದಲ್ಲಿದ್ದವಳು ಒಮ್ಮೆಲೇ ಮೆತ್ತಗಾಗಿ
“ಕ್ಷಮಿಸಿ ನೀವೂ ಮುಂಚೆನೇ ಹೇಳಬಾರದೇ ಮುರುಳಿ ಸರ್ ಸ್ನೇಹಿತರೂಂತಾ.. ಏನ್ ತೊಗೊಂತೀರಾ ಟೀ.. ಕಾಫೀ..”
“ಥ್ಯಾಂಕ್ಸ್…. ಏನೂ ಬೇಡ ನಂದು ಊಟ ಆಗಿದೆ.. ನಿಮ್ಮ ಕತೆನಾ ನಿಮ್ಮಿಂದಾನೇ ಕೇಳ್ಬೇಕಂತ ಬಂದಿದೇನೆ. ಅದಕ್ಕೆ ಒಪ್ಪಿದ್ರೆ ಸಾಕು”.
‘ಒಂದ್ನಿಮಿಷʼ ಎಂದು ಕಿಚನ್ನಲ್ಲಿದ್ದ ಲೈಟನ್ನು ಆರಿಸಿ ಕೋಣೆಯ ಒಂದು ಮೂಲೆಯಲ್ಲಿನ ಸಿಂಗಲ್ ಕಾಟಿನ ಮೇಲೆ ಮಲಗಿದ್ದ ಯಾರಿಗೋ ಹೊದಿಕೆ ಸರಿ ಮಾಡಿ ಕರ್ಟೈನನ್ನು ಸರಿಸಿ
“ಆಯ್ತು ಕೇಳಿ.. ” ಎಂದಳು.
“ಕುತೂಹಲಕ್ಕೆ ಕೇಳ್ತಿದ್ದೇನೆ. ಮುರುಳಿಯವರು ನಿಮ್ಮ ಕೆಲವು ಸಾಹಸಗಳನ್ನು ನಂಗೆ ಮೊದ್ಲೇ ಹೇಳಿದ್ದಾರೆ ಅದೇ… ಈ ಮನೆ ಇರುವ ಜಾಗಕ್ಕಾಗಿ ಗೋವಿಂದಪ್ಪನೊಂದಿಗಿನ ನಿಮ್ಮ ಹೋರಾಟ. ಅದರಲ್ಲೂ ನಿಮ್ಮ ತಂದೆಯವರು ಸತ್ತ ನಂತರದ ಹೋರಾಟ ಒಂದಾ ಎರಡಾ….. ಇನ್ನೊಂದ್ಸಾರಿ ನೀವೇ ನಿಮ್ಮ ಕಥೆಯನ್ನು ಹೇಳಿ ಬಿಡಿ.. ಆಮೇಲೆ ನನಗೆ ಏನಾದರೂ ಕೇಳಬೇಕೆನಿಸಿದರೆ ಕೇಳುತ್ತೇನೆ. ನಿಮ್ಮ ಅಭ್ಯಂತರ ಇಲ್ಲದಿದ್ದರೆʼ
ಮುರುಳಿಯ ಹೆಸರು ಹೇಳುತ್ತಲೇ ಮೆತ್ತಗಾಗಿದ್ದ ಅಮೀನಾ ತನ್ನ ಕತೆಯನ್ನು ಎಲ್ಲಿಂದ ಆರಂಭಿಸಬೇಕೆಂದು ಯೋಚಿಸಲಾರಂಭಿಸಿದಳು
‘ನಂಗೆ ನೆನಪಿರುವಂತೆ ನನ್ನ ಅಪ್ಪ ಲಾಡ್ ಸಾಬ್ ಗುಜುರಿ ಕೆಲಸ ಮಾಡುತ್ತಿದ್ದ, ದುಡಿದದ್ದಕ್ಕಿಂತ ಸೈಕಲ್ ತುಳಿದದ್ದೇ ಹೆಚ್ಚು. ಸೈಕಲ್ಲು ಚಲಿಸಿದರೆ ನಮ್ಮ ಬದುಕೂ ಚಲಿಸುತ್ತಿತ್ತು. ಅಮ್ಮಿ ಮನೇಲಿ ಬೀಡಿಯ ಜೊತೆ ನಮ್ಮ ಬದುಕನ್ನೂ ಕಟ್ಟುತ್ತಿದ್ದಳು, ಕತ್ತರಿಸಿದ ಬೀಡಿಯ ಎಲೆಯೊಳಗಿಟ್ಟ ತಂಬಾಕು ಮೆತ್ತಗಾಗುವವರೆಗೆ ತೀಡಿ ತೀಡಿ ಕಡ್ಡಿಯಾಕಾರಕ್ಕೆ ತಂದು ಅದರ ಸೊಂಟಕ್ಕೆ ಬಣ್ಣದ ದಾರ ಕಟ್ಟಿ ನಂತರ ಬಾಯಿಯಿಂದ ತಂಬಾಕು ಉದುರದಂತೆ ಬಾಯಿಯನ್ನು ಮುಚ್ಚುವುದನ್ನು ನೋಡುವುದೇ ಒಂದು ಚಂದ. ಅಮ್ಮ ಬೆಳಗಿನಿಂದ ಸಂಜೆಯವರೆಗೆ ಮನೆಯ ಕೆಲಸಗಳೊಂದಿಗೇ ಬೀಡಿ ಕಟ್ಟುತ್ತಿದ್ದಳುʼ.
ಅಮೀನಾ ತನ್ನ ನೆನಪುಗಳೊಂದಿಗೆ ಕಳೆದುಹೋಗಿದ್ದಳು. ಗೋಡೆಯ ಮೊಳೆಗೆ ತಗಲು ಹಾಕಿದ ತನ್ನ ಅಮ್ಮಿ, ಅಬ್ಬುವನ್ನು ನೋಡುತ್ತಿದ್ದಳು. ಸತೀಶನೂ ಅವಳನ್ನು ನೋಡುತ್ತಾ ಕುಳಿತ. ಸ್ವಲ್ಪ ಹೊತ್ತಿನ ನಂತರ
‘ನೆನಸಿಕೊಂಡರೆ ಮನುಷ್ಯನ ಬದುಕು ಬೀಡಿಯಂತೆ ಅನಿಸುವುದಿಲ್ಲವೇ?ʼ ಎಂದು ನಕ್ಕಳು.
ಸತೀಶನೂ ನಕ್ಕ, ಅವನಿಗೂ ಹೌದೆನ್ನಿಸಿತು. ಬದುಕೂ ಆಕಾರ ಪಡೆಯಬೇಕಾದರೆ ನಮ್ಮ ಮನಸ್ಸನ್ನು ತೀಡಬೇಕು, ನಾವು ಬಯಸಿದ ರೂಪವನ್ನು ಪಡೆಯುವವರೆಗೆ, ಇನ್ನೊಬ್ಬರ ಮನದ ಎಲೆಯೊಳಗೆ ನಮ್ಮನ್ನು ಸ್ಥಿತಗೊಳಿಸಬೇಕಾದರೆ ಮುಂದಿನವರ ಹೃದಯದ ಆಕಾರಕ್ಕೆ ಹೊಂದಿಕೆಯಾಗುವವರೆಗೆ ಮನಸ್ಸನ್ನು ತೀಡುತ್ತಲೇ ಇರಬೇಕು. ಅವನ ಬುದ್ಧಿಗೆ ನಿಲುಕಿದಷ್ಟು ಬದುಕನ್ನು ಬೀಡಿಗೆ ಹೋಲಿಸ ಹತ್ತಿದ, ಕೊನೆಗೆ ಯಾರದೋ ಬೆಂಕಿ ಕಡ್ಡಿಗೆ ಬೀಡಿ ಬಲಿಯಾಗುವುದನ್ನು ನೆನೆದು ಮನಸ್ಸು ಪಿಚ್ಚೆನಿಸಿತು.
‘ಮನೇಲಿ ಅನ್ನಕ್ಕೆ ಬಟ್ಟೆಗೆ ಬಡತನವಿರಲಿಲ್ಲ, ಮನೆ ಅಜ್ಜ ಮುತ್ತಾತಂದಿರ ಆಸ್ತಿ ಈ ಜಾಗ. ಈ ಮನೆಯಿರುವ ಜಾಗದಲ್ಲೆ ಅರಮನೆಯ ಸುಖಗಳನ್ನೆಲ್ಲಾ ಧರೆಗಿಳಿಸುವ ಗುಡಿಸಲಿತ್ತು. ಅಪ್ಪ ಸೈಕಲ್ ತುಳಿಯುತ್ತಾ ಕೆಲಸಕ್ಕೆ ಹೋದನೆಂದರೆ ಮರಳಿ ಬರುವ ಸಮಯ, ದಿನ ಯಾವುದೂ ನಿರ್ದಿಷ್ಟತೆಯಿರಲಿಲ್ಲ. ಊರಲ್ಲಿಯೇ ಇದ್ದರೆ ಸಾಯಂಕಾಲ ಮನೆಗೆ ಬರುತ್ತಿದ್ದ. ಪಕ್ಕದ ಹಳ್ಳಿಗಳಿಗೆ ಹೋದರೆ ಮರಳಿ ಬರುವುದು 9- 10ಕ್ಕೆ. ಕೆಲವೊಮ್ಮೆ ದೂರದ ಹಳ್ಳಿಗಳಿಗೆ ಹೋದರೆ ಎರಡು ದಿನವೂ ಆಗುತ್ತಿತ್ತು. ನಾವು ಒಟ್ಟು ನಾಲ್ಕು ಜನ ಮಕ್ಕಳು, ಮೂರು ಹೆಣ್ಣು ಕೊನೆಯದು ಗಂಡು. ಇದರಲ್ಲಿ ಈಗ ಮನೆಯಲ್ಲಿರುವವರು ನಾನು ತಮ್ಮ ಮತ್ತು ತಂಗಿ, ದೊಡ್ಡಕ್ಕನಿಗೆ ಅಪ್ಪನೇ ಮದುವೆ ಮಾಡಿದ್ದಾರೆ. ಮಲಗಿದವರೆಗಡೆ ನೋಡಿ ಕಣ್ಣಲ್ಲಿ ತೇವ ಲೈಟಿನ ಬೆಳಕಲ್ಲಿ ಕಂಡೊಡನೆ.
‘ಕ್ಷಮಿಸಿ ನಿಮಗೆ ತೊಂದರೆ ಕೊಡುತ್ತಿದ್ದೇನೆ.. ʼ ಎಂದ.
‘ಹಾಗೇನು ಇಲ್ಲ. ಇಲ್ಲಿ ನಾನು ಕಳೆದುಕೊಂಡಿರುವುದು ಕೇವಲ ತಂದೆ ತಾಯಿಗಳನ್ನಲ್ಲ.. ನನ್ನ ಎರಡನೇ ತಂಗಿಯ ಜೀವನವನ್ನು ನರಕ ಮಾಡಿದರು ಆ ಪಾಪಿಗಳು ಅಪ್ಪ ಸತ್ತ ನಂತರ .. ಅವಳನ್ನು ಕಿಡ್ನಾಪ್ ಮಾಡಿ ಎಂಟು ದಿನ ಬಂಧಿಸಿಟ್ಟು ಮಧ್ಯರಾತ್ರಿ ಮನೆಯ ಮುಂದೆ ಅವಳ ಹೆಣದಂತಹ ದೇಹವನ್ನು ಎಸೆದು ಹೋಗಿದ್ದರು. ಎಚ್ಚರವಾದಂದಿನಿಂದ ಅವಳ ಬುದ್ಧಿ ಸ್ಥಿಮಿತದಲ್ಲಿಲ್ಲ. ಅವಳೇ ಅಲ್ಲಿ ಮಲಗಿರುವುದು. ಸುಮ್ಮನೇ ಇರುತ್ತಾಳೆ. ಕೆಲವೊಮ್ಮೆ ನಿದ್ದೆ ಮಾತ್ರೆ ನೀಡಿಯೇ ಮಲಗಿಸಬೇಕಾಗುತ್ತದೆʼ
ಅತ್ತ ತಿರುಗಿ ನೋಡಿದ ಸತೀಶ ಸ್ವಲ್ಪ ವಿಚಲಿತನಾದ, ಛೇ.. ಬದುಕು ಹೀಗೂ ಇದೆಯಲ್ಲಾ ಅನಿಸಿತು.
‘ನಿಮ್ಮ ತಂದೆಯವರದು ಸಹಜ ಸಾವಲ್ಲ ಎಂದು ಪೇಪರಿನಲ್ಲಿ ಹೇಳಿಕೆ ಕೊಟ್ಟಿದ್ದೀರಿʼ.
‘ಹೌದು ಒಂದಿನ ಗೋವಿಂದಪ್ಪ ಮನೆಗೆ ಬಂದು ಮನೆ ಮಾರುವಂತೆ ಹೇಳಿದ. ಅಪ್ಪ ಒಪ್ಪದಿದ್ದಾಗ ಊರಿನ ಹಲವರಿಂದ ಹೇಳಿಸಿದ. ಒಪ್ಪಲಿಲ್ಲ ಐದಾರು ತಿಂಗಳು, ಅಪ್ಪನನ್ನು ಕಾಡಿದ ಬೆದರಿಸಿದ, ಪೋಲಿ ಹುಡುಗರನ್ನು ನನ್ನ ಹಿಂದೆಯೂ ಬಿಟ್ಟ. ಎದೆಗುಂದಬಾರದೆಂದು ಅಪ್ಪನಿಗೆ ಹೇಳಬಾರದೆಂದು ಅವರನ್ನೆಲ್ಲಾ ನಾನೇ ಸಂಭಾಳಿಸಿದೆ, ಅಪ್ಪನದೂ ಅಷ್ಟೆ ಅವನ ನಿರ್ಧಾರ ಅಚಲವಾಗಿತ್ತು. ತಿಂಗಳುಗಳು ಕಳೆದರೂ ಅಪ್ಪ ಒಪ್ಪದಿದ್ದಾಗ ಒಂದಿನ ರಾತ್ರಿ ಬಂದು “ನೋಡು ಲಾಡಣ್ಣ ಒಳ್ಳೆ ಮಾತ್ನಲ್ಲಿ ಹೇಳ್ತಿನಿ ಜಾಗ ಬಿಟ್ಟುಕೊಡು ನೀ ಕೇಳ್ದಷ್ಟು ರೊಕ್ಕ ಕೊಡ್ತೇನಿ. ಇಲ್ಲ ಅಂದ್ರ ನಿಂಗೆ ಕಷ್ಟʼ ಎಂದ. ಅಪ್ಪ ಅದಕ್ಕೆ ‘ಗೋವಿಂದಣ್ಣ ಇದು ನನ್ನಪ್ಪ ಅಜ್ಜ ಬಾಳಿ ಬದುಕಿದ ಜಾಗ ಇದನ್ನ ನಾ ಕೊಡೋದಿಲ್ಲ, ಬ್ಯಾರೆ ಏನ್ ಕೇಳಿದ್ರು ಕೊಡ್ತೀನಿʼ.
‘ತೊಂದ್ರೆ ತೊಗೋಬ್ಯಾಡ ಲಾಡಣ್ಣ… ನನ್ನ ಮಾತು ಕೇಳು ಹೆಂಡ್ರ ಮಕ್ಕಳನ್ನ ಬೀದಿಪಾಲು ಮಾಡ್ಬೇಡʼ ಎಂದಾಗ ಅಪ್ಪ ‘ಖಂಡಿತ ಸಾದ್ಯ ಇಲ್ಲʼ ಎಂದನು. ಧುಮುಗುಡುತ್ತಲೇ ಗೋವಿಂದಪ್ಪ ಹೊರಗೆ ಹೋದ. ಒಂದು ದಿನ ಅಪ್ಪ ಹೊಸೂರಿಂದ ಕೆಲಸ ಮುಗಿಸಿ ಬರುವಾಗ ಲಾರಿಯ ಗಾಲಿಯಡಿ ಸಿಲುಕಿ ಸತ್ತ. ಪೋಲೀಸರು ಕುಡಿದು ಜೋಲಿ ಹೊಡೆಯುತ್ತಾ ಸಮತೋಲನ ಕಾಯ್ದುಕೊಳ್ಳಲಾರದೆ ಲಾರಿಗೆ ಸಿಲುಕಿದ್ದಾನೆಂದು ಕೇಸನ್ನು ಮುಚ್ಚಿ ಹಾಕಿದರುʼ.
‘ಅದು ಸರಿ ಮೇಡಂ ನಿಮಗ್ಯಾಕ್ ಅನುಮಾನ ಅದು ಕೊಲೆ ಅಂತʼ
‘ನಮ್ಮಪ್ಪ ಸೆರೆ ಕುಡಿಯುತ್ತಿರಲಿಲ್ಲ ಎಂದು ಊರಿಗೇ ಗೊತ್ತು. ಗೋವಿಂದಪ್ಪನ್ನ ಎದುರು ಹಾಕ್ಕೋಳ್ಳೋಕೆ ಯಾರೂ ಸಿದ್ಧರಿರಲಿಲ್ಲ ನಾನು ಸ್ಟೇಷನ್ನಿಗೆ ಹೋಗಿ ನಮ್ಮಪ್ಪ ಕುಡೀತಿರಲಿಲ್ಲ, ಎಂದರೆ ಪೋಲೀಸನೊಬ್ಬ ‘ನೋಡ್ ತಂಗಿ ನನ್ ಮಾತ ಕೇಳು ಇವರ್ ಸಾವಾಸ ಬ್ಯಾಡ, ಆಗಿದ್ದು ಆಗ್ಯಾದ ಜೀವ್ನಾ ದೊಡ್ಡುದು ಹೋಗವ್ವಾ… ಜೀವ ಇದ್ರ ಜಗತ್ತು ಎಂದಾಗ ನಿಜ ಅನ್ಸಿ ಹಿಂದಕ್ ಬಂದೆ”
‘ಮನ್ಯಾಗ ಅಮ್ಮ ಹಾಸಿಗಿ ಹಿಡಿದಳು. ಅಕ್ಕ ಸಣ್ಣ ತಮ್ಮ ಇಬ್ಬರಿಗೂ ಹೊರಗಿನ ಜಗತ್ತಿನ ಪರಿಚಯ ಇರಲಿಲ್ಲ. ಕಾಲೇಜಿಗೆ ಹೋಗುತ್ತಿದ್ದ ನನ್ನ ಕೊರಳಿಗೆ ಎಲ್ಲಾ ಜವಾಬ್ದಾರಿ ಬಿತ್ತು. ನೆಂಟರು ಎಲ್ಲಾ ಕೈಕೊಟ್ಟರು… ಗೋವಿಂದಪ್ಪ ಮತ್ತೆ ಮೂರನೆಯವರಿಂದ ಹೇಳಿಕಳಿಸಿದ ಮನೆ ಖರೀದಿಗೆ ಕೊಡುವಂತೆ, ಅಪ್ಪನನ್ನು ಕೊಂದ ಅವನಿಗೆ ನಾವೆಲ್ಲಾ ಸತ್ರು ಕೊಡೋಲ್ಲ ಅಂತ ಹೇಳಿದ್ವಿ. ಅದರ ಪರಿಣಾಮ ಮೂಲೆಯಲ್ಲಿರುವ ನನ್ನ ತಂಗಿ…ʼ ಎಂದಾಗ ಕಣ್ಣಲ್ಲಿ ಹನಿಗೂಡಿದವು. ಅವಳು ಭಾವುಕಳಾಗಿ ಚಿತ್ರ ಹಿಂಸೆ ಅನುಭವಿಸುವುದನ್ನು ನೋಡಿ ಮುಂದುವರಿಸುವುದು ಬೇಡವೆಂದು ಸತೀಶ
‘ಸರಿ ಮೇಡಂ.. ರಾತ್ರಿ ಹನ್ನೊಂದಾಯಿತು ನಾಳೆ ನೀವು ಅನುಮತಿ ಕೊಟ್ರೆ ಮತ್ತೆ ಬರುತ್ತೇನೆʼ ಎಂದ.
‘ಆಯ್ತು ನಾಳೆ ಫೋನ್ ಮಾಡ್ತೇನಿ. ಐದಕ್ಕೆ ಸರಿಯಾಗಿ ಜಂಬುನಾಥನ ಗುಡ್ಡಕ್ಕೆ ಹೋಗುವ ಹಾದಿಯಲ್ಲಿ ತುಂಗಭದ್ರ ಬಲದಂಡೆ ಕಾಲುವೆ ಹತ್ತಿರ ನಿಮ್ಮನ್ನು ಕಾಯುತ್ತೇನೆ,ʼ ಎಂದು ಆತನನ್ನು ಗೇಟಿನವರೆಗೆ ಬಿಟ್ಟು ಒಳ ಬಂದಳು.
ಮನೆಯ ಒಳಗಡೆ ಬಂದು ಕಣ್ಣುಗಳಲ್ಲೇ ಮನೆ ಅಳತೆ ಮಾಡಿದ. ತಗಡಿನ ಛಾವಣಿಯ ಮನೆ ಸುತ್ತಲೂ ಗೋಡೆಗಳು, ಒಳಗೆ ಅಡುಗೆ ಮನೆ ಪ್ರತ್ಯೇಕಿಸಲು ಮತ್ತೊಂದು ಗೋಡೆ. ಮುಂಭಾಗದ ಕೋಣೆಯ ಮೂಲೆಯಲ್ಲಿ ಪೇರಿಸಿದ ಎರಡು ಪ್ಲಾಸ್ಟಿಕ್ ಕುರ್ಚಿಗಳನ್ನು ಎತ್ತಿ ತಂದು ಒಂದನ್ನು ಬಿಡಿಸಿ ಕೂರುವಂತೆ ಅವನ ಮುಂದೆ ದಬ್ಬಿದಳು. ಮನೆಯ ಒಳ ಭಾಗವನ್ನು ಇಂಚಿಂಚೂ ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದನು.
ಐದಕ್ಕೆ ಸರಿಯಾಗಿ ದಿನನಿತ್ಯ ವಾಕಿಂಗ್ ಹೋಗುವ ಹಾದಿಗೇ ಸತೀಶನನ್ನು ಕರೆದುಕೊಂಡು ಹೋದರಾಯಿತು ಎಂದು ಅಮೀನಾ ಸತೀಶನಿಗೆ ಬರಲು ಹೇಳಿದ್ದಳು. ಆದರೆ ಅವನು ಇನ್ನೂ ಬಾರದ್ದಕ್ಕೆ ಕಾಲುವೆಯ ಬ್ರಿಡ್ಜಿನ ಕಟ್ಟೆಗೆ ಕುಳಿತಳು. ಗುಡ್ಡದ ಮೇಲಿನ ಗಾಳಿಯಂತ್ರಗಳ ರೆಕ್ಕೆಗಳು ನಿಧಾನವಾಗಿ ತಿರುಗಿಸುತ್ತಿದ್ದವು. 13 ಲಕ್ಷ ಭೂಮಿಗಳನ್ನು ತನ್ನೊಳಗೆ ತುಂಬಿಕೊಳ್ಳಬಲ್ಲ ಸೂರ್ಯನನ್ನು ಕೇವಲ ಭೂಮಿಯ ಮೇಲಿನ ಪುಟ್ಟ ಯಂತ್ರ ಮರೆಮಾಡುವುದನ್ನು ನೋಡುತ್ತಾ ಕುಳಿತಿದ್ದಳು, ಮೂರೂ ರೆಕ್ಕೆಗಳು ಸರದಿಯಂತೆ ಸೂರ್ಯನನ್ನು ಮರೆ ಮಾಡುತ್ತಿದ್ದವು. ದೂರದಲ್ಲಿ ಧನ್ ಧನ್.. ಎಂಬ ಸದ್ದು ಕೇಳುತ್ತಿತ್ತು. ಕಮ್ಮಾರರು ಇಡೀ ಕುಟುಂಬವನ್ನೇ ರಥದಂತಹ ತಮ್ಮ ಮೂರು ಚಕ್ರದ ಆಟೋದಲ್ಲಿ ಕರೆದುಕೊಂಡು ಬಂದಿದ್ದರು. ಮಹಾರಾಷ್ಟ್ರದಿಂದ ತಂಡ ತಂಡವಾಗಿ ಪಟ್ಟಣಕ್ಕೆ ಪ್ರತಿ ವರ್ಷವೂ ಬಂದು ಬೀಡು ಬಿಡುತ್ತಿದ್ದರು. ಲಾರಿ ಬಸ್ಸುಗಳ ಮುರಿದ, ಕೆಲಸಕ್ಕೆ ಬಾರದ ಕಬ್ಬಿಣದ ಬ್ಲೇಡುಗಳಿಂದ ರೈತರ ಕೃಷಿ ಉಪಕರಣಗಳನ್ನು ಮಾಡುತ್ತಾರೆ. ಗಂಡಸು ಕೆಳಗೆ ಕುಳಿತು ಇಕ್ಕಳದಿಂದ ರೂಪಕೊಡಬೇಕಾದ ಉದ್ದನೆಯ ಕಬ್ಬಿಣದ ಪಟ್ಟಿಯನ್ನು ಬೆಂಕಿಯಿಂದ ಕೆಂಪಗೆ ಕಾದಿದೆಯೋ ಇಲ್ಲವೋ ಎಂದು ನೋಡಿ ಕೆಂಪಗಾಗಿದ್ದರೆ ಕೆಳಗೆ ಕಬ್ಬಿಣದ ಅಡಿಯ ಮೇಲಿಡುತ್ತಿದ್ದನು, ಸ್ತ್ರೀಯೋರ್ವಳು ಸುತ್ತಿಗೆಯಿಂದ ಒಂದೇ ನೇರಕ್ಕೆ ಹೊಡೆಯುತ್ತಿದ್ದಳು, ಕೆಳಗೆ ಕುಳಿತ ಪುರುಷ ಇಕ್ಕಳದಲ್ಲಿ ಹಿಡಿದ ಪಟ್ಟಿಯನ್ನು ಬೇರೆ ಬೇರೆ ಕೋನಗಳಲ್ಲಿ ಪೆಟ್ಟು ಬೀಳುವಂತೆ ತಿರುವುತ್ತಿದ್ದನು. ತಣ್ಣಗಾಯಿತೋ ಮತ್ತೆ ಕಾಯಿಸಲು ಬೆಂಕಿಗೆ ಇಟ್ಟು ಬೇರೆ ಪಟ್ಟಿಯನ್ನು ತೆಗೆದು ಅದಕ್ಕೆ ಆಕಾರ ಕೊಡುತ್ತಿದ್ದನು, ಇದೇ ರೀತಿ ಕೆಲವು ಸುತ್ತುಗಳ ನಂತರ ಕುಳವೋ, ಲಾಂಗೋ, ಕೊಡಲಿಯೋ, ಕುಡಗೋಲೋ, ಬೇಡಿಕೆಯನುಸಾರ ಉಪಕರಣಗಳನ್ನು ತಯಾರಿಸುತ್ತಿದ್ದರು.
ಅಮೀನಾಳಿಗೆ ಮನುಷ್ಯರೆಲ್ಲರೂ ಇಕ್ಕಳದಲ್ಲಿ ಸಿಲುಕಿದ ಕೆಂಪಾದ ಕಬ್ಬಿಣದ ಪಟ್ಟಿಯಂತೆ ಕಾಣುತ್ತಿದ್ದರು, ಕಾಲನ ಕುಲುಮೆಯಲ್ಲಿ ಮನುಷ್ಯ ಬೆಂದು ಬದುಕಿನ ಪೆಟ್ಟುಗಳಿಂದ ರೂಪುಗೊಳ್ಳಬೇಕಾಗಿದೆ. ಆದರೆ ಈಗಿನ ಪರಿಸ್ಥಿತಿ ನೋಡಿದರೆ ಅವನು ಪಾಠ ಕಲಿಯುವ ಸಾಧ್ಯತೆ ಇಲ್ಲವೇ ಇಲ್ಲ ಎನಿಸುತ್ತಿದೆ.
‘ನಮಸ್ಕಾರ ಅಮೀನಾ ಮೇಡಂʼ ಧ್ವನಿಯಿಂದ ಎಚ್ಚೆತ್ತಳು ಅಮೀನಾ.
‘ಬನ್ನಿ ನಮಸ್ಕಾರ ತಡವಾಯಿತು. ನಾನು ಐದು ಗಂಟೆಗೆ ಬರಲು ಹೇಳಿದ್ದೆ.. ಅರ್ಧ ಗಂಟೆಯಾಯಿತು ನಾನು ಬಂದುʼ.
‘ಕ್ಷಮಿಸಿ ಪ್ರಾಚ್ಯ ವಸ್ತು ಸಂಗ್ರಹಾಲಯ ಕಮಲಾಪುರಕ್ಕೆ ಭೇಟಿ ನೀಡಿದ್ದೆ, ನೋಡುತ್ತಾ ಸಮಯ ಹೋದದ್ದೆ ಗೊತ್ತಾಗಲಿಲ್ಲʼ
‘ಹೌದು ಮುರುಳಿ ಸರ್ ನಿಮಗೆ ಹೇಗೆ ಪರಿಚಯʼ.
‘ನಾನು ಅವರು ಒಂದೇ ರೂಮಿನಲ್ಲಿದ್ದೇವೆ ಮೇಡಂ.. ಅದೊಂದು ಬೇರೆ ಕತೆ.. ಈಗ ನನ್ನ ಕತೆ ಬೇಡ ಮೇಡಂ ನಿಮ್ಮ ಕತೆ ಹೇಳಿ..ʼ ಎಂದು ನಕ್ಕ.
‘ಯಾವ ಕಡೆ ಹೋಗೋಣಾ..ʼ
‘ನಿಮಗೆ ಇಷ್ಟವಾದ ಕಡೆ..ʼ
‘ಹೀಗೆಯೇ ಹೋಗೋಣ.. ಜಂಬುನಾಥನ ಗುಡ್ಡದ ಕಡೆ.. ನನ್ನ ನೆಚ್ಚಿನ ಸ್ಥಳʼ.
‘ಏನ್ ವಿಶೇಷ ಈ ಬೆಟ್ಟದ್ದುʼ.
‘ಜಂಬುನಾಥ ಅಥವಾ ರಾಮಾಯಣದ ಜಾಂಬವಂತ ತಪಸ್ಸುಗೈದ ಸ್ಥಳ ಇದು, ಇದನ್ನು ಲೋಹಾದ್ರಿ ಬೆಟ್ಟ, ಜಾಂಬವಂತನ ಬೆಟ್ಟ ಎಂತಲೂ ಕರೆಯುತ್ತಾರೆ. ಅದರ ನೆನಪಿಗಾಗಿ ಚೋಳರ ಅರಸರಾದ ತ್ರಿಶಾಯ, ಭೈರ, ಪರಾಹ ಎಂಬ ಮೂವರಿಂದ ೧೩ ನೇ ಶತಮಾನದಲ್ಲಿ ಜಂಬುನಾಥನ ದೇವಸ್ಥಾನ ಕಟ್ಟಲ್ಪಟ್ಟಿದೆ. ಈ ಗುಡಿಯ ಆವರಣದಲ್ಲಿರುವ ಬಾವಿಯ ನೀರನ್ನು ಕಾಂಚನ ತೀರ್ಥ ಎನ್ನುವರು. ಈ ನೀರನ್ನು ಕುಡಿಯುವದರಿಂದ ರೋಗಗಳು ದೂರವಾಗುತ್ತವೆ, ಸ್ನಾನ ಮಾಡುವುದರಿಂದ ಇಷ್ಟಾರ್ಥಗಳು ಈಡೇರುತ್ತವೆ ಎನ್ನುತ್ತಾರೆʼ ಎಂದು ಪಟಪಟನೇ ಹೇಳುತ್ತಿದ್ದವಳು ನಿಲ್ಲಿಸಿ,
‘ಇರಲಿ ಬಿಡಿ…. ಹೇಳಿ ಮತ್ತೇನು ಮಾಹಿತಿ ನಿಮಗೆ ಬೇಕುʼ ಎಂದಳು. ಸತೀಶನೂ ಅವಳನ್ನು ಹಿಂಬಾಲಿಸಿದ. ಮಾತುಗಳಿಗಿಂತ ಅವಳ ಮೌನ, ನಿಟ್ಟುಸಿರುಗಳೇ ಈ ಹಾದಿಯಲ್ಲಿ ಬಹಳ ಹೇಳುತ್ತಿದ್ದವು. ಆಗೊಮ್ಮೆ ಈಗೊಮ್ಮೆ ಪ್ರಶ್ನೆಗೆ ಅಮೀನಾ ಉತ್ತರಿಸುತ್ತಿದ್ದಳು.
‘ನಿಮ್ಮ ತಂದೆಯವರ ಸಾವನ್ನು ಕೊಲೆಯೆಂದೇ ನೀವು ಮುರುಳಿಯವರ ಮುಂದೆ ಹೇಳಿದ್ದೀರಂತೆ. ಮುರುಳಿಯೇ ಹೇಳಿದ ತಪ್ಪಿತಸ್ಥರನ್ನು ಹಿಡಿದಿರಾ ಹೇಗೆʼ.
‘ಪೋಸ್ಟ ಮಾರ್ಟಂ ರಿಪೋರ್ಟ ಅಪ್ಪ ಕುಡಿದಿದ್ದರು ಎನ್ನುವುದನ್ನು ಓದಿದೆ, ವೈದ್ಯನೂ ಮಾರಾಟವಾಗಿದ್ದಾನೆಂದು ನನಗೆ ಅರಿವಾಯಿತು. ಇಡೀ ವ್ಯವಸ್ಥೆಯೇ ನನ್ನ ವಿರುದ್ಧ ಸಂಚು ಮಾಡುತ್ತಿರುವಾಗ ಏಕಾಂಗಿಯಾಗಿ ಹೋರಾಡುವುದು ಸುಲಭವಲ್ಲವೆಂದೂ ಗೊತ್ತಾಯಿತು. ಇದೇ ಒತ್ತಡದಲ್ಲಿಯೇ ಅಮ್ಮ ವರ್ಷದೊಳಗೇ ಅಪ್ಪನನ್ನು ಹಿಂಬಾಲಿಸಿದಳು. ಒಬ್ಬ ಅಕ್ಕನ ಮದುವೆಯಾಗಿದ್ದರಿಂದ ಅಷ್ಟೊಂದು ಜವಾಬ್ದಾರಿಗಳು ಇರಲಿಲ್ಲ. ತಮ್ಮನನ್ನು ಸರಕಾರಿ ಶಾಲೆಗೆ ಸೇರಿಸಿದೆ. ನಾನು ಪೂರ್ಣ ಪ್ರಮಾಣದಲ್ಲಿ ನನ್ನಂತಹ ಹುಡುಗಿಯರ, ಸ್ತ್ರೀಯರ ಬೆನ್ನಿಗೆ ನಿಂತೆ. ಆಗ ನನಗನ್ನಿಸಿದ್ದು ವೈಯಕ್ತಿಕ ಸ್ವಾರ್ಥಕ್ಕಾಗಿ ನಾವು ಹೋರಾಟ ಮಾಡಿದಾಗ ವ್ಯವಸ್ಥೆ ಸಂಚು ಮಾಡಬಹುದು, ಆದರೆ ವ್ಯವಸ್ಥೆಯ ಒಳಿತಿಗಾಗಿ ಕೆಲಸ ಮಾಡಿದಾಗ ಕೇವಲ ಅಡೆತಡೆಗಳಿರುತ್ತವೆ ಸಂಚುಗಳಿರುವುದಿಲ್ಲ.. ಎನಿಸತೊಡಗಿತು..ʼ ಒಂದು ನಿಟ್ಟುಸಿರು ಹಾಕಿ
‘ಈ ಹಾದಿಯಲ್ಲಿ ಸಿಕ್ಕವರ ಅನುಭವಗಳ ಮುಂದೆ ನಾನೇನೂ ಅಲ್ಲ ಅನ್ನಿಸತೊಡಗಿತುʼ.
‘ನೀವು ಸಹಾಯ ಮಾಡಿದ ನಿಮಗೆ ಸಂತೃಪ್ತಿ ನೀಡಿದ ನೀವಿಷ್ಟಪಡುವ ಘಟನೆ ಹೇಳುವಿರಾʼ.
ಅಮೀನಾಳ ಕಣ್ಣುಗಳಲ್ಲಿ ಹೊಳಪು ಎದ್ದು ಕಾಣುತ್ತಿತ್ತು.
‘ನಾನು ಅವರ ಬದುಕಿನ ಭಾಗವಾಗಿ ಹೋರಾಟ ಮಾಡಿದ್ದೇನೆ. ಹಾಗಾಗಿ ನನಗೆ ಎಲ್ಲವೂ ಮುಖ್ಯ ಎನಿಸುತ್ತವೆ.ʼ ನಿಟ್ಟುಸಿರು ಹಾಕಿ ಜಂಬುನಾಥನ ಗುಡಿ ಕಚ್ಚಾ ರಸ್ತೆಯಗುಂಟ ಸುಮ್ಮನೆ ನಡೆಯುತ್ತಿದ್ದಳು. ಇನ್ನೊಂದು ತಿರುವನ್ನು ದಾಟಿದರೆ ಗುಡಿಯ ಅಂಗಳ ಕಾಣುತ್ತಿತ್ತು. ದಾರಿಯ ಉದ್ದಕ್ಕೂ ಎರಡೂ ಬದಿ ಪುಟ್ಟ ಪುಟ್ಟ ಕಲ್ಲುಗಳಿಂದ ಮನೆಯ ಆಕಾರಗಳನ್ನು ಅಮೀನಾ ಪ್ರತಿ ದಿನ ನೋಡುತ್ತಿದ್ದಳು. ಭಕ್ತರು ತಮ್ಮ ಬೇಡಿಕೆ ಈಡೇರುವುದಕ್ಕಾಗಿ ಮಾಡಿದ ಮನೆಗಳು ವಿಚಿತ್ರ ಹರಕೆ. ತನಗಾಗಿ ಎಂದೂ ಯೋಚಿಸದ ಅಮೀನಾ ಹಲವಾರು ಬಾರಿ ಇತರರ ಒಳಿತಿಗಾಗಿ ಈ ರೀತಿ ಕಲ್ಲಿನ ಪುಟ್ಟ ಪುಟ್ಟ ಮನೆಗಳನ್ನು ಮಾಡಿ ಹರಕೆ ಹೊತ್ತದ್ದುಂಟು.
‘ಸೌಭಾಗ್ಯ ನತದೃಷ್ಟ ಹೆಣ್ಣು ಮಗು. ಎಂಟನೇ ತರಗತಿ ಓದುತ್ತಿರುವಾಗಲೇ ಅಪ್ಪನನ್ನು ಕಳೆದುಕೊಂಡವಳು, ತಾಯಿಗೆ ಕ್ಯಾನ್ಸರ್. ಹೀಗಾಗಿ ಅವಳ ಮದುವೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. ಅವಳ ಸೋದರ ಮಾವನನ್ನೇ ಮದುವೆಗೆ ಒಪ್ಪಿಸಿದ್ದರು. ತಾಳಿಕಟ್ಟುವ ದಿನ ನಮಗೆ ಊರಿನಿಂದ ಪೋನ್ ಬಂತು, ಬಾಲ್ಯ ವಿವಾಹ ಮಾಡುತ್ತಿದ್ದಾರೆಂದು, ನಾನು, ನನ್ನ ತಂಡದೊಡನೆ ಅಲ್ಲಿಗೆ ಹೋದೆ. ಮದುವೆಯೇನೋ ನಿಲ್ಲಿಸಿದೆ. ಅದರೆ ಆ ಶಾಕ್ನಿಂದ ಕಾನ್ಸರಿನಿಂದ ಬಳಲುತ್ತಿದ್ದ ಅವಳ ತಾಯಿ ಸತ್ತು ಹೋದಳು, ಅಲ್ಲಿದ್ದವರು ನನಗೆ ಬೈಯ್ದರು, ಹಿಡಿ ಶಾಪ ಹಾಕಿದರು. ಆದರೂ ನಾನು ಸಹಿಸಿಕೊಂಡೆ ಆ ಮಗುವಿಗಾಗಿ.. ಇಂತಹ ಘಟನೆಗಳು ಒಮ್ಮೊಮ್ಮೆ ನನ್ನ ಆತ್ಮಸ್ಥೈರ್ಯ ಕುಗ್ಗಿಸುತ್ತವೆ.
ಮುಳುಗುವ ಸೂರ್ಯನ ಹೊಂಬೆಳಕಿನಲ್ಲಿ ಅವಳ ಮುಖ ಇನ್ನಷ್ಟು ಹೊಳೆಯುತ್ತಿತ್ತು. ಸತೀಶ ಅವಳನ್ನೇ ದಿಟ್ಟಿಸುತ್ತಿದ್ದ, ಮುಂದೆ ಮುಂದೆ ನಡೆಯುತ್ತಿದ್ದ ಅಮೀನಾ ಪಕ್ಕದಲ್ಲಿ ಸತೀಶ ಇಲ್ಲದಿರುವುದನ್ನು ನೋಡಿ ಹಿಂತಿರುಗಿ ನೋಡಿದಳು. ಸತೀಶ ಪುಟ್ಟ ಪುಟ್ಟ ಕಲ್ಲುಗಳನ್ನು ಜೋಡಿಸಿ ಮನೆಯೊಂದನ್ನು ಕಟ್ಟುತ್ತಿದ್ದ.