1. ಕಣ್ಣು ಹೊಡೆದ ಕವಿತೆ
ಸಾರ ಟಿಪ್ಪಣಿ ವಿಮರ್ಶೆ
ಗುರುತು ಹಾಕಿದ ಪದಗಳು
ಎದುರಿಗೆ ನೂರುಜೋಡಿ ಕಣ್ಣುಗಳು
ಕವಿತೆ ಕಣ್ಣು ಹೊಡೆಯಿತು
ಟಪ ಟಪ ಟಪ ಸದ್ದು
ಮಣ್ಣ ಪರಿಮಳ ತಂಪುಗಾಳಿ
ತೆರೆದ ಕಿಟಕಿಯೆಡೆ ಹೊರಳಿದೆ
ಮುಗಿಲಿಗೆ ಮುಖ ಕೊಟ್ಟು ಮಲಗಿ
ಮಳೆಬಿಲ್ಲ ಹೀರುವ ದನದ ಹುಡುಗ
ನೀಲಿ ಹಸಿರು ಹಳದಿ
ಜಿನುಗುತಿದೆ
ಬೆಳಕ ಹನಿ
ಒಳಗೆ ಸೂಸುವ ಗಾಳಿಗೆ
ಒಡಲು ತಂಪು
ಪುಸ್ತಕ ಜಾರಿ ಬಿತ್ತು
ಒಂದು ಕವಿತೆ ಕಳೆದಿದೆ
ಮತ್ತೊಂದು ಕಾವಿಗೆ ಕುಳಿತಿದೆ
ಕಾಯುವ ಧ್ಯಾನ
ಕಲಿಸಲಾಗದು
***
2. ಹಿಡಿಯದ ಬೋಗಿ
ಸಾವಿರಾರು ಬೋಗಿಗಳು
ಬದುಕಿನ ರೈಲಿಗೆ
ಓಡುತ್ತವೆ ಒಟ್ಟಿಗೆ
ಒಳಬಾಗಿಲಿಲ್ಲ ಒಂದರಿಂದೊಂದಕೆ
ಮುಂದಿನದೊ ಹಿಂದಿನದೊ ನಡುವಿನದೊ
ಅದೊ ಇದೊ
ಜೊತೆಗೂಡುವ ಅಗಲುವ ಉಳಿಯುವ
ಸಹ ಪ್ರಯಾಣಿಕರಾರೋ
ಇದೊಂದು ತಲೆನೋವು
ಏರಲೇಬೇಕಿದೆ ಒಂದಂತೂ
ನಡೆದೇ ಹೋಗೋಣ ಎನ್ನುವ ವಯಸ್ಸಲ್ಲ
ಒಂಟಿತನದ ಭಯ ಬೇರೆ
ಇಂದು ತಪ್ಪಿದ ಬೋಗಿ ಮುಂದೊಮ್ಮೆ ಏರಲಾರೆನೆ
ಉಳಿದಿರಬೇಕಲ್ಲ ಇಂದಿನಂತೆಯೇ
ಹಾದಿಗಳು ಕೂಡ ಸದಾ
ಚಲನೆಯಲ್ಲಿರುತ್ತವೆ
ಬದುಕಿಗಾಗಿ ದಾರಿಯೋ
ದಾರಿಯೇ ಬದುಕೋ
ನುಗ್ಗಿದ ಜನರ ನಡುವೆ
ಆ ಬೋಗಿಯಂತೂ ಸಿಕ್ಕಿತು
ತಲೆ ಸಿಡಿಯುತ್ತಿದೆ
ಮುಂದೆಂದೋ ಮೊಮ್ಮಕ್ಕಳು ಪ್ರಯಾಣದ ಕಥೆ ಕೇಳುತ್ತವೆ
ತಲೆ ಮತ್ತೆ ಸಿಡಿಯುತ್ತದೆ
‘ಈ ಭೋಗಿ ಹಿಡಿದಿದ್ದಕ್ಕೆ
ಇಷ್ಟು ಬಂದೆ…’
ನಿಟ್ಟುಸಿರು
ದೀರ್ಘ
(ಅಮೆರಿಕನ್ ಕವಿ ರಾಬರ್ಟ್ ಫ್ರಾಸ್ಟ್ ನ The Road Not Taken ಕವಿತೆಯ ಪ್ರಭಾವದಲ್ಲಿ ನನ್ನಲ್ಲಿ ಹುಟ್ಟಿದ ಸಾಲುಗಳು ‘ಹಿಡಿಯದ ಬೋಗಿ’ ಕವಿತೆಯಾಗಿ ನಿಂತಿವೆ )
ಧಾರವಾಡದ ಕರ್ನಾಟಕ ಕಲಾ ಮಹಾವಿದ್ಯಾಲಯಲ್ಲಿ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಸಿ. ಬಿ. ಐನಳ್ಳಿಯವರು ಮೂಲತಃ ಬಳ್ಳಾರಿ ಜಿಲ್ಲೆಯವರು. ಇಂಡಿಯನ್-ಅಮೇರಿಕನ್ ಲೇಖಕಿ ‘ಜುಂಪಾ ಲಾಹಿರಿಯ ಕೃತಿಗಳಲ್ಲಿ ವಸ್ತು ಮತ್ತು ತಂತ್ರಗಳ ಅಧ್ಯಯನ’ಕ್ಕಾಗಿ ಕರ್ನಾಟಕ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ಪಡೆದಿದ್ದಾರೆ.