ಒಮ್ಮೆ ಎಸ್ಕಲೇಟರಿನಲ್ಲಿ ಲೇಖಕಿ ಹೋಗುವಾಗ ಅಕಸ್ಮಾತ್ತಾಗಿ ಅವರ ಸೀರೆ ಸಿಕ್ಕಿಕೊಂಡು ಮೊಣಕಾಲಿನವರೆಗೂ ಹರಿದುಹೋಗುತ್ತಿದ್ದರೂ ಅಕ್ಕಪಕ್ಕದ ಜನ ತಮಗೆ ಸಂಬಂಧವೇ ಇಲ್ಲದವರಂತೆ ತಮ್ಮ ಪಾಡಿಗೆ ಹೋಗುವುದು, ಬಸ್‌ನಲ್ಲಿ ಕೂತಾಗ ಸಿಂಗಪುರದ ವಿದ್ಯಾರ್ಥಿನಿಯಿಂದಾದ ವರ್ಣಭೇದದ ಅನುಭವದಿಂದ ಲೇಖಕಿಯ ಮನಸ್ಸು ಮುದುಡುವುದು, ಹದಿನಾಲ್ಕು ಅಂತಸ್ತಿನ ತಮ್ಮ ಮಗನ ಮನೆಯಲ್ಲಿ ಲೇಖಕಿ ಒಬ್ಬರೇ ಇರುವಾಗ ಅದೇ ಕಟ್ಟಡದ ಒಂದು ಮಹಡಿಯ ಮನೆಗೆ ಬೆಂಕಿ ಬಿದ್ದು ಫೈರ್ ಇಂಜಿನ್ ಬಂದು ಬೆಂಕಿ ಆರಿಸುವಾಗಲೂ ಸುತ್ತಮುತ್ತಲಿನ ಜನ ಕಿಂಚಿತ್ತೂ ಗಮನ ಹರಿಸದೆ ಕಣ್ಣೆತ್ತಿಯೂ ನೋಡದೆ ಹೋಗುವುದು…. ಇದೆಂಥಾ ಮುಂದುವರಿದ ದೇಶ ಮಾರ್ರೆ? 
ಶಾಂತಾ ನಾಗರಾಜ್‌ ಪ್ರವಾಸ ಕಥನ “ಯಾನ ಸಂಸ್ಕೃತಿ” ಕೃತಿಯ ಕುರಿತು ಕೆ.ಎನ್.‌ ಲಾವಣ್ಯ ಪ್ರಭಾ ಬರಹ

ಸಿಂಗಪುರದ ಇತಿಹಾಸ ಕ್ರಿ.ಶ. 14 ನೇ ಶತಮಾನದವರೆಗೆ ಲಿಖಿತ ರೂಪದಲ್ಲಿ ಏನೂ ಸಿಗುವುದಿಲ್ಲ. ಸುಮಾತ್ರಾದ ರಾಜಮನೆತನದ ವ್ಯಕ್ತಿ ಪರಮೇಶ್ವರ ಹೊಸ ರಾಜ್ಯ ಕಟ್ಟುವ ಸಲುವಾಗಿ ಮಲೇಷಿಯಾ ಕಡೆಗೆ ಬರುವಾಗ ಸಿಕ್ಕ ಭೂಮಿ ತಮಾಸೆಕ್ ಎಂಬ ಪ್ರದೇಶ‌ ಅವನ ಹಡಗು ಅಲ್ಲಿ ಬಂದಾಗ ನೀರಿನ ಮೇಲೆ ಅರ್ಧ ಶರೀರ ಬಿಳಿಯ ಸಿಂಹದಂತೆಯೂ ನೀರಿನಲ್ಲಿ ಮುಳುಗಿದ್ದ ಉಳಿದರ್ಧ ಶರೀರ ಭಾರೀ ಮೀನಿನಂತೆಯೂ ತೋರಿದ ಅಚ್ಚರಿಗೆ ಬೆರಗಾಗಿ ಅಲ್ಲೇ ನಲೆನಿಂತ ಚಿಕ್ಕರಾಜ್ಯವೊಂದನ್ನು ಕಟ್ಟಿದ ಅದಕ್ಕೆ ಸಿಂಗಪುರ (ಸಿಂಹಪುರದ ತದ್ಭವ ರೂಪ) ಎಂದು ಹೆಸರಿಸಿದ. ಮಣ್ಣು ಅಥವಾ ಕಲ್ಲಿನಲಿ ಕೆತ್ತಿಸಿರುವ ಅರ್ಧಸಿಂಹ ಮತ್ತು ಅರ್ಧಮೀನಿನ ಆಕೃತಿಯೇ ಇಂದಿಗೂ ಸಿಂಗಪುರದ ಚಿಹ್ನೆ. ಇದನ್ನು ‘”ಮರ್ ಲಯನ್ ” ಎನ್ನುತ್ತಾರಂತೆ. ಶಾಂತಕ್ಕ ಹೀಗೆ ಸಿಂಗಪುರದ ಉದಯವನ್ನು ಕಣ್ಮುಂದೆ ತೆರೆದಿಡುತ್ತಾರೆ. ಸಿಂಗಪುರದಲ್ಲಿ ಉದ್ಯೋಗವಿರುವ ಶಾಂತಕ್ಕನ ಮಗನ ಮನೆಗೆ ಲೇಖಕಿ ಪ್ರತಿವರ್ಷ ಮೂರು ತಿಂಗಳು ಹೋಗಿಬಂದ ಸಂದರ್ಭದಲ್ಲಿ ಆದ ಅನುಭವಗಳ ಮೊತ್ತವೇ ಈ ಕೃತಿ.

ಸಾವಿರಾರು ವರ್ಷಗಳ ಇತಿಹಾಸವಿರುವ, ಕೋಟ್ಯಂತರ ಜನಸಂಖ್ಯೆ, ಹಲವಾರು ಜಾತಿಧರ್ಮಗಳನ್ನು ಹೊಂದಿರುವ ನಮ್ಮ ಭಾರತದಲ್ಲಿರುವ ನಮ್ಮೀ ಕನ್ನಡನಾಡಿನ ಪುಟ್ಟ ಬೆಂಗಳೂರಿನಷ್ಟು ವಿಸ್ತೀರ್ಣದ ಸಿಂಗಪುರದ ಇತಿಹಾಸ ಬಹುಶಃ ಐನೂರು ವರ್ಷಗಳಷ್ಟಿರಬಹುದು.

(ಶಾಂತಾ ನಾಗರಾಜ್‌)

ಅಲ್ಲಿರುವುದೂ ಪ್ರಜಾಪ್ರಭುತ್ವ ಸರ್ಕಾರವೇ. ಆದರೆ ಅಲ್ಲಿ ಚಲಾವಣೆಯಾಗುತ್ತಿರುವುದು ಮಾತ್ರ ಸರ್ವಾಧಿಕಾರವೇ. ಅದರಲ್ಲೂ ಪುರುಷಪ್ರಧಾನ ಸರ್ಕಾರ. ರಸ್ತೆಗಳು, ವಾಹನಸಂಚಾರಗಳು, ಮದುವೆಗಳು, ಮನೆಗಳು, ಶಾಲೆಗಳು, ಉದ್ಯೋಗ ಎಲ್ಲದರಲ್ಲೂ ಜನರು ಕಟ್ಟುನಿಟ್ಟಾದ ರೂಲ್ಸ್‌ಗಳನ್ನು ಪಾಲಿಸಲೇಬೇಕಿರುವ ಭಯವಿರುವುದರಿಂದ ಅಸಾಧಾರಣ ಅಚ್ಚುಕಟ್ಟು ಶಿಸ್ತು ಸ್ವಚ್ಛತೆಯಿಂದ ಇಡೀ ಸಿಂಗಪುರ ಜಗತ್ತನ್ನೇ ಆಕರ್ಷಿಸುವಲ್ಲಿ ಮುಂಚೂಣಿಯಲ್ಲಿರುವುದಂತೂ ಸತ್ಯ. ಸರ್ಕಾರ ಮಾಡುವ ನಿಯಮಗಳನ್ನು ಪಾಲಿಸುವ ಜನರ ಬದ್ಧತೆ ಶಿಸ್ತು ಶ್ಲಾಘನೀಯ. ಹಾಗಾಗಿ ಎಲ್ಲಿಯೂ ಅವ್ಯವಸ್ಥೆಯಿಲ್ಲ. ನಿಯಮ ಪರಿಪಾಲಿಸದಿದ್ದರೆ ಫೈನ್ ಭಯವಿರುವುದರಿಂದ ಜನ ವಿಧೇಯರು. ಸಿಂಗಪುರ “ಫೈನ್ ಸಿಟಿ “. ಸರ್ಕಾರದ ಈ ವ್ಯವಸ್ಥೆ ಜನರ ವೈಯಕ್ತಿಕ ಬದುಕಿನಲ್ಲಿ ಮತ್ತು ಸಮಾಜದಲ್ಲಿ ಧನಾತ್ಮಕ ಮತ್ತು ಋಣಾತ್ಮಕವಾಗಿಯೂ ಪ್ರಭಾವ ಬೀರಿದೆ.

ಬಹುತೇಕ ಕಡೆಗಳಲ್ಲಿ ಲೇಖಕಿಯ ಅನುಭವಗಳ ಮೂಲಕ ಅತಿಯಾದ ಶಿಸ್ತಿನ ಭಯದ ಕಾರಣಕ್ಕಾಗಿ ಅಲ್ಲಿನ ಜನ ಮನುಷ್ಯ ಸಂವೇದನೆಯನ್ನೇ ಕಳೆದುಕೊಂಡಿದ್ದಾರೆ ಅನಿಸುವುದು ಅಕ್ಷರಶಃ ನಿಜ. ಒಮ್ಮೆ ಎಸ್ಕಲೇಟರಿನಲ್ಲಿ ಲೇಖಕಿ ಹೋಗುವಾಗ ಅಕಸ್ಮಾತ್ತಾಗಿ ಅವರ ಸೀರೆ ಸಿಕ್ಕಿಕೊಂಡು ಮೊಣಕಾಲಿನವರೆಗೂ ಹರಿದುಹೋಗುತ್ತಿದ್ದರೂ ಅಕ್ಕಪಕ್ಕದ ಜನ ತಮಗೆ ಸಂಬಂಧವೇ ಇಲ್ಲದವರಂತೆ ತಮ್ಮ ಪಾಡಿಗೆ ಹೋಗುವುದು, ಬಸ್‌ನಲ್ಲಿ ಕೂತಾಗ ಸಿಂಗಪುರದ ವಿದ್ಯಾರ್ಥಿನಿಯಿಂದಾದ ವರ್ಣಭೇದದ ಅನುಭವದಿಂದ ಲೇಖಕಿಯ ಮನಸ್ಸು ಮುದುಡುವುದು, ಹದಿನಾಲ್ಕು ಅಂತಸ್ತಿನ ತಮ್ಮ ಮಗನ ಮನೆಯಲ್ಲಿ ಲೇಖಕಿ ಒಬ್ಬರೇ ಇರುವಾಗ ಅದೇ ಕಟ್ಟಡದ ಒಂದು ಮಹಡಿಯ ಮನೆಗೆ ಬೆಂಕಿ ಬಿದ್ದು ಫೈರ್ ಇಂಜಿನ್ ಬಂದು ಬೆಂಕಿ ಆರಿಸುವಾಗಲೂ ಸುತ್ತಮುತ್ತಲಿನ ಜನ ಕಿಂಚಿತ್ತೂ ಗಮನ ಹರಿಸದೆ ಕಣ್ಣೆತ್ತಿಯೂ ನೋಡದೆ ಹೋಗುವುದು…. ಇದೆಂಥಾ ಮುಂದುವರಿದ ದೇಶ ಮಾರ್ರೆ? ಮುಂದೆ ಕೇಳಿ… ನೀರನ್ನೂ ಆಮದುಗೊಳಿಸಿಕೊಳ್ಳುವ ಈ ನಾಡಿಗೆ ಮಳೆ ಸಮೃದ್ಧವಾಗಿದ್ದರೂ ಇಲ್ಲಿರುವುದು ಅರಣ್ಯ ನಿರ್ಮಿತ ಕಾಡು. ಇಲ್ಲಿ ವಿಹರಿಸುವ ಜನರಾಗಲಿ‌ ಮಕ್ಕಳಾಗಲಿ ಮರದ ಒಂದೇ ಒಂದು ಎಲೆಯನ್ನಾಗಲಿ ಹಣ್ಣನ್ನಾಗಲಿ ಮುಟ್ಟುವುದಿಲ್ಲ. ಶಾಲೆಯ ಮಕ್ಕಳು ಜೋರಾಗಿ ಗಲಾಟೆ ಮಾಡುವುದಿರಲಿ ಮಾತಾಡುವಾಗಲೂ ತಮ್ಮ ಪಕ್ಕದಲ್ಲಿದ್ದವನಿಗೆ ಮಾತ್ರ ಕೇಳಿಸುವ ಸಣ್ಣ ದನಿಯಲ್ಲೇ ಮಾತಾಡಬೇಕು. ಅಷ್ಟೇ ಅಲ್ಲ ಯಾರೂ ಯಾರೊಬ್ಬರ ಮಕ್ಕಳನ್ನು ಟಚ್ ಮಾಡುವಂತಿಲ್ಲ. ಇತ್ತೀಚೆಗೆ ಹೆಚ್ಚಾಗುತ್ತಿರುವ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟಲು ಈ ರೂಲ್ ಒಂದು ರೀತಿಯಲ್ಲಿ ಸಮಂಜಸವಾದರೂ…. ಮಮತೆ ವಾತ್ಸಲ್ಯಕ್ಕೆ ಇಲ್ಲಿ ಶಿಸ್ತಿನ ಫ್ರೇಮ್ ಹಾಕಿ ತೂಗುಹಾಕಿಲ್ಲವೆನಿಸುವುದಿಲ್ಲವೇ?

ಆದರೂ ಸರ್ಕಾರದ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸುವ ವಿಧೇಯ ನಾಗರಿಕರು ತಮ್ಮ ಔದಾರ್ಯವನ್ನೂ ಒಮ್ಮೊಮ್ಮೆ ಮೆರೆಯುತ್ತಾರೆ. ಆಫೀಸಿನ ಉದ್ಯೋಗಿಯೊಬ್ಬನ ಪತ್ನಿಗೆ ಮೊದಲ ಮಗುವಾಗಿರುತ್ತದೆ ಆಕೆ ಭಾರತದಲ್ಲಿದ್ದಾಳೆ. ಅವನಿಗೆ ಬರಲು ಆರ್ಥಿಕ ಸಂಕಷ್ಟ. ಇದನ್ನು ಮನಗೊಂಡ ಮೇಲಾಧಿಕಾರಿಣಿ ತಮ್ಮ ಸಹೋದ್ಯೋಗಿಗಳ ಜೊತೆಗೂಡಿ ಒಂದಷ್ಟು ಹಣ ಒಟ್ಟುಗೂಡಿಸಿ ಅವನಿಗೆ ಕೊಟ್ಟು “ಮೊದಲ ಮಗುವಿಗೆ ಅಪ್ಪನಾಗಿದ್ದೀಯೆ. ಇದು ಜೀವನದ ವಿಶೇಷ ಸಂಭ್ರಮ. ಮೊದಲು ಹೋಗಿ ಮಗುವನ್ನು ನೋಡು” ಎಂಥಾ ಔದಾರ್ಯ!

ಮತ್ತೊಂದು ಪ್ರಸಂಗ ಲೇಖಕಿ ಒಮ್ಮೆ ಶಾಪಿಂಗ್ ಮಾಲ್‌ನಲ್ಲಿ ಏನೋ ಕೊಳ್ಳುವಾಗ ಕೊನೆಯಲ್ಲಿ ಅದರ ಮಾಲೀಕಳು “ಪಕ್ಕದಲ್ಲಿ ನಿಂತ ನನ್ನಮ್ಮ ಹೇಳುತ್ತಿದ್ದಾಳೆ ನೀನು ತುಂಬಾ ಸುಂದರಿ ಎಂದು” ಎಂದಾಗ ವರ್ಣಭೇದದ ಅನುಭವದಿಂದ ನೊಂದಿದ್ದ ಆಕೆ ಮಾಲೀಕಳಿಗೆ ವಿವರಿಸಿ ಹೇಳಿ ಇದಕ್ಕೆ ಹೇಗೆ ಖುಷಿ ಪಡಲಿ ಎನ್ನುತ್ತಾರೆ. ಆಗ ಆ ಶಾಪಿನ ಮಾಲೀಕಳು “ನನ್ನ‌ ಅಮ್ಮ ಹೇಳುತ್ತಿರುವುದು ನಿನ್ನ ಆತ್ಮಸೌಂದರ್ಯವನ್ನು. ಪ್ರಶಾಂತವಾದ ಮುಖಭಾವ ಹೊಳೆಯುವ ಕರುಣೆ ತುಂಬಿದ ಕಣ್ಣುಗಳಿರುವ ಈಕೆ ಕರುಣಾಮಯಿಯೇ ಆಗಿರುತ್ತಾಳೆ” ಎಂದು. ಈ ಎರಡೂ ಪ್ರಸಂಗಗಳನ್ನು ಓದಿಯೇ ಕಣ್ಣಂಚು ಒದ್ದೆಯಾದವು.

ಸರ್ಕಾರದ ನಿಯಮಗಳು ಶಿಸ್ತಿನ ಪರಿಣಾಮ ಯಂತ್ರಗಳಂತೆ ಬದುಕುವ ಜನರು ಯಂತ್ರಗಳಲ್ಲ. ಮನುಷ್ಯ ಸಂವೇದನೆಗಳನ್ನು ತಮ್ಮೊಳಗೆ ಕಷ್ಟ ಪಟ್ಟು ಒತ್ತಿಟ್ಟಕೊಂಡಿರುವ ನಮ್ಮಂತಹ ಮನುಷ್ಯರೇ. ಅವರ ಬಗ್ಗೆ ಅಯ್ಯೋ ಎನಿಸುತ್ತದೆ.

ಅನೇಕ ವಿಶಿಷ್ಟ ಸಂಗತಿಗಳು ವಿಚಿತ್ರವೂ ಹೌದು. ಜಗತ್ತಿನಲ್ಲಿರುವ ಯಾವುದೇ ಪ್ರಾಣಿಗಳನ್ನೂ ಬಿಡದೆ ತಿನ್ನುವ ಈ ಜನ ಮನೆಯಲ್ಲಿ ಅಡುಗೆ ಮಾಡುವುದಿಲ್ಲ. ಹತ್ತು ಹೆಜ್ಜೆಗೊಂದರಂತೆ ಹ್ಯಾಕರ್ ಸೆಂಟರ್‌ಗಳಿರುತ್ತವೆ. ಮಹಿಳೆಯರೇ ನಡೆಸುವ ದರ್ಶಿನಿಯಂತಹ ಇಲ್ಲಿ ಎಲ್ಲಾ ರೀತಿಯ ಅಡುಗೆ ತಿನಿಸುಗಳು ಸಿಗುತ್ತವೆ. ಉದ್ಯೋಗಸ್ಥ ಮಹಿಳೆಯರೂ ಗೃಹಿಣಿಯರೂ ಯಾರೂ ಅಡುಗೆ ಮಾಡುವುದಿಲ್ಲವಂತೆ! ಹುರ್ರೇ… ನಮ್ಮ ಹೆಣ್ಮಕ್ಕಳಿಗೆ ವಾರದಲ್ಲೊಂದೆರಡು ದಿನ ಹೀಗೆ ಕಳೆಯುವುದಾದರೆ ಎಷ್ಟು ಚಂದ ಎನಿಸಿದರೂ ಈಗ ಸುಮಾರು‌ ಮನೆಗಳ ಒಲೆ ಹತ್ತದೇ ಹೊರಗಿನ ದರ್ಶಿನಿಗಳು ಹೆಚ್ಚು ಜನಪ್ರಿಯವಾಗುತ್ತಿರುವುದು ಸುಳ್ಳಲ್ಲ. ಆದರೂ ಅನೇಕ ಕಡೆ ಹೆಣ್ಮಕ್ಕಳು ಉದ್ಯೋಗಿಯಾದರೂ ಗೃಹಿಣಿಯಾದರೂ ಅಡುಗೆಮನೆಯಲ್ಲಿ ಬೇಯುವ ಶೋಚನೀಯ ಸ್ಥಿತಿ ಕಣ್ಮುಂದೆ ಬಂತು.

ಇಲ್ಲಿನ ಸಿಂಗ್ಲಿಷ್ ಭಾಷೆ ಭಾರಿ‌ ಮಜಾ ಕೊಡ್ತು. ಈ ದೇಶದ ಬಹುಪಾಲು ಜನರು ಚೀನೀಯರೇ. ಟ ರ ಡ ಕಾರ ಇವರಿಗೆ ಉಚ್ಚರಿಸಲು ಬರುವುದಿಲ್ಲ ಮತ್ತು ಎಲ್ಲಾ ಪದಗಳಿಗೂ ‘ಲಾ’ ಸೇರಿಸ್ತಾರಂತೆ. ‘ಡೋಂಟ್ ನೋ’ ಎನ್ನಲಿಕ್ಕೆ ‘ದೋಂತ್ ನೋಲಾ’ ಹಾಗೆಯೇ.. ವಾತ್ ಲಾ, ಕಮಿಂಗ್ ಲಾ…. ಹಹ್ಹಹ್ಹಾ… ನಂಗಿಷ್ಟವಾಯ್ತು ಮಸ್ತ್ ಅಲ್ವಾ? ಒಮ್ಮೆ ಲೇಖಕಿ‌ ಬಸ್‌ನಲ್ಲಿ ಹೋಗುವಾಗ ಇದ್ದಕ್ಕಿದ್ದಂತೆ ಬಸ್ ನಿಲ್ಲುತ್ತದೆ. ಯಾಕೆ ಎಂದು ವಿಚಾರಿಸುವಾಗ ಡ್ರೈವರ್ ‘ತೀಫೆಲ್ ದೋನ್’ ಅಂದಿದ್ದು ಕೇಳಿ ಯಾರೋ ಮೂವರು ಬಿದ್ದುಬಿಟ್ಟಿದ್ದಾರೆ ಅಂದ್ಕೊಂಡ್ರಂತೆ. ಕೊನೆಗೆ ತಿಳೀತಂತೆ.. ಟ್ರೀ ಫೆಲ್ ಡೌನ್ ಅಂತ!

ತಮಾಷೆಯೆಂದರೆ ಮದುವೆಗೆ ಉಡುಗೊರೆ ಕಡ್ಡಾಯ ಈ ಪದ್ಧತಿ ಹೆಸರು ‘ಹಂಗ್ ಭಾವ್’, ಹಂಗಿನೂಟ ಯಾಕೆ ಅಂತ…. ಅಲ್ವಾ?

ಅಡುಗೆಮನೆಯೊಳಗೆ ಟಾಯ್ಲೆಟ್ ಇರೋದು ನೋಡಿ ಹೊಟ್ಟೆ ತೊಳಸಿದ್ದು ಶಾಂತಕ್ಕಂಗಷ್ಟೇ ಅಲ್ಲ ನಂಗೂ ಸಹಾ. ಕಾರಣ ಏನ್ಮಾಡಿದ್ರೂ ಹೊಳೆಯಲಿಲ್ಲವಂತೆ. ಅಲ್ಲಿ ಹೋಗಿ ಇರುವ ನಮ್ಮ ಭಾರತೀಯ ಹುಡುಗರು, ಈ ಜನ ಸಿಕ್ಕ ಪ್ರಾಣಿಗಳನ್ನೆಲ್ಲಾ ತಿಂದು ಅರಗಿಸಿಕೊಳ್ಳದಿದ್ದಾಗ ವಾಂತಿ ಮಾಡ್ಕೊಳೋಕೋ ಟಾಯ್ಲೆಟ್ಟಿಗೆ ಹೋಗೋಕೆ ತಕ್ಷಣ ಬೇಕಲ್ಲಾ ಅದಕ್ಕೆ ಹೀಗೆ ಮಾಡ್ಕೊಂಡಿದ್ದಾರೆ ಅಂತಾ ಜೋಕ್ ಮಾಡ್ತಾರಂತೆ.

“ಅವೇರ್” ಎಂಬ ಮಹಿಳಾ ಸಂಸ್ಥೆ ಎಲ್ಲಾ ಮಧ್ಯಮ ಮತ್ತು ಉನ್ನತ ವರ್ಗದ ಗಂಡಸರಿಂದಲೂ ದೌರ್ಜನ್ಯಕ್ಕೊಳಪಡುವ ಹೆಣ್ಮಕ್ಕಳಿಗೆ ಕೌನ್ಸೆಲಿಂಗ್ ಮಾಡಿ ಆತ್ಮವಿಶ್ವಾಸ ತುಂಬುವುದಷ್ಟೇ ಕೆಲಸ. ಆದರೆ ಪ್ರತಿಭಟನೆ ಇಲ್ಲಿಲ್ಲ. ಮಹಿಳಾ ಸ್ವಾತಂತ್ರ್ಯದ ಬಗ್ಗೆ ಮಾತಾಡುವ ಹಾಗಿಲ್ಲ. ಸರ್ಕಾರದ ಬಗೆಗಾಗಲಿ ವ್ಯವಸ್ಥೆ ನಿಯಮಗಳ ಬಗೆಯಾಗಲಿ ಅಪಾರ ವಾಕ್ ಸ್ವಾತಂತ್ರ್ಯ ಪಡೆದಿರುವ ನಮ್ಮ ಜನರನ್ನೊಮ್ಮೆ ನೆನಪಿಸಿಕೊಂಡೆ.

ಜಗತ್ತಿನಲ್ಲಿರುವ ಯಾವುದೇ ಪ್ರಾಣಿಗಳನ್ನೂ ಬಿಡದೆ ತಿನ್ನುವ ಈ ಜನ ಮನೆಯಲ್ಲಿ ಅಡುಗೆ ಮಾಡುವುದಿಲ್ಲ. ಹತ್ತು ಹೆಜ್ಜೆಗೊಂದರಂತೆ ಹ್ಯಾಕರ್ ಸೆಂಟರ್‌ಗಳಿರುತ್ತವೆ. ಮಹಿಳೆಯರೇ ನಡೆಸುವ ದರ್ಶಿನಿಯಂತಹ ಇಲ್ಲಿ ಎಲ್ಲಾ ರೀತಿಯ ಅಡುಗೆ ತಿನಿಸುಗಳು ಸಿಗುತ್ತವೆ. ಉದ್ಯೋಗಸ್ಥ ಮಹಿಳೆಯರೂ ಗೃಹಿಣಿಯರೂ ಯಾರೂ ಅಡುಗೆ ಮಾಡುವುದಿಲ್ಲವಂತೆ! ಹುರ್ರೇ… ನಮ್ಮ ಹೆಣ್ಮಕ್ಕಳಿಗೆ ವಾರದಲ್ಲೊಂದೆರಡು ದಿನ ಹೀಗೆ ಕಳೆಯುವುದಾದರೆ ಎಷ್ಟು ಚಂದ ಎನಿಸಿದರೂ ಈಗ ಸುಮಾರು‌ ಮನೆಗಳ ಒಲೆ ಹತ್ತದೇ ಹೊರಗಿನ ದರ್ಶಿನಿಗಳು ಹೆಚ್ಚು ಜನಪ್ರಿಯವಾಗುತ್ತಿರುವುದು ಸುಳ್ಳಲ್ಲ.

ಹದಿಹರೆಯದವರಿಗೆ ಮುಕ್ತ ಲೈಂಗಿಕ ಸ್ವಾತಂತ್ರ್ಯ ಕೊಟ್ಟ ಪರುಷಪ್ರಧಾನ ಸರ್ಕಾರ ಗರ್ಭಧರಿಸುವ ಅಬಾರ್ಷನ್ ಮಾಡಿಸಿಕೊಳ್ಳುವ ಹಕ್ಕನ್ನು ಮಾತ್ರ ಕಿತ್ತುಕೊಂಡಿದೆ. ಹಾಗಾಗಿ ಹೈಸ್ಕೂಲ್ ಓದುವ ಹೆಣ್ಮಕ್ಕಳಿಗೆ ಪ್ರತಿನಿತ್ಯ ಗರ್ಭನಿರೋಧಕ ಮಾತ್ರೆ ಸೇವನೆ ಮಾಡಿಸುವರಂತೆ ಅವರ ತಾಯಂದಿರು! ಉಸ್ಸಪ್ಪಾ… ಎದೆ ಧಸಕ್ಕೆಂದಿತು.

ಸರ್ಕಾರ ಪ್ರವಾಸೋದ್ಯಮಕ್ಕಾಗಿ ವೇಶ್ಯಾವಾಟಿಕೆಯನ್ನು ಸಹಾ ಪ್ರೋತ್ಸಾಹಿಸುವುದರಿಂದ ಬಹಳಷ್ಟು ಹೆಣ್ಮಕ್ಕಳು ತಮ್ಮ ದುಡಿತಕ್ಕಾಗಿ ವೇಶ್ಯಾವಾಟಿಕೆಯನ್ನು ವೃತ್ತಿಯಾಗಿಸಿಕೊಂಡು ಅದನ್ನು ವಿರೋಧಿಸುವವರನ್ನೇ ವಿರೋಧಿಸುವುದು…. ಇದು ಪ್ರಗತಿಯೋ ವಿನಾಶವೋ?

ರಂಜಾನ್ ಹಬ್ಬವನ್ನು ‘ರಮಾದೀನ್’ ಹಬ್ಬವೆನ್ನುವ ಅದರ ಮುಕ್ತಾಯದ ದಿನವನ್ನು ‘ಹರಿರಾಯ’ ಎನ್ನುವ ಮಾನಿಸ ಆಸ್ಥಾನ ರಾಜ ರಾಣಿ ಪಂಚೇಂದ್ರಿಯ ಮೊದಲಾದ ಹೆಸರುಗಳನ್ನು ಬಳಸುವ ದೇಶ, ‘ಬ್ಯಾಂಕ್ ಭೂಮಿಪುತ್ರ’ ಎಂಬ ಬ್ಯಾಂಕು, ‘ವನಿತಾ’ ಎಂಬ ಮಹಿಳಾ ದಿನಪತ್ರಿಕೆ ಹೀಗೆ ಸಂಸ್ಕೃತ ಮತ್ತು ಕನ್ನಡ ಭಾಷೆಯ ಬಳಕೆಯಿರುವ ಹಿಂದೆ ಮಲಯಾ ಆಗಿದ್ದು ಈಗ ಮಲೇಷಿಯಾ ಆಗಿರುವ ಈ ದೇಶ ಅತ್ಯಂತ ಸುಂದರ ದೇಶ. ಪ್ರಕೃತಿಯ ಮಡಿಲಲ್ಲಿರುವ ಮಲೇಷಿಯಾ ಸಿಂಗಪುರದ ಚೀನಿಯರಂತೆ ಹುಬ್ಬುಗಂಟಿಕ್ಕದ ಸ್ನೇಹಮಯಿಗಳು. ಮೊದಲು ಹಿಂದೂ ಧರ್ಮದ ಇತಿಹಾಸವಿದ್ದ ದೇಶ ಈಗ ಮುಸ್ಲಿಂ ದೇಶವಾದರೂ ತಮ್ಮ ಮೂಲ ಸಂಸ್ಕೃತಿಯನ್ನು ಮಹಮದೀಯ ನಂಬಿಕೆಯೊಂದಿಗೆ ಬೆಸೆದು ತಮ್ಮದೇ ಆದ ಸಂಸ್ಕೃತಿಯನ್ನು ರೂಢಿಸಿಕೊಂಡಿದ್ದಾರೆ. ಮಲೇಷಿಯಾ ಹೆಣ್ಮಕ್ಕಳು ವಿದ್ಯೆ ಮತ್ತು ಸ್ವಲ್ಪಮಟ್ಟಿಗೆ ಸ್ವಾತಂತ್ರ್ಯ ಎರಡನ್ನೂ ಪಡೆದಿರುವುದು ಒಳ್ಳೆಯ ಸಂಗತಿ.

ಇನ್ನು ಥೈಲ್ಯಾಂಡ್ ವೈಭವ….. ಅಬ್ಬಾ! ಓದಿಯೇ ನೀವು ಅನುಭವಿಸಬೇಕು. ಬುದ್ಧನಷ್ಟೇ ಇಲ್ಲಿ ರಾಮನೂ ಜನಪ್ರಿಯ. ರಾಮಾಯಣ ಇವರ ಪವಿತ್ರ ಗ್ರಂಥ ಮತ್ತು ರಾಮ ಇಲ್ಲಿ ಸದಾ ಜೀವಂತ. ಈ ಜನ ತಮ್ಮ ರಾಜನನ್ನು ಕರೆಯುವುದೇ ‘ರಾಮ’ ಎಂದು. ರಾಜರಾಡಳಿತ ಇಲ್ಲವಾದರೂ ಸರ್ಕಾರ ಪ್ರತಿಯೊಂದು ನಿರ್ಧಾರ ತೆಗೆದುಕೊಳ್ಳುವ ಮೊದಲು ಆಯಾ ಕಾಲದ ರಾಜರ ಸಲಹೆ ತೆಗೆದುಕೊಳ್ಳುವುದಂತೆ. ಅಲ್ಲಿನ ಬ್ಯಾಂಕಾಕ್‌ನಲ್ಲಿ ಜಗತ್ಪ್ರಸಿದ್ಧ ರತ್ನಗಳು ವಜ್ರಗಳೂ ಸಿಗುವ ಕಾರಣ ಜಗತ್ತಿನ ಅತ್ಯಂತ ದೊಡ್ಡ ಹರಳು ವಜ್ರ ಮತ್ತು ಚಿನ್ನದಾಭರಣಗಳ ಮಳಿಗೆಗಳಿಲ್ಲಿವೆ.
ಆಸೆಯೇ ದುಃಖಕ್ಕೆ ಮೂಲ ಎಂದು ವಿರಾಗಿಯಾದ ಬುದ್ಧ ಇಲ್ಲಿ ವೈಭವೋಪೇತವಾಗಿ ಪೂಜಿಸಲ್ಪಡುವುದು ಅತ್ಯಂತ ವಿಷಾದದ ಸಂಗತಿ. ಸರ್ಕಾರ ಪ್ರವಾಸೋದ್ಯಮಕ್ಕನುಕೂಲವಾಗಲು ಪ್ರೋತ್ಸಾಹಿಸುವ ವೇಶ್ಯಾವಾಟಿಕೆ ಹದಿಹರೆಯದ ಹೆಣ್ಮಕ್ಕಳನ್ನು ಬಲಿತೆಗೆದುಕೊಂಡಿದೆ. ಸ್ವಇಚ್ಛೆಯಿಂದ ಇದನ್ನು ಸ್ವೀಕರಿಸುವ ಸ್ತ್ರೀಯರು ವೇಶ್ಯಾವಾಟಿಕೆ ಹದ್ದುಬಸ್ತಿನಲ್ಲಿಡಲು ಸರ್ಕಾರ ತರುವ ನಿಯಮಗಳನ್ನು ಪ್ರತಿಭಟಿಸಿ ‘ನನ್ನ ದೇಹ ನನ್ನ ಹಕ್ಕು’ ಎಂಬಲ್ಲಿಗೆ ಬಂದು ನಿಂತಿರುವ ಸ್ತ್ರೀಯರ ಈ ಸ್ವಾತಂತ್ರ್ಯವನ್ನು ಪ್ರಗತಿಯೆನ್ನುವಿರಾ?

ಅತ್ಯಂತ ಮನಸೆಳೆದದ್ದು ಇಡೀ ಕುಟುಂಬ ನೋಡಬಹುದಾದ ‘ಟಿಫಾನಿಸ್ ಕ್ಯಾಬರೆ ಶೋ’ ಗಂಡು ಹೆಣ್ಣುಗಳಾಗಿ ನರ್ತಿಸುವ ಪ್ರದರ್ಶನವೆಲ್ಲೂ ಅಶ್ಲೀಲವೆನಿಸುವುದಿಲ್ಲ. ಕ್ಲಾಸಿಕ್ ಎನಿಸುವ ರಾಮಾಯಣ ಪ್ರಸಂಗ ಚೈನಾದ ಕೊನೆಯ ಚಕ್ರವರ್ತಿ ಕಥೆ ಬುದ್ಧನ ತ್ರಿಪಿಟಕದ ಒಂದು ಭಾಗ ಹೀಗೆ ಒಳಗೊಂಡಿರುವುದೆ ಈ ಶೋ. ಆದರೆ ಜಗತ್ಪ್ರಸಿದ್ಧ ಈ ಶೋನಲ್ಲಿ ನರ್ತಿಸಲು ಪ್ರಕೃತಿಗೆ ವಿರುದ್ಧವಾಗಿ ಹಾರ್ಮೋನು ಇಂಜಕ್ಷನ್ ಸರ್ಜರಿಗಳಿಂದ ಗಂಡು ಹೆಣ್ಣಾಗುವ ಪರಿ ಪ್ರವಾಸೋದ್ಯಮದ ಬಹುಮುಖ್ಯ ಆಕರ್ಷಣೆಯಾದರೂ ವಿವಾಹ ಮತ್ತು ಸೆಕ್ಸ್ ವ್ಯವಸ್ಥೆ ಹೇಗೆ? ಹೆಣ್ಣಾಗಬಹುದು ತಾಯಿಯಾಗಲು ಸಾಧ್ಯವಿಲ್ಲ. ತಾರುಣ್ಯ ಕಳೆದ ಮೇಲೆ ಬದುಕು ದುರ್ಭರ. ಪ್ರವಾಸೋದ್ಯಮದಾಕರ್ಷಣೆಗಾಗಿ ಹೆಣ್ಮಕ್ಕಳನ್ನು ಸೆಕ್ಸ್ ವರ್ಕರ್ ಮಾಡಿದ್ದಾಯ್ತು. ಹಣವಂತರನ್ನು ಸೆಳೆಯಲು ಮತ್ತೊಂದು ಆಮಿಷ ‘ಟ್ರಾನ್ಸ್ ವೆಸ್ ಟೈಟ್’! ಎಲ್ಲಿದ್ದೇವೆ ನಾವು? ಇದೂ ಜೀವನವೇ? ನನ್ನ ದೇಶ ನನ್ನೂರು ನನ್ನ ಭಾಷೆ ನನ್ನೀ ಮಣ್ಣು ಈ ಗಾಳಿ ಈ ಪ್ರಿಯಜನರೂ ಇಲ್ಲಿನ ವ್ಯವಸ್ಥೆ ಅವ್ಯವಸ್ಥೆಗಳ ನಡುವೆ ಸಹ್ಯವಾಗುತ್ತಾರೆ. ದೀರ್ಘವಾದ ಉಸಿರೆಳೆದುಕೊಂಡೆ ಒಮ್ಮೆ.

ಮೌನಕಲೆಯ ವಿಶ್ವ ಸಾಮ್ರಾಟ ಮಾರ್ಪಲ್ ಮಾರ್ಸ್ಯೂ ಮೂಕಾಭಿನಯದ ರಂಗ ಪ್ರದರ್ಶನದಲ್ಲಿ “ಆತ ಮರವಾದ ಮಗುವಾದ ಹೆಣ್ಣಾದ ಗಂಡಾದ ರಸಿಕನಾದ ವೇದಾಂತಿಯಾದ ಜನತುಂಬಿದ ಸಂತೆಯಾದ ಸಂತೆಯೊಳಗೆ ಏಕಾಂಗಿಯಾದ, ನಕ್ಕ, ಅತ್ತ, ನಿಂತ ಕುಳಿತ ಮಲಗಿ ವಿಲವಿಲ ಒದ್ದಾಡಿ ನಗುವ ಮುಖವಾಡವನ್ನು ಕಷ್ಟ ಪಟ್ಟು ಕಿತ್ತೆಸೆದು ಕೊನೆಗೆ ಸೋತುಸುಣ್ಣವಾದ ಅವನ “ನಿಜಮುಖ” ಗೋಚರಿಸುವಾಗ ನಮ್ಮೊಳಗೆ ನಾವು ಆರ್ದ್ರವಾಗುವ ಹೊತ್ತು….. ಹ್ಯಾಟ್ಸಾಫ್ ಮಾರ್ಸ್ಯೂ…

ಹಾಟ್ಸಾಫ್ ಶಾಂತಕ್ಕ! ಬರಹದಲ್ಲಿ ಏನೆಲ್ಲಾ ತುಂಬಿ ಎದೆಯಲ್ಲಿಟ್ಟಿರಿ. ನಿಮ್ಮ ಎಲ್ಲಾ ಸಂವೇದನೆಗಳನ್ನು ಸಾಮಾಜಿಕ ಕಾಳಜಿಯನ್ನು ಖುದ್ದು ನಾನೂ ಅನುಭವಿಸಿದೆ. ಕನ್ನಡಿಗರೆಲ್ಲರೂ ಓದಲೇಬೇಕಾದ ಸೊಗಸಾದ ಪ್ರವಾಸ ಕಥನ. ಓದಿ.

(ಕೃತಿ: ಯಾನ ಸಂಸ್ಕೃತಿ (ಪ್ರವಾಸ ಕಥನ), ಲೇಖಕರು: ಶಾಂತಾ ನಾಗರಾಜ್, ಪ್ರಕಾಶಕರು: ಸಾಹಿತ್ಯಲೋಕ ಪಬ್ಲಿಕೇಷನ್ಸ್, ಬೆಲೆ: 200/-)