ಸಾಹಿತ್ಯಾಸಕ್ತೆ ವೈದ್ಯೆ ವಿನಯಾರಿಗೆ ಇರುವ ಭಾಷೆಯ ಮೇಲಿನ ಹಿಡಿತದಿಂದಾಗಿ ವೈದ್ಯ ಸಾಹಿತ್ಯದ ಈ ಕೃತಿ ಸುಲಲಿತವಾದ ಭಾಷಾ ಪ್ರಯೋಗದಿಂದ ಆಹ್ಲಾದಕರವಾದ ಓದನ್ನು ಸಾಧ್ಯವಾಗಿಸಿದೆ. ಪ್ರತಿಯೊಂದು ಲೇಖನದಲ್ಲೂ ಆರೋಗ್ಯಕರ ಜೀವನ ರೂಪಿಸಿಕೊಳ್ಳಲು ವ್ಯಕ್ತಿ ಹೊಂದಿರಬೇಕಾದ ಮೂಲಭೂತವಾದ ವೈಜ್ಞಾನಿಕ ಅರಿವನ್ನು ಮೂಡಿಸಲು ಲೇಖಕಿ ಪ್ರಾಂಜಲ ಮನದಿಂದ ಯತ್ನಿಸಿದ್ದಾರೆ. ಇದಕ್ಕಾಗಿ ಅವರು ತಮ್ಮ ವೈದ್ಯಕೀಯ ವೃತ್ತಿಯಲ್ಲಿ ಎದುರಾಗುವ ಸಹಜ ಸನ್ನಿವೇಶಗಳನ್ನು ಬಳಸಿಕೊಂಡು ಸೋದಾಹರಣವಾಗಿ ವೈಜ್ಞಾನಿಕ ವಿಷಯಗಳನ್ನು ಆಪ್ತವಾಗಿ ಲೇಖನಗಳಲ್ಲಿ ಅಭಿವ್ಯಕ್ತಿಸಿದ್ದಾರೆ.
ಡಾ. ವಿನಯ ಶ್ರೀನಿವಾಸ್ ವೈದ್ಯಕೀಯ ಬರಹಗಳ ಕೃತಿ “ಆರೋಗ್ಯ ದೀವಿಗೆ” ಕುರಿತು ಕೆ.ಆರ್.ಉಮಾದೇವಿ ಉರಾಳ ಬರಹ
“ಆರೋಗ್ಯ ದೀವಿಗೆ” ಕೃತಿಯು ಇದೇ 2023 ರಲ್ಲಿ ಪ್ರಕಟವಾಗಿರುವ ಡಾ.ವಿನಯಾ ಶ್ರೀನಿವಾಸ್ ರವರ ಚೊಚ್ಚಲ ಕೃತಿ. ವಿನಯಾ ಶ್ರೀವಿವಾಸ್ರವರ ಆರೋಗ್ಯ ಸಂಬಂಧಿ ಲೇಖನಗಳು, ಮಕ್ಕಳ ಕಥೆಗಳು, ಪ್ರಬಂಧಗಳು, ಹನಿಗವನಗಳು ಸುಮಾರು ಇಪ್ಪತ್ತೈದು ವರ್ಷಗಳಿಂದಲೂ ನಿರಂತರವಾಗಿ ಕನ್ನಡದ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲೂ ಪ್ರಕಟವಾಗುತ್ತಲೇ ಇರುವುದರಿಂದ ನಾಡಿನಾದ್ಯಂತ ಇವರು ಓದುಗರಿಗೆ ಚಿರಪರಿಚಿತರೇ. “ಆರೋಗ್ಯ ದೀವಿಗೆ” ಕೃತಿಯ ಲೇಖನಗಳು ಕೂಡ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದವುಗಳು. ಶಿವಮೊಗ್ಗಾದ ಪ್ರತಿಷ್ಠಿತ ಸುಬ್ಬಯ್ಯ ಸಮೂಹ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ವಿನಯಾರವರು ವೃತ್ತಿಯಲ್ಲಿ ರೋಗಲಕ್ಷಣ ಶಾಸ್ತ್ರಜ್ಞೆ. ಪ್ರತಿಭಾವಂತೆ ವಿನಯಾರವರು ಮಾಧ್ಯಮಿಕ ಶಿಕ್ಷಣದವರೆಗೂ ಕನ್ನಡ ಮಾಧ್ಯಮದಲ್ಲಿ ಓದಿದವರು. ಪಿಯುಸಿವರೆಗಿನ ವಿದ್ಯಾಭ್ಯಾಸವನ್ನು ತೀರ್ಥಹಳ್ಳಿಯಲ್ಲೇ ಮುಗಿಸಿದವರು. ಮುಖ್ಯವಾಗಿ ಹೆಸರಿಗೆ ಅನ್ವರ್ಥಕವಾಗಿ ತುಂಬಿದ ಕೊಡ ತುಳುಕದು ಎಂಬಂತೆ ವಿನಯಪೂರ್ಣ ಸುಸಂಸ್ಕೃತ ವ್ಯಕ್ತಿತ್ವದ ಡಾ. ವಿನಯಾರವರು ಉಚಿತ ಆರೋಗ್ಯ ಮತ್ತು ರಕ್ತದಾನ ಶಿಬಿರಗಳನ್ನು ಆಯೋಜಿಸುವುದು ಸಾಹಿತ್ಯ ಸಮ್ಮೇಳನಗಳಲ್ಲಿ ಪ್ರಬಂಧಗಳನ್ನು ಮಂಡಿಸುವುದು ಮುಂತಾದ ಸಮಾಜಮುಖಿ ಹಾಗೂ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರಿಯರು. ಇವರ ಸಂಪಾದಕತ್ವದಲ್ಲಿ “ಚರಕ” ಪತ್ರಿಕೆಯು ಪ್ರಕಟವಾಗುತ್ತಿದೆ. ಇವರ “ನಿನ್ನೆ ನಿನ್ನೆಗೆ ಇಂದು ಇಂದಿಗೆ” ಕೃತಿಯ ಹಸ್ತಪ್ರತಿಗೆ ಡಾ. ಸುನಂದಾ ಆರ್. ಕುಲಕರ್ಣಿ ಶ್ರೇಷ್ಠ ಸಾಹಿತ್ಯ ಹಸ್ತಪ್ರತಿ ಪ್ರಶಸ್ತಿ ಲಭಿಸಿದೆ.
“ಆರೋಗ್ಯ ದೀವಿಗೆ” ಕೃತಿಯಲ್ಲಿ ಆರೋಗ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ವಹಿಸಬೇಕಾದ ಮುಂಜಾಗ್ರತೆಗಳು; ಅನಾರೋಗ್ಯ ಮತ್ತು ಅನಾರೋಗ್ಯಕ್ಕೊಳಗಾದಾಗ ವಹಿಸಬೇಕಾದ ಎಚ್ಚರಿಕೆಗಳು; ಆರೋಗ್ಯ ನಿರ್ವಹಣೆಯಲ್ಲಿ ಮನಸ್ಸಿನ ಪಾತ್ರ ಹೀಗೆ ವಿವಿಧ ಆಯಾಮಗಳಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಕ್ಷಮತೆಗೆ ಸಂಬಂಧಿಸಿದಂತೆ ಅರವತ್ತೊಂದು ಲೇಖನಗಳಿವೆ. ಸಾಹಿತ್ಯಾಸಕ್ತೆ ವೈದ್ಯೆ ವಿನಯಾರಿಗೆ ಇರುವ ಭಾಷೆಯ ಮೇಲಿನ ಹಿಡಿತದಿಂದಾಗಿ ವೈದ್ಯ ಸಾಹಿತ್ಯದ ಈ ಕೃತಿ ಸುಲಲಿತವಾದ ಭಾಷಾ ಪ್ರಯೋಗದಿಂದ ಆಹ್ಲಾದಕರವಾದ ಓದನ್ನು ಸಾಧ್ಯವಾಗಿಸಿದೆ. ಪ್ರತಿಯೊಂದು ಲೇಖನದಲ್ಲೂ ಆರೋಗ್ಯಕರ ಜೀವನ ರೂಪಿಸಿಕೊಳ್ಳಲು ವ್ಯಕ್ತಿ ಹೊಂದಿರಬೇಕಾದ ಮೂಲಭೂತವಾದ ವೈಜ್ಞಾನಿಕ ಅರಿವನ್ನು ಮೂಡಿಸಲು ಲೇಖಕಿ ಪ್ರಾಂಜಲ ಮನದಿಂದ ಯತ್ನಿಸಿದ್ದಾರೆ. ಇದಕ್ಕಾಗಿ ಅವರು ತಮ್ಮ ವೈದ್ಯಕೀಯ ವೃತ್ತಿಯಲ್ಲಿ ಎದುರಾಗುವ ಸಹಜ ಸನ್ನಿವೇಶಗಳನ್ನು ಬಳಸಿಕೊಂಡು ಸೋದಾಹರಣವಾಗಿ ವೈಜ್ಞಾನಿಕ ವಿಷಯಗಳನ್ನು ಆಪ್ತವಾಗಿ ಲೇಖನಗಳಲ್ಲಿ ಅಭಿವ್ಯಕ್ತಿಸಿದ್ದಾರೆ. ವೈದ್ಯಕೀಯ ಪರಿಭಾಷೆಗೆ ಸಂಬಂಧಿಸಿದ ಅದೆಷ್ಟೋ ಪದಗಳನ್ನು ಲೇಖಕಿ ಆತ್ಮವಿಶ್ವಾಸದಿಂದ ಕನ್ನಡದಲ್ಲಿ ಲೀಲಾಜಾಲವಾಗಿ ಬಳಸಿರುವುದು ಹೆಮ್ಮೆ ಮೂಡಿಸುತ್ತದೆ. ಉದಾಹರಣೆಗೆ:_ ರಸಗ್ರಂಥಿ, ತೂರುನಾಳ, ನಂಜುನಿವಾರಕ, ಪ್ರತಿಜೀವಕ, ಶಿಲೀಂದ್ರ ಇತ್ಯಾದಿಗಳು. ಈ ಮೊದಲೇ ಅರ್ಥ ತಿಳಿಯದಿರುವವರಿಗೂ ಅವೆಲ್ಲ ಸನ್ನಿವೇಶಕ್ಕನುಗುಣವಾಗಿ ಅರ್ಥವಾಗುತ್ತಾ ಹೋಗುತ್ತದೆಂಬ ಲೇಖಕಿಯ ತುಂಬು ವಿಶ್ವಾಸ ಮಾತೃಭಾಷಾ ಶ್ರೀಮಂತಿಕೆಗೆ ಪೂರಕವಾದುದೇ. ಆಡುಭಾಷಾ ಬಳಕೆಯ ಪ್ರಸ್ತಾಪ ಕೂಡ ಅಲ್ಲಲ್ಲಿ ಇದೆ, ಉದಾ. ಉಳುಕಡ್ಡಿ, ಚಿಬ್ಬು ಇತ್ಯಾದಿ. ಕೆಲವೊಂದು ಪಾರಿಭಾಷಿಕ ಶಬ್ದಗಳನ್ನು ಇಂಗ್ಲಿಷ್ ನಲ್ಲಿ ಹಾಗೆಯೇ ಬಳಸಿರುವುದು ಕೂಡ ಸ್ವಾಗತಾರ್ಹ.
ಆರೋಗ್ಯ ನಿರ್ವಹಣೆ, ಅನಾರೋಗ್ಯ ನಿವಾರಣೆಗೆ ಸಂಬಂಧಿಸಿದಂತೆ ಆಪ್ತ ಸಲಹಾಕಾರ್ತಿಯ ಆತ್ಮೀಯ ಸಂವಹನದಂತೆ ಭಾಸವಾಗುವ ಹಲವು ಲೇಖನಗಳಿವೆ. ಉದಾಹರಣೆಗೆ “ರೋಗ ಶಮನಕ್ಕೆ ಔಷಧವೊಂದೇ ಸಾಲದು”, “ಮುಪ್ಪನ್ನು ಮುಂದೂಡಬಲ್ಲ ಆಹಾರದಲ್ಲಿನ ಆಂಟಿ ಆಕ್ಸಿಡೆಂಟ್ಗಳು” ಮುಂತಾದವುಗಳು. ವೈದ್ಯರು ಮತ್ತು ರೋಗಿಯ ನಡುವಿನ ಈ ವಿಧದ ಆಪ್ತ ಸಂವಹನವು ರೋಗಿಯಲ್ಲಿ ಆತ್ಮವಿಶ್ವಾಸ ಮೂಡಿಸುವುದರಿಂದ ನಿಜಕ್ಕೂ ‘ವೈದ್ಯೋ ನಾರಾಯಣೋ ಹರಿಃ’ ಎಂಬ ಮಾತನ್ನು ಅನ್ವರ್ಥವಾಗಿಸೀತು.
ರೋಗ ಉಲ್ಬಣಿಸುವುದರಲ್ಲಿ ರೋಗಿಯ ನಕಾರಾತ್ಮಕ ಧೋರಣೆ ಪ್ರಮುಖ ಕಾರಣವಾಗುವುದನ್ನು ಪ್ರಬಲವಾಗಿ ಪ್ರತಿಪಾದಿಸುತ್ತಾರೆ ಲೇಖಕಿ. ಅದರಂತೆಯೇ ರೋಗಿಯನ್ನು ಉಪಚರಿಸುವವರ ಆತ್ಮವಿಶ್ವಾಸದ ವಿವೇಚನೆಯ ಸಂಯಮದ ವರ್ತನೆಗಳು ಹೇಗೆ ರೋಗವನ್ನು ನಿಯಂತ್ರಿಸುತ್ತವೆಂಬುದನ್ನೂ ಆಪ್ತ ನಿದರ್ಶನಗಳ ಮೂಲಕ ಮನದಟ್ಟಾಗಿಸುತ್ತಾರೆ.
ವೈದ್ಯಕೀಯ ಪರಿಭಾಷೆಯಲ್ಲಿನ ವಿಶ್ಲೇಷಣೆ ಅಗತ್ಯವಿರುವಂತಹ ವಿಷಯಗಳನ್ನು ಕೂಡ ತಿಳಿಯಾದ ಭಾಷೆಯಲ್ಲಿ ಸಾಮಾನ್ಯರಿಗೂ ಅರ್ಥವಾಗುವಂತೆ ಹೇಳುವುದನ್ನು ಸಾಧ್ಯವಾಗಿಸಿರುವುದು ಲೇಖಕಿಯ ಮಾನವೀಯ ಕಳಕಳಿ. ಉದಾಹರಣೆಗೆ “ರಕ್ತನಾಳಗಳಲ್ಲಿ ಅಡಚಣೆ, ಚಿಕಿತ್ಸೆ ಏನು? ಹೇಗೆ?” ಎಂಬ ಲೇಖನ, “ಎಫ್ ಎನ್ ಎಸಿ ಪರೀಕ್ಷೆ ಬಗ್ಗೆ ತಿಳಿದಿರುವಿರೇ?” ಎಂಬ ಲೇಖನ.
ವೈದ್ಯೆಯಾಗಿ ರೋಗಿಯ ಹಿತಾಹಿತಗಳ ಕುರಿತ ಸೂಕ್ಷ್ಮ ಸಂವೇದನೆಯ ಒಳನೋಟಗಳ ಚಿಂತನೆಯೇ ಪ್ರಧಾನವಾಗಿರುವ ಹಲವು ಲೇಖನಗಳಿವೆ. ಒಂದು ನಿದರ್ಶನ, “ಆಸ್ಪತ್ರೆಯಲ್ಲಿನ ಒಳರೋಗಿಯನ್ನು ಭೇಟಿ ಮಾಡಲು ಹೊರಡುವ ಮುನ್ನ” ಎಂಬ ಲೇಖನ.
ಆರೋಗ್ಯಪಾಲನೆಯಲ್ಲಿ ವಹಿಸಬೇಕಾದ ಮುಂಜಾಗ್ರತೆಗೆ ದಾರಿದೀಪಗಳಂತಿರುವ ಹಲವು ಲೇಖನಗಳಿವೆ. ಇವುಗಳಲ್ಲಿ ಲೇಖಕಿ ವಸ್ತುನಿಷ್ಠತೆಗೆ ಮಹತ್ವ ನೀಡಿರುವುದು ಲೇಖನಗಳನ್ನು ವಿಶ್ವಾಸಾರ್ಹವಾಗಿಸಿವೆ. ಉದಾಹರಣೆಗೆ “ಜಾಂಡೀಸ್ ಕಾರಣ ಮತ್ತು ಪರಿಹಾರೋಪಾಯ”, ” ಆಹಾರ ಮತ್ತು ಆರೋಗ್ಯ”, “ಕಾಯಿಲೆಗಳು ಹರಡುವುದು ಹೇಗೆ?” “ಆಂಟಿಬಯೋಟಿಕ್ ಪ್ರತಿರೋದನೆ, ಏನಿದು?”, “ಬೇಸಿಗೆಯ ಅತಿಸಾರ” ಮುಂತಾದ ಲೇಖನಗಳು.
ಮಧುಮೇಹ, ಗರ್ಭಿಣಿಯರ ಆರೋಗ್ಯ, ಆರೋಗ್ಯ ತಪಾಸಣೆ, ಮಹಿಳೆಯರಲ್ಲಿ ಕ್ಯಾನ್ಸರ್, ಥೈರಾಯ್ಡ್ ಸಮಸ್ಯೆ, ಸೋರಿಯಾಸಿಸ್, ಮನೋದೈಹಿಕ ಕಾಯಿಲೆಗಳು… ಹೀಗೆ ದೈಹಿಕ ಸ್ವಾಸ್ಥ್ಯ ನಿರ್ವಹಣೆಯಲ್ಲಿ ಎದುರಾಗುವ ಹತ್ತು ಹಲವಾರು ಸಮಸ್ಯೆಗಳು, ಅವುಗಳನ್ನು ಎದುರಿಸುವ ಬಗೆ, ಅವುಗಳಿಗೆ ವೈದ್ಯಕೀಯ ಪರಿಹಾರ ಮುಂತಾದವುಗಳನ್ನೆಲ್ಲ ಸಾಮಾನ್ಯರಿಗೆ ಉಪಯುಕ್ತವಾಗುವ ನಿಟ್ಟಿನಲ್ಲಿ ಚಿಂತಿಸಿ ಲೇಖಕಿ ಸಹೃದಯತೆಯಿಂದ ಲೇಖನಗಳ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ.
ವೈದ್ಯಕೀಯ ಸಾಹಿತ್ಯ ರಚಿಸಿ ಜನಮಾನಸದಲ್ಲಿ ಅಚ್ಚಳಿಯದ ಸ್ಥಾನಮಾನ ಗಳಿಸಿರುವ ರಾ.ಶಿ., ಅನುಪಮಾ ನಿರಂಜನ, ಹೃದ್ರೋಗ ತಜ್ಞ ಡಾ.ವಿ.ಪರಮೇಶ್ವರ, ಡಾ.ಹೆಚ್.ಡಿ.ಚಂದ್ರಪ್ಪ ಗೌಡ ಮುಂತಾದ ಹಿರಿಯರಂತೆಯೇ ಡಾ.ಸಿ.ಆರ್. ಚಂದ್ರಶೇಖರರಂತಹವರು ನಿರಂತರವಾಗಿ ಬರೆಯುತ್ತಲೇ ಇದ್ದಾರೆ. ಡಾ.ಹೆಚ್.ಎಸ್.ಅನುಪಮಾ, ಶಿವಮೊಗ್ಗ ಸೋದರಿ ತ್ರಯರು, ಡಾ.ವೀಣಾಭಟ್ ರಂತಹವರೆಲ್ಲ ವೈದ್ಯಕೀಯ ಕ್ಷೇತ್ರದ ಸಂಶೋಧನೆಗಳು, ಸುಧಾರಿತ ಚಿಕಿತ್ಸಾ ವಿಧಾನಗಳು ಇವೆಲ್ಲವುಗಳ ಕುರಿತು ಬರೆಯುತ್ತಾ ಸಾಮಾನ್ಯರಲ್ಲಿ ಆರೋಗ್ಯದ ಕುರಿತು ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ. ಈ ವೈದ್ಯ ಸಾಹಿತ್ಯಕ್ಕೆ ಡಾ.ವಿನಯಾ ಶ್ರೀನಿವಾಸ್ ಕೂಡ “ಆರೋಗ್ಯ ದೀವಿಗೆ” ಕೃತಿಯಿಂದ ಅನುಪಮ ಕೊಡುಗೆ ಸಲ್ಲಿಸಿರುವುದು ಅಭಿಮಾನದ ಸಂಗತಿ.
(ಕೃತಿ: ಆರೋಗ್ಯ ದೀವಿಗೆ (ವೈದ್ಯಕೀಯ ಬರಹಗಳು), ಲೇಖಕರು: ಡಾ. ವಿನಯ ಶ್ರೀನಿವಾಸ್, ಪ್ರಕಾಶಕರು: ಗೀತಾಂಜಲಿ ಪುಸ್ತಕ ಪ್ರಕಾಶನ, ಬೆಲೆ: 250/-)
ಉಮಾದೇವಿ ನಿವೃತ್ತ ಉಪನ್ಯಾಸಕಿ. ಹಲವು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡಿವೆ. “ಮುಂಬೆಳಕಿನ ಮಿಂಚು”, “ಮಕ್ಕಳಿಗಿದು ಕಥಾ ಸಮಯ”, “ಮುಳ್ಳುಬೇಲಿಯ ಹೂಬಳ್ಳಿ”, ಬಾನಾಡಿ ಕಂಡ ಬೆಡಗು, “ಗ್ರಾಮ ಚರಿತ್ರ ಕೋಶ” ಇವರ ಪ್ರಕಟಿತ ಕೃತಿಗಳು.