ಇದೇ ಮೊದಲ ಬಾರಿ ಇಂತಹ ಸಂತೋಷ ಪರಿಸ್ಥಿತಿಯಲ್ಲಿ ಭಾರತ ಬಂದು ನಿಂತಿದೆ. ಇದು ಹರ್ಷ ಉಲ್ಲಾಸ ತರುವ ಸಂಗತಿ. ಇದರ ಶ್ರೇಯಸ್ಸು ಆಟಗಾರರಿಗೆ ಸಲ್ಲಬೇಕು, ಇದರ ಜೊತೆಗೆ ಅವರ ಏಳಿಗೆಗೆ ಒಂದೇ ಸಮನೆ ಕಳೆದ 3 ವರ್ಷಗಳಿಂದ ಶ್ರಮಿಸಿದ ಭಾರತದ ಕೋಚ್ ಮತ್ತು ಮಾಜಿ ಕ್ರಿಕೆಟ್ ನಾಯಕ, ಶ್ರೇಷ್ಟ ಆಟಗಾರ ರಾಹುಲ್ ದ್ರಾವಿಡ್ ಮತ್ತು ಅವರ ಸಂಗಡ ಶ್ರಮಿಸುವ ಬೋಲಿಂಗ್ ಕೋಚ್, ಬ್ಯಾಟಿಂಗ್ ಕೋಚ್‌ಗೆ ಸಲ್ಲಬೇಕು. ದ್ರಾವಿಡ್ ಅವರಿಗೆ ಖುದ್ದಾಗಿ ಸಲ್ಲಬೇಕು.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣದಲ್ಲಿ ಭಾರತದಲ್ಲಿ ನಡೆಯಲಿರುವ ವಿಶ್ವ ಕಪ್‌ನ ಕುರಿತ ಬರಹ ನಿಮ್ಮ ಓದಿಗೆ

ಹಿಂದಿನ ಲೇಖನ ವಿಶ್ವ ಕಪ್‌ನಿಂದ ಇದು ಮುಂದುವರೆದಿದೆ…

ಒಟ್ಟು 10 ಟೀಂಗಳು ಅಕ್ಟೋಬರ್ 5 ರಿಂದ ಹಿಡಿದು ನವೆಂಬರ್ 19 ವರೆಗೆ 48 ಮ್ಯಾಚ್‌ಗಳನ್ನು ಆಡುತ್ತಾರೆ. ಇದರಲ್ಲಿ 45 ಲೀಗ್ ಮ್ಯಾಚ್‌ಗಳು, 2 ಸೆಮಿ-ಫೈನಲ್ಸ್ ಒಂದು ಫೈನಲ್ ಇರುತ್ತೆ.

ಈಗಾಗಲೇ 7 ದೇಶಗಳ ಟೀಮ್‌ಗಳ ಪರಿಚಯ ಮಾಡಿಕೊಂಡಿದ್ದೇವೆ. ವಿಶ್ವಕಪ್‌ಗೆ ಇದೀಗ 3 ಟೀಮ್‌ಗಳು ತಮ್ಮ ತಂಡವನ್ನು ಘೋಷಿಸಿದ್ದಾರೆ.

ಆಫ್ಘಾನಿಸ್ಥಾನ: ಹಸ್ಮತುಲ್ಲಾ ಶಹಿದಿ (ನಾಯಕ), ರೆಹ್ಮಾನುಲ್ಲಾ ಗರ‍್ಬಾಜ್, ಇಬ್ರಾಹಿಮ್ ಝಡ್ರನ್, ರಿಯಾಝ್ ಹಸನ್, ತಹ್ಮತ್ ಷಾ, ನಝಿಬುಲ್ಲಾ ಝಡ್ರನ್, ಮೊಹಮ್ಮದ್ ನಭಿ, ಇಕ್ರಾಮ್ ಆಲಿಕಿಲ್, ಅಝ್ಮತುಲ್ಲಾ ಒರ‍್ಝಾಯ್, ರಷೀದ್ ಖಾನ್, ಮುಜೀಬೂರ್ ರೆಹ್ಮಾನ್, ನೂರ್ ಅಹ್ಮದ್, ಫಜಲ್ ಹಕ್ ಫರೂಕಿ, ಅಬ್ದುಲ್ ರೆಹ್ಮಾನ್ ಮತ್ತು ನವೀನ್ ಉಲ್ ಹಕ್.

ಬಾಂಗ್ಲಾದೇಶ: ಶಕೀಬ್ ಅಲ್ ಹಸನ್ (ನಾಯಕ), ಲಿಟನ್ ಕುಮಾರ್ ದಾಸ್, ತಾಂಜೀಡ್ ಹಸನ್ ತಮೀಮ್, ನಝ್ಮಲ್ ಹುಸೇನ್ ಶಾನ್ಟೊ, ತಾವಿಡ್ ಹೃದೋಯ್, ಮುಶ್ಫಿಕುರ್ ರಹೀಮ್, ಮಹಮದುಲ್ಲ ರಿಯಾದ್, ಮೆಹ್ದಿ ಹಸನ್ ಮಿರಾಜ್, ನಸುಮ್ ಅಹ್ಮದ್, ಷಕ್ ಮೆಹ್ದಿ ಹಸನ್, ತಾಸ್ಕಿನ್ ಅಹ್ಮದ್, ಮುಸ್ಟ ಫಿಜೂರ್ ರೆಹ್ಮಾನ್, ಹಸನ್ ಮೆಹ್ಮೂದ್, ಷೊರಿಫುಲ್ ಇಸ್ಲಾಮ್ ಮತ್ತು ತಾಂಝಿಮ್ ಹಸನ್ ಶಕೀಬ್.

ಶ್ರೀಲಂಕ: ದಸನ ಶನಾಕ (ನಾಯಕ), ಕುಸಾಲ್ ಮೆಂಡಿಸ್, ಕುಸಾಲ್ ಪೆರೆರಾ, ಪತ್ತುಮ್ ನಿಸ್ಸಾಂಕ, ದಿಮುತ್ ಕರುಣರತ್ನೆ, ಸದೀರ ಸಮರವಿಕ್ರಮೆ, ಚರಿತ್ ಅಸಲಾಂಕ, ಧನಂಜಯ ಡಿ ಸಿಲ್ವ, ದುಶಾನ್ ಹೇಮಂತ, ಮಹೀಷ್ ತೀಕ್ಷಣ, ದುನೀತ್ ವೆಲ್ಲಾಲಗೆ, ಕಸುನ್ ರಜಿತ, ಮತೀಷ ಪತಿರಾಣ, ಲಹೀರು ಕುಮಾರ ಮತ್ತು ದಿಲ್ಷನ್ ಮಧುಷಂಕ.

ಆಸ್ಟ್ರೇಲಿಯದ ಆಷ್ಟನ್ ಅಗರ್, ಶ್ರೀಲಂಕಾದ ಹಸರಂಗ, ಬಾಂಗ್ಲಾದೇಶದ ತಮೀಮ್ ಮುಂತಾದವರು ಆಡುವಾಗ ಏಟು ಬಿದ್ದು ಸರಿಯಾದ ಸಮಯಕ್ಕೆ ಚೇತರಿಸಿಕೊಳ್ಳಲಾಗದೆ ಅವರನ್ನು ಟೀಮಿನಲ್ಲಿ ಸೇರಿಸಿಕೊಳ್ಳಲು ಆಗದೆ ಕೈ ಬಿಡಬೇಕಾಗಿದೆ. ಆಸ್ಟ್ರೇಲಿಯ ಪಂಗಡದಲ್ಲಿ ಮಾರನಸ್ ಲಬುಸಚೇನ್ ಮತ್ತು ಟ್ರಾವಿಸ್ ಹೆಡ್ ಅವರನ್ನು ಟೀಮಿನಲ್ಲಿ ಸೇರಿಸಿಕೊಳ್ಳಲಾಗಿದೆ.

ಭಾರತದ ವೇಗದ ಬೋಲರ್ ಜಸ್ಪ್ರೀತ್ ಭೂಮ್ರ, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಅದೃಷ್ಟವಶಾತ್ ವೇಳೆಗೆ ಸರಿಯಾಗಿ ಅವರವರ ಪೆಟ್ಟಿನಿಂದ ಪೂರ್ತಿ ಗುಣಹೊಂದಿ ತಂಡಕ್ಕೆ ವಾಪಸ್ಸು ಬಂದು ಚೆನ್ನಾಗಿ ಆಡುತ್ತಿದ್ದಾರೆ. ಆದರೆ ಶ್ರೀಲಂಕದ ಮೇಲೆ ಏಷ್ಯ ಕಪ್‌ನಲ್ಲಿ ಆಡುವಾಗ ಬಿದ್ದ ಏಟು ವಾಸಿಯಾಗದೆ ಅಕ್ಷರ್‌ ಪಟೇಲ್‌ರ ಜಾಗಕ್ಕೆ ರವಿಚಂದ್ರನ್ ಅಶ್ವಿನ್ ಅವರನ್ನು ಸೇರಿಸಿಕೊಳ್ಳಲಾಗಿದೆ.

ಭಾರತ 2011 ರಲ್ಲಿ ಮುಂಬೈ ವಾಂಖೇಡೆ ಸ್ಟೇಡಿಯಮ್‌ನಲ್ಲಿ ಗೆದ್ದಾಗ ಆಡಿದ ಟೀಮಿನಲ್ಲಿ ಇದ್ದವರ ಪೈಕಿ ವಿರಾಟ್ ಕೊಹ್ಲಿ ಮತ್ತು ರವಿಚಂದ್ರನ್ ಈಗಿನ ಟೀಮ್‌ನಲ್ಲೂ ಶಾಮೀಲಾಗಿದ್ದಾರೆ.

ಈ ವರ್ಷ ನಡೆಯುವ ವಿಶ್ವ ಕಪ್‌ನಲ್ಲಿ ಯಾರು ಗೆಲ್ಲಬಹುದು ಅನ್ನುವ ಮಾತು ಎಲ್ಲ ಕಡೆಯೂ ಜೋರಾಗಿ ಕೇಳಿ ಬರುತ್ತಿದೆ. ಇದರಲ್ಲಿ ಮೈಕಿನ ಮುಂದೆ ವೀಕ್ಷಣೆ ಮಾಡುವ ಕಾಮೆಂಟೇಟರ್ಸ್‌ ಒಂದು ಕಡೆ, ಮಾಜಿ ಆಟಗಾರರು ಇನ್ನೊಂದು ಕಡೆ, ಮತ್ತೆ ಟೀವಿಯಲ್ಲಿ ಆಟದ ವಿಷಯ ಮಾತನಾಡಲು ಅತಿಥಿಯಾಗಿ ಬರುವವರು – ಎಲ್ಲರೂ ಸೇರಿ ಇದೊಂದು ತರ್ಕಶಾಸ್ತ್ರದ ವಿಷಯಕ್ಕೆ ಸೇರಿದ ಹಾಗೆ ತಮ್ಮ ತಮ್ಮ ಅಭಿಪ್ರಾಯವನ್ನು ತಿಳಿಸಿ, ಬರೆದು, ಟೀವಿಯಲ್ಲಿ ಚರ್ಚಿಸುತ್ತಿದ್ದಾರೆ. ಒಟ್ಟಿನಲ್ಲಿ ನವೆಂಬರ್ 19 ಹತ್ತಿರ ಬರುತ್ತಾ ಇದರ ಕಾವು ಜೋರಾಗಿ ಏರುತ್ತೆ.

ಭಾರತದ ಮಟ್ಟಿಗೆ ಹೇಳುವುದಾದರೆ, ಈ ವರ್ಷ, ಈಗ ಭಾರತ ಮೂರು ಸ್ವರೂಪದಲ್ಲೂ, ಅಂದರೆ – ಟೆಸ್ಟ್, ಓಡಿಐ ಮತ್ತು ಟಿ 20 ಆಟಗಳಲ್ಲಿ ಮೊದಲನೇ ಸ್ಥಾನ ಪಡೆದುಕೊಂಡಿದೆ. ಇದೇ ಮೊದಲ ಬಾರಿ ಇಂತಹ ಸಂತೋಷ ಪರಿಸ್ಥಿತಿಯಲ್ಲಿ ಭಾರತ ಬಂದು ನಿಂತಿದೆ. ಇದು ಹರ್ಷ ಉಲ್ಲಾಸ ತರುವ ಸಂಗತಿ. ಇದರ ಶ್ರೇಯಸ್ಸು ಆಟಗಾರರಿಗೆ ಸಲ್ಲಬೇಕು, ಇದರ ಜೊತೆಗೆ ಅವರ ಏಳಿಗೆಗೆ ಒಂದೇ ಸಮನೆ ಕಳೆದ 3 ವರ್ಷಗಳಿಂದ ಶ್ರಮಿಸಿದ ಭಾರತದ ಕೋಚ್ ಮತ್ತು ಮಾಜಿ ಕ್ರಿಕೆಟ್ ನಾಯಕ, ಶ್ರೇಷ್ಟ ಆಟಗಾರ ರಾಹುಲ್ ದ್ರಾವಿಡ್ ಮತ್ತು ಅವರ ಸಂಗಡ ಶ್ರಮಿಸುವ ಬೋಲಿಂಗ್ ಕೋಚ್, ಬ್ಯಾಟಿಂಗ್ ಕೋಚ್‌ಗೆ ಸಲ್ಲಬೇಕು. ದ್ರಾವಿಡ್ ಅವರಿಗೆ ಖುದ್ದಾಗಿ ಸಲ್ಲಬೇಕು. ಯಾಕೆಂದರೆ ಭಾರತ ಬಹಳ ಆಟಗಳಲ್ಲಿ ಮುಗ್ಗರಿಸಿ ಚೆನ್ನಾಗಿ ಆಡದೆ ಸೋತಿದ್ದಾರೆ. ಇದರ ಬಗ್ಗೆ ಕಳೆಗುಂದದೆ ದ್ರಾವಿಡ್ ತಮ್ಮ ಸಂಯಮವನ್ನು ಕಳೆದುಕೊಳ್ಳದೆ ತಮ್ಮ ಮುಂದಿನ ಗುರಿಯನ್ನು ಮುಂದಿಟ್ಟುಕೊಂಡು ಕೆಲಸವನ್ನು ಮಾಡಿಕೊಂಡು ಹೋಗಿದ್ದಾರೆ. ‘ತಾಳಿದವನು ಬಾಳಿಯಾನು’ ಎಂಬ ನಾಣ್ಣುಡಿಯಂತೆ ತಮ್ಮ ಕರ್ಮವನ್ನು ಮಾಡಿಕೊಂಡು ಹೋದರೆ ಶ್ರೇಯಸ್ಸು ಒಂದಲ್ಲ ಒಂದು ದಿವಸ ತಾನೇ ಎದುರಿಗೆ ಬರುತ್ತೆ ಎಂಬ ಮಾತಿಗೆ ದ್ರಾವಿಡ್‌ರೆ ಸಾಕ್ಷಿ.

ವಿಶ್ವ ಕಪ್ಪನ್ನು ಎಲ್ಲರಿಗಿಂತ ಹೆಚ್ಚು ಬಾರಿ ಗೆದ್ದಿರುವುದು ಆಸ್ಟ್ರೇಲಿಯ ದೇಶ. ಎಂತಹ ಕಠಿಣ ಸ್ಥಿತಿಯಲ್ಲೂ ಎದೆಗುಂದದೆ, ಕಷ್ಟಪಟ್ಟು ಎದುರಾಳಿಯ ಟೀಮನ್ನು ಎದುರಿಸಿ, ಪರಿಸ್ಥಿತಿಯನ್ನು ಬದಲಾಯಿಸಲು ದಾರಿಯನ್ನು ಹುಡುಕುತ್ತಲೇ ಇರುವುದು ಅವರ ಜಾಯಮಾನ. ಹಾಗೆ ಆಡಿಯೇ ಅವರು 5 ಬಾರಿ ಕಪ್ಪನ್ನು ಗೆದ್ದಿದ್ದಾರೆ. ಈ ಸಲವೂ ಅವರನ್ನು ತೆಗೆದು ಹಾಕುವ ಪ್ರಶ್ನೆಯೇ ಇಲ್ಲ.

ಇಂಗ್ಲೆಂಡ್ 50 ವರ್ಷವಾದ ಮೇಲೆ ಮೊದಲ ಬಾರಿ 2109ರಲ್ಲಿ ವಿಶ್ವ ಕಪ್ಪನ್ನು ನ್ಯೂಝಿಲೆಂಡಿನ ವಿರುದ್ಧ ಗೆದ್ದರು. ಆದರೆ ಆ ಗೆಲುವು ವಿಶ್ವಾಸನೀಯ ಗೆಲುವಲ್ಲ. ತಂಡದ ಎರಡು ಪಂಗಡಗಳ ಸ್ಕೋರ್ ಒಂದೇ ಆದಾಗ, ನ್ಯೂಝಿಲೆಂಡ್ ಅಧಿಕ ಬೌಂಡರಿಯನ್ನು ಹೊಡೆದಿದ್ದಾರೆ ಎನ್ನುವ ನಿಯಮದ ಪ್ರಕಾರ ಇಂಗ್ಲೆಂಡ್ ಗೆದ್ದರು ಎಂದು ಘೋಷಿಸಲಾಯಿತು. ಆ ಕೊನೆಯ ಬೌಂಡರಿ ಕೂಡ ಒಂದು ರನ್ ಓಡುತ್ತಿದ್ದಾಗ, ಬ್ಯಾಟ್ಸ್‌ಮನ್ ಆದ ಬೆನ್ ಸ್ಟೋಕ್ಸ್ ಅವರ ಬ್ಯಾಟಿಗೆ ತಗುಲಿ ಬೌಂಡರಿ ಕಡೆಗೆ ಬಾಲ್ ಹೋಯಿತು! ಅಂದು ನ್ಯೂಝಿಲೆಂಡಿಗೆ ಹೋಗಬೇಕಾಗಿದ್ದ ಕಪ್ ಯಾವುದೋ ನಿಯಮವನ್ನು ಹುಡುಕಿ ಅವರಿಗೆ ವಂಚನೆಯಾಯಿತು ಎಂದು ಅಂದುಕೊಳ್ಳಲೂಬಹುದು.

ಈ ವರ್ಷ ಇಂಗ್ಲೆಂಡ್ ಟೀಮ್ ಬಹಳ ಒಳ್ಳೆಯ ಟೀಮನ್ನು ಕಲೆಹಾಕಿದ್ದಾರೆ. ಅವರ ತಂಡದಲ್ಲಿ ಎಲ್ಲರೂ ಬಹಳ ಚೆನ್ನಾಗಿ ಆಡುತ್ತಿದ್ದಾರೆ. ಇದನ್ನು ಮತ್ತೆ ಗೆಲ್ಲಲೇಬೇಕೆಂಬ ಮಹತ್ತರವಾದ ಆಸೆ ಅವರದು. ನಿವೃತ್ತಿಯಾಗಿದ್ದ ಅವರ ಟೆಸ್ಟ್ ಟೀಮಿನ ನಾಯಕ ಬೆನ್ ಸ್ಟೋಕ್ಸ್ ನಿವೃತ್ತಿಯಿಂದ ವಾಪಸ್ಸು ಆಡುವುದಕ್ಕೆ ಸಜ್ಜಾಗಿದ್ದಾರೆ. ಅವರ ನಾಯಕ ಜೋಸ್ ಬಟ್ಲರ್ ಕೂಡ ಬಹಳ ಒಳ್ಳೆಯ ಓಪನಿಂಗ್ ಬ್ಯಾಟ್ಸ್‌ಮನ್.

ಭಾರತದ ವೇಗದ ಬೋಲರ್ ಜಸ್ಪ್ರೀತ್ ಭೂಮ್ರ, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಅದೃಷ್ಟವಶಾತ್ ವೇಳೆಗೆ ಸರಿಯಾಗಿ ಅವರವರ ಪೆಟ್ಟಿನಿಂದ ಪೂರ್ತಿ ಗುಣಹೊಂದಿ ತಂಡಕ್ಕೆ ವಾಪಸ್ಸು ಬಂದು ಚೆನ್ನಾಗಿ ಆಡುತ್ತಿದ್ದಾರೆ. ಆದರೆ ಶ್ರೀಲಂಕದ ಮೇಲೆ ಏಷ್ಯ ಕಪ್‌ನಲ್ಲಿ ಆಡುವಾಗ ಬಿದ್ದ ಏಟು ವಾಸಿಯಾಗದೆ ಅಕ್ಷರ್‌ ಪಟೇಲ್‌ರ ಜಾಗಕ್ಕೆ ರವಿಚಂದ್ರನ್ ಅಶ್ವಿನ್ ಅವರನ್ನು ಸೇರಿಸಿಕೊಳ್ಳಲಾಗಿದೆ.

ಇಲ್ಲಿಯ ತನಕ ಬಹಳ ಸರ್ತಿ ನ್ಯೂಝಿಲೆಂಡ್ ಟೀಮ್ ಸೆಮಿ-ಫೈನಲ್ಸ್ ಮತ್ತು ಫೈನಲ್ಸ್‌ಗೆ ತಲುಪಿದೆ. ಆದರೆ ದುರದೃಷ್ಟವಶಾತ್ ಅವರು ಒಂದು ಬಾರಿಯೂ ಕಪ್ಪನ್ನು ಗೆದ್ದಿಲ್ಲ. ದಕ್ಷತೆಯಿಂದ ಆಡಿ, ಯಾವ ರೀತಿ ಮರ್ಯಾದೆಯಿಂದ ನಡೆದುಕೊಳ್ಳಬೇಕೋ ಹಾಗೇ ಮಾಡುತ್ತಾ ಎಷ್ಟೋಸರ್ತಿ ಅವರು ಗೆದ್ದು ಕಪ್ಪನ್ನು ಹಿಡಿಯಬೇಕಾಗಿತ್ತು ಎಂದು ಬೇರೆಯವರಿಗೆ ಅನ್ನಿಸಿದರೂ ಯಾವಾಗಲೂ ಕ್ರೀಡಾ ಮನೋಭಾವವನ್ನಿಟ್ಟುಕೊಂಡು ಆಡುವ ಟೀಮ್ ನ್ಯೂಝಿಲೆಂಡ್. ಅವರು ಈ ಸರ್ತಿ ಗೆಲ್ಲಬೇಕೆಂದು ಮಿಕ್ಕ ಟೀಮಿನವರೂ ಆಶಿಸುತ್ತಾರೆ.

ಪಾಕಿಸ್ಥಾನದಷ್ಟು ಸ್ವಾಭಾವಿಕವಾದ ಪ್ರತಿಭೆಯುಳ್ಳ ಕ್ರಿಕೆಟರ್ಸ್‌ ಬೇರೆ ದೇಶದಲ್ಲಿಲ್ಲ. ಒಂದು ದಿನ ಅವರು ಪ್ರಪಂಚದ ಎಷ್ಟೇ ಬಲಿಷ್ಟ ಟೀಮ್ ಇರಲಿ ಅವರನ್ನು ಸದೆಬಡಿಯುತ್ತಾರೆ, ಮುಂದಿನ ದಿನವೇ ಅತ್ಯಂತ ಕಳಪೆ ಆಟವಾಡಿ ಸಾಧಾರಣ ಟೀಮಿಗೆ ಸೋತು ಬಿಡುತ್ತಾರೆ.

ದಕ್ಷಿಣ ಆಫ್ರಿಕಾದ ಸ್ಥಿತಿ ಸ್ವಲ್ಪ ಮಟ್ಟಿಗೆ ಪಾಕಿಸ್ಥಾನದ ಹಾಗೇ! ಎಷ್ಟೋ ಸರ್ತಿ ಸುಲಭವಾಗಿ, ಸರಾಗವಾಗಿ ಗೆಲ್ಲುವ ಮ್ಯಾಚನ್ನು ಇದ್ದಕ್ಕಿದ್ದಂತೆ ಉಸಿರುಕಟ್ಟುವ ಹಾಗೆ ಮಾಡಿಕೊಂಡು ಒಂದೆರೆಡು ಓವರ್‌ನಲ್ಲಿ ಸೋಲುವ ಸ್ಥಿತಿ ಮಾಡಿಕೊಂಡಿದ್ದಾರೆ. ಈ ಸರ್ತಿ ಚೆನ್ನಾಗಿ ತರಪೇತಿ ಮಾಡಿ, ಉತ್ತಮವಾದ ಆಟವನ್ನು ಆಡುತ್ತಿದ್ದಾರೆ. ಅವರ ಕೊರಳಿಗೆ ಜಯಮಾಲೆ ಬೀಳುತ್ತಾ ಈ ವರ್ಷ ಎಂದು ಕಾದು ನೋಡಬೇಕು.

ಒಂದು ದುಖಃದ ಸಂಗತಿಯೆಂದರೆ ಎರಡು ಸಲ ಗೆದ್ದ ವೆಸ್ಟ್ ಇಂಡೀಸ್ ಈ ಸರ್ತಿ ಭಾರತಕ್ಕೆ ಬಂದಿಲ್ಲ. ಅವರ ಆಟ ಕೆಳಗಿನ ಮಟ್ಟಕ್ಕೆ ಇಳಿದು ಅಲ್ಲಿ ನಡೆದ ಪಂದ್ಯಗಳಲ್ಲಿ ಗೆಲ್ಲದೆ ವಿಶ್ವ ಕಪ್‌ನಿಂದ ಅವರನ್ನು ವಿಶ್ವ ಕಪ್ ಮ್ಯಾಚ್‌ನಿಂದ ದೂರವಿಡಬೆಕಾಯಿತು. ವೆಸ್ಟ್ ಇಂಡೀಸ್ ಯಾವತ್ತಾದರೂ ಹಳೆಯ ಹುಲಿಯಾಗಿ ಮೈದಾನಕ್ಕೆ ಇಳಿಯುತ್ತದೋ ಎಂದು ಎಲ್ಲರ ಆಶಯ.

ಶ್ರೀಲಂಕ ವಿಶ್ವಕಪ್ಪನ್ನು ಒಂದು ಬಾರಿ ರಣತುಂಗ ಅವರ ನಾಯಕತ್ವದಲ್ಲಿ ಗೆದ್ದಿದೆ. ಹಿಂದಿದ್ದ ಪ್ರಬಲತೆಯನ್ನು ಈಗ ಶ್ರೀಲಂಕ ಕಳೆದುಕೊಂಡಿದೆ. ಆದರೆ ಅವರು ಯಾವತ್ತಿದ್ದರೂ ಯಾರನ್ನೂ ಸೋಲಿಸಬೇಕಾದ ಸ್ಥೈರ್ಯ, ಕೆಚ್ಚೆದೆ ಮತ್ತು ನಿಪುಣತೆ ಅವರಲ್ಲಿದೆ.

ಆಫ್ಘಾನಿಸ್ಥಾನ ಬಹುಬೇಗ ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತಿದ್ದಾರೆ. ಅವರ ಸ್ಪಿನ್ ಬೋಲಿಂಗಿಗೆ ಎಲ್ಲಾ ಟೀಮ್ ಅವರಿಗೆ ಹೆದರುತ್ತಾರೆ. ಬ್ಯಾಟಿಂಗ್‌ನಲ್ಲಿ ಅವರ ಪ್ರಗತಿ ಮಾಡಿದರೆ ಮುಂದೆ ಕ್ರಿಕೆಟ್ ಆಡುವ ದೇಶಗಳಲ್ಲಿ ಅವರು ಪ್ರಬಲ ರಾಷ್ಟ್ರವಾಗುತ್ತಾರೆ. ಅದರಲ್ಲಿ ಸಂದೇಹವಿಲ್ಲ.

ನೆದರ್ಲೆಂಡ್ಸ್ ಚೆನ್ನಾಗಿ ಆಡಿ ಈಸಲ ವಿಶ್ವ ಕಪ್ ಆಡಲು ಬಂದಿದ್ದಾರೆ. ಅವರಿಗೆ ಅನುಭವ ಇನ್ನೂ ಸಾಲದು. ಮುಂದೆ ಈ ಟೀಮ್ ಸಾಮರ್ಥ್ಯವುಳ್ಳ ಟೀಮ್ ಆಗುತ್ತೆ. ಭಾರತ ಎರಡು ಬಾರಿ ವಿಶ್ವ ಕಪ್ ಗೆದ್ದು ಮೂರನೇ ಸಲ ಗೆಲ್ಲುವುದಕ್ಕೆ ಬಂದಿದೆ. 1983 ಮತ್ತು 2011ರಲ್ಲಿ ಕಪಿಲ್ ದೇವ್ ಮತ್ತು ಮಹೇಂದ್ರಸಿಂಗ್‌ ಧೋಣಿಯವರ ನಾಯಕತ್ವದಲ್ಲಿ ವಿಶ್ವ ಕಪ್ ಗೆದ್ದಿದೆ. ಈ ಬಾರಿ ರೋಹಿತ್ ಶರ್ಮ ಟೀಮಿನ ನಾಯಕತ್ವವನ್ನು ವಹಿಸಿದ್ದಾರೆ.

ಕೊನೆಯ ಘಳಿಗೆಯಲ್ಲಿ ಅಕ್ಷರ್ ಪಟೇಲ್ರಿಗೆ ಏಟು ಬಿದ್ದ ಕಾರಣ ಅವರ ಜಾಗಕ್ಕೆ ರವಿಚಂದ್ರನ್ ಅವರನ್ನು ಟೀಮಿಗೆ ಸೇರಿಸಲಾಗಿದೆ. ನಾಲಕ್ಕು ವರ್ಷ ಸತತವಾದ ಪ್ರಯತ್ನ ಮಾಡಿದ ಅಕ್ಷರ್‌ ಪಟೇಲ್ ಅವರಿಗೆ ಎಲ್ಲರ ಸಹಾನುಭೂತಿ ಅವಶ್ಯಕ. ಇನ್ನು ಚಿಕ್ಕವರಾದ ಅಕ್ಷರ್‌ ಅವರಿಗೆ ಮುಂದೆ ಆಡಲು ಅವಕಾಶ ಖಂಡಿತ ದೊರೆಯುತ್ತೆ. ಭಾರತ ತನ್ನ ಲೀಗ್ ಮ್ಯಾಚ್‌ಗಳಲ್ಲಿ ಸಹಜವಾಗಿ ಚೆನ್ನಾಗಿ ಆಡುತ್ತಾರೆ. ಎಷ್ಟೋಸರ್ತಿ ಲೀಗಿನಲ್ಲಿ ಭಾರತವೇ ಎಲ್ಲಿರಿಗಿಂತ ಮೊದಲು ಸೆಮಿ-ಫೈನಲ್ ತಲುಪಿದ್ದು ಉಂಟು. ಆದರೆ ಯಾವಾಗ ಈ ಮ್ಯಾಚ್ ಗೆಲ್ಲಲೇ ಬೇಕು ಎನ್ನು ಸಂದರ್ಭ ಬರುತ್ತೋ ಅಂತಹ ಸ್ಥತಿಯಲ್ಲಿ ಈ ಕೆಲವು ವರ್ಷಗಳಲ್ಲಿ ಭಾರತ ಎಡವುತ್ತಾಬಂದಿದೆ. ಈ ಸರ್ತಿ ದ್ರಾವಿಡ್ ಅವರ ಕೋಚಿಂಗ್‌ನಲ್ಲಿ ರೋಹಿತ್ ಶರ್ಮ ಅವರ ನಾಯಕತ್ವ ಅದನ್ನು ದಾಟಿ, ಮೂರನೇ ಸರ್ತಿ ನವೆಂಬರ್ 18ರಂದು ಕಪ್ ಹಿಡಿಯುತ್ತಾರೆಂದು ಎಲ್ಲರ ಆಶಯ. ಈ ವರ್ಷ ಏಷ್ಯ ಕಪ್‌ನಲ್ಲಿ ಭಾರತ ಅದ್ಭುತ ಪ್ರದರ್ಷನ ನೀಡಿರುವುದು ವಿಶ್ವ ಕಪ್‌ಗೆ ನಾಂದಿ ಆಗುತ್ತೋ ನೋಡಬೇಕು.

ಕೆಳಗಿನ ಹಳೆಯ ಆಟದ ಸ್ಕೋರ್ ನೋಡಿದರೆ ಒಂದು ವಿಶೇಷ ಸಂಗತಿ ಗೊತ್ತಾಗುತ್ತೆ. ಭಾರತದ ಟೀಮ್‌ನ ನಾಯಕ ರೋಹಿತ್ ಶರ್ಮ 17 ವಿಶ್ವ ಕಪ್ ಮ್ಯಾಚ್‌ಗಳಲ್ಲೇ 6 ಶತಕ ಭಾರಿಸಿದ ವೀರ! ಇವರ ಜೊತೆ ಸಚಿನ್ ಟೆಂಡೂಲ್ಕರ್ ಕೂಡ 6 ಶತಕ 45 ಮ್ಯಾಚ್ಗಳಲ್ಲಿ ಭಾರಿಸಿದ್ದಾರೆ. ಈ ಸರ್ತಿ ನಡೆಯುವ ವಿಶ್ವ ಕಪ್‌ನಲ್ಲಿ ಶರ್ಮ ಸೆಂಚುರಿ ಭಾರಿಸಿದರೆ ಅವರು ಅತಿ ಹೆಚ್ಚು ಶತಕಗಳ ವೀರರಾಗುತ್ತಾರೆ!

ಹಾಗೆಯೇ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ರ‍್ಗಳನ್ನು ಹೊಡೆದವ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್. 553. ರೋಹಿತ್ ಶರ್ಮ ಈಗ 551 ಸಿಕ್ಸರ್ ಭಾರಿಸಿದ್ದಾರೆ. ಕೇವಲ ಮೂರು ಹೊಡೆದರೆ ಅವರು ಇದರಲ್ಲೂ ಅತಿ ಹೆಚ್ಚು ಸಿಕ್ಸರ್ ಹೊಡೆದವರೆಂಬ ದಾಖಲೆ ಬರುತ್ತೆ!

ಎ. ವಿಶ್ವ ಕಪ್ಪನಲ್ಲಿ 5 ಪ್ರಮುಖ ಆಟಗಾರರ ಹೆಚ್ಚಿನ ಸ್ಕೋರ್ ವಿವರ ಹೀಗಿದೆ.

ಆಟಗಾರ ಸ್ಕೋರ್ ಇನಿಂಗ್ಸ್ ಸರಾಸರಿ

1. ಸಚಿನ್ ಟೆಂಡೂಲ್ಕರ್ (ಭಾರತ) 2278 44 56.95

2. ರಿಕಿ ಪಾಂಟಿಂಗ್ (ಆಸ್ಟ್ರೇಲಿಯ) 1743 42 45.86

3. ಕುಮಾರ ಸಂಗಕಾರ (ಶ್ರೀಲಂಕ) 1532 35 56.74

4. ಬ್ರಯನ್ ಲಾರ (ವೆಸ್ಟ್ ಇಂಡೀಸ್) 1225 33 40.93

5. ಎ.ಬಿ. ಡಿವಿಲಿಯರ್ಸ್‌ (ದಕ್ಷಿಣ ಆಫ್ರಿಕ) 1207 22 63.52

ಬಿ. ಅತಿ ಹೆಚ್ಚು ರನ್ ಒಂದು ಪಂದ್ಯದಲ್ಲಿ ಹೊಡೆದವರು

ಆಟಗಾರ ರನ್ ವರ್ಷ

1. ಮಾರ್ಟಿನ್ ಗಪ್ತಿಲ್ (ನ್ಯೂಝಿಲೆಂಡ್) 237 2015

2. ಗ್ಯಾರಿ ಕ್ರಿಸ್ಟನ್ (ದಕ್ಷಿಣ ಆಫ್ರಿಕ) 188 1996

3. ಸೌರವ್ ಗಂಗೂಲಿ (ಭಾರತ) 183 1999

4. ವಿವ್ ರಿಚರ್ಡಸ್ (ವೆಸ್ಟ್ ಇಂಡೀಸ್) 181 1987

5. ಡೇವಿಡ್ ವಾರ್ನರ್ (ಆಸ್ಟ್ರೇಲಿಯ) 178 2015

ಸಿ. ಶತಕಗಳ ದಾಖಲೆ

ಶತಕಗಳು ಆಟಗಾರ ಇನಿಂಗ್ಸ್ ಒಟ್ಟು ಸ್ಕೋರ್

1. 6 ರೋಹಿತ್ ಶರ್ಮ 17 978

2. 6 ಸಚಿನ್ ಟೆಂಡೂಲ್ಕರ್ 44 2278

3. 5 ಕುಮಾರ ಸಂಗಕಾರ 35 1532

4. 5 ರಿಕಿ ಪಾಂಟಿಂಗ್ 42 1743

ಡಿ. ಅತ್ಯಂತ ವೇಗವಾಗಿ ಹೊಡೆದ ಅರ್ಧ ಶತಕ (50 ರನ್)

ಎಷ್ಟು ಬಾಲ್ ಆಟಗಾರ ವರ್ಷ

1. 18 ಬ್ರೆಂಡನ್ ಮೆಕಲಮ್ 2015

2. 20 ಬ್ರೆಂಡನ್ ಮೆಕಲಮ್ 2007

3. 20 ಎಂಜೆಲೊ ಮ್ಯಾಥ್ಯೂಸ್ 2015

4. 21 ಗ್ಲೆನ್ ಮ್ಯಾಕ್ಸ್‌ವೆಲ್ 2015

5. 21 ಮಾರ್ಕ್‌ ಬೌಚರ್ 2007

6. 21 ಬ್ರೆಂಡನ್ ಮೆಕಲಮ್ 2015

ಬೋಲಿಂಗ್:

ಅ. ಆತ್ಯಂತ ಹೆಚ್ಚು ವಿಕೆಟ್ ವಿಶ್ವ ಕಪ್‌ನಲ್ಲಿ:

ವಿಕೆಟ್‌ಗಳು ಆಟಗಾರ ದೇಶ ಮ್ಯಾಚ್‌ಗಳು ಅತ್ಯುತ್ತಮ

1. 71 ಗ್ಲೆನ್ ಮೆಗ್ರಾತ್ ಆಸ್ಟ್ರೇಲಿಯ 39 7/15

2. 68 ಮತ್ತೈಯ ಮುರಳೀಧರನ್ ಶ್ರೀಲಂಕ 40 4/19

3. 56 ಲಸಿತ್ ಮಾಲಿಂಗ ಶ್ರೀಲಂಕ 29 6/38

4. 55 ವಸೀಂ ಅಕ್ರಂ ಪಾಕಿಸ್ಥಾನ 38 5/28

5. 49 ಮಿಚೆಲ್ ಸ್ಟಾರ್ಕ ಆಸ್ಟ್ರೇಲಿಯ 18 6/28

6. 49 ಚಮಿಂದ ವಾಝ್ ಶ್ರೀಲಂಕ 31 6/25

ಬಿ. ಒಂದು ಮ್ಯಾಚ್‌ನಲ್ಲಿ ಅತ್ಯುತ್ತಮ ಪ್ರಯತ್ನ

ವಿಕೆಟ್ ಆಟಗಾರ ದೇಶ ವಿರುದ್ಧ ವರ್ಷ

1. 7/15 ಗ್ಲೆನ್ ಮೆಗ್ರಾತ್ ಆಸ್ಟ್ರೇಲಿಯ ನಮಿಬಿಯ 2003

2. 7/20 ಆಂಡಿ ಬಿಕೆಲ್ ಆಸ್ಟ್ರೇಲಿಯ ಇಂಗ್ಲೆಂಡ್ 2003

3. 7/33 ಟಿಂ ಸೌತ್‌ ನ್ಯೂಝಿಲೆಂಡ್ ಇಂಗ್ಲೆಂಡ್ 2015

4. 7/51. ವಿನ್ಸ್‌ಟನ್ ಡೇವಿಸ್ ವೆಸ್ಟ್ ಇಂಡೀಸ್ ಆಸ್ಟ್ರೇಲಿಯ 1983

5. 6/14 ಗ್ಯಾರಿ ಗಿಲ್ಮರ್ ಆಸ್ಟ್ರೇಲಿಯ ಇಂಗ್ಲೆಂಡ್ 1975

ಈಗಿನ ಪ್ರಸ್ತುತ ಆಟದ ಮಟ್ಟವನ್ನು ನೋಡಿದಾಗ ಇಂಗ್ಲೆಂಡ್, ಆಸ್ಟ್ರೇಲಿಯ, ಇಂಡಿಯ ಮತ್ತು ನ್ಯೂಝಿಲೆಂಡ್ ಸೆಮಿ ಫೈನಲ್ ತಲುಪಬಹುದೆಂದು ಎಲ್ಲರ ನಿರೀಕ್ಷೆ. ಆದರೆ 20 ದಿವಸಗಳಲ್ಲಿ ಯಾರು ಎಷ್ಟು ಬೇಗ ಇಲ್ಲಿನ ಪಿಚ್, ಹವಾಮಾನಕ್ಕೆ ಹೊಂದಿಕೊಳ್ಳುತ್ತಾರೋ ಮತ್ತು ಅವರವರ ಫಾರ್ಮ ಇವೆಲ್ಲವೂ ಸೇರಿ ನಾವು ಅಂದುಕೊಂಡಿದ್ದು ಟೀಮುಗಳು ಪೊಳ್ಳೆಂದು ಸಾಬೀತಾಗಬಹುದು!

ಇದೇ ಕ್ರಿಕೆಟ್ ಆಟದ ಮಹಿಮೆ! ಯಾರು ಗೆಲ್ಲುತ್ತಾರೆ ಎಂದು ಖಚಿತವಾಗಿ ಹೇಳಲು ಅಸಾಧ್ಯ. ಎಲ್ಲವೂ ಸಾಂಗವಾಗಿ ನಡೆದು, ಮೈದಾನದಲ್ಲಿ ಪ್ರೇಕ್ಷಕರಿಗೆ, ಟಿವಿ ಬೇರೆ ಮಾಧ್ಯಮದಲ್ಲಿ ಪ್ರೇಕ್ಷಕರಿಗೆ ರೋಮಾಂಚಕ ಆಟವನ್ನು ನೀಡಿದ ಆ ಟೀಮ್ ಗೆಲ್ಲಲಿ ಎಂದು ಕ್ರಿಕೆಟಾಯ ನಮಃದಿಂದ ನಮ್ಮ ಪ್ರಾರ್ಥನೆ.