ಹಳ್ಳಿಗಳಲ್ಲಿ ಸಮಸ್ಯೆಗಳು ಇದ್ದೇ ಇವೆ. ಪಟ್ಟಣಗಳಲ್ಲಿ ಇಲ್ಲವೇ?! ಆದರೆ ಅಲ್ಲೊಂದು ಬದಲಾವಣೆ ತರಬೇಕು ಅಂದರೆ ಅಲ್ಲಿನ ಸಂಸ್ಕೃತಿ ಹಾಳಾಗದಂತೆ ಪಟ್ಟಣದ ಕೆಲವು ಸವಲತ್ತುಗಳು ಬರಬೇಕು. ತಂತ್ರಜ್ಞಾನವನ್ನು ಹಳ್ಳಿಗರು ಈಗಾಗಲೇ ಒಪ್ಪಿಕೊಂಡಿದ್ದಾರೆ. UPI ಬಳಕೆ ಕೂಡ ಹಳ್ಳಿಗಳಲ್ಲಿ ಈಗ ಸಾಮಾನ್ಯ ಅನಿಸುವಷ್ಟು ಆವರಿಸುತ್ತಿದೆ. ಮೊಬೈಲ್ ಬಳಕೆ ದಿನದಿನಕ್ಕೆ ಹೆಚ್ಚುತ್ತಿದೆ. ಅದರ ಮೂಲಕವೇ ನಾವು ಅವರನ್ನು ತಲುಪಬೇಕು. ಹೊಸದೇನೋ ಇದೆ ಅಂತ ತಿಳಿಸುವುದು ಈಗ ತುಂಬಾ ಸುಲಭ. ಒಂದು ಯೂಟ್ಯೂಬ್ ಚಾನೆಲ್ ಮೂಲಕ ಆ ಕೆಲಸ ಮಾಡಬಹುದು. ಹೀಗಾಗಿ ನಾನು ಹೆಚ್ಚು ಹೆಚ್ಚು ವಿಡಿಯೋಗಳನ್ನು ಮಾಡಲು ತೊಡಗಿದೆ.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣ ನಿಮ್ಮ ಓದಿಗೆ

ನಾನು ಮೊದಲು ಹಳ್ಳಿಗೆ ಬಂದಾಗ ನನ್ನ ಜೊತೆ ಇದ್ದವರು ಬರಿ ನಾಗಣ್ಣ ಹಾಗೂ ವಿನೋದ. ಆದರೆ ಈಗೊಂದು ಹೊಸ ರೈತಾನಂದರ ಬಳಗ ಅಲ್ಲಿಯೇ ಸೃಷ್ಟಿ ಆಗಿತ್ತಲ್ಲ. ಈಗ ನನ್ನ ಜೊತೆಗೆ ಶಂಭುಲಿಂಗ ಮಾವ, ಸುನಿಲ, ವರ್ಷ, ಶಿವು ಹಾಗೂ ಇನ್ನೂ ಅನೇಕ ಸಮಾನ ಮನಸ್ಕ ಸ್ಥಳೀಯರು ಇದ್ದರು. ನಮ್ಮ ಬಳಗ ಬೆಳೆಯುತ್ತಿತ್ತು! ಈ ಎಲ್ಲ ಬಳಗ ಬೆಳೆಯಲು ಕಾರಣೀಭೂತಳಾದವಳು ನನ್ನ ಸಹಧರ್ಮಿಣಿ ಆಶಾ. ಹೀಗಾಗಿ ಅವಳು ನಮ್ಮ ಬಳಗದ ಶಾಶ್ವತ ಸದಸ್ಯೆ! ಅವಳು ಹಳ್ಳಿಗೆ ಬರೋದು ಅಪರೂಪ. ಆದರೆ ಈ ಸರ್ತಿ ಒಂದು ವಾರಕ್ಕೆ ಅಂತಲೇ ಇಡೀ ಕುಟುಂಬ ಸಮೇತನಾಗಿಯೇ ಗ್ರಾಮ ವಾಸ್ತವ್ಯ ಮಾಡಿದ್ದೆವು. ಅದು ಜುಲೈ ತಿಂಗಳು. ಆಗ ನಾನು ಎರಡನೇ ಸಲ ಭತ್ತವನ್ನು ಬಿತ್ತುವ ತಯಾರಿ ನಡೆಸಿದ್ದೆ. ಅದಕ್ಕೆ ನನಗೆ ಜೊತೆಗೆ ಅಂತ ಅವಳೂ ಬಂದಿದ್ದಳು.

ನನಗೆ ಹಾಗೂ ನನ್ನ ಹೆಂಡತಿಗೆ ಹಳ್ಳಿಯಲ್ಲಿ ಇದ್ದು ರೂಡಿ ಇದೆ, ಆದರೆ ಮಗಳಿಗೆ? ಅವಳು ಹುಟ್ಟಿ ಬೆಳೆದಿದ್ದು ಬೆಂಗಳೂರು. ಅವಳಿಗೆ ಹಲ್ಲಿಗಳು, ಜಿರಲೆಗಳು, ಹುಳು ಹುಪ್ಪಡಿಗಳನ್ನು ಕಂಡರೆ ಒಂದು ಮೈಲಿ ದೂರ ಓಡಿ ಹೋಗುತ್ತಾಳೆ. ಹೀಗಾಗಿ ಅವಳು ಅಲ್ಲಿ ಒಂದು ವಾರ ಹೇಗೆ ನಿರ್ವಹಿಸುತ್ತಾಳೆ ಎಂಬ ಕುತೂಹಲ ನಮ್ಮಿಬ್ಬರಿಗೂ ಇತ್ತು. ಆಶ್ಚರ್ಯ ಎಂಬಂತೆ ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡಳು! ಮಕ್ಕಳು ಎಲ್ಲಿಯಾದರೂ ತ್ವರಿತವಾಗಿ ಹೊಂದಿಕೊಳ್ಳುತ್ತಾರೆ. ದೊಡ್ಡವರೇ ಆಗುವುದಿಲ್ಲ. ಆದರೆ ದೊಡ್ಡವರು ಯಾವಾಗಲೂ ಹೇಳುವುದು ಮಕ್ಕಳಿಗೋಸ್ಕರ ನಾವು ಪಟ್ಟಣ ಬಿಡಲಾಗುತ್ತಿಲ್ಲ ಎಂಬ ಕುಂಟು ನೆಪ! ಅಲ್ಲಿ ಇರುವಷ್ಟು ದಿವಸ ಆಶಾ, ನಾನು ಹೊಲಕ್ಕೆ ಹೋದರೆ ಮಗಳು ಒಬ್ಬಳೇ ಅಲ್ಲಿನ ಮನೆಯಲ್ಲಿ ಇದ್ದು ಓದಿ ಬರೆದು ತನ್ನ ಕೆಲಸಗಳನ್ನು ಮಾಡುತ್ತಿದ್ದಳು. ಕೆಲವು ಸಲ ನಮ್ಮ ಜೊತೆಗೆ ಹೊಲಕ್ಕೂ ಬರುತ್ತಿದ್ದಳು.

ಅಲ್ಲಿ ನಮ್ಮ ಬಟ್ಟೆಗಳನ್ನು ನಾವೇ ಒಗೆದುಕೊಳ್ಳಬೇಕಿತ್ತು. ಮನೆಯ ಹತ್ತಿರ ಒಗೆಯುವ ಕಲ್ಲಿನ ಮೇಲೆ ನಾನು ಬಟ್ಟೆ ಒಗೆಯುವಾಗ ಅವಳನ್ನೂ ಕರೆದುಕೊಂಡು ಹೋಗುತ್ತಿದ್ದೆ. ಅವಳಿಗೂ ಆಸಕ್ತಿ ಉಂಟಾಗಿ ತಾನೂ ಬಟ್ಟೆ ಒಗೆಯುವುದನ್ನು ಕಲಿತಳು. ನಾನು ಶಾಶ್ವತವಾಗಿ ಹಳ್ಳಿಯಲ್ಲಿ ಇರುವ ಕನಸು ನನಸಾಗುತ್ತೊ ಇಲ್ಲವೋ ಗೊತ್ತಿಲ್ಲ. ಆದರೆ ನಾವೆಲ್ಲ ಒಟ್ಟಿಗೆ ಕಳೆದ ಆ ಏಳೆಂಟು ದಿನಗಳನ್ನು ಮರೆಯಲು ಸಾಧ್ಯವೇ ಇಲ್ಲ. ಅವು ನನಗೆ ಅತೀವ ಆನಂದವನ್ನು ಕೊಟ್ಟ ಕ್ಷಣಗಳು. ಅದಕ್ಕಾಗಿ ಅವರಿಬ್ಬರಿಗೂ ನಾನು ಆಭಾರಿ!

ಎರಡನೇ ಸಲ ಭತ್ತ ಬಿತ್ತಲು ನಾನು ಎಲ್ಲ ತಯಾರಿ ಮಾಡಿಟ್ಟುಕೊಂಡಿದ್ದೆ. ಮೊದಲ ಸಲ ಕೊಯ್ಲು ಮಾಡಿ ಇಟ್ಟಿದ್ದ ಭತ್ತದ ಬೀಜಗಳು ಈಗಾಗಲೇ ಅಲ್ಲಿಯೇ ಇದ್ದವು. ಟ್ಟ್ರ್ಯಾಕ್ಟರ್‌ನಲ್ಲಿ ಹೇಗೆ ಉಳಿಮೆ ಮಾಡಿಸಬೇಕು ಅಂತಲೂ ಗೊತ್ತಾಗಿತ್ತು. ಒಂದು ದಿನ ಹಾಗೆ ಉಳಿಮೆ ಮಾಡಿಸಿ ಒಂದೆರಡು ಡಿನ ಬಿಟ್ಟು ಬೀಜ ಬಿತ್ತಿಬಿಟ್ಟರೆ ನಮ್ಮ ಆ ಸಲದ ಭತ್ತದ ಕೆಲಸ ಮುಗಿದಂತೆ, ಅದು ಕಟಾವಿಗೆ ಬರುವವರೆಗೆ. ಅದನ್ನೆಲ್ಲ ಮಾಡಿಸಲು ರಾಮು ಎಂಬ ಒಬ್ಬ ಯುವಕ ತುಂಬಾ ಸಹಾಯ ಮಾಡಿಕೊಟ್ಟ. ಅವನದೆ ಟ್ಟ್ರ್ಯಾಕ್ಟರ್ ಇತ್ತು. ಒಂದಿಬ್ಬರನ್ನು ಕರೆದುಕೊಂಡು ಬಂದು ಎಲ್ಲ ಕೆಲಸಗಳನ್ನು ಮಾಡಿಸಿಕೊಟ್ಟ. ಮೊದಲ ವರ್ಷ ಮಾಡಿದ ಖರ್ಚಿನ ಅರ್ಧ ಖರ್ಚಿನಲ್ಲಿ ಈ ಸಲ ಎಲ್ಲ ಕೆಲಸಗಳು ಮುಗಿದಿದ್ದವು. ಅನುಭವದಲ್ಲಿ ಅಮೃತ ಇದೆ ಅಲ್ಲವೇ?

ನಾವು ಈ ಎಲ್ಲ ಕೆಲಸಗಳನ್ನು ಮಾಡಿಸುವಾಗ ಅದನ್ನೆಲ್ಲ ವೀಕ್ಷಿಸಲು ನಮ್ಮ ದೂರದ ಸಂಬಂಧಿ ಒಬ್ಬರು ಮತ್ತೆ ಬಂದಿದ್ದರು. ಅವರು ಈ ಹಿಂದೆಯೂ ಬಂದಿದ್ದರು. ಅವರಿಗೆ ನಾನು ಏನು ಮಾಡುತ್ತಿರುವೆ ಎಂಬ ಕುತೂಹಲ. ಅಡಿಕೆ ತೋಟ ಹಾಕಿದ್ದರೆ ಇಷ್ಟೊತ್ತಿಗೆ ಫಲ ಬಂದಿರುತ್ತಿತ್ತು. ಸಾವಯವ ಕೃಷಿ, ಭತ್ತ ಅಂತ ಏನೇನೋ ಮಾಡುತ್ತಾ ನಾನು ಸುಮ್ಮನೆ ಸಮಯಹರಣ ಮಾಡುತ್ತಿರುವೆ ಎಂಬ ಚಿಂತೆ ಅವರಿಗೆ ಕಾಡುತ್ತಿತ್ತು. ಇದೊಂದು ವಿಚಿತ್ರ ಪ್ರಪಂಚ. ನಮ್ಮ ಬಗ್ಗೆ ನಮಗಿಂತಲೂ ಬೇರೆಯವರಿಗೆ ಹೆಚ್ಚು ಚಿಂತೆ! ನಾನು ಸುಮ್ಮನೆ ನಕ್ಕೆ.

ಸತತ ಎರಡನೇ ವರ್ಷವೂ ನಾನು ಜಮೀನಿಗೆ ಯಾವುದೇ ರಾಸಾಯನಿಕ ಬಳಸದೆ ಭತ್ತ ಬೆಳೆಯುತ್ತಿದ್ದೆ. ನನ್ನ ಭೂಮಿಗೆ ನಾನು ಮಾಡಿದ ಋಣ ಸಂದಾಯ ಅದು! ನಾವು ಏನೂ ಮಾಡದಿದ್ದರೆ ಭೂಮಿಗೆ ಒಳಿತು ಮಾಡಿದಂತೆ. ಮಾನವನ ಅತಿಯಾದ ಹಸ್ತಕ್ಷೇಪದಿಂದಲೇ ಅಲ್ಲವೇ ಈ ಪ್ರಕೃತಿ ನಲುಗುತ್ತಿರುವುದು.

ಜಪಾನಿನ ಸುಪ್ರಸಿದ್ಧ ನೈಸರ್ಗಿಕ ಕೃಷಿಕರು, ದಿ. ಮುಸನೋಬು ಫುಕುವೋಕ ಅವರು ಎಷ್ಟೋ ವರ್ಷಗಳ ಕಾಲ ತಮ್ಮ ಹೊಲವನ್ನು ಏನೂ ಮಾಡದೆ ಸುಮ್ಮನೆ ಬಿಟ್ಟಿದ್ದರಂತೆ. ಅದನ್ನು ಹಾಗೆಯೇ ಗಮನಿಸುತ್ತಿದ್ದರಂತೆ. ನಾನು ಅವರನ್ನೇ ಅನುಸರಿಸುತ್ತಿದ್ದೆ. ಅವರಷ್ಟು ಅಲ್ಲದಿದ್ದರೂ ಸ್ವಲ್ಪ ಮಟ್ಟಿಗಾದರೂ ಬದಲಾವಣೆಗಳನ್ನು ಗಮನಿಸಿದ್ದೆ. ಯಾವಯಾವ ಗಿಡಗಳು ಯಾವ ಕಾಲದಲ್ಲಿ ಚಿಗುರುತ್ತವೆ, ಯಾವ ಕಳೆಗಳು ಯಾವಾಗ ಬರುತ್ತವೆ, ಯಾಕೆ ಬರುತ್ತವೆ? ಹೀಗೆ ಹಲವಾರು ವಿಷಯಗಳ ಅರಿವು ಮೂಡತೊಡಗಿತ್ತು.

ಭತ್ತವನ್ನು ಬೆಳೆದು ಬೆಂಗಳೂರಿನಲ್ಲಿ ಮಾರಿದ ಅನುಭವವನ್ನೂ ಈಗಾಗಲೇ ಪಡೆದಿದ್ದೆ. ನಾನು ಬೆಳೆಯುವ ಸ್ಥಳೀಯ ಪಾಲಿಷ್ ಮಾಡದ ಅಕ್ಕಿಗೆ ಅಲ್ಲಿ ತುಂಬಾ ಬೇಡಿಕೆ ಇದೆ ಅಂತಲೂ ತಿಳಿದಿದ್ದೆ. ಇದರ ಜೊತೆಗೆ ನಾವು ಕೆಲವು ವರ್ಷಗಳ ಹಿಂದೆ ಬೆಳೆಸಿದ್ದ ಅಪ್ಪೆ ಮಿಡಿ ಗಿಡಗಳೂ ಈಗ ಫಲ ಕೊಡಲು ಶುರುವಾಗಿದ್ದವು. ಸಧ್ಯಕ್ಕೆ ಎರಡೇ ಇದ್ದವಾದರೂ, ಅವುಗಳನ್ನು ಬೆಳೆಸಬಹುದು ಎಂಬ ಆತ್ಮವಿಶ್ವಾಸ ನಮ್ಮಲ್ಲಿ ಮೂಡಿತ್ತು. ಅದರ ಜೊತೆಗೆ ಬೆಂಗಳೂರಿನಲ್ಲಿ ಸಿಮರೂಬಾ ಎಂಬ ಗಿಡದ ಸಸಿಗಳನ್ನು ಕೂಡ ತಯಾರಿಸಿಕೊಂಡು ಇಟ್ಟಿದ್ದೆ. ಅದು ಕ್ಯಾನ್ಸರ್ ಗುಣಪಡಿಸಬಲ್ಲ ಶಕ್ತಿ ಇರುವ ಅದ್ಭುತ ಮರ. ಅದನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯುವ ಕನಸು ಇದೆ. ನನ್ನ ಹೊಲದಲ್ಲಿ ಇದ್ದ ಹಲವಾರು ಗಿಡಗಳು ಬರಿ ಮಳೆಯ ಆಧಾರಿತವಾಗಿಯೇ ಬೆಳೆದಿದ್ದು ನನ್ನಲ್ಲಿ ಇನ್ನೂ ಹುರುಪು ಮೂಡಿಸಿತ್ತು. ಬರಿ ಮಳೆಯ ಸಹಾಯದಿಂದಲೇ ನನ್ನ ತೋಟವನ್ನು ನಿರ್ಮಿಸುವ ಪಣ ತೊಟ್ಟಿದ್ದೆ. ಅಂತರ್ಜಲವನ್ನು ಬರಿದಾಗಿಸುವ Borewell ಬಳಸುವುದೇ ಬೇಡ ಅಂತ ನಿರ್ಧರಿಸಿದ್ದೆ.

ಮಕ್ಕಳು ಎಲ್ಲಿಯಾದರೂ ತ್ವರಿತವಾಗಿ ಹೊಂದಿಕೊಳ್ಳುತ್ತಾರೆ. ದೊಡ್ಡವರೇ ಆಗುವುದಿಲ್ಲ. ಆದರೆ ದೊಡ್ಡವರು ಯಾವಾಗಲೂ ಹೇಳುವುದು ಮಕ್ಕಳಿಗೋಸ್ಕರ ನಾವು ಪಟ್ಟಣ ಬಿಡಲಾಗುತ್ತಿಲ್ಲ ಎಂಬ ಕುಂಟು ನೆಪ! ಅಲ್ಲಿ ಇರುವಷ್ಟು ದಿವಸ ಆಶಾ, ನಾನು ಹೊಲಕ್ಕೆ ಹೋದರೆ ಮಗಳು ಒಬ್ಬಳೇ ಅಲ್ಲಿನ ಮನೆಯಲ್ಲಿ ಇದ್ದು ಓದಿ ಬರೆದು ತನ್ನ ಕೆಲಸಗಳನ್ನು ಮಾಡುತ್ತಿದ್ದಳು.

ನಾನು ಮುಂದೆ ಏನು ಬೆಳೆಯಬೇಕು ಎಂಬುದನ್ನು ಈಗಾಗಲೇ ನಿರ್ಧರಿಸಿದ್ದೆ. ಆದರೆ ಹೇಗೆ ಎಂಬುದನ್ನು ಇನ್ನೂ ಅಂತಿಮಗೊಳಿಸಿರಲಿಲ್ಲ. ಹಲವು ವಿನ್ಯಾಸಗಳು ತಲೆಯಲ್ಲಿ ಇದ್ದವು. ಆದರೆ ಯಾವುದೇ ಗಡಿಬಿಡಿ ನನಗೆ ಇರಲಿಲ್ಲ. ಅದೇ ನನ್ನ ಸಂಬಂಧಿಗೆ ತಲೆಬಿಸಿ ಆಗಿತ್ತು. ಇವನು ಹೀಗೆಯೇ ಅಂತ ತಿಳಿದು ಅವರು ಮರಳಿ ತಮ್ಮೂರಿಗೆ ಹೋದರು!

ಒಟ್ಟಿನಲ್ಲಿ ನನಗೆ ಹಳ್ಳಿಯಲ್ಲಿ ಬೆಳೆಯುವುದಕ್ಕೂ ಮಿಗಿಲಾಗಿ ಅಲ್ಲಿನ ಉತ್ಪನ್ನಗಳಿಗೆ ಒಳ್ಳೆಯ ಮಾರ್ಕೆಟ್ ಒದಗಿಸಬೇಕು ಅಂತ ಅನಿಸಿತು. ಬೆಂಗಳೂರಿನಲ್ಲಿ ಈಗಾಗಲೇ ನಾವು ಹಲವಾರು ತರಕಾರಿ, ಅಕ್ಕಿ ಮಾರಿದ ಅನುಭವ ಇತ್ತು. ಆದ್ದರಿಂದ ನಾನು ಮಾರ್ಕೆಟಿಂಗ್ ಕಡೆಗೆ ಹೆಚ್ಚು ಗಮನ ಕೊಡಬೇಕು ಅನಿಸಿತು. ನಮ್ಮ ಬಳಗದ ಎಲ್ಲರೂ ಹಳ್ಳಿಯಲ್ಲಿ ಒಬ್ಬರದೊಬ್ಬರ ಹೊಲ ತೋಟಗಳನ್ನು ನಾವೇ ನೋಡಿಕೊಳ್ಳುತ್ತ ರಾಸಾಯನಿಕ ಮುಕ್ತವಾಗಿ ಬೆಳೆದು ಬೆಂಗಳೂರಿನಲ್ಲಿ ಮಾರಾಟದ ವ್ಯವಸ್ಥೆ ಮಾಡಿಕೊಳ್ಳೋಣ ಅಂತೆಲ್ಲ ಮಾತಾಡಿಕೊಂಡೆವು. ನಮ್ಮ ಉದ್ದೇಶಗಳು ಒಂದೇ ಆದಾಗ ನಾವೆಲ್ಲ ಒಂದೇ ಕುಟುಂಬದವರು ಅಂತ ಅನಿಸುವಷ್ಟು ಬಾಂಧವ್ಯ ಬೆಳೆಯುತ್ತದೆ.

*****

ಹಳ್ಳಿಗಳಲ್ಲಿ ಸಮಸ್ಯೆಗಳು ಇದ್ದೇ ಇವೆ. ಪಟ್ಟಣಗಳಲ್ಲಿ ಇಲ್ಲವೇ?! ಆದರೆ ಅಲ್ಲೊಂದು ಬದಲಾವಣೆ ತರಬೇಕು ಅಂದರೆ ಅಲ್ಲಿನ ಸಂಸ್ಕೃತಿ ಹಾಳಾಗದಂತೆ ಪಟ್ಟಣದ ಕೆಲವು ಸವಲತ್ತುಗಳು ಬರಬೇಕು. ತಂತ್ರಜ್ಞಾನವನ್ನು ಹಳ್ಳಿಗರು ಈಗಾಗಲೇ ಒಪ್ಪಿಕೊಂಡಿದ್ದಾರೆ. UPI ಬಳಕೆ ಕೂಡ ಹಳ್ಳಿಗಳಲ್ಲಿ ಈಗ ಸಾಮಾನ್ಯ ಅನಿಸುವಷ್ಟು ಆವರಿಸುತ್ತಿದೆ. ಮೊಬೈಲ್ ಬಳಕೆ ದಿನದಿನಕ್ಕೆ ಹೆಚ್ಚುತ್ತಿದೆ. ಅದರ ಮೂಲಕವೇ ನಾವು ಅವರನ್ನು ತಲುಪಬೇಕು. ಹೊಸದೇನೋ ಇದೆ ಅಂತ ತಿಳಿಸುವುದು ಈಗ ತುಂಬಾ ಸುಲಭ. ಒಂದು ಯೂಟ್ಯೂಬ್ ಚಾನೆಲ್ ಮೂಲಕ ಆ ಕೆಲಸ ಮಾಡಬಹುದು. ಹೀಗಾಗಿ ನಾನು ಹೆಚ್ಚು ಹೆಚ್ಚು ವಿಡಿಯೋಗಳನ್ನು ಮಾಡಲು ತೊಡಗಿದೆ. ನನಗೆ ಅರಿವಿಗೆ ಅಥವಾ ಅನುಭವಕ್ಕೆ ಬಂದ ವಿಷಯಗಳು ಇರಬಹುದು, ಯಾರಿಂದಲೋ ಕೇಳಿ ತಿಳಿದ ವಿಷಯ, ಯಾವುದೇ ಕೃಷಿ ಸಂಬಂಧಿತ ವಿಷಯಗಳು, ಸಾಧನೆ ತೋರಿದ ರೈತರ ಸಂದರ್ಶನ ಹೀಗೆ ಹಲವು ವಿಡಿಯೋಗಳನ್ನು ನನ್ನ “ಬೆಳೆಸಿರಿ ರೈತ ಬಳಗ” ಎಂಬ ಚಾನೆಲ್ ಮೂಲಕ ಪ್ರಸಾರಿಸಲು ಶುರು ಮಾಡಿದೆ. ಓದುವುದು, ಬರೆಯುವುದು, ಕ್ಯಾಮೆರಾ ಮುಂದೆ ಮಾತಾಡುವುದು ನನಗೆ ಯಾವಾಗಲೂ ಖುಷಿ ಕೊಡುವ ವಿಷಯವೇ. ಒಳ್ಳೆಯ ಮಾಹಿತಿ ಇದ್ದರೆ ಅದು ಹೇಗೋ ಹೆಚ್ಚು ಹೆಚ್ಚು ಜನರನ್ನು ತಲುಪಿ ಬಿಡುತ್ತದೆ. ಅದೇ ಈಗಿನ ಇಲೆಕ್ಟ್ರಾನಿಕ್ ಮಾಧ್ಯಮದ ಶಕ್ತಿ. ಗೊಬ್ಬರ ಗಿಡ, ಕಳೆ ಕತ್ತರಿಸುವ ಯಂತ್ರದ ಬಗ್ಗೆ ಮಾಡಿದ ನನ್ನ ವಿಡಿಯೋಗಳನ್ನು ನೋಡಿ ಬಹಳಷ್ಟು ಜನ ಈಗಲೂ ಕರೆ ಮಾಡುತ್ತಾರೆ!

ಈ ನನ್ನ “ಗ್ರಾಮ ಡ್ರಾಮಾಯಣ” ಹಳ್ಳಿಯ ಜೀವನದ ನಾಟಕೀಯತೆಯನ್ನು ಸೂಚಿಸುವ ತಲೆಬರಹ ಅನಿಸಿದರೂ, ಇದು ನನ್ನ ಮಟ್ಟಿಗೆ ಒಂದು ಸುಂದರ ಯಾನ, ಯಾವ ಪತ್ತೇದಾರಿ ಕತೆಗೂ ಕಮ್ಮಿಯಿಲ್ಲದ ರೋಮಾಂಚಕ ಅನುಭವ! ನನಗೆ ಇದೊಂದು ಅದ್ಭುತ ಪ್ರಾರಂಭ ನೀಡಿದೆ. ಮಾಡಿದ ಕೆಲಸ ಎಳ್ಳು ಕಾಳಷ್ಟು ಮಾತ್ರ. ಮುಂದೆ ಇನ್ನೂ ಮಾಡಬೇಕಾದ ಕೆಲಸಗಳು ಸಾಗರದಷ್ಟು ಇವೆ. ಮುಂದಿನ ದಾರಿ ಈಗ ಸ್ಪಷ್ಟವಾಗಿದೆ. ದಿಟ್ಟ ಹೆಜ್ಜೆ ಇಡುವುದಷ್ಟೇ ನಮ್ಮ ಕೆಲಸ.

ಈ ಸರಣಿಯನ್ನು ಬರೆಯಲು ಅನುವು ಮಾಡಿ ಕೊಟ್ಟ “ಕೆಂಡಸಂಪಿಗೆ” ಬಳಗಕ್ಕೆ ನಾನು ಋಣಿ. ಬರೀತಾ ಬರೀತಾ 33 ಕಂತುಗಳು ಆಗಿದ್ದು ನನಗೇ ಆಶ್ಚರ್ಯ ತಂದಿದೆ. ಹಲವಾರು ಓದುಗರು ಲೇಖನಗಳನ್ನು ಓದಿ ಪ್ರತಿಕ್ರಿಯಿಸಿ, ಲೇಖನ ಕುತೂಹಲ ಹುಟ್ಟಿಸುತ್ತದೆ ಅಂತ ಹೇಳಿ ನನಗೆ ಇನ್ನೂ ಬರೆಯುವಂತೆ ಪ್ರೋತ್ಸಾಹಿಸಿದ್ದಾರೆ. ಅವರಿಗೂ ನಾನು ಆಭಾರಿ! ಗ್ರಾಮ “ಡ್ರಾಮಾಯಣ- ಭಾಗ 2” ರ ರೋಚಕ ಕಥೆಯೊಂದಿಗೆ ಮತ್ತೆ ನಿಮ್ಮೆದುರು ಬರುವ ಆಸೆಯಿದೆ. ಅಲ್ಲಿಯವರೆಗೆ…

ಗುರುಪ್ರಸಾದ ಕುರ್ತಕೋಟಿ