ಕೆಲವು ತಿಂಗಳುಗಳ ಹಿಂದೆ ಖಾಕಿ ಉಡುಪು ಧರಿಸಿದ ಕಟ್ಟುಮಸ್ತಾದ ಸ್ತ್ರೀಯೊಬ್ಬರು ದೇವರಕೊಲ್ಲಿಯ ಸಾಬರ ಹೋಟಲಿನ ಮುಂದೆ ಮಳೆಯನ್ನು ನೋಡುತ್ತ ನಿಂತಿದ್ದರು. ಅವರ ನೋಟ, ಹೋಟೆಲ್ಲಿನಲ್ಲಿ ಕುಳಿತಿದ್ದ ಇತರ ಮಂದಿ ಅವರ ಕಡೆ ತೋರಿಸುತ್ತಿದ್ದ ಗೌರವ ಬೆರೆತ ದೃಷ್ಟಿ ಇವೆಲ್ಲವನ್ನೂ ಕಂಡು ನನಗೆ ಕುತೂಹಲವಾಯಿತು.
‘ಏನ್ ಮೇಡಂ ನೀವು ಪೊಲೀಸ್ ಡಿಪಾರ್ಟ್‌ಮೆಂಟಾ ಇಲ್ಲಾ ಫಾರೆಸ್ಟ್ ಡಿಪಾರ್ಟ್‌ಮೆಂಟಾ?’ ಎಂದು ಕೊಂಚ ಸಲುಗೆ ತೆಗೆದುಕೊಂಡು ಕೇಳಿದೆ. ‘ಇಲ್ಲಾ ಇಲ್ಲಿ ಏಲಕ್ಕಿ ಮಲೆಯಲ್ಲಿ ಎಸ್ಟೇಟ್ ರೈಟರು’ ಎಂದು ಹೇಳಿದರು. ‘ಯಾವ ಎಸ್ಟೇಟ್’ ಎಂದು ಕೇಳಿದೆ. ಆ ಎಸ್ಟೇಟಿನ ಹೆಸರು ಹೇಳಿದರು. ಅದನ್ನು ಕೇಳಿ ನನಗೆ ತಲೆ ತಿರುಗಿದಂತಾಯಿತು.ಅಲ್ಲಿ ಆನೆಗಳೂ, ಕಾಡಾಡುಗಳೂ ಸದಾ ಸಂಚರಿಸುತ್ತಿರುತ್ತವೆ ಎಂದು ಗೊತ್ತಿತ್ತು. ಅವರು ನನ್ನ ಹೆಸರು ಕೇಳಿದರು. ನಾನು ಹೇಳಿದೆ.
’ಗೊತ್ತು ನೀವು ಕಥೆಗಳನ್ನು ಬರೆಯುತ್ತೀರಲ್ಲವಾ ಓದಿದ್ದೇನೆ’ ಅಂದರು. ಅದಾಗಿ ಕಳೆದ ವಾರ ಒಂದು ದಿನ ಅವರು ಪೋನ್ ಮಾಡಿದರು. ನನ್ನ ನೆನಪಾಯಿತಾ ಎಂದು ಕೇಳಿದರು. ಅವರ ಧ್ವನಿ ಕೇಳಿದೊಡನೆ ನನಗೆ ಗೊತ್ತಾಯಿತು. ‘ರುಕ್ಮಿಣಿ ರೈಟರ್ ಅಲ್ಲವಾ’ ಎಂದು ಕೇಳಿದೆ. ’ಹೌದು’ ಎಂದು ಖುಷಿಪಟ್ಟರು. ‘ನಿಮಗೆ ಮಾತನಾಡಲು ಸಮಯವಿದೆಯಾ’ ಎಂದು ಕೇಳಿದರು. ‘ಓ ಬೇಕಾದಷ್ಟಿದೆ’ ಎಂದು ಹೇಳಿದೆ.
’ನನ್ನದೊಂದು ದೊಡ್ಡ ಕಣ್ಣೀರಿನ ಕಥೆ ಹೇಳಿದರೆ ನೀವು ಬರೆಯುತ್ತೀರಾ’ ಎಂದು ಕೇಳಿದರು. ‘ನನಗೆ ಕಣ್ಣೀರಿನ ಕಥೆ ಬರೆದು ಗೊತ್ತಿಲ್ಲ. ಆದರೂ ಹೇಳಿ ಹೇಗೆ ತೋಚುತ್ತದೋ ಹಾಗೆ ಬರೆಯುತ್ತೇನೆ’ ಎಂದು ಹೇಳಿದೆ. ಅವರು ಅವರ ಕಥೆಯನ್ನು ಹೇಳಿದರು. ಅವರು ಹೇಳಿದ ಕಥೆ ಅವರು ಹೇಳಿದಷ್ಟೇ ಚುಟುಕಾಗಿ ಇಲ್ಲಿದೆ.
“ನಾವು ಕೇರಳದವರು. ನನ್ನ ತಂದೆ-ತಾಯಿಗೆ ನಾವು ಒಂಬತ್ತು ಮಂದಿ ಮಕ್ಕಳು. ಹುಡುಗಿಯರಲ್ಲಿ ನಾನು ಎರಡನೆಯವಳು. ನನ್ನ ಹೆಸರು ರುಕ್ಮಿಣಿ. ನಮ್ಮ ತಂದೆ ಬಹಳ ಕಾಲದ ಹಿಂದೆ ಕೇರಳದ ದಕ್ಷಿಣ ಭಾಗದಿಂದ ವಲಸೆ ಬಂದು ಕೊಡಗಿನ ಗೋಣಿಕೊಪ್ಪದ ಬಳಿ ಹೋಟೆಲು ಅಂಗಡಿ ಬೇಕರಿ ಎಲ್ಲಾ ಸೇರಿಕೊಂಡ ಒಂದು ವ್ಯಾಪಾರ ನಡೆಸುತ್ತಿದ್ದರು. ಮೂರು ಏಕರೆ ತೋಟವೂ ಇತ್ತು. ಒಂದು ತರಹದ ಸುಖದಲ್ಲೇ ನಾವೆಲ್ಲಾ ಜೀವಿಸುತ್ತಿದ್ದೆವು” “ನಾನು ಆಗ ಆರನೆಯ ತರಗತಿಯಲ್ಲಿ ಶಾಲೆಗೆ ಹೋಗುತ್ತಿದ್ದೆ. ಒಟ್ಟು ಮಕ್ಕಳಲ್ಲಿ ನಾನು ಐದನೆಯವಳು. ಹೀಗಿರುವಾಗ ನನ್ನ ಅಕ್ಕ ಸ್ವಲ್ಪ ದೊಡ್ಡವಳು ಇದ್ದಕ್ಕಿದ್ದಂತೆ ಕೊಡವ ಜನಾಂಗದ ಹುಡುಗನೊಬ್ಬನನ್ನು ಪ್ರೀತಿಸಿ ಮದುವೆಯಾಗಿ ಬಿಟ್ಟಳು. ಅದು ಆಕಾಲದಲ್ಲಿ ಆ ಪ್ರದೇಶದಲ್ಲಿ ಒಂದು ದೊಡ್ಡ ಕಲಹವನ್ನೇ ಉಂಟುಮಾಡಿಬಿಟ್ಟಿತ್ತು. ನಮ್ಮ ಮನೆಯಲ್ಲೂ ಆ ಕೊಡವರ ಮನೆಯಲ್ಲೂ ಬಹಳ ಕೋಲಾಹಲವೇ ನಡೆದು ಹೋಯಿತು.”
“ನನ್ನ ಅಮ್ಮನ ತಮ್ಮ ಅಂದರೆ ನನ್ನ ಸೋದರಮಾವ ಇನ್ನು ಈ ಮನೆಯಲ್ಲಿ ಇಂತಹ ಕೋಲಾಹಲವೇ ಬೇಡ ಅಂದುಕೊಂಡು ತಕ್ಷಣ ಗಂಡೊಂದನ್ನು ಗೊತ್ತುಮಾಡಿ ಶಾಲೆಯಿಂದ ಬರುತ್ತಿದ್ದ ನನ್ನನ್ನು ಹಿಡಿದು ಮದುವೆ ಮಾಡಿಯೇ ಬಿಟ್ಟರು. ಆಗ ನನಗೆ ಹನ್ನೆರಡು ವರ್ಷ. ನಾನು ಮದುವೆಯಾದ ಗಂಡಸಿಗೆ ಮೂವತ್ತು ವರ್ಷ ಪ್ರಾಯ”
“ನನಗೆ ಗೊತ್ತೇ ಇರಲಿಲ್ಲ. ನನ್ನನ್ನು ಮದುವೆಯಾದ ಗಂಡಸು ಆಗಲೇ ಒಂದು ಮದುವೆಯಾಗಿದ್ದರು. ಅದು ಅಲ್ಲದೆ ಬಹಳ ಹೆಂಗಸರನ್ನು ಇಟ್ಟುಕೊಂಡಿದ್ದರು. ಅವರಿಗೆ ಮನೆಯಲ್ಲಿ ಕಳ್ಳಬಟ್ಟಿ ಕಾಯಿಸುವ ಅಭ್ಯಾಸವೂ ಇತ್ತು. ಆಗಾಗ ಅಬಕಾರೀ ಪೊಲೀಸರು ಬರುತ್ತಿದ್ದರು. ಅವರು ಬಂದರೆ ಎಲ್ಲರೂ ಕಾಡಿಗೆ ಓಡಿಹೋಗುತ್ತಿದ್ದರು. ನಾನು ಯಾಕೆ ಓಡಬೇಕು ಏನೂ ತಪ್ಪುಮಾಡಿಲ್ಲವಲ್ಲ ಎಂದು ಓಡದೇ ನಿಲ್ಲುತ್ತಿದ್ದೆ. ಅವರು ನನ್ನನ್ನೇ ಎತ್ತಿಕೊಂಡು ಹೋಗುತ್ತಿದ್ದರು. ಹೀಗೇ ಅಲ್ಲಿ ನಾಲ್ಕು ವರ್ಷ ಕಳೆಯಿತು. ಎರಡು ಗಂಡು ಮಕ್ಕಳೂ ಹುಟ್ಟಿದರು. ಹಾಗಿರುವಾಗ ಒಂದುದಿನ ಅಬಕಾರಿ ಪೊಲೀಸರ ದಾಳಿ ನಡೆಯಿತು. ಆ ಅಬಕಾರೀ ಪೊಲೀಸರಲ್ಲಿ ಒಬ್ಬರು ನನ್ನ ತಂದೆಯನ್ನು ಗೊತ್ತಿದ್ದವರು. ಅವರು ‘ಯಾಕಮ್ಮಾ ನೀನಿಲ್ಲಿ’ ಎಂದು ಕೇಳಿದರು. ನನಗೆ ನಾಚಿಗೆಯಾಯಿತು. ‘ನನ್ನ ತಂದೆ ಮದುವೆ ಮಾಡಿಕೊಟ್ಟಿದ್ದಾರೆ ಏನು ಮಾಡಲಿ’ ಎಂದು ಹೇಳಿದೆ. ಅವರು ಏನೂ ಹೇಳಲಿಲ್ಲ. ಆಮೇಲೆ ನನಗೇ ಅನಿಸಲಿಕ್ಕೆ ಶುರುವಾಯಿತು. ಇಲ್ಲಿಂದ ಹೋಗಬೇಕು ಅನಿಸಿತು. ನಾನು ನನ್ನ ಗಂಡನನ್ನು ಪ್ರೀತಿಸುತ್ತಲೂ ಇಲ್ಲ ಅಂತಲೂ ಅನಿಸಲು ಶುರುವಾಯಿತು”
“ಹಾಗಿರುವಾಗ ಒಂದುದಿನ ಇವರು ಒಂದು ಹೆಂಗಸನ್ನು ಮನೆಗೆ ಕರೆತಂದರು. ಅವಳ ಮುಂದೆಯೇ ನನ್ನ ಕಣ್ಣಗುಡ್ಡೆ ಹೊರ ಬರುವ ಹಾಗೆ ಹೊಡೆದು ಮನೆಯಿಂದ ಹೊರಗೆ ಹಾಕಿದರು. ಮಳೆಯಲ್ಲೇ ಕಣ್ಣೀರು ಸುರಿಸುತ್ತಾ ಅಂಗಳದಲ್ಲಿ ರಾತ್ರಿಯಿಡೀ ಕುಳಿತಿದ್ದೆ. ಬೆಳಗ್ಗೆ ನೆರೆಮನೆಯವರ ಬಾಗಿಲು ತಟ್ಟಿ ಐದುರೂಪಾಯಿ ಸಾಲ ತೆಗೆದುಕೊಂಡು ಬಸ್ಸು ಹತ್ತಿ ತಾಯಿಯ ಬಳಿ ಬಂದೆ. ಅವರೂ ಮನೆಗೆ ಸೇರಿಸಿಕೊಳ್ಳಲಿಲ್ಲ” “ಇನ್ನು ಎಲ್ಲಿಗೆ ಹೋಗುವುದು ಎಂದು ಗೊತ್ತಾಗದೆ ನೇರವಾಗಿ ಕೊಡವನನ್ನು ಮದುವೆಯಾದ ನನ್ನ ಅಕ್ಕನ ಬಳಿ ಹೋದೆ. ಅಲ್ಲಿ ಎರಡು ವರ್ಷ ಇದ್ದೆ. ತಿನ್ನಲಿಕ್ಕೆ ಹುಲ್ಲು ಚೆನ್ನಾಗಿ ಸಿಕ್ಕಿದಾಗ ದನಗಳು ಚಿಗುರುತ್ತವಲ್ಲ ಹಾಗೆ ಮೂಳೆಮೂಳೆಯಾಗಿದ್ದ ನಾನು ಚಿಗುರಲು ತೊಡಗಿದೆ. ತುಂಬಾ ಚಂದವಾಗಿ ಹೋದೆ. ಎಷ್ಟು ಚಂದಾ ಅಂದರೆ ನನ್ನ ಅಕ್ಕನನ್ನು ಮದುವೆಯಾಗಿದ್ದ ನನ್ನ ಬಾವ ನನ್ನನ್ನು ಉಪದ್ರವಿಸಲು ತೊಡಗಿದರು. ಅಕ್ಕನಿಗೆ ಇದನ್ನ ಹೇಳಿದೆ. ಇದರಿಂದ ಅವರಲ್ಲೂ ಬಿರುಕುಂಟಾಯಿತು”
“ಅವರ ಮನೆಯಲ್ಲಿರುವಾಗ ನನಗೆ ಪ್ರತೀದಿನ ಎರಡು ರೂಪಾಯಿ ಕೊಡುತ್ತಿದ್ದರು. ಅದನ್ನು ನಾನು ಹಾಗೇ ತೆಗೆದಿಟ್ಟುಕೊಳ್ಳುತ್ತಿದ್ದೆ. ಅದು ಈಗ ಉಪಯೋಗಕ್ಕೆ ಬಂತು. ಅದನ್ನು ಎತ್ತಿಕೊಂಡು ಧರ್ಮಸ್ಥಳಕ್ಕೆ ಹೋದೆ. ಅವರು ಸೇರಿಸಿಕೊಳ್ಳಲು ಒಪ್ಪಿಕೊಳ್ಳಲಿಲ್ಲ. ಏಕೆಂದರೆ ಹದಿನೆಂಟು ವರ್ಷ ತುಂಬಿರಲಿಲ್ಲ. ವಾಪಾಸು ಕೊಡಗಿಗೆ ಹೋಗು ಅಂದರು. ಹಾಗಾದರೆ ನನ್ನನ್ನು ನಾನೇ ಕೊಂದುಕೊಳ್ಳುತ್ತೇನೆ ಎಂದು ಹೇಳಿದೆ. ಅದಕ್ಕೆ ಅವರು ನನ್ನನ್ನು ಅನಾಥಾಶ್ರಮಕ್ಕೆ ಸೇರಿಸಿದರು” “ಅನಾಥಾಶ್ರಮದಲ್ಲಿ ಎಲ್ಲ ಕೆಲಸ ಕಲಿತುಕೊಂಡೆ. ಹದಿನೆಂಟು ವರ್ಷ ತುಂಬಿದಾಗ ಅಲ್ಲಿಂದ ಹೊರಟು ಭಾಗಮಂಡಲದ ಹತ್ತಿರ ಏಲಕ್ಕಿ ತೋಟದಲ್ಲಿ ಕೆಲಸಕ್ಕೆ ಸೇರಿಕೊಂಡೆ. ಅಲ್ಲಿ ಹತ್ತುವರ್ಷ ಒಬ್ಬಳೇ ಮೇಸ್ತ್ರಿಯಾಗಿ ಕೆಲಸ ಮಾಡಿದೆ”
“ನಡುವಲ್ಲಿ ಒಂದು ದಿನ ಮಕ್ಕಳನ್ನು ನೋಡಲು ಹೋದೆ. ಮಕ್ಕಳು ಮಲಗಿದ್ದರು. ನನ್ನನ್ನು ನೋಡಿದೊಡನೆ ಎದ್ದು ಓಡಿಹೋಗಿ ಮರವೊಂದನ್ನು ಹತ್ತಿ ಕುಳಿತರು. ‘ಅಮ್ಮ ನಮ್ಮನ್ನು ಮುಟ್ಟಿದರೆ ಮರದಿಂದ ಬಿದ್ದು ಸಾಯುತ್ತೇವೆ’ ಅಂದರು. ‘ಅಪಾಯ ಬಂದಾಗ ಬೆಕ್ಕು ಕೂಡಾ ತನ್ನ ಮರಿಗಳನ್ನು ಬಾಯಲ್ಲಿ ಕಚ್ಚಿಕೊಂಡು ಓಡುತ್ತದೆ. ಆದರೆ ನೀನು ನಮ್ಮನ್ನು ಬಿಟ್ಟು ಓಡಿಹೋದೆ’ ಎಂದು ಚೀರಾಡಿದರು. ಆಮೇಲೆ ನಾನು ಅವರನ್ನು ನೋಡಲು ಹೋಗಲಿಲ್ಲ” “ಆಮೇಲೆ ಎಷ್ಟೋ ವರ್ಷಗಳು ಕಳೆದು ತಾಯಿಯ ಮನೆಗೆ ಹೋದೆ. ತಂದೆ ತೀರಿ ಹೋಗಿದ್ದರು. ಅಕ್ಕನ ಮನೆಗೆ ಹೋದೆ. ಬಾವ ಖಾಯಿಲೆ ಬಂದು ತೀರಿಹೋಗಿದ್ದರು. ಉಳಿದವರೆಲ್ಲರೂ ಸೇರಿ ನಮ್ಮ ಸಂಬಂಧದಲ್ಲೇ ಒಬ್ಬರು ಇದ್ದರು. ಅವರನ್ನು ಮದುವೆ ಮಾಡಿಕೊಳ್ಳಲು ಹೇಳಿದರು. ಬೇಡಾ ಅಂದೆ. ‘ಮದುವೆ ಆಗದಿದ್ದರೆ ಬೇಡ. ಒಬ್ಬಳೇ ಇರಬೇಡ, ಕೆಟ್ಟ ಗಂಡಸರಿರುವ ಪ್ರಪಂಚ. ಅವನ ಜೊತೆ ಬದುಕು ಅಂದರು.’ ಅದಕ್ಕೆ ಈಗ ಅವರ ಜೊತೆ ಬದುಕುತ್ತಿದ್ದೇನೆ”
“ಇವರು ತುಂಬ ಒಳ್ಳೆಯವರು. ಆದರೆ ನಾನು ಎರಡನೇ ಮಗುವಾದ ಕೂಡಲೇ ಇನ್ನು ಮುಂದೆ ಮಕ್ಕಳಾಗುವುದು ಬೇಡ ಎಂದು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದೆ. ಎಷ್ಟೋ ವರ್ಷಗಳ ನಂತರ ಅವರಿಗೆ ಮಕ್ಕಳು ಬೇಕು ಅನ್ನಿಸಬಹುದು. ಆದರೆ ಆಗ ಆಗಲಿಕ್ಕಿಲ್ಲ. ಹಾಗಾಗಿ ನಾನೇ ಕಾಡಿಬೇಡಿ ಅವರಿಗೆ ಇನ್ನೊಂದು ಮದುವೆ ಮಾಡಿಸಿದೆ. ಆ ಹೆಂಡತಿ ಇನ್ನೂ ಚಿಕ್ಕವಳು. ಇಬ್ಬರು ಮಕ್ಕಳಿದ್ದಾರೆ. ಇವರು ಯಾಕೋ ಅವಳಿಗಿಂತ ನನ್ನನ್ನೇ ಹೆಚ್ಚು ಪ್ರೀತ್ತಿದ್ದಾರೆ ಅನ್ನಿಸುತ್ತದೆ. ಹಾಗಾಗಿ ನಾನು ಸ್ವಲ್ಪ ದೂರ ಇರಲು ತೊಡಗುತ್ತಿದ್ದೇನೆ.
ಅವಳಿನ್ನೂ ಚಿಕ್ಕವಳು. ಅವಳೂ ನನ್ನ ಹಾಗೆ ತೋಟದಲ್ಲಿ ರೈಟರಾಗುವುದು ಬೇಡವಲ್ಲವಾ. ನೋಡಿ ನನ್ನ ಕಥೆ ಹೇಗಿದೆ”ಎಂದು ಪದ್ಮಿನಿ ನಕ್ಕರು. ನಾನು ಸುಮ್ಮನೇ ನೋಡುತ್ತಿದ್ದೆ. ಮಳೆ ನಿಂತ ರಸ್ತೆಯಲ್ಲಿ ನೀಲವರ್ಣದ ಪಾತರಗಿತ್ತಿಯೊಂದು ನೀರು ಕುಡಿಯಲು ಬಿದ್ದ ಮಳೆಹನಿಗಳನ್ನು ಚುಂಬಿಸುತ್ತಿತ್ತು. ‘ರುಕ್ಮಿಣಿಯವರೇ ಬರಲಾ… ನಿಮ್ಮ ಕಥೆ ಕಣ್ಣೀರು ಬರುವ ಹಾಗೇನೂ ಇಲ್ಲ. ಧೈರ್ಯ ಮತ್ತು ಪ್ರೀತಿ ತುಂಬುವ ಹಾಗಿದೆ. ನಿಮ್ಮ ಕಥೆಯನ್ನು ಓದಿ ಏಲಕ್ಕಿ ಮಲೆಗಳಲ್ಲಿ ಇನ್ನಷ್ಟು ಮಹಿಳಾ ರೈಟರುಗಳು ಸೇರಿಕೊಳ್ಳಲಿ’ ಎಂದೆ. ‘ಬರಲಿ ಬರಲಿ ಆನೆಗಳ ಕಾಲಿಗೆ ಸಿಕ್ಕಿಹಾಕಿಕೊಂಡು ಜಿಗಣೆಗಳ ಕೈಯಲ್ಲಿ ಸಿಕ್ಕಿಹಾಕಿಕೊಂಡು ಅನುಭವಿಸಲಿ’ ಎಂದು ಅವರು ನಕ್ಕರು.
(ಫೋಟೋಗಳು: ಶಮಂತ್ ಪಾಟೀಲ್)
ಕಥೆ, ಕಾದಂಬರಿ, ಕವಿತೆ, ಅಂಕಣಗಳನ್ನು ಬರೆಯುತ್ತಾರೆ. ಮೈಸೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ. ಅಲೆದಾಟ, ಫೋಟೋಗ್ರಫಿ ಮತ್ತು ಬ್ಲಾಗಿಂಗ್ ಇವರ ಇತರ ಹವ್ಯಾಸಗಳಲ್ಲಿ ಕೆಲವು. ಕೊಡಗಿನವರು.
nice article of real story. After a long time reading your articles….