ಸುದ್ದಿ ತಿಳಿದ ಅವರು, ಕೆಳ ತುಟಿಯಲ್ಲೇ ನಕ್ಕರು. ಈಚೆಗೆ ಅವರ ತುಟಿಯ ಚರ್ಮ ತುಂಬಾ ಒಡೆದು ಆಗಾಗ್ಗೆ ಹೊರಬರುತ್ತಿತ್ತು. ಕಿವಿ ಕೂಡ ತುಂಬಾ ಸೋರುತ್ತಿದ್ದು ದಿನಕ್ಕೆ ಮೂರು ನಾಲ್ಕು ಸಲವಾದರೂ ನಾನಾ ರೀತಿಯ ದ್ರವಗಳನ್ನು ಕಿವಿಯ ತಮಟೆಗೆ ತಲುಪುವಂತೆ ಹಾಕಿಸಿಕೊಳ್ಳುತ್ತಿದ್ದರು. ಕೆಳ ತುಟಿಯ ಚರ್ಮ ಒಡೆದು ಹೋಗಿದ್ದರಿಂದ ಅವರು ನಸುನಗೆ ನಕ್ಕದ್ದು ಯಾರಿಗೂ ಗೊತ್ತಾಗಲಿಲ್ಲ. ಆದರೆ ಕಿವಿ ಸೋರುತ್ತಿದ್ದರಿಂದ ಆಕೆಗೆ ದಾಸರ ಆನೆ ಕಿವಿ ಮಾತ್ರ ತಕ್ಷಣ ನೆನಪಿಗೆ ಬಂದು, ಓ! ಒಳ್ಳೆಯ ದಾಸ್, ಇನ್ನೂ ಚಲನಚಿತ್ರರಂಗದ ದಿನಗಳ ಗುಂಗಿನಲ್ಲೇ ಇದ್ದಾರೆ.
ಕೆ. ಸತ್ಯನಾರಾಯಣ ಬರೆಯುವ “ಜೈಲು ಕತೆಗಳು” ಸರಣಿಯ ಮೂರನೆಯ ಬರಹ ನಿಮ್ಮ ಓದಿಗೆ
ದಕ್ಷಿಣಾದಿ ಸಂಗೀತ ಪ್ರಿಯರಿಗೆಲ್ಲ ಪ್ರಸಿದ್ಧ ವೈಣಿಕ ವಿದ್ವಾನ್ ಕೈಮಂಗಲ ಬಾಲಗೋಪಾಲದಾಸರು ಗೊತ್ತೇ ಇರುತ್ತಾರೆ. ಮಹನೀಯರು ವೀಣೆಯ ನಾದಕ್ಕೆ, ಝೇಂಕಾರಕ್ಕೆ ಮಾತ್ರವೇ ಪ್ರಸಿದ್ಧರಲ್ಲ. ಅವರ ಪ್ರತಿಭೆ, ತಪಸ್ಸು, ರಾಗಾನ್ವೇಷಣೆ, ಇವುಗಳ ಬಗ್ಗೆ ಯಾರೊಬ್ಬರದೂ ಎರಡನೇ ಮಾತೆಂಬುದೇ ಇಲ್ಲ. ಹತ್ತು ಹಲವು ಮಾತುಗಳಿಗೆ, ನೂರಾರು ದಂತಕಥೆಗಳಿಗೆ ಕಾರಣವಾದ ಅವರ ನಿರಂತರ ಸ್ತ್ರೀ ವ್ಯಾಮೋಹ, ಚಪಲಕ್ಕೂ, ಅದನ್ನು ನಡೆಸಿಕೊಂಡು ಬಂದ ರಸಿಕ ಶೈಲಿಗೂ ದಾಸರು ಪ್ರಸಿದ್ಧರು. ತಿಳಿದವರು, ಜೀವನ ಚರಿತ್ರಕಾರರು ಹೇಳುವ ಪ್ರಕಾರ, ದಾಸರದು ಕೇವಲ ಪ್ರದರ್ಶನಪ್ರಿಯವಾದ ಸ್ತ್ರೀ ವ್ಯಾಮೋಹ ಮತ್ತು ಚಪಲವೇ ಹೊರತು, ನಿಜವಾಗಿಯೂ ಸುಖ, ಸಂಪತ್ತು, ಶ್ರೇಯಸ್ಸನ್ನು ಅನುಭವಿಸುತ್ತಿದ್ದವರು.
ಕಾಲದಿಂದ ಕಾಲಕ್ಕೆ, ಊರಿಂದ ಊರಿಗೆ, ಕರಾವಳಿಯಿಂದ ಬಯಲುಸೀಮೆಗೆ, ಒಳನಾಡಿನಿಂದ ಸಮುದ್ರತೀರಕ್ಕೆಂದು ಹರಡಿ ಹೋಗಿದ್ದ, ಬದಲಾಗುತ್ತಿದ್ದ, ಬದಲಾಗುತ್ತಲೇ ಇರುವ ಅವರ ಪ್ರೇಯಸಿಯರು. ಶ್ರೀಮಠದಲ್ಲಿ ಬೃಂದಾವನದ ಮುಂದೆ ವೀಣೆ ನುಡಿಸಲಿ, ಸಭಾದಲ್ಲಿ ಕಛೇರಿ ನೀಡಲಿ, ವಿಶ್ವವಿದ್ಯಾಲಯದಲ್ಲಿ ರಾಗಮಾಲಿಕಾ ಪ್ರಾತ್ಯಕ್ಷಿಕೆ ನೀಡಲಿ, ಅಲ್ಲೆಲ್ಲ ಬಂದ ಸಂಭಾವನೆ, ಉಡುಗೊರೆ, ಕಂಠೀಹಾರ, ತೋಳುಬಂದಿ, ಕಡಗ ಎಲ್ಲವನ್ನೂ ಸಕಾಮವಾಗಿ ಪ್ರೇಯಸಿಯರ ಮಡಲಿಗೆ ಹಾಕಿಬಿಡುತ್ತಿದ್ದರು. ಇಷ್ಟೊಂದು ದೊಡ್ಡ ವಿದ್ವಾಂಸರು ಇಷ್ಟೊಂದು ಬಯಸುತ್ತಾರೆ, ಇಷ್ಟೊಂದು ದೊಡ್ಡ ಬೆಲೆಬಾಳುವ ಉಡುಗೊರೆಯನ್ನು ಇನ್ನಿಲ್ಲದ ಪ್ರೀತಿಯಿಂದ ನೀಡುತ್ತಾರೆ ಎಂಬುದೇ ಪ್ರೇಯಸಿಯರಿಗೆ ದೊಡ್ಡದಾಗಿ ಕಂಡು, ವ್ಯಾಮೋಹದ, ಚಪಲದ ಮುಂದಿನ ಕಾರ್ಯಹಂತ ತಲುಪಲಾರದ ಅವರ ಬಯಕೆಯನ್ನು ಮರತೇಬಿಡುತ್ತಿದ್ದರು. ಈ ಕಾರಣಕ್ಕೂ ದಾಸರ ಬಗ್ಗೆ ಗೌರವ ಹೆಚ್ಚಾಗುತ್ತಿತ್ತು. ಗೌರವಕ್ಕೋ, ಸಲಿಗೆಗೋ, ವಿದ್ವಾಂಸರ ಹೆಸರಿನಲ್ಲಿರುವ “ಬಾಲ”ದ ಭಾಗವನ್ನು ಖಾಯಂ ಆಗಿ ತೆಗೆದುಬಿಡುವುದೇ ಉಚಿತ ಎಂಬ ಅಭಿಪ್ರಾಯಕ್ಕೂ ಸಾರ್ವಜನಿಕ ಮನ್ನಣೆ ಇತ್ತು.
ಎಂತಹ ವಿದ್ವಾಂಸರಾದರೂ ಜೀವನದುದ್ದಕ್ಕೂ ಪ್ರತಿ ಬೆಳಿಗ್ಗೆಯೂ ಗುಲಾಬಿ ಹೂವು ಅರಳುವುದಿಲ್ಲವಲ್ಲ. ಕಛೇರಿಗಳು, ಸನ್ಮಾನಗಳು, ಬಿರುದು ಬಾವಲಿಗಳು ನಿರಂತರವಾಗಿ ಸಿಗಲೇಬೇಕೆಂದು ನಿಯಮವೇನೂ ಇಲ್ಲವಲ್ಲ. ನಮ್ಮ ದಾಸರಿಗೂ ಹೀಗೇ ಆಗುತ್ತಿತ್ತು. ಆವಾಗೆಲ್ಲ ದಾಸರು ವ್ಯಾಮೋಹ, ಚಪಲಗಳನ್ನು ಪೂರೈಸಿಕೊಳ್ಳಲು ಒಂದು ದಾರಿಯನ್ನು ಕಂಡುಹಿಡಿದುಕೊಂಡರು. ಹೌದು! ದಾಸರು ಒಂದು ಪರಿಹಾರ ಕಂಡುಕೊಂಡು, ಒಂದು ಪದ್ಧತಿಯನ್ನು ಕ್ರಮೇಣವಾಗಿ ರೂಢಿಗೆ ತಂದಿದ್ದರು. ಸ್ವಂತ ಊರಲ್ಲಿದ್ದ ಇಬ್ಬರು (ಮೊದಲ) ಧರ್ಮಪತ್ನಿಯರ ಹತ್ತಿರ ಅಥವಾ ವಯಸ್ಸಾದ ಮಾಜಿ ಪ್ರೇಯಸಿಯರ ಹತ್ತಿರ ಇದ್ದ ಒಡವೆ ಪದಾರ್ಥಗಳನ್ನು ಸೂಕ್ಷ್ಮ-ಸುಳಿವು ಗೊತ್ತಾಗದಂತೆ ಲಪಟಾಯಿಸಿ, ಮಂತ್ರಾಲಯಕ್ಕೋ, ಶ್ರೀಶೈಲಕ್ಕೋ, ಶ್ರೀರಂಗಕ್ಕೋ, ಪುಟ್ಟಪರ್ತಿಗೋ ದೇವರ ಸೇವೆ ಮಾಡೋಕೆ ಹೋಗ್ತೀನಿ, ಸ್ವಾಮಿ ದರ್ಶನ ಮಾಡೋಕೆ ಹೋಗ್ತೀನಿ ಅಂತ ಹೊರಟು, ತೀರಾ ಈಚೆಗೆ ಮನಸ್ಸಿಗೆ ಬಂದಿದ್ದ ಪ್ರೇಯಸಿಗೆ ಆ ಒಡವೆ ವಸ್ತುಗಳನ್ನೆಲ್ಲ ಸಮರ್ಪಿಸಿ, ಆಕೆ ನೀಡುವ, ನೀಡಿದಳೆಂದು ಇವರು ತಿಳಿದ ಸುಖದ ಬಟ್ಟಲು ತುಂಬಿದಾಗ ರಾಮಾ, ಕೃಷ್ಣಾ, ಭಗವಂತಾ ಎಂದು ಕಾಲೆಳೆದುಕೊಂಡು ಕೈಮಂಗಲಕ್ಕೆ ವಾಪಸ್ ಆಗುತ್ತಿದ್ದರು. ಕಲಾವಿದರೆಂದರೆ, ಈ ರೀತಿಯ ಅಡ್ಡಾದಿಡ್ಡಿತನ, ಜೀವನಶೈಲಿಯ ಗೊಂದಲ, ಇಂತದ್ದೆಲ್ಲ ಮಾಮೂಲಾದ್ದರಿಂದ ಸಾರ್ವಜನಿಕರು ಪ್ರಾಸಂಗಿಕವಾಗಿ ಮಾತನಾಡಿ ಸುಮ್ಮನಾಗಿಬಿಡುತ್ತಿದ್ದರು. ಒಮ್ಮೊಮ್ಮೆ ತಮಾಷೆ ಕೂಡ ಮಾಡುತ್ತಿದ್ದರು. ಆದರೆ ಕಲಾವಿದರ ಬಗ್ಗೆ ಗೌರವದ ಭಾವನೆಯನ್ನು ಮಾತ್ರ ಕಳೆದುಕೊಳ್ಳುತ್ತಿರಲಿಲ್ಲ. ಎಲ್ಲವೂ ಹೀಗೇ ತ್ರಿಕಾಲಬಾಧಿತವಾಗಿ ನಡೆದುಕೊಂಡು ಹೋಗುತ್ತಿತ್ತು.
ನಾವು ಚೆನ್ನೈನಲ್ಲಿದ್ದಾಗ ದಾಸರು ಸರಣಿ ಸಂಗೀತೋತ್ಸವಕ್ಕೆ ಬಂದರು. ತಂಜಾವೂರು, ಲಾಲ್‌ಗುಡಿ, ಶ್ರೀರಂಗಂ, ಮಧುರೆ, ಹೀಗೆ ಎಂಟು ಹತ್ತು ಕಡೆ ಕಛೇರಿ ನೀಡಿದರು. ರಾಜ್ಯಪಾಲರೇ ದೈವ ಸಂಗೀತ ಕಲಾನಿಧಿ ಪ್ರಶಸ್ತಿ ನೀಡಿದರು. ಇನ್ನು ಮೂರು ದಿನದಲ್ಲಿ ಕೈಮಂಗಲಕ್ಕೆ ದಾಸರು ಹೊರಡುತ್ತಾರೆ ಎನ್ನುವ ಹೊತ್ತಿಗೆ ಕೈಮಗಂಗಲದಿಂದ ಅವರ ಧರ್ಮಪತ್ನಿ ಸುಧಾಸುಗುಣಬಾಯಿಯವರು ಓಡೋಡಿ ಬಂದು, ಕೋಡಂಬಾಕಂ ಪೋಲೀಸ್ ಸ್ಟೇಶನ್‌ನಲ್ಲಿ ಒಂದು ದೂರು ನೀಡಲು ಹೋದರು. ದೂರು ನೀಡಲು ಹೋದಾಗ ಇವರು ಯಾರೆಂದು ಪೋಲೀಸರಿಗೆ ಗೊತ್ತಾಗದೆ ಹೋದರೂ ದೂರಿನ ವಿವರ ತಿಳಿದ ಮೇಲೆ ಹೌಹಾರಿದರು. ದೂರನ್ನು ನೋಂದಣಿ ಮಾಡಿಕೊಳ್ಳುವುದಿಲ್ಲವೆಂದು ಹೇಳಿದರು. ಆದರೆ ಸುಗುಣಾಬಾಯಿ ಬಿಡಲಿಲ್ಲ. ಸ್ಟೇಶನ್ ಮುಂದೆ ಧರಣಿ ಕೂರುವೆ ಎಂದು ಬೆದರಿಸಿದರು. ಒಂದು ಹಂತದ ತನಕ ಇದೆಲ್ಲ ಮಾಧ್ಯಮದ ಗಮನಕ್ಕೆ ಬರಲಿಲ್ಲ. ಆದರೆ ಪ್ರಸಿದ್ಧರ ಸಂಗತಿಗಳನ್ನು ಎಷ್ಟು ದಿನಾ ಅಂತ ಮುಚ್ಚಿಡಲು ಸಾಧ್ಯ? ಕ್ರಮೇಣ ಎಲ್ಲವೂ ರಂಗುರಂಗಾಗಿಯೇ ಬಹಿರಂಗವಾಯಿತು.
ಇಷ್ಟೊಂದು ದೊಡ್ಡ ವಿದ್ವಾಂಸರು ಇಷ್ಟೊಂದು ಬಯಸುತ್ತಾರೆ, ಇಷ್ಟೊಂದು ದೊಡ್ಡ ಬೆಲೆಬಾಳುವ ಉಡುಗೊರೆಯನ್ನು ಇನ್ನಿಲ್ಲದ ಪ್ರೀತಿಯಿಂದ ನೀಡುತ್ತಾರೆ ಎಂಬುದೇ ಪ್ರೇಯಸಿಯರಿಗೆ ದೊಡ್ಡದಾಗಿ ಕಂಡು, ವ್ಯಾಮೋಹದ, ಚಪಲದ ಮುಂದಿನ ಕಾರ್ಯಹಂತ ತಲುಪಲಾರದ ಅವರ ಬಯಕೆಯನ್ನು ಮರತೇಬಿಡುತ್ತಿದ್ದರು. ಈ ಕಾರಣಕ್ಕೂ ದಾಸರ ಬಗ್ಗೆ ಗೌರವ ಹೆಚ್ಚಾಗುತ್ತಿತ್ತು.
ದಾಸರು ತಮ್ಮ ಮೊದಲ ಧರ್ಮಪತ್ನಿಯ ಲಗ್ನದ ಸಮಯದ ಒಡವೆ ವಸ್ತುಗಳನ್ನು ಲಪಟಾಯಿಸಿಕೊಂಡು ಬಂದು ಚೆನ್ನೈನಲ್ಲಿದ್ದ ಈಚಿನ ಪ್ರೇಯಸಿ ಲಲಿತಾಂಬರ ಮಡಿಲಿಗೆ ಹಾಕಿ, ಸುಖ ಅನುಭವಿಸುತ್ತಾ, ಅನುಭವಿಸುತ್ತಿದ್ದೇನೆಂದು ಭ್ರಮಿಸುತ್ತಾ, ಆಕೆಯ ಮಡಿಲಿನ ತಂಪಿನಲ್ಲಿ ನಿರಾತಂಕವಾಗಿ ಹಾಯಾಗಿದ್ದರು. ಆ ಕಾರಣಕ್ಕೂ ಧರ್ಮಪತ್ನಿ ಇಲ್ಲಿಗೇ ಓಡಿ ಬಂದಿದ್ದರು. ಅವರಿಗೆ ಎರಡನೇ ಧರ್ಮಪತ್ನಿಯ ಮತ್ತು ದಾಸರ ಉಳಿದ ಪ್ರೇಯಸಿಯರ ಬೆಂಬಲ, ಕುಮ್ಮಕ್ಕು ಕೂಡ ಇತ್ತು.
ಇನ್ನೊಂದು ಸೂಕ್ಷ್ಮ ಸಂಗತಿ ಕೂಡ ಇಲ್ಲಿ ಸೇರಿಕೊಂಡಿತು. ಆ ದಿನಮಾನದಲ್ಲಿ ಚೆನ್ನೈನಲ್ಲಿ ಪ್ರಧಾನ ಅಮಾತ್ಯರಾಗಿದ್ದವರು ಕೂಡ ಒಬ್ಬ ಮಾಜಿ ಕಲಾವಿದರು ಮತ್ತು ಹೆಂಗಸು. ಅವರಿಗೆ ದಾಸರ ಪರಿಚಯ ಚೆನ್ನಾಗಿತ್ತು. ಪ್ರಧಾನ ಅಮಾತ್ಯರು ರಾಜಕೀಯ ಪ್ರವೇಶಿಸುವ ಮುನ್ನ, ಎರಡು-ಮೂರು ದಶಕಗಳ ಕಾಲ ಸಿನೆಮಾದಲ್ಲಿ ಅಭಿನಯಿಸುತ್ತಿದ್ದಾಗ ದಾಸರು ಕೂಡ ಚಿತ್ರ ಸಂಗೀತದ ಜಗತ್ತಿನ ಭಾಗವಾಗಿದ್ದರು. ದಾಸರ ವೀಣೆ, ರತ್ನಸ್ವಾಮಿಯವರ ಪಿಟೀಲು, ರವಿಶಂಕರರ ಚಿತ್ರ ಸಾಹಿತ್ಯ, ಎಲ್ಲವೂ ಸೇರಿಕೊಂಡು ಒಂದು ಹಿನ್ನೆಲೆ ಸಂಗೀತದ ತಂಡವಾಗಿ ಚಿತ್ರರಂಗವನ್ನು ನಿರಂಕುಶವಾಗಿ ಆಳುತ್ತಿದ್ದ ಕಾಲವದು. ಇದು ಪೋಲೀಸರಾದಿಯಾಗಿ ಎಲ್ಲರಿಗೂ ಗೊತ್ತಿತ್ತು. ಹಾಗಾಗಿ, ಅವರು ಈಗ ದೂರು ದಾಖಲಿಸಿಕೊಳ್ಳಲು ಹಿಂಜರಿದಿದ್ದರು. ದೂರು ದಾಖಲಿಸಿಕೊಂಡರೆ ಪ್ರಧಾನ ಅಮಾತ್ಯರಿಗೆ ಇರಸು-ಮುರುಸಾಗಬಹುದು, ಹೆಚ್ಚು ಕಡಿಮಯಾದರೆ ಮುನಿಯಬಹುದು ಎಂಬ ಅನುಮಾನ ಸಕಾರಣವಾಗಿಯೇ ಇತ್ತು. ಇಲಾಖಾ ಕಮೀಷನರ್ ಮೂಲಕ ಅಮಾತ್ಯರ ಕಿವಿಯ ಮೇಲೆ ಒಂದು ಮಾತು ಹಾಕಿದರು.
ಸುದ್ದಿ ತಿಳಿದ ಅವರು, ಕೆಳ ತುಟಿಯಲ್ಲೇ ನಕ್ಕರು. ಈಚೆಗೆ ಅವರ ತುಟಿಯ ಚರ್ಮ ತುಂಬಾ ಒಡೆದು ಆಗಾಗ್ಗೆ ಹೊರಬರುತ್ತಿತ್ತು. ಕಿವಿ ಕೂಡ ತುಂಬಾ ಸೋರುತ್ತಿದ್ದು ದಿನಕ್ಕೆ ಮೂರು ನಾಲ್ಕು ಸಲವಾದರೂ ನಾನಾ ರೀತಿಯ ದ್ರವಗಳನ್ನು ಕಿವಿಯ ತಮಟೆಗೆ ತಲುಪುವಂತೆ ಹಾಕಿಸಿಕೊಳ್ಳುತ್ತಿದ್ದರು. ಕೆಳ ತುಟಿಯ ಚರ್ಮ ಒಡೆದು ಹೋಗಿದ್ದರಿಂದ ಅವರು ನಸುನಗೆ ನಕ್ಕದ್ದು ಯಾರಿಗೂ ಗೊತ್ತಾಗಲಿಲ್ಲ. ಆದರೆ ಕಿವಿ ಸೋರುತ್ತಿದ್ದರಿಂದ ಆಕೆಗೆ ದಾಸರ ಆನೆ ಕಿವಿ ಮಾತ್ರ ತಕ್ಷಣ ನೆನಪಿಗೆ ಬಂದು, ಓ! ಒಳ್ಳೆಯ ದಾಸ್, ಇನ್ನೂ ಚಲನಚಿತ್ರರಂಗದ ದಿನಗಳ ಗುಂಗಿನಲ್ಲೇ ಇದ್ದಾರೆ. ಎಷ್ಟು ಜನ ನಟಿಯರೊಡನೆ, ನಟಿಯ ಸಖಿಯರೊಡನೆ ಸಂಬಂಧ ಇಟ್ಟುಕೊಂಡಿದ್ದರು, ಬಯಸಿದ್ದರು. ಪ್ರತಿವರ್ಷವೂ ಪ್ರತಿ ಚಿತ್ರದ ಶೂಟಿಂಗ್ ಸಮಯದಲ್ಲೂ ಹೊಸ ಹೊಸ ಹೆಂಗಸರಿಗಾಗಿ ಹಂಬಲಿಸುತ್ತಿದ್ದರು. ಎಲ್ಲವೂ ಮತ್ತೆ ನೆನಪಿಗೆ ಬಂದು ಹಳೆಯ ಒಡನಾಡಿಗೆ ಹೇಗಾದರೂ ನೆರವಾಗಬೇಕೆಂಬ ಬಯಕೆ ಮೂಡಿತು. ಏನೇ ಆಗಲಿ, ಕೇಸು ಬಿಗಡಾಯಿಸಲು ಬಿಡಬಾರದು, ಬಿಡಬೇಡಿ, ಮೊದಲನೆ ಧರ್ಮಪತ್ನಿ ಕೂಡ ನನಗೆ ಗೊತ್ತಿರುವವರೇ. ಒಂದು ಕೆಲಸ ಮಾಡಿ, ಯಾವ ಮಾದರಿಯ ಒಡವೆಗಳನ್ನು ವೀಣಾ ವಿದ್ವಾನ್ ಅಪಹರಿಸಿಕೊಂಡು ಬಂದಿದ್ದಾರೋ ಅದೇ ಮಾದರಿಯ ಒಡವೆ ವಸ್ತುಗಳನ್ನು ತಂಗಮಾಳಿಗೆಯಲ್ಲಿ ಮಾಡಿಸಿ ಅವರಿಗೆ ಕೊಟ್ಟು ವಿಮಾನದಲ್ಲಿ ಮಂಗಳೂರಿಗೆ ವಾಪಸ್ ಕಳಿಸಿಬಿಡಿ ಎಂದು ಗುಟ್ಟಾಗಿ, ದೂರದೃಷ್ಟಿಯಿಂದ ಸಲಹೆ ಮಾಡಿದರು. ಧರ್ಮಪತ್ನಿ ಒಪ್ಪುವರೇ? ಒಪ್ಪಲಿಲ್ಲ. ಮಾಧ್ಯಮ, ಸಾಮಾಜಿಕ ತಾಣಗಳಲ್ಲಿ ಸುದ್ದಿ ಹರಡುತ್ತಾ ನಾನಾ ವೇಷ ತಾಳುತ್ತಾ ವಿದ್ವಾನ್‌ರನ್ನು ಜೈಲಿಗೆ ಹಾಕಬೇಕು ಎಂಬ ಕೂಗು ಕೂಡ ಶುರುವಾಯಿತು. ಸ್ತ್ರೀವಾದಿ ಗುಂಪುಗಳು ಕೂಡ ಒಕ್ಕೊರಲಿನಿಂದ ಈ ಕೂಗಿಗೆ ಬಲ ಕೊಟ್ಟರು.
ವಿರೋಧಪಕ್ಷದವರು ಸುಮ್ಮನೆ ಕೂಡುವರೇ? ತಮ್ಮ ಅಧೀನದಲ್ಲಿದ್ದ ಪತ್ರಿಕೆ, ದೃಶ್ಯ ಮಾಧ್ಯಮಗಳಲ್ಲಿ ಚರ್ಚೆ, ವಾದ-ವಿವಾದಗಳನ್ನು ಬೆಳೆಸಿದರು. ವಿರೋಧಪಕ್ಷದ ನಾಯಕರು ಚಿತ್ರ ಸಾಹಿತಿಯಾಗಿ, ಸಂಭಾಷಣಾಕಾರರಾದ್ದವರು. ಆದರೆ ಅಮಾತ್ಯರ ರೀತಿಯಲ್ಲಾಗಲೀ, ವಿದ್ವಾನ್‌ರಂತಾಗಲೀ ಎಲ್ಲ ವರ್ಗದ ಜನಗಳ ಜೊತೆ ಸಮಾನವಾಗಿ ಪ್ರಸಿದ್ಧರಾಗಿರಲಿಲ್ಲ. ಆ ಅಸೂಯೆಯು ಈಗ ಸೇರಿಕೊಂಡು ವಿದ್ವಾನ್‌ರ ಮೇಲೆ ಬಂದಿರುವ ದೂರನ್ನು ದಾಖಲಿಸಿಕೊಳ್ಳಬೇಕು, ತನಿಖೆ ನಡೆಸಬೇಕು, ಕಲಾವಿದರನ್ನು ಬಂಧಿಸಬೇಕು ಎಂದು ವರಾತ ಪ್ರಾರಂಭಿಸಿದರು. ಪ್ರಧಾನ ಅಮಾತ್ಯರು ರಾಜ್ಯ ಸರ್ಕಾರದ ಆಡಳಿತದ ಕಡೆ, ಜ್ವಲಂತ ಸಮಸ್ಯೆಗಳ ಕಡೆ ಗಮನ ಕೊಡಬೇಕೇ ಹೊರತು ಯಃಕಶ್ಚಿತ್ ಸಂಗೀತಗಾರನೊಬ್ಬನ ಹದಗೆಟ್ಟ ಸಂಸಾರದ ವಿವರಗಳಲ್ಲಿ, ಪ್ರಣಯ ಲೀಲೆಗಳಲ್ಲಿ, ಗೊಂದಲಗಳಲ್ಲಿ ತೊಡಗಿಸಿಕೊಳ್ಳಬಾರದೆಂದು ಬುದ್ಧಿಮಾತು ಹೇಳಿದರು, ಎಚ್ಚರಿಕೆ ಕೊಟ್ಟರು. ಇದನ್ನೆಲ್ಲ ಗಮನಿಸಿದ ಸಾರ್ವಜನಿಕರಿಗೆ ಕಲಾವಿದರ ಮೇಲೆ ದೂರು ದಾಖಲಾಗುವುದು, ತನಿಖೆ ನಡೆಯುವುದು ಗ್ಯಾರಂಟಿ ಎನಿಸುತ್ತಿತ್ತು. ಒಡವೆ ಲಪಟಾಯಿಸಿರುವುದು, ಧರ್ಮಪತ್ನಿಯೇ ದೂರು ಕೊಡಲು ಬಂದಿರುವುದು, ಕಲಾವಿದರು ಪ್ರೇಯಸಿಯ ಮನೆಯಲ್ಲಿ ಬಿಡಾರ ಬಿಟ್ಟಿರುವುದು, ರಾಜಕೀಯ ನಾಯಕರ ಜಟಾಪಟಿ, ಎಲ್ಲವೂ ಸೇರಿಕೊಂಡು ಜನರಿಗೆ ದಿನೇ ದಿನೇ ರೋಚಕತೆ, ತಹತಹ ಹೆಚ್ಚುತ್ತಿತ್ತು, ಸಂತೋಷವೂ ಆಗುತ್ತಿತ್ತು.
ಕೊನೆಗೂ ಹೇಳಬೇಕಾದ ಮುಖ್ಯ ಸಂಗತಿಯೆಂದರೆ, ಒಡವೆ ವಸ್ತುಗಳ ಕೇಸು ದಾಖಲಾಗಲಿಲ್ಲ. ಕಲಾವಿದರಿಗೆ ಜೈಲಾಗಲಿಲ್ಲ. ಜೈಲು ಆಗೇ ಆಗುತ್ತೆ, ಆಗಿಯೇ ಹೋಯಿತು ಎಂದು ನಾವೆಲ್ಲರೂ ಭಾವಿಸಿಕೊಂಡು ಉದ್ವೇಗದಿಂದ ಕಾಯುತ್ತಿದ್ದಾಗ, ವಿರೋಧಪಕ್ಷದ ನಾಯಕರ ಮನೆಯ ಕಡೆಯಿಂದಲೇ ಉನ್ನತಮಟ್ಟದ ಸೂಕ್ಷ್ಮ ಕ್ಯಾತೆಯೊಂದು ಪ್ರಾರಂಭವಾಯಿತು. ಈ ನಾಯಕರಿಗೇ ಅಧಿಕೃತವಾಗಿ ಮೂವರು ಧರ್ಮಪತ್ನಿಯರಿದ್ದರು. ಜಿಲ್ಲಾವಾರು ಪ್ರೇಯಸಿಯರೂ ಇದ್ದರು. ಇವರಲ್ಲಿ ಕೆಲವರು ಕಾಲಧರ್ಮಕ್ಕನುಗುಣವಾಗಿ “ಮಾಜಿ”ಗಳೂ ಆಗಿದ್ದರು. ಇಂಥವರು ಮತ್ತು ಧರ್ಮಪತ್ನಿಯರು ಕಲಾವಿದರ ಪರವಾಗಿ ನಿಂತರು. ನಾಲ್ಕು ಜನ ಮೆಚ್ಚುವಂತಹ ಸೂಕ್ಷ್ಮ ನಿಲುವು ತೆಗೆದುಕೊಂಡರು. ಅವರಿಗೂ ಕೂಡ ಸ್ತ್ರೀವಾದಿಗಳ ಭಯವಿತ್ತು. ಸ್ವಲ್ಪ ಹೆಚ್ಚು ಕಡಿಮೆ ಮಾತನಾಡಿದರೆ, ತಮ್ಮನ್ನೇ ಎಲ್ಲರೂ ಯಾಮಾರಿಸಬಹುದೆಂಬ ಆತಂಕ ಕೂಡ.
ಇದೆಲ್ಲವೂ ಒಂದು ಕುಟುಂಬದ, ಕುಟುಂಬದೊಳಗೆ ಇರುವ ಖಾಸಗಿ ಸಂಬಂಧಗಳು, ಒಳಾಂಗಣದ ವಿಚಾರ. ಇದರಲ್ಲಿ ರಾಜಕೀಯ ಧುರೀಣರು ಮಧ್ಯೆ ಪ್ರವೇಶಿಸಬಾರದು. ಕಲಾವಿದರು, ಪ್ರೇಯಸಿಯರು, ಧರ್ಮಪತ್ನಿಯರು ಎಂದು ವಾದಿಸಲು ಪ್ರಾರಂಭಿಸಿದರೆ, ಚರ್ಚೆ ಮತ್ತೆ ಯಾವ ಯಾವುದೋ ದಿಕ್ಕಿಗೆ ಹೊರಳಿತು. ಕೊನೆಗೂ ಒಡವೆ ವಸ್ತುಗಳ ಲಪಟಾಯಿಸುವಿಕೆಯ ಕೇಸು ದಡ ಹತ್ತಲೇ ಇಲ್ಲ.
ಕೆ. ಸತ್ಯನಾರಾಯಣ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಮಾಸ್ತಿ ಕಥಾ ಪುರಸ್ಕಾರ(ನಕ್ಸಲ್ ವರಸೆ-2010) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ, ಬಿ.ಎಂ.ಶ್ರೀ.ಪ್ರತಿಷ್ಠಾನದ ಎಂ.ವಿ.ಸೀ.ಪ್ರಶಸ್ತಿ, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್(2013), ರಾ.ಗೌ.ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ (ಸಾವಿನ ದಶಾವತಾರ ಕಾದಂಬರಿ), ವಿ.ಎಂ.ಇನಾಮದಾರ್ ಪ್ರಶಸ್ತಿ (ಚಿನ್ನಮ್ಮನ ಲಗ್ನ ಕೃತಿ) ಸೂವೆಂ ಅರಗ ವಿಮರ್ಶಾ ಪ್ರಶಸ್ತಿ (ಅವರವರ ಭವಕ್ಕೆ ಓದುಗರ ಭಕುತಿಗೆ ವಿಮರ್ಶಾ ಕೃತಿ) ಲಭಿಸಿದೆ.