ಪಾಟೀಲರೇ ಮತ್ತೆ ಮತ್ತೆ ಸಂದರ್ಶನಗಳಲ್ಲಿ ಹೇಳುತ್ತಿದ್ದ ಹಾಗೆ, ಖೈದಿಗಳಿಗೆ ನಟನೆಯಲ್ಲಿ ಇನ್ನಿಲ್ಲದಷ್ಟು ಪ್ರಬುದ್ಧತೆ, ತೀವ್ರತೆ, ತನ್ಮಯತೆ ಬಂದಿತ್ತು. ನಾಟಕದ ಮಾತುಗಳಿಗೆ ಅವರು ನೂರಕ್ಕೆ ನೂರರಷ್ಟು ಜೀವ ತುಂಬುತ್ತಿದ್ದರು. ನಾಟಕ ಪ್ರದರ್ಶನ ಮುಗಿದ ಮೇಲೂ, ಶ್ರೀರಾಮ, ಶ್ರೀಕೃಷ್ಣ, ಧರ್ಮರಾಯ, ವಿಭೀಷಣ, ಬುದ್ಧ, ಇಂಥವರ ವೇಷಭೂಷಣಗಳಲ್ಲೇ ಇರಲು ಆಸೆ ಪಡುತ್ತಿದ್ದರು. ಕೇಂದ್ರ ಕಾರಾಗೃಹದ ಗ್ರಂಥಾಲಯ ಪುರಾತನವಾದದ್ದು. ಅಲ್ಲಿದ್ದ ಅಭಿಜಾತ ಕೃತಿಗಳನ್ನೆಲ್ಲ ಖೈದಿಗಳು ಈ ವೇಷಭೂಷಣದಲ್ಲೇ ಕುಳಿತು ಓದುತ್ತಿದ್ದರು. ಇನ್ನೂ ಮುಖ್ಯವಾಗಿ ಕಲಾಕ್ಷೇತ್ರದ ನಟರುಗಳಿಗಿಲ್ಲದ ಬೇರೆ ಅಭ್ಯಾಸಗಳನ್ನು ಕೂಡ ರೂಢಿಸಿಕೊಂಡರು.
ಕೆ. ಸತ್ಯನಾರಾಯಣ ಬರೆಯುವ “ಜೈಲು ಕತೆಗಳು” ಸರಣಿಯ ಏಳನೆಯ ಬರಹ ನಿಮ್ಮ ಓದಿಗೆ
ಎಂ. ಎಂ. (ಮಾಯಕೊಂಡ ಮಹಾಂತೇಶ) ಪಾಟೀಲರು ರಂಗಭೂಮಿಯ ನಿರ್ದೇಶಕರಾಗಿ, ಚಿಂತಕರಾಗಿ ಪ್ರಸಿದ್ಧರಾದುದಕ್ಕೆ ಹಲವು ಮಜಲುಗಳಿವೆ. ಅವರ ತಾತನವರಾದ ಸಂಗನ ಬಸಪ್ಪ, ತುಂಗಾ ತೀರದ ಸುತ್ತಮುತ್ತ ಇದ್ದ ನಾಟಕ ಕಂಪನಿಗಳಿಗೆಲ್ಲ ಪೋಷಕರು, ಪ್ರೇರಕರು ಆಗಿದ್ದರು. ಪಾಟೀಲರು ಒಂದು ಕಾಲಕ್ಕೆ ಮನರಂಜನಾ ಪ್ರಧಾನವಾದ ಕೌಟುಂಬಿಕ, ಸಾಮಾಜಿಕ, ಭಕ್ತಿ ಪ್ರಧಾನ ನಾಟಕಗಳನ್ನು ಆಡಿಸುತ್ತಿದ್ದರು. ಸಂಭಾಷಣೆ ಬರೆಯಲು ಅನುಕೂಲವಾಗುವುದೆಂದು ಯಾರೋ ಕಿವಿ ಊದಿದ್ದರಿಂದ, ಮುಕ್ತ ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಪಡೆಯಲು ಹೋದರೆ, ಅಲ್ಲಿ ಅವರಿಗೆ ಮೊದಲನೆ ರ‍್ಯಾಂಕ್ ದೊರಕಿದ್ದು ಮಾತ್ರವಲ್ಲ, ನಿರ್ದೇಶಕರು, ಪ್ರಾಚಾರ್ಯರೆಲ್ಲ ಇವರ ಅಭಿಮಾನಿಗಳಾದರು. ನಿಜದ ಮಾತೆಂದರೆ, ಆ ಗೊಡ್ಡು ಪ್ರಾಧ್ಯಾಪಕರುಗಳಿಗೆ ಹೋಲಿಸಿದರೆ, ಪಾಟೀಲರಿಗೇ ಚುರುಕು ಗ್ರಹಿಕೆ, ಅಪಾರವಾದ ಜೀವನಾನುಭವ ಇತ್ತು. ಮುಕ್ತ ವಿಶ್ವವಿದ್ಯಾಲಯದವರು ವರ್ಷಕ್ಕೆ ಮೂರು ನಾಲ್ಕು ಸಲ ನಡೆಸುತ್ತಿದ್ದ ತರಗತಿ ಸಪ್ತಾಹಗಳಲ್ಲಿ, ಬೆಂಗಳೂರಿನ ಪ್ರೊ|| ಶಂಕರಾನಂದರು ಪಾಟೀಲರ ಪ್ರತಿಭೆಗೆ ಇನ್ನೂ ನಾನಾ ರೀತಿಯ ಸಾಧ್ಯತೆಗಳಿವೆಯೆಂದು ತಿಳಿದು, ಹವ್ಯಾಸಿ ರಂಗಭೂಮಿ ಕಡೆಗೆ ಗಮನ ಸೆಳೆದು, ದೆಲ್ಲಿಯ ರಾಷ್ಟ್ರೀಯ ನಾಟಕ ಶಾಲೆಗೂ ಕಳಿಸಿದರು. ಅಲ್ಲಿಂದು ಬಂದರೂ ನೋಡಿ ಪಾಟೀಲರು, ಅವರ ಜೀವನದಲ್ಲೂ, ಕನ್ನಡ ರಂಗಭೂಮಿಯಲ್ಲೂ ಒಂದು ಹೊಸ ಅಧ್ಯಾಯವೇ ಪ್ರಾರಂಭವಾಯಿತು. ಪಾಟೀಲರಿಗೆ ರಂಗ ವಲಯದ ಪ್ರಸಿದ್ಧಿಯೂ, ಗಣ್ಯತೆಯೂ ಕೂಡಿಬಂತು. ಶೇಕ್ಸ್‌ಒಇಯರ್, ಭಾಸ, ಕಾಳಿದಾಸ, ಬೆಕೆಟ್, ಚಕೋವ್, ಇಂತಹವರ ನಾಟಕಗಳನ್ನು ಮಾತ್ರ ನಿರ್ದೇಶಿಸುತ್ತಿದ್ದರು. ಅವರ ನಿರ್ದೇಶನದಷ್ಟೇ ಆಯ್ಕೆ ಮಾಡಿಕೊಳ್ಳುವ ಪಠ್ಯಗಳ ಅನುವಾದವೂ ಕೂಡ ಉತ್ತಮ ಮಟ್ಟದ್ದಾಗಿದ್ದವು. ಹೊಸ ರೀತಿಯ ಅನುವಾದಗಳನ್ನು ಮಾಡಿಸಿದರು. ಹಳೆಯ ಉತ್ತಮ ಅನುವಾದಗಳನ್ನು ಶೋಧಿಸಿದರು. ಹೀಗೇ ಮುಂದುವರೆದರೆ ಅವರಿಗೂ ಅಕಾಡೆಮಿ, ಪರಿಷತ್ ಪ್ರಶಸ್ತಿಗಳು, ಪದ್ಮಶ್ರೀ ಬರುವುದರ ಜೊತೆಗೇ ಸದ್ಯದಲ್ಲೇ ಅವರು ದೆಹಲಿಯ ನಾಟಕ ಶಾಲೆಯ ನಿರ್ದೇಶಕರೂ ಆಗಬಹುದೆಂದು ಎಲ್ಲರಿಗೂ ಖಚಿತವಾಗುತ್ತಿರುವಾಗ:
ರಾಜ್ಯ ಸರ್ಕಾರವು ಅವರನ್ನು ಸೆರೆಮನೆಯಲ್ಲಿ ವಾಸವಾಗಿರುವ ಖೈದಿಗಳೊಡನೆ ಬೆರೆತು ನಾಟಕವಾಡಿಸುವ, ನಾಟಕವಾಡಿಸುತ್ತಾ ಅವರ ಮನಸ್ಸನ್ನು ಪರಿವರ್ತಿಸಿ ಉತ್ತಮ ನಾಗರಿಕರನ್ನಾಗಿ ಮಾಡುವ ಜವಾಬ್ದಾರಿಯನ್ನು ನೀಡಿದಾಗ, ಪಾಟೀಲರ ಜೀವನವೇ ಬದಲಾಗಲು ಹೊರಟಿತು. ಪೊದೆಗಡ್ಡದ, ಮಧ್ಯಮ ಎತ್ತರದ, ತೀಕ್ಷ್ಣ ಕಣ್ಣುಗಳ, ಎಡಗಾಲು ಎಳೆದು ಹಾಕುವ, ಯಾವಾಗಲೂ ಬೀಡಿ ಸೇದುವ ಪಾಟೀಲರನ್ನು ಖೈದಿಗಳು ಬಹುಬೇಗ ಸ್ವೀಕರಿಸಿದರು.
ಸರ್ಕಾರವು ಹೇಳಿದ್ದು ವರ್ಷಕ್ಕೆ ಒಂದೋ ಎರಡೋ ನಾಟಕ ಆಡಿಸಿ ಎಂದು. ಪಾಟೀಲರು ಅತಿಗೆ ಹೋದರು. ಕಲಾಕ್ಷೇತ್ರ, ರಂಗಭೂಮಿ, ಸಂಸ ರಂಗಮಂದಿರ, ಇವುಗಳ ಸಂಪರ್ಕವನ್ನು ಬಿಡುತ್ತಾ ಬಂದರು. ಹೊಸ ನಾಟಕಗಳನ್ನು ನಿರ್ದೇಶಿಸಿ, ನಾವೇ ಪ್ರಾಯೋಜಕತ್ವ ಒದಗಿಸಿಕೊಡುತ್ತೇವೆ, ಮಿತಿಮೀರಿ ಸಂಭಾವನೆ ಕೊಡುತ್ತಾರೆ ಎಂದೆಲ್ಲಾ ಗೋಗರೆದರೂ ಪಾಟೀಲರು ಖೈದಿಗಳ ಸಹವಾಸ ಬಿಡಲಾರದೆ ಹೋದರು.
ಪಾಟೀಲರೇ ಮತ್ತೆ ಮತ್ತೆ ಸಂದರ್ಶನಗಳಲ್ಲಿ ಹೇಳುತ್ತಿದ್ದ ಹಾಗೆ, ಖೈದಿಗಳಿಗೆ ನಟನೆಯಲ್ಲಿ ಇನ್ನಿಲ್ಲದಷ್ಟು ಪ್ರಬುದ್ಧತೆ, ತೀವ್ರತೆ, ತನ್ಮಯತೆ ಬಂದಿತ್ತು. ನಾಟಕದ ಮಾತುಗಳಿಗೆ ಅವರು ನೂರಕ್ಕೆ ನೂರರಷ್ಟು ಜೀವ ತುಂಬುತ್ತಿದ್ದರು. ನಾಟಕ ಪ್ರದರ್ಶನ ಮುಗಿದ ಮೇಲೂ, ಶ್ರೀರಾಮ, ಶ್ರೀಕೃಷ್ಣ, ಧರ್ಮರಾಯ, ವಿಭೀಷಣ, ಬುದ್ಧ, ಇಂಥವರ ವೇಷಭೂಷಣಗಳಲ್ಲೇ ಇರಲು ಆಸೆ ಪಡುತ್ತಿದ್ದರು. ಕೇಂದ್ರ ಕಾರಾಗೃಹದ ಗ್ರಂಥಾಲಯ ಪುರಾತನವಾದದ್ದು. ಅಲ್ಲಿದ್ದ ಅಭಿಜಾತ ಕೃತಿಗಳನ್ನೆಲ್ಲ ಖೈದಿಗಳು ಈ ವೇಷಭೂಷಣದಲ್ಲೇ ಕುಳಿತು ಓದುತ್ತಿದ್ದರು. ಇನ್ನೂ ಮುಖ್ಯವಾಗಿ ಕಲಾಕ್ಷೇತ್ರದ ನಟರುಗಳಿಗಿಲ್ಲದ ಬೇರೆ ಅಭ್ಯಾಸಗಳನ್ನು ಕೂಡ ರೂಢಿಸಿಕೊಂಡರು. ಪ್ರದರ್ಶನ ಮುಗಿದ ಮೇಲೆ ನಾಟಕದ ಪಠ್ಯಗಳನ್ನು ಓದುವುದು, ಅದರ ಬಗ್ಗೆ ಬಂದಿರುವ ಸಮೀಕ್ಷೆಗಳನ್ನು ಓದುವುದು, ಅದರಲ್ಲೆಲ್ಲ ಕೊರೆ ಹುಡುಕಿ, ಹಾಗಿರಬಹುದಲ್ಲವೆ, ಹೀಗಿರಬಹುದಲ್ಲವೇ ಎಂದು ಪ್ರಶ್ನೆ ಕೇಳುತ್ತಿದ್ದರು. ಹೊಸ ಹೊಸ ನಾಟಕಗಳನ್ನು ಆಡುವುದಕ್ಕಿಂತ ಒಂದೇ ನಾಟಕವನ್ನು ಮತ್ತೆ ಮತ್ತೆ ಆಡುವುದು ಒಳ್ಳೆಯದಲ್ಲವೇ ಎಂದು ಮತ್ತೆ ಮತ್ತೆ ಕೇಳಿ ಪೀಡಿಸಿದರೆ, ಪಾಟೀಲರು ತಾನೆ ಏನು ಹೇಳಿಯಾರು? ಖೈದಿಗಳು ಸಂಭಾಷಣೆಗಳನ್ನು ಯಥಾವತ್ತಾಗಿ ನೆನಪಿನಲ್ಲಿಟ್ಟುಕೊಳ್ಳುತ್ತಿದ್ದರೂ ತಮ್ಮ ಪ್ರತ್ಯುತ್ಪನ್ನಮತಿಯಿಂದ ಹೊಸ ಮಾತುಗಳನ್ನು ಸೇರಿಸಿ, ಗಂಭೀರ ಸಂಭಾಷಣೆಗಳನ್ನು ಪೇಟೆ ಬೀದಿಯ ಅಡುಮಾತಿನ ಶೈಲಿಗೆ ಪರಿವರ್ತಿಸಿ ಪಾಟೀಲರೇ ಬೇಸ್ತು ಬೀಳುವಂತೆ ಮಾಡುತ್ತಿದ್ದರು.
ಮಾಧ್ಯಮದಲ್ಲಿ ಪಾಟೀಲರ ಈ ಪ್ರಯೋಗಶೀಲತೆ, ಖೈದಿಗಳ ತೊಡಗುವಿಕೆ ಮತ್ತೆ ಮತ್ತೆ ಪ್ರಶಂಸೆಗೆ ಒಳಗಾಯಿತು. ರಂಗಭೂಮಿಯ ವಲಯದಿಂದಾಚೆಗೂ ಪಾಟೀಲರ ವರ್ಚಸ್ಸು ಬೆಳೆಯಿತು. ಒಂದು ಸಮಸ್ಯೆ ಮೂಡಿತು. ಆದರೆ ಅದರ ಹಿಂದೆಯೇ ಹೊಸ ಕಾಣ್ಕೆಯು ಗೋಚರಿಸಿತು. ಪಾಟೀಲರನ್ನು ಹಳೆಯ ಒಡನಾಡಿಗಳು ಇಡಿಯಾಗಿ ಕೈ ಬಿಡುವಂತೆ ಪ್ರೇರೇಪಿಸಿತು.
ಸ್ತ್ರೀ ಪಾತ್ರಗಳಿಗೆ ನಟಿಯರನ್ನು ಆಯ್ಕೆ ಮಾಡುವುದು ಹೇಗೆ? ಮಹಿಳಾ ಖೈದಿಗಳೇನೋ ಇದನ್ನು ಸಂತೋಷದಿಂದ ಒಪ್ಪಿದರು. ಜೈಲು ಆಡಳಿತ ಮಾತ್ರ ಒಪ್ಪಲಿಲ್ಲ. ಪುರುಷ ಮತ್ತು ಸ್ತ್ರೀ ಖೈದಿಗಳು ಯಾವ ಕಾರಣಕ್ಕೂ ಬೆರೆಯಬಾರದೆಂದು ನಿಯಮವೇ ಇದೆ. ಬೇಕಿದ್ದರೆ ಮಹಿಳಾ ಖೈದಿಗಳು ಬಂದು ನಾಟಕ ನೋಡಲಿ ಎಂದು ಸಮಾಧಾನ ಹೇಳಿದರು. ಪುರುಷ ಖೈದಿಗಳು ಪ್ರತಿಭಟಿಸಿದರು. ನಾವು ಇನ್ನು ಮುಂದೆ ನಾಟಕವನ್ನು ಅಡುವುದೇ ಇಲ್ಲ ಎಂದರು. ಪಾಟೀಲರು ಕೂಡ ಖೈದಿಗಳ ಪರವಾಗಿ ನಾನಾ ಪ್ರಯತ್ನಗಳನ್ನು ಮಾಡಿದರು. ಬಂದೀಖಾನೆ ಸಚಿವರು, ಕನ್ನಡ ಸಂಸ್ಕೃತಿ ಸಚಿವರು ಇವರನ್ನೆಲ್ಲ ಭೇಟಿ ಮಾಡಿದರು. ಇಷ್ಟೊಂದು ಮುಂದಕ್ಕೆ ಹೋಗಬೇಡಿ, ಖೈದಿಗಳನ್ನು ಇಷ್ಟೊಂದು ಮನಸ್ಸಿಗೆ ಹಚ್ಚಿಕೊಳ್ಳಬೇಡಿ ಎಂದು ಇಬ್ಬರೂ ಸಚಿವರು ತಿಳಿಹೇಳಿದರು.
ಆದರೆ ಪುರುಷ ಖೈದಿಗಳಿಗೆ ನಾಟಕ ಆಡುವುದನ್ನು ಬಿಡಲು ಇಷ್ಟವಿರಲಿಲ್ಲ. ಹಾಗಾಗಿ, ಅವರ ನಡುವಿನಿಂದಲೇ ಸ್ತ್ರೀ ಪಾತ್ರಗಳನ್ನು ಮಾಡಬಲ್ಲವರನ್ನು ಗುರುತಿಸಿದರು. ಪಾಟೀಲರಿಗೂ ಆಶ್ಚರ್ಯವಾದದ್ದೆಂದರೆ, ಪುರುಷ ಖೈದಿಗಳು ಸ್ತ್ರೀ ಪಾತ್ರಗಳಲ್ಲಿ ತೋರಿದ ಒನಪು, ವಯ್ಯಾರ ಮತ್ತು ನಾಜೂಕು. ಸೆರೆಮನೆಯ ಬದುಕಿನಿಂದಲೂ ನಾನಾ ರೀತಿಯ ದುಡಿಮೆಗಳಿಂದಲೂ ಬತ್ತಿ ಹೋಗಿದ್ದ ಮನಸ್ಸು, ದೇಹಗಳಿಂದ ಖೈದಿಗಳು ಹೊರಸೂಸಿದ ಶೃಂಗಾರ, ವಿರಹ, ಪ್ರೀತಿಯ ರೀತಿಗೆ ಪಾಟೀಲರೇ ದಂಗುಬಡಿದು ಹೋದರು. ಇದನ್ನೆಲ್ಲ ವೃತ್ತಿ ಬಾಂಧವರೊಡನೆ ಚರ್ಚಿಸುತ್ತಾ ವಿದ್ಯಾವಂತರು, ತರಬೇತಿ ಶಾಲೆಗಳಿಂದ ಮೂಡಿಬಂದ ನಟರು ಈ ರೀತಿಯಲ್ಲಿ ಅಭಿನಯಿಸುವುದು ಸಾಧ್ಯವೇ ಇಲ್ಲ ಎಂದು ಹಠ ಹಿಡಿದಾಗ, ಪಾಟೀಲರನ್ನು ಇನ್ನು ಸುಧಾರಿಸಲು ಸಾಧ್ಯವೇ ಇಲ್ಲ ಎಂದು ಸಹ ಕಲಾವಿದರು ತೀರ್ಮಾನಿಸಿದರು.
ಮಾಧ್ಯಮದಲ್ಲಿ ಪಾಟೀಲರ ಈ ಪ್ರಯೋಗಶೀಲತೆ, ಖೈದಿಗಳ ತೊಡಗುವಿಕೆ ಮತ್ತೆ ಮತ್ತೆ ಪ್ರಶಂಸೆಗೆ ಒಳಗಾಯಿತು. ರಂಗಭೂಮಿಯ ವಲಯದಿಂದಾಚೆಗೂ ಪಾಟೀಲರ ವರ್ಚಸ್ಸು ಬೆಳೆಯಿತು. ಒಂದು ಸಮಸ್ಯೆ ಮೂಡಿತು. ಆದರೆ ಅದರ ಹಿಂದೆಯೇ ಹೊಸ ಕಾಣ್ಕೆಯು ಗೋಚರಿಸಿತು. ಪಾಟೀಲರನ್ನು ಹಳೆಯ ಒಡನಾಡಿಗಳು ಇಡಿಯಾಗಿ ಕೈ ಬಿಡುವಂತೆ ಪ್ರೇರೇಪಿಸಿತು.
ಮುಂದಿನ ಹಂತದ ಬೆಳವಣಿಗೆ ಬೇರೆ ಬೇರೆ ದಿಕ್ಕುಗಳಲ್ಲಿ ಇನ್ನೂ ಕುತೂಹಲಕರವಾಗಿತ್ತು. ಪಾಟೀಲರ ನಾಟಕ ತಂಡವು ನಾಟಕಗಳನ್ನು ಸಾರ್ವಜನಿಕರ ಎದುರಿಗೆ ಪ್ರದರ್ಶಿಸಲು, ನಾಟಕೋತ್ಸವ ಸ್ಪರ್ಧೆಗಳಲ್ಲಿ ಭಾಗವಹಿಸಲು ಆಸೆಪಟ್ಟಿತು. ಒಂದು ಮಿತಿಯೊಳಗೆ ಈ ಸೂಚನೆಗೆ ಒಪ್ಪಬಹುದೆಂಬ ಅಭಿಪ್ರಾಯ ಮೂಡಿತು. ಸಮಾಜಸೇವಕರು, ಪ್ರಗತಿಪರ ಚಿಂತಕರು ಇವರನ್ನೆಲ್ಲ ಪ್ರದರ್ಶನಕ್ಕೆ ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸಿ, ತಂಡದ ಮರ್ಯಾದೆ ಹೆಚ್ಚುತ್ತದೆ ಎಂಬ ಸಲಹೆ ಕೇಳಿ ಬಂತು. ಈಗ ಪಾಟೀಲರ ತಂಡದ ನಟರು ಇನ್ನೂ ಒಂದು ಹೆಜ್ಜೆ ಮುಂದೆ ಹೋದರು. ಕರುನಾಡಿನ ಬೇರೆ ಬೇರೆ ಭಾಗಗಳಿಗೆ ಹೋಗಿ ನಾವು ನಾಟಕ ಪ್ರದರ್ಶಿಸಬೇಕು. ಈಗ ನಾವು ಕೂಡ ಕಲಾವಿದರೇ! ಇನ್ನು ಮುಂದೆ ಬಡಗಿ, ಮಾಲಿ, ಬುಕ್ ಬೈಂಡಿಂಗ್ ಕೆಲಸ ಮಾಡುವುದಿಲ್ಲ. ನಮ್ಮನ್ನು ಕೂಡ ಕಲಾವಿದರೆಂದೇ ಪರಿಗಣಿಸಿ, ಕಲಾವಿದರಿಗೆ ಕೊಡುವಷ್ಟೇ ಸಂಬಳ ಭತ್ಯೆ ಅಲ್ಲದಿದ್ದರೂ ಅದರ ಅರ್ಧದಷ್ಟಾದರೂ ಕೊಡಿ ಎಂಬ ಆಗ್ರಹ ಮಂಡಿಸಿದರು. ಹೀಗಾದಾಗ ನಾವು ಕೂಡ ಒಂದು ಸ್ವತಂತ್ರ, ವೃತ್ತಿಪರ ತಂಡವಾಗಿ ಬೆಳೆಯುವುದು ಸಾಧ್ಯ ಎಂಬ ಹೊಸ ದಾರಿಯನ್ನು ಕೂಡ ತೋರಿಸಿದರು. ಇದೆಲ್ಲದಕ್ಕೂ ಪಾಟೀಲರ ಸಕ್ರಿಯ ಬೆಂಬಲ ಇತ್ತಷ್ಟೆ.
ಈ ಬೇಡಿಕೆಗೆ ಮಾತ್ರ ಎಡ-ಬಲ-ಮಧ್ಯ ಎಲ್ಲ ಸ್ತರದಿಂದಲೂ ವಿರೋಧ ಕೇಳಿಬಂತು. ಇದೆಲ್ಲ ತುಂಬಾ radical ಆಯ್ತು ಎಂಬ ಅಸಮಾಧಾನ ಗುಸುಗುಸು ಮಾತಿನಲ್ಲಿ ಪ್ರಚಾರವಾಯಿತು. ನ್ಯಾಯಾಂಗದಿಂದಲೂ ವಿರೋಧ ಬಂತು. ಸಂವಿಧಾನ, ಸೆರೆಮನೆ, ಶಿಕ್ಷೆ, ಸುಧಾರಣೆ, ಇದೆಲ್ಲದರ ಹಿಂದೆ ಒಂದು ಪರಿಕಲ್ಪನೆಯಿದೆ, ಸಂಪ್ರದಾಯವಿದೆ, ನೈತಿಕತೆಯಿದೆ. ಕಷ್ಟಪಟ್ಟು ಶಿಕ್ಷೆ ಅನುಭವಿಸಿ ಮಾಡಿದ ಅಪರಾಧಕ್ಕೆ, ಪಾಪಕ್ಕೆ ಸೆರೆವಾಸ ಅನುಭವಿಸಿದ ನಂತರವೇ ಉತ್ತಮ ನಾಗರಿಕರಾಗುವುದು ಎಂಬ ವಾದವನ್ನು ಬಹುಪಾಲು ನಾಗರಿಕರು ಕೂಡ ಒಪ್ಪುವಂತೆ ಕಂಡಿತು.
ಪಾಟೀಲರು ಮತ್ತು ಅವರ ತಂಡದವರು ಪಟ್ಟು ಬಿಡಲಿಲ್ಲ. ಇಲ್ಲ ನಮ್ಮ ಬೇಡಿಕೆಯನ್ನು ಸಮಾಜ, ಸರ್ಕಾರ ಒಪ್ಪಲೇಬೇಕು. ನಾವೇ ಒಂದು ಹೊಸ ರೆಪರ್ಟರಿ ತಂಡವನ್ನು ಕಟ್ಟುತ್ತೇವೆ. ನಿರಂತರ ಪ್ರವಾಸ, ಪ್ರಯೋಗಶೀಲತೆ, ಪ್ರದರ್ಶನಗಳಿಂದ ಪರ್ಯಾಯ ರಂಗಭೂಮಿ ಕಟ್ಟುತ್ತೇವೆ ಎಂದು ಪತ್ರಿಕೆಗಳಿಗೆಲ್ಲ ಬರೆದರು. ಬರೆಸಿದರು. ಸರ್ಕಾರವು ಬೇಡಿಕೆಯನ್ನು ಮನ್ನಿಸದಿದ್ದರೆ ಉಪವಾಸ ಮಾಡುತ್ತೇವೆ. ಅಗತ್ಯ ಬಿದ್ದರೆ, ಅಮರಣಾಂತ ಉಪವಾಸಕ್ಕೂ ಕೂರುತ್ತೇವೆ ಎಂದು ಬೆದರಿಕೆ ಹಾಕಿದರು. ಇದೆಲ್ಲ ತೀರಾ ವಿಪರೀತಕ್ಕೆ ಹೋಯಿತು ಎಂದು ಸರ್ಕಾರವು ಮಾತ್ರವಲ್ಲ, ಪಾಟೀಲರ ಸಹ ಕಲಾವಿದರಿಗೂ ತೀರಾ ಪ್ರಗತಿಪರರಿಗೂ ಕೂಡ ಅನಿಸಿತು. ಸೃಜನಶೀಲತೆ, ಪ್ರಗತಿಶೀಲತೆಗೂ ಒಂದು ಮಿತಿ ಇದೆ. ನಾಗರಿಕ ಜಗತ್ತಿನ ಮಿತಿ, ಮರ್ಯಾದೆಗಳನ್ನು ಅದು ತೀರಾ ಮೀರಬಾರದು ಎಂದು ಮೊದಲು ಮೆಲುದನಿಯಲ್ಲಿ, ನಂತರ ಗಟ್ಟಿಯಾಗಿಯೇ ಹೇಳತೊಡಗಿದರು. ಹೀಗೇ ಬಿಟ್ಟರೆ ಈ ವಾದ ಅನಗತ್ಯವಾಗಿ ಬೆಳೆಯುತ್ತದೆ ಎಂದು ಭಾವಿಸಿದ ಸರ್ಕಾರವು ಒಂದು ಸಮಿತಿ ರಚಿಸಿ ಕೈ ತೊಳೆದುಕೊಳ್ಳುವುದೇ ಸರಿಯಾದ ಮಾರ್ಗ ಎಂದು ಭಾವಿಸಿತು. ಪಾಟೀಲರಿಗೂ ಕೂಡ ಸದರಿ ಸಮಿತಿಯ ಸದಸ್ಯರಾಗಿ ಎಂದು ಸೂಚಿಸಿದರು. ಪಾಟೀಲರು ಈ ರಾಜಿ ಕಬೂಲಿಗೆ ಸಿದ್ಧರಿರಲಿಲ್ಲ. ಸಮಿತಿಯು ಕರುನಾಡಿನ ಉದ್ದಗಲಕ್ಕೂ ಎಲ್ಲ ಬಣದ ರಾಜಕೀಯ ಅಭಿಪ್ರಾಯಗಳು, ಎಲ್ಲ ಮನೋಧರ್ಮದವರ ಸಂಸ್ಕೃತಿ ಚಿಂತನೆಯನ್ನು ಪರಿಗಣಿಸಿದರೂ ಸರ್ಕಾರವು ಬಯಸಿದ್ದಂತೆ ಒಂದು ವರದಿ ನೀಡದೆ, ಪ್ರಶ್ನೆಗಳನ್ನು ಕೇಳಿತು, ಎಚ್ಚರಿಕೆ ನೀಡಿತು.
ಕರುನಾಡಿನ ಪರಂಪರೆಗೆ ಒಂದು ಗೌರವವಿದೆ, ಇತಿಹಾಸವಿದೆ. ಇದರಲ್ಲಿ ರಂಗಾಯಣದ ಪರಿಕಲ್ಪನೆಯ ಪಾತ್ರ ಕೂಡ ದೊಡ್ಡದು. ಖೈದಿಗಳಿಗೇ ಒಂದು ರಂಗಾಯಣ, ಒಂದು ರೆಪರ್ಟರಿ ಎಂಬ ಮಾತು, ಅವರೇ ಕಲಾವಿದರಾಗುವುದು, ಅವರದೇ ನಿರಂತರ ಪ್ರವಾಸ ಎಂಬ ಮಾತು ಎಲ್ಲೂ ಕೇಳಿಬಂದಿಲ್ಲ. ಹೊರ ದೇಶಗಳಲ್ಲೂ ಇಲ್ಲ. ನಾವು ನಂಬಿಕೊಂಡು ಬಂದಿರುವ ಎಲ್ಲ ಪರಿಕಲ್ಪನೆಗಳೂ ತಲೆಕೆಳಗಾಗುತ್ತದೆ.
“ಜೈಲಿಗೇಕೆ ರಂಗಾಯಣ?” ಎಂಬುದು ಪ್ರಶ್ನೆಯೇ ಅಲ್ಲ. ಇದೆಲ್ಲ ಪರಿಶೀಲನೆ, ಸಾರ್ವಜನಿಕ ಚರ್ಚೆಗೆ ಯೋಗ್ಯವೂ ಅಲ್ಲ. ಇಂತಹ ವಿಕ್ಷಿಪ್ತ ಸಂಗತಿಗಳೇ ನಿರಂತರವಾಗಿ ಮಾಧ್ಯಮದಲ್ಲಿ ಚರ್ಚೆಯಾಗುತ್ತಿದ್ದರೆ ತರುಣ, ಮುಗ್ಧ ಮನಸ್ಸುಗಳ ಮೇಲೆ ದುಷ್ಪರಿಣಾಮವಾಗುತ್ತದೆ. ಹಾಗಾಗಿ, ಈ ಚರ್ಚೆಯನ್ನು ಕೂಡ ಬರಕಾಸ್ತು ಮಾಡಬೇಕು.
ಕೆ. ಸತ್ಯನಾರಾಯಣ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಮಾಸ್ತಿ ಕಥಾ ಪುರಸ್ಕಾರ(ನಕ್ಸಲ್ ವರಸೆ-2010) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ, ಬಿ.ಎಂ.ಶ್ರೀ.ಪ್ರತಿಷ್ಠಾನದ ಎಂ.ವಿ.ಸೀ.ಪ್ರಶಸ್ತಿ, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್(2013), ರಾ.ಗೌ.ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ (ಸಾವಿನ ದಶಾವತಾರ ಕಾದಂಬರಿ), ವಿ.ಎಂ.ಇನಾಮದಾರ್ ಪ್ರಶಸ್ತಿ (ಚಿನ್ನಮ್ಮನ ಲಗ್ನ ಕೃತಿ) ಸೂವೆಂ ಅರಗ ವಿಮರ್ಶಾ ಪ್ರಶಸ್ತಿ (ಅವರವರ ಭವಕ್ಕೆ ಓದುಗರ ಭಕುತಿಗೆ ವಿಮರ್ಶಾ ಕೃತಿ) ಲಭಿಸಿದೆ.
It seems (hope i am correct0 that one of the first performaces of WAITING FOR GODOT was in a jail