ಹೀಗೆ ತೇಲಿ ಹೋದ ಮತ್ತು ಕವಿತೆಯಾಗಿ ಉಳಿದು ಹೋದ ಜೀವ ಕೆತ್ತಿದ ಮೆತ್ತನೆ ಪದಗಳು ಬದುಕನ್ನ ಅವನು ಪಳಗಿಸ ಹೊರಟ ದಾರಿ ನಡುವೆ ನಿಂತು ನಕ್ಕ ದಾರಿಗಲ್ಲು. ಆ ಕಲ್ಲಿಗೂ ಕರುಳುಂಟು ಎನ್ನುವ ಅವನೊಳಗಿನ ಜೀವನಪ್ರೀತಿ. ಕವಿ ತಾನು ಇಲ್ಲದಾಗ ನಾವು ಅವನ ಮನೆಗೆ ಹೋದ್ರೆ ಏನು ಮಾಡಬೇಕು ಅಂತ ಹೇಳಿದ್ದಾನೆ, ಹೇಳಿ ಹೋಗಿದ್ದಾನೆ. ಅವನು ಇದನ್ನೆಲ್ಲ ಯಾಕೆ ಮೊದಲೇ ಇಷ್ಟು ನಿಖರವಾಗಿ ಹೇಳಿದ ಅನ್ನೊ ಪ್ರಶ್ನೆ ನನ್ನದು, ಆದರೆ ಅವನು ಹೇಳಿದ ಮಾತಿಗೆ ಬೆರಗೂ ಹಿಂಬಾಲಿಸೋದು ಕಂಡು ಆಶ್ಚರ್ಯವೂ..
ಎರಡು ವರ್ಷಗಳ ಹಿಂದೆ ತೀರಿಕೊಂಡ ಯುವಕವಿ ಅನಿಲ ಹುಲಮನಿ ಅವರ ಕವನ ಸಂಕಲನ “ಹೊಸ ಅಧ್ಯಾಯ”ವನ್ನು ಧಾರವಾಡದ ಕ್ರಾಂತಿ ಪ್ರಕಾಶನ ಪ್ರಕಟಿಸಿದ್ದು, ಈ ಸಂಕಲನದ ಕುರಿತು ದೀಪಾ ಗೋನಾಳ ಬರಹ
ಪುಟ್ ಮಗ, ಎದೆಗೂಡಲ್ಲಿ ಬೆಚ್ಚಗೆ ಇರಬೇಕಾದ ಮಡದಿ, ಅಷ್ಟೇನೂ ಹೇಳಿಕೊಳ್ಳುವಂತಹ ಸ್ಥಿತಿ ಅಲ್ಲ. ಸಣ್ ಸಿಡುಕು, ಪಟಕ್ಕನೇ ಸಾರೀ ಕೇಳೊಮನ್ಸು. ಎದುರಿಗಿರಬೇಕಾದ ಅಪ್ಪಟ ಮನುಷ್ಯ ಏನೇನೂ ಹೇಳದೆ ಎದ್ದು ಹೋಗಿ ಎರಡು ವರ್ಷದ ಮೇಲಾಯ್ತು.
ಅನಿಲ..
-ನ ಪದ್ಯ ಓದತಿದ್ರೆ ಈ ಹುಡುಗನಿಗೆ ಮೊದಲೇ ತಾನು ಬೇಗ ಈ ಲೋಕದಿಂದ ಬಿಡುಗಡೆ ಹೊಂದತಿನಿ ಅಂತಾ ಗೊತ್ತಿತ್ತಾ ಅನ್ನೊ ಸಂಶಯ ಕಾಡುತ್ತೆ; ಅದಕ್ಕೆ ಪುರಾವೆ ಒದಗಿಸೊ ಸಾಕಷ್ಟು ಕವಿತೆಗಳು ಇದರಲ್ಲಿವೆ.
“ಸಂತೈಸಿ ಬೆರಸಿದರ ಸಡಗರದ ಜಾತ್ರಿ
ಮುತ್ತಿನ ತೇರಿಗೆ ನತ್ತನು ಹಾಕಿ
ಎಳಿತೈತಿ ಬಹುದೂರ
ಕಾಣದ ಅಂಚಿಗೆ ಕರ್ಕೊಂಡು ಹೊಕ್ಕೇತಿ.”
ಯಾವ ಜಾತ್ರಿ!?
ಯಾವ ಅಂಚಿಗೆ!?
ಇವತ್ತು ಅನಿಲ ನಮ್ಮೊಂದಿಗಿದ್ದಿದ್ದರೆ ಈ ಸಡಗರದ ಜಾತ್ರಿ ಸುದ್ದಿ ಮತ್ತೇನೊ ಆಗತಿತ್ತೇನೊ. ಆದರ ಅಂವಾ ಜಾತ್ರಿ ಮುಗಿಸಿ ನತ್ತ ಕಳಚಿ ಎದ್ದ ಹೋಗ್ಯಾನ ಬಹುದೂರ. ಈ ರೂಪಕ ಜೀವನ ಜಾತ್ರಿಯ ಚಕ್ಕಡಿ ಮೂಕ ಹರಕೊಂಡ ನೆಲಕ್ಕ ಬಿದ್ದ ಕತಿ ಹೇಳತೈತಿ.
ಇತರೆ ಇತರೆ ಇತರೆಗಳಿಗೂ- ಪದ್ಯದೊಳಗೊಬ್ಬ ಬಾಯಾಗ ಹಲ್ಲಿಲ್ಲದ ಮುದಕ ಬರ್ತಾನ. ಬಾವಿ ಕಟ್ಟಿ ಮ್ಯಾಲ ಕುಂತಾನ ತನ್ನ ಕೊನೆ ದಿನ ಕೆತ್ತುತ್ತಿದ್ದಾನ- ಅನ್ನುವಾಗ ಯಾರೀ ಮುದುಕಾ ಇಲ್ಯಾಕ ಬಂದಾ ಅನ್ನೊ ಪ್ರಶ್ನೆ.. ಈ ಇತರೆಗಳೊಳಗ ಯಾರಯಾರ ಇದ್ದೀವಿ ಅನ್ನೊ ದುಗುಡ, ಹುಡುಗಾ ಏನು ಹೇಳ್ತಿದ್ದಿ ಎಂತಾ ಒಗಟಿದು ಉತ್ತರಿಸೊ ಅನಿಲಾ ಅನಬೇಕು. ಜೋರಾಗಿ ಅವ ನಾ ಎಲ್ಲೂ ಹೋಗಿಲ್ ಇಲ್ಲೆ ರಾಜಣ್ಣನ ಅಂಗಡ್ಯಾಗ ಸಖೀಗೀತ ಓದ್ಕೊಂತ ಕೂತಿದ್ದೆ, ಚಾ ಕುಡದ ಬರ್ತೇನಿ ಅನಬೇಕು.
ಹಿಂಗೆಲ್ಲ ಅನಸ್ತದ… ಅನಿಲ ಡಿಗ್ರಿ ಕಾಲೇಜದಾಗ ಅಗದೀ ಸಂಭಾವಿತ ಗೆಳೆಯ, ಸುಮ್ಮನ ಕ್ಲಾಸ್ ಕೇಳಿ ಎದ್ದು ಹೋಗತಿದ್ದ ಹುಡುಗರ ನಡುವೆ ತಾನು ಇದ್ದವ. ಆದರ ಈ ಸಂಭಾವಿತ ಅನಿಸಿಕೊಂಡವ ಎಂತಾ ಕವಿತೆ ಬರ್ದಾನೋಪಾ, ಅನಿಲ ನೀ ಭಾರಿ ಇದ್ದೀ ಬಿಡು! ನಿನ್ನ ಬಾಳ ಸಂಭಾವಿತ ಅಂತ ತಿಳದಿದ್ದೆ ಅಂತ ಹಂಗಿಸಬೇಕು. ಅಂಥಾ ಕವಿತೆ ಬರದಬಿಟ್ಟಾನ ಈ ನಮ್ ಅನಿಲ.
“ಕಚ್ಚಿದರೂ
ನಂಜಾಗದ ಕಲೆಗಳು ಅಲ್ಲಲ್ಲಿ
ಇವತ್ತು
ಅದೂ’ ಮುಗಿದ ಮೇಲೂ
ಮೆಲ್ಲಗೆ ಪಿಸುಗುಟ್ಟುತ್ತಿದ್ದಾಳೆ
ನೀನೊಬ್ಬ ‘ಶಂಕಿತ ಉಗ್ರಗಾಮಿ’
ಇಂತಾ ಪದ್ಯ ಬರೆದ ಉಢಾಳ ಕವಿಯನ್ ಕುಂದರ್ಸಿ ಕಾಲೆಳೆದು ಮಾತಿನಲ್ಲಿ ಸಿಗಸಬೇಕಿತ್ತು. ಅವನು ನಾಚಿ ಮಾತು ತಪ್ಪಿಸೋದನ್ ಕಾಣಬೇಕಿತ್ತು, ನಮ್ಮ ಜಿ ಡಿ(ಗಟರ ದಂಡಿ) ಕಟ್ಟಿ ದಂಡು.
ನಡೆದ ಹಾದಿಗೆ ಜೋಡು ಗಾಳಿ
ಹದಹದದ ಲಯದ ಮಾತು
ಸುಣ್ಣ ಬಣ್ಣ ಕೊಂಚ ತಣ್ಣ
ನಾನು ನೀನು ಮತ್ತೆ ನೀನು
ಹಗುರ ಬಾನಲಿ ತೇಲಿ ಹೋದರು
ಹೀಗೆ ತೇಲಿ ಹೋದ ಮತ್ತು ಕವಿತೆಯಾಗಿ ಉಳಿದು ಹೋದ ಜೀವ ಕೆತ್ತಿದ ಮೆತ್ತನೆ ಪದಗಳು ಬದುಕನ್ನ ಅವನು ಪಳಗಿಸ ಹೊರಟ ದಾರಿ ನಡುವೆ ನಿಂತು ನಕ್ಕ ದಾರಿಗಲ್ಲು. ಆ ಕಲ್ಲಿಗೂ ಕರುಳುಂಟು ಎನ್ನುವ ಅವನೊಳಗಿನ ಜೀವನಪ್ರೀತಿ. ಈ ಪದ್ಯಗಳು ಹೇಳುವ ಎದೆಹೊಕ್ಕ ಗಾಳಿ ಜೀವಾನಿಲ ಆಗದಿರುವುದಕ್ಕೊ ಏನೊ ನನಗಂತು ಪ್ರತಿ ಪದದೊಂದಿಗೂ ಗುದ್ದಾಟ ಮರು ಕ್ಷಣವೇ ಮರುಕ.
ಕವಿ ತಾನು ಇಲ್ಲದಾಗ ನಾವು ಅವನ ಮನೆಗೆ ಹೋದ್ರೆ ಏನು ಮಾಡಬೇಕು ಅಂತ ಹೇಳಿದ್ದಾನೆ, ಹೇಳಿ ಹೋಗಿದ್ದಾನೆ. ಅವನು ಇದನ್ನೆಲ್ಲ ಯಾಕೆ ಮೊದಲೇ ಇಷ್ಟು ನಿಖರವಾಗಿ ಹೇಳಿದ ಅನ್ನೊ ಪ್ರಶ್ನೆ ನನ್ನದು, ಆದರೆ ಅವನು ಹೇಳಿದ ಮಾತಿಗೆ ಬೆರಗೂ ಹಿಂಬಾಲಿಸೋದು ಕಂಡು ಆಶ್ಚರ್ಯವೂ..
ಟಿ ವಿ ಸ್ಟಾಂಡಿನ ಮೇಲೋ
ಅಥವ…
ಮೇಜಿನ ಮೇಲೊ
ಪುಸ್ತಕಗಳು ಸಿಕ್ಕರೆ
ಸ್ವಲ್ಪ ಹೊತ್ತು ಓದಿ.
ತುದಿ ಮಡಚಿಟ್ಟ
ಪುಟಗಳು
ಅಥವ…
ಅಂಡರ್-ಲೈನ್ ಹಾಕಿದ
ಪದಗಳು, ವಾಕ್ಯಗಳು ಕಂಡರೆ
ತಲೆ ಕೆಡಿಸಿಕೊಳ್ಳಬೇಡಿ.
….
….
ಹೀಗೆ ಸಾಗುವ ಪದ್ಯ
ಕೊನೆಯ ಸಾಲಿನಲ್ಲಿ
ಖುಷಿ ಕೊಟ್ಟ ವಾಕ್ಯಗಳು ಸಿಕ್ಕರೆ
ಅಲ್ಲೊಂದು ಸಣ್ಣ
ಗುರುತು ಮಾಡಿ
ನಾನು ಮರಳಿ ಬರಲು ಅಷ್ಟೇ
ಸಾಕು…
ಈ ಪದ್ಯ ಓದಿ ಮುಂದೆ ಹೋಗಲು ಎಂತ ಓದುಗನಿಗೂ ತುಸು ಸಮಯಬೇಕು. ಮರಳಿ ಬಾರದ ಗೆಳೆಯನ ಪದ್ಯಕ್ಕೆ ಮೌನವೇ ವಿಮರ್ಶೆ.
ಅನಿಲನಿಗೆ ಒಂದು ಲಯ ದಕ್ಕಿತ್ತು ಅಂತ ಅನಿಸ್ತದ. ಅವನ ಪದ್ಯಗಳನ್ನ ಓದ್ತಾ ಹೋದಹಾಗೆ ನಾದ ಒಂದು ಎದೆಯ ಎಳೆಹಿಡಿದು ನಾದುವ ಸದ್ದು ಪಕ್ಕನೆ ಸಿಗುತ್ತೆ.
ಒಂದು ಪದ್ಯದ ಎರಡು ವಾಕ್ಯ ಹೀಗಿವೆ-
ಹದದ ತೊಗಲಿನಲಿ ನಾದ ಕೇಳು
ಅರೇ… ರೆ..ರೆ..ರೆ..ರೆ..
ಅಲೆಗಳು ತೇಲಿ ತೇಲಿ ತತರೆ ತಾ ಇಲ್ಲಿ
ಅಬ್ಬಾ ಎಂತಾ ನಾದ ಒಲದೈತೊ ಗೆಳೆಯಾ ನಿನಗ!!
ಜೀಕ್ಯಾಡತಾವ ಅನ್ನೊ ಪದ್ಯ ಒಮ್ಮೆ ಮ್ಯಾಲಿಂದ ಕೆಳಗತನಕ ಓದಿದೆ. ಏನ ಸಿಕ್ಕತು ಅನಸ್ತು ಹಿಂದಗೂಟನ ಮತ್ ಕೆಳಗಿಂದ ಮ್ಯಾಲ ತನಕ ಓದಿದೆ. ಒಂದು ಮ್ಯಾಜಿಕ್ ಪದ್ಯ ಇದು ಅನಸ್ತು. ಅಂದ್ರ ಕವಿಗೆ ಈ ಮ್ಯಾಜಿಕ್ ಗೊತ್ತಿತ್ತು.
ಜೀಕ್ಯಾಡತಾವ ಜೋತುಬಿದ್ದು
ಟೊಂಗೆಗೆ ಗಿಡದ ಹುಣಸೆ-
ತೂಗಾಡಿ ಸವರಿದಾಗಾ
ಹಿಂದಿನವನು ಮುಂದಿನವನು
ಬಂದವನು ದಾಟಿದವನು
ಅವನೊಳಗಿನವನು ಅವನಲ್ಲ ಅವನು
ನಿನ್ನೊಳಗಿನವನು ನೀನಲ್ಲ ನೀನು
ಇದು ಮೂಲಪದ್ಯ ಅಲ್ಲ. ಪದ್ಯದ ಹಿಮ್ಮುಖವಾಗಿ ನಾನು ಬರೆದ ಪದ್ಯ. ಆದರೆ ಅರ್ಥದೊಳಗ ಇನ್ನೂ ಅಪಾರ ಸಿಕ್ಕಿದ್ದು ಇಲ್ಲೆ ನನಗ, ಇಲ್ಲಿಂದ ಮ್ಯಾಲ ಮತ್ ಪದಗಳನ್ನ ಹಿಂದಿಲಿಂದನ ಮೊದಲ ತನಕ ಓದಿದ್ರ ಒಂದು ಗಮ್ಮತ್ ಐತಿ.
ನೋಡಾಕ ಬಂದಿ ಹಾಡಾಕ ಬಂದಿ
ಮತ್ಯಾಕ ಸರೀತಿ ಕಿರಿ ತೀರದ ಅಲೆಗೆ
ಹಂಗಿಲೇ ಹಚ್ಚು ನುಂಗಿದ ಬತ್ತಿಗೆ
ಆರದಿರಲಿ ಬೆಳಕು ಕಟ್ಟ ಕಡೆಯವರೆಗೂ
ಯಾವ ದೀಪದ ಬೆಳಕು ಬಯಸಿದ್ಯೋ ನಾಕಾಣೆ ಬೆಳಕೀಯಲಿ ನಿನ್ನಾತ್ಮ ನಮ್ಮೊಳಗ.
“ಹಸಿವಿಗಾಗಿ ಹ್ಯಾವ” ಪದ್ಯ ಓದಿದೆ ಮತ್ ಓದಿದೆ ಮತ್ತಮತ್ತ ಓದಿದೆ ಎಷ್ಟ ಸಲ ಓದಿದೆ ಅಷ್ಟೂಸಲ ಕಣ್ಣು ತೇವ ಎದಿವಜ್ಜಿ.
“ಲೇಖನಿ ನಡುಗುತ್ತಿದೆ” ಪದ್ಯನ ಅವನ ಹೆಂಡ್ತಿ ಓದಿದ್ರ ಅಕೀ ಎದೆಯೊಳಗಿಂದ ಉಕ್ಕಿಬರು ತೆರಿ ಅದೆಷ್ಟ ಎತ್ತರಕ್ಕ ಚಿಮ್ಮಿ ಹಿಂದಕ್ಕಹೋಗಬಹುದು ಅನ್ನೊ ದುಗುಡ.
ಅವಳಿಗೆ ಏನೂ ಬರೆಯಲಾಗಲಿಲ್ಲ ಅನ್ನೊ ಇವನ ಬಿಳಿ ಹಾಳಿನ ಶುಭ್ರ ಅಂತ ತಿಳದು ಅಪ್ಪುವ ಅಕಿಗೆ ದೇವರು ಅನ್ಯಾಯ ಮಾಡಿದ ಅಂತ ನಿರಂತರ ಅನಸ್ತದ ಇನ್ನ ನನಗ.
ಇಲ್ಲೆ ಗಾಂಧಿ ಕವಿತೆ, ಬುದ್ಧನ ಕವಿತೆ, ಕವಿತೆಯ ಕವಿತೆ, ಕಾಮನ ಕವಿತೆ, ಮಗನ ಕವಿತೆ, ಕನಸು ಕವಿತೆ,
ಯಾವ ಯಾವ ಕವಿತೆ ಉಲ್ಲೇಖಿಸಲಿ ಐವತ್ತಕ್ಕ ಐವತ್ ಮಾರ್ಕಸ್ ಒಂದೂ ಕಳೆಯೂ ಹಂಗಿಲ್ಲಾ.
ಇನ್ನ ಒಂದ ಕವಿತೆ “ವಿಳಾಸ ಕೇಳಲು”.
ಗಮನ ಇಟ್ಟಿದ್ದಾರೆ
ಲೆಕ್ಕ ಮಾಡುತ್ತಿದ್ದಾರೆ
ಗುಣಿಸಿ ಭಾಗಿಸಿ ಕಳೆದು ಕೂಡಿಸಿ
ಹಳೆಯ ಹಾಳೆಯಲಿ
ಗೀಚಿದ ಅಂಕಿಗಳನು ಆಯ್ದುಕೊಂಡು
ಹುಟ್ಟಿದ ದಿನ ಹುಡುಕುತ್ತಿದ್ದಾರೆ ಸಾಯಲು
ತಯಾರಿಲ್ಲ.
“ನಾನು ಸತ್ತರೆ”
ಅಕಸ್ಮಾತ್
ನಾನು ಸತ್ತರೆ
ಒಬ್ಬ ಒಳ್ಳೆಯ ಕವಿ ಸತ್ತನೆಂದು
ಊರಿನಲ್ಲಿಯ ಎಲ್ಲ
ಸಾಹಿತಿಗಳು ಸೇರಿ
ಸ್ಮರಣೆಗೋಸ್ಕರ
ನನ್ನ ಮನೆಯ ಮುಂದಿನ
ಚಿಕ್ಕ ಗಾರ್ಡನ್ನಿನಲ್ಲಿ
ಹಾಕಿದ
ಪೆಂಡಾಲ್ ಕೆಳಗೆ ಕುಳಿತು
ನನ್ನೆಲ್ಲಾ ಕವಿತೆಗಳನ್ನು ಓದಬೇಡಿ
ನನ್ನ ಹೆಂಡತಿಗೂ
ಪಕ್ಕ ಕುಳಿತ ಅವಳ ಸವತಿಗೂ
ಗೊಂದಲವಾಗಬಹುದು..
ಅಪ್ಪಟ ಕವಿ ಮತ್ತು ಒಳ್ಳೆಯ ಕವಿಯೊಬ್ಬ ನಮ್ಮೊಂದಿಗಿಲ್ಲದ ದಿನವಿದು. ಬೇಬರ್ಷಿ ಬದುಕು ಅಂತ ಒಂದು ಪದ್ಯ ಐತಿ ಅದನ್ನ ಬರಿಯೋದಕ್ಕ ಯಾಕೋ ಮನಸ್ಸು ಒಪ್ತಿಲ್ಲ. ಗೆಳೆಯ ಇವತ್ತು ಜೊತೆಗಿದ್ದಿದ್ರೆ ಹಠ ಮಾಡಿಯಾದ್ರು ಪುಸ್ತಕದ ಬಿಡುಗಡೆಗೆ ನನ್ನ ಕರೆಸ್ಕೊತಿದ್ದ. ನಾನು ಹಿಂಗ ನೆಪಹೇಳಿ ಉಳಿದುಕೊಳ್ಳತಿರಲಿಲ್ಲವೇನೊ. ಇಲ್ಲದ ಗೆಳೆಯನ ಇರುವಿಕೆ ಬಯಸಿ ಗೆಳೆಯರೆಲ್ಲ ನಿಂತು ಪುಸ್ತಕ ಮಾಡ್ತಿದ್ದಾರೆ. ಅವರೆಲ್ಲರ ಎದೆಯೊಳಗ ಅನಿಲ ಇದ್ದಾನೆ ಇರ್ತಾನೆ. ಅವನ ಮಡದಿ ಮತ್ತ್ ಮಗನಿಗೆ ದೇವರು ಶಕ್ತಿ ತುಂಬಲಿ. ಕವಿತೆಗಳು ಅವನ ಹೆಸರನು ಉಸಿರಲಿ.
“ಹೊಸ ಅಧ್ಯಾಯ”ದ ಕವಿತೆಗಳಿಗೆ ಶುಭಾಶಯ.
(ಕೃತಿ: ಹೊಸ ಅಧ್ಯಾಯ (ಕವನ ಸಂಕಲನ), ಲೇಖಕರು: ಅನಿಲ ಹುಲಮನಿ, ಪ್ರಕಾಶಕರು: ಕ್ರಾಂತಿ ಪ್ರಕಾಶನ, ಧಾರವಾಡ, ಬೆಲೆ: 50/-)
ದೀಪಾ ಗೋನಾಳ ಪೋಸ್ಟ್ ಆಫೀಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಓದು, ತಿರುಗಾಟ, ಇಷ್ಟ. ಕವಿತೆ ಅಂದ್ರೆ ಹುಚ್ಚು, ಕತೆ ಅಂದ್ರೆ ಪ್ರಾಣ. “ತಂತಿ ತಂತಿಗೆ ತಾಗಿ” ಪ್ರಕಟಿತ ಕವನ ಸಂಕಲನ