ಇಲ್ಲಿಯ ವಿಷಯಗಳು ಸರ್ವಕಾಲಿಕವಾದದ್ದು. ಇಂದಿನ ಸಾಮಾಜಿಕ ಜಾಗೃತಿಯ ಪರಿಣಾಮವಾಗಿ ಸ್ತ್ರೀವಾದೀ ಚಳುವಳಿಗಳು ಹುಟ್ಟಿಕೊಂಡು, ಅದರಿಂದ ಪ್ರೇರೇಪಿತಗೊಂಡ ಸರಕಾರಗಳೂ ಮಹಿಳಾ ಶಿಕ್ಷಣ ಹಾಗೂ ಸುರಕ್ಷತೆಗೆ ಗಮನ ಕೇಂದ್ರೀಕರಿಸುತ್ತ ಬಂತು, ಮಹಿಳೆಯು ಸಮಾಜದ ಒಂದು ಅಂಗ ಎಂಬುದು ಅಂಬೇಡ್ಕರ್ ಶಕೆ ಆರಂಭಗೊಂಡಾಗಿನಿಂದ ಅನೇಕರ ಕಣ್ಣು ತೆರೆಸಲು ಯತ್ನಿಸುತ್ತಲೇ ಬಂದಿದೆ. ಅದಕ್ಕೆ ಪೂರಕವಾಗಿ ಹಬ್ಬು ಸರ್, ಇಲ್ಲಿ ಆಚಾರ್ಯ ಕೃಪಲಾನಿ ಹೇಳಿದ ಹೀಗೊಂದು ಮಾತನ್ನು ನೆನೆಯುತ್ತಾರೆ, ‘ಹಕ್ಕಿಗೆ ಒಂದೇ ರೆಕ್ಕೆಯಿಂದ ಹೇಗೆ ಹಾರಲು ಸಾಧ್ಯವಿಲ್ಲವೋ ಹಾಗೆಯೇ ಮಹಿಳೆಯ ಅಭಿವೃದ್ಧಿಯಾಗದೇ ಇದ್ದಂತಹ ಸಮಾಜ ಕೂಡ ಅಂಥದೊಂದು ಅಂಗವಿಕಲತೆಯಿಂದ ಬಳಲುತ್ತದೆ’ ಈ ಮಾತು ಮಹಿಳೆಯರ ಸಮಾನ ಹಕ್ಕುಗಳನ್ನು ಪ್ರತಿಪಾದಿಸುತ್ತದೆ.
ಅರುಣಕುಮಾರ ಹಬ್ಬು ಅವರು ಬರೆದ “ಮಹಿಳೆ ಮತ್ತು ಮಾಧ್ಯಮ – ಒಂದು ಅವಲೋಕನ” ಕೃತಿಯ ಕುರಿತು ಸುನಂದಾ ಪ್ರಕಾಶ ಕಡಮೆ ಬರಹ
ಇತ್ತೀಚಿನ ದಿನಗಳಲ್ಲಿ ಮಾಧ್ಯಮ ರಂಗವು ಒಂದು ಪ್ರಭಾವೀ ಅಸ್ತೃವಾಗಿ ಸಮಾಜದಲ್ಲಿ ಮುನ್ನೆಲೆಗೆ ಬಂದಿರುವುದನ್ನು ನಾವು ಗಮನಿಸುತ್ತಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಲ್ಕನೆಯ ಅಂಗವೆಂದೇ ಕರೆಸಿಕೊಳ್ಳುವ ಈ ರಂಗವು ಯಾವ ರೀತಿಯ ಸಾಮಾಜಿಕ ಜವಾಬ್ದಾರಿ ಮತ್ತು ಬದ್ಧತೆಯನ್ನು ತೋರ್ಪಡಿಸಿ, ನಾಗರಿಕ ಸಮಾಜದ ಚಿಂತನೆಗಳನ್ನು ಯಾವ ವಿಸ್ತಾರದಲ್ಲಿ ತಿದ್ದಬೇಕು ಎಂಬ ಕುರಿತು ಇಲ್ಲಿ ಲೇಖಕರು ಆಳವಾದ ಮತ್ತು ಅಷ್ಟೇ ವೈಚಾರಿಕವಾದ ದೃಷ್ಟಿಕೋನದಿಂದ ಹಲವು ವಿಚಾರಗಳನ್ನು ಎತ್ತಿದ್ದಾರೆ.
ಇಂದಿನ ಮಾಧ್ಯಮಗಳು ಬಿಂಬಿಸುವ ಮಹಿಳೆಯರೆಂದರೆ, ಕೇವಲ ಸೇವಾನಿರತ ಮಮತಾಮಯಿ ಮತ್ತು ತ್ಯಾಗಮಯಿ ಪತ್ನಿ, ಬರಿಯ ಭೋಗವಸ್ತು ಮತ್ತು ಲಾವಣ್ಯವತಿಯಾದ, ಲೈಂಗಿಕ ಆಕರ್ಷಣೆಯುಳ್ಳ ಸಂಗಾತಿ, ವ್ರತ ನಿಯಮಗಳಲ್ಲಿ ಸಂಪ್ರದಾಯವಾದೀ ಜಾಹಿರಾತುಗಳಲ್ಲಿ ಪ್ರದರ್ಶನದ ವಸ್ತು, ಅಬಲೆ, ಅಶಕ್ತೆ, ಆರ್ಥಿಕವಾಗಿ ಪರಾವಲಂಬಿ, ವೇತನವಿಲ್ಲದೇ ದುಡಿವ ದಣಿವರಿಯದ ಮಹಿಳೆ.. ಇಂಥವೇ ವಿವಿಧ ರೂಪಗಳ ಮಹಿಳಾ ಪಾತ್ರಗಳನ್ನು ಮಾಧ್ಯಮಗಳು ವೈಭವೀಕರಿಸಿ ಪ್ರಸಾರ ಮಾಡಿದಾಗ ಪ್ರೇಕ್ಷಕ ವರ್ಗ ಹೇಗೆ ತನ್ನ ವೈಚಾರಿಕತೆಯನ್ನು ಬೆಳೆಸಿಕೊಳ್ಳಬಲ್ಲದು ಎಂಬ ಚರ್ಚೆಯೊಂದನ್ನು ಲೇಖಕರು ಇಲ್ಲಿ ಅತ್ಯಂತ ಕಾಳಜಿಯಿಂದ ಎತ್ತುತ್ತಾರೆ.
ಹೆಣ್ಣಿನ ಅಂಗ ಪ್ರದರ್ಶನದಿಂದಲೇ ಕೊಳ್ಳುಬಾಕ ಸಂಸ್ಕೃತಿಯನ್ನು ಉತ್ತೇಜಿಸುವ ಕ್ರಿಯೆ ಮಾಧ್ಯಮದಲ್ಲಿ ಇಂದು ಅವ್ಯಾಹತವಾಗಿ ನಡೆಯುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿಯೇ, ತುಂಬ ಜನಪ್ರಿಯ ಸಾಮಾಜಿಕ ಮಾಧ್ಯಮವಾದ ಚಲನಚಿತ್ರಗಳೂ ಇದನ್ನು ಮೀರುತ್ತಿಲ್ಲ, ಇವು ಮಹಿಳೆಯನ್ನು ಮೂಲಭೂತವಾಗಿ ಪುರುಷರೊಂದಿಗಿರುವ ಸಂಬಂಧಗಳ ಮೂಲಕವೇ ಪ್ರಧಾನವಾಗಿ ಚಿತ್ರಿಸುವುದನ್ನು ಬಿಟ್ಟು ಅವಳನ್ನು ಸ್ವತಂತ್ರ್ಯ ವ್ಯಕ್ತಿತ್ವವುಳ್ಳ, ಸಬಲೆಯಾಗಿ ಜೀವನ ನಡೆಸಬಲ್ಲ ಒಬ್ಬ ಶಕ್ತಿಯುತ ಮಹಿಳೆಯಾಗಿ ಬಿಂಬಿಸುವ ಚಲನಚಿತ್ರಗಳು ಬರಬೇಕು ಎಂಬ ಲೇಖಕರ ಆಶಯ ವಸ್ತುನಿಷ್ಠವಾದದ್ದು. ಮಹಿಳೆಯರ ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಸ್ತ್ರೀಪ್ರಧಾನ ಪಾತ್ರಗಳ ಚಿತ್ರಗಳು ಇತ್ತೀಚೆಗೆ ಬಾರದೇ ಇರುವ ಹಿನ್ನೆಲೆಯಲ್ಲಿ ನಾವು ಹಬ್ಬು ಸರ್ ಎತ್ತಿದ ವಿಚಾರವನ್ನು ಸ್ಥೂಲವಾಗಿ ಯೋಚಿಸಬಹುದಾಗಿದೆ.
ಕಳೆದ ನಲವತ್ತು ವರ್ಷಗಳ ಹಿಂದೆಯೇ ಯುನೆಸ್ಕೋದಲ್ಲಿ ನಡೆದ ಸಮ್ಮೇಳನವೊಂದರಲ್ಲಿ ಮಹಿಳಾ ಪ್ರಗತಿ ವಿರೋಧಿ ಧೋರಣೆಯ ಇಂಥ ಚಿತ್ರಗಳ ಕುರಿತು ಪ್ರಸ್ತಾಪಿಸಿ, ತಪ್ಪುಗಳನ್ನು ತಿದ್ದಿಕೊಳ್ಳುವ ಸಲಹೆಯನ್ನು ಚಿತ್ರರಂಗದ ಪ್ರಮುಖರಿಗೆ ವಿಶ್ವ ಚಲನಚಿತ್ರ ಮಂಡಳಿ ನೀಡಿದ ಸಂಗತಿಯನ್ನು ಕೂಡ ಲೇಖಕರು ಇಲ್ಲಿ ಸ್ಮರಿಸಿಕೊಳ್ಳುತ್ತಾರೆ. ಇದು ಮಾಧ್ಯಮಗಳ ಮೇಲಿರುವ ಸಾಮಾಜಿಕ ಹೊಣೆಗಾರಿಕೆಯನ್ನು ಮನದಟ್ಟು ಮಾಡಿಕೊಡುತ್ತದೆ. ಚಲನಚಿತ್ರಗಳು ಸಮಾಜದ ಕೖಗನ್ನಡಿಯೇ ಆದರೂ, ಒಂದು ದೃಶ್ಯರೂಪಕವು, ನಡೆಯುತ್ತಿರುವ ಸ್ತ್ರೀಶೋಷಣೆ ತಪ್ಪು ಎಂಬ ಆಶಯ ಹೊಮ್ಮುವಂತೆ ಬಿಂಬಿಸಬೇಕಿರುತ್ತದೆ. ವಿಶ್ವದ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರನ್ನು ಸಂಸ್ಕೃತಿಯ ಹೆಸರಿನಲ್ಲಿ ನಿಕೃಷ್ಟವಾಗಿ ಕಾಣುವುದು ಎಷ್ಟು ಸರಿ? ಹೀಗೆ ನಿಡಿದಾದ ವಿಷಯವಸ್ತುಗಳನ್ನು ಒಳಗೊಂಡ ಇಲ್ಲಿಯ ಬರಹಗಳ ನಿಲುವು, ಮಹಿಳಾ ಹೋರಾಟಗಳಿಗೆ ಇನ್ನೂ ಹೆಚ್ಚಿನ ಶಕ್ತಿಯನ್ನು ನೀಡಬಲ್ಲದು.
ವಿವಾಹವೇ ಹೆಣ್ಣಿನ ಅಂತಿಮಗುರಿ ಎಂಬ ಭಾವನೆ ಬೇರೂರಿದ ಸಮಾಜದಲ್ಲಿ, ಅಂಥ ಭಾವನೆಗಳನ್ನು ಹೋಗಲಾಡಿಸುವತ್ತ ಮಾಧ್ಯಮಗಳು ಪ್ರಚಾರ ನೀಡಬೇಕು ಎನ್ನುವ ಇಲ್ಲಿಯ ಲೇಖಕರ ಮಾತು ಮೆಚ್ಚುವಂಥದ್ದು.
ಅದಕ್ಕೂ ಮುಂದುವರೆಯುತ್ತ ಲೇಖಕರು ಮಹಿಳೆಯರ ಮೇಲೆ ನಡೆವ ದೌರ್ಜನ್ಯ ಪ್ರಮಾಣದ ಗಂಭೀರ ಸ್ವರೂಪವನ್ನು ಹೇಳುತ್ತ ‘ವಿಶ್ವದಲ್ಲಿ ಪ್ರತೀ ಇಪ್ಪತ್ತು ನಿಮಿಷಗಳಿಗೆ ಒಬ್ಬ ಮಹಿಳೆ ಲೈಂಗಿಕ ದೌರ್ಜನ್ಯಕ್ಕೂ ಮೂವತ್ನಾಲ್ಕು ನಿಮಿಷಗಳಿಗೆ ಒಬ್ಬ ಮಹಿಳೆ ಅತ್ಯಾಚಾರಕ್ಕೂ, ನಲವತ್ಮೂರು ನಿಮಿಷಗಳಿಗೆ ಒಬ್ಬ ಮಹಿಳೆ ಅಪಹರಣಕ್ಕೂ, ಪ್ರತೀ ತೊಂಬತ್ಮೂರು ನಿಮಿಷಗಳಿಗೆ ಒಬ್ಬ ಮಹಿಳೆ ಹತ್ಯೆಗೂ ಒಳಗಾಗುತ್ತಿದ್ದಾರೆ, ಒಂದು ಅಪರಾಧ ಬ್ಯೂರೋದ ಪ್ರಕಾರ ನಮ್ಮ ದೇಶದಲ್ಲಿ ಪ್ರತಿದಿನವೂ ತೊಂಬತ್ಮೂರು ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ, ಇಂಥ ಕಠಿಣ ಸಂದರ್ಭದಲ್ಲಿ ಮಾಧ್ಯಮವು ಯಾವ ರೀತಿಯಲ್ಲಿ ಮಹಿಳೆಯರ ದನಿಯಾಗಬೇಕಿದೆ?’ ಎಂಬ ಪ್ರಶ್ನೆಯನ್ನು ಮುಂದಿಡುತ್ತಾರೆ. ಇದು ಮಾಧ್ಯಮರಂಗ ನಿಜಕ್ಕೂ ಚಿಂತಿಸಬೇಕಾಗಿರುವ ಸಂಗತಿ.
ಅದೇ ಹೊತ್ತಿಗೆ, ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ನೂರು ಮಹಿಳೆಯರ ಪೈಕಿ ಒಬ್ಬ ಮಹಿಳೆ ಮಾತ್ರ ಪೊಲೀಸರಿಗೆ ದೂರು ಸಲ್ಲಿಸುತ್ತಿದ್ದಾಳೆ. ಹೀಗಿರುವಾಗ ಮಹಿಳಾ ರಕ್ಷಣೆ ಕಾನೂನುಗಳಿಂದ ನಾವು ಎಷ್ಟರ ಮಟ್ಟಿಗೆ ಪ್ರಯೋಜನ ಪಡೆದುಕೊಂಡಂತಾಯಿತು? ಇದಕ್ಕೇನು ಪರಿಹಾರ? ಇವೆಲ್ಲವೂ ಇಲ್ಲಿಯ ಬರಹಗಳಲ್ಲಿ ಸೂಕ್ಷ್ಮವಾಗಿ ಅಡಕವಾಗಿದ್ದು, ಮಾಧ್ಯಮಕ್ಕಿರುವ ಅಪಾರ ಹೊಣೆಗಾರಿಕೆಯನ್ನು ಜಾಗೃತಗೊಳಿಸುವಂತಿದೆ.
ಇದಲ್ಲದೇ ಹೆಣ್ಣುಮಕ್ಕಳ ಆರೋಗ್ಯ ಸಮಸ್ಯೆಯನ್ನು ಅವಲೋಕಿಸಿದರೆ, ಅಪೌಷ್ಟಿಕತೆ, ಬಾಣಂತಿಯರ ಆರೋಗ್ಯ, ಗರ್ಭಪಾತ, ಭ್ರೂಣಹತ್ಯೆ ಇಂಥವೆಲ್ಲ ವಿದ್ಯಮಾನಗಳಲ್ಲಿ, ಪ್ರತಿವರ್ಷ ಒಂದು ಲಕ್ಷ ಇಪ್ಪತ್ತು ಸಾವಿರ ಲಕ್ಷ ಮಹಿಳೆಯರು ಸಾವಿಗೀಡಾಗುವ ಪರಿಸ್ಥಿತಿ ಇದೆ, ಲಕ್ಷಾಂತರ ಮಹಿಳೆಯರಿಗೆ ತಮ್ಮ ಆರೋಗ್ಯದ ಕುರಿತು ಸಲಹೆ ಪಡೆಯಲು ಮನೆಯಿಂದ ಹೊರಹೋಗುವ ಸ್ವಾತಂತ್ರ್ಯವೇ ಇಲ್ಲವೆನ್ನುವ ಇಲ್ಲಿಯ ರಾಷ್ಟೀಯ ಸಮೀಕ್ಷೆಯೊಂದು ಮಹಿಳೆಯರ ಕಾರುಣ್ಯದ ಸ್ಥಿತಿಯನ್ನು ಕಾಣಿಸುತ್ತಿದೆ. ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಇತರ ಅಪರಾಧಗಳನ್ನು ವೖಭವೀಕರಿಸುವ ಮಾಧ್ಯಮಗಳ ಟಿ ಆರ್ ಪಿ ಹವ್ಯಾಸವು, ಅಂಥ ದೌರ್ಜನ್ಯಗಳ ಪ್ರಮಾಣ ಕಡಿಮೆ ಮಾಡುವ ಬದಲು ಇನ್ನಷ್ಟು ಹೆಚ್ಚಿಸುವ ರೀತಿಯಲ್ಲಿರುವುದು ವಿಷಾದನೀಯ.
ಚಲನಚಿತ್ರಗಳು ಸಮಾಜದ ಕೖಗನ್ನಡಿಯೇ ಆದರೂ, ಒಂದು ದೃಶ್ಯರೂಪಕವು, ನಡೆಯುತ್ತಿರುವ ಸ್ತ್ರೀಶೋಷಣೆ ತಪ್ಪು ಎಂಬ ಆಶಯ ಹೊಮ್ಮುವಂತೆ ಬಿಂಬಿಸಬೇಕಿರುತ್ತದೆ. ವಿಶ್ವದ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರನ್ನು ಸಂಸ್ಕೃತಿಯ ಹೆಸರಿನಲ್ಲಿ ನಿಕೃಷ್ಟವಾಗಿ ಕಾಣುವುದು ಎಷ್ಟು ಸರಿ? ಹೀಗೆ ನಿಡಿದಾದ ವಿಷಯವಸ್ತುಗಳನ್ನು ಒಳಗೊಂಡ ಇಲ್ಲಿಯ ಬರಹಗಳ ನಿಲುವು, ಮಹಿಳಾ ಹೋರಾಟಗಳಿಗೆ ಇನ್ನೂ ಹೆಚ್ಚಿನ ಶಕ್ತಿಯನ್ನು ನೀಡಬಲ್ಲದು.
ಹೀಗೆ ಈ ಕೃತಿಯಲ್ಲಿರುವ ಹದಿಮೂರು ಶೀರ್ಷೀಕೆಯಡಿ ಲೇಖಕ ಅರುಣಕುಮಾರ ಹಬ್ಬು ಅವರು ಹಲವು ಮೌಲಿಕ ಸಂಗತಿಗಳ ವಿಶ್ಲೇಷಣೆಯನ್ನು ಸವಿವರವಾಗಿ ನಡೆಸಿದ್ದಾರೆ. ‘ಸಾಮಾಜಿಕ ಜವಾಬ್ದಾರಿ ಮತ್ತು ಬದ್ಧತೆ ಎರಡನ್ನೂ ಹೊಂದಿರಬೇಕಾದ ಮಾಧ್ಯಮದ ವ್ಯಕ್ತಿ ಈ ಲೇಖಕ’ ಎಂದು ಕರೆದಿದ್ದಾರೆ ಈ ಕೃತಿಗೆ ಮುನ್ನುಡಿ ಬರೆದ ಇನ್ನೊಬ್ಬ ಹಿರಿಯ ಪತ್ರಕರ್ತ ಎಲ್. ಎಸ್ ಶಾಸ್ತ್ರಿಯವರು.
ಸೌದಿ ಅರೇಬಿಯಾದಲ್ಲಿ ಎಷ್ಟು ತಡವಾಗಿ ಮಹಿಳೆಗೆ ಮತದಾನದ ಹಕ್ಕು ಮತ್ತು ಕಾರು ಚಾಲನೆಯ ಹಕ್ಕು ನೀಡಿತು ಎಂಬುದರ ಕುರಿತು ಲೇಖಕರು ಇಲ್ಲಿ ನೆನಪಿಸುತ್ತಾರೆ.
ಇಲ್ಲಿಯ ವಿಷಯಗಳು ಸರ್ವಕಾಲಿಕವಾದದ್ದು. ಇಂದಿನ ಸಾಮಾಜಿಕ ಜಾಗೃತಿಯ ಪರಿಣಾಮವಾಗಿ ಸ್ತ್ರೀವಾದೀ ಚಳುವಳಿಗಳು ಹುಟ್ಟಿಕೊಂಡು, ಅದರಿಂದ ಪ್ರೇರೇಪಿತಗೊಂಡ ಸರಕಾರಗಳೂ ಮಹಿಳಾ ಶಿಕ್ಷಣ ಹಾಗೂ ಸುರಕ್ಷತೆಗೆ ಗಮನ ಕೇಂದ್ರೀಕರಿಸುತ್ತ ಬಂತು, ಮಹಿಳೆಯು ಸಮಾಜದ ಒಂದು ಅಂಗ ಎಂಬುದು ಅಂಬೇಡ್ಕರ್ ಶಕೆ ಆರಂಭಗೊಂಡಾಗಿನಿಂದ ಅನೇಕರ ಕಣ್ಣು ತೆರೆಸಲು ಯತ್ನಿಸುತ್ತಲೇ ಬಂದಿದೆ. ಅದಕ್ಕೆ ಪೂರಕವಾಗಿ ಹಬ್ಬು ಸರ್, ಇಲ್ಲಿ ಆಚಾರ್ಯ ಕೃಪಲಾನಿ ಹೇಳಿದ ಹೀಗೊಂದು ಮಾತನ್ನು ನೆನೆಯುತ್ತಾರೆ, ‘ಹಕ್ಕಿಗೆ ಒಂದೇ ರೆಕ್ಕೆಯಿಂದ ಹೇಗೆ ಹಾರಲು ಸಾಧ್ಯವಿಲ್ಲವೋ ಹಾಗೆಯೇ ಮಹಿಳೆಯ ಅಭಿವೃದ್ಧಿಯಾಗದೇ ಇದ್ದಂತಹ ಸಮಾಜ ಕೂಡ ಅಂಥದೊಂದು ಅಂಗವಿಕಲತೆಯಿಂದ ಬಳಲುತ್ತದೆ’ ಈ ಮಾತು ಮಹಿಳೆಯರ ಸಮಾನ ಹಕ್ಕುಗಳನ್ನು ಪ್ರತಿಪಾದಿಸುತ್ತದೆ.
ಈ ಹಿಂದೆ ಮಹಾತ್ಮಾ ಗಾಂಧಿಯವರು ಸಾಮಾಜಿಕ ಹೋರಾಟಗಳಲ್ಲಿ ಸ್ತ್ರೀಯರಿಗೆ ಅವಕಾಶ ನೀಡಿ ಕೆಲವೊಮ್ಮೆ ಅವರನ್ನೇ ಮುಂದಿಟ್ಟುಕೊಂಡು, ಅವರ ಶಕ್ತಿ ಸಾಮರ್ಥ್ಯದ ಮೇಲೆ ಬಿದ್ದಿರುವ ಬಂಡೆಗಳನ್ನು ಹೇಗೆ ಸರಿಸುವ ಪ್ರಯತ್ನ ಮಾಡಿದರು ಎಂಬುದರ ಬಗ್ಗೆಯೂ ಇಲ್ಲಿ ಲೇಖಕರು ಬೆಳಕು ಚೆಲ್ಲುತ್ತಾರೆ.
ಹೀಗೆ ಸಮಾಜದಲ್ಲಿ ಹೊಸ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಇಂದಿನ ಮಾಧ್ಯಮದ ಪಾತ್ರ ಹಿರಿದು ಮತ್ತು ಅಷ್ಟೇ ಜವಾಬ್ದಾರಿಯುತವಾದದ್ದು, ಇಲ್ಲಿ ಸಂಖ್ಯೆಯ ದೃಷ್ಟಿಯಿಂದ ಕಡಿಮೆಯಿದ್ದರೂ ನಮ್ಮ ಮಹಿಳೆಯರು ಪುರುಷರಿಗೆ ಯಾವುದಕ್ಕೂ ಕಡಿಮೆಯಿಲ್ಲದಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಅವರ ಸುತ್ತಲಿರುವ ಸಮಸ್ಯೆಗಳ ಪಟ್ಟಿಯೂ ದೊಡ್ಡದಿದೆ.
ಇದೀಗ ಹೊಸದಾಗಿ ಮುನ್ನೆಲೆಗೆ ಬಂದಿರುವ, ಮನುಷ್ಯನ ವಿಕೖತ ಬುದ್ಧಿಯ ಅಭಿವ್ಯಕ್ತಿಯಂತಿರುವ ಟ್ರೋಲ್ ಜಾಲತಾಣದ ಕುರಿತೂ ಲೇಖಕರು ತಮ್ಮ ಬರಹದ ವಿಸ್ತಾರವನ್ನು ಹೆಚ್ಚಿಸಿಕೊಂಡಿದ್ದಾರೆ, ಹಸಿದ ಕ್ರೂರ ಪ್ರಾಣಿಯೊಂದು ಅಡಗುದಾಣದಲ್ಲಿ ಕುಳಿತು ಸಿಕ್ಕ ಆಹಾರವನ್ನು ಅತ್ಯಂತ ಕ್ರೂರವಾಗಿ ವಿಚಿತ್ರವಾಗಿ ಹಿಂಸಿಸಿ ತನ್ನ ಹಸಿವನ್ನು ನೀಗಿಸಿಕೊಳ್ಳುವಂತೆ, ಮನುಷ್ಯ ತನ್ನ ಮಾನಸಿಕ ವಿಕಲ್ಪತೆಯನ್ನು ತಣಿಸಿಕೊಳ್ಳಲು ಇನ್ನೊಬ್ಬ ವ್ಯಕ್ತಿಯನ್ನು ಅತ್ಯಂತ ಕಟುವ್ಯಂಗ್ಯದಿಂದ ಸಂಕಟಪಡಿಸಿ ಸಂಭ್ರಮಿಸುತ್ತಿದ್ದಾನೆ. ಇಂಥ ವಿಚಾರಗಳು ಇಲ್ಲಿ ತುಂಬ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಆಧುನಿಕ ಸಂವಹನ ಮಾಧ್ಯಮದ ದುರ್ಬಳಕೆಗಳಲ್ಲಿ ಇದೂ ಒಂದು.
ಕೃತಿಯುದ್ದಕ್ಕೂ ಹಬ್ಬು ಸರ್ ಕೈಗೊಂಡ ಅಪಾರವಾದ ಅಧ್ಯಯನಶೀಲತೆ ಪ್ರತಿಯೊಂದು ವಿಭಾಗದಲ್ಲೂ ಒಂದು ಸ್ಪಷ್ಟತೆ ಮತ್ತು ನಿಖರತೆಯನ್ನು ಹಿಡಿದಿಟ್ಟಿದೆ. ಇದರಲ್ಲಿ ಮಹಿಳೆಗೆ ಸಂಬಂಧಪಟ್ಟ ವಿಚಾರಗಳಷ್ಟೇ ಅಲ್ಲದೇ ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ಇತರ ಸಂಗತಿಗಳೂ ಅಡಕವಾಗಿದ್ದು ಓದುವ ಹಂತದಲ್ಲಿ ಅರಿವಿಗೆ ಬರುತ್ತದೆ.
ಮಹಿಳಾ ಸಬಲೀಕರಣದ ಅಭ್ಯಾಸಿಗಳಿಗೆ ಇದೊಂದು ಉಪಯುಕ್ತ ಪುಸ್ತಕ. ಮಾಧ್ಯಮ ಪದವಿ ಅಥವಾ ಸ್ನಾತಕೋತ್ತರ ವಿಷಯಗಳಿಗೆ ಈ ಕೃತಿ ಪಠ್ಯವಾದರೆ, ಭವಿಷ್ಯದಲ್ಲಿ ಖಂಡಿತಾ ಕೆಲವರಾದರೂ ಸಾಮಾಜಿಕ ಜವಾಬ್ದಾರಿಗಳನ್ನು ಅರಿತ ಉತ್ತಮ ಪತ್ರಕರ್ತರು ಹೊರಬಂದಾರು.
(ಕೃತಿ: ‘ಮಹಿಳೆ ಮತ್ತು ಮಾಧ್ಯಮ – ಒಂದು ಅವಲೋಕನ’, ಲೇಖಕರು: ಅರುಣಕುಮಾರ ಹಬ್ಬು, ಪ್ರಕಾಶಕರು: ಆದಿತ್ಯ ಪಬ್ಲಿಕೇಶನ್, ಬೆಲೆ: 215/-)
ಕಥೆಗಾರ್ತಿ ಸುನಂದಾ ಕಡಮೆ ಉತ್ತರ ಕನ್ನಡ ಜಿಲ್ಲೆ, ಅಂಕೋಲಾ ತಾಲ್ಲೂಕಿನ ಅಲಗೇರಿ ಗ್ರಾಮದವರು. ಸದ್ಯ ಹುಬ್ಬಳ್ಳಿ ನಿವಾಸಿ. ಪುಟ್ಟ ಪಾದದ ಗುರುತು, ಗಾಂಧಿ ಚಿತ್ರದ ನೋಟು, ಕಂಬಗಳ ಮರೆಯಲ್ಲಿ, ತುದಿ ಮಡಚಿಟ್ಟ ಪುಟ ಇವರ ಪ್ರಕಟಿ ನಾಲ್ಕು ಕಥಾಸಂಕಲನಗಳು. ಬರೀ ಎರಡು ರೆಕ್ಕೆ, ದೋಣಿ ನಡೆಸೊ ಹುಟ್ಟು, ಹೈವೇ ನಂ. 63, ಎಳೆನೀರು (ಕಾದಂಬರಿಗಳು). ಪಿಸುಗುಡುವ ಬೆಟ್ಟಸಾಲು, ಪಡುವಣದ ಕಡಲು, ಕತೆಯಲ್ಲದ ಕತೆ ಇವು ಮೂರು ಪ್ರಬಂಧ ಸಂಕಲನಗಳು ಹಾಗೂ ಸೀಳುದಾರಿ ಎಂಬ ಕವನ ಸಂಕಲನಗಳೂ ಪ್ರಕಟವಾಗಿವೆ.
ಸುನಂದಾ ಕಡಮೆಯವರು ಅರುಣಕುಮಾರ ಹಬ್ಬು ಅವರು ಬರೆದ ಮಹಿಳೆ ಮತ್ತು ಮಾಧ್ಯಮ ಪುಸ್ತಕದ ಕುರಿತು ಸಮೀಚನ ಅವಲೋಕನ ಮಾಡಿದ್ದಾರೆ. ಈ ಗ್ರಂಥವು ಎತ್ತಿದ ಬಹುಮುಖ್ಯ ಅಂಶ ಮಹಿಳಾ ಸಬಲೀಕರಣದಲ್ಲಿ ಮಾಧ್ಯಮಗಳ ಪಾತ್ರ, ಇಂದಿನ ಸ್ತ್ರೀಯರ ಹೀನಾಯ ಸ್ಥಿತಿ, ಇದರಿಂದುಂಟಾಗುವ ಸಾಮಾಜಿಕ ಅದಮತೋಲನ, ಆರ್ಥಿಕ ಹಿನ್ನಡೆ, ಹೆಚ್ವಾಗುತ್ತಿರುವ ಅತ್ಯಾಚಾರಗಳು, ಹಿಂಸೆ, ಕ್ರೌರ್ಯ ದಬ್ಬಾಳಿಕೆ ಇವುಗಳ ಚಿತ್ರಣಗಳ ಕುರಿತಾದ ವಿಷಾದ ಮತ್ತು ಸ್ತ್ರೀಯರನ್ನು ಸುಶಿಕ್ಷಿತರನ್ನಾಗಿ ಮಾಡಬೇಕಾದ ಅನಿವಾರ್ಯತೆ ಇವೆಲ್ಲವುಗಳನ್ನೂ ಈ ಗ್ರಂಥ ಅನಾವರಣಗೊಳಿಸುತ್ತದೆ ಎಂದು ಸುನಂದಾ ಕಡಮೆಯವರು ಸೊಗಸಾಗಿ ಬರೆದಿದ್ದಾರೆ. ಇಂತ ಒಂದು ಪುಸ್ತಕ ಪತ್ರಿಕೋದ್ಯಮ ಶಿಕ್ಷಣದ ಪಠ್ಯ ಎಕಾಗಬಾರದು? ಲೇಖಕ ಅರುಣಕುಮಾರ ಹಬ್ಬು ಅವರಿಗೂ ಕೃತಿಯನ್ನು ಪರಿಚಯಿಸಿದ ಸುನಂದಾ ಕಡಮೆಯವರಿಗೂ ಹೃತ್ಪೂರ್ವಕ ಧನ್ಯವಾದ.
ಥ್ಯಾಂಕ್ಯೂ ಸರ್
ಥ್ಯಾಂಕ್ಯೂ ಸರ್