ಒಂದೇ ಮಾದರಿಯ ಕವಿತೆಗಳ ಕಟ್ಟನ್ನು ಇಡೀ ಸಂಕಲನದುದ್ದಕ್ಕೂ ಪೋಣಿಸಿದ ಕವಯಿತ್ರಿ ಅವಸರದ ಗಾಡಿಯನೇರದೆ ನಿಧಾನಕ್ಕೆ ಚಕ್ಕಡಿ ಹತ್ತಿದವರು. ಕಾಲುಹಾದಿಯಲ್ಲಿ ಕಡಲ ಕಂಡವರು. ಅವರೇ ಹೇಳಿಕೊಂಡಂತೆ ಮೂವತ್ತು ವರ್ಷದ ಬದುಕಿನ ಅನುಸಂಧಾನದ ಪ್ರತಿಫಲವಾಗಿ, ಕಂಡುಂಡ ಅನುಭವದ ಕಡಲನ್ನೇ ಕಡೆಕಡೆದು ನಿಲ್ಲಿಸಿದ ಐವತ್ತೇಳು ಕವಿತೆಗಳ ಗುಚ್ಛವಿದು. ಸರಳವಾದ ಭಾಷೆಯಲ್ಲಿ ತೆರೆದುಕೊಳ್ಳುವ ಕವಿತೆಗಳು ಸಹಜವಾಗಿ ಓದುಗರ ಎದೆಗಿಳಿಯುತ್ತವೆ.
ಸಾವಿತ್ರಿ ಮಜುಮದಾರ ಕವನ ಸಂಕಲನ “ನಾರಿಪದ್ಯ”ದ ಕುರಿತು ಎಂ.ಡಿ. ಚಿತ್ತರಗಿ ಬರಹ
ಶತಮಾನದ ಸುಕ್ಕು ಬಿಕ್ಕುಗಳಿಗೆ ಕಣ್ಣು ಕಿವಿಯಾಗುವ ಇಲ್ಲಿನ ಕಾವ್ಯದ ಸಾಲುಗಳು ವರ್ತಮಾನ ಬದುಕಿನ ಪುರುಷಾಧಿಕಾರದ ತಗ್ಗು-ದಿಣ್ಣೆಗಳಿಗೆಲ್ಲ ತಣ್ಣನೆಯ ಮುಲಾಮು ಹಚ್ಚಲು ವಿರಾಮವಿಲ್ಲದೆ ಪ್ರಯತ್ನಿಸುತ್ತವೆ. ಪುರಾಣ, ಇತಿಹಾಸ, ಮಹಾಕಾವ್ಯಗಳ ಆದರ್ಶವೆಂದೆಣಿಸುವ ಸ್ತ್ರೀ ಮಾದರಿಗಳ ಬುಡದ ಕತ್ತಲೆಯನ್ನು, ಸಹಜ ಬದುಕಿನ ನೂರಾರು ಪಾತ್ರಗಳ ಒಡಲ ಸಂಕಟಗಳನ್ನು ಮುಖ್ಯ ಭೂಮಿಕೆಯಲ್ಲಿಟ್ಟು ಮುಖಾಮುಖಿಯಾಗುವ ಕವಿತೆಗಳು ಪುರುಷನ ಅಹಮಿಕೆಯ ಕೋಟೆಯನ್ನೊಡೆದು, ಇಡೀ ವ್ಯವಸ್ಥೆಗೆ ಸಾಣೆ ಹಿಡಿಯುತ್ತವೆ. ಎಲ್ಲ ಕವಿತೆಗಳು ಬಂಡಾಯದ ಬಾವುಟದ ನೆರಳಲ್ಲೇ ಕಾಣಿಸಿದರೂ ಪುರುಷ ವಿರೋಧದ ನೆಲೆಯಲ್ಲಿ ತಳವೂರದೆ ಸಮತೆಯ ಬದುಕಿಗೆ ಮತ್ತೆ ಮತ್ತೆ ಒತ್ತಾಯಿಸುತ್ತವೆ. ಆಕ್ರೋಶದ ವೇಷ ತೊಟ್ಟು ಕಿಡಿಕಾರದೆ ತಣ್ಣಗಿನ ಸಾತ್ವಿಕತೆ ಎದ್ದುಕಂಡರೂ ಅಲ್ಲಲ್ಲಿ ಖಡ್ಗ ಝಳಪಿಸುತ್ತವೆ. ಒಟ್ಟು ನೆಲೆಯಲ್ಲಿ ಹಿಂದಣ ಹೆಜ್ಜೆಗಳ ತಪ್ಪು-ಒಪ್ಪುಗಳಿಗೆ ಕನ್ನಡಿ ಹಿಡಿದು, ಬುದ್ಧಿ-ಭಾವಗಳ ಮನೆಯ ತೊಳೆಯುತ್ತವೆ. ಲಿಂಗಾಧಾರಿತ ಭೇದದ ಬೇರನು ಕತ್ತರಿಸುತ್ತಾ ಸಾಂಗತ್ಯದ ಬದುಕಿಗೆ ರಚ್ಚೆ ಹಿಡಿಯದೆ ಸಹಜಮಾರ್ಗಕೆ ದೀಪವಿಡುತ್ತವೆ. ಈ ದಿಸೆಯಲ್ಲಿ ಕೊಪ್ಪಳದ ಕಥೆಗಾರ್ತಿ, ಕವಯಿತ್ರಿ ಹಾಗೂ ಲೇಖಕಿ ಸಾವಿತ್ರಿ ಮಜುಮದಾರರ ನಾರಿಪದ್ಯಗಳ ಸಂಕಲನ ಉತ್ತಮ ಕವನಸಂಕಲನಗಳ ಸಾಲಿನಲ್ಲಿ ನಿಲ್ಲಬಹುದಾದ ಕೃತಿ.
ಒಂದೇ ಮಾದರಿಯ ಕವಿತೆಗಳ ಕಟ್ಟನ್ನು ಇಡೀ ಸಂಕಲನದುದ್ದಕ್ಕೂ ಪೋಣಿಸಿದ ಕವಯಿತ್ರಿ ಅವಸರದ ಗಾಡಿಯನೇರದೆ ನಿಧಾನಕ್ಕೆ ಚಕ್ಕಡಿ ಹತ್ತಿದವರು. ಕಾಲುಹಾದಿಯಲ್ಲಿ ಕಡಲ ಕಂಡವರು. ಅವರೇ ಹೇಳಿಕೊಂಡಂತೆ ಮೂವತ್ತು ವರ್ಷದ ಬದುಕಿನ ಅನುಸಂಧಾನದ ಪ್ರತಿಫಲವಾಗಿ, ಕಂಡುಂಡ ಅನುಭವದ ಕಡಲನ್ನೇ ಕಡೆಕಡೆದು ನಿಲ್ಲಿಸಿದ ಐವತ್ತೇಳು ಕವಿತೆಗಳ ಗುಚ್ಛವಿದು. ಸರಳವಾದ ಭಾಷೆಯಲ್ಲಿ ತೆರೆದುಕೊಳ್ಳುವ ಕವಿತೆಗಳು ಸಹಜವಾಗಿ ಓದುಗರ ಎದೆಗಿಳಿಯುತ್ತವೆ. ಛಂದಸ್ಸಿನ ಮಾದರಿಗಳಂತೆ ಕಾಣಿಸಿದರೂ ವೈವಿಧ್ಯಮಯ ಪಾದಸರಣಿಯ ಇಲ್ಲಿನ ಕವಿತೆಗಳಲ್ಲಿ ದ್ವಿಪದಿಯ ಬಾಹುಳ್ಯವಿದೆ. ಅಲ್ಲಲ್ಲಿ ಆಡುಭಾಷೆಯ ಸೊಗಡಿದೆ. ರಾಮಾಯಣ-ಮಹಾಭಾರತಗಳ ನೆರಳಿದೆ. ಕನ್ನಡದ ಕವಿಪುಂಗವರ ಕಾವ್ಯಪ್ರಭಾವದ ನೆರಳು-ಬೆಳಕೂ ಗೋಚರಿಸುತ್ತದೆ. ಕೆಲವು ಪದಗಳು ಮತ್ತೆ ಮತ್ತೆ ಪಾತ್ರ ಬದಲಿಸಿ ಎದುರಾದರೂ ಎಲ್ಲಿಯೂ ಸೋಲದೆ ಹೇಳಬೇಕಾದುದನ್ನು ಸಶಕ್ತವಾಗಿ ನಿರೂಪಿಸುತ್ತವೆ. ಕವಯಿತ್ರಿ ಕಂಡ ಬದುಕಿನ ಓಟ-ನೋಟಗಳೆಲ್ಲ ಪದಸರಣಿಯ ಮಾತಂತೆ ಕವಿತೆಗಳಾಗಿ ಅರಳಿದ ಇವು ತೀರಾ ಸೂಕ್ಷ್ಮವಾಗದೆ, ಕ್ಲಿಷ್ಟವೂ ಎಂದೆನಿಸದೆ ಓದುಗರನ್ನು ಎದುರಿಗೆ ಕೂರಿಸಿ, ಗಕ್ಕನೇ ಕುಡಿಸುವ ಪಾನಕದಂತಿವೆ; ಟೀ-ಕಾಫಿಯಂತಿವೆ; ಹೆಚ್ಚಾಗಿ ಕಷಾಯದಂತಿವೆ.
ಹೆಸರೇ ಹೇಳುವಂತೆ ಇದು ನಾರಿಯರ ಒಡಲೊಡಲಿನ ಕತ್ತಲಿಗೆ ಹೊಸ ಯುಗಾದಿ ಎನಿಸಿದರೂ ಇಲ್ಲಿ ಬೆಲ್ಲಕ್ಕಿಂತ ಬೇವಿನ ಪ್ರಮಾಣವೆ ಹೆಚ್ಚು. ಇಲ್ಲಿ ಸೀತೆಯ ಕಣ್ಣೀರಿದೆ; ದ್ರೌಪದಿಯ ವ್ಯಥೆಯಿದೆ; ಅಹಲ್ಯೆಯ ಮೂಕರೋಧನವಿದೆ. ಗಾಂಧಾರಿಯ ಕಣ್ಕಟ್ಟಿನೊಂದಿಗೆ ಭಾನುಮತಿಯ ತೇಪೆಹಾಕಿದ ಸೂತ್ರವಿದೆ; ಪಾತ್ರವಿದೆ; ಮಾಸಿದ ಬಣ್ಣಗಳಿವೆ. ಹಗ್ದ÷್ದವಜೊತೆಗೆ ಅಕ್ಕ ಶೋಧಿಸಿದ ಮಲಾಮೂ ಇದೆ. ಆಧುನಿಕತೆಯ ಗಾಳಿಯುಂಡ ವರ್ತಮಾನದ ಅಂಗಳದಲ್ಲೂ ಮುತ್ತುಕಟ್ಟಿದ ಅವ್ವ, ಅಪ್ಪನಿಲ್ಲದ ಮಗಳು, ಮನೆಯ ತೊಳೆಯುವ ದಾಸಿ, ಕಣ್ಣೀರ ಕುಡಿಯುವ ಮಡದಿಯರೆಲ್ಲರ ಸಿಕ್ಕು-ಸಿಕ್ಕಾದ ಕಥನಗಳಿವೆ. ಬೆತ್ತಲಾಗುವ ಅವಳು, ಕತ್ತಲಲಿ ನರಳುವ ಇವಳು, ಸೆರಗು ಜಾರಿಸುವ ಆಕೆ, ಅತ್ಯಾಚಾರದ, ಶೋಷಣೆಯ, ಕುತಂತ್ರಕೆ ಬಲಿಯಾದ ಅವಳ ಸಂತತಿಯ ಕುಡಿಗಳ ನರಳಿಕೆಗಳು ಹಾಸಿ, ಹೊದ್ದುಕೊಂಡು ಮಲಗಿವೆ. ಜೊತೆಗೆ ಸಿಡಿಲಾಗುವ ಕಾಳಿ, ಕಡಲಾದ ಅಕ್ಕ, ಬಯಲಾದ, ಬೆಳಕಾದ, ಅವಳಾದ ಅವಳ ಹೊಸ ಚಿತ್ರಗಳೂ ಸೇರಿ ನಾರಿಪದ್ಯಗಳಾಗಿ ಅಳುತ್ತ, ನಗುತ್ತ, ಬುಸುಗುಡುತ್ತ, ಸಿಡಿಯುತ್ತ ಕೊನೆಗೆ ನಿರಮ್ಮಳವಾಗಿ ಎಲ್ಲರ ಹೆಗಲ ಮೇಲೆ ಕೈಹಾಕಿ ಜೊತೆಗೂಡಿ ಹೆಜ್ಜೆ ಹಾಕುತ್ತವೆ.
ಬಹುಪಾಲು ಕವಿತೆಗಳಲ್ಲಿ ಗಂಡೆಜಮಾನಿಕೆಯ ಕ್ರೌರ್ಯದ ಬೆಂಕಿಯಲ್ಲಿ ಶತಮಾನಗಳಿಂದ ಸುಡುತ್ತಲೇ ಸಾಗಿದ ಹೆಣ್ಣಿನ ಕತ್ತಲೆಯ ಪ್ರತಿನಿಧಿಯಾಗಿ ನಿರೂಪಿಸುವ ಕವಯಿತ್ರಿಯು ಗಂಡನ್ನು ಎದುರಿಗಿಟ್ಟುಕೊಂಡು ಸಂಭಾಷಿಸುವಂತೆ ಚಿತ್ರಣಗೊಂಡಿದೆ. ಗಂಡು-ಹೆಣ್ಣಿನ ನಡುವಿನ ಅಸಮಾನತೆ, ದಾರ್ಷ್ಯ್ಟ, ದೌರ್ಜನ್ಯ, ಶೋಷಣೆಗಳೇ ಕಣ್ಣೀರಿನ ಸಹಸ್ರ ಧಾರೆಗಳಾಗಿ, ತಡೆತಡೆದು ಬಡಿವ ಮಳೆಯಾಗಿ, ಸುನಾಮಿಯ ಅಲೆಗಳಾಗಿ ಮಾತಿಗಿಳಿಯುತ್ತವೆ; ಹೂಂಕರಿಸುತ್ತವೆ; ಕೆನ್ನೆಗೂ ಬಾರಿಸುತ್ತವೆ. ಕೊನೆಗೆ ಕೈಹಿಡಿದುಕೊಂಡೆ ಭರವಸೆಯ ಹೆಜ್ಜೆಗಳಾಗುತ್ತವೆ. ಇಲ್ಲವೇ ಕೈ ಹಿಡಿವ ಅನಿವಾರ್ಯತೆಯನ್ನಿಟ್ಟು ಬಿಟ್ಟು ಹೋಗುತ್ತವೆ.
ಒಂದೇ ಮಾದರಿಯ ಕವಿತೆಗಳು ಏಕತಾನತೆ ಉಂಟುಮಾಡಿದಂತೆ ಭಾಸವಾದರೂ ವಿಷಯ, ಸನ್ನಿವೇಷ ವೈವಿಧ್ಯತೆ ಹಾಗೂ ನೇರ ನಿರೂಪಣೆಯ ಸುಕೃತಿ-ವಿಕೃತಿಗಳೆಲ್ಲ ಓದುಗರ ಅಂತರಾಳಕ್ಕಿಳಿದು, ಮುನ್ನೋಟಕ್ಕೆ ದಾರಿಯಾಗುತ್ತವೆ. ಎಲ್ಲ ಕವಿತೆಗಳು ಕಳಶವಾಗದಿದ್ದರೂ ಹೆಚ್ಚಿನ ಕವಿತೆಗಳು ಧ್ವನಿಪೂರ್ಣವಾಗಿವೆ. ಹೆಣ್ಣಿನ ಶತಮಾನಗಳ ಆತ್ಮಕಥೆಯಷ್ಟೇ ಅಲ್ಲದೇ ವರ್ತಮಾನದ ಅಡುಗೆಮನೆಯ ರಾಯಭಾರಿಯಂತಿವೆ. ಹೊಸಬೆಳಕಿನ ಸಾರಥಿಯಾಗಿ, ವಿಶ್ವಮಾನವತೆಯ ಮುಖವಾಣಿಯಾಗಿ ಗಂಭೀರವಾಗಿ ನಡೆದು ಹೋಗುತ್ತವೆ. ಆ ದೃಷ್ಠಿಯಿಂದ ಒಂದೊಳ್ಳೆಯ ಕವನ ಸಂಕಲನವೆಂದು ಹೆಮ್ಮೆಯಿಂದ ಹೇಳಬಹುದು.
ಇಲ್ಲಿನ ಪ್ರತೀ ಕವನಗಳು ವಿಭಿನ್ನವಾಗಿ ಎದುರುಗೊಳ್ಳುತ್ತವೆ. ನದಿಯಾಗಿ, ಬೆಳಕಾಗಿ, ಬತ್ತಿ-ತೈಲವಾಗಿ, ಕತ್ತಲು-ಬೆಳಕಾಗಿ, ಏಕಾಂತದ ಕಡಲಾಗಿ ಏನನ್ನೂ ಬಚ್ಚಿಡದೆ ಎಲ್ಲವನ್ನೂ ಬಿಚ್ಚಿಟ್ಟು, ಆರ್ಭಟಿಸಿ, ತಣ್ಣಗೆ ಬಯಲಾಗುತ್ತವೆ. ಬದುಕನ್ನು ಪ್ರಕೃತಿಯ ನೆರಳಾಗಿ ನೋಡುತ, ಸಿದ್ಧಮಾದರಿಯ ಸರಪಳಿಯ ಕಟ್ಟುಗಳನ್ನು ಕಳಚಿ, ಹೊಸಬೆಳಕನು ತೋರಿ, ಸತ್ಯದರ್ಶನಗೈದು, ಆಹ್ವಾನವಿಟ್ಟು ಎದ್ದುಹೋಗುತ್ತವೆ; ಕಾಲದ ಬಿರುಕುಗಳನೆಲ್ಲ ತೊಳೆದು, ತಣ್ಣನೆಯ ಗಾಳಿ ಬೀಸಿ, ಮಲಾಮು ಹಚ್ಚುತ್ತವೆ; ಹೊಸ ಮನ್ವಂತರಕೆ ಹಾದಿಯಾಗುತ್ತವೆ. ಕೆಲವು ಕವಿತೆಗಳ ಕಡೆಗೊಮ್ಮೆ ದೃಷ್ಠಿ ಹರಿಸುವುದಾದರೆ-
“ಇರಿವ ಕೋಡನು ಮುರಿದು
ಮೇಲೇರಿ ಹೊರ ಬರುವ
ಹಾಲೆದೆಯ ಶೌರ್ಯವೆ ನನ್ನ ಕವನ”
ಆರಂಭದಲ್ಲೇ ಎದುರಾಗುವ ‘ನನ್ನ ಕವನ’ದ ಮೇಲಿನ ಈ ಹಾಡು ಗಂಡಾಳ್ವಿಕೆಯನ್ನು ಹೆಡೆಮುರಿ ಕಟ್ಟುವುದರ ಜೊತೆಗೆ ಆ ಕೂಪದಿಂದ ಹೊರಬಂದು ಸ್ವತಂತ್ರ ಬದುಕನ್ನು ಕಟ್ಟಿಕೊಳ್ಳುವ, ನಿರಾಕರಿಸಲ್ಪಟ್ಟ ನಿಜಸ್ವಾತಂತ್ರ್ಯದ ಬಾಳ್ವೆಗೆ ತೆರೆದುಕೊಳ್ಳುವ ಬಂಡಾಯದ ಬಿಚ್ಚುಗತ್ತಿಯ ಮೊನಚು ಮೊದಲ ಪುಟಕೆ ಇದಿರಾಗಿ ಇಡೀ ಕೃತಿಗೆ ಭಾಷ್ಯ ಬರೆದಂತಿದೆ.
‘ನೀನು ನನ್ನಂತಾಗು, ನನಗೆ ಸಮನಾಗು’
‘ನನ್ನದೇ ಹಾದಿಯಲಿ ಬಂದು ಸೇರು’
ಎನ್ನುವ ಸಾಲುಗಳು ಪುರುಷನ ಅಹಮಿಕೆಯ ಎದೆಗೆ ನೇರವಾಗಿ ಇರಿದಂತಿವೆ. ಇತಿಹಾಸದ ಪುರುಷಾಧಿಕಾರದ ಮೇಲು-ಕೀಳಿನ ಪುಟವನ್ನೇ ತಿರುಗಿಸಿ ಇಟ್ಟಂತಿದೆ. ತಾ ಮೇಲೆಂದು ಬೆನ್ನು ಚಪ್ಪರಿಸಿಕೊಂಡ ಪುರುಷನಿಗೆ ಸಮನಾಗಿ ನಿಲ್ಲುವ ಇರಾದೆಯಲ್ಲ. ಆತನಿಗಿಂತ ಸೃಷ್ಠಿ-ದೃಷ್ಟಿಗಳೆಲ್ಲದರಲ್ಲೂ ಮೇಲಿರುವ ತನಗೆ ಸಮನಾಗುವ ಪಂಥಾಹ್ವಾನದ ಜೊತೆಗೆ ಕರೆದೊಯ್ಯುವ ಅವಳ ದೊಡ್ಡಗುಣ, ‘ಅವಳಂತಾಗುವ ತಪಸ್ಸು’ ಗಮನ ಸೆಳೆಯುತ್ತದೆ. ಪುರುಷನ ಹಂಗು ತೊರೆದು ‘ನಾನು ನಾನಾದೆ’ ಎನ್ನುವುದಿದೆಯಲ್ಲ. ಅದು ಪುರುಷನಿಗೆ ಸಾಧ್ಯವೇ? ಎಂಬ ಸಂಶಯದ ಜೊತೆಗೆ ‘ಜೊತೆಗಿದ್ದೂ ಏಕಾಂತದಿ ಸಾಗುವ’ ‘ಉಂಡು ಉಪವಾಸಿ’ಯಂತಹ ಅವಳ ಬದುಕು ಅವಳಿಗಷ್ಟೇ ಸಾಧ್ಯವೆನ್ನುವ ಸತ್ಯವನ್ನು ಅಹಮಿಕೆಯಲ್ಲಿ ಸಾರದೆ ಅವನೊಂದಿಗೆ ಜೊತೆ ಸಾಗಿ ಒಳಗೊಳ್ಳತ್ತದೆ.
“ಹೆಣ್ಣು ಬಿಟ್ಟು ಗಂಡಿಗೊಂದು ಅರ್ಥವಿಹುದೆ ಜಗದಲಿ
ಲಿಂಗಭೇದ ಬೇಡ ಗೆಳೆಯ ಸಮತೆ ಇರಲಿ ಬಾಳಲಿ”
ನಿಯಮ ಚೌಕಟ್ಟುಗಳ ಭ್ರಮೆಯ ಬದುಕನ್ನು ದಾಟಿ ವಾಸ್ತವತೆಯ ಸತ್ಯದರ್ಶನವನ್ನು ಬಿಚ್ಚಿಡುವ ಈ ಸಾಲುಗಳು ಗಂಡುಗೋಪುರವನ್ನು ಛಿದ್ರವಾಗಿಸುತ್ತವೆ. ಆಕ್ರೋಶದ ಬೆಂಕಿಯುಗಳದೆ ಗೆಳೆಯನೆಂದು ಸಂಬೋಧಿಸಿ ಮೀಮಾಂಸೆಯ ಕಾಂತಾಸಮ್ಮಿತೆಯಂತೆ ದಾರಿ ತೋರುವ ಸಾಲುಗಳು ಇವರ ಕೃತಿಯ ಒಟ್ಟು ಆಶಯವಾಗಿಯೂ ಗಮನ ಸೆಳೆಯುತ್ತವೆ.
“ಈಗ ನಾವೆಲ್ಲ ಒಂದಾಗಿದ್ದೇವೆ, ಶತಪದಿ ತುಳಿಯುತ್ತಿದ್ದೇವೆ
ನಮ್ಮೊಡನೆ ಹೆಜ್ಜೆ ಹಾಕು ಬಾ, ನಿನ್ನ ನಡಿಗೆಗೂ ಅರ್ಥ ಬಂದೀತು”
ಇಲ್ಲಿನ ಅನೇಕ ಕವಿತೆಗಳು ಸ್ತ್ರೀವಾದದ ಪಡಿಯಚ್ಚಿನಂತೆ, ನೆರಳು-ಬೆಳಕಂತೆಯೂ ಕಾಣುತ್ತವೆ. ‘ಒಂದಾಗುವ, ಜಾಗೃತಗೊಳ್ಳುವ, ಸರಳುಗಳ ಕಿತ್ತೊಗೆಯುವ ಹಾಗೂ ಹಕ್ಕನ್ನು ಪಡೆಯುವ ಮಾರ್ಗ’ದಲ್ಲಿನ ಯಶಸ್ಸನ್ನು ಕವಿತೆ ಹೆಮ್ಮೆಯಿಂದ ಹೇಳಿಕೊಳ್ಳುತ್ತದೆ. ಅಷ್ಟಕ್ಕೆ ನಿಲ್ಲದೇ ಅರ್ಥ ಕಳೆದುಕೊಂಡ ‘ಸಪ್ತಪದಿ’ಯನ್ನು ದಾಟಿ ಸಮತೆಯ ಹೊಸಬೆಳಕಿನ ‘ಶತಪದಿ’ ತುಳಿದದ್ದನ್ನು ಹೇಳಿ ಸಂಭ್ರಮಿಸುತ್ತದೆ. ಅದರೊಂದಿಗೆ ಅವನ ನಡಿಗೆಗೂ, ಬದುಕಿಗೂ ಅರ್ಥ ಬರಲೆಂಬ ಅವಳ ಉದಾರತೆ, ಕರೆದುಕೊಂಡು ಹೋಗುವ ಜೀವನಪ್ರೀತಿ ನೇರವಾಗಿ ಎದೆಗಿಳಿದುಬಿಡುತ್ತದೆ.
“ಎಲ್ಲ ಅಹಂಮಿನ ಕೋಟೆಯೊಡೆದು, ಪುರುಷ ಪರುಶವನಾಚೆ ಎಸೆದು
ಕೂಡಿ ಬಾಳುವ ಸಮತೆ ಪಡೆದು, ಬಂದು ಬಿಡು ನೀ ಮನುಜನಾಗಿ”
ಸಾಹಿತ್ಯವೆನ್ನುವುದು ಮನುಷ್ಯತ್ವದ ಬುನಾದಿಯ ಮೇಲಿದ್ದಾಗ ಮಾತ್ರ ಅದು ಕಾಲದ ಗೆರೆಯನ್ನು ದಾಟಿ ಬದುಕಬಲ್ಲದು. ಶರಣರ, ದಾಸರ, ತತ್ವಪದಕಾರರ ಹಾಡುಗಳು ಯಾವ ಕಾಲಕ್ಕೂ ಶುದ್ಧಚಿನ್ನ. ಈ ‘ಅಹಂ’ ಎನ್ನುವುದು ಎಲ್ಲೆಡೆ ಜಾಗೃತವಾಗಿ ಮನುಷ್ಯತ್ವವನ್ನು ಸೆರಮನೆಯಲ್ಲಿಟ್ಟಿದೆ. ಗಂಡೆಂಬ ಅಹಮಿಕೆ ಮಾತ್ರವಲ್ಲದೇ ಎಲ್ಲ ಅಹಮಿಕೆಗಳಿಂದ ಪಾರಾಗಿ ನಿಜ ಮನುಷ್ಯನಾಗುವ ತುರ್ತು ಗಂಡಿಗಷ್ಟೇ ಅಲ್ಲ, ಎಲ್ಲರಿಗೂ ಅತ್ಯಗತ್ಯವಾಗಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಚಿಂತಕ ರೂಸೋ ಹಾಗೂ ಕುವೆಂಪುರವರ ವಿಶ್ವಮಾನವತೆಯನ್ನು ಇಲ್ಲಿನ ಸಾಲುಗಳು ಸಾಕ್ಷೀಕರಿಸಿವೆ.
“ನನ್ನಾಕೆ ಅದನ್ನೆಲ್ಲ ಪ್ರಶ್ನಿಸಲೇ ಇಲ್ಲ, ಆರ್ಭಟಿಸಲಿಲ್ಲ; ಪ್ರತಿಭಟಿಸಲಿಲ್ಲ;
ಏಕೆಂದರೆ ನನ್ನಾಕೆ ನಿಜವಾದ ಗರತಿ”
ಸಿದ್ಧಮಾದರಿಯ ಕೆಲವು ತಂತ್ರಗಳಿಂದ ಅವಳನ್ನು ಕಟ್ಟಿಹಾಕಿ ಬೇಕಾಬಿಟ್ಟಿಯಾಗಿ ಬೀದಿಬಸವನಂತೆ ಬದುಕಿಯೂ ಅವಳನ್ನೇ ಶಂಕಿಸಿ ಶಿಕ್ಷಿಸುವ ಪುರುಷ ದಾರ್ಷ್ಟ್ರ್ಯವನ್ನು ಪ್ರಶ್ನಿಸದಂತಹ ರಾಜಕಾರಣವನ್ನು ವ್ಯಂಗ್ಯವಾಗಿ ಬಯಲುಗೊಳಿಸುತ್ತದೆ. ಒಂದೆರಡು ಮಾತಿಗೆ, ಬಿರುದಿಗೆ ಮರುಳಾಗುವ ಅವಳನ್ನೂ ಸೂಕ್ಷ್ಮವಾಗಿ ಹೀಗಳೆದು ಜಾಗೃತಿಗೆ ಒತ್ತಾಯಿಸುತ್ತದೆ.
‘ಹೊಸ್ತಿಲಿಲ್ಲದ ಬಯಲು ಹೊಕ್ಕೆ ನಾನಿಂದು’
ಅತ್ಯಂತ ಧ್ವನಿಪೂರ್ಣವಾದ ಸಾಲಿದು. ಗಂಡು ಹಾಕಿದ ಗೆರೆಗಳೊಳಗೆ ನಲುಗಿ ಬಸವಳಿದ ಅವಳಿಗೆ, ಅನುಮತಿಯೊಂದಿಗೆ ಮೆಲ್ಲನೆ ಉಸಿರಾಡಿದ ಅವಳಿಗೆ ಬೇಕಿರುವುದು ಸ್ವಾತಂತ್ರ್ಯ. ಅದನ್ನು ಯಾರಿಂದಲೂ ಪಡೆಯುವ ಅಗತ್ಯವಿಲ್ಲವೆಂದರಿತ ಅವಳೇ ಪಡೆದುಕೊಂಡಿದ್ದಾಳೆ; ‘ಕುಂಕುಮದ ವಿಧಿಬರಹ ತಿದ್ದಿ ಬರೆದ’ ಅವಳು ಯಾವ ಕಟ್ಟುಕಟ್ಟಳೆಗಳಿಲ್ಲದ ಬದುಕಿಗೆ ತೆರೆದುಕೊಂಡಿದ್ದಾಳೆ. ಇದು ಬರೀ ಕವಿತೆಯಲ್ಲಾಗದೇ ವಾಸ್ತವದಲಿ ಸಾಕಾರಗೊಳ್ಳುವ ಅಗತ್ಯವಿದೆ.
‘ನಾನೊಂದು ಶಿಲ್ಪ, ಅವನಿಗೆ ಭಗ್ನಗೊಳಿಸುವ ತವಕ’
ಪುರುಷನ ವಿಕೃತ ಕಾಮನೆಗಳನ್ನು ಸಾಕ್ಷೀಕರಿಸುವ ಸಾಲಿದು. ವಿವಿಧ ಪ್ರತಿಮೆಗಳಲ್ಲಿ ಸಾಗುವ ಅವಳ ಬದುಕಿನ ವೈವಿಧ್ಯಮಯ ಬಣ್ಣಗಳನ್ನು ಹೊಸಕಿ ಹಾಕುವ, ಮೂಸಿ ನೋಡುವ, ಕಚ್ಚಿ ತಿನ್ನುವ ವಿಕೃತತೆಯನ್ನು ಅನಾವರಣಗೊಳಿಸಿ ಸುಮ್ಮನಾಗದ ಕವಿತೆ ಅವಳನ್ನು ಎಲ್ಲವನು ಒಳಗೊಳ್ಳುವ ನದಿಯಾಗಿ, ಭುವಿಯಾಗಿ, ಬದಲಾಗಿ ಅವನಿಗೆ ಬೆರಗನ್ನುಂಟು ಮಾಡುವ ಇರಾದೆಯಲ್ಲಿ ಕವಿತೆ ಕೊನೆಗೊಳ್ಳುತ್ತದೆ.
“ನಮ್ಮ ಗೋರಿಯಿಂದ ಬರಲಿ ಭಾವೈಕ್ಯದ ಹಾಡು”
ಧರ್ಮ ಜಾತಿಗಳ ಕೆಸರೆರಚಾಟ ಅಂದಿಗೂ ಇಂದಿಗೂ ನಿತ್ಯನೂತನ. ಎಂದೂ ಮುಗಿಯದ ಅಮಾಯಕರ ಮರಣ ಶಾಸನ! ಗುಡಿ-ಚರ್ಚು-ಮಸೀದಿಗಳ ದಾಟಿ, ಸಂತ-ಮಹಾಂತರನ್ನೆಲ್ಲ ಗುಡಿಸಿ, ಬಣ್ಣ-ಬಟ್ಟೆಗಳ ಉರುಳಲ್ಲಿ ನಲುಗುತ್ತಿರುವ ವರ್ತಮಾನದ ಹಾಡಿಗೆ, ಮರ್ಯಾದಾಹತ್ಯೆಯ ಗೋಳಿಗೆ, ಹೆಣದ ಮೇಲೂ ವಿಜೃಂಬಿಸುವ ವಿಕೃತಿಗೆ ಸಿದ್ಧೌಷಧಿಯಾಗಿ ಅಪ್ಪಿಕೊಳ್ಳುತ್ತದೆ ಮೇಲಿನ ಕವಿತೆ.
‘ಈ ಐದು ದುರುಳರನು ಕುಕ್ಕಿ ಒಲೆಯೊಳಗಿಕ್ಕಿ
ಬೀದಿಗೆ ಬಂದಿರುವೆ’
ಬಂಧನದ ಬದುಕಿಗೆ ಬೀಗಹಾಕಿ, ವ್ಯವಸ್ಥೆಗೆ ಸೆಡ್ಡು ಹೊಡೆದು, ಗಂಡೆದೆಗೆ ಗೋರಿಕಟ್ಟಿದ ಹನ್ನೆರಡನೇ ಶತಮಾನದ ಅಕ್ಕನನ್ನು ನೆನಪಿಸುತ್ತಾ ಪುರುಷನ ವಿಕೃತ ಅವತಾರಗಳನ್ನು, ಹೆಣ್ಣಿನ ಮೇಲೆಸಗುವ ಕುತಂತ್ರಿಗಳನ್ನು, ಮೌನವಾಗಿ ಮುದ್ರೆಯೊತ್ತುವ ಸಮಾಜವನ್ನು ಆಕ್ರೋಶದಿ ಕುಕ್ಕಿ ಸ್ವತಂತ್ರಳಾಗುವ ಹೆಬ್ಬಯಕೆಯನ್ನು ಕವಯಿತ್ರಿ ಚಿತ್ರಿಸುತ್ತಾಳೆ.
“ಪುರುಷ ಶ್ರೇಷ್ಠತೆಯ ವ್ಯಸನ ನಿಮ್ಮ ಬಾಳಲಿ ಇಲ್ಲ
ಪ್ರಾಣಿ ಸಂಕುಲವೇ ನಿಮಗೆ ಸಂಗಾತಿಯಾಗಿ ಬರುವೆ”
ಗಮನ ಸೆಳೆಯುವ ಸಾಲುಗಳಿವು. ತಾನೆನ್ನುವ ಭ್ರಮೆಯಲ್ಲಿ ಹೆಣ್ಣನ್ನು ಕಿತ್ತು ತಿನ್ನುವ ನಾಡ ಜೀವಿಯಾದ ಪುರುಷನಿಗಿಂತ ಕಾಡು ಪ್ರಾಣಿಗಳೆ ವಾಸಿಯೆನಿಸುವ ಮಾತು ಅತ್ಯಂತ ಮೊನಚಾದುದು. ಯಾವ ವ್ಯಸನಗಳಿಲ್ಲದೇ ಪರೋಪಕಾರಿಯಾಗಿ ಬದುಕುವ ಪ್ರಕೃತಿಯ ಪಾಠವೇ ನಮಗೆ ಮಹಾಕಾವ್ಯ. ಅಕ್ಷರ, ಮಾತು, ವಿಜ್ಞಾನ, ತಂತ್ರಜ್ಞಾನಗಳ ಅಮಲಿಗಿಂತ ನಿರುಮ್ಮಳವಾಗಿ ಬದುಕುವ ಜೀವರಾಶಿಗಳ ಸಾಂಗತ್ಯವೇ ಸೂಕ್ತವೆನ್ನುವ ಪಾಠ ಇಂದಿನ ಅನಿವಾರ್ಯತೆಗಳಲ್ಲೊಂದು.
“ದೀಪ ಹಚ್ಚುತ್ತಿದ್ದೇನೆ
ನನ್ನೊಡನಿದ್ದು ನನ್ನವರಾಗದೆ ನನ್ನಂತಾಗದ
ಇವರಿಗೆ ವಿದಾಯ ಹೇಳಲು”
ಬಹು ಸೊಗಸಾದ ದೀಪವಿದು. ಗಂಡಸಿನ ಎಲ್ಲ ತೆವಲುಗಳನ್ನು, ಕ್ರೌರ್ಯದ ಹೀಚು-ಪೀಚುಗಳನ್ನು ಶತಮಾನಗಳಿಂದ ಸಹಿಸಿದ ಅವಳು ಇದೀಗ ಅವೆಲ್ಲವನು ಗಂಟುಕಟ್ಟಿ ಮೂಲೆಗಟ್ಟಿ, ತೊಳೆದು, ಜಾಡಿಸಿ ಒಣಗಿಸಲು ದೀಪ ಹಚ್ಚುತ್ತಿದ್ದಾಳೆ; ಉರಿಯ ಉಗುಳುತ್ತಿದ್ದಾಳೆ. ಎಲ್ಲವನುಂಡೂ ಜೊತೆಯಾಗದ ಸಮನಾಗದ ಅವನ ದಾರಿಗೆ ಕೊನೆಯ ಮೊಳೆ ಜಡಿಯುತ್ತಿದ್ದಾಳೆ. ಇಲ್ಲಿ ನಿಸಾರ್ ಅಹಮದರ ‘ನಿಮ್ಮೊಡನಿದ್ದು ನಿಮ್ಮಂತಾಗದೆ’ ಕವಿತೆ ತಟ್ಟನೇ ನೆನಪಿಗೆ ಬರುವಂತಿದೆ.
“ಕಳಚಿ ಬಿಡು ಮುಖವಾಡ
ಇಬ್ಬರೊಂದೆ ಜೋಡ
ಕಾವ್ಯಹಣತೆಗೆ ಹೆಣ್ಣು ಬೆಳಕು ನೋಡ”
ಲಿಂಗರಾಜಕಾರಣ ಸಾಹಿತ್ಯವನೂ ಬಿಟ್ಟಿಲ್ಲ. ಇಡೀ ಮಹಿಳಾ ಸಾಹಿತ್ಯವನು ಅವಲೋಕಿಸಿದಾಗ ಕಾವ್ಯ, ಕಥೆ ಮಾತ್ರವಲ್ಲದೆ ಎಲ್ಲ ಮಹಿಳಾ ಸಾಹಿತ್ಯವನು ಅಡುಗೆಮನೆ ಸಾಹಿತ್ಯವೆಂದು ತಲೆಮರೆಸಲಾಗಿತ್ತು. ಹೆಣ್ಣಿಲ್ಲದೆ ಕಾವ್ಯವರಳಿತೇ? ಕಾವ್ಯದಲಿ ಹೆಣ್ಣಿಗೆ ತುಸು ಜಾಗ ಬೇಡವೇ? ನವರಸ-ಧ್ವನ್ಯಾದಿಗಳಲಿ ಹೆಣ್ಣಿಲ್ಲದೆ ಪೂರ್ಣವಾಯಿತೆ? ಎಂಬೆಲ್ಲ ಪ್ರಶ್ನೆಗಳನಿಟ್ಟು ಕೊನೆಗೆ ಕಾವ್ಯಕ್ಕೆ, ಬದುಕಿಗೆ, ಪರಿಪೂರ್ಣತೆಗೆ ಹೆಣ್ಣಿನ ಬೆಳಕಿನ ಅನಿವಾರ್ಯತೆಯನ್ನು ಕವಿತೆ ನೆನಪಿಸುತ್ತದೆ. ಮುಖವಾಡದ ಬದುಕನ್ನು ಕಳಚಿಬಿಡುತ್ತದೆ.
“ಕೈ ಹಿಡಿದು ತೊರೆದು ಹೊರ ನಡೆದ ನರರೆ. ಅಪರಾಧ ನಿಮ್ಮ ನಡಿಗೆ
ಪ್ರಕೃತಿ ಸಹಜ ಅರಳಿರುವ ಹೂವು ಹೊರಳುವುದು ಸೂರ್ಯನೆಡೆಗೆ”
ಪುರಾಣ-ಇತಿಹಾಸದ ಋಷಿಮುನಿಗಳ ದೋಷವನೆಲ್ಲ ಹೆಣ್ಣಿನ ಮೇಲೇರಿದ ಮೋಸಕೆ ಉತ್ತರವಾಗುತ್ತದೆ ಕವಿತೆ. ಸ್ತ್ರೀ ನಡೆಯನ್ನು ಸಮರ್ಥಿಸಿಕೊಳ್ಳುವ ಕವಯಿತ್ರಿ ಗಂಡಿನ ಕಪ್ಪುಚುಕ್ಕೆಗಳನ್ನು ಮೇಲಿಟ್ಟು, ಪ್ರಕೃತಿ ಸಹಜತೆಯನ್ನು ಹೆಣ್ಣಿಗಿಟ್ಟು ಪುರಾಣದ ಕಪ್ಪಿಗೂ ಬೆಳಕ ಹಚ್ಚುತ್ತಾರೆ.
‘ಹೆಣ್ಣಿಗಾಯ್ಕೆಯು ಇಲ್ಲ’
ಈ ಸಾಲು ಇಂದಿನ ಬದುಕನ್ನು ಪ್ರಶ್ನಿಸುತ್ತದೆ. ಅನರ್ಹನಾದ ಗಂಡಸಿಗೆ ಆಯ್ಕೆಗಿಳಿದ್ದರೆ, ಅರ್ಹಳಾದ ಹೆಂಗಸಿಗೆ ಆಯ್ಕೆಗಳಿಲ್ಲವೆಂಬುದು ಘನಘೋರವಾದರೂ ಸತ್ಯ. ಮದುವೆಯ ವಿಚಾರಗಳಲ್ಲಿ ಹೆಣ್ಣನ್ನು ಸರಕಿನಂತೆ, ಬೆಕ್ಕು-ನಾಯಿಗಳಂತೆ, ಪ್ರಾಣಿಗಳಂತೆ ಬಿಂಬಿಸುವ ಈ ವ್ಯವಸ್ಥೆಯ ಜಡತ್ವಕ್ಕೆ ಕವಿತೆ ಮೌನವಾಗಿ ಪ್ರತಿಭಟಿಸುತ್ತದೆ. ವ್ಯಂಗ್ಯವಾಗಿ ಸಮಾಜಕ್ಕೆ, ಪುರುಷನಿಗೆ ಮರ್ಮಾಘಾತನ್ನುಂಟುಮಾಡುತ್ತದೆ.
“ಮೇಲು ಕೀಳಿನ ವಿಷ ಅವನ ತುಂಬ
ಸ್ವಾತಂತ್ರ್ಯ ಸಮತಾ ಭಾವ ನನ್ನ ಬಿಂಬ”
ಗಂಡು-ಹೆಣ್ಣಿನ ವ್ಯಕ್ತಿತ್ವದ ವೈರುಧ್ಯಗಳನ್ನು ಸರಳವಾಗಿ ಬಿಚ್ಚಿಡುವ ಕವಿತೆಯು ನಮಗೆ ಗಂಡಸಿನ ರಕ್ಷಣೆಯ ಅಗತ್ಯವೂ ಬೇಡ; ಸಾಂತ್ವನದ ಸಂತೆಯೂ ಬೇಡ; ಅಕ್ಷರದ ಬೆಳಕಿನೊಂದಿಗೆ ಸ್ವಾತಂತ್ರ್ಯದ ಸಮತೆ ಬೇಕಿದೆ ಎಂದು ಒತ್ತಾಯಿಸುತ್ತದೆ. ಇಬ್ಬರನೂ ಜೊತೆಗಿಟ್ಟು ಸಮತೆಯ ಬಾಳ್ವೆಗೆ ಎಲ್ಲ ಕವಿತೆಗಳು ಒತ್ತಾಯಿಸುತ್ತವೆ.
ಹೆಣ್ಣಿನ ಬದುಕಿನ ವಿವಿಧ ಪಾತ್ರಗಳನ್ನೆಲ್ಲ ಬಿತ್ತರಿಸುವ ಸಾವಿತ್ರಿಯವರು ತಣ್ಣಗಿನ ಭಾಷೆಯಲ್ಲಿ ಬಂಡಾಯದ ಬಾವುಟವನ್ನು ಹಾರಿಸಿದ್ದರೂ ಕೆಲವೊಮ್ಮೆ ಭಾಷೆ ಕೆಂಡವಾಗಿ ಪ್ರಜ್ವಲಿಸಿದೆ. ಹೆಣ್ಣಿನ ಅಸಹಾಯಕತೆಯನ್ನು ಬಂಡವಾಳವಾಗಿಸಿಕೊಂಡು ಅವಳ ಬದುಕನ್ನು ನರಕಸದೃಶವನ್ನಾಗಿಸುವ ಪುರುಷರನ್ನು ‘ಉಚ್ಛಜಾತಿಯ ಹುಚ್ಚುನಾಯಿ’ಯೆಂದು ಛೇಡಿಸುತ್ತಾರೆ. ಇಷ್ಟಕ್ಕೆ ಸುಮ್ಮನಾಗದೆ ಗಟಾರದ ಕ್ರಿಮಿಯೆಂದೂ, ಜೊಲ್ಲುಬುರುಕನೆಂದೂ, ಕಚ್ಚೆಹರುಕನೆಂದೂ ಲೇಖನಿಯ ಖಡ್ಗ ಝಳಪಿಸುತ್ತಾರೆ. ಮತ್ತೊಂದು ಕವಿತೆಯಲ್ಲಿ ಸುರಸುಂದರಿಯರನ್ನೇ ಅರಸುವವರ ಗುಣಗಾನ ಮಾಡುತ್ತ – ಬೋಳುತಲೆ ಭೋಜ, ಬೊಚ್ಚುಬಾಯಿಯ ಬೋರ, ಸೊಟ್ಟಗಾಲಿನ ಸುಬ್ಬ, ಇದ್ದಲ ಬಣ್ಣದ ಭರಮಣ್ಣರ ವಂಶಾವಳಿಯನ್ನೇ ನೇರವಾಗಿ ಜಾಲಾಡುತ್ತಾರೆ. ‘ಸಭ್ಯತೆಯ ಪಾಠಮಾಡಿ ಸೀರೆಯ ಸಂದಿಯಲ್ಲಿ ಸೊಂಟ ನೋಡುವ’ ಕಳ್ಳಬೆಕ್ಕುಗಳ ಕುತ್ತಿಗೆಯ ಪಟ್ಟಿಗೆ ಕೈಹಾಕುತ್ತಾರೆ.
ವಿವಿಧ ಪಾತ್ರಗಳಲ್ಲಿ ಹೆಣಗಾಡಿ, ಬಸವಳಿದು ಬದುಕಿಗೆಲ್ಲ ಬಣ್ಣವಾಗುವ ಅವಳು ಇತಿಹಾಸ-ಪುರಾಣದ ತುಂಬೆಲ್ಲ ಪುರುಷನಿಗೆ ಹೆಗಲಾದವಳು; ಹೆಜ್ಜೆಗೆ ಗೆಜ್ಜೆಯಾದವಳು. ಚರಿತ್ರೆಯ ದಾರಿಗುಂಟ ಜೊತೆಗಿದ್ದರೂ ದಾಖಲಾಗದೇ ಉಳಿದ ಅವಳ ಬಗೆಗಿನ ಮರುಕವು ಇಡೀ ವ್ಯವಸ್ಥೆಯನ್ನು ವ್ಯಂಗ್ಯವಾಗಿ ತಿವಿಯುತ್ತದೆ. ಪುರುಷನ ಕ್ರೌರ್ಯಗಳಿಂದ ತಾಳ್ಮೆಯ ಕಟ್ಟೆಯೊಡೆದು ಕಾಳಿಯಾಗುತ್ತಾಳೆ. ಅವಳ ಆಕ್ರೋಶ ಬೆಂಕಿಯಾಗುವ ಪರಿಯನ್ನು ‘ಕಾಳಿ ಹರಿದಾಳೊ ಗುಳದಾಳಿ, ಒಗದಾಳೋ ಗಂಡನ ಮಾರಿಗೆ’ ಎಂಬ ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿ ಸಿಡಿಯುವ ಕವಯಿತ್ರಿ ಪುರುಷನಿಗೆ ಎಚ್ಚರಿಕೆಯ ಗಂಟೆಯನ್ನು ಬಾರಿಸುತ್ತಾಳೆ.
ಹೆಣ್ಣಿನ ಮೇಲೆ ಮಣಭಾರದ ಹೊರೆಯಿತ್ತ ವ್ಯವಸ್ಥೆಯನ್ನು ದಂಡಿಸಲು ಹಿಂಜರಿಯದ ಕವಯಿತ್ರಿಯು ‘ಮನು ಹೇಳಿದಂತೆ ನೀನೇಕೆ ಕೇಳಿದೆ? ಎಂದು ಹೆಣ್ಣನ್ನೇ ಪ್ರಶ್ನಿಸಿದರೂ ಖಂಡತುಂಡವಾಗಿ ‘ಮನುಶಾಸ್ತ್ರವನು ಒದ್ದು ನೀ ಹೊರಗೆ ಬಾ’ ಎಂದುಪದೇಶಿಸಿ ಗೆಳೆಯನೊಂದಿಗೆ ಹೊಸಶಾಸ್ತ್ರವನು ಕೂಡಿ ಬರೆಯುವ ಅವಳ ಜಾಣ್ಮೆ ಮೆಚ್ಚುವಂಥದ್ದು. ಸಾವಿತ್ರಿಯವರ ನಡೆ ಬರೀ ಪುರುಷನ ವಿರುದ್ದವಲ್ಲ; ವ್ಯವಸ್ಥೆಯ, ಗಂಡೆಜಮಾನಿಕೆಯ ಹಾಗೂ ಹೆಣ್ಣಿನ ಮೇಲಿನ ಶೋಷಣೆಯ ವಿರುದ್ಧದ ಬಂಡಾಯವಾಗಿದೆ. ಹೊಸಹಾದಿಯನು ಪುರುಷನ ಜೊತೆಯಲ್ಲಿಯೇ ಹುಡುಕುವ ಕವಯಿತ್ರಿಯು ಬದುಕನ್ನು ವಾಸ್ತವಿಕತೆಯ ಪ್ರಜ್ಞೆಯಲ್ಲಿ ನೋಡುತ್ತಾರೆ.
ಅನೇಕ ಅನಿಷ್ಠ ಪದ್ಧತಿಗಳೆಲ್ಲವೂ ಹೆಣ್ಣಿನ ಸುತ್ತಲೇ ಕೇಂದ್ರೀಕೃತವಾಗಿರುವುದು ಗಂಡೆಜಮಾನಿಕೆಯ ಪ್ರತೀಕವಲ್ಲದೆ ಮತ್ತೇನು? ಕಾಲದ ಮರೆಯಿಂದ ಹೇರಿಕೊಂಡು ಬಂದ ಅನಿಷ್ಠಗಳ ಕಡೆಗೂ ನೋಟ ಬೀರುವ ಕವಯಿತ್ರಿಯು ವೇಶ್ಯಾವಾಟಿಕೆ, ಮುತ್ತು ಕಟ್ಟುವಿಕೆ, ದೇವದಾಸಿ ಪದ್ಧತಿ, ಮೂಢಾಚರಣೆಗಳು, ಸಂಪ್ರದಾಯಗಳನ್ನು ನೇರಾನೇರವಾಗಿ ಪ್ರಶ್ನಿಸುತ್ತಾರೆ. ಇಡೀ ವಿಶ್ವಕ್ಕೆ ವ್ಯಾಪಿಸಿರುವ ಜಾತಿಪದ್ಧತಿಯನ್ನು ರಕ್ಕಸಿಗೆ ಹೋಲಿಸುತ್ತ, ಮಹಾತ್ಮರ, ಸಂತರ, ಶರಣರ ಬದುಕಿನ ಮೇಲೆ ಸೆಟೆದು ನಿಂತು ವಾತಾವರಣವನ್ನೆ ಕಲುಷಿತಗೊಳಿಸಿ, ಮಾನವತೆಯನ್ನು ಬಂಧನದಲ್ಲಿಟ್ಟ ವ್ಯವಸ್ಥೆಯ ಬಗೆಗೆ ಪ್ರಶ್ನಿಸುವ ಸಾವಿತ್ರಿಯವರು ಭಾವೈಕ್ಯತೆಯ ಮಂತ್ರಮೂಲವನ್ನು ಮುನ್ನೆಲೆಗೆ ತಂದು ನಿಲ್ಲಿಸುತ್ತಾರೆ. ‘ಏಕಾಂಗಿಯಾದರೂ ಸೆರಗು ಸರಿಸಿದ ನೆನಪು ರಣಹದ್ದಿನಂತೆ ಸದಾ ಕುಕ್ಕುವ’ ಮುತ್ತು ಕಟ್ಟಿಸಿಕೊಂಡವಳ ಮೂಕರೋಧನವು ನಿರಂಜನರ ‘ಕೊನೆಯ ಗಿರಾಕಿ’ಯನ್ನು, ಅಕ್ಬರ್ ಕಾಲಿಮಿರ್ಚಿಯವರ ‘ದೇವ್ರ ಮಗಳ’ನ್ನು ಜೊತೆಜೊತೆಯಾಗಿ ತಂದು ನಿಲ್ಲಿಸುತ್ತದೆ.
ಅವಳ ಪ್ರತಿಭೆಯನ್ನು ಕಡೆಗಣಿಸಿ, ಸೀಮಿತ ಚೌಕಟ್ಟುಗಳಲ್ಲಿ ಬಂಧಿಸಿಟ್ಟ ವ್ಯವಸ್ಥೆಯ ಬಗೆಗೆ ಹೆಚ್ಚಿನ ಕವಿತೆಗಳು ಮಾತಾಡುತ್ತವೆ; ಬುಸುಗುಡುತ್ತವೆ. ನಿರ್ದಿಷ್ಟ ಪಾತ್ರಗಳಲ್ಲಿ ಉಸಿರುಗಟ್ಟಿದ ಆಕೆ ಇಂದು ಗೆರೆ ದಾಟಲೇಬೇಕಾದ ಅನಿವಾರ್ಯತೆಯಲ್ಲಿದ್ದಾಳೆ. ಅವನು ಅವಳಿಗೆ ಅನಿವಾರ್ಯನಲ್ಲ. ಸ್ವತಂತ್ರವಾಗಿ, ಅವಳಾಗಿ, ಬಯಲಾಗಿ ಬದುಕುವ ಹಂಬಲದಲ್ಲಿ ಅಕ್ಕ ನೆರವಾಗುತ್ತಾಳೆ. ಆದರೂ ಅವನನ್ನು ಕಡೆಗಣಿಸದೆ ‘ಬದುಕು ಇಬ್ಬರಿಗೂ ಎಲ್ಲ’ ವೆಂದುಲಿದು ಸಹಪಯಣಿಗನನ್ನಾಗಿ ಕರೆದುಕೊಂಡು ಹೋಗುವ, ಬಾಳು ಹಸನಾಗಬೇಕೆಂಬ ಸದಾಶಯದ ಕವಿತೆಗಳು ಬದುಕಿನ ಸಾಮರಸ್ಯದ ಪಾಠವನ್ನು ಮತ್ತೆ ಮತ್ತೆ ಹೇಳುತ್ತವೆ. ಇದುವರೆಗಿನ ಸಿದ್ಧಮಾದರಿಯ ಚಿತ್ರಪಾತ್ರಗಳ ಕೃತಿಯ ಮುಖಪುಟವನ್ನು ಬದಲಿಸುತ್ತವೆ.
ಇಷ್ಟೆಲ್ಲ ಕವಿತೆಗಳನ್ನು ನೋಡಿದ ಮೇಲೆ ಎಲ್ಲ ಪುರುಷರು ಕಾಮುಕರೇ? ಎಲ್ಲ ಗಂಡಂದಿರು ಹುರಿದು ಮುಕ್ಕುವವರೇ? ಪುರುಷರೆಲ್ಲ ಅತ್ಯಾಚಾರಿಗಳೇ? ಎಂಬ ಪ್ರಶ್ನೆಗಳು ಮೂಡದಿರದು. ಹಾಗಿದ್ದರೆ ಮಾನವೇ ಕುಲವೇ ನಾಶವಾಗಿರುತ್ತಿತ್ತು. ಹಾಗೆಯೇ ಎಲ್ಲಾ ಸ್ತ್ರೀಯರು ಸಾತ್ವಿಕರೇ? ಎಂಬ ಪ್ರಶ್ನೆಯೂ ಬಂದು ಹೋಗುತ್ತದೆ. ಎಲ್ಲ ಗಂಡಂದಿರು ವ್ಯಾಘ್ರಗಳಲ್ಲ; ಹೆಂಡತಿಯರೆಲ್ಲ ಜಿಂಕೆಗಳಲ್ಲವಾದರೂ ಪುರುಷ ಪಾರುಪತ್ಯದ ಕೆಲವರ ವಿಕೃತಿಗಳನ್ನು, ನೋಡಿ ಸುಮ್ಮನಿರುವ, ಸೊಪ್ಪುಹಾಕುವ ಸಮಾಜದ ಧೋರಣೆಗಳನ್ನು ಎಂದೂ ಕ್ಷಮಿಸಲಾಗದು. ‘ಪ್ರೀತಿಸಿದವರು’ ಶೀರ್ಷಿಕೆಯ ಕವಿತೆಯು ಪ್ರೀತಿಸಿದ ಜೋಡಿಗಳೆಲ್ಲವೂ ದೂರಾಗಲು ಅವನೇ ಕಾರಣವೆನ್ನುವ ಮಾತನ್ನು ಒಪ್ಪಲಾಗದು. ವರ್ತಮಾನದ ಒಟ್ಟು ಬದುಕನೆಲ್ಲ ಗಮನಿಸಿದಾಗ ಇದರಲ್ಲಿ ಅವನಿಗಿಂತ ಅವಳ ಪಾಲೇ ಹೆಚ್ಚೆನಿಸುತ್ತದೆ. ವಿಷಯದ ಪುನರಾವರ್ತನೆಗಳು ಏಕತಾನತೆಯನ್ನು ಉಂಟು ಮಾಡಿದಂತೆನಿಸಿದರೂ ಬಹುಮುಖ್ಯವಾದ ಕವಿತೆಗಳನ್ನೊಳಗೊಂಡ ಕೃತಿಯೆಂದು ಒಪ್ಪಲೇಬೇಕು; ಅದಕ್ಕೆ ಸಾವಿತ್ರಿಯವರನ್ನು ಅಭಿನಂದಿಸಲೇಬೇಕು.
ಒಟ್ಟಾರೆಯಾಗಿ ‘ನಾರಿಪದ್ಯ’ ದ ಅಂತರಾಳವೆಲ್ಲ ಹೆಣ್ಣಿನ ಪುರಾಣ-ಇತಿಹಾಸದ ಕತ್ತಲೆಗೆ, ವರ್ತಮಾನದ ಬೆತ್ತಲೆಗೆ ಬೆಳಕಾಗುವ ಹಾಗೂ ಅವಳ ಮನೋಲೋಕವನ್ನು, ಅವನ ಮನೋವ್ಯಾಕುಲತೆಗಳನ್ನು, ವ್ಯವಸ್ಥೆಯ ಅಸಮಾನತೆಗಳನ್ನು ಒಂದೇ ವೇದಿಕೆಯಲ್ಲಿಟ್ಟು ಬೆಳಕಿನ ಚಿಕಿತ್ಸೆ ನೀಡುವ ‘ಅವಳ’ ಕೃತಿಯಿದು. ಇದೂ ಕಾಗದದ ಹೂವಾಗದೇ, ಭಾಷಣದ ಬಣ್ಣವಾಗದೆ, ಕೈ ಮಿಲಾಯಿಸುವ ಕೋಪವಾಗದೆ ಮನೆಮನದ ಮೂಲೆಯನ್ನೆಲ್ಲ ಗುಡಿಸಿ, ಜಾಡಿಸಿ, ತೊಳೆದು ಶುಭ್ರವಾಗಿಸುವ ಅಗತ್ಯತೆ ಹಾಗೂ ಅನಿವಾರ್ಯತೆ ಇಂದಿನ ತುರ್ತಿನ ಸಂಗತಿಗಳಲ್ಲೊಂದು. ಓದುಗ ದೊರೆಗಳು ಮನಸ್ಸು ಮಾಡಬೇಕಷ್ಟೇ! ಮನುಷ್ಯರಾಗಬೇಕಷ್ಟೇ!
ಎಂ.ಡಿ. ಚಿತ್ತರಗಿ ಬಾಗಲಕೋಟ ಜಿಲ್ಲೆಯ ಹುನಗುಂದದವರು. ಸದ್ಯ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳೆದ ಆರು ವರ್ಷಗಳಿಂದ ಕನ್ನಡ ವಿಷಯದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳಿಗಾಗಿ ಶಾಲಾಹಂತದಲ್ಲಿ ಕೆಲವು ಪುಸ್ತಕಗಳನ್ನು ಪ್ರಕಟಿಸಿದ ಇವರು ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರ ಆಯ್ಕೆಯ ಸ್ಪರ್ಧಾತ್ಮಕ ಪರೀಕ್ಷೆಗಾಗಿ ‘ಏಣಿ’ ಎಂಬ ಕೃತಿಯನ್ನು ಸಂಪಾದಿಸಿದ್ದಾರೆ. ಇವರ ಹಲವಾರು ಕವನಗಳು ಹಾಗೂ ಕಥೆಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮಥನ- ವಿರ‍್ಶಾ ಸಂಕಲನ, ಗಾಯಗೊಂಡಿವೆ ಬಣ್ಣ- ಕವನಸಂಕಲನ. (2022 ನೇ ಸಾಲಿನ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ) ಅಕ್ಷರ ಹೂ ಹಾಗೂ ಕಥಾತಪಸ್ವಿ ಅಬ್ಬಾಸ್ ಮೇಲಿನಮನಿ ಸಂಪಾದನಾ ಕೃತಿಗಳನ್ನು ಪ್ರಕಟಿಸಿದ್ದಾರೆ.