Advertisement
ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”

ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”

ಸೀತಮ್ಮನ ಗೊಣಗಾಟ ನಿಲ್ಲುವ ಲಕ್ಷಣ ಕಾಣಲಿಲ್ಲ. ಒಂದೊಮ್ಮೆ ಈಕೆ ಸತ್ತು ಹೋಗಬಾರದಿತ್ತ ಎಂಬಷ್ಟು ರೂಪೇಶ್ ಜಿಗುಪ್ಸೆ ಪಟ್ಟುಕೊಂಡ. ನಂದಿನಿ ಒಂದು ನಾಟಕದ ವರ್ಕ್‌ಷಾಪಿಗೆ ರಿಸೋರ್ಸ್‌ ಪರ್ಸನ್ ಆಗಿ ಮುಂಬಯಿಗೆ ಹೋದವಳು ವಾಪಸ್ ಬರಲಿಲ್ಲ! ಕೇಳಿದರೆ ಅವಳು ಏನು ಹೇಳ್ತಾಳೆ ಅಂತ ರೂಪೇಶ್‌ಗೆ ಗೊತ್ತು. ಅಮ್ಮನಿಗೆ ಖುಷಿಯಾಗಿರಬೇಕು. ಈಕೆ ಒಮ್ಮೆ ಸಾಯಬಾರದಾ ಅಂತ ಅವನು ಮತ್ತೆ ಮತ್ತೆ ಸ್ವಗತದಂತೆ ಹೇಳಿಕೊಂಡ.
ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ” ನಿಮ್ಮ ಓದಿಗೆ

ರಂಗಕರ್ಮಿ ರೂಪೇಶ್‌ಕುಮಾರ್‌ಗೆ ಬೆಳಗ್ಗೆ ಇಂತಿಷ್ಟು ಹೊತ್ತಿಗೇ ಏಳಬೇಕೆಂಬ ನಿಯಮವಿಲ್ಲ. ಎದ್ದ ಮೇಲೆ ಅಂದಿನ ಟೈಮ್ಸ್ ಹಾಗೂ ಪ್ರಜಾವಾಣಿ ಓದುತ್ತಾನೆ. ಸ್ನಾನಮಾಡಿ ತಿಂಡಿಗೆ ಹೊರಗೆಹೋಗಿ ಬರುತ್ತಾನೆ. ಅಥವಾ ಹೊರಗೆ ಏನಾದರೂ ಪ್ರೊಗ್ರಾಂ ಇದ್ದಲ್ಲಿ ತಿಂಡಿ ತಿಂದು ಅಲ್ಲಿಂದಲೇ ಫ್ಯ್ಲಾಟ್‌ಗೆ ಹಿಂತಿರುಗದೆ ಹೋಗುತ್ತಾನೆ.

ಇನ್ನು, ಮಧ್ಯಾಹ್ನ, ರಾತ್ರಿಯ ಊಟಗಳು ತಮ್ಮ ‘ರಂಗವಿಲಾಸ’ ನಾಟಕ ತಂಡದ ಜೊತೆ ಆಗುತ್ತದೆ. ಫ್ಯ್ಲಾಟ್‌ಗೆ ತಡರಾತ್ರಿ ಬರುವುದು, ಬಂದ ಮೇಲೆ ಒಂದೆರಡು ಪೆಗ್ ವ್ಹಿಸ್ಕಿ ಹೀರಿ ಬೆಡ್‌ರೂಂ ಸೇರುವುದು ಸಾಮಾನ್ಯ.

ಹಾಗೊಮ್ಮೆ ತಮ್ಮ ಜೊತೆ ಡ್ರಾಮಾ ಡಿಸ್‌ಕಷನ್‌ಗೆ ಎಂದು ಆರ್ಟಿಸ್ಟ್‌ಗಳು ಅಥವಾ ಇತರೆ ರಂಗತಂಡದವರು ಬರುವುದೂ ಇದೆ. ಇಲ್ಲೆಲ್ಲಾ ತೆರೆದ ಹೃದಯದಿಂದ, ಪ್ರೀತಿಯಿಂದಲೇ ರೂಪೇಶ್‌ಕುಮಾರ್ ವ್ಯವಹರಿಸುವುದಿದೆ.

ಐವತ್ತೆರಡರ ಹರಯದ ರೂಪೇಶ್ ಮೂರು ದಶಕಕ್ಕೂ ಮೀರಿ ರಂಗಚಟುವಟಿಕೆಗಳನ್ನು ನಡೆಸುತ್ತಾ ಬಂದ ಅನುಭವಿ. ತಂದೆ ಸಂಪಗೆರೆ ಲಕ್ಷ್ಮೀನಾರಾಯಣಪ್ಪ ಹಾರ್ಮೋನಿಯಂ ಮಾಸ್ತರ್ ಆಗಿದ್ದವರು. ತೋಟದ ಕೆಲಸ ಸರಿಯಾಗಿ ಮಾಡಿದ್ದರೆ ಎರಡು ಹೊತ್ತಿನ ಊಟವಾದರೂ ಸಿಗುತ್ತಿತ್ತು ಎಂದು ಬೈಯುವ ಸೀತಮ್ಮ, ರೂಪೇಶ್‌ನ ತಾಯಿ. ಒಬ್ಬ ಅಕ್ಕ ಚಿಕ್ಕಂದಿನಲ್ಲೇ ತೀರಿಕೊಂಡಿದ್ದಳು. ಇನ್ನೊಬ್ಬಳು ತಂಗಿಗೆ ಬುದ್ಧಿಮಾಂದ್ಯ. ಸತ್ತ ಅಕ್ಕನ ಹೆಸರು ಶೀಲಾ, ಸತ್ತಂತಿರುವ ತಂಗಿ ಮೀರಾ.

ಸಂಪಂಗೆರೆ ಲಕ್ಷ್ಮೀನಾರಾಯಣಪ್ಪನವರು ಮೊದಲು, ಅವರ ಹೆಂಡತಿ ಸೀತಮ್ಮನವರ ಪ್ರಕಾರ ಸರಿಯಾಗಿಯೇ ಇದ್ದರು. ಆಗೊಮ್ಮೆ ಈಗೊಮ್ಮೆ ನಾಟಕಗಳನ್ನು ನೋಡುತ್ತಿದ್ದರಷ್ಟೇ! ಆದರೆ ನಾಟಕಗಳಲ್ಲಿನ ಪಾತ್ರಧಾರಿಗಳ ಹಾಡು ಇವರ ಗಮನವನ್ನು ತುಂಬಾ ಎಳೆದುಬಿಟ್ಟಿತು. ಸಂಗೀತಕ್ಕೆ ಅಂತಹ ಸೆಳೆತವಿದೆ. ಕೊನೆ ಕೊನೆಗೆ ತಾವು ಸಂಗೀತ ಕಲಿಯಬೇಕೆಂದು ನಿರ್ಧರಿಸಿದರು. ಅವರ ಶಾರೀರ ಕೆಟ್ಟದಿತ್ತು. ಮಾಸ್ತರರು, ಹಾರ್ಮೋನಿಯಂ ಕಲಿಸುವುದಾಗಿ ಹೇಳಿದರು. ಇದೆಲ್ಲಾ ಲಕ್ಷ್ಮೀನಾರಾಯಣಪ್ಪನವರ ಮಧ್ಯವಯಸ್ಸಿನಲ್ಲಾದ ಘಟನೆಗಳು. ಅಷ್ಟರಲ್ಲಿ ರೂಪೇಶ್ ಹುಟ್ಟಿ ಪಳ್ಳಿಕೂಟಕ್ಕೆ ಸೇರಿಯಾಗಿತ್ತು.

ರೂಪೇಶ್ ನೋಡಲು ಬೆಳ್ಳಗೆ, ತೆಳ್ಳಗಿದ್ದ. ಕಂಠಕೂಡ ಬಾಲಗೀತೆಗಳಿಗೆ ಪ್ರಶಸ್ತವಾಗಿತ್ತು. ನಾಟಕದ ಹಾರ್ಮೋನಿಯಂ ಮಾಸ್ತರ್ ತಮ್ಮ ಶಿಷ್ಯ ಲಕ್ಷ್ಮೀನಾರಾಯಣಪ್ಪನವರಲ್ಲಿ ಆಸೆಯ ದೀಪ ಹೊತ್ತಿಸಿದರು. ಈ ಎಲ್ಲ ಸಂಗತಿಗಳು ಒಂದಕ್ಕೊಂದು ಕೂಡಿ ರೂಪೇಶ್ ರಂಗಜಗತ್ತಿಗೆ ಪಾದಾರ್ಪಣೆ ಮಾಡುವಂತಾಯಿತು. ತಾಯಿ ಸೀತಮ್ಮ ಎಂದಿನಂತೆ ಬೈಯುವುದು ನಿಲ್ಲಿಸಲಿಲ್ಲ. ‘ಮಗನನ್ನು ನಾಶಮಾಡ್ತಾ ಇದೀಯಾ’ ಎಂಬ ಒಕ್ಕಣೆ ಮಾತ್ರ ಹೊಸದಾಗಿ ಸೇರ್ಪಡೆಯಾಯಿತು.

ಎಸೆಸೆಲ್ಸಿ ಓದುವ ಹೊತ್ತಿಗೆ ರೂಪೇಶ ಒಳ್ಳೆಯ ಕಲಾವಿದನಾಗಿಬಿಟ್ಟ. ಶಾಲೆಯಲ್ಲಿ ಯೂನಿಯನ್ ಡೇ, ಶಾರದೋತ್ಸವಗಳಾದಾಗ ತನ್ನ ವಯಸ್ಸಿನ ಹುಡುಗ-ಹುಡುಗಿಯರನ್ನು ಕೂಡಿಸಿಕೊಂಡು ನಾಟಕಗಳನ್ನು ಆಡಿ, ಮೇಷ್ಟರುಗಳಿಂದ ಸೈ ಅನ್ನಿಸಿಕೊಂಡಿದ್ದ.

ಈ ಹಂತದಲ್ಲೇ ರೂಪೇಶ್ ಲೈಫಿನಲ್ಲಿ ಒಂದೆರಡು ತಿರುವುಗಳು ಕಾಣಿಸಿಕೊಂಡವು. ತಂದೆ ಲಕ್ಷ್ಮೀನಾರಾಯಣಪ್ಪನವರು ತಮ್ಮ ಐವತ್ತೆರಡನೆಯ ವಯಸ್ಸಿನಲ್ಲಿ ತಾಯಿಯ ಮುತ್ತೈದೆತನವನ್ನು ಕಳೆದರು. ತಾಯಿ ಸೀತಮ್ಮನವರು, ತಮ್ಮ ಅಣ್ಣನ ಊರಾದ ಮಿಂಡಳ್ಳಿಗೆ ಶಿಫ್ಟಾಗಿ ಮಗ ರೂಪೇಶ್‌ನ ನಾಟಕದ ಹುಚ್ಚಿಗೆ ಅಡ್ಡಿ ಉಂಟುಮಾಡಿದರು. ತಮ್ಮ ಹೊರವಾದ ಮೀಸೆಯಿಂದ ಎಂತವರನ್ನೂ ಭೀತರನ್ನಾಗಿಸುತ್ತಿದ್ದ ಸೋದರಮಾವ-ಮೀಸೆಮಾವಯ್ಯ-ಇನ್ನು ತನ್ನ ಆಶೆಗೆ ಅಡ್ಡಿ ನಿಲ್ಲುತಾರೆಂದು ಅವನಿಗೆ ಬಲವಾಗಿ ತೋರಿತು. ತಾಯಿಯ ಕುಮಕ್ ಕೂಡ ಇದರ ಹಿಂದಿತ್ತು.

ಹೀಗೆ ಒಬ್ಬನೇ ವ್ಹಿಸ್ಕಿ ಹೀರುವಾಗ ತಾನು ಸತ್ತು ಹೋದರೆ? ತನಗೀಗ ಐವತ್ತೆರಡು. ಅಪ್ಪ ಸತ್ತಾಗಲೂ ಅವನಿಗೆ ಇಷ್ಟೇ ವಯಸ್ಸು! ಅಜ್ಜ, ಮುತ್ತಜ್ಜ, ಅವನಜ್ಜ ಇವರೆಲ್ಲರೂ ಐವತ್ತೆರಡರಲ್ಲಿ ಸತ್ತಿರಬಹುದಾ? ರೂಪೇಶ್ ಹೀಗೆ ಯೋಚಿಸಿ ಯೋಚಿಸಿ ರಾತ್ರಿಯೆಲ್ಲಾ ನಿದ್ದೆ ಇಲ್ಲದೆ ಒದ್ದಾಡುವುದಿದೆ. ನಂದಿನಿ ತನ್ನನ್ನು ಬಿಟ್ಟು ಹೋದದ್ದು ಕೆಡುಕೆನಿಸಿತು. ಎಲ್ಲಿ ಅವಳು ತನಗೆ ಗಂಟು ಬಿದ್ದದ್ದು? ಆ ನೆನಪು ಅವನ ಈ ನೀರವ ರಾತ್ರಿಗಳಲ್ಲಿ ತುಸು ಸಮಾಧಾನ ಕೊಡುತ್ತದೆ.

ಮೀಸೆಮಾವ, ಅಮ್ಮನ ಮಾತು ಕೇಳಿ ಸ್ಟ್ರಿಕ್ಟ್ ಆಗಿಬಿಟ್ಟ. ಕಾಲೇಜು ಓದಲು ಆತ ಅಡ್ಡಿ ಮಾಡಲಿಲ್ಲ. ಆದರೆ ಅದರಾಚೆ ನಾಟಕಗೀಟಕ ಎಂದರೆ ಕಾಲು ಮುರಿದು ಕೈಗೆ ಕೊಡ್ತೇನೆ ಎಂದು ಗಟ್ಟಿಧ್ವನಿಯಲ್ಲೆ ಹೇಳಿಬಿಟ್ಟಿದ್ದ.

ರೂಪೇಶ್ ಕಳ್ಳ ತಪ್ಪಿಸಿ ಮೀಸೆಗೆ ಮಣ್ಣು ಮುಕ್ಕಿಸುತ್ತಿದ್ದ. ಆದರೆ ಇದು ಎಷ್ಟು ದಿನದ ಮಾತು? ಒಮ್ಮೆ ಸಿಕ್ಕಿ ಫಜೀತಿಯಾಯ್ತು. ಮನೆಯಲ್ಲಿ ಇರಬೇಕಾದರೆ ಏನು ಮಾಡಬಾರದು ಎಂದು ಮೀಸೆ ಸ್ಪಷ್ಟಪಡಿಸಿತು. – ರೂಪೇಶ್ ಹಾಸ್ಟೆಲ್‌ನಲ್ಲಿ ಸೀಟು ದೊರಕಿಸಿಕೊಂಡು, ತನ್ನ ಹುಚ್ಚನ್ನು ಮತ್ತೂ ಜ್ವಾಜಲ್ಯಮಾನಗೊಳಿಸಿದ.

ಡಿಗ್ರಿದಂಡೆಯನ್ನು ರೂಪೇಶ್ ಸಾಮಾನ್ಯ ರೀತಿಯಲ್ಲೆ ಹತ್ತಿದ. ಅವನ ಆಸ್ಥೆ, ಅಕರಾಸ್ತೆ ಎಲ್ಲವೂ ರಂಗದ ಮೇಲೆ ನೆಟ್ಟಿತ್ತು. ರಂಗಾಯಣ, ನೀನಾಸಂ, ಎನ್.ಎಸ್.ಡಿ.ಗಳನ್ನೆಲ್ಲಾ ಹಾದುಬಂದ. ಈ ಜರ್ನಿಯಲ್ಲೆ ಅವನಿಗೆ ನಂದಿನಿ ದೊರೆಕಿದ್ದು. ಎನ್.ಎಸ್.ಡಿ.ಯಲ್ಲಿದ್ದಾಗ ಇವನಿಗೆ ಹಿಂದಿ ಕಷ್ಟವಾಗುತ್ತಿತ್ತು. ಮುಂಬಯಿ ಮೂಲದ ನಂದಿನಿಗೆ ಅದು ಹರಳು ಹುರಿದಂತೆ. ಇಬ್ಬರೂ ಬಹುಬೇಗ ಸ್ನೇಹಿತರಾದರು. ನಂದಿನಿಗೆ ನಾಟಕ, ರಂಗಮಂಚದ ಬಗ್ಗೆ ತನ್ನದೇ ಆದ ಒಳನೋಟಗಳಿದ್ದವು. ಕಲೆ ಅಲ್ಲದಿದ್ದರೂ ಬೀದಿನಾಟಕಗಳ ಬಗ್ಗೆ ಅವಳಿಗೆ ವಿಚಿತ್ರ ಆಕರ್ಷಣೆಯಿತ್ತು. ತಾನೇ ಬರೆದು ಎಲ್ಲೆಂದರಲ್ಲಿ ಬೀದಿನಾಟಕಗಳನ್ನು ಮಾಡಿಬಿಡುತ್ತಿದ್ದಳು. ಇದು ರೂಪೇಶ್‌ಗೆ ಅಷ್ಟಾಗಿ ಸೇರುತ್ತಿರಲಿಲ್ಲ. ಆತ ರಂಗಮಂಚದ ಮೇಲಿನ ಕಲಾವೈಭವದ ಬಗ್ಗೆ ಹೆಚ್ಚು ಮಾತಾಡುತ್ತಿದ್ದ. ಇಬ್ಬರ ದಾರಿಗಳು ಸ್ಪಷ್ಟವಿತ್ತಾದರೂ ಅವರು ಒಟ್ಟಿಗಿರಲು ನಿರ್ಧರಿಸಿದರು.

ರೂಪೇಶ್‌ಗೆ ಏನಾದರೂ ಹೊಸತು ಮಾಡುವ ಚಡಪಡಿಕೆ. ಜರ್ಮನಿಯಲ್ಲಿ ಒಂದು ಸಿನೆಮಾ ತಂಡ ಜೈಲಿನೊಳಗಿನ ಖೈದಿಗಳಿಗೆ ಟ್ರೈನಿಂಗ್ ಕೊಟ್ಟು ಸಿನಿಮಾ ಮಾಡಿ ಗೆದ್ದ ಸುದ್ದಿ ಪತ್ರಿಕೆಯಲ್ಲಿ ಬಂದಿತ್ತು. ರೂಪೇಶ್‌ಗೆ ಇದು ಹೊಸ ಆಲೋಚನೆಗೆ ದಾರಿ ತೆರೆಸಿತು.

ನಂದಿನಿಗೆ ಇದು ಹುಚ್ಚಾಟ ಎನಿಸಿತು. ಬೇಕಿದ್ದರೆ ಅಲ್ಲಿ ಬೀದಿನಾಟಕವೊಂದನ್ನು ನಾವು ಆಡಬಹುದು ಎಂದಳು. ರೂಪೇಶ ಇದರ ಅಗತ್ಯ, ಸಾಧ್ಯತೆಗಳನ್ನು ಮತ್ತೂ ಮತ್ತೂ ಬಿಡಿಸಿ ಹೇಳಿದ ಮೇಲೆ ನಂದಿನಿ ಅವನ ಟೀಂನಲ್ಲಿ ಸೇರಲು ಒಪ್ಪಿಕೊಂಡಳು.

ಜಿಲ್ಲಾಧಿಕಾರಿ ಇದನ್ನು ಸಲೀಸಾಗಿ ತೆಗೆದುಹಾಕಿದರು. ಯಾವ ಎಂ.ಪಿ., ಎಮ್ಮೆಲ್ಲೆಯೂ ರಿಸ್ಕ್ ತೆಗೆದುಕೊಳ್ಳಲು ಮುಂದೆ ಬರಲಿಲ್ಲ. ರೂಪೇಶ್ ಕೋರ್ಟಿಗೆ ಅರಿಕೆ ಮಾಡಿಕೊಂಡ.

ಕೋರ್ಟು, ‘ಯಾಕಾಗಬಾರದು?’ ಎಂದು ಹೇಳಿತಾದರೂ ಇದರ ಸಾಧ್ಯತೆಗಳ ಬಗ್ಗೆ ಡೀಟೈಲ್ಡ್ ರಿಪೋರ್ಟ್ ಬಯಸಿತು.

ರೂಪೇಶ್ ಅದನ್ನು ತತ್‌ಕೂಡಲೇ ಒದಗಿಸಿದ.

ಕೋರ್ಟು, ಜಿಲ್ಲಾಧಿಕಾರಿಗೆ ಸೂಚಿಸಿತು; ‘ಪೊಲೀಸ್ ಪಹರೆಯೊಂದಿಗೆ ಇದನ್ನು ಆಗಗೊಡಿ. ಇದು ಮನರಂಜನೆಯ ವಿಷಯವಲ್ಲ; ಖೈದಿಗಳ ಆಂತರ್ಯವನ್ನು ಸೂಕ್ಷ್ಮವಾಗಿ ಬದಲಿಸುವ ಶಿಕ್ಷಣ’,

ಅಂದು ರೂಪೇಶ್, ನಂದಿನಿಯನ್ನು ಅಕ್ಷರಶಃ ಗಾಳಿಯಲ್ಲಿ ತೇಲಾಡಿಸಿದ್ದ, ಖೈದಿಗಳಿಗೆ – ಅದೂ ನಟೋರಿಯಸ್ ಕ್ರೈಂ ಮಾಡಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ–ತರಬೇತಿ ನೀಡಿ, ಅವರಿಂದಲೇ ನಾಟಕವೊಂದನ್ನು, ಪಬ್ಲಿಕ್‌ನಲ್ಲಿ ಆಡಿಸುವ ತನ್ನ ಪ್ರಯೋಗಕ್ಕೆ ಕೋರ್ಟ್ ನೀಡಿದ ಆದೇಶದ ಒಪ್ಪಿಗೆಗೆ ಅವನು ಸಖತ್ ಥ್ರಿಲ್ಲಾಗಿದ್ದ.

ಈಗ ಅವಶ್ಯವಾಗಿ ಆಗಬೇಕಾದ್ದು ಒಂದು ರಂಗತಂಡ. ಅದಕ್ಕೆ ಚೆಂದನೆಯ ಹೆಸರು ಈ ಮುಂಚೆಯೆ ರೂಪೇಶ್ ಕೊಟ್ಟುಕೊಂಡಿದ್ದ, ‘ರಂಗವಿಲಾಸ’ ಅಂತ. ನಂದಿನಿಯ ವಿನಾ ಬೇರ್ಯಾರೂ ‘ರಂಗವಿಲಾಸ’ದಲ್ಲಿಲ್ಲ. ನಾಟಕ ಆಡುವುದು ಜೈಲು ಖೈದಿಗಳು ದಿಟ; ಆದರೆ ಅವರಿಗೆ ಟ್ರೇನಿಂಗ್ ನೀಡಲು ನಾಲ್ಕೈದು ಜನರ ತಂಡ ಬೇಡವೆ? ಅದೇ ಈ ‘ರಂಗವಿಲಾಸ’. ತನ್ನಂತೆ ನಾಟಕಗಳ ಹುಚ್ಚಿರುವ, ಅದೂ ಎಕ್ಸ್ಪರಿಮೆಂಟಲ್ ಆಗಿರುವ ಒಂದಿಬ್ಬರ ಬಗ್ಗೆ ರೂಪೇಶ್‌ಗೆ ಗೊತ್ತಿತ್ತು. ಅದರಲ್ಲಿ ನಾಣಿಗೆ ಸಂಗೀತ ಜ್ಞಾನ ಚೆನ್ನಾಗಿದೆ. ಚಂದ್ರು ಮೇಕಪ್ ಜೊತೆಗೆ ಸ್ವತಃ ನಟ. ಇನ್ನೊಬ್ಬ ಹುಡುಗಿ ಇದ್ದರೆ ಚೆನ್ನಿತ್ತು ಎನಿಸಿ ‘ಪರಿವರ್ತನಾ’ ತಂಡದ ಝಾನ್ಸಿಯನ್ನು ಒಪ್ಪಿಸಿಕೊಂಡ.

ಜಿಲ್ಲಾಧಿಕಾರಿಗೆ, ಎಸ್.ಪಿ.ಯವರಿಗೆ ತಾವು ಮಾಡಿಸಲು ಹೊರಟಿರುವ ನಾಟಕದ ಬಗ್ಗೆ ಮಾಹಿತಿ ನೀಡಬೇಕಿತ್ತು. ರೂಪೇಶ್ ತನ್ನ ‘ರಂಗವಿಲಾಸ’ ತಂಡದವರ ಜೊತೆ ಚರ್ಚಿಸಿದ. ‘ಕ್ರೈಂ ಅಂಡ್ ಪನಿಷ್‌ಮೆಂಟ್’ಗೆ ಎಲ್ಲರೂ ಒಪ್ಪಿದರು. ಒಬ್ಬರ ವಿನಾಃ ಜಿಲ್ಲಾಧಿಕಾರಿಗಳು!

‘ಅಪರಾಧ ಮಾಡಿರುವ ತಪ್ಪಿತಸ್ಥ ಭಾವವನ್ನು ಈ ಹೆಸರೇ ಮತ್ತೆ ನೆನಪಿಸುತ್ತೆ. ಹಾಗಾಗಿ ಖುಷಿಕೊಡುವ, ಜಾಲಿಯಾಗಿರುವ, ಮೇಯಿನ್ ಆಗಿ ಮೆಸೇಜ್ ಇರುವ ನಾಟಕ ಆಡ್ಸಿ’ ಎಂದು ಉಚಿತ ಸಲಹೆ ಜಿಲ್ಲಾಧಿಕಾರಿಗಳಿಂದ ಬಂತು.

ರೂಪೇಶ್ ಜಿಲ್ಲಾಧಿಕಾರಿ ಸೂಚಿಸಿದ ಜಾಲಿ ಹಾಗೂ ಮೆಸೇಜ್ ಇರುವ ನಾಟಕಕ್ಕೆ ಹುಡುಕಿದ. ಯಾವುದರಲ್ಲೂ ಅವನಿಗೆ ರುಚಿ ಹೊತ್ತಲಿಲ್ಲ. ಕೊನೆಗೆ ತಾನೇ ಒಂದು ನಾಟಕ ಬರೆದರೆ ಹೇಗೆ? ಅನಿಸಿ, ತಂಡದವರೊಂದಿಗೆ ಮಾತಾಡಿದ. ಅವರೂ ಇದು ಉಚಿತವಾದ ನಿರ್ಧಾರವೇ ಎಂದರು.

ರೂಪೇಶ್ ಈ ಹೊಸ ನಾಟಕ ರಚನೆಗೆ ತೊಡಗಿರುವಾಗಲೇ ಮಿಂಡಳ್ಳಿಯಿಂದ ಅವನಿಗೆಂದು ಒಂದು ಸಮಾಚಾರ ಬಂತು. ಅವನ ಮೀಸೆಮಾವಯ್ಯ ದೈವಾಧೀನರಾಗಿದ್ದರು. ಇನ್ನು ಏನು ಮಾಡಲು ಸಾಧ್ಯ? ಎನಿಸಿ, ಕೊನೆಗೆ ಇದರಲ್ಲೂ ಒಂದು ಸಾಧ್ಯತೆ ಹುಡುಕಿಕೊಂಡ. ಅಗತ್ಯ ಹಾಳೆ, ಪೆನ್ನು ಪುಸ್ತಕಗಳನ್ನು ಹಿಡಿದು ಮಿಂಡಳ್ಳಿ ಬಸ್ ಹತ್ತಿದ.

ಅಮ್ಮ, ಸೀತಮ್ಮ ಸಾಕಷ್ಟು ಸೊರಗಿದ್ದಳು. ಬುದ್ಧಿಮಾಂದ್ಯ ತಂಗಿ ಮೀರಾ ಈಗ ಬೆಳೆದ ಹೆಂಗಸಂತೆ ಆಗಿದ್ದಳು. ಅಣ್ಣನನ್ನು ಗುರತು ಹಿಡಿದಳಾದರೂ ಅವನ ಜೊತೆ ಮಾತನಾಡಲಿಲ್ಲ. ಅಮ್ಮ, ‘ಅವಳಿಗೆ ಕೋಪ ತನ್ನಣ್ಣ ತನ್ನನ್ನು ಆಗಾಗ ಬಂದು ನೋಡುವುದಿಲ್ಲ’ ಎಂದು ಹೇಳಿದ ಮಾತ್ರಕ್ಕೆ ರೂಪೇಶ್ ಬರಲು ಸಾಧ್ಯವೇ? ಜಾಣ ಅವನು ಏನೂ ಮಾತಾಡಲಿಲ್ಲ.

ಹತ್ತು ದಿನ ರೂಪೇಶ್ ಮಿಂಡಳ್ಳಿಯ ಮಾವನ ಮನೆಯಲ್ಲಿದ್ದ. ಸೋದರಮಾವನ ಮಕ್ಕಳು ಬೆಳೆದು ಕೈಗೆ ಬಂದಿದ್ದರು. ಸಂಸಾರ ಕಷ್ಟವಲ್ಲ. ತನ್ನ ತಾಯಿ ಎಲ್ಲಿ ತನಗೆ ಗಂಟು ಬೀಳುವಳೊ ಎಂದು ಅವನೊಂದು ಕ್ಷಣ ಭೀತನಾಗಿದ್ದ. ಮಾಮಿ ಕೂಡ, ‘ಇರಲಿಬಿಡೋ, ಇಷ್ಟು ವರ್ಷ ಇಲ್ಲೇ ಇದ್ದವರಲ್ಲವಾ!’ ಎಂದು ತನ್ನ ದುಗುಡಕ್ಕೆ ಬ್ರೇಕ್ ಹಾಕಿದ್ದರು.

ಮಿಂಡಳ್ಳಿ ಸಾಕಷ್ಟು ಛೇಂಜ್ ಆಗಿತ್ತು. ಊರಿನಲ್ಲಿ ತನ್ನ ಬಾಲ್ಯಕಾಲದ ಸಖರು ಯಾರೂ ಇರಲಿಲ್ಲ. ಮಹಡಿ ಮೇಲಿನ ಕೋಣೆ ಹೊಕ್ಕು ನಾಟಕ ರಚನೆಗೆ ತೊಡಗಿಕೊಂಡಿದ್ದರಿಂದ ಹತ್ತು ದಿನಗಳನ್ನು ತಳ್ಳಲು ಅವನಿಗೆ ಸಾಧ್ಯವಾಯ್ತು.

***

ನಾಟಕದ ವಸ್ತು ಸ್ಥೂಲವಾಗಿ ರೆಡಿಯಾಯ್ತು;

ಫಾರಿನ್ ರಿಸರ್ಚ್ ಸ್ಟೂಡೆಂಟ್ ಒಬ್ಬಳು ಅಲ್ಲಿನ ಯೂನಿವರ್ಸಿಟಿಯ ಸ್ಕಾಲರ್‌ಶಿಪ್ ಪಡೆದು ಕರ್ನಾಟಕದ ಒಂದು ಹಳ್ಳಿಯ ಸಾಮಾಜಿಕ ಜೀವನವನ್ನು ಅಧ್ಯಯನ ಮಾಡಲು ಬರುತ್ತಾಳೆ. ಹೀಗೆ ಬಂದವಳಿಗೆ ಅಸಿಸ್ಟೆಂಟ್ ಆಗಿ ಒಬ್ಬ ಊರಲ್ಲೇ ಸಿಗುತ್ತಾನೆ. ಅಡುಗೆ, ಮನೆಕೆಲಸಗಳ ಚಾಕರಿಗೆ ಇಬ್ಬರು ಹೆಂಗಸರು. ಆಕೆಯ ಸ್ಟಡಿಯ ಅವಧಿ ಎರಡು ವರ್ಷ. ಊರಿನ ಪ್ರತಿ ಬೀದಿ, ಮನೆಯ ಬಗೆಗೂ ಆಕೆಗೆ ಮಾಹಿತಿ ಬೇಕು. ಇಲ್ಲಿನ ಹಬ್ಬ-ಹರಿದಿನಗಳು, ಸಾವು-ತಿಥಿಗಳು, ನಾಮಕರಣ, ದ್ಯಾವ್ರು ಹೀಗೆ ಪ್ರತಿ ರಿಚುವಲ್ಲೂ ಆಕೆಗೆ ಬೇಕು. ಈ ಎಲ್ಲ ಓಡಾಟವೇ ನಾಟಕದ ವಸ್ತು. ಇಲ್ಲಿ ಎರಡು ಅಂಶಗಳನ್ನು ರೂಪೇಶ್ ಮುಖ್ಯವಾಗಿ ಇಟ್ಟುಕೊಂಡಿದ್ದ. ನಂಬರ್ ಒನ್: ಅಧ್ಯಯನದ ವೇಳೆಗೆ ಆಕೆಗೆ ಪ್ರತಿಮನೆಯ ಸ್ವಾರಸ್ಯಕರ ಕಥೆಗಳು ಸಿಗುವುದು. ನಂಬರ್ ಟು: ಇಂತಹ ಕಥೆಗಳ ಸಂಗ್ರಹದಲ್ಲಿ ಆಗುವ ಎಡವಟ್ಟುಗಳು ಸಾಕಷ್ಟು ತಮಾಷೆಗೆ ಗ್ರಾಸವಾಗುವುದರಿಂದ ಇದೊಂದು ಜಾಲಿ ನಾಟಕವಾಗಿಯೂ ಹೆಸರಾಗುತ್ತದೆ.

‘ರಂಗವಿಲಾಸ’ ತಂಡ ಈ ನಾಟಕಕ್ಕೆ ‘ನಕ್ಷೆ’ ಎಂದು ಹೆಸರಿಟ್ಟಿತು. ಇದರ ವಿವರಣೆಯುಳ್ಳ ಮಾಹಿತಿಯನ್ನು ಡಿ.ಸಿ. ಹಾಗೂ ಎಸ್.ಪಿ.ಯವರಿಗೆ ರೂಪೇಶ್ ಕಳುಹಿಸಿಕೊಟ್ಟ.

ಎಸ್.ಪಿ.ಯವರ ಸೂಚನೆ ಮೇರೆಗೆ ರೂಪೇಶ್ ಹಾಗೂ ಆತನ ತಂಡ ತುಂಬಾ ಕೇರ್‌ಫುಲ್ಲಾಗಿ ಇರಬೇಕಿತ್ತು. ಇವರು ಟ್ರೇನಿಂಗ್ ನೀಡಲು ಹೊರಟಿರುವುದು ನಟೋರಿಯಸ್ ಕ್ರಿಮಿನಲ್‌ಗಳಿಗೆ. ಮೊದಲ ದಿನ ಎಲ್ಲ ಖೈದಿಗಳನ್ನು ಸೇರಿಸಿ, ತಮ್ಮ ಉದ್ದೇಶವನ್ನು ಸಂಕ್ಷಿಪ್ತವಾಗಿ ರೂಪೇಶ್ ವಿವರಿಸಿದ. ನಾಣಿ, ಚಂದ್ರು, ನಂದಿನಿ ಹಾಗೂ ಝಾನ್ಸಿ ಕೂಡ ಒಂದೆರಡು ಮಾತುಗಳನ್ನು ಆಡಿದರು. ಜಿಲ್ಲಾಧಿಕಾರಿಗಳು ಹಾಗೂ ಎಸ್.ಪಿ.ಯವರು ಸಂದೇಶ ಕಳುಹಿಸಿ, ಶುಭಾಶಯ ಹಾಗೂ ಯಶಸ್ಸು ಕೋರಿದ್ದರು.

ಎರಡನೆಯ ದಿನ ಬೆಳಗ್ಗೆ ಆರುಗಂಟೆಗೆ ಎಲ್ಲರೂ ಯೋಗ ಹಾಗೂ ವ್ಯಾಯಾಮಕ್ಕೆ ಹಾಜರಾಗುವಂತೆ ತಿಳಿಸಲಾಗಿತ್ತು. ಅರ್ಧಕರ್ಧ ಬಂದಿರಲಿಲ್ಲ. ರೂಪೇಶ್ ಸಿಟ್ಟು ಮಾಡಿಕೊಂಡು ಎಲ್ಲರನ್ನೂ ಉದ್ದೇಶಿಸಿ ಬೈದ. ಪಹರೆಯವರು “ಸಾರ್, ಅವ್ರು ಎಂಥೆಂತ ಕ್ರಿಮಿನಲ್ಸ್ ಗೊತ್ತಾ? ಸುಮ್ಮನೆ ರಿಸ್ಕ್ ತಗೋತಾ ಇದೀರಾ!” ಎಂದು ನಯವಾಗಿ ಗದರಿದ.

ರೂಪೇಶ್ ಇದಕ್ಕೆ ಕೇರು ಮಾಡಲಿಲ್ಲ.

ಒಬ್ಬೊಬ್ಬರನ್ನೇ ವಿಶ್ವಾಸಕ್ಕೆ ತೆಗೆದುಕೊಳ್ಳಲು ವೈಯಕ್ತಿಕ ಪರಿಚಯ ಬೆಳೆಸಿದ. ಅವರ ಹೆಸರು, ಊರು, ಹಿನ್ನೆಲೆ, ಜೈಲಿಗೆ ಬರಲು ಕಾರಣ ಎಲ್ಲವೂ ಆತನಿಗೆ ಬೇಕಿತ್ತು. ಅವರಾದರೋ ಇದನ್ನೆಲ್ಲಾ ಹೇಳಲು ಹಿಂಜರಿಯುತ್ತಿದ್ದರು. ಹೆಸರು ಕೇಳಿದರೆ, ಹೊಸಕೋಟೆ ಡಬಲ್ ಮರ್ಡರ್ ಕೇಸ್, ರಾಮನಗರ ರ‍್ಯಾಬರಿ ಕೇಸ್, ಮೈಸೂರು ರೇಪ್ ಕೇಸ್ ಹೀಗೆ ಉತ್ತರಿಸುತ್ತಿದ್ದರು.

ರೂಪೇಶ್‌ಗೆ, ಆತನ ತಂಡಕ್ಕೆ ಇದು ಸಹನೆಯ ಕಾಲವಾಗಿತ್ತು. ಮೂರ‍್ನಾಲ್ಕು ದಿನಗಳಲ್ಲಿ ಖೈದಿಗಳ ವಿಶ್ವಾಸ ರಂಗವಿಲಾಸಕ್ಕೆ ಸಿಕ್ಕೇಬಿಟ್ಟಿತು!

*****

ನಲವತ್ತು ದಿನಗಳ ರಿಹರ್ಸಲ್ ಅವಧಿಯಲ್ಲಿ ಡಿ.ಸಿ., ಎಸ್.ಪಿ., ಎಂ.ಎಲ್.ಎ., ಎಂ.ಪಿ. ಹಾಗೂ ಮೀಡಿಯಾದವರು ಭೇಟಿ ಇತ್ತು, ಇದನ್ನು ಸಾಕಷ್ಟು ಸುದ್ದಿ ಮಾಡಿದರು. ಸೋಷಿಯಲ್ ಮೀಡಿಯಾದಲ್ಲೂ ಇದು ಚರ್ಚೆಯಾಗಿ ನಾಟಕಕ್ಕೆ ಸರಿಯಾದ ಬಲವಾದ ಪ್ರಚಾರವೇ ಸಿಕ್ಕಿತು.
ಟೀವಿಯವರು ಹಾಗೂ ಪೇಪರಿನವರು ರೂಪೇಶ್‌ನನ್ನು ಸಂದರ್ಶನ ಮಾಡಿದರು.

“ಯಾಕೆ, ಜೈಲು ಖೈದಿಗಳ ಕೈಲಿ ನಾಟಕ ಆಡಿಸಬೇಕು ಅನಿಸ್ತು?”

“ಎನ್.ಎಸ್.ಡಿ.ಯಿಂದ ಬಂದ ಮೇಲೆ ನಾಟಕಗಳನ್ನೇನೊ ಮಾಡ್ತಾ ಇದ್ದೆ. ಆದರೆ ನನಗೆ ಹೊಸತು ಏನೋ ಮಾಡಬೇಕು ಅನಿಸ್ತಾ ಇತ್ತು. ಹಾಗಾಗಿ ಇದು ಮಾಡಿದರೆ ಹೇಗೆ ಅನಿಸ್ತು. ಮಾಡಿದ್ವಿ ಅಷ್ಟೇ!”

“ಇದು ಹೇಗೆ ಹೊಳೆಯಿತು?”

“ನನ್ನ ತಂದೆ ಒಂದು ಹೊಡಿಬಡಿ ಕೇಸ್‌ನಲ್ಲಿ ಜೈಲಿಗೆ ಹೋಗಿದ್ದರಂತೆ. ಅವರು ನಾಟಕಗಳನ್ನು ಮಾಡ್ತ ಇದ್ದ ಜನ. ಜೈಲಿನಲ್ಲಿ ಖೈದಿಗಳನ್ನು ಕೂಡಿಕೊಂಡು ನಾಟಕ ಆಡಲು ಶುರುಮಾಡಿದ್ದರಂತೆ. ಇದು ಸುಮಾರು ವರ್ಷಗಳ ಹಿಂದಿನ ಕಥೆ. ಬಹುಶಃ ಇದು ನನ್ನ ಮನಸ್ಸಿನಲ್ಲಿ ಇದ್ದಿರಬೇಕು.”

“ಖೈದಿಗಳು ನಿಮ್ಮ ಜೊತೆ ಹೊಂದಿಕೊಂಡ್ರ?”

“ತುಂಬಾ ಚೆನ್ನಾಗಿ. ಅವರ ಕಷ್ಟ ಸುಖ ಹೇಳಿಕೊಳ್ಳುವಷ್ಟು ನನ್ನನ್ನು, ನಮ್ಮ ಟೀಂ ಅನ್ನು ಅವ್ರು ನಂಬಿದ್ದಾರೆ.”

“ನಾಟಕ ಯಶಸ್ಸು ಪಡೆಯುತ್ತೆ ಅಂತೀರಾ?”

“ನೂರಕ್ಕೆ ನೂರರಷ್ಟು! ಇದು ಒಂದು ಪ್ರಯೋಗ. ದೇಶಪೂರ್ತಿ ಇದಾದರೆ ಖೈದಿಗಳಲ್ಲಿ ಒಂದು ಒಳ್ಳೆಯ ಪರಿವರ್ತನೆ ಆಗಲು ಖಂಡಿತಾ ಸಾಧ್ಯ!
“ಹಾಗೆ ಪರಿವರ್ತನೆಯಾದವರ ಬಗ್ಗೆ ಯಾವುದಾದರೂ ಎಗ್ಸಾಂಬಲ್ ಇದಿಯಾ?”

“ಸೋಮ ಅಂತ ಒಬ್ಬ ಖೈದಿ ಇದಾನೆ. ಈ ನಾಟಕದಲ್ಲಿ ಊರಿನ ಗೌಡನ ಕ್ಯಾರೆಕ್ಟರ್. ಆತ ತನ್ನ ಹೆಂಡತಿ, ಮಗಳೂ ಇಬ್ಬರನ್ನು ಕೊಚ್ಚಿ ಕೊಂದು ಹಾಕಿದ್ದವನು. ಇವತ್ತು ಏನು ಹೇಳ್ತಾನೆ ಗೊತ್ತಾ? ‘ದೇವ್ರು ಸತ್ಯವಾಗೂ ಮುಂದೆ ನಾನು ಒಳ್ಳೇ ರೀತಿ ಬದುಕ್ತೀನಿ’ ಅಂತ. ಇಂತಹ ಬೇರೆ ಬೇರೆ ಕೇಸ್‌ಗಳಿವೆ.”

***

ನಾಟಕ ಆಡುವ ನೆಪದಲ್ಲಿ ಖೈದಿಗಳು ತಪ್ಪಿಸಿಕೊಂಡರೆ ಗತಿಯೇನು? ಪೊಲೀಸ್ ಸರ್ಪಗಾವಲು ನಾಟಕಮಂದಿರದ ಸುತ್ತ ಬಲವಾಗಿ ಹಾಕಲಾಗಿತ್ತು. ನಿರೀಕ್ಷೆಗೂ ಮೀರಿ ರಸಿಕ ವೀಕ್ಷಕರು ಬಂದಿದ್ದರು. ವೃತ್ತಿಪರ ನಾಟಕ ಕಲಾವಿದರಂತೆ ಜೈಲು ಖೈದಿಗಳು ‘ನಕ್ಷೆ’ ನಾಟಕವನ್ನು ಆಡಿ ಜನರನ್ನು ರಂಜಿಸಿದರು. ನಾಟಕದ ಕೊನೆಗೆ ಎಲ್ಲರೂ ಸಭಾಂಗಣ ಹಾರಿಹೋಗುವಂತೆ ಕರತಾಡನ ಮಾಡಿದರು.

ಪ್ರತಿ ಪಾತ್ರಧಾರಿಯೂ ತನ್ನ ಪರಿಚಯದ ವೇಳೆ ತನ್ನ ಹೆಸರು ಹಾಗೂ ತನ್ನ ಮೇಲಿರುವ ಆರೋಪವನ್ನು ಹೇಳಿಕೊಂಡರು. ವೀಕ್ಷಕರು ಮೈಮರೆತವರಂತೆ ಅದನ್ನೆಲ್ಲಾ ಕಣ್ಣಗಲಿಸಿ ನೋಡಿದರು.

ಮಾರನೆಯ ದಿನ ಪತ್ರಿಕೆ, ಟಿ.ವಿ., ಸೋಶಿಯಲ್ ಮೀಡಿಯಾಗಳಲ್ಲಿ ಇದೇ ಸುದ್ದಿ. ರೂಪೇಶ್ ಏಕಾಏಕಿ ದೇಶದ ಗಮನ ಸೆಳೆಯುವಷ್ಟು ಜನಪ್ರಿಯನಾಗಿಬಿಟ್ಟ. ಆತನ ‘ರಂಗವಿಲಾಸ’ ತಂಡಕ್ಕೆ ಸೇರಲು ಕಲಾವಿದರು ಮುಗಿಬಿದ್ದರು.

ಬೇರೆ ಬೇರೆ ಜಿಲ್ಲಾ ಕಾರಾಗೃಹಗಳಲ್ಲಿದ್ದ ಖೈದಿಗಳು ತಮಗೂ ನಾಟಕ ಮಾಡಿಸುವಂತೆ ಸರ್ಕಾರಕ್ಕೆ ಕಾಗದಗಳನ್ನು ಬರೆಯತೊಡಗಿದರು. ಪರಿಣಾಮ ಸರ್ಕಾರದಿಂದಲೆ ರೂಪೇಶ್ ಹಾಗೂ ತಂಡಕ್ಕೆ ಆಫರ್ ಬರಲು ಶುರುವಾಯಿತು. ಈ ಬಾರಿ ರೂಪೇಶ್‌ಗೆ ರಾಜ್ಯೋತ್ಸವ ಪ್ರಶಸ್ತಿ ಬಂದರೂ ಆಶ್ಚರ್ಯವಿರಲಿಲ್ಲ.

***

ಏತನ್ಮಧ್ಯೆ ಮಿಂಡಳ್ಳಿಯಲ್ಲಿ ಒಂದು ಬದಲಾವಣೆ. ಮಾಮಿ ತೀರಿಹೋಗಿದ್ದರು. ಅನಂತರ ಅವರ ಮಕ್ಕಳಿಗೆ ಮದುವೆಗಳಾಗಿ ಹೆಂಡತಿಯರು ಬೇರುಬಿಟ್ಟ ಮೇಲೆ ರೂಪೇಶ್‌ನ ತಾಯಿ, ತಂಗಿಗೆ ಕಿರುಕುಳ ಶುರುವಾಯಿತು.

ರೂಪೇಶ್‌ಗೆ ಬೇರೆ ದಾರಿಯಿರಲಿಲ್ಲ. ತಾನಿರುವ ಫ್ಲ್ಯಾಟ್‌ಗೆ ತಾಯಿ, ತಂಗಿಯನ್ನು ಕರೆತಂದ. ನಂದಿನಿಗೆ ವ್ಯವಹಾರಕ್ಕೆ ಬೇಕಾಗುವಷ್ಟು ಕನ್ನಡ ಬರುತ್ತಿತ್ತು. ತಾಯಿ, “ಯಾರೋ ಇವಳು?” ಎಂದದ್ದಕ್ಕೆ ರೂಪೇಶ್ ಏನು ಹೇಳಿಯಾನು?, “ನಾಟಕದ ಟೀಂನವ್ರು” ಅಂದ. “ಯಾವಾಗ್ಲೂ ಇಲ್ಲೇ ಇರ್ತಾಳಾ!?” “ಅಮ್ಮಾ! ನಿನಗೆ ಇವೆಲ್ಲಾ ಅರ್ಥ ಆಗೋಲ್ಲ, ನೀ ನಿನ್ನ ಪಾಡಿಗೆ ಆರಾಮವಾಗಿರು!” ಮೀರಾಳಿಗೆ ಏನಾದ್ರೂ ಬೇಕಾದ್ರೆ ನನ್ನ ಕೇಳು, ತಗೋ ಈ ದುಡ್ಡು!

***

ತಿಂಗಳು ಕಳೆಯುವುದರಲ್ಲಿ ನಂದಿನಿಗೂ-ಸೀತಮ್ಮನವರಿಗೂ ಜಗಳ ಹತ್ತಿಕೊಂಡಿತು. ಮೀರಾ ಬುದ್ಧಿಮಾಂದ್ಯಳಾದರೂ ತಮ್ಮಮ್ಮನಿಗೆ ಏನೋ ಮಾಡ್ತಾ ಇದಾಳೆ ಇವಳು ಎಂಬಂತೆ ನಂದಿನಿ ಮೇಲೆ ಬ್ಬೆ….ಬ್ಬೆ….ಬ್ಬೆ…. ಎಂದು ಹೊಡೆಯುವಂತೆ ಹೋಗುತ್ತಾಳೆ.

ರೂಪೇಶ್‌ಗೆ ಹೊರಗೆಲ್ಲಾ ಸಾಕಷ್ಟು ಮರ್ಯಾದೆ, ಸನ್ಮಾನ ದೊರೆತರೆ ಮನೆಯಲ್ಲಿ ಮಾತ್ರ ನೆಮ್ಮದಿ ಹೋಯ್ತು. ಒಮ್ಮೆ ಡಿಲ್ಲಿಯಿಂದ ಸನ್ಮಾನ ಸ್ವೀಕರಿಸಿ ರಾತ್ರಿಯೆಲ್ಲ ನಿದ್ದೆಗೆಟ್ಟು ಮನೆಗೆ ಬಂದರೆ ತಾಯಿ ಹಾಗೂ ನಂದಿನಿ ಶರಂಪರ ಜಗಳ ಕಾಯ್ತಾ ಇದಾರೆ.

ಇಬ್ಬರಿಗೂ ತಾವೇ ಫಸ್ಟ್ ವರದಿ ಕೊಡಬೇಕು ಎಂಬ ಉಮೇದು.

ತಾಯಿ ಕಿರುಚಿದಳು: “ನೀನು ಊರೂರು ಸುತ್ತುತ್ತಾ ಇರು; ಈ ಲೌಡಿ ಯಾರ್ಯಾರನ್ನೋ ಕರ್ಕೊಂಡು ಮಲಿಕ್ಕಳ್ಳಿ.”

“ಕ್ಯಾ….. ಕಹಾ ಕ್ಯಾ….. ಕಹಾ” ಅರಚುತ್ತಾ ನಂದಿನಿ ತನ್ನದೇ ವರದಿ ಒಪ್ಪಿಸಿದಳು. “ಈ ಮುದುಕಿಗೆ ಹಾಗೂ ನಿನ್ನ ಲೂಸ್ ತಂಗಿಗೆ ವಾಷ್‌ರೂಂ ಬಳಸಲು ಬರೋಲ್ಲ. ಥೂ! ನನಗಂತೂ ವಾಕರಿಕೆ ಬರುತ್ತೆ ಈ ಮನೆಯಲ್ಲಿ.”

ರೂಪೇಶ್‌ಗೆ ನಿದ್ದೆ ಬೇಕಿತ್ತು. ಆದರೆ ಅದು ಈಗ ಸಿಗುವಂತಿಲ್ಲ.

ಅಂದು ರೂಪೇಶ್, ನಂದಿನಿಯನ್ನು ಅಕ್ಷರಶಃ ಗಾಳಿಯಲ್ಲಿ ತೇಲಾಡಿಸಿದ್ದ, ಖೈದಿಗಳಿಗೆ – ಅದೂ ನಟೋರಿಯಸ್ ಕ್ರೈಂ ಮಾಡಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ–ತರಬೇತಿ ನೀಡಿ, ಅವರಿಂದಲೇ ನಾಟಕವೊಂದನ್ನು, ಪಬ್ಲಿಕ್‌ನಲ್ಲಿ ಆಡಿಸುವ ತನ್ನ ಪ್ರಯೋಗಕ್ಕೆ ಕೋರ್ಟ್ ನೀಡಿದ ಆದೇಶದ ಒಪ್ಪಿಗೆಗೆ ಅವನು ಸಖತ್ ಥ್ರಿಲ್ಲಾಗಿದ್ದ.

ನಂದಿನಿ ಇಲ್ಲದ ಹೊತ್ತು ನೋಡಿ ರೂಪೇಶ್ ತಾಯಿಗೆ ಹೇಳಿದ:

“ನಾಟಕದ ಆರ್ಟಿಸ್ಟ್‌ಗಳು ಇರೋದೆ ಹೀಗೆ. ನೀನು ಅಡ್ಜೆಸ್ಟ್ ಮಾಡ್ಕೋಬೇಕು.”

“ಅವಳು ನಿನ್ನ ಹೆಂಡ್ತಿನಾ? ನಿಜ ಹೇಳು?”

“ಅಲ್ಲ!”

“ಮತ್ತೆ?”

“ನಿನಗರ್ಥ ಆಗೋಲ್ಲ!”

“ಎಲ್ಲಾ ಆಗುತ್ತೆ!”, “ನಿಮ್ಮ ಅಪ್ಪ ಕೂಡ, ಒಬ್ಬಳನ್ನ ಹಿಂಗೇ ಇಟ್ಕಂಡಿದ್ದ!”

“ಅಮ್ಮಾ!”

ಸಾಕು ಸುಮ್ಕಿರೋ! –ಅಮ್ಮ ಅಲ್ಲಿಂದ ಎದ್ದು ಒಳನಡೆದಳು.

***

ಎರಡು ದಿನ ಬಿಟ್ಟು ನಂದಿನಿಗೆ ರೂಪೇಶ್ ಬಿನ್ನಯಿಸಿದ;

“ಅಮ್ಮಾ, ಹಳೆಕಾಲದವಳು. ನಿನ್ನ ಕುತ್ತಿಗೆಯಲ್ಲಿ ಒಂದು ತಾಳಿ ಇಲ್ಲವಲ್ಲ ಅಂತ ಅವಳಿಗೆ ಬೇಜಾರು.”

“ರಬೀಶ್!”

“ನನಗರ್ಥ ಆಗುತ್ತೆ!” ಅಮ್ಮನಿಗೆ……?!”

ಮತ್ತೆ ‘ರಬೀಶ್’ ಅಂದಳು.

“…….ಅಂದರೆ, ನನ್ನ ಮಾತಿನರ್ಥ…..” ರೂಪೇಶ್ ಮಾತು ಸತ್ತವನಂತೆ ಸುಮ್ಮನಾದ. ನಂದಿನಿಗೂ ಮಾತು ಬೇಕಿರಲಿಲ್ಲ. ಸುಮ್ಮನಾದಳು.

***

ಸೀತಮ್ಮನ ಗೊಣಗಾಟ ನಿಲ್ಲುವ ಲಕ್ಷಣ ಕಾಣಲಿಲ್ಲ. ಒಂದೊಮ್ಮೆ ಈಕೆ ಸತ್ತು ಹೋಗಬಾರದಿತ್ತ ಎಂಬಷ್ಟು ರೂಪೇಶ್ ಜಿಗುಪ್ಸೆ ಪಟ್ಟುಕೊಂಡ. ನಂದಿನಿ ಒಂದು ನಾಟಕದ ವರ್ಕ್‌ಷಾಪಿಗೆ ರಿಸೋರ್ಸ್‌ ಪರ್ಸನ್ ಆಗಿ ಮುಂಬಯಿಗೆ ಹೋದವಳು ವಾಪಸ್ ಬರಲಿಲ್ಲ! ಕೇಳಿದರೆ ಅವಳು ಏನು ಹೇಳ್ತಾಳೆ ಅಂತ ರೂಪೇಶ್‌ಗೆ ಗೊತ್ತು. ಅಮ್ಮನಿಗೆ ಖುಷಿಯಾಗಿರಬೇಕು. ಈಕೆ ಒಮ್ಮೆ ಸಾಯಬಾರದಾ ಅಂತ ಅವನು ಮತ್ತೆ ಮತ್ತೆ ಸ್ವಗತದಂತೆ ಹೇಳಿಕೊಂಡ.

***

ರೂಪೇಶ್ ಹೊಸ ಜೀವನಕ್ಕೆ ಹೊಂದಿಕೊಂಡ. ಸೀತಮ್ಮ ಅಡುಗೆ ಮಾಡಿ, ಬಟ್ಟೆ ಒಗೆದು, ಮನೆಯೆಲ್ಲಾ ಕಳೆಕಳೆಯಿಂದ ಕೂಡಿರುವ ಹಾಗೆ ಇಟ್ಟಿರುತ್ತಿದ್ದಳು. ಇದನ್ನು ನೋಡಿದ ಅವನ ಮನಸ್ಸು ಪ್ರಫುಲ್ಲಗೊಳ್ಳುತ್ತಿತ್ತು. ‘ರಂಗವಿಲಾಸ’ ತಂಡ ಈಗ ತುಂಬಾ ಜನಪ್ರಿಯವಾಗಿತ್ತು. ನಲ್ವತ್ತು ಕಲಾವಿದರ ತಂಡವಾಗಿ ಅದು ವಿಸ್ತರಿಸಿತ್ತು. ಸರ್ಕಾರ, ಎನ್.ಜಿ.ಓ.ಗಳ ಸ್ಪಾನ್ಸರ್‌ಗಳು ಅವಕ್ಕೆ ಹೇರಳವಾಗಿ ದೊರೆತು ನಾಟಕಗಳನ್ನು ಒಂದರ ಮೇಲೆ ಒಂದರಂತೆ ಆಡಿ ನಾಡಿನಾದ್ಯಂತ ಹೆಸರಾಯಿತು.

***

ಸೀತಮ್ಮ ಮಗನ ಕೀರ್ತಿಯನ್ನು ನೋಡುತ್ತಾ ಸಂತೋಷದಿಂದಲೇ ಕಣ್ಣು ಮುಚ್ಚಿಕೊಂಡರು. ಮೀರಾಳನ್ನು ಮುಂದೆ ಹೇಗೆ ನೋಡಿಕೊಳ್ಳುವುದು ಎಂಬ ಚಿಂತೆ ರೂಪೇಶ್‌ನನ್ನು ಕಾಡಿತು. ಒಬ್ಬ ಕೆಲಸದವಳನ್ನು ನೇಮಿಸಿಕೊಂಡು ನೋಡಿದ. ಯಾಕೋ ಅದು ಸರಿಬರಲಿಲ್ಲ. ಮೀರಾಳಿಗೆ ಏನೂ ಕೊಡದೆ ತಾನೆ ಎಲ್ಲವನ್ನೂ ಕಬಳಿಸಿಬಿಡುತ್ತಿದ್ದಳು. ಅಲ್ಲದೆ ಹೊಡೆಯುತ್ತಿದ್ದಳು. ರೂಪೇಶ್ ಆಕೆಯನ್ನು ಬಿಡಿಸಿಬಿಟ್ಟ.

ಅನಂತರ ಕೆಲವೇ ದಿನಗಳಲ್ಲಿ ರೂಪೇಶ್, ನಂದಿನಿಯನ್ನು ಮತ್ತೆ ತನ್ನ ಫ್ಲ್ಯಾಟ್‌ಗೆ ಕರೆದುಕೊಂಡು ಬಂದ. ತಾಯಿ ಸತ್ತು ಹೋದದ್ದನ್ನು ಹೇಳಿದ ಮೇಲೆಯೇ ಆಕೆ ಬರಲು ಒಪ್ಪಿದ್ದು. ಅಲ್ಲದೆ ‘ರಂಗವಿಲಾಸ’ದ ಬೆನ್ನೆಲುಬು ನೀನೇ ಎಂದು ಬೇರೆ ಉಬ್ಬಿಸಿದ್ದ. ನಂದಿನಿ ಈಗ ಒಂದು ಸುತ್ತು ದಪ್ಪ ಆಗಿದ್ದಳು. ಅಲ್ಲದೆ ಕತ್ತಲ್ಲಿ ತಾಳಿ ಬೇರೆ ಇತ್ತು.

“ಏನಿದು? ಹೊಸ ಅವತಾರ?!”- ರೂಪೇಶ್ ಸಹಜ ಕೇಳಿದ.

“ಇಲ್ಲಿಂದ ಹೋದ ಮೇಲೆ ಮನೆಯಲ್ಲಿ ಬಲವಂತವಾಗಿ ಮದುವೆ ಮಾಡಿದ್ರು.”

“ನೀನು ಬೇಡ ಅಂತ ಹಠ ಹಿಡಿಬೇಕಿತ್ತು!”

“ನನಗಿಂತ ಅವರ ಹಠ ಹೆಚ್ಚಿತ್ತು!”

“ಸಾಯ್ತೀನಿ ಅನ್ನಬೇಕಿತ್ತು!”

“ಅವರು ಹಗ್ಗ ಹಿಡಿದು ನನಗಿಂತ ಮುಂಚೆ ನಿಂತಿದ್ದರು!”

“ಆಮೇಲೆ?”

“ಆದೆ ಅಂದಿಟ್ಕೋ…..ಆದರೆ ಅವನು ನನ್ನ ಜೊತೆ ಇರೋಕೆ ಆಗಲಿಲ್ಲ.”

“ಅಂದರೆ?!”

“ಅಂದರೆ – ನಾನು ನಾಟಕದವಳು ಅಂತ ಅವನಿಗೆ ಗೊತ್ತಿರಲಿಲ್ಲವಂತೆ. ಈಗ ಗೊತ್ತಾಗಿ ನನಗೆ ಇವಳು ಬೇಡ ಅಂತ ಹೊರಟೋದ.”

“ಒಳ್ಳೇದೇ ಆಯ್ತು!”

“ಯಾರಿಗೆ?”

ರೂಪೇಶ್ ಬರಿದೆ ನಕ್ಕ.

“ಹ್ಞಾ! ಈಗ ಈ ತಾಳಿ ಇರಲಾ? ತೆಗೆದು ಹಾಕಲಾ?!”

“ಇರಲಿಬಿಡು!”- ರೂಪೇಶ್ ಸಹಜ ಹೇಳಿದ.

***

ಮುಂದೆ ಕಥೆ ಬೇಗ ಬೇಗನೆ ನಡೆದು ಹೋಗುತ್ತದೆ.

ಅದರಂತೆ ಮೊದಲಿಗೆ ತಂಗಿ ಮೀರಾ ಸತ್ತು ಹೋಗುತ್ತಾಳೆ. ಇದು ಸಹಜ ಸಾವಲ್ಲ ಎಂದು ಪುಕಾರು ಎದ್ದು ಪೊಲೀಸ್ ಕೇಸಾಗಿ ರೂಪೇಶ್ ಹಾಗೂ ನಂದಿನಿ ಜೈಲು ಸೇರುತ್ತಾರೆ.

ಏತನ್ಮಧ್ಯೆ ಎನ್.ಜಿ.ಒ. ಒಂದು ರೂಪೇಶ್ ಅವರ ತಾಯಿಯ ಸಾವು ಕೂಡ ಸಹಜ ಅಲ್ಲ, ಅದನ್ನೂ ಕೂಡ ತನಿಖೆ ಮಾಡಿಸಿ ಎಂದು ಕೋರ್ಟ್ನಲ್ಲಿ ಅಪಿಲ್ ಮಾಡುತ್ತಾರೆ.

ರೂಪೇಶ್‌ಗಿರುವ ವರ್ಚಸ್ಸಿನಿಂದ ಬೇಲ್ ಸಿಕ್ಕಿ ಅವರು ಹೊರಗೇನೋ ಬಂದುಬಿಡುತ್ತಾರೆ. ಆದರೆ ಮೀಡಿಯಾದವರು ಪ್ರತಿದಿನ ಹಬ್ಬ ಮಾಡುತ್ತಿರುತ್ತಾರೆ.
ಸ್ವಲ್ಪಕಾಲ ಮುಂಬಯಿಯಲ್ಲಿರ್ತೀನಿ ಎಂದು ನಂದಿನಿ ಹೋಗುತ್ತಾಳೆ. ಅಲ್ಲಿಂದ ಇವನನ್ನೂ ಅಲ್ಲಿಗೇ ಕರೆಸಿಕೊಳ್ಳಲು ನೋಡುತ್ತಾಳೆ. ರೂಪೇಶ್ ಹೋಗುವುದಿಲ್ಲ.

***

ಕೇಸು ಹಳೆಯದಾದ ಹಾಗೆ ವಿಷಯ ಹಳತಾಗಿ ಎಲ್ಲವೂ ಮಾಮೂಲಿಯಾಯಿತು. ರೂಪೇಶ್ ಈಗ ತನ್ನ ಫ್ಲ್ಯಾಟ್‌ನಲ್ಲಿ ಒಬ್ಬನೇ ಇರುತ್ತಾನೆ. ವ್ಹಿಸ್ಕಿ ಹೀರುತ್ತಾ ಏನೇನೋ ನೆನೆಯುತ್ತಾ, ಅಳುತ್ತಾ, ಹಲುಬುತ್ತಾ ರಾತ್ರಿಗಳನ್ನು ಕಳೆಯುತ್ತಾನೆ. ಹಗಲು, ‘ರಂಗವಿಲಾಸ’ ಇದ್ದೇ ಇದೆ!

***

ಒಂದು ರಾತ್ರಿ ಒಬ್ಬ ವ್ಯಕ್ತಿ ರೂಪೇಶ್‌ನನ್ನು ಹುಡುಕಿ ಬಂದ. ಗುರುತು ಹತ್ತದೆ ಪರಿಚಯ ಕೇಳಬೇಕಾಯ್ತು ರೂಪೇಶ್. ಸುಮಾರು ವರ್ಷಗಳ ಹಿಂದೆ ಜೈಲಿನಲ್ಲಿ ನಾಟಕ ಆಡಿಸಿದ ನೆನಪುಕೊಟ್ಟ ಆ ವ್ಯಕ್ತಿ, ಆ ನಾಟಕದಲ್ಲಿ ತಾನು ಊರ ಗೌಡನ ಕ್ಯಾರೆಕ್ಟರ್ ಮಾಡಿದ್ದನ್ನು ಹೇಳಿದ.

“ಅರೆ, ಸೋಮ ಅಲ್ಲವಾ, ಡಬಲ್ ಮರ್ಡರ್ ಕೇಸು?!”

“ಹೌದು! ಸರ್!-ಈಗ ತ್ರಿಬಲ್ ಆಗುವುದು ತಪ್ಪಿತು!”- ವ್ಯಕ್ತಿ ನಕ್ಕ.

“ಹ್ಹೆ! ಹ್ಹೆ! ಹ್ಹೆ! ಏನು ಹೇಳ್ತಾ ಇದೀಯಾ?” – ರೂಪೇಶ್ ಆತಂಕಗೊಂಡ.

“ನೀವು ವರಿ ಆಗ್ಬೇಡಿ ಸರ್, ವಿಷಯ ಇಷ್ಟೇ; ಸನ್ನಡತೆ ಆಧಾರದ ಮೇಲೆ ನನ್ನನ್ನು, ಇನ್ನು 14 ಜನರನ್ನು ಗಾಂಧೀಜಯಂತಿ ದಿನ ರಿಲೀಸ್ ಮಾಡಿದ್ರು. ನಾನು ಸಂತೋಷದಿಂದ ಊರಿಗೆ ಹೋದೆ. ಮಗ, ದೊಡ್ಡವನಾಗಿ ಮದುವೆಯಾಗಿದ್ದ. ಕೈಕೂಸು ಕೂಡ ಒಂದಿತ್ತು. ನಾನು ಹೋದದ್ದೆ, “ನಿಂತ್ಕೋ! ನಮ್ಮ ಅಮ್ಮನ್ನು, ನಮ್ಮಕ್ಕನ್ನು ಕೊಂದ ಕೊಲೆಗಾರ ನೀನು, ಇಲ್ಲಿಗ್ಯಾಕೆ ಬಂದೆ, ಅಂತ ನಾನಾ ಮಾತು ಬೈದುಬಿಟ್ಟ ಸರ್. ನನಗೆ ಎಲ್ಲಿತ್ತೋ ರೋಷ. ಸೂರಿನಲ್ಲಿ ಸಿಕ್ಕಿಸಿದ್ದ ಕುಡುಕೋಲು ಎಳ್ಕೊಂಡೆ… ಹಂಗೇ ನಿಂತ್ಕಂಡುಬುಟ್ಟೆ… ಏನನಿಸಿತೋ ಗೊತ್ತಿಲ್ಲ… ನಿಮ್ಮ ನೆನಪಾಯ್ತು… ನಿಮ್ಮ ನಾಟಕ ನೆನಪಾಯ್ತು….. ಕುಡುಕೋಲು ಅತ್ತ ಎಸೆದೆ. ಇತ್ತ ಬಂದೆ……”-ಸೋಮ ನಿಟ್ಟಿಸಿರುಬಿಟ್ಟ.

ಮಾರನೆಯ ದಿನದಿಂದ ಸೋಮ ಎಂಬ ಮಾಜಿ ಕೊಲೆಗಾರ, ಖೈದಿ ರೂಪೇಶ್‌ಕುಮಾರ್‌ನ ‘ರಂಗವಿಲಾಸ’ ರಂಗತಂಡದಲ್ಲಿ ಕಲಾವಿದನಾಗಿ ಸೇರಿಕೊಂಡ

About The Author

ಆನಂದ್ ಗೋಪಾಲ್

ಆನಂದ್‌ ಗೋಪಾಲ್ ಮೂಲತಃ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಕೋಡಿಹಳ್ಳಿ ಗ್ರಾಮದವರು. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಸಾಹಿತ್ಯದಲ್ಲಿ ಎಂ.ಎ. ಹಾಗೂ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿ.ಎಚ್‌ಡಿ. ಪದವಿ ಪಡೆದಿದ್ದಾರೆ.  ಕಾಲೇಜು ದಿನಗಳಿಂದಲೂ ಕತೆಗಳನ್ನು ಬರೆಯುತ್ತಿರುವ ಆನಂದ್, ಕ್ರೈಸ್ಟ್ ಕಾಲೇಜನ ಕನ್ನಡ ಸಂಘ ಆಯೋಜಿಸಿದ್ದ ಕಥಾಸ್ಪರ್ಧೆಗಳಲ್ಲಿ ಎರಡು ಬಾರಿ, ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಎರಡುಬಾರಿ ಬಹುಮಾನ ಪಡೆದುಕೊಂಡಿದ್ದಾರೆ(ಒಮ್ಮೆ ತೀರ್ಪುಗಾರರ ಮೆಚ್ಚುಗೆ ಪಡೆದಿತ್ತು). ೨೦೨೧ ರಲ್ಲಿ ಇವರ 'ಆಟಗಾಯಿ' ಕಥಾಸಂಕಲನ ಪ್ರಕಟವಾಗಿ, ಅದು ಕಸಾಪ ದತ್ತಿ ಬಹುಮಾನ ಪಡೆದಿದೆ. ಹಲವು ಪತ್ರಿಕೆಗಳಲ್ಲಿ ಇವರ ಕತೆಗಳು ಪ್ರಕಟವಾಗಿವೆ. ಸದ್ಯ ಇವರು ಮೈಸೂರಿನ ಶಾರದಾ ವಿಲಾಸ ಕಾಲೇಜಿನಲ್ಲಿ ಕನ್ನಡ ಭಾಷಾ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ