ಗ್ರಾಮೀಣ ಪ್ರದೇಶವಾದ ಕಾರಣ ಹೆಚ್ಚಿನ ಮನೆಗಳಲ್ಲಿ ಕೋಳಿಗಳನ್ನು ಸಾಕುವ ಕಾರಣ ಮಕ್ಕಳಿಗೆ ಅದರ ಬಗ್ಗೆ ತಿಳಿದಿರಬಹುದು ಅಂತ. ಆಗ ಮಕ್ಕಳಿಗೆ ಕೇಳುತ್ತಾರೆ. ಅವರಿಗೂ ಗೊತ್ತಾಗೋಲ್ಲ. ಆದರೆ ಎಷ್ಟೆಂದರೂ ಮಕ್ಕಳು ತಾನೇ. ಕುತೂಹಲಗಳು ಪರಾಕಾಷ್ಟೆಯಲ್ಲಿ ಇರುವ ಪ್ರಾಯ. ಕೊನೆಗೆ ಕೋಳಿ ತಿನ್ನದ ಮಿಸ್ಸಿನ ಮನೆಯಲ್ಲೇ ಕೋಳಿಸಾಕುವ ಐಡಿಯಾ ಬಂದಿದ್ದು ಮಾತ್ರ ಎಲ್ಲಕ್ಕಿಂತ ಸೂಪರಾಗಿತ್ತು. ಮಿಸ್ಸು ಕೋಳಿಯನ್ನು ಗೂಡಿಗೆ ಹಾಕಲು ಕ್ಕೊಕ್ಕೊಕ್ ಎಂದು ಕರೆಯುವ ದೃಶ್ಯವನ್ನು ಹಾಗೇ ಊಹಿಸಿಕೊಂಡೆ.
ಗಿರಿಧರ್ ಗುಂಜಗೋಡು ಬರೆಯುವ ‘ಓದುವ ಸುಖ’ ಅಂಕಣದಲ್ಲಿ ಮೇದಿನಿ ಕೆ.ಎಸ್. ಅವರ “ಮಿಸ್ಸಿನ ಡೈರಿ” ಕೃತಿಯ ಕುರಿತ ಬರಹ ನಿಮ್ಮ ಓದಿಗೆ
ನನ್ನ ಗೆಳೆಯರ ಬಳಗದಲ್ಲಿ ಹಲವಾರು ಜನ ಶಿಕ್ಷಕ ವೃತ್ತಿಯಲ್ಲಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರಿಂದ ಹಿಡಿದು ವಿಶ್ವವಿದ್ಯಾಲಗಳಲ್ಲಿ ಪಾಠ ಮಾಡುವವರು ಕೂಡಾ ಈ ಪಟ್ಟಿಯಲ್ಲಿದ್ದಾರೆ. ನನ್ನ ಹೆಂಡತಿ ಪಿಯುಸಿಗೆ ಪಾಠ ಮಾಡುತ್ತಾಳೆ. ಅಪ್ಪ sdmcಯ ಅಧ್ಯಕ್ಷರಾಗಿ ಸುಮಾರು ವರ್ಷ ಕೆಲಸ ಮಾಡಿದ್ದರು. ಮಾವ ಪ್ರೌಢಶಾಲಾ ಮುಖ್ಯಶಿಕ್ಷಕರಾಗಿ ನಿವೃತ್ತರಾದವರು. ನನಗೆ ಪಾಠ ಮಾಡುವುದು ಬಹಳ ಕಷ್ಟವೇ ಆದರೂ ಆ ವೃತ್ತಿಯೆಡೆಗೆ ಮತ್ತು ನನಗೆ ಕಲಿಸಿದ ಎಲ್ಲಾ ಶಿಕ್ಷಕರಮೇಲೆ ಗೌರವ ಮತ್ತು ಪ್ರೀತಿಯಿದೆ. ದೀಪ್ತಿಯ ಹಳೆಯ ವಿದ್ಯಾರ್ಥಿಗಳು ಅವಳನ್ನು ಭೇಟಿಯಾಗುವಾಗ, ಅವಳು ಹಾಸ್ಟೇಲಿಗೆ ಹೋದಾಗಲೋ ಅಥವಾ ಕಾಲೇಜಿನಲ್ಲಿಯೋ ಅವಳ ವಿದ್ಯಾರ್ಥಿಗಳು ಅವಳೆಡೆಗೆ ತೋರುವ ಅಕ್ಕರೆ ಕಂಡಾಗ ನಾನೂ ಆ ಕ್ಷೇತ್ರದಲ್ಲಿದ್ದಿದ್ದರೆ ಎಷ್ಟು ಚನ್ನಾಗಿತ್ತು ಅಂತ ಅನ್ನಿಸುತ್ತದೆ.
ವಿಷಯವನ್ನು ಚೂರು ಬದಲಾಯಿಸಿ, ಸಾಮಾಜಿಕ ಜಾಲತಾಣಗಳಲ್ಲಿ ನಿಯಮಿತವಾಗಿ ಬರೆಯೋ ಪ್ರಾಥಮಿಕ ಶಿಕ್ಷಕರಲ್ಲಿ ನಾನು follow ಮಾಡೋದು ಮೇದಿನಿ ಕೆ.ಎಸ್, ಸಂಧ್ಯಾ ನಾಯ್ಕ್ ಮತ್ತೆ ಸುಪ್ರೀತ್ ಡಿಸೋಝಾರನ್ನು. ಒಂದು ವೇಳೆ ಕಣ್ತಪ್ಪಿನಿಂದ ಯಾರಾದರೂ ಪ್ರಾಥಮಿಕ ಶಾಲಾ ಶಿಕ್ಷಕ/ಕಿ ಬರಹಗಾರ/ರ್ತಿಯರ ಇಲ್ಲಿ ಬಿಟ್ಟಿದ್ದರೆ ದಯವಿಟ್ಟು ಕ್ಷಮಿಸಿ ಹೊಟ್ಟೆಗೆ ಹಾಕಿಕೊಳ್ಳಿ.
ಇತ್ತೀಚೆಗೆ ಮೇದಿನಿ ಕೆಎಸ್ ಅವರ ಮಿಸ್ಸಿನ ಡೈರಿ ಬಿಡುಗಡೆಯಾದಾಗ ಸಧ್ಯಕ್ಕೆ ಅದನ್ನು ಓದುವ ಅವಕಾಶ ಸಿಗಲಾರದು ಎಂದೇ ಅಂದುಕೊಂಡಿದ್ದೆ. ಲಾಸ್ ಎಂಜಿಲಿಸ್ಸಿಗೆ ಬಂದ ಕಾರಣ ಹೊಸ ಕನ್ನಡ ಪುಸ್ತಕಗಳನ್ನು ಇಲ್ಲಿರುವತನಕ ಅಲಭ್ಯತೆಯ ಕಾರಣ ಹೊಸ ಕನ್ನಡ ಪುಸ್ತಕಗಳು ಸಿಗುವುದು ಕಷ್ಟ. ತಂದುದನ್ನು ಓದಬೇಕಷ್ಟೇ. ಆದರೆ ಮೇದಿನಿ ಅಕ್ಕೋರ ಪುಸ್ತಕದ ಮೇಲೆ ಸಾಲು ಸಾಲು ಪ್ರತಿಕ್ರಿಯೆಗಳು ಬರುತ್ತಾ ಇರುವಾಗ ಅಂಚೆ ವೆಚ್ಚ ಕಮ್ಮಿಯಿದ್ದರೆ ತರಿಸಿದರೆ ಹೇಗೆ ಅನ್ನಿಸಿ ಮೇದಿನಿಯ ಹತ್ತಿರವೇ ಕೇಳಿದೆ. ಅವಳು ಕೂಡಲೆ ಅಂಚೆ ಕಛೇರಿಯಲ್ಲಿ ವಿಚಾರಿಸಿ ‘ಸಿಕ್ಕಾಪಟ್ಟೆ ಖರ್ಚಾಗ್ತು, ಬ್ಯಾಡಾ ನಿಂಗೆ ವರ್ಕೌಟ್ ಆಗದಿಲ್ಲೆ ಮಾರಾಯಾ’ ಅಂದಳು. ಥಟ್ಟನೆ ನಮ್ಮ ಓನರ್ ಕುಟುಂಬ ರಜಾಕ್ಕೆ ಚೆನ್ನೈಗೆ ಹೋಗಿದಾರೆ ಅವರ ಹತ್ತಿರವೇ ಯಾಕೆ ತರಿಸಬಾರದು ಅನ್ನಿಸಿತು. ಕೂಡಲೆ ನಮ್ಮ ಓನರಿಗೆ ವಾಟ್ಸಾಪ್ ಮಾಡಿ ನನಗಾಗಿ ಒಂದು ಪುಸ್ತಕ ತರಲು ಸಾಧ್ಯವೇ ಅಂತ ಕೇಳಿದೆ. ಅದಕ್ಕೇನಂತೆ ಧಾರಾಳವಾಗಿ ತರೋಣ ಅಂತ ಹೇಳಿ ತಮ್ಮ ವಿಳಾಸ ಕೊಟ್ಟರು. ಮೇದಿನಿಗೆ ಚೆನ್ನೈ ವಿಳಾಸ ಕೊಟ್ಟು ಅಲ್ಲಿಗೆ ಕಳುಹಿಸಲು ಹೇಳಿದೆ.
ಚಿಕ್ಕವರಿದ್ದಾಗ ಅಕ್ಕೋರು ಮತ್ತು ಮಾಷ್ಟ್ರು ಅಂದರೆ ನಮಗೊಂಥರಾ ಬೆರಗು. ಎಲ್ಲಾ ಹಂತದ ಶಿಕ್ಷಕ ಹುದ್ದೆಗಳೂ ಅದರದ್ದೇ ಮೌಲ್ಯ ಹೊಂದಿದ್ದರೂ, ಶಿಕ್ಷಕರೊಂದಿಗೆ ನಮಗೆ ಅತೀ ಹೆಚ್ಚು ಬಾಂಧವ್ಯ ಇರುವುದು ಕೂಡಾ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿಯೇ. ಅದೇ ರೀತಿ ಮಕ್ಕಳ ಮುಂದಿನ ಜೀವನದ ಅಡಿಪಾಯವನ್ನು ಗಟ್ಟಿಗೊಳಿಸುವಲ್ಲಿಯೂ ಈ ಹಂತದ ಶಿಕ್ಷಕರ ಪಾತ್ರವೇ ಹಿರಿದು. ಇಂದು ಪ್ರಾಥಮಿಕ ಶಾಲಾ ಶಿಕ್ಷಣದ ಹಾಗೂ ಶಿಕ್ಷಕರ ಕಲಿಕಾ ಸಾಮರ್ಥ್ಯದ ಬಗ್ಗೆ ಗಂಭೀರವಾದ ಆತಂಕ ಮತ್ತು ಕಾಳಜಿಗಳು ಎದ್ದಿದ್ದರೂ ಎಷ್ಟೋ ಶಿಕ್ಷಕ ಶಿಕ್ಷಕಿಯರು ತಾವೆಷ್ಟು ಸಮರ್ಥರು ಎಂಬುದನ್ನು ನಿರೂಪಿಸುತ್ತಲೇ ಬರುತ್ತಾರೆ. ಅಂಥದ್ದೇ ಒಂದು ಉದಾಹರಣೆ ಮೇದಿನಿ ಅಕ್ಕೋರು ಅಥವಾ ಮೇದಿನಿ ಮಿಸ್ಸಿನದ್ದು.
ಮೇದಿನಿ ಮಿಸ್ಸಿನ ಡೈರಿಯನ್ನು ಓದಬೇಕಾದರೆ ಒಬ್ಬ ಶಿಕ್ಷಕಿಯಾಗಿ ಅವರ ಅನುಭವಗಳ ಜೊತೆಜೊತೆಗೆ ನನ್ನ ಬಾಲ್ಯಕಾಲದ ಶಾಲಾದಿನಗಳ ನೆನಪನ್ನೂ ಅನುಭವಿಸಿದೆ, ಒಬ್ಬ ವಿದ್ಯಾರ್ಥಿಯಾಗಿ ಅವರದೇ ತರಗತಿಯಲ್ಲಿ ಕೂತು ಕೂಡಾ ಅದನ್ನು ಅನುಭವಿಸಿದೆ. ಅವರ ಅಕ್ಷರಗಳು ನಮ್ಮನ್ನು ಅಕ್ಷರಶಃ ಅವರ ತರಗತಿಗೇ ತೆಗೆದುಕೊಂಡು ಹೋಗುತ್ತದೆ. ನಿರೂಪಣೆಯೂ ಅಷ್ಟೇ, ಒಂದೇ ಸಿಟ್ಟಿಂಗಿನಲ್ಲಿ ಮುಗಿಸುವಷ್ಟು ಸರಳ ಮತ್ತು ಸುಂದರವಾಗಿದೆ.
ನಾನು ಪುಸ್ತಕಕ್ಕೆ ಬಂದ ಪ್ರತಿಕ್ರಿಯೆಗಳನ್ನು ಗಮನಿಸುತ್ತಿರುವಾಗ ಬಹಳ ಜನ ‘ಮಿಸ್ಸು ಕೋಳಿ ಸಾಕಬೇಕು’ ಬರಹದ ಬಗ್ಗೆ ಹೇಳಿದ್ದರು. ನನಗೂ ಅಷ್ಟೇ ಅದು ಬಹಳ ಇಷ್ಟವಾಯಿತು. ತಮ್ಮ ತರಗತಿಯಲ್ಲಿ ನಡೆದ ಒಂದು ಘಟನೆಯನ್ನು ಎಷ್ಟು ಸುಂದರವಾಗಿ ಮತ್ತು ಎಷ್ಟು ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ ಅಂದರೆ ನಮ್ಮನ್ನು ಎಷ್ಟು ನಗಿಸುತ್ತದೆಯೋ ಅಷ್ಟೇ ಆಳವಾಗಿ ಚಿಂತನೆಯ ಓರೆಗೆ ಹಚ್ಚುತ್ತದೆ.
ತರಗತಿಯಲ್ಲಿ ಪ್ರಾಣಿಗಳ ಆಯಸ್ಸಿನ ಬಗ್ಗೆ ಚರ್ಚೆ ಮಾಡುತ್ತಿರುವಾಗ ಕೋಳಿಗಳ ಜೀವಿತಾವಧಿಯ ಬಗ್ಗೆ ಚರ್ಚೆ ಬರುತ್ತದೆ. ಮಿಸ್ಸಿಗೆ ಅದರ ವಿವರ ಸಿಕ್ಕದಾಗ ಮಕ್ಕಳ ಹತ್ತಿರವೇ ಕೇಳುತ್ತಾರೆ. ಗ್ರಾಮೀಣ ಪ್ರದೇಶವಾದ ಕಾರಣ ಹೆಚ್ಚಿನ ಮನೆಗಳಲ್ಲಿ ಕೋಳಿಗಳನ್ನು ಸಾಕುವ ಕಾರಣ ಮಕ್ಕಳಿಗೆ ಅದರ ಬಗ್ಗೆ ತಿಳಿದಿರಬಹುದು ಅಂತ. ಆಗ ಮಕ್ಕಳಿಗೆ ಕೇಳುತ್ತಾರೆ. ಆದರೆ ಅವರಿಗೂ ಗೊತ್ತಾಗೋಲ್ಲ. ಆಹಾರಕ್ಕಾಗಿ ಸಾಕುವ ಪ್ರಾಣಿಗಳನ್ನು ಒಂದು ಹಂತಕ್ಕೆ ಬೆಳೆದ ಕೂಡಲೇ ಕೊಲ್ಲುವ ಕಾರಣಕ್ಕೋ, ಅಥವಾ ರೋಗದಿಂದಲೂ, ಅಪಘಾತದಿಂದಲೋ, ನಾಯಿ ಬೆಕ್ಕು ಕಚ್ಚಿಕೊಂಡು ಹೋಗಿ ಸಾಯುವ ಕಾರಣಕ್ಕೋ ಕೋಳಿಗಳ ಆಯಸ್ಸು ಮಕ್ಕಳಿಗೆ ಗೊತ್ತಾಗೋದೇ ಇಲ್ಲ. ಆದರೆ ಎಷ್ಟೆಂದರೂ ಮಕ್ಕಳು ತಾನೇ. ಕುತೂಹಲಗಳು ಪರಾಕಾಷ್ಟೆಯಲ್ಲಿ ಇರುವ ಪ್ರಾಯ. ಕೊನೆಗೆ ಕೋಳಿ ತಿನ್ನದ ಮಿಸ್ಸಿನ ಮನೆಯಲ್ಲೇ ಕೋಳಿಸಾಕುವ ಐಡಿಯಾ ಬಂದಿದ್ದು ಮಾತ್ರ ಎಲ್ಲಕ್ಕಿಂತ ಸೂಪರಾಗಿತ್ತು. ಮಿಸ್ಸು ಕೋಳಿಯನ್ನು ಗೂಡಿಗೆ ಹಾಕಲು ಕ್ಕೊಕ್ಕೊಕ್ ಎಂದು ಕರೆಯುವ ದೃಶ್ಯವನ್ನು ಹಾಗೇ ಊಹಿಸಿಕೊಂಡೆ.
ಇನ್ನೊಂದು ಇಷ್ಟವಾದ ಅಧ್ಯಾಯ ಹೇನುಗಳ ಬಗ್ಗೆ. ಚಿಕ್ಕವನಿದ್ದಾಗ ನನ್ನ ತಲೆಯಲ್ಲಿ ಸುಮಾರು ಹೇನುಗಳಾಗುತ್ತಾ ಇದ್ದವು. ಈಗ ಹೇನುಗಳಾಗುವಷ್ಟು ದಟ್ಟ ಕೂದಲಿದ್ದಿದ್ದರೆ ಎಷ್ಟು ಒಳ್ಳೇದಿತ್ತು ಅಂತ ಅನ್ನಿಸುತ್ತದೆ ಅದು ಬೇರೆ ಪ್ರಶ್ನೆ. ಆಗ ನನ್ನತ್ತೆ ಅಂದರೆ ಅಪ್ಪನ ತಂಗಿಗೆ ನನ್ನ ಹೇನು ತೆಗೆಯುವುದು ಬಹಳ ಇಷ್ಟದ ಕೆಲಸವಾಗಿತ್ತು. ಏನಾದರೂ ಮಸ್ಕಾ ಹೊಡೆದು ನನ್ನ ಕೂರಿಸಿಕೊಂಡು ಹೇನು ತೆಗೆಯಲು ಶುರುಮಾಡಿದರೆ ನನಗೋ ಹಿಂಸೆ. ಮಿಸ್ಸಿನ ಡೈರಿಯಲ್ಲಿ ಹೇನುಗಳ ಕುರಿತ ಅಧ್ಯಾಯ ನೋಡುವಾಗ ನನಗೆ ಮೊದಲು ನನ್ನ ಬಾಲ್ಯದ್ದೇ ನೆನಪಾಯಿತು. ಆದರೆ ಅತ್ತೆಯರು, ಚಿಕ್ಕಮ್ಮಂದಿರು ಹೇನು ತೆಗೆಯೋದನ್ನು ಕೇಳಿದ್ದ, ನೋಡಿದ್ದ ನಾನು ಮಿಸ್ಸು ಹೇನು ತೆಗೆಯುವ ಕೆಲಸ ಮಾಡಿದ್ದನ್ನು ಕೇಳಿದ್ದು ಇದೇ ಮೊದಲ ಬಾರಿ. ಹೇನುಗಳಿಂದ ತುಂಬಿದ ಮಕ್ಕಳ ತಲೆಯಿಂದ ಹೇನು ತೆಗೆದ ಬಗ್ಗೆ ಬರೆದಿದ್ದು ನಿಜಕ್ಕೂ ಮನಮುಟ್ಟುವಂತಿದೆ. ಇದನ್ನು ವಿವರಿಸುವಾಗಲೂ ತಾನು ಏನೋ ಸಾಧಿಸಿದೆ ಎಂಬ ಅಹಂಕಾರವಿರದೇ ತಿಳಿಹಾಸ್ಯದಲ್ಲೇ ಹೇಳುತ್ತಾ ಹೋಗುತ್ತಾರೆ.
ಆದರೆ ನನಗೆ ಎಲ್ಲಕ್ಕಿಂತ ಇಷ್ಟವಾದುದು ಕೊನೆಯ ಅಧ್ಯಾಯ ‘ಇವಿಷ್ಟನ್ನೂ ಹೇಳಲೇಬೇಕು’. ಮೇದಿನಿ ಅದನ್ನು ಬರೆದ ರೀತಿ ಮಾತ್ರ ಬಹಳ ಅಂದರೆ ಬಹಳ ಇಷ್ಟವಾಯಿತು. ಬಹಳ ಪ್ರಾಮಾಣಿಕ ಬರಹ ಅಂತ ಅನ್ನಿಸಿತು. ಅದನ್ನು ಹೇಗೆ ಅಂತ ವರ್ಣಿಸಲು ನನ್ನಲ್ಲಿ ಪದಗಳಿಲ್ಲ. ಆದರೆ ತುಂಬಾ ಇಷ್ಟವಾಯಿತು ಅಂತ ಮಾತ್ರ ಹೇಳಬಲ್ಲೆ.
ಇಂದಿನ ಶಿಕ್ಷಣ ವ್ಯವಸ್ಥೆಯ ಬಗ್ಗೆ, ಶಿಕ್ಷಕರ ಗುಣಮಟ್ಟದ ಬಗ್ಗೆ ಟೀಕೆ ಮಾಡಲು ನಮಗೆ ಹಲವಾರು ವಿಷಯಗಳು ಸಿಗುತ್ತವೆ. ಎಷ್ಟೋ ವಿಷಯಗಳು ನಿಜವಾಗಿಯೂ ತಿದ್ದಿಕೊಳ್ಳುವಂಥದ್ದು ಕೂಡಾ ಇರುತ್ತವೆ. ಆದರೆ ಒಮ್ಮೆ ಶಿಕ್ಷಕರ ಜಾಗದಲ್ಲಿ ಕೂಡಾ ನಿಂತು ನೋಡಿದಾಗ ಅವರ ಕಷ್ಟಗಳು ಅರಿವಿಗೆ ಬರುತ್ತಾ ಹೋಗುತ್ತದೆ. ಸರಕಾರಿ ಶಾಲಾ ಶಿಕ್ಷಕರಾಗಲೀ ಅಥವಾ ಖಾಸಗೀ ಶಾಲಾ ಶಿಕ್ಷಕರಾಗಲೀ ಅವರಿಗೆ ಅವರದ್ದೇ ಆದ ಸವಾಲುಗಳಿವೆ. ಎಷ್ಟೋ ಬಾರಿ ಕಲೀಕೇತರ ಚಟುವಟಿಕೆಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳುವುದು ಕೂಡಾ ಅತಿಯಾಗುತ್ತಿದೆ ಎಂದು ಅನ್ನಿಸುತ್ತದೆ. ಶಿಕ್ಷಕರಿಗೆ ಬೆಟ್ಟದಷ್ಟು ಪಠ್ಯೇತರ ಹೊಣೆಗಾರಿಕೆಗಳನ್ನು ಕೊಟ್ಟು ಪಠ್ಯದ ಕಡೆಯೂ ಗಮನಹರಿಸಿ ಅನ್ನೋದು ಫೇರ್ ಅಂತ ನನಗೆ ಅನ್ನಿಸೋಲ್ಲ. ಅದೇ ಖಾಸಗೀ ಶಾಲಾ ಶಿಕ್ಷಕ ಶಿಕ್ಷಕಿಯರ ಕಷ್ಟ ಇನ್ನೊಂದು ತರಹದ್ದು. ಅವರ ಕೆಲಸದ ಒತ್ತಡ ಯಾವ ಕಾರ್ಪೋರೇಟ್ ಕೆಲಸಕ್ಕೂ ಕಮ್ಮಿಯಿಲ್ಲ.
ಅಮೆರಿಕಾದಂತಹ ಅಲ್ಟ್ರಾ ಕ್ಯಾಪಿಟಲಿಸ್ಟ್ ದೇಶದಲ್ಲಿ ಕೂಡಾ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸರಕಾರದ ಕೈಲಿದೆ. ತೀರಾ ಬಹುಕೋಟ್ಯಧೀಶರ ಮಕ್ಕಳು ಮನೆಶಾಲೆ, ಕೆಲ ಖಾಸಗಿ ಶಾಲೆಗಳ ಮೊರೆ ಹೋಗುತ್ತಾರೆ ಅನ್ನುವುದನ್ನು ಬಿಟ್ಟರೆ ಉಳಿದವರೆಲ್ಲಾ ಕಲಿಯುವುದು ಸಾರ್ವಜನಿಕ ಶಾಲೆಗಳಲ್ಲೆ. ನಾನು ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯ ವಿರೋಧಿಯಲ್ಲ. ಆದರೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮತ್ತು ಆರೋಗ್ಯ ಯಾವತ್ತೂ ಸರಕಾರದ ಕೈಲಿರಬೇಕು ಇಲ್ಲದಿದ್ದರೆ ಸರಕಾರದ ತೀವ್ರವಾದ ನಿಗಾದಲ್ಲಿ ಇರಬೇಕು ಅಂತ ಬಯಸುತ್ತೇನೆ.
ಆದರೆ ನಾನು ನನ್ನ ಮಗನನ್ನು ಕಳುಹಿಸುತ್ತಾ ಇರುವುದು ಖಾಸಗೀ ಶಾಲೆಗೇ. ಒಮ್ಮೆ ಕನ್ನಡ ಮಾಧ್ಯಮ ಶಾಲೆಗೆ ಸೇರಿಸಹೊರಟರೂ, ಇಂದು ಇಲ್ಲಿ ನಾಳೆ ಬೇರೆ ರಾಜ್ಯವೋ ಬೇರೆ ದೇಶವೋ ಅನ್ನುವಂತಹ ಕೆಲಸದಲ್ಲಿರುವ ನನಗೆ ಅದು ಸುಲಭಸಾಧ್ಯವೂ ಆಗಿರಲಿಲ್ಲ. ಆದರೂ ಇದರ ಬಗ್ಗೆ ಬರೆಯುವಾಗ ಒಂದು ಅಪರಾಧೀ ಪ್ರಜ್ಞೆ ಮನಸ್ಸನ್ನು ಚುಚ್ಚುತ್ತಲೇ ಇರುತ್ತದೆ.
(ಕೃತಿ: ಮಿಸ್ಸಿನ ಡೈರಿ, ಲೇಖಕರು: ಮೇದಿನಿ ಕೆ.ಎಸ್., ಪ್ರಕಾಶಕರು: ವೀರಲೋಕ ಪುಸ್ತಕ, ಬೆಲೆ: 200/-)
ಊರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಗುಂಜಗೋಡು. ಸದ್ಯ ಮೈಸೂರಿನಲ್ಲಿ ವಾಸ. ಓದು, ತಿರುಗಾಟ, ಚದುರಂಗ ಇತ್ಯಾದಿ ಇಷ್ಟದ ಆಸಕ್ತಿಗಳು. ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.