“ನೀನು ಇಂಗ್ಲಿಷನ್ನು ಕನ್ನಡ ಭಾಷೆಯ ಅಕ್ಷರ ಸಂಯೋಜನೆ ಜೊತೆ ಹೋಲಿಸಿ ಬರೆಯಬೇಡ. ನೀನು ಇಂಗ್ಲಿಷನ್ನು ಚೆನ್ನಾಗಿ ಕಲಿಯಬೇಕಾಗಿರುವುದು ನಿನ್ನ ಅಗತ್ಯಕ್ಕಾಗೇ ಹೊರತು ಇಂಗ್ಲಿಷಿನವರ ಅಗತ್ಯಕ್ಕಾಗಿ ಅಲ್ಲ. ನಿನಗೆ ಅದರಲ್ಲಿರುವ ಪ್ರಪಂಚದ ಜ್ಞಾನವೆಲ್ಲಾ ಬೇಕಾದರೆ ಈ ಸಬೂಬುಗಳನ್ನೆಲ್ಲಾ ಬಿಟ್ಟು ಕಷ್ಟಪಟ್ಟು ಕಲಿ ಅದು ಬಿಟ್ಟು ಕನ್ನಡದಲ್ಲೇ ಎಲ್ಲಾ ಇದೆ ಎಂದು ತಿಳಿದು ಕೂಪಮಂಡೂಕ ಆಗಬೇಡ.”
ಡಾ. ಎಚ್.ಎಸ್. ಸತ್ಯನಾರಾಯಣ ಅವರ “ತೇಜಸ್ವಿ ಪ್ರಸಂಗಗಳು” ಕೃತಿಯ ಕೆಲವು ಪ್ರಸಂಗಗಳು ನಿಮ್ಮ ಓದಿಗೆ
ಮಗನಿಗೆ ಕುವೆಂಪು ಹೇಳಿದ ಕಿವಿಮಾತು
ಪೂರ್ಣಚಂದ್ರ ತೇಜಸ್ವಿ ಹದಿನೆಂಟರ ಹರೆಯದಲ್ಲಿ ಕವಿತೆಗಳನ್ನು ಬರೆಯುತ್ತಿದ್ದರು. ಸಮಾಧಾನವಾಗದೆ ಕೆಲವನ್ನು ಹರಿದೆಸೆಯುತ್ತಿದ್ದರು. ಸುಮಾರಾಗಿವೆ ಎನಿಸಿದ ಕೆಲವನ್ನು ತಂದೆಯ ಓದಿಗಾಗಿ ಕಳಿಸುತ್ತಿದ್ದರು. ಅಷ್ಟರಲ್ಲಾಗಲೇ ‘ಲಿಂಗ ಬಂದ’ ಕತೆಗೆ ಪ್ರಜಾವಾಣಿಯ ಬಹುಮಾನ ಬಂದಿತ್ತು. ಈ ಸಂದರ್ಭದಲ್ಲಿ ಕುವೆಂಪು ಮಗನಿಗೆ ಬರೆದ ಪತ್ರದ ಕೆಲವು ವಿಚಾರಗಳನ್ನು ಇಲ್ಲಿ ಕಾಣಿಸಿರುವೆ. (ಇದರ ಪೂರ್ಣ ಪಾಠ ಬೇಕಾದವರು ಶ್ರೀ ನರೇಂದ್ರ ರೈ ದೇರ್ಲ ಅವರು ಸಂಪಾದಿಸಿರುವ ‘ತೇಜಸ್ವಿ ಪತ್ರಗಳು’ ಎಂಬ ಬೃಹತ್ ಹೊತ್ತಿಗೆಯನ್ನು ಗಮನಿಸಬಹುದು.) ಕವಿತೆ ಬರೆಯ ಬಯಸುವ ಪ್ರತಿಯೊಬ್ಬರಿಗೂ ಕುವೆಂಪು ಅವರ ಈ ಮಾತುಗಳನ್ನು ಗಮನಿಸಲೇಬೇಕು.
ಪ್ರೀತಿಯ ಚಿರಂಜೀವಿ ತೇಜಸ್ವಿಗೆ,
…………………….ನಿನ್ನ ಆ ಕವನಗಳು ಹಸುಳೆಯ ಮೊದಲ ತೊದಲಂತೆ ಮನೋಹರವಾಗಿವೆ. ಆ ತೊದಲು ಕ್ರಮೇಣ ವಿಕಾಸವಾಗಿ ಉತ್ತಮ ಫಲ ನೀಡಲಿ ಎಂದು ಹಾರೈಸುತ್ತೇನೆ. ಅಂದು ನಾನು ತಿಳಿಸಿದಂತೆ-ನೀನು ಕನ್ನಡ ಛಂದಸ್ಸಿನ ಸ್ಥೂಲ ಪರಿಚಯವನ್ನಾದರೂ ಮಾಡಿಕೊಳ್ಳಲೇಬೇಕು. ಏಕೆಂದರೆ ಸಾಹಿತ್ಯದ ಭಾಷೆಗೆ ವ್ಯಾಕರಣ ಶುದ್ಧಿ ಹೇಗೆ ಅವಶ್ಯಕವೋ ಹಾಗೆಯೇ ಕಾವ್ಯಕ್ಕೆ ಛಂದಸ್ಸಿನ ಅರಿವು ಬೇಕು. ಬೈಸಿಕಲ್ಲನ್ನು ಚೆನ್ನಾಗಿ ಕಲಿತ ಮೇಲೆ ಕೈ ಬಿಟ್ಟೋ ಕಾಲುಬಿಟ್ಟೋ ಸವಾರಿ ಮಾಡುವ ಪ್ರವೀಣನಂತೆ ನುರಿತ ಮೇಲೆ ಕವಿ ಛಂದಸ್ಸನ್ನು ತನಗೆ ಬೇಕಾದಂತೆ ಬಳಸಿಕೊಳ್ಳುವ ಸ್ವಾತಂತ್ರ್ಯ ಪಡೆಯುತ್ತಾನೆ. ಆದರೆ ಮೊದಲು ಮೊದಲು ಒಂದು ನಿಯಮಕ್ಕೆ ಒಳಗಾಗಿ ಕಲಿಯುವುದು ಮೇಲು. ನನ್ನ ಅನುಭವವನ್ನೇ ನಿನಗೆ ಹೇಳುತ್ತಿದ್ದೇನೆ.
ಛಂದಸ್ಸು ಮಾತ್ರವಲ್ಲದೆ ಭಾಷೆಯೂ ಮುಖ್ಯ. ಹಾಗೆಯೇ ಆಲೋಚನೆ ಭಾವಗಳೂ ಮುಖ್ಯ. ಭಾಷೆಯನ್ನು ಪೂರ್ವ ಸಾಹಿತ್ಯಾಭ್ಯಾಸದಿಂದ ಪಡೆಯಬೇಕು. ಉಳಿದುದನ್ನು ಜೀವನದ ಅನುಭವವೂ ಸಾಹಿತ್ಯಾಧ್ಯಯನವೂ ಸಂಪಾದಿಸಿ ಕೊಡುತ್ತದೆ. ವಿಚಾರ ಬಹಳ ದೊಡ್ಡದು. ಇಲ್ಲಿ ಸೂತ್ರಪ್ರಾಯವಾಗಿ ತಿಳಿಸಿದ್ದೇನೆ. ಒಟ್ಟಿನಲ್ಲಿ ಹೇಳುವುದಾದರೆ, ನಿನ್ನ ಪ್ರಥಮ ಪ್ರಯತ್ನದಲ್ಲಿಯೆ, ನೀನು ದೃಢಮನಸ್ಸಿನಿಂದ ಕಾರ್ಯೋನ್ಮುಖಿಯಾದರೆ, ಮುಂದೆ ಒಳ್ಳೆಯ ಫಲವಾಗುವ ಸೂಚನೆ ಇದೆ.
……………………….. -ಕುವೆಂಪು
ಕಾವ್ಯ ಕೃಷಿಯಲ್ಲಿ ಅಷ್ಟಾಗಿ ತೊಡಗಿಕೊಳ್ಳದ ತೇಜಸ್ವಿಯವರಿಂದ ಕನ್ನಡದ ಗದ್ಯ ಸಾಹಿತ್ಯಕ್ಕೆ ದೊಡ್ಡ ಲಾಭವಾಯಿತು. ಅಲ್ಲದೆ, ನಳಿನಿ ದೇಶಪಾಂಡೆ ಎಂಬ ಹೆಸರಿನಲ್ಲಿ ತೇಜಸ್ವಿಯವರು ಬರೆದ ಕವಿತೆಗಳು ನಮ್ಮ ಅನೇಕ ಕವಯಿತ್ರಿಯರಿಗೆ ಮಾದರಿಯಾಗಿದ್ದು ಈಗ ಇತಿಹಾಸ.
ಕವಿಶೈಲದ ಕಲ್ಲು-ತೇಜಸ್ವಿ ಬದ್ಧತೆ
ಕುಪ್ಪಳಿಯ ‘ಕವಿಶೈಲ’ಕ್ಕೆ ಹೋದವರನ್ನು ಅಲ್ಲಿನ ಗ್ರೀಕ್ ಶೈಲಿಯ ವಿನ್ಯಾಸದ ಬೃಹತ್ ಕಲ್ಲುಗಳ ವಿನ್ಯಾಸ ಆಕರ್ಷಿಸದೆ ಬಿಡದು. ಕವಿ ಸಮಾಧಿಗಿಂತಲೂ ಆ ಕಲ್ಲುಗಳೇ ಕವಿಶೈಲದ ಐಕಾನುಗಳಾಗಿಬಿಟ್ಟಿವೆ. ಅದನ್ನು ಆ ಮಾದರಿಯಲ್ಲಿ ನಿಲ್ಲಿಸಲು ಕೆ.ಟಿ. ಶಿವಪ್ರಸಾದ್, ಮತ್ತಿತರೊಂದಿಗೆ ತೇಜಸ್ವಿಯವರ ಸಮಾಲೋಚನಾ ಸಂಕಲ್ಪದ ಕೊಡುಗೆ ದೊಡ್ಡದು.
ಲಘು ಹೃದಯಾಘಾತವಾಗಿದ್ದ ಕಾರಣ ತೇಜಸ್ವಿ ಚಿಕಿತ್ಸೆಗೆಂದು ಮೈಸೂರಿನ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಗೆ ದಾಖಲಾಗಿದ್ದರು. ಕುಪ್ಪಳಿಗೆ ಬೃಹತ್ ಕಲ್ಲುಗಳಿದ್ದ ಲಾರಿಗಳ ಲೋಡ್ ಬಂದಿರುವ ವಿಚಾರ ತಿಳಿಯಿತು. ತಕ್ಷಣವೇ ಅಲ್ಲಿಗೆ ತೆರಳಬೇಕೆಂಬ ತುಡಿತ ಶುರುವಾಯಿತು.
ಮನೆಯವರು, ಆಪ್ತ ಹಿತೈಷಿಗಳು ಈಗ ಪ್ರಯಾಣ ಬೇಡವೆಂದರು. ಕೊನೆಗೆ ಡಾಕ್ಟರ್ ಅನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವಂತೆ ಕೋರಿದರು. ಅನುಮತಿಸದ ಡಾಕ್ಟರ್ ಮತ್ತಷ್ಟು ದಿನಗಳ ವಿಶ್ರಾಂತಿಯ ಅಗತ್ಯವಿರುವುದನ್ನು ಒತ್ತಿ ಹೇಳಿದರು. ಯಾರು ಏನೇ ಸಮಾಧಾನ ಹೇಳಿದರೂ ಕೇಳುವ ಮನಃಸ್ಥಿತಿಯಲ್ಲಿ ತೇಜಸ್ವಿ ಇರಲಿಲ್ಲ. ಕೊನೆಗೆ “ನನ್ನ ಆರೋಗ್ಯಕ್ಕೆ ನಾನೇ ಜವಾಬ್ದಾರಿ” ಎಂದು ಆಸ್ಪತ್ರೆಯವರಿಗೆ ಬರೆದುಕೊಟ್ಟು, ಆಸ್ಪತ್ರೆಯಿಂದ ನೇರವಾಗಿ ತಾವೇ ಕಾರು ಓಡಿಸಿಕೊಂಡು ಬಂದ ತೇಜಸ್ವಿ, ಕಲ್ಲು ಜೋಡಣೆ ತಮ್ಮ ಕಲ್ಪನೆಯಂತೆ ನೆರವೇರಿದ ಬಳಿಕವಷ್ಟೇ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು! ಹಾಗಿತ್ತು ಅವರ ಬದ್ಧತೆ.
ನಾನೊಮ್ಮೆ ಈ ವಿಚಾರ ಮಾತಾಡುತ್ತಾ “ಡಾಕ್ಟರ್ ಹೇಳಿದರೂ ಕೇಳದೆ ಹೊರಟುಬಿಟ್ರಂತಲ್ಲಾ ಸಾರ್” ಎಂದಿದ್ದಕ್ಕೆ “ಅಯ್ಯೋ ಡಾಕ್ಟ್ರು ಹೇಳೋದ್ನೆಲ್ಲಾ ಕೇಳುಸ್ಕೋಬೇಕಷ್ಟೇ. ಅದ್ನೆಲ್ಲಾ ಫಾಲೋ ಮಾಡುತ್ತಾ ಕೂತ್ರೆ ಬದ್ಕೊಕ್ಕಾಗುತ್ತೇನ್ರಿ?” ಎಂದು ಕಣ್ಣುಮಿಟುಕಿಸಿ ನಕ್ಕ ನಗೆ ಈಗಲೂ ಕಣ್ಮುಂದೆ ಹಾಗೇ ಇದೆ!
‘ಹಿ’ ಮತ್ತು ‘ಶಿ’ ಸಂಶಯಗಳು….
ತೇಜಸ್ವಿ ಬಿ.ಎ. ಓದುತ್ತಿರುವಾಗೊಮ್ಮೆ ಇಂಗ್ಲಿಷಿನಲ್ಲಿ ಫೇಲಾದರು. ಆಗ ಕುವೆಂಪು ಅದೇ ವಿಶ್ವವಿದ್ಯಾನಿಲಯದ ವೈಸ್ ಚಾನ್ಸೆಲರ್! ಬೇಕೆಂದೇ ಫೇಲ್ ಮಾಡಿದ್ದಾರೆಂಬ ಮಗನ ದೂರನ್ನು ಸೀರಿಯಸ್ ಆಗಿ ತೆಗೆದುಕೊಳ್ಳದೆ, ಉತ್ತರ ಪತ್ರಿಕೆಗಳನ್ನು ತರಿಸಿಕೊಂಡು ನೋಡಿದ ಕುವೆಂಪು “ನನಗೇನಾದರೂ ಈ ಪತ್ರಿಕೆಯನ್ನು ಮೌಲ್ಯಮಾಪನ ಮಾಡಲು ಕೊಟ್ಟಿದ್ದಿದರೆ ನೀನು ಈ ಜನ್ಮದಲ್ಲಿ ಪಾಸಾಗುತ್ತಿರಲಿಲ್ಲ ತಿಳ್ಕೊ” ಎಂದರಲ್ಲದೆ “ನಿನಗೆ He ಮತ್ತು Sheಗೂ ಸ್ಪೆಲಿಂಗ್ ಗೊತ್ತಿಲ್ಲ. ಉದ್ದಕ್ಕೂ he ಬದಲಿಗೆ hi ಎಂದೂ she ಬದಲಿಗೆ shi ಎಂದೂ ಬರೆದುಕೊಂಡು ಹೋಗಿದ್ದೀಯಲ್ಲಾ?” ಎಂದು ಕೇಳಿದರು.
ತೇಜಸ್ವಿಯವರು he ಮತ್ತು she ಗಳನ್ನು ಮೊದಲೆರಡು ಪುಟಗಳಲ್ಲಿ ಸರಿಯಾಗಿಯೇ ಬರೆದಿದ್ದರು. ಇದ್ದಕ್ಕಿದ್ದಂತೆ H ಮತ್ತು e ಸೇರಿದರೆ ‘ಹೇ’ ಎಂದಾಗುತ್ತದಲ್ಲ ಎಂದುಕೊಂಡು e ಬದಲು i ಬಳಸಿ, he, shi ಮಾಡಲಾರಂಭಿಸಿದ್ದರು. ತಮ್ಮ ಈ ಹಿ, ಶಿ ಸಂಶಯವನ್ನು ತಂದೆಯೆದುರು ತೋಡಿಕೊಂಡಾಗ ಕುವೆಂಪು “ನೀನು ಇಂಗ್ಲಿಷನ್ನು ಕನ್ನಡ ಭಾಷೆಯ ಅಕ್ಷರ ಸಂಯೋಜನೆ ಜೊತೆ ಹೋಲಿಸಿ ಬರೆಯಬೇಡ. ನೀನು ಇಂಗ್ಲಿಷನ್ನು ಚೆನ್ನಾಗಿ ಕಲಿಯಬೇಕಾಗಿರುವುದು ನಿನ್ನ ಅಗತ್ಯಕ್ಕಾಗೇ ಹೊರತು ಇಂಗ್ಲಿಷಿನವರ ಅಗತ್ಯಕ್ಕಾಗಿ ಅಲ್ಲ. ನಿನಗೆ ಅದರಲ್ಲಿರುವ ಪ್ರಪಂಚದ ಜ್ಞಾನವೆಲ್ಲಾ ಬೇಕಾದರೆ ಈ ಸಬೂಬುಗಳನ್ನೆಲ್ಲಾ ಬಿಟ್ಟು ಕಷ್ಟಪಟ್ಟು ಕಲಿ ಅದು ಬಿಟ್ಟು ಕನ್ನಡದಲ್ಲೇ ಎಲ್ಲಾ ಇದೆ ಎಂದು ತಿಳಿದು ಕೂಪಮಂಡೂಕ ಆಗಬೇಡ. ಬೇಕಾದಷ್ಟು ಜನ ಕನ್ನಡ ಪಂಡಿತರು ಪೋಲಿ ಜೋಕುಗಳನ್ನು ಮಾಡಿಕೊಂಡು ಪಾಠ ಮಾಡುತ್ತಾ ಕಾಲೇಜಿನ ಕೋಡಂಗಿಗಳಾಗಿ ಕಾಲಯಾಪನೆ ಮಾಡುತ್ತಿರುವುದಕ್ಕೆ ಕಾರಣ ಈ ರೀತಿಯ ಹುಸಿಪಾಂಡಿತ್ಯ. ಕನ್ನಡದಲ್ಲಿ ಏನೂ ಇಲ್ಲ ಎಂದು ತಿಳಿಯುವುದಕ್ಕಿಂತ ಕನ್ನಡದಲ್ಲಿ ಎಲ್ಲಾ ಇದೆ ಎಂದು ತಿಳಿಯುವುದು ಸಾಹಿತ್ಯದ ವಿದ್ಯಾರ್ಥಿಗಳಿಗೆ ಹೆಚ್ಚು ಅಪಾಯಕಾರಿಯಾದ ಮೌಢ್ಯ. ಇಂಗ್ಲಿಷರು ಸಹ ತಮ್ಮ ಭಾಷೆ ಕುರಿತು ಇಂಥ ಮಾತುಗಳನ್ನಾಡುವುದಿಲ್ಲ. ಯಾವ ಭಾಷೆಯಲ್ಲೂ ಎಲ್ಲಾ ಇದೆ ಎಂದು ತಿಳಿಯುವವನು ಮೂರ್ಖ” ಎಂದು ಹೇಳಿದ ವಿವೇಕ ತೇಜಸ್ವಿಯವರ ಮೂಲಕ ನಮಗೂ ರವಾನಿಸಲ್ಪಟ್ಟಿದೆ.
(ಕೃತಿ: ತೇಜಸ್ವಿ ಪ್ರಸಂಗಗಳು, ಲೇಖಕರು: ಡಾ. ಎಚ್.ಎಸ್. ಸತ್ಯನಾರಾಯಣ, ಪ್ರಕಾಶಕರು: ಆಲಂಪು ಪ್ರಕಾಶನ, ಬೆಲೆ: 150/-)
ಕನ್ನಡ ಪ್ರಾಧ್ಯಾಪಕರು ಮತ್ತು ಹೊಸ ತಲೆಮಾರಿನ ವಿಮರ್ಶಕರು