‘ಪ್ರತಿಯೊಬ್ಬ ಮನುಷ್ಯನಲ್ಲಿಯೂ ಒಬ್ಬ ಕಳ್ಳನಿದ್ದಾನೆ’ ಎಂಬ ವಾಕ್ಯ, ‘ಪ್ರತಿಯೊಬ್ಬ ಮನುಷ್ಯನಲ್ಲಿಯೂ ಒಂದು ಮಗುವಿದೆ’ ಎಂದು ಕೋಟಿಯ ಕೈಗಳಲ್ಲಿ ಬದಲಾಗುವುದೇ ಆತನ ವ್ಯಕ್ತಿತ್ವದ ಹೆಚ್ಚುಗಾರಿಕೆಯ ಸಂಕೇತ. ಚಿತ್ರದ ತುಂಬೆಲ್ಲಾ ರೂಪಕಗಳ ಬಳಕೆ ಹೇರಳವಾಗಿದೆ. ಕೋಟಿಯೆಂಬ ಹೆಸರು ಅದರಲ್ಲೊಂದು. ಇಲ್ಲಿ ಎಲ್ಲರೂ ಸಾಗುತ್ತಲೇ ಇರುತ್ತಾರೆ. ಥೇಟು ಪಟ್ಟಣದ ಯಾಂತ್ರಿಕ ಬದುಕಿನಂತೆ. ಆದರೆ ಆ ಪಯಣಕ್ಕೊಂದು ವೇಗ ನಿಯಂತ್ರಕ ಎದುರಾದಾಗ, ಹೇಗೆ ಉತ್ತರಿಸುತ್ತೇವೆ ಎನ್ನುವುದರ ಮೇಲೆ ಬದುಕು ನಿರ್ಧರಿತವಾಗುತ್ತದೆ ಎಂಬುದನ್ನು ನಿರೂಪಿಸಲಾಗಿದೆ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ಪರಮೇಶ್ವರ ಗುಂಡ್ಕಲ್ ನಿರ್ದೇಶನದ ‘ಕೋಟಿ’ ಸಿನಿಮಾದ ವಿಶ್ಲೇಷಣೆ
ಶಹರಗಳೆಂದರೆ ಅಸಂಖ್ಯ ಕನಸುಗಳು ಅನುದಿನವೂ ಬಂದು ಬೀಳುವ ನಿಲ್ದಾಣ. ಇಲ್ಲಿ ಸಣ್ಣ ಯೋಚನೆಗಳು ಕೈಗೂಡುತ್ತವೆ. ದೊಡ್ಡ ನಿರ್ಧಾರಗಳು ಕಮರುತ್ತವೆ. ಆಸ್ಥಿರತೆಯನ್ನೇ ತುಂಬಿದ ಈ ಪಟ್ಟಣದ ಮಾಯೆಗೆ ಮರುಳಾಗಿ, ಕೆಂಪು ಬಸ್ಸಿನ ನೀಲಿ ಸೀಟುಗಳು ಅನಂತ ತಲೆಗಳನ್ನು ಪೂರೈಸುತ್ತಲೇ ಸಾಗುತ್ತದೆ. ಒಂದು ನಮೂನೆಯ ಚಕ್ರವ್ಯೂಹ ಈ ನಗರ. ಪ್ರತಿ ಆಶಾವಾದಿಯೂ ಇಲ್ಲಿ ಅಭಿಮನ್ಯು. ಸದಾ ಕಾಲ ಆ ತಾಪತ್ರಯಗಳಿಂದ ತಪ್ಪಿಸುಕೊಳ್ಳಲು ಯತ್ನಿಸಿದರೂ, ಮುರಿದ ಹೆಂಚಿನ ಮನೆಯ ಕೆಳಗೆ ಮಳೆಗಾಲದಲ್ಲಿ ಕುಳಿತಂತೆ, ಜೀವನವೆಂಬ ಹನಿಯು ತಲೆಯ ನೇವೇರಿಸಿ, ಮತ್ತೆ ಶಹರದ ಮಡಿಲಲ್ಲಿ ಮಲಗುವಂತೆ ಮಾಡುತ್ತದೆ. ಇಲ್ಲಿ ಎಲ್ಲವೂ ಇದೆ, ಅನ್ನದ ಅಗುಳಿಗೂ ನೆತ್ತರು ಬಸಿಯಬೇಕಾಗುತ್ತದೆ. ಇನ್ನೊಂದೆಡೆ ಬೆಲೆಯೇ ಇಲ್ಲದ ಉಚಿತ ಸಾಮಾಗ್ರಿಯ ತೆರನಾಗಿ ರಕ್ತ ಹರಿಯುತ್ತಲೇ ಇರುತ್ತದೆ, ತರಹೇವಾರಿ ಗಾಯಗಳಿಂದ. ಬಾಟಾ ಚಪ್ಪಲಿಯ ಧೂಳು ತಾಕಿಸಿಕೊಂಡು, ಎಸ್ಪ್ರೆಸ್ಸೋ ಕಾಫಿಯ ಬೆಲೆಯಲ್ಲಿ ದಿನವೆರಡು ನೆಮ್ಮದಿಯಲ್ಲಿ ಕಳೆಯುವ ಮನಸ್ಸುಗಳಿವೆ. ಸ್ಲಮ್ಮು, ಡ್ಯೂಪ್ಲೆಕ್ಸ್ ಮನೆ, ಜೋಪಡಿ, ಬಸ್ ಸ್ಟ್ಯಾಂಡು, ಫ್ಲಾಟ್ ಹೀಗೆ ಒಂದೊಂದು ಬದುಕಿಗೂ ಒಂದೊಂದು ಆಗಸ. ಇಂತಹ ಸಿಟಿಗಳಲ್ಲಿ ಮಧ್ಯಮ ವರ್ಗದ ಜನರ ಜೀವನ, ಸದಾ ಪ್ರವಾಹದ ಮೇಲೆ ಸಾಗುವ ದೋಣಿಯ ಮೇಲಿನ ಪಯಣ. ಈ ಕ್ಷಣದ ನಿರಾಳತೆಯನ್ನು, ಭವಿಷ್ಯದ ಭಯ ಸದಾ ಆಪೋಶನ ತೆಗೆದುಕೊಳ್ಳುತ್ತಲೇ ಇರುತ್ತದೆ. ಅನುದಿನವೂ ಪೆಟ್ಟಿಗೆಯ ಅಪ್ಪುವ ಅಂತಿಮ ಮೊಳೆಯಿಂದ ಕ್ಷಣ ಮಾತ್ರದಿ ಪಾರಾಗುವಂತೆ ಬದುಕು ಸಾಗುತ್ತಲೇ ಇರುತ್ತದೆ. ಇಂತಹ ಮಿಡಲ್ ಕ್ಲಾಸ್ ಕುಟುಂಬವೊಂದರ ನೋವು ನಲಿವು, ಪಡಿಪಾಟಲುಗಳು ಹಾಗೂ ಪೇಪರ್ ತುಂಡಿನ ಬಳಗವು ಆಡಿಸುವ ಆಟದ ಒಂದು ಸಹಜ ಚಿತ್ರಣವೇ ‘ಕೋಟಿ’.
ಅವನು ಕೋಟಿ. ಹೆಸರು ಮಾತ್ರ, ಆದರೆ ಕೋಟ್ಯಧೀಶನಲ್ಲ. ಸಹೋದರಿ, ಸಹೋದರ ಹಾಗೂ ಅಮ್ಮನೊಂದಿಗೆ ಜನತಾ ಸಿಟಿಯಲ್ಲಿ ವಾಸ. ‘ಕೋಟಿ ಶಿಪ್ಪಿಂಗ್ ಸರ್ವೀಸಸ್’ ಎಂಬ ನಾಮಧೇಯದೊಂದಿಗೆ ಟ್ರಕ್ಕೊಂದರ ಸಂಗಡ ಸಾಮಾನು ಸರಂಜಾಮುಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಒಯ್ಯುವುದೇ ಆತ ಹಾಗೂ ಆತನ ಬಳಗದ ಕಾಯಕ. ಈ ಕೆಲಸವಿಲ್ಲದೇ ಇದ್ದಾಗ ಟ್ಯಾಕ್ಸಿ ಡ್ರೈವರು ಆಗುತ್ತಿದ್ದ. ಈ ಟ್ರಕ್ಕು ಇನ್ನಿತರ ವ್ಯವಹಾರಗಳಿಗೆ ಹಣದ ಮೂಲ ಸಾಹುಕಾರನದ್ದು. ಆತ ಗೋಮುಖ ವ್ಯಾಘ್ರ. ತಣ್ಣಗೆ ಮಲಗಿರುವ, ಸೊಬಗಿನ ವಸ್ತ್ರ ವಿನ್ಯಾಸದ ಕಟ್ಟು ಹಾವಿನಂತೆ. ಇತ್ತ ಕೋಟಿ ಬದುಕಿಗೊಂದಿಷ್ಟು ಗಡಿ ರೇಖೆಗಳಿದ್ದವು. ಆತ ಎಂದಿಗೂ ಅನ್ಯಾಯದ ವಿರುದ್ಧ. ವಂಚನೆ, ಕಳ್ಳತನ ಇವೆಲ್ಲವೂ ಆತನ ದೈನಂದಿನ ಪುಟಗಳಿಂದ ಹೊರಗೆ. ಅದೆಷ್ಟು ಕೋಟಿ ಕೊಡುವೆನೆಂದರೂ ಕೋಟಿ, ‘ಕೋಟಿ’ಯ ಮೈಮಾಟಕ್ಕೆ ಸೋಲುವವನಲ್ಲ. ಆದರೆ, ಕಾಲವೆಂಬುದು ಕೆಸರಲ್ಲಿ ಜಳಕವನ್ನಾಡುತ್ತಿದ್ದರೆ, ಹನಿ ಕೊಳೆಯೂ ಮೈಗೆ ತಾಗದಂತೆ ಇಲ್ಲಿ ಜೀವಿಸಬಹುದೇ? ಎಲ್ಲವೂ ಮಾಯವಾಗಿ, ಬದುಕು ನಿಂತು ಹೋಯಿತು ಎನ್ನುವ ಸಂದರ್ಭದಲ್ಲಿ ದಾರಿ ಬದಲಾಯಿಸದೇ ಉಳಿಯಲು ಸಾಧ್ಯವೇ? ಯಾವುದು ಮುಖ್ಯ, ಯಾವುದು ಅಮುಖ್ಯ? ಆದರ್ಶದ ಬದುಕೇ ಅಥವಾ ಸುಖಕರ ಬದುಕೇ? ಹೀಗೆ ಮಧ್ಯಮ ವರ್ಗದ ಮಂದಿ, ಅನುದಿನವೂ, ಅವಿರತವೂ ಹೊಡೆದಾಡುವ ಬದುಕಿನ ಅಲಗುಗಳನ್ನು, ಕಾಸಿನ ಕನ್ನಡಿಯಲ್ಲಿ ನೋಡುವ ಪ್ರಯತ್ನವೇ ‘ಕೋಟಿ’.
ಪ್ರತಿಯೊಬ್ಬರೂ ಸಣ್ಣ ವಯಸ್ಸಿನಿಂದ ಆದರ್ಶದ ರೆಕ್ಕೆಯೊಂದನ್ನು ಏರಿ ಪಯಣ ಹೊರಡುತ್ತಲೇ ಇರುತ್ತಾರೆ. ಆದರೆ ಕಾಲದ ಬಿರುಗಾಳಿಗೆ ಸಿಲುಕಿ ರೆಕ್ಕೆ ಅರ್ಧ ಹಾದಿಯಲ್ಲಿಯೇ ಮುರಿತಕ್ಕೊಳಗಾಗುತ್ತದೆ. ಬದುಕು ನಿರ್ಜಿವ ವಸ್ತುಗಳ ಹಿಂದೆ ಸಿಲುಕುವುದೇ ಈ ಅವಘಡಕ್ಕೆ ಒಂದು ಕಾರಣ. ಕೋಟಿಗೂ ಕೋಟಿಯ ಒಡೆಯನಾಗುವ ಕನಸಿತ್ತು, ಬಹು ಜನರಂತೆ. ಆದರೆ ಅದರ ಈಡೇರಿಕೆಗೆ ತನ್ನ ಮುಖಕ್ಕೆ ಬಣ್ಣ ಹಚ್ಚುವುದೊಂದನ್ನು ಹೊರತುಡಿಸಿ, ತನ್ನ ಅಪೇಕ್ಷೆಯಿಂದ ಮುಖವಾಡವ ಧರಿಸಲಿಲ್ಲ. ‘ಪ್ರತಿಯೊಬ್ಬ ಮನುಷ್ಯನಲ್ಲಿಯೂ ಒಬ್ಬ ಕಳ್ಳನಿದ್ದಾನೆ’ ಎಂಬ ವಾಕ್ಯ, ‘ಪ್ರತಿಯೊಬ್ಬ ಮನುಷ್ಯನಲ್ಲಿಯೂ ಒಂದು ಮಗುವಿದೆ’ ಎಂದು ಕೋಟಿಯ ಕೈಗಳಲ್ಲಿ ಬದಲಾಗುವುದೇ ಆತನ ವ್ಯಕ್ತಿತ್ವದ ಹೆಚ್ಚುಗಾರಿಕೆಯ ಸಂಕೇತ. ಚಿತ್ರದ ತುಂಬೆಲ್ಲಾ ರೂಪಕಗಳ ಬಳಕೆ ಹೇರಳವಾಗಿದೆ. ಕೋಟಿಯೆಂಬ ಹೆಸರು ಅದರಲ್ಲೊಂದು. ಇಲ್ಲಿ ಎಲ್ಲರೂ ಸಾಗುತ್ತಲೇ ಇರುತ್ತಾರೆ. ಥೇಟು ಪಟ್ಟಣದ ಯಾಂತ್ರಿಕ ಬದುಕಿನಂತೆ. ಆದರೆ ಆ ಪಯಣಕ್ಕೊಂದು ವೇಗ ನಿಯಂತ್ರಕ ಎದುರಾದಾಗ, ಹೇಗೆ ಉತ್ತರಿಸುತ್ತೇವೆ ಎನ್ನುವುದರ ಮೇಲೆ ಬದುಕು ನಿರ್ಧರಿತವಾಗುತ್ತದೆ ಎಂಬುದನ್ನು ನಿರೂಪಿಸಲಾಗಿದೆ. ಉಸಿರಿಗೆ ಸಂಚಕಾರ ಬಂದರೂ, ತನ್ನ ಧ್ಯೇಯಗಳನ್ನು ಬಿಡದೆ ಹಿಡಿದುಕೊಳ್ಳುವ ಕೋಟಿಗೆ, ಸುರಂಗದ ಅಂಚಿನಲ್ಲಿ ಸಿಗುವ ಬೆಳಕಿನಂತೆ, ಬದುಕಿನಲ್ಲೂ ಕತ್ತಲು ಮಾಸಿ ಹೋಗಿ ಕಂದೀಲು ಬೆಳಗುತ್ತದೆ. ಅದೆಷ್ಟೋ ಬರಗಾಲದ ನಂತರ ಸುರಿದ ಮಳೆಯಂತೆ.
ಚಿತ್ರದ ಮುಖವಾಣಿ ಕೋಟಿ ಪಾತ್ರಧಾರಿ ಧನಂಜಯ. ತಾನು ಕೇವಲ ಮಾಸ್ ಚಿತ್ರಗಳಿಗೆ ಸೀಮಿತನಾದ ನಟನಲ್ಲ ಎಂದು ಕೋಟಿಯ ಪಾತ್ರಧಾರಿಯಾಗಿ ಸಾಬೀತುಗೊಳಿಸುತ್ತಾರೆ. ಕೋಟಿಯ ತಂದೆಯಾಗಿ ಹಸಿವು ಮತ್ತು ಬದುಕಿನ ನಡುವಿನ ಒಂದು ಆರ್ದ್ರ ಸೇತುವೆಯ ಬಗ್ಗೆ ಹೇಳುತ್ತಾ ಕಿರು ಸಮಯದಲ್ಲಿ ಸ್ಥಿರವಾಗಿ ನೆಲೆಸುವಂತಹ ಅಭಿನಯ ದುನಿಯಾ ವಿಜಯ್‌ರದ್ದು. ಈ ಚಿತ್ರದ ಎರಡು ಜೀವಂತಿಕೆಯೆಂದರೆ ನಾಯಕಿ ನವಮಿ ಪಾತ್ರದಲ್ಲಿ ಮೋಕ್ಷಾ ಕುಶಾಲ್, ಕೋಟಿಯ ತಂಗಿಯ ಪಾತ್ರದಲ್ಲಿ ತನುಜಾ ವೆಂಕಟೇಶ್, ಇಬ್ಬರ ಅಭಿನಯ ಅದೆಷ್ಟು ನೈಜ ಹಾಗೂ ಸಹಜ. ಹೀರೋಇನ್ ಅಥವಾ ಮಹಿಳಾ ಪಾತ್ರಧಾರಿಗಳೆಂದರೆ ಒಂಚೂರು ನಾಟಕೀಯತೆಯ ಲೇಪನವಿರಬೇಕು ಎಂಬ ಸ್ಟೀರಿಯೋಟೈಪುಗಳನ್ನು ಮೀರಿದ ಅಭಿನಯ ಇವರಿಬ್ಬರದ್ದು. ಇನ್ನು ಸಾಹುಕಾರ್ ಪಾತ್ರದಲ್ಲಿ ರಮೇಶ್ ಇಂದಿರಾ ಅಕ್ಷರಶಃ ಅಬ್ಬರವೆಬ್ಬಿಸುತ್ತಾರೆ. ತಾರಾ ಅನುರಾಧ ಅಮ್ಮನಾಗಿ ಮರಳಿ ಮನಗೆಲ್ಲುತ್ತಾರೆ. ತನ್ನ ಮಾಮೂಲು ಖಯಾಲಿಯಂತೆ. ವಾಸುಕಿ ವೈಭವರ ‘ಮಾತು ಸೋತು’ಹಾಡಿಗೆ ಸೋಲದವನೇ ಇಲ್ಲ. ಇನ್ನು ಈ ಚಿತ್ರದ ಹೈಲೈಟು ನಿರ್ದೇಶಕ ಪರಮ್ ಯಾನೆ ಪರಮೇಶ್ವರ ಗುಂಡ್ಕಲ್. ಪತ್ರಿಕೆಗಳಿಂದ, ಧಾರವಾಹಿಗಳವರೆಗೆ ತನ್ನ ಕಥೆಗಳನ್ನು ಹೇಳುತ್ತಾ ಬಂದ ಪರಮ್‌ಗೆ ಕೋಟಿ ಮೊದಲ ಸಿನಿಮಾ. ನಡಿಗೆ ಸ್ಪರ್ಧೆಯಂತೆ, ಅಗಾಧ ಸಮಯದಲ್ಲಿ, ಹೆಚ್ಚಿನ ಸಂಖ್ಯೆಯ ಕಂತುಗಳಲ್ಲಿ ಮನೆ ಮಂದಿಯನ್ನು ಗೆಲ್ಲುತ್ತಿದ್ದ ಅವರಿಗೆ, 100 ಮೀ ಓಟದಂತೆ ಕಡಿಮೆ ಸಮಯದಲ್ಲಿ ಅತ್ಯುನ್ನತ ಕಥೆಯನ್ನು ಹೇಳಬೇಕಾದ ಸವಾಲು ಸಿನಿಮಾದಲ್ಲಿತ್ತು. ಅದರಲ್ಲಿ ಯಶಸ್ವಿಯಾಗಿದ್ದಾರೆಂದು ಖಂಡಿತ ಹೇಳಬಹುದು. ಕಾರಣ ಕಥೆಯ ಪರಿಕಲ್ಪನೆ ಹಾಗೂ ಚಿತ್ರಕಥೆ. ಕೋಟಿಯ ಮುಖದಲ್ಲಿ ಸದಾ ಅರಳಿರುವ ನಗೆ, ಅದೆಷ್ಟೇ ನೋವಿರಲಿ, ನಗು ನೀನು ಸುಮ್ಮನೆ ಎಂಬ ಮಧ್ಯಮ ವರ್ಗದ ಸಿದ್ಧಾಂತದಂತೆ ಕಾಣುತ್ತದೆ. ಕೇಸರಿ ಬಣ್ಣದ ಐಸ್ ಕ್ಯಾಂಡಿಯ ಮೇಲಿನ ಒಲವು, ಉತ್ತರ ಕನ್ನಡ ಭಾಗದವರಂತೆ ಅಮ್ಮನಿಗೆ ಆಯಿಯೆನ್ನುವುದು, ದುಡ್ಡು ಮತ್ತು ದುನಿಯಾದ ನಡುವಿನ ಸಂಬಂಧಗಳ ಪ್ರದರ್ಶನ ಎಲ್ಲವೂ ನೈಜತೆಯ ಹೂರಣ. ಹೀಗೆ ಮಧ್ಯಮ ವರ್ಗದ ಬೆನ್ನೇರಿ ಬರುವ ಪರಮ್, ಮತ್ತೆ ಬಹುಪಾಲು ಮಂದಿಗೆ ತನ್ನ ಯೌವ್ವನದ ದಿನಗಳನ್ನು ಸೇರಿದಂತೆ ಬದುಕಿನ ನಡಿಗೆಯನ್ನು ಮೆಲುಕು ಹಾಕುವಂತೆ ಮಾಡುವಲ್ಲಿ ‘ಕೋಟಿ’ಯ ಮೂಲಕ ಯಶ ಕಾಣುತ್ತಾರೆ.
ಮುಗಿಸುವ ಮುನ್ನ :
‘ದುಡ್ಡೇ ದೊಡ್ಡಪ್ಪ’, ಹಣವೇ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂದುಕೊಳ್ಳುತ್ತಾ ನಾವು ಹಾಸಿಗೆ ಮೀರಿ ಕಾಲು ಚಾಚುತ್ತೇವೆ. ಆಗಸಕ್ಕೆ ಏಣಿ ಹಾಕುತ್ತೇವೆ. ಮಹತ್ವಕಾಂಕ್ಷೆಯ ಹೆಸರಿನಲ್ಲಿ ನೆಮ್ಮದಿಯನ್ನು ತ್ಯಾಗ ಮಾಡುತ್ತೇವೆ. ‘ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ, ತುಂಡು ಬಟ್ಟೆ ಸಾಕು ನನಗೆ ಹಾಯಾಗಿರೋಕೆ’ ಹಾಡಿನ ಸಾಲುಗಳು ಬದುಕು ನಿತ್ಯ ನೂತನವಾಗಲು ಸಹಕಾರಿ. ಹಾಗೆಂದು ವೈರಾಗ್ಯವೆಂಬುದು ಸಲ್ಲ. ಉಸಿರು ನಡೆಯುವವರೆಗೆ ನಿಲ್ಲಬಾರದಲ್ಲವೇ ಕನಸು…..
ರಾಮ್ ಪ್ರಕಾಶ್ ರೈ ದಕ್ಷಿಣ ಕನ್ನಡ ಜಿಲ್ಲೆ, ಕಡಬ ತಾಲೂಕು, ಕಲ್ಲುಗುಡ್ಡೆ ನಿವಾಸಿ. ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಪ್ರಾಡಕ್ಟ್ ಡಿಸೈನ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಣೆ ಹವ್ಯಾಸಿ ಬರಹಗಾರ. ಕಥೆ, ಲೇಖನಗಳೆಂದರೆ ಅಚ್ಚುಮೆಚ್ಚು. ಯಕ್ಷಗಾನ ಭಾಗವತಿಕೆ, ಮದ್ದಳೆ ವಾದನ, ಒರಿಗಾಮಿ ಇತರ ಹವ್ಯಾಸಗಳು….