ಹೊಸ್ದಾಗಿ ಮದ್ವೆ ಆಗಿದ್ದ ಅಳಿಯ ಅತ್ತೆ ಮನೇಗೆ ಬಂದ್ನಂತೆ. ಅತ್ತೆ ಕಡುಬು ಮಾಡಿದ್ರು. ತೆಳ್ಳಗೆ, ಸಣ್ಣವು. ಹೊಸ ಅಳಿಯನಿಗೇಂತ ಕಷ್ಟ ಪಟ್ಟು ಸಣ್ಣ ಸಣ್ಣಕೆ ಮಾಡಿದ್ರು. ಅಳಿಯನ ತಟ್ಟೇಗೆ ಬಡಿಸಿದ್ರು. ಅವ್ನು ಒನೊಂದು ಸತೀಗೆ ಒಂದು ಗುಳುಂ ಮಾಡ್ತಿದ್ದ. ಅಳಿಯನ ಅಪ್ಪ ಥೋ ನಮ್ ಮರ್ವಾದೆ ತೆಗೀತಾವ್ನೆ ಅಂತ ಮೆಲ್ಲಕೆ ಮೂಗ್ಸನ್ನೆ ಮಾಡೀರು. ಒಂದು ಮುರಿದು ಎರ್ಡು ಭಾಗ ಮಾಡಿ ತಿನ್ನಾಕೆ ಸೈಗು (ಸನ್ನೆ) ಮಾಡಿದ್ರು. ಅವ್ನು ಓ ಒಂದು ಸತೀಗೆ ಎರ್ಡು ತಿನ್ ಬೇಕು ಅಂತಾ ಎರ್ಡೆರಡು ತಿನ್ನೋಕೆ ಸುರು ಮಾಡ್ದ. ಪಾಪ ಅತ್ತೆ ತಂದು ತಂದು ಸುರಿಯೋಳು.
ಸುಮಾ ಸತೀಶ್ ರಂಗಿನ ರಾಟೆ” ಸರಣಿಯಲ್ಲಿ ಚಿಕ್ಮಾಲೂರಿನ ಅಜ್ಜ-ಅಜ್ಜಿಯರ ಕುರಿತ ಬರಹ ಇಲ್ಲಿದೆ

ನಮ್ಮೂರು ನಮ್ಮನೆ ಎಂಗಿತ್ತು ಅಂತ ಯೋಳಿದ್ ಮ್ಯಾಲೆ ನಮ್ಮ‌ ಮನೆತನುದ್ ಬೇರು ಎಲ್ಲಿಂದ ಬತ್ತು ಅಂತ್ಲೂವೇ ಯೋಳ್ಲಿಕ್ಕೇ ಬೇಕಲ್ವೇ. ನಮ್ಮ ಮುತ್ತಾತ ಗೌರಯ್ಯ. ಅವ್ರಪ್ಪ ನ್ಯಾತಯ್ಯ. ನಮ್ಮ ಮನೆ ದ್ಯಾವ್ರು ನಂಜನಗೂಡಿನ ನಂಜುಂಡೇಶ್ವರ.‌‌ ಅದಿಕ್ಕೆ ಅವಪ್ಪನ ಹೆಸ್ರೇ ಎಲ್ಲರಿಗೂ. ಒಬ್ಬೊಬ್ಬರ ಹೆಸ್ರೂ ಯೋಳ್ತಾ ಹೋದ್ರೆ ಸಹಸ್ರನಾಮ ಆದೀತು.

ನಮ್ ಮುತ್ತಾತನ ಅಪ್ಪ ನ್ಯಾತಯ್ಯ ಹಳ್ಳಿಹಳ್ಳೀಗೂ ಹೋಗಿ ಮೆಣಸಿನಕಾಯಿ, ಬೆಲ್ಲ, ಹುಣಿಸೆಹಣ್ಣು ಕೊಂಡ್ಕೋ ಬಂದು ಊರ್ನಾಗೆ ಮಾರ್ಕೊಂಡು ಬದುಕು ಕಟ್ಟಿಕಂಡಿದ್ರು. ನಮ್ ಮುತ್ತಾತ ಗೌರಯ್ಯ ಸಂಪಾದ್ನೆ ಮಾಡ್ಕೊಂಡು ಚಿಲ್ಲರೆ ಅಂಗಡಿ ಸುರು ಮಾಡಿ ಒಂದಿಷ್ಟು ದೊಡ್ಡ ಮನುಸ್ಯರು ಅನ್ನುಸ್ಕೊಂಡಿದ್ರು. ಇವುರ್ಗೆ ನಾಕು ಜನ ಗಂಡು ಮಕ್ಕಳು. ನಂಜುಂಡಯ್ಯ, ಗಂಗಯ್ಯ, ಶ್ರೀಕಂಠಯ್ಯ ಮತ್ತೆ ಶಿವರಾಮಯ್ಯ. ನಮ್ಮಪ್ಪ ಶಂಕರ, ನಮ್ಮಣ್ಣ‌ ನಟೇಶ.

ಈಶ್ವರನ ಒಕ್ಕಲು ಅಂತ ಹೆಸ್ರಾಗೆ ತಿಳಿದೋಗ್ತಿತ್ತು. ಎಲ್ಲ ತಾತಂದ್ರೂ ಚಿಲ್ರೆ ಅಂಗಡಿ ಮಡಿಕ್ಕೊಂಡಿದ್ರು. ನಿಧಾನುಕ್ಕೆ ಬ್ಯಾರೆ ಬ್ಯಾರೆ ಊರುಗ್ಳಾಗೆ ಬದುಕು ಸುರು ಮಾಡಿದ್ರು. ಹಿರೇ ತಾತ ಕೊಂಡವಾಡಿನಾಗೆ, ಎರ್ಡನೇ ತಾತ ದೊಡ್ಡಬಳ್ಳಾಪುರದಾಗೆ, ನಮ್ಮ ತಾತ ಶ್ರೀಕಂಠಯ್ಯ ಮಾತ್ರ ನಮ್ಮೂರ್ನಾಗೆ ಉಳ್ಕೊಂಡ್ರೆ ಚಿಕ್ಕ ತಾತ ಶಿವರಾಮಯ್ಯ ‌ಬೆಂಗ್ಳೂರು ಸೇರ್ಕೊಂಡ್ರು. ನಮ್‌ ತಾತುಂಗೆ ಮನೆ ತುಂಬಾ ಮಕ್ಕಳು. ಎಂಟು ಜನ ಹೆಣ್ಣುಮಕ್ಕಳು, ನಮ್ಮಪ್ಪ ಒಂದೆ ಗಂಡು ಮಗಿ. ಚಿಲ್ರೆ ಅಂಗಡಿ ಜೊತ್ಗೆ ನಮ್ ತಾತ ಬ್ಯಾಸಾಯಾನೂ ಮಾಡ್ತಿದ್ರು. ಸ್ಯಾನೆ ಕಷ್ಟ ಜೀವಿ. ವಸಿ ವಸಿ ಜಮೀನು ತಕಂಬ್ತಾ ಬಂದ್ರು. ಬೋ ಮೆದು ಮನಷಾ. ದೊಡ್ಡಮಾಲೂರು ಕೆರೆ ನೀರು ಬರ್ತಿತ್ತು ಅಂತ ನಮ್ಮೂರಿನ್ ಕೆರೆ ಹಿಂದುಕ್ಕೆ ಊರ್ಗೆ ಸೇರ್ಕಂಡಂಗೇ ಈಸ್ವರನ ಗುಡಿ ಮುಂದೆ ಆರೂವರೆ ಎಕರೆ ಜಮೀನಿತ್ತು.‌ ಅಲ್ಲಿ ಯಾವಾಗ್ಲೂ ಕೆರೆ ನೀರು ನಿಲ್ತಿತ್ತು. ಅದ್ರಾಗೆ ಕಬ್ಬು ಬೆಳೀತಿದ್ರು. ವರ್ಸುಕ್ಕೆ ಒಂದು ಬೆಳೆ. ಎರಡಡಿ ನೀರು ನಿಂತಿರ್ತಿತ್ತು. ಕಬ್ಬಿಗೆ ನೀರು ನಿಂತಿದ್ರೂವೆ ತೊಂದ್ರೆ ಇಲ್ಲ. ಅದ್ಕೆ ಅಲ್ಲಿ ಕಬ್ಬು ಬಿಟ್ಟು ಬ್ಯಾರೆ ಏನೂ ಬೆಳಿಯಾಕೆ ಬರ್ತಿರ್ಲಿಲ್ಲ. ಆದ್ರೆ ಈ ಬೆಲ್ಲ ಮಾತ್ರಾ ಕಪ್ಪಗೆ ಇರ್ತದೆ ಅಷ್ಟೆ. ಒಂದ್ ಕಿತ ಕಬ್ಬು ನಾಟಿ ಮಾಡಿದ್ರೆ ಮೂರು ವರ್ಸ ಬೆಳೆ ತಕಂತಿದ್ರು. ಕತ್ತರಿಸಿದಂಗೆ ಕತ್ತರಿಸಿದಂಗೆ ಮತ್ತೆ ಚಿಗುರ್ತಿತ್ತು. ದೊಡ್ಡಮಾಲೂರು ಕೆರೆ ನೀರು ಇರಾಗಂಟ ಈ ಜಮೀನಿತ್ತು.

ಭೂದಾನ ಚಳವಳೀಲಿ ಭೂಮಿ ದಾನ

ಊರ್ನಾಗೆ ಮನೆ ಹತ್ರಾನೆ ಐದೂವರೆ ಎಕ್ರೆ ಜಮೀನಿತ್ತು. ಇನ್ನೂ ಇತ್ತು. ವಿನೋಬಾ ಭಾವೆ ಅವರು ನಮ್ಮೂರಿಗ್ ಬಂದಾಗ ಇಸ್ಕೂಲ್ ಇದ್ದಿದ್ದ ಜಾಗ, ಅದ್ರ ಹಿಂದೆ ಆಟದ ಮೈದಾನ, ಮಗ್ಗುಲಾಗಿನ್ ಜಾಲಿಕಂಟಿ ಬೆಳೆದ ಬಯಲು( ಅದು ಊರಿನ್ ಹೆಂಗುಸ್ರಿಗೆ‌ ಬಯಲು ಶೌಚಾಲಯ ಆಗಿತ್ತು) ಇದಿಷ್ಟೂ ಒಂದೂವರೆ ಎಕರೆ ಜಾಗ್ವಾ ಅವ್ರು ಕೇಳಿದ್ ಏಟ್ಗೇ ಸೋಮಿ ಪುಣ್ಯಕಾರ್ಯಕ್ಕೆ ಇಲ್ಲಾನ್ನಕ್ಕಾಗುತ್ಯೇ ಅಂಬ್ತ ಇಸ್ಕೂಲ್ ಹೆಸ್ರುಗೇ ಮಾಡ್ಕೊಟ್ರು. ಅಂಗಂತ ನಮ್ ತಾತ ಸಾವ್ಕಾರೇನೂ ಅಲ್ಲ.‌ ಬಂದಿದ್ದು ಹಿಟ್ಗೆ ಬಟ್ಗೆ ಸಾಲ್ತಿತ್ತು. ಸೋಕಿ‌ ಮಾಡಾಕೇನೂ ಇರ್ಲಿಲ್ಲ.‌ ಮನೆ ತುಂಬಾ ಹೆಣ್ಣುಮಕ್ಕಳು. ‌ಮದ್ವೆ, ಬಸ್ರು, ಬಾಣ್ತನ ಬೆನ್ನಿಗ್ ಬಿದ್ದಿದ್ದೆ. ಆದ್ರೂ ಬ್ಯಾರೆಯೋರ್ಗೆ ಕೊಡೋದ್ರಾಗೆ ಕೈ ಯಾವಾಲೂ ಮುಂದೇಯಾ.

ಅರವಂಟಿಗೆ

ನಮ್ ತಾತ ಮತ್ತೆ ಅಣ್ ತಮ್ದೀರು ಕೂಡ್ಕ್ಯಂಡು ಊರಾಗೆ ಬಸ್ಸು ಟಾಂಡಿನಾಗೆ ಒಂದು ಅಶ್ವತ್ಥ ಕಟ್ಟೆ ಕಟ್ಟಿಸಿ, ನಾಗರ ಪ್ರತಿಷ್ಠೆ ಮಾಡ್ಸಿದ್ರು.‌ ಕಟ್ಟೆ ವಿಶಾಲವಾಗಿತ್ತು. ಬಸ್ಸಿಗೆ ಬಂದೋರು, ವಯಸ್ಸಾದೋರು, ಕ್ಯಾಮೆ ಇಲ್ದೆ ಹರಟೆ ಹೊಡೆಯೋರು, ಚಕ್ಕಾಬಾರ ಆಡೋರು ಎಲ್ಲಾ ಅಲ್ಲೇ ಠಿಕಾಣಿ ಹಾಕ್ತಿದ್ರು. ಮನೆಗಿಂತ ಗುಡೀನೆ ಭದ್ರ ಅಂಬಂಗೆ ಕಟ್ಟೆ ಮ್ಯಾಗೆ ಬದ್ಕು ನಡೆಸ್ತಿದ್ರು. ಬ್ಯಾಸಿಗೆ ಸುರು ಆದ್ರೆ ನಮ್ಮೂರ್ನಾಗೆ ಅಂಗೇ ಸುತ್ತೂರ್ಗ್ಳಾಗೆ ಸ್ಯಾನೆ ಕಾವಿರ್ತಿತ್ತು. ಸೂರಪ್ಪ ಸುಟ್ಟೋಗ್ತಿದ್ದ. ಅಂತಾ ಟೇಮ್ನಾಗೆ ನಮ್ ತಾತ ಜನ ಧಗೇನಾಗೆ ಅಲ್ಲಾಡೋದು ನೋಡ್ಲಾರ್ದೆ ಸರ್ಯಾಗಿ ಉಗಾದಿ ದಿವ್ಸ ಕಟ್ಟೆ ಮ್ಯಾಗೆ ಅರವಂಟಿಗೆ ಸುರು ಮಾಡ್ತಿದ್ರು. ತೆಂಗಿನ್ ಸೋಗೆನಾಗೆ ಒಂದು ಗುಡ್ಲು ತರ ಹಾಕಿ, ಒಳಗೆ ದೊಡ್ಡ ದೊಡ್ಡ ಅರವೀ ಇಕ್ಕಿ, ಅದ್ರ ಸುತ್ತಾ ಮಳ್ಳು ಹಾಕಿ, ನೀರು ಹಾಕಿ, ರಾಗಿ ಕಾಳು ಚೆಲ್ತಿದ್ರು. ಅದು ಮೊಳಕೆ ಒಡೆದು ನೀರು ತಣ್ಣಗಿರ್ತಿತ್ತು. ಅರಬೀ ಮ್ಯಾಗೆ ಬಿಳೇ ಪಂಚೆ ಬ್ಯಾರೆ ಸುತ್ತಿ, ಆಗಾಗ ನೀರು ಹಾಕಿ, ಅರವೀಗ್ಳಾಗಿನ್ ನೀರು ತಂಪಾಗಿರ್ತಿತ್ತು. ಬಸ್ಸಿಗೆ ಬಂದೋರು, ಅಲ್ಲಿ ಕಾಲ ಕಳೆಯೋರು, ಬದೀಗ್ಳಾಗಿನ್ ಕಾಲೋನಿಲಿದ್ದ ಮಾದಿಗ್ರು ಎಲ್ಲಾ ಬಂದು ನೀರು ಕುಡ್ಕೋ ಹೋಗ್ತಿದ್ರು. ಅದ್ಕೇಂತಾನೆ ದುಡ್ಡು ಕೊಟ್ಟು ‌ಒಂದ್ ಆಳ್ ಮಡಗ್ತಿದ್ರು. ಆವಮ್ಮ ಬಾವೀಗ್ಳಾಗಿಂದ ನೀರ್ ಸೇದಿ, ತಂದಾಕಿ, ಬಂದೋರ್ಗೆ ಸಂಜೇಗಂಟಾ ನೀರು ಪೂರೈಸಾದು ಮಾಡ್ತಿತ್ತು. ಮಳೆಗಾಲ ಬರಾತಕ ಇಂಗೇ ನಡೀತಿತ್ತು.

ಕತೆ ಪುಸ್ತ್ಕ ಓದೋ ಹುಚ್ಚು ತಾತಂಗೆ.‌ ನಮ್ಮಪ್ಪ ಆಗ್ಗೆ ಲೈಬ್ರರೀಂದಾನೂ ತಕಾಬಂದು ಕೊಡ್ತಿದ್ರಂತೆ.‌ ಅ ನ‌ ಕೃ ಅವುರ್ದು ಸಾಮಾಜಿಕ ಕಾದಂಬರಿ, ತ ರಾ ಸು ಅವುರ್ದು ಐತಿಹಾಸಿಕ ಕಾದಂಬರಿ, ನರಸಿಂಹಯ್ಯನ ಪತ್ತೇದಾರಿ ಕಾದಂಬರಿ ಓದುತ್ತಿದ್ರು. ಹೆಗಲ ಮ್ಯಾಗೆ ವಲ್ಲಿ ಬಟ್ಟೆ ಹಾಕ್ಕೊಂಡು, ಕಂಕುಳಾಗೆ ಪುಸ್ತ್ಕ ಸಿಗಾಕ್ಕೊಂಡು ತ್ವಾಟದ ತಾವ್ಕೆ ಹೋದ್ರೆ ಅಲ್ಲಿ ಕರೆಂಟ್ ರೂಮ್ನಾಗೆ ಕುಂತು ಓದುತ್ತಿದ್ರಂತೆ.

ಹೊಗೆಸೊಪ್ಪಿನ ಮಂಡಿ

ಒನ್ನೊಂದು ಯಾಪಾರ ಅಲ್ಲ ನಮ್ ತಾತುಂದು. ಅಲ್ಲೊಸಿ ಇಲ್ಲೊಸಿ ಬಂದ್ರೆ ಮಕ್ಕುಳ್ ಮದ್ವೆಗೆ ಆದೀತು ಅಂಬ್ತ ಯೋಸ್ನೆ.‌ ಚಿಲ್ರೆ ಅಂಗಡಿ, ಬೇಸಾಯ ಜೊತೆಗೆ ಹೊಗೆಸೊಪ್ಪಿನ ಯಾಪಾರ. ನಮ್ ಜಮೀನಾಗೆ ದಿಬ್ಬದ ಮ್ಯಾಗೆ ಒಂದೂವರೆಕರೆ ಹೊಗೆಸೊಪ್ಪು ಹಾಕಿದ್ರು. ಅದಿಕ್ಕೆ ಅದುನ್ನ “ಹೊಗೆದಿಬ್ಬ” ಅನ್ನುತ್ಲೇ ಕರೀತಿದ್ರು. ಆವಾಗ ಹೊಗೆಸೊಪ್ಪು ಬೆಳೆ ಇಕ್ಕೋರು ಬೋ ಕಮ್ಮಿ. ಆಪೀಸ್ರುಗಳ್ಗೆ (ಆಫ಼ೀಸರ್) ಮ್ಯಾಗ್ಲೋರಿಂದ ತಿವಿತ. ಯಂಗಾನಾ ಮಾಡಿ ಜನುಗಳ್ನ ಒಪ್ಸಿ ಬೆಳಿಯಾಕೆ ಯೋಳಿ ಅಂತ. ಅವ್ರು ಬಂದು ಎಲ್ಲಾರ್ಗೂ ತಲೆ ತಿಂದು ಓಯ್ತಿದ್ರು. ಅದುಕ್ಕೆ ಲೇಸೆನ್ಸು (ಲೈಸೆನ್ಸ್) ಬ್ಯಾರೆ ಬೇಕಿತ್ತು. ಅದ್ಕೇ ಜನಾ ತಲೆನೋವೂಂತ ಸುಮ್ಕಾಗ್ತಿದ್ರು. ನಮ್ತಾತ ಬಡಪೆಟ್ಟಿಗೆ ಬಿಟ್ಟಾರೆ, ಊಹೂ, ಬರೇ ನಮ್ ಜಮೀನಾಗೆ ಸೊಪ್ಪು ಬೆಳ್ದಿದ್ದಲ್ಲ, ಬ್ಯಾರೆಯೋರ ಜಮೀನ್ನ ಒಂದತ್ತು ಹದಿನೈದು ಎಕರೆಗಂಟ ಬೋಗ್ಯುಕ್ಕೆ ಹಾಕ್ಕೊಂಡು ಅಲ್ಲೂ ಸುತ ಬೆಳೆಯೋರು. ಯಂಗೂ ಬೆಳೆದು ರೆಡಿ ಮಾಡಾದು ಮಾತ್ರ ನಮ್ ಕೆಲ್ಸ. ಆಮ್ಯಾಕೆ ಅದುಕ್ಕೆ ಮಾರ್ಕೆಟ್ಟು ಆ ಆಪೀಸ್ರೆ ಮಾಡ್ತಿದ್ರು. ಅವುರ್ಗೆ ಇಷ್ಟು ಬೆಳೆ ಬೆಳಿಸ್ಲಿಕ್ಕೇ ಬೇಕೂಂತ ಆಲ್ಡರ್ (ಆರ್ಡರ್) ಇರ್ತಿತ್ತು. ಟಾರ್ಗಟ್ಟೂಂತಾರಲ್ಲ (ಟಾರ್ಗೆಟ್) ಅದು. ಆದ್ರೆ ಇದು ಎಲ್ರಿಗೂ ನೀಗೋಂತ ಕ್ಯಾಮೆ ಅಲ್ಲ. ವಸಿ ಕೆಲ್ಸಾ ಅಲ್ಲ. ನಡಾ ಬಗ್ಸಿ, ಮೈ‌ಮುರಿಯಾಗಂಟ ಮಾಡ್ತಿದ್ರು. ಹೊಗೆಸೊಪ್ಪು ಚೆಂದಾಗಿ ಬಂದ್ ಮ್ಯಾಗೆ ಬೆಳಗಿನ್ ಜಾವ್ದಾಗೆ ಎದ್ದೋಗಿ ಅದುನ್ನ ಕುಯ್ಯಾದು. ಕುಯ್ದು ಅಲ್ಲೇ ಗುಡ್ಡೆ ಹಾಕೋದು. ಒಂದೆಲ್ಡು ರಾತ್ರೆ ಮಂಜಿನಾಗೆ ಅದು ಬಾಡ್ಬೇಕಿತ್ತು. ಅಮ್ಯಾಕೆ ಮನ್ಯಾಗೆ ಪಡಸಾಲೆ ತುಂಬಾ ಮಂಡಿ ಹಾಕ್ತಿದ್ರು.

ಮಂಡಿ

ಬುಡದ ಸಮೇತ ಗಿಡ ಕುಯ್ದು ಮನ್ಯಾಗೆ ಚಚ್ಚೌಕವಾಗಿ ಒಂದರ ಮ್ಯಾಕೊಂದು ಸುಮಾರು ಮೂರಡಿ ಎತ್ರುಕ್ಕೆ ಜೋಡಿಸೋದು. ನಾಕೈದು ದಿನ ಅಂಗೇ ಬಿಡೋದು. ತಿರ್ಗಾ ಅಡಿ ಮ್ಯಾಗುಲ್ದು ತಿರುವಿ ಆಕ್ಬೇಕು. ಇಂಗೇ ಮೂರ್ನಾಕು ಕಿತ ತಿರುಗ್ಸೋ ಅಷ್ಟರಾಗೆ ಒಂತರಾ ಘಂ ಅಂತಿತ್ತು. ಆಗ ಪಾಕುಕ್ಕೆ ಬಂದಿದ್ದ ಲೆಕ್ಕ. ಆಮ್ಯಾಕೆ ಹದಿನೈದು ಇಪ್ಪತ್ತು ದಿನಕ್ಕೊನ್ಸತಿ ಮಗ್ಗುಲು ತಿರುವೋದು. ಇಂಗೇ ಎಲ್ಡು ದಪ ತಿರುಗ್ಸೋದ್ರಾಗೆ ಎಲೆ ಬ್ಯಾರೆಯಾಗಿ, ಕಡ್ಡಿ ಬ್ಯಾರೆ ಆಗ್ತಿತ್ತು. ಅವೆಲ್ಡುನ್ನೂ ಬ್ಯಾರೆ ಬ್ಯಾರೆ ಒಣ್ಗುಸ್ತಿದ್ರು. ಕಡ್ಡೀನಾ ಬಿಸುಲ್ಗೆ ಆಕೀರೆ, ಎಲೆ ನೆಳ್ಳಾಗೇ ತಿರ್ಗಾ ಮಂಡಿ ಒಳಗೇ ಒಣ್ಗಬೇಕಿತ್ತು.

ಕಡ್ಡಿ ಚೆಂದಾಕಿ ಒಣಗಿದ್ ಮ್ಯಾಲೆ ಮನೆ ಮುಂದ್ಲ ಅಂಗಳದಾಗೆ ಕಲ್ಲು ಹಾಕ್ಸಿ ಆಳುಗಳ್ನ ಇಕ್ಕಿ ಕುಟ್ಟಿಸ್ತಿದ್ರು. ಅದು ರವೆರವೆ ಅಂಗೆ ಪುಡಿ ಆಗ್ತಿತ್ತು. ಅದುಕ್ಕೆ ಲೆಕ್ಕಾಚಾರದಂಗೆ ಸುಣ್ಣದ ನೀರ್ ಬೆರ್ಸಿ ಗುಡ್ಡೆ ಹಾಕೋರು. ಎರ್ಡು ಮೂರು ಗಂಟೆ ಬಿಡಾ ಹೊತ್ಗೆ ಒಳಗೆಲ್ಲ ಕಾವು ಒಡಿಯೋದು. ತಿನ್ನಾಕೆ ರೆಡಿ ಆಗ್ತಿತ್ತು. ನಮ್ಮಂಗಡೀಲೆ ಇಕ್ಕಿ‌ ಮಾರ್ತಿದ್ರು. ಸಾಮಾನ್ಯುಕ್ಕೆ ಹೆಂಗುಸ್ರು ಕಡ್ಡಿಪುಡಿ ಹಾಕೋರು. ಗಂಡುಸ್ರು ಹೊಗೆಸೊಪ್ಪು ಹಾಕೋರು. ಅಡಿಕೆ ಎಲೆ ಜೊತೀಗೆ ಇವು ರುಚಿ ಹೆಚ್ಸಾಕೆ ಬೇಕಿತ್ತು.

ತಿರ್ಗಾ ಒಂದೂವರೆ ತಿಂಗ್ಳತಕ ಒಣುಗಿಸಿದ ಮ್ಯಾಲೆ ಎಲೆಗ್ಳು ಒಳ್ಳೆ ಬಿಗಿತ ಬಂದಿರೋವು. ಆಗ ಅವುಕ್ಕೆ ಮಂಡಿಯಿಂದ ಮುಕ್ತಿ. ಈಚಲು ಮರದ ಕಡ್ಡಿಯಿಂದ ಹೆಣ್ದಿರೋ ಚಾಪೆಗಳಾಗೆ ಇಪ್ಪತ್ತು ಕೆಜಿ ಎಲೆ ಹಾಕಿ ಸುತ್ತೀರೆ ಅವು ಒನ್ನೊಂದು ಪೆಂಡಿ. ಎಲ್ಲವುನ್ನ ಪೆಂಡಿ ಮಾಡಿ ಸಿರಾ(ಶಿರಾ) ಗೆ ತಕ್ಕಂಡೋಗಿ ಮಾರ್ಕೆಟ್ನಾಗೆ ಮಾರ್ತಿದ್ರು. ಆ ದುಡ್ಡಿನಾಗೆಯಾ ಆಗ್ಲೇ ಯೋಳಿದ್ ಕೆರೆ ನೀರಿನ ಆಸ್ರೆ ಇರೋ ಜಮೀನು ತಕಂಡಿದ್ರು. ಅದ್ರಾಗೆ ಒಂದು ಬಾವಿ ತೋಡ್ಸೀರು. ಆ ಬಾವೀನಾಗೆ ಹನ್ನೆರಡಾಣೆ ಭಾಗ ತಾತುಂಗೆ. ಇನ್ನೊಬ್ಬ ಭಾಗಸ್ಥರಿದ್ರು. ಅವುರ್ಗೆ ನಾಕಾಣೆ ಭಾಗ್ವಿತ್ತು. ರೂಪಾಯಿಗೆ ಹದಿನಾರಾಣೆ ಕಾಲ ಅದು. ಕಪಿಲೆ ಇಂದ ನೀರೆತ್ತಿ ಬ್ಯಾಸಾಯ ಮಾಡ್ತಿದ್ರು.

ಮ್ಯಾಕೆ ಕುರಿ ಯಾಪಾರ

ನಮ್ಮನ್ಯಾಗೆ ನಾವೇನೂ ಮಾಂಸ ತಿಂಬಾರಲ್ಲ. ಆದ್ರೂವೆ ಮ್ಯಾಕೆ ಕುರಿ ಯಾಪಾರಾನೂ ಸೊಲ್ಪ ದಿವ್ಸ ಮಾಡೌರೆ ನಮ್ ತಾತ. ಹೊಲ್ದಾಗೆ ಅಗಸೆ ಸೊಪ್ಪು ದಂಡಿಯಾಗಿತ್ತು. ಅದು ತಿಂದು ಇವು ಒಳ್ಳೆ ಪೊಗದಸ್ತಾಗಿ ಬೆಳ್ಕಂತಿದ್ವು. ಆಮ್ಯಾಕೆ ಸಂತೆಗೆ ತಕಂಡೋಗಿ ಮಾರೀರೆ ಆಯ್ತು. ಇದು ಬರೇ ಯಾಪಾರಕ್ಕೇಂತ ಮಾಡ್ತಿದ್ದಿದ್ದಲ್ಲ. ಇದ್ರಾಗೆ ಎಲ್ಡು ಲಾಭ ಇದ್ವು. ಒಂದು ತಕಂಡು ಮಾರಾದ್ರಾಗೆ ಲಾಭ್ವಾದ್ರೆ ಇನ್ನೊಂದು ಹೊಲುಕ್ಕೆ ಒಳ್ಳೆ ಗೊಬ್ಬರ ಆಗ್ತಿತ್ತು.‌ ಆಗಿನ್ ಕಾಲ್ದಾಗೆ ಗೊಬ್ರ ಗಿಬ್ರ ಕೊಂಡ್ಕಣಾ ಮಾತಿರಲಿಲ್ಲ. ಸಾಕೋದೂ ಸುಲ್ಭ ಇತ್ತು.

ಗೊಬ್ಬರದ ಗುಂಡಿ

ಹದಿನೈದು ಇಪ್ಪತ್ತು ಅಡಿ ಉದ್ದುಕೆ, ನಾಕಡಿ ಅಗ್ಲಕ್ಕೆ ಮೂರು ಅಡಿ ಆಳಕ್ಕೆ ಗುಂಡಿ ತವ್ಸಿದ್ರು. ( ತೋಡಿಸಿದ್ದರು) ಜೀವದನ ಸಾಕಿದ್ರು. ಹೊಲ ಗೇಯಾಕೆ ಒಂದು ಜೊತೆ ಎತ್ತು, ಗಟ್ಟಿ ಹಾಲ್ಗೆ ಒಂದೆಮ್ಮೆ, ಎಲ್ಡು ಮೂರು ಹಸ ಇದ್ವು. ಸೆಗಣಿ, ಗಂಜಲ ಮಸ್ತಾಗಿ ಸಿಗ್ತಿತ್ತು. ಮ್ಯಾಕೆ ಕುರಿಗ್ಳು ದಂಡಿಯಾಗಿ ಪಿಚಿಕೆ ಹಾಕ್ತಿದ್ವು. ಸ್ಯಾನೆ ಗೊಬ್ಬರ ಆಗ್ತಿತ್ತು. ಗುಂಡ್ಯಾಗೆ ಮೊದ್ಲು ಸೆಗಣಿ, ಪಿಚಿಕೆ ಕುಮುರಿಸ್ತಿದ್ರು.(ಸುರೀತಿದ್ರು) ಅಮ್ಯಾಕೆ ಮಣ್ಣು, ಉದುರಿದ ಎಲೆಗ್ಳು ಹಾಕ್ತಿದ್ರು. ಗಂಜಲಕ್ಕೊಂದು ಸಣ್ಣ ಗುಂಡಿ ತೋವಿದ್ರು. ಕೊಟ್ಟಿಗೇಗ್ಳ ಗಂಜಲ ನ್ಯಾರವಾಗಿ ಅದ್ರಾಗೆ ಬೀಳಂಗೆ ಮಾಡಿದ್ರು. ಎಲೆಗ್ಳ ಮ್ಯಾಗೆ ಆ ಗಂಜಲ್ವ ತೋಡಿ ತೋಡಿ ಕುಮುರಿಸ್ತಿದ್ರು. ಅಂಗೇ ಬಿಟ್ರೆ ನಮ್ ಜಮೀನಿಗೆ ಒಳ್ಳೆ ಗೊಬ್ಬರ ಪುಗಸಟ್ಟೆ ಸಿಗ್ತಿತ್ತು. ಬರೇ ಕುರಿ ಮ್ಯಾಕೆ ಪಿಚಿಕೆಗಳೆ ಒಂದೆಕ್ರೆಗೆ ಮೇನ್ ಟೇನ್ ಆಗ್ತಿತ್ತು. ಅಂಗಾಗಿ ನಮ್ ತಾತ ಈ ಯಾಪಾರಾನೂ ಮಾಡ್ತಿತ್ತು.
ಹರಳೆಣ್ಣೆ ಘಮ

ಮನೆ ತುಂಬಾ ಜನರಿದ್ರು.‌ ಮಕ್ಕಳು ಮೊಮ್ಮಕ್ಕಳು ನಂಟರು ಇಷ್ಟರು ಸೇರೀರೆ ಸಂತೆಗಾಗೋಷ್ಟು ಜನರಿದ್ರು. ಹರಳೆಣ್ಣೆ ಕೊಂಡ್ರೆ ಏಸು ಕಾಸಾಗ್ತಿತ್ತು. ಅದೂ ಬೆರಕೆ ಮಾಡಿರ್ತಾರೆ. ಅದ್ಕೇಯಾ ಮನ್ಯಾಗೆ ಹರಳೆಣ್ಣೆ ಮಾಡೋರು. ನಮ್ಮೊಲ್ದಾಗೆ ಅರಳೆಗಿಡ ಬೆಳೆಯೋವು. ಕಾಯಿ ತಂದು ಒಣಗ್ಸಿ, ಸೊಲ್ಸೊಲ್ಪ ಹುರ್ದು(ಹುರಿದು), ಅರ್ಧಂಬರ್ಧ ರುಬ್ಬೋದು. ಒನಕೇನಾಗೆ ಆಕಡೆ ಈಕಡೆ ಒಬ್ಬೊಬ್ರು ನಿಂತು ಒರಳಿನಾಗಾಕಿ ಪಟಪಟನೆ ಕುಟ್ಟೋರು. ಒಂದು ದೊಡ್ಡ ಕೊಳದಪ್ಪಲೇಲಿ ಹದಿನೈದು ಇಪ್ಪತ್ತು ಸೇರು ಹಾಕಿ, ಸೌದೆ ಒಲೇಲಿ ಕೊಳಗುದ್ ತುಂಬಾ ನೀರಾಕಿ ಕಾಯ್ಸೋದು. ಬೆಳಗ್ಗೆ ಹತ್ತು ಗಂಟೇಗೆ ಬೇಯಿಸಾಕೆ ಸುರು ಮಾಡೀರೆ ಸಂಜಿ ಮೂರ್ನಾಕು ಗಂಟೆ ಹೊತ್ಗೆ ಮುಗಿಯೋದು. ಒಲೆ ಆರ್ಸಿ ಸೌಟ್ನಾಗೆ ಇನ್ನೊಂದು ಪಾತ್ರೆಗೆ ತೋಡೋದು(ಬಗ್ಗಿಸೋದು). ಅರ್ಧ ಊರ್ಗೇ ಘಮ ಹರಡ್ತಿತ್ತು. ಎಳೆ ಮಕ್ಕಳಿರೋರು ಹೊಟ್ಟೆಗಾಕಾಕೆ ಈಸ್ಕೊಂಡೋಗೋರು. ಸಣ್ಣ ಸಣ್ಣ ಅರಳೆಕಾಯಾಗೆ “ಚಿಟ್ಟಾಮದಾಲು” ( ಸಣ್ಣ ಹರಳು) ಅಮ್ತ ಮಾಡ್ತಿದ್ರು. ಅದ್ರಾಗೆ ಧವನದ ಕಡ್ಡಿ, ಮೂರ್ನಾಕು ರಕದ ಬೇರು ಹಾಕಿ ಕಾಸ್ತಿದ್ರು. ಅದು ಮಾರಾಕಲ್ಲ. ಮಕ್ಕುಳ್ಗೆ, ಅಕ್ಕ ತಂಗೀರ್ಗೆ ಎಲ್ಲಾರ್ಗೂ. ಊರ ಜನ್ವೂ ಕೆಲುವ್ರು ಇಸ್ಕೊಂತಿದ್ರು.

ಅವಲಕ್ಕಿ ಕುಟ್ಟಾಟ

ಮದುವೆಗಳು, ಮುಂಜೀಗ್ಳು ಸಾಲೂಕೂ ಇರ್ತಿದ್ವ, ತಿಂಡಿ ಪಂಡಿ ಮಾಡಾಕೆ ಅವಲಕ್ಕಿ, ರವೆ ಬೇಕಿತ್ತಲ್ಲ. ಆವಾಗ ಉಪ್ಪಿಟ್ಟು, ಅವಲಕ್ಕೀನೆ ಪೆಷಲ್ ತಿಂಡಿಗ್ಳು. ಮದ್ವೆ ಮೂರ್ ತಿಂಗ್ಳಿದ್ದಂಗೇ ಕೆಲ್ಸಾ ಬೊಗ್ಸೆ ಸುರುವಾಗ್ತಿತ್ತು. ಮೂವತ್ತು ನಲವತ್ತು ಸೇರು ಬತ್ತ ಕೊಳದಪ್ಪಲೇಲಿ ಹಾಕಿ ಬೇಯಿಸಾಕಿಕ್ಕಿ ಹಾಗೇ ಬಿಡಬೇಕು. ಸೊಲ್ಪ ಹೊತ್ತಾದ್ರೆ ಹಿಚುಕುದ್ರೆ ಮೆತ್ತಗಿರ್ತಿತ್ತು. ಅಲ್ಲಿಗೆ ಅದು ಬೆಂದದೆ ಅಂತರ್ಥ. ಒಲೆ ಆರ್ಸಿ, ಮಂಕರಿ ಮುಚ್ಚಿ ಅಂಗೇ ಬಿಡಬೇಕು. ಬೆ‌ಳಗ್ಗೆ ಐದು ಗಂಟೇಗೆ ಮಂಕರೀಗೆ ತೋಡಬೇಕು.(ಹಾಕಬೇಕು) ಆಮೇಲೆ ಸೊಲ್ಸೊಲ್ಪ ಹಾಕ್ಕೊಂಡು ಬಾಂಡ್ಲೀಲಿ ಹುರ್ದು, ಅದು ಪಟಪಟ ಅನ್ನಾವಾಗ ತೆಗ್ದು ಒರಳೊಳಗೆ ಹಾಕಿ ಬಿಸಿ ಬಿಸಿ ಇರಾವಾಗ್ಲೆ ಕುಟ್ಟೀರೆ ಅವಲಕ್ಕಿ ರೆಡಿ. ಬಂದೋರು ಕುಶೀಲಿ ತಿಂತಿದ್ರು.

ಸಾಲು ಹುಣಿಸೆಮರ

ಹೊಲುದ್ ಸುತ್ತೂರ ಬೇಲಿಸಾಲಿಗೆ ಹುಣಿಸೆ ಬೀಜ ಹಾಕಿದ್ರು. ತಾತೋ ಯಾವ ಕಾಲುಕ್ಕೆ ಮರ ದೊಡ್ಡದಾಗೋದು, ಹುಣಿಸೆ ಹಣ್ಣು ಬಿಡಾದು. ಸುಮ್ಕೆ ಯಾಕೆ ಮಳೆಗಾಲ ಬತ್ತೂಂದ್ರೆ ಬೀಜ ಹಾಕ್ತೀಯ, ಈಗ್ಲೇ ಈಸು ವಯಸ್ಸಾಗದೆ ನಿಂಗೆ ಅಂತ ಮೊಮ್ಮಕ್ಕಳು ಕ್ಯೋಳೀರೆ, ಮಕ್ಕಳಾ, ನಾನು ಬೀಜ ಹಾಕ್ದೆ ಅಂತ ನಾನೇ ತಿನ್ಬೇಕಿಲ್ಲ. ನನ್‌ ಮಗ, ಮೊಮ್ಮಗ, ಮೊಮ್ಮಕ್ಕಳು, ಊರಿನ್ ಜನ ಎಲ್ರೂ ತಿಂತಾರೆ. ಅದೇ ನಂಗೆ ಖುಷಿ. ಯಾವ ಕೆಲ್ಸ ಮಾಡೀರೂ‌ ಹತ್ತು ಜನುಕ್ಕೆ ಉಪಯೋಗ್ವಾದ್ರೆ ಸಾಕು. ಗಿಡ ನೆಡೋದು, ಸಾಕೋದು ಪುಣ್ಯುದ್ ಕೆಲ್ಸ ಅಂತ ಯೋಳೋರು. ತಾತ ಹೋದ್ ಮ್ಯಾಲೆ ಆ ಹುಣಿಸೆ ಮರಗಳೂ ದೊಡ್ಡದಾಗಿ ಅರ್ಧ ಮರ ಬೇಲಿ ಆಚೆ ಹೊಲದೊಳಗೆ ಇದ್ರೆ, ಇನ್ನರ್ಧ ಬೇಲಿ ಈಚೆ ಇತ್ತು. ಹಾದೀಲಿ ಅಡ್ಡಾಡೋ ಊರಾಗ್ಳ ಜನ, ಇಸ್ಕೂಲ್ ಮಗ್ಗುಲಲ್ಲೇ ಇತ್ತಲ್ಲ, ಆ ಹೈಕ್ಳು ಎಲ್ರೂ ಕಿತ್ಕಂಡು ಹೋಗ್ತಿದ್ರು.

ನಮ್ಮಜ್ಜಿ ಎದ್ಯಾಗೆ ಏಸೊಂದು ಕತೆಗ್ಳು

ತಾತನಿಗೆ ತಕ್ಕ ಜೋಡಿ ನಮ್ಮಜ್ಜಿ ಲಕ್ಷ್ಮೀದೇವಮ್ಮ. ಯರಗುಂಟೆ ತೌರು ಮನೆ. ಮೂರು ಗಂಡು ಮೂರು ಹೆಣ್ಣುಮಕ್ಕಳು. ಎಲ್ರೂ ಕತೆ ಹೇಳೋರೆ, ಹಾಡು ಕಟ್ಟೋರೆ. ಹರಳೆಣ್ಣೆ ಮಾಡೋದು, ಅವಲಕ್ಕಿ ಕುಟ್ಟೋದು ಎಲ್ಲಾ ಅಜ್ಜಿ ಸಾಮ್ರಾಜ್ಯ. ಕತೆ ಹೇಳೋದು ಅಂದ್ರೆ ಜೀವ. ಸ್ವಂತ ಹಾಡು ಕಟ್ಟಿ ಹೇಳೋರು. ಅವರ ಅಣ್ಣಂದ್ರು ಅದ್ರಾಗೆ ಪಸ್ಟು. ಮಜ್ಜಿಗೆ ಕಡಿಯಾವಾಗ ಒಂದು ದೊಡ್ಡ ಹಾಡು ಹೇಳ್ತಿದ್ರು. ಅದು ಜವಾನನಿಂದ ಸುರು ಆಗಿ ದಿವಾನನವರೆಗೆ ಸಾಗ್ತಿತ್ತು. ಸಬ್ ಇನ್ಸ್ ಪೆಕ್ಟ್ರೂ, ಆಪೀಸ್ರೂಗಳೂ ಬಂದೋಗ್ತಾರೆ. ಮಜ್ಜಿಗೆ‌ ಕಡೆದು‌ ಮುಗಿಯಾ ಹೊತ್ಗೆ ಹಾಡು ಮುಗೀತಿತ್ತು. ಜೋಳದ ತೆನೆ ಹಾಡೊಂದು ಯೋಳ್ತಿದ್ರು. ಅದ್ರಾಗೆ ಬೀಜ ಬಿತ್ತಿ, ಪೈರು ಬಂದು, ಗಿಡ್ವಾಗಿ, ಹೂವಾಗಿ, ತೆನೆಗಟ್ಟಾವರ್ಗೆ ಹಾಡು ಉದ್ದೂಕಿತ್ತು.

ಬೆಣ್ಣೆ ಕಾಸೋ ಕತೆ

ಇಂತಾವು ತಮಾಸಿ ಕತೆಗೋಳ್ನ ಏಸೊಂದು ಹೇಳ್ತಿದ್ರು. ಒಬ್ಳು ಸೊಸಿ ಹೊಸ್ದಾಗಿ ಮದ್ವೆಯಾಗಿ ಬಂದೌಳೆ. ಅತ್ತೆ ಊರ್ಗೆ ಹೋಗಾವಾಗ ಬೆಣ್ಣೆ ಕಾಸಾಕೆ ಯೋಳೌಳೆ. ಅವ್ಳು ನಂಗೆ ಬರಾಕಿಲ್ಲ ಕಣತ್ತೆ ಅಂದ್ಲಂತೆ. ಅದ್ಕೇನಮ್ಮಿ ಅದೊಂದು ಘನ್ವೇ? ಸದ್ದು ಅಡಗಾಗಂಟ ಕಾಸು ಅಂಬ್ತೇಳಿ ಹೊಂಟೋಗೌಳೆ. ಇವ್ಳು ಬೆಣ್ಣೆ ಒಲೆ ಮ್ಯಾಕಿಕ್ಕಿ ಕಾಯ್ತೌಳೆ. ಸದ್ದು ಅಂದ್ರೆ ತಿಳೀಲಿಲ್ಲ. ಜನ ಅಡ್ಡಾಡೋದೂ, ಮಾತಾಡೋದೂ ಕೇಳುತ್ಲೇ ಇತ್ತಲ್ಲ, ಅಂಗೇ ಒಲೆ ಮುಂದೆ ನಿಂತೇ ಅವಳೆ. ಸಂಜೀ ಆಯ್ತು.‌ ಎಲ್ಲಾರ ಮನೇಗೆ ಹಿಟ್ಟು ಮಾಡಾ ಸದ್ದು ಸುರುವಾತು. ಅತ್ತೆ ಊರಿಂದ ಬಂದ್ಲು. ನೋಡೀರೆ ಪಾತ್ರೆ ಎಲ್ಲಾ ತಳ ಹತ್ಕಂಡು ತೂತಾಗದೆ. ಬೆಣ್ಣೆ ಅಂಬೋದು ಕಣ್ಗೂ ಕಾಣಾಕಿಲ್ಲ ಅನ್ನಂಗೆ ಆಗೈತೆ. ಅಯ್ಯೋ ಮೂದೇವಿ, ಸದ್ದು ಅಡಗೋದು ಅಂದ್ರೆ ಬೆಣ್ಣೆ ಚರಚರ ಅಂಬ ಸದ್ದು ಅಂತ ತಲೆ ಚಚ್ಕೊಂಡ್ಲಂತೆ. ಇಂಗೇ ತಮಾಸಿ ಕತೆಗೋಳು ನೂರಾರಿತ್ತು ಅಜ್ಜಿ ಎದ್ಯಾಗೆ.

ಹೊಸ್ದಾಗಿ ಮದ್ವೆ ಆಗಿದ್ದ ಅಳಿಯ ಅತ್ತೆ ಮನೇಗೆ ಬಂದ್ನಂತೆ. ಮೊದುಲ್ನೆ ಗಣೇಶನ ಹಬ್ಬ. ಅತ್ತೆ ಕಡುಬು ಮಾಡಿದ್ರು. ತೆಳ್ಳಗೆ, ಸಣ್ಣವು. ಹೊಸ ಅಳಿಯನಿಗೇಂತ ಕಷ್ಟ ಪಟ್ಟು ಸಣ್ಣ ಸಣ್ಣಕೆ ಮಾಡಿದ್ರು. ಅಳಿಯನ ತಟ್ಟೇಗೆ ಬಡಿಸಿದ್ರು. ಅವ್ನು ಒನೊಂದು ಸತೀಗೆ ಒಂದು ಗುಳುಂ ಮಾಡ್ತಿದ್ದ. ಅಳಿಯನ ಅಪ್ಪ ಥೋ ನಮ್ ಮರ್ವಾದೆ ತೆಗೀತಾವ್ನೆ ಅಂತ ಮೆಲ್ಲಕೆ ಮೂಗ್ಸನ್ನೆ (ಮೂಕಾಭಿನಯ) ಮಾಡೀರು. ಒಂದು ಮುರಿದು ಎರ್ಡು ಭಾಗ ಮಾಡಿ ತಿನ್ನಾಕೆ ಸೈಗು (ಸನ್ನೆ) ಮಾಡಿದ್ರು. ಅವ್ನು ಓ ಒಂದು ಸತೀಗೆ ಎರ್ಡು ತಿನ್ ಬೇಕು ಅಂತಾ ಎರ್ಡೆರಡು ತಿನ್ನೋಕೆ ಸುರು ಮಾಡ್ದ. ಪಾಪ ಅತ್ತೆ ತಂದು ತಂದು ಸುರಿಯೋಳು. ಅಪ್ಪ ಕೈ‌ಮರೇಲಿ ತಿರ್ಗಾ ತೋರ್ದ ಒಂದು ಮೂರು ಭಾಗ ಮಾಡು ಅಂತ. ಅವ್ನು ಓ‌ ಮೂರು ಮೂರು ತಿನ್ನಬೇಕು ಅಂತ ತುರುಕ್ಕೊಳ್ಳೋಕೆ ಸುರು ಮಾಡ್ದ.

ಇಂತಾ ನಮ್ಮಜ್ಜಿ ಒಂಬತ್ತು‌ ಮಕ್ಕಳ ತಾಯಿ. ಪಾಪ ಕೊನೆಗಾಲ್ದಾಗೆ ಲಕ್ವ ಹೊಡೀತು. ಒಂದು ಬಾಗಾ ಪೂರಾ ಬಿದ್ದೋಯ್ತು. ಎಲ್ಲಾ ಹಾಸಿಗೆ ಮೇಲೇ. ಆದ್ರೆ ಸೋಜಿಗ ಅಂದ್ರೆ ಮಾತು ಬಿದ್ದೋಗಿದ್ರೂ ನಾರಾಯಣ ಅನ್ನಾ ಪದ ಮಾತ್ರ ಹೊಂಡುತಿತ್ತು. ಅದೆಂಗೆ!! ನಂಗಿನ್ನೂ ನೆಪ್ಪೈತೆ, ಯಾರಾನ ಎಂಗಿವ್ರಿ ಅಂತ ಕೇಳೀರೆ ಕೈ ಮೇಲೆ ಆಕಾಸುಕ್ಕೆ ತೋರ್ತಾ, ನಾರಾಯಣ ಅನ್ನೋರು. ಇಂಗೇ ನಾರಾಯಣ ಜಪ ಮಾಡ್ತಾ ಹತ್ತತ್ರ ಐದು ವರ್ಸ ಇದ್ರು. ಅವ್ರು ಸತ್ತ ಮ್ಯಾಲೆ, ಕಾಕತಾಳೀಯ ಅಂಬಂಗೆ ಆಕಾಸ್ದಾಗೆ ಗರುಡ ಕಾಣಿಸ್ತು. ಚಟ್ಟದ ಸುತ್ತಾ ಅನ್ನೋ ಅಂಗೆ ಸುತ್ತು ಹಾಕ್ತು. ಊರ್ ಜನ್ವೆಲ್ಲಾ ಕೈಮುಗುದ್ರು.

ಅಜ್ಜೀ ತಾತ ರಾಶಿ ಮಕ್ಳು, ಮೊಮ್ಮಕ್ಳಿಗೆ ಒಂದೊಳ್ಳೆ ಸಂಸ್ಕಾರ ಕೊಟ್ರು. ಇವತ್ಗೂ ಅವ್ರ ಮಾತು ಕತೆ ಮರ್ಯಾಕೆ ಆಗಲ್ಲ.