ಕನ್ನಡ ಭಾಷೆಯನ್ನು ಬಳಸುವುದೂ ಹಾಗೂ ಕನ್ನಡ ಕೃತಿಗಳನ್ನು ಓದುವುದೂ ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ, ಕನ್ನಡ ಭಾಷೆಗೆ ಹಾಗೂ ಅದರ ಓದಿಗೆ ಕನ್ನಡಿಗರನ್ನು ಸೆಳೆಯಲು “ವೀರಲೋಕ”‌ ಪ್ರಕಾಶನದ ಸಂಸ್ಥೆ ಹಲವು ವಿಶಿಷ್ಠ ಪ್ರಯತ್ನಗಳನ್ನು ಮಾಡುತ್ತಿದ್ದು, ಅದರ ಭಾಗವಾಗಿ ನವೆಂಬರ್ ೧೫,೧೬, ಮತ್ತು ೧೭ರಂದು ಬೆಂಗಳೂರಿನಲ್ಲಿ “ಪುಸ್ತಕ ಸಂತೆ”ಯನ್ನು ಆಯೋಜಿಸಿದೆ. ಇದರ ಕುರಿತು ವೀರಲೋಕದ ಪ್ರಕಾಶಕರಾದ ವೀರಕಪುತ್ರ ಶ್ರೀನಿವಾಸ್‌ ಅವರೊಂದಿಗೆ ರೂಪಶ್ರೀ ಕಲ್ಲಿಗನೂರ್‌ ನಡೆಸಿದ ಸಂದರ್ಶನ ನಿಮ್ಮ ಓದಿಗೆ…

ಸಂದರ್ಶಕಿ: “ವೀರಲೋಕ” ಎಂಬ ಕನಸು ನಿಮ್ಮಲ್ಲಿ ಮೊಳೆತದ್ದು ಯಾವಾಗ?

ವೀರಕಪುತ್ರ ಶ್ರೀನಿವಾಸ್: ಬಾಲ್ಯದಿಂದಲೂ ಪುಸ್ತಕ ಓದುವ ಅಭ್ಯಾಸ ಇತ್ತು. ಪುಸ್ತಕಗಳೇ ನನ್ನನ್ನು ಇಲ್ಲಿ ತನಕ ಕೈ ಹಿಡಿದು ನಡೆಸಿದ್ದು. ಜಗತ್ತನ್ನು ಸ್ವತಃ ಅನುಭವಿಸಿ ತಿಳಿಯುವ ಸಾಹಸಕ್ಕೆ ನಾನು ಹೋಗಲಿಲ್ಲ. ಬದಲಾಗಿ ಪುಸ್ತಕಗಳು ತಿಳಿಸುತ್ತಾ ಹೋದವು, ನಾನು ಅರಿಯುತ್ತಾ ಹೋದೆ. ಅವು ತೋರಿದ ದಾರಿಯಲ್ಲಿಯೇ ಸಾಗಿ, ಉದ್ಯಮಿಯಾದೆ, ಬದುಕನ್ನು ಭದ್ರಪಡಿಸಿಕೊಂಡೆ. ಸಾಮಾನ್ಯವಾಗಿ ಒಂದು ಹಂತ ತಲುಪಿದ ಯಾವುದೇ ಮನುಷ್ಯನಿಗೆ ಇನ್ನೊಂದಷ್ಟು ವಿಸ್ತಾರಗೊಳ್ಳಬೇಕು ಎಂದುಕೊಳ್ಳುತ್ತಾನೆ. ಆಗ ಕ್ಲಬ್ ಮೆಂಬರ್‌ಶಿಪ್‌ ಪಡೆಯೋದು, ರೋಟರಿಯನ್ ಆಗೋದು, ಪ್ರವಾಸಿಯಾಗೋದು, ಸಮಾಜಸೇವಕನಾಗೋದು ಹೀಗೆ ಏನೇನೋ ಅವತಾರಗಳನ್ನು ಎತ್ತಲಾರಂಭಿಸುತ್ತಾನೆ. ಹಾಗೆ ನಾನು ಎತ್ತಿದ ಅವತಾರವೇ ಈ ವೀರಲೋಕ. ಈ ಪುಸ್ತಕಗಳ ಋಣಸಂದಾಯಕ್ಕೆ ಅಂತ ನನ್ನನ್ನು ತೊಡಗಿಸಿಕೊಂಡೆ… ಎಲ್ಲವನ್ನೂ ಕೊಟ್ಟ ಪುಸ್ತಕಗಳಿಗೆ, ಚೂರನ್ನಾದ್ರೂ ವಾಪಸ್ಸಾಗಿಸುವ ಒಂದು ಪುಟ್ಟ ಪ್ರಯತ್ನ ಮಾಡ್ತಿದ್ದೇನೆ.

***

ಸಂ: ಪುಸ್ತಕ ಪ್ರಕಟಣೆ ಎಂದರೆ ಹೆದರುವ ಕಾಲದಲ್ಲಿ ಸಾಹಿತ್ಯದ ಯಾವ ಅಂಶ ನಿಮ್ಮನ್ನು ಪುಸ್ತಕ ಪ್ರಕಾಶನದ ಕೆಲಸಕ್ಕೆ ಹಚ್ಚಿತು?

ವೀ ಶ್ರೀ: ಯಾವುದೋ ಒಂದು ಅಂಶ ಅಂತಲ್ಲ, ಕನ್ನಡ ಸಾಹಿತ್ಯ ಎಂಬ ಒಟ್ಟು ಅಂಶವೇ ನನಗೆ ಪ್ರೇರಣೆ. ಎರಡೂವರೆ ಸಾವಿರ ವರ್ಷಗಳ ಇತಿಹಾಸವಿರುವ ಭಾಷೆಯೊಂದರ ಸಾಹಿತ್ಯ ಯಾವ ಮಟ್ಟದಲ್ಲಿರಬೇಕಿತ್ತು! ಆದರೆ ಯಾವ ಮಟ್ಟದಲ್ಲಿದೆ? ಖ್ಯಾತ ಲೇಖಕರ ಕೃತಿಗಳೂ ಮುನ್ನೂರು ಮುದ್ರಣಗೊಳ್ಳುತ್ತಿಲ್ಲವೆಂದರೆ ಏನು ಮಾಡಬೇಕು? ರಾಜ ಮಹಾರಾಜರ ಕಾಲದಲ್ಲೂ ಸಾಹಿತ್ಯಕ್ಕೆ ಪೋಷಕರಿದ್ದಂತೆ, ಈಗಲೂ ಸರ್ಕಾರ ಪೋಷಕ ಸ್ಥಾನದಲ್ಲಿ ನಿಂತು ಪುಸ್ತಕ ಖರೀದಿಸದಿದ್ದರೆ ಬಹುತೇಕ ಪ್ರಕಾಶಕರು ಪ್ರಕಾಶನ ಸಂಸ್ಥೆಯನ್ನು ಮುನ್ನಡೆಸಲು ಯೋಚಿಸಬೇಕಾದ ಸ್ಥಿತಿ ಇದೆ. ಪುಸ್ತಕಲೋಕ ಸೇವಾ ಕ್ಷೇತ್ರವಾಗಿಯೇ ಉಳಿದಿದ್ದು ಇಷ್ಟಕ್ಕೆಲ್ಲಾ ಕಾರಣ. ಆದ್ದರಿಂದ ಇದಕ್ಕೆ ಉದ್ಯಮ ರೂಪ ಕೊಡಬೇಕು ಎಂದುಕೊಂಡೆ, ಒಂದಷ್ಟು ವೃತ್ತಿಪರತೆ ತರಬೇಕು ಅಂತ ಭಾವಿಸಿದೆ. ಓಲಾ, ಓಯೋ ರೂಮ್ಸ್, ಸ್ವಿಗ್ಗಿ, ಜೊಮ್ಯಾಟೋ ತರಹದ ಅನೇಕ ಉದ್ಯಮಗಳು ಸೃಷ್ಟಿಗೆ ಯುವಕರು ಕಾರಣವಾಗುತ್ತಿದ್ದಾರೆ. ಅದರೆ ಪುಸ್ತಕಲೋಕದಲ್ಲಿ ಯಾರೂ ಅಂತಹವರು ಹುಟ್ಟಲಿಲ್ಲ. ಆದ್ದರಿಂದ ನಾನು ಯುವಕರ ಗಮನವನ್ನು ಇತ್ತ ಸೆಳೆಯುವ ಪ್ರಯತ್ನ ಮಾಡಿದೆ. ಅದು ಸ್ವಲ್ಪಮಟ್ಟಿಗೆ ಫಲಕೊಡ್ತಿದೆ. ಇನ್ನೊಂದೆರಡು ವರ್ಷದಲ್ಲಿ ಇದು ನಿಚ್ಛಳವಾಗಿ ಕಾಣಿಸಬಹುದು ಅನಿಸುತ್ತೆ.

(ವೀರಕಪುತ್ರ ಶ್ರೀನಿವಾಸ್)  

ಸಂ: ಪುಸ್ತಕ ಪ್ರಕಟಣೆ ಅಂದರೆ, ಗ್ರಂಥಾಲಯಕ್ಕೆ ಪುಸ್ತಕಗಳನ್ನು ಹಾಕಿ, ದುಡ್ಡು ಮಾಡಿಕೊಳ್ಳುವುದೇ ಅನ್ನುವ ಯೋಚನೆ ಇದೆ.. ಇದಕ್ಕೆ ನೀವೇನಂತೀರಿ?

ವೀ ಶ್ರೀ: ಹ ಹ ಹ… ಇದೆಲ್ಲಾ ಒಂದು ದುಡ್ಡೇ! ಲೇಖಕರಿಗೋ ಪ್ರಕಾಶಕರಿಗೋ ಮಹಾ ಅಂದರೆ ವರ್ಷಕ್ಕೆ ಒಂದೆರಡು ಲಕ್ಷ ಸಿಗಬಹುದು. ಅದನ್ನು ಪಡೆಯೋಕೆ ಎರಡು, ಮೂರು ಅಥವಾ ನಾಲ್ಕು ವರ್ಷವಾದರೂ ಕಾಯಬೇಕು. ಹಾಗೆ ಕಾಯ್ತಾ ಕಾಯ್ತಾ ಪ್ರಕಟಣೆಗೆ ಹಾಕಿದ ದುಡ್ಡಿಗೆ ಬಡ್ಡಿ ಸಹ ಬಂದಿರಲ್ಲ. ಇನ್ನು ದೊಡ್ಡ ದೊಡ್ಡ ಪ್ರಕಾಶಕರಿಗೆ ಈ ದುಡ್ಡು ಏನಕ್ಕೂ ಸಾಕಾಗಲ್ಲ! ಅಥವಾ ಕಾಯುವ ಸ್ಥಿತಿಯೂ ಅವರಿಗಿರಲ್ಲ. ಯಾವುದೇ ಕ್ಷೇತ್ರವಾದರೂ ಗಟ್ಟಿ ಜೊತೆಗೆ ಜೊಳ್ಳು ಇರುತ್ತೆ ನೋಡಿ. ಹಾಗೆ ಇಲ್ಲೂ ಕೆಲವರು ಇರಬಹುದು. ಬಿಡುಗಡೆ ಸಂದರ್ಭಕ್ಕೆ ಅನುವಾಗುವಂತೆ ಹತ್ತೋ ಇಪ್ಪತ್ತೋ ಪ್ರತಿಗಳನ್ನು ಮುದ್ರಿಸಿ, ಉಳಿದ ಪ್ರತಿಗಳನ್ನು ಸರ್ಕಾರದ ಆಯ್ಕೆಯ ಆದೇಶ ಬಂದಮೇಲೆ ಮುದ್ರಿಸಿ ಸಲ್ಲಿಸುವವರು ಇಲ್ಲೂ ಇರಬಹುದು. ಆದರೆ ಅವರ ಸಂಖ್ಯೆ ಅಷ್ಟೇನು ದೊಡ್ಡದಲ್ಲ. ಅವರಿಂದ ಉದ್ಯಮಕ್ಕೆ ನಷ್ಟವೂ ಇಲ್ಲ. ಆದ್ದರಿಂದ ಬಹುತೇಕ ಪ್ರಕಾಶಕರು ಪುಸ್ತಕ ಪ್ರಕಟಣೆಯನ್ನು ಒಂದು ಮಹತ್ತರ ಜವಾಬ್ದಾರಿ, ಕನ್ನಡದ ಕೆಲಸ ಎಂದು ಭಾವಿಸಿಯೇ ಮುನ್ನಡೆಯುತ್ತಿದ್ದಾರೆ.

ಸಂ: ಪುಸ್ತಕ ಪ್ರಕಟಣೆ ಮುಖ್ಯ ಕೆಲಸ ಅಂತ ನಿಮಗೆ ಏಕೆ ಅನ್ನಿಸುತ್ತೆ?

ವೀ ಶ್ರೀ: ಏಕೆ ಅಂದರೆ ಇದು ಕನ್ನಡದ ಕೆಲಸ… ಕನ್ನಡವನ್ನು ಭಾಷೆಯಾಗಿ ಉಳಿಸಿಕೊಳ್ಳಲು, ಅದರ ಬೇರುಗಳನ್ನು ಗಟ್ಟಿಗೊಳಿಸಲು ಕನ್ನಡ ಪುಸ್ತಕಗಳು ಭಾಷೆ ಇರುವಷ್ಟು ದಿನವೂ ಇರಲೇಬೇಕು. ಅಥವಾ ಭಾಷೆ ಇರಬೇಕಾದರೆ ಪುಸ್ತಕಗಳೂ ಇರಬೇಕು. ಇವತ್ತಿನ ಎಷ್ಟೋ ಮಕ್ಕಳಿಗೆ ಕನ್ನಡ ಮಾತನಾಡಲು ಬರುತ್ತದೆಯಾದರೂ ಓದಲು ಬರುತ್ತಿಲ್ಲ. ಏಕೆಂದರೆ ನಾವು ಕನ್ನಡದ ಪುಸ್ತಕಗಳನ್ನು ಅವರಿಂದ ದೂರವಾಗಿಸಿಬಿಟ್ಟಿದ್ದೇವೆ. ಆದ್ದರಿಂದ ಪುಸ್ತಕ ಪ್ರಕಟಣೆ ಮತ್ತು ಮಾರ್ಕೆಟಿಂಗ್ ಈ ಹೊತ್ತಿನ ಬಹುದೊಡ್ಡ ಅಗತ್ಯವೆಂದು ನಾನು ಭಾವಿಸಿದ್ದೇನೆ. ಕಟ್ಟಕಡೆಯ ಓದುಗನಿಗೂ ಪುಸ್ತಕಗಳು ದೊರಕುವಂತೆ ಮಾಡಬೇಕು. ಓದುಗನಿಗೆ ಆಯ್ಕೆಯನ್ನು ನೀಡದಂತೆ, ಬ್ಯುಸಿಯಾಗಿಡಬೇಕು. ಆಯ್ಕೆ ಕೊಟ್ಟಿದ್ದೇ ಆದರೆ, ಅವನು ಇನ್ಯಾವುದಕ್ಕೋ ಅಂಟಿಕೊಳ್ಳುವ ಅಪಾಯವಿದೆ.

ಸಂ: ಕವಿತಾ ಸಂಕಲನ ಪ್ರಕಟಿಸೋದು ಸಮಸ್ಯೆ ಅನ್ನಿಸುತ್ತದಾ? ಸಮಸ್ಯೆ ಏನಿರಬಹುದು?

ವೀ ಶ್ರೀ: ಸೋಶಿಯಲ್ ಮೀಡಿಯಾ ಮುನ್ನಲೆಗೆ ಬಂದ ಹೊತ್ತಿನಲ್ಲಿ ಕವನಗಳ ಬೇಕಾಬಿಟ್ಟಿ ಬಳಕೆಯಿಂದ ಕವನಗಳ ಘನತೆಯನ್ನು ನಾವು ಹಾಳುಮಾಡಿದ್ದೆವು. ಬೇಕಾಬಿಟ್ಟಿ ಪ್ರಕಟಣೆಗಳು, ಕವಿ ಎನಿಸಿಕೊಳ್ಳುವ ಉಮೇದು, ಹತ್ತು ಸಾಲಿಗೆ ತುಂಬಿಕೊಳ್ಳುತ್ತಿದ್ದ ಪುಟ, ಕಾವ್ಯಪರಂಪರೆಗೆ ಮಾರಕವಾಗಿ ಪರಿಣಮಿಸಿದ್ದವು. ಗ್ರಾಹಕರನ್ನು ತೃಪ್ತಿಪಡಿಸದ ಯಾವ ಉದ್ಯಮ ಉಳಿದಿದೆ ಹೇಳಿ? ಓದುಗರನ್ನು ವಂಚಿಸಿದ್ದರಿಂದಲೇ ಕವನ ಪ್ರಕಾರ ಕಷ್ಟಕ್ಕೀಡಾಗಿದ್ದು. ಅದರ ಘನತೆಯನ್ನು ಕಳೆದವರು ನಾವೇ ಆದ್ದರಿಂದ ಅವುಗಳ ಘನತೆಯನ್ನು ಪ್ರತಿಷ್ಠಾಪಿಸುವ ಕೆಲಸವೂ ನಮ್ಮಿಂದಲೇ ಆಗಬೇಕಿದೆ. ಆದ್ದರಿಂದಲೇ ಕವನಗಳಿಗೆ ಕಾಲವಲ್ಲ ಎಂಬ ಕಾಲದಲ್ಲಿಯೂ ವೀರಲೋಕವು ‘ಕಾವ್ಯಕ್ರಮ’ ಎಂಬ ಬಹುದೊಡ್ಡ ಕಾರ್ಯಕ್ರಮದ ಮೂಲಕ ಸಂಚಲನ ಸೃಷ್ಟಿಸಿದ್ದೆವು. ಬಿಡುಗಡೆ ದಿನವೇ ಮೂರು ಕವನ ಸಂಕಲನಗಳು ಮರುಮುದ್ರಣಗೊಂಡು ಸಾಹಿತ್ಯಲೋಕದಲ್ಲಿ ಉತ್ಸಾಹ ತುಂಬಿದ್ದವು. ಈಗಲೂ ವರ್ಷಕ್ಕೆ ಐದು ಕವನ ಸಂಕಲನಗಳನ್ನು ಹೊರತರುವ ನಿರ್ಧಾರ ವೀರಲೋಕದಲ್ಲಿ ಜಾರಿಯಲ್ಲಿದೆ. ಎಲ್ಲಿವರೆಗೆ ನಾವು ಓದುಗರನ್ನು ಘನತೆಯಿಂದ ಕಾಣುತ್ತೆವೆಯೋ ಅಲ್ಲಿವರೆಗೆ ಯಾವ ಪ್ರಕಾರಕ್ಕೂ ನಷ್ಟವೆಂಬುದಿರುವುದಿಲ್ಲ.

***

ಸಂ: ಕನ್ನಡದ ಓದುಗರ ಕುರಿತು ನಿಮ್ಮ ಅಭಿಪ್ರಾಯ?

ವೀ ಶ್ರೀ: ಕನ್ನಡದ ಓದುಗರು ಇಂಗ್ಲೀಷಿನತ್ತ ಮುಖಮಾಡಿರುವುದು ಸ್ಪಷ್ಟವಾಗಿ ತಿಳಿಯುತ್ತಿದೆ. ತುಂಬಾ ಜನ ಕೆಲವೇ ಕೆಲವು ಹೆಸರಾಂತರನ್ನು ಬಿಟ್ಟು ಕನ್ನಡದ ಯಾವೊಂದು ಕೃತಿಯನ್ನೂ ಓದುತ್ತಿಲ್ಲ. ವಿದ್ಯಾರ್ಥಿ ದೆಸೆಯಲ್ಲಿರುವವರು, ಸಾಹಿತ್ಯ ಕ್ಷೇತ್ರವನ್ನೂ ಈಗ ತಾನೇ ಪ್ರವೇಶಿಸುತ್ತಿರುವವರು ಮಾತ್ರ ಕನ್ನಡದ ಓದುಗರು. ಅವರಷ್ಟೇ ಪ್ರಕಾಶಕರಿಗೆ ಆಸರೆಯಾಗಿದ್ದಾರೆ.

ಸಂ: ಕನ್ನಡದಲ್ಲಿ ಹಲವಾರು ಪ್ರಕಾಶಕರಿದ್ದಾರೆ..‌ ಅವರ ನಡುವಿನ ಬಾಂಧವ್ಯ/ ಗೆಳೆತನ ಹೇಗಿದೆ ಅಂತೀರಿ?

ವೀ ಶ್ರೀ: ಕನ್ನಡ ಪ್ರಕಾಶನಲೋಕದ ಪರಂಪರೆ ತುಂಬಾ ದೊಡ್ಡದು. ಶತಮಾನದ ಹತ್ತಿರವಿರುವ ಪ್ರಕಾಶನ ಸಂಸ್ಥೆಗಳೂ ಇಲ್ಲಿವೆ. ಅವುಗಳನ್ನು ಗೌರವಿಸುವ ವಿಷಯದಲ್ಲಿ ರಾಜಿಯೇ ಇಲ್ಲ. ನಾವು ಅವರನ್ನು ಮೀರಿದವರು ಎಂಬ ಭಾವನೆ ಎಳ್ಳಷ್ಟೂ ನಮ್ಮಲ್ಲಿಲ್ಲವಾದ್ದರಿಂದ ಮತ್ತು ನಾವು ಅವರುಗಳನ್ನು ನಮ್ಮ ಪ್ರತಿಸ್ಪರ್ಧಿಗಳು ಎಂದು ಭಾವಿಸಿಲ್ಲವಾದ್ದರಿಂದ ನಮಗೆ ಎಲ್ಲರೂ ಗೌರವಾನ್ವಿತರಾಗಿಯೇ ಕಾಣುತ್ತಿದ್ದಾರೆ. ಆದರೆ ಇತರೆ ಪ್ರಕಾಶಕರ ದೃಷ್ಟಿಯಲ್ಲಿ ನಾವು ಏನಾಗಿದ್ದೇವೆ ಎಂಬುದು ಇನ್ನೂ ಅರ್ಥವಾಗಿಲ್ಲ.

ಸಂ: ಪುಸ್ತಕ ಪ್ರಕಟಣಾ ಉದ್ಯಮದ ಸ್ಥಿತಿ ಈಗ ಹೇಗಿದೆ?

ವೀ ಶ್ರೀ: ಉತ್ಸಾಹ ಉಕ್ಕಿ ಹರಿಯುತ್ತಿದೆ. ಇನ್ನೊಂದೆರಡು ವರ್ಷದಲ್ಲಿ ಇದೊಂದು ಉದ್ಯಮದ ರೂಪವನ್ನು ಪಡೆಯಬಹುದು. ಅಲ್ಲಿಂದಾಚೆಗೆ ಹಿಂತಿರುಗಿ ನೋಡುವ ಅಗತ್ಯವಿರುವುದಿಲ್ಲ.

ಸಂ: ಕರ್ನಾಟಕದಲ್ಲಿ ಮಾಲ್ ರೀತಿಯ ವಾತಾವರಣಗಳಲ್ಲಿ ಕನ್ನಡ ಮಾತನಾಡಲೇ ಹಿಂಜರಿಯುವ ಕನ್ನಡಿಗರ ಬಗ್ಗೆ ಏನು ಹೇಳ್ತೀರಿ? ಯಾಕೆ ಹೀಗೆ? (ಬೇರೆ ಊರಿನವರು ಇಲ್ಲಿ ಅವರ ಭಾಷೆಯನ್ನು ನಿರಾತಂಕವಾಗಿ ಮಾತನಾಡುವ ಸಂದರ್ಭದಲ್ಲಿ..)

ವೀ ಶ್ರೀ: ನಮ್ಮದು ಕೀಳರಿಮೆ ಸ್ವಭಾವ. ಎದುರಿನವರನ್ನು ಮೆಚ್ಚಿಸುವ ಪ್ಲೀಜಿಂಗ್ ಮನಸ್ಥಿತಿ… ಎಂಬೆಲ್ಲಾ ಮಾತುಗಳನ್ನು ಕೆಲವರು ಆಡುವುದನ್ನು ಕೇಳಿದ್ದೇವೆ. ಆದರೆ ನಾವು ನೆನಪಿಡಬೇಕಾದ ವಿಷಯ, ಕನ್ನಡಿಗರಲ್ಲಿ ಉದ್ಯಮಶೀಲತೆ ಕಡಿಮೆ. ಪರಭಾಷಿಕನೊಬ್ಬ ಬಂದು ಉದ್ಯಮ ತೆರೆದರೆ ಅಲ್ಲಿ ನಾವು ಕೆಲಸಕ್ಕೆ ಹೋಗುತ್ತಿದ್ದೇವೆ. ಆದ್ದರಿಂದ ಅವರನ್ನು ಮೆಚ್ಚಿಸುವ ಕೆಲಸದಲ್ಲಿ ನಿರತರಾಗಿದ್ದೇವೆ. ಹೊರಗಿನವರು ಶ್ರೇಷ್ಟರು ನಾವು ಕನಿಷ್ಟರು ಅನ್ನೋ ಮನಸ್ಥಿತಿಯನ್ನು ಬಲವಂತವಾಗಿ ಹೇರಿಕೊಳ್ಳುತ್ತಿದ್ದೇವೆ. ಅಪ್ಪಿ ತಪ್ಪಿ ನಮ್ಮವರು ಯಾರಾದರೂ ಬೃಹತ್ ಅಪಾರ್ಟ್ಮೆಂಟ್, ಮಾಲ್ ಕಟ್ಟಿದರೆ ಅದನ್ನು ನಂಬುವ ಸ್ಥಿತಿಯಲ್ಲೂ ನಾವಿಲ್ಲ. ಇದು ಯಾರೋ ಪರಭಾಷಿಕನಿದ್ದಿರಬೇಕು ಎಂದು ಕನ್ನಡದವನನ್ನೂ ಹಿಂದಿಯಲ್ಲೂ, ಇಂಗ್ಲೀಷಿನಲ್ಲೋ ಮಾತನಾಡಿಸುತ್ತೇವೆ. ಈಗಿನ ಯುವಕರಲ್ಲಿ ಆ ಮನೋಭಾವ ಚೂರು ಕಡಿಮೆಯಾಗಿದೆಯಾದರೂ ಸಂಪೂರ್ಣವಾಗಿ ಹೋಗಿಲ್ಲ.

ಸಂ: ಪುಸ್ತಕ ಸಂತೆ-೧ ಕ್ಕೆ ಸಿಕ್ಕ ಪ್ರತಿಕ್ರಿಯೆ ಹೇಗಿತ್ತು? ಈಗ ಎರಡನೇಯ ಸಂತೆಗೆ ತಯಾರಿ/ ಅಥವಾ ಯಾವ ಥರದ ಬದಲಾವಣೆ ಮಾಡಿಕೊಂಡಿದ್ದೀರಿ? ಮತ್ತೆ ಈ ಸಲದ ವಿಶೇಷಗಳೇನು?

ವೀ ಶ್ರೀ: ಪುಸ್ತಕಸಂತೆ-1 ಒಂದು ಅದ್ಭುತವೆಂಬಂತೆ ಯಶಸ್ವಿಯಾಗಿತ್ತು. ಅದನ್ನು ಪ್ರೇರಣೆಯಾಗಿಸಿಕೊಂಡು ಎರಡನೆಯನ್ನು ತುಸು ದೊಡ್ಡಮಟ್ಟದಲ್ಲಿ ರೂಪಿಸುತ್ತಿದ್ದೇವೆ. ಅಲ್ಲಿ 60 ಮಳಿಗೆಗಳಿದ್ದವು, ಇಲ್ಲಿ ನೂರು ಮಳಿಗೆಗಳಾಗುತ್ತಿವೆ. ಅದು ಎರಡು ದಿನದ ಉತ್ಸವ, ಇದು ಮೂರು ದಿನದ ಉತ್ಸವ. ಅಲ್ಲಿ ಕೇವಲ ಪುಸ್ತಕ ಮಳಿಗೆಗಳಿದ್ದವು. ಇಲ್ಲಿ ಪುಸ್ತಕ ಮಳಿಗೆಗಳ ಜೊತೆಗೆ, ಆಹಾರ, ಮನರಂಜನೆ, ಶಾಪಿಂಗ್, ಸಂಗೀತ, ಪುಸ್ತಕ ಬಿಡುಗಡೆ ಮತ್ತು ಮಕ್ಕಳ ಆಟದ ಕೇಂದ್ರವೂ ಇರಲಿದೆ.

ಸಂ: ಪುಸ್ತಕ ಪ್ರಕಟಣೆಯಲ್ಲಿ ಹಾದಿಯಲ್ಲಿ ನಿಮ್ಮ ಹೊಸ ಕನಸುಗಳು?

ವೀ ಶ್ರೀ: ಕನ್ನಡ ಪುಸ್ತಕ ಪ್ರಕಟಣೆ ನನ್ನ ಉದ್ದೇಶವಲ್ಲ… ಕನ್ನಡ ಪುಸ್ತಕಗಳ ಮಾರುಕಟ್ಟೆ ವಿಸ್ತರಣೆ ನನ್ನ ಉದ್ದೇಶ. ಅದಕ್ಕಾಗಿಯೇ ಈ ಸಂತೆ, ಕನ್ನಡ ಕೃಷಿ ತರಹದ ಯೋಜನೆಗಳನ್ನು ರೂಪಿಸುತ್ತಿರುವುದು. ಇನ್ನೊಂದಷ್ಟು ಬೃಹತ್ ಯೋಚನೆಗಳಿವೆ. ಅವು ಖಂಡಿತವಾಗಿಯೂ ಪುಸ್ತಕಲೋಕದ ವ್ಯಾಕರಣವನ್ನು ಬದಲಾಯಿಸುತ್ತವೆ. ಆದರೆ ಅದಕ್ಕೆ ಇನ್ನೂ ಸಾಕಷ್ಟು ಸಮಯವಿದೆ.