ಈ ರಸ್ತೆಯಲ್ಲಿ ಮಿಲಿಟರಿಗೆ ಸಂಬಂಧಿಸಿದ ಕೆಲವು ಕಚೇರಿಗಳು ಇದ್ದವು. ಇಲ್ಲೂ ಸಹ ಒಂದು ರೈಲ್ವೇ ಗೇಟ್ ಇತ್ತು. ತೀರಾ ಈಚೆಗೆ ಒಂದು ಅಂಡರ್ ಪಾಸ್ ನಿರ್ಮಾಣವಾಗಿ ರೈಲು ಅದರ ತಳಗೆ ಹೋಗುತ್ತದೆ. ಮಿಲಿಟರಿ ಕಚೇರಿಗಳಿಗೆ ಸೇರಿದ ಹಾಗೆ ಒಂದು ಕಾರ್ಖಾನೆ ಇತ್ತು. ಅದರ ಹೆಸರು ಸಿಗ್ ಫಿಲ್ ಎಂದು. ಸಿಗರೇಟ್ ಫಿಲ್ಟರ್‌ನ ಕಂದು ಬಣ್ಣದ ಬೊಂಬೆ ಅದರ ಮುಖ್ಯ ಫಲಕದ ಮೇಲೆ ಬಿಂಬಿತವಾಗಿತ್ತು. ಇಲ್ಲಿ ಸಿಗರೇಟ್ ಫಿಲ್ಟರ್ ತಯಾರಿಸುತ್ತಿದ್ದರು ಸಿಗರೇಟ್ ಫಿಲ್ಟರ್ ಅಂದರೆ ಫಿಲ್ಟರ್ ಸಿಗರೇಟಿನ ಒಂದು ತುದಿಗೆ ಹತ್ತಿಯಂತಹ ವಸ್ತು ತುಂಬಿರುತ್ತಾರೆ ನೋಡಿ ಅದು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ನಲವತ್ತಾರನೆಯ ಕಂತು ನಿಮ್ಮ ಓದಿಗೆ
ಕಳೆದ ಸಂಚಿಕೆಯನ್ನು ಹೀಗೆ ಮುಗಿಸಿದ್ದೆ..
“……ತೊಂಬತ್ತರ ಕೊನೆಯಲ್ಲಿ ಅಂತ ಕಾಣಿಸುತ್ತೆ. ಬೆಂಗಳೂರಿನ ಕಂಟೋನ್ಮೆಂಟಿನ ಅಂಗಡಿಯಲ್ಲಿ ಬೋರ್ನ್ ವಿಟಾ ರೀತಿಯ ಒಂದು ಚಾಕಲೇಟು ಡ್ರಿಂಕ್ ಹುಡುಕುತ್ತಿದ್ದೆ. ಅಮೇರಿಕನ್ ಕಂಪನಿಯ ಒಂದು ಅರ್ಧ ಕೆಜಿ ಡಬ್ಬ ಐನೂರು ಚಿಲ್ರೆ ಬೆಲೆ ಇತ್ತು. ಸುಮಾರು ಹೊರದೇಶದ ಅಂದರೆ ಅಮೆರಿಕ, ಇಂಗ್ಲೆಂಡ್ ಕಂಪನಿಗಳ ತಯಾರಿಕೆ, ಎಲ್ಲವೂ ನಮ್ಮ ಜೇಬಿಗೆ ತುಸು ದುಬಾರಿ ಅನಿಸುವ ಹಾಗಿದ್ದವು. ಬೆಲೆ ನೋಡಿ ಇದು ಬೇಡ ನಮ್ಮ ತಾತ ಇದನ್ನೇ ಕುಡಿದನಾ? ಆರೋಗ್ಯವಾಗಿ ನೂರು ವರ್ಷ ಬದುಕಿದನಲ್ಲಾ…. ಅಂತ ಅನಿಸಿ ಮನಸಿಗೆ ಸಾಂತ್ವನ ಹೇಳಿಕೊಂಡು ಅಂಗಡಿಯಿಂದ ಹೊರಬಂದೆ. ಕಂಟೋನ್ಮೆಂಟ್ ಅಂಗಡಿ, ಬೆಲೆ ಜಾಸ್ತಿ ಬೇಡ ಅಂತ ಹೇಳಲು ನಾಚಿಕೆ ಒಂದು ಕಡೆ, ಇದಕ್ಕಿಂತ ಕಡಿಮೆ ರೇಟುದು ಇದೆಯಾ ಅಂತ ಕೇಳಲು ಇಂಗ್ಲಿಷ್ ಬರೋದಿಲ್ಲ! ನಾನು ಡಬ್ಬದ ಮೇಲೆ ಡಬ್ಬ ಹುಡುಕಿದ್ದು, ಬೆಲೆ ನೋಡಿದ್ದು, ಬೆಲೆ ನೋಡಿ ಅಲ್ಲೇ ಇಟ್ಟದ್ದು… ಅಂಗಡಿಯಾತ ಗಮನಿಸಿದ ಅಂತ ಕಾಣ್ಸುತ್ತೆ. ನಮ್ಮ ತಾತನ ಆರೋಗ್ಯದ ಬಗ್ಗೆ ನಾನು ಆಡಿದ ಮಾತು ಅದು ಸ್ವಗತ ಅಂದರೆ ಮನಸಿನಲ್ಲೇ ಹೇಳಿಕೊಂಡಿದ್ದು, ಅವನಿಗೆ ಕೇಳಿಸಿರಲಾರದು..! ಅಂಗಡಿಯಿಂದ ಆಚೆ ಒಂದು ಹತ್ತು ಹೆಜ್ಜೆ ಇಟ್ಟಿದ್ದೀನಿ. ಆತ ಕೂಗಿದ. ಸಾರ್ ಬನ್ನಿ ಅಂತ ಒಳಗೆ ಕರೆದು ಸಾರ್ ಈ ಚಾಕೋಲೆಟ್ ಡ್ರಿಂಕ್ ನೋಡಿ, ನಮ್ಮದೇ ಬೆಂಗಳೂರಿನದ್ದು… ಅಂತ ಒಂದು ಡಬ್ಬ ಕೊಟ್ಟ. ಅದರ ಹೆಸರು ಗೋಕುಲ ಅಂತ ಇದ್ದ ನೆನಪು. ಬೆಲೆ ನೂರು ರುಪಾಯಿ. ನಂತರ ಸುಮಾರು ಸಲ ಇದೇ ಬ್ರಾಂಡ್ ಉಪಯೋಗಿಸಿದ ನೆನಪು. ಇದು ರಾಮಯ್ಯ ಅವರ ಬ್ರಾಂಡ್ ಮತ್ತು ಅವರೇ ತಯಾರಿಸುತ್ತಾರೆ ಎಂದು ಅಂಗಡಿಯಾತ ವಿವರಿಸಿದ. ದೇವನಹಳ್ಳಿ ಬಳಿಯ ಅವರ ಹೊಲದಲ್ಲಿ ಇದರ ಮೂಲ ಸಸ್ಯಗಳನ್ನು ಅಂದರೆ ಕೋಕಾ ಬೆಳೆಯುತ್ತಾರೆ ಎಂದು ನಂತರ ತಿಳಿಯಿತು….”
ಮುಂದಕ್ಕೆ…..
MS ರಾಮಯ್ಯ ಅವರು ಒಮ್ಮೆಯೂ ವಿದೇಶ ಪ್ರವಾಸ ಮಾಡಿದವರು ಅಲ್ಲ. ಅವರ ಬಳಿ ಪಾಸ್ಪೋರ್ಟ್ ಸಹ ಇರಲಿಲ್ಲ ಅಂತ ಕೇಳಿದ್ದೆ. ತಮ್ಮ ಡ್ರೆಸ್ ಬಗ್ಗೆ ರಾಮಯ್ಯ ಅವರು ತುಂಬಾ ಆಸ್ತೆ ವಹಿಸುತ್ತಿದ್ದರು ಮತ್ತು ಸಾರ್ವಜನಿಕವಾಗಿ ಅವರು ವೆಲ್ ಡ್ರೆಸ್ಡ್ ಗುಂಪಿಗೆ ಸೇರುತ್ತಿದ್ದರು. ಒಬ್ಬನ ಮನೋಭಾವ ಮತ್ತು ಕಾರ್ಯನಿಷ್ಟೆ, ಆತನ ಧಿರಿಸು ಪ್ರತಿನಿಧಿಸಬೇಕು ಎಂದು ನಂಬಿದ್ದರು. ತಾವು ಧರಿಸುವ ಡ್ರೆಸ್ ತಮ್ಮ ಸಂಗಡ ಮಾತುಕತೆ ವ್ಯವಹಾರ ನಡೆಸುವವರ ಬಗ್ಗೆ ಗೌರವ ಸೂಚಿಸಬೇಕು ಎನ್ನುವ ನಂಬಿಕೆ ಬೆಳೆಸಿಕೊಂಡಿದ್ದರು. ಈ ಕಾರಣಕ್ಕೆ ಇರಬೇಕು, ಅವರೆಂದೂ ಮನೆಯಿಂದ ಹೊರಗೆ ಬಂದಾಗ ಸೂಟ್ ಬಟ್ಟೆಯಲ್ಲಿಯೇ ಇರುತ್ತಿದ್ದರು. ಅವರ ಬಳಿ ಮೂವತ್ತಾರು ಸೂಟ್‌ಗಳು ಇದ್ದವು ಎಂದು ಅವರ ಬಗ್ಗೆ ಬರೆದ ಪುಸ್ತಕದಲ್ಲಿ ಉಲ್ಲೇಖ ನೋಡಿದ ನೆನಪು. ತಮ್ಮ ಆರೋಗ್ಯದ ಬಗ್ಗೆ ವೈದ್ಯರು ನೀಡುವ ಸಲಹೆಗಳನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದರು. ವೈದ್ಯರು ಸಿಗರೇಟ್ ಸೇವನೆ ಬಿಡಿ ಎಂದಾಗ ಚೈನ್ ಸ್ಮೋಕರ್ ಆಗಿದ್ದ ರಾಮಯ್ಯ ಅವರು ಕೊನೇ ಹತ್ತುವರ್ಷ ಒಂದೇ ಒಂದು ಸಿಗರೇಟ್ ಮುಟ್ಟಲಿಲ್ಲ. ಈ ಚಟ ಇರುವವರು ಹೀಗೆ ಇರುವುದರ ಸಂಕಟ ಚೆನ್ನಾಗಿ ಅನುಭವಿಸಿರುತ್ತಾರೆ! ಶಿಸ್ತು ಅವರ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿತ್ತು.
ರಾಮಯ್ಯ ಅವರ ಬಗ್ಗೆ ವಿಪುಲವಾದ ದಂತಕತೆಗಳು ಹಬ್ಬಿದ್ದವು. ಕೆಲವು ಸಲ ಅಚ್ಚರಿ ಹುಟ್ಟಿಸುವಂತಹವು. ಈಗಲೂ ಆಗಿನ ದಂತ ಕತೆಗಳನ್ನು ನಮಗೆ ತಿಳಿದವರು ನೆನೆಯುತ್ತಾರೆ.
ರಾಮಯ್ಯ ಅವರ ಬಗ್ಗೆ ಒಂದು ಗ್ರಂಥ ರಚಿಸಲು ವಿವರ ಸಂಗ್ರಹಿಸಿದ ಗೆಳೆಯ ಪಾಲಾಕ್ಷ ಬಾಣದ ಅವರು ನನ್ನ ಆಪ್ತರು. ಸುಮಾರು ಎರಡು ವರ್ಷ ಅವರ ಸಂಶೋಧನಾ ಸಾಹಿತ್ಯವನ್ನು ನಾನು bel ನ ಪ್ರೊಬೇಷನರಿ ಇಂಜಿನಿಯರ್ಸ್ ಹಾಸ್ಟೆಲ್‌ನ ವಾರ್ಡನ್ ಆಗಿದ್ದ ಸಮಯದಲ್ಲಿ ಕಂಪ್ಯೂಟರ್‌ಗೆ ಅಳವಡಿಸಿದ್ದ ನೆನಪು ಇನ್ನೂ ಹಸಿರು. ನಂತರ ಇದನ್ನು ಕಾದಂಬರಿ ರೂಪಕ್ಕೆ ಶ್ರೀ ಬ ಲ ಸುರೇಶ್ ಅವರು ತಂದರು. ನಂತರ ಅದು ಧೀಮಂತ ಸಾಹುಕಾರರು ಎನ್ನುವ ಹೆಸರಿನಲ್ಲಿ ಪ್ರಕಟವಾಯಿತು. ರಾಮಯ್ಯ ಅವರ ಯಶೋಗಾಥೆ ಈ ಪುಸ್ತಕದ ಬಹುಮುಖ್ಯ ತಿರುಳು. ಇದರ ಜತೆಗೆ ಖ್ಯಾತ ಸಾಹಿತಿಗಳು, ಮಂಗಳ ಪತ್ರಿಕೆಯ ಹಿಂದಿನ ಸಂಪಾದಕರು, ಮಲ್ಹಾರ ಪತ್ರಿಕೆಯ ಸಂಪಾದಕರು ಹಾಗೂ ಖ್ಯಾತ ವಾಗ್ಮಿ ಶ್ರೀ ಬಾಬು ಕೃಷ್ಣಮೂರ್ತಿ ಅವರ ಮತ್ತೊಂದು ಗ್ರಂಥ ರಾಮಯ್ಯ ನವರನ್ನು ಕುರಿತು ಪ್ರಕಟಗೊಂಡಿತು. ಇಂಗ್ಲಿಷ್ ಭಾಷೆಯಲ್ಲಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಸಂಪಾದಕರಾಗಿದ್ದ ಶ್ರೀ ರಾಮಕೃಷ್ಣ ಉಪಾಧ್ಯ ಅವರು ಇಂಗ್ಲಿಷ್ ಭಾಷೆಯಲ್ಲಿ ಒಂದು ಗ್ರಂಥ ರಚಿಸಿದರು. ಒಬ್ಬರ ಬಗ್ಗೆ ಮೂರು ಪುಸ್ತಕಗಳು ಒಂದೇ ವರ್ಷದಲ್ಲಿ ಪ್ರಕಟಗೊಂಡಿದ್ದು ಒಂದು ದಾಖಲೆ ಇರಬೇಕು. ಈ ಮೂರೂ ಪುಸ್ತಕಗಳು ಒಂದು ತಿಂಗಳಲ್ಲಿ ಬಿಡುಗಡೆಯ ಭಾಗ್ಯ ಕಂಡವು.
ಶ್ರೀ ರಾಮಯ್ಯ ಅವರ ಬಗೆಗಿನ ಇಲ್ಲಿನ ಕೆಲವು ವಿವರಗಳನ್ನು ಶ್ರೀ ಪಾಲಾಕ್ಷ ಬಾಣದ ಅವರ ಸಂಶೋಧನೆ ಸಂಗ್ರಹದ ಮೂಲಕ ಶ್ರೀ ಬ. ಲ. ಸುರೇಶ ಅವರು ರಚಿಸಿದ “ಧೀಮಂತ ಸಾಹುಕಾರರು (ಡಾ. ಎಂ ಎಸ್ ರಾಮಯ್ಯನವರ ವಿಜಯಗಾ ಥೆ)”
ಅವರ ಕೃತಿಯಿಂದ ಪಡೆದಿದ್ದೇನೆ)
ಇಪ್ಪತ್ತು ವರ್ಷಗಳ ಹಿಂದೆ ರಾಜ್ಯದಾದ್ಯಂತ ರಾಮಯ್ಯ ಆಸ್ಪತ್ರೆ ಬೋರ್ಡುಗಳು ಎಲ್ಲೆಲ್ಲೂ ಇದ್ದವು. ಪ್ರತಿ ಮುಖ್ಯ ರಸ್ತೆ, ರಾಷ್ಟ್ರೀಯ ಹೆದ್ದಾರಿ, ಬಸ್ ಸ್ಟ್ಯಾಂಡ್… ಹೀಗೆ ಎಲ್ಲಾ ಕಡೆ ಎದ್ದು ಕಾಣುತ್ತಿತ್ತು. ಈಚೆಗೆ ಅವು ಅಷ್ಟಾಗಿ ಕಾಣುತ್ತಿಲ್ಲ. ರಸ್ತೆಯಲ್ಲಿ ಬೋರ್ಡು ಹಾಕಲು ಅನುಮತಿ ಇಲ್ಲ ಎಂದು ನಗರ ಸಭೆ ತಗಾದೆ ತೆಗೆದು ಕಾನೂನು ರೀತ್ಯಾ ದಾವೆ ಹೂಡಲು ಯೋಚಿಸಿತ್ತು ಮತ್ತು ಅದಕ್ಕೆ ತೆರಿಗೆ ಪಾವತಿಸಿಕೊಂಡಿತು ಎನ್ನುವ ಸುದ್ದಿ ಹರಿದಾಡಿತ್ತು. ಇದರ ಬಗ್ಗೆ ನಿಖರವಾದ ಮಾಹಿತಿ ಇಲ್ಲ.
BEL ನ ಒಂದು ಮುಖ್ಯ ಪ್ರವೇಶ ಕುವೆಂಪು ವೃತ್ತದ ಕಡೆಯಿಂದ ಇದೆ. ಇದರ ಮೂಲಕವೇ ಕಾರ್ಖಾನೆಯ ವಾಹನಗಳು ಚಲಿಸುವುದು, ಈ ರಸ್ತೆಯಲ್ಲಿ ಇರುವ ನೌಕರರು ಹೋಗಿ ಬರುವುದು.. ಇತ್ಯಾದಿ. ಈ ರಸ್ತೆಯ ಉದ್ದ ಸುಮಾರು ಮೂರು ಕಿಮೀ ಇರಬಹುದು, ಇದೇ ರಸ್ತೆಯಲ್ಲಿಯೇ ರಾಮಯ್ಯ ಯುನಿವರ್ಸಿಟಿಗೆ ಪ್ರವೇಶ ದ್ವಾರ ಇರುವುದು. ರಸ್ತೆಯ ಉದ್ದ ನಿಖರವಾಗಿ ತಿಳಿಯದು. ಈ ರಸ್ತೆಗೆ ಒಬ್ಬರು ಕರ್ನಾಟಕದ ಖ್ಯಾತ ಕಾರ್ಮಿಕ ನಾಯಕರ ಹೆಸರು ಇಡಬೇಕು ಎನ್ನುವ ದೊಡ್ಡ ಬೇಡಿಕೆ ಇತ್ತು. ಬೇಡಿಕೆ ಅದು ಯಾಕೋ ಈಡೇರಲೇ ಇಲ್ಲ. ಅದರ ಬಗ್ಗೆ ಮುಂದೆ ಹೇಳುತ್ತೇನೆ. ಹಾಗೇ ನನಗೂ msr ಕಾಲೇಜಿಗೂ ಸುಮಾರು ನಾಲ್ಕು ದಶಕಗಳ ನಂಟು. ಅದರ ಬಗ್ಗೆ ಮುಂದೆ ತಿಳಿಸುತ್ತೇನೆ…….”
MSR ಕಾಲೇಜಿನ ನಂಟು ವಿವರಿಸುವ ಮೊದಲು ರಾಮಯ್ಯ ಅವರ ಗೋಕುಲದ ಎಚ್ ಎಂಟಿ ಮುಖ್ಯ ರಸ್ತೆಯ ಅಂದಿನ ಒಂದು ನೋಟ ವಿವರಿಸಿ ಬಿಡುತ್ತೇನೆ. ಎಂಬತ್ತರ ದಶಕದಲ್ಲಿ ಗೋಕುಲ ಅಂದರೆ ಗಜಿಬಿಜಿಯ ರಸ್ತೆ. ಕಿರಿದಾದ ರಸ್ತೆ, ಒಂದು ಪಕ್ಕದಲ್ಲಿ ಅಂಗಡಿ ಸಾಲು ಎದುರು ಸಾಲಿನಲ್ಲಿ ಮನೆಗಳು ಮತ್ತು ಅಂಗಡಿಗಳು. hmt ಹಾಗೂ bel ಕಾರ್ಖಾನೆಯ ಬಸ್ಸುಗಳೂ ಮತ್ತು bts ಬಸ್ಸುಗಳೂ (ಈಗಿನ bmtc ಬಸ್ಸುಗಳ ಆಗಿನ ಹೆಸರು) ಸಾಲಾಗಿ ಸೈನಿಕರ ಹಾಗೆ ಕಾರ್ಖಾನೆ ಪಾಳಿ ಶುರುವಾಗುವಾಗ ಮತ್ತು ಮುಕ್ತಾಯದ ಸಮಯದಲ್ಲಿ ಒಂದರ ಹಿಂದೆ ಒಂದು ಹೋಗುತ್ತಿದ್ದವು. ಬೆಂಗಳೂರಿನ ಬೇರೆ ಭಾಗಗಳಿಂದ ಯಾವ್ಯಾವುದೋ ಕೆಲಸಗಳಿಗೆ ಬಂದಿರುತ್ತಿದ್ದ ಜನ ರಸ್ತೆಯ ಎರಡೂ ಪಕ್ಕ ನಿಂತು ಬಸ್ಸುಗಳು ಹೋಗುವ ದೃಶ್ಯವನ್ನು ಕಣ್ಣು ತುಂಬಿಕೊಳ್ಳುತ್ತಿದ್ದರು. ಆಗಿನ ಹೈಸ್ಕೂಲು ಎಸೆಲ್ಸಿ ಪಾಸು ಮಾಡಿದ ತರುಣರು ಈ ಕಾರ್ಖಾನೆಗಳಲ್ಲಿ ಕೆಲಸ ಸಿಕ್ಕರೆ ಅದು ತಮ್ಮ ಪುಣ್ಯ ಎಂದು ಭಾವಿಸುತ್ತಿದ್ದರು! HMT ಯಲ್ಲಿ ತರಬೇತಿಗೆ ಎಂದು ಸೇರಿದ್ದ ಯುವಕ ಅಲ್ಲಿನ ಊಟದ ಬಗ್ಗೆ ಮುಖ ಅರಳಿಸಿ ವಿವರಿಸುತ್ತಾ ಇದ್ದದ್ದು ನನಗೆ ಕಣ್ಣಿಗೆ ಕಟ್ಟಿದ ಹಾಗಿದೆ. ಗೋಕುಲ ದಾಟುತ್ತಿದ್ದ ಹಾಗೆ ಎಡಕ್ಕೆ ತಿರುಗಿದರೆ ಅದು mes ರಸ್ತೆ. mes ಅಂದರೆ ಮಿಲಿಟರಿ ಎಂಜಿನಿಯರಿಂಗ್ ಸರ್ವೀಸ್ ಅಂತ. ಈ ರಸ್ತೆಯಲ್ಲಿ ಮಿಲಿಟರಿಗೆ ಸಂಬಂಧಿಸಿದ ಕೆಲವು ಕಚೇರಿಗಳು ಇದ್ದವು. ಇಲ್ಲೂ ಸಹ ಒಂದು ರೈಲ್ವೇ ಗೇಟ್ ಇತ್ತು. ತೀರಾ ಈಚೆಗೆ ಒಂದು ಅಂಡರ್ ಪಾಸ್ ನಿರ್ಮಾಣವಾಗಿ ರೈಲು ಅದರ ತಳಗೆ ಹೋಗುತ್ತದೆ. ಮಿಲಿಟರಿ ಕಚೇರಿಗಳಿಗೆ ಸೇರಿದ ಹಾಗೆ ಒಂದು ಕಾರ್ಖಾನೆ ಇತ್ತು. ಅದರ ಹೆಸರು ಸಿಗ್ ಫಿಲ್ ಎಂದು. ಸಿಗರೇಟ್ ಫಿಲ್ಟರ್‌ನ ಕಂದು ಬಣ್ಣದ ಬೊಂಬೆ ಅದರ ಮುಖ್ಯ ಫಲಕದ ಮೇಲೆ ಬಿಂಬಿತವಾಗಿತ್ತು. ಇಲ್ಲಿ ಸಿಗರೇಟ್ ಫಿಲ್ಟರ್ ತಯಾರಿಸುತ್ತಿದ್ದರು ಸಿಗರೇಟ್ ಫಿಲ್ಟರ್ ಅಂದರೆ ಫಿಲ್ಟರ್ ಸಿಗರೇಟಿನ ಒಂದು ತುದಿಗೆ ಹತ್ತಿ ಯಂತಹ ವಸ್ತು ತುಂಬಿರುತ್ತಾರೆ ನೋಡಿ ಅದು. ಎಲ್ಲೋ ತಯಾರಾಗುವ ಸಿಗರೇಟಿಗೆ ಇಲ್ಲಿ ಫಿಲ್ಟರ್! ಎತ್ತಣ ಮಾಮರ ಎತ್ತಣ ಕೋಗಿಲೆ ಇದ್ದ ಹಾಗೆ.
ಮೊದ ಮೊದಲು ಸಿಗರೇಟ್ ತಯಾರಿಕೆ ಶುರು ಆದಾಗ ತಂಬಾಕು ಕೊಂಡು ಪೇಪರನ್ನು ಸುರುಳಿ ಸುತ್ತಿ ಅದರೊಳಗೆ ತಂಬಾಕು ತುಂಬುತ್ತಿದ್ದರು. ಶ್ರೀ ನವರತ್ನ ರಾಮರಾಯರ ಕೆಲವು ನೆನಪು ಪುಸ್ತಕದಲ್ಲಿ ಅವರು ಅವರ ಓದಿನ ದಿನಗಳಲ್ಲಿ ಹೀಗೆ ಸಿಗರೇಟು ತಯಾರಿಸುತ್ತಿದ್ದ ಪ್ರಸಂಗ ವಿವರಿಸುತ್ತಾರೆ. ಈ ರಸ್ತೆ ತುಮಕೂರು ರಸ್ತೆಗೆ ಗೊರಗುಂಟೆಪಾಳ್ಯದ ಬಳಿ ಸೇರುತ್ತದೆ. ಈ ರಸ್ತೆಯಲ್ಲಿ ಸುಮಾರು ವರ್ಷ ಹಗಲು ರಾತ್ರಿ ಕಾರ್ಖಾನೆ ಬಸ್ಸಿನಲ್ಲಿ ಓಡಾಡಿದ ನೆನಪು ನನಗಿನ್ನೂ ಹಸಿರು. ರಾಜಾಜಿನಗರದ ಕಡೆ ಹಾದು ಬರುವ ಬಸ್ಸುಗಳು ಈ ದಾರಿಯಲ್ಲಿ ಬರುತ್ತಿದ್ದವು. ಈ ದಾರಿಯ ಪ್ರತಿ ಹಳ್ಳ ದಿಣ್ಣೆ ಕೊರಕಲು ನಮಗೆ ಅಂಗೈ ಮೇಲಿನ ನೆಲ್ಲಿಕಾಯಿ. ರೈಲ್ವೆ ಕ್ರಾಸಿಂಗ್ ನಂತರ ಬಸ್ಸು ಒಂದು ಪುಟ್ಟ ತಿರುವು ತೆಗೆದುಕೊಂಡು ಮುಂದೆ ಹೋಗುತ್ತಿತ್ತು. ಅಲ್ಲಿ ರಸ್ತೆ ಸುಮಾರು ಮುಕ್ಕಾಲು ಅಡಿ ಹಳ್ಳಕ್ಕೆ ಏಕ್ ದಮ್ ಇಳಿಯುತ್ತಿತ್ತು. ಬಸ್ಸಿನ ಒಳಗೆ ಕೂತು ಪ್ರಯಾಣಿಸುತ್ತಿದ್ದ ನಮಗೆ ಬಸ್ಸು ಹೀಗೆ ಹಳ್ಳಕ್ಕೆ ಒಮ್ಮೆಲೇ ಇಳಿದಾಗ ಹೊಟ್ಟೆ ಬಾಯಿಗೆ ಬಂದ ಅನುಭವ ಆಗುತ್ತಿತ್ತು. ಈ ಅಪರೂಪದ ಕ್ಷಣಕ್ಕೆ ಬಸ್ಸಿನ ಕೊನೆ ಕೊನೇ ಸೀಟಿನ ನಾವು ಕಾತರದಿಂದ ಕಾಯುತ್ತಿದ್ದೆವು..!
ಗೊರಗುಂಟೆಪಾಳ್ಯದಿಂದ ಎಡಕ್ಕೆ ತಿರುಗಿದರೆ ಅದು ರಾಜಾಜಿನಗರದ ರಸ್ತೆಗೆ ಸೇರುತ್ತಿತ್ತು. ತಿರುವು ಬಂದಾಗ ಬಲಕ್ಕೆ fbp ಅನ್ನುವ ಕಾರ್ಖಾನೆ ಇತ್ತು. fbp ಅಂದರೆ fire ಬ್ರಿಕ್ಸ್ ಅಂಡ್ ಪೊಟ್ಟರೀಸ್ ಅಂತ. ಇಲ್ಲಿ ಹೆಂಚು ಮತ್ತು ಅದಕ್ಕೆ ಸಂಬಂಧಿಸಿದ ವಸ್ತುಗಳು ತಯಾರಾಗುತ್ತಿತ್ತು. ಈ ಕಾರ್ಖಾನೆಗೆ ಸಂಬಂಧ ಪಟ್ಟ ಒಂದು ಕೇಸು AIR ನಲ್ಲಿ ರಿಪೋರ್ಟ್ ಆಗಿತ್ತು. AIR ಅಂದರೆ ಆಲ್ ಇಂಡಿಯಾ ರಿಪೋರ್ಟ್ಟ್ ಅಂತ. ಮಹತ್ವದ ದಾವೆಗಳ ಸಂಗತಿಗಳು ಈ ಗ್ರಂಥದಲ್ಲಿ ಸೇರುತ್ತಿದ್ದವು. ಅಂತಹ ಒಂದು ದಾವೆ ಈ ಕಾರ್ಖಾನೆಗೆ ಸಂಬಂಧ ಪಟ್ಟಿದ್ದು ನಾನು ಲಾ ಓದಬೇಕಾದರೆ ಅದನ್ನು ಓದಿದ್ದರಿಂದ ತಲೆಯಲ್ಲಿ ಕೂತಿದೆ. ಈಗ ಗೋರಗುಂಟೆಪಾಳ್ಯ ಮೆಟ್ರೋ ರೈಲು ಸ್ಟೇಶನ್ ಇರುವ ಕಡೆ ಮಂಘಾರಾಮ್ ಕನ್ಫೆಕ್ಷನರಿ ಇತ್ತು. ಬಹುಶಃ ಬೆಂಗಳೂರಿಗೆ ವೇಫರ್ಸ್ ಎನ್ನುವ ಬಿಸ್ಕತ್ ಅನ್ನು ಮೊದಲು ಪರಿಚಯಿಸಿದ್ದು ಈ ಕನ್ಫೆಕ್ಷನರಿ ಇರಬೇಕು ಎಂದು ನನ್ನ ಅನಿಸಿಕೆ. ಗರಿ ಗರಿ ಬಿಸ್ಕತ್ ಹಾಳೆಯ ನಡುವೆ ಬೇರೆ ಬೇರೆ ಸ್ವಾದದ ಸಕ್ಕರೆ ಕ್ರೀಮು ಇರುತ್ತಿದ್ದ ಈ ವೇಫರ್ಸ್ ಎಲ್ಲಾ ವಯೋಮಾನದವರಿಗೂ ಈಗಲೂ ಅಚ್ಚು ಮೆಚ್ಚು. ಮಂಘಾರಾಮ್ ಕನ್ಫೆಕ್ಷನರಿ ಎದುರು ಒಂದು ಪೆಟ್ರೋಲ್ ಬಂಕ್ ಇತ್ತು, ಇದು ಎಪ್ಪತ್ತು ಎಂಬತ್ತರ ದಶಕದ ಮಾತು. ಮುಂದೆಯೂ ಸುಮಾರು ವರ್ಷ ಇದೇ ಚಿತ್ರ ಇತ್ತು. ಪೆಟ್ರೋಲ್ ಬಂಕ್‌ನಲ್ಲಿ ಮಂಘಾರಾಮ್ ಕನ್ಫೆಕ್ಷನರಿಯಲ್ಲಿ ತಯಾರಾಗುತ್ತಿದ್ದ ವೇಫರ್ಸ್‌ನ ಪ್ಯಾಕಿಂಗ್‌ನಲ್ಲಿ ಮುರಿದವನ್ನು ಕೇಜಿ ಅರ್ಧ ಕೆಜಿ ಕವರ್‌ಗಳಲ್ಲಿ ತುಂಬಿ ಮಾರುತ್ತಿದ್ದರು. ಅಸಾರ್ಟೆಡ್ ಬ್ರೋಕನ್ ವೇಫರ್ಸ್ ಅಂತ ಇದನ್ನು ಕರೆಯುತ್ತಿದ್ದರು. ಸುಮಾರು ವರ್ಷ ಈ ವೇಫರ್ಸ್ ನಮ್ಮ ಬಂಧು ಬಳಗದವರು ಇಷ್ಟಪಟ್ಟು ಉಪಯೋಗಿಸುತ್ತಾ ಇದ್ದರು! ಆ ರಸ್ತೆಗೆ ಹೋದರೆ ಅಲ್ಲಿ ಭೇಟಿಸಿ ಒಂದೆರೆಡು ಕೇಜಿ ಪೊಟ್ಟಣ ಒಯ್ಯುವುದು ನನ್ನ ಅಭ್ಯಾಸ ಆಗಿತ್ತು. ಮಂಘಾರಾಮ್ ಕನ್ಫೆಕ್ಷನರಿ ಪಕ್ಕದಲ್ಲಿ ಸಿನೆಮಾ ಉಪಕರಣ ತಯಾರಿಸುವ ಒಂದು ಘಟಕ ಇತ್ತು. ಅದು ಆಗ ನನ್ನ ಸಹೋದ್ಯೋಗಿ ಶ್ರೀ ಚಿಕ್ಕಣ್ಣ ಅವರ ಕುಟುಂಬಕ್ಕೆ ಸೇರಿದ್ದು. ಶ್ರೀ ಚಿಕ್ಕಣ್ಣ ಅವರು ಸಂಗೀತ ವಿಮರ್ಶಕರೂ ಸಹ. ಸಂಗೀತ ವಿಮರ್ಶೆಗಳನ್ನು ಪತ್ರಿಕೆಗೆ ಬರೆಯುತ್ತಿದ್ದರು. ಅವರ ಪೆನ್ ನೇಮ್ ಸಾರಗ್ರಾಹಿ ಎಂದು ನೆನಪು. ಇದು ತಪ್ಪಿದ್ದರೂ ಇರಬಹುದು.
ಮತ್ತೆ ಗೋಕುಲದ ರಸ್ತೆಗೆ..
ಜಾಲಹಳ್ಳಿ ಗೋಕುಲದ ಪಕ್ಕದಲ್ಲೇ ಇರುವ ವಿಶ್ವ ಖ್ಯಾತಿಯ ಮತ್ತು ಬೆಂಗಳೂರಿನ ಹೆಮ್ಮೆ ಅನಿಸುವ ಅಷ್ಟು ಪ್ರಚಾರ ಪಡೆಯದ ನಾಚಿಕೆ ತುಂಬಿದ ಹಳ್ಳಿ. ನಮ್ಮ ಐ ಟಿ ಬಿ ಟಿ ಸೆಕ್ಟರ್‌ಗಳು ಈಗೊಂದೆರಡು ದಶಕದಲ್ಲಿ ಅತಿ ಪ್ರಚಾರ ಪಡೆದುಕೊಂಡು ಬೆಂಗಳೂರು ಎಂದರೆ ಇದೇ ಎನ್ನುವ ಹಾಗೆ ಬಿಂಬಿತವಾಯಿತು. ಆದರೆ ಜಾಲಹಳ್ಳಿ ದೇಶದ ಸ್ವಾತಂತ್ರ ಬಂದ ನಂತರ ದೇಶೀಯ ಮತ್ತು ವಿದೇಶದ ಔದ್ಯಮಿಕ ವಲಯವನ್ನು ಹೇಗೆ ಆಕರ್ಷಿಸಿತು ಮತ್ತು ದೇಶದ ಆರ್ಥಿಕ ಹಾಗೂ ರಕ್ಷಣಾ ವಲಯಕ್ಕೆ ಹೇಗೆ ಪೂರಕವಾಯಿತು ಎಂದು ಯಾವ ಇತಿಹಾಸಕಾರರೂ ದಾಖಲಿಸಿದ ಹಾಗೆ ಕಾಣೆ. ಜಾಲಹಳ್ಳಿ ಬಗ್ಗೆ ಒಂದು ಪಕ್ಷಿನೋಟ ಹರಿಸಬೇಕು ಅಂದರೆ ಗೋಕುಲ ದಾಟಿ ಬನ್ನಿ. ಮೊದಲಿಗೆ ನಿಮಗೆ bel ವೃತ್ತ. ಎಡಕ್ಕೆ ತಿರುಗಿದರೆ ಅಲ್ಲೇ bel. ನೇರ ಹೋದರೆ ಮತ್ತೊಂದು ವೃತ್ತ ಎಡಕ್ಕೆ ತಿರುಗಿ ಒಂದು ಒಂದೂವರೆ ಕಿಮೀ ಹೋದರೆ ಅಲ್ಲೇ hmt ಕಾರ್ಖಾನೆ. ಎರಡನೇ ಸರ್ಕಲ್ ನಲ್ಲಿ ಹಾಗೇ ನೇರ ಮುಂದುವರೆದರೆ ಗಂಗಮ್ಮ ವೃತ್ತ, ಜಾಲಹಳ್ಳಿ ಪಶ್ಚಿಮ ಹಾದು ಯಲಹಂಕ ಸೇರಬಹುದು. ಇದು ಸುಮಾರು ಎಂಬತ್ತರ ದಶಕದ ರೂಪ, ಅಷ್ಟು ಹೆಚ್ಚಾಗಿ ವಿರೂಪಗೊಳ್ಳದೆ ಇರುವ ಸ್ಥಳ. ಈಗೊಂದು ದಶಕದ ಬೆಳವಣಿಗೆ ಎಂದರೆ hmt ಮ್ಯೂಸಿಯಂ ಒಂದು ಹೊಸದಾಗಿ ನಮ್ಮ ಜಾಲಹಳ್ಳಿಗೆ ಸೇರ್ಪಡೆ ಆಗಿ ಬೆಂಗಳೂರಿನ ವಿಸಿಟಿಂಗ್ ಪ್ಲೇಸ್‌ಗಳಲ್ಲಿ ಸೇರ್ಪಡೆ ಆಗಿರುವುದು.
ಎಂಬತ್ತರ ದಶಕದಲ್ಲಿ ಯಲಹಂಕ ಇನ್ನೂ ಶೈಶವ ರೂಪದ್ದು. ಆಗ ತಾನೇ ಅಲ್ಲಿ ಕರ್ನಾಟಕ ಹೌಸಿಂಗ್ ಬೋರ್ಡ್ ಮನೆ ನಿರ್ಮಾಣ ಶುರು ಮಾಡಿತ್ತು. ಯಲಹಂಕ, ಬೆಂಗಳೂರಿನ ಸ್ಯಾಟಲೈಟ್ ಟೌನ್ ಎಂದು ಹೆಸರು ಮಾಡಲು ಆರಂಭವಾಗಿತ್ತು.
ಜಾಲಹಳ್ಳಿ ಕುರಿತ ಕೆಲವು ವಿವರಗಳು…
ಬೆಂಗಳೂರು ಉತ್ತರದ ಹಸಿರು ತುಂಬಿದ್ದ ಒಂದು ಪುಟ್ಟ ಹಳ್ಳಿ ಇದು ಐವತ್ತರವರೆಗೂ ಜಾಲಹಳ್ಳಿ ಪೂರ್ವ ಮತ್ತು ಜಾಲಹಳ್ಳಿ ಪಶ್ಚಿಮ ಎಂದು ನಂತರ ಕರೆಸಿಕೊಂಡಿತು. ಇಲ್ಲೊಂದು ಗಂಗಮ್ಮ ದೇವತೆಯ ಪುಟ್ಟ ದೇವಸ್ಥಾನ ಇಲ್ಲಿನ ಒಂದು ವೃತ್ತಕ್ಕೆ ಗಂಗಮ್ಮ ಸರ್ಕಲ್ ಎನ್ನುವ ಹೆಸರು ಬರಲು ಕಾರಣವಾಗಿದೆ. ಇನ್ನೂ ನನ್ನಂತಹವರಿಗೆ ಖುಷಿ ಕೊಡುವ ಸಂಗತಿ ಎಂದರೆ ಗಂಗಮ್ಮ ಅಂದರೆ ಯಾರು ಎಂದು ತಿಳಿಯದ ನಮ್ಮ ಉತ್ತರ ಭಾರತದ ಸೈನಿಕರು ದಿವಸಕ್ಕೆ ಹಲವಾರು ಬಾರಿ ಗಂಗಮ್ಮ ಎಂದು ಉಚ್ಚರಿಸುವ ರೀತಿ. ಗಂಗಮ್ಮ ಸರ್ಕಲ್ ಜಾಲಹಳ್ಳಿ ಪೂರ್ವ ಪಶ್ಚಿಮ ವಿಭಾಗಿಸುವ ಕೇಂದ್ರ.
ತುಂಬಾ ಪ್ರಶಾಂತ ಮತ್ತು ಮಿಲಿಟರಿ ತರಬೇತಿಗೆ ಅತ್ಯಂತ ಪ್ರಶಸ್ತ ಸ್ಥಳ ಇದು. ಇದನ್ನು ಮನಗಂಡ ಆಗಿನ ಸರ್ಕಾರ ಇಲ್ಲಿ ಹಲವು ಉದ್ಯಮ, ಮಿಲಿಟರಿ ತರಬೇತಿ ಶಾಲೆ ಸ್ಥಾಪಿಸಿದರು. ಹೀಗಾಗಿ ಸ್ವಾತಂತ್ರ್ಯ ನಂತರ ಹಲವು ಮಿಲಿಟರಿ ಅದರಲ್ಲೂ ಏರ್ ಫೋರ್ಸ್ ಶಾಖೆಗಳು ಇಲ್ಲಿ ಸ್ಥಾಪಿತವಾದವು. ಈಗಲೂ ಇದು ಒಂದು ಅತ್ಯುತ್ತಮ ತರಬೇತಿ ಕೇಂದ್ರವಾಗಿದೆ. ಅಲ್ಲಿಯೇ ಅಲ್ಲಿನ ಸೈನಿಕರಿಗೆ ಅಗತ್ಯವಾದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಹೊಂದಿವೆ. ಥಿಯೇಟರ್, ಅಂಗಡಿಗಳು, ಕ್ಯಾಂಟಿನ್, ಸ್ಕೂಲು… ಮತ್ತೇನು ಬೇಕು. ಇದೇ ರಸ್ತೆಯಲ್ಲಿ ಬೆಂಗಳೂರಿನ ತುಂಬಾ ಹಳೆಯದಾದ ಫಾತಿಮಾ ಚರ್ಚ್ ಇದೆ. ಅದಕ್ಕೆ ಅಂಟಿದ ಹಾಗೆ ಒಂದು ಕಾನ್ವೆಂಟ್ ಇದೆ. ಹಾಗೇ ಮುಂದೆ ಬಂದರೆ ಬೆಂಗಳೂರಿನ ಮೊದಲನೇ ಅಯ್ಯಪ್ಪ ದೇವಸ್ಥಾನ ಇದೆ. ಈ ಅಯ್ಯಪ್ಪ ದೇವಸ್ಥಾನಗಳ ಬಗ್ಗೆ ಮುಂದೆ ಹೇಳುತ್ತೇನೆ.
ಈ ರಸ್ತೆ ಮೊದಲಿಂದಲೂ ನನಗೆ ಒಂದು ಆಕರ್ಷಣೆ. ಇದಕ್ಕೆ ಕಾರಣ ಅಂದರೆ ಅಲ್ಲಿನ IAF ಕಚೇರಿಗಳ ಮುಂದೆ ಇರಿಸಿರುವ ಮಾಡೆಲ್ ವಿಮಾನಗಳು. ಈ ವಿಮಾನಗಳನ್ನು ತೋರಿಸಲು ಎಂದೇ ಮಕ್ಕಳನ್ನು ಈ ರಸ್ತೆಗೆ ಕರೆದೊಯ್ಯುತ್ತಿದ್ದ ನೆನಪು ಇದೆ. ಹಾಗೇ ಮನೆಗೆ ಬಂದ ಬೆಂಗಳೂರಿನ ಬಂಧುಗಳನ್ನು ಅಪರೂಪದ ಈ ವಿಮಾನ ತೋರಿಸಲು ಕರೆದೊಯ್ಯುತ್ತಿದ್ದ ನೆನಪೂ ಸಹ. ಹತ್ತಿರದಿಂದ ವಿಮಾನ ನೋಡುವುದು ನಮಗೆ ಆಗ ಸಂತೋಷ ಕೊಡುತ್ತಿತ್ತು, ಕಾರಣ ವಿಮಾನ ಹತ್ತಿರಲಿಲ್ಲ ಮತ್ತು ವಿಮಾನವನ್ನು ಆಕಾಶದಲ್ಲಿ ಹಾರಬೇಕಾದರೆ ಮಾತ್ರ ನೋಡಿದ್ದು. ಈಗಲೂ ಆಕಾಶದಲ್ಲಿ ವಿಮಾನ ಹೋಗುತ್ತಿರುವ ಶಬ್ದ ಕೇಳಿದರೆ ಮನೆಯಿಂದ ಆಚೆ ಓಡಿಬಂದು ಅದನ್ನು ನೋಡುತ್ತೇವೆ. ಆಗ ನನಗೆ ಸತ್ಯಜಿತ್ ರೇ ಅವರ ಸಿನೆಮಾಗಳು ಮೆದುಳಿನಲ್ಲಿ ಓಡುತ್ತವೆ. ರಾತ್ರಿ ಹೊತ್ತು ವಿಮಾನದ ಶಬ್ದ ಬಂದರೆ ಓಡಿ ಆಚೆ ಬಂದು ಅದರ ಲೈಟು ಮಿನುಗುವ ಮತ್ತು ಮುಂದೆ ಸಾಗುವುದನ್ನು ಕಣ್ತುಂಬಾ ತುಂಬಿಕೊಳ್ಳುತ್ತೇವೆ. ವಿಮಾನ ಹತ್ತಿ ಅದರಲ್ಲಿ ಪ್ರಯಾಣಿಸುವ ಮೊದಲು ಇದ್ದ ಈ ಖುಷಿ ಈಗಲೂ ಹಾಗೇ ಉಳಿದಿದೆ! ಹಾಗೆ ನೋಡಿದರೆ ನಾನು ಮೊಟ್ಟ ಮೊದಲು ವಿಮಾನ ಹತ್ತಿ ಪ್ರಯಾಣ ಮಾಡಿದ್ದು ನನಗೆ ಐವತ್ತೆರಡು ಆದಾಗ!
ಜಾಲಹಳ್ಳಿ ಯಲ್ಲಿ ಪ್ರಸಿದ್ಧ The National Academy of Customs and Narcotics ಕಚೇರಿ ಇದೆ ಮತ್ತು ಇನ್ನೂ ಹಲವು ಕೇಂದ್ರ ಸ್ವಾಮ್ಯದ ಸಂಸ್ಥೆಗಳು ಇಲ್ಲಿ ನೆಲೆ ಕಂಡಿವೆ. ಬಹುಶಃ ದೇಶದ ಯಾವುದೇ ರಾಜ್ಯದಲ್ಲೂ ಇಷ್ಟು ಸಾಂದ್ರವಾದ ಕೇಂದ್ರ ಕಚೇರಿ ಇಲ್ಲಿ ಮಾತ್ರ ಕಾಣಿಸುತ್ತದೆ.
ಈ ಜಾಲಹಳ್ಳಿ ಮೂರು ಪಿನ್ ಕೋಡ್ ಹೊಂದಿದೆ 560013, 560014,560015. ಕೇಂದ್ರ ಸ್ವಾಮ್ಯದ ಬೃಹತ್ ಉದ್ದಿಮೆಗಳು ಇಲ್ಲಿ ಸ್ಥಾಪಿತವಾದ ನಂತರ ಅದಕ್ಕೆ ಪೂರಕವಾದ ಅನೇಕ ಉದ್ದಿಮೆಗಳು ಇಲ್ಲಿ ಬೆಳೆದಿವೆ. ಬೆಂಗಳೂರು ನಗರದ ಆಹ್ಲಾದಕರ ತಂಪು ವಾತಾವರಣ, ಇಲ್ಲಿನ ಜನರ ಸೌಹಾರ್ದತೆ ಹಾಗೂ ಎಲ್ಲರನ್ನೂ ತಮ್ಮಂತೆ ಕಾಣುವ ಆದರಿಸುವ ಅಪರೂಪದ ಗುಣ ದಶ ದಿಕ್ಕುಗಳಿಂದಲೂ ಜನರನ್ನು ಆಕರ್ಷಿಸುತ್ತಿದೆ ಮತ್ತು ಇದು ಇನ್ನೂ ಮುಂದುವರೆದಿದೆ. ಇದು ನಮ್ಮೂರಿನ ಒಂದು ದೊಡ್ಡ ಪ್ಲಸ್ ಪಾಯಿಂಟ್ ಮತ್ತು ಇದೇ ಬಹುದೊಡ್ಡ ಮೈನಸ್ ಪಾಯಿಂಟ್ ಸಹ. ಈ ನಮ್ಮ ಮನೋಭಾವ ನಮ್ಮ ಮುಂದಿನ ಪೀಳಿಗೆಯನ್ನು ಹೇಗೆ ದೇಶದಿಂದ ಹೊರಹೋಗುವ ಹಾಗೆ ಮಾಡಿತು ಎನ್ನುವು ದನ್ನು ನಮ್ಮ ಸಮಾಜ ಶಾಸ್ತ್ರಿಗಳು ಮುಂದಿನ ದಿನಗಳಲ್ಲಿ ಸ್ಟಡಿ ಮಾಡಬೇಕಾಗುವ ಪರಿಸ್ಥಿತಿ ಉದ್ಭವ ಆಗುತ್ತದೆ.
(ಮುಂದುವರೆಯುವುದು…)
ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.
ಉತ್ತಮ ನಿರೂಪಣೆ ಚಿದಾಕಾಶದಲ್ಲಿ ಸಿನೆಮಾ ತರ ಬಿಂಭವಾಗಿದ್ದು ನಮ್ಮನ್ನು ಅರ್ಧ ಶತಮಾನದ ಹಿಂದಕ್ಕೆ ಕರೆದುಕೊಂಡಹೋಗಿದೆ. ವಂದೆನೆಗಳು. ಪ್ರಸನ್ನ ಕುಮಾರ್.
ಧನ್ಯವಾದಗಳು, ಪ್ರಸನ್ನ. ಒಂದೊಂದು ಎಪಿಸೋಡ್ ಬರೆಯ ಬೇಕಾದರೂ ಅಂದಿನ ದಿವಸಗಳ ನೆನಪು,ಗೆಳೆಯರೊಂದಿಗಿನ ವಿಶೇಷವಾಗಿ ನಿಮ್ಮ ಜತೆಗಿನ ಒಡನಾಟ ನೆನಪಾಗುತ್ತೆ…