ಸುಧಾಕರನ ಅಣ್ಣನ ದಿನಚರಿಯೇ ವಿಶೇಷ ಎನಿಸುತ್ತಿತ್ತು. ಅವರು ಮಿತ ಭಾಷಿ, ಏಕಾಂಗಿಯಾಗಿರ್ತಾ ಇದ್ರು. ರಾತ್ರಿ 10 ಕ್ಕೆ ಓದಲು ಕುಳಿತರೆ ಬೆಳಗಿನ ಜಾವ 5 ಗಂಟೆಯವರೆಗೂ ಓದೋದು. ಮತ್ತೆ 5 ಕ್ಕೆ ಮಲಗಿ 10 ಗಂಟೆಗೆ ಎದ್ದು ಕಾಲೇಜಿಗೆ ಹೋಗೋರು. ಇದೇ ರೀತಿಯಾಗಿ ನಮ್ಮ ಹಾಸ್ಟೆಲ್ಲಿನ ಎಂಜಿನಿಯರಿಂಗ್ ಹುಡುಗರು ಓದ್ತಾ ಇದ್ರು. ಈ ರೀತಿ ರಾತ್ರಿಯಿಡೀ ಓದೋಕೆ ‘ನೈಟ್ ಔಟ್ ಮಾಡೋದು’ ಎಂಬ ಪದ ಬಳಸ್ತಾ ಇದ್ರು. ಹಾಸ್ಟೆಲ್ಲಿನ ಮಧ್ಯಭಾಗದಲ್ಲಿದ್ದ ಫೀಲ್ಡಿನಲ್ಲಿ ಸ್ಟಡಿ ಚೇರ್ ಹಾಕ್ಕೊಂಡು ಕುಳಿತು ಓದೋಕೆ ಶುರು ಮಾಡ್ತಿದ್ರು. ನಾವೂ ಇವರಿಂದ ಪ್ರಭಾವಕ್ಕೆ ಒಳಗಾಗಿದ್ವಿ. ಆದರೆ ಆ ಪ್ರಭಾವ ಬಹಳ ದಿನ ಇರಲಿಲ್ಲ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಇಪ್ಪತ್ತೆಂಟನೆಯ ಕಂತು ನಿಮ್ಮ ಓದಿಗೆ

ಹಾಸ್ಟೆಲ್ಲಿನಲ್ಲಿ ಇದ್ದಾಗ ಕೆಲವರು ರೂಮಿನಲ್ಲಿ ಒಂದು ಸೀಮೆಎಣ್ಣೆ ಸ್ಟೌವ್, ವಾಟರ್ ಹೀಟರ್ ಇಟ್ಕೊಂಡಿದ್ರು. ಹಾಸ್ಟೆಲ್ಲಿನಲ್ಲಿ ಊಟ ಕೊಡುವುದು ಮೂರ್ನಾಲ್ಕು ತಿಂಗಳು ತಡವಾಗೋದು. ಈ ಸಮಯದಲ್ಲಿ ಅಡುಗೆ ಮಾಡಿಕೊಳ್ಳಲೆಂದು ಇಟ್ಕೊಂಡಿದ್ದ ಸ್ಟೌವನ್ನು ಊಟ ಕೊಡೋಕೆ ಶುರು ಮಾಡಿದ ಮೇಲೂ ಇಟ್ಕೊಂಡಿದ್ರು. ಕೆಲವೊಮ್ಮೆ ತಿಂಡಿ, ಟೀ ಮಾಡಿಕೊಳ್ಳಲು ಇದನ್ನು ಬಳಸಿಕೊಳ್ತಾ ಇದ್ರು. ನನ್ನ ಗೆಳೆಯ ಸುಧಾಕರನ ಅಣ್ಣ ಇದೇ ಹಾಸ್ಟೆಲ್ಲಿನಲ್ಲಿದ್ರು. ಅವರು ಎಂ.ಬಿ.ಬಿ.ಎಸ್ ಓದ್ತಾ ಇದ್ರು. ಇದಕ್ಕಾಗಿ ಸುಧಾಕರಂಗೆ ಎಲ್ರೂ ಬಹಳ ಬೆಲೆ ಕೊಡ್ತಾ ಇದ್ರು. ಅವರಣ್ಣನಿಗೆ ಸಿಂಗಲ್ ರೂಮು ಕೊಟ್ಟಿದ್ದರು. ಒಮ್ಮೆ ಅವರ ಅಣ್ಣ ಇಲ್ಲದೇ ಇದ್ದಾಗ ಆ ರೂಮಿಗೆ ಸುಧಾಕರನ ಜೊತೆ ಹೋಗ್ತಾ ಇದ್ದೆ. ಅವರ ರೂಮನ್ನು ನೋಡೋಕೆ ಖುಷಿ ಅನಿಸೋದು. ಒಪ್ಪ ಓರಣವಾಗಿ ಜೋಡಿಸಿಟ್ಟ ಪುಸ್ತಕಗಳು, ಬಟ್ಟೆಗಳು… ಸ್ವಚ್ಛವಾಗಿದ್ದ ಅವರ ರೂಮನ್ನು ನೋಡೋಕೆ ಖುಷಿ ಅನಿಸೋದು. ಅದರಲ್ಲೂ ಎಂ.ಬಿ.ಬಿ.ಎಸ್‌ನ ದಪ್ಪ ದಪ್ಪನೆಯ ಪುಸ್ತಕಗಳನ್ನು ನೋಡಿದರೆ ನನಗೆ ಭಯವಾಗೋದು. ‘ಅದ್ಹೇಗೆ ಇಷ್ಟೆಲ್ಲಾ ನೆನಪು ಇಟ್ಕೊಳ್ತಾರೆ ಅಂತಾ??’ ಮನಸ್ಸಲ್ಲಿ ನನ್ನಷ್ಟಕ್ಕೆ ನಾನೇ ಪ್ರಶ್ನಿಸಿಕೊಳ್ತಾ ಇದ್ದೆ. ಅವರ ರೂಮಿನಲ್ಲೂ ಒಂದು ಕರೆಂಟ್ ಸ್ಟೌ ಇತ್ತು.

ಸುಧಾಕರನ ಅಣ್ಣನ ದಿನಚರಿಯೇ ವಿಶೇಷ ಎನಿಸುತ್ತಿತ್ತು. ಅವರು ಮಿತ ಭಾಷಿ, ಏಕಾಂಗಿಯಾಗಿರ್ತಾ ಇದ್ರು. ರಾತ್ರಿ 10 ಕ್ಕೆ ಓದಲು ಕುಳಿತರೆ ಬೆಳಗಿನ ಜಾವ 5 ಗಂಟೆಯವರೆಗೂ ಓದೋದು. ಮತ್ತೆ 5 ಕ್ಕೆ ಮಲಗಿ 10 ಗಂಟೆಗೆ ಎದ್ದು ಕಾಲೇಜಿಗೆ ಹೋಗೋರು. ಇದೇ ರೀತಿಯಾಗಿ ನಮ್ಮ ಹಾಸ್ಟೆಲ್ಲಿನ ಎಂಜಿನಿಯರಿಂಗ್ ಹುಡುಗರು ಓದ್ತಾ ಇದ್ರು. ಈ ರೀತಿ ರಾತ್ರಿಯಿಡೀ ಓದೋಕೆ ‘ನೈಟ್ ಔಟ್ ಮಾಡೋದು’ ಎಂಬ ಪದ ಬಳಸ್ತಾ ಇದ್ರು. ಹಾಸ್ಟೆಲ್ಲಿನ ಮಧ್ಯಭಾಗದಲ್ಲಿದ್ದ ಫೀಲ್ಡಿನಲ್ಲಿ ಸ್ಟಡಿ ಚೇರ್ ಹಾಕ್ಕೊಂಡು ಕುಳಿತು ಓದೋಕೆ ಶುರು ಮಾಡ್ತಿದ್ರು. ನಾವೂ ಇವರಿಂದ ಪ್ರಭಾವಕ್ಕೆ ಒಳಗಾಗಿದ್ವಿ. ಆದರೆ ಆ ಪ್ರಭಾವ ಬಹಳ ದಿನ ಇರಲಿಲ್ಲ. ನಾವು ಓದೋಕೆ ಅಂತಾ ಕೂತಾಗ ನಮ್ಮ ಪಿಯೂಸಿ ಗೆಳೆಯರು ‘ನಿದ್ದೆ ಬರ್ತಾ ಇದೆ.. ಟೀ ಕುಡಿದು ಬಂದು ಮತ್ತೆ ಓದೋಣ’ ಎಂದು ವಿದ್ಯಾರ್ಥಿ ಭವನಕ್ಕೆ ಕರೆದುಕೊಂಡು ಹೋಗ್ತಾ ಇದ್ರು. ಅಲ್ಲಿ ತಿಂಡಿ ತಿಂದು, ಟೀ ಕುಡಿದು ಹರಟೆ ಹೊಡೆದುಕೊಂಡು ವಾಪಸ್ಸು ರೂಮಿಗೆ ಬರೋವಷ್ಟರಲ್ಲಿ ರಾತ್ರಿ 11:30 ಆಗಿರೋದು! ಹಾಗೆ ಹೀಗೆ ಟೈಮ್ ಪಾಸ್ ಮಾಡಿ ರಾತ್ರಿ 1 ರವರೆಗೂ ಓದಿದಂತೆ ಮಾಡಿ ಮತ್ತೆ ಮಲಗಿ ಬಿಡುತ್ತಿದ್ದೆವು. ಆದರೆ ಬೆಳಗ್ಗೆ ಏಳುತ್ತಿದ್ದುದು ಮತ್ತೆ 7 ಕ್ಕೆ. ತಕ್ಷಣ ಕಾಲೇಜಿಗೆ ಹೋಗಿ ಮಧ್ಯಾಹ್ನ ಕಾಲೇಜಿಂದ ಬಂದು ರಾತ್ರಿ ಓದಬೇಕು ಅಂತಾ ಮಧ್ಯಾಹ್ನ ಮಲಗಿಕೊಳ್ತಾ ಇದ್ದೆವು. ಆದರೆ ಮತ್ತೆ ಅದೇ ರಾಗ ಅದೇ ಹಾಡು!! ದುಡ್ಡಿದ್ರೆ ತಿಂಡಿ ತಿನ್ನೋಕೆ ಹೊರಗೆ ಹೋಗೋದು, ಇಲ್ಲಾಂದ್ರೆ ರೂಮಿನಲ್ಲೇ ತಿಂಡಿ ಮಾಡ್ತಾ ಕೂರೋದು! ‘ಮೂಗಿಗಿಂತ ಮೂಗುತಿ ಭಾರ’ ಎಂಬಂತೆ ಓದೋದ್ಕಿಂತ ಬರೀ ಇದೇ ಮಾಡ್ತಿದ್ವಿ. ತಡವಾಗಿ ಏಳ್ತಾ ಇದ್ದದ್ದರಿಂದ ನಾನು ಬೆಳಗಿನ ಅವಧಿಯ ಟ್ಯೂಷನ್ನಿಗೆ ಚಕ್ಕರ್ ಹಾಕೋಕೆ ಶುರು ಮಾಡಿದೆ. ಕೆಮಿಸ್ಟ್ರಿ ಟ್ಯೂಷನ್ನಿಗೆ ನಮ್ಮ ಕಾಲೇಜಿನ ಲೆಕ್ಚರ್ ಒಬ್ರು ನನಗೆ ಫ್ರೀ ಮಾಡ್ತೀನಿ ಅಂದ್ರೂ ಅವರ ಪಾಠ ಇಷ್ಟವಾಗದೇ ಒಂದೆರಡು ದಿನ ಹೋಗಿ ನಂತರ ಅಲ್ಲಿಯೂ ಬಿಟ್ಟು ಅವರ ಕೆಂಗಣ್ಣಿಗೆ ಗುರಿಯಾದೆ. ದೂರದಿಂದ ಅವರು ನಮಗೆ ಸಂಬಂಧಿಕರೂ ಆಗಿದ್ದರಿಂದ ಟ್ಯೂಷನ್ನಿಗೆ ಗೈರಾಗುತ್ತಿದ್ದುದರ ಬಗ್ಗೆ ಕೇಳಿದಾಗ ನಾನು ‘ಅವರ ಪಾಠ ನನಗೆ ಕೊರೆದಂತೆ ಅನಿಸುತ್ತಿದೆ, ಒಂಚೂರು ಇಷ್ಟವಾಗೋಲ್ಲ’ ಎಂದು ಹೇಳಿ ಈ ವಿಷಯ ಅವರ ಕಿವಿಗೆ ಬಿದ್ದು, ಅವರು ನನಗೆ ಕಾಲೇಜಲ್ಲಿ ಟಾರ್ಗೆಟ್ ಮಾಡೋಕೆ ಶುರು ಮಾಡಿದ್ರು.

ನೇರವಾಗಿ ನನಗಲ್ಲದಿದ್ದರೂ ನನ್ನ ಪಕ್ಕ ಕುಳಿತವರಿಗೆ ಪ್ರಶ್ನೆ ಕೇಳಿ ಉತ್ತರ ಹೇಳದಿದ್ದಾಗ ಅವರು ಹೊಡೆಯುವ ರೀತಿ ಕಂಡು ನನಗೆ ಭಯವಾಗುತ್ತಿತ್ತು. ಒಮ್ಮೆ ಲ್ಯಾಬಿನಲ್ಲಿ ನನ್ನ ಪಕ್ಕ ನಿಂತಿದ್ದ ಲಿಂಗರಾಜನಿಗೆ ಚೆನ್ನಾಗಿ ಬಾರಿಸಿದ್ದರು. ಅಂದಿನಿಂದ ನನಗೆ ಕೆಮಿಸ್ಟ್ರಿ ಲ್ಯಾಬ್ ಎಂದರೆ ಒಂಥರಾ ಅವ್ಯಕ್ತ ಭಯ ಬರೋಕೆ ಶುರು ಆಯ್ತು. ಇದರ ಪ್ರಭಾವ ನನ್ನ ಅಂತಿಮ ಪರೀಕ್ಷೆಯ ಲ್ಯಾಬ್ ಎಕ್ಸಾಮ್‌ನಲ್ಲೂ ಆಯ್ತು!! ಪ್ರಾಕ್ಟಿಕಲ್ ಮಾರ್ಕ್ಸ್‌ನಲ್ಲಿ 10 ಕ್ಕೆ ಬರೀ 6 ಅಂಕ ಬಂದಿದ್ವು!! ಕೆಮಿಸ್ಟ್ರಿ ಪಾಠ ಇತ್ಲಾಗೆ ಕಾಲೇಜಲ್ಲೂ ಸರಿಯಾಗದೇ ಅತ್ಲಾಗೆ ಟ್ಯೂಷನ್ನೂ ಇಲ್ಲದೇ ನನಗೆ ಸಮಸ್ಯೆಯಾಯಿತು.

ಇನ್ನು ಗಣಿತ ವಿಷಯಕ್ಕೆ ಬಂದರೆ ನಮ್ಮ ಕಾಲೇಜಲ್ಲೂ ಪಾಠ ಚೆನ್ನಾಗಿ ಮಾಡುತ್ತಿದ್ದರಾದರೂ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇದ್ದುದ್ದರಿಂದ, ಕೆಲವರು ಕೀಟಲೆ ಮಾಡುತ್ತಿದ್ದುದರಿಂದ ಪಾಠ ಸರಿಯಾಗಿ ಅರ್ಥವಾಗುತ್ತಿರಲಿಲ್ಲ. ಇನ್ನು ನಾನು ಟ್ಯೂಷನ್ನಿಗೆ ಸೇರಿದ ಲೆಕ್ಚರ್ ಪಾಠವಂತೂ ವಿಶೇಷವಾಗಿತ್ತು. ಅವರು ಒಂದು ಚಿಕ್ಕ ರೂಮಿನಲ್ಲಿ ಟ್ಯೂಷನ್ ಮಾಡುತ್ತಿದ್ದರು. ಅಲ್ಲಿಯೇ 35 ರಿಂದ 40 ವಿದ್ಯಾರ್ಥಿಗಳು ಕುಳಿತುಕೊಳ್ತಾ ಇದ್ದೆವು. ನಾವು ಹೋಗುವಷ್ಟರಲ್ಲಿ ಆ ಬೋರ್ಡಿನ ಮೇಲೆ ಲೆಕ್ಕಗಳನ್ನು ಬರೆದಿಟ್ಟಿರುತ್ತಿದ್ದರು. ನಾವು ಹೋಗಿ ಅವನ್ನು ಬರೆದುಕೊಳ್ಳಬೇಕಾಗಿತ್ತು. ನಂತರ ಅವರು ಎಲ್ಲವನ್ನು ವಿವರಣೆ ಕೊಡುತ್ತಾ ಹೋಗುತ್ತಿದ್ದರು. ನಾವು ಕೇಳಬೇಕಾಗಿತ್ತು. ಕೊಟ್ಟಿರುವ ಲೆಕ್ಕವನ್ನು ಹೇಗೆ ಮಾಡಬಹುದು ಎಂದಷ್ಟೇ ಹೇಳುತ್ತಿದ್ದರು. ಈ ವಿಧಾನ ನನಗೆ ಸರಿಯೆನಿಸುತ್ತಿರಲಿಲ್ಲ!! ಅವರಿಗೆ ಲೆಕ್ಕಗಳ ಸಂಖ್ಯೆ ಮುಖ್ಯವಾಗಿತ್ತೇ ವಿನಃ ಮಾಡಿಸಿದ ಅದನ್ನು ಬಿಡಿಸುವ ವಿಧಾನ ಹೇಳಿಕೊಡುವುದು ಮುಖ್ಯ ಎಂದೆನಿಸಿರಲಿಲ್ಲವೇನೋ?? ಹಲವರಿಗೆ ಇವರ ಪಾಠ ಹಿಡಿಸಿರಬಹುದು. ಆದರೆ ನಂಗಂತೂ ಈ ವಿಧಾನ ಇಷ್ಟವಾಗಲಿಲ್ಲ!! ಅಪ್ಪಿ ತಪ್ಪಿ ಯಾರಾದ್ರೂ ಅವರಿಗೆ ಡೌಟ್ ಕೇಳಿದ್ರೆ ಬಯ್ತಾ ಇದ್ರು! ಇದು ನಮಗೆ ಗೊತ್ತಿದ್ರಿಂದ ನಾವ್ಯಾರೂ ಡೌಟ್ ಕೇಳೋಕೆ ಹೋಗ್ತಾ ಇರಲಿಲ್ಲ.

ಒಮ್ಮೆ ಹೀಗೇ ಆಯ್ತು; ಟ್ಯೂಷನ್ನಿನಲ್ಲಿ ನನ್ನ ಪಕ್ಕ ‘ಶಿವರಾಜ್’ ಎಂಬ ಹೆಸರಿನವ ಕುಳಿತಿದ್ದ. ಅವನು ಟ್ಯೂಷನ್ನಿಗೆ ಸೇರಿ ಒಂದು ವಾರವೂ ಆಗಿರಲಿಲ್ಲ. ನನ್ನ ಜೊತೆ ಕ್ಲೋಸ್ ಆದ. ಅವನು ಬೇರೆ ಕಾಲೇಜಲ್ಲಿ ಓದುತ್ತಿದ್ದ. ಅವನಿಗೆ ಗಣಿತ ಕ್ಲಾಸ್ ಮಾಡುವಾಗ ಒಂದು ಅನುಮಾನ ಶುರುವಾಗಿದೆ. ನನ್ನ ಹತ್ರ ‘ಸರ್ ಗೆ ಕೇಳಬಹುದಾ ಅಂದ!’; ‘ನಿನ್ನಿಷ್ಟ ಕೇಳಿ ನೋಡು’ ಎಂದೆ. ಅವರು ಅದಾಗಲೇ ಮುಂದಿನ ಲೆಕ್ಕಕ್ಕೆ ವಿವರಣೆ ಕೊಡ್ತಾ ಇದ್ರು. ಇವನು ಹಿಂದಿನ ಲೆಕ್ಕದ ಬಗ್ಗೆ ಕೇಳಿ ಅವರಿಂದ ಉಗಿಸಿಕೊಂಡ. ಎಲ್ಲರಿಗೂ ನಗುವೇ ನಗು. ಆದರೆ ಜೋರಾಗಿ ನಕ್ಕರೆ ಎಲ್ಲಿ ಮತ್ತೆ ಉಗಿಯುತ್ತಾರೋ ಎಂದುಕೊಂಡು ಟ್ಯೂಷನ್ ಬಿಟ್ಟ ಮೇಲೆ ಶಿವರಾಜನನ್ನು ನೋಡಿ ನಕ್ಕಿದ್ದೇ ನಕ್ಕಿದ್ದು. ಅವನು ನನ್ನ ಹತ್ರ ಬಂದು ‘ಅಲ್ಲ ಮಗಾ ಹೀಗಾ ಮಾಡೋದು?’ ಎಂದು ಹೇಳಿದ. ಅವರ ಬಯ್ಗುಳವನ್ನು ಅವನು ಅಷ್ಟಾಗಿ ಸೀರಿಯಸ್ಸಾಗಿ ತೆಗೆದುಕೊಳ್ಳದೇ ಇದ್ದುದ್ದರಿಂದ ಅವನು ನನಗೆ ತುಂಬಾ ಕ್ಲೋಸ್ ಆದ. ಎಷ್ಟರಮಟ್ಟಿಗೆ ಅಂದ್ರೆ ಪರೀಕ್ಷೆಯ ಕಡೇ ದಿನಗಳಲ್ಲಿ ಅವನ ಮನೆಯಲ್ಲಿಯೇ ಉಳಿದುಕೊಂಡು ಓದುವಷ್ಟರ ಮಟ್ಟಿಗೆ! ಈಗ ಎಲ್ಲಿದ್ದಾನೋ ಏನು ಮಾಡುತ್ತಿದ್ದಾನೋ ಗೊತ್ತಿಲ್ಲ? ಆದರೆ ನನ್ನ ನೆನಪಿನ ಬುತ್ತಿಯಲ್ಲಿ ಅವನೊಂದಿಗೆ ಅವರ ಮನೆಯ ಮೇಲಿನ‌‌ ಟೆರೇಸಿನಲ್ಲಿ ರಾತ್ರಿಯಿಡೀ ಕುಳಿತು ಓದಿದ ನೆನಪು ಹಚ್ಚಹಸಿರಾಗಿದೆ. ಅವರು ನಮಗೆ ಓದಲಿಕ್ಕಿಂದೇ ಅಲ್ಲಿ ಟೆಂಟ್ ವ್ಯವಸ್ಥೆ ಮಾಡಿದ್ದರು. ಜೊತೆಗೆ ನಿದ್ದೆ ಬಾರದಿರಲೆಂದು ಫ್ಲಾಸ್ಕಿನ ತುಂಬಾ ಟೀ!! ಸೊಳ್ಳೆಯ ಕಾಟಕ್ಕಾಗಿ ಗುಡ್ ನೈಟ್ ಕಾಯಿಲನ್ನೂ ಸಹ ಕೊಡುತ್ತಿದ್ದರು. ಇವರ ಋಣದ ಭಾರ ಇಂದಿಗೂ ನನ್ನ ಮೇಲಿದೆ. ನನ್ನ ನೆನಪಿನ ಭಾವಕೋಶದಲ್ಲಿ ಇವರ ಸಹಾಯವು ಅಚ್ಚೊತ್ತಿದೆ.

ಇನ್ನೊಮ್ಮೆ ಇದೇ ಗಣಿತ ಟ್ಯೂಷನ್ ಸೆಂಟರ್‌ನಲ್ಲಿ ಒಂದು ಅಪಾನವಾಯುವಿನ ( ಹೂಸಿನ) ಪ್ರಸಂಗವಾಯ್ತು. ಒಮ್ಮೆ ನಮ್ಮ ಗಣಿತ ಲೆಕ್ಚರ್ ಇಂಟಿಗ್ರೇಷನ್ ಲೆಕ್ಕಮಾಡಿಸುತ್ತಿದ್ದರು. ಆಗ ಯಾರೋ ಹೂಸು ಬಿಟ್ಟಿದ್ದಾರೆ. ಅದು ಎಷ್ಟು ಕೆಟ್ಟ ವಾಸನೆ ಇತ್ತೆಂದರೆ ಅದು ತಕ್ಷಣ ಟ್ಯೂಷನ್ ರೂಮಿನ ಚಿಕ್ಕ ಕೊಠಡಿಯನ್ನೆಲ್ಲಾ ಆವರಿಸಿಬಿಟ್ಟಿತು. ನಮಗೂ ಇದರ ಅನುಭವವಾಯ್ತಾದರೂ ಮೂಗು ಮುಚ್ಚಿಕೊಂಡು ಸುಮ್ಮನೇ ಬಿಟ್ಟವರನ್ನು ಮನದಲ್ಲೇ ಬಯ್ದುಕೊಳ್ಳುತ್ತ ಕುಳಿತಿದ್ದೆವು. ಇದು ನಮ್ಮ ಟ್ಯೂಷನ್ ಮೇಷ್ಟ್ರ ನಾಸಿಕ ಕುಹರವನ್ನೂ ತಲುಪಿದೆ. ಇದು ಅವರ ಮುಖಭಾವದಿಂದ ತಿಳಿಯಿತು. ಅಂದು ಯಾಕೋ ಅವರು ಕೋಪದಲ್ಲಿದ್ದರು. ಲೆಕ್ಕವೂ ಸ್ವಲ್ಪ ಆ ಕ್ಷಣಕ್ಕೆ ಚೂರು ಕೈಕೊಟ್ಟಂತೆ ಅನಿಸುತ್ತಿತ್ತು. ಇದೇ ಸಮಯದಲ್ಲಿ ಈ ಕೆಟ್ಟ ಗಾಳಿ ಬೇರೆ. ಅವರಿಗೆ ಕೋಪ ತಡೆದುಕೊಳ್ಳಲಾಗಲಿಲ್ಲ. ತಕ್ಷಣ ಅವರು ತಡೆಯಲಾಗದೇ ‘ಯಾವನ್ರೋ ಅವನು ಹೂಸು ಬಿಟ್ಟವನು… ಹೊಟ್ಟೆಗೆ ಏನು ತಿಂತೀರಿ, ಇವತ್ತು ನಾನು ಕ್ಲಾಸು ಮಾಡೋದಿಲ್ಲ’ ಅಂತಾ ಹಾಗೆಯೇ ವಾಪಸ್ಸು ಹೋಗೇಬಿಟ್ಟರು. ಅವರು ಹೋದ ಮೇಲೆ ನಾವೂ ಲೆಕ್ಕವನ್ನು ಬರೆದುಕೊಂಡು ಹಾಗೆಯೇ ಕುಳಿತಿದ್ದೆವು. ಸ್ವಲ್ಪ ಹೊತ್ತಿನ ನಂತರ ಅವರು ವಾಪಸ್ ಬಂದು ತರಗತಿ ಮುಂದುವರೆಸಿದರು. ಇಂದಿಗೂ ಈ ಪ್ರಸಂಗವನ್ನು ನೆನಪಿಸಿಕೊಂಡರೆ ನನಗೆ ಸಾಕಷ್ಟು ನಗೆ ಬರುತ್ತದೆ. ಹಿಂದೆ ಯಾರಾದ್ರೂ ಹೀಗೆ ಹೂಸು ಬಿಟ್ಟರೆ ನಾವು ಜೋರಾಗಿ ನಗುತ್ತಿದ್ದುದನ್ನು ನೋಡಿ ‘ದೇವರು ಕೊಟ್ಟ ಪೀಪಿ ಕಣ್ರೋ ಇದು ಯಾಕೆ ನಗ್ತೀರ’ ಎಂದು ಕೆಲವರು ಹೇಳಿದ ಮಾತೂ ನೆನಪಾಗುತ್ತದೆ.

ಅಯ್ಯೋ! ವಿಷಯ ಎಲ್ಲೆಲ್ಲಿಗೋ ಹೋಯ್ತಲ್ಲ ಅಂದ್ಕೋಬೇಡಿ. ತುಂಬಾ ಟ್ಯಾಲೆಂಟ್ ಇದ್ರೂ ನಾನು ದ್ವಿತೀಯ ಪಿಯುಸಿಯಲ್ಲಿ ಕಮ್ಮಿ ಅಂಕಗಳನ್ನು ಪಡೆಯಲು ನಾನು ಮಾಡಿಕೊಂಡ ಸ್ನೇಹವಲಯ ತುಂಬಾ ಋಣಾತ್ಮಕ ಪರಿಣಾಮ ಬೀರಿತು ಎಂದು ಹೇಳಬಯಸುತ್ತೇನೆ. ನಮ್ಮ ವ್ಯಕ್ತಿತ್ವವು ನಮ್ಮ ಸಂಗವನ್ನು ಅವಲಂಬಿಸಿದೆ. “ನಿಮ್ಮ ಸ್ನೇಹಿತರ ಬಗ್ಗೆ ತಿಳಿಸಿ, ನೀವು ಎಂತಹ ವ್ಯಕ್ತಿಯೆಂದು ಹೇಳುತ್ತೇವೆ” ಎಂಬ ಮಾತು ಸ್ನೇಹದ ಮಹತ್ವವನ್ನು ತಿಳಿಸುತ್ತದೆ.

ಆಪತ್ಕಾಲೇ ತು ಸಂಪ್ರಾಪ್ತೇ|ಯನ್ಮಿತ್ರಂ ಮಿತ್ರಮೇವ ತತ್||
ವೃದ್ಧಿಕಾಲೇ ತು ಸಂಪ್ರಾಪ್ತೇ|ದುರ್ಜನೋಪಿ ಸುಹೃದ್ಭವೇತ್||

ಎಂಬ ಶ್ಲೋಕದಂತೆ ಆಪತ್ಕಾಲವು ಬಂದಾಗ ಯಾರು ಸ್ನೇಹಿತರಾಗಿರುವರೋ ಅವನೇ ನಿಜವಾದ ಸ್ನೇಹಿತ. ಒಳ್ಳೆಯ ಅಭಿವೃದ್ಧಿಕಾಲ ಬಂದಾಗ ದುರ್ಜನರು ಮಿತ್ರರಾಗುತ್ತಾರೆ ಎಂಬ ಮಾತನ್ನು ಗ್ರಹಿಸಿಕೊಂಡು ನಾವು ಒಳ್ಳೇ ಸ್ನೇಹಿತರ ಆಯ್ಕೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ‘ಸಹವಾಸ ಸೇರಿ ಸಂನ್ಯಾಸಿ ಕೆಟ್ಟ’ ಎಂಬಂತಾಗುತ್ತದೆ.


ನಮ್ಮ ಮಕ್ಕಳಿಗೂ ಸಹ ಇದರ ವಿಷಯದಲ್ಲಿ ಎಚ್ಚರವಾಗಿರಲು ತಿಳಿಸಬೇಕು. ನನ್ನ ಸ್ನೇಹಿತರ ವಲಯದಲ್ಲಿ ಆ ಸಮಯದಲ್ಲಿ ಓದೋಕೆ ಅಸಡ್ಡೆ ತೋರಿದವರು ಇದ್ದವರಷ್ಟೇ ಹೊರತು ಕೆಟ್ಟವರು ಅಂತೇನೂ ಅಲ್ಲ. ನಾವು ಅಕ್ಟೋಬರ್ ವೇಳೆಯಲ್ಲಿಯೇ ಈ ವರ್ಷದ ವಾರ್ಷಿಕ ಪರೀಕ್ಷೆ ಬರೆಯಬಾರದು ಎಂದು ನಿರ್ಧರಿಸಿ, ರಿಜೆಕ್ಟ್ ಮಾಡಿ ಮುಂದಿನ ವರ್ಷ ಬರೆಯಬೇಕೆಂದು ತೀರ್ಮಾನಿಸಿಬಿಟ್ಟಿದ್ದೆವು. ಮುಂದೇನಾಯ್ತು ಎಂಬುದರ ಬಗ್ಗೆ ಮುಂದಿನ ಸಂಚಿಕೆಯಲ್ಲಿ ತಿಳಿಸುತ್ತೇನೆ….