ಮನೆ ಒಳಗೆ ಸೇರಿಕೊಂಡು ಬಿಟ್ಟರೆ ಯಾವ ಓನರಿಣಿ ಕಾಟವೂ ಇರುದಿಲ್ಲ, ರಾತ್ರಿ ಹನ್ನೆರಡಕ್ಕೆ ಯಾರೂ ಬಾಡಿಗೆ ವಸೂಲಿಗೆ ಬರುಲ್ಲ, ಬೆಳಿಗ್ಗೆ ಬೆಳಿಗ್ಗೆ ಬಂದು ಬಾಡಿಗೆ ಕೊಡಿ ಅಂತ ಕೇಳೋದಿಲ್ಲ, ಅದಕ್ಕಿಂತ ಮುಖ್ಯವಾಗಿ ಹೆಂಡತಿಯ ಒಂದೇ ಒಂದು ಆಸೆ ಸಂಬಳದ ಮೊದಲ ಹತ್ತು ರುಪಾಯಿ ದೇವರಿಗೆ ಅದರಲ್ಲೂ ರಾಘವೇಂದ್ರ ಸ್ವಾಮಿಗೆ ರಾಯರ ಮಠಕ್ಕೆ ಅಭಿಷೇಕಕ್ಕೆ ಕೊಡಬೇಕು ಅನ್ನುವುದು… ಇಂತಹ ಹಲವು ನೂರು ಆಸೆಗಳನ್ನು ಪೂರೈಸಬಹುದು…. ಅಂತ ಕನಸು ಕಾಣುತ್ತಾ ಇದ್ದೆನಾ…
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಐವತ್ತೆರಡನೆಯ ಕಂತು
ಹಿಂದಿನ ಸಂಚಿಕೆ ಮುಕ್ತಾಯ ಹೀಗಿತ್ತು…
ನಿಜವಾದ “ಮನೆ ಕಟ್ಟಿ ನೋಡು…..” ಪ್ರಾಬ್ಲಂ ಈಗ ಶುರು ಆದದ್ದು. ಅದು ಹೇಗೆ ಅಂದರೆ….. ಇದು ನಲವತ್ತು ವರ್ಷದ ಹಿಂದಿನ ಕತೆ. ಈಗಿನ ಹಾಗೆ ಮನೆಗೆ ಹುಡುಕಿಕೊಂಡು ಬಂದು ಸಾಲ ಕೊಡುವ ಬ್ಯಾಂಕ್ ವ್ಯವಸ್ಥೆ ಇನ್ನೂ ಬಂದಿರಲಿಲ್ಲ. ಬಂದಿರಲಿಲ್ಲ ಏನು ಈ ರೀತಿ ಒಂದು ಸಿಸ್ಟಂ ಮುಂದೆ ಬರುತ್ತೆ ಎನ್ನುವ ಕಲ್ಪನೆ ಸಹ ಯಾರಿಗೂ ಇರಲಿಲ್ಲ! ಅಂತಹ ಕಲ್ಪನೆ ಇದ್ದಿದ್ದರೆ ಇನ್ನೂ ಇಪ್ಪತ್ತು ವರ್ಷ ಕಾದು ಸಾಲ ತೆಗೆದು ಬ್ಯಾಂಕ್‌ಗೆ ಟೋಪಿ ಹಾಕ ಬಹುದಿತ್ತು!
ಮತ್ತೊಂದು ಅಂದರೆ ಮನೆ ಕಟ್ಟಲು ಸಾಲ ಕೊಡುತ್ತಾ ಇದ್ದದ್ದು ಮೊದಲು ಎಲ್ ಐ ಸಿ ಅವರು, ನಂತರ hdfc ಬ್ಯಾಂಕು. ಈ ಕಾಲಘಟ್ಟದಲ್ಲಿ ನಾವು ಮನೆ ಕಟ್ಟಲು ಹೊರಟಿದ್ದು.
ನನಗಿನ್ನು ಮೊದಲು ಮನೆ ಕಟ್ಟಿದವರು ನನಗೆ ಅಡ್ವೈಸರ್ಸು. ಅವರ ಪ್ರಕಾರ “ಎಲ್ ಐ ಸಿ ಹತ್ತಿರ ಸಾಲ ಅಂತ ಹೋದರೆ ಪೂರ್ತಿ ಪ್ಲಾನ್ ಪ್ರಕಾರವೇ ಕಟ್ಟಬೇಕು, ಕಿಟಕಿ ಒಂದಡಿ ಅತ್ತ ಇತ್ತ ಇದ್ದರೂ ಒಪ್ಪೊಲ್ಲ, ಅದರಿಂದ hdfc ಗೆ ಹೋಗೋದು ವಾಸಿ. ಒಂಚೂರು ಹಂಗೇ ಹಿಂಗೇ ಮಾಡಬಹುದು…”
ಸರಿ ನನಗೆ hdfc ನೇ ಸರಿ ಅನ್ನಿಸಿತಾ. ಲೋನ್ ಅಪ್ಲಿಕೇಶನ್ ತಂದು ಅದನ್ನು ಭರ್ತಿ ಮಾಡಿದೆನಾ, ಸತ್ಯಣ್ಣ ನ ಹೆಲ್ಪ್ ತಗೊಂಡು.. ಅದಕ್ಕೆ ಬೇಕಾಗಿರೂ ಡಾಕ್ಯುಮೆಂಟು ಎಲ್ಲಾ ಸೇರಿಸಿ ಒಂದು ದೊಡ್ಡ ಒಂದೂವರೆ ಕೇಜಿ ತೂಗುವ ಫೈಲ್ ರೆಡಿ ಮಾಡಿ hdfc ಬ್ಯಾಂಕ್ ಗೆ ಅಡಿ ಇಟ್ಟೆ. ಆಗ ಅದು ಲಾವೆಲ್ಲೆ ರೋಡು ಅಲ್ಲಿತ್ತು ಮತ್ತು ನೋಡಿದರೆ ಒಳಗೆ ಹೋಗೋದಕ್ಕೆ ಭಯ ಆಗ್ತಾ ಇತ್ತು..!
ಈಗ ಮುಂದಕ್ಕೆ..
ಬ್ಯಾಂಕ್ ಒಳ ಹೊಕ್ಕೆ. ಎದುರು ಕಂಡವರನ್ನು ಸಾಲ ಬೇಕಿತ್ತು ಮನೆ ಕಟ್ಟೋಕ್ಕೇ…. ಅಂತ ಕೇಳಿದೆ. ಅವರು ಒಂದು ಕಡೆ ಕೈ ತೋರಿಸಿದರು. ಅಲ್ಲಿ ಹೋಗಿ ಫೈಲ್ ಕೊಟ್ಟೆ. ಫೈಲ್ ಕೊಟ್ಟ ಕೂಡಲೇ ಅವರು ಟೇಬಲ್ಲಿನ ಡ್ರಾಯರ್ ತೆಗೆದು ದುಡ್ಡು ಎಣಿಸಿ ಕೊಡ್ತಾರೆ ಅಂತ ನಾನು ಅಂದುಕೊಂಡಿದ್ದು. ಅವರು ಸಿಟ್ ಅಂದರು, ಸಿಟ್ಟಿದೆ. ಫೈಲ್ ಎಲ್ಲಾ ಒಂದು ಸಲ ಮೊದಲಿಂದ ಕೊನೆವರೆಗೆ, ಕೊನೆಯಿಂದ ಮೊದಲಿನವರೆಗೆ ತಿರುಗಿಸಿದರು.
“ಎಸ್ ಯು ಕ್ಯಾನ್ ಘೋ ..” ಅಂದರು.
“ಮೇಡಂ ದುಡ್ಡು ಸಾಲದ ದುಡ್ಡು..” ಅಂದೆ.
“ಯು ವಿಲ್ ಗೆಟ್ ಎ ಲೆಟರ್. ಥೆನ್ ಕಮ್…” ಅಂದರು. ಆವಾಗ ಲಾವೆಲ್ಲೆ ರಸ್ತೆ ಪೂರ್ತಿ ಇಂಗ್ಲೆಂಡ್‌ಗೆ ಸೇರಿದ್ದ ಕಾಲ. ಥೇಮ್ಸ್ ದಂಡೆಯಿಂದ ಬಂದವರು ಅಲ್ಲಿ ಆಫೀಸಿನಲ್ಲಿ ಕೂತು ಆಳುತ್ತಿದ್ದರು. ತಾಯಿ ಭುವನೇಶ್ವರಿ ಇನ್ನೂ ಅಲ್ಲಿ ಹುಟ್ಟಿರಲಿಲ್ಲ. ಎಸೆಸ್ ಅಂತ ಹೇಳಿ ಹೊರಗೆ ಬಂದೆ. ಅದಕ್ಕೆ ಮೊದಲು ಒಂದು ಯೋಚನೆ ಬಂದಿತ್ತು. ಕೈನಲ್ಲಿ ಅಂದರೆ ಬ್ಯಾಂಕ್‌ನಲ್ಲಿ ಸಾವಿರದ ಮುನ್ನೂರು ರೂಪಾಯಿ ಇತ್ತು. ಅದರಲ್ಲಿ ಮನೆ ಶುರುಮಾಡಿ ಬಿಡೋಣ, ಅಷ್ಟರಲ್ಲಿ ರೂಫ್ ಮಟ್ಟ ಕಟ್ಟಬಹುದು ಅಂತ!
ಸತ್ಯಣ್ಣನ ಹತ್ತಿರ ಮಾತು ಆಡಬೇಕಾದರೆ ಈ ಸಂಗತಿ ಹೇಳಿದೆ.
ಸತ್ಯಣ್ಣ ನನ್ನ ಮಾತು ಕೇಳಿ ಬಿದ್ದು ಬಿದ್ದೂ ನಕ್ಕಿದ್ದ…
“ಸಾವಿರದ ಮುನ್ನೂರು ರೂಪಾಯಿಯಲ್ಲಿ ರೂಫಾ? ಮನೆ ಕಟ್ಟಿ ಗೃಹ ಪ್ರವೇಶ ಸಹ ಮಾಡಬಹುದು ….” ಅಂತ ಸುತ್ತಲೂ ಇದ್ದ ಸ್ನೇಹಿತರಿಗೆ ನನ್ನ ಯೋಚನೆ ವಿವರಿಸಿ ವಿವರಿಸಿ ಹೇಳಿದ್ದ. ನಂತರ ಒಂದೂವರೆ ದಿವಸ ಒಂದು ಸಾಧಾರಣ ಮನೆ ಕಟ್ಟಲು ಎಷ್ಟು ಕಾಸು ಬೇಕಾಗುತ್ತೆ ಅಂತ ನನ್ನ ತಲೆ ತುಂಬಲು ಪ್ರಯತ್ನಿಸಿದ್ದ ಮತ್ತು ಕೊಂಚ ಮಟ್ಟಿಗೆ ಸಫಲ ಕೂಡ ಆಗಿದ್ದ. ಅದಾದ ಮೇಲೆ ಎಸ್ಟಿಮೇಶನ್ ಮತ್ತಿತರ ತಲೆನೋವಿನ ಕೆಲಸ ಆಗಿದ್ದು.
ನನ್ನ ಪ್ಲಾನಿನ ಪ್ರಕಾರ (ಮಹಡಿ ಮನೆ ಪ್ಲಾನ್ ಹಟ ಹಿಡಿದು ಮಾಡಿಸಿದ್ದೆ) ಒಟ್ಟು ಮನೆಗೆ ಒಂದೂ ಮುಕ್ಕಾಲು ಲಕ್ಷ ಬೇಕಿತ್ತು. ಕೈಯಲ್ಲಿ ಸಾವಿರದ ಮುನ್ನೂರು ಇತ್ತು, ಅದರಿಂದ ಒಂದು ಲಕ್ಷ ಎಪ್ಪತ್ತು ನಾಲ್ಕು ಸಾವಿರ ಸಾಲ ಕೊಡಿ ಅಂತ ಅರ್ಜಿ ಕೊಟ್ಟಿದ್ದು! ಇನ್ನೇನು ಸಾಲ ಮಂಜೂರು ಆಗಿಬಿಡುತ್ತೆ, ಮನೆ ಶುರು ಮಾಡಿದರೆ ಕಟ್ಟಿ ಮುಗಿಸೋದು ಒಂದು ತಿಂಗಳು ಆಗುತ್ತೆ ಅಷ್ಟೇ… ಆಮೇಲೆ ಮನೆ ಒಳಗೆ ಸೇರಿಕೊಂಡು ಬಿಟ್ಟರೆ ಯಾವ ಓನರಿಣಿ ಕಾಟವೂ ಇರುದಿಲ್ಲ, ರಾತ್ರಿ ಹನ್ನೆರಡಕ್ಕೆ ಯಾರೂ ಬಾಡಿಗೆ ವಸೂಲಿಗೆ ಬರುಲ್ಲ, ಬೆಳಿಗ್ಗೆ ಬೆಳಿಗ್ಗೆ ಬಂದು ಬಾಡಿಗೆ ಕೊಡಿ ಅಂತ ಕೇಳೋದಿಲ್ಲ, ಅದಕ್ಕಿಂತ ಮುಖ್ಯವಾಗಿ ಹೆಂಡತಿಯ ಒಂದೇ ಒಂದು ಆಸೆ ಸಂಬಳದ ಮೊದಲ ಹತ್ತು ರುಪಾಯಿ ದೇವರಿಗೆ ಅದರಲ್ಲೂ ರಾಘವೇಂದ್ರ ಸ್ವಾಮಿಗೆ ರಾಯರ ಮಠಕ್ಕೆ ಅಭಿಷೇಕಕ್ಕೆ ಕೊಡಬೇಕು ಅನ್ನುವುದು… ಇಂತಹ ಹಲವು ನೂರು ಆಸೆಗಳನ್ನು ಪೂರೈಸಬಹುದು…. ಅಂತ ಕನಸು ಕಾಣುತ್ತಾ ಇದ್ದೆನಾ…
ಹದಿನೈದು ದಿವಸದಲ್ಲಿ ಇಂಟರ್ವ್ಯೂ ಕರೆ ಬಂತು, ಪೋಸ್ಟ್ ಮೂಲಕ. ಆಗ ಇನ್ನೂ ಮೊಬೈಲ್ ಹುಟ್ಟಿರಲಿಲ್ಲ ಮತ್ತು ಈಗ ಲ್ಯಾಂಡ್ ಲೈನ್ ಅಂತ ಹೇಳುತ್ತೇವೆ ನೋಡಿ, ಅಂತಹ ಫೋನ್ ಸಹ ಆಗರ್ಭ ಶ್ರೀಮಂತರ ಮನೆಯಲ್ಲಿ ಮಾತ್ರ ಲಭ್ಯ. ಈಗಿನ ಡಿಸೈನ್ ಅಲ್ಲ ಅದು, ಬೇರೆ ರೀತಿಯದು. ಹಳೇ ಇಂಗ್ಲಿಷ್ ಸಿನಿಮಾದಲ್ಲಿ ನೋಡುತ್ತೀರಲ್ಲಾ ಹಾಗೇ ಇದ್ದವು. ನಂತರ ಹೊಸ ಹೊಸಾ ಡಿಸೈನ್ ಬಂದದ್ದು. ಮೊದ ಮೊದಲು ಗುಂಡನೆಯ ಒಂದು ಉಂಗುರ ಅದರಲ್ಲಿ ಅಂಕಿಗಳು ಕಾಣುವ ಹಾಗೆ ಇತ್ತು. ಯಾವ ನಂಬರಿಗೆ ಸಂಪರ್ಕಿಸಬೇಕು ಆ ನಂಬರನ್ನು ಈ ರಂಧ್ರದಲ್ಲಿ ತೋರು ಬೆರಳು ತೂರಿಸಿ ತಿರುಗಿಸಬೇಕು. ನಂತರ ರಿಸಿವರ್ ಕಿವಿ ಹತ್ತಿರ ಒಯ್ದು ಅಲ್ಲಿಂದ ಉತ್ತರಕ್ಕೆ ಕಾಯಬೇಕು. ಅದರ ಪರಿಷ್ಕೃತ ಮಾಡಲ್ ಅಂದರೆ ನಂಬರು ಗುಂಡಿಯನ್ನು ಒತ್ತುವುದು. ಇವೆರೆಡೂ ನಮ್ಮ ಸಂಧಿಕಾಲದ ಮಾಡೆಲ್‌ಗಳು. ನಂತರ ಸೆಲ್ ಫೋನ್ ಬಂತು, ಹಿಂದಿನ ಎಲ್ಲವೂ ಕೊಚ್ಚಿಕೊಂಡು ಹೋಗಿ ಹತ್ತಿರದ ಸಮುದ್ರದಲ್ಲಿ ನೆಗೆದು ಬಿದ್ದು ಹೋದವು. ಹಾಗೆ ಬಿದ್ದ ಕೆಲವು ಉಪಕರಣಗಳ ಪಟ್ಟಿಯನ್ನು ಮೊನ್ನೆ ನನ್ನ ಗೆಳೆಯನೊಬ್ಬ ವಾಟ್ಸಾಪ್‌ನಲ್ಲಿ ಕಳಿಸಿದ್ದ…. ಅದರ ಪ್ರಕಾರ ಸಮುದ್ರಕ್ಕೆ ಹಾರಿ ನಾಮಾವಶೇಷ ಹೊಂದಿದ ವಸ್ತುಗಳಲ್ಲಿ ನಮ್ಮ ಗೋಡೆ ಗಡಿಯಾರ, ಕೈ ಗಡಿಯಾರ, ನಮ್ಮ ಪೆನ್ನು ಪೆನ್ಸಿಲ್ಲು, ನಮ್ಮ ಪುಸ್ತಕ, ನಮ್ಮ ಓದು, ನಮ್ಮ ಕ್ಯಾಲ್ಕುಲೇಟರ್…… ಹೀಗೆ ಅನೇಕ ನಮ್ಮ ಕಾಲದ ಅತಿ ಅವಶ್ಯಕ ಅನಿಸಿಕೊಂಡು ಅವಿಲ್ಲದೆ ನಾವು ಜೀವನ ಮಾಡುವುದು ಸಾಧ್ಯವೇ ಇಲ್ಲ ಎನ್ನುವ ಹಲವಾರು ವಸ್ತುಗಳು ಸೇರಿದ್ದವು. ಅದಕ್ಕೆ ನನ್ನ ಇನ್ನೊಬ್ಬ ಸಮಾಜಶಾಸ್ತ್ರೀ ಗೆಳೆಯ ಒಂದು ಕಾಮೆಂಟ್ ಅಂಟಿಸಿದ್ದ. ಅವನ ಪ್ರಕಾರ ನಮ್ಮ ಮಾನವೀಯತೆ, ಬಾಂಧವ್ಯ, ಕಕ್ಕೂಲಾತಿ, ಪ್ರೀತಿ ಪ್ರೇಮ ಇವೆಲ್ಲವನ್ನೂ ಮೊಬೈಲ್ ನುಂಗಿ ನೀರು ಕುಡಿದಿದೆಯಂತೆ. ನಮ್ಮ ಮನುಷ್ಯತ್ವ ಸಹ ಕಳೆದು ಹೋಗಿದೆಯಂತೆ…. ವಿಷಯ ಹೇಗೆ ಎಲ್ಲಿಂದ ಎಲ್ಲಿಗೋ ಹಾರಿತು ನೋಡಿ..
ಮತ್ತೆ ಫೋನಿನ ಸಂಗತಿಗೆ ಬರಲೇ… ಫೋನು ಎಂಬತ್ತರ ದಶಕದ ಅಂತ್ಯದವರೆಗೂ ಮತ್ತು ತೊಂಬತ್ತರ ದಶಕದ ಮೊದಲ ಅರ್ಧ ಭಾಗವೂ ವೆರಿ ವೇರಿ ರೇರ್ ಅಂದರೆ ರೇರ್ ಕಮೋಡಿಟಿ . ರಾಜೀವ ಗಾಂಧಿ ಪ್ರಧಾನಿ ಆಗಿ ಸ್ಯಾಮ್ ಪಿತ್ರೋಡ ಅವರು ಪ್ರಧಾನಿ ಸಲಹೆಗಾರ ಅಂತ ಆದಮೇಲೆ ಈ ಫೋನು ಪಾನುಗಳಿಗೆ ಚಾಲನೆ ಸಿಕ್ಕಿದ್ದು ಮತ್ತು ನನ್ನಂತಹ ಪಾಮರರೂ ಸಹ ಮನೆಯಲ್ಲಿ ಫೋನು ಇಟ್ಟುಕೊಳ್ಳುವ ಯೋಚನೆ ಮಾಡಿದ್ದು. ಆಗಲೇ ಫೋನು ಬೇಗ ಸಿಗುವ ಹಾಗೆ ಆಗಿದ್ದು. ಹಾಗೆ ನೋಡಿದರೆ ನನ್ನ ಮನೆಗೆ ಫೋನು ಬಂದಿದ್ದು ೧೯೯೭ ರಲ್ಲಿ, ಆರು ವರುಶದ ಬುಕಿಂಗ್ ನಂತರ. ಲ್ಯಾಂಡ್ ಲೈನ್ ಫೋನ್ ಕತೆ ಮತ್ತೆ ಹತ್ತು ವರ್ಷದಲ್ಲಿ ಅವಸಾನ ಕಂಡಿತು. ನಂತರದ ಪ್ರವೇಶ ಮೊಬೈಲ್ ಫೋನ್‌ದು. ಇದರ ಅಂದರೆ ಮೊಬೈಲ್ ಕತೆಗೆ ನಂತರ ಬರುತ್ತೇನೆ, ನೆನಪಿಸಿ.
ಸಾಲ ಕೊಡೂದಕ್ಕೆ ಇಂಟರ್ವ್ಯೂ ಮಾಡಬೇಕಾ ಅಂತ ನನಗೆ ಆಶ್ಚರ್ಯ. ಇಂಟರ್ವ್ಯೂಗೆ ಹೋದೆ. ಒಬ್ಬರೇ ಎದುರು ಕೂತಿದ್ದು. ನನ್ನ ಅರ್ಜಿ ಫೈಲ್ ಅವರೆದುರು ಹರಡಿಕೊಂಡಿತ್ತು. ಫೈಲ್ ತೆಗೆದು ಒಂದೊಂದೇ ಪುಟ ತಿರುವಿದರು. ಕೈನಲ್ಲಿ ಒಂದು ಪೆನ್ಸಿಲ್ ಹಿಡಿದು, ಎದುರಿನ ಪೇಪರ್ ಮೇಲೆ ಅದೇನೇನೋ ಗುರುತು ಹಾಕಿಕೊಂಡರು. ಇಂಗ್ಲೀಷಿನಲ್ಲಿ ನಮ್ಮ ಇಂಟರ್ವ್ಯೂ ನಡೆದದ್ದು. ಅದರ ಸಾರಾಂಶ:
“ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಸಾವಿರದ ಮುನ್ನೂರು…” “ಹೌದು ಸಾ….”
“ನಿಮ್ಮ ಹತ್ರ ಎಷ್ಟು ಚಿನ್ನ ಅದೆ?..”
“ಒಂದು ಅಥವಾ ಒಂದೂವರೆ ಗ್ರಾಂ ಇರಬೋದು ಅಷ್ಟೇ ಸಾ….”
“ಸರಿಯಾಗಿ ಹೇಳ್ಬೇಕು.. ನಿಮ್ಮ ವೈಫ್ ಹತ್ರ ಅಷ್ಟೇನಾ ಚಿನ್ನ ಇರೋದು?….’
“…. ವೈಫು ಹೌಸ್ ವೈಫು ಸಾ….
ವೈಫ್ ಹತ್ರ ಬೇರೆ ಇಲ್ಲ ಸಾ. ನಮ್ಮ ಮದುವೆಯಲ್ಲಿ ಕಟ್ಟಿದ ತಾಳಿ ಮಾತ್ರ ಚಿನ್ನದ್ದು……”
ಆಯಪ್ಪ ನಂಬಕ್ಕೆ ರೆಡಿ ಇಲ್ಲ. ಅವನನ್ನ ಕನ್ವಿನ್ಸ್ ಮಾಡೋದು ಹೇಗೆ? ಅವನಿಗೆ ನನ್ನ ಮದುವೆ ಕತೆ ಹೇಳಲೇಬೇಕಾಯಿತು. ಇದುವರೆಗೆ ಯಾರಿಗೂ ಹೇಳಿರಲಿಲ್ಲ ನನ್ನ ಮದುವೆ ಕತೆ. ಸಾಲ ಕೇಳುಕ್ಕೆ ಹೋದರೆ ಹೇಗೆ ಮರ್ಯಾದೆ ಹೋಗುತ್ತೆ ಅಂತ ಅವತ್ತು ಗೊತ್ತಾಯಿತು. ಬೇರೆ ದಾರಿ ಇಲ್ಲದೇ ಅವನಿಗೆ ನನ್ನ ಮದುವೆ ಕತೆ ವಿವರಿಸಿದೆ.
.”….. ನನ್ನ ಮದುವೆಗೆ ಚಿನ್ನ ಪನ್ನ ಬೇಡ ಅಂದೆ ಸಾ. ಮದುವೆ ಖರ್ಚು ಹೆಚ್ಚು ಮಾಡದು ಬೇಡ ಅಂತ ಚಪ್ರ ಓಲಗ ಬ್ರಾಮಿನ್ ಪ್ರೀಸ್ಟ್ ಇವರೆಲ್ಲ ಇಲ್ಲದೇ ಆಗಿದ್ದ ಮದುವೆ ಇದೂ ಸಾ. ಒಟ್ಟಿನಲ್ಲಿ ಕಾಸು ಖರ್ಚು ಕಮ್ಮಿ ಆಗಲಿ ಅಂತ… ಆಗ ಇದು ಒಂದು ರೆವೊಲ್ಯುಶನ್ ಮದ್ವೆ…… ಸೋ ನೋ ಗೋಲ್ಡ್ ….” ಅಂತ ಒಂದು ಗಂಟೆ ನನ್ನ ಮದುವೆ ಆದ ರೀತಿ ವಿವರಿಸಿದೆನಾ…
ಮಧ್ಯೆ ಮಧ್ಯೆ ಕೆಲವು ವಿವರ ಸಾಲಕ್ಕೆ ನೇರ ಸಂಬಂಧ ಇಲ್ಲದೇ ಇರೋದು ಕೇಳಿದ. ಸಾಲ ಕೊಡ್ತಾನೆ ಅದಕ್ಕೇ ಈ ವಿವರ ಬೇಕೇನೋ ಅಂತ ನಾನೂ ಅವನು ಕೇಳಿದ್ದಕ್ಕೆಲ್ಲಾ ಸಂಯಮದ ಉತ್ತರ ಕೊಟ್ಟೆ.
“…… ನಿಮ್ಮ ಪೇರೆಂಟ್ಸ್ ಇದಕ್ಕೆ ಒಪ್ಪಿದ್ರಾ? ನಿನ್ನ ಮಿಸೆಸ್ ಕಡೆಯವರು ಒಪ್ಪಿದ್ರಾ, ನಿಮ್ಮ ರಿಲೇಶನ್ಸು ಅವರೂ ಒಪ್ಪಿದ್ರಾ, ನಿಮ್ಮ ಮಠದವರು.. ಅವರೂ ಒಪ್ಪಿದ್ರಾ….” ಮಧ್ಯೆ ಮಧ್ಯೆ ಅವನಿಗೆ ನೂರೆಂಟು ಸಂಶಯ, ಈ ತರಹ ಮದುವೆ ಸಾಧ್ಯವಾ ಅಂತ. ಜತೆಗೆ ನಾನು ಬುರುಡೆ ಬಿಡ್ತಾ ಇದೀನಾ ಎನ್ನುವ ಸಂಶಯ! ಸುಮಾರು ಹೊತ್ತು ಈ ಇಂಟರ್ವ್ಯೂ ಆಯಿತು. ಮಾತುಕತೆ ಅಂಚಿಗೆ ಬಂದೆವು ಅಂತ ಕಾಣುತ್ತೆ.
“……, ಇದನ್ನೆಲ್ಲಾ ನಾನು ಯಾಕೆ ಕೇಳಿದೆ ಸಾಲಕ್ಕೆ ಇದಕ್ಕೆ ಸಂಬಂಧ ಇಲ್ಲದೇ ಇದ್ದರೂನೂ ಗೊತ್ತಾ..?”
ನನಗೇನು ಗೊತ್ತು? ಸಾಲ ಕೊಡೋ ಮಾರಾಜ ಅವನು, ಅವನು ಕೇಳಿದ್ದಕ್ಕೆ ಉತ್ತರ ಕೊಟ್ಕೋತಾ ಹೋಗಿದ್ದೆ.
“….. ಇಲ್ಲ ಸಾ. ಗೊತ್ತಿಲ್ಲ..” ಅಂದೆ.
“ನಮ್ಮ ಮನೇಲಿ ಇಂತಹದೇ ಒಂದು ಪ್ರಸಂಗ ಬಂದಿದೆ. ಈಗದು ಬಿಗಿನಿಂಗ್ ಸ್ಟೇಜ್. ಅದಕ್ಕೋಸ್ಕರ ಕೇಳಿದೆ. ಏನೂ ತಪ್ಪು ತಿಳ್ಕಾಬೇಡಿ…..” ಅಂತ ಕೈ ಕುಲುಕಿದ. ಮೊದಲೇ ಗೊತ್ತಿದ್ದರೆ ಬಯಲಲ್ಲಿ ಬೆತ್ತಲಾಗುವುದು ತಪ್ಪುತ್ತಿತ್ತು ಅನಿಸಿತು. ಆದರೆ ಲೇಟ್ ರೆಯಲೈಸೇಶನ್. ಏನೂ ಮಾಡುವ ಹಾಗಿರಲಿಲ್ಲ!
ಅವನು ಕೊಂಚ ಕನ್ವಿನ್ಸ್ ಆದ ಹಾಗೆ ಕಂಡ. “ನಿಮ್ಮ ಪೀ ಎಫ್‌ನಲ್ಲಿ ಎರಡೂವರೆ ಸಾವಿರ ಇದೆ ಅಂತ ತೋರಿಸಿದ್ದೀರಿ. ನಿಮಗೆಷ್ಟು ವರ್ಷ…. ” ಅಂದ.
ಮೂವತ್ನಾಲ್ಕು ಅಂತ ತೊದಲಿದೆ..
“ನೋ ನೋ ಐ ಮೀನ್ ಸರ್ವೀಸ್ ಎಷ್ಟು ವರ್ಷ ಆಯ್ತು….”
‘ಅಲ್ಲೇ ಬರೆದೆನಿ ನೋಡಿ ಸಾ…..’
“ಜಸ್ಟ್ ತರ್ಟೀನ್ ಇಯರ್ಸ್. ಹೊ ನಿಮಗೆ ಆ ದುಡ್ಡು ಸಹ ಪೂರ್ತಿ ಬರುಲ್ಲ….” ಹೀಗೆ ಎರಡೂವರೆ ಗಂಟೆ ಇಂಟರ್ವ್ಯೂ ಆಯ್ತು.
ಸರಿ ಈಗ ಕೈ ಗೆ ಚೆಕ್ ಕೊಡ್ತಾನೆ ಅಂತ ಅಲ್ಲೇ ಕೂತಿದ್ದೆ.
“ಯು ಕ್ಯಾನ್ ಗೋ ನೌ…” ಅಂದ.
“ಲೋನ್? ಲೋನ್ ಕೊಡಿ ಹೋಗ್ತೀನಿ….”
ಇಷ್ಟು ಹೊತ್ತು ನನ್ನ ಪ್ರತಿ ವಿವರ ಕೇಳಿದ್ದೀ, ಚೆಕ್ ಕೊಡಬೇಕು ತಾನೇ ಇದು ನನ್ನ ಲಾಜಿಕ್.
“ಯು ವಿಲ್ ಗೆಟ್ ಎ ಲೆಟರ್…” ಅಂದ! ಸಂಜೆ ಆರು ಆಗಿತ್ತು, ಆಗಲೇ. ಅಲ್ಲಿಂದ ಎಂ ಜಿ ರಸ್ತೆಗೆ ಬಂದೆ. ಎಂ ಜಿ ರಸ್ತೆ ಅಂದರೆ ನನಗೆ ಅಲ್ಲಿ ಹಲವಾರು must ಗಳು. ಒಂದು ಸಿನಿಮಾ, ಹೆಂಡತಿ ಸಂಗಡ ಇದ್ದರೆ ಲೇಕ್ ವ್ಯೂ ಐಸ್ ಕ್ರೀಂ, ಇಂಡಿಯಾ ಕಾಫಿ ಹೌಸ್‌ನಲ್ಲಿ ಕಾಫಿ … ಹೀಗೆ. ಒಬ್ಬಂಟಿ ತಾನೇ ಇಂಟರ್ವ್ಯೂ ಹೋಗಿದ್ದು? ಇಂಡಿಯಾ ಕಾಫಿ ಹೌಸ್‌ನಲ್ಲಿ ಕೂತು ಕಾಫಿ ಹೀರಿ ನಾಲ್ಕು ನಿಕೋಟಿನ್ ಸುಟ್ಟು ಎರಡು ಮಿಂಟಿ ಚೀಪಿ ಮನೆ ಸೇರಿಕೊಂಡೆ.
ಒಂದು ವಾರದಲ್ಲಿ ಅಲ್ಲಿಂದ ಅಂದರೆ ಸಾಲದ ಬ್ಯಾಂಕ್‌ನಿಂದ ಇನ್ನೊಂದು ಲೆಟರ್, ಇನ್ನೊಂದು ಇಂಟರ್ವ್ಯೂ ಗೆ ಬನ್ನಿ ಅಂತ. ಒಂದು ಇಂಟರ್ವ್ಯೂ ಅನುಭವ ಆಗಿತ್ತಲ್ಲ, ಈ ಸಲ ತಲೆ ಎತ್ತಿ ಬ್ಯಾಂಕ್ ಹೊಕ್ಕೆ.
“ಒಂದು ಲಕ್ಷ ಎಪ್ಪತ್ತು ನಾಲ್ಕು ಸಾವಿರ ಸಾಲ ಕೊಡಿ ಅಂತ ಅಪ್ಲೈ ಮಾಡಿದೀರಿ. ನಿಮಗೆ ಬರೋ ಸಂಬಳ, ನಿಮ್ಮ ರಿಪೇಯಿಂಗ್ ಕೆಪ್ಯಾಸಿಟಿ ನಿಮ್ಮ ಸಂಸಾರದ ಖರ್ಚು ಇದೆಲ್ಲಾ ನಮ್ಮ ಫೈನಾನ್ಸ್ ಡಿಪಾರ್ಟ್ಮೆಂಟ್ ಲೆಕ್ಕ ಹಾಕಿದೆ. ನಿಮ್ಮ ಸಂಬಳಕ್ಕೆ ಮೂವತ್ತು ಸಾವಿರ ಮಾತ್ರ ಸಾಲ ಸಿಗೋದು. ಮಿಕ್ಕಿದ ದುಡ್ಡು ಅದು ಹೇಗೆ ಮೊಬೈಲಿಸ್ ಮಾಡ್ತೀರಿ…?”
ಹೇಗೆ ಮೊಬೈಲಿಸ್ ಮಾಡೋದು? ನನಗೆ ಯಾರೂ ಲಕ್ಷಾಧೀಶ್ವರ ಗೊತ್ತಿರಲಿಲ್ಲ. ತಮಾಷೆ ಗೊತ್ತಾ ಆಗ ಒಬ್ಬ ಲಕ್ಷ ಇಟ್ಟುಕೊಂಡಿದ್ದರೆ ಅವನೇ ಗ್ರೇಟ್, ದೊಡ್ಡ ಸಾಹುಕಾರ! ಆಗಿನ್ನೂ ಕೋಟ್ಯಾಧೀಶ್ವರ ಎನ್ನುವ ಪದ ಹುಟ್ಟಿರಲಿಲ್ಲ. ಮಿಲಿಯನೇರ್ ಅನ್ನುವ ಪದ ಇನ್ನೂ ಇಂಡಿಯಾದಲ್ಲಿ ಚಾಲ್ತಿಯಲ್ಲಿ ಬಂದಿರಲಿಲ್ಲ. ಆಗ ಒಂದು ಹಿಂದಿ ಸಿನಿಮಾ ಬಂದಿತ್ತು. ಅದರ ಹೆಸರು ಲಕ್ಷಾಧೀಶ್ವರ ಅಂತ. ಆಗಿನ ಆರ್ಥಿಕ ಮಾನದಂಡದಲ್ಲಿ ಲಕ್ಷ ಅನ್ನುವುದು ದೋ…. ಡ್ಡ ಮೊತ್ತ. ಈಗಿನ ಹಾಗೆ ನೂರು ಕೋಟಿ ಸಾವಿರ ಕೋಟಿ ಎನ್ನುವ ಪದಗಳು ನಮ್ಮ ಕಿವಿಗೆ ಬಿದ್ದಿರಲಿಲ್ಲ! ಇಂತಹ ಪದಗಳು ಸೃಷ್ಟಿ ಆಗುತ್ತೆ, ನಾವೇ ಅದನ್ನು ನಮ್ಮ ಕಿವಿಯಾರೆ ಕೇಳ್ತೀವಿ ಎನ್ನುವ ತಿಲಾಂಶ ಜ್ಞಾನ ಕೂಡ ನಮ್ಮಲ್ಲಿ ಆಗ ನಲವತ್ತು ವರ್ಷದ ಹಿಂದೆ ಇರಲಿಲ್ಲ…..!
“ಸಾಲ ಸೋಲ ಮಾಡ್ತೀನಿ ಸಾ ಅಂದೆ…….” ಅವರು ಅಷ್ಟೊಂದು ದುಡ್ಡು ಹೇಗೆ ಮೊಬೈಲೈಸ್ ಮಾಡ್ತೀರಿ ಅಂತ ಕೇಳಿದಾಗ.
“ಅಂತಹಾ ಸಾಲ ಕೊಡುವವರ ಹತ್ರ ನೀವು ಒಂದು ಲೆಟರ್ ತರಬೇಕಾಗುತ್ತೆ. ನೀವು ಲೆಟರ್ ತಂದಮೇಲೆ ನಾವು ಯೋಚಿಸಬಹುದು..…”ಅಂದರು, ಅವರ ಮುಖದಲ್ಲಿ ಒಂದು ನಗು ಹರಿದು ಹೋಯಿತು. ನಗು ನನಗೆ ಒಂದು ಮೆಸೇಜ್ ಕೊಡ್ತು. ನಾನು ಸುಳ್ಳು ಹೇಳ್ತಾ ಇದೀನಿ ಅಂತ ಅವನ ನಗು ಇದೇ ಮೆಸೇಜು.
ಸರಿ ಇವನ ಹತ್ತಿರ ಸುಳ್ಳು ಯಾಕೆ ಹೇಳೋದು, ಅಷ್ಟು ದೊಡ್ಡ ಅಮೌಂಟ್ ಸಾಲ ಯಾವ ಬೇಕೂಪ ನನಗೆ ಕೊಡ್ತಾನೆ ಅನಿಸ್ತಾ?
ಮಾತು ಬದಲಾಯಿಸಿದೆ. “ಆಲ್ಟರ್ನೇಟಿವ್ ದಾರಿ ಯಾವುದಾದರೂ ಇದೆಯಾ..” ಅಂದೆ.
“ನೀವು ಪ್ಲಾನ್ ಬದಲಾಯಿಸಬೇಕಾಗುತ್ತದೆ ಜತೆಗೆ ಒಂದು ಅಂಡರ್ ಟೆಕಿಂಗ್ ಕೊಡಬೇಕು….” ಅಂದರು!
“ಏನು ಅಂಡರ್ ಟೆಕಿಂಗ್ …….” ಅಂದೆ.
“ಸಾಲ ಮಂಜೂರು ಆದಮೇಲೆ ಹೆಚ್ಚು ಸಾಲ ಬೇಕು ಅಂತ ಕೇಳೋದಿಲ್ಲ…” ಅಂತ!
ಒಂದು ರೀತಿ ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡೆ ಅನಿಸಿತು.
ಮನೆ ಕಟ್ಟಬೇಕು ಅನ್ನುವ ಭಂಡ ಹುಚ್ಚು ತಲೆಗೆ ಏರಿತ್ತು, ಸರಿ. ಲೆಟರ್ ರೆಡಿ ಮಾಡ್ಕೊಂಡು ಬರ್ತೀನಿ ಅಂತ ಆಚೆ ಬಂದೆ! ಬ್ಯಾಂಕ್ ಮೇಲೆ ಒಂದು ರೀತಿ ಹಟ ಹುಟ್ಟಿಬಿಡ್ತು… ಅದೆಷ್ಟೇ ಸಾಲ ಅಂತ ಕೊಡಲಿ, ಒಂದು ವಾಸದ ಮನೆ ಕಟ್ಟಿ ಈ ಬಡ್ಡಿ ಮಕ್ಕಳಿಗೆ ಬುದ್ದಿ ಕಲಿಸಲೇಬೇಕು ಅಂತ ಮನಸು ಶಪಥ ಮಾಡಿತಾ? ತಿಳಿಯದು.. ಈಗ ರಿ ಥಿಂಕ್ ಮಾಡಿದರೆ ಅಂಥಹ ಹಟ ಹುಟ್ಟಿದ್ದು ನಿಜ ಅನಿಸುತ್ತೆ.
ಈ ರೀತಿಯ ಸಂಕಟದ ಪ್ರಸಂಗಗಳಲ್ಲಿ ಸಿಕ್ಕಿಕೊಂಡಾಗ ನನಗೆ ಐಡಿಯಾ ಕೊಡಲು ಸಾಕಷ್ಟು ಜನ ಆಪ್ತರು ಇದ್ದರು ಮತ್ತು ಈಗಲೂ ಇದ್ದಾರೆ. ಬ್ಯಾಂಕ್ ನವರ ಜತೆ ಆದ ಮಾತುಕತೆಯನ್ನು ಸುಮಾರು ಜನ ಗೆಳೆಯರೊಂದಿಗೆ ಹಂಚಿಕೊಂಡೆ. ನನ್ನ ಗೆಳೆಯ ಪ್ರಸನ್ನ ಜತೆ ಸಹ ಹಂಚಿಕೊಂಡೆ. ಪ್ರಸನ್ನ ಈ ವೇಳೆಗೆ ವಕೀಲಿ ವೃತ್ತಿ ಪ್ರವೇಶ ಮಾಡಿ ದಶಕದ ಮೇಲೆ ಆಗಿತ್ತು.
“……. ಒಂದು ಕೆಲಸ ಮಾಡೋಣ, ನನ್ನ ಕಲಿಗ್ ಒಬ್ಬರು ಪುಷ್ಪಾ ಅಂತ ಇದಾರೆ. ಅವರ ಹಸ್ಬೆಂಡ್ ಅಲ್ಲಿ hdfc ನಲ್ಲಿ ದೊಡ್ಡ ಪೋಸಿಶನ್‌ನಲ್ಲಿ ಇದ್ದಾರೆ. ಅವರಿಗೆ ಹೇಳಿಸ್ತೀನಿ, ನಿನ್ನ ಲಕ್ ನೋಡೋಣ…..” ಅಂತ ಸಲಹೆ ನೀಡಿದ.
ಇದಾದ ಒಂದು ವಾರಕ್ಕೆ ಮತ್ತೆ ಕರೆ ಬಂತು. ಈ ಸಲ ಇನ್ನೂ ಧೈರ್ಯ ಹೆಚ್ಚಿತ್ತು. ಬ್ಯಾಂಕ್ ಪ್ರವೇಶಿಸಿದೆ. ಇಂತಹವರನ್ನು ನೋಡಬೇಕು ಅಂದೆ. ಹತ್ತು ನಿಮಿಷ ಆದಮೇಲೆ ಕರೆ ಬಂತು. ಒಂದು ಗಾಜಿನ ಚೇಂಬರ್‌ನಲ್ಲಿ ಈ ಸಲದ ಇಂಟರ್ವ್ಯೂ!
ಹಿಂದಿನ ಇಂಟರ್ವ್ಯೂನಲ್ಲಿ ಕೇಳಿದ್ದ ಎಲ್ಲಾ ಪ್ರಶ್ನೆ ಇಲ್ಲಿ ಮತ್ತೆ ರಿಪೀಟ್ ಆದವು. ಅದನ್ನ ಒಂದು ಕಡೆ ಮತ್ತೆ ಬರೆದುಕೊಂಡರು ಅಂತ ನನಗೆ ಅನಿಸಿತು.
“ಎಷ್ಟು ಹೆಚ್ಚಿಗೆ ಸಾಲ ಕೊಡಲು ಸಾಧ್ಯವೋ ಅಷ್ಟಕ್ಕೂ ರೆಕಮೆನ್ಡ್ ಮಾಡ್ತೀನಿ ….” ಅಂತ ಹೇಳಿ ಕೈ ಕುಲುಕಿದರು. ಈ ವೇಳೆಗೆ ನನ್ನ ಬೇಡಿಕೆ ಒಂದೂ ಮುಕ್ಕಾಲು ಲಕ್ಷದಿಂದ ಇನ್ನೂ ಕಡಿಮೆ ಮೊತ್ತಕ್ಕೆ ಕುಸಿದು ಬಿದ್ದಿತ್ತು (ಕುಸಿದು ಬೀಳುವ ಪದ ನಾನು ಮೊದಲು ರಸ್ತೆಯಲ್ಲಿ ನಡೆಯುತ್ತಾ ಹಾರ್ಟ್ ಅಟ್ಯಾಕ್ ಆಗಿ ಕುಸಿದು ಬೀಳ್ತಾರಲ್ಲ ಅವರ ಬಗ್ಗೆ ಮಾತ್ರ ಕೇಳಿದ್ದೆ. ತೀರಾ ಈಚೆಗೆ ಡಾಲರ್ ವಿರುದ್ಧ ರೂಪಾಯಿ ಕುಸಿದು ಬೀಳೋದು ಕೇಳ್ತಾ ಇದೀನಿ!).
ಮೇಲಿನ ಇಂಟರ್ವ್ಯೂ ಆಗಿ ಹತ್ತು ಹದಿನೈದು ದಿವಸ ಆಗಿರಬೇಕು. ಬ್ಯಾಂಕ್ ನಿಂದಾ ಒಂದು ರಿಜಿಸ್ಟರ್ಡ್ ಪತ್ರ ಬಂತು. ಮನೆ ನಿರ್ಮಾಣಕ್ಕೆ ನನಗೆ ಮೂವತ್ಮೂರು ಸಾವಿರ ರೂಪಾಯಿ ಸಾಲ ಸಾಂಕ್ಷನ್ ಆಗಿರುವ ಪತ್ರ ಅದು. ಜತೆಗೆ ಕರಾರು ಪತ್ರ, ಸಾಲಕ್ಕೆ ಕಂತು ಹಣ ನನ್ನ ಸಂಬಳದಲ್ಲಿ ಹಿಡಿಯುವಂತೆ ಆದೇಶ ಪತ್ರ, ಸೈಟ್‌ಗೆ ಸಂಬಂಧಿಸಿದ ಪ್ರತಿಯೊಂದು ಮೂಲ ದಾಖಲೆಯನ್ನೂ ಬ್ಯಾಂಕಿಗೆ ಅಡಮಾನ ಮಾಡುವ ಪತ್ರ….. ಹೀಗೆ ಒಂದು ಕಂತೆ ಒಪ್ಪಿಸಿ ಎಂದು ಆದೇಶಿಸುವ ಪತ್ರ. ಆಶ್ಚರ್ಯ ಎಂದರೆ ಹಿಂದಿನ ಇಂಟರ್ವ್ಯೂನಲ್ಲಿ ಹೇಳಿದಂತೆ ಪ್ಲಾನ್ ಬದಲಾಯಿಸುವ, ಅಂಡರ್ ಟೇಕಿಂಗ್ ಕೊಡುವ ಯಾವುದೇ ಸೂಚನೆ ಪ್ರಸ್ತಾಪ ಇರಲಿಲ್ಲ! ಇನ್ನೊಂದು ಹೇಳೋದು ಮರೆತಿದ್ದೆ. ಆಗಿನ್ನೂ ಜೆರಾಕ್ಸ ಮೆಶಿನ್ ಇಲ್ಲಿಗೆ ಬಂದಿರಲಿಲ್ಲ ಮತ್ತು ನಕಲು ಪ್ರತಿ ಸಲ್ಲಿಸಬೇಕಿತ್ತು. ನಕಲು ಪ್ರತಿ ಅದಕ್ಕೆ ಗೆಜೆಟೆಡ್ ಆಫೀಸರ್ ರುಜು… ಇದೆಲ್ಲಾ ತುಂಬಾ ಗೋಜಿನ ಸಂಗತಿ. ಈಗ ಅದರ ವಿಷಯ ಬೇಡಿ. ಮುಂದೆ ಯಾವಾಗಲಾದರೂ ಸಮಯ ಸಂದರ್ಭ ನೋಡಿ ವಿವರವಾಗಿ ಹೇಳುತ್ತೇನೆ.
ಮೂವತ್ತು ಸಾವಿರದಿಂದ ಮೂವತ್ತಮೂರು ಸಾವಿರ ಸಾಲ ಹೆಚ್ಚಿಸಿಕೊಳ್ಳಲು ನಾನು ಪಟ್ಟ ಪಾಡು ಹೇಳಿದೆ ನೋಡಿ. ಈ ನಲವತ್ತು ವರ್ಷದಲ್ಲಿ ಎಂತಹ ಬದಲಾವಣೆ ಆಗಿದೆ ಅಂದರೆ ಕೋಟಿ ಕೋಟಿ ಸಾಲ ಕೊಡಲು ಬ್ಯಾಂಕ್‌ನವರು ಕ್ಯೂ ನಿಂತಿರುತ್ತಾರೆ. ಸಾಲ ಪಡೆದು ಅದನ್ನು ಹಿಂದಕ್ಕೆ ಕೊಡಲು ಸಹಾಯ ಮಾಡಲು ಮತ್ತೂ ಹಲವು ಬ್ಯಾಂಕ್‌ಗಳು ಇರ್ತವೆ! ಜತೆಗೆ ಸಾವಿರ ಸಾವಿರ ಕೋಟಿ ಸಾಲ ಮಾಡಿ ಜನ ವಿದೇಶಕ್ಕೆ ಓಡಿ ಹೋಗಿ ಬಿಡ್ತಾರೆ. ಇದೆಲ್ಲಾ ಬಿಟ್ಟ ಕಣ್ಣು ಬಾಯಿಗಳಿಂದ ನೋಡುತ್ತಿರುವ ನನ್ನಂತಹವರಿಗೆ ನಾವು ಅರ್ಜೆಂಟ್ ಆಗಿ ಒಂದು ಇಪ್ಪತ್ತು ಮೂವತ್ತು ವರ್ಷ ಮೊದಲೇ ಹುಟ್ಟಿ ಬಿಟ್ಟೆವಾ ಅನ್ನುವ ಸಂಶಯ ಕಾಡುತ್ತದೆ. ಜತೆಗೆ ಈಚೆಗೆ ಹುಟ್ಟಿದವರ ಮೇಲೆ ಒಟ್ಟೆ ಕಿಚ್ಚು ಸಹಾ.(ಒಟ್ಟೆ ಅನ್ನೋದನ್ನ ಹೊಟ್ಟೆ ಅಂತ ಓದಿಕೊಳ್ಳಿ. ಹ ಕಾರ ಹೊಡೆದೋಡಿಸಿ ಎನ್ನುವ ಗುಂಪಿನಲ್ಲಿ ಈಚೆಗೆ ಒಂದು ಭಾಷಣ ಕೇಳಿದೆ. ಅವತ್ತಿಂದ ಹ ಕಾರ ಓಡಿಸಲು ಪ್ರಯತ್ನ ಪಡುತ್ತಾ ಇದ್ದೇನೆ!) ಮತ್ತೂ ಕೆಲವು ಸಲ ನಮ್ಮ ನಂತರದ ಪೀಳಿಗೆಯವರು ಕಷ್ಟ ಕೋಟಲೆಗಳ ಸಂಸಾರ ತಾಪತ್ರಯ ಮುಂತಾದ ಎಲ್ಲವನ್ನೂ ನೋಡಿದಾಗ ನಮ್ಮ ಕಾಲ ಎಷ್ಟು ಚೆನ್ನಾಗಿತ್ತು, ಆಗ ಹುಟ್ಟಿ ನಾವು ಪ್ರಪಂಚ ಸಂಪೂರ್ಣ ಅರಿಯುವ ಹಾಗೆ ಆಯಿತು ಅನಿಸುತ್ತೆ. ಮೊನ್ನೆ ಯಾರದೋ ದೊಡ್ಡ ಶ್ರೀಮಂತರ ಸಂಗತಿ ನೋಡುತ್ತಿದ್ದೆ. ಅವರ ಬಗ್ಗೆ ಬರೆಯುತ್ತಾ (ಇದರ ಲೇಖಕ ನನ್ನ ಗೆಳೆಯನೇ) ಅವರ ಬಳಿ ಒಂದು ಪಾಸ್ ಪೋರ್ಟ್ ಸಹ ಇರಲಿಲ್ಲ ಎಂದು ವಿವರಿಸುತ್ತಾರೆ. ಹಾಗೆ ನೋಡಿದರೆ ನನ್ನ ಪೀಳಿಗೆಯ ಸುಮಾರು ಜನರಲ್ಲಿ ಪಾಸ್ ಪೋರ್ಟ್ ಇಲ್ಲ, ನಮ್ಮ ಹಿಂದಿನ ಪೀಳಿಗೆಯವರಲ್ಲಿ ಶೇ.೦೦೧ರಷ್ಟು ಮಂದಿ ಹತ್ತಿರ ಪಾಸ್ ಪೋರ್ಟ್ ಇತ್ತು. ಅವರ ಹಿಂದಿನ ಪಿಳಿಗೆಯವರಲ್ಲಿ ಇದು ಇನ್ನೂ ಕಡಮೆ. ನಮ್ಮ ಮುಂದಿನ ಪೀಳಿಗೆಯವರು ನಮಗಿಂತ ಇಂಪ್ರೂವ್ಡ್. ಅವರ ನಂತರದ ಪೀಳಿಗೆ ಇನ್ನೂ ಇಂಪ್ರೂವ್ಡ್. ಅವರ ಮುಂದಿನ ಪೀಳಿಗೆ ಅಂದರೆ ಈಗ ಇಪ್ಪತ್ತರ ಸುತ್ತ ಮುತ್ತಲಿನ ಯುವಕರಲ್ಲಿ ಪಾಸ್‌ಪೋರ್ಟ್ ಇಲ್ಲದಿರುವ ಪಾಪಿಯನ್ನು ಹುಡುಕಬೇಕು! ಮಗು ಹುಟ್ಟುವ ಮೊದಲೇ ಪಾಸ್ ಪೋರ್ಟ್ ರೆಡಿ ಮಾಡಿ ಇಟ್ಟುಕೊಳ್ಳುವ ಕಾಲ ಬರಬಹುದು ಎಂದು ನನ್ನ ಊಹೆ!
ಮೂವತ್ತು ಮೂರು ಸಾವಿರ ರೂಪಾಯಿ ಸಾಲ ಮನೆಕಟ್ಟಲು ಸಾಂಕ್ಷನ್ ಆಗಿರುವ ಸಂಗತಿ ತಿಳಿಸಿದೆ. ಇಲ್ಲಿಂದ ಮುಂದೆ ನನಗೆ ಎಲ್ಲವೂ ಹೊಸದು ಹೊಸಪಾಟ ಮತ್ತು ಅನುಭವ. ಈಗ ಅದರ ವಿವರ.
ಈಗ ಮನೆ ಕಟ್ಟುವುದು ಅಂದರೆ ಐವತ್ತು ವರ್ಷದ ಹಿಂದೆ ಮನೆ ಕಟ್ಟಿದ ಅನುಭವಕ್ಕಿಂತಲೂ ಬಹಳ ಸುಲಭ ಮತ್ತು ಎಲ್ಲವೂ ಇನ್ಕ್ಲೂಡಿಂಗ್ ಎಕ್ಸ್ಪರ್ಟ್ ಸಲಹೆ ಸಹಿತ ನಿಮಗೆ ಲಭ್ಯ.
ಆಗ ಮನೆ ಕಟ್ಟುವಲ್ಲಿ ಮುಖ್ಯವಾಗಿ ಎರಡು ಗುಂಪು. ಒಂದು ಕಂಟ್ರಾಕ್ಟರ್‌ಗೆ ಕೆಲಸ ಒಪ್ಪಿಸುವುದು, ಅವನು ಕೇಳಿದಾಗ ಕೇಳಿದಷ್ಟು ದುಡ್ಡು ಕೊಟ್ಟು ಮನೆ ಮುಗಿದ ನಂತರ ಬಂದು ಒಳ ಸೇರುವುದು. ಇದು ಸುಮಾರಾಗಿ ಶೇ ತೊಂಬತ್ತರಷ್ಟು ಜನ ಮಾಡುತ್ತಿದ್ದ ಕೆಲಸ. ಇದಕ್ಕೆ ಆಗಿನ ಟರ್ಮಿನಾಲಜಿ ಅಂದರೆ ಫುಲ್ ಕಾಂಟ್ರಾಕ್ಟ್. ಇನ್ನೊಂದು ವಿಧಾನ ಎಂದರೆ ಇದಕ್ಕೆ ಪೀಸ್ ವರ್ಕ್ ಎಂದು ಹೆಸರು.
ಜನ ಏಕೆ ಫುಲ್ ಕಾಂಟ್ರಾಕ್ಟ್ ವಿಧಾನ ಆರಿಸುತ್ತಿದ್ದರು ಎಂದರೆ ಇವರು ವಾಸ ಮಾಡುವ ಜಾಗಕ್ಕೂ ಸೈಟ್ ಜಾಗಕ್ಕೂ ಇರುವ ದೂರ, ಬೇರೆಯವರಿಗೆ ಕೆಲಸ ಒಪ್ಪಿಸಿ ನಿರಾಳವಾಗಿರಬಹುದು ಎನ್ನುವ ಮನೋಭಾವ. ಜತೆಗೆ ಗೊತ್ತಿರುವ ಅಥವಾ ನೆಂಟಸ್ತಿಕೆಯಲ್ಲಿ ಕಾಂಟ್ರಾಕ್ಟ್ ಕೊಡುವುದು. ಇದಕ್ಕೆ ಸಮಾನಾಂತರ ಅಂದರೆ ಪೀಸ್ ವರ್ಕ್. ಫುಲ್ ಕಾಂಟ್ರಾಕ್ಟ್ ನವರು ಸಖತ್ ದುಡ್ಡು ಹೊಡಿತಾರೆ ಎನ್ನುವ ನಂಬಿಕೆ ಮತ್ತು ಪೀಸ್ ವರ್ಕ್ ಆದರೆ ಸಿಕ್ಕಾಪಟ್ಟೆ ದುಡ್ಡು ಮಿಗಿಸಬಹುದು ಎನ್ನುವ ನಂಬಿಕೆ! ಈ ನಂಬಿಕೆ ಇರುವ ಸುಮಾರು ಸ್ನೇಹಿತರು ಸೈಟ್ ಹತ್ತಿರ ಮನೆ ಬಾಡಿಗೆ ತಗೊಂಡು ವಾಸಿಸೋದು ನನಗೆ ಗೊತ್ತು. ಇನ್ನೂ ಒಂದು ತಮಾಷೆ ಅಂದರೆ ಪೀಸ್ ವರ್ಕ್ ಯೋಜನೆ ಪ್ರಯೋಗಿಸಿ ಮನೆ ಕಟ್ಟಿಕೊಂಡ ಸುಮಾರು ಗುಂಪಿನಲ್ಲಿ ಕೆಲವರು ಕಂಟ್ರಾಕ್ಟರ್ ಆಗಿ ಬಿಡುತ್ತಾರೆ ಮತ್ತು ಮನೆ ಕಟ್ಟಿಸಿ ಕೊಡುತ್ತಾರೆ. ಕಳ್ಳತನ ಮಾಡಲು ಯಾವುದೇ ಟ್ರೈನಿಂಗ್ ಬೇಡ ಎಂದು ಅದು ಯಾರೋ ದಾರ್ಶನಿಕ ಹೇಳಿದ್ದಾನೆ ಎಂದು ಕೇಳಿದ್ದೇನೆ. ಅದೇ ರೀತಿ ಈ ಕಂಟ್ರಾಕ್ಟರ್ ವೃತ್ತಿ ಸಹ ಎಂದು ನನ್ನ ನಂಬಿಕೆ.
ಮತ್ತೆ ಮನೆ ಕತೆಗೆ. ಮೂವತ್ಮೂರು ಸಾವಿರ ಸಾಂಕ್ಷ ನ್ ಆಗಿರುವ ಸಂಗತಿ ಸುಮಾರು ಜನಕ್ಕೆ ಪ್ರಚಾರ ಮಾಡಿದ್ದೆ. ಅದೂ ಮೂವತ್ತು ಸಾವಿರ ಅಂತ ಇದ್ದದ್ದು ಮೂವತ್ಮೂರು ಆಗಿದ್ದು ಹೆಮ್ಮೆಯಿಂದ ಎಲ್ಲರಿಗೂ ಹೇಳಿಕೊಂಡು ತಿರುಗಿದ್ದೆ.
ಸತ್ಯಣ್ಣ ನ ಹತ್ತಿರ ಸಾಲ ಮಂಜೂರು ಆಗಿರುವ ಸುದ್ದಿ ತಿಳಿಸಿದೆ.
“ಫುಲ್ ಕಾಂಟ್ರಾಕ್ಟ್ ಕೊಡ್ತೀಯಾ ಪೀಸ್ ವರ್ಕಾ…”
“ಅದಕ್ಕೂ ಇದಕ್ಕೂ ಏನು ಡಿಫರೆನ್ಸ್….”
“ಫೀಸ್ ವರ್ಕ್ ಅಂದರೆ ನಿನಗೆ ಕೆಲಸದ ಹೊರೆ ಹೆಚ್ಚು. ಫುಲ್ ಅಂದರೆ ದುಡ್ಡು ಹೆಚ್ಚು…..”
“ನನ್ನ ಪ್ರಾಬ್ಲಂ ದುಡ್ಡಿಂದೆ…..” ಅಂತ ವಿವರಿಸಿದೆ.
“ಹಾಗಿದ್ರೆ ಗೋಪು ಪೀಸ್ ವರ್ಕ್ ಮಾಡೋಣ. ಐ ವಿಲ್ ಗೈಡ್ ಯು….”
ಸರೀನಾ ಹೀಗೆ ಮನೆ ಕಟ್ಟಲು ಮೊದಲನೇ ಅಂಕ ರೆಡಿ ಆಯ್ತಾ. ಬ್ಯಾಂಕ್‌ಗೆ ಹೋಗಿ ಪತ್ರಗಳ ಕಂತೆ ಕೊಟ್ಟು ಮೂವತ್ಮೂರು ಸಾವಿರ ಚೆಕ್ ತರಬೇಕಿತ್ತು. ಅದಕ್ಕೆ ಮೊದಲು ಪೀಸ್ ವರ್ಕ್ ಮೇಸ್ತ್ರಿ ಹುಡುಕ ಬೇಕಿತ್ತು. ಆಗ ನಾನು ಮನೆ ಕಟ್ಟಲು ಯೋಜಿಸಿದ್ದ ಏರಿಯಾದಲ್ಲಿ ಸುಮಾರು ಜನ ಮೇಸ್ತ್ರಿಗಳು. ಗಾರೆ ಕೆಲಸದವರು, ಹೆಣ್ಣಾಳು ಗಂಡಾಳು ಇಟ್ಟುಕೊಂಡು ಮೇಸ್ತ್ರಿ ಕೆಲಸ ಮಾಡೋರು. ಮೂಲಭೂತವಾಗಿ ಈ ಮೇಸ್ತ್ರಿ ಸಹ ಒಬ್ಬ ಗಾರೆ ಕೆಲಸದವನೇ. ಗಾರೆ ಕೆಲಸಗಾರ ಇಲ್ಲ ಅಂದಾಗ ಇವನೇ ಕರಣೆ ಹಿಡಕೊಂಡು ಕೆಲದ ಮಾಡುವ ಕೆಲಸಗಾರ. ಮೇಸ್ತ್ರಿ ಹುಡುಕಾಟ ಹೇಗೆ ಮಾಡಿದೆ ಎನ್ನುವುದು ಮತ್ತೊಂದು ರೋಚಕ ಸಂಗತಿ.
“ಗೋಪಿ ಯೂ ಗೋ ಅಂಡ್ ಸೀ ಸಮ್ ಹೌಸಸ್….” ಅಂತ ಸತ್ಯಣ್ಣ ನನ್ನನ್ನು ಫೀಲ್ಡ್‌ಗೆ ಬಿಟ್ಟದ್ದು ಇನ್ನೂ ಹಸಿರು ಹಸಿರು ನೆನಪು ನನಗೆ.
“ಫೀಸ್ ವರ್ಕ್ ಮಾಡಿಸಕ್ಕೆ ಮೊದಲು ಒಂದು ಟೇಪ್ ಕೊಂಡ್ಕೋ, ಟೇಪ್ ರಸಮಟ್ಟ ಎರಡೂ ಇಟ್ಕೋಬೇಕು….” ಅಂತ ಮತ್ತೊಬ್ಬ ಗೆಳೆಯ ಸೂಚನೆ ಇತ್ತ. ಟೇಪ್ ಎರಡು ತರಹ ಬರುತ್ತೆ, ಒಂದು ಸ್ಟೀಲ್‌ದು ಮತ್ತೊಂದು ಬಟ್ಟೆ ಟೇಪ್ ಅಂತ ಮೊದಲ ಬಾರಿಗೆ ಗೊತ್ತಾಯಿತು. ಸ್ಟೀಲ್ ಟೇಪ್ ಅಂದರೆ ಜೇಬಿನಲ್ಲಿ ಇಡಬಹುದಾದ ಎರಡು ಮೂರು ಇಂಚಿನ ವ್ಯಾಸದ್ದು. ಬಟ್ಟೆ ಟೇಪ್ ಅಂದರೆ ಬ್ಯಾಗ್‌ನಲ್ಲಿ ಇಟ್ಟುಕೊಳ್ಳುವಂತಹದ್ದು. ಕೈಯಲ್ಲಿ ಬ್ಯಾಗ್ ಹಿಡಿದು ಓಡಾಡೋದು ಆಗ ನನಗೆ ಅಭ್ಯಾಸ ಇಲ್ಲ. ಕೈ ಬೀಸಿಕೊಂಡು ಓಡಾಡಿ ಅಭ್ಯಾಸ (ಈಗ ಕೈಯಲ್ಲಿ ಬ್ಯಾಗ್ ಇಲ್ಲದೇ ನಾನು ಹೊಸಲು ದಾಟುವುದಿಲ್ಲ. ಸಂಸಾರ ಕಟ್ಟಿಕೊಂಡ ಮೇಲೆ ಹೊರಬೇಕಾದ ಹಲವು ಸಹಸ್ರ ಜವಾಬ್ದಾರಿಗಳಲ್ಲಿ ಕೈಯಲ್ಲಿ ಬ್ಯಾಗ್ ಹಿಡಿಯುವುದೂ ಒಂದು). ಅದರಿಂದ ಒಂದು ಸ್ಟೀಲ್ ಟೇಪ್ ಕೊಂಡೆ, ಒಂದೂವರೆ ರುಪಾಯಿ ಅದಕ್ಕೆ ಆಗ. ಒಂದೇ ತೊಂದರೆ ಅಂದರೆ ಸ್ಟೀಲ್ ಟೇಪ್ ಬರೀ ಹತ್ತು ಅಡಿ ಅಳೆಯಬಹುದು, ಬಟ್ಟೆಯದ್ದು ಆದರೆ ಐವತ್ತು ನೂರು ಇನ್ನೂರು… ಅಡಿ ಅಳೆಯ ಬಲ್ಲದ್ದು. ಸತ್ಯಣ್ಣ ಅವನ ಹತ್ತಿರ ನೂರಾ ಐವತ್ತು ಅಡಿಯ ಟೇಪ್ ಇಟ್ಟುಕೊಂಡಿದ್ದ, ಅದನ್ನು ಒಂದು ಬ್ಯಾಗ್‌ನಲ್ಲಿ ಇಟ್ಟುಕೊಂಡು ಬರುತ್ತಿದ್ದ. ಅವನಿಗೆ ಅದು ಭೂಷಣ, ನನಗೆ ಜೇಬಲ್ಲಿನ ಸ್ಟೀಲ್ ಟೇಪ್ ಇದು ನನಗೆ ಭೂಷಣ!
(ಮುಂದುವರೆಯುತ್ತದೆ…)

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.
As usual a good write up.
ಹರಿ,ಧನ್ಯವಾದಗಳು,ಗೋಪಾಲಕೃಷ್ಣ
ಚೆನ್ನಾಗಿದೆ ನಿಮ್ಮ ಅನುಭವ. ಬಹುಷಃ ನಾವೇ ಧನ್ಯರು. ೮೯ರ ವೇಳೆಗೆ Canfin ನಿಂದ ಸಾಲ ಸಿಕ್ಕಿತ್ತು
ಚಂದ್ರಿಕಾ ಧನ್ಯವಾದಗಳು,ಗೋಪಾಲಕೃಷ್ಣ