“ಬರ ತಿಂಗ್ಳು ಆಲ್ ನಿಲ್ಲುಸ್ತೀನಿ. ನಮ್ ಅಸ ಗಬ್ಬಾಗೈತಿ. ಉಲ್ ತರಸ್ಬೇಕು. ಅಲ್ಲಿವರ್ಗೂ ಗೇಟ್ ಹಾಕಳಿ. ಆಕಾಸ್ವಾಣಿಲಿ ವಾರ್ತ್ ಬತ್ತೈತಿ. ಎಸೊಂದು ಟೇಮ್ ಆಗೈತಿ. ದ್ವಾಸ್ಗೆ ಹಾಕಿದ್ದೆ ಅಯ್ಯೋ! ಕ್ವಾಣೆಲಿ ಶಿಂಕ್ ಹತ್ರ ಕಾಪಿ ಇಟ್ಟಿದ್ದೆ ಎಲ್ಲ ಹಾರೋಗಿರ್ತೈತಿ” ಎಂದು ಮನೆಗೆ ಬೇಗ ಬೇಗನೆ ಹೋಗುತ್ತಾ ಇನ್ನೂ ಗೇಟ್ ಹತ್ತಿರವೆ “ಮೊಮ್ಮೊಗಳಿಗೆ ವ್ಯಾಸ್ಲೆಣ್ಣೆ ತತ್ತಾ. ಕಾಲ್ ಒಡದು ಸೀಳ್ ಬುಟ್ಟವೆ, ಸೆಟಾರ್ ಹಾಕಂಡು, ಕಾಲ್ಚೀಲ, ಕುವಾಲಿ, ಕೈಗ್ ಬ್ಲೌಸ್ ಇಕ್ಕಂಡ್ರು ತಪ್ನಿಲ್ಲ.” ಎನ್ನುವುದು ಜೋರಾಗಿ ಕೇಳಿಸಿತು.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಹನ್ನೆರಡನೆಯ ಬರಹ ನಿಮ್ಮ ಓದಿಗೆ
ನಮ್ ಪಕ್ದ್ಮನೆ ಸುಬ್ಬಮ್ಮ ಹಸು, ಎಮ್ಮೆ ಎಲ್ಲಾ ಕಟ್ಟಿದಾರೆ. ವರ್ತನೆಗೆ ಹಾಲನ್ನೂ ಹಾಕುತ್ತಾರೆ. ಹಾಲ್ ಹಾಕಿ ಸುಮ್ನೆ ಹೋಗ್ತಾರೆ ಅಂದ್ಕೊಂಡ್ರ? ಅಂದ್ ಹಾಗೆ ಅವರೆ ಬರ್ತಿದಾರೆ….. ಸುಮ್ನೆ ಹೋಗಲ್ಲ…. ಏನಾದರೂ ಇಂಗ್ಲಿಷ್ ಹೇಳಿಕೊಟ್ಟೆ ಹೋಗ್ತಾರೆ.. ಹಾಲ್ ತೆಗೆದುಕೊಂಡು ಅವಸರದಲ್ಲಿ ಬಂದ ಸುಬ್ಬಮ್ಮ ಹೇಳಿದ್ದು ಹೀಗೆ…
“ಬರ ತಿಂಗ್ಳು ಆಲ್ ನಿಲ್ಲುಸ್ತೀನಿ. ನಮ್ ಅಸ ಗಬ್ಬಾಗೈತಿ. ಉಲ್ ತರಸ್ಬೇಕು. ಅಲ್ಲಿವರ್ಗೂ ಗೇಟ್ ಹಾಕಳಿ. ಆಕಾಸ್ವಾಣಿಲಿ ವಾರ್ತ್ ಬತ್ತೈತಿ. ಎಸೊಂದು ಟೇಮ್ ಆಗೈತಿ. ದ್ವಾಸ್ಗೆ ಹಾಕಿದ್ದೆ ಅಯ್ಯೋ! ಕ್ವಾಣೆಲಿ ಶಿಂಕ್ ಹತ್ರ ಕಾಪಿ ಇಟ್ಟಿದ್ದೆ ಎಲ್ಲ ಹಾರೋಗಿರ್ತೈತಿ” ಎಂದು ಮನೆಗೆ ಬೇಗ ಬೇಗನೆ ಹೋಗುತ್ತಾ ಇನ್ನೂ ಗೇಟ್ ಹತ್ತಿರವೆ “ಮೊಮ್ಮೊಗಳಿಗೆ ವ್ಯಾಸ್ಲೆಣ್ಣೆ ತತ್ತಾ. ಕಾಲ್ ಒಡದು ಸೀಳ್ ಬುಟ್ಟವೆ, ಸೆಟಾರ್ ಹಾಕಂಡು, ಕಾಲ್ಚೀಲ, ಕುವಾಲಿ, ಕೈಗ್ ಬ್ಲೌಸ್ ಇಕ್ಕಂಡ್ರು ತಪ್ನಿಲ್ಲ.” ಎನ್ನುವುದು ಜೋರಾಗಿ ಕೇಳಿಸಿತು. ನಂತರ ಗೊತ್ತಿಲ್ಲ ನಾನೂ ಅನ್ಯ ಕೆಲಸದಲ್ಲಿ ವ್ಯಸ್ತಳಾದೆ.
ಸುಮಾರು ಹನ್ನೊಂದು ಗಂಟೆಯ ಸಮಯ ಇರಬೇಕು. ನಮ್ಮ ಏರಿಯಾದ್ದೆ ಒಂದು ಪೂಜೆ ಇತ್ತು. ಅದಕ್ಕೆ ರೆಡಿಯಾಗಿ ನಾನು ಹೋಗೋದಕ್ಕೂ ಸುಬ್ಬಮ್ಮ ಬರೋದಿಕ್ಕೂ ಒಂದೇ ಆಯ್ತು. ಅವರು ನನ್ನ ಸೀರೆಯನ್ನು ನೋಡಿ “ವಾಟ್ರುಗುಪ್ ಸೀರೆ ಮೇಲೊಂದು ಡಿಜೈನ್ ಚೆಳಗೊಂದು ಡಿಜೈನ್, ಪೋಡ್ರು, ಲಿಫ್ಟಿಕ್, ನೈನ್ಪಾಲಿಸ್ ಎಲ್ಲಾ ಹಾಕಂಡಿದ್ದೀಯ” ಎಂದು ಮಾತನಾಡುತ್ತಲೇ ಹೊಸ ಮನೆಯೊಡತಿಯ ಕೈ ಹಿಡಿದು “ಕಾಂಗ್ಲಿನೇಷನ್ ಇವ್ನು ನಡುಕ್ಲು ಮಗನ ಮಗ ಮಮ್ಮಗ. ಅಯ್ಯೋ ನಿನ್ನೆ ಸೆಂಡಾಪ್ ಇತ್ತಂತೆ ಚನ್ನಾಗಿ ಓದ್ತನೆ ಅಂತ ಪ್ರೇಜ್ ಕೊಟ್ಟು ಸೆಕೆಂಡ್ ಕೊಟ್ಟು ಕಳ್ಸವ್ರೆ, ಇನ್ಮೇಕೆ ಇಸ್ಕೂಲ್ ಇಲ್ವಂತೆ. ಕಂಪಿಟ್ರು ತಕಂಡವ್ನೆ. ಬರೋ ವಾರ ಎಗ್ಜಾಮ್ ಅದ್ಕೆ ರಜ ಕೊಟ್ಟವ್ರೆ. ಆದ್ರು ಅಪ್ಪ ಅವ್ವನ್ ಆಧಾರ ಕಾಲ್ಡು ಎಲ್ಲಾ ಡಾಕ್ಲುಮೆಂಟ್ ಎಲ್ಲಾ ಪಿಯೆಸಿ ಡಿಬಾರ್ಮೆಂಡ್ಗೆ ಕಳುಸ್ ಬೇಕಂತೆ. ಎಲ್ಲಾ ಉಡ್ಲುಗು ಮಸಜ್ ಹಾಕ್ಯವರಂತೆ. ಊಟ ಆದ್ಮೇಲೆ ಆಸ್ಪತ್ರಿ ತಾವು ಓಗಿ ನರ್ಸಿ ಕೈಲ್ ಬಿರುಕ್ಲಿಗೆ ಔಸ್ತಿ ಇಸ್ಕಂಡು ವೋಗ್ ಬೇಕು” ಎಂದವರೆ ಒಂದೇ ಸಮನೆ ವರದಿ ಒಪ್ಪಿಸುವರಂತೆ ಮಾತನಾಡಿದ್ದು ಅಷ್ಟೇ ಅಲ್ಲ ಹಾಗೆ ಮಾಡಿದರು ಕೂಡ.
ಸಂಜೆ ಹೊತ್ತು ನಾನು ಹಾಗೆ ಹೊರಗೆ ಕುಳಿತಿರಬೇಕಾದರೆ ಮತ್ತೆ ಸುಬ್ಬಮ್ಮನ ಧ್ವನಿ ಕೇಳಿಸಿತು. ‘’ಕೊಪ್ರೆಣ್ಣೆ ಬೆರ್ಸಿ ಅಚ್ಕಂಡ್ ಪಾಶ್ಟ್ಲಿಕ್ ಕಟ್ಟಕಳಿ ಎಂದ್ರ…? ತಗಬಾ ಇಲ್ಲಿ ಏನ್ ಕೊಟ್ಟವ್ರೆ ನೋಡನ…..! ಶಾಂಪ್ ಆಕಂಡಿ ತಲೆ ಬರ್ಬರ್ಕ್ಲಾಗೈತೆ……. ಮಾಡ ಬೇರೆ ಆಗಿತ್ತಾ…. ಕೂದ್ಲು ಸರಿಯಾಗೆ ಒಣ್ಗನಿಲ್ಲ! ಕಲ್ಡಿ ತಲೆ ಆಗೈತೆ, ಕೂದ್ಲು ಬೆಳೆಯ ಆಯಲ್ ತಕಬೇಕು”. ಎಂದು ಮೊಮ್ಮಗನಿಗೆ ಹೇಳುತ್ತ “ಟಿ.ಬಿ. ಸುಚ್ಚು ವಸಿ ಲೂಜಾಗೈತೆ ನೋಡ್ ಪಿಟ್ ಮಾಡು, ಜೀ ಟಿವಿ ಆಕು ಟಿಬಿ ಆಕು…. ಜೀಟಿಬಿ ಬತ್ತದೆ. ಬ್ಯಾರೆದ್ರಲ್ ಆಡಟೀಸ್ ಬತ್ತದೆ… ವಸಿ ಕ್ಯಾನಲ್ ಬದ್ಲಿಸು…. ಡಿಡಿ ಚಂದ್ನ ಆಕು” ಎನ್ನುತ್ತಲೇ ಇದ್ದ ಧ್ವನಿ ಮೆಲ್ಲಗೆ ಜೋರಾಗಿ ಕೇಳಿಸುತ್ತಿತ್ತು. ಸ್ವಲ್ಪ ತಡ ಮಾಡಿದ ಮೊಮ್ಮಗನಿಗೆ “ಅಯ್ಯೋ ಬೇಕುಪ್ಪ ಕನ್ಪೀಜ್ ಮಾಡ್ಕಬೇಡ…” ಎನ್ನುತ್ತಿದ್ದಂತೆ ನಾನು ಕಪ್ ಹಿಡಿದು ಹೆಪ್ಪಿಗೆ ಮೊಸರು ಕೊಡಿ ಎಂದು ಅವರ ಎದಿರು ನಿಂತೆ ನಿಂತೆ. ಸುಬ್ಬಮ್ಮ “ಆಕು ಯಾವುದ್ನಾರವ.. ಟಿಬಿಯ. ಅದರಲ್ಲಿ ಕುಂಬ್ ಮ್ಯಾಳ್ದ್ ಸುದ್ದಿ ಬತ್ತದೆ” ಎಂದು ನನ್ನತ್ತ ತಿರುಗಿ, ಎಲ್ಲ ಸಾನ ಮಾಡ್ಕತಾ ಅವ್ರೆ. ನಾವು ವೋಗನಾ ಅಂದ ನನ್ನ ಮಮ್ಮಗ. ಯಾವ್ದೋ ಯಾಕ್ಲ ಡಾಟ್ ಕಾಮ್ ಅಂತ ಅದಂತಲಾ ಅದ್ರಲಿ ಬುಕ್ ಮಾಡ್ಬೇಕಂತೆ ಅಯ್ಯೋ! ನನ್ನ ಮಗ ಎಷ್ಟು ಓದ್ಕಂಡವನೆ ಅಂತವ….! ಎಲ್ಲನುವೆ ಕರಟ್ಟಾಗಿ ಏಳ್ತಾನೆ. ಇಲ್ಲಿವರ್ಗೂ ಎಲ್ಲಾದ್ರು ಪಸ್ಟ್ ಕ್ಲಾಸೆಯ! ಅಯೋನಿನ್ ಮನಿ ಕಾಯ್ವಾಗ ಪೋನ್ ಇಡ್ಕಬುಟ್ರೆ ಎಸೊಂದ್ ವಿಸ್ಯ ಯೋಳ್ತಾನೆ ಅಂತಿಯಾ ನಿಜಕ್ಕೂ ಅವನು ಈ ಮೇಲೆಯ!
ಸೂ ಇಕ್ಕಬುಟ್ರೆ…. ಸೂಟ್ ಬೂಟು… ಇಕ್ಕಬುಟ್ರೆ ಇನ್ಸ್ಪಟ್ರ್ ಕಂಡಂಗ್ ಕಾಣ್ತಾನೆ ಈ ಸತಿ ಏನಾದ್ರ ಆಗ್ಲಿ…. ಓಂಡನಾದ್ರೂ ಆಗ್ಲಿ… ಚುಜ್ಕಿನಾದರೂ ಆಗ್ಲಿ… ಒಂದು ಬೇಕ್ ಕೊಡ್ಸ್ ಬೇಕು ನಿನ್ಗೆ ಮಸರು ಬೇಕಾ ಎಪ್ಪಿಗೆ” ಎನ್ನುತ್ತಾ ಅಡುಗೆ ಮನೆಗೆ ಹೋದರು.
ಬೆಳಗ್ಗೆಯಿಂದ ಸುಬ್ಬಮ್ಮನ ಇಂಗ್ಲಿಷ್ ಕೇಳಿಸಿಕೊಂಡಿದ್ದ ನನಗೆ ಅವಳ ಮಾತುಗಳನ್ನೆ ಇರಿಸಿಕೊಂಡು ಕ್ಯಾತೆ ಮಾಡುತ್ತಾ ಉತ್ತರ ಹುಡುಕುವ ಪ್ರಯತ್ನ ಮಾಡಿದೆ. ನಮ್ಮ ಗ್ರಾಮೀಣರು ದಡ್ಡರಲ್ಲ. ಆಕೆ ನಮ್ಮ ‘ಅಸ ಗಬ್ಬ’ ಎಂದರಲ್ಲ ಅದು ಸರಿಯಾದ ಪ್ರಯೋಗವೆ.

1. ಸಂಸ್ಕೃತ ಭಾಷೆಯ ಪದ ಮೂಲತಃ ‘ಗರ್ಭ’ ವಿಜಾತಿಯ ಒತ್ತಕ್ಷರ ಹೊಂದಿದೆ. ಅದು ಕನ್ನಡಕ್ಕೆ ಬಂದಾಗ ಸಜಾತಿಯ ಒತ್ತಕ್ಷರ ಅರ್ಥಾತ್ ‘ಗಬ್ಬ’ ಆಗುತ್ತದೆ. ಬೇಕುಪ್ಪ ಇದು ಹಿಂದಿಯಿಂದ ಕನ್ನಡಕ್ಕೆ ಬಂದಿರುವ ಪದ. ಹಿಂದಿಯ ಬೇವಕೂಫ್ ಕನ್ನಡದಲ್ಲಿ ಬೇಕುಪ್ಪ ಆಗಿದೆ. ತಾವು > ಸ್ಥಳ ಹತ್ತಿರ ಎನ್ನುವ ಅರ್ಥವನ್ನು ಹೊಂದಿದೆ. ಕಾಲುಚೀಲ ಈ ಪದವನ್ನು ತೆಗೆದುಕೊಂಡರೆ ಅಚ್ಚ ಕನ್ನಡದ ಬನಿಯುಳ್ಳ ಪದ. ಅಕ್ಷರಶಃ ಕಾಲಿಗೆ ತೊಟ್ಟು ಕೊಳ್ಳುವ ಚೀಲ ಏನ್ ಚನ್ನಾಗಿದೆ ನೋಡಿ ಈ ಪದ. ಗ್ಲೌಸ್> ಬ್ಲೌಸ್ ಆಗಿರುವುದರಲ್ಲಿ ಕಿವಿತಪ್ಪು ಆಗಿದೆ ಎನ್ನಬಹುದು. ಲಿಪ್ಟಿಕ್ >ಲಿಪ್ಸ್ಟಿಕ್ ಇಂಗ್ಲಿಷಿನಲ್ಲಿ ಎಷ್ಟು ನಿಖರವಾಗಿದೆ ಈ ಪದ ತುಟಿಗಳಿಗೆ ಹಚ್ಚಿಕೊಳ್ಳುವ ಬಣ್ಣದ ಕಡ್ಡಿ ಎಂಬುದಾಗಿ.
2 ಆಲ್> ಹಾಲು, ಅಸ>ಹಸ, ಹಾರೋಗಿರ್ತೈತೆ > ಆರೋಗಿರ್ತೈತೆ, ಆಕಂಡಿ>ಹಾಕಿಕೊಂಡು, ಇಲ್ಲೆಲ್ಲಾ ಅ’ ಕಾರಕ್ಕೆ ‘ಹ’ಕಾರ ಬಳಸಿರುವುದನ್ನು ನೋಡಬಹುದು.
3 ಉಲ್ >ಹುಲ್ಲು, ಎಪ್>ಹೆಪ್ಪು ಶಿಷ್ಟ ಭಾಷೆಯ ಪದದಲ್ಲಿ ಒತ್ತಕ್ಷರ ಇದ್ದರೆ ಗ್ರಾಮ್ಯರು ಒತ್ತಕ್ಷರ ರಹಿತವಾಗಿ ಅದೇ ಪದಗಳನ್ನು ಉಚ್ಛರಿಸುತ್ತಾರೆ. ಉಡ್ಲು>ಹುಡುಗರು ವ್ಯಂಜನದಿಂದ ಪ್ರಾರಂಭವಾಗುವ ನಮ್ಮ ಹುಡುಗರು ಗ್ರಾಮ್ಯರಲ್ಲಿ ಸ್ವರದಿಂದ ಪ್ರಾರಂಭವಾಗುತ್ತದೆ.
4 ವೋಗು>ಹೋಗು, ಓಂಡ> ಹೋಂಡಾ ಇಲ್ಲಿ ಅವರ್ಗೀಯ ವ್ಯಂಜನದಿಂದ ಪ್ರಾರಂಭವಾಗುವ ಶಿಷ್ಟ ಪದಗಳು ಗ್ರಾಮ್ಯರಲ್ಲಿ ಸ್ವರಗಳಿಂದ ಪ್ರಾರಂಭವಾಗುತ್ತವೆ.
5 ದ್ವಾಸೆ> ದೋಸೆ, ಕ್ವಾಣೆ>ಕೋಣೆ ಇಲ್ಲೆಲ್ಲಾ ಆರಂಭಿಕ ವಿಜಾತಿಯ ಒತ್ತಕ್ಷರಗಳು ಬಂದಿರುವುದನ್ನು ನೋಡಬಹುದು.
6 ಆಕಾಸ್ವಾಣಿ>ಆಕಾಶವಾಣಿ, ಶಿಂಕ್> ಸಿಂಕ್, ಸೆಕೆಂಡ್ >ಶೇಕ್ಹ್ಯಾಂಡ್, ವಿಸ್ಯ>ವಿಷ್ಯ, ಶಾಂಪ್ >ಶ್ಯಾಂಪು ಪಾಶ್ಟ್ಲಿಕ್ >ಪ್ಲ್ಯಾಸ್ಟಿಕ್, ಸೂ>ಶೂ ಇಲ್ಲಿ ಶ>ಸ ಕಾರಗಳು ಅದಲಿ-ಬದಲಿ ಆಗಿವೆ.
7 ‘ಏಸು’ ಶಿಷ್ಟದಲ್ಲಿ ಹೃಸ್ವಸ್ವರವಾಗಿ ‘ಷ’ಗೆ ಟ ಸೇರಿಸಿಕೊಂಡು ‘ಎಷ್ಟು’ ಎಂದು ವಿಜಾತಿಯ ಒತ್ತಕ್ಷರವಾಗುತ್ತದೆ.
8 ಗೇಟ್>ಡೇಟ್, ಟೇಮ್ >ಟೈಮ್, ಸೆಟಾರ್>ಸ್ವೆಟರ್, ಬ್ಲೌಸ್>ಗ್ಲೌಸ್, ಕುವಾಲಿ>ಕುಲಾವಿ, ಲಿಪ್ಟಿಕ್> ಲಿಪ್ಸ್ಟಿಕ್, ಇಸ್ಕೂಲ್>ಸ್ಕೂಲ್, ನರ್ಸಿ>ನರ್ಸ್, ಶಾಂಪ್>ಶ್ಯಾಂಪು, ಆಧಾರ>ಆಧಾರ್, ಡಾಕ್ಲುಮೆಂಟ್>ಡಾಕ್ಯುಮೆಂಟ್ಸ್, ಇನ್ಸ್ಪೆಟ್ರು>ಇನ್ಸ್ಪೆಕ್ಟರ್, ಪಾಶ್ಟ್ಲಿಕ್ >ಪ್ಲ್ಯಾಸ್ಟಿಕ್, ಕಂಪಿಟ್ರು> ಕಂಪ್ಯೂಟರ್, ಅಡಟೀಸ್> ಅಡ್ವರ್ಟೈಸ್, ಕರಟ್ಟು>ಕರಕ್ಟ್ ಇಲ್ಲೆಲ್ಲಾ ಅನ್ಯದೇಶಿ ವ್ಯಂಜನಾಂತ ಪದಗಳು. ದೇಶಿ ಭಾಷೆಗೆ ಬಂದಾಗ ಸ್ವರಾಂತ್ಯವಾಗುತ್ತವೆ, ಇಲ್ಲವೆ ಸ್ವರದಿಂದ ಪ್ರಾರಂಭವಾಗುತ್ತವೆ. ಅಲ್ಲದೆ ಬೇರೆ ಬೇರೆ ವ್ಯಂಜನಗಳು ಮೂಲ ರೂಪದ ಪದದೊಳಗೆ ಪದಗಳನ್ನು ನೋಡಬಹುದು.
9 ಕೊಪ್ಪರಿ>ಕೊಬ್ಬರಿ, ಡಿಬಾರ್ಮೆಂಟ್ >ಡಿಪಾರ್ಟ್‌ಮೆಂಟ್ ಇಲ್ಲಿ ‘ಪ’ಕಾರ ‘ಬ’ಕಾರ ಆಗಿರುವುದನ್ನು ನೋಡಿದರೆ ಟಿ.ಬಿ.>ಟಿ.ವಿ ಇಲ್ಲಿ’ ಬ’ ಕಾರ ‘ವ’ಕಾರ ಆಗಿರುವದನ್ನು ಗಮನಿಸಬಹದು.
10 ವಾಟ್ರುಗುಪ್, ಕಾಂಗ್ಲಿನೇಶನ್, ಕನ್ಪೀಜ್, ವ್ಯಾಸ್ಲೆಣ್ಣೆ, ಸುಚ್ಚು, ಬೇಕ್, ಸ್ವಿಚ್, ಬೈಕ್ ಕ್ರಮವಾಗಿ ವಾಟರ್‌ಪ್ರೂಫ್, ಕಂಗ್ರಾಜುಲೇಶನ್, ಕನ್ಫ್ಯೂಸ್, ವ್ಯಾಸಲಿನ್, ಸ್ವಿಚ್, ಬೈಕ್‌ಗಳಾಗಿವೆ. ಇಲ್ಲಿ ಸೌಲಭ್ಯಾಕಾಂಕ್ಷೆ ಮತ್ತು ಪದಗಳು ವಸ್ತುಗಳಾದಾಗ ಅವುಗಳ ಗುಣಗಳನ್ನೂ ಆರೋಪಿಸಿ ಉಚ್ಛರಿಸುವಂತಿದೆ. ಉದಾಹರಣೆಗೆ ವ್ಯಾಸಲಿನ್ ಮುಟ್ಟಿದಾಗ ಸ್ನಿಗ್ಧ ವಸ್ತು ಎಂದೆನಿಸುತ್ತದೆ.
11 ‘ಔಷಧಿ’ ಎನ್ನುವ ಪದವು ‘ಸ’ಕಾರವನ್ನು ಪಡೆದು ವಿಜಾತಿಯ ಒತ್ತಕ್ಷರ ಪದವಾಗುವುದನ್ನು ‘ಔಸ್ತಿ’ಯಲ್ಲಿ ನೋಡಬಹುದು.
12 ಕೆಳಗೆ>ಚೆಳಗೆ, ಕಿಟಕಿ>ಚಿಟಕಿ, ಚಾನಲ್> ಕ್ಯಾನಲ್ ಇಲ್ಲಿ ‘ಕ’ಕಾರ’ಚ’ ಕಾರವಾಗಿವೆ.
13 ಕಾಪಿ>ಕಾಫಿ, ಪಸ್ಟ್ >ಫಸ್ಟ್, ಪ್ರೇಜ್>ಪ್ರೈಜ್, ಪಿಟ್>ಫಿಟ್, ಪೋನ್>ಫೋನ್, ಸೆಂಡಾಪ್>ಸೆಂಡಾಫ್ ಇಲ್ಲಿ ‘ಫ’ ಕಾರ ‘ಪ’ ಕಾರವಾಗಿದೆ.
14 ಡಿಜೈನ್>ಡಿಸೈನ್, ಎಜ್ಜಾಮ್>ಎಕ್ಸಾಮ್, ಲೂಜು>ಲೂಸ್, ಜೀಟಿಬಿ>ಜೀಟಿವಿ, ಚುಜುಕಿ>ಸುಜುಕಿ ಎಲ್ಲಿ Z ಕಾರವು ‘ಜ’ ಕಾರವಾಗಿಯೇ ಬಳಕೆಯಲ್ಲಿದೆ.
15 ಮಾಡ>ಮೋಡ, ಮಮ್ಮಗ>ಮೊಮ್ಮೊಗ, ಮಸರು>ಮೊಸರು ಇಲ್ಲಿ ಒ,ಓ ಸ್ವರಗಳು ಅ,ಆ ಸ್ವರಗಳಾಗುತ್ತವೆ, ಕಲ್ಡಿ>ಕರಡಿ ‘ರ’ ಕಾರಕ್ಕೆ ಬದಲಾಗಿ ‘ಳ’ ಕಾರ ಆದೇಶವಾಗಿರುವುದನ್ನು ನೋಡಬಹುದು.
16 ಕುಂಬ್ ಮ್ಯಾಳ ಕುಂಭ>ಮೇಳ ಇಲ್ಲಿ ಗ್ರಾಮ್ಯರಲ್ಲಿ ಅಲ್ಪಪ್ರಾಣವಾಗಿರುವುದು ಶಿಷ್ಟ ಭಾಷೆಯಲ್ಲಿ ಮಹಾಪ್ರಾಣ ಮತ್ತು ಎ>ಯಾ ಆಗಿರುವುದನ್ನು ನೋಡಬಹುದು. ಬ್ಯಾರೆ>ಬೇರೆ ಇದೂ ಎ>ಯಾ ಆಗಿರುವುದಕ್ಕೆ ಇನ್ನೊಂದು ಉದಾಹರಣೆ.
17 ಕುಲಾವಿ>ಇಲ್ಲಿ ‘ಲ’ ಮತ್ತು ‘ವ’ ಅಕ್ಷರಗಳು ಪಲ್ಲಟವಾಗಿ ಕುವಾಲಿ ಆಗುತ್ತದೆ.
18 ಪೋಡ್ರು>ಪೌಡರ್ ಇಲ್ಲಿ ‘ಒ’ಕಾರ ‘ಔ’ರ ಆಗಿರುವುದನ್ನು ಗಮನಿಸಬಹುದು.

ಏನೇ ಹೊಸದು ಬಂದರೂ ನಮ್ಮ ಗ್ರಾಮ್ಯರು ಅದು ಸರಿಯೋ? ತಪ್ಪೋ? ಅಪಾರ್ಥವೋ? ತಮ್ಮ ಜಾಯಮಾನಕ್ಕೆ ಒಗ್ಗಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಅದಕ್ಕೆ ‘ಡೇಟ್’ ಎನ್ನುವ ಬದಲು ‘ಗೇಟ್’ ಆಗಿದ್ದು, ‘ನನ್ನ ಮೊಮ್ಮಗ ಈಮೇಲ್’, ಯಾಕ್ಲ ಡಾಟ್ ಕಾಮ್‌ಗಳು ಉದಾಹರಣೆ ಎನ್ನಬಹುದು. ಇಲ್ಲಿ ಸುಬ್ಬಮ್ಮ ನೆಪಮಾತ್ರ. ಈಕೆಯ ಪದಗಳಿಗೂ ಶಿಷ್ಟಭಾಷೆಯ ಪದಗಳಿಗೂ ವ್ಯತ್ಯಾಸವನ್ನು ಹುಡುಕುವ ಪ್ರಯತ್ನ ಇದಾಗಿತ್ತು. ಗ್ರಾಮ್ಯ ಭಾಷೆಯ ಪದಗಳನ್ನು ಶಿಷ್ಟ ಭಾಷೆಯ ಪದಗಳನ್ನಾಗಿ ನೋಡಿದಾಗ ಸಿಗುವ ವ್ಯತ್ಯಾಸಗಳು ನಮ್ಮನ್ನು ಪದಮೋಹಿಗಳನ್ನಾಗಿ ಮಾಡುತ್ತವೆ. ಗ್ರಾಮ್ಯ ಪದಗಳು ಶಿಷ್ಟಭಾಷೆಯ ಪದಗಳು.. ಎಷ್ಟೊಂದು ಭಿನ್ನತೆ…..!

ವೃತ್ತಿಯಿಂದ ಉಪನ್ಯಾಸಕಿ. ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನಲವಿನ ನಾಲಗೆ’ (ಪ್ರಬಂಧ ಸಂಕಲನ) ‘ಶೂರ್ಪನಖಿ ಅಲ್ಲ ಚಂದ್ರನಖಿ’(ನಾಟಕ) ‘ಮನಸ್ಸು ಕನ್ನಡಿ’ , ‘ಲೇಖ ಮಲ್ಲಿಕಾ’, ‘ವಿಚಾರ ಸಿಂಧು’ ಸೇರಿ ಇವರ ಒಟ್ಟು ಎಂಟು ಪುಸ್ತಕಗಳು ಪ್ರಕಟವಾಗಿವೆ.
