Advertisement
ಒಳಗೊಂದು ಪರಿಸ್ಥಿತಿ.. ಹೊರಗೊಂದು ಪರಿಸ್ಥಿತಿ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಒಳಗೊಂದು ಪರಿಸ್ಥಿತಿ.. ಹೊರಗೊಂದು ಪರಿಸ್ಥಿತಿ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಮಣಿ, “ಸೆಲ್ವಿ ನನ್ನ ಮಾತು ಕೇಳು. ಅಬಾರ್ಶನ್ ಮಾಡಿಕೊಂಡರೆ ಎಲ್ಲವೂ ಸರಿಯೋಗುತ್ತದೆ. ಮುಂದೆ ಅಂತಹ ತಪ್ಪು ನಡೆಯದಂತೆ ನೋಡಿಕೊಳ್ಳೋಣ. ನೀನು ಮುಂದಕ್ಕೆ ಓದಬಹುದು. ನಾನೂ ಹೇಗಾದರು ಮಾಡಿ ರಾತ್ರಿ ತರಗತಿಗಳಿಗೆ ಹೋಗಿ ಡಿಗ್ರಿ ಮುಗಿಸಬಹುದು. ಕಾಲೇಜಿನಲ್ಲಿ ಹೇಗೊ ರಾತ್ರಿಯೊತ್ತು ಆರ್ಟ್ ತರಗತಿಗಳಿಗೆ ಪಾಠ ಮಾಡ್ತಾರೆ” ಎಂದ. ಸೆಲ್ವಿ, “ಇಲ್ಲ ನಾನು ಅಬಾರ್ಶನ್ ಮಾತ್ರ ಮಾಡಿಕೊಳ್ಳುವುದಿಲ್ಲ. ಯಾಕೆ ನನ್ನನ್ನ ಸಾಯಿಸಿ ನಿಮ್ಮ ಮಾವನ ಮಗಳ್ನ ಮದುವೆ ಮಾಡಿಕೊಂಡು ಹಾಯಾಗಿ ಇರಬೇಕು ಅಂತ ಪ್ಲಾನ್ ಮಾಡಿಕೊಂಡಿದ್ದೀಯ ಏನು?” ಎಂದಳು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಹದಿಮೂರನೆಯ ಕಂತು ನಿಮ್ಮ ಓದಿಗೆ

ಒಂದು ದೊಡ್ಡ ಬಂಗಲೆಯ ಮುಂದೆ ವಿಶಾಲವಾಗಿ ಹರಡಿಕೊಂಡಿರುವ ಗುಲ್ ಮೊಹರ್ (ಮೇತಿಂಗಳ) ಮರ ಮೈತುಂಬಾ ಹೂವುಗಳನ್ನು ಬಿಟ್ಟುಕೊಂಡು ನಿಂತಿದೆ. ಮರದ ಕೆಳಗೆ ಬುಡದ ಹತ್ತಿರ ಮಣಿ ಮತ್ತು ಸೆಲ್ವಿ ಇಬ್ಬರೂ ನಿಂತುಕೊಂಡಿದ್ದಾರೆ. ಮಣಿ ಮುಂದೆ ಸೆಲ್ವಿ ನಿಂತುಕೊಂಡು ಒಂದೇ ಸಮನೇ ಅಳುತ್ತಾ “ಬೇಡ.. ಬೇಡ.. ಅಂದರೂ ನೀನು ನನ್ನ ಮಾತು ಕೇಳಲಿಲ್ಲ. ಈಗ ಏನಾಯಿತು ನೋಡು?” ಎಂದಳು. ಮಣಿ, “ಯಾಕೆ ಏನಾಯಿತು?” ಎಂದ. “ಏನಾಯಿತಾ? ಎರಡು ತಿಂಗಳಿಂದ ಹೊರಗಾಗ್ತಾ ಇಲ್ಲ” ಎಂದು ಅವನ ಮುಖಕ್ಕೆ ಜೋರಾಗಿ ಕೈಯಿಂದ ತಿವಿದಳು. ಮೊದಲಿಗೆ ಅವನಿಗೆ ಅರ್ಥವಾಗಲಿಲ್ಲ. ಮತ್ತೆ “ಏನು?” ಎಂದ. ಸೆಲ್ವಿಗೆ ಕೋಪ ಬಂದು “ಪ್ರೆಗ್ನೆಂಟ್ ಆಗಿದ್ದೀನಿ” ಎಂದಳು. ಮಣಿ ಈಗ ತಲೆ ಮೇಲೆ ಕೈ ಇಟ್ಟುಕೊಂಡು ಕಣ್ಣುಗಳನ್ನು ಸಣ್ಣಗೆ ಮಾಡಿಕೊಂಡು ಆಲೋಚಿಸತೊಡಗಿದ. ಮಣಿ ಮತ್ತೆ “ನೀನು ಹೇಳ್ತಾ ಇರುವುದು ನಿಜಾನಾ?” ಎಂದ. ನಂತರ ಮುಖವನ್ನು ಪರಚಿಕೊಳ್ಳುತ್ತ “ಈಗ ಏನು ಮಾಡುವುದು? ಅಬಾರ್ಶನ್ ಮಾಡಿಕೊಂಡರೆ ಹೇಗೆ?” ಎಂದ. ಸೆಲ್ವಿ “ನಾನು ಅಬಾರ್ಶನ್ ಮಾತ್ರ ಮಾಡಿಕೊಳ್ಳುವುದಿಲ್ಲ. ಸತ್ತೋದರೂ ಪರವಾಗಿಲ್ಲ” ಎಂದಳು.

ಸೆಲ್ವಿ ತಿವಿದ ವೇಗಕ್ಕೆ ಮಣಿ ಮುಖದಲ್ಲಿ ರಕ್ತ ಕಾಣಿಸಿಕೊಂಡು ಸೆಲ್ವಿ ಅವನ ಮುಖವನ್ನು ಕರವಸ್ತ್ರದಲ್ಲಿ ಒರೆಸುತ್ತಾ.. “ನಮ್ಮಪ್ಪನಿಗೆ ತುಂಬಾ ಕೋಪ. ಗೊತ್ತಾದರೆ ಏನು ಮಾಡ್ತಾರೊ ಏನೊ? ನೀನೂ ಸರಿಯಾಗಿ ಓದಲಿಲ್ಲ. ನಾನು ಓದುವುದನ್ನೂ ಕೆಡಿಸಿಬಿಟ್ಟೆ. ಎಲ್ಲಾ ಹಾಳಾಗೋಯಿತು” ಎಂದು ಜೋರಾಗಿ ಅಳತೊಡಗಿದಳು. ಮಣಿ, “ಇಲ್ಲ ನಿನ್ನನ್ನ ಖಂಡಿತ ಓದಿಸ್ತೀನಿ. ಬಿಡುವುದಿಲ್ಲ” ಎಂದ. ಸೆಲ್ವಿ, “ಏನು ಮಕ್ಕಳನ್ನ ಮನೆಯಲ್ಲಿ ಬಿಟ್ಟು ಓದುವುದಕ್ಕಾಗುತ್ತ?” ಎಂದಳು. ಸುಮಾರು ಹೊತ್ತು ಇಬ್ಬರೂ ಅಳುತ್ತಾ ಕುಳಿತುಕೊಂಡರು. ಕೊನೆಗೆ ಇಬ್ಬರೂ ಎದ್ದುನಿಂತು ಮಾತನಾಡುತ್ತ ರಸ್ತೆಯಲ್ಲಿ ನಡೆದುಕೊಂಡು ಹೊರಟರು.

ಈಗ ಏನು ಮಾಡುವುದು ಎನ್ನುವ ಪ್ರಶ್ನೆ ಇಬ್ಬರನ್ನೂ ಕಾಡತೊಡಗಿತು. ಇಬ್ಬರ ಮನಸ್ಸಿನಲ್ಲೂ ವಿಪರೀತ ಭಯ ತುಂಬಿಕೊಂಡಿತ್ತು. ಮನೆಗಳಲ್ಲಿ ಗೊತ್ತಾದರೆ ಏನು ಮಾಡುವುದು? ಅದಕ್ಕೆ ಮುಂಚೆ ಏನಾದರು ಮಾಡಲು ಸಾಧ್ಯವೆ? ಹೀಗೆ ಅನೇಕ ಪ್ರಶ್ನೆಗಳು ಅವರನ್ನು ಚುಚ್ಚತೊಡಗಿದವು. ಇಬ್ಬರ ತಲೆಗಳು ಸಿಡಿದುಹೋಗುವಷ್ಟು ಆಲೋಚನೆಗಳಿಂದ ತುಂಬಿಹೋಗಿದ್ದವು. ಮಣಿ, “ಸೆಲ್ವಿ ನನ್ನ ಮಾತು ಕೇಳು. ಅಬಾರ್ಶನ್ ಮಾಡಿಕೊಂಡರೆ ಎಲ್ಲವೂ ಸರಿಯೋಗುತ್ತದೆ. ಮುಂದೆ ಅಂತಹ ತಪ್ಪು ನಡೆಯದಂತೆ ನೋಡಿಕೊಳ್ಳೋಣ. ನೀನು ಮುಂದಕ್ಕೆ ಓದಬಹುದು. ನಾನೂ ಹೇಗಾದರು ಮಾಡಿ ರಾತ್ರಿ ತರಗತಿಗಳಿಗೆ ಹೋಗಿ ಡಿಗ್ರಿ ಮುಗಿಸಬಹುದು. ಕಾಲೇಜಿನಲ್ಲಿ ಹೇಗೊ ರಾತ್ರಿಯೊತ್ತು ಆರ್ಟ್ ತರಗತಿಗಳಿಗೆ ಪಾಠ ಮಾಡ್ತಾರೆ” ಎಂದ. ಸೆಲ್ವಿ, “ಇಲ್ಲ ನಾನು ಅಬಾರ್ಶನ್ ಮಾತ್ರ ಮಾಡಿಕೊಳ್ಳುವುದಿಲ್ಲ. ಯಾಕೆ ನನ್ನನ್ನ ಸಾಯಿಸಿ ನಿಮ್ಮ ಮಾವನ ಮಗಳ್ನ ಮದುವೆ ಮಾಡಿಕೊಂಡು ಹಾಯಾಗಿ ಇರಬೇಕು ಅಂತ ಪ್ಲಾನ್ ಮಾಡಿಕೊಂಡಿದ್ದೀಯ ಏನು?” ಎಂದಳು. ಮತ್ತೆ ಅಳುತ್ತಲೇ “ಆ ಹುಡುಗಿ ತುಂಬಾ ಚೆನ್ನಾಗಿದ್ದಾಳಂತೆ ಹೌದಾ!” ಎಂದಳು.

ಇವಳ ತಲೆಯಲ್ಲಿ ಇಂತಹ ಆಲೋಚನೆ ಹೇಗೆ ಹುಟ್ಟಿಕೊಂಡಿತು ಎಂದುಕೊಂಡ ಮಣಿ ಅವಳ ಕಡೆಗೆ ನೋಡಿದ. ಮತ್ತೆ ಸೆಲ್ವಿ, “ನನಗೆ ಆ ಹುಡುಗಿ ಬಗ್ಗೆ ಗೊತ್ತಿಲ್ಲ ಅಂದುಕೊಂಡು ಇದ್ದೀಯೇನು?” ಎಂದಳು. ಮಣಿ ಅವಳ ಮಾತುಗಳಿಗೆ ದಂಗಾಗಿಹೋಗಿ ಮಣಿ, “ಆಯಿತು. ಈಗ ಏನು ಮಾಡಬೇಕು ಅಂತಿದ್ದೀಯ?” ಎಂದ. ಸೆಲ್ವಿ, “ನಮ್ಮಪ್ಪ ಅಮ್ಮನಿಗೆ ಹೇಳಿ ಬೇಗನೇ ಮದುವೆ ಮಾಡಿಕೊಳ್ಳಬೇಕು” ಎಂದಳು. ಮಣಿ, “ಆಯಿತು ಹಾಗೇ ಮಾಡು. ನಮ್ಮಿಬ್ಬರ ಓದಿಗೂ ಕಲ್ಲು ಬೀಳುತ್ತೆ. ನನ್ನ ಭವಿಷ್ಯ ಅಂಡರ್‌ಗ್ರೌಂಡ್‌ನಲ್ಲಿ ಮುಗಿದೋಗಲಿ. ನಿನ್ನ ಭವಿಷ್ಯ ಗುಡಿಸಿಲಲ್ಲಿ ಮುಗಿದೋಗಲಿ” ಎಂದ. ಸೆಲ್ವಿ, “ಆಗಿದ್ದು ಆಗಲಿ. ಆಮೇಲೆ ನೋಡೋಣ” ಎಂದಳು. ಅಷ್ಟರಲ್ಲಿ ಅವರಿಬ್ಬರು ಉದ್ದಂಡಮ್ಮಾಳ್ ದೇವಾಸ್ಥಾನದ ಹತ್ತಿರಕ್ಕೆ ಬಂದಿದ್ದರು. ಸೆಲ್ವಿ ದೇವಸ್ಥಾನದ ಮುಂದೆ ನಿಂತುಕೊಂಡು ಕೆನ್ನೆಗಳಿಗೆ ಹೊಡೆದುಕೊಂಡು ಏನೋ ಹೇಳಿಕೊಂಡಳು. ನಂತರ “ಆಯಿತು, ನಾನು ಮನೆಗೋಗ್ತೀನಿ. ನೀನೂ ಹೋಗು. ತುಂಬಾ ಹೊತ್ತಾಯಿತು. ನಮ್ಮ ಮನೆಯಲ್ಲಿ ಹುಡುಕಾಡ್ತಾ ಇರ್ತಾರೆ” ಎಂದ ಸೆಲ್ವಿ ಅಲ್ಲಿ ನಿಲ್ಲದೆ ಹೊರಟುಹೋದಳು. ಮಣಿ ಅವಳು ಹೋಗುವುದನ್ನೇ ನಿಂತುಕೊಂಡು ನೋಡಿ ಸೆಲ್ವಿ ಅವನ ಕಣ್ಣುಗಳಿಂದ ದೂರವಾದ ಮೇಲೆ ಮಾರಿಕುಪ್ಪಮ್ ಕಡೆಗೆ ಹೆಜ್ಜೆಯಾಕಿದ. ಇಬ್ಬರ ತಲೆಗಳಲ್ಲಿ ನೂರಾರು ಪ್ರಶ್ನೆಗಳು ಕುಟುಕುತ್ತಿದ್ದವು. ಮಣಿ, ಸುಮತಿ, ಸುಶೀಲ, ಅವನ ಅತ್ತೆ, ತಾಯಿ ಎಲ್ಲರೂ ಉದ್ದಂಡಮ್ಮಾಳ್ ದೇವಸ್ಥಾನಕ್ಕೆ ಬಂದು ಹೋದ ವಿಷಯವನ್ನು ಸೆಲ್ವಿ ಗೆಳತಿಯೊಬ್ಬಳು ಸೆಲ್ವಿಗೆ ಹೇಳಿದ್ದಳು.

***

ಮರುದಿನ ಸೆಲ್ವಿ, ರಾಜಿ, ಪಾರ್ವತಿ ಮಧ್ಯಾಹ್ನದ ತರಗತಿಗಳನ್ನು ಮುಗಿಸಿ ಮೂವರೂ ಜಿಮ್ಖಾನಾ ಸ್ಟೇಡಿಯಮ್ ಮೆಟ್ಟಿಲುಗಳ ಮೇಲೆ ಕುಳಿತುಕೊಂಡಿದ್ದರು. ಸೆಲ್ವಿ ಮುಖ ಸಪ್ಪಗೆ ಮಾಡಿಕೊಂಡು ಆಶೋಕ ವನದಲ್ಲಿನ ಸೀತೆಯಂತೆ ಕುಳಿತಿದ್ದಳು. ರಾಜಿ, ಪಾರ್ವತಿ ಏನೂ ಕೇಳಿದರೂ ಸೆಲ್ವಿ ಬಾಯಿ ಬಿಡುತ್ತಿಲ್ಲ. ಕೊನೆಗೆ ರಾಜಿ, “ಸೆಲ್ವಿ ಏನಾಯಿತು? ದಯವಿಟ್ಟು ಹೇಳು. ನೀನು ಹೀಗೆ ಮುಖ ಇಟ್ಟುಕೊಂಡು ಕುಳಿತರೆ ನಮಗೇನು ಗೊತ್ತಾಗುತ್ತೆ?” ಎಂದಳು. ಪಾರ್ವತಿ, “ಮಣಿ ಕಾಲೇಜಿಗೆ ಬರ್ತಾ ಇಲ್ಲ ಅದಕ್ಕಾ?” ಎಂದಳು. ಸೆಲ್ವಿ ಕಣ್ಣುಗಳಿಂದ ಕಣ್ಣೀರು ದಳದಳನೆ ಹರಿದು ಬರತೊಡಗಿತು. ಗೆಳತಿಯರು ಅವಕ್ಕಾಗಿ “ಸಾರಿ.. ಸಾರಿ..” ಎಂದು ಕ್ಷಮೆ ಕೇಳಿಕೊಂಡರು. ಸೆಲ್ವಿ ನಿಧಾನವಾಗಿ “ವಿಷಯ ಅದಲ್ಲ” ಎಂದಳು. ಇಬ್ಬರು ಗೆಳತಿಯರು ಮತ್ತೆ ಮತ್ತೆ ಕೇಳಿದಾಗ ಕೊನೆಗೆ ಸೆಲ್ವಿ “ನನಗೆ ಎರಡು ತಿಂಗಳಾಗಿದೆ” ಎಂದು ಮುಖ ಮುಚ್ಚಿಕೊಂಡು ಜೋರಾಗಿ ಅಳತೊಡಗಿದಳು. ರಾಜಿ ಮತ್ತು ಪಾರ್ವತಿ ಭೀತಿಗೆ ಒಳಗಾಗಿ ದಿಢೀರನೆ ಎದ್ದು ನಿಂತುಕೊಂಡರು. ಮತ್ತೆ ಇಬ್ಬರೂ ಸೆಲ್ವಿಯ ಪಕ್ಕದಲ್ಲಿ ಕುಳಿತುಕೊಂಡು ಅವಳ ಎರಡೂ ಭುಜಗಳ ಮೇಲೆ ಕೈಹಾಕಿ ಅವಳ ಮುಖವನ್ನೇ ನೋಡಿದರು. ಸೆಲ್ವಿ ಮತ್ತೆ ಜೋರಾಗಿ ಅಳತೊಡಗಿದಳು.

ಈಗ ಏನು ಮಾಡುವುದು? ಮೂವರು ಸುಮಾರು ಹೊತ್ತು ಮಾತನಾಡಲಿಲ್ಲ. ರಾಜಿ ಮತ್ತು ಪಾರ್ವತಿ ಅಬಾರ್ಶನ್ ಮಾಡಿಕೊಂಡರೆ ಎಲ್ಲಾ ಸರಿ ಹೋಗುತ್ತದೆ. ಆದರೆ ಎಲ್ಲಿ ಹೇಗೆ ಎನ್ನುವ ಪ್ರಶ್ನೆಗಳನ್ನು ಅವರೇ ಹಾಕಿಕೊಂಡರು. ಸೆಲ್ವಿ, “ಅಬಾರ್ಶನ್ ಮಾಡಿಕೊಂಡು ಮಣಿ ನನ್ನನ್ನ ಬಿಟ್ಟುಬಿಟ್ಟರೆ? ಏನು ಮಾಡುವುದು?” ಎಂದಳು. ರಾಜಿ, “ಅದೇಗೆ ಬಿಟ್ಟುಬಿಡ್ತಾನೆ ಅವನು?” ಎಂದಳು. ಸೆಲ್ವಿ, “ಅವನಿಗೆ ಒಬ್ಬಳು ಅತ್ತೆ ಮಗಳಿದ್ದಾಳೆ. ಆಕೆಯನ್ನು ಮದುವೆ ಮಾಡಿಕೊಳ್ಳುವುದಕ್ಕೆ ಅವನ ಮನೆಯಲ್ಲಿ ಮಾತುಕತೆ ನಡೆಯುತ್ತಿದೆ. ನಾನೇನಾದರೂ ಅಬಾರ್ಶನ್ ಮಾಡಿಕೊಂಡರೆ ಖಂಡಿತ ಅವನು, ಅವನ ಮಾವನ ಮಗಳನ್ನ ಮದುವೆ ಮಾಡಿಕೊಳ್ತಾನೆ” ಎಂದಳು. ರಾಜಿ, “ವಿಷಯ ಮಣಿಗೆ ಗೊತ್ತ?” ಕೇಳಿದಳು. ಸೆಲ್ವಿ, “ಅವನಿಗೆ ಗೊತ್ತಿದೆ” ಎಂದಳು. ಕೊನೆಗೆ ಮೂವರೂ ಮಾತನಾಡಿ, ಮಣಿ ಹೇಗೊ ಕೆಲಸಕ್ಕೆ ಸೇರಿಕೊಂಡಿದ್ದಾನೆ. ನಿಮ್ಮ ತಂದೆತಾಯಿಗೆ ಹೇಳಿ ಮಣಿಯನ್ನು ಮದುವೆ ಮಾಡಿಕೊಳ್ಳುವುದು ಒಳ್ಳೆಯದು ಎನ್ನುವ ತೀರ್ಮಾನಕ್ಕೆ ಬಂದರು. ಸೆಲ್ವಿ ಒಬ್ಬಳೆ ಮನೆಗೆ ಹೋಗುವುದಕ್ಕೆ ಭಯಪಟ್ಟು ಮೂವರೂ ಒಟ್ಟಾಗಿ ಸೆಲ್ವಿಯ ಮನೆಗೆ ಹೊರಟರು.

(ಹಿಂದಿನ ಕಂತು: ಕಪ್ಪು ಸುರಂಗಗಳು ಮತ್ತು ಕಾರ್ಮಿಕರ ಭವಣೆಗಳು)

About The Author

ಡಾ. ಎಂ. ವೆಂಕಟಸ್ವಾಮಿ

ಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿಯೂ ಕೆಲಸ ಮಾಡಿದ್ದಾರೆ. 3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ