ಚರ್ಚಿನಲ್ಲಿ ಹಾಡಿದ ಮಗಳು ರೈಲಿನ ಟಿಕೆಟ್ಟಿಗೆ ಹಣ ಕೂಡಿಟ್ಟಿದ್ದನ್ನು ತಿಳಿದಾಗ ಅದನ್ನು ದೆವ್ವವೆನ್ನುವಂತೆ ದೂರ ಎಸೆಯುವ ಅಸಹಾಯಕತೆ ಮತ್ತು ಉಮ್ಮಳಿಸುವ ದುಃಖ, ಕೋಪಬಂದರೂ ಅಜ್ಜನ ಭಾವನೆಯನ್ನು ಅರ್ಥಮಾಡಿಕೊಂಡು ಮೊಮ್ಮಗಳು ಒಳಗೊಳಗೇ ಅನುಭವಿಸುವ ತುಮುಲ ಇವೆಲ್ಲವನ್ನೂ ರಂಗದಲ್ಲಿ ತೆರೆದಿಡುವ ನಾಟಕದ ಕೊನೆಯಲ್ಲಿ ಮೊಮ್ಮಗಳು ಅಜ್ಜನನ್ನು ಒಪ್ಪಿಸಿ ಹೊರಟು ಹೋಗುವಾಗ ಮಗುವಿನ ಪ್ರತಿಭೆ ಕಾಡ ಬೆಳದಿಂಗಳಾಗಲಿಲ್ಲವಲ್ಲ ಎನ್ನುವ ನಿಟ್ಟಿಸಿರು, ಅಜ್ಜನ ಪಾಡು ಎಂಥದೋ ಎನ್ನುವ ನೋವು ಎರಡೂ ಕಾಡುತ್ತದೆ.
ನಟನ ಮೈಸೂರು ಪ್ರದರ್ಶಿಸಿದ ಡಾ. ಶ್ರೀಪಾದ ಭಟ್ ನಿರ್ದೇಶನದ “ಮೌನ ಕಣಿವೆಯ ಹಾಡು” ನಾಟಕದ ಕುರಿತು ನಾರಾಯಣ ಯಾಜಿ, ಸಾಲೇಬೈಲು ಬರಹ ನಿಮ್ಮ ಓದಿಗೆ
ಕೆರಮನೆ ಶಂಭು ಹೆಗಡೆಯವರು ಕೇವಲ ಯಕ್ಷಗಾನ ಕಲಾವಿದರಾಗಿರಲಿಲ್ಲ. ಅವರೊಳಗೆ ಓರ್ವ ಅದ್ಭುತ ರಂಗನಟನಿದ್ದ. ನಾವೆಲ್ಲಾ ಚಿಕ್ಕರವರಿದ್ದಾಗ ಅವರ ನಾಟಕವನ್ನು ನೋಡಿದ್ದೆವು. ಅವರದ್ದು ಹೆಚ್ಚಾಗಿ ಹಾಸ್ಯ ಪಾತ್ರವಾಗಿತ್ತು. ಸಿನೇಮಾ ನಟರಾಗಿಯೂ ಅವರು “ಪರ್ವ” ಚಲನಚಿತ್ರದ ನಟನೆಗಾಗಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಪಡೆದಿದ್ದರು. ದೆಹಲಿಯಲ್ಲಿ ಡಾ. ಮಾಯಾರಾವ್ ಅವರಲ್ಲಿ ಕೋರಿಯೋಗ್ರಫಿ ಪದವಿ ಪಡೆದ ನಂತರ ಅವರಲ್ಲಿ ಭಾರತೀಯ ರಂಗ ಪ್ರಪಂಚ ಮತ್ತು ಜಾಗತಿಕ ಥಿಯೇಟರಿನ ಕುರಿತು ತೌಲನಿಕವಾಗಿ ಅಧ್ಯಯನ ನಡೆಸುವ ಪ್ರಬುದ್ಧತೆ ಇತ್ತು. ರಾಮನಾಗಿಯೇ ರಂಗದಲ್ಲಿ ಕಾಲಕ್ಕೆ ಸರಿದು ಹೋಗಿ ಇದೀಗ ಹದಿನಾಲ್ಕು ವರ್ಷಗಳು ಸಂದವು.
ಕೆರಮನೆ ಶಂಭು ಹೆಗಡೆಯವರ ನೆನಪಿನಲ್ಲಿ ಅವರ ಮಗ ಶಿವಾನಂದ ಹೆಗಡೆ ಅವರು ಪ್ರತಿವರ್ಷ ನಡೆಸಿಕೊಂಡು ಬಂದಿರುವ ರಾಷ್ಟ್ರೀಯ ನಾಟ್ಯೋತ್ಸವ ಹಲವು ಕಲೆಗಳ ಸಂಗಮ. ಈ ವರ್ಷವೂ ಇಲ್ಲಿ ಪ್ರದರ್ಶಿಸಿದ ಕಲೆಗಳಲ್ಲಿ ಗಮನ ಸೆಳೆದಿದ್ದು ನಾಟಕ ಮೈಸೂರಿನ ನಟನ ರೆಪರ್ಟರಿ ತಂಡದವರ “ಮೌನ ಕಣಿವೆಯ ಹಾಡು” (ನಿರ್ದೇಶನ ಡಾ. ಶ್ರೀಪಾದ ಭಟ್). ಆಫ್ರಿಕಾದ ಪ್ರಸಿದ್ಧ ನಾಟಕಕಾರ Athol Fugard ಬರೆದ The Valley Song ನ್ನು ಮೀರಾ ಮೂರ್ತಿ ಕನ್ನಡಕ್ಕೆ “ಮೌನ ಕಣಿವೆಯ ಹಾಡು” ಎಂದು ಅನುವಾದಿಸಿದ್ದಾರೆ. ಮೂಲತಃ ದಕ್ಷಿಣ ಆಫ್ರಿಕಾದಲ್ಲಿ ನಡೆದ ಕತೆಯಿದು. ತಮ್ಮದೇ ನೆಲದಲ್ಲಿ ಪರಕೀಯರಾಗುತ್ತಿರುವ ಮೂಲ ನಿವಾಸಿಗಳ ಬವಣೆಯನ್ನು ಮತ್ತು ಎದುರಿಸಲಾಗದ ಅಸಹಾಯಕತೆಯನ್ನು ತೋರಿಸುವ ನಾಟಕ ಇದು. ಅಬ್ರಹಾಂ ಝೋಂಕರ್ ಮತ್ತು ಆತನ ಮೊಮ್ಮಗಳು ವೆರೋನಿಕಾ ಇವರಿಬ್ಬರ ನಡುವೆ ನಡೆಯುವ ಮುಖಾಮುಖಿ, ಒಬ್ಬರನ್ನೊಬ್ಬರು ಬಿಟ್ಟಿರಲಾರದ ಅಸಹಾಯಕತೆ ಇವೆರಡನ್ನು ಸರಳವಾಗಿ ರಂಗದಲ್ಲಿ ಬಿಚ್ಚಿಡುತ್ತಾ ಹೋಗುತ್ತಾರೆ. ಕುಂಬಳ ಬೀಜ ಬಿತ್ತಿದರೆ ಅದು ನೆಲದಲ್ಲಿ ಹಬ್ಬುವ ಬಳ್ಳಿಯಾಗುತ್ತದೆ. ನೆಲವನ್ನು ಬಿಟ್ಟು ಮೇಲೆ ಹಬ್ಬಲು ಅದಕ್ಕೆ ಸಾಧ್ಯವಿಲ್ಲ. ಅಜ್ಜ ಅಬ್ರಹಾಂ ಝೋಂಕರ್ ಸಹ ಕಣಿವೆಯಲ್ಲಿ ಇರುವ ತನ್ನ ಹೊಲದ ಕುರಿತು ಅಪಾರವಾದ ಮೋಹವನ್ನು ಹೊಂದಿದ ವ್ಯಕ್ತಿ. ಆತನಲ್ಲಿರುವ ಒಂದು ಚಕ್ರದ ಪುಟ್ಟ ಟ್ರಾಲಿ, ಅದರ ಹಿಂದಿರುವುದು ಕಬ್ಬಿಣದ ಕಾಲುಗಳು. ತನ್ನ ಪರಿಮಿತಿ ಆತನ ಹೊಲ, ಮನೆಯ ಸುತ್ತ ಮುತ್ತ ಮಾತ್ರ ಎನ್ನುವುದರ ಸಂಕೇತ. ಆತನ ಮಗಳು ತನ್ನ ಪ್ರಾಯಕಾಲದಲ್ಲಿ ಯಾರೊಂದಿಗೋ ಓಡಿ ಹೋಗಿದ್ದಾಳೆ, ಮಗುವೊಂದಕ್ಕೆ ಜನ್ಮ ನೀಡುವಾಗ ಸತ್ತಿದ್ದಾಳೆ. ಬದುಕಿದ ಆ ಪುಟ್ಟಮಗು ಇದೀಗ ಅಜ್ಜನ ಆಶ್ರಯದಲ್ಲಿ ಬೆಳೆಯುತ್ತಿದ್ದಾಳೆ. ಪ್ರಾಯಕ್ಕೆ ಬಂದ ಅವಳಿಗೆ ಸಂಗೀತಗಾರ್ತಿಯಾಗುವ ಹಂಬಲ. ಈ ಕಣಿವೆಯಲ್ಲಿ ಕಳೆದುಹೋಗಲು ಅವಳಿಗೆ ಇಷ್ಟವಿಲ್ಲ. ಈ ವಿಷಯದಲ್ಲಿ ಅಜ್ಜ ಮತ್ತು ಮೊಮ್ಮಗಳ ನಡುವೆ ಸದಾ ಚರ್ಚೆ. ಅಲ್ಲಿಂದ ನಗರದ ನಡುವೆ ಓಡಾಡುವ ರೈಲು ಹಳ್ಳಿ ಮತ್ತು ನಗರದ ನಡುವಿನ ಕೊಂಡಿ. ನಗರದ ಆಕರ್ಷಣೆಗೆ ಒಳಗಾಗಿ ಓಡಿಹೋಗಿ ದುರಂತದ ಅಂತ್ಯವನ್ನು ಕಾಣುವ ಮಗಳಂತೆ ಎಲ್ಲಿ ತನ್ನ ಮೊಮ್ಮಗಳೂ ಆಗಿಬಿಡುತ್ತಾಳೋ ಎನ್ನುವ ಭಯ ಅಜ್ಜನಿಗೆ. ಮೊಮ್ಮಗಳಿಗೆ ತನ್ನ ಪ್ರತಿಭೆಯನ್ನು ಜಗತ್ತು ನೋಡಬೇಕು, ತಾನೋರ್ವ ಜಗತ್‌ಪ್ರಸಿದ್ಧ ಹಾಡುಗಾರಳಾಗಬೇಕೆನ್ನುವ ತುಡಿತ. ಸುಮಾರು ನೂರು ನಿಮಿಷಗಳ ಕಾಲ ಅಜ್ಜ ಮತ್ತು ಮೊಮ್ಮಗಳ ನಡುವಿನ ಸಂಘರ್ಷ, ಒಬ್ಬರನ್ನೊಬ್ಬರು ಬಿಟ್ಟಿರಲಾರದ ತುಮುಲ ಇವುಗಳನ್ನು ಹೃದಯಸ್ಪರ್ಶಿಯಾಗಿ ಅಭಿನಯಿಸಿದ್ದಾರೆ.
ಇದು ಕೇವಲ ಆಫ್ರಿಕಾದ ಕತೆಯಲ್ಲ, ಜಗತ್ತಿನ ಎಲ್ಲೆಡೆಯ ಹಳ್ಳಿಗಳ ಬದುಕಿನ ಸಮಸ್ಯೆ ಇದು. ಅಬ್ರಹಾಂ ಝೋಂಕರ್ ಬೆಟ್ಟದ ಕಣಿವೆ ತನ್ನ ಹಳ್ಳಿಯಲ್ಲಿ ರೈತಾಪಿ ಜೀವನವನ್ನು ನಡೆಸಿ ಬದುಕುತ್ತಿದ್ದಾನೆ. ಆತ ಸಾಗುವಳಿ ಮಾಡುವ ಜಮೀನನ್ನು ಬಿಳಿಯನೋರ್ವ ಖರೀದಿ ಮಾಡಲು ತಯ್ಯಾರಿ ನಡೆಸಿದ್ದಾನೆ. ಕುಂಬಳಕಾಯಿಯ ಬಳ್ಳಿಯಂತೆ ಅಬ್ರಹಾಮ್ ಝೋಂಕರ್ ಮೇಲಕ್ಕೆ ಏರಿ ಬೆಳೆಯಲಾರ, ಆತನಿಗೆ ಈ ಭೂಮಿಯ ಆಸರೆಯಲ್ಲಿಯೇ ಬದುಕನ್ನು ಕಂಡುಕೊಂಡವ. ಆತನ ಮಗಳು ಕೆರೋಲಿನಾ ನಗರದ ಆಕರ್ಷಣೆಗೆ ಒಳಗಾಗಿ ಯಾರನ್ನೋ ಕಟ್ಟಿಕೊಂಡು ಓಡಿಹೋಗಿ ಹೆಣ್ಣು ಮಗುವೊಂದನ್ನು ಹೆತ್ತು ಹೆಣವಾಗಿದ್ದಾಳೆ. ಆ ಪುಟ್ಟ ಮಗುವನ್ನು ಜತನದಿಂದ ಝೋಂಕ್ರ್ ಸಾಕಿದ್ದಾನೆ. ಆತನ ಮಡದಿಯೂ ಸತ್ತುಹೋಗಿದ್ದಾಳೆ. ಪುಟ್ಟ ವರೋನಿಕಾಗೆ ಅಜ್ಜನೇ ಎಲ್ಲವೂ. ಆತನ ಕೈಗಾಡಿಯಲ್ಲಿಯೇ ಕುಳಿತು ಆಟ ಆಡುವ ತುಂಟ ಹುಡುಗಿಗೆ ದೈವದತ್ತವಾದ ಕಂಠವಿದೆ. ತನ್ನ ಹಾಡು ಮೌನ ಕಣಿವೆಯಲ್ಲಿ ಕಳೆದು ಹೋಗಬಾರದು ಎನ್ನುವದು ಆಕೆಯ ಬಯಕೆ. ಹಳೇ ಕಾಲದ ಅಜ್ಜನಿಗೆ ಮೊಮ್ಮಗಳೆಲ್ಲಿ ಅವಳ ಅಮ್ಮನಂತೆ ನಗರಕ್ಕೆ ಓಡಿಹೋಗುತ್ತಾಳೋ ಎನ್ನುವ ಆತಂಕ. ಜಾಗ ಖರೀದಿಸುವ ಬಿಳಿಯನ ಮನೆಯಲ್ಲಿ ಕಸ ಮುಸುರೆ ತಿಕ್ಕಿಕೊಂಡಿದ್ದರೆ ಸಾಕು ಎನ್ನುವುದು ಆತನ ಇಂಬು. ವೆರೋನಿಕಾಗೆ ನಗರದ ಸೆಳೆತ ಅವಳಮ್ಮನಂತೆ ಥಳುಕಿನ ಆಕರ್ಷಣೆಯಲ್ಲ. ಬದುಕಿನಲ್ಲಿ ಸಾಧಿಸುವ ಎದೆಯ ತುಡಿತ.

(ಡಾ. ಶ್ರೀಪಾದ ಭಟ್)
ಕಾಗೆಯ ಗೂಡಿನಲ್ಲಿ ಬೆಳೆಯುವ ಪುಟ್ಟ ಕೋಗಿಲೆಗೆ ವಸಂತಕಾಲ ಬಂದಾಗ ಮಾಮರದ ಬನದ ಆಕರ್ಷಣೆಯಾಗುವಂತೆ ಇದು. ಅಜ್ಜನನ್ನು ಧಿಕ್ಕರಿಸಿ ಆಕೆ ಹೋಗಲಾರಳು. ಅಜ್ಜನಿಗೆ ಮೊಮ್ಮಗಳ ಮಧುರ ಧ್ವನಿಯ ಕುರಿತು ಒಳಗೇ ಪ್ರೀತಿ ಇದೆ. ಆದರೆ ಆಕೆ ನಗರದ ಮೋಸದ ಜಾಲಕ್ಕೆ ಸಿಕ್ಕಿದರೆ ಎನ್ನುವ ಒಳಗಿನ ಆತಂಕ. ಚರ್ಚಿನಲ್ಲಿ ಹಾಡಿದ ಮಗಳು ರೈಲಿನ ಟಿಕೆಟ್ಟಿಗೆ ಹಣ ಕೂಡಿಟ್ಟಿದ್ದನ್ನು ತಿಳಿದಾಗ ಅದನ್ನು ದೆವ್ವವೆನ್ನುವಂತೆ ದೂರ ಎಸೆಯುವ ಅಸಹಾಯಕತೆ ಮತ್ತು ಉಮ್ಮಳಿಸುವ ದುಃಖ, ಕೋಪಬಂದರೂ ಅಜ್ಜನ ಭಾವನೆಯನ್ನು ಅರ್ಥಮಾಡಿಕೊಂಡು ಮೊಮ್ಮಗಳು ಒಳಗೊಳಗೇ ಅನುಭವಿಸುವ ತುಮುಲ ಇವೆಲ್ಲವನ್ನೂ ರಂಗದಲ್ಲಿ ತೆರೆದಿಡುವ ನಾಟಕದ ಕೊನೆಯಲ್ಲಿ ಮೊಮ್ಮಗಳು ಅಜ್ಜನನ್ನು ಒಪ್ಪಿಸಿ ಹೊರಟು ಹೋಗುವಾಗ ಮಗುವಿನ ಪ್ರತಿಭೆ ಕಾಡ ಬೆಳದಿಂಗಳಾಗಲಿಲ್ಲವಲ್ಲ ಎನ್ನುವ ನಿಟ್ಟಿಸಿರು, ಅಜ್ಜನ ಪಾಡು ಎಂಥದೋ ಎನ್ನುವ ನೋವು ಎರಡೂ ಕಾಡುತ್ತದೆ. ಹಿನ್ನೆಲೆಯಲ್ಲಿ ಬಾನಿನ ಬಣ್ಣದ ಚಿತ್ತಾರ ವೆರೋನಿಕಾಳ ಕನಸನ್ನು ಚಿತ್ರಿಸುತ್ತದೆ.
ದೇಶ ಕಾಲ ಮೀರಿದ ಸಮಸ್ಯೆಯನ್ನು ಮೇಘ ಸಮೀರ್ ಮತ್ತು ದಿಶಾ ರಮೇಶ್ ಅದ್ಭುತವಾಗಿ ಒಬ್ಬರನ್ನೊಬ್ಬರು ಮೀರಿಸುವಂತೆ ನಟಿಸಿದ್ದಾರೆ. ಪುಟ್ಟ ಮೊಮ್ಮಗಳಾಗಿ ದಿಶಾ ತುಂಟತನ, ಹಠ, ಅಜ್ಜನನ್ನು ಮುದ್ದು ಮಾಡುವ ರೀತಿ, ಆಗಾಗ ಬಾಲ್ಯವನ್ನು ನೆನಪಿಸುವ ಜಡೆಯನ್ನು ತುಟಿಯಮೇಲೆ ಇಟ್ಟು ಮೀಸೆಯನ್ನು, ಪುರುಷರಂತೆ ತಾನೂ ಸ್ವತಂತ್ರವಾಗಿ ಹಾರಬಲ್ಲೆ ಎನ್ನುವುದನ್ನು ತೋರಿಸಿದಳು. ಅಜ್ಜನ ಮೇಲಿನ ಕಕ್ಕುಲತೆ, ಆದರೆ ಗಡಿ ದಾಟಿ ಹಾರಬೇಕೆನ್ನುವ, ತನ್ನ ವ್ಯಕ್ತಿತ್ವವನ್ನು ಅರಳಿಸಿಕೊಳ್ಳುವ ಉದ್ದಾಮ ಬಯಕೆ ಅವಳಲ್ಲಿ ಸಹಜವಾಗಿ ಮೂಡಿಬಂತು. ಪ್ರತಿಮನೆಯಲ್ಲಿಯೂ ಇರುವ ಮೊಮ್ಮಗಳಂತೆ ದಿಶಾ ಆಪ್ತಳಾಗುತ್ತಾಳೆ. ಒಂದು ಚಕ್ರದ ಕೈಗಾಡಿಯಂತೆ ಓಡಲಾರದ, ಇಲ್ಲಿ ಉಳಿಯಲಾರದ ಅಸಹಾಯಕತೆ ಮತ್ತು ಮೊಮ್ಮಗಳ ಏಳ್ಗೆಗಾಗಿ ಬೆಳೆದ ಕಾಯಿಯ ಬಂಧನವನ್ನು ತಾನೇ ಹರಿಯುವ ಕುಂಬಳದ ಬಳ್ಳಿಯಂತೆ ಮೇಘ ಸಮೀರ್ ನೆನಪಿನಾಳದಲ್ಲಿ ಉಳಿದುಬಿಡುತ್ತಾರೆ.
ಬಿಡುಗಡೆಯ ಕನಸನ್ನು ಬಿತ್ತುವ ನಗರಗಳನ್ನೂ ಒಟ್ಟಾಗಿ ಇಡುವ ನಾಟಕವು ಈ ಎಲ್ಲ ಬಗೆಯ ಚರ್ಚೆಗಳನ್ನೂ ಸಮತೂಕದಲ್ಲಿರಿಸುತ್ತದೆ. ಬದುಕನ್ನು ಕಪ್ಪು ಬಿಳುಪು ಆಗಿ ನೋಡದಂತೆ, ತಾತ್ವಿಕವಾಗಿ ಬದುಕನ್ನು ನೋಡುವಂತೆ ನಮ್ಮನ್ನು ಸಿದ್ಧಗೊಳಿಸುತ್ತದೆ. ಶ್ರೇಷ್ಠ ರಂಗನಿರ್ದೇಶಕರಲ್ಲೊಬ್ಬರಾಗಿ ಖ್ಯಾತಿವೆತ್ತಿರುವ ಡಾ. ಶ್ರೀಪಾದ ಭಟ್ ಅವರ ನಿರ್ದೇಶನದ ಬಿಗಿಯಾದ ಬಂಧ ನಾಟಕದುದ್ದಕ್ಕೂ ಇತ್ತು.

ನಾರಾಯಣ ಯಾಜಿಯವರು ಮೂಲತ ಉತ್ತರ ಕನ್ನಡದ ಯಕ್ಷಗಾನದ ಊರಾದ ಕೆರೆಮನೆ ಗುಣವಂತೆಯ ಸಮೀಪದ ಸಾಲೇಬೈಲಿನವರು. ಯಕ್ಷಗಾನ ತಾಳಮದ್ದಲೆಯಲ್ಲಿ ಹೆಸರು ಮಾಡುತ್ತಿರುವ ಅವರ ಆಸಕ್ತಿ ಯಕ್ಷಗಾನ, ಅರ್ಥಶಾಸ್ತ್ರ ಮತ್ತು ಮೈಕ್ರೊ ಫೈನಾನ್ಸಿಂಗ್. ಯಕ್ಷಗಾನ, ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಅನೇಕ ಲೇಖನಗಳು ಕನ್ನಡದ ಮುಖ್ಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಸದ್ಯ ವಿಜಯಪುರದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಪ್ರಾದೇಶಿಕ ಕಛೇರಿ) ಸಹಾಯಕ ಮಹಾ ಪ್ರಬಂಧಕ.
ಚಂದದ ವಿಮರ್ಶೆ
ಧನ್ಯವಾದಗಳು
ನಾರಾಯಣಜಿಯವರ ವಿಮರ್ಶೆಯನ್ನು ಓದಿದರೆ ನಾಟಕವನ್ನು ನೋಡಲೇಬೇಕು ಎನಿಸುತ್ತದೆ ಅಷ್ಟು ಚೆನ್ನಾಗಿ ನಾಟಕದ ವಸ್ತುವನ್ನು ಮತ್ತು ಪ್ರದರ್ಶನದ ವಿಶ್ಲೇಷಣೆಯನ್ನು ಮಾಡಿದ್ದಾರೆ.
ಧನ್ಯವಾದಗಳು