ಮರದ ಪ್ರಾಬ್ಲಂ ಅಂದರೆ ಅದನ್ನು ಕೊಳ್ಳುವ ಮರದ ಅಂಗಡಿಯಲ್ಲಿ ಅದನ್ನು ಕತ್ತರಿಸುವ ಮತ್ತು ಅದನ್ನು ಸಾಗಿಸುವ ಒಂದು ದೊಡ್ಡ ತಲೆನೋವು ನಿವಾರಣೆ ಈ ಒಂದು ನಡೆಯಿಂದ ಅಂದರೆ ಸಿಂಗಲ್ ಸ್ಟ್ರೋಕ್‌ನಿಂದ ಆಗಿತ್ತು. ಆಗಿನ ಸಂದರ್ಭದಲ್ಲಿ ಮನೆಯ ಮರ ಮುಟ್ಟುಗಳ ವ್ಯಾಪಾರ ಹೇಗೆ ನಡೆಯುತ್ತಿತ್ತು ಎಂಬುದರ ಒಂದು ಕಿರು ಪರಿಚಯ ನಿಮಗೆ ಮಾಡಲೇ ಬೇಕು, ಕಾರಣ ಎಂತಹ ಮ್ಯಾಥ ಮಟಿಕ್ಸ್ ಜೀನಿಯಸ್‌ಗಳೂ ಹೇಗೆ ತಲೆಕೆಟ್ಟು ಗಬ್ಬೆದ್ದು ಹೋಗುತ್ತಾರೆ ಎಂದು ಒಂದು ಅರಿವು ಮೂಡಬೇಕು. ಒಂದು ಉದಾಹರಣೆ ಮೂಲಕ ನಿಮಗೆ ಈ ತಲೆನೋವು ಟ್ರಾನ್ಸ್ಫರ್ ಮಾಡುತ್ತೇನೆ…..!
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಐವತ್ತಾರನೆಯ ಕಂತು
ಹಿಂದಿನ ಸಂಚಿಕೆ ಹೀಗೆ ಮುಗಿದಿತ್ತು…
ವಾಸಕಲ್ ಇಟ್ಟಿದ್ದು ಮತ್ತು ಮುಂದಿನ ಕತೆ ಸಿನಿಮಾ ರೀಲುಗಳ ಹಾಗೆ ತಲೆಯಲ್ಲಿ ಕೂತಿವೆ. ಅದಕ್ಕೆ ಹೋಗುವ ಮೊದಲು ಸಿನಿಮಾ ರೀಲುಗಳ ವಿಷಯ. ಹಿಂದೆ ಸಿನಿಮಾ ತೆಗೆಯುತ್ತಾ ಇದ್ದದ್ದು ಫಿಲಂ ರೋಲು ಹಾಕಿ. ಅದು ಸಂಸ್ಕರಿಸಿದ ನಂತರ ಒಂದು ಗುಂಡನೆ ಪೆಟ್ಟಿಗೆಯಲ್ಲಿ ಸುರುಳಿ ಸುರುಳಿಯಾಗಿ ಶೇಖರಿಸಿ ಇಡುತ್ತಿದ್ದರು. ಸಿನಿಮಾ ಪ್ರದರ್ಶನ ವೇಳೆಯಲ್ಲಿ ಪ್ರೊಜೆಕ್ಟರ್‌ನ ಮೂಲಕ ಈ ಸುರುಳಿ ಬಿಚ್ಚುತ್ತಾ ಬಿಚ್ಚುತ್ತಾ ತೆರೆಯ ಮೇಲೆ ಸಿನಿಮಾ ಓಡುತ್ತಿತ್ತು. ಆ ಕಾಲದ ಸುಮಾರು ಜನ ತಮ್ಮ ನೆನಪುಗಳನ್ನು ಹೇಳಬೇಕಾದರೆ ನೆನಪುಗಳು ಸಿನಿಮಾ ರೀಲುಗಳ ಹಾಗೆ ತಲೆಯಲ್ಲಿ ಕೂತಿವೆ ಎಂದು ವಿವರಿಸುತ್ತಾ ಇದ್ದರು. ಈಗ ಡಿಜಿಟಲ್ ಕ್ಯಾಮೆರಾ ಬಂದ ಮೇಲೆ ರೀಲುಗಳು ಸ್ಮಶಾನ ಸೇರಿದವು ಮತ್ತು ಇಂತಹ ಪದ ಪುಂಜಗಳನ್ನು ಉಪಯೋಗಿಸಿದರೆ ಅದರ ವಿವರಣೆಯನ್ನು ಸಹ ನೀಡಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ!
ಇದಿಷ್ಟು ಈಗ. ರೀಲುಗಳು ಬಿಚ್ಚಿಕೊಳ್ಳುತ್ತಾ ಇವೆ. ಅವುಗಳನ್ನು ಮುಂದೆ ತಮಗೆ ತೋರಿಸುತ್ತಾ ತೋರಿಸುತ್ತಾ ತೋರಿಸುತ್ತಾ…. ಹೋಗುತ್ತೇನೆ.
ಮುಂದಕ್ಕೆ…
ನೆನಪುಗಳು ಅದು ಹೇಗೆ ಇಷ್ಟೊಂದು ಓವರ್ ಲೋಡ್ ಆಗುತ್ತೆ ಅಂತ ನನಗೆ ಆಶ್ಚರ್ಯವೋ ಆಶ್ಚರ್ಯ! ಮೊದಲು ನುಗ್ಗಿದ್ದು ಮೊದಲು ಹೇಳಿಬಿಡ್ತೇನೆ. ಅರ್ಜೆಂಟ್ ಇರೋವು ಹಾಗೇ ಎಲ್ಲೆಲ್ಲೋ ಸಂದೀಲಿ ನುಗ್ಗಿ ತಪ್ಪಿಸಿಕೊಂಡರೆ ಕಷ್ಟ.
ಮಲ್ಲಯ್ಯನ ಎದುರೇ ಹಣಕಾಸಿನ ತೊಂದರೆ ಮಾತು ಆಗುತ್ತಾ ಇದ್ದದ್ದು. ಕೈಲಿರೋ ಕಾಸು ಹಾಕ್ತಾ ಅವ್ನೇ, ಇನ್ನೂ ಸಾಲ ಬಂದಿಲ್ಲ ಅನ್ನುವ ಮಟ್ಟಕ್ಕೆ ಅರ್ಥ ಆಗಿತ್ತು. ಪಾಯ ಮುಗಿದಮೇಲೆ ಬ್ಯಾಂಕ್‌ನಿಂದಾ ಒಬ್ಬರು ಆಫೀಸರ್ ಬಂದು ಟೇಪ್ ಹಿಡಿದು ಅಳೆದು ತೂಗಿ ಲೆಕ್ಕ ಬರೆದರಾ? ಇವನೂ ಅವರ ಸಹಾಯಕ್ಕೆ ನಿಂತು ಅವರು ಎಲ್ಲಿಯವರು, ಎಷ್ಟು ಸಾಲ ಸಿಕ್ಕದೆ, ಕಂತು ಯಾವಾಗ ಯಾವಾಗ ರಿಲೀಸ್ ಆಗುತ್ತೆ ಎಲ್ಲಾ ಮಾಹಿತಿ ತಿಳಿದುಕೊಂಡ.
ಪಾಯದ ನಂತರ ಕ್ಯೂರಿಂಗ್ ಲೆಕ್ಕದಲ್ಲಿ ಎರಡು-ಮೂರು ವಾರ ಕೆಲಸಕ್ಕೆ ರಜಾ. ತಿರುಗ ಯಾವಾಗ ಕೆಲಸ ಶುರು ಮಾಡೋದು ಎಲ್ಲಾ ಲೆಕ್ಕ ಹಾಕಿ ಮೂರುವಾರದ ನಂತರ ಕೆಲಸ ಮುಂದುವರೆಸುವ ದಿನ ನಿಷ್ಕರ್ಷೆ ಆಯ್ತಾ….
ಈ ಮೂರುವಾರದಲ್ಲಿ ರೆಡಿ ಆಗಬೇಕಿದ್ದು ಏನೇನು ಅಂತ ಸತ್ಯಣ್ಣ ಪಟ್ಟಿ ಹಾಕಿದ್ದ. ಅದರ ಪ್ರಕಾರ ಸಿಮೆಂಟು ಮರಳು ಇಟ್ಟಿಗೆ ಇವು, ಮರದ ಕೆಲಸ, ಕಿಟಕಿ ಬಾಗಿಲು ಮುಂತಾದವು ಸೇರಿತ್ತು. ಕೈಲಿ ಇದ್ದ ಕಾಸು ಮುಗಿದಿತ್ತು. HDFC ಬ್ಯಾಂಕ್ ನವರಿಗೆ ಕೈಲಿದ್ದ ಕಾಸು ಖಾಲಿ ಆಯ್ತು. ನೀವು ಕೊಡಬೇಕಾದ ಸಾಲ ಕೊಡಿ ಅಂತ ರಿಕ್ವೆಸ್ಟ್ ಮಾಡಿದೆ. ಬ್ಯಾಂಕ್ ಹತ್ತಿರ ಬಂದು ನಮ್ಮ ಆಫೀಸರ್‌ನ ನಿಮ್ಮ ಸೈಟ್ ಹತ್ತಿರ ಇನ್ಸ್ಪೆಕ್ಷನ್ (Inspection)ಮಾಡಿಸಿ ಅಂತ ಹೇಳಿದರು. HDFC ಇಂದ ಸಾಲ ಪಡೆದಿದ್ದ ಗೆಳೆಯ, ಆಫೀಸರ್‌ನ ಅಲ್ಲಿಂದ ಟ್ಯಾಕ್ಸಿಯಲ್ಲಿ ಕರಕೊಂಡು ಬರಬೇಕು, ಇಲ್ಲ ಅಂದರೆ ಟೂ ವೀಲರ್‌ನಲ್ಲಿ ಹಿಂದೆ ಕೂಡಿಸಿ ಕರಕೊಂಡು ಬರಬೇಕೂ… ಅಂತ ಹೇಳಿದ್ದ. ನಾನು ಇನ್ನೂ ಸ್ಕೂಟರ್ ಇಟ್ಟಿರಲಿಲ್ಲ. ಬರೆ ಸೈಕಲ್ ಇತ್ತು. ಸೈಕಲ್ ಹಿಂದೆ ಇಪ್ಪತ್ತು ಮೈಲಿ ಅವರು ಕೂತು ಕ್ಯಾರಿಯರ್ ಕಂಬಿ ಒತ್ತಿಸಿಕೊಂಡು ಕೊಂಡು ಬರೋದು ಸಾಧ್ಯವೇ? ಸಾಧ್ಯ ಆದರೂ ಅದು ಸಾಧುವೇ? is it correct?… ಈ ಚಿಂತೆ ಕಾಡಿತು.
ಟ್ಯಾಕ್ಸಿ ಅಂದರೆ ಅದಕ್ಕೆ ಅದೆಷ್ಟು ಖರ್ಚು? ಆಗ ಬರೀ ಅಂಬಾಸಿಡರ್, ಹಾಗೂ ಹೆರಾಲ್ಡ್ ಕಾರುಗಳು ಮಾತ್ರ ಬೆಂಗಳೂರಿನಲ್ಲಿ. ಅದೂ ಟ್ಯಾಕ್ಸಿ ಬೇಕು ಅಂದರೆ ಮಲ್ಲೇಶ್ವರದ ಟ್ಯಾಕ್ಸಿ ಸ್ಟ್ಯಾಂಡ್‌ಗೆ ಹೋಗಬೇಕು.. ಇನ್ನೂ ಫೋನು, ಇರದಿದ್ದ, ಸೆಲ್ ಫೋನು ಅಂದರೆ ಗೊತ್ತಿಲ್ಲದ ಮತ್ತು ಕ್ಯಾಬ್‌ಗಳನ್ನು ಮನೆ ಮುಂದೆ ತರಿಸಿಕೊಳ್ಳುವ ಒಂದೇ ಒಂದು ಕಲ್ಪನೆಯೂ ಇನ್ನೂ ಉದಯವಾಗಿರದ ಕಾಲ. ಇನ್ನೂ ಹೇಳಬೇಕು ಅಂದರೆ ಅದುವರೆಗೂ ನಾನು ಟ್ಯಾಕ್ಸಿಯಲ್ಲಿ ಸ್ವಂತ ದುಡ್ಡಿನಲ್ಲಿ ಪ್ರಯಾಣ ಮಾಡಿರಲಿಲ್ಲ! ಹೈಸ್ಕೂಲ್ ಓದಬೇಕಾದರೆ ನಮ್ಮ ದೊಡ್ಡಣ್ಣನ ಮಾವ ಅವರು ಮುನಿರೆಡ್ಡಿ ಪಾಳ್ಯದ ಅವರ ಬಂಧುಗಳ ಮನೆಗೆ ಹೋಗಬೇಕಾದರೆ ನೀನೂ ಬಾ ಗೋಪಿ ಅಂತ ಟ್ಯಾಕ್ಸಿಯಲ್ಲಿ ಜತೆಗೆ ಕರೆದುಕೊಂಡು ಹೋಗಿದ್ದರು! ಇದೊಂದೇ ನನ್ನ ಟ್ಯಾಕ್ಸಿ ಅನುಭವ ಅಲ್ಲಿಯವರೆಗೆ.
ತಲೆ ಬಿಸಿ ಆಗೋದಕ್ಕೆ ಇಷ್ಟು ಕಾರಣ ಸಾಕು ತಾನೇ?
ಈ ನನ್ನ ಒಳಗುದಿ. ಮಾನಸಿಕ ತೊಳಲಾಟ , ಒಳತೋಟಿ (ಈ ಪದದ ನಿಜವಾದ ಅರ್ಥ ಸತ್ಯವಾಗಿ ಹೇಳ್ತೀನಿ, ನನಗೆ ಖಂಡಿತ ಈಗಲೂ ಗೊತ್ತಿಲ್ಲ. ನನ್ನ ಮೊದಲನೇ ಕಥಾ ಸಂಕಲನ ಪ್ರಕಟ ಆದಾಗ ಕೆಲವು ಗೆಳೆಯರ ಅಭಿಪ್ರಾಯ ಕೇಳಿ, ಅದನ್ನು ಪುಸ್ತಕದ ಕೊನೆಯಲ್ಲಿ ಸೇರಿಸಿದ್ದೆ. ನನ್ನ ಮಿತ್ರರಲ್ಲಿ ಒಬ್ಬರಾದ ಶ್ರೀಮತಿ ಲಲಿತಾ ಅವರು ಕತೆಗಳಲ್ಲಿ ಒಳತೋಟಿ ಇಲ್ಲ ಎಂದು ಕಾಮೆಂಟ್ ಹಾಕಿದ್ದರು. ನಾನೂ ನನ್ನ ಇನ್ನೊಬ್ಬ ಮಿತ್ರ ಗೌತಮ ಅವರೂ ಅಂದಿನಿಂದ ಇಂದಿನವರೆಗೂ ಈ ಒಳತೋಟಿ ಪದದ ಅರ್ಥ ಹುಡುಕುತ್ತಾ ಇದ್ದೇವೆ, ಇನ್ನೂ ಸಿಕ್ಕಿಲ್ಲ!).
ಟ್ಯಾಕ್ಸಿ ವಿಷಯ ನಾನು ನಂಬದ ನನ್ನ ದೈವಕ್ಕೆ ಟೆಲಿಪತಿ ಆಯಿತು ಅಂತ ಕಾಣುತ್ತೆ. HDFC ಇಂದ ಒಂದು ಪತ್ರ ಬಂತು, ಸಾಲ ಮೊದಲನೇ ಕಂತು ರೆಡಿ ಇದೆ, ಬಾ ಅಂತ! ಆಗ ಈಗಿನ ಹಾಗೆ ecs ಅಂದರೆ electronic clearing system, money transfer, ನೇರ ನಿಮ್ಮ ಖಾತೆಗೆ ಕಳಿಸುವ ಸೌಲಭ್ಯ… ಇವುಗಳು ಹುಟ್ಟಿರಲಿಲ್ಲ ಮತ್ತು ಈಗಿನ ಹಾಗೆ ಕೂತಲ್ಲೇ ಕಾಸು, ATM ಕಾರ್ಡು, ಡೆಬಿಟ್ ಕಾರ್ಡು, ಕ್ರೆಡಿಟ್ ಕಾರ್ಡ್, ಮನೆ ಬಾಗಿಲಿಗೆ ಸಾಲ.. ಮೊದಲಾದ ವ್ಯವಸ್ಥೆಗಳ ಬಗ್ಗೆ ನನ್ನಂತಹ ಎಬ್ಬಂಕ ಮಧ್ಯಮ ವರ್ಗದ ಜನಗಳಿಗೆ ಒಂದು ಊಹೆ ಅಥವಾ ಕಲ್ಪನೆ ಸಹ ಇರಲಿಲ್ಲ! ATM card ಬಂದಿದ್ದು ಎಷ್ಟೋ ವರ್ಷಗಳ ನಂತರ.
HDFC ಪತ್ರ ಬಂತು ಅಂತ ಹೋದೆ. ಅಲ್ಲಿ ಆಫೀಸರ್ “ಬೇರೆ ಇನ್ಯಾವುದೋ ಸೈಟ್ ಏರಿಯಾ ಗೆ ಹೋಗಿದ್ದವರು ನಿಮ್ಮದೂ ನೋಡಿಕೊಂಡು ಬಂದರು…” ಅಂತ ಹೇಳಿ ಮೊದಲನೇ ಕಂತು ಚೆಕ್ ಕೊಟ್ಟರು. ಟ್ಯಾಕ್ಸಿ ಖರ್ಚು ಉಳಿಯಿತು ಅಂತ ಖುಷಿ ಪಟ್ಟೆ!
ಮೂರು ಹಂತದಲ್ಲಿ ಈ ಚೆಕ್ ವಿತರಣೆ ಆಗಿದ್ದು. ಮೊದಲಿನದು ಫೌಂಡೇಶನ್ ನಂತರ, ಎರಡನೆಯದು ರೂಫ್ ನಂತರ ಮೂರನೆಯದು ಒಳ ಹೊರ ಪ್ಲಾಸ್ಟರಿಂಗ್ ನಂತರ. ಈಚೆಗೆ ಈ ವ್ಯವಸ್ಥೆ ಸುಧಾರಿಸಿದೆ ಎಂದು ಕೇಳಿದ್ದೇನೆ ಮತ್ತು ಇದೂ ಈಚೆಗೆ ನನಗೆ ತಿಳಿದಿರುವ ಗೆಳೆಯರು, ಅವರ ಮಕ್ಕಳು ಮನೆ ಕಟ್ಟುವ ಸಾಲಕ್ಕೆ ಈಡಾಗುವುದು ಅಪರೂಪ! ಈಗಿನ ಪೀಳಿಗೆ ಗೇಟೆಡ್ ಕಮ್ಯೂನಿಟಿ ಅಥವಾ ಮಲ್ಟಿ ಸ್ಟೋರಿ ಮನೆಗಳಿಗೆ ಮಾರು ಹೋಗಿವೆ. ಅಲ್ಲಿ ಸೆಕ್ಯೂರಿಟಿ ಹೆಚ್ಚು ಮತ್ತು ಮನೆಗೆ ಸಂಬಂಧಿಸಿದ ನಲ್ಲಿ ಲೈಟು ಕಕ್ಕಸು ಇವುಗಳ ರಿಪೇರಿ ತಲೆನೋವು ಇರದು ಎನ್ನುವ ಕಾರಣ ಮುಂದಿಡುತ್ತಾರೆ. ಅವರ ಲಾಜಿಕ್ ಕೇಳಬೇಕಾದರೆ ಅವರ ತರ್ಕ ಮತ್ತು ಯೋಚನೆ ನೂರಕ್ಕೆ ನೂರು ಸರಿ ಎನಿಸುತ್ತದೆ. ಸ್ವಂತ ನಿವೇಶನದಲ್ಲಿ ಮನೆ ಕಟ್ಟಿಸುವ ಸುಖ ಮತ್ತು ಅನುಭವದಿಂದ ವಂಚಿತರಾಗುತ್ತಿದ್ದಾರೆ ಎಂದು ನನ್ನ ಹಾಗೆ ಯೋಚಿಸುವ ಅಂದಿನ ನನ್ನ ಜಮಾನದ ಪೀಳಿಗೆಗೆ ಸಹಜವಾದ ನೋವು ಇದ್ದೇ ಇದೆ.
ಮೊದಲನೇ ಕಂತಿನ ಸಾಲದ ಚೆಕ್ ತಂದೆ. ಒಟ್ಟು ಸಾಲವನ್ನು ಮೂರು ಸಮಾನ ಭಾಗ ಮಾಡಿ ಮೊದಲನೆಯದು ಬಂದಿತ್ತು. ಮರ ಮುಟ್ಟ್ ರೆಡಿ ಆಗಬೇಕಿತ್ತಲ್ಲಾ. ಅದರ ಬಗ್ಗೆ ಹೇಗೆ ಯಾವರೀತಿ ಮಾಡಬೇಕು ಅಂತ ಪ್ಲಾನಿಸುತ್ತಾ ಇದ್ದೆ. ನಾನು ಮನೆ ಕಟ್ಟುತ್ತಿರೋ ವಿಷಯ ಈ ಸಮಯಕ್ಕೆ ಅರ್ಧ ಫ್ಯಾಕ್ಟರಿಗೆ ಗೊತ್ತಾಗಿತ್ತು. ಸಿಕ್ಕಿದವರೆಲ್ಲಾ ಒಂದೊಂದು ಐಡಿಯ ಕೊಡೋರು. ನಾನೋ ಮೊದಲಿಂದ ಮಾತು ಕಡಿಮೆ ಅವನು. ಯಾರೇ ಸಿಕ್ಕಿದರೂ ಅವರ ತಲೆಯಲ್ಲಿ ಇರುವ ಕಸವೆಲ್ಲವನ್ನೂ ನನ್ನ ತಲೆಗೆ ಟ್ರಾನ್ಸ್ಫರ್ ಮಾಡಿ ಅವರು ನಿರಾಳ ಆಗಿಬಿಡೋರು (ಈಗಲೂ ನಾನು ಹಾಗೇ ಇದೀನಿ ಅಂತ ನನ್ನ ನೆಂಟರು ಹೇಳುತ್ತಾರೆ. ನನ್ನ ನೆಂಟರು, ಗೆಳೆಯರು ನಿನ್ನ ಜತೆ ಮಾತು ಆಡಿದ ಮೇಲೆ ನನ್ನ ತಲೆನೋವು ಮಾಯ ಆಯಿತು ಎನ್ನುತ್ತಾರೆ. ಅವರ ಜತೆಗೆ ಬಂದಿದ್ದವರು ಎಷ್ಟೋ ದಿವಸದ ನಂತರ ಅದು ಹೇಗೆ ನೀನು ಅಷ್ಟೊಂದು ಬೋರ್‌ಗಳನ್ನ ಟಾಲರೇಟ್ ಮಾಡ್ತೀಯಾ ಎಂದು ಕೇಳುತ್ತಾರೆ….! ನಾನು ಕಸ್ತೂರಿ ಡೈಜೆಸ್ಟ್‌ನ ಇದು ಜೀವನ ಇದುವೇ ಜೀವನ ಎನ್ನುತ್ತೇನೆ!).
ಹೀಗೆ ಸಲಹೆ ಕೊಟ್ಟವರ ಎರಡು ಸಲಹೆ ತಲೆಯಲ್ಲಿ ಕೂತು ಬಿಟ್ಟಿತು. ಒಂದು ಕಾರ್ಖಾನೆಯಲ್ಲಿ ಸ್ಕ್ರ್ಯಾಪ್ ವುಡ್ ಕೊಳ್ಳುವುದು. ಇನ್ನೊಂದು ಮರ ಕೊಂಡು ಇಡುವುದು ಅಂದರೆ ಸೀಸನ್ ಮಾಡುವುದು. ಎರಡನೆಯದು ನಂತರ ವಿವರಿಸುವೆ. ಆಗ ಅಂದರೆ ೮೦, ೯೦ರ ದಶಕಗಳಲ್ಲಿ ಬೆಂಗಳೂರಿನ ಸುಮಾರು ಕಾರ್ಖಾನೆಗಳಲ್ಲಿ ಒಂದು ವ್ಯವಸ್ಥೆ ಜಾರಿಯಲ್ಲಿತ್ತು. ಅಲ್ಲಿನ ಉದ್ಯೋಗಿಗಳಿಗೆ ಕಾರ್ಖಾನೆಯ ಅನುಪಯುಕ್ತ ವಸ್ತುಗಳನ್ನು scrap ಹೆಸರಿನಲ್ಲಿ ಕಡಿಮೆ ಬೆಲೆಗೆ ನೀಡುವುದು. ಅದರಲ್ಲಿ ಕೆಲವು ಎಂದರೆ ನೀರು ತುಂಬಲು ಉಪಯೋಗಿಸಬಹುದಾದ ಡ್ರಮ್‌ಗಳು (ಇವು ಪ್ಲಾಸ್ಟಿಕ್, ಸ್ಟೀಲ್ ಈ ರೀತಿಯವು), ಉರುವಲಿಗೆ scrap wood ಮತ್ತು ಮರಗೆಲಸಕ್ಕೆ ಉಪಯೋಗಿಸಬಹುದಾದ ಸ್ಪೆಶಲ್ ವುಡ್… ಈ ತೆರನಾದವು. ಅವುಗಳ ಸದುಪಯೋಗ ಕಡಿಮೆ ಆಗುತ್ತಾ ಬಂದಹಾಗೆ ಮತ್ತು ವ್ಯವಸ್ಥೆಯ ದುರುಪಯೋಗ ಆಗುತ್ತಾ ಬಂದಹಾಗೆ ಇಂತಹ ಸಾಮಗ್ರಿಗಳನ್ನು ಹೊರಗಿನ ಏಜೆನ್ಸಿಗಳಿಗೆ ನೀಡಲು ಶುರುವಾಯಿತು. ಆಗ ಉರುವಲು ಮರ ಐನೂರು ಕೇಜಿಗೆ ಇಪ್ಪತ್ತು ರೂಪಾಯಿ ಮತ್ತು ಸ್ಪೆಶಲ್ ವುಡ್‌ಗೆ ಐನೂರು ಕೇಜಿಗೆ ನಲವತ್ತು ರೂಪಾಯಿ. ಸಾಗಾಣಿಕೆ ವೆಚ್ಚ ನಮ್ಮದು. ಫ್ಯಾಕ್ಟರಿ ಹೊರಗಡೆ ಈ ಸಾಮಗ್ರಿ ವಿತರಣೆ ದಿವಸ ಒಂದು ಹಬ್ಬದ ಸಂಭ್ರಮ ಕಾಣಬಹುದಿತ್ತು. ಹೆಂಗಸರು ಮಕ್ಕಳು ಬಂದು ಅಲ್ಲಿ ರಾಶಿ ಒಟ್ಟಿರುತ್ತಿದ್ದ ಮರದ ತುಂಡುಗಳನ್ನು ಎತ್ತಿನ ಗಾಡಿಗೆ ಸಾಗಿಸುತ್ತಿದ್ದರು. ಸಾಲಾಗಿ ಒಂಟಿ ಎತ್ತಿನ ಗಾಡಿಗಳು ನಿಂತಿರುತ್ತಿತ್ತು. ಕೆಲಸಗಾರ ಹೆಮ್ಮೆಯಿಂದ ಮಾನಿಟರ್ ಮಾಡುತ್ತಿದ್ದ. ಸಾಮಾನ್ಯವಾಗಿ ಈ ಕೆಲಸಗಾರ ತಮಿಳಿನವನು ಮತ್ತು ಅವನ ಇಡೀ ಖಾನ್‌ದಾನ್ ಮರ ಒಯ್ಯಲು ಬಂದಿರುತ್ತಿದ್ದರು. ಇಡೀ ವಾತಾವರಣ ತಮಿಳು ತಾಯಿಯ ಚೆಲ್ವ ತಮಿಳಿನಲ್ಲಿ ತುಂಬಿ ತುಳುಕುತ್ತಿತ್ತು. ಕಾರ್ಖಾನೆಯ ಸುತ್ತಮುತ್ತಲಿನ ಉದ್ಯೋಗಿಗಳ ಉರುವಲಿನ ಸಮಸ್ಯೆ ಇದರಿಂದ ಕಡಿಮೆ ಆಗುತ್ತಿತ್ತು. ಇನ್ನು ಡಬ್ಬಗಳು ಮಾರಾಟ ಆಗಬೇಕಾದರೆ ಕೆಲವು ಸಲ ಸ್ಕ್ರ್ಯಾಪ್ ಯಾರ್ಡ್‌ನಿಂದಲೇ ಮೂರನೇ ಮನುಷ್ಯನಿಗೆ ವ್ಯವಹಾರ ಕುದುರಿಸಿ ಮಾರಾಟ ಆಗುತ್ತಿತ್ತು. ಎರಡು ರುಪಾಯಿ ಮೂರು ರೂಪಾಯಿಗಳಿಗೆ ಸಿಗುತ್ತಿದ್ದ ಇನ್ನೂರು ಲೀ ಹಿಡಿಯುವ ಡಬ್ಬಗಳು ಹದಿನೈದು ಇಪ್ಪತ್ತಕ್ಕೂ ಕಡಿಮೆ ಬೆಲೆಗೆ ಕೈ ಬದಲಾಗುತ್ತಿತ್ತು. ಇದೊಂದು ವ್ಯಾಪಾರಿ ದಂಧೆಯ ಹಂತ ತಲುಪಿದಾಗ ಇವುಗಳ ಮಾರಾಟಕ್ಕೆ ನಿರ್ಬಂಧ ಬಂದಿತು, ನಂತರ ಈ ಸವಲತ್ತು ನಿಂತಿತು.
Scrap wood ನಲ್ಲಿ ಕಡಿದ ಮರದ ಕಾಂಡಗಳು ಸೇರಿದಹಾಗೆ ಕಾರ್ಖಾನೆ ಒಳಗೆ ಉಪಯೋಗಿಸಲು ಆಗದ ಸಣ್ಣ ಸಣ್ಣ ಮರದ ತುಂಡು ಇತ್ಯಾದಿ ಸೇರಿದ್ದು ಅವು ಒಲೆಗೆ ಹೇಳಿ ಮಾಡಿಸಿದ್ದು. ಸ್ಪೆಶಲ್ ವುಡ್ ಅಂದರೆ ಅದು ಇದಕ್ಕಿಂತ ಒಂದು ಗ್ರೇಡ್ ದೊಡ್ಡದು. ಜಾಕಾಯಿ ಮರದ ಹಾಳೆಗಳು ಇರುತ್ತಿದ್ದವು. ಈಗಿನ ಪೀಳಿಗೆ ಜಾಕಾಯಿ ಮರದ ಬಗ್ಗೆ ಕೇಳಿರಲಾರದವರು Silver oak ಮರಕ್ಕೆ ಜಾಕಾಯಿಮರ ಎನ್ನುತ್ತಾರೆ ಎಂದು ನಾನು ತಿಳಿದಿದ್ದೆ. ಹಾಗೆ ನೋಡಿದರೆ ನನ್ನ ತಲೆಯಿಂದಲೇ ಈ ಜಾಕಾಯಿ ಮರ ಎಗರಿಹೋಗಿತ್ತು. ನಿನ್ನೆ ರಾತ್ರಿ ಇದ್ದಕ್ಕಿದ್ದ ಹಾಗೆ ನೆನಪಿಗೆ ಬಂತು! ಇದೇ ರೀತಿ ನೆನಪಾದ ಮತ್ತೊಂದು ಪದ ಎಂದರೆ ಕುಚ್ಚು ಮೊಟ್ಟೆ! ಈ ಕುಚ್ಚು ಮೊಟ್ಟೆ ಬಗ್ಗೆ ನಮ್ಮ ಪೀಳಿಗೆಯ ಹಾಗೂ ನಮ್ಮ ಮುಂದಿನ ಪೀಳಿಗೆಯ ಎಷ್ಟೋ ಜನಕ್ಕೆ ಅರಿವು ಇರಲಾರದು. ಇದರ ಬಗ್ಗೆ ಮುಂದೆ ಹೇಳುತ್ತೇನೆ. ಈಗ ಜಾಕಾಯ್ ಮರದ ಬಗ್ಗೆ.. ಪ್ಯಾಕಿಂಗ್‌ಗೆ ಉಪಯೋಗಿಸುವ ಮರದ ಹಾಳೆಗಳಿಗೆ ಜಾಕಾಯಿ ಮರದ್ದು ಎನ್ನುತ್ತಿದ್ದರು. ತುಂಬಾ ಹಗುರವಾದ ಮರ ಇದು. ಮೇಷಿನುಗಳ ಮತ್ತು ಇತರೆ ವಸ್ತುಗಳ ರಫ್ತು ಮತ್ತು ಅಂದಿನ ಸಂದರ್ಭಗಳಲ್ಲಿ ಈ ಮರದ ಉಪಯೋಗ ಆಗುತ್ತಿತ್ತು. ಐದಡಿ ಆರಡಿ ಉದ್ದದ ಮೂರು ನಾಲ್ಕು ಅಡಿ ಅಗಲದ ಈ ಮರದ ಹಾಳೆಗಳು ಸ್ಟೂಲ್, ಮೇಜು ಕುರ್ಚಿ ಇಂತಹ ವಸ್ತುಗಳಿಗೆ ಬಳಕೆ ಆಗುತ್ತಿತ್ತು. ಕೆಲವು ಸಹೋದ್ಯೋಗಿಗಳು ಈ ಹಲಗೆ ಉಪಯೋಗಿಸಿ ಮನೆಗೆ ಸೇರಿದಂತೆ ಪುಟ್ಟ ರೂಮುಗಳನ್ನು ನಿರ್ಮಿಸಿಕೊಂಡಿದ್ದರು. ತೆಳು ಹಳದಿ ಬಣ್ಣದ ಈ ಮರದ ಹಾಳೆಗಳು ಸ್ಪೆಷಲ್ ವುಡ್‌ಗೆ ಸೇರಿದ್ದವು. ಸ್ವಲ್ಪ ಹೆಚ್ಚು ಛಾತಿ ಇದ್ದ ನೌಕರರು ಇವು ಸ್ಕ್ರ್ಯಾಪ್ ಯಾರ್ಡ್‌ಗೆ ಬಂದ ಕೂಡಲೇ ಅದರ ಮೇಲೆ ತಮ್ಮ ಅಧಿಪತ್ಯ ಸ್ಥಾಪಿಸುತ್ತಿದ್ದರು. ಇದಕ್ಕೆ ಅವರಿಗೆ ಕೆಲವು ಶಾಮೀಲಾಗುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನೆರವು ಇರುತ್ತಿತ್ತು. ಕೆಲವು ಸಲ ಕಾರ್ಖಾನೆ ಒಳಗಡೆ ಕೊಂಚ ರಿಪೇರಿಗೆ ಬಂದ ಟೀಕ್ ವುಡ್‌ನ ಖುರ್ಚಿ ಮೇಜು ಸಹ ಈ ಗುಂಪಿಗೆ ಬಂದು ಬೀಳುತ್ತಿತ್ತು. ಕೊಂಚ ರಿಪೇರಿ ನಂತರ ದೀರ್ಘ ಬಾಳಿಕೆ ಬರುವ ಕುರ್ಚಿ ಮೇಜು ಮಂಚ ದಿವಾನ… ಹೀಗೆ ಪರಿವರ್ತಿತ ಆಗುತ್ತಿತ್ತು. ನನಗೆ ಸಲಹೆ ನೀಡುತ್ತಿದ್ದ ಗೆಳೆಯರು ಇಂತಹ ಸ್ಪೆಶಲ್ ಮರ ಹೊಂದಿಸು, ಅದರಲ್ಲಿ ಮನೆ ಕೆಲಸಕ್ಕೆ ಉಪಯೋಗಿಸಬಹುದಾದ ಮರ ತುಂಬಾ ಚೀಪಾಗೇ ಸಿಗುತ್ತೆ ಎಂದು ಐಡಿಯ ಕೊಡುತ್ತಿದ್ದರು. ಸ್ವಲ್ಪ ಪ್ರಭಾವ ಬೀರುವ ಶಕ್ತಿ ಇದ್ದವರು ಒಳಗಡೆ ಸುಸ್ಥಿತಿಯಲ್ಲಿ ಇರುವ ಸಾಮಗ್ರಿಗಳನ್ನು ಮುರಿದು ಆಚೆ ಸಾಗಿಸಿ ಅಲ್ಲಿಂದ ಮನೆಗೆ ಒಯ್ಯುತ್ತಾರೆ ಎಂದೂ ಸಹ ಹೇಳುತ್ತಿದ್ದರು. ನನ್ನಂತ ಪುಕ್ಕಲರಿಗೆ ಇಂತಹ ಐಡಿಯ ಕೇಳಿದರೆ ಮೈ ಬೆವತು ಪೊಲೀಸು ದೊಣ್ಣೆಯಿಂದ ಆಂಡಿಗೆ ಬಾರಿಸುವ ದೃಶ್ಯ ಮನಸಿನಲಿ ಕುಣಿದು ಕುಪ್ಪಳಿಸುತ್ತಿದ್ದವು! ಅದರಿಂದ ಇಂತಹ ಕಾನೂನು ಬಾಹಿರ ಅಥವಾ ಅನೈತಿಕ ವ್ಯವಹಾರಗಳಿಂದ ನಾನು ದೂರ! ಇಡೀ ಸರ್ವಿಸಿನಲ್ಲಿ ಈ ಭಯದಿಂದಲೇ ಕಳೆದ ನಾನು ಒಂದೇ ಒಂದು ಪೆನ್ಸಿಲ್ ಸಹ ಕದಿಯಲಿಲ್ಲ ಎಂದರೆ ನಾನು ಎಷ್ಟು ಪುಕ್ಕಲ ಎನ್ನುವುದು ನಿಮ್ಮ ಮನಸಿಗೆ ಬರಬಹುದು! ಈಗ ಆ ಬಗ್ಗೆ ಒಂದೂ ಪೆನ್ಸಿಲ್ ಕದಿಯದಿದ್ದುದರ ಬಗ್ಗೆ ನನ್ನ ಮೇಲೇ ನನಗೆ ಅಸಹ್ಯ ಅನಿಸಿದೆ!
ಇಂತಹ ಮರ ಕೊಳ್ಳಲು ಸಹ ಕೆಲವು ಷರತ್ತು ಇದ್ದವು. ಕಾರ್ಖಾನೆ ಸುತ್ತಮುತ್ತ ಇಷ್ಟು ಕಿಮೀ ಒಳಗೆ ಇರಬೇಕು, ಕಾರ್ಖಾನೆ ಸಾರಿಗೆ (ಅಂದರೆ transport, ಕಾರ್ಖಾನೆ ಬಸ್ಸುಗಳನ್ನು ಉಪಯೋಗಿಸುತ್ತಿರಬಾರದು ಮುಂತಾದವು ಮಾಮೂಲಿ ಸ್ಕ್ರ್ಯಾಪ್ ವುಡ್ ಪಡೆಯಲು. ಸ್ಪೆಶಲ್ ವುಡ್ ಪಡೆಯಲು ಮುಖ್ಯ ಷರತ್ತು ಎಂದರೆ ಉದ್ಯೋಗಿ ಮನೆ ಬದಲಾಯಿಸುತ್ತಿರುವುದು ಅದೂ ಟ್ರಾನ್ಸ್ಫರ್ ಕಾರಣ! ಒಮ್ಮೆ ಉರವಲು ಮರ ಮತ್ತೊಮ್ಮೆ ಸ್ಪೆಶಲ್ ವುಡ್ ಪಡೆದಿದ್ದೆ. ಟ್ರಾನ್ಸ್ಫರ್ ಆದ ಗೆಳೆಯನ ಮನ ಒಲಿಸಿ ಅವನಿಗೆ ಬೇಕಿಲ್ಲದ ಮರ ಕೊಂಡಿದ್ದೆ. ಆದರೆ ಈ ಮರ ಉಪಯೋಗವಾಗಿದ್ದು ಬೇರೆಯದೇ ಕೆಲಸಕ್ಕೆ! ಮುಂದೆ ಇದರ ಬಗ್ಗೆ…
ಮೂರುವಾರದ ಗ್ಯಾಪ್‌ನಲ್ಲಿ ರೆಡಿ ಮಾಡಿಕೊಳ್ಳಬೇಕಾಗಿದ್ದ ಕೆಲಸಗಳಲ್ಲಿ ಬಾಗಿಲು ಕಿಟಕಿ ಬಾಗಿಲ ಫ್ರೇಮ್ ಮುಂತಾದವು ಸೇರಿತ್ತು ಎಂದೆ ತಾನೇ? ಮರ ಕೊಂಡು ಅದನ್ನು ಸೀಸನ್ ಮಾಡಬೇಕು ಎನ್ನುವ ಐಡಿಯಾ ಕೊಟ್ಟಿದ್ದರು. ಸೀಸನ್ ಮಾಡುವುದು ಅಂದರೇನು ಅಂತ ತಿಳಿದಿರಲಿಲ್ಲ. ಮರವನ್ನು ವಾತಾವರಣಕ್ಕೆ ಎಕ್ಸಪೋಸ್ ಮಾಡಿ ಇಡಬೇಕು ಅನ್ನುವ ವಿವರಣೆ ಸಿಕ್ಕಿತ್ತು. ಎಕ್ಸಪೋಸ್ ಮಾಡದೇ ಇದ್ದರೆ ಏನಾಗುತ್ತೆ? ಎನ್ನುವ ಪ್ರಶ್ನೆ ಸಹಜವಾಗಿ ಎಲ್ಲರಿಗೂ ಏಳುವ ಹಾಗೆ ನನಗೂ ಎದ್ದಿತು. ನನ್ನ ಗೆಳೆಯನ್ನ ಇದರ ಬಗ್ಗೆ ಕೇಳಿದೆ. ಕಿಟಕಿ ಬಾಗಿಲು ಎಲ್ಲಾ ಸೊಟ್ಟ ಪಟ್ಟ ಆಗಿಬಿಡುತ್ತೆ ಎನ್ನುವ ಉತ್ತರ ಬಂತು! ಸೊಟ್ಟ ಪಟ್ಟ ಆದರೇನು? ಕಿಟಕಿ ಬಾಗಿಲು ಇವು ಹಾಕಲು ಆಗುವುದಿಲ್ಲ ಎನ್ನುವ ಉತ್ತರ ಬಂತು!
ಹಾಗಿದ್ದರೆ ಮರದ ಬದಲು ಕಬ್ಬಿಣಕ್ಕೇ ಮೊರೆ ಹೋದರೆ ಹೇಗೆ? ಅದರದ್ದೇ ಕಿಟಕಿ ಅದರದ್ದೇ ಬಾಗಿಲು…. ಈ ಐಡಿಯ ನಮ್ಮ ಕಾರ್ಖಾನೆಯ ಸಿವಿಲ್ ಎಂಜಿನಿಯರ್ ಅವರನ್ನು ಕೇಳಿದೆ. ಈ ವೇಳೆಗೆ ಸುಮಾರು ಎಕ್ಸಪರ್ಟ್‌ಗಳು ನನಗೆ ಆತ್ಮೀಯರಾಗಿ ಅವರ ಜ್ಞಾನದಾರೆಯನ್ನು ನನಗೆ ಎರೆಯುತ್ತಿದ್ದರು! ನನ್ನ ಹಿಂದೆ ಏನಾದರೂ ಅಂದುಕೊಳ್ಳಲಿ,(ಹುಚ್ಚ, ಕ್ರ್ಯಾಕ್, ಕ್ರಾಂಕ್, ಯಾರೂ ಕಟ್ಟದೆ ಇರೋ ಮನೆ ಇವನೇ ಕಟ್‌ತಿದ್ದಾನೆ, ಟಾಜ್ ಮಹಲ್ ಓನರ್ ಬಂದ….. ಈ ರೀತಿಯವು! ಇಂತಹ ಪದಗಳನ್ನು ಮುಂದೆ ನಾನೇ ಕೆಲವರನ್ನು ಕುರಿತು ಆಡಿದ್ದು ಉಂಟು!) ಅವರನ್ನು ಹಿಡಿದು ಗಂಟೆ ಗಟ್ಟಲೆ ಅವರಿಗೆ ಪ್ರಶ್ನೆ ಕೇಳಿ ಕೇಳಿ ಅವರ ಚಿತ್ರ ಹಿಂಸೆ ಮಾಡಿ ಬೇಕಿದ್ದ ವಿವರ ಪಡೆಯುತ್ತಿದ್ದೆ! ಕಬ್ಬಿಣದ ಬಾಗಿಲು ಕಿಟಕಿ ವಿಷಯಕ್ಕೆ ಅವರನ್ನ ಪ್ರಶ್ನೆ ಕೇಳಿದೆ ತಾನೇ? “ಸಾವಿರಾರು ವರ್ಷ ಈ ರೀತಿಯ ಪ್ರಯೋಗ ನಡೆದು ಈಗ ಇದೇ ಅಂದರೆ ಮರವೇ ಬೆಸ್ಟ್ ಅಂತ ನಿರ್ಧಾರ ಆಗಿದೆ, ಕಬ್ಬಿಣದ ಕಿಟಕಿ ಬಾಗಿಲು ತಲೆಯಿಂದ ಆಚೆ ಓಡಿಸು….” ಎನ್ನುವ ಸಲಹೆ ಕೊಟ್ಟರು.
“ಮಸಲಾ ನಾನು ಕಬ್ಬಿಣದ್ದಕ್ಕೇ ಹೋದರೆ ಏನಾಗುತ್ತೆ…?” ಅಂದೆ.
“ಇಟ್ ವಿಲ್ ಲೀಡ್ ಯು ಟು ಪೆರೆನಿಯಲ್ ಪ್ರಾಬ್ಲಂ…” ಅಂದರು. ಸರಿ ಅಂತ ತಲೆ ಆಡಿಸಿದೆ. ತಲೆ ಆಡಿಸಿದ್ದು ಕನ್ವಿನ್ಸ್ ಆದೆ ಅಂತ ಅಲ್ಲ, ಪೆರೆನಿಯಲ್ ಪದಕ್ಕೆ ಅರ್ಥ ಗೊತ್ತಿರಲಿಲ್ಲ ಅದಕ್ಕೆ!
ಮನೆಗೆ ಬಂದು ಪೆರೆನಿಯಲ್ ಪದಕ್ಕೆ ಅರ್ಥ ಹುಡುಕಿದೆ. ಮನೆಯಲ್ಲಿ ತಾತನ ಕಾಲದಿಂದ ಇದ್ದ ಭಾರದ್ವಾಜ ಡಿಕ್ಷನರಿ ತಂದೆಗೆ ಬಂದು ಅಲ್ಲಿಂದ ನನ್ನ ಅಣ್ಣಂದಿರು, ಅಕ್ಕ ಓದಿದ ನಂತರ ನನಗೆ ಬಂದು ಆ ಸಮಯದಲ್ಲಿ ನನ್ನ ಕಸ್ಟಡಿಯಲ್ಲೇ ಇತ್ತು. ಸಾರ್ವಕಾಲಿಕ ಅನ್ನುವ ಅರ್ಥ ಸಿಕ್ತಾ? ಕಾಲ ಕಳೆದಹಾಗೆ ಪ್ರಾಬ್ಲಂ ಹೆಚ್ಚುತ್ತೆ ಅಂತ ತಲೆಗೆ ಹೊಳೆಯಿತು. ಅದರ ಅನುಭವ ಸಹ ನಾನಿದ್ದ ಬಾಡಿಗೆ ಮನೆಯಲ್ಲಿ ಆಗಿತ್ತು. ಅಲ್ಲಿ ಅವರು ಕಬ್ಬಿಣದ ಕಿಟಕಿ ಇಟ್ಟು ಅದು ಮುಚ್ಚಲು ಹಾಕಲು ಆಗದೇ ಸ್ಥಿರತೆ ಕಾಪಾಡಿಕೊಂಡಿತ್ತು! ಇದರ ಎಫೆಕ್ಟ್ ಅಂದರೆ ಹೋಗ್ತಾ ಬರ್ತಾ ನನ್ನ ಭುಜಕ್ಕೆ ಈ ತೆರೆದ ಕಿಟಕಿಯ ಬಾಗಿಲು ಬಡಿದು ಬಡಿದು ಒಂದು ಪರ್ಮನೆಂಟ್ ಗಾಯ ನನ್ನ ಬಲಗೈ ಭುಜದಲ್ಲಿ ಇತ್ತು!
ಈ ಎಲ್ಲಾ ಬೆಳವಣಿಗೆ ನಡುವೆ ಮರ ಕೊಂಡು ಕೊಂಚ ಸೀಸನ್ ಮಾಡುವುದೇ ಸರಿ ಅನ್ನುವ ನಿರ್ಧಾರಕ್ಕೆ ಬಂದಿದ್ದೆ. ಈ ಮಧ್ಯೆ ಒಮ್ಮೆ ನನ್ನ ಸಹೋದ್ಯೋಗಿ ಅಲ್ತಾಫ್ ನನ್ನ ಜತೆ ಕೂತು ಅವನ ಯಾವುದೋ ಸಮಸ್ಯೆ ಹೇಳುತ್ತಿದ್ದ. ಅವನದ್ದು ಒಂದು ವೆಲ್ಡಿಂಗ್ ಶಾಪ್ ರಾಮಚಂದ್ರ ಪುರದಲ್ಲಿ ಇತ್ತು. ಆಗಾಗ್ಗೆ ಕೂತು ಲೋಕಾಭಿರಾಮ ಮಾತು ಕತೆ ಆಡುತ್ತಾ ಇದ್ದೆವು. ಈ ಹಿಂದೆ ಅಲ್ತಾಫ್‌ಗೆ ಸಿ ಟಿ ಆರ್ ದೋಸೆ ಚಟ ಅಂಟಿಸಿದ್ದು ಮತ್ತು ಅವನು ಅವನ ಬಂಧು ಬಳಗಕ್ಕೆ ಸಿ ಟಿ ಆರ್ ಮಸಾಲೆ ದೋಸೆ ರುಚಿ ಹತ್ತಿಸಿದ್ದು ಹೇಳಿದ್ದೆ ನೆನಪಿದೆ ತಾನೇ? ಸಿಟಿ ಮಾರ್ಕೆಟ್ ಮಸೀದಿ ಮುಂದೆ ಮಾರುತ್ತಿದ್ದ ಸಮೋಸ ಮೊಟ್ಟ ಮೊದಲ ಸಲ ತಿಂದದ್ದು ಸಹ ಇವನ ಜತೆ.
ಮಾತಿನ ಮಧ್ಯೆ ಕಬ್ಬಿಣದ ಕಿಟಕಿ ಬಾಗಿಲ ಪ್ರಸ್ತಾಪ ಬಂತು. ಅದರ ಬಗ್ಗೆ ಅವನ ಒಪೀನಿಯನು ಕೊಟ್ಟ. ನಂತರ
“ನನ್ನ ಹತ್ರ ಸೀಸನ್ ಆಗಿರೋ ಬಾಗಿಲು ಕಿಟಕಿ ಅವೆ….!” ಅಂದ!
ರಾಘವಾಂಕ ನೋ ಯಾರೋ ಅಂದಿನ ಕಾಲದ ಕವಿ ಹುಡುಕುತ್ತಿದ್ದ ಬಳ್ಳಿ ಕಾಲಿಗೆ ತೊಡರಿತು ಅಂತ ಹೇಳಿದ್ದಾನೆ ತಾನೇ? ಅದೇ ಅನುಭವ ನನಗೂ ಆ ಕ್ಷಣದಲ್ಲಿ ಆಗಿದ್ದು!
ಇವನ ಹತ್ರ ಇದ್ದ ಒಂದು ಸೈಟ್‌ನಲ್ಲಿ ಪುಟ್ಟ ಮನೇ ಕಟ್ಟೋಕೆ ಅಂತ ಬಾಗಿಲು ಕಿಟಕಿ ಇವನ್ನ ಕಳೆದ ವರ್ಷ ಮಾಡಿಸಿದ್ದ. ಮನೆ ಕಟ್ಟುವ ಪ್ಲಾನ್ ಮುಂದಕ್ಕೆ ಹೋಯ್ತಾ? ಅವು ಇನ್ನೂ ಅವನ ಹತ್ತಿರವೇ ಇದೆ. ಬೇಕಿದ್ದರೆ ಕೊಂಡುಕೊಬಹುದು. ನನ್ನ ಮನೆ ಇಟ್ಟಿಗೆ ಕೆಲಸ ಶುರು ಆಗಿಲ್ಲ, ಮರ ತರಬೇಕು ಅದನ್ನ ಸೀಸನ್ ಮಾಡಬೇಕು ಅನ್ನುವ ಯೋಚನೆ ಇದೆ. ಆಗಲೇ ರೆಡಿ ಇರುವ ಸೀಸನ್ ಸಹ ಆಗಿರುವ ಮರ ಸಿಗುತ್ತೆ ಅಂದರೆ……!
ಯಾರಿಗೂ ಮಾರಲು ಈಗಲೇ ಹೋಗಬೇಡ. ಒಂದೆರೆಡು ದಿವಸ ಕಾಯಿ ಅಂತ ಹೇಳಿ ಸತ್ಯಣ್ಣ ಹತ್ತಿರ ಓಡಿದೆ. ಹೀಗಂತೆ ಹೀಗಂತೆ ಹೀಗಂತೆ…. ಅಂತ ವಿವರಿಸಿದೆ. ಅಲ್ತಾಫ್ ಸತ್ಯಣ್ಣ ಇಬ್ಬರೂ ಪರಿಚಿತರು. ಪೂರ್ತಿ ವಿವರ ಪಡೆದೆವಾ… ಮಾರನೇ ದಿವಸ ಕೂತು ವ್ಯಾಪಾರವೂ ಮುಗಿಸಿ ಆಯಿತು ಅದರ ಮಾರನೇ ದಿವಸ ನಾನಿದ್ದ ಬಾಡಿಗೆ ಮನೆಗೆ ಬಾಗಿಲು ಕಿಟಕಿ ಡೆಲಿವರಿ ಆಗಬೇಕು… ಹೀಗೆ ಮಾತು ಆಗಿದ್ದು. ಅಲ್ತಾಫ್ ಈಗ ಇನ್ನೊಂದು ನ್ಯೂಸ್ ಬಿಟ್ಟ. ಕಿಟಕಿಗೆ ಗ್ರಿಲ್ ಮಾಡಿದ್ದೀನಿ ಅದನ್ನೂ ಕೊಡ್ತೀನಿ ಅಂದ. ಕಿಟಕಿ ಕೊಂಡಿದ್ದಿವಿ ಅದನ್ನೂ ಹಾಗೇ ಕೊಡು ಅಂತ ನಾನು. ಇಲ್ಲ ಒಳ್ಳೇ ಗ್ರಿಲ್ ಅದು ನನ್ನ ಮನೆಗೆ ಅಂತ ಸೂಪರ್ ಮೆಟಿರಿಯಲ್ ಹಾಕಿದ್ದೀನಿ… ಅಂತ ಅವನು.
ಮೊದಲು ಬರೇ ಕಿಟಕಿ ವಿಷಯ ಹೇಳಿ ಅದು ಮಾರಾಟ ಆದ ನಂತರ ಗ್ರಿಲ್ ಸಂಗತಿ ತೆಗೆದ ಅಂದರೆ ಅವನ ವ್ಯಾವಹಾರಿಕ ಕೌಶಲ್ಯದ ಬಗ್ಗೆ ಖುಷಿ ಅನಿಸಿತು. ಬೇರೆಯವರ ಬಳಿ ಇವನು ಈ ಕೌಶಲ್ಯ ತೋರಿಸಿದ್ದರೆ ಖುಷಿ ಹೆಚ್ಚೇ ಆಗುತ್ತಿತ್ತು.ಆ ದರೆ ಈಗ ಖುಷಿ at my cost ಎಂದು ಬೇಸರವೂ ಆಯಿತು. ಗ್ರಿಲ್ ಬೇಡ ಬಿಡು ಅಂತ ಹೇಳುವುದು ಅಂತ ಅಂದುಕೊಂಡೆ. ಹೇಗಿದ್ದರೂ ಅದನ್ನ ಆಮೇಲೆ ಮಾಡಿಸಲೇಬೇಕು ಅನಿಸಿ ಅದಕ್ಕೂ ಒಂದು ರೇಟ್ ಮಾತನಾಡಿ ಎಲ್ಲವೂ ನನ್ನ ಬಾಡಿಗೆ ಮನೆಗೆ ಬರುವ ವ್ಯವಸ್ಥೆ ಆಯಿತು. ಒಂದೇ ಒಂದು ಸಲ ಕೊಳ್ಳುವ ವಸ್ತುವನ್ನು ನೋಡದೆ ಯೋಚನೆ ಸಹ ಮಾಡದೇ ಹಣ ಪಾವತಿ ಮಾಡಿದ್ದೆ. ಕಣ್ಣು ಮುಚ್ಚಿ ವ್ಯಾಪಾರ ಮಾಡಿದ್ದರ ಅನುಭವ ಮುಂದೆ ಹೇಳುತ್ತೇನೆ. ಪೆರೆನಿಯಲ್ ಪ್ರಾಬ್ಲಂ ಆಗಿ ಮುಂದೆ ಜೀವಮಾನ ಪೂರ್ತಿ ಕಾಡಬಹುದಾದ ವಿಷಯ ಆಗಿದ್ದು ಮತ್ತು ಅದನ್ನು ಓವರ್ ಕಮ್ ಮಾಡಿದ್ದು ಈಗ ಇತಿಹಾಸ! ಅದನ್ನು ಮುಂದೆ ನಿಮಗೆ ಸವಿವರವಾಗಿ ಇಡುತ್ತೇನೆ, ಕೊಂಚ ತಾಳ್ಮೆ ಇರಲಿ.
ಮರದ ಪ್ರಾಬ್ಲಂ ಅಂದರೆ ಅದನ್ನು ಕೊಳ್ಳುವ ಮರದ ಅಂಗಡಿಯಲ್ಲಿ ಅದನ್ನು ಕತ್ತರಿಸುವ ಮತ್ತು ಅದನ್ನು ಸಾಗಿಸುವ ಒಂದು ದೊಡ್ಡ ತಲೆನೋವು ನಿವಾರಣೆ ಈ ಒಂದು ನಡೆಯಿಂದ ಅಂದರೆ ಸಿಂಗಲ್ ಸ್ಟ್ರೋಕ್‌ನಿಂದ ಆಗಿತ್ತು. ಆಗಿನ ಸಂದರ್ಭದಲ್ಲಿ ಮನೆಯ ಮರ ಮುಟ್ಟುಗಳ ವ್ಯಾಪಾರ ಹೇಗೆ ನಡೆಯುತ್ತಿತ್ತು ಎಂಬುದರ ಒಂದು ಕಿರು ಪರಿಚಯ ನಿಮಗೆ ಮಾಡಲೇ ಬೇಕು, ಕಾರಣ ಎಂತಹ ಮ್ಯಾಥ ಮಟಿಕ್ಸ್ ಜೀನಿಯಸ್‌ಗಳೂ ಹೇಗೆ ತಲೆಕೆಟ್ಟು ಗಬ್ಬೆದ್ದು ಹೋಗುತ್ತಾರೆ ಎಂದು ಒಂದು ಅರಿವು ಮೂಡಬೇಕು. ಒಂದು ಉದಾಹರಣೆ ಮೂಲಕ ನಿಮಗೆ ಈ ತಲೆನೋವು ಟ್ರಾನ್ಸ್ಫರ್ ಮಾಡುತ್ತೇನೆ…..!
ನಿಮಗೆ ಐದು ಕಿಟಕಿ ನಾಲ್ಕು ಬಾಗಿಲು… ಹೀಗೆ ಬೇಕು ಅಂತ ಇಟ್ಕೊಳ್ಳಿ. ಅದನ್ನೆಲ್ಲ ಪಟ್ಟಿ ಮಾಡಿ ನಿಮ್ಮ ಡೈರಿಯಲ್ಲಿ ಬರ್ಕೋತೀರಿ. ಕಿಟಕಿ ಉದ್ದ ಅಗಲ, ಬಾಗಿಲು ಅಂದರೆ ಅದರ ಎತ್ತರ ಅಗಲ ದಪ್ಪ… ಹೀಗೆ. ಇದನ್ನೆಲ್ಲಾ ಕ್ಲೀನಾಗಿ ಬರೆದು ಹೆಮ್ಮೆಯಿಂದ ತಲೆ ಎತ್ತಿಕೊಂಡು ಮರದ ಅಂಗಡಿಗೆ ಹೋಗುತ್ತೀರಿ. ಅಲ್ಲಿ ಕೂತಿರುವ ಗುಮಾಸ್ತೆ ಎದುರು ನಿಮ್ಮ ಡೈರಿ ತೆಗೆದು ನಿಮಗೆ ಬೇಕಿರುವ ಮರದ ವಿವರ ಕೊಡುತ್ತೀರಿ. ನಾನು ಮನೆ ಕಟ್ಟಿದಾಗ ಮುಂಬಾಗಿಲು ಟೀಕ್, ಕಿಟಕಿ ಮತ್ತಿ, ಹೊನ್ನೆ ಅಂತ ಚಾಲ್ತಿಯಲ್ಲಿತ್ತು. ಈಗ ಹೇಗೋ ತಿಳಿಯದು. ಟೀಕ್ ಮರ ಮತ್ತಿ, ಹೊನ್ನೆಗೆ ಹೋಲಿಸಿದರೆ ಸುಮಾರು ಎರಡು ಪಟ್ಟು ಬೆಲೆ ಹೆಚ್ಚು. ಅದರಿಂದ ನಮ್ಮ ಚಾಯ್ಸ್ ಅಂದರೆ ಮತ್ತಿ, ಹೊನ್ನೆ ಅಷ್ಟೇ!
ನಿಮ್ಮ ಡೈರಿ ನೋಡಿ ಮೊದಲ ಪ್ರಶ್ನೆ ಅಂಗಡಿಯವರಿಂದ ಬರೋದು “ಮತ್ತಿ ಹೊನ್ನೆ ಟೀಕ್.. ಯಾವುದು ಕೊಡಲಿ?”
ಇಲ್ಲಿಂದ ಶುರುವಾಗುವ ಗೊಂದಲ ಅಂದರೆ confusion ಏರುತ್ತಾ ಹೋಗುತ್ತೆ.
ನೀವು ಯಾವ ಮರ ಎಷ್ಟು ಅಂತ ರೇಟ್ ಕೇಳ್ತೀರಿ ಮತ್ತು ಒಂದು ಆಯ್ಕೆ ಆಗುತ್ತಾ?
“ಎಷ್ಟು ಸಿ ಎಫ್ ಟಿ ಬರುತ್ತೆ……” ಸಿ ಎಫ್ ಟಿ ಅಂದರೆ ಕ್ಯೂಬಿಕ್ ಫುಟ್. ಒಂದು ಅಡಿ ಅಗಲ, ಒಂದು ಅಡಿ ಉದ್ದ, ಒಂದು ಅಡಿ ಎತ್ತರ ಇದು ಒಂದು ಕ್ಯೂಬಿಕ್ ಫೀಟ್ ಲೆಕ್ಕ!
ನೀವು ಕ್ಲೀನ್ ಬೋಲ್ಡ್ ಆಗ್ತೀರಿ. ನಾಲ್ಕು ಇಂಚು ಅಗಲ, ಮೂರು ಇಂಚು ದಪ್ಪ, ಏಳು ಅಡಿ ಉದ್ದ.. ಎಷ್ಟು ಸಿ ಎಫ್ ಟಿ ಆಗುತ್ತೆ…?
ಕತೆ ಹೀಗೇ ಮುಂದುವರೆಯುತ್ತದೆ..
ಈ ತಾಪತ್ರಯ ನನಗೆ ತಪ್ಪಿದ್ದು ಮತ್ತು ಇಂತಹ ತಲೆನೋವಿನಿಂದ ಅತಿ ಸುಲಭವಾಗಿ ಹೊರಬಂದಿದ್ದು
ಎಷ್ಟು ಖುಷಿ ಆಯಿತು ಅಂದರೆ ಯಾವುದಾದರೂ ದೇವರಿಗೆ ಮುಡಿಪು ಕಟ್ಟುತ್ತಾ ಇದ್ದೆ (ಆಗ ನನಗೆ ದೇವರಲ್ಲಿ ನಂಬಿಕೆ ಇದ್ದಿದ್ದರೆ…!)
ಮೂರು ವಾರ ಕೆಲಸಕ್ಕೆ ರಜಾ ಕೊಟ್ಟಿದ್ದೆ ಅಂತ ಹೇಳಿದೆ ತಾನೇ. ಮಧ್ಯ ಮಧ್ಯ ಮಲ್ಲಯ್ಯ ಸಿಗೋನು ಸಾಮಿ ಕೆಲಸ ಬೇಗ ಶುರು ಮಾಡಿ ಅಂತ ಹೇಳಿ ತಲೆ ಕೆರೆಯುತ್ತಾ ನಿಲ್ಲುತ್ತಿದ್ದ. ಪಾಪ ಹಣದ ಅವಶ್ಯಕತೆ ಇದೆಯೇನೋ ಅಂತ ನೂರು ಇನ್ನೂರು ಕೊಟ್ಟರೆ ಇನ್ನೂ ಬೇಕ್ರ ಅನ್ನೋನು. ಇನ್ನೊಂದು ನೂರು ಕೊಟ್ಟು ಅವತ್ತಿಗೆ ಬೀಸೋ ದೊಣ್ಣೆ ಇಂದ ತಪ್ಪಿಸ್ಕೋತಾ ಇದ್ದೆ!
ಇವನು ಜಾಸ್ತಿ ಹಣ ಕಿತ್ತರೆ ಏನು ಮಾಡೋದು ಅನಿಸಿತು. ಸತ್ಯಣ್ಣ ನನ್ನ ಸಮಸ್ಯೆ ಕೇಳಿದ. ಒಂದು ಗಂಟೆ ಇಬ್ಬರೂ ಅದೇನೇನು ಪ್ಲಾನ್ ಮಾಡಬಹುದು ಅಂತ ಚಿಂತಿಸಿದೆವು.
ಒಂದು ಹೊಸಾ ಪ್ಲಾನ್ ತಲೆಗೆ ಹೊಳೆಯಿತು. ಕೆಲಸಕ್ಕೆ ಬರುವ ಹೆಣ್ಣು ಗಂಡು ಆಳುಗಳ ಪ್ರತಿದಿವಸ ಅಟೆಂಡೆನ್ಸ್ ತೆಗೆಯೋದು. ವಾರದ ಕೊನೆಗೆ ಅವರಿಗೆ ಈ ಲೆಕ್ಕದಲ್ಲೇ ಕೊಡೋದು ಅಂತ ಮಲ್ಲಯ್ಯನಿಗೆ ಜಬರ್ದಸ್ತ್ ಮಾಡಿ ಹೇಳೋದು. ಅವನಿಗೂ ಒಂದು ಗಾರೆ ಕೆಲಸದವನಿಗೆ ಅದೇನು ಕೂಲಿ ಕೊಡ್ತೀವಿ ಅದೇ ರೇಟ್ ನಲ್ಲಿ ಕೊಡೋದು.. ಮಲ್ಲಯ್ಯ ಒಪ್ಪಲಿಲ್ಲ ಅಂದರೆ? ಅವನನ್ನ ಕೆಲಸ ಬಿಟ್ಟು ಹೋಗು ಅನ್ನೋದು. ನಮ್ಮ ಕಾಂಟ್ರಾಕ್ಟ್ ನಲ್ಲಿ ಇದು ಇದೆಯಲ್ಲಾ…..
ಮೂರುವಾರದ ನಂತರ ಕೆಲಸ ಶುರು ಆದಾಗ ಈ ಸಿಸ್ಟಂ ಜಾರಿ ಆಯಿತು. ಇದರಿಂದ ನನಗೆ ಮಲ್ಲಯ್ಯನ ಮೇಲೆ ನಿಯಂತ್ರಣ ಬಂತು ಆದರೆ ಪಾಪ ಮಲ್ಲಯ್ಯ ಒದ್ದಾಡಿ ಬಿಟ್ಟ! ಈಗ ನಲವತ್ತು ಪ್ಲಸ್ ವರ್ಷದ ನಂತರ ಇದು ನೆನೆಸಿಕೊಂಡರೆ ಮಲ್ಲಯ್ಯ೦ಗೆ ಕೊಟ್ಟ torture ನನಗೆ ಅಷ್ಟು ಸರಿ ಅನಿಸದು. ಆದರೆ ಅವತ್ತು ಹಾಗೇ ಕಟ್ ನಿಟ್ಟಾಗಿ ನಾನು ಇರಬೇಕಿತ್ತಾ ಎನ್ನುವ ತೊಳಲಾಟ ನನಗೆ ಕಾಡಿದೆ!
ಮತ್ತೊಂದು ವಿಶೇಷ ಜಾಣತನದ ನಡೆ ತಮಗೆ ವಿವರಿಸಿ ಬಿಡಬೇಕು. ಮೂರು ವಾರದ ನಂತರ ಕೆಲಸ ಶುರು ಮಾಡಬೇಕು ತಾನೇ? ಎರಡು ಮೂರು ದಿವಸ ಮೊದಲೇ ನಮ್ಮ ಹತ್ತಿರದ ಇಟ್ಟಿಗೆ ಗೂಡಿಗೆ ಹೋಗಿ ಇಟ್ಟಿಗೆ ವ್ಯಾಪಾರ ಮಾಡಿದ್ದೆ. ನಮ್ಮ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬರು (ಅವರ ಹೆಸರು ಕೇಶವಮೂರ್ತಿ ಇರಬೇಕು)ಇಟ್ಟಿಗೆ ಗೂಡು ಇಟ್ಟಿದ್ದರು. ಅವರ ಗೂಡಿನ ಇಟ್ಟಿಗೆ ಬೆಸ್ಟ್ ಅಂತ ಹೆಸರು ಮಾಡಿತ್ತು. ಅಲ್ಲಿಂದ ಇಟ್ಟಿಗೆ ತಂದೆ ಲಾರಿಯಲ್ಲಿ. ಮಲ್ಲಯ್ಯ ಮರಳ ರಾಶಿ ಮೇಲೆ ಕೂತಿದ್ದವನು ಧಡಕ್ ಅಂತ ಎದ್ದ.
“ಎಲ್ಲಿಂದ ತಂದ್ರಿ ಇದನ್ನ? ಸರಿಯಾಗಿ ಸುಟ್ಟಿಲ್ಲ ಇದು ಅರ್ಧ ಬೆಂದವೆ ಅಷ್ಟೇ….!”ಅಂದ!
ಇಟ್ಟಿಗೆ ಸುಟ್ಟಿಲ್ಲ ಅಂದ್ರೆ ಸರಿ ಅರ್ಧ ಬೆಂದವೆ ಅಂದರೆ ಇವನೇನು ಅನ್ನ ಹಿಸುಕಿ ನೋಡಿದ ಹಾಗೆ ನೋಡಿದ್ದಾನಾ…? ಕೋಪ ಬಂತು. ಕೂಲ್ ಗೋಪಾಲ್ ಕೂಲ್ ಅಂತ ಹೇಳಿಕೊಂಡೆನಾ..? ನೆನಪಿಲ್ಲ.
“ಹೌದಾ ಆ ಪ್ರಾಬ್ಲಮ್ಮು ಇದೆಯಾ? ಲಾರಿ ಹತ್ತು ವಾಪಸ್ ಕೊಟ್ಟು ಬೇರೆ ತರೋಣ…..”ಅಂದೆ ಮಲ್ಲಯ್ಯ ಗೆ.
“ಇರ್ರಪ್ಪಾ ಇಟ್ಟಿಗೆ ಇಳಿಸಬೇಡಿ. ಇಟ್ಟಿಗೆ ಸರಿಯಾಗಿಲ್ವಂತೆ. ಮಲ್ಲಯ್ಯ ಜತೆಗೆ ಬರ್ತಾನೆ. ಅಲ್ಲಿ ಡೌನ್ ಲೋಡ್ ಮಾಡಿ….”ಅಂದೆ.
“ಯಾವನ್ ಚೆನ್ನಾಗಿಲ್ಲ ಅಂತ ಹೇಳಿದ್ದು? ಏ ಮೇಸ್ತ್ರಿ ಬಾ ಇಲ್ಲಿ…”ಅಂತ ಲಾರಿ ಕೂಲಿ ಗಳು ಇವನ ಹತ್ರ ಬಂದರು.
ಮಲ್ಲಯ್ಯ ಪುಸಕ್ ಅಂತ ಜಾಗ ಖಾಲಿ ಮಾಡಿಬಿಟ್ಟ. ಪೂರ್ತಿ ಇಟ್ಟಿಗೆ ಇಳಿಸಿ ಲಾರಿ ಹೋದಮೇಲೆ ಅಲ್ಲೇ ಎಲ್ಲಿಂದಲೋ ಬಂದ!
ಇದು ಮುಂದೆ ಸುಮಾರು ಸಲ ರಿಪೀಟ್ ಆದವು.
ಇಟ್ಟಿಗೆ ಕೆಲಸ ಶುರು ಆದಾಗ ಒಂದು ವಿಚಿತ್ರ ಸಂಧಿಗ್ಧ ಹುಟ್ಟಿ ಬಿಡ್ತು. ಒಂದು ಚದರ ಅಂದರೆ ಹತ್ತಡಿ ಉದ್ದ ಅಗಲ ಎತ್ತರದ ಗೋಡೆ ನಾಲ್ಕು ಕಡೆ ಮಲ್ಲಯ್ಯ ಕಟ್ಟ ಬೇಕಿರುವುದು. ಬಾಗಿಲು ಕಿಟಕಿ ಇವೆಲ್ಲಾ ಬಂದರೆ ಅವನು ಹತ್ತು ಅಡಿ ಕಟ್ಟಿದ ಹಾಗೆ ಆಗುಲ್ಲವಲ್ಲ..?
ಇದನ್ನು ಮೊದಲು ಮಲ್ಲಯ್ಯನ ಹತ್ತಿರವೇ ಡಿಸ್ಕಸ್ ಮಾಡುವುದು ಅಂದುಕೊಂಡೆ.
“ಮಲ್ಲಯ್ಯ ಈಗ ಚದರ ಅಂದರೆ ಹತ್ತಡಿ ಉದ್ದ ಅಗಲ ಎತ್ತರದ ಗೋಡೆ ನಾಲ್ಕು ಕಡೆ ನೀನು ಕಟ್ಟ ಬೇಕಿರುವುದು ಅಲ್ವಾ…”ಅಂತ ಪೀಠಿಕೆ ಹಾಕಿದೆ. ಮಲ್ಲಯ್ಯನಿ ಗೆ ಇದೇನೋ ಹೊಸಾ ಪ್ರಾಬ್ಲಂ ಬಂತು ಅಂತ ಹೆದರಿಕೆ ಶುರು ಆಯ್ತು ಅಂತ ಕಾಣುತ್ತೆ.
“ಹೂಂ ಹೌದು ಅದಕ್ಕೇ ನೀಗಾ….”ಅಂದ.
“ಹತ್ತ ಡಿ ಗೋಡೆ ಅಂದರೆ ಮಧ್ಯೆ ಬಾಗಿಲು ಕಿಟಕಿ ಇವೆಲ್ಲಾ ಬಂದು ಬಿಡುತ್ತಲ್ಲಾ……”
“ಅದಕ್ಕೇ ಕಿಟಕಿ ಬಾಗಿಲು ಇಲ್ಲದೇ ಬರೀ ಇಟ್ಟಿಗೆ ಇಟ್ಟು ಕಟ್ಟಿ ಬಿಡಲಾ? ನೀವೇನು ಮನೆ ಕಟ್ಟುತ್ತಾ ಇದೀರೋ ಅನಾರ್ಕಲಿ ಸಮಾಧಿ ಕಟ್ತಾ ಇದೀರೋ…….”ಅಂದ. ಅವನಿಗೆ ಅಷ್ಟು ಕೋಪ ಉಕ್ಕಿತ್ತು.
ಮರು ನಿಮಿಷದಲ್ಲೇ ಮನೆ ಕಟ್ ತಾ ಇದೀರಿ. ಸಮಾಧಿ ಮಾತು ಬರಬಾರದಿತ್ತು…..”ಅಂತ ಪೆಚ್ಚಾಗಿ ಬಿಟ್ಟ. ಮಲ್ಲಯ್ಯನ ಮತ್ತೊಂದು ಮುಖ ಅವತ್ತು ನೋಡಿದೆ. ಹಂತ ಹಂತವಾಗಿ ಅವನು ನನಗೆ ಅಡ್ಜಸ್ಟ್ ಆಗಿದ್ದು ಮತ್ತು ನಲವತ್ತು ವರ್ಷಗಳ ನಂತರವೂ ಅವನ ನೆನಪು ಹಸಿರು ಹಸಿರಾಗಿರುವುದು ನನಗೆ ಅಚ್ಚರಿಯ ಸಂಗತಿ. ಇದು ಮುಂದೆ ನಿಧಾನಕ್ಕೆ ತಮ್ಮೆದುರು ಹರವುತ್ತೇನೆ…
ಮುಂದುವರೆಯುವುದು…

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.
ಈ ಲೇಖನ ಓದಿದಾಗ ನನಗೆ ಈ ಕೆಳಗಿನ ಧೈರ್ಯ ಬಂದಿದೆ :
ನಾನು ಮನೆ ಕಟ್ಟಿಸಲೂಬಹುದು, ಕಂತ್ರಾಟುದಾರನೂ ಆಗಬಹುದು, ಟಿಂಬರ್ ವ್ಯಾಪಾರವನ್ನೂ ಮಾಡಬಹುದು, ಇತ್ಯಾದಿ ಇತ್ಯಾದಿ.
– ಎಚ್. ಆನಂದರಾಮ ಶಾಸ್ತ್ರೀ