Advertisement
“ಚಾಂಡಾಳನೊಬ್ಬನ ಆತ್ಮ ವಿಮರ್ಶೆ”: ದೇವಿಕಾ ನಾಗೇಶ್‌ ಬರಹ

“ಚಾಂಡಾಳನೊಬ್ಬನ ಆತ್ಮ ವಿಮರ್ಶೆ”: ದೇವಿಕಾ ನಾಗೇಶ್‌ ಬರಹ

ಬಂಗಾಳದ ರಕ್ತ ಚರಿತ್ರೆಯನ್ನು ಲಕ್ಷಾಂತರ ಜನರ ನಿತ್ಯ ನರಕವನ್ನು ಪ್ರಭುತ್ವಗಳ ನಾಚಿಕೆಗೇಡಿನ ಹುಸಿತನವನ್ನು ಯಾವುದೇ ಮುಚ್ಚುಮರೆಯಿಲ್ಲದೆ ಈ ಕೃತಿ ತೆರೆದಿಡುತ್ತದೆ. ಹಳೆಯ ಕಳೆದ ಶತಮಾನದ ಕೊನೆಯಲ್ಲಿ ನಮ್ಮ ದೇಶದಲ್ಲಿ ಹಲವು ಹೆಸರಾಂತ ರಾಜಕಾರಣಿಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನಡೆಸಿದ ತಂತ್ರಗಾರಿಕೆಯನ್ನು ಅವರ ಅಸಲಿ ಮುಖವನ್ನು ತೆರೆದಿಡುತ್ತದೆ. “ವಿರೋಧಿಗಳು ನನಗೆ ಪ್ರೀತಿ ತೋರಿಸಿದಾಗ ಸಾಧ್ಯವಾಗದ್ದು, ಕೋಪ ತೋರಿಸಿದಾಗ ಸಾಧ್ಯವಾಗಿದೆ. ನನ್ನ ಕೋಪವನ್ನು ಅವರು ಜೀವಂತವಾಗಿಟ್ಟಿದ್ದಾರೆ. ಅವರ ಕೋಪದ ಫಲ ಶ್ರುತಿಯೇ ನನ್ನ ಪುಸ್ತಕ.” ಬ್ಯಾಪಾರಿಯವರ ಮಾತಿದು.
ಮನೋರಂಜನ್‌ ಬ್ಯಾಪಾರಿಯವರ ಆತ್ಮಕತೆಯನ್ನು ಡಾ. ಎಚ್. ಎಸ್.ನಾಗಭೂಷಣ “ಚಾಂಡಾಳನೊಬ್ಬನ ಆತ್ಮ ವಿಮರ್ಶೆ” ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದು ಇದರ ಕುರಿತು ದೇವಿಕಾ ನಾಗೇಶ್‌ ಬರಹ ನಿಮ್ಮ ಓದಿಗೆ

ಸಂಘರ್ಷದ ಹಾದಿಯಲ್ಲಿ… ಚಾಂಡಾಳನೊಬ್ಬನ ಆತ್ಮ ವಿಮರ್ಶೆ. ವೈವಿಧ್ಯಮಯವು ಈ ಜಗವು. ಬದಲಾವಣೆ ಇದರ ನಿಯಮ. ಈ ಮಾತು ನಿಜ ಎಂದು ಒಪ್ಪಿಕೊಂಡಾಗ ಈ ಬದಲಾವಣೆ ಜಗತ್ತಿಗೆ ಉಳಿತನ್ನು ಮಾಡುವಂತಹದ್ದೇ ಎನ್ನುವ ಪ್ರಶ್ನೆ ಕಣ್ಣೆದುರಿಗೆ ಇರುವ ವಾಸ್ತವದೊಂದಿಗೆ ಎದುರಾಗುತ್ತದೆ. ಜಗತ್ತಿನ 10ಶೇಕಡಾ ಜನರಿಗಾಗಿ 90 ಶೇಕಡಾ ಜನ ಬದುಕಲು ಪಡುತ್ತಿರುವ ಬವಣೆ, ಸಂಕಷ್ಟಗಳು ಮುಖಾಮುಖಿಯಾಗುತ್ತದೆ. ಇಂತಹ ಮಾತು ಮತ್ತು ಕೃತಿಗಿರುವ ಭಿನ್ನತೆಯನ್ನೊಳಗೊಂಡ ಲೋಕ ವೃತ್ತಾಂತವನ್ನು ತನ್ನ ಬದುಕಿನ ಕಥಾನಕವಾಗಿ ಹೆಣೆದವರು ಬ್ಯಾಪಾರಿ ಮನೋರಂಜನ್. ಇಂಗ್ಲಿಷ್ ಮೂಲದ Interrogating My Chandala life ಕೃತಿಯ ಕನ್ನಡ ಅನುವಾದ ಡಾ. ಎಚ್. ಎಸ್.ನಾಗಭೂಷಣ ಮಾಡಿದ್ದಾರೆ. 2017ರಲ್ಲಿ ಪ್ರಕಟವಾದ ಈ ಮೂಲ ಕೃತಿ ‘ಚಾಂಡಾಲನೊಬ್ಬನ ಆತ್ಮ ವಿಮರ್ಶೆ’ ಎಂಬ ಶೀರ್ಷಿಕೆಯಲ್ಲಿ ಕನ್ನಡ ಅನುವಾದ 2022 ರಲ್ಲಿ ಆಗಿದೆ. ಕನ್ನಡದ ನೆಲಕ್ಕೆ ಒಪ್ಪುವ ಮಾದರಿಯಲ್ಲಿ ಸರಳವಾಗಿ ಮನುಷ್ಯ ಲೋಕದ ಬೂಟಾಟಿಕೆಯನ್ನು ಕೃತಿಯ ಮೂಲದ ಆಶಯಕ್ಕೆ ಚ್ಯುತಿ ಬರದಂತೆ ಮಾಡಿರುವುದು ಅನುವಾದಕರ ವಿಶೇಷತೆ. ಹೀಗಾಗಿ ಈ ಕೃತಿಯನ್ನು ಕನ್ನಡಿಗರಿಗೆ ದಕ್ಕಿಸುವಲ್ಲಿ ಅವರು ಹಾಕಿದ ಶ್ರಮ ಸ್ಮರಿಸಲೇಬೇಕು.

ದಲಿತ, ಚಾಂಡಾಳ ಸ್ವತಂತ್ರ ಭಾರತದಲ್ಲಿ ಈ ಎರಡು ಪದಗಳು ಬೇರೆ ಬೇರೆ ಕಾರಣಕ್ಕೆ ಸದಾ ಸುದ್ದಿಯಲ್ಲಿರುವಂತಹದ್ದು. ಇಂತಹ ದಲಿತ ಸಮುದಾಯಗಳಲ್ಲಿ ಜಾತಿಗಳಲ್ಲಿ ಒಂದಾದ ನಾಮಶೂದ್ರ ಜಾತಿಯಲ್ಲಿ ಬಂಗ್ಲಾ ದೇಶದಲ್ಲಿ ಜನಿಸಿದ ಬ್ಯಾಪಾರಿಯವರ ಕುಟುಂಬ ದೇಶ ವಿಭಜನೆಯ ನಂತರ ಭಾರತಕ್ಕೆ ವಲಸೆ ಬಂದಿತು. ದೇಶ ವಿಭಜನೆ, ಕೋಮು ಸಂಘರ್ಷಗಳ ಬಗ್ಗೆ ಬಹಳಷ್ಟು ಸಾಹಿತ್ಯ ಹುಟ್ಟಿಕೊಂಡಿದೆಯಾದರೂ ಈ ದುರಂತಗಳಲ್ಲಿ ದಲಿತ ಸಮುದಾಯದವರ ಕಥೆ ಏನಾಯ್ತು ಎನ್ನುವುದು ಬಹುತೇಕರಿಗೆ ಗೊತ್ತಿಲ್ಲ. ಸ್ವತಂತ್ರ ಭಾರತದ ಕಥಾನಕದಲ್ಲಿ ಅಸ್ಪೃಶ್ಯತೆ, ಬಡತನ, ಅವಮಾನ ನಿರಾಶ್ರಿತರ ಶಿಬಿರಗಳ ಸ್ಥಿತಿ ದಾರುಣವಾದದ್ದು. ನಮ್ಮ ದೇಶದ ಬ್ರಿಟಿಷ್‌ರ ಆಳ್ವಿಕೆಯ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾದ ಜಲಿಯನ್ ವಾಲಾಭಾಗ್‌ನಲ್ಲಿ ನಡೆದಿದ್ದ ದುರಂತಕ್ಕೂ ಮಿಗಿಲಾದ ದುರಂತ ಇಲ್ಲೂ ನಡೆದಿದೆ. ಮತ್ತು ಈ ದುರಂತ ನಡೆಸಿದವರು ಎಡ ಬಲ ಎನ್ನುವ ಭೇದವಿಲ್ಲದಂತೆ ಆಯಾ ಕಾಲದಲ್ಲಿ ಆಡಳಿತ ನಡೆಸುತ್ತಿದ್ದ ಆಳುವ ಪಕ್ಷಗಳು… ಬಂಡವಾಳ ಶಾಹಿಗಳ ಹಿತಾಸಕ್ತಿಗಳ ಎದುರು ಬಡವರ, ಮಹಿಳೆಯರ ಪ್ರತಿಭಟನೆಯ ಕೂಗು ಹಾಗೂ ಸಾಮಾಜಿಕ ನ್ಯಾಯದ ಧ್ವನಿಯನ್ನು ಹತ್ತಿಕ್ಕಲು, ಮಟ್ಟ ಹಾಕಲು ರಾಜಕಾರಣ ಯಾವ ಹಂತಕ್ಕೆ ಇಳಿಯಲು ಹೇಸುವುದಿಲ್ಲ ಎನ್ನುವುದಕ್ಕೆ ಈ ಕೃತಿಯ ಉದ್ದಕ್ಕೂ ಬಹಳಷ್ಟು ಉದಾಹರಣೆಗಳು ದೊರೆಯುತ್ತವೆ.

(ಮನೋರಂಜನ್‌ ಬ್ಯಾಪಾರಿ)

ಇಲ್ಲಿ ಹಕ್ಕಿಜ್ವರ ಬಂದಾಗ ಕೋಳಿಗಳು ಸಾಯುವಂತೆ ಮಕ್ಕಳು ಸಾಯುತ್ತಾರೆ. ಹೀಗೆ ಬ್ಯಾಪಾರಿಯವರು ಮಗುವಾಗಿದ್ದಾಗ ಇನ್ನೇನು ಸತ್ತು ಹೋಯಿತು. ನಾಳೆ ಮಣ್ಣು ಮಾಡಬೇಕಿದೆ ಎನ್ನುವ ಸಿದ್ಧತೆಗಳಾಗುತ್ತಿದ್ದ ಸರಿ ಹೊತ್ತಿನಲ್ಲಿ ಈ ಮಗು ಚೇತರಿಸಿಕೊಳ್ಳುತ್ತದೆ. ಇಂದು ಅಂಚಿನಲ್ಲಿರುವವರ ಧ್ವನಿಯಾಗಿ ಗುರುತಿಸಿಕೊಂಡಿರುವ ಬ್ಯಾಪಾರಿ ಮನೋರಂಜನ್ ಅವರ ಈ ಮರುಹುಟ್ಟು ಈಗ ನೋಡುವಾಗ ಈ ಜೀವಜಗತ್ತಿನ ವಿಸ್ಮಯ ಅಲ್ಲದೆ ಇನ್ನೇನು ಅಲ್ಲವೇ?

ಹೀಗೆ ಬದುಕುಳಿದ ಮಗು ಬ್ಯಾಪಾರಿ 10 ವರ್ಷದ ಬಾಲಕನಾಗಿದ್ದಾಗಿನಿಂದ ಜೀವ ಉಳಿಸಿಕೊಳ್ಳಲು ಮಾಡದ ಕೆಲಸವಿಲ್ಲ, ಹೋಗದ ಊರಿಲ್ಲ. ಎಲ್ಲಿ ಹೋದರೂ ಅಮಾನುಷವಾದ ಹೊಡೆತ, ಅವಿರತ ಶ್ರಮದ ದುಡಿಮೆ, ಆಸರೆ ಕೊಟ್ಟ ಗಂಡಸರಿಂದ ಸಲಿಂಗ ಕಾಮದ ಆಕ್ರಮಣ. ಪೊಲೀಸರು, ಅಪರಾಧಿಗಳು, ಟಿಕೆಟ್ ಕಲೆಕ್ಟರ್‌ಗಳು… ಹೀಗೆ ಈ ಅಮಾಯಕ ಹುಡುಗನನ್ನು ಶೋಷಿಸಿದವರಲ್ಲಿ ಇವರೆಲ್ಲರ ಪಾಲು ಇತ್ತು ಎನ್ನುವುದು ತಿಳಿಯುವಾಗ ನಾಗರಿಕ ಜಗತ್ತು ವಾಸ್ತವದಲ್ಲಿ ಎಷ್ಟು ಕ್ರೂರವಾಗಿದೆ ಎನ್ನುವುದು ಮನವರಿಕೆ ಆಗುತ್ತದೆ. ಡಾ. ರಾಜೇಂದ್ರ ಚೆನ್ನಿಯವರು ಈ ಕೃತಿಯನ್ನು The personal is political ಮಾದರಿಯ ರಾಜಕೀಯ ಕೃತಿ ಎಂದು ಉಲ್ಲೇಖಿಸುತ್ತ ಆಧುನಿಕ ಭಾರತದ ಸಮಾಜದ ಅನಾರೋಗ್ಯ ಕ್ರೌರ್ಯಗಳ ಅನಾವರಣ ಮಾಡುವ ಈ ಕೃತಿ ಜಾತಿ, ವರ್ಗ ಎನ್ನುವ ಶ್ರೇಣೀಕರಣ ವ್ಯವಸ್ಥೆಯಲ್ಲಿ ವೈಯಕ್ತಿಕ ಅನುಭವವು ಸಾರ್ವತ್ರಿಕ ಮೌಲ್ಯ ಪಡೆದುಕೊಂಡು ಸಮುದಾಯದ ಧ್ವನಿಯಾಗಿ ಮೂಡಿ ಬಂದಿದೆ ಎಂದಿದ್ದಾರೆ.. ಈ ಕೃತಿಯು ಬೇರೆ ಬೇರೆ ಕಾರಣಕ್ಕಾಗಿ ನಿರಾಶ್ರಿತರಾದವರು, ನೆಲೆ ಕಳೆದುಕೊಂಡವರು, ಅಪಾಯದ ಅಂಚಿನಲ್ಲಿರುವವರು, ನಿರ್ಗತಿಕರು, ದಲಿತರು, ಆದಿವಾಸಿಗಳು ಆತ್ಮದ ಘನತೆಯೊಂದಿಗೆ ಬದುಕಲು ಸಾಧ್ಯವಾಗದ ವಾಸ್ತವದ ಚಿತ್ರಣ ತೆರೆದಿಡುತ್ತದೆ. ಇಂತಹವರ ಮಕ್ಕಳ ಸ್ಥಿತಿ ಇನ್ನೂ ದಾರುಣವಾದದ್ದು. ಕನಿಷ್ಠ ಅಕ್ಷರ ಜ್ಞಾನವೂ ಇಲ್ಲದ ಈ ಅಸಹಾಯಕರು, ದುರ್ಬಲರು ಬಂಡವಾಳಶಾಹಿಗಳ, ಉಳ್ಳವರ ರಾಜಕಾರಣದ ಪಿತೂರಿಗೆ ಬಲಿಪಶುಗಳಾಗುತ್ತಾರೆ. ಈ ಸತ್ವ ಪರೀಕ್ಷೆಯಲ್ಲಿ ಗೆದ್ದು ಬಂದ ಅಪರೂಪದ ಉದಾಹರಣೆಗಳಲ್ಲಿ ಒಬ್ಬರಾದ ಬ್ಯಾಪಾರಿ ಮನೋರಂಜನ್ ನಡುವಯಸ್ಸಿನಲ್ಲಿ ಜೈಲ್‌ನಲ್ಲಿ ದೊರೆತ ಒಬ್ಬ ಗುರುವಿನಿಂದ ಅಕ್ಷರ ಕಲಿಯುತ್ತಾರೆ.… ನಂತರ ಸೈಕಲ್ ರಿಕ್ಷಾವಾಲಾನಾಗಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಒಮ್ಮೆ ಆಕಸ್ಮಿಕ ಎನ್ನುವಂತೆ ಲೇಖಕಿ ಮಹಾ ಶ್ವೇತಾದೇವಿ ಅವರ ಸಂಪರ್ಕಕ್ಕೆ ಬಂದು ಲೇಖಕರಾಗುತ್ತಾರೆ. ನಂತರ ಕಾರ್ಮಿಕ ಚಳುವಳಿಯನ್ನು ಜನಪರ ಸಂವೇದನೆಯಾಗಿ ಕಟ್ಟಿ ಮುನ್ನಡೆಸಿದ ಶಂಕರ್ ಗುಹಾ ನಿಯೋಗಿಯವರ ಸಂಪರ್ಕಕ್ಕೆ ಬರುತ್ತಾರೆ.

ದೀನ ದಲಿತರು ಶೋಷಿತರ ಪರವಾಗಿ ನಿಲ್ಲದಿದ್ದರೆ ರಾಜಕೀಯದಲ್ಲಿರುವುದು ಸಲ್ಲದು ಎನ್ನುವ ನಿಲುವಿಗೆ ಬದ್ಧವಾಗಿದ್ದು ಬದುಕಿದ್ದ ನಿಯೋಗಿಯವರ ಗರಡಿಯಲ್ಲಿ ಪಳಗಿದ್ದ ಬ್ಯಾಪಾರಿಯವರನ್ನು ಹಸಿವು ಬಡತನ ಕೆಲವೊಮ್ಮೆ ದುಡಿಮೆಯ ಕಾರಣಕ್ಕಾಗಿ ಕೆಲವು ರಾಜಿಸೂತ್ರಗಳನ್ನು ನೆಚ್ಚಿಕೊಳ್ಳುವಂತೆ ಮಾಡುತ್ತದೆ. ಹೀಗೆ ಮೇಸ್ತ್ರಿ ಆಗಿ ವೃತ್ತಿ ನಿರ್ವಹಿಸುತ್ತಿರುವಾಗ ಸಂಪರ್ಕಕ್ಕೆ ಬಂದ ಆದಿವಾಸಿ ಹುಡುಗನ ಜೊತೆ ಆತನ ವಾಸ ಸ್ಥಳಕ್ಕೆ ತೆರಳಿ ಅಲ್ಲಿನ ಪೂಜಾರಿಯಿಂದ ಇವರು ನರಬಲಿಯಾಗುವ ಸನ್ನಿವೇಶ ಎದುರಾಗುತ್ತದೆ. ಹೀಗೆ ಜೀವನದ ಉದ್ದಕ್ಕೂ ಎದುರಾದ ಎಲ್ಲ ಪ್ರತಿಕೂಲ ಪರಿಸ್ಥಿತಿಗಳಿಂದ ಪಾರಾಗಿ ಬದುಕಿ ಉಳಿದದ್ದು ನಂತರ ಅಪ್ಪಟ ಲೇಖಕನಾಗಿ ಹೊರಹೊಮ್ಮಿದ್ದು ಅಕ್ಷರ ಲೋಕದ ಭಾಗ್ಯವಲ್ಲದೆ ಇನ್ನೇನು…. ಎನ್ನುವ ನಮ್ರತೆ ಈ ಕೃತಿಯ ಓದು ಮೂಡಿಸುತ್ತದೆ.’

‘ಹುಡುಕಬೇಕು ಅದರಲ್ಲೂ ಒಂದು ಖುಷಿ ಇದೆ. ಕಣ್ಣೀರು ಸುರಿಸುವುದರಿಂದ ಏನೂ ಪ್ರಯೋಜನವಿಲ್ಲ. ಅಳುತ್ತಾ ಬದುಕುವವರು ಅಳುತ್ತಲೇ ಸಾಯುತ್ತಾರೆ. ಯಾರು ಕಣ್ಣೀರನ್ನು ಹಿಮ್ಮೆಟ್ಟಿಸಿ ನಗುವುದನ್ನು ಕಲಿಯುತ್ತಾರೋ ಅವರು ಇತಿಹಾಸವನ್ನು ನಿರ್ಮಿಸುತ್ತಾರೆ. ಜೀವನದ ಉದ್ದ ಕೆಂಡವನ್ನು ಕಂಕುಳಲ್ಲಿ ಇಟ್ಟುಕೊಂಡು ಕೆಲವೊಮ್ಮೆ ತಾನೇ ಸುಟ್ಟುಕೊಂಡು ಬದುಕಲೇಬೇಕು ಎನ್ನುವ ಛಲವೇ ಉಸಿರಾಗಿಸಿಕೊಂಡ ಬ್ಯಾಪಾರಿ ಮನೋರಂಜನರ ಮಾತಿದು. ಬಂಗಾಳದ ರಕ್ತ ಚರಿತ್ರೆಯನ್ನು ಲಕ್ಷಾಂತರ ಜನರ ನಿತ್ಯ ನರಕವನ್ನು ಪ್ರಭುತ್ವಗಳ ನಾಚಿಕೆಗೇಡಿನ ಹುಸಿತನವನ್ನು ಯಾವುದೇ ಮುಚ್ಚುಮರೆಯಿಲ್ಲದೆ ಈ ಕೃತಿ ತೆರೆದಿಡುತ್ತದೆ. ಹಳೆಯ ಕಳೆದ ಶತಮಾನದ ಕೊನೆಯಲ್ಲಿ ನಮ್ಮ ದೇಶದಲ್ಲಿ ಹಲವು ಹೆಸರಾಂತ ರಾಜಕಾರಣಿಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನಡೆಸಿದ ತಂತ್ರಗಾರಿಕೆಯನ್ನು ಅವರ ಅಸಲಿ ಮುಖವನ್ನು ತೆರೆದಿಡುತ್ತದೆ. “ವಿರೋಧಿಗಳು ನನಗೆ ಪ್ರೀತಿ ತೋರಿಸಿದಾಗ ಸಾಧ್ಯವಾಗದ್ದು, ಕೋಪ ತೋರಿಸಿದಾಗ ಸಾಧ್ಯವಾಗಿದೆ. ನನ್ನ ಕೋಪವನ್ನು ಅವರು ಜೀವಂತವಾಗಿಟ್ಟಿದ್ದಾರೆ. ಅವರ ಕೋಪದ ಫಲ ಶ್ರುತಿಯೇ ನನ್ನ ಪುಸ್ತಕ.” ಬ್ಯಾಪಾರಿಯವರ ಮಾತಿದು. “ಮಾನವೀಯತೆಯಲ್ಲಿ ವಿಶ್ವಾಸ ಕಳೆದುಕೊಳ್ಳುವುದು ಮಹಾ ಪಾಪ; ಅನ್ಯಾಯವನ್ನು ಮಾಡುವವನ ಹಾಗೂ ಅದನ್ನು ಸಹಿಸಿಕೊಳ್ಳುವವನ ವಿರುದ್ಧ ನೀನು ಬೆಂಕಿಯ ಉಂಡೆಯಾಗಿ ಸುಟ್ಟು ಬೂದಿ ಮಾಡಬೇಕು” ಎನ್ನುವ ವಿರೋಧಾಬಾಸಗಳುಳ್ಳ ಕವಿ ಮಹಾಶಯರೊಬ್ಬರ ಮಾತುಗಳನ್ನು ಉಲ್ಲೇಖಿಸುತ್ತಾ ಬ್ಯಾಪಾರಿಯವರು ತಮ್ಮ ಬದುಕಿನ ಕಟು ವಾಸ್ತವವನ್ನು ನೆನಪಿಸಿಕೊಳ್ಳುತ್ತಾರೆ. “ಈತನಿಂದ ಅಡುಗೆ ಕೆಲಸ ಮಾಡಿಸಿಕೊಂಡು ಕೂಲಿ ಕೊಡದೆ ಯಾರು ಅಟ್ಟಿಸಿಕೊಂಡು ಬಂದಿಲ್ಲ. ದಿನಗಟ್ಟಲೆ ಶ್ರಮವಹಿಸಿ ಹಾಲು ಮಾರಾಟ ಮಾಡಿ ಅದರಿಂದ ಬಂದ ಕೂಲಿಯನ್ನು ಯಾರು ಕಳ್ಳತನ ಮಾಡಿಲ್ಲ. ಬೆವರು ಸುರಿಸಿ ರಿಕ್ಷಾ ಎಳೆದವನಿಗೆ ರಿಕ್ಷಾದಲ್ಲಿ ಕುಳಿತ ಗಿರಾಕಿ ಒಂದು ನಿಮಿಷದಲ್ಲಿ ಬರುತ್ತೇನೆ ಎಂದು ಹೇಳಿ ಮೋಸ ಮಾಡಿ ಟೋಪಿ ಹಾಕಿಸಿಕೊಂಡಿಲ್ಲ.” ಶಂಕರ ಗುಹಾ ನಿಯೋಗಿ ಅವರನ್ನು ಗುರುವಾಗಿ ಸ್ವೀಕರಿಸಿದ ಬ್ಯಾಪಾರಿ ಮನೋರಂಜನ್ ಗುಹಾ ನೇತೃತ್ವದ ಮುಕ್ತಿ ಮೋರ್ಚಾದ ಚಟುವಟಿಕೆಗಳನ್ನು ಡೆಲ್ಲಿಗೆ ಹೋಗಿ ತೀರ ಹತ್ತಿರದಿಂದ ಕಂಡರು.

“ಮುರಿಯಲು ಕಟ್ಟಿ ಕಟ್ಟಲು ಮುರಿಯಿರಿ” ಎನ್ನುವ ಘೋಷಣೆಯಲ್ಲಿರುವ ಸಾತ್ವಿಕತೆಯನ್ನು ನೈತಿಕತೆಯನ್ನು ಪ್ರಾಮಾಣಿಕತೆಯನ್ನು ಅರ್ಥ ಮಾಡಿಕೊಂಡರು. ಒಟ್ಟು ಚಳುವಳಿಗಳ ಫಲಶ್ರುತಿ ಜನ ಜಾಗೃತಿ ಎನ್ನುವುದನ್ನು ಮನಗಂಡಿದ್ದ ಗುಹಾ ಅವರು ಲೋಹಿಯ, ಗಾಂಧಿ, ಮಾರ್ಕ್ಸ್, ಅಂಬೇಡ್ಕರ್ ವಾದಗಳನ್ನು ಅಗತ್ಯಕ್ಕೆ ತಕ್ಕಷ್ಟು ಅಳವಡಿಸಿಕೊಂಡು ಸಹಕಾರಿ ಸಂಘ, ಸಭೆ, ಸಮಾರಂಭ, ಜಾಥಾಗಳು ತರಬೇತಿಗಳ ಮೂಲಕ ಜನರನ್ನು ತಲುಪುವ ಮೂಲಕ ನಿಧಾನವಾಗಿಯಾದರೂ ಸಮಾಜದಲ್ಲಿ ಬದಲಾವಣೆಯನ್ನು ತರಬಹುದು ಎಂದು ನಂಬಿದ್ದರು. ಗುಹಾ ಅವರ ಜನಪರ ಹೋರಾಟಗಳಲ್ಲಿನ ಬದ್ಧತೆ ಪ್ರಾಮಾಣಿಕತೆ, ನೈತಿಕತೆ ಸಮಾಜಘಾತಕ ಶಕ್ತಿಗಳಿಗೆ ಸಂಕಟ ತಂದಿದ್ದರ ಫಲ ಎನ್ನುವಂತೆ ಗುಹಾ ಅವರ ಕೊಲೆ ಆಯ್ತು. ಇದರಿಂದ ಸಮಾಜದಲ್ಲಿ ಪ್ರಗತಿಪರ ಚಟುವಟಿಕೆಗಳಲ್ಲಿ ಉಂಟಾದ ನಿರ್ವಾತವನ್ನು ಸಂವೇದನಾಶೀಲ ಮನಸ್ಸುಗಳು ಹೇಗೆ ಅನುಭವಿಸಿತ್ತು ಎನ್ನುವುದನ್ನು ಲೇಖಕರು ಉಲ್ಲೇಖಿಸುತ್ತಾ “ಒಂದು ದೊಡ್ಡ ಮರದ ಬೀಜ ಒಂದು ಸಣ್ಣ ಬೀಜದಲ್ಲಿರುತ್ತೆ. ಅಪ್ಪ ಅಮ್ಮನ ಜೀವ ಅವರ ಮಕ್ಕಳಲ್ಲಿ ಇರುತ್ತೆ. ಒಬ್ಬ ಗುರುವಿನ ಜೀವ ತನ್ನ ಶಿಷ್ಯನಲ್ಲಿ ಇರುತ್ತದೆ. ನಾನು ನಿನ್ನ ಮೂಲಕ ಬದುಕುತ್ತೇನೆ…” ಎನ್ನುವ ಗುಹಾ ಅವರ ಮಾತುಗಳನ್ನು ನೆನಪಿಸಿಕೊಂಡು ಚಳುವಳಿಗಳಿಗೆ ಸಾವಿಲ್ಲ… ಅವು ನಿತ್ಯ ನಿರಂತರವಾದದ್ದು ಎನ್ನುವ ಭರವಸೆಯ ಮಾತುಗಳಲ್ಲಿ ಲೇಖನಿಯ ಸಾಧ್ಯತೆಯೂ ಒಂದು ಎನ್ನುವುದನ್ನು ಈ ಹೊತ್ತಿಗೆ ನಿರೂಪಿಸುತ್ತದೆ.

ವರ್ಗ ಜಾತಿ ಬಣ್ಣಗಳ ಶ್ರೇಣೀಕರಣ ವ್ಯವಸ್ಥೆಯು ಈ ಜಗತ್ತಿನಲ್ಲಿ ಇವತ್ತು ನಿನ್ನೆಯದಲ್ಲ. ‘ನಾನೇರಿದ ಎತ್ತರ ಕ್ಕೆ ನೀನೇರ ಬಲ್ಲೆಯಾ’ ಎಂದು ಅಣಕಿಸುವವರ ನಡುವೆ ಕರ್ಣ, ಶಂಬೂಕ, ಏಕಲವ್ಯರಂತೆ ಪ್ರಯತ್ನ ಪಟ್ಟವರು ಇದ್ದಾರೆ. ಈ ವ್ಯವಸ್ಥೆಯ ವಿಕೃತಿಯನ್ನು ಕ್ರೌರ್ಯವನ್ನು ಪ್ರಶ್ನಿಸುವ ಜೀವಗಳು ಹೆಚ್ಚಾದಷ್ಟು ಈ ಜಗತ್ತಿನಲ್ಲಿ ಮಾನವೀಯತೆ ಗೆಲ್ಲುತ್ತದೆ. ಕೃತಿಯ ಕೊನೆಯಲ್ಲಿ ಲೇಖಕರೇ ಹೇಳುವಂತೆ ‘ಎಲ್ಲಾ ಉರಿದ ನಂತರ ಬರುವ ಬೂದಿಯಿಂದ ಮತ್ತೊಂದು ಹೊಸ ಜೀವನ ಮೂಡಿ ಬರುತ್ತದೆ. ಈ ಭರವಸೆ ನಮ್ಮ ದಾರಿಯಾಗಲಿ’ ಎನ್ನುವ ಪುಟ್ಟ ಆಶಯವೇ ಈ ಕೃತಿಯ ಓದು ಮತ್ತು ಪುಟ್ಟ ಪರಿಚಯ.

(ಕೃತಿ: ಚಾಂಡಾಳನೊಬ್ಬನ ಆತ್ಮ ವಿಮರ್ಶೆ (ಆತ್ಮಕತೆ), ಮೂಲ: ಮನೋರಂಜನ್‌ ಬ್ಯಾಪಾರಿ, ಕನ್ನಡಕ್ಕೆ: ಡಾ. ಎಚ್.ಎಸ್.‌ ನಾಗಭೂಷಣ್‌, ಪ್ರಕಾಶಕರು: ಸೃಷ್ಠಿ ಪ್ರಕಾಶನ, ಬೆಲೆ: 325/-)

About The Author

ದೇವಿಕಾ ನಾಗೇಶ್

ದೇವಿಕಾ ನಾಗೇಶ್ ಹಾಸನ ಜಿಲ್ಲೆಯ, ಬೇಲೂರು ತಾಲೂಕಿನ, ಹಸುರು ಗುಡ್ಡದ ಮೂಲದವರು. ಈಗ ಮಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಎದೆಯ ಮುಳ್ಳುಗಳು (ಕಥಾ ಸಂಕಲನ ), ಹರಿವ ತೇವದಿ  ಉರಿವ ತೊಡರು (ಲೇಖನ ಸಂಕಲನ), ಸಾರ ಅಬೂಬಕರ್ (ಜೀವನ ಚರಿತ್ರೆ), ಮುಸ್ಸಂಜೆ (ಕವನ ಸಂಕಲನ) ಪ್ರಕಟಿತ ಕೃತಿಗಳು. ಓದು, ಬರಹ, ತಿರುಗಾಟ, ಸಿನೆಮಾ ನೋಡುವುದು ಇವರ  ಹವ್ಯಾಸಗಳು.  

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ