Advertisement
ಭಾಷೆಯೊಳಗೆ ಇನ್ನೊಂದು ಭಾಷೆ: ಸುಮಾವೀಣಾ ಸರಣಿ

ಭಾಷೆಯೊಳಗೆ ಇನ್ನೊಂದು ಭಾಷೆ: ಸುಮಾವೀಣಾ ಸರಣಿ

ದೋಸೆ ಚಟ್ನಿಯ ಘಮ ನಮ್ಮ ಮೂಗನ್ನು ದಾಟಿ ಭರ್ರನೆ ದೇಹ ಪ್ರವೇಶಿಸುತ್ತಿತ್ತು. ಅದೇ ಭರದಲ್ಲಿ ತಿಂದಿದ್ದರೆ ಚೆನ್ನಾಗಿತ್ತು. ಸುಮ್ಮನಿರಲಾರದೆ “ಇದು ಏನು ಚಟ್ನಿ” ಎಂದೆ. ಹೊಟೆಲ್ ಮಾಣಿಗೆ ಕನ್ನಡ ಅರ್ಥವಾಯಿತು ಆದರೆ ಉತ್ತರವನ್ನು ತೆಲುಗಿನಲ್ಲಿಯೇ “ಇದಿ ಪಲ್ಲಿ ಚಟ್ನಿ” ಎಂದ. ಕಸಿವಿಸಿ ಆಯಿತು “ಹೇಗ್ ಮಾಡ್ತೀರಿ?” ಅಂದೆ ಅದಕ್ಕವನು “ಪಲ್ಲಿಲನು ಧಂಚಿ, ವೆಯಿಂಚಿ, ಪುಡಿಛೇಸಿ…” ಎನ್ನುತ್ತಿದ್ದಂತೆ ವಾಕರಿಕೆ ಬರಲು ಶುರುವಾಯಿತು. ಕನ್ನಡದಲ್ಲಿ ‘ಪಲ್ಲಿ’ ಅಂದರೆ ‘ಹಲ್ಲಿ’ ಅಲ್ಲವೆ. ಆದರೂ ಬಿಡಲಿಲ್ಲ; ಗೂಗಲಮ್ಮನ ಸಹಾಯ ಪಡೆದು ನೋಡಿದರೆ ತೆಲುಗಿನಲ್ಲಿ ‘ಪಲ್ಲಿ’ ಅಂದರೆ ಕನ್ನಡದಲ್ಲಿ ‘ನೆಲಗಡಲೆ’ ಅಂತಿತ್ತು. ಸಧ್ಯ! ಬದುಕಿತು ಬಡ ಜೀವ ಅನ್ನುವ ಹಾಗಾಯಿತು.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಇಪ್ಪತ್ತೆರಡನೆಯ ಬರಹ ನಿಮ್ಮ ಓದಿಗೆ

‘ಸಾಫಾಗ್ ಹಳ್ಳ ತಿಟ್ ಇಲ್ದಂಗೆ ಮಡಿಕೇರಿ ಮೇಲ್ ಮಂಜು…’ ಇವು ಮಡಿಕೇರಿಯನ್ನು ಕುರಿತು ಬರೆದಿರುವ ಪದ್ಯದ ಸಾಲುಗಳು. ಇಲ್ಲಿ ಮಡಿಕೇರಿ ಮೇಲ್ ಮಂಜು ಎನ್ನುವುದು ಮಡಿಕೇರಿಯನ್ನೇ! ಇದನ್ನು ‘ಮಂಜಿನ ನಗರಿ’, ‘ಮುಸುಕಿನಪಟ್ಟಣ’ ಎಂಬ ಹೆಸರಿನಿಂದಲೂ ಕರೆಯುವುದಿದೆ. ಇದಲ್ಲದೆ ಕರ್ನಾಟಕದ ಇತರೆ ಸ್ಥಳಗಳನ್ನೂ ಅವುಗಳ ವಿಶೇಷತೆಯೊಂದಿಗೆ ಹೇಳುವುದಿದೆ. ಅವುಗಳಲ್ಲಿ ಉಡುಪಿ> ಕೃಷ್ಣನಗರಿ, ಮೈಸೂರು > ಮಲ್ಲಿಗೆ ಭೂಮಿ, ಇಲ್ಲವೆ ಮಲ್ಲಿಗೆ ನಾಡು, ಧಾರವಾಡ>ವಿದ್ಯಾಕಾಶಿ, ದಾವಣಗೆರೆ>ಬೆಣ್ಣೆನಗರಿ, ಚಿಕ್ಕಮಂಗಳೂರು>ಕಾಫಿನಾಡು/ಭೂಮಿ, ರಾಮನಾಥಪುರ>ದಕ್ಷಿಣಕಾಶಿ, ಹೊಳೆನರಸೀಪುರ>ಭಕ್ತಿವರ್ಧನ ಕ್ಷೇತ್ರ, ತಿಪಟೂರು> ಕೊಬ್ಬರಿನಾಡು, ಮಂಡ್ಯ> ಸಕ್ಕರೆ ನಾಡು, ಗಂಗಾವತಿ >ಭತ್ತದ ಕಣಜ ಇತ್ಯಾದಿ. ಈ ಸ್ಥಳನಾಮಗಳು ಹೆಮ್ಮೆ ಮೂಡಿಸುವಂತಿದ್ದರೆ ಕೆಲವು ಮುಜುಗರ ತರಿಸುತ್ತವೆ. ಅವುಗಳಲ್ಲಿ ನಾಗವಲ್ಲಿ, ಸೂಳೆಕೋಟೆ, ಕಾಮಸಮುದ್ರ ಮೊದಲಾದವು. ಕೊಳ್ಳೆಗಾಲ ರೇಷ್ಮೆ ನಗರಿಯಾಗಿ ಖ್ಯಾತಿ ಹೊಂದಿದರೂ, ವಾಮಾಚಾರಿಗಳು ಇರುವ ಸ್ಥಳ ಎಂಬುದಾಗಿ ಕುಖ್ಯಾತಿ ಪಡೆದಿದೆ.

ಹಿಂದೊಮ್ಮೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಗೆ ಹೋಗಿದ್ದೆವು. ಮುಳಬಾಗಿಲಿನಲ್ಲೆ ಹೊಟ್ಟೆ ಚುರು ಚುರು ಅನ್ನುತ್ತಿತ್ತು. ಇರಲಿ ಎನ್ನುತ್ತಾ ಚಿತ್ತೂರಿನಲ್ಲಿ ಬಸ್ ಇಳಿದ ಕೂಡಲೆ ಹೋಟೆಲ್‌ಗೆ ತೆರಳಿ ದೋಸೆ ಅರ್ಡರ್ ಮಾಡಿದೆವು. ದೋಸೆ ಚಟ್ನಿಯ ಘಮ ನಮ್ಮ ಮೂಗನ್ನು ದಾಟಿ ಭರ್ರನೆ ದೇಹ ಪ್ರವೇಶಿಸುತ್ತಿತ್ತು. ಅದೇ ಭರದಲ್ಲಿ ತಿಂದಿದ್ದರೆ ಚೆನ್ನಾಗಿತ್ತು. ಸುಮ್ಮನಿರಲಾರದೆ “ಇದು ಏನು ಚಟ್ನಿ” ಎಂದೆ. ಹೊಟೆಲ್ ಮಾಣಿಗೆ ಕನ್ನಡ ಅರ್ಥವಾಯಿತು ಆದರೆ ಉತ್ತರವನ್ನು ತೆಲುಗಿನಲ್ಲಿಯೇ “ಇದಿ ಪಲ್ಲಿ ಚಟ್ನಿ” ಎಂದ. ಕಸಿವಿಸಿ ಆಯಿತು “ಹೇಗ್ ಮಾಡ್ತೀರಿ?” ಅಂದೆ ಅದಕ್ಕವನು “ಪಲ್ಲಿಲನು ಧಂಚಿ, ವೆಯಿಂಚಿ, ಪುಡಿಛೇಸಿ…” ಎನ್ನುತ್ತಿದ್ದಂತೆ ವಾಕರಿಕೆ ಬರಲು ಶುರುವಾಯಿತು. ಕನ್ನಡದಲ್ಲಿ ‘ಪಲ್ಲಿ’ ಅಂದರೆ ‘ಹಲ್ಲಿ’ ಅಲ್ಲವೆ. ಆದರೂ ಬಿಡಲಿಲ್ಲ; ಗೂಗಲಮ್ಮನ ಸಹಾಯ ಪಡೆದು ನೋಡಿದರೆ ತೆಲುಗಿನಲ್ಲಿ ‘ಪಲ್ಲಿ’ ಅಂದರೆ ಕನ್ನಡದಲ್ಲಿ ‘ನೆಲಗಡಲೆ’ ಅಂತಿತ್ತು. ಸಧ್ಯ! ಬದುಕಿತು ಬಡ ಜೀವ ಅನ್ನುವ ಹಾಗಾಯಿತು. ನಾನು ಮಾಣಿಗೆ “ಚೆನ್ನಾಗಿದೆ ಪಲ್ಲಿ ಚಟ್ನಿ” ಎಂದೆ ಅದಕ್ಕವನು “ಒಕ್ಕಟೆ ಪಲ್ಲಿ ಚಟ್ನಿಕಾದು ಮೇಡಮ್ ಸ್ಪಾಂಜಿ ದೋಸ ಪಲ್ಲಿ ಚಟ್ನಿ!!” ಎಂದ. ಪಲ್ಲಿ ಎಂದರೆ ಕನ್ನಡದಲ್ಲಿ ಹಲ್ಲಿ ಎಂದಾಗುತ್ತದೆ. ನೆಲಗಡಲೆ ಅನ್ನುವುದು ಅಂಕಿತ ಎನ್ನುವುದಾದರೆ ತೆಲುಗಿನಲ್ಲಿ ಸ್ಥಳಗಳನ್ನೂ ರೂಢಿಯಲ್ಲಿ ಕರೆದು ಅಪಾರ್ಥ ಬರುವಂತೆ ಮಾಡುತ್ತಿದ್ದರು. ಬಹುಶಃ ತೆಲುಗು ಪದಗಳನ್ನು ಕನ್ನಡೀಕರಿಸಿದರೆ ಇಂಥ ಮುಜುಗರ ತಪ್ಪಿಸಬಹುದೇನೋ ಎನ್ನುವ ಕಾರಣಕ್ಕೆ ನಮ್ಮ ಸರಕಾರ ಹೆಸರು ಬದಲಿಸುವ ಕೆಲಸ ಮಾಡಿದೆ.

ಅದರನ್ವಯ ಈಗ ಕರ್ನಾಟಕದ ‘ಬಾಗೇಪಲ್ಲಿ’ ‘ಭಾಗ್ಯನಗರ’ ಆಗಿದೆ. ಇನ್ನೂ ಕರ್ನಾಟಕ ಮತ್ತು ಆಂಧ್ರದ ಹಲವು ಗಡಿಭಾಗಗಳಲ್ಲಿ ಪಲ್ಲಿಯಿಂದ ಕೊನೆಗೊಳ್ಳುವ ಅನೇಕ ಪ್ರದೇಶಗಳು ಇವೆ. ಅವುಗಳ ಹೆಸರುಗಳೂ ಬದಲಾಗಬೇಕಿದೆ. ಕರ್ನಾಟಕದಲ್ಲಿಯೂ ‘ಪಲ್ಲಿ’ ಹೆಸರಿನ ಸ್ಥಳ ಕಾರ್ಕಳದ ಸಮೀಪ ಇದೆ. ‘ಪಲ್ಲಿ’ ಎಂಬ ಪದವನ್ನು ವಿವರಿಸಲು ಇಷ್ಟು ಹೇಳಿದೆ. ಹಾಗಿದ್ದರೆ ತೆಲುಗು ಭಾಷೆಯ ಪದಗಳು ಮಾತ್ರ ನಮ್ಮ ಜನಮನದಲ್ಲಿ, ಆಡಳಿತ ಇತ್ಯಾದಿಗಳಲ್ಲಿ ಸೇರಿದೆಯೇ ಖಂಡಿತಾ ಇಲ್ಲ! ಅರೇಬಿಕ್, ಪಾರಸಿ, ಉರ್ದು, ಪದಬಳಕೆ ಮುಸಲ್ಮಾನರ ಆಡಳಿತ ಪ್ರಭಾವದ ಕಾರಣದಿಂದ ಆಗಿದೆ ಎನ್ನಬಹುದು. ‘ಗರೀಬ್’ ‘ದೋಬಿ’ಯ ‘ಸವಾರಿ’ ಇಂದೇಕೋ ‘ಗರಮ್’ ಹಾಗು ‘ಖರಾಬ್’ ಆಗಿ ಅನ್ನಿಸುತ್ತಿದೆ. ‘ಅಜೀಬ್’ ಅಗಿ ವರ್ತಿಸುತ್ತಿದ್ದಾನೆ ಎನ್ನುವುದನ್ನು ನಾನು ಉದಾಹರಣೆಗಾಗಿ ತೆಗೆದುಕೊಂಡ ವಾಕ್ಯ. ಇಲ್ಲಿನ ಪದಗಳು ಉರ್ದು ಭಾಷೆಯಿಂದ ತೆಗೆದುಕೊಂಡಿರುವುದು. ಅದನ್ನೆ ಕನ್ನಡದಲ್ಲಿ ಹೇಳಿದರೆ ಕೆಲವರಿಗೆ ಅರ್ಥವಾಗುವುದಿಲ್ಲ. ಕನ್ನಡ ಭಾಷೆಯ ಪದಗಳನ್ನೆ ಉಪಯೋಗಿಸಿದರೆ ಈ ಮೇಲಿನ ವಾಕ್ಯ “ಬಡ ಮಡಿವಾಳನ ಬರವು ಇಂದೆಕೋ ಬಿರುಸಿನೊಂದಿಗೆ ಕೂಡಿದೆ ಜೊತೆಗೆ ಹೀಗೆಹೇಗೋ ವರ್ತಿಸುತ್ತಿದ್ದಾನೆ” ಎಂದಾಗುತ್ತದೆ. ಯಾರಿಗೂ ಸುಲಭವಾಗಿ ಅರ್ಥವಾಗುವುದಿಲ್ಲ. ಮುಂದೆ ಇತರೆ ಭಾಷೆಯ ಪದಗಳನ್ನೂ ತೆಗೆದುಕೊಳ್ಳೋಣ!

ಅರಾಬಿಕ್ ಭಾಷೆಯ ‘ಉರಸ್’, ‘ಸೈತಾನ್’, ‘ಬುರ್ಖ’, ‘ಜಿಲ್ಲಾ’, ‘ತಹಸೀಲ್’, ‘ಅದಾಲತ್’, ‘ವಕೀಲ’, ‘ಸಾಹೇಬ’, ‘ಜಾಮೀನು’, ‘ಕಾಯಂ’, ‘ಕಾನೂನು’, ‘ಗುಲಾಮ’, ‘ಖಾಸಗಿ’, ‘ಗೈರುಹಾಜರ್,’ ‘ರದ್ದು’, ‘ವಜಾ’, ‘ವಾಯಿದೆ’, ‘ವಾರಸ್ದಾರ’, ‘ಶುರು’, ‘ಸವಾಲು’, ‘ತಂಬೂರ್’, ‘ಜುಬ್ಬ’ ಮುಂತಾದ ಪದಗಳಂತೂ ನಮ್ಮಲ್ಲಿ ಇನ್ನು ಹೊರಗೆ ತೆಗೆಯಲಾರದಷ್ಟು ಬೆರೆತು ಹೋಗಿವೆ. ಸಂಸ್ಕೃತಿ ಹಾಗು ನ್ಯಾಯಾಂಗ ಇಲಾಖೆಗೆ ಸೇರಿದ ಪದಗಳು ಇಲ್ಲಿ ಹೆಚ್ಚು ಇವೆ ಅನ್ನಿಸುತ್ತದೆ. ಇನ್ನು ಪಾರ್ಸಿ ಪದಗಳಾದ ‘ದರ್ಗಾ’, ‘ಗಸ್ತು’, ‘ಸಿಪಾಯಿ’, ‘ಜಮೀನ್ದಾರಿ’, ‘ಜಮೀನು’, ‘ಕಾರಖಾನೆ’, ‘ಬಿಲ್ಕುಲ್’, ‘ಹಿಸ್ಸ’, ‘ಜೇಬು’ ಮುಂತಾದವು ಸೇರಿವೆ.

ಅಂದಹಾಗೆ ಪಾರ್ಸಿಭಾಷೆಯ ‘ನೂರ್’ ಎನ್ನುವ ಶಬ್ದ ಇತ್ತೀಚಿಗೆ ಗಲಿಬಿಲಿ ಉಂಟು ಮಾಡಿತ್ತು. ಅದುವೆ ಇತ್ತೀಚೆಗೆ ನಡೆದ ಮದುವೆ ಸಮಾರಂಭದಲ್ಲಿ ನಡೆದ “ನೂರ್ ಕಾರಲ್ಲಿ ಬಂದ್ವಿ” ಎಂಬ ಮಾತು. ನಾನು ಆತ್ಮೀಯ ಸ್ನೇಹಿತೆ ಮಗನ ಮದುವೆಯ ಸಂಭ್ರಮದ ಸವಿ ಅನುಭವಿಸುತ್ತಾ ಇಡ್ಲಿ-ಸಾಂಬಾರ್, ದಮ್ರೂಟ್ ಎಲ್ಲಾ ತಿಂದು ಬೆಳಗ್ಗೆ ತಿಂಡಿನೇ ಹೀಗೆ ಮಧ್ಯಾಹ್ನ ಇನ್ನೂ ಭರ್ಜರಿಯಾಗುತ್ತಿರುತ್ತೆ ಎಂದುಕೊಳ್ಳುವಾಗಲೇ ಗಂಡಿನ ಕಡೆಯಿಂದ ಒಂದಿಬ್ಬರು ಬಂದರು. ಅವರ ಉಭಯ ಕುಶಲೋಪರಿಯನ್ನು ವಿಚಾರಿಸುತ್ತಾ ಹುಡುಗಿ ಅಮ್ಮಾ “ಈಗ ಬಂದ್ರ ಬನ್ನಿ ಎಷ್ಟೊತ್ತಿಗೆ ಹೊರಟ್ರಿ ತಿಂಡಿ ಮಾಡಿ” ಎಂದು ವಿಚಾರಿಸುವಾಗ ಬಂದರವರು “ಇನ್ನೂ ಬೇಗ ಬರುತಿದ್ವಿ. ನೂರ್ ಕಾರ್ ಸ್ಟಾರ್ಟ್ ಮಾಡಬೇಕಲ್ಲ; ಹೇಗೂ ನೂರ್ ಕಾರಲ್ಲಿ ಬಂದ್ವಿ” ಎಂದಿದ್ದೆ ತಡ ಹುಡುಗಿ ಅಮ್ಮಾ “ತಿಂಡಿ ಇದೆಯಾ? ಭಟ್ರು ಕೇಳಬೇಕು. ಇವರು ನೂರ್ ಕಾರಲ್ಲಿ ಬಂದಿದಾರೆ” ಎಂದೋಡುವಾಗ ಬಂದವರೊಬ್ಬರು “ಕನ್ಫ್ಯೂಸ್ ಆಗಬೇಡಿ ನಾವು ನೂರ್ ಅಹ್ಮದ್‌ನ ಕಾರಲ್ಲಿ ಬಂದಿದ್ದು ನೂರು ಕಾರಲ್ಲಿ ಅಲ್ಲ” ಎಂದು ಸಮಾಧಾನಿಸಿ ಓಟದ ವೇಗವನ್ನು ತಗ್ಗಿಸಿದರು. ಇಂಥವು ನಡೆಯುತ್ತಲೇ ಇರುತ್ತವೆ ಬಿಡಿ!

ಉತ್ತರ ಕರ್ನಾಟಕದಲ್ಲಿ ಈ ಅರೇಬಿಕ್ ಪಾರ್ಸಿ, ಉರ್ದುವಿನ ಪ್ರಭಾವ ಹೆಚ್ಚಾದಂತೆ ದಕ್ಷಿಣ ಕರ್ನಾಟಕದ ಗಡಿಭಾಗದ ಜಿಲ್ಲೆಗಳಲ್ಲಿ ತಮಿಳು ತೆಲುಗು, ಮಲೆಯಾಳಂ ಪ್ರಭಾವವಿದೆ. ಇನ್ನು ಇಂಗ್ಲಿಷಿನ ಪ್ರಭಾವವಿರುವುದು ತಿಳಿದಿರುವ ವಿಚಾರ. ಪೋಲಿಸ್ ಸ್ಟೇಷನ್, ಪಾರ್ಕ್, ಸ್ಕೂಲ್, ಬಸ್ ಸ್ಟೇಷನ್, ಸ್ಟಾಪ್, ವಾಕಿಂಗ್, ಫೋನ್, ರಿಂಗ್, ಮೋಟರ್ ಪ್ಯಾಕೆಟ್, ಸೌಂಡ್‌ಸ್ಲೀಪ್, ಮಾರ್ನಿಂಗ್, ನೈಟ್ ಹೀಗೆ ಬೆಳಗ್ಗೆಯಿಂದ ಸಂಜೆವರೆಗಿನ ಪ್ರತಿವಿದ್ಯಮಾನವು ಇಂಗ್ಲಿಷಿನ ಪದಗಳಲ್ಲಿಯೇ ಆಗುತ್ತದೆ. ಈ ಪದಗಳ ಬದಲಿಗೆ ಆರಕ್ಷಕ ಠಾಣೆ, ಉದ್ಯಾನವನ, ಬಸ್ ನಿಲ್ದಾಣ, ನಡಿಗೆ, ದೂರವಾಣಿ/ಜಂಗಮವಾಣಿ, ಪೊಟ್ಟಣ, ಗಾಢನಿದ್ರೆ, ಮುಂಜಾನೆ, ರಾತ್ರಿ ಎಂದು ಅಚ್ಚಕನ್ನಡದ ಪದಗಳನ್ನು ಉಪಯೋಗಿಸಿದರೆ ಜನರಿಗೆ ಅರ್ಥವೇ ಆಗುವುದಿಲ್ಲ ಅನ್ನಿಸುತ್ತದೆ.

‘ಲಾಲ್ ಬಾಗ್ʼ ಕನ್ನಡಿಗರಿಗೆ ಅಪರಿಚಿತವಲ್ಲ. ಆದರೆ ಕನ್ನಡದಲ್ಲಿ ಇದನ್ನು ‘ಕೆಂಪುತೋಟ’ ಎಂದು ಕರೆದರೆ ಯಾರಿಗೂ ಅರ್ಥವಾಗವುದಿಲ್ಲ. ‘ಲಾಲ್’ ಇದು ಸಂಸ್ಕೃತ ಭಾಷೆಯಿಂದ ಬಂದಿರುವ ಪದ ಇದರ ಮೂಲ ಅರ್ಥ ಕೃಷ್ಣನನ್ನು ಕುರಿತಾಗಿದೆ. ಅದೆ ಹಿಂದಿಯಲ್ಲಿ ‘ಲಾಲ್ ಬಾಗ್’ ಅಂದರೆ ಕನ್ನಡದಲ್ಲಿ ಕೆಂಪು ತೋಟ ಆಗುತ್ತದೆ. ‘ಲಾಲ್’ ಎಂದರೆ ಉತ್ತರ ಭಾರತೀಯ ಮನೆತನಗಳ ಕುಟುಂಬದ ಹೆಸರೂ ಬರುತ್ತದೆ. ಇಲ್ಲಂತೂ ಇತಿಹಾಸದಲ್ಲಿ ಬರುವ “ಲಾಲ್ ಬಾಲ್ ಪಾಲ್” ಅವರೆ ಇಲ್ಲಿ ನೆನಪಾಗುತ್ತಾರೆ. ಬಹುಶಃ ಇವರ ವಿನಃ ಭಾರತದ ಚರಿತ್ರೆ ಅಪೂರ್ಣ ಅನ್ನಿಸುತ್ತದೆ. ಇರಲಿ! ಲಾಲ್ ಬಾಗ್ ಕಬ್ಬನ್ ಪಾರ್ಕ್ ನಂತೆ ಬೆಂಗಳೂರಿನ ಹಲವು ಇದೇ ರೀತಿಯ ಹೆಸರುಗಳು ಇವೆ; ವೈಟ್ ಫೀಲ್ಡ್, ಬುಲ್‌ಟೆಂಪಲ್, ಸ್ಯಾಟಲೈಟ್ ಬಸ್ ಸ್ಟ್ಯಾಂಡ್, ಇತ್ಯಾದಿ.

ವ್ಯಕ್ತಿಗಳ ಹೆಸರಿನಿಂದ ಪ್ರೇರಿತ ಸ್ಥಳಗಳು ಎಂದಾಗ ದಾಬಸ್‌ಪೇಟೆ, ರಿಪ್ಪನ್ ಪೇಟೆ, ಸೊಪ್ಪು ತರಕಾರಿಗಳ ಹೆಸರಿನಿಂದ ಪ್ರೇರಿತ ಸ್ಥಳಗಳೂ ಇವೆ. ಸೊಪ್ಪಿನಹಳ್ಳಿ, ನಿಂಬೆಹಳ್ಳಿ, ಸಾಸುವೆಹಳ್ಳಿ, ಅತ್ತಿಹಳ್ಳಿ, ಮಾವನೂರು, ಮಾವಿನಹಳ್ಳಿ, ಯಲಗುಂದ, ತೊಂಡಾಳು ಇತ್ಯಾದಿ. ವ್ಯಕ್ತಿಯಿಂದ ಸ್ಥಳಗಳು ಪ್ರಸಿದ್ಧವಾಗುತ್ತವೆ. ಅವಕ್ಕೆ ಉದಾಹರಣೆಯೆಂದರೆ ‘ಮಾಗಡಿ ಕೆಂಪೇಗೌಡ’, ‘ಬೆಂಗಳೂರು ನಾಗರತ್ನಮ್ಮ’, ‘ಬಳ್ಳಾರಿ ಸಿದ್ದಮ್ಮ…’ ಇತ್ಯಾದಿ… ಕೆಲವೊಂದು ಹೆಸರುಗಳು ಸಂಗೀತ ಪರಿಕರಗಳಿಂದ… ವೀಣೆ ಶೇಷಣ್ಣ, ಪಿಟೀಲು ಚೌಡಯ್ಯ, ಆಚರಣೆಗಳ ಮೂಲಕ ಬೆಂಗಳೂರು ಕರಗ, ಮೈಸೂರು ದಸರಾ ಇತ್ಯಾದಿ… ಬೈರಾಪುರ, ಶಂಖ, ಜನಿವಾರ, ಸಾಲಿಗ್ರಾಮ, ಭಗವಂತನ ಕುರಿತು ಇರುವ ಊರುಗಳು. ಸಂಬಂಧಗಳಿಗೆ ಬಂದಾಗ ಮಾವನೂರು, ಹಿರೇಮಗಳೂರು, ಚಿಕ್ಕಮಗಳೂರು, ಇತ್ಯಾದಿ ಭಾಷೆ ಯಾವುದಾದರೂ ಇರಲಿ ಅದರಲ್ಲಿರುವ ಪದಗಳು ಹೆಸರುಗಳು ಒಳ್ಳೆಯ ಅರ್ಥವನ್ನು ಕೊಡುವಂತಿರಬೇಕು. ಇವು ಕೆಲ ಹೆಸರಿನ ಮಾದರಿಗಳು.

ಇನ್ನು ಕೆಲವೆಡೆ ಮೂಲ ಭಾಷೆಯ ಸೊಗಡನ್ನು ಉಳಿಸಬೇಕು ಎನ್ನುವ ಕಾರಣಕ್ಕೆ ಕನ್ನಡದ ಹಲವಾರು ಸ್ಥಳಗಳ ಹೆಸರು ಬದಲಾಗಿದೆ. ಅದರಲ್ಲಿ ಬ್ಯಾಂಗಲೋರ್>ಬೆಂಗಳೂರು, ಬೆಳಗಾವಿ>ಬೆಳಗಾಂ, ಬೆಲ್ಲಾರಿ>ಬೆಳ್ಳಾರಿ, ಬಿಜಾಪುರ>ವಿಜಯಪುರ, ಚಿಕ್ಮಂಗಳುರು>ಚಿಕ್ಕಮಂಗಳೂರು, ಗುಲ್ಬರ್ಗ>ಕಲುಬುರುಗಿ ಹೀಗೆ…. ಇಂಗ್ಲಿಷಿನ ವ್ಯಂಜನಾಂತಗಳನ್ನು ತೆಗೆದು ಕನ್ನಡದ ಸ್ವರಾಂತ್ಯ ಮಾಡಿದ್ದೇವೆ. ಇಷ್ಟಲ್ಲದೆ ಮದ್ರಾಸನ್ನು ಚನ್ನೈ, ಬಾಂಬೆ ಇದ್ದದ್ದನ್ನು ಮುಂಬೈ ಎಂದು ಕಲ್ಕತ್ತ ಇದ್ದದ್ದನ್ನು ಬಂಗಾಳಿ ಭಾಷೆಯಲ್ಲಿ ಉಚ್ಛರಿಸುವಂತೆ ಕೊಲ್ಕೊತಾ ಮಾಡಿದ್ದಾರೆ. ವಿರೋಧಾಭಾಸಗಳನ್ನು ತಪ್ಪಿಸಲು ಹಾಗು ಮೂಲ ಹೆಸರನ್ನು ಕಾಪಿಡಲು ಹೀಗೆ ಮಾಡುವುದಿದೆ.

ಈ ಹೆಸರುಗಳನ್ನು ಬದಿಗಿಟ್ಟು ವಿರೋಧಾಭಾಸದ ಪದಗಳ ಕಡೆ ಗಮನ ಹರಿಸಿದರೆ ಅನ್ಯಭಾಷೆ ಅಲ್ಲ ಕನ್ನಡದಲ್ಲೂ ವಿರೋಧಾಭಾಸ ನೀಡುವ ಪದಗಳಿವೆ. ಅದರಲ್ಲಿ ‘ರಾಜಸೂಯಾಗ’ವೂ ಇದೆ. ಅದನ್ನೆ ಹುಡುಗಿ ಹೆಸರಿನೊಂದಿಗೆ ಅಸೂಯಾಯಾಗವೆಂದು ಬದಲಿಸಿದರೆ ಹೀಗಾಗುತ್ತದೆ ಅಷ್ಟೆ! ಒಮ್ಮೆ ನಮ್ಮಲ್ಲಿ ‘ಶ್ವೇತಾಸೂಯಾಗ’ ನಡೆದಿತ್ತು. ಈ ಶ್ವೇತಾಸೂಯಾಗ ಯಾವುದು ಎನ್ನದಿರಿ? ಸ್ವಲ್ಪ ಓದುತ್ತಾ ಹೋದಂತೆ ತಮಗೇ ತಿಳಿಯುತ್ತದೆ. ಶ್ವೇತಾಳ ತರಗತಿಯಲ್ಲಿ ಎಲ್ಲರೂ ತಾಮುಂದು ನಾ ಮುಂದು ಎಂದು ಶಾಲಾವಾರ್ಷಿಕೋತ್ಸವದ ಡಾನ್ಸಿಗೆ ಸೇರಿಯೇ ಬಿಟ್ಟರು! ಶ್ವೇತಾಳೂ ಸೇರಿದಳು. ಶಾಲೆಯಲ್ಲಿ ಯಾವ ಕ್ಲಾಸ್ ರೂಮಲ್ಲಿ ನೋಡಿದ್ರು ಮೊಬೈಲ್ ಹಿಡಿದುಕೊಂಡು ಪ್ರಾಕ್ಟಿಸ್! ಪ್ರಾಕ್ಟಿಸ್! ಪ್ರಾಕ್ಟಿಸ್!….. ಪಾಪ ಶ್ವೇತಾಗೆ ಹೀರೋಯಿನ್ ಆಗಬೇಕು ಎನ್ನುವ ಆಸೆ ಮೊದಲಿನಿಂದಲೂ ಇತ್ತು. ಪ್ರಾಕ್ಟಿಸ್ ಮಾಡುವಾಗ ಟೀಚರ್ ನಿನ್ನನ್ನು ಹಿರೋಯಿನ್ ಮಾಡ್ತೀನಿ….. ಹಿರೋಯಿನ್ ಮಾಡ್ತೀನಿ ಎನ್ನುತ್ತಿದ್ದವರು ಕಡೆಗೆ ನಿನಗೆ ಕೂದಲು ಉದ್ದ ಇಲ್ಲ ಎಂದು ಉದ್ದ ಕೂದಲು ಇರುವ ಹುಡುಗಿಯನ್ನು ಹಿರೋಯಿನ್ ಮಾಡಿದರು. ಆದ ಕಾರಣ ಶ್ವೇತಾ “ನಾಗಿನ್ ನಾಗಿನ್….” ಎಂದು ಬುಸುಗುಡಲಾರಂಭಿಸಿದಳು.

ಹೀಗೆ ಬುಸುಗುಡುತ್ತಲೇ ಇದ್ದ ಶ್ವೇತಾಗೆ ದಿನದಿಂದ ದಿನಕ್ಕೆ ಅವಳಲ್ಲಿದ್ದ ಅಸೂಯಾಯಾಗದ ತವಕ ಅರ್ಥಾತ್ ಹೊಟ್ಟೆಕಿಚ್ಚು ಹೆಚ್ಚಾಯಿತು. ಆದರೆ ಏನು ಮಾಡಲಾಗುವುದಿಲ್ಲವಲ್ಲ ಎಂದು ಅವಳಿಗೆ ಅವಳೆ ಹಳಿದುಕೊಂಡು ಅವಡುಕಚ್ಚಿಕೊಂಡು ಪ್ರಾಕ್ಟಿಸ್ ಮಾಡುತ್ತಿದ್ದಳು. ಶಾಲಾವಾರ್ಷಿಕೋತ್ಸವದ ದಿನ ಬಂದೇ ಬಂದಿತು…. ವೇದಿಕೆ ಸಜ್ಜಾಗಿತ್ತು ಅತಿಥಿಗಳ ಭಾಷಣವೂ ಮುಗಿಯುತ್ತಿತ್ತು. ‘ನಾನ್ ಹಿರೋಯಿನ್’ ಎನ್ನುವ ಹೆಚ್ಚುಗಾರಿಕೆಯಿಂದ ಆ ಹುಡುಗಿಯೂ ಚಂದದ ಅಲಂಕಾರ ಮಾಡಿಕೊಂಡು ಸರದಿಯನ್ನು ಕಾಯುತ್ತಿದ್ದಳು, ಶ್ವೇತಾಗೆ ಅವಳ ಅಲಂಕಾರ ನೋಡಿ ‘ನಾನು ಹಿರೋಯಿನ್ ಆಗಿದ್ರೆ ಹೀಗೆ ಇರಬಹುದಿತ್ತ ಹೊಟ್ಟೆ ಎಷ್ಟು ಉರಿಸ್ತಾಳೆ’ ಎಂದುಕೊಳ್ಳುತ್ತಿದ್ದಳು. ಅವರ ನೃತ್ಯದ ಸರದಿ ಬಂದಾಗ ಧೈರ್ಯದಿಂದ ಹಿರೋಯಿನ್ ನಿಲ್ಲುವೆಡೆ ನಿಂತು ನಂತರ ನೋಡಿಕೊಂಡರೆ ಆಯಿತು ಎಂದು ಎಲ್ಲಾ ಚಿಂತೆ ಬಿಟ್ಟು ಅಸೂಯಾಯಾಗವನ್ನು ಈಡೇರಿಸಿಕೊಂಡಳು. ಅರ್ಥಾತ್ ನರ್ತಿಸಿದಳು. ಹೀಗೆ ಶ್ವೇತಾಸೂಯಾಯಾಗ ಸಂಪನ್ನವಾಯಿತು. ಇಂಥ ಆಭಾಸಗಳನ್ನು ನೀವೂ ಕಂಡಿರಬಹುದು ಅಲ್ವ! ಕಂಡಿದ್ದರೆ ಈ ಬರಹಕ್ಕೆ ಪ್ರತಿಕ್ರಿಯಿಸಿ….

About The Author

ಸುಮಾವೀಣಾ

ವೃತ್ತಿಯಿಂದ ಉಪನ್ಯಾಸಕಿ. ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನಲವಿನ ನಾಲಗೆ’ (ಪ್ರಬಂಧ ಸಂಕಲನ) ‘ಶೂರ್ಪನಖಿ ಅಲ್ಲ ಚಂದ್ರನಖಿ’(ನಾಟಕ) ‘ಮನಸ್ಸು ಕನ್ನಡಿ’ , ‘ಲೇಖ ಮಲ್ಲಿಕಾ’, 'ವಿಚಾರ ಸಿಂಧು’  ಸೇರಿ ಇವರ ಒಟ್ಟು ಎಂಟು ಪುಸ್ತಕಗಳು ಪ್ರಕಟವಾಗಿವೆ.

1 Comment

  1. .ಮಹೇಶ್ವರಿ.ಯು

    ಸ್ವಾರಸ್ಯಕರವಾಗಿದೆ.ಕಾಸರಗೋಡಿನವಳಾದ ನನಗೆ ಕನ್ನಡ- ಮಲಯಾಳ ಶಬ್ದಗಳ ಅರ್ಥ ವ್ಯತ್ಯಾಸಗಳಿಂದಾಗುವ ಅವಾಂತರಗಳು ನೆನಪಾದವು.

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ