ಮಂಜುನಾಥ್ ಪಾಳ್ಯ ಅವರ ಎಲ್ಲ ಕವಿತೆಗಳನ್ನು ಓದಿದಾಗ ಅಲ್ಲಿನ ಭಾಷೆ, ವಸ್ತು, ನಿರ್ವಹಣೆಯ ಬಗ್ಗೆ ನೋಡಬೇಕು. ವಸ್ತು ಸಾಮಾಜಿಕವೇ ಆದರೂ ಕೂಡ ನಿರ್ವಹಣೆಯ ಸಂದರ್ಭದಲ್ಲಿ ಅದು ಭಿನ್ನ ಪಾತಳಿಗಳನ್ನು ಕಾಣುತ್ತದೆ. ಕವಿ ಪ್ರತಿಭಟಿಸುವಲ್ಲಿ ಕಾವ್ಯ ಬಂಡಾಯದ ಚಾಟಿ ಬೀಸುತ್ತದೆ. ಮೌನವಾಗಿ ಪ್ರೇಮಕ್ಕೆ ಮರುಳಾದಾಗ ಅಲ್ಲಿನ ಭಾಷೆ ತೀರ ಕೋಮಲವಾಗಿಬಿಡುತ್ತದೆ. ಭ್ರಷ್ಠತೆ, ಅತ್ಯಾಚಾರ, ಶೋಷಣೆ ವಿಚಾರಗಳು ಬಂದರೆ ಭಾಷೆ ಸ್ವಲ್ಪ ಒರಟಾಗಿಬಿಡುತ್ತದೆ. ಕಾವ್ಯ ಹೀಗೆ ಭಿನ್ನ ಪಾತಳಿಗೆ ಒಳಗಾಗುವುದು ಕವಿಯ ಸಂವೇದನಾಶೀಲ ಗುಣವನ್ನು ತೋರುತ್ತದೆ.
ಡಾ. ಮಂಜುನಾಥ ಪಾಳ್ಯ ಬರೆದ ‘ಹೆಪ್ಪುಗಟ್ಟಿದ ಮಾತುಗಳು’ ಕವನ ಸಂಕಲನದ ಕುರಿತು ಡಾ. ಎ. ರಘುರಾಂ ಬರಹ
‘ಹೆಪ್ಪುಗಟ್ಟಿದ ಮಾತುಗಳು’ ಡಾ.ಮಂಜುನಾಥ ಪಾಳ್ಯ ಅವರ ಮೂರನೆಯ ಕವನ ಸಂಕಲನ. ‘ಒಳ ಧ್ವನಿ’, ‘ಕತ್ತಲೆಯೊಳಗೆ ಬೆಳಕು’ ಈಗಾಗಲೇ ಪ್ರಕಟಗೊಂಡಿವೆ. ಈ ಸಂಕಲನದಲ್ಲಿ ನಲವತ್ತೊಂಭತ್ತು ಕವಿತೆಗಳಿವೆ. ಇಲ್ಲಿನ ಬಹುತೇಕ ಕವಿತೆಗಳು ಸಾಮಾಜಿಕ ಆಶಯವನ್ನು ಪ್ರತಿನಿಧಿಸುತ್ತವೆ.
‘ಹೆಪ್ಪುಗಟ್ಟಿದ ಮಾತುಗಳು’ ಸಂಕಲನದ ಕವಿತೆಗಳನ್ನು ಸಾಮಾಜಿಕ ಸಂದರ್ಭದ ಕವಿತೆಗಳು, ಪ್ರೇಮ ಕವಿತೆಗಳು, ಸಾಂಸಾರಿಕ ಬದುಕನ್ನು ಕುರಿತ ಕವಿತೆಗಳು, ವ್ಯಕ್ತಿ ಕೇಂದ್ರಿತ ಕವಿತೆಗಳು ಹಾಗೂ ಕನ್ನಡ ಪರ ಕವಿತೆಗಳು ಎಂದು ವಿಭಾಗ ಮಾಡಬಹುದು. ಬಹುತೇಕ ಕವಿತೆಗಳು ಸಾಮಾಜಿಕ ಸ್ವಾಸ್ಥ್ಯವನ್ನು ಕುರಿತೇ ಇವೆ. ಹೆಪ್ಪುಗಟ್ಟಿದ ಮಾತು, ಹೊಣೆ ಯಾರು, ಶೇಷ, ಮುಕ್ತಿ, ಭ್ರಷ್ಟರ ಸಿರಿ, ಬುದ್ಧಿಜೀವಿ, ಬಂಡಾಯದ ಕಿಡಿ, ಬಲಿ, ಬಣ್ಣದೋಕುಳಿ, ದಳ್ಳುರಿಯ ಕೊಳ್ಳಿ, ಎಲ್ಲೆ ಮೀರಿದ ಓಟ, ಆಕ್ರೋಶವಾಗಲಿ ಆಂದೋಲನ, ಅನಿವಾಸಿಗಳ ಅಳಲು ಸಾಮಾಜಿಕ ಸಂದರ್ಭವನ್ನು ಕೇಂದ್ರ ಮಾಡಿಕೊಂಡಿವೆ. ಹಗಲುಗನಸು, ಯಾರು ನೀನು? ಯಾನ, ಬದುಕದು ಚಿನ್ನ, ಓ ಭಾವಕುಸುಮ, ಒಲವಿಗೆ ಸಾಕ್ಷಿ ಕವಿತೆಗಳು ಪ್ರೇಮ ಕವಿತೆಗಳಾಗಿವೆ. ಹೆತ್ತಮ್ಮನ ಕಣ್ಣೀರ ಧಾರೆ, ಹಿಗ್ಗಿಲ್ಲದ ಸುಗ್ಗಿಯ ಸಂಭ್ರಮ, ಶೇಷ, ಸು-ನಿಧಿ, ಗೂಡು ಕಟ್ಟುವ ಬಯಕೆ, ಅವ್ವನ ತಾಕತ್ತು, ಅಜ್ಜನಿಗೊಂದು ಪತ್ರ ಇವು ಸಾಂಸಾರಿಕ ಬದುಕಿನ ಸಂದರ್ಭದ ರಚನೆಗಳಾಗಿವೆ. ಕೀ.ರಂ ಅವರನ್ನು ಕುರಿತ ಕಾಡುವ ಮಾತು, ಅಬ್ದುಲ್ ಕಲಾಂ ಅವರನ್ನು ಕುರಿತ ಕಲಾಂಗೆ ವಂದನೆ, ಚಂದ್ರಶೇಖರ ಕಂಬಾರರನ್ನು ಕುರಿತ ಸಾಹಿತ್ಯ ಶಿಖರ ಸೂರ್ಯ ಕವಿತೆಗಳು ವ್ಯಕ್ತಿಚಿತ್ರಗಳಾಗಿವೆ. ನಿತ್ಯೋತ್ಸವ, ಕನ್ನಡಿಗನ ಎಚ್ಚರಿಕೆ, ಕನ್ನಡ ಸವಿಗನ್ನಡ, ಕಾವ್ಯ ಕನ್ನಿಕೆ ಕವಿತೆಗಳು ಕನ್ನಡ ನಾಡು ನುಡಿಯನ್ನು ಕುರಿತ ಕವಿತೆಗಳಾದರೂ ಭಾಷೆಯನ್ನು ಗೌರವಿಸದ ವ್ಯಕ್ತಿ ಏನನ್ನು ತಾನೆ ಗೌರವಿಸುತ್ತಾನೆ ಎನ್ನುವ ಪ್ರಶ್ನೆಗಳಿವೆ.

(ಡಾ. ಮಂಜುನಾಥ ಪಾಳ್ಯ)
ಹಸಿವು, ಶೋಷಣೆ, ಪೌರುಷ, ಮೌನ, ಪ್ರೀತಿ, ಕೃಷಿ, ಭ್ರಷ್ಟಾಚಾರ, ಕನ್ನಡಪರ ನಿಲುವು, ಹೀಗೆ ಅನೇಕ ಸಂಗತಿಗಳು ಕಾವ್ಯದ ಬೆನ್ನ ಹಿಂದಿವೆ. ಈ ವಿಚಾರಗಳು ಅನೇಕ ಪದ್ಯಗಳಲ್ಲಿ ಅರಳಿವೆ, ಚಿಗುರಿವೆ, ಹೂವಾಗುವ ಕ್ರಿಯೆಗೆ ಒಳಗಾಗಿವೆ. ಕೆಲವೊಂದು ಮಾಗುವ ಸಂದರ್ಭಕ್ಕೆ ಬಂದು ನಿಂತಿವೆ. ತೀವ್ರ ಭಾವಜೀವಯಾದ ಮಂಜುನಾಥ ಪಾಳ್ಯ ಸೃಜನಶೀಲವಾಗಿ ಆಲೋಚಿಸುತ್ತಾರೆ ಎನ್ನುವುದಕ್ಕೆ ಅನೇಕ ಕವಿತೆಗಳು ಸಾಕ್ಷಿಯಾಗಿವೆ. ಅಧ್ಯಾಪಕರಾಗಿ ಕನ್ನಡ ಕವಿತೆಗಳನ್ನು ಓದಿರುವ ಕಾಣದಿಂದಲೋ, ಪಾಠ ಹೇಳಿದ ಕಾರಣದಿಂದಲೋ ಅವುಗಳ ಲಯದ ಪ್ರಭಾವವಿದೆ. ‘ಹಗಲುಗನಸು’ ಕೆ.ಎಸ್.ನರಸಿಂಹಸ್ವಾಮಿ ಅವರ ಕವಿತೆಯ ಲಯವನ್ನು ನೆನಪಿಸುತ್ತದೆ. ಮನುಷ್ಯ ವಿಜ್ಞಾನ ಯುಗದಲ್ಲಿ ಎತ್ತರಕ್ಕೆ ಏರಬಹುದು ಆದರೆ ವಿಷಮತೆಯನ್ನು ಸರಿಮಾಡುವುದು ಹೇಗೆ ಎನ್ನುವ ಪ್ರಶ್ನೆ ‘ಹೆಪ್ಪುಗಟ್ಟಿದ ಮಾತು’ ಕವಿತೆಯಲ್ಲಿದೆ.
‘ಎತ್ತರಕ್ಕೇರಿ ಜಾರಿದರೆ ಏನಾಗುವುದೆಂಬ ಅರಿವಿಲ್ಲ
ಗಾಳಿ ರಭಸಕ್ಕೆ ಬಿದ್ದರೆ ಹುಡುಕುವುದೆಲ್ಲಿ
ಬರಿದಾದ ಜೀವಜಲ, ಬರಡು ನೆಲದಲಿ
ಬೀಜದ ಬಸಿರು ಅಸಾಧ್ಯ
ಚಿಗುರ ಚಿವುಟಿ, ಹಸಿರ ತುಂಬಲು ಹೇಗೆ ಸಾಧ್ಯ?
ಉಳಿದೀತೆ ಉಸಿರು ವಿಷ ಭೂಮಿಯಲಿ’ (ಪುಟ 1)
ಭೂಮಿಯನ್ನು ವಿಷಮಯಗೊಳಿಸುತ್ತಿದ್ದೇವೆ ಎನ್ನುವುದು ಯಾರಿಗೆ ಗೊತ್ತಿಲ್ಲ. ರಾಸಾಯನಿಕಗಳನ್ನು ಭೂಮಿಗೆ ಸುರಿದು ವಿಷ ಚೆಲ್ಲಿದ್ದೇವೆ. ಪ್ಲಾಸ್ಟಿಕ್ ಚೆಲ್ಲಿ ಅಂತರ್ಜಲ ಕುಗ್ಗಿಸಿ ಹೆಮ್ಮೆಪಡುತ್ತಿದ್ದೇವೆ. ಕಸವನ್ನು ಸುಟ್ಟು ಸಂತೋಷ ಕೊಡುವ ಗಾಳಿಗೆ ವಿಷ ಎರಚುತ್ತಿದ್ದೇವೆ. ಇದರ ಪರಿಣಾಮವನ್ನು ಮುಂದಿನ ಸಾಲುಗಳು ಈ ರೀತಿ ಹೇಳುತ್ತವೆ.
‘ಭಯವಿಲ್ಲ, ಗುರಿಯಿಲ್ಲ, ಛಲವಿಲ್ಲ
ಬಂದದ್ದು ಎಲ್ಲಿಂದ ಹೋಗುವುದು ಎಲ್ಲಿಗೆ?
ಪ್ರಶ್ನೆಗಳ ಸುಳಿಯೊಳಗೆ ಸೋಗಲಾಡಿ ಬದುಕು’ ಎನ್ನುವಲ್ಲಿ ‘ಭಯ, ಗುರಿ, ಛಲ’ ಈ ಮೂರು ಶಬ್ದಗಳಲ್ಲಿ ಮನುಷ್ಯರಾಗಿ ಯಾವುದಾದರೂ ಒಂದನ್ನಾದರೂ ಸ್ವೀಕರಿಸಿದ್ದರೆ ಖಂಡಿತಾ ನಾವು ಹೊಸಲೋಕವೊಂದನ್ನು ಕಟ್ಟಬಹುದಿತ್ತು. ಬರೀ ಸೋಗಲಾಡಿತನದಲ್ಲೇ ಬದುಕನ್ನು ನಡೆಸುತ್ತಿದ್ದೇವಲ್ಲ ಅದು ಹೇಗೆ? ಎನ್ನುವ ಪ್ರಶ್ನೆ ಕವಿಯದು. ‘ಹೆಜ್ಜೆ ಕಾವಿಗೆ ಕಮರಿದ ಗರಿಕೆ ದಾರಿ’ ಎಂದು ಅರ್ಥವತ್ತಾಗಿ ಹೇಳಿ ಕವಿತೆಗೆ ಮುಕ್ತಾಯ ಹಾಡುತ್ತಾರೆ. ಹಕ್ಕಿಯ ರೆಕ್ಕೆಗಳನ್ನು ಕತ್ತರಿಸಿ ಬದುಕನ್ನು ಕಟ್ಟುತ್ತಿದ್ದೇವೆ ಎಂದು ಎದೆಯುಬ್ಬಿ ಬೀಗುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸುತ್ತಾರೆ. ಉತ್ತರ ಸುಲಭವೇ? ಎಲ್ಲ ಪ್ರಗತಿಪರ ಕಾವ್ಯದ ಮೂಲಭಿತ್ತಿ ಕೂಡ ಇದೇ ಆಗಿರುತ್ತದೆ.
‘ಹಗಲು ಗನಸು’ ಪ್ರೇಮದ ವಿಭಿನ್ನ ಪರಿಯ ಕವಿತೆಯಾಗಿ ಕಾಣುತ್ತದೆ. ಹುಡುಕುತ್ತಾ ಹೊರಟಾಗ ಅದು ಸಿಕ್ಕಿತು ಎನ್ನುವ ಭ್ರಮೆ ಒಂದೆಡೆಗಿದ್ದರೆ, ಅಯ್ಯೋ ಸಿಕ್ಕಲಿಲ್ಲವಲ್ಲಾ ಎನ್ನುವ ತಹತಹ ಇನ್ನೊಂದೆಡೆ. ಈ ರೀತಿಯ ಆಂದೋಳನದ ಕವಿತೆ ಕೊನೆಗೆ ಸುಖಾಂತವಾಗುವುದು ಹೀಗೆ.
‘ಸಂತಸದ ಹೊಂಬೆಳಕು ಚೆಲ್ಲಿ
ಕತ್ತಲೆಯೊಳಗಿನ ಮಾತು ಮುಗಿದು
ಮನವು ಅರಳಿ, ಶಾಂತಿ ಮೂಡಿತು
ನೆಳಲು ಬೆಳಕಿನ ಆಟ ಮುಗಿಯಿತು’ (ಪುಟ 4) ಎನ್ನುವಲ್ಲಿ ಪ್ರೇಮವಿರಲಿ, ಬದುಕೇ ಇರಲಿ ಅದೊಂದು ನೆಳಲು ಬೆಳಕಿನ ಆಟ ಎನ್ನುತ್ತಾರೆ.
ಮಂಜುನಾಥ್ ಪಾಳ್ಯ ಅವರ ಎಲ್ಲ ಕವಿತೆಗಳನ್ನು ಓದಿದಾಗ ಅಲ್ಲಿನ ಭಾಷೆ, ವಸ್ತು, ನಿರ್ವಹಣೆಯ ಬಗ್ಗೆ ನೋಡಬೇಕು. ವಸ್ತು ಸಾಮಾಜಿಕವೇ ಆದರೂ ಕೂಡ ನಿರ್ವಹಣೆಯ ಸಂದರ್ಭದಲ್ಲಿ ಅದು ಭಿನ್ನ ಪಾತಳಿಗಳನ್ನು ಕಾಣುತ್ತದೆ. ಕವಿ ಪ್ರತಿಭಟಿಸುವಲ್ಲಿ ಕಾವ್ಯ ಬಂಡಾಯದ ಚಾಟಿ ಬೀಸುತ್ತದೆ. ಮೌನವಾಗಿ ಪ್ರೇಮಕ್ಕೆ ಮರುಳಾದಾಗ ಅಲ್ಲಿನ ಭಾಷೆ ತೀರ ಕೋಮಲವಾಗಿಬಿಡುತ್ತದೆ. ಭ್ರಷ್ಠತೆ, ಅತ್ಯಾಚಾರ, ಶೋಷಣೆ ವಿಚಾರಗಳು ಬಂದರೆ ಭಾಷೆ ಸ್ವಲ್ಪ ಒರಟಾಗಿಬಿಡುತ್ತದೆ. ಕಾವ್ಯ ಹೀಗೆ ಭಿನ್ನ ಪಾತಳಿಗೆ ಒಳಗಾಗುವುದು ಕವಿಯ ಸಂವೇದನಾಶೀಲ ಗುಣವನ್ನು ತೋರುತ್ತದೆ. ‘ಯಾರು ನೀನು’ ಕವಿತೆಯ ಸಾಲುಗಳು ಹೀಗಿವೆ.
‘ಮೌನದೊಳಗಿನ ಪಿಸುಮಾತು ನೀನು
ಕಣ್ಣಿನೊಳಗಿನ ಕಾಂತಿ ನೀನು
ತುಟಿಯ ಅಂಚಿನ ನಗುವು ನೀನು
ನನ್ನ ಉಸುರಿನ ಗಂಧ ನೀನು’ (ಪುಟ 27) ಎಂದು ನಲ್ಲೆಯೊಲವನ್ನು ಆರ್ದ್ರವಾಗಿ ಧ್ಯಾನಿಸಿ ಬರೆಯುತ್ತಾರೆ. ಶೋಷಣೆ, ಸಮಾನತೆಯ ಪ್ರಶ್ನೆ ಬಂದಾಗ ಭಾಷೆಯೇ ಭಿನ್ನವಾಗುತ್ತದೆ.
‘ಬಣ್ಣದೋಕುಳಿ’ ಕವಿತೆಯ ಸಾಲುಗಳು ಹೀಗಿವೆ.
‘ರಕ್ಷಣೆಗೆ ಖಾಕಿ ಬಣ್ಣ
ಪ್ರತಿಭಟನೆಗೆ ಕಪ್ಪು ಬಣ್ಣ
ಕುತಂತ್ರಕ್ಕೆ ಯಾವ ಬಣ್ಣ?
ಸಮೃದ್ಧತೆಗೆ ಹಸಿರು ಬಣ್ಣ
ಪರಿಶುದ್ಧತೆಗೆ ಬಿಳಿ ಬಣ್ಣ
ಮೋಸಕ್ಕೆ ಯಾವ ಬಣ್ಣ?’ (ಪುಟ 45)
ಬಣ್ಣದ ಮಾತುಗಳ ಮೂಲಕ ನಯವಾಗಿ ವಂಚಿಸುವ ಸಮುದಾಯವನ್ನು ಕುರಿತು ಸರಳ ಭಾಷೆಯಲ್ಲಿ ಕವಿತೆ ಕಟ್ಟುತ್ತಾರೆ. ಸುಲಭವಾಗಿ ಪದ್ಯ ಕಟ್ಟಬಹುದು ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ. ‘ಬಣ್ಣದೋಕುಳಿಯ ಬಡಿದಾಟ’ವನ್ನು ನಿಲ್ಲಿಸಿಬಿಡಿ ಎಂದು ಸಿಡಿದೇಳುತ್ತಾರೆ. ಕಾಡುವ ಮಾತು, ಅಜ್ಜನಿಗೊಂದು ಪತ್ರ, ಸಾಹಿತ್ಯ ಶಿಖರ ಸೂರ್ಯ, ಹೊಣೆಯಾರು ಕವಿತೆಗಳು ಇನ್ನಷ್ಟು ಪದ್ಯಗಂಧಿಯ ಕಡೆಗೆ ಚಲಿಸಬೇಕಾಗಿತ್ತು. ಅವಸರದಲ್ಲಿ ಬಿಡುಗಡೆ ಪಡೆದವೇನೋ ಎನ್ನಿಸುತ್ತದೆ. ಈ ರೀತಿಯ ಕೆಲವು ಸಂಗತಿಗಳ ಕಡೆಗೆ ಗಮನಹರಿಸಿದರೆ ಕಾವ್ಯ ಮತ್ತಷ್ಟು ಗಟ್ಟಿಗೊಳ್ಳುತ್ತದೆ. ಕವಿ ಸುಲಭವಾಗಿ ನಿಭಾಯಿಸಬಹುದಾದ ಸಂಗತಿಯೂ ಇದಾಗಿದೆ. ಒಟ್ಟಾರೆ ಸಾಮಾಜಿಕ ಕಳಕಳಿಯೇ ಕಾವ್ಯದ ಮುಖ್ಯ ಧ್ವನಿಯಾಗಿದೆ.

ಪ್ರೊ.ಬಸವರಾಜ ಕಲ್ಗುಡಿ ಅವರ ಹಾರೈಕೆಯ ಮಾತುಗಳು, ಪ್ರೊ.ಎಚ್.ಟಿ.ಪೋತೆ ಅವರ ಮುನ್ನುಡಿ ಕೃತಿಯ ನಾಡಿಯನ್ನು ಹಿಡಿಯಲು ಸಹಾಯಕವಾಗಿವೆ. ಮಂಜುನಾಥ ಪಾಳ್ಯ ಅವರ ಸಂಗಾತಿ ಡಾ.ರೂಪ ಜಿ. ಇಲ್ಲಿನ ಎಲ್ಲ ಪದ್ಯಗಳನ್ನು ಸಂದರ್ಭದ ಹಿನ್ನೆಲೆಯಲ್ಲಿ ಸೂಕ್ಷ್ಮವಾಗಿ ವಿಶ್ಲೇಷಿಸಿರುವುದು ಮತ್ತೊಂದು ವಿಶೇಷವಾಗಿದೆ. ಕಾವ್ಯದ ಅರ್ಥಗ್ರಹಿಕೆ ಕಷ್ಟ ಎನ್ನಿಸುವವರಿಗೆ ಈ ಮೂರೂ ಜನರ ಮಾತುಗಳು ದಾರಿದೀಪವಾಗಿ ಕಾವ್ಯದ ಓದು ಸುಲಭವಾಗುವುದರಲ್ಲಿ ಸಂಶಯವಿಲ್ಲ. ಮೊದಲ ಸಂಕಲನದಿಂದ ಮೂರನೆಯ ಸಂಕಲನಕ್ಕೆ ಹೊರಟ ಮಂಜುನಾಥ ಪಾಳ್ಯ ಅವರ ಕಾವ್ಯ ಮತ್ತಷ್ಟು ಊರ್ಧ್ವಮುಖಿಯಾಗಲಿ ಎಂದು ಆಶಿಸುತ್ತೇನೆ.

ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ರೇಣುಕಾಪುರದವರಾದ ಡಾ. ಎ. ರಘುರಾಂ ಸದ್ಯ ಬೆಂಗಳೂರು ನಿವಾಸಿಯಾಗಿದ್ದಾರೆ. 2005ರಲ್ಲಿ ಕನ್ನಡ ವಿಶ್ವವಿದ್ಯಾಲಯದಿಂದ ‘ನವ್ಯೋತ್ತರ ಕಾದಂಬರಿಗಳು – ಒಂದು ಅಧ್ಯಯನ’ ಎನ್ನುವ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯಡಿಯಲ್ಲಿ ಕೆಲವು ವರ್ಷಗಳ ಕಾಲ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ, 1996ರಿಂದ ಕಾಲೇಜು ಉಪನ್ಯಾಸಕನಾಗಿ ಕಾರ್ಯ ನಿರ್ವಹಣೆ. ಸದ್ಯ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ, ಬೆಂಗಳೂರು ಇಲ್ಲಿ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯ ವಿಮರ್ಶೆ ಇವರ ಆಸಕ್ತಿಯ ಕ್ಷೇತ್ರ. ತೆಲುಗು ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಭರವಸೆ (ಕವನ ಸಂಕಲನ) ಸ್ನೇಹ ಪ್ರಕಾಶನ, ಚಿತ್ರದುರ್ಗ, ಆಕೃತಿ (ವಿಮರ್ಶೆ- ಅಖಿಲ ಭಾರತ ಸಾಹಿತ್ಯ ಸಮ್ಮೇಳನ, ಬಾಗಲಕೋಟೆ), ರಾಯಚೂರು ಜಿಲ್ಲೆಯ ಕತೆಗಳು (ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು), ಅಯನ (ವಿಮರ್ಶೆ-ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು), ಬೀಜ ಬಿತ್ತುವ ಗಳಿಗೆ (ವಿಮರ್ಶೆ-ಸಿವಿಜಿ ಇಂಡಿಯಾ, ಬೆಂಗಳೂರು), ವಿಮರ್ಶೆಯ ನೆಲೆ (ತುಮಕೂರು ವಿಶ್ವವಿದ್ಯಾಲಯದ ಕನ್ನಡ ಐಚ್ಛಿಕ ಪಠ್ಯ ಪುಸ್ತಕ), ನವ್ಯೋತ್ತರ ಕಾದಂಬರಿ – ಒಂದು ಅಧ್ಯಯನ (ಸಂಶೋಧನೆ – ಸಿವಿಜಿ ಇಂಡಿಯಾ, ಬೆಂಗಳೂರು : 2021) ಇವರ ಕೆಲವು ಪ್ರಕಟಿತ ಕೃತಿಗಳು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ‘ಸಾಹಿತ್ಯ ವಿಮರ್ಶೆ 2021’ ಕೃತಿ ಸಂಪಾದನೆ ಅಚ್ಚಿನಲ್ಲಿದೆ.

