ಖಾಲಿ ಡಬರಿಯಲ್ಲಿ ಕಲ್ಲು ಗಲಗಲಿಸಿದಂತೆ ವಟವಟ ಎನ್ನುವ, ಹೊಕ್ಕಿದ ಕೋಣೆಯಲ್ಲೆಲ್ಲ ಹೀರೋ ಆಗುವ ಶತಪ್ರಯತ್ನ ನಡೆಸುತ್ತಲೇ ಒದ್ದಾಡುವ ಗಂಡಸರಿಂದ ನಾನು ಎಂದಿಗೂ ದೂರವೇ ಸರಿದಿದ್ದೇನೆ. ನಿಮಗೆ ನನ್ನ ಮೇಲೆ ಪ್ರಭಾವ ಬೀರುವುದಿದೆಯೇ? ಹಾಗಿದ್ದರೆ ದಯವಿಟ್ಟು ಮಾತು ನಿಲ್ಲಿಸಿ. ಪ್ರಪಂಚದಲ್ಲಿ ಹೇಳಲೇ ಬೇಕಿರೋದನ್ನೆಲ್ಲ ಶಬ್ದಗಳಿಲ್ಲದೇ ಸಂವಹಿಸಬಹುದು ಎಂಬುದನ್ನು ಮನಸಾ ಪಾಲಿಸಿದ್ದೇನೆ. ಸುಹಾಸನ ಬಳಿ ಮೊದಲ ಸಲ ಫೋನಿನಲ್ಲಿ ಮಾತನಾಡಿದಾಗ ಅವನು ಇಂಟರ್‌ವ್ಯೂಗೆ ತಯಾರಿ ಮಾಡಿಕೊಂಡು ಬಂದವನ ಹಾಗೆ ಒಂದು ಕ್ಷಣವನ್ನೂ ಬಿಡದೇ ತನ್ನ ಬದುಕಿನ ಎಲ್ಲ ಮೈಲುಗಲ್ಲುಗಳ ಪ್ರವರ ಒಪ್ಪಿಸಿದ್ದ.
ಕಾವ್ಯಾ ಕಡಮೆ ಹೊಸ ಕಾದಂಬರಿ “ಮಿಥ್ಯಸುಖ” ಇದೇ ಶನಿವಾರ ಬಿಡುಗಡೆಯಾಗಲಿದ್ದು, ಈ ಕೃತಿಯ ಆಯ್ದ ಭಾಗ ನಿಮ್ಮ ಓದಿಗೆ
ನನಗೆ ಇಷ್ಟವಾಗುವ ಹುಡುಗರೆಲ್ಲ ಒಂದೇ ಗುಂಪಿಗೆ ಸೇರಿದವರು ಎಂಬುದನ್ನು ಮೊದಲು ಗುರುತಿಸಿದವಳು ಬಿ.ಎ ಓದುವಾಗಿನ ಗೆಳತಿ ರಶ್ಮಿ. “ಸೈಲೆಂಟ್ ಮತ್ತು ಸೆನ್ಸಿಬಲ್- ಅದು ನಿನ್ನ ಟೈಪ್” ಅಂದಿದ್ದಳು.
“ಅದು ಎಲ್ಲರ ಟೈಪೂ ಆಗಿರಬೇಕು ಅಲ್ಲೇನೇ?” ಅಂತ ಮರು ನುಡಿದಿದ್ದೆ. “ಅಲ್ಲಲ್ಲ, ಹಂಗಿರಂಗಿಲ್ಲ” ಅಂದಿದ್ದಳು.
ಖಾಲಿ ಡಬರಿಯಲ್ಲಿ ಕಲ್ಲು ಗಲಗಲಿಸಿದಂತೆ ವಟವಟ ಎನ್ನುವ, ಹೊಕ್ಕಿದ ಕೋಣೆಯಲ್ಲೆಲ್ಲ ಹೀರೋ ಆಗುವ ಶತಪ್ರಯತ್ನ ನಡೆಸುತ್ತಲೇ ಒದ್ದಾಡುವ ಗಂಡಸರಿಂದ ನಾನು ಎಂದಿಗೂ ದೂರವೇ ಸರಿದಿದ್ದೇನೆ. ನಿಮಗೆ ನನ್ನ ಮೇಲೆ ಪ್ರಭಾವ ಬೀರುವುದಿದೆಯೇ? ಹಾಗಿದ್ದರೆ ದಯವಿಟ್ಟು ಮಾತು ನಿಲ್ಲಿಸಿ. ಪ್ರಪಂಚದಲ್ಲಿ ಹೇಳಲೇ ಬೇಕಿರೋದನ್ನೆಲ್ಲ ಶಬ್ದಗಳಿಲ್ಲದೇ ಸಂವಹಿಸಬಹುದು ಎಂಬುದನ್ನು ಮನಸಾ ಪಾಲಿಸಿದ್ದೇನೆ.

(ಕಾವ್ಯಾ ಕಡಮೆ)
ಸುಹಾಸನ ಬಳಿ ಮೊದಲ ಸಲ ಫೋನಿನಲ್ಲಿ ಮಾತನಾಡಿದಾಗ ಅವನು ಇಂಟರ್‌ವ್ಯೂಗೆ ತಯಾರಿ ಮಾಡಿಕೊಂಡು ಬಂದವನ ಹಾಗೆ ಒಂದು ಕ್ಷಣವನ್ನೂ ಬಿಡದೇ ತನ್ನ ಬದುಕಿನ ಎಲ್ಲ ಮೈಲುಗಲ್ಲುಗಳ ಪ್ರವರ ಒಪ್ಪಿಸಿದ್ದ.
ಮೈಸೂರಿನ ಚಾಮುಂಡಿ ಮಕ್ಕಳ ಮನೆ ಎಂಬ ಸಣ್ಣ ಅನಾಥಾಲಯದಲ್ಲಿ ಬೆಳೆದದ್ದು, ಬರೆದ ಪರೀಕ್ಷೆಗಳಲ್ಲೆಲ್ಲ ಗಳಿಸಿದ ಮೊದಲ ಸ್ಥಾನ, ಫೀಜು ಎಂದು ತುಂಬಬೇಕಿದ್ದ ಪ್ರತೀ ಸಾವಿರಕ್ಕೂ ಒದ್ದಾಡಿಹೋಗಿದ್ದು, ಕಡೆಗೂ ಸಿಕ್ಕ ವಿದ್ಯಾರ್ಥಿವೇತನಗಳು, ಅಮೆರಿಕಾ ಪ್ರಯಾಣ, ಕಣ್ಣಿನ ಮುಂದೆ ಹಾಗೆ ಹಾಗೇ ಸೃಷ್ಟಿಯಾಗುವ ಗಣಿತದ ಪ್ರಮೇಯಗಳು; ಕೊಲಂಬಿಯಾ, ಪಿಎಚ್‌ಡಿ, ವಾಲ್‌ಸ್ಟ್ರೀಟು ಎಲ್ಲವೂ ಹತ್ತು ನಿಮಿಷಗಳ ಅವನ ‘ಪ್ರಸ್ತುತಿ’ಯಲ್ಲಿ ಸರಸರ ಬಂದು ಹೋಗಿತ್ತು.
“ಪುಣ್ಯಕ್ಕೆ ನಾವಂದು ಫೋನಿನಲ್ಲಿ ಮಾತನಾಡ್ತಿದ್ವಿ ಅಲ್ಲೇನೋ? ವೀಡಿಯೋ ಆಗಿದ್ದರೆ ಪಾವರ್‌ಪಾಯಿಂಟ್ ಪ್ರೆಸೆಂಟೇಷನ್ನನ್ನೇ ಮಾಡಿ ತೋರಿಸೋನು ನೀನು” ಅಂತ ನಾನು ಆ ದಿನವನ್ನು ನೆನಪಿಗೆ ತಂದಾಗಲೆಲ್ಲ ಮುನಿಸಿಕೊಳ್ಳುತ್ತಾನೆ ಅವನು.
“ಥೂ ಹೋಗೇ, ಯಾರೂ ಎತ್ತ ಅಂತ ಗೊತ್ತಾಗೋ ಮೊದಲೇ ಅಷ್ಟು ಮೃದುವಾಗಿ ಪತ್ರ ಬರೆದೋಳು ನೀನು. ಅದಕ್ಕೇ ಫೋನ್ ನಂಬರ್ ತೊಗೊಂಡು ಹೇಳೋದನ್ನೆಲ್ಲ ಮೊದಲು ಹೇಳಬೇಕಾಯ್ತು. ಅಲ್ವೇ ನಾನು ಯಾರೋ ಸೈಕೋ ಆಗಿದ್ರೆ ಏನು ಮಾಡ್ತಿದ್ದೆ?”
“ಹೇಗೆ ಸೈಕೋ ಆಗಿರ್ತೀಯ? ಪತ್ರಿಕೆಗಾಗಿ ನಿನ್ನ ಸಂದರ್ಶನ ಮಾಡ್ತಾನೇ ನಿನ್ನ ಪೂರ್ತಿ ಜಾತಕ ಜಾಲಾಡಿದ್ದೆ. ನೀನು ಫೋನಿನಲ್ಲಿ ಅದ್ಯಾವುದನ್ನೂ ಹೇಳಬೇಕಿರಲಿಲ್ಲ. ಹೇಳೋ ಮೊದಲೇ ನನಗೆಲ್ಲ ಗೊತ್ತಿತ್ತು.”
ಈಟೀವಿಯವರು ವಾರ್ತಾ ವಿಭಾಗವನ್ನೇ ಕಿತ್ತು ಹಾಕಿದ ನಂತರ, ನನ್ನ ವಾರ್ತೆ ಓದೋ ಕನಸೂ ಭಗ್ನವಾಯಿತು. ಇನ್ನೇನು ಮಾಡೋದು ಅಂತ ದೊಡ್ಡ ಪತ್ರಿಕೆಯೊಂದಕ್ಕೆ ಅರ್ಜಿ ಹಾಕಿದೆ. “ನಿಮ್ಮ ಕಡೆಯೋರು ನಮ್ಮ ಪತ್ರಿಕೆಗೆ ಅರ್ಜಿನೂ ಹಾಕೋದಿಲ್ಲವಲ್ರೀ, ಬನ್ನಿ ಬನ್ನಿ…” ಎಂದು ಅನುಕಂಪದ ಆಧಾರದ ಮೇಲೆ ಎಂಬಂತೆ ಪತ್ರಿಕೆಯವರು ಥಟ್ಟನೆ ಬೆಂಗಳೂರಿಗೆ ಕರೆದಿದ್ದರು.
ನನಗಾಗ ಇಪ್ಪತ್ತೊಂದು.
ನಮ್ಮ ‘ಎಜುಕೇಶನ್ ಪ್ಲಸ್’ ಅನ್ನೋ ಶಿಕ್ಷಣ ಪುರವಣಿಗೆ ಸುಹಾಸನ ಸಂದರ್ಶನ ಮಾಡಬೇಕಿತ್ತು. ಮಾಡಿದೆ. ಆ ನಂತರವೂ ಮಾತು ಬೆಳೆಯಿತು. ಮೊದಲು ಇಮೇಲ್, ನಂತರ ಒಂದು ದಿನ ಫೋನು. ವಾರ ಕಳೆಯುವುದರಲ್ಲೇ ತಾಸುಗಟ್ಟಲೇ ಫೋನು. ನಂತರ ಘಂಟೆ ಘಂಟೆ ಮೀರೋ ತನಕ ಮಾತುಕತೆ. ದಿನವೂ ರಾತ್ರಿ ಹತ್ತರ ನಂತರ ಕರೆ ಮಾಡಿ ಮರುದಿನದ ರಿಪೋರ್ಟಿಂಗ್ ಡ್ಯೂಟಿ ಎಲ್ಲಿ ಎಂದು ತಿಳಿಸುತ್ತಿದ್ದ ಮುರಳಿ ಸರ್ ಈ ನನ್ನ ಸಾಹಸವನ್ನು ಮೊದಲು ಕಂಡುಹಿಡಿದವರು. “ಇತ್ತೀಚೆಗೆ ಬಹಳ ಎಂಗೇಜ್ ಬರ್ತಿದೆಯಲ್ಲ ಫೋನು. ಬೆಂಗಳೂರಿಗೆ ಹೊಂದಿಕೊಂಡಾಯ್ತೋ?” ಅಂತ ಕಾಲೆಳೆದಿದ್ದರು.

ಸುಹಾಸನೊಂದಿಗೆ ಎಷ್ಟು ಮಾತನಾಡಿದರೂ ಈತನೇನು ಮುಂದುವರೆಯುವವನಲ್ಲ ಎಂಬುದು ಕೆಲ ದಿನಗಳಲ್ಲೇ ನನಗೆ ಗೊತ್ತಾಯಿತು. ನನಗಿಂತ ಏಳು ವರ್ಷ ದೊಡ್ಡವನಾದರೂ, ನನಗಿಂತ ಹೆಚ್ಚಿನ ಸಂಕೋಚ ಇವನಿಗೆ. ಇಷ್ಟವಾದವರಿಗೆ “ನೀನಂದ್ರೆ ಇಷ್ಟ” ಅಂತ ಹೇಳೋಕೆ ಹೀಗೆಲ್ಲ ಇಷ್ಟೊಂದು ಕಷ್ಟ ಪಡಬೇಕಾ?
ಒಮ್ಮೆ ಮಧ್ಯರಾತ್ರಿ ಒಂದು ಘಂಟೆಯ ತನಕ ‘ಡಿಸ್ಕೌಂಟೆಡ್ ಕ್ಯಾಶ್ ಫ್ಲೋ ಮಾಡೆಲ್’ ಅಂದರೇನಂತ ವಿವರಿಸುತ್ತಿದ್ದ. ಅವನ- ನೆಟ್ ಪ್ರೆಸೆಂಟ್ ವ್ಯಾಲ್ಯೂ, ವ್ಹೇಟೆಡ್ ಆವರೇಜ್ ಕಾಸ್ಟ್ ಆಫ್ ಕ್ಯಾಪಿಟಲ್, ಇಕ್ವಿಟಿ ರೀಸರ್ಚ್-ಗಳ ನಡುವೆ ನಾನು “ಹೂಂ ಹೂಂ” ಎನ್ನುತ್ತಿದ್ದೆ. ಆಮೇಲೊಂದು ಕ್ಷಣದಲ್ಲಿ ಹೂಂ ಅನ್ನೋದು ನಿಲ್ಲಿಸಿದೆ. “ಹಲೋ, ಇದೀಯಾ ವಾಣೀ?” ಕೇಳಿದ. “ಕೇಳಿಸ್ತಿದೀಯಾ?” ಅಂತ ಕಳವಳಗೊಂಡ.
“ಸುಹಾಸ, ನನ್ನನ್ನ ಮದುವೆಯಾಗ್ತೀಯಾ?” ಕೇಳಿದೆ.
ಅವನ ಕಪೋಲಗಳಲ್ಲಿ ನಾಚಿಗೆ ಮಡುಗಟ್ಟಿರಬಹುದು. ಕಣ್ಣುಗಳು ನೆಲ ನೋಡುತ್ತಿರಬಹುದು.
ಮೂರೇ ಸೆಕೆಂಡು ತಡೆದು, “ಯೆಸ್” ಅಂದ.
ಮೆಲುವಾಗಿ ನಕ್ಕೆ. “ಅಲ್ಲ, ಈಗಲೇ ಹೇಳಬೇಕಿಲ್ಲ. ಎರಡು ದಿನ ಸಮಯ ತೊಗೊಂಡು ಹೇಳು” ಅಂದೆ.
ರಾಯರ ದನಿಯೇ ಬದಲಾಗಿಬಿಟ್ಟಿತ್ತು. ತಾರಕದಲ್ಲಿ ‘ಲೆವರೇಜ್ಡ್ ಬಾಯ್‌ಔಟ್ ಮಾಡೆಲ್’ ವಿವರಿಸುತ್ತಿದ್ದವರು ಮಂದ್ರದಲ್ಲಿ ಉಸುರಿದರು.
“ಸಮಯವೇನೂ ಬೇಡ. ಈಗಲೇ ಓಕೆ ಹೇಳಾಯಿತಲ್ಲ. ನಿಮ್ಮ ತಂದೆಯ ನಂಬರ್ ಕಳಿಸಿರು. ಕರೆ ಮಾಡ್ತೀನಿ” ಅಂದಿದ್ದ.
“ಕೇಳಿದ ತಕ್ಷಣ ದೂಸರಾ ಮಾತಾಡದೇ ಹಾಗೆ ಹೂಂ ಅಂತಾರೇನೋ ಯಾರಾದರೂ? ಸ್ವಲ್ಪ ಸತಾಯಿಸೋದಲ್ಲ?” ಅಂತ ಕೇಳಿದರೆ, “ಏಯ್ ಹೊಗೇ” ಎನ್ನುತ್ತಾನೆ.
“ನಾನು ಸೈಕೋ ಆಗಿದ್ದರೆ ಏನು ಮಾಡ್ತಿದ್ದೆ?” ಅಂತ ಕೇಳಿದರೆ, ನನ್ನನ್ನು ಮೇಲಿನಿಂದ ಕೆಳಗೆ ಒಮ್ಮೆ ದಿಟ್ಟಿಸಿ, “ಹೂಂ, ಆಗೋದೇನು ಬಂತು” ಅನ್ನುತ್ತಾನೆ.
“ಏಯ್ ಯಾಕೋ?” ಅಂದರೆ, “ಊಂ” ಎಂದು ನಗುತ್ತಾನೆ.

ಹದಿನಾಲ್ಕು ವರ್ಷಗಳ ಹಿಂದೆ ಆ ರಾತ್ರಿ ನಾನು ಆ ಪ್ರಶ್ನೆ ಕೇಳಿದಾಗ ಅವನ ಮುಖದ ಮೇಲಾದ ಬದಲಾವಣೆಯ ನೇರಪ್ರಸಾರ ಮತ್ತೊಮ್ಮೆ ನನ್ನ ಮುಂದೆ ಅನಾವರಣಗೊಳ್ಳುವುದು.
ನಾಚಿಸೋ ಹುಡುಗರಿಗಿಂತ ನಾಚುವ ಹುಡುಗರು ಎಷ್ಟೊಂದು ಆಕರ್ಷಕ!
(ಕೃತಿ: ಮಿಥ್ಯಸುಖ (ಕಾದಂಬರಿ), ಲೇಖಕರು: ಕಾವ್ಯಾ ಕಡಮೆ, ಪ್ರಕಾಶನ: ಜೀರುಂಡೆ ಪ್ರಕಾಶನ, ಪುಟಗಳು: 304 ಬೆಲೆ, 365/-)

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

