ಅದು ಹೇಗೋ ಮನೆ ಒಂದು ರೂಪ ತಳೆದಿತ್ತು. ಅದೂ ಹೇಗೆ ಅಂದರೆ ಕಾಸ್ಟ್ ರೆಡಕ್ಷನ್‌ಗೆ ಒಂದು ಪ್ಲಾನ್ ಹಾಕಿದ್ದೆ ಅಂತ ಹೇಳಿದ್ದೆ ಅಲ್ಲವೇ? ಅದರ ಪ್ರಕಾರ ಶೋ ಕೇಸು ಕೆಲಸ ಬೇಡ ಅಂತ ನಿಲ್ಲಿಸಿದೆ. ಆದರೆ ಮಧ್ಯೆ ಹಲಗೆ ಬರಬೇಕಲ್ಲಾ ಅಂತ ಹಲಗೆ ಫ್ಯಾಕ್ಟರಿ ಸ್ಕ್ರ್ಯಾಪ್ ವುಡ್‌ನಲ್ಲಿ ತಂದಿದ್ದೆ ತಾನೇ? ಅದು ಈ ಸ್ಲಾಬ್‌ಗೆ ಉಪಯೋಗ ಆಯ್ತಾ? ಎರಡು ರೂಮಿನಿಂದ ಎರಡು ಕಬೋರ್ಡ್ ಆಗಬೇಕಿತ್ತು. ಅದಕ್ಕೆ ಬಾಗಿಲು ಬೇಡ ಅಂತ ನಿರ್ಧರಿಸಿ ಆಗಿತ್ತು. ಇದಕ್ಕೂ ಹಲಗೆ ಸ್ಕ್ರ್ಯಾಪ್ ವುಡ್‌ನಿಂದ ಅಡ್ಜೆಸ್ಟ್ ಆಯ್ತಾ? ಬಾಗಿಲು ಯಾಕೆ ಬೇಡ ಅಂದರೆ ಅದಕ್ಕೆ ಒಂದು ತುಂಬಾ ಬಲವಾದ ಕಾರಣ ಇತ್ತು. ಕೈಯಲ್ಲಿ ಕಾಸಿರಲಿಲ್ಲ ಅಂತ ಅಷ್ಟೇ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಅರವತ್ತಾರನೆಯ ಕಂತು
ಕಳೆದ ಕಂತು ಹೀಗೆ ತಾನೇ ಎಂಡ್ ಆಗಿದ್ದು?
ಸೈಕಲ್ ಲಾರಿಗೆ ಹಾಕಿ ಕಂಬದ ಪಕ್ಕ ನಾನೂ ಕುಕ್ಕರ ಗಾಲಿನಲ್ಲಿ ಕೂತೆ. ಡ್ರೈವರ್ ಪಕ್ಕ ಅವನ ದೋಸ್ತಿಗಳು ಬೀಡಿ ಸೇದುತ್ತಾ ಯಾವುದೋ ಗಹನವಾದ ವಿಷಯ ಮಾತಾಡುತ್ತಾ ಕೂತಿದ್ದರು. ಲಾರಿ ಹೊರಟಿತಾ?
ಸಾರ್ ಡೀಸೆಲ್ ಹಾಕಿಸಿ ಅಂದ ಲಾರಿ ಡ್ರೈವರ್.
ಜಗನ್ನಾಥ ಮುಖ ನೋಡಿದೆ. ಹೌದು ಹಾಕಿಸಬೇಕು, ಹಂಗೇನರಾ ರೂಲ್ಸ್.. ಅಂದ..
ಲಾರಿಗೆ ಡೀಸೆಲ್ ಹಾಕಿಸಿದ್ದು ಆಯ್ತಾ. ಲಾರಿ ಮನೆ ಹತ್ತಿರ ಬಂತು. ಕಂಬ ಇಳಿಸಿದರು. ಒಂದು ಕಂಬ ಸೊಟ್ಟಗೆ ಕ್ವೆಶ್ಚನ್ ಮಾರ್ಕ್ ಇದ್ದ ಹಾಗಿದೆ!
ಏನಪ್ಪಾ ನೋಡಿ ಅಲ್ವೇ ತರೋದು..? ಅಂದೆ.
ಸಾರ್ ಇದ್ದದ್ದು ಮೂರೇ ಅಲ್ಲಿ. ಅದನ್ನು ತಂದುಬಿಟ್ಟೀವಿ. ನಾಳೆ ಅಂದರೆ ಅದುನೂ ಸಿಕ್ತಾ ಇರ್ಲಿಲ್ಲ. ಪರಿಸ್ಥಿತಿ ಅನ್ನುವ ಶನಿದೇವರ ಕೈಲಿ ಸಿಕ್ಕಿ ಹಾಕಿಕೊಂಡಿದ್ದೆ. ಶನಿ ದೇವರು ಸಖತ್ ಆಟ ಆಡಿಸುತ್ತಾ ಇತ್ತು. ನಾಳೆ ಬಂದು ಕಂಬ ಹುಂತೀವಿ ಅಂತಾರೆ. ನಾಳೆ ಅಂದರೆ ಮತ್ತೆ ಒಂದು ವಾರ ಎಳೀತಾರೆ… ಅಂದ ಜಗನ್ನಾಥ.
ಈಗಲೇ ಮಾಡೋದಕ್ಕೆ ಒಪ್ಪಿಸಿಬಿಡು. ಎಲ್ಲಾರೂ ನಿನ್ನ ಮಚ್ಚಾಗಳು ತಾನೇ ಅಂದೆ. ತಲೆ ಆಡಿಸಿ ಹೋದ. ನಾಲ್ಕು ಕಂಬದ ಬದಲಿಗೆ ಮೂರು ಬಂತು. ಅದರಲ್ಲಿ ಒಂದು ಸೊಟ್ಟ ಪಟ್ಟ. ಎರಡೇ ಕಂಬ ಅಡ್ಜೆಸ್ಟ್ ಮಾಡಿ ನಿಲ್ಲಿಸಿದರು.
ಪಾಪ ಲೈನ್ ಮ್ಯಾನ್ ಕಷ್ಟಪಟ್ಟು ಗುಂಡಿ ತೋಡಿದಾರೆ ಸಾರ್….. ಅಂತ ಜಗನ್ನಾಥ ಅವರಿಗೆ ನೂರು ಕೊಡಿಸಿದ….!
ಅದೇ ಕಂಬ ಈಗ ನಲವತ್ತು ಪ್ಲಸ್ ವರ್ಷಗಳಿಂದ ನನ್ನ ಮನೆ ಮುಂದಿದೆ ಮತ್ತು ಹಲವು ಮನೆಗಳಿಗೆ ಇಲ್ಲಿನಿಂದ ವಿದ್ಯುತ್ ಸಂಪರ್ಕ ಕೊಟ್ಟಿದೆ. ಅಂದ ಹಾಗೆ ಕೊಸ್ಚನ್ ಮಾರ್ಕ್ ಆಕಾರದ ಸಿಮೆಂಟ್ ಲೈಟ್ ಕಂಬ ಸುಮಾರು ವರ್ಷ ರಸ್ತೆಯ ಒಂದು ಮೂಲೆಯಲ್ಲಿ ಬಿದ್ದಿತ್ತು. ಪುರಾಣದ ಶಾಪಗ್ರಸ್ತ ಅಹಲ್ಯೆಯ ಕಾರ್ಯ ನಿರ್ವಹಿಸುತ್ತಿತ್ತು. ಅಹಲ್ಯೆ ಯಾಕೆ ಬಂದಳು ಇಲ್ಲಿ ಅಂತ ನಿಮ್ಮ ಯೋಚನೆ ತಾನೇ? ಬರ್ತೀನಿ ಅದಕ್ಕೇ ಬಂದೆ ಮುಂದೆ…
ಕೆಇಬಿ ಕತೆ ಬಂದಾಗ ಇದನ್ನು ಸೇರಿಸಿಬಿಟ್ಟೆ ಮಧ್ಯೆ. ಆಕ್ಟುಯಲ್ಲಾಗಿ ಈ ಪ್ರಸಂಗ ನನ್ನ ಮನೆ ಗೃಹ ಪ್ರವೇಶದ ನಂತರ ಬರಬೇಕಿತ್ತು…! ಅದು ಇನ್ನೂ ಒಂದು ಸಾಹಸ ಪುರಾಣ, ಸಾಹಸ ಭೀಮ ವಿಜಯ ಇದ್ದ ಹಾಗೆ! ಅದನ್ನು ಮುಂದೆ ವಿವರಿಸುತ್ತೇನೆ….
ಮುಂದಕ್ಕೆ
ಈಗ ನಿಮಗೆ ಅಹಲ್ಯೆ ಎಂಬ ಸಾಧ್ವಿಮಣಿಯ ಕತೆ ಹೇಳಬೇಕು. ನೀವು ಈ ಕತೆ ಕೇಳಿ ತುಂಬಾ ವರ್ಷಗಳು ಕಳೆದಿವೆ ಎಂದು ನನ್ನ ಭಾವನೆ. ಅದರಿಂದ ಕತೆ ಕೊಂಚ ದೀರ್ಘವಾಗಿಯೇ ಹೇಳುತ್ತೇನೆ. ನಂತರ ಅದಕ್ಕೆ ನನ್ನ ಬಾಲಂಗೋಚಿ ಸಹ ಸೇರಿಸಬೇಕು ತಾನೇ?
ಈಗ ಮೊದಲು ಅಹಲ್ಯೆ ಸುದ್ದಿಗೆ….
ಪುರಾಣದ ಅಹಲ್ಯೆ ಕಥೆ ಭಾರತೀಯ ಪುರಾಣಗಳಲ್ಲೇ ಅತ್ಯಂತ ಪ್ರಸಿದ್ಧ ಮತ್ತು ಕುತೂಹಲಕಾರಿಯಾದ ಕಥೆಗಳಲ್ಲಿ ಒಂದು. ಇದು ರಾಮಾಯಣದಲ್ಲಿ ಬರುತ್ತದೆ. ವಾಲ್ಮೀಕಿ ರಾಮಾಯಣ ಎಂದು ನೆನಪು, ಅದೇ ಇರಬಹುದು ನಿಖರವಾಗಿ ತಿಳಿಯದು. ಯಾಕೆ ಅಂದರೆ ಅದೆಷ್ಟು ರಾಮಾಯಣ ಮಹಾಭಾರತಗಳು ಬಂದಿವೆ ಅಂದರೆ ತಿಣುಕಿದನು ಫಣಿರಾಯ ರಾಮಾಯಣದ ತಿಂತಿಣಿಯ ಭಾರದಲಿ”…(ಈ ಪದಗುಚ್ಛದ ಬಗ್ಗೆ ಹುಡುಕಿದೆ. ಒಂದು ಐವತ್ತು ಪುಟ ವಿವರ ಸಿಕ್ಕಿತು. ನನಗೆ ಬೇಕಾದಷ್ಟು ಮಾತ್ರ ಆರಿಸಿ ಇಲ್ಲಿ ಕಾಪಿ ಪೇಸ್ಟ್ ಮಾಡಿದ್ದೀನಿ!
“ತಿಣುಕಿದನು ಫಣಿರಾಯ ರಾಮಾಯಣದ ತಿಂತಿಣಿಯ ಭಾರದಲಿ” ಎಂದು ಹೇಳಿದ ನಮ್ಮ ನಾರಣಪ್ಪ ಮಹಾಭಾರತವನ್ನು ತನ್ನ ಕಾವ್ಯ ವಸ್ತುವಾಗಿ ಆಯ್ದುಕೊಂಡ! ಹಾಗೆಂದ ಮಾತ್ರಕ್ಕೆ ಮಹಾಭಾರತ ಗ್ರಂಥಗಳ ಸಂಖ್ಯೆಯೇನು ಕಡಿಮೆಯದಲ್ಲ. ನಮ್ಮ ಮಹಾಭಾರತ, ರಾಮಾಯಣಗಳು ಎಷ್ಟೇ ಸಂಖ್ಯೆಯಲ್ಲಿ ರಚಿತವಾದರೂ ಅವುಗಳ ರಸಾಸ್ವಾದನೆಗೇನು ಭಂಗವಿಲ್ಲ… ಒಬ್ಬೊಬ್ಬರೂ ಒಂದೊಂದು ರೀತಿಯಲ್ಲಿ ಬರೆದರು. ಕುಮಾರವ್ಯಾಸನದು ಕೃಷ್ಣ ಕಥೆಯಾದರೆ ಪಂಪನದು ವಿಕ್ರಮಾರ್ಜುನ ವಿಜಯ… ರನ್ನನದು ದುರಂತಚಕ್ರವರ್ತಿಯ ಊರುಭಂಗವಾದರೆ ನಾಗಚಂದ್ರನದು ಚೆಲುವೆ ಸೀತೆಯ ಕಂಡೊಡನೆ ಪದ್ಮಪತ್ರದ ಜಲಬಿಂದುವಿನಂತೆ ಚಲಿತಚಿತ್ತದವನಾದ ರಾವಣನ ಕಥೆ!………. ಇಷ್ಟು ರಾಮಾಯಣಗಳಲ್ಲಿ ನಿಖರವಾಗಿ ಅಹಲ್ಯೆ ಕತೆ ಈ ಯಪ್ಪನೇ ಬರೆದದ್ದು ಅಂತ ಹೇಳೋದು ಕಷ್ಟ ತಾನೇ? ಸುಲಭವಾಗಿ ಮೈಕ್ ಸಿಕ್ಕಿದೆ ಅಂತ ಟಿಪ್ಪುಸುಲ್ತಾನ ಕನ್ನಂಬಾಡಿ ಕಟ್ಟೆ ಕಟ್ಟಿಸಿದ ಅಂತ ಹೇಳುವಷ್ಟು ಸುಲಭ ಅಲ್ಲ ಈ ಕೆಲಸ! ಸಾಹಿತಿಗೆ ಒಂದು ಸಾಮಾಜಿಕ ಜವಾಬ್ದಾರಿ ಇರುತ್ತೆ. ರಾಜಕಾರಣಿ ತರಹ ಉಡಾಫೆ ಮಾತು ಆಡಲಾರ ಸಾಹಿತಿ!
ಅಂದ ಹಾಗೆ ಅಹಲ್ಯೆ ಯಾರು?
ಅಹಲ್ಯೆ ಬ್ರಹ್ಮದೇವನ ಸೃಷ್ಟಿ. ಅವಳು ಅತ್ಯಂತ ಸುಂದರ ಸ್ತ್ರೀ. ಬ್ರಹ್ಮನು ಅವಳನ್ನು ಮಹರ್ಷಿ ಗೌತಮರಿಗೆ ಪತ್ನಿಯಾಗಿ ನೀಡಿದನು. ಗೌತಮರು ಕಠಿಣ ತಪಸ್ವಿ ಮತ್ತು ಸದಾಚಾರಕ್ಕೆ ಹೆಸರುವಾಸಿ. ಇವರು ತುಂಬಾ ಅನ್ಯೋನ್ಯವಾಗಿ ಜಪ ತಪ ಮಾಡಿಕೊಂಡು ಜೀವಿಸುತ್ತಾ ಇದ್ದರು. ಹೀಗಿರಬೇಕಾದರೆ ಆದದ್ದಾದರೂ ಏನು?
ಅಹಲ್ಯೆ ತುಂಬಾ ಸುಂದರಿ ಎಂದು ಹೇಳಿದೆ ತಾನೇ..?
ಇಂದ್ರನು ಅಹಲ್ಯೆಯ ಸೌಂದರ್ಯಕ್ಕೆ ಮರುಳಾಗಿ, ಅವಳೊಂದಿಗೆ ಸೇರಲು ಸಂಚು ರೂಪಿಸುತ್ತಾನೆ. ಒಂದು ದಿನ ಗೌತಮರು ಮುಂಜಾನೆ ಸ್ನಾನಕ್ಕೆ ನದಿಗೆ ತೆರಳಿದ್ದಾಗ, ಇಂದ್ರನು ಕತ್ತಲಿನಲ್ಲಿ ಗೌತಮರ ವೇಷ ಧರಿಸಿ ಆಶ್ರಮಕ್ಕೆ ಪ್ರವೇಶಿಸುತ್ತಾನೆ. ಅಹಲ್ಯೆ, ಆತ ತನ್ನ ಪತಿ ಎಂದು ಭಾವಿಸಿ, ಮೋಸ ಹೋಗುತ್ತಾಳೆ ಮತ್ತು ಇಂದ್ರನೊಂದಿಗೆ ಸಂಭೋಗಿಸುತ್ತಾಳೆ.
ಸ್ವಲ್ಪ ಸಮಯದ ನಂತರ, ಬೆಳಕು ಹರಿದಿರಬೇಕಾದರೆ ಗೌತಮರು ನದಿಯಿಂದ ಹಿಂತಿರುಗಿದಾಗ, ಇಂದ್ರನು ಆಶ್ರಮದಿಂದ ಹೊರಬರುವುದನ್ನು ನೋಡುತ್ತಾರೆ. ಇಂದ್ರನು ಗೌತಮರ ನಕಲಿ ವೇಷದಲ್ಲಿರುವುದನ್ನು ತಿಳಿದು, ಒರಿಜಿನಲ್ ಗೌತಮರಿಗೆ ಎಲ್ಲವೂ ಸ್ಪಷ್ಟವಾಗುತ್ತದೆ. ತಮ್ಮ ಪತ್ನಿ ಮೋಸ ಹೋಗಿದ್ದಾಳೆ ಮತ್ತು ಇಂದ್ರನು ವಂಚನೆ ಮಾಡಿದ್ದಾನೆ ಎಂದು ತಿಳಿದು, ಗೌತಮರು ತೀವ್ರವಾಗಿ ಕ್ರೋಧಗೊಳ್ಳುತ್ತಾರೆ.
ಶಾಪ ಮತ್ತು ವಿಮೋಚನೆ
ಕ್ರೋಧಾವಿಷ್ಟರಾದ ಗೌತಮರು ಅಹಲ್ಯೆಗೆ ಮತ್ತು ಇಂದ್ರನಿಗೆ ಶಾಪ ನೀಡುತ್ತಾರೆ.
* ಇಂದ್ರನಿಗೆ ಶಾಪ: ಇಂದ್ರನು ತನ್ನ ವೃಷಣಗಳನ್ನು ಕಳೆದುಕೊಳ್ಳುವಂತೆ ಗೌತಮರು ಶಾಪ ನೀಡುತ್ತಾರೆ. ನಂತರ, ಇಂದ್ರನು ದೇವತೆಗಳ ಮೊರೆ ಹೋಗಿ ಪ್ರಾರ್ಥಿಸಿದಾಗ, ಅವರಿಗೆ ಆಡಿನ ವೃಷಣಗಳನ್ನು ನೀಡಲಾಗುತ್ತದೆ ಎಂದು ಕೆಲವು ಪುರಾಣಗಳು ಹೇಳುತ್ತವೆ. ಇನ್ನು ಕೆಲವು ಪುರಾಣಗಳಲ್ಲಿ, ಇಂದ್ರನ ದೇಹದಾದ್ಯಂತ ಸಾವಿರ ಕಣ್ಣುಗಳು ಉಂಟಾಗುತ್ತವೆ ಎಂದು ಹೇಳಲಾಗುತ್ತದೆ (ಸಹಸ್ರಾಕ್ಷ). ಈ ಕಥೆಯು ಇಂದ್ರನ ಕಾಮ ಮತ್ತು ದುರ್ವರ್ತನೆಗೆ ಶಿಕ್ಷೆಯಾಗಿತ್ತು.
* ಅಹಲ್ಯೆಗೆ ಶಾಪ: ಗೌತಮರು ಅಹಲ್ಯೆಯನ್ನು “ಕಲ್ಲಿನಂತೆ ಇರು, ಜನರಿಂದ ಅದೃಶ್ಯಳಾಗಿ, ಯಾರ ಕಣ್ಣಿಗೂ ಬೀಳದೆ ಸಾವಿರಾರು ವರ್ಷಗಳ ಕಾಲ ಪಾಪವನ್ನು ಅನುಭವಿಸು. ತ್ರೇತಾಯುಗದಲ್ಲಿ ವಿಷ್ಣುವಿನ ಅವತಾರವಾದ ರಾಮನು ನಿನ್ನ ಆಶ್ರಮಕ್ಕೆ ಬಂದಾಗ, ಅವನ ಪಾದ ಸ್ಪರ್ಶದಿಂದ ಮಾತ್ರ ನೀನು ಶಾಪ ವಿಮೋಚನೆ ಹೊಂದಿ, ಹಿಂದಿನಂತೆ ನಿರ್ಮಲಳಾಗಿ ನನ್ನ ಬಳಿಗೆ ಮರಳುವೆ” ಎಂದು ಶಾಪ ನೀಡುತ್ತಾರೆ.
ರಾಮನಿಂದ ವಿಮೋಚನೆ: ಸಮಯ ಕಳೆದಂತೆ, ರಾಮನು ವಿಶ್ವಾಮಿತ್ರ ಮಹರ್ಷಿಯೊಂದಿಗೆ ಸೀತೆಯ ಸ್ವಯಂವರಕ್ಕೆ ಹೋಗುವಾಗ ಗೌತಮರ ಆಶ್ರಮದ ಮೂಲಕ ಹಾದು ಹೋಗುತ್ತಾನೆ. ವಿಶ್ವಾಮಿತ್ರರು ರಾಮನಿಗೆ ಅಹಲ್ಯೆಯ ಶಾಪ ಮತ್ತು ಕಥೆಯನ್ನು ವಿವರಿಸುತ್ತಾರೆ. ರಾಮನು ಆ ಕಲ್ಲಿನ ಮೇಲೆ ತನ್ನ ಪಾದವನ್ನು ಇಡುತ್ತಿದ್ದಂತೆಯೇ, ಅಹಲ್ಯೆ ಶಾಪದಿಂದ ಮುಕ್ತಳಾಗಿ, ತನ್ನ ಮೂಲ ರೂಪಕ್ಕೆ ಮರಳುತ್ತಾಳೆ. ಅವಳು ರಾಮನಿಗೆ ನಮಸ್ಕರಿಸಿ, ಗೌತಮರ ಬಳಿ ಮರಳುತ್ತಾಳೆ.
ಕಥೆಯ ಮಹತ್ವ
ಅಹಲ್ಯೆ ಕಥೆಯು ಹಲವು ಆಯಾಮಗಳನ್ನು ಹೊಂದಿದೆ:
* ಮೋಸ ಮತ್ತು ಪರಿಣಾಮಗಳು: ಇದು ವಂಚನೆಯ ಮೂಲಕ ಮಾಡಿದ ತಪ್ಪಿನ ಪರಿಣಾಮಗಳನ್ನು ಎತ್ತಿ ತೋರಿಸುತ್ತದೆ.
* ಪಾಪ ಮತ್ತು ವಿಮೋಚನೆ: ಭಕ್ತಿಯಿಂದ ಮತ್ತು ದೈವಿಕ ಸ್ಪರ್ಶದಿಂದ ಪಾಪಗಳಿಂದ ವಿಮೋಚನೆ ಸಾಧ್ಯ ಎಂಬುದನ್ನು ಇದು ಸೂಚಿಸುತ್ತದೆ.
* ನ್ಯಾಯ ಮತ್ತು ಕರುಣೆ: ಗೌತಮರ ಶಾಪ ಅವರ ನ್ಯಾಯ ಪ್ರಜ್ಞೆಯನ್ನು ತೋರಿಸಿದರೆ, ರಾಮನ ಸ್ಪರ್ಶದಿಂದ ಅಹಲ್ಯೆಗೆ ವಿಮೋಚನೆ ದೊರೆತದ್ದು ದೈವಿಕ ಕರುಣೆಯನ್ನು ಬಿಂಬಿಸುತ್ತದೆ.
ಈ ಕಥೆಯು ಭಾರತೀಯ ಸಾಂಸ್ಕೃತಿಕ ಮತ್ತು ಧಾರ್ಮಿಕ ಚರ್ಚೆಗಳಲ್ಲಿ ಮಹತ್ವದ ಸ್ಥಾನವನ್ನು ಪಡೆದಿದೆ, ವಿಶೇಷವಾಗಿ ಸ್ತ್ರೀ ಪಾತ್ರ, ಮೋಸ, ಮತ್ತು ಮುಕ್ತಿಯ ಪರಿಕಲ್ಪನೆಗಳ ಬಗ್ಗೆ. ಅಹಲ್ಯೆ ಏನೇ ತಪ್ಪು ಮಾಡದಿದ್ದರೂ ಅವಳಿಗೆ ಶಾಪ ಕೊಟ್ಟ ಗೌತಮ ಒಬ್ಬ ದೊಡ್ಡ ವಿಲನ್ ಆಗಿ ನಮ್ಮ ಸಾಹಿತಿಗಳ ಕೈಲಿ ಸಿಕ್ಕಿಕೊಂಡು ವಿಜೃಂಭಿಸಿದ್ದಾನೆ.
ಗೌತಮ ಮುನಿಗಳು ದೇವೇಂದ್ರನಿಗೆ ಮೈಯೆಲ್ಲವೂ ಸಹಸ್ರಾಕ್ಷ ಆಗಲಿ ಎಂದು ಶಾಪ ಕೊಟ್ಟಿರಲಾರರು, ಬದಲಿಗೆ ಅವನ ಕಾಮಕ್ಕೆ ಕಾರಣನಾದ ಗಂಡಸಿನ ಅಂಗವೇ ಮೈಯೆಲ್ಲೆಲ್ಲಾ ಆಗಲಿ ಎಂದು ಶಾಪ ಕೊಟ್ಟಿರುವ ಸಾಧ್ಯತೆ ಹೆಚ್ಚು ಒಂದು ಒಬ್ಬ ವಿಚಾರವಾದಿ ವಿಮರ್ಶಕರು ವಾದಿಸಿದ್ದಾರೆ. ಆಡಿನ ವೃಷಣ ದೇವೇಂದ್ರನಿಗೆ ಇಡುವ ಕಲ್ಪನೆ ಪುರಾಣ ಕಾಲದಲ್ಲಿಯೇ ನಮ್ಮ ಸನಾತನ ಧರ್ಮದಲ್ಲಿ organ transplantation (ಅಂಗಾಂಗ ಕಸಿ) ಇತ್ತು ಎಂದು ವಾದಿಸುವ ಆರೆಸ್ಸೆಸ್ ಗೆಳೆಯರು ನನಗಿದ್ದಾರೆ. ಅಹಲ್ಯೆ ಬಗ್ಗೆ ಸುಮಾರು ಸಾಹಿತಿಗಳು ಸ್ತ್ರೀ ಶೋಷಣೆಯ ಪರಾಕಾಷ್ಠೆ ಎಂದು ಬರೆದಿದ್ದಾರೆ. ಕೆಲವು ನಾಟಕಕಾರರು ಅಹಲ್ಯೆ ಕುರಿತ ಹಾಗೆ ಕಣ್ಣೀರು ಜಲಪಾತದಂತೆ ಹರಿಯುವ ನಾಟಕ ರಚಿಸಿದ್ದಾರೆ. ಈ ಸಾಹಿತ್ಯದ ಸುದ್ದಿ ಬಿಡಿ. ಅಹಲ್ಯೆ ಕತೆಗೆ ಬರಲೇ…
ಅಹಲ್ಯೆ ಬಂಡೆಯಾಗಿ ಬಿದ್ದಿರುತ್ತಾಳೆ, ಅವಳಿಗೆ ಪ್ರಜ್ಞೆ ಇದೆ ಮಾತು ಆಡಲು ಆಗದು, ಜೀವಂತ ಶವ ಎಂದುಕೊಳ್ಳಿ. ಅಂತಹ ಬಂಡೆ ಸಿಕ್ಕರೆ ನಾಯಿಗಳು ಏನು ಮಾಡುತ್ತವೆ? ಅಹಲ್ಯೆ ಎಂಬ ಜೀವಂತ ಕಿವುಡು ಮೂಕ ಬಂಡೆ ಸಿಕ್ಕಿದಾಗ ಓಡಿಸಲು ಯಾರೂ ಇಲ್ಲದಾಗ ನಾಯಿಗಳು ಹೋಗಿ ಬಂದು ಬಂಡೆಯ ಮೇಲೆ ಒಂದ ಮಾಡುತ್ತಿದ್ದವು. ಇದು ಅದೆಷ್ಟೋ ಸಾವಿರ ವರ್ಷ ನಿರಂತರವಾಗಿ ನಡೆಯಿತು. ಇಂತಹ ಬಂಡೆಗೆ ಚಲನ ಶಕ್ತಿ ಹುಟ್ಟಿದಾಗ ಅದೇನು ಮಾಡಬಹುದು..?
ಮೊದಲಿಗೆ ರಾ ಶಿ (ಕನ್ನಡದ ಹಾಸ್ಯ ಸಾಹಿತಿಗಳು ಮತ್ತು ಕೊರವಂಜಿ ಪತ್ರಿಕೆಯ ಜನಕರು ಹಾಗೂ ಸಂಪಾದಕರು) ಅವರು ಕೊರವಂಜಿ ಪತ್ರಿಕೆಯಲ್ಲಿ ಅಹಲ್ಯೆಯ ಪಾಡು ಅಹಲ್ಯೆಯ ಕಣ್ಣಿನ (ಅವಳ ಮಾನಸಿಕ ತುಮುಲದ ನಡುವೆ)ಮೂಲಕ ನೋಡಿದರು. ಸಾಮಾನ್ಯ ಸಾಹಿತಿ ಆಗಿದ್ದರೆ ಒಂದು ಖಂಡ ಕಾವ್ಯ ಹುಟ್ಟುತ್ತಿತ್ತು. ಆದರೆ ರಾಶಿ ಅವರು ನಗೆ ಕಣ್ಣಿನಿಂದ ವಿಶ್ವ ನೋಡಿದವರು. ಅವರು ಅಹಲ್ಯೆ ಕತೆಗೆ ಒಂದು ಹೊಸ ಆಯಾಮ ಕೊಟ್ಟರು! ಬಂಡೆಯಿಂದ ಅಹಲ್ಯೆ ರೂಪ ಪಡೆದ ನಂತರ ಅವಳೇನು ಮಾಡಿದಳು?
ಚೆನ್ನಾಗಿ ಮೈಸೂರು ಸ್ಯಾಂಡಲ್ ಸೊಪ್ಪಿನಿಂದ ಉಜ್ಜಿ ಉಜ್ಜಿ ಸ್ನಾನ ಮಾಡಿಕೊಂಡಳು, ನಂತರ ಸೀರೆ ಉಟ್ಟು ರವಿಕೆ ತೊಟ್ಟಳು. (ಆಗ ಮೈಸೂರು ಸ್ಯಾಂಡಲ್ ಸೋಪು ಇತ್ತಾ ಅಂತ ಡೌಟಿಂಗ್ ಥಾಮಸ್‌ಗಳು ಕೇಳುತ್ತಾರೆ ಅಂತ ಗೊತ್ತು. ಸ್ಯಾಂಡಲ್ ಇಲ್ಲ ಅಂದರೆ ಅದರಪ್ಪನಷ್ಟು ಊಹೂಂ ಸ್ಯಾಂಡಲ್ ಸೋಪಿನ ಅಪ್ಪನಷ್ಟು ಒಳ್ಳೆಯ ಸೋಪು ಎಲ್ಲೂ ಇರದು, ಇರಬಾರದು ಸಹ ಅದರಷ್ಟೇ ಉತ್ತಮವಾದ ಸೋಪಿನಿಂದ ಸ್ನಾನ ಮಾಡಿಕೊಂಡಳು ಅಂತ ಓದಿಕೊಳ್ಳಿ)
ನಂತರ ಒಂದು ಒಳ್ಳೆಯ ನಾಗರ ಬೆತ್ತ ಹುಡುಕಿದಳು.(ನಾಗರ ಬೆತ್ತ =ಹಾವಿನಂತೆ ಬಳುಕುವ, ತೆಳ್ಳನೆಯ ಮತ್ತು ಉದ್ದನೆಯ ಬೆತ್ತವನ್ನು ವಿವರಿಸಲು ಈ ಪದವನ್ನು ಬಳಸಬಹುದು. ಇದು ಹಾವಿನ ಚಲನೆಯನ್ನು ಹೋಲುವ ಕಾರಣ ಈ ಹೆಸರು ಬಂದಿದೆ. ನಾರು ನಾರು ಬೆತ್ತ, ಬಾರಿಸಿದರೆ ಬರೆ ಬೀಳುತ್ತೆ) ಈ ಬೆತ್ತದ ಏಟು ಚೆನ್ನಾಗಿ ನೋವು ಕೊಡುತ್ತದೆ ಮತ್ತು ಬೆತ್ತ ಬೇಗ ಮುರಿಯದು.
ನಾಗರ ಬೆತ್ತ ಹುಡುಕಿದವಳು ಏನು ಮಾಡಿದಳು?
ಊರಿನ ನಾಯಿಗಳನ್ನು ಒಂದೊಂದನ್ನೇ ಹುಡುಕಿ ಹುಡುಕಿ ಬಾರಿಸಿದಳು! ಇದು ಅಂದರೆ ಈ ಕತೆ ಎಷ್ಟು ಫೇಮಸ್ ಆಯಿತು ಅಂದರೆ ಯಾವುದೇ ಹಾಸ್ಯೋತ್ಸವದಲ್ಲಿ ಈ ಪ್ರಸಂಗ ಮತ್ತೆ ಮತ್ತೆ ಕೇಳಿಸಿತು. ಪ್ರೊ ಮಿತ್ರಾ ಅವರಂತೂ ಈ ಸನ್ನಿವೇಶವನ್ನು ಅದೆಷ್ಟು ಜನಪ್ರಿಯಗೊಳಿಸಿದರು ಎಂದರೆ ಸಾರ್ ಅಹಲ್ಯೆ ಕತೆ ಹೇಳಿ ಎಂದು ಸಭಿಕರು ಅವರನ್ನು ಅವರು ಭಾಷಣ ಮುಗಿಸಿ ಮನೆಗೆ ಹೊರಟಾಗ ಸಹ ಕೋರುತ್ತಿದ್ದರು! ಕಾರಿನಿಂದ ಇಳಿದು ಮಿತ್ರಾ ಅವರು ಈ ಕತೆ ಹೇಳುತ್ತಿದ್ದರು!
ಅಹಲ್ಯೆ ಕತೆ ಇಲ್ಲಿ ಯಾಕೆ ಬಂತು ಅಂತ ನೀವು ಗೊಂದಲಕ್ಕೆ ಈಡಾಗುತ್ತಿದ್ದೀರಿ ಅಂತ ನನಗೆ ಗೊತ್ತು. ಈಗ ಅದಕ್ಕೆ ತಮ್ಮ ಅನುಮತಿಯಿಂದ ಬರಲೇ?..
ಕೆಇಬಿ ಅವರು ಮೂರು ಕಂಬ ತಂದರು, ಅದರಲ್ಲಿ ಒಂದು ಕ್ವೆಶ್ಚನ್ ಮಾರ್ಕ್ ಇದ್ದ ಹಾಗೆ ಇತ್ತು. ಅದನ್ನು ಉಪಯೋಗಿಸದೆ ಹಾಗೇ ಬಿಟ್ಟು ಹೋಗಿದ್ದರು ಅಂತ ಹೇಳಿದ್ದೆ ತಾನೇ. ಆಗ ಅಹಲ್ಯೆ ಕತೆ ಬಂದದ್ದು ಮತ್ತು ಅಹಲ್ಯೆ ಶಾಪಗ್ರಸ್ತೆಯಾಗಿ ಬಂಡೆಯಾಗಿ ಬಿದ್ದಿದ್ದ ಕಾಲದಲ್ಲಿ ಅವಳಿಗೆ ಆದ ದುರ್ಗತಿಯೇ ಈ ಕಂಬಕ್ಕೂ ಆಗಿದ್ದು! ಒಂದು ವ್ಯತ್ಯಾಸ ಅಂದರೆ ಅಹಲ್ಯೆ ಶಾಪ ವಿಮೋಚನೆ ಆಯಿತು, ಈ ಕಂಬಕ್ಕೆ ಅಂತಹ ರಿಲೀಫ್ ಸಿಗಲಿಲ್ಲ! ಅದೆಷ್ಟೋ ವರ್ಷ ಅಲ್ಲೇ ಮಳೆ ಗಾಳಿ ಮತ್ತು ಅನೇಕ ಇತರ ಚಟಗಳಿಗೆ ಆಸರೆಯಾಗಿದ್ದ ಈ ಕಂಬ ಒಂದು ದಿವಸ ಇದ್ದಕ್ಕಿದ್ದ ಹಾಗೆ ಕಣ್ಮರೆ ಆಯಿತು. ಕೆಲವೇ ದಿನಗಳಲ್ಲಿ ನಮ್ಮದೇ ಲೇಔಟ್‌ನ ಒಂದು ಮನೆಯ ಮುಂಬಾಗಿಲ ಗೇಟುಗಳಿಗೆ ಅರ್ಧರ್ಧ ಭಾಗವಾಗಿ ಆಸರೆಯಾಗಿತ್ತು!
ಅಶ್ವತ್ ಅದೇ ನನ್ನ ಗೈಡು ಅವನಿಗೆ ರಸ್ತೆ ಕೊನೆಯ ನನ್ನ ಮನೆಗೆ ಕಂಬ ತಂದು ನೆಟ್ಟ ಕತೆ ಹೇಳಿದೆ. ಲಂಚ ಕೊಟ್ಟ ಬೆವರು ರಕ್ತ ಸುರಿಸಿ ಸಂಪಾದಿಸಿದ ದುಡ್ಡಿನ ಬಗ್ಗೆ ಸಹ ಕರುಳು ಹಿಂಡುವ ಹಾಗೆ ವಿವರಿಸಿದೆ ಅಂತ ಕಾಣುತ್ತೆ…! ನನ್ನ ಕಣ್ಣಿನ ಅಂಚಿನಲ್ಲಿ ನೀರು ನಿಂತಿತ್ತ, ನನಗೆ ತಿಳಿಯದು. ಅವನೂ ಸಹ ನನ್ನ ರಕ್ತ ಕಣ್ಣೀರಿನ ಕತೆ ಕೇಳಿ ನೊಂದುಕೊಂಡ, ವಿಹ್ಲನೂವ ಆದ. ಒಂದು ಐಡಿಯಾ ಕೊಟ್ಟ. ಮುಂದೆ ನಿಮ್ಮ ರಸ್ತೇಲಿ ಮನೆ ಕಟ್ಟಿಸಿಕೊಂಡು ಬರ್ತಾರಲ್ಲಾ ಅವರ ಹತ್ತಿರ ಎಲ್ಲಾ ಕಾಸು ವಸೂಲು ಮಾಡು ಅಂದ.
ಯಾವೋನು ಕೊಡ್ತಾನೆ ನೀನೊಳ್ಳೆ ಕಂತ್ರಿ ಐಡಿಯ ಕೊಡ್ತಾ ಇದ್ದೀಯಾ ಅಂದೆ. ನಾನು ಹೇಳಿದ್ದು ಮಾಡು, ನೀನು ಖರ್ಚು ಮಾಡಿದ ಕಾಸು ಬಂದೇ ಬರುತ್ತೆ ಅಂದ. ಈ ಪ್ರಯೋಗ ಸಾಧುವೆ ಅಸಾಧುವೆ ಅಂತ ಯೋಚನೆ ಮಾಡಿ ಐಡಿಯ ಡ್ರಾಪ್ ಮಾಡಿದೆ. ಹೇಗಿದ್ದರೂ ಕರೆಂಟ್ ವಿಷಯಕ್ಕೆ ಬಂದಿದ್ದೀನಿ. ಕರೆಂಟ್ ವಿಷಯ ಮುಗಿಸಿ ಯಾರು ಯಾರಿಗೆ ಶಾಪ ಹಾಕಬೇಕು ಹಾಕಿ ಮುಂದಕ್ಕೆ ಹಾರುತ್ತೇನೆ, ಸರಿ ತಾನೇ ದೇವರೂ?
ಅದು ಹೇಗೋ ಮನೆ ಒಂದು ರೂಪ ತಳೆದಿತ್ತು. ಅದೂ ಹೇಗೆ ಅಂದರೆ ಕಾಸ್ಟ್ ರೆಡಕ್ಷನ್‌ಗೆ ಒಂದು ಪ್ಲಾನ್ ಹಾಕಿದ್ದೆ ಅಂತ ಹೇಳಿದ್ದೆ ಅಲ್ಲವೇ? ಅದರ ಪ್ರಕಾರ ಶೋ ಕೇಸು ಕೆಲಸ ಬೇಡ ಅಂತ ನಿಲ್ಲಿಸಿದೆ. ಆದರೆ ಮಧ್ಯೆ ಹಲಗೆ ಬರಬೇಕಲ್ಲಾ ಅಂತ ಹಲಗೆ ಫ್ಯಾಕ್ಟರಿ ಸ್ಕ್ರ್ಯಾಪ್ ವುಡ್‌ನಲ್ಲಿ ತಂದಿದ್ದೆ ತಾನೇ? ಅದು ಈ ಸ್ಲಾಬ್‌ಗೆ ಉಪಯೋಗ ಆಯ್ತಾ? ಎರಡು ರೂಮಿನಿಂದ ಎರಡು ಕಬೋರ್ಡ್ ಆಗಬೇಕಿತ್ತು. ಅದಕ್ಕೆ ಬಾಗಿಲು ಬೇಡ ಅಂತ ನಿರ್ಧರಿಸಿ ಆಗಿತ್ತು. ಇದಕ್ಕೂ ಹಲಗೆ ಸ್ಕ್ರ್ಯಾಪ್ ವುಡ್‌ನಿಂದ ಅಡ್ಜೆಸ್ಟ್ ಆಯ್ತಾ? ಬಾಗಿಲು ಯಾಕೆ ಬೇಡ ಅಂದರೆ ಅದಕ್ಕೆ ಒಂದು ತುಂಬಾ ಬಲವಾದ ಕಾರಣ ಇತ್ತು. ಕೈಯಲ್ಲಿ ಕಾಸಿರಲಿಲ್ಲ ಅಂತ ಅಷ್ಟೇ.
ಮುಂಬಾಗಿಲು ರೆಡಿ ಆಗಿರಲಿಲ್ಲ. ಬೇವಿನ ಬಾಗಿಲು ಚಿಕ್ಕದು ಮತ್ತು ಅದರ ಫ್ರೇಮ್ ಸಹ ಕುಳ್ಳ ಆಗಿದ್ದರಿಂದ ಮುಂಬಾಗಿಲು ಬೇರೆ ಮಾಡಿಸು ಅಂತ ಸತ್ಯಣ್ಣ ಐಡಿಯಾ ಕೊಟ್ಟಿದ್ದ. ಅದರಂತೆ ಹೊಸ ಬಾಗಿಲ ಫ್ರೇಮ್ ಮತ್ತಿ ಮರದಲ್ಲಿ ಆಗಿತ್ತು. ಟೀಕ್ ಮರದ ಬಾಗಿಲು ಅಂದರೆ ಆರು ಸಾವಿರ ಆಗುತ್ತೆ ಅಂದಿದ್ದರಾ? ಚೀಪ್ ಯಾವುದು ಅಂತ ಲೆಕ್ಕ ಹಾಕಿ ಆಗ ತಾನೇ ಮಾರ್ಕೆಟ್ ಆವರಿಸುತ್ತ ಇಂದ ಕಂಪ್ರೆಸ್ಡ್ ಬಾಗಿಲು (ಇದಕ್ಕೆ ಫ್ಲಶ್ ಡೋರ್ ಅಂತ ಇನ್ನೊಂದು ಹೆಸರು) ವಾಸಿ ಅಂತ ಡಿಸೈಡ್ ಮಾಡಿದೆನಾ. ಇದು ಒಂದೂವರೆ ಸಾವಿರ ಅಷ್ಟೇ. ಇದರ ಮಧ್ಯೆ ನನ್ನ ಈ ಪ್ರತಾಪ ಎಲ್ಲರ ಹತ್ತಿರವೂ ಕೊಚ್ಚುತ್ತಾ ಕೊಚ್ಚುತ್ತಾ ಕೊಚ್ಚುತ್ತಾ ಇದ್ದೆ ತಾನೇ? ಒಬ್ಬ ನನಗಿಂತ ಮೊದಲೇ ಮನೆ ಕಟ್ಟಿಕೊಂಡು ಬಂದಿದ್ದ ಗೆಳೆಯ ಗೋಪಿ ಬೇಡವೋ… ಫ್ಲಶ್ ಡೋರ್ ಒಂದು ಸಲ ಒದ್ದ ಅಂದರೆ ಮುರಿಯುತ್ತೆ ಅಂತ ಅಡ್ವೈಸ್ ಮಾಡಿದ. ಅದನ್ನೇಕೆ ಒದಿಬೇಕು ನಾನು ಅಂತ ನನ್ನ ಪ್ರಶ್ನೆ. ನೀನು ಅಲ್ಲವಯ್ಯಾ ಒದೆಯೋದು, ಕಳ್ಳರು ಬಂದು ಒದ್ದರು ಅಂದರೆ ಮುರಿಯುತ್ತೆ..
ಕಳ್ಳರು ಕಳ್ಳರು ಯಾಕೆ ಬರ್ತಾರೆ? ಇದು ನನ್ನ ಪ್ರಶ್ನೆ.
ಹೊಸಾ ಲೇಔಟ್ ಕಣಪ್ಪಾ; ಕಳ್ಳರು ಇಲ್ಲೇ ಜಾಸ್ತಿ ಬರೋದು… ನಾನು ಇದನ್ನು ಮುಖ್ಯಮಂತ್ರಿಗಳು ವಿರೋಧ ಪಕ್ಷದವರ ಹೇಳಿಕೆಗಳನ್ನು ತಳ್ಳಿ ಹಾಕುತ್ತಾರೆ ನೋಡಿ ಹಾಗೆ ತಳ್ಳಿ ಹಾಕಿದೆ. ತಳ್ಳಿ ಹಾಕಲು ಕಾರಣ ನನ್ನ ಮನೇಲಿ ಒಂದೇ ಒಂದು ಗ್ರಾಂ ಮೇಲೆ ಚಿನ್ನ ಇರಲಿಲ್ಲ! ಮನೆ ಕಟ್ಟಿ ವಾಸಕ್ಕೆ ಅಂತ ಹೋದ ಮರುವರ್ಷವೋ ಅದರ ಮರುವರ್ಷವೋ ಇದರ ಅನುಭವ ಆಯಿತು. ಅದನ್ನ ಈಗ ಮಧ್ಯ ತಂದರೆ ಇಲ್ಲಿನ ಈ ಪುರಾಣದ ಓಟಕ್ಕೆ ತಡೆ ಆಗುತ್ತೆ, ಅದರಿಂದ ಮುಂದೆ ಹೇಳುತ್ತೇನೆ, ನೀವು ಜ್ಞಾಪಿಸಿದರೆ!
ಹೀಗೆ ಮುಂಬಾಗಿಲು ಫ್ಲಶ್ ಡೋರ್ ಆಯಿತು. ಹಳೇ ಪಳೆ ಕಿಟಕಿ ಬಾಗಿಲು ಕಿಟಕಿ ಎಲ್ಲೆಲ್ಲಿ ಅಗತ್ಯವೋ ಅಲ್ಲೆಲ್ಲ ಸಿಕ್ಕಿಸಿ ಪಕ್ಕಿಸಿ ಮನೆ ಶೇಪ್ ಬಂದಿತ್ತು. ನೀರಿಗೆ ಆಗಿನ್ನೂ ನಮಗೆ ಕಾವೇರಿ ಬಂದಿರಲಿಲ್ಲ. ದೊಡ್ಡ ದೊಡ್ಡ ಆರು ಬಾವಿ ವಿದ್ಯಾರಣ್ಯಪುರದ ಉದ್ದಕ್ಕೂ ಇದ್ದವು. ಇದರಿಂದ ಅಲ್ಲಿನ ತೋಪು ಪಶು ಸಂಗೋಪನೆಗೆ ನೀರು ಉಪಯೋಗ ಆಗುತ್ತಿತ್ತು, ಇಲ್ಲಿ ಬಡಾವಣೆ ಆಗುವ ಮೊದಲು. ಬಾವಿ ಹಾಗೇ ಉಳಿಸಿಕೊಂಡು ಅದರಲ್ಲಿನ ನೀರನ್ನು ಪೈಪ್ ಮೂಲಕ ಮನೆಗಳಿಗೆ ಸರಬರಾಜು ಮಾಡುವ ವ್ಯವಸ್ಥೆ ಮಾಡಿಕೊಂಡಿದ್ದೆವು. ಅದಕ್ಕೂ ಪರ್ಮಿಷನ್ ಎಲ್ಲಾ ಬೇಕು ಅಂದರೂ ನಮ್ಮ ನಿವಾಸಿಗಳೇ ಅದರ ಜವಾಬ್ದಾರಿ ಹೊತ್ತಿದ್ದರು, ಅದರಿಂದ ಕೆಇಬಿ ಅಷ್ಟು ಗೊಂದಲ ಗೋಜು ಮತ್ತು ಅವೆಲ್ಲಕ್ಕಿಂತಲೂ ಮುಖ್ಯವಾಗಿ ಲಂಚ ಪಂಚ ಇರಲಿಲ್ಲ. ಹಾಗೆ ನೋಡಿದರೆ ನಾವು ಕಾರ್ಖಾನೆ ಪರಿಸರದಲ್ಲಿ ಬೆಳೆದವರಿಗೆ ಲಂಚ ಕೊಡುವುದು ಲಂಚ ತೆಗೆದುಕೊಳ್ಳುವುದು ಗೊತ್ತಿಲ್ಲ. ನಮ್ಮ ಎಲ್ಲಾ ಕೆಲಸಗಳೂ ನಿಯಮಿತವಾಗಿ ಹೇಳಿದ ಸಮಯಕ್ಕೆ ಗಡಿಯಾರದ ಮುಳ್ಳಿನ ಹಾಗೆ ಆಗುತ್ತಿತ್ತು. ನಮಗೂ ಸಹ ಅದೇ ವರ್ಕ್ ಕಲ್ಚರ್ ಬೆಳೆದು ಬಂದಿತ್ತು. ಸರ್ಕಾರಿ ಕಚೇರಿಗಳಲ್ಲಿ ಆಗಲೂ ಈಗಲೂ ತಾಂಡವವಾಡುತ್ತಿರುವ ಲಂಚ ರಾಣಿಯ ನೃತ್ಯ ನೋಡಿದರೆ ತೆಗೆದು ನಾಲ್ಕು ಬಾರಿಸಿ ಲಂಚ ಡಿಮ್ಯಾಂಡ್ ಮಾಡಿದವನನ್ನು ಶೂಟ್ ಮಾಡಬೇಕು ಅನಿಸುತ್ತದೆ..! ಆದರೆ ಶೂಟ್ ಮಾಡಲು ಸಾಧ್ಯ ಇಲ್ಲ, ತೆಪ್ಪಗೆ ಇದ್ದೇವೆ.
ನೀರು ಸರಬರಾಜಿಗೆ ಒಬ್ಬ ಹುಡುಗ ಬಂದ. ಮನೆ ಗೋಡೆ ಗ್ರೋವ್ ಹೊಡೆದು ಪೈಪ್‌ನಲ್ಲಿ ಕೂಡಿಸಿದ. ಮನೆ ಮುಂದೆಯೇ ಇದ್ದ ವಾಲ್ವ್‌ಗೆ ಪೈಪ್ ಜೋಡಿಸಿ ವಾಲ್ವ್ ತಿರುಗಿಸಿದ ನೋಡಿ. ಒಳ ನಲ್ಲಿಗಳಲ್ಲಿ ಗಂಗೆ ಹರಿದಳು. ಅವನು ಕೇಕೆ ಹಾಕಿಕೊಂಡು ಖುಷಿಯಿಂದ ಕುಣಿದು ಕುಪ್ಪಳಿಸಿದ! ನಮಗೂ ಖುಷಿ ಆಗಿತ್ತು. ಎರಡು ಮೂರು ದಿವಸ ಅವನ ಖುಷಿಯ ಮುಖ ಕಣ್ಣ ಮುಂದೆಯೇ ಇತ್ತು. ಎಷ್ಟೋ ಜನರಿಗೆ ಅವನು ನೀರಿನ ಅಗತ್ಯ ನಿವಾರಿಸುವ ಮನುಷ್ಯ. ನಮ್ಮ ಮನೆಯ ಹಾಗೆ ಎಷ್ಟೋ ಮನೆಗಳಿಗೆ ಪೈಪ್ ಜೋಡಿಸಿದ್ದಾನೆ. ಅಂತಹವನು ನಮ್ಮ ಮನೆಯಲ್ಲಿ ನೀರು ಬಂದಾಗ ಹಾಗೆ ಕೇಕೆ ಹಾಕಿ ಖುಷಿ ಪಟ್ಟ ಅಂದರೆ ನಮ್ಮ ಸಂತೋಷ ಅವನೂ ಸಹ ಅನುಭವಿಸಿದ ಎನ್ನುವ ಫೀಲಿಂಗ್ ಬಂದಿತು. ಇದು ನೀರು ಸಂಪರ್ಕ ಬಂದ ಒಂದು ವಾರದ ನಂತರ ತಲೆಗೆ ಹೊಳೆದದ್ದು! ಅವನ ಆ ಖುಷಿಯ ಮುಖ ಸುಮಾರು ವರ್ಷ ನನ್ನ ತಲೆಯಲ್ಲಿತ್ತು. ಈಗ ಒಂದು ಚೂರು ಡಿವಿಯೇಷನ್….
ಮೊನ್ನೆ ಜನವರಿಯಲ್ಲಿ ನನ್ನ ಮಾಮೂಲಿ ಹೋಟೆಲಲ್ಲಿ ಒಂದು ಸ್ಟ್ರಾಂಗ್ ಶುಗರ್ ಲೆಸ್ ಕಾಫಿ ಕುಡಿದು ಬಾಯಿ ಒರೆಸಿಕೊಂಡು ಕರ್ಚೀಫ್ ಜೇಬಿನಲ್ಲಿ ಇಡುತ್ತಾ ಆಚೆ ಬಂದೆ… ಎದುರಿಗೆ ಒಬ್ಬರು ಬಂದರು. ಅಪರಿಚಿತ ಮುಖ, ಆದರೂ ಎಲ್ಲೋ ನೋಡಿದ್ದೀನಿ ಅನಿಸುತ್ತಿದೆ.
ಸಾರ್ ನಮಸ್ಕಾರ, ಗುರುತು ಸಿಕ್ತಾ…. ಅಂದರು
ಇಲ್ಲ,ಇವರೇ ಜ್ಞಾಪಿಸಿಕೊಳ್ತಾ ಇದೀನಿ ಇರಿ…. ಅಂದೆ.
ಅವರು ನಗುತ್ತಾ ನಿಂತರು. ಎರಡು ನಿಮಿಷ ಮೈಂಡ್ ಹಿಂದಕ್ಕೆ ಓಡಿಸಿದೆನಾ? ತಟಕ್ ಅಂತ ಅವನ ನೆನಪು ಒದ್ದು ಕೊಂಡು ಬಂತು.
ಅಯ್ಯೋ ಚಂದ್ರು ಅಲ್ವೇನೋ ನೀನು ಚಂದ್ರಶೇಖರ. ಭಗೀರಥ, ನಮಗೆ ನೀರು ಕೊಟ್ಟ ಭಗೀರಥ… ಅಂತ ಬೆನ್ನು ತಟ್ಟಿದೆ. ಸಾರ್ ನಿಮ್ಮ ಮನೆಗೆ ನೀರು ಬಂದ ದಿವಸ ಸಹ ನೀವು ನನ್ನನ್ನು ಭಗೀರಥ ಅಂತಲೇ ಹೇಳಿ ಐವತ್ತು ರೂಪಾಯಿ ಭಕ್ಷೀಸು ಕೊಟ್ಟು ಬೆನ್ನು ತಟ್ಟಿದ್ದಿರಿ… ಅಂದ.
ಅವನು ಖುಷಿಯಿಂದ ಹತ್ತು ನಿಮಿಷ ಮಾತಾಡಿದ. ಈಗ ಒಂದು ಹಿಂಡು ಕಟ್ಟಿಕೊಂಡು ಮನೆಗೆ ಸಂಬಂಧ ಪಟ್ಟ ಎಲ್ಲಾ ಕೆಲಸ ಮಾಡ್ತೀನಿ ಅಂದ. ಜತೆಗೆ ತೂಕ ಇಳಿಸಿ ತೂಕ ಹೆಚ್ಚಿಸಿ ಡಾಕ್ಟರಿಕೆ ಬೇರೆ ಇದೆಯಂತೆ. ಅವನ ಹೆಸರಿನ ಮೊದಲು ಡಾಕ್ಟರ್ ಅಂತ ಸೇರಿಸಿಕೊಂಡಿದ್ದಾನೆ! ಜೇಬಿನಿಂದ ಒಂದು ಬುಕ್ ತೆಗೆದು ಅದರಿಂದ ಒಂದು ಟಿಕೆಟ್ ಬುಕ್ ತೆಗೆದ. ಒಂದು ಟಿಕೆಟ್ ಮೇಲೆ ನನ್ನ ಹೆಸರು ಬರೆದು ಸಾರ್ ಇದು ಇಟ್ಕೊಳ್ಳಿ. ಇಲ್ಲೇ ಹೋಟೆಲ್ ಇದೆ. ಅದರಲ್ಲಿ ಬೆಳಿಗ್ಗೆ ಟಿಫಿನ್‌ಗೆ ಬನ್ನಿ ಅಂತ ಹೇಳಿ ಕೈಮುಗಿದ. ಮನೆಯಲ್ಲಿ ಅವನು ಕೊಟ್ಟಿದ್ದ ಚೀಟಿ ಟೇಬಲ್ ಮೇಲೆ ಹಾಕಿದ್ದೆ. ಅದನ್ನ ನೋಡಿದ ನನ್ನ ಸೊಸೆ ಇದು ವೇಟ್ ಮ್ಯಾನೇಜ್ಮೆಂಟ್ ಗ್ರೂಪ್ ಟಿಕೇಟು. ಪ್ರತಿ ದಿನ ಬೆಳಿಗ್ಗೆ ಅವರದ್ದು ಸೆಷನ್ ಇರುತ್ತೆ ಆ ಹೋಟೆಲ್‌ನಲ್ಲಿ ಅಂದಳು! ಎಲ್ಲಿ ಪ್ಲಂಬಿಂಗು, ಎಲ್ಲಿ ವೇಟ್ ಮ್ಯಾನೇಜ್ಮೆಂಟ್? ಖುಷಿ ಮತ್ತು ಆಶ್ಚರ್ಯ ಎರಡೂ ಆಯಿತು. ಖುಷಿ ಯಾಕೆ ಅಂದರೆ ಗೊತ್ತಿದ್ದ ಒಬ್ಬ ಹುಡುಗ ಇಷ್ಟು ಎತ್ತರಕ್ಕೆ ಬೆಳೆದ ಅಂತ. ಆಶ್ಚರ್ಯ ಯಾಕೆ ಅಂದರೆ ಎರಡು ಉತ್ತರ ದಕ್ಷಿಣ ಹೋಲಿಕೆಯ ಬೇರೆಬೇರೆ ಕ್ಷೇತ್ರದಲ್ಲಿ ಹುಡುಗನ ಆಸಕ್ತಿ ನೋಡಿ!
ನೀರಿನ ಸಮಸ್ಯೆ ಮುಗೀತಾ?….
ಕರೆಂಟು ಹೇಗೆ ಅಂದರೆ ಮನೆ ಕಾಂಪೌಂಡ್‌ವರೆಗೆ ಮನೆ ಎಲೆಕ್ಟ್ರಿಕ್ ಕಂಟ್ರಾಕ್ಟರ್ ಕೆಲಸ, ಕಾಂಪೌಂಡ್‌ನಿಂದ ಆಚೆ ಕಂಬದವರೆಗೆ ಓನರ್‌ದಂತೆ. ಮನೆ ಒಳಗೆ ವೈರಿಂಗ್ ಎಲ್ಲಾ ಆಗಿತ್ತು. ಮೀಟರು. ಅಲ್ಲಿಂದ ಕಂಬಕ್ಕೆ ಲಿಂಕ್ ತಗೋಬೇಕಿತ್ತು. ಅದಕ್ಕೊಬ್ಬ ಕೆಇಬಿ ಇಂಜಿನಿಯರು ಇವನೋ ಭರಮಪ್ಪನ ಅಪ್ಪ. ಭರಮಪ್ಪನ ಕತೆ ಹಿಂದೆ ಹೇಳಿದ್ದೆ ತಾನೇ. ಇವನೋ ಸಖತ್ ಫಟಿಂಗ. ಇವನ ಹೆಸರು ರಾಮಪ್ಪ ಅಂತ ಇಟ್ಕೊಳ್ಳಿ. ಆಗಲೇ ಹೇಳಿದ ಹಾಗೆ ಇವನ ನಿಜವಾದ ಹೆಸರು ಬೇರೆ! ಭರಮಪ್ಪನ ಕತೆ ಕಂಬಕ್ಕೆ ಸಂಬಂಧ ಪಟ್ಟಿದ್ದು. ಅದಕ್ಕೆ ಮೊದಲು ಈ ರಾಮಪ್ಪನ ಕತೆ ಬರಬೇಕಿತ್ತು. ಇವನ ಪುರಾಣದ ನಂತರ ಅವನ ಪುರಾಣ ಓದಿ ಅಂತ ಕೋರಿಕೆ.
ಇವನಿಗೆ ಮೂರು ಮನೆ. ಒಂದು ಮನೆ ನನ್ನ ಸೈಟ್ ಹತ್ತಿರವೇ. ಬೆಳಿಗ್ಗೆ ಸಂಜೆ ಇವನ ಮನೆ ಮುಂದೆ ಜಾತ್ರೆ, ಕೆಇಬಿ ಆಫೀಸ್ ಮುಂದೆ ಇರೋ ಹಾಗೆ. ಲೈನ್ ಮ್ಯಾನ್‌ನಿಂದ ಹಿಡಿದು ಕಂಟ್ರಾಕ್ಟರು, ಮೇಸ್ತ್ರಿಗಳು, ಪುಡಾರಿಗಳು….. ಹೀಗೆ….. ಬೆಳಿಗ್ಗೆ ಬೆಳಿಗ್ಗೆ ಕೂಲಿಂಗ್ ಗ್ಲಾಸ್ ಧರಿಸಿ ಕುರ್ಚಿ ಮೇಲೆ ವಸೂಲಿಗೆ ರೆಡಿ ಆಗಿರ್ತಾ ಇದ್ದ..! ಅವನದ್ದು ಎರಡು ಅಂತಸ್ತಿನ ಮನೆ. ಅದರ ಮಹಡಿ ಮೇಲೆ ವೈರ್ ಕೇಬಲ್ ಅದು ಇದು ಮುಂತಾದ ಕೆಇಬಿ ಆಸ್ತಿ ಫುಲ್ ತುಂಬಿಕೊಂಡಿದ್ದ. ಇಲ್ಲಿಂದಲೇ ಅವು ಯೂಸೇಜ್ ಪಾಯಿಂಟ್‌ಗೆ ಹೋಗ್ತಾ ಇದ್ದವು. ಸಖತ್ ಸಂಪಾದನೆ ಇವನಿಗೂ. ಮಿಕ್ಕವರ ಪ್ಯಾಂಟ್‌ಗೆ ಎರಡು ಜೇಬು ಇದೆ ಅಂದರೆ ಇವನ ಪ್ಯಾಂಟ್‌ಗೆ ಹದಿನಾರು ಜೇಬು ಇವೆ ಅಂತ ನಾನು ಜೋಕ್ ಹೊಡೆದಿದ್ದೆ! ಕೊಟ್ಟು ಬಂದಿದ್ದಾನೆ ಅಂತ ಇವನ ಬಗ್ಗೆ ಮಾತು. ಮನೆ ಒಳಗೆ ವೈರಿಂಗ್ ನಂತರ ಇವನು ಒಂದು ಪೇಪರ್‌ಗೆ ರುಜು ಹಾಕಿ all ok ಅನ್ನಬೇಕಿತ್ತು. ಹದಿನೆಂಟು ಸಲ ಅವನ ಆಫೀಸು ಮನೆ ಅಲೆದು ದಕ್ಷಿಣೆ ಸಲ್ಲಿಕೆ ಆದ ನಂತರ ಅವನ ಗುದ್ದಲಿ ಬಿತ್ತು. ಇದರ ನಂತರ ಕಂಬಕ್ಕೆ ಓಡಾಡಿದ್ದು!
ಈ ನಡುವೆ ಒಂದು ಗೃಹ ಪ್ರವೇಶ ಅಂತ ಮಾಡಿಬಿಡಾನಾ… ಅಂತ ಅಂದುಕೊಂಡೆವಾ? ಕರೆಂಟು ಪರೆಂಟು ಬಂದಿಲ್ಲವಲ್ಲಾ ಕಾಯೋಣ ಅನ್ನುವ ಯೋಚನೆ ತಲೆಗೆ ಹೋಗಲಿಲ್ಲವಾ?
ನಲ್ಲಿ ಇತ್ತು, ನೀರು ಬರುತ್ತಿತ್ತು, ವೈರ್ ಹಾಕಿದ್ದೆ ಬಲ್ಬ್ ಸಿಕ್ಕಿಸಿದೆ ಆದರೆ ಕರೆಂಟು ಇಲ್ಲ. ಆದರೂ ಸರಿ ಒಂದು ಗೃಹ ಪ್ರವೇಶ ಅಂತ ಮಾಡಿಬಿಡಾನಾ… ಅಂತ ಡಿಸೈಡ್ ಮಾಡಿದೇವಾ… ಅದೂ ಆಯ್ತು. ಕರೆಂಟ್ ಇಲ್ಲದೇ! ಗೃಹ ಪ್ರವೇಶಕ್ಕೆ ಕರೆಂಟ್ ಇಲ್ಲ ಲೈಟ್ ಇಲ್ಲ ಅಂದರೆ ಹೆದರಬೇಕಾ? ಪೆಟ್ರೋಮಾಕ್ಸ್ ತಂದು ಲೈಟ್ ಸಮಸ್ಯೆ ಬಗೆಹರಿಸುವುದು ಅಂತ ಪ್ಲಾನ್ ಮಾಡಿದ್ದೆ.
ಪೆಟ್ರೋಮಾಕ್ಸ್ ಬಾಡಿಗೆಗೆ ತಂದದ್ದು. ಮನೆಗೆ ಗೃಹಪ್ರವೇಶಕ್ಕೆ ಅಂತ ಬಂದ ನೆಂಟರು ಸ್ನೇಹಿತರು, ಅವರು ನನಗೆ ಹರೆಸಿದ ರೀತಿ, ಅವರು ಪಟ್ಟ ಪಾಡು…….. ಇವೆಲ್ಲಾ ಒಂದರ ಹಿಂದೆ ಓಡೋಡಿ ಬರ್ತಿವೆ. ಒಂದೊಂದನ್ನೇ ನಿಧಾನವಾಗಿ ವಿಚಾರಿಸಿಕೊಳ್ಳುವ ಐಡಿಯಾ ಹಾಕಿದ್ದೇನೆ. ಆ ಕಾಲದಲ್ಲಿನ ಬೆಂಗಳೂರಿನ ಒಂದು ಕೊಂಪೆಯಲ್ಲಿ (ಆಗ ಕೊಂಪೆ ಎಂದವರು ಹತ್ತು ವರ್ಷ ಆದಮೇಲೆ ನನ್ನ ಮನೆ ಅದಕ್ಕೆ ಇರುವ ಸೌಲಭ್ಯ ಕಂಡು ಸಾರಿ ಕಣೋ ಗೋಪಿ ಅವತ್ತು ಕೊಂಪೆ ಅಂದಿದ್ದಕ್ಕೆ ಅಂತ ಕಣ್ಣಲ್ಲೇ ಕ್ಷಮಾಪಣೆ ಕೇಳಿದ್ದರು!) ಮನೆ ಗೃಹಪ್ರವೇಶದ ಒಂದು ಸನ್ನಿವೇಶಕ್ಕೆ ಊಹೂಂ ಸಮಾರಂಭಕ್ಕೆ ನಿಮ್ಮನ್ನು ಕರೆದುಕೊಂಡು ಹೋಗಿ ತೋರಿಸುವ ಅದಮ್ಯ ಉತ್ಸಾಹ ಮತ್ತು ಕೆಚ್ಚು ಹಾಗೂ ಜೀವನೋತ್ಸಾಹ(ಹಾಗಂದರೆ ಖಂಡಿತ ನನಗೆ ಗೊತ್ತಿಲ್ಲ. ನಮ್ಮ ವಿಮರ್ಶಕ ಸ್ನೇಹಿತರು ಆಗಾಗ್ಗೆ ಈ ಪದ ಉಪಯೋಗಿಸುತ್ತಾರೆ ಎಂದು ನಾನೂ ಸಹ ಇದನ್ನು ಹಾಕಿದ್ದೇನೆ) ನನಗೆ ಇಮ್ಮಡಿಸಿದೆ. ಅದನ್ನು ಮುಂದೆ ಅಂದರೆ ಮುಂದಿನ ಎಪಿಸೋಡಿನಲ್ಲಿ ನಿಮಗೆ ಅರುಗಳೇ?(actual ಆಗಿ ಈ ಪದವನ್ನು ಅರುಹಲೇ.. ಎಂದು ನನ್ನ ಮೊಬೈಲ್ ನಲ್ಲಿ ಟೈಪಿಸಿದ್ದೆ. ತಮಿಳರನ್ನು ನಾನು ಹೀಗೆ ಆಡಿಕೊಳ್ಳುವುದನ್ನು ನನ್ನ ಮೊಬೈಲ್ ಲಾಗಾಯ್ತಿನಿಂದ ನೋಡಿಕೊಂಡೇ ಬಂದಿದೆ. ಅದರಿಂದ ಅದು ಅಂದರೆ ನನ್ನ ಮೊಬೈಲು ಮುಂಡೇದು ಅರುಗಳೇ ಅಂತ ಟೈಪ್ ಮಾಡಿ ನನ್ನನ್ನು ನೋಡಿ ಕಿಸ ಕಿಸ ಅನ್ನುತ್ತಿದೆ) ಮಿಕ್ಕಿದ್ದು ಮುಂದೆ ಮೇಡಂ ಮಿಕ್ಕಿದ್ದು ಮುಂದೆ ಸರ……
ಇನ್ನೂ ಇದೆ….

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.