ಸುಳಿವೇ ಇಲ್ಲದೆ..
ಅಕ್ಷರಗಳನ್ನೇನೊ ಜೋಡಿಸಿ
ಪದವಾಗಿಸಿದೆ ಅದರಲ್ಲಿ
ನಿನ್ನ ಧ್ವನಿಯಿರಲಿಲ್ಲ
ಪದ ಪದಗಳ ಸೇರಿಸಿ
ಕವಿತೆ ಕಟ್ಟಿದೆ ಅದರಲ್ಲಿ
ನಿನ್ನ ಪ್ರಾಸವೆ ಇರಲಿಲ್ಲ
ತ್ರಾಸದಿಂದ ಪ್ರಾಸವ
ಸೇರಿಸಿ ಪದ್ಯವಾಗಿಸಿದೆ
ಅದರಲ್ಲಿ ನಿನ್ನ ರಾಗವಿರಲಿಲ್ಲ
ಎದೆಯ ಇನಿದನಿಯ
ಆಲಿಸಿದೆ ಅಲ್ಲಿ ನಿನ್ನ
ಸುಳಿವೆ ಇರಲಿಲ್ಲ
ಸುಳಿವು ಕೊಟ್ಟರೆ
ಸೂಕ್ತ ಬಹುಮಾನ ಎಂಬ
ಪತ್ರಿಕೆಯ ಜಾಹೀರಾತು ಸದಾ
ನನ್ನನ್ನು ಗೇಲಿ ಮಾಡುತ್ತಲೆ ಇದೆ.
ಕದ್ದವರೇನೊ ಸಿಗಬಹುದು
ಸುಮ್ಮನೆ ಎದ್ದು ಹೋದವರು
ಯಾವುದಕ್ಕೂ ನಿಲುಕದವರು
ಯಾವ ಸುಳಿಗೂ ದಕ್ಕದವರು
ಅಕ್ಷರದ ಚುಂಗು ಹಿಡಿದು
ಕವಿತೆ ಕಟ್ಟುವ ತವಕ ನನಗೆ
ನೀನು ಬದುಕು ಕಟ್ಟಿಕೊಂಡಿದ್ದೆ
ನಾನು ಜನರ ಬಾಯಿಗೆ ಸಿಕ್ಕು
ಕತೆಯಾಗಿದ್ದೆ, ಅದಕೆ ಯಾವ
ಜಾಹೀರಾತಿನ ಹಂಗಿಲ್ಲ ಬಿಡು
ಸುಮ್ಮನೆ ಹುಡುಕುತ್ತೇನೆ
ಬದುಕಿನ ತುಂಬಾ ನೀ
ಬಿಟ್ಟು ಹೋದ ಹೆಜ್ಜೆ ಗುರುತುಗಳನ್ನು
ಸುಳಿವು ಕೊಡದೆ
ಬಿಟ್ಟು ಹೋದ ನೆನಪುಗಳನ್ನು
ಮತ್ತೀಗ ಪತ್ರಿಕೆಯ ಜಾಹೀರಾತು
ಅಣಕಿಸುತ್ತದೆ. ಬದುಕು ಕೂಡಾ.

