1. ಓ ನನ್ನ ಗೆಳೆಯ, ಅಪರಿಚಿತ !
ಓ ನನ್ನ ಗೆಳೆಯ ಅಪರಿಚಿತ
ಒಮ್ಮೆ ಇದ್ದಕ್ಕಿದ್ದಂತೆ ನೀನು ಬಂದೆ
ಕಾಲ ತಬ್ಬಿಬ್ಬಾಗಿ
ನನ್ನ ಕೋಣೆಯಲ್ಲಿ ನಿಂತುಬಿಟ್ಟಿತು.
ಸಂಜೆಯ ಸೂರ್ಯ ಮುಳುಗುವುದರಲ್ಲಿದ್ದ
ಆದರೆ ಮುಳುಗಲಿಲ್ಲ.
ಮುಳುಗುವ ವಿಧಿಯನ್ನೇ ಅವನು ಮರೆತಂತಿತ್ತು.
ಮತ್ತು ಪುರಾತನ ನಿಯಮ ಘೋಷಣೆಯಾಯಿತು.
ಕಾಲ, ನಿಂತ ಕ್ಷಣಗಳನ್ನು ನೋಡಿತು
ಅವು ಕಿಟಕಿಯ ಮೂಲಕ
ಹೊರಗೆ ಓಡಿಹೋದವು.
ಅದು ಕಳೆದ ಮತ್ತು ಉಳಿದ ಕ್ಷಣಗಳ ಘಟನೆ
ಈಗ ನಿನಗೂ ಆಶ್ಚರ್ಯವಾಗುತ್ತದೆ
ಮತ್ತು ನನಗೂ ಆಶ್ಚರ್ಯವಾಗುತ್ತದೆ
ಬಹುಶಃ ಕಾಲಕ್ಕೂ.
ಮತ್ತು ಆ ತಪ್ಪು ಒಪ್ಪಿತವಾಗಿರಲಿಲ್ಲ.
ಈಗ ಸೂರ್ಯ ಪ್ರತಿದಿನ
ಸಮಯಕ್ಕೆ ಸರಿಯಾಗಿ ಮುಳುಗುತ್ತಾನೆ
ಮತ್ತು ಕತ್ತಲು
ಪ್ರತಿದಿನ ನನ್ನ ಎದೆಗೆ ಇಳಿಯುತ್ತದೆ
ಆದರೆ,
ಕಳೆದ ಮತ್ತು ಉಳಿದ ಕ್ಷಣಗಳ ಸತ್ಯ –
ನಿನಗೆ ಮತ್ತು ನನಗೆ ಬೇಕಾದರೂ ಬೇಡವಾದರೂ
ಇಲ್ಲಿದೆ.
“ಅಂದು, ಆ ಕ್ಷಣಗಳು ಓಡಿದಾಗ
ತನ್ನ ಪಾದಗಳಿಂದ ಸ್ರವಿಸಿದ
ರಕ್ತ
ಇಂದಿಗೂ ನನ್ನ ಕಿಟಕಿಯ ಕೆಳಗಿದೆ”.
2. ಒಂದು ಭೇಟಿ
ಎಷ್ಟೋ ವರ್ಷಗಳ ನಂತರದ
ಅಚಾನಕ್ ಭೇಟಿ
ನಾವಿಬ್ಬರೂ ಒಂದು ಕವಿತೆಯಂತೆ
ಕಂಪಿಸಿದೆವು
ಎದುರು ಒಂದಿಡೀ ರಾತ್ರಿಯಿತ್ತು
ಅರ್ಧ ಕವಿತೆ ಒಂದು ಕೋಣೆಯಲ್ಲಿ
ಮುದುಡಿ ಕುಳಿತಿತ್ತು
ಇನ್ನರ್ಧ ಕವಿತೆ ಇನ್ನೊಂದು
ಕೋಣೆಯಲ್ಲಿತ್ತು
ಬೆಳ್ಳಂಬೆಳಗ್ಗೆ ನಾವು
ಕಾಗದದ ಚೂರುಗಳಂತೆ
ಸಂಧಿಸಿದೆವು
ನನ್ನ ಕೈಗಳಿಂದ ಅವನ ಕೈಗಳನ್ನು
ಹಿಡಿದೆ
ಅವನು ತನ್ನ ತೋಳುಗಳಿಂದ
ನನ್ನ ಭುಜಗಳನ್ನು ಬಳಸಿದ
ನಾವಿಬ್ಬರೂ ಸೆನ್ಸಾರ್ ಮಾಡುತ್ತಿರುವವಂತೆ ನಕ್ಕೆವು.
ಮತ್ತು ಕಾಗದವನ್ನು ಮೇಜಿನ ನೇಲಿಟ್ಟು
ಆ ಎಲ್ಲಾ ಕವಿತೆಗಳನ್ನು ಅಳಿಸಿಹಾಕಿದೆವು.
ಚಿತ್ರಾ ವೆಂಕಟರಾಜು, ಚಾಮರಾಜನಗರದವರು. ನಟಿ.
ಕಳೆದ ೧೮ ವರ್ಷಗಳಿಂದ ಸರ್ಕಾರಿ ಪ್ರೌಢಶಾಲೆಯಲ್ಲಿ ರಂಗಶಿಕ್ಷಣ ದ ಶಿಕ್ಷಕಿಯಾಗಿಕೆಲಸ ನಿರ್ವಹಿಸುತ್ತಿದ್ದಾರೆ. ನೀನಾಸಮ್ ರಂಗಶಿಕ್ಷಣ ಕೇಂದ್ರದಿಂದ ರಂಗಶಿಕ್ಷಣ ದಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದಾರೆ.
ಚಾಮರಾಜನಗರದ ‘ಶಾಂತಲಾ ಕಲಾವಿದರುʼ ತಂಡದಲ್ಲಿ ರಂಗಭೂಮಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಕಲಾಶಿಕ್ಷಣ, ಸಾಹಿತ್ಯ, ಸಂಗೀತ, ನೃತ್ಯ, ಸಿನೆಮಾದಲ್ಲಿ ಆಸಕ್ತಿ. ಇವರು ಅಭಿನಯಿಸಿದ ಅಮೃತಾ ಪ್ರೀತಂ ಅವರ ಬದುಕನ್ನು ಆಧರಿಸಿದ ಏಕವ್ಯಕ್ತಿ ರಂಗಪ್ರಯೋಗ “ಮೈ ತೆನ್ನು ಫಿರ್ ಮಿಲಾಂಗಿʼ ಹಲವಾರು ಪ್ರದರ್ಶನಗಳನ್ನು ಕಂಡಿದೆ.

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
