Advertisement
ಪುಸ್ತಕ ಪ್ರಕಟಣೆಯ ಪ್ರಸಂಗಗಳು: ಎಚ್. ಗೋಪಾಲಕೃಷ್ಣ ಸರಣಿ

ಪುಸ್ತಕ ಪ್ರಕಟಣೆಯ ಪ್ರಸಂಗಗಳು: ಎಚ್. ಗೋಪಾಲಕೃಷ್ಣ ಸರಣಿ

ಪುಸ್ತಕಕ್ಕೆ ಹೆಸರು ಇಡಬೇಕಿತ್ತಲ್ಲ. ಮುಖಪುಟ ಬರೆದಾಗ ಪುಸ್ತಕದ ಹೆಸರೂ ಕೊಟ್ಟರೆ ಕಲರ್ ಕಾಂಬಿನೇಷನ್‌ಗೆ ಉತ್ತಮ ಎನ್ನುವ ಅಭಿಪ್ರಾಯ ಬಂದಿತ್ತು. ನನ್ನ ಕತೆಗಳ ಹಸ್ತಪ್ರತಿಯ ಒಂದು ಕತೆ ಹೆಸರು ವೈಶಾಖ ಎಂದು. ಈಗಾಗಲೇ ಚದುರಂಗ ಅವರು ವೈಶಾಖ ಎನ್ನುವ ಕಾದಂಬರಿ ಬರೆದು ಅದು ಪ್ರಖ್ಯಾತವಾಗಿತ್ತು. ನನ್ನ ಸಂಕಲನಕ್ಕೂ ವೈಶಾಖ ಹೆಸರು ಇಟ್ಟರೆ ಓದುಗರು ಕನ್ಫ್ಯೂಸ್ ಮಾಡಿಕೊಳ್ಳುವ ಸಂಭವ ಹೆಚ್ಚಿರುತ್ತೆ ಅನಿಸಿತು. ಆದರೂ ಚದುರಂಗರ ವೈಶಾಖ ಕಾದಂಬರಿಯು. ನನ್ನದು ಸಣ್ಣ ಕಥಾ ಸಂಗ್ರಹ, ಅದರಿಂದ ಹೆಸರು ಅದೇ ಇರಲಿ ಎನ್ನುವ ತೀರ್ಮಾನ ತೆಗೆದುಕೊಂಡೆ…!
ಎಚ್.
ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೭೬ನೇ ಬರಹ ನಿಮ್ಮ ಓದಿಗೆ

ಹಿಂದಿನ ಕಂತಿಗೆ ಹೀಗೆ ಮುಕ್ತಾಯ ಹಾಡಿದ್ದೆ…
……ಒಂದು ರಫ್ ಅಂದಾಜಿನಂತೆ ನೂರ ಮೂವತ್ತು ಪುಟಗಳ ಪುಸ್ತಕ ಪ್ರಕಟಣೆಗೆ ಆಗ ಕಡಿಮೆ ಎಂದರೂ ಎಂಟು ಸಾವಿರ ಬೇಕಿತ್ತು. ಕೈಯಿಂದ ದುಡ್ಡು ಹಾಕಿಕೊಂಡು ಸಾಹಸ ಮಾಡುವ ಮನಸ್ಸಿಲ್ಲ, ಬಹುಮಾನದ ಚೆಕ್ ಬೇಡ ಅಂತ ವಾಪಸ್ ಮಾಡುವ ನನ್ನ ಲೌಡ್ ಥಿಂಕಿಂಗ್ ಹರಿಯಬಿಟ್ಟೆ.
“ಅಯ್ಯೋ ಹಾಗೆ ಮಾತ್ರ ಮಾಡಬೇಡಿ. ಎಷ್ಟೊಂದು ಜನ ಇಂತಹ ಅವಕಾಶಕ್ಕೆ ಮುಗಿ ಬೀಳ್ತಾರೆ ಗೊತ್ತಾ? ವಶೀಲಿ ಮಾಡ್ತಾರೆ. ನಿಮಗೆ ಅದೆಲ್ಲಾ ತರಲೇ ತಾಪತ್ರಯ ಇಲ್ಲದೆ ಅಯಾಚಿತವಾಗಿ ಸಿಕ್ಕಿರೋ ಅವಕಾಶ ಇದು..
ನಿಮ್ಮದು ಕಾಸಿನ ಪ್ರಾಬ್ಲಮ್ ಆದರೆ ಅದಕ್ಕೊಂದು ಉಪಾಯ ಇದೆ. ಒಬ್ಬರು ಪಬ್ಲಿಷರ್ ನನಗೆ ಗೊತ್ತು. ಹೋಗಿ ಅವರ ಹತ್ರ ನೀವು ಮಾತಾಡಿ. ನಾನೂ ಮಾತಾಡ್ತೀನಿ. ದುಡ್ಡು ಆಮೇಲೆ ಕೊಡುವ ಪ್ಲಾನ್ ಮಾಡೋಣ ಅಂದರು, ಲಲಿತಮ್ಮ. ಸುಮಾರು ಪುಸ್ತಕದ ಲೇಖಕಿ, ಪ್ರಕಾಶಕಿ ಆಗಿದ್ದ ಅವರಿಗೆ ಈ ಉದ್ಯಮದ ಲೋಕ ಚಿರಪರಿಚಿತವಾಗಿತ್ತು.
ಇದೂ ಒಳ್ಳೇ ಸಲಹೆ ಅನಿಸಿತು. ಮುಂದೆ ಒಬ್ಬರು ಪ್ರಿಂಟರ್ ಪಬ್ಲಿಷರ್ ಮತ್ತು ಕನ್ನಡ ಸಾಹಿತ್ಯ ಲೋಕದ ಅಪ್ರತಿಮ ಪ್ರತಿಭೆ ಒಬ್ಬರ ಪರಿಚಯ ಆಯಿತು, ಅವರ ಮೂಲಕ ನನ್ನ ಲೋಕದ ಹರವೂ ಹೆಚ್ಚಿತು…ಮತ್ತು ಒಂದು ಹೊಸಾ ಚಟ ಅಂಟಿತು! ಈ ಹೊಸಾ ಚಟದ ಬಗ್ಗೆ ಮತ್ತು ಹೊಸಾ ಪರಿಚಯದ ಕುರಿತು ಮುಂದೆ ಹೇಳುತ್ತೇನೆ. ಅಲ್ಲಿಯ ಗಂಟ ಸರ, ಮೇಡಮ್ಮೊರಾ ಗುಡ್ ಬೈ ರೀ……

ಈಗ ಮುಂದಕ್ಕೆ ಹೋಗುವೆ…
ಹೀಗೆ ನನಗೆ ಇಳಾ ಪ್ರಕಾಶಕರು, ಮುದ್ರಣಾಲಯದ ಪರಿಚಯ ಆಯಿತು ಮತ್ತು ನಂಟು ಬೆಳೆಯಿತು. ಪ್ರಕಾಶನದ ಡಾ. ವಿಜಯ ಅವರು ಹಲವು ಪ್ರತಿಭೆಗಳ ಸಂಗಮ ಮತ್ತು ಸಾಹಿತ್ಯ ವಲಯದಲ್ಲಿ ಪ್ರಕಾಶಕರಾಗಿ ಮತ್ತು ಪತ್ರಿಕೆಯ ಸಂಪಾದಕರಾಗಿ ಹೆಸರು ಮಾಡಿದ್ದರು. ಅವರ ಮುದ್ರಣಾಲಯ ಆಗ ಚಾಮರಾಜ ಪೇಟೆಯಲ್ಲಿತ್ತು. ಕಾರ್ಖಾನೆ ಫಸ್ಟ್ ಶಿಫ್ಟ್ ಮುಗಿಸಿ ನೇರ ಮುದ್ರಣಾಲಯಕ್ಕೆ ಹೋಗುವುದು. ಅಲ್ಲಿ ಮುದ್ರಿತ ಪ್ರತಿಯ ಪ್ರೂಫ್ ನೋಡುವುದು ಇದು ಒಂದು ಕೆಲಸ. ಕೆಲವು ಸಲ ನನ್ನ ಜತೆ ಚಂದ್ರ ಮೊಗೇರ, ಕೆಲವು ಸಲ ಕೃಷ್ಣ… ಹೀಗೆ ಹಲವು ಸ್ನೇಹಿತರು ಇರುತ್ತಿದ್ದರು. ಪುಸ್ತಕ ಮುದ್ರಣಕ್ಕೆ ಕೊಟ್ಟಾದ ನಂತರ ವಿಜಯ ಅವರ ಭೇಟಿ ಹೆಚ್ಚಿತು. ಆಗ ಅವರು ವಿಜಯ ಆಗಿದ್ದರು, ನಂತರದ ದಿವಸಗಳಲ್ಲಿ ವಿಜಯಮ್ಮ ಆದರು. ಈಚೆಗೆ ಅವರು ಡಾ. ವಿಜಯಮ್ಮ ಆಗಿದ್ದಾರೆ. ಈಗ ಮೊನ್ನೆ ಅವರಿಗೆ ಕೀ ರo ನಾಗರಾಜ್ ಅವರ ಪ್ರತಿಷ್ಠಾನದ ಪ್ರಶಸ್ತಿ ಬಂದಿತು. ಅಲ್ಲಿ ಅವರು ನನಗೀಗ ಎಂಬತ್ತನಾಲ್ಕು ವರ್ಷ ಅಂತ ಹೇಳಿದರು..
ಪುಸ್ತಕದ ಖರ್ಚು ಕಡಿಮೆ ಮಾಡುವ ಉದ್ದೇಶ ಇತ್ತಲ್ಲ ಅದರಿಂದ ಪುಸ್ತಕದ ಹೆಸರನ್ನು ಮಾತ್ರ ಮುಖಪುಟದ ಮೇಲೆ ಹಾಕುವ ಯೋಚನೆ ಮಾಡಿದ್ದೆ. ಅದಕ್ಕೆ ಒಂದು ಚಿತ್ರ ಹಾಕಿದರೆ ಚಿತ್ರ ಬರೆದವರಿಗೆ ದುಡ್ಡು ಕೊಡಬೇಕಾಗುತ್ತೆ, ಅದರಿಂದ ಅದೂ ಬೇಡ ಎನ್ನುವ ಯೋಚನೆ ಕೆಲಸ ಮಾಡಿತ್ತು. ಚಂದ್ರ ಮೊಗೇರ ಬೇಡ ಸರ ಒಂದು ಐಡಿಯ ಮಾಡೋಣ ಎಂದ. ಆಗಲೇ ಬೆಳಕಿಂಡಿ (ಸಂಪಾದಕರು. ಶ್ರೀ ವೈರಸ ಶಿರಾಲಿ)ಎನ್ನುವ ಕರಾವಳಿ ಪತ್ರಿಕೆಯ ವರದಿಗಾರನಾಗಿ ಕೆಲಸ ಮಾಡಿದ್ದ ಈತ. ಹೊಸ ಲೇಖಕರ ಬೇಗುದಿ ತೋಡಿಕೊಳ್ಳಲು ಬೆಳಕಿಂಡಿ ನೆರವಾಗುತ್ತಿತ್ತು.

ಚಂದ್ರ ಮೊಗೇರ ಒಂದು ಸಲಹೆ ಕೊಟ್ಟ
“ಸರ ನನ್ನ ಫ್ರೆಂಡ್ ಒಬ್ಬರು ಇದಾರೆ. ತುಂಬಾ ಚೆನ್ನಾಗಿ ಕವರ್ ಪೇಜ್ ಮಾಡ್ತಾರೆ. ತುಂಬಾ ಒಳ್ಳೆಯ ಕಲಾವಿದ. ಅವರಿಗೆ ಈಗೇನು ದುಡ್ಡು ಕೊಡೋದು ಬೇಡ.. ನಾನು ಅವರಿಗೆ ಆರ್ಟ್ ಮಾಡಿಕೊಡಲು ಹೇಳುವೆ…..”
ಸರಿ ಅಂತ ತಲೆ ಆಡಿಸಿದೆ. ಇವತ್ತು ವಿಶ್ವವಿಖ್ಯಾತವಾಗಿರುವ  ಶ್ರೀ ಪಂಜು ಗಂಗುಲಿ ಅವರು ಅಂದು ಅಷ್ಟೇ ಸರಳವಾಗಿ ನನ್ನ ಕವರ್ ಪೇಜ್ ಮಾಡಿಕೊಟ್ಟಿದ್ದರು… ಹೀಗಾಗಿ ಶ್ರೀ ಪಂಜು ಗಂಗುಲಿ ನನ್ನ ಪುಸ್ತಕದ ಮುಖಪುಟ ರಚಿಸಿದರು. ಆಗಿನ್ನೂ ಅವರು ಬೆಂಗಳೂರಿಗೆ ಹೊಸಬರು ಮತ್ತು ಹೊಸ ಪರಿಸರಕ್ಕೆ ಹೊಂದಿಕೊಳ್ಳುತ್ತಿದ್ದರು. ನಂತರ ಈ ಪ್ರತಿಭೆ ನಾಡಿನ ಪ್ರಖ್ಯಾತ ಚಿತ್ರ ಕಲಾವಿದರಾಗಿ ಹೆಸರು ಮಾಡಿದರು. ಲಂಕೇಶ್ ಪತ್ರಿಕೆಯಲ್ಲಿ ಕೆಲಸ ಮಾಡಿದರು. ನಂತರ ಮುಂಬೈಗೆ ತೆರಳಿ ಅಲ್ಲಿ ಪತ್ರಿಕೆಯಲ್ಲಿ ಕೆಲಸಮಾಡಿದರು. ಅವರ ಚಿತ್ರಗಳಿಗೆ ರಾಷ್ಟ್ರೀಯ ಮನ್ನಣೆ ದೊರೆಯಿತು.

ಈ ಪ್ರಸಂಗಕ್ಕೆ ಮೊದಲು ಸೀಕ್ವೆನ್ಸ್ ಪ್ರಕಾರ ಮತ್ತೆರೆಡು ಪ್ರಸಂಗ ಹೇಳಬೇಕಿತ್ತು. ಕೆಲವರಿಗೆ ಥಿಂಕಿಂಗ್ ಪ್ರೋಸೆಸ್ ಬಹಳ ತೀಕ್ಷ್ಣವಾಗಿರುತ್ತೆ ಅಂತ ಕೆಲವರು ಸೈಕಾಲಜಿಸ್ಟ್ ಗಳು ಹೇಳುತ್ತಾರೆ. ಅಂತಹ ವ್ಯಾಧಿ (ಇದು ವ್ಯಾಧಿಯೇ ಅಥವಾ ಅತಿ ಬುದ್ಧಿವಂತಿಕೆಯೇ ಅಂತ ನನ್ನನ್ನು ಯಾರಾದರೂ ಕೇಳಿದರು ಅಂದರೆ ನನ್ನ ಉತ್ತರ ಅದು ಖಂಡಿತ ವ್ಯಾಧಿ ಇವರೇ ಅಂತಲೇ..) ನನಗೂ ಅಮರಿಕೊಂಡಿದೆ ಮತ್ತು ಒಂದು ಹೇಳಬೇಕಾದರೆ ಮತ್ತೊಂದು ಹತ್ತು ವಿಷಯ ತಲೆಯನ್ನು ತುಂಬುತ್ತದೆ. ಎರಡನೆಯದು ಹೇಳಲು ಶುರು ಮಾಡಿದರೆ ಮೂರನೆಯದು ನಾಲ್ಕನೆಯದು ಬಂದು ಮೊದಲು ಕ್ಯೂ ನಲ್ಲಿ ನಿಂತಿದ್ದವನ್ನು ತಳ್ಳಿ ಅವು ನಿಲ್ಲುತ್ತವೆ. ಹೀಗಾಗಿ ಎಷ್ಟೋ ಸಂಗತಿಗಳು ತಪ್ಪಿಸಿಕೊಳ್ಳುತ್ತವೆ ಆದರೆ ಸರ ಆದರೆ ಮೇಡಮ್ಮೊರಾ ನಾನು ಹುಷಾರ್ರೀ, ನಾನು ಬಾಳಾ ಶಾಣ್ಯಾ ಇದೇನ್ರೀ, ಯಾವುದೂ ತಪ್ಪಿಸಿಕೊಂಡು ಹೋಗಬಾರದು ಹಾಗೆ ಪ್ಲಾನಿಸುತ್ತೇನೆ..! ಅದು ಎಲ್ಲಾ ನನ್ನಂತಹ ಶಾಣ್ಯಾರ ಗುಟ್ಟು.

ಕೃಷ್ಣ ಸುಬ್ಬರಾವ್(ಇನ್ನು ಮುಂದೆ ಇವರನ್ನು ಕೃಷ್ಣ ಎಂದೇ ಬರೆಯುತ್ತೇನೆ. ಉದ್ದನೆ ಹೆಸರು ಟೈಪಿಸುವಾಗ ಹಲವು ಐಡಿಯಾಗಳು ಮರೆಯುವ ಚಾನ್ಸ್ ಇದ್ದೇ ಇರುತ್ತೆ, ಹಿಂದೆ ಹೇಳಿದ ಹಾಗೆ!)ಅವರು ಈಶ್ವರ ಚಂದ್ರ ಅವರ ನೆರೆ ಮತ್ತು ಇಬ್ಬರೂ ಸಾಹಿತ್ಯದ ಮೂಲಕ ಸ್ನೇಹಿತರು ಎಂದು ಹೇಳಿದ್ದೆ. ಶ್ರೀ ಈಶ್ವರ ಚಂದ್ರ ಮತ್ತು ಶ್ರೀ ನರಹಳ್ಳಿ ಬಾಲಸುಬ್ರಮಣ್ಯ ಅವರು ನಮ್ಮ ವೇದಿಕೆಯ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿ  ಪರಿಚಯವೂ ಆಗಿತ್ತು.

ಈ ಮಧ್ಯೆ ಭೇಟಿಯಾದ ಕೃಷ್ಣ, ನನಗೆ ಗೊತ್ತಿರದಿದ್ದ ಒಂದು ಹೊಸ ಸುದ್ದಿ ತಿಳಿಸಿದರು. ನನ್ನ ಹಸ್ತಪ್ರತಿಗೆ ಬಹುಮಾನ ಬಂದಿತ್ತಲ್ಲ, ಅದರ ಆಯ್ಕೆ ಸಮಿತಿಯಲ್ಲಿ ಈಶ್ವರ ಚಂದ್ರ ಅವರೂ ಸಹ ಇದ್ದರು. ಅವರನ್ನು ಭೇಟಿ ಮಾಡಿ ಪುಸ್ತಕಕ್ಕೆ ಒಂದು ಮುನ್ನುಡಿ ಕೇಳಬಹುದು.. ಅಂತ! ನನ್ನ austerity measures ( ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿ, ಅತಿ ಅವಶ್ಯಕವಾದುದಕ್ಕೆ ಮಾತ್ರ ಹಣ ವ್ಯಯ ಮಾಡುವುದು)ಪ್ರಕಾರ ನನ್ನ ತಲೆಯಲ್ಲಿ ಮುನ್ನುಡಿ ಇರಲಿಲ್ಲ. ಆದರೆ ಇಂತಹ ಅಪರೂಪದ ಮಾನ್ಯತೆ ಪಡೆದಿರುವ ಗ್ರಂಥಕ್ಕೆ ಮುನ್ನುಡಿ ಇಲ್ಲದೇ ಪ್ರಕಟಿಸಿದರೆ ಅದು ಅನಾಥ ಅನಿಸಿಕೊಳ್ಳುವುದಿಲ್ಲವೇ? ಅನಾಥ ಪ್ರಜ್ಞೆ ಮುಂದೆ ಲೇಖಕನನ್ನು ಕಾಡದೇ ಬಿಟ್ಟೀತೇ? ಪಾಪ ಪ್ರಜ್ಞೆಯಾಗಿ ಈ ಅನಾಥ ಪ್ರಜ್ಞೆ ಬದಲಾಗುವುದಿಲ್ಲವೇ…? ಅನಾಥ ಪ್ರಜ್ಞೆ ಪಾಪ ಪ್ರಜ್ಞೆ ಆಗದಿರುವ ಹಾಗೆ ಮಾಡಬೇಕು ಅಂದರೆ ಏನು ಶಾಂತಿ ಕರ್ಮ ಮಾಡಬೇಕು? ಮುಖಪುಟ ಇರಬೇಕು, ಹಾಗೆಯೇ ಮುನ್ನುಡಿ ಸಹ ಇರಿಸುವುದೇ ಅತ್ಯಂತ ಸೂಕ್ತ ಶಾಂತಿ ಪರಿಕ್ರಮ….ಈ logic ಗೆದ್ದಿತು ಎಂದು ಹೇಳುವುದೇ ಬೇಡ ಮತ್ತು ನನ್ನ austerity ಇಲ್ಲಿ ಹಲವು ನೂರು ಸಲ ಮೂರು ಮೂರು ಪಲ್ಟಿ ಹೊಡೆದು ಮಕಾಡೆ ಮಲಗಿತು!

ಕೃಷ್ಣ ನಾನು ಶ್ರೀ ಈಶ್ವರಚಂದ್ರ ಅವರ ಮನೆ ಸೇರಿದೆವು. ಶ್ರೀ ಈಶ್ವರಚಂದ್ರ ಅವರು HAL ನಲ್ಲಿ ಉದ್ಯೋಗದಲ್ಲಿದ್ದರು. ಅವರು ಕೆಲಸ ಮುಗಿಸಿ ಬರುವ ವೇಳೆ ತಿಳಿದುಕೊಂಡು ಕೃಷ್ಣ ಅವರ ಮನೆಗೆ ಕರೆದೊಯ್ದಿದ್ದರು. ನನ್ನ ಹಸ್ತಪ್ರತಿ ಕುರಿತು ತುಂಬು ಪ್ರೀತಿ ಮತ್ತು ವಿಶ್ವಾಸದಿಂದ ಅವರು ಮಾತಾಡಿದರು. “ಕತೆಗಳು ತುಂಬಾ ಹಾಸ್ಯ ತುಂಬಿದ ಅನುಭವ ಕೊಡುತ್ತೆ. ನಿಮ್ಮ ಹಾಸ್ಯ ಬರಹಗಳ ಛಾಯೆ ಇಲ್ಲಿ ಗಾಢವಾಗಿದೆ….” ಎಂದೇನೋ ಅವರು ಬೆನ್ನು ತಟ್ಟಿದ ನೆನಪು. “ಸರ್ ನಿಮ್ಮಿಂದ ಒಂದು ಮುನ್ನುಡಿ ಈ ಪುಸ್ತಕಕ್ಕೆ ಬರೆದು ಕೊಡಿ…” ಅಂತ ರಿಕ್ವೆಸ್ಟಿಸಿದೆ.

ಈಗ ಇನ್ನೊಂದು ಹೊಸ ವಿಷಯ ಗೊತ್ತಾಯಿತು. ಅದು ಏನಪ್ಪಾ ಅಂದರೆ ಶ್ರೀ ಈಶ್ವರಚಂದ್ರ  ಅವರ ಜತೆಗೆ ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅಡಿಗರ ಕಾವ್ಯವನ್ನು ಉತ್ತುಂಗಕ್ಕೆ ಕೊಂಡೊಯ್ದ ಶ್ರೀ ಕೆ. ನರಸಿಂಹ ಮೂರ್ತಿ ಅವರು ಸಹ ತೀರ್ಪುಗಾರರು ಆಗಿದ್ದರು ಎನ್ನುವ ವಿಷಯ.

“ನರಸಿಂಹ ಮೂರ್ತಿ ಅವರನ್ನು ಕೇಳಿ, ಮುನ್ನುಡಿ ಬರೆದು ಕೊಡುತ್ತಾರೆ. ನಿಮ್ಮ ಕತೆಗಳ ಬಗ್ಗೆ ಅವರೇ ಕೆಲವು ನೋಟ್ಸ್ ಮಾಡಿದ್ದಾರೆ……” ಅಂದರು. ಇದು ನನಗೆ ಜೋಡಿ ಜಾಕ್ ಪಾಟ್. ಅದು ಆಗ ಗೊತ್ತಾಗಲಿಲ್ಲ. ಅಂದಹಾಗೆ ಶ್ರೀ ನರಸಿಂಹ ಮೂರ್ತಿ ಅವರ ಹೆಸರು ಕೇಳಿದ್ದೆ ಅಷ್ಟೇ, ಅವರ ಸಾಹಿತ್ಯದ ಔಪಚಾರಿಕತೆ ಅಥವಾ ಹಿನ್ನೆಲೆ ಗೊತ್ತಿರಲಿಲ್ಲ. ಇದಕ್ಕೆ ಕಾರಣ ಅಂದರೆ ಮುಖ್ಯವಾಗಿ ನಾನು ಸಾಹಿತ್ಯದ ವಿದ್ಯಾರ್ಥಿ ಆಗಿಲ್ಲದಿದ್ದುದು ಮತ್ತು ಅದರ ಬಗ್ಗೆ ಆಸಕ್ತಿ ಇಲ್ಲದಿದ್ದುದು ಅಂತ ಈಗ ಅನಿಸುತ್ತೆ. ನಾನು ಓದಿದ್ದು ಸೈನ್ಸ್! ವಂಶವೃಕ್ಷ ಕಾದಂಬರಿಯಲ್ಲಿ ಪ್ರಖ್ಯಾತ ಇತಿಹಾಸ ತಜ್ಞರ ಸುಪುತ್ರ ಅವರ ಪುಸ್ತಕ ಓದೇ ಇರುವುದಿಲ್ಲ. ಅಪ್ಪನ ಸಂಶೋಧನಾ ಸಂಗಾತಿಗೆ ಆತ ತಾನು ಸೈನ್ಸ್ ವಿದ್ಯಾರ್ಥಿ, ಅದರಿಂದ ಇತಿಹಾಸದ ಪುಸ್ತಕ ಓದಿಲ್ಲ ಎನ್ನುತ್ತಾನೆ!

“ನಾನು ಬ್ಲರ್ಬ್ ಕೊಡ್ತೀನಿ….” ಅಂದರು,  ಶ್ರೀ ಈಶ್ವರಚಂದ್ರ. ಪುಸ್ತಕ ಪ್ರಿಂಟ್ ಮುಗಿಯುವ ಮೊದಲು ಬ್ಲರ್ಬ್ ಕೊಡ್ತೀನಿ ಎಂದು ಹೇಳಿದರು! ಒಂದೇ ಒಂದು ಹನಿ ಬೆವರು ಹರಿಸದೆ ಈ ಕೆಲಸ ಆಗಿಬಿಟ್ಟಿತ್ತು!

ಅಂದಹಾಗೆ ಈ ಬ್ಲರ್ಬ್ ಎನ್ನುವ ಪದ ನನಗೆ ಸಂಪೂರ್ಣ ಹೊಸದು! ಇದರ ಅರ್ಥ ಈಶ್ವರ ಚಂದ್ರ ಅವರನ್ನು ಕೇಳುವುದು ಹೇಗೆ? ಸಂಕೋಚ ಅಡ್ಡ ಬಂತಾ…

ಮನೆಗೆ ಬಂದಕೂಡಲೇ ಮಾಡಿದ ಮೊದಲ ಕೆಲಸ ಅಂದರೆ ಬ್ಲರ್ಬ್ ಪದದ ಅರ್ಥ ಹುಡುಕಿದ್ದು. ಆಗ ಇನ್ನೂ ಮೊಬೈಲ್ ಹುಟ್ಟಿರಲಿಲ್ಲ, ಡಿಕ್ಷನರಿ ಎನ್ನುವುದು ಮನೆಯ ಕಪಾಟಿನಲ್ಲಿ ಇರುತ್ತಿತ್ತು ಮತ್ತು ಯಾರೂ ಇದನ್ನು ಹೊತ್ತು ಹೋಗುತ್ತಿರಲಿಲ್ಲ. ಇದಕ್ಕೆ ಒಂದು ಅಪವಾದ ಎಂದರೆ ಉತ್ತರ ಕರ್ನಾಟಕದ ಸಾಹಿತಿಯೊಬ್ಬರು ಅವರ ಕೈ ಚೀಲದಲ್ಲಿ ಯಾವಾಗಲೂ ಒಂದು ದಪ್ಪನೆಯ ಡಿಕ್ಷನರಿ ಯನ್ನೂ ಇಡುತ್ತಿದ್ದರಂತೆ! ನನ್ನ ಬಳಿ ಕೈ ಚೀಲವೇ ಇಲ್ಲ ಇನ್ನು ಪುಸ್ತಕ ಎಲ್ಲಿಡಲಿ? ಇನ್ನೂ ತಮಾಷೆ ಎಂದರೆ ಆಗಿನ್ನೂ ಈ AI ಕೃತಕ ಬುದ್ಧಿಮತ್ತೆ ಯ ಕಲ್ಪನೆಯೇ ಇರಲಿಲ್ಲ. ಅದು ಆಗ ಇದ್ದಿದ್ದರೆ ಏನೇ ಸಮಸ್ಯೆ ಹೇಳಿದರೂ ತಪ್ಪೋ ಒಪ್ಪೋ ಒಂದು ಉತ್ತರ ಸಿಗುತ್ತಿತ್ತು ಮತ್ತು ಇಲ್ಲಿ ಕೊಟ್ಟಿರುವ ಉತ್ತರ ಸರಿ ಇಲ್ಲದೆಯೂ ಇರಬಹುದು ಎನ್ನುವ ಷರಾ ಇರುತ್ತಿತ್ತು!

ಅದರ ಸಲಹೆ ಕೇಳಲಿಕ್ಕೆ ಅದೇ ಹುಟ್ಟಿರಲಿಲ್ಲ! ಅಡಿ ಅನ್ರಾಡಿಕ್ಕಿ ಅವಳೇ ಇಲ್ಲೆ ಪುಳ್ಳೆ ಪೇರು ಎನ್ನ ವೇಕ್ರಾಡಿ ಅಂತಲೋ ಪುಳ್ಳೆ ಪೇರು ರಾಮಕೃಷ್ಣ ಅಂತೇನೋ ತಮಿಳು ಉಕ್ತಿ ಇದೆ ನೋಡಿ ಹಾಗಾಯ್ತು. ಇದರ ಅರ್ಥ ಖಂಡಿತ ನನಗೆ ತಿಳಿಯದು.

ಮನೆ ಸೇರಿದವನು ಮೂರು ಡಿಕ್ಷನರಿ ಹುಡುಕಿದೆ, ಒಂದು ಡಿಕ್ಷನರಿನಲ್ಲಿ ಮಾತ್ರ ನನಗೆ ಕೊಂಚ ಅರ್ಥವಾಗುವ ಉತ್ತರ ಇತ್ತು. ಲೇಖಕ ಹಾಗೂ ಕೃತಿಯ ಬಗ್ಗೆ ವಿವರಣೆ ಎನ್ನುವ ಅರ್ಥ ಬರುತ್ತಿತ್ತು. ಸರಿ ಇದನ್ನು ಪುಸ್ತಕದಲ್ಲಿ ಯಾವ ಪುಟದಲ್ಲಿ ಮುದ್ರಿಸುತ್ತಾರೆ ಎನ್ನುವ ಕಲ್ಪನೆ ಇರಲಿಲ್ಲ. ಇಂತಹ abc ಡೌಟ್ಸ್ ಬಂದಾಗ ನನ್ನ ನೆರವಿಗೆ ಪ್ರೆಸ್‌ನ ಮಾಲೀಕ ಹಾಗೂ ವಿಜಯಮ್ಮ ಅವರ ಪುತ್ರ ಗುರು ಸನಿಹ ಇರುತ್ತಿದ್ದರು. abc ಡೌಟ್ಸ್ ಅಂತ ಯಾಕೆ ಹೇಳಿದೆ ಅಂದರೆ ಯಾವುದಾದರೂ ವಿಷಯ ಗೊತ್ತಿಲ್ಲದ ಪೆದ್ದನಿಗೆ ಅವನಿಗೆ ಅದರ ಅಂದರೆ ವಿಷಯದ abc ಎಬಿಸಿ ಗೊತ್ತಿಲ್ಲ ಅನ್ನುತ್ತಾರೆ ಗೊತ್ತಲ್ಲ, ಅದಕ್ಕೆ. ಅವರಿಗೆ ಬ್ಲರ್ಬ್ ಬಗ್ಗೆ ಕೇಳಿದೆ. ಅವರ ಹಿಂದಿನ ಶೆಲ್ಫ್ ನಿಂದ ಒಂದು ಹೊರೆ ಪುಸ್ತಕ ಹೊಸಾ ಪುಸ್ತಕಗಳನ್ನು ಸೆಳೆದರು. ಅದರ ಬೆನ್ನುಭಾಗ ಟೇಬಲ್ಲಿನ ಮೇಲೆ ಹರವಿದರು. ಅದನ್ನು ಬೆಟ್ಟು ಮಾಡಿ ತೋರಿಸಿದರು. ಪುಸ್ತಕದ ಬೆನ್ನು ಭಾಗದಲ್ಲಿ ಲೇಖಕರ ಚಿತ್ರ ಇತ್ತು ಮತ್ತು ಕಿರು ಪರಿಚಯಾತ್ಮಕ ಬರಹ ಸಹಾ ಇತ್ತು!
“ಸಾರ್ ಇದಕ್ಕೆ ಬ್ಲರ್ಬ್ ಅನ್ನುತ್ತಾರೆ…..” ಎಂದರು.
ಹೀಗೆ ಪ್ರೆಸ್‌ನಲ್ಲಿ ಕೂತು ಸುಮಾರು ಪದಕಲಿಯುವ ಕಾಯಕ ನಡೆಸಿದೆ.

ಪ್ರೆಸ್ಸಿಗೆ ಬರುತ್ತಿದ್ದ ಹಲವು ಖ್ಯಾತ ಸಾಹಿತಿಗಳ ಪರಿಚಯವೂ ಸಹ ಆಯಿತು. ನನ್ನ ಪುಸ್ತಕ ಪ್ರಿಂಟಾಗುವ ಸಮಯದಲ್ಲಿ ಮತ್ತೆ ಸಾಹಿತಿ ಶ್ರೀ ಹರಿಹರ ಪ್ರಿಯ ಅವರ ಜತೆ ಆಪ್ತತೆ ಹೆಚ್ಚಿತು. ಹರಿಹರ ಪ್ರಿಯ ಅವರು ಅಲ್ಲಿ ಆಗ ಪ್ರೂಫ್ ನೋಡಲು ಬರುತ್ತಿದ್ದರು ಮತ್ತು ಅವರ ಮೂಲಕ ಹಲವು ಸಾಹಿತಿಗಳ ಮತ್ತೊಂದು ನೋಟದ ಪರಿಚಯವು ಆಯಿತು. ನನ್ನ ಪುಸ್ತಕದ ಬಿಡುಗಡೆಗೆ ಯಾರನ್ನು ಕರೆಯ ಬೇಕು, ಯಾರು ಏನು ಮಾತನಾಡಬೇಕು ಮೊದಲಾದ ವಿವರಗಳನ್ನು ಕೃಷ್ಣ, ಮೊಗೇರ, ಗೌತಮ, ಹರಿಹರ ಪ್ರಿಯ ಮತ್ತು ಕೆಲವು ಗೆಳೆಯರು.. ಅವರೇ ಮಾರ್ಗದರ್ಶನ ಮಾಡಿದರು. ಹರಿಹರ ಪ್ರಿಯ ಅವರು ತಾವೂ ಸಹ ಪುಸ್ತಕ ಕುರಿತು ಮಾತು ಆಡುವುದಾಗಿ ಹೇಳಿದರು. ಆಹ್ವಾನ ಪತ್ರಿಕೆಯಲ್ಲಿ ಅವರ ಮೂಲ ಹೆಸರು ಸಾತವಳ್ಳಿ ವೆಂಕಟ ವಿಶ್ವನಾಥ (ಖ್ಯಾತ ಸಾಹಿತಿಗಳು) ಎಂದು ಹಾಕಿಸಿದ್ದೆವು. ಮುಂದೆ ಇದರ ಅಂದರೆ ಆಹ್ವಾನ ಪತ್ರಿಕೆಯ ವಿವರ ಹೇಳುತ್ತೇನೆ.(ಈ ಎಪಿಸೋಡಿನ ರಚನೆ ಆಗುವ ಸಂದರ್ಭದಲ್ಲಿ ನನ್ನ ಹಳೆಯ ಗೆಳೆಯ ಶ್ರೀ ಸಿ ಜಿ ನಾಗಪ್ಪ (bel ವಿಚಾರವಾದಿಗಳ ಸಂಘದ ಫೌಂಡರ್ ಹಾಗೂ ಅಧ್ಯಕ್ಷ) ನನ್ನ ಪುಸ್ತಕದ ಆಹ್ವಾನ ಪತ್ರಿಕೆಯ ಫೋಟೋ ಕಳಿಸಿದರು. ಅವರ ಕನ್ನಡ ಕನ್ನಡ ನಿಘಂಟಿನಲ್ಲಿ ಈ ಕಾಜಗ ಜೋಪಾನವಾಗಿತ್ತಂತೆ…!

ಮುನ್ನುಡಿ ಕೊಡಿ ಎಂದು ಕೇಳಲು ಶ್ರೀ ನರಸಿಂಹ ಮೂರ್ತಿ ಅವರ ಮನೆಗೆ ಭೇಟಿ ಮಾಡಿದ್ದು ಈಗಲೂ ನಿನ್ನೆ ಮೊನೆ ನಡೆದ ಘಟನೆಯ ಹಾಗೆ ಮನಸ್ಸಿನಲ್ಲಿ ಅಚ್ಚೊತ್ತಿದೆ. ಅದರ ಬಗ್ಗೆ ಒಂದು ಪುಟಾಣಿ ವಿವರಣೆ ನೀಡಿ ಮತ್ತೆ ಕತೆಯ ಕಾಡಿಗೆ ಮರಳುತ್ತೇನೆ.

ನರಸಿಂಹ ಮೂರ್ತಿ ಅವರ ಮನೆ ಜಯನಗರ ಮೂರನೇ ಬ್ಲಾಕ್‌ನಲ್ಲಿತ್ತು. ಜಯನಗರ ಕಾಂಪ್ಲೆಕ್ಸ್ ಮತ್ತು ಬಸ್ ಸ್ಟಾಪ್ ಆಗಿನ್ನೂ ಜನ್ಮ ತಳೆಯುತ್ತಿತ್ತು. ಇವರು ವಾಸವಿದ್ದ ಮನೆ ಗೀತಾ ಕಾಲೋನಿ ಎಂದು. ನಾನು ಒಂದು ಸಂಜೆ ಅವರ ಮನೆಗೆ ಹೋದೆ. ರಾಜ್ಯ ಸರ್ಕಾರದಲ್ಲಿ ಉನ್ನತ ಹುದ್ದೆಯಲ್ಲಿದ್ದು ಅವರು ನಿವೃತ್ತರಾಗಿದ್ದರು. ಅದಕ್ಕೆ ಮೊದಲು ಕೆಲವು ವರ್ಷ ಕಾಲೇಜಿನಲ್ಲಿ ಪಾಠ ಮಾಡಿದ್ದರು. ನನ್ನ ಸೋದರಮಾವನ ಮಗ ಪ್ರಾಣೇಶ (ಈಗ ಇವನಿಗೆ ಎಂಬತ್ತೈದು), ಅವರು ನನಗೆ ಮೇಷ್ಟ್ರಾಗಿದ್ದರು ಎಂದು ಒಮ್ಮೆ ನೆನೆಸಿಕೊಂಡಿದ್ದ. ನನ್ನ ಶ್ರೀ ನರಸಿಂಹ ಮೂರ್ತಿ ಅವರ ಭೇಟಿ ಆದಾಗ ಅವರಿಗೆ ಸುಮಾರು ಎಪ್ಪತ್ತಿರಬೇಕು. ಒಂದು ಪುಟ್ಟ ಮನೆ ಹೌಸಿಂಗ್ ಬೋರ್ಡ್‌ನಿಂದ allot ಆಗಿದ್ದ ಮನೆ ಅಂತ ನಂತರ ಗೊತ್ತಾಯಿತು. ಐ ಎ ಎಸ್ ಅಧಿಕಾರಿಗಳ ಮನೆ ಅಂತ ಅನಿಸಲಿಲ್ಲ. ನಮ್ಮ ಹಾಗೆ ಮಧ್ಯಮ ವರ್ಗದ ಬಡವರ ಮನೆ ರೀತಿ ಇತ್ತು.

ಬಾಗಿಲು ತಟ್ಟಿದೆ, ಅವರ ಶ್ರೀಮತಿ ಬಾಗಿಲು ತೆರೆದರು. ಮೂರ್ತಿ ಅವರು ಮನೇಲಿ ಇದ್ದಾರಾ?ಅವರನ್ನು. ನೋಡಬೇಕು ಅಂದೆ. ವೆರಾಂಡಾ ಒಳಗೆ ಕರೆದು ಕೂಡಿಸಿದರು. ಬಹುಶಃ ನರಸಿಂಹ ಮೂರ್ತಿ ಅವರಿಗೆ ಯಾರೋ ತಮ್ಮನ್ನು ಕಾಣಲು ಬಂದಿದ್ದಾರೆ ಎಂದು ತಿಳಿಯಿತು. ಬನಿಯನ್ ಪಂಚೆಯ ನ್ನು ತೊಟ್ಟಿದ್ದರು ಅಂತ ಕಾಣ್ಸುತ್ತೆ….
ರೂಮಿನಿಂದ ಪ್ಯಾಂಟ್ ಬುಷ್ ಶರ್ಟ್ ತೊಟ್ಟು ಹೊರಬಂದರು. ವರಾಂಡದಲ್ಲಿನ ನಾನು ಕೂತಿದ್ದ ಕುರ್ಚಿ ಎದುರು ಅವರು ಕೂತರು. ನನ್ನ ಪ್ರವರ ಹೇಳಿಕೊಂಡೆ. “ಸರ್, ಈಶ್ವರ ಚಂದ್ರ ಅವರ ಮನೆಗೆ ಹೋಗಿದ್ದೆ. ಅವರು ಬ್ಲರ್ಬ್ ಕೊಡುತ್ತಾರೆ, ನೀವು ಮುನ್ನುಡಿ ಬರೆದುಕೊಡಿ…” ಅಂದೆ. ಆಗಲಿ ಗೋಪಾಲಕೃಷ್ಣ ಅವರೇ ಎಂದರು. ಮುಂದೆ ನನ್ನ ಕತೆಗಳಲ್ಲಿನ ಅನಿರೀಕ್ಷಿತ ತಿರುವುಗಳು ಓ. ಹೆನ್ರಿ ಕತೆ ನೆನಪಿಗೆ ತರುತ್ತೆ. ಅದರಲ್ಲಿನ ತೆಳು ಹಾಸ್ಯ ಕನ್ನಡ ಸಾಹಿತ್ಯದಲ್ಲಿ ಈಚೆಗೆ ಮರೆಯಾಗುತ್ತಾ ಇದೆ. ಅದನ್ನು ಮತ್ತೆ ಮುಖ್ಯಹಾದಿಗೆ  ತರುವ ಪ್ರಯತ್ನ ನಿಮ್ಮಿಂದ ಆಗುತ್ತಿದೆ….. ಎಂದರು. ಖುಷಿಯಿಂದ ಅವರ ಶ್ರೀಮತಿ ಅವರು ಕೊಟ್ಟ ಉಪ್ಪಿಟ್ಟು ಕಾಫಿ ಮುಗಿಸಿ ಹೊರಟೆ.

ಪುಸ್ತಕಕ್ಕೆ ಹೆಸರು ಇಡಬೇಕಿತ್ತಲ್ಲ. ಮುಖಪುಟ ಬರೆದಾಗ ಪುಸ್ತಕದ ಹೆಸರೂ ಕೊಟ್ಟರೆ ಕಲರ್ ಕಾಂಬಿನೇಷನ್‌ಗೆ ಉತ್ತಮ ಎನ್ನುವ ಅಭಿಪ್ರಾಯ ಬಂದಿತ್ತು. ನನ್ನ ಕತೆಗಳ ಹಸ್ತಪ್ರತಿಯ ಒಂದು ಕತೆ ಹೆಸರು ವೈಶಾಖ ಎಂದು. ಈಗಾಗಲೇ ಚದುರಂಗ ಅವರು ವೈಶಾಖ ಎನ್ನುವ ಕಾದಂಬರಿ ಬರೆದು ಅದು ಪ್ರಖ್ಯಾತವಾಗಿತ್ತು. ನನ್ನ ಸಂಕಲನಕ್ಕೂ ವೈಶಾಖ ಹೆಸರು ಇಟ್ಟರೆ ಓದುಗರು ಕನ್ಫ್ಯೂಸ್ ಮಾಡಿಕೊಳ್ಳುವ ಸಂಭವ ಹೆಚ್ಚಿರುತ್ತೆ ಅನಿಸಿತು. ಆದರೂ ಚದುರಂಗರ ವೈಶಾಖ ಕಾದಂಬರಿಯು. ನನ್ನದು ಸಣ್ಣ ಕಥಾ ಸಂಗ್ರಹ, ಅದರಿಂದ ಹೆಸರು ಅದೇ ಇರಲಿ ಎನ್ನುವ ತೀರ್ಮಾನ ತೆಗೆದುಕೊಂಡೆ…! ಹೆಸರು ವೈಶಾಖ ಆಯ್ತಾ? ಹೆಸರು ನನ್ನ ಗೂಢ ನಾಮವೇ ಇರಲಿ, ಅದರಿಂದಲೇ ನಾನು ಖ್ಯಾತನಾಗಿರುವುದು ಅನಿಸಿತಾ…? ಇದುವರೆಗೂ ಕಾಪಾಡಿಕೊಂಡು ಬಂದಿದ್ದ ಒಂದು ಗುಟ್ಟು ನಿಮಗೂ ಓದುಗ ಮಹಾಪ್ರಭುಗಳಿಗೂ ಸಹ ರಿವೀಲ್ ಮಾಡುತ್ತಾ ಇದ್ದೇನೆ. ಪ್ರಭಾ ಇದು ನನ್ನ ಹಲವು ಗೂಢ ನಾಮಗಳಲ್ಲಿ ಒಂದು, ಹೆಚ್ಚು ಫೇಮಸ್ ಆಗಿರುವುದು…!

ಕಾರ್ಯಕ್ರಮ ಹೇಗಾಯಿತು, ಯಾವ ಯಾವ ಅಥಿತಿ (ಅತಿಥಿ ?)ಗಳು ಬಂದರು, ಅದೇನೇನು ಆಭಾಸಗಳಾದವು ಎನ್ನುವುದನ್ನು ಮುಂದಿನ ಸಂಚಿಕೆಯಲ್ಲಿ ನಿಮಗೆ ವಿವರಿಸಲೇಬೇಕು. ಅದಕ್ಕಿಂತ ಮಿಗಿಲಾಗಿ ಒಂದು ಅಭ್ಯಾಸದಿಂದ ನನ್ನ ಇಮೇಜ್ ಹೇಗೆ ಅಪ್ಪಚ್ಚಿ ಆಯಿತು ಎನ್ನುವ ತಮಾಷೆ ನಿಮಗೆ ಹೇಳಲೇ ಬೇಕು. ಸರ, ಮೇಡಮ್ಮೋ ರೆ… ಕೊಂಚ ತಡಕೊಳ್ರಿ…ಸುಧಾರಿಸಿಕೊಂಡು ಕತೆ ಮುಂದಕ್ಕೆ ಓಡಿಸುವೆ…

ಇನ್ನೂ ಉಂಟು

About The Author

ಎಚ್. ಗೋಪಾಲಕೃಷ್ಣ

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ