ಮುಂಜೆನೆದ್ದಿದ್ದ ಹಿಂಗ ಅವ್ವ ಬುತ್ತಿ ಕಟ್ಟಿಗ್ಯಂಡು ಹೊಂಟ್ಲಂದ್ರ, ಮನಿಯೆಲ್ಲಾ ನನ್ನ ಮ್ಯಾಗ ಬಿದ್ದೈತೆನೊ ಅನ್ನಿಸ್ತಿತ್ತು. ಬಟ್ಟಿ, ಮುಸುರಿ, ಕಸ, ಅಡಿಗಿ ಎಲ್ಲಾನೂ ನನ್ನ ನೋಡಿ ನಕ್ಕಂಗಾಗ್ತಿತ್ತು. ಅದರ್ ನಡುವು ಮನಿಗೆ ಬಂದಾರೆಲ್ಲ ಅಪ್ಪನ್ನ ನೋಡಿ ‘ಮಗಳ್ ಮನಿ ಕೆಲ್ಸ ಎಲ್ಲಾ ಕಲ್ತಾಳ ಬುಡಪ, ದೊಡ್ಡಾಕ್ಯಾಗ್ಯಾಳನು?’ ಅಂತ ಕೇಳಿದಾಗೆಲ್ಲ, ಒಲ್ಯಾಗಿನ ಬೂದಿ ಅವರ ಮಾರಿಗೆ ಒಗಿಬೊಕು ಅನ್ನಿಸಿದ್ರು, ಒಳಾಗ ಅಡಗಿ ಮನಿಯೊಳಾಗ ಕಂಬಕ್ಕ ಕುಂತಗಂಡು ಚಚ್ಚೌಕ ಇದ್ದ ಕಿಡಕಿ ಮತ್ತ ಅದರ ನಡುವ ನಿಧಾನವಾಗಿ ತೂಗ್ಯಾಡಿದಂಗ ಕಾಣತಿದ್ದ ನೆಲುವು ನೋಡಿಕ್ಯಂತ ಕುಂದ್ರತಿದ್ದೆ.
ಸುವರ್ಣ ಚೆಳ್ಳೂರು ಬರೆಯುವ “ಆಕಿ” ಸರಣಿಯಲ್ಲಿ ಮೂರನೆಯ ಬರಹ
ಹೊಲದಾಗ ಗಾಳಿ ಜೋರಾಗಿ ಬೀಸಿ ತಂಪಾಗಿತ್ತು, ಅತ್ತಿನ ಗಟ್ಟಿಯಾಗಿ ಹಿಡ್ಕೊಂಡು ಮಲಗಿದೆ ಆದ್ರ ಆ ಒಂದು ಹುಳ ತಲೆಸುತ್ತ ತಿರಗ್ತಿತ್ತು,
ಆಕಿ ಅಂದ್ರ ಯಾರು?
ಅತ್ತಿ ಹೇಳಿದ್ದ ‘ಆಕಿ’ ಕತಿ ಇನ್ನೂ ಗುಂಯ್ ಗುಟ್ಟಂಗ ತಲಿಸುತ್ತ ಓಡ್ಯಾಡತಿತ್ತು,
ಆಕಿ ಯಾರಿಲ್ಲಿ? ಆಕಿ ಎಲ್ಲಿರ್ತಾಳ? ಅಂತ ಅತ್ತಿನ ಕೇಳೇ ಬಿಡೋಣ ಅಂತ ಕೇಳಿದೆ. ನಿದ್ದೆಗಣ್ಣಲ್ಲಿದ್ದ ಅತ್ತಿ, ಮೆಲ್ಲಕ ನನ್ನ ತಲೆ ಸವರುತ್ತಾ,
‘ಆಕಿ ಅಷ್ಟು ಬೇಗ ನಿನಗ ಸಿಗಾಂಗಿಲ್ಲ, ನೀ ಇನ್ನು ಮಾಗಬೇಕು, ಅರಳಬೇಕು, ಬದುಕು ಬಾಳೆವು ಅನ್ನದ್ರಾಗ ಕಾಯಾಗಿ, ಹಣ್ಣಾಗಿ, ಹೂವಾಗಿ, ಕೊನೆಗೊಮ್ಮೆ ಹಕ್ಕಿಯಾಗಿ ಹಾರಾಡ್ತಿ, ಅಲ್ಲಲ್ಲಿರೊ ಗಿಡಗಗಳ ಕೈಯ್ಯೊಳಾಗ ಕೊಸರಾಡಿ, ಜೊತಿಗೊಂದು ಜೋಡಿ ಹಕ್ಕಿ ಸಿಕ್ಕಾಗ ನಕ್ಕು, ಮತ್ತ ಅದSS ಬಾಳೆವು ಬದುಕು ಅಂತ ಮುಂದ್ ಹೋಗ್ಬೊಕು; ಇಷ್ಟೆಲ್ಲಾ ಆದ್ರೂನು ‘ಆಕಿ’ ನಿನಗ ಯಾರಂತ ಗೊತ್ತಾಗಂಗಿಲ್ಲ. ಆಕಿ ನನ್ನೊಳಾಗೂ ಅದಾಳ, ನಿನ್ನೊಳಾಗೂ ಅದಾಳ’ ಅಂದು ಆಕಾಶ ನೋಡಿ ನಕ್ಕಳು.
ಅತ್ತಿಯ ಯಾವ ಮಾತೂ ಅರ್ಥವಾಗಲಿಲ್ಲವಾದ್ರೂ ‘ಆಕಿ’ ಮಾತ್ರ ತಲೆಯಲ್ಲೆ ಪ್ರಶ್ನೆಯಾಗಿ ಉಳದ್ಲು. ಅತ್ತಿ ಮತ್ತೆ ನನ್ನ ಕಡೆ ತಿರುಗಿ,
‘ಅಲಲೇ, ಸಾಕು ಈಗ ಆಕಿ ಯಾರು, ಇಕಿ ಯಾರು, ಅಂತ ತಲಿ ಕೆಡಸಿಗ್ಯಂಡಿದ್ದು, ಮುಂಜೆಲೆದ್ದು ಮನಿಗೊಗಿ ಸಾಲಿಗೊಬೊಕಂಬಾದು ಖಬುರೈತಿಲ್ಲ?’ ಅಂದು ಮಲಗಿದಳು.
ಸಾಲಿಗೊಬೊಕು ಅನ್ನೊದು ಕಿವಿಗೆ ಬಿದ್ದಿದ್ದ ತಡ, ನಾನು ರೆಪ್ಪೆ ಮುಚ್ಚಿದೆ.
ಮುಂಜೆನ್ಯಾದಾಗ ಹೊಲದಾಗ ತಂಡಿ ಇತ್ತು, ಅತ್ತಿ ಅದಾಗಲೇ ಎದ್ದು, ರಾಶಿ ಮ್ಯಾಗ ಹಾಕಿದ್ದ ಬರಕಾನೆಲ್ಲ ತೆಗೆದು, ನೆಲ್ಲು ಅರವಾಕತಿದ್ಲು. ಬಡಾ ಬಡಾ ಬಂದಾಕಿ, ನನ್ನ ನೋಡಿದ್ದ ತಡ,
‘ಇವತ್ತು ಹೊಲದಾಕ ಕುರಿಮಂದಿ ಬಂದು, ಹಟ್ಟಿ ಹಾಕ್ತಾರ, ಮನಿಗೊಗಿ ನಿಮ್ಮವ್ವಗ ಹೇಳಿ, ನೀನು ಸಾಲಿಗೊಗು ಇಲ್ಲೆ ಹೊಲದಾಗ ತಿರಗಾಡಿಕ್ಯಂತ ಕುಂದ್ರಬಾಡ’ ಅಂದು ಮತ್ತೆ ಕೆಲಸಕ್ಕ ಮುಂದಾದ್ಲು.
ಮೊದ್ಲು ಮೊದ್ಲು ಸಾಲಿಗೊಗಾದು ಅಂದ್ರ ಅಷ್ಟೆನೂ ಆಸಕ್ತಿ ಇಲ್ಲ ಅಂದ್ರೂನೂ, ಅಪ್ಪ ಒಮ್ಮಿ ಕಟಿಗಿ ಹಿಡ್ಕೊಂಡು ಸಾಲಿತನ ಬಡದದ್ದು ನೆನಸಿಗ್ಯಂಡ್ರ ಇನ್ನೂ ಕೈಕಾಲು ನಡಗುತ್ತ, ಅವತ್ತಿಂದಾನೂ ಬಿಡಲಾರದಂಗ ಸಾಲಿಗೊಗಿದ್ದು, ಸಾಲಿಯೊಳಾಗ ಲೀಡರ್ ಆಗಿದ್ದು, ಆಮ್ಯಾಗ ಬಂದ ಸರಸ್ವತಿ ಮಿಸ್ ಹೇಳ್ತಿದ್ದ ಸಮಾಜ ಪಾಠ ಕೇಳಿ, ನಾನು ಇವರಂಗ ಮುಂದೊಮ್ಮೆ ಮೇಡಂ ಆಗ್ಬೇಕು ಪಾಠ ಕಲಸ್ಬೊಕು ಅನ್ಕೊಂಡಿದ್ದು, ಮೇಡಂ ಕೈಯ್ಯಾಗ ಕಂಪಾಸ್ ಗಿಫ್ಟ್ ಆಗಿ ತಗೊಂಡಿದ್ದು, ಸಾಲಿನ ಇನ್ನಷ್ಟು ಮನಸ್ಸಿಗೆ ಹತ್ತಿರ ಮಾಡಿತ್ತು.

ಹಿಂಗ ಸಾಲಿಗೊಗ್ಬೊಕು ಅಂದ್ರ ಮೊದ್ಲು ಮನಿಯೊಳಾಗ ಅವ್ವ ಹೇಳ್ತಿದ್ದ ಒಂದಷ್ಟು ಕೆಲಸ ಮಾಡ್ಲೆಬೇಕಿತ್ತು ಯಾಕಂದ್ರ ಆಕಿಗೆ ಹೊಲದ ದಗದ ಇರುತಿತ್ತು. ಎರಡ್ ವರ್ಷದ ತಮ್ಮನ್ನ ಒಮ್ಮೊಮ್ಮೆ ನಂಜೊತಿಗೆ ಬಿಟ್ಟಾಗ, ಅವನೂ ನಂಜೊತಿಗೆ ಸೇರಿ ಸಣ್ಣೊನಿದ್ದಾಗಲೇ ಆರನೇ ಕ್ಲಾಸ್ ಪಾಠ ಕೇಳ್ತಿದ್ದ. ಅವನು ಅತ್ತಾಗ ಹೊಲಕ್ಕ ಓಡಿ ಹೋಗಿ ಅವ್ವಂತಾಕ ಬುಟ್ಟು ಬರಬೇಕಿತ್ತು.
ಮುಂಜೆನೆದ್ದಿದ್ದ ಹಿಂಗ ಅವ್ವ ಬುತ್ತಿ ಕಟ್ಟಿಗ್ಯಂಡು ಹೊಂಟ್ಲಂದ್ರ, ಮನಿಯೆಲ್ಲಾ ನನ್ನ ಮ್ಯಾಗ ಬಿದ್ದೈತೆನೊ ಅನ್ನಿಸ್ತಿತ್ತು. ಬಟ್ಟಿ, ಮುಸುರಿ, ಕಸ, ಅಡಿಗಿ ಎಲ್ಲಾನೂ ನನ್ನ ನೋಡಿ ನಕ್ಕಂಗಾಗ್ತಿತ್ತು. ಅದರ್ ನಡುವು ಮನಿಗೆ ಬಂದಾರೆಲ್ಲ ಅಪ್ಪನ್ನ ನೋಡಿ ‘ಮಗಳ್ ಮನಿ ಕೆಲ್ಸ ಎಲ್ಲಾ ಕಲ್ತಾಳ ಬುಡಪ, ದೊಡ್ಡಾಕ್ಯಾಗ್ಯಾಳನು?’ ಅಂತ ಕೇಳಿದಾಗೆಲ್ಲ, ಒಲ್ಯಾಗಿನ ಬೂದಿ ಅವರ ಮಾರಿಗೆ ಒಗಿಬೊಕು ಅನ್ನಿಸಿದ್ರು, ಒಳಾಗ ಅಡಗಿ ಮನಿಯೊಳಾಗ ಕಂಬಕ್ಕ ಕುಂತಗಂಡು ಚಚ್ಚೌಕ ಇದ್ದ ಕಿಡಕಿ ಮತ್ತ ಅದರ ನಡುವ ನಿಧಾನವಾಗಿ ತೂಗ್ಯಾಡಿದಂಗ ಕಾಣತಿದ್ದ ನೆಲುವು ನೋಡಿಕ್ಯಂತ ಕುಂದ್ರತಿದ್ದೆ.
ಮುಂಜೆನೆದ್ದು ಒಲ್ಯಾಗ ತೆಗಿತಿದ್ದ ಬೂದಿ, ಮುಸುರಿ ತಿಕ್ಕುವಾಗ ಕೈಗೆ ಹತ್ತುತ್ತಿದ ಕರಿ ಬೂದಿ, ಬೊಗಾಣಿಗಳನ್ನೆಲ್ಲ ತಿಕ್ಕಿ ತೊಳದ ಮ್ಯಾಲ ಅವು ಫಳ್ ಫಳ್ ಹೊಳಿತಿದ್ದದ್ದು, ಸಣ್ಣ್ ಸಣ್ಣ್ ಹೂವಿನ ಚಿತ್ರ ಇದ್ದ ಗಂಗಾಳ, ಚಾ ಕುಡ್ಯಾಕಂತಾನ ಇದ್ದ ಸಣ್ಣ್ ಗಿಂಡಿ, ಒಲಿ ಪಕ್ಕ ಯಾವಾಗಲೂ ಇರ್ತಿದ್ದ ಊದಗೊಳವಿ, ಅಡಗಿ ಮಾಡುವಾಗ ಕಟ್ಟಿಗಿ ಇಟ್ಟು ಕಡ್ಡಿ ಗಿರಿದಾಗ ಹೊತ್ತಿ ಉರಿಯುತ್ತಿದ್ದ ಬೆಂಕಿ ಬೆಳಕು, ಮತ್ತದರೊಳಾಗ ಕಾಣ್ತಿದ್ದ ನೆರಳಿನ ಚಿತ್ರ. ಒಲಿಮ್ಯಾಗ ಅನ್ನ ಮಾಡಾಕಿಟ್ಟು, ಇನ್ನೊಂದು ಒಲಿಗೆ ಬ್ಯಾಳಿಗೆ ಕುದ್ಯಾಕಿಟ್ಟು ಅದ್ರ ಮುಂದಾನ ಬುಕ್ ಹಿಡ್ಕೊಂಡು,
‘ಬಂದ ಬಂದ… ಸಂತಮ್ಮಣ್ಣ….
ನಮ್ಮ ನಾಡಿದು ನಮ್ಮದು, ನಮ್ಮ ಕನ್ನಡ ನಾಡಿದು…
ಬಾವಿಲಿ ಬಿದ್ದ ಚಂದ್ರ…’ ಪದ್ಯಗಳನ್ನೆಲ್ಲಾ ಬಾಯಿಪಾಠ ಮಾಡಿ, ಆಮೇಲೆ ಬ್ಯಾಳಿಗೆ ಗಮ್ಮನಂಗ ಒಗ್ಗರಣೆ ಹಾಕಿ ಹೊರಾಗ್ ಬಂದಾಗ ಅದೊಂಥರಾ ಸಮಾಧಾನ ಅನ್ನಿಸ್ತಿತ್ತು.
ಇದಾದ್ ಮೇಲೆ ಸಾಲಿಗೆ ಹೋಗ್ಬೊಕಂದ್ರ ಜಡಿ ಅಕ್ಯಂಡು ರಿಬ್ಬನ್ ಕಟ್ಟಿಗ್ಯಬೇಕಿತ್ತು, ಅವ್ವ ಮುಂಜ್ ಮುಂಜೆಲೆ ಹೊಲಕ್ಕ ಹೋಗ್ತಿದ್ದರಿಂದ, ಈ ಜಡಿ ಹಾಕಿಸಿಗ್ಯಬೇಕಂದ್ರ ವಿಜ್ಜಮ್ಮಕ್ಕಂತಾಕ ಹೋಗ್ಬೇಕಿತ್ತು, ವಿಜ್ಜಮ್ಮಕ್ಕ ಮತ್ತೆ ಅವರವ್ವ ಇರ್ತಿದ್ದ ಮನಿ, ನಮ್ಮ ಒಣ್ಯಾಗ ಒಂದೆರಡು ಮನಿ ಬಿಟ್ಟು ಆಕಡೆ ಇತ್ತು. ವಿಜ್ಜಮ್ಮಕ್ಕ ಅದಾಗಲೇ ಪ್ರೈಮರಿ ಸಾಲಿ ಮುಗ್ಸಿ ಹೈಸ್ಕೂಲ್ ಹೋಗಿದ್ಲು. ನಾ ಸಾಲಿ ಮುಗದ್ ಮ್ಯಾಲೆ ಸಿದಾ ಅವರ ಮನಿಗೊಗಿ ಕುಂತಾಗೆಲ್ಲ, ಹೈಸ್ಕೂಲ್ ನಲ್ಲಿರೊ ಬೆಂಚ್‌ಗಳ ಬಗ್ಗೆ ಮತ್ತ ಅಲ್ಲಿರೊ ಸ್ಟ್ರಿಕ್ಟ್ ಮಾಸ್ತರ, ಮೇಡಂಗಳ ಬಗ್ಗೆ ಹೇಳ್ತಿದ್ಲು, ಅವಳು ಹೇಳೊ ಬೆಂಚ್‌ಗಳ ಕತೆ ಕೇಳಿದಾಗೆಲ್ಲ ನಂಗೂ ಬೇಗ ದೊಡ್ಡೊಳಾಗಿ ಹೈಸ್ಕೂಲ್ ಹೋಗಿಬುಡಬೊಕು ಅನ್ಸೊದು. ಶನಿವಾರ ಬಂದಾಗೆಲ್ಲ ಅವಳ ಮನೇಲಿ ಆಣೆಕಲ್ಲಾಟ ಆಡೊದನ್ನ ಹೇಳಿ ಕೊಡ್ತಿದ್ಲು, ಅವರ ಮನೆಲಿದ್ದ ಅವರವ್ವ ನನ್ನ ಕಂಡಾಗೆಲ್ಲ ‘ಬಂದ್ಯನವSS ರಿಬ್ಬನ್ ಕಟಿಗ್ಯನಾಕ! ನಿಮ್ಮಕ್ಕ ಮನ್ಯಾಗದಾಳ್ ನೋಡು’ ಅನ್ನುತ್ತಾ ನಗ್ತಿದ್ಲು. ಆದ್ರ ವಿಜ್ಜಮ್ಮಕ್ಕಾ ಕೇಳಿದಾಗೊಮ್ಮೆ ಜಡಿ ಹಾಕಿ, ಹೂವಿನಂಗ ರಿಬ್ಬನ್ ಕಟ್ಟೊಳು, ಅವಳು ರಿಬ್ಬನ್ ಕಟ್ಟುವಾಗ ಇಬ್ಬರೂ ಅವರ ಮನಿ ಅಂಗಳದಲ್ಲಿದ್ದ ಸಣ್ಣ ಕಟ್ಟಿಮ್ಯಾಲೆ ಕುಂತಿರ್ತಿದ್ವಿ, ಅಲ್ಲಿಂದ ಮನಿಯೊಳಗೆ ಕಣ್ಣು ಹಾಯಿಸಿದಾಗ ಗೋಡೆಗೆ ಹಾಕಿದ್ದ ಅವರಪ್ಪನ ಫೋಟೊ, ಅದ್ರಲ್ಲಿದ್ದ ಪುಟ್ಟ ಹುಡುಗಿ ಫೋಟೋ ಕಾಣ್ತಿತ್ತು, ಅವಳು ಜಡಿ ಹಾಕೊವಾಗೆಲ್ಲ
‘ಅಕ್ಕಾ… ಆ ಪೋಟೋದಾಗಿರಾರು ಯಾರಬೇ?
ಅಲ್ಲಿ ಸಣ್ಣ್ ಹುಡುಗಿ ಐತಿ, ಅದ್ಯಾರು?’ ಅನ್ನೊ ಪ್ರಶ್ನೆ ಕೇಳಿದಾಗೆಲ್ಲ
‘ಅಲ್ಲಿರಾ ಹುಡುಗಿ ನಾನಾ… ನನ್ನ ಎತ್ತಿಗ್ಯಂಡಿರಾದು ನಮ್ಮಪ್ಪ’ ಅಂತ ಖುಷಿಯಿಂದ ಹೇಳಿ ರಿಬ್ಬನನ್ನ ಹೂ ಮಾಡೊ ಕೆಲಸದಲ್ಲಿ ಮಗ್ನ ಆಗ್ತಿದ್ಲು. ‘ನಿಮ್ಮಪ್ಪ ಎಲ್ಲಿ ಅದಾರ ಯಕ್ಕಾ?’ ಅಂತ ಕೇಳಿದಾಗ ಅವಳಿಂದ ಯಾವ ಉತ್ತರಾನೂ ಬರ್ತಿರ್ಲಿಲ್ಲ, ಆದ್ರ ಅವಳ ಕಣ್ಣು ತೇವ ಆಗ್ತಿತ್ತು. ಮತ್ತೆ ಮಾತು ಮರಸುವಂಗ ‘ನೀ ಹೈಸ್ಕೂಲ್ ಗೆ ಬಾ ಬಡಾssನ ಬೆಂಚ್ ಮ್ಯಾಗ್ ಕುಂತು ಪಾಠ ಕೇಳುವಂತಿ, ಹಂಗ ಸೈಕಲ್ ಕೊಡ್ತಾರ ನಿಂಗ, ಸಾಲಿತನ ಒಡಕಂತ ಹೋಗ್ಬೊದು, ಚೊಲೋ ಇರುತ್ತ ಗೊತ್ತನು, ಮತ್ತೆ ಈ ನೀಲಿ ಅಂಗಿ ಬುಟ್ಟು ಬಿಳಿ ಅಂಗಿ, ನೀಲಿ ಲಂಗ ಹಾಕ್ಕೊಬೊದು’ ಅಂತ ನಗಸ್ತಿದ್ಲು. ಅವಳು ಹಿಂಗೆಲ್ಲಾ ಸಾಲಿ ಬಗ್ಗೆ ಹೇಳುವಾಗೆಲ್ಲಾ, ಹೈಸ್ಕೂಲ್ ಹೋದ್ರೆ ಬೆಂಚ್ ಮೇಲೆ ಕೂರ್ತಿನಿ ಅನ್ನಾ ಖುಷಿಗಿಂತ, ಪ್ರೈಮರಿ ಸಾಲಿಯೊಳಾಗ ಕೊಡ್ತಿದ್ದ ನೀಲಿ ಅಂಗಿ ಇನ್ಮೆಲೆ ಉಟ್ಗನಾಕಾಗಲ್ಲಲಾ ಅಂತ ಬೇಜಾರಾಗಿತ್ತು.
ಈ ಸಾಲ್ಯಾಗ ಕೊಡ್ತಿದ್ದ ನೀಲಿ ಅಂಗಿ ಉಟ್ಟುಕೊಂಡು ಸಾಲಿಗೊಗಾದು ಅಂದ್ರ ಅದೊಂಥರಾ ಖುಷಿ ಅನ್ನಿಸ್ತಿತ್ತು.
‘ನೀ ಏನ್ ಸಾಲಿ ಓದಿ, ಬಡದ್ ಬಕ್ಬಾರ್ಲಿಗೆ ಆಕ್ತಿಯನು!
ಸುಂಕ್ಯ, ಮನ್ಯಾಗ ಕುಂತ್ಗಂಡು ಅಡಗಿ ಮಾಡಾದು ಚಂದಾಗಿ ಕಲಕ,
ಮುಂದ್ ಬರಾ ಗಂಡಗ ಚೆಂದಾಗಿ ಉಣ್ಣಾಕ್ ಮಾಡಿ ಹಾಕುವಂತಿ,
ನೀವ್ ಏಟು ಓದಿದ್ರು ಆಟೆ! ಅರವತ್ತು ತಗದು, ಮದುವ್ಯಾಗಿ ಗಂಡನ ಮನಿ ಸೇರ್ತಿರಿ ಕೊನಿಗೆ’
ಅಂತ ಯಾವಾಗಲೂ ಮುಖ ತಿವ್ದು ಮಾತಾಡಸ್ತಿದ್ದ ದೊಡ್ಡಪ್ಪನ ಮುಂದ ಈ ನೀಲಿ ಕೊಳ್ಳಪಟ್ಟಿ ಇದ್ದ ಅಂಗಿ ಉಟ್ಟಗಂಡು, ಕೈಯ್ಯಾಗ ಬುಕ್ ಹಿಡ್ಕೊಂಡು, ಅವತ್ತಿನ ಪಾಠಾನೆಲ್ಲ ಓದಿಕ್ಯಂಡು, ಹೋಗುವಾಗೆಲ್ಲ ಮೈಯ್ಯಲ್ಲಿ ಅದೊಂಥರಾ ಹುಮ್ಮಸ್ಸು ಹರಿಯೊದು.
ಸಾಲಿಯಿಂದ ಬಂದ ಮೇಲೂ ಅದೇ ನೀಲಿ ಅಂಗಿನಾ ಉಟ್ಟಾಗೆಲ್ಲಾ ಅವ್ವ ‘ನೀನಿಗೇನ್ ಬಟ್ಟಿ ಬರಿ ಇಲ್ಲನು? ಗಂಡಸರಕ್ಯಂಡಂಗ ಅಂಗಿ ಆಕ್ಯಂದು ತಿರಗ್ತಿ ಅಲಾ!’ ಅಂತ ಬೈದಾಗೆಲ್ಲ ‘ಇದನ್ನ ಗಂಡಸರಷ್ಟೇ ಹಾಕೊದಿದ್ರೆ, ಎಲ್ಲಾರಿಗೆದುಕ್ ಕೊಡ್ಬೊಕಿತ್ತು, ಅಂತ ಎದುರಾಡಿದಾಗೆಲ್ಲ ಅವ್ವ, ‘ಏನಂತ ಹೊಟ್ಟೀಗೆ ಉರ್ಲಾಗಿ ಉಟ್ಟಿದೆನವಾ ನೀನು, ಊರ್ ಸತ್ತುಬುಳ, ಊರ್ ಮಂದಿ ಹೆಣ್ಮಕ್ಕಳನ್ನ ನೋಡು, ನಿನ್ನ ನೋಡಿಕ್ಯ, ಹುಟ್ಟಬಾರದ ಹುಟ್ಟಿ ನನ್ನೊಟ್ಯಾಗ, ಅಲ್ಲಿ ಹೊಲ್ದಾಗೂ ಗುದ್ಯಾಡಾದ, ಇಲ್ಲಿ ಮನ್ಯಾಗೂ ಇವಗಳ್ ಜೊತಿ ಏಗ್ಯಾಡಾದಾತು ಬಾಳೇವು’ ಅಂತ ಅವ್ವ ಅಳುತ್ತಿದ್ದಾಗೆಲ್ಲ, ಮುಂಜಾನೆಯಿಂದ ಬೂದಿ ತಗ್ಯಾದ್ರಿಂದ ಹಿಡದು, ರಾತ್ರಿ ಅಡಗಿವರಗೂ ಎಲ್ಲಾ ಕೆಲಸ ಮಾಡಿದ್ರೂನೂ ನಮ್ಮವ್ವ ನನ್ನ ಹಿಂಗ್ ಯಾಕ್ ಬೈತಾಳ ಅನ್ನೊದು ಅರ್ಥ ಆಗದೇ, ಈ ಕೊಳ್ಳಿ ಪಟ್ಟಿ ಇರೊ ಹುಡುಗೊರ್ ಅಂಗಿನಾ ಹಾಕಿದ್ರೆ ಹಿಂಗೆಲ್ಲಾ ಯಾಕ್ ಮಾಡ್ತಾರ ಅನ್ನೊ ಗೊಂದಲಗಳೆಲ್ಲ ತಲಿ ತಿಂದು ಜೀರಿಗಿ ಮಾಡ್ತಿದ್ವು.

ಆದ್ರ ಈ ಸಾಲಿ ಅಂಗಿ ಹಾಕಿ, ಕ್ಲಾಸಿನೊಳಾಗ ಲೀಡರ್ ಆಗಿ, ಹತ್ತಕ್ಕತ್ತು ಮಾರ್ಕ್ಸ್ ತಗೊಂಡಾಗ, ಅಡಗಿ ಮನಿಯೊಳಾಗ ನನ್ನ ಪಾಠ ಕೇಳ್ತಿದ್ದ ಒಲಿ, ಉದಗೊಳವಿ, ಕಂಬ, ಕಿಡಕಿ, ಗಂಗಾಳ, ಕಸಬಾರಿಗಿ, ಬೂದಿ, ವಿಜ್ಜಮ್ಮಕ್ಕ, ಇವೆಲ್ಲಾನೂ ನಾ ಒಳ್ಳೆ ಮಾರ್ಕ್ಸ್ ತಗದಿದ್ದಕ್ಕ ಖುಷಿ ಪಡ್ಬೊದಲಾ ಅಂತ ನೆನೆಸಿಕೊಂಡು ಒಳಗೊಳಗೆ ಖುಷಿಯಾಗೊದು. ಹಾಗೆ ಸಾಲಿಯೊಳಾಗ ಪ್ರೇಯರ್ ನೀನಾ ಮಾಡಿಸ್ಬೇಕು ಇನ್ಮೆಲಿಂದ ಅಂತ ಹೇಳಿದಾಗ ಮತ್ತಷ್ಟು ಹಿಗ್ಗಿದ್ದೆ, ಹೀಗೆ ಪ್ರೇಯರ್ ಮಾಡಿಸುವಾಗ,
“ಭಾರತೀಯರಾದ ನಾವೆಲ್ಲರೂ ಸಮಾನರು” ಅಂತ ಒತ್ತಿ ಒತ್ತಿ ಹೇಳಸ್ತಿದ್ರು, ಆಗೆಲ್ಲಾ ಮತ್ತದೆ ಪ್ರಶ್ನೆ ಸುಳದಾಡೊದು;
ಈ ಎಲ್ಲಾ ಸಮಾನರೊಳಾಗ “ಆಕಿ” ನೂ ಇರಬಹುದಾ?

ಸುವರ್ಣ ಚೆಳ್ಳೂರು ಕೊಪ್ಪಳ ಜಿಲ್ಲೆ ಕಾರಟಗಿ ತಾಲ್ಲೂಕಿನ ಚಳ್ಳೂರಿನವರು. ಈಗ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ವಿಭಾಗದ ಸಂಶೋಧನಾ ವಿದ್ಯಾರ್ಥಿ. ಕಲೆ ಸಾಹಿತ್ಯ ಫೋಟೊಗ್ರಫಿ ಮುಖ್ಯ ಆಸಕ್ತಿಗಳು. ಇವರ ‘ಕಂಬದ ಹಕ್ಕಿ’ ಕಥೆಗೆ ‘ಸಂಗಾತ ಕಥಾ ಪುರಸ್ಕಾರ ‘ (2021), ‘ಕನಕಾಂಬರ’ ಕಥೆಗೆ ಧಾರವಾಡದ ವಿದ್ಯಾವರ್ಧಕ ಸಂಘದಿಂದ ‘ಶ್ರೀಮತಿ ಶಾಂತಾದೇವಿ ಕಣವಿ ಕಥಾ ಪುರಸ್ಕಾರ’ ದೊರಕಿದೆ (2022). ‘ಕನಕಾಂಬರ’ ಹಾಗೂ ‘ಮಾರ್ನಾಮಿ’ ಸಣ್ಣ ಕಥೆಗಳು ToTo Funds the Arts’ India ಅವರು ಕೊಡುವ ಕನ್ನಡ ಸೃಜನಶೀಲ ಬರವಣಿಗೆ (Kannada Creative writing) ವಿಭಾಗದಲ್ಲಿ 2023 ಮತ್ತು 2025 ರಲ್ಲಿ ಅಂತಿಮ ಹಂತಕ್ಕೆ (Short List) ಆಯ್ಕೆ ಆಗಿದೆ. ಇವರ ಬರಹಗಳು ಕೆಲವು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ.
