ಬೆರಳ ತುದಿಯಲ್ಲಿ ನೂರಾರು ಅರಿವಿನ ಹರಹುಗಳು ಹರಡಿಕೊಳ್ಳುವ ಕಾಲದಲ್ಲಿ ಇಂತಹ ಮಾಹಿತಿಗಳು ನಮಗೆ ಬೇಕೆ? ಎಂದು ಪ್ರಶ್ನಿಸಿಕೊಂಡರೆ ಎಂದಿಗಿಂತಲೂ ಇಂದು ಈ ರೀತಿಯ ಪುಸ್ತಕಗಳು ಹೆಚ್ಚು ಅವಶ್ಯಕ ಎನಿಸುವುದು. ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ ಎಲ್ಲರೂ ಸ್ವಯಂ ವೈದ್ಯರಂತೆ ವರ್ತಿಸುತ್ತಿದ್ದಾರೆ. ಅಂತರ್ಜಾಲವೆಂಬ ಆಕಾಶದಲ್ಲಿ ತುಂಬಿರುವ ಮಾಹಿತಿಗಳಲ್ಲಿ ಸತ್ಯಕ್ಕಿಂತಲೂ ಸುಳ್ಳಿನ ವೈಭವೀಕರಣವೇ ಹೆಚ್ಚು ತುಂಬಿದೆ. ಅವುಗಳ ಮೊರೆಹೋಗಿ ತಪ್ಪು ಜಾಲಗಳಲ್ಲಿ ಇಂದಿನ ಕಿಶೋರಿಯರು ಸಿಲುಕಿರುವ ಎಷ್ಟೋ ಉದಾಹರಣೆಗಳು ನಮ್ಮ ಎದುರಿಗಿವೆ. ತಿಳಿದವರು, ತಿಳಿಯದವರಿಗೆ, ತಿಳಿಯುವಂತೆ ತಿಳಿಸಿದರೆ ಮಾತ್ರ ಅದು ‘ತಿಳುವಳಿಕೆ’ ಅನಿಸಿಕೊಳ್ಳುತ್ತದೆ.
ಡಾ. ರಾಜಲಕ್ಷ್ಮಿ ಬರೆದ “ವಾತ್ಸಲ್ಯದ ಒಸಗೆ” ಕೃತಿಯ ಕುರಿತು ಸುಧಾ ಆಡುಕಳ ಬರಹ
ಕೆಲವು ತಿಂಗಳುಗಳ ಹಿಂದೆ ನಡೆದ ವಿಚಾರ ಸಂಕಿರಣವೊಂದರಲ್ಲಿ ಡಾ. ಅನುಪಮಾ ನಿರಂಜನ ಅವರ ಸಾಹಿತ್ಯದ ಬಗ್ಗೆ ನಡೆದ ಚರ್ಚೆಯಲ್ಲಿ ಅವರ ವೈದ್ಯಕೀಯ ಬರಹಗಳ ಬಗ್ಗೆ ಮಾತು ಬಂತು. ನಾವೆಲ್ಲ ಬೆಳೆಯುವ ಕಾಲಕ್ಕಾಗಲೇ ಮನೆಯಲ್ಲಿ ಹೆಣ್ಣೊಬ್ಬಳು ಮೈನೆರೆದರೆ ಅವಳ ಅಕ್ಕಂದಿರು ತಮ್ಮ ಬಟ್ಟೆಯಡಿಯಲ್ಲಿ ಅಡಗಿಸಿಟ್ಟು ಓದಿದ ‘ಕೇಳು ಕಿಶೋರಿ’ ಎಂಬ ಪುಸ್ತಕವನ್ನು ಅವಳಿಗೆ ಕೈದಾಟಿಸುತ್ತಿದ್ದರು. ಮದುವೆ ನಿಗದಿಯಾಗಿದೆಯೆಂದು ಗೊತ್ತಾದರೆ ಗೆಳತಿಯರಲ್ಲಿ ಯಾರಾದರೊಬ್ಬಳು ‘ವಧುವಿಗೆ ಕಿವಿಮಾತು’ ಪುಸ್ತಕವನ್ನು ಉಡುಗೊರೆಯಾಗಿ ಕೊಡದಿರುತ್ತಿರಲಿಲ್ಲ. ಹಾಗೆ ಯಾರಿಗೋ ನಾನದನ್ನು ಕೊಡಲು ತಂದು ಆಫೀಸಿನ ಟೇಬಲ್ ಮೇಲೆ ಇಟ್ಟಾಗ ಅದರ ಮೇಲೆ ಕಣ್ಣು ಹಾಯಿಸಿದ ಪುರುಷ ಸಹೋದ್ಯೋಗಿಯೊಬ್ಬರು, “ಇದರಲ್ಲಿ ಹೊಸದಾಗಿ ಮದುವೆಯಾದ ವಧು ತನ್ನ ಅತ್ತೆಯನ್ನು ವರ್ತನೆಯ ಮೂಲಕವೇ ಹೇಗೆ ಗೆಲ್ಲಬೇಕು? ಎಂಬುದರ ಬಗೆಗೆಲ್ಲ ಸಲಹೆಗಳಿವೆ. ಆದರೆ ಅದನ್ನು ಅವಳ ಅತ್ತೆಯೂ ಈಗಾಗಲೇ ಓದಿರುವುದರಿಂದ ವರ್ಕೌಟ್ ಆಗಲ್ಲ.” ಎಂದು ನಕ್ಕಿದ್ದರು. ಅಂದರೆ ಆ ಪುಸ್ತಕವು ಎರಡು ತಲೆಮಾರುಗಳಿಂದ ಹೆಂಗಳೆಯರ ಸಂಗಾತಿಯಾಗಿತ್ತು ಎಂಬುದನ್ನವರು ಸೂಚ್ಯವಾಗಿ ಹೇಳಿದ್ದರು. ತನ್ನ ಮುದ್ದಿನ ಮಡದಿ ಗರ್ಭಿಣಿಯೆಂದು ತಿಳಿದಾಗ ಅಲ್ಲಿಯವರೆಗೂ ಪುಸ್ತಕದಂಗಡಿಯ ಮುಖ ನೋಡಿರದಿದ್ದ ಗಂಡನೂ ಮೈಸೂರು ಪಾಕ್ ಮತ್ತು ಮಲ್ಲಿಗೆಯ ದಂಡೆಯೊಂದಿಗೆ ‘ತಾಯಿ- ಮಗು’ ಪುಸ್ತಕವನ್ನೂ ಮನೆಗೆ ತರುವುದು ಖಾಯಂ ಆಗಿತ್ತು. ಇವೆಲ್ಲವೂ ಉಪನ್ಯಾಸ ಕೇಳುತ್ತಿದ್ದ ನನ್ನ ಮನಸ್ಸಿನೊಳಗೆ ಹಾದು ಹೋಗುತ್ತಿದ್ದಂತೆಯೇ ಅನುಪಮಾ ಬರೆದಂತಹ ವೈದ್ಯಕೀಯ ಸಾಹಿತ್ಯವು ಮುಂದೆ ಬರಲೇ ಇಲ್ಲ ಎಂಬ ಮಾತುಗಳೊಂದಿಗೆ ಈ ಕಾಲಕ್ಕೆ ತಕ್ಕಂತೆ ಅದನ್ನು ಮಾರ್ಪಡಿಸಿ ಮತ್ತೆ ಪ್ರಕಟಿಸಬಹುದೆ? ಎಂಬ ವಿಷಯದ ಬಗೆಗೂ ಚರ್ಚೆಗಳು ನಡೆದವು. ಏಕೆಂದರೆ ವೈದ್ಯಕೀಯ ಮಾಹಿತಿಗಳು ಕಾಲಕ್ಕೆ ತಕ್ಕಂತೆ ಮಾರ್ಪಡಬೇಕಾದ ಅಗತ್ಯವಿರುತ್ತದೆ. ಈ ಕಾಲಕ್ಕೆ ಇಂಥದೊಂದು ಪುಸ್ತಕ ಅವಶ್ಯವಿದೆಯೆಂದು ಹುಡುಗಿಯರ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ನನಗೆ ಅನೇಕ ಸಲ ಅನಿಸಿತ್ತು. ಅಚ್ಚರಿಯೆಂಬಂತೆ ಅದೇ ತಿಂಗಳಿನಲ್ಲಿ ನನ್ನ ಓದುವ ಕೋಣೆಗೆ ಬಂದ ಪುಸ್ತಕ ‘ವಾತ್ಸಲ್ಯದ ಒಸಗೆ’
ಉಡುಪಿಯಲ್ಲಿ ನೆಲೆಸಿರುವ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರಾದ ಡಾ. ರಾಜಲಕ್ಷ್ಮಿಯವರು ನಗರದಲ್ಲಿದ್ದೂ ಗ್ರಾಮೀಣ ಜನರ ನೆರವಿಗೆ ಒದಗಬೇಕೆಂಬ ಅಭಿಲಾಷೆಯುಳ್ಳವರು. ಉಡುಪಿಯಿಂದ ಹೊರಗಿರುವ ಸಂತೆಕಟ್ಟೆಯೆಂಬ ಪುಟ್ಟ ಊರಿನಲ್ಲಿ ‘ವಾತ್ಸಲ್ಯ’ ಎಂಬ ಕ್ಲಿನಿಕ್ ಆರಂಭಿಸಿ ಎರಡು ದಶಕಗಳಿಂದ ಮಹಿಳೆಯರಿಗೆ ವಾತ್ಸಲ್ಯದ ಸೆಲೆಯಾಗಿ ಒದಗಿದವರು. ಭಾರತೀಯ ವೈದ್ಯಕೀಯ ಸಂಸ್ಥೆ, ಉಡುಪಿ ಶಾಖೆಯ ಅಧ್ಯಕ್ಷರಾಗಿಯೂ ಕೆಲಸ ಮಾಡಿರುವ ಸಾಹಿತ್ಯದಲ್ಲಿಯೂ ವಿಶೇಷ ಆಸಕ್ತಿಯನ್ನು ಹೊಂದಿರುವವರು. ಶಾಲಾ-ಕಾಲೇಜುಗಳ ಮಕ್ಕಳಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಮೂಡಿಸುವ ಉತ್ಸಾಹದಲ್ಲಿರುವವರು. ಹೀಗೆ ತಮ್ಮ ಬಹುಮುಖಿಯಾದ ಕೆಲಸಗಳ ಮೂಲಕ ದಕ್ಕಿದ ಅನುಭವಗಳ ಸಾರವನ್ನು ಈ ಪುಸ್ತಕದಲ್ಲಿ ಭಟ್ಟಿಯಿಳಿಸಿದ್ದಾರೆ. ನಾನು ಮೇಲಿನ ಮೂರು ಪುಸ್ತಕಗಳನ್ನು ಉಲ್ಲೇಖಿಸಿದ ಕಾರಣವೆಂದರೆ ಈ ಪುಸ್ತಕವು ಆ ಮೂರೂ ಪುಸ್ತಕಗಳ ವ್ಯಾಪ್ತಿಯನ್ನು ತನ್ನ ಒಡಲಿನಲ್ಲಿ ಹುದುಗಿಸಿಕೊಂಡಿದೆ. ಹೆಣ್ಣು ಭ್ರೂಣವೊಂದು ಅಮ್ಮನ ಗರ್ಭದಲ್ಲಿ ಮೂಡುವಂದಿನಿಂದ ಅವಳ ಬಾಲ್ಯ, ಹದಿಹರೆಯ, ತಾಯ್ತನ, ಋತುಬಂಧ ಈ ಹಂತದಲ್ಲಿ ನಡೆಯುವ ದೈಹಿಕ, ಮಾನಸಿಕ ಬದಲಾವಣೆಗಳು, ಕಾರಣಗಳು, ತಳಮಳಗಳು, ವಹಿಸಬೇಕಾದ ಕಾಳಜಿಗಳು, ಕಾಲಕಾಲಕ್ಕೆ ಅಗತ್ಯವಾದ ವಾಕ್ಸಿನೇಷನ್‌ಗಳು ಎಲ್ಲವನ್ನೂ ಒಂದೇ ಹೊತ್ತಿಗೆಯಲ್ಲಿ ಕ್ರೋಢೀಕರಿಸುವುದರೊಂದಿಗೆ ಆರೋಗ್ಯಕರ ಜೀವನಶೈಲಿಯ ಬಗೆಗೆ ಸಲಹೆಗಳನ್ನೂ ಈ ಪುಸ್ತಕವು ಒಳಗೊಂಡಿದೆ.
ಬೆರಳ ತುದಿಯಲ್ಲಿ ನೂರಾರು ಅರಿವಿನ ಹರಹುಗಳು ಹರಡಿಕೊಳ್ಳುವ ಕಾಲದಲ್ಲಿ ಇಂತಹ ಮಾಹಿತಿಗಳು ನಮಗೆ ಬೇಕೆ? ಎಂದು ಪ್ರಶ್ನಿಸಿಕೊಂಡರೆ ಎಂದಿಗಿಂತಲೂ ಇಂದು ಈ ರೀತಿಯ ಪುಸ್ತಕಗಳು ಹೆಚ್ಚು ಅವಶ್ಯಕ ಎನಿಸುವುದು. ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ ಎಲ್ಲರೂ ಸ್ವಯಂ ವೈದ್ಯರಂತೆ ವರ್ತಿಸುತ್ತಿದ್ದಾರೆ. ಅಂತರ್ಜಾಲವೆಂಬ ಆಕಾಶದಲ್ಲಿ ತುಂಬಿರುವ ಮಾಹಿತಿಗಳಲ್ಲಿ ಸತ್ಯಕ್ಕಿಂತಲೂ ಸುಳ್ಳಿನ ವೈಭವೀಕರಣವೇ ಹೆಚ್ಚು ತುಂಬಿದೆ. ಅವುಗಳ ಮೊರೆಹೋಗಿ ತಪ್ಪು ಜಾಲಗಳಲ್ಲಿ ಇಂದಿನ ಕಿಶೋರಿಯರು ಸಿಲುಕಿರುವ ಎಷ್ಟೋ ಉದಾಹರಣೆಗಳು ನಮ್ಮ ಎದುರಿಗಿವೆ. ತಿಳಿದವರು, ತಿಳಿಯದವರಿಗೆ, ತಿಳಿಯುವಂತೆ ತಿಳಿಸಿದರೆ ಮಾತ್ರ ಅದು ‘ತಿಳುವಳಿಕೆ’ ಅನಿಸಿಕೊಳ್ಳುತ್ತದೆ. ಆ ದೃಷ್ಟಿಯಿಂದ ನೋಡಿದರೆ ಹೆಣ್ಣುಗಳಿರುವ ಎಲ್ಲ ಮನೆಗಳಲ್ಲಿ ಅಗತ್ಯವಾಗಿ ಇರಲೇಬೇಕಾದ ಪುಸ್ತಕವಿದು.
ಈ ಪುಸ್ತಕದ ಮೊದಲ ಭಾಗದಲ್ಲಿ ಹುಡುಗಿಯೊಬ್ಬಳ ಬಾಲ್ಯ, ಮುಟ್ಟಿನ ಬಗೆಗಿನ ವಿವರಗಳು, ಮುಟ್ಟಿನ ತೊಂದರೆಗಳು, ನೈರ್ಮಲ್ಯ ಕಾಪಾಡುವಿಕೆ ಮುಂತಾದುವುಗಳ ಬಗೆಗಿನ ಮಾಹಿತಿಗಳಿವೆ. ಹೊಸಕಾಲದ ಸಮಸ್ಯೆಗಳೆಂದು ಹೆಸರಿಸಲ್ಪಡುವ ಪಿ. ಸಿ. ಓ. ಡಿ ಮತ್ತು ಪಿ. ಸಿ. ಓ. ಎಸ್. ಬಗೆಗೂ ಇಲ್ಲಿ ಚರ್ಚಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯವಾಗುತ್ತಿರುವ ಎಚ್. ಪಿ. ವಿ. ಲಸಿಕೆ ಮತ್ತು ಮುಟ್ಟಿನ ಕಪ್‌ಗಳ ಬಳಕೆಯ ಬಗೆಗೂ ಮಾಹಿತಿಗಳಿವೆ. ಇದರೊಂದಿಗೆ ಹದಿಹರೆಯದೊಂದಿಗೆ ಬೆರೆತುಕೊಂಡಿರುವ ಮೊಡವೆ ಮತ್ತು ಟೀನೇಜರ್‌ಗಳನ್ನು ಹೈರಾಣು ಮಾಡುವ ಮಾನಸಿಕ ತುಮುಲಗಳ ಬಗೆಗೂ ಇಲ್ಲಿ ಚರ್ಚಿಸಲಾಗಿದೆ. ಹದಿಹರೆಯದ ಗರ್ಭಧಾರಣೆಯ ತಂದಿಡುವ ಸಮಸ್ಯೆಗಳ ಸರಮಾಲೆಯನ್ನೂ ಚರ್ಚಿಸಲಾಗಿದೆ.
ಎರಡನೆಯ ಭಾಗವು ತಾಯ್ತನ ಮತ್ತು ಅದರ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸುತ್ತದೆ. ತೊಡಕಿನ ಗರ್ಭಧಾರಣೆ, ಮಧುಮೇಹ ತಂದಿಡುವ ಆತಂಕ, ಗರ್ಭಿಣಿಯರ ಆಹಾರ, ವ್ಯಾಯಾಮ, ಹೆರಿಗೆಯಲ್ಲಿ ವಹಿಸಬೇಕಾದ ಎಚ್ಚರಿಕೆಗಳು, ಬಾಣಂತನದ ಬಗೆಗಿನ ಹುಸಿನಂಬಿಕೆಗಳು, ಅವಧಿ ಪೂರ್ವ ಶಿಶುವಿನ ಕಾಂಗರೂ ಆರೈಕೆ, ಸಂತಾನಹೀನತೆಯಲ್ಲಿ ಹೆಣ್ಣಿನ ಪಾತ್ರವೇನು? ಎಂಬುದರ ಬಗೆಗೆಲ್ಲ ವೈಜ್ಞಾನಿಕ ಮಾಹಿತಿಗಳನ್ನು ಸರಳ ವಾಕ್ಯಗಳಲ್ಲಿ ಸಾಮಾನ್ಯರಿಗೂ ಅರ್ಥವಾಗುವಂತೆ ವಿವರಿಸಲಾಗಿದೆ. ಕುಟುಂಬ ನಿಯಂತ್ರಣ ವಿಧಾನಗಳ ಬಗೆಗಿನ ಸಂಪೂರ್ಣ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ. ಮಗುವೊಂದರ ಲಿಂಗನಿರ್ಧಾರವಾಗುವುದು ತಂದೆಯಿಂದ ಎಂಬ ಸೂಕ್ಷ್ಮ ಮಾಹಿತಿಯೂ ಸೇರಿದಂತೆ ಮಗುವನ್ನು ಪಡೆಯುವ ನಿರ್ಧಾರ ಕೈಗೊಂಡಾಗಲೇ ವೈದ್ಯರನ್ನು ಸಂಪರ್ಕಿಸಬೇಕಾದ ಅನಿವಾರ್ಯತೆಗಳ ಬಗೆಗೂ ವಿವರಿಸಲಾಗಿದೆ.
ಅಣುಕುಟುಂಬಗಳು ಸಾಮಾನ್ಯವಾಗುತ್ತಿರುವ ಈ ಕಾಲದಲ್ಲಿ ಮಧ್ಯವಯಸ್ಸಿನಲ್ಲಿ ಮಹಿಳೆಯರನ್ನು ಅತೀವವಾಗಿ ಕಾಡುವ ‘ಮೆನೋಪಾಸ್ʼ ಹಂತದ ಬಗ್ಗೆ ಮುಂದಿನ ಭಾಗದಲ್ಲಿ ತಿಳಿಸಲಾಗಿದೆ. ಹೆರಿಗೆ, ಕುಟುಂಬಯೋಜನೆಗಳೆಲ್ಲ ಮುಗಿದ ಹೊತ್ತಿನಲ್ಲಿ ತಮ್ಮೊಳಗೊಂದು ಗರ್ಭಕೋಶವೆಂಬ ಅಂಗವಿದೆ ಎಂಬುದನ್ನೇ ಹೆಂಗಳೆಯರು ಮರೆತಿರುತ್ತಾರೆ. ಇದೇ ಸಮಯವೆಂದು ಆ ಹೊತ್ತಿನಲ್ಲಿಯೇ ಕ್ಯಾನ್ಸರ್ ಎಂಬ ಮಹಾಮಾರಿ ಗರ್ಭಕೊರಳನ್ನು ಪ್ರವೇಶಿಸುವ ಅಪಾಯವಿರುತ್ತದೆ. ಗರ್ಭಾಶಯದ ಗಡ್ಡೆಗಳು ದಪ್ಪಗಾಗಿರುವ ನಡುವಿನಲ್ಲಿ ಸದ್ದಿಲ್ಲದೇ ಕುಳಿತು ಕಾರುಬಾರು ನಡೆಸತೊಡಗುತ್ತವೆ. ಇದುವರೆಗೂ ನಿಯಮಿತವಾಗಿ ಸುರಿಯುತ್ತಿದ್ದ ಹೆಣ್ಣು ಹಾರ್ಮೋನುಗಳು ತಮ್ಮ ನಡೆಬದಲಿಸಿ ದೈಹಿಕ, ಮಾನಸಿಕ ತಲ್ಲಣಗಳನ್ನು, ಖಿನ್ನತೆಯ ವ್ಯಸನಗಳನ್ನು ತರುವ ಅಪಾಯವಿರುತ್ತದೆ. ಈ ನಡುಹರೆಯದ ನಿರ್ವಹಣೆ ಮತ್ತು ಅದಕ್ಕೆ ಮನೆಯಲ್ಲಿರುವ ಇತರ ಸದಸ್ಯರು ಸಹಕರಿಸಬೇಕಾದ ಬಗೆಯನ್ನು ಈ ಭಾಗವು ವಿವರಿಸುತ್ತದೆ.
ಪುಸ್ತಕದ ಕೊನೆಯ ಭಾಗದಲ್ಲಿ ಮಹಿಳೆಯ ಸಾಮಾನ್ಯ ಆರೋಗ್ಯದ ಬಗ್ಗೆ ವಿವರಿಸಲಾಗಿದೆ. ಹೆಣ್ಮಕ್ಕಳನ್ನು ಪದೇ ಪದೇ ಕಾಡುವ ರಕ್ತಹೀನತೆ, ಬೊಜ್ಜಿನ ಸಮಸ್ಯೆ, ಬೆನ್ನು ನೋವು, ಸಂತಾನಹೀನತೆಯಲ್ಲಿ ಪ್ಲಾಸ್ಟಿಕ್‌ನ ಪಾತ್ರ, ತಂಬಾಕು ಮೊದಲಾದ ಮಾದಕ ವ್ಯಸನಗಳು ತಂದಿಡುವ ಅಪಾಯಗಳನ್ನು ಇಲ್ಲಿ ಚರ್ಚಿಸಲಾಗಿದೆ. ಮಹಿಳಾ ದೌರ್ಜನ್ಯ, ಡಿಜಿಟಲ್ ದೌರ್ಜನ್ಯ, ಪೋಕ್ಸೋ ಕಾಯಿದೆ ಮತ್ತು ಮಹಿಳಾ ದೌರ್ಜನ್ಯ ತಡೆ ಕಾಯಿದೆಗಳ ವಿವಿಧ ಕಲಂಗಳ ಬಗೆಗೂ ಇಲ್ಲಿ ವಿವರಿಸಲಾಗಿದೆ. ದೌರ್ಜನ್ಯಕ್ಕೊಳಗಾದ ಹೆಣ್ಣು ಮಗಳೊಬ್ಬಳನ್ನು ಆರೋಗ್ಯಕರ ಸಮಾಜವು ನೋಡಬೇಕಾದ ಬಗೆ ಯಾವುದು ಎಂಬುದರ ಬಗೆಗೂ ಬೆಳಕು ಚೆಲ್ಲಲಾಗಿದೆ. ಒಟ್ಟಾರೆಯಾಗಿ ಹೆಣ್ಣು ಮಗುವೊಂದು ಮನೆಯಲ್ಲಿದ್ದರೆ ಆಕರ ಗ್ರಂಥವಾಗಿ ಒದಗಿ ಬರುವ ಪುಸ್ತಕವಿದು.

ಡಾ. ರಾಜಲಕ್ಷ್ಮಿಯವರು ಉತ್ತಮ ವಾಗ್ಮಿಯೂ ಹೌದು. ಶಾಲಾ – ಕಾಲೇಜುಗಳಲ್ಲಿ, ಸಮುದಾಯ ಆರೋಗ್ಯ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುವುದಲ್ಲದೇ ಅನೇಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯರು. ಈ ಎಲ್ಲ ನೆಲೆಗಳಲ್ಲಿ ರೂಪುಗೊಂಡ ಸರಳ ಭಾಷೆ ಈ ಪುಸ್ತಕವನ್ನೊಂದು ವೈದ್ಯಕೀಯ ಮಾಹಿತಿಯಾಗಿಸದೇ ಸಾಹಿತ್ಯ ಕೃತಿಯನ್ನಾಗಿ ನೇರ್ಪುಗೊಳಿಸಿದೆ. ಹೇಳಬೇಕಾದ ವಿಷಯವನ್ನು ಸರಳ ವಾಕ್ಯಗಳಲ್ಲಿ ನಿಖರವಾಗಿ ಹೇಳುವ ಕಲೆ ಅವರಿಗೆ ಸಿದ್ಧಿಸಿದೆ. ಪುಸ್ತಕದಲ್ಲಿ ಅನೇಕ ರೇಖಾಚಿತ್ರಗಳನ್ನು ಬಳಸಲಾಗಿದ್ದು ಇನ್ನಷ್ಟು ಒಳ್ಳೆಯ ಚಿತ್ರಗಳ ಆಯ್ಕೆಯ ಅವಕಾಶವಿತ್ತು ಅನಿಸುತ್ತದೆ. ಹುಡುಗಿಯರ ಕಾಲೇಜಿನಲ್ಲಿ ಕೆಲಸ ಮಾಡುತ್ತಿರುವ ನನ್ನಲ್ಲಿ ಪ್ರಾಂಶುಪಾಲರು ಲೈಬ್ರರಿಗೆ ತರಿಸಬೇಕಾದ ಪುಸ್ತಕಗಳ ಪಟ್ಟಿಯನ್ನು ಕೊಡಲು ಹೇಳಿದಾಗ ಈ ಸಲ ಮೊದಲ ಸ್ಥಾನದಲ್ಲಿದ್ದುದು ‘ವಾತ್ಸಲ್ಯದ ಒಸಗೆ’ಯೇ ಆಗಿತ್ತು.
(ಕೃತಿ: ವಾತ್ಸಲ್ಯದ ಒಸಗೆ, ಲೇಖಕರು: ಡಾ. ರಾಜಲಕ್ಷ್ಮಿ, ಪ್ರಕಾಶಕರು: ಸಾರಂಗ ಪ್ರಕಾಶನ, ಉಡುಪಿ, ಪುಟಗಳು: 168, ಬೆಲೆ: 210/-)

ಸುಧಾ ಆಡುಕಳ ಮೂಲತಃ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಳದವರು. ಪ್ರಸ್ತುತ ಉಡುಪಿಯಲ್ಲಿ ಗಣಿತ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಾಹಿತ್ಯದಲ್ಲಿ ಆಸಕ್ತಿ. ಬಕುಲದ ಬಾಗಿಲಿನಿಂದ’ ಎಂಬ ಅಂಕಣ ಬರಹವನ್ನು ಬಹುರೂಪಿ ಪ್ರಕಟಿಸಿದೆ. ಅನೇಕ ಕಥೆ, ಕವನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

