ಸಾಮಾನ್ಯವಾಗಿ ಇಂತಹ ದಿನಗಳಂದು ವಿದ್ಯಾರ್ಥಿಗಳು ತಮ್ಮ ಗೆಳತಿಯರೊಡನೆ ರಾತ್ರಿ ಸಂಚಾರ ಮಾಡುವುದು ಪದ್ಧತಿ. ಬೀದಿಗಳಲ್ಲಿ ತಿರುಗಿ ಯಾವುದಾದರೂ ಪಾರ್ಕಿನಲ್ಲಿ ಎಲ್ಲರೂ ಕುಳಿತು ಮೋಜುಮಾಡುವ ಪರಿಪಾಠ. ಕೆಲವರು ಕದ್ದು ಪಾನೀಯಗಳನ್ನು ತಂದು ಎಲ್ಲರೂ ಕುಡಿದು ಸಂತೋಷ ಪಡುತ್ತಾರೆ. ಸಿನೆಮಾ ನೋಡುತ್ತಾರೆ. ಹಿಂದೆ ಸುರೇಶ್ ಕೂಡ ಇಂತಹ ಹುಡುಗರನ್ನು ಕೂಡಿದ್ದುಂಟು. ಆದರೆ ಇಂದು ಅವನಿಗೆ ಏನೂ ಬೇಕಾಗಿರಲಿಲ್ಲ. ಶಾಲೆಯ ಫಾರ್ಮಲ್ ವ್ಯರ್ಥವಾಗಿತ್ತು. ತಾನು ಮೆರೆಯಬೇಕಾಗಿದ್ದ ಸಂಜೆ ಹೇಯವಾಗಿತ್ತು.
ಸಿಡ್ನಿ ಶ್ರೀನಿವಾಸ್ ಬರೆದ ಈ ಕತೆ “ಎರವಲು ಗೆಳತಿ” ನಿಮ್ಮ ಈ ಭಾನುವಾರದ ಓದಿಗೆ
ತಲೆಯ ಮೇಲೆ ಕೈಯಿಟ್ಟು ಕುಳಿತ ಸುರೇಶ್. ತರಗತಿಯಲ್ಲಿ ಗಣಿತದ ಪಾಠ ನಡೆಯುತ್ತಿದೆ. ಉಪಾಧ್ಯಾಯರು ಪೈಥಾಗೊರಸ್ ಪ್ರಮೇಯವನ್ನು ಬೋಧಿಸುತ್ತಿದ್ದಾರೆ. ಇವನಿಗೆ ಅದರತ್ತ ಯಾವ ಗಮನವೂ ಇಲ್ಲ. ಪರಿಹಾರವೇನು ಈಗ? ಏನು ಮಾಡುವುದೀಗ? ಅವನ ಚಿಂತೆ ಪ್ರಬಲವಾಯಿತು.
ಇನ್ನು ಹದಿನೈದು ದಿನಕ್ಕೆ ಹಿರಿಯ ವಿದ್ಯಾರ್ಥಿಗಳನ್ನು ಬೀಳ್ಕೊಡಲು ಶಾಲೆಯ ಫಾರ್ಮಲ್ ಆಗುವುದಿದೆ. ವೈಭವದ ಸಮಾರಂಭ ಅದು. ಅಲ್ಲಿಗೆ ಬರುವ ಹುಡುಗರೆಲ್ಲಾ ತಮ್ಮ ಗರ್ಲ್ ಫ್ರೆಂಡುಗಳನ್ನು ಕರೆದುಕೊಂಡು ಬರುತ್ತಾರೆ. ನಾನು ಯಾರನ್ನು ಕರೆತರಲಿ? ಮಿಕ್ಕವರನ್ನು ಮೀರಿಸುವಂತೆ ನನ್ನಲ್ಲಿ ಸೂಟು ಬೂಟು ಎಲ್ಲಾ ಇವೆ. ಅಲ್ಲದೆ ನಾನು ತರಗತಿಗೆ ಮೊದಲ ಸ್ಥಾನ ಗಳಿಸಿದ್ದೇನೆ. ಗೆಳೆಯರಾದ ಸ್ಟೀವನ್, ಜಾರ್ಜ್, ಫಿಲಿಪ್ ಎಲ್ಲರೂ ಆಗಲೇ ಕ್ರಿಕೆಟ್ ಮ್ಯಾಚು, ಈಜು ಸ್ಪರ್ಧೆ, ಪಿಕ್‌ನಿಕ್‌ಗಳಿಗೆ ತಂತಮ್ಮ ಗೆಳತಿಯರನ್ನು ಕರೆತಂದು ಮೆರೆಸಿದ್ದಾರೆ. ತನ್ನ ಸ್ನೇಹಿತನೂ ಅಲ್ಲ, ವೈರಿಯೂ ಅಲ್ಲ ಎನಿಸಿದ ರವಿ ಕೂಡ ತನ್ನ ಗೆಳತಿಯ ಬಗ್ಗೆ ಕೊಚ್ಚಿಕೊಳ್ಳುತ್ತಾನೆ. ಎಲ್ಲರೂ ತಿಂದು, ಕುಡಿದು, ಕುಣಿದು ಕುಪ್ಪಳಿಸಿ ಮೋಜುಮಾಡುತ್ತಾರೆ. ನಾನು ಏಕಾಂಗಿಯಾಗಿ ಹೋಗಬೇಕೆ? ಮಿಕ್ಕವರು ಮಾಡುವುದನ್ನೆಲ್ಲಾ ನೋಡಿಕೊಂಡು ಸಂತೋಷ ಪಡಬೇಕೆ? ನಾನೊಬ್ಬ ಮೂರ್ಖ. ಮುಂದಿನ ವರ್ಷ ಕಾಲೇಜಿಗೆ ಹೋಗುತ್ತೇನೆ. ಇನ್ನೂ ಸಂಗಾತಿಯೊಬ್ಬಳು ಬೇಡವೇ? ಏಕೆ ಹುಡುಕಿಕೊಳ್ಳಲಿಲ್ಲ? ಬರೀ ಓದೇ ಸಾಕೇ? ಅವನ ಅನ್ನಿಸಿಕೆ ಸಹಜವೆ. ಹೆಚ್ ಎಸ್ ಸಿ ಮುಗಿಸುವ ವೇಳೆಗೆ ವಿದ್ಯಾರ್ಥಿಗಳ ವಯಸ್ಸು ಹದಿನೇಳು ಅಥವಾ ಹದಿನೆಂಟು. ಈ ವಯಸ್ಸಿನ ಸ್ಥಳೀಯ ಹುಡುಗ ಹುಡುಗಿಯರಿಗೆ ಖಂಡಿತವಾಗಿ ಅವರೊಡನೆ ಅನ್ಯೋನ್ಯವಾಗಿ ಓಡಾಡುವ ಮಿತ್ರರಿರುತ್ತಾರೆ.
ಏಕೆ ಈ ಸ್ಥಿತಿಗೆ ಬಂದೆ? ಚಿಂತಿಸತೊಡಗಿದ ಸುರೇಶ್. ಅವನ ತಂದೆ ತಾಯಿ ಹದಿನೈದು ವರ್ಷಗಳ ಹಿಂದೆ ಭಾರತದಿಂದ ವಲಸೆ ಬಂದವರು. ಇವನು ಭಾರತದಲ್ಲಿ ಹುಟ್ಟಿದ ಮಗ. ನಂತರ ಅವನ ತಂಗಿ ಶೀಲಾ ಆಸ್ಟ್ರೇಲಿಯಾದಲ್ಲಿ ಜನಿಸಿದಳು. ಮನೆಯಲ್ಲಿ ಓದು ಬರಹಗಳ ಮೇಲಿನ ಒತ್ತು ಅಗಾಧವಾಗಿತ್ತು. ಕ್ರೀಡೆ, ಸಾಮಾಜಿಕ ಚಟುವಟಿಕೆಗಳತ್ತ ಹೆಚ್ಚಿನ ಗಮನ ನೀಡಲಿಲ್ಲ. ಇನ್ನು ಗರ್ಲ್ ಫ್ರೆಂಡಿನ ಮಾತೆಲ್ಲಿ?
ವಯಸ್ಸಿಗೆ ಸಹಜವಾಗಿ ಸುರೇಶ ತಾನು ಅಲ್ಲಿಲ್ಲಿ ಕಂಡ ಹುಡುಗಿಯರತ್ತ ಕಣ್ಣು ಹಾಯಿಸಿದ್ದ. ಒಂದಿಬ್ಬರನ್ನು ಮೆಚ್ಚಿಯೂ ಇದ್ದ. ಆದರೆ ಅವರೊಡನೆ ಮಾತನಾಡುವ ಧೈರ್ಯವಿಲ್ಲ. ಇಷ್ಟಪಟ್ಟು ಯಾರನ್ನಾದರೂ ಗರ್ಲ್ ಫ್ರೆಂಡ್ ಪಟ್ಟಕ್ಕೆ ಏರಿಸಿ, ಅದು ಅಮ್ಮನ ಕಿವಿ ತಲಪಿದರೆ ಏನು ಗತಿ? ಅವಳು ರಾದ್ಧಾಂತ ಮಾಡಬಹುದು, ಅಥವಾ ನನ್ನನ್ನು ಗೇಲಿ ಮಾಡಬಹುದು. ಹೀಗಾಗಿ ಸುಮ್ಮನಿದ್ದ ಅವನು.
ಆದರೆ ಒಂದು ವರ್ಷದ ಹಿಂದೆ ಶೀಲಾಳ ಗೆಳತಿ ರಮ್ಯಾ ಮನೆಗೆ ಬಂದಿದ್ದಾಗ ಇವನ ಮನಸ್ಸು ಅಲ್ಲೋಲಕಲ್ಲೋಲವಾಗಿತ್ತು. ಎಂತಹ ಮುದ್ದು ಮುಖ! ತೆಳ್ಳಗೆ ಬೆಳ್ಳಗೆ ಇರುವ ಹುಡುಗಿ. ಅವನ ಸ್ನೇಹಿತರುಗಳ ಗೆಳತಿಯರನ್ನು ಸುರೇಶ್ ನೋಡಿದ್ದ. ಅವರಾರೂ ರಮ್ಯಾಳ ಸಮಕ್ಕೆ ಬರುತ್ತಿರಲಿಲ್ಲ. ಅವಳನ್ನು ನೋಡಿ ನಗುತ್ತಿದ್ದ. ಅವಳೂ “ಹಲೋ” ಹೇಳುತ್ತಿದ್ದಳು. ಒಮ್ಮೆ ಅವಳ ತಂದೆ ರಮ್ಯಾಳನ್ನು ರೈಲ್ವೆ ಸ್ಟೇಷನ್ನಿನಿಂದ ಮನೆಗೆ ಕಾರಿನಲ್ಲಿ ಕರೆತರುವಾಗ, ಅಲ್ಲಿಯೇ ಬಸ್ಸಿಗೆ ಕಾಯುತ್ತಿದ್ದ ಇವನನ್ನೂ ಹತ್ತಿಸಿಕೊಂಡರು. ಕಾರಿನ ಕನ್ನಡಿಯಲ್ಲಿ ಅವಳ ಮುಖವನ್ನು ನೋಡಿ ಹಿರಿಹಿಗ್ಗಿದ ಇವನು. ಮುಂದೆ ಒಂದೆರಡು ಬಾರಿ ಇವನೇ ಶೀಲಾ ಮತ್ತು ರಮ್ಯಾ ಇಬ್ಬರಿಗೂ ಡ್ರಾಪ್ ನೀಡಿದ್ದ. ಆಗ ಅವನಿಗೆ ಹಿಂದೆ ಕುಳಿತಿದ್ದ ರಮ್ಯಾ ಮುಂದೆ ಬಂದು ಕೂರಬಾರದೆ ಎನಿಸಿತ್ತು. ಅವಳನ್ನು ಮೆಚ್ಚಿಸಲು ಕಾರಿನ ವೇಗವನ್ನು ಮಿತಿಮೀರಿ ಹೆಚ್ಚಿಸಿದ್ದೂ ಉಂಟು.
ಹಲವಾರು ಬಾರಿ ಶೀಲಾಳ ಮೂಲಕ ರಮ್ಯಾಳಿಗೆ ಮೆಸೇಜ್ ಕಳಿಸವ ಹಂಬಲ. ಅದು ಗುಟ್ಟಾಗಿದ್ದರೆ ಸರಿ. ಬದಲಾಗಿ ಶೀಲಾ ತಾಯಿಗೆ ತಿಳಿಸಿಬಿಟ್ಟರೆ ಏನುಗತಿ? ರಮ್ಯಾ ಗೆಳೆತನವನ್ನು ಒಪ್ಪದೇ ಹೋಗಿ ನನ್ನ ಮೆಸೇಜ್ ಬಯಲಾದರೆ ನಮ್ಮ ಸಮುದಾಯದ ಜನರ ಬಾಯಲ್ಲಿ ನನ್ನದೇ ಮಾತಾಗುತ್ತದೆ ಅಲ್ಲವೇ?
ಅದರೂ ಈಗ ಸುರೇಶನಿಗೆ ಅನಿಸಿದ್ದು -ಪಾರ್ಟಿಗೆ ಹೋದರೆ ರಮ್ಯಾ ಜೊತೆ ಹೋಗಬೇಕು. ಆದರೆ ಅದು ಆಗದ ಮಾತು.
ಗಣಿತದ ಪಾಠವೂ ಆಯಿತು. ಮುಂದೆ ಚರಿತ್ರೆಯ ಪಾಠವೂ ಆಯಿತು. ಯಾವುದೂ ಸುರೇಶನ ಗಮನಕ್ಕೆ ಬರಲಿಲ್ಲ. ನಂತರ ಊಟದ ವಿರಾಮವೂ ಬಂತು. ವಿದ್ಯಾರ್ಥಿಗಳೆಲ್ಲಾ ಕಾಮನ್ ರೂಂ, ಆಟದ ಮೈದಾನ, ಹೊರಗಿದ್ದ ರೆಸ್ಟೋರೆಂಟ್ ಇತ್ಯಾದಿಗಳಗೆ ಧಾವಿಸಿದರು.
ಕಾಮನ್ ರೂಮಿನಲ್ಲಿ ಸುರೇಶ್ ತಾನು ಮನೆಯಿಂದ ತಂದಿದ್ದ ಆಲೂಗಡ್ಡೆ ಈರುಳ್ಳಿ ಪಲ್ಯದ ಸ್ಯಾಂಡ್ ವಿಚ್ ಹೊರತಗೆದು ಕುಳಿತ. ಎಂದಿನಂತೆ ಅವನ ಮಿತ್ರ ಡೇವಿಡ್ ತಾನು ತಂದಿದ್ದ ಫಿಶ್ ಫಿಲೆಟ್ ತೆಗೆದ. ಅವನೇ ಮಾತುಕತೆ ಪ್ರಾರಂಭಿಸಿದ.
“ಸುರೇಶ್, ಯಾಕೊ ನೀನು ಕ್ಲಾಸಿನಲ್ಲಿ ತೆಪ್ಪಗೆ ಕೂತಿದ್ದಿ. ಏನು ಕಾರಣ?”
“ಏನೂ ಇಲ್ಲ, ಸುಮ್ಮನೆ, ಹಾಗೇ”
“ಇಲ್ಲ ಇಲ್ಲ ಏನೋ ಇದೆ. ಕ್ಲಾಸಿನಲ್ಲಿ ವೆಲಿಂಗ್ಟನ್ ಆ ಪೈಥಾಗೊರೊಸ್ ಥೀರಂ ಪ್ರೂವ್ ಮಾಡುವಾಗ ತಡವರಿಸುತ್ತಿದ್ದರು. ಸಾಮಾನ್ಯವಾಗಿ ನೀನು ಅವರಿಗೆ ಪ್ರಶ್ನೆಯ ಮೇಲೆ ಪ್ರಶ್ನೆ ಹಾಕಿ ಅವರ ಬೆವರು ಕೀಳಿಸಬೇಕು. ಆದರೆ ಇವತ್ತು ಸುಮ್ಮನೇ ಕುಳಿತಿದ್ದೆ. “
“ಏನೋ ಒಂದು ಸಮಸ್ಯೆ ಇತ್ತು. ಅದಕ್ಕೇ ಸುಮ್ಮನಿದ್ದೆ.”
“ಏನಪ್ಪಾ ಅಂಥಾ ಸಮಸ್ಯೆ. ಹೇಳು ನನ್ನಿಂದ ಆದರೆ ಸಹಾಯ ಮಾಡ್ತೀನಿ, ನೀನು ಸಪ್ಪಗಿರೋದನ್ನ ನಾನು ನೋಡೋಕ್ಕಾಗಲ್ಲ.”
“ನೀನು ಫಾರ್ಮಲ್‌ಗೆ ಯಾರನ್ನಾದರೂ ಕರಕೊಂಡು ಬರ್ತೀಯಾ?”
“ಎಂಥಾ ಪ್ರಶ್ನೆ? ಸ್ಟೆಲ್ಲಾ ಇದಾಳಲ್ಲಾ ಅವಳು ಜೊತೆಗೆ ಬಂದೇ ಬರ್ತಾಳೆ. ಆ ಪ್ರಶ್ನೆ ಯಾಕೆ ಈಗ?”
“ನನಗಿರೋ ಸಮಸ್ಯೆ ಎಂದರೆ ನನ್ನ ಗರ್ಲ್ ಫ್ರೆಂಡ್ ಹೋದವಾರ ಬ್ರೇಕ್ ಅಪ್ ಆದಳು. ಈಗ ನಾನು ಒಂಟಿಯಾಗಿ ಬರಬೇಕಾಗಿದೆ.”
“ಸಾರಿ ಟು ಹಿಯರ್. ನಿನಗೆ ಫ್ರೆಂಡ್ ಇದ್ದದ್ದು ನನಗೆ ಗೊತ್ತಿರಲಿಲ್ಲ. ಆದರೆ ನಾನು ನಿನಗೆ ಸಹಾಯ ಮಾಡಬಲ್ಲೆ. ಸಂಜೆಯವರೆಗೆ ಅಥವಾ ನಾಳೆ ಬೆಳಿಗ್ಗೆವರೆಗೆ ಸಮಯ ಕೊಡು.”
ಡೇವಿಡ್ ನಂಬಿಕಸ್ತ ಗೆಳೆಯ. ಮಾತು ನೀಡಿದ ಮೇಲೆ ಅವನು ಏನಾದರೂ ಮಾಡುತ್ತಾನೆ ಎಂಬ ಭರವಸೆ ಸುರೇಶನಿಗೆ. ಹೀಗಾಗಿ ಅವನು ಮಧ್ಯಾಹ್ನದ ಕ್ಲಾಸುಗಳನ್ನು ನಗುಮುಖದಿಂದಲೇ ಕಳೆದ. ಆದರೂ ರಮ್ಯಾ ಇದ್ದಿದ್ದರೆ ಪರಿಸ್ಥಿತಿಯೇ ಬೇರೆಯಾಗುತ್ತಿತ್ತು ಎನಿಸಿತು.
ಮಾರನೆಯ ದಿನ ಬೆಳಿಗ್ಗೆ ಸುರೇಶ್ ಶಾಲೆಯನ್ನು ತಲಪುತ್ತಿದ್ದಂತೆಯೇ ಡೇವಿಡ್ ನಗುತ್ತಾ ಕಾದು ನೀಂತಿದ್ದ.
“ಸುರೇಶ್, ಯೋಚನೆ ಮಾಡಬೇಡ. ನಾನು ಎಲ್ಲಾ ವ್ಯವಸ್ಥೆ ಮಾಡಿದ್ದೀನಿ. ಸ್ಟೆಲ್ಲಾಳ ಗೆಳತಿ ರೀಟಾ ಅವತ್ತು ಫ್ರೀ ಆಗಿದ್ದಾಳೆ. ನಾನು ಎಲ್ಲಾ ಮಾತಾಡಿದೀನಿ. ಅವಳು ಖುಷಿಯಾಗಿ ನಿನ್ನ ಜೊತೆ ಫಾರ್ಮಲ್‌ಗೆ ಬರ್ತಾಳೆ.”
“ನಾನು ಏನಾದರೂ ಮಾಡಬೇಕಾ?”
“ಏನೂ ಇಲ್ಲ. ಅವತ್ತಿಗೆ ಸೂಟ್ ಹಾಕ್ಕೊಂಡ್ ಬಾ. ಜೊತೆಗೆ ಫ್ಲವರ್ ಬೊಕೇ ಮರೀಬೇಡ.”
ಪರಿಹಾರ ನೀಡಿದ್ದಕ್ಕೆ ಋಣಿಯಾಗಿ ಸುರೇಶ್ ಮಾರನೆಯ ದಿನ ಡೇವಿಡ್‌ನ ಊಟದ ಖರ್ಚನ್ನು ತಾನೇ ವಹಿಸಿಕೊಂಡ.
ಇನ್ನು ಆ ದಿವಸಕ್ಕೆ ಸಿದ್ಧತೆ ಪ್ರಾರಂಭವಾಯಿತು. ಯಾವುದೋ ಯುದ್ಧಕ್ಕೆ ತಯಾರಾಗುವಂತೆ ಕೆಲಸ ವ್ಯವಸ್ಥಿತವಾಗಿ ಸಾಗಿತು. ಸುರೇಶ್ ಮನೆಯಲ್ಲಿ ಯಾವುದೇ ಸೂಚನೆ ನೀಡದೇ ತನ್ನ ಸೂಟನ್ನು ಡ್ರೈ ಕ್ಲೀನ್ ಮಾಡಿಸಿಕೊಂಡ. ಸ್ಟೇಷನ್ ಬಳಿ ಇದ್ದ ಹೂವಿನ ಅಂಗಡಿಗೆ ಹೋಗಿ 50 ಡಾಲರ್‌ನ ಒಂದು ಹೂಗುಚ್ಛಕ್ಕೆ ಆರ್ಡರ್ ನೀಡಿ 20 ಡಾಲರ್ ಅಡ್ವಾನ್ಸ್ ಕೊಟ್ಟ. ಅಷ್ಟಾಗಿ ಕೂದಲು ಬೆಳೆಯದೇ ಇದ್ದರೂ ಹೇರ್ ಕಟ್ ಮಾಡಿಸಿದ. ಕಾಲಿನ ಬೂಟಿಗೆ ಹೊಸ ಪಾಲಿಷ್ ತಂದ. ತಾಯಿ ಇವೆಲ್ಲವನ್ನು ನೋಡಿಯೂ ನೋಡದಂತೆ ಸುಮ್ಮನಿದ್ದರು.
ಅಂದು ಶುಕ್ರವಾರ. ಸಂಜೆ ಶಾಲೆಯಲ್ಲಿ ಫಾರ್ಮಲ್ ಸಮಾರಂಭ. ಮಧ್ಯಾಹ್ನ ಹಿರಿಯ ಹುಡುಗರಿಗೆ ಮನೆಗೆ ಹೋಗಿ ಬರಲು ಅನುಕೂಲವಾಗುವಂತೆ ರಜ.
ಮನೆಗೆ ಬಂದ ಸುರೇಶನನ್ನು ತಾಯಿ ಪ್ರಶ್ನಿಸಿದರು.
“ಏಕೆ ಇಷ್ಟು ಬೇಗ ಬಂದು ಬಿಟ್ಟೆ. ಮೈಯ್ಯಲ್ಲಿ ಹುಷಾರಿಲ್ಲವಾ?”
“ಹುಷಾರಾಗಿದ್ದೀನಿ, ಮಧ್ಯಾಹ್ನ ಯಾವುದೋ ಮ್ಯೂಸಿಕ್ ಕಾಂಪಿಟಿಷನ್ ಇದೆ. ಅದಕ್ಕೆ ಕ್ಲಾಸಿಗೆ ರಜ. ಅಲ್ಲದೆ, ನಾನು ಬುಧವಾರ, ಗುರುವಾರ ಸಂಜೆ ಕೆಲಸಕ್ಕೆ ಹೋಗ್ತೀನಲ್ಲ, ಬೆಸ್ಟ್ ಅಂಡ್ ಲೆಸ್, ಅಲ್ಲಿ ಮ್ಯಾನೇಜರ್ ಬದಲಾಗ್ತಾ ಇದಾನೆ. ಅದಕ್ಕೆ ದೊಡ್ಡ ಪಾರ್ಟಿ ಕೊಡ್ತಾ ಇದಾರೆ. ಹೋಗ್ತಾ ಇದೀನಿ.”
“ಹೌದಾ, ಬೆಳಿಗ್ಗೆ ನೀನು ಉಗುರು ಕಟ್ ಮಾಡಿಕೊಂಡಾಗ ಏನೋ ವಿಶೇಷ ಇದೆ ಅನ್ನಿಸ್ತು. ಅಲ್ಲಾ ಬೆಸ್ಟ್ ಅಂಡ್ ಲೆಸ್‌ನಲ್ಲಿ ಮ್ಯಾನೇಜರ್ ಬದಲಾಗಿ ಪಾರ್ಟಿ ಮಾಡಿದ್ರೆ ನಿಮ್ಮಂಥ ಕ್ಯಾಝುಯಲ್ ಎಂಪ್ಲಾಯೀಸ್‌ನ ಕರೀತಾರಾ?”
“ಹೌದು, ಕರೆದಿದ್ದಾರೆ.” ಎಂದ. ತಾಯಿ ಮತ್ತೆ ಮಾತಾಡಲಿಲ್ಲ.
ಮನೆಯಲ್ಲಿ ಮುಳ್ಳಿನ ಮೇಲೆ ಕುಳಿತಿದ್ದ ಸುರೇಶ್. ನಾಲ್ಕು ಗಂಟೆ ಆಯಿತು. ಒಮ್ಮೆಗೇ ಮತ್ತೆ ಸ್ನಾನಮಾಡಿ ಸೂಟು, ಬೂಟು ಧರಿಸಿದ. ತಾಯಿ
“ತಡಮಾಡ ಬೇಡ. ಮಧ್ಯರಾತ್ರಿಯಲ್ಲಿ ಒಬ್ಬನೇ ಬರುವುದು ಬೇಡ. ಬೇಗ ಬಂದು ಬಿಡು. ಬೇಕಿದ್ದರೆ ಫೋನ್ ಮಾಡು, ಡ್ಯಾಡಿ ಪಿಕ್ ಅಪ್ ಮಾಡ್ತಾರೆ. ಅಥವಾ ಊಬರ್ ಮಾಡಿಕೊಂಡು ಬಾ.”
ಎಂದುದನ್ನು ಲೆಕ್ಕಿಸದೇ ಮನೆಯಿಂದ ಹೊರಹಾರಿದ್ದ ಸುರೇಶ್.
ಮನೆಯ ಹತ್ತಿರವೇ ಬಸ್ ಸ್ಟಾಪು, ಬಸ್ ಏರಿ ಸ್ಟೇಷನ್ ತಲಪಿದ. ಅಲ್ಲಿ ಅಂಗಡಿಯಲ್ಲಿ ಮಿಕ್ಕ ಹಣ ಪಾವತಿಮಾಡಿ ಹೂಗುಚ್ಛ ಪಡೆದದ್ದು ಆಯಿತು. ಸ್ಟೇಷನ್ ಒಳಹೊಕ್ಕು ಪ್ಲಾಟ್ ಫಾರಂ 4 ರಲ್ಲಿ ನಿಂತ. ಟ್ರೈನ್ ಬರಲು ಇನ್ನೂ ಹತ್ತು ನಿಮಿಷ ಇದ್ದವು. ಸುತ್ತಾ ಗಮನ ಹರಿಸಿದ. ಸಧ್ಯ. ತನಗೆ ಗೊತ್ತಿದ್ದವರು ಯಾರೂ ಇರಲಿಲ್ಲ.

ಗೆದ್ದೆ ಎಂದುಕೊಂಡು ನಿಂತ ಸುರೇಶ್. ಇದ್ದಕ್ಕೆ ಇದ್ದ ಹಾಗೇ ಯಾರೋ “ಸುರೇಶ್” ಎಂದು ಕೂಗಿದಹಾಗಾಯಿತು. ಸುತ್ತೆಲ್ಲಾ ನೋಡಿದ, ಯಾರೂ ಕಾಣಲಿಲ್ಲ. ಆದರೆ ಎದುರಿಗೇ ಇದ್ದ 5 ನೇ ನಂಬರ್ ಪ್ಲಾಟ್ ಫಾರಂ ನಲ್ಲಿ ವನಿತಾ ನಿಂತಿದ್ದರು! ಇನ್ನೇನು ಗತಿ ಎನಿಸಿತು ಸುರೇಶನಿಗೆ. ವನಿತಾ ತನ್ನ ತಾಯಿಗೆ ಪರಿಚಯವಿದ್ದ ವ್ಯಕ್ತಿ. ಅವರಿಗೆ ತಿಳಿಯದ ವಿಷಯವಿಲ್ಲ. ಯಾವ ಯಾವ ಹುಡುಗರು ಯಾವ ಯಾವ ಹುಡುಗಿಯರ ಹಿಂದೆ ಬಿದ್ದಿದ್ದಾರೆ, ಪರೀಕ್ಷೆಗಳಲ್ಲಿ ಅವರುಗಳಿಗೆ ಬಂದ ಅಂಕಗಳೆಷ್ಟು, ಯಾರ್ಯಾರಿಗೆ ಎಷ್ಟೆಷ್ಟು ಸಂಬಳ ಬರುತ್ತದೆ, ಅವರ ಬಳಿ ಯಾವ ಕಾರ್ ಇದೆ, ಇತ್ಯಾದಿ, ಇತ್ಯಾದಿ. ಜೊತೆಗೆ ಅವರ ಬಾಯಿಯೋ ಒಂದು ತುತ್ತೂರಿ. ಅವರಿಗೆ ಯಾವುದೇ ವಿಷಯ ಗೊತ್ತಾದರೂ ಕ್ಷಣ ಮಾತ್ರದಲ್ಲಿ ಅದು ನೇರ ಮಾತು, ಫೋನ್, ವಾಟ್ಸ್ ಅಪ್, ಮಿಕ್ಕ ಮಾಧ್ಯಮಗಳ ಮೂಲಕ ಸಮುದಾಯದ ಎಲ್ಲರಿಗೂ ತಲಪುತ್ತಿತ್ತು. ಅಲ್ಲದೆ ಅವರು ಸುದ್ದಿಗೆ ಉಪ್ಪು, ಖಾರ ಬೆರೆಸಿ ಅದನ್ನು ವೈಭವೀಕರಿಸುತ್ತಿದ್ದರು. ಸಾಲದ್ದಕ್ಕೆ ವನಿತಾ, ಸುರೇಶನ ಕೈಯ್ಯಲ್ಲಿದ್ದ ಹೂಗುಚ್ಛದತ್ತ ಕೈಮಾಡಿ “ಏನಿದು?” ಎಂದು ಪ್ರಶ್ನಿಸಿದರು. ಇವನು ಉತ್ತರಕೊಡುವಷ್ಟರಲ್ಲಿ ಅವರ ಟ್ರೈನ್ ಬಂದು ಸುರೇಶ್ ಸುಮ್ಮನಾದ.
ತನ್ನ ಟ್ರೈನ್ ಕೂಡ ಬಂತು. ಹತ್ತಿ ಕುಳಿತ ಸುರೇಶ್. ಇನ್ನು ತನ್ನ ಫಾರ್ಮಲ್ ಸುದ್ದಿ ಎಲ್ಲೆಡೆ ಹರಡುತ್ತದೆ, ಸಂಶಯವಿಲ್ಲ. ಸುದ್ದಿಪ್ರಸಾರವನ್ನು ತಡೆಯುವುದು ತನ್ನಿಂದ ಆಗದ ಕೆಲಸ. ಅಮ್ಮ ಅಥವ ತಂಗಿ ಕೇಳಿದರೆ ಏನಾದರೂ ಹೇಳಬಹುದು ಎಂದು ಕುಳಿತ. ತನ್ನೊಡನೆ ಬರುವ ಹುಡುಗಿ ರೀಟಾ ಹೇಗಿರಬಹುದು ಎಂದು ಊಹಿಸಿದ. ಹೇಗಿದ್ದರೆ ಏನು? ಸಮಯಕ್ಕೆ ಸರಿಯಾಗಿ ಸಿಕ್ಕ ಹುಡುಗಿ ಎಂದು ಸುಮ್ಮನಾದ. ಹದಿನೈದು ನಿಮಿಷದಲ್ಲಿ ಟ್ರೈನ್ ಸೆಂಟ್ರಲ್ ನಿಲ್ದಾಣಕ್ಕೆ ಬಂತು. ಅಲ್ಲಿಯೇ ಅವನ ಶಾಲೆಯತ್ತ ಹೋಗುವ ಬಸ್. ಮತ್ತೆ ಹತ್ತು ನಿಮಿಷದ ಪ್ರಯಾಣ.
ಶಾಲೆಯ ಬಳಿ ಬಸ್ ನಿಲ್ದಾಣದಲ್ಲಿ ಡೇವಿಡ್ ಇಬ್ಬರು ಹುಡುಗಿಯರೊಡನೆ ಕಾದು ಕುಳಿತಿದ್ದ. ಸುರೇಶ್ ಬಸ್ ಇಳಿಯುತ್ತಿದ್ದಂತೆ,
“ಸುರೇಶ್, ಇವಳು ಸ್ಟೆಲ್ಲಾ, ನಿನಗೆ ಗೊತ್ತೇ ಇದೆ. ಮತ್ತೆ ಇವಳು ರೀಟಾ.” ಎಂದ.
ಸುರೇಶ್ ಹಲೋ ಎಂದು ರೀಟಾಳಿಗೆ ಹೂಗುಚ್ಛವನ್ನು ನೀಡಿದ. ಅವಳಿಗೆ ಮುತ್ತು ಕೊಡಬೇಕೆ, ಬೇಡವೇ ಎಂದು ಯೋಚಿಸ ಹೊರಟ ಸುರೇಶನ ಕೆನ್ನೆಗೇ ಅವಳೇ ಮುತ್ತು ಕೊಟ್ಟು ಸಮಸ್ಯೆಯನ್ನು ಬಗೆ ಹರಿಸಿದಳು. ನಾಲ್ವರೂ ಶಾಲೆಯತ್ತ ಹೊರಟರು.
ಸುರೇಶ್ ರೀಟಾಳತ್ತ ಮತ್ತೆ ಮತ್ತೆ ನೋಡಿದ. ಬೆಳ್ಳಗೇನೋ ಇದ್ದಳು. ಆದರೆ ಚಿಕ್ಕ ಕಣ್ಣುಗಳು, ಕುಳ್ಳು ದೇಹ. ಹತಾಶನಾದ ಸುರೇಶ. ಇವಳನ್ನು ಗೆಳತಿ ಎಂದು ಎಲ್ಲರ ಮುಂದೆ ಮೆರೆಸಬೇಕೆ ನಾನು? ಈಗ ಏನು ಮಾಡುವಂತೆಯೂ ಇಲ್ಲ. ಒಂದೆರಡು ಗಂಟೆ ಹೇಗೋ ಕಳೆದರೆ ಸರಿ ಎಂದುಕೊಂಡ. ಸಿಕ್ಕ ಗೆಳೆಯರಿಗೆ
“ಇವಳು, ರೀಟಾ, ಭೇಟಿಮಾಡಿ” ಎಂದು ಪರಿಚಯಿಸಿದ. ಕೈಕುಲುಕುವಿಕೆ, ಒಬ್ಬರನ್ನೊಬ್ಬರು ತಬ್ಬಿಕೊಳ್ಳುವುದು ಅಗಾಧವಾಗಿ ನಡೆಯಿತು.
ಸಭೆ ಆರಂಭವಾಯಿತು. ಹುಡುಗರು ತಂತಮ್ಮ ಗೆಳತಿಯರ ಪಕ್ಕ ಕುಳಿತರು. ಪ್ರತಿ ಟೇಬಲ್ಲಿನಲ್ಲಿ ಮೂರು ಜೋಡಿಗಳು. ಸಾಕಷ್ಟು ಖಾದ್ಯ ಮತ್ತು ಪಾನೀಯಗಳು ಟೇಬಲ್ಲಿನ ಮೇಲೆ. ಸಾಮಾನ್ಯವಾಗಿ ವಿದ್ಯಾರ್ಥಿಗಳು ಇನ್ನೂ ಹದಿನೆಂಟು ವರ್ಷ ದಾಟಿಲ್ಲ. ಹೀಗಾಗಿ ಮದ್ಯ ಇರಲಿಲ್ಲ. ಸುರೇಶ್ ತನ್ನ ಸುತ್ತಾ ಇದ್ದ ಹುಡುಗಿಯರನ್ನು ನೋಡಿದ. ಅಷ್ಟಕ್ಕೆ ಅಷ್ಟೆ! ಯಾರ ಮುಖದಲ್ಲಿಯೂ ಕಳೆ ಇರಲಿಲ್ಲ. ರಮ್ಯಾ ನನ್ನ ಜೊತೆ ಇದ್ದಿದ್ದೇ ಆದರೆ ಇವರುಗಳತ್ತಾ ಯಾರೂ ನೋಡುತ್ತಿರಲಿಲ್ಲ. ಎಲ್ಲರೂ ಅವಳತ್ತವೇ ನೋಡುತ್ತಿದ್ದರು. ಸುಮ್ಮನೇ ಕುಳಿತ.
ಶಾಲೆ ಬಗೆಬಗೆಯ ಖಾದ್ಯಗಳನ್ನು ಒದಗಿಸಿತ್ತು. ಮೀನು, ಕೋಳಿಗಳ ಜೊತೆಗೆ ಶಾಲೆಯಲ್ಲಿದ್ದ ಭಾರತೀಯ ಹುಡುಗರಿಗಾಗಿ ನಾನ್, ಅನ್ನ ಮತ್ತು ಪನ್ನೀರ್ ಪಾಲಕ್‌ಗಳೂ ಇದ್ದವು. ಸುರೇಶ್ ಮನೆಯಲ್ಲಿ ಮಾತ್ರ ಸಸ್ಯಾಹಾರಿ. ಅಲ್ಲಿದ್ದ ಸಾಲ್ಮನ್ ಮೀನನ್ನು ಮನಸಾರೆ ಸವಿದ. ಉಪಚಾರಕ್ಕೆ ರೀಟಾಳನ್ನು “ಎಲ್ಲಾ ಸರಿಯಾಗಿದೆಯೆ?” ಎಂದು ವಿಚಾರಿಸಿದ. ಅವಳಿಗೆ ಅಲ್ಲಿದ್ದ ಖಾದ್ಯಗಳು ಇಷ್ಟವಾದವು. ಅಷ್ಟೇ ಅಲ್ಲ, ಅವಳು ಮತ್ತು ಸ್ಟೆಲ್ಲಾ ಎಡಬಿಡದೆ ಮಾತನಾಡುತ್ತಿದ್ದರು, ನಗುತ್ತಿದ್ದರು. ಅವರಾಡಿದ ಭಾಷೆ ಸುರೇಶನಿಗೆ ತೀರಾ ಹೊಸದು – ಮ್ಯಾಂಡರೀನ್ ಭಾಷೆ. ಇಬ್ಬರೂ ಚೀನೀಯರು!
ಕೆಲಹೊತ್ತಿನ ನಂತರ ವಿದ್ಯಾರ್ಥಿಗಳ ಗಮನ ಸೆಳೆಯಲು ಮುಖ್ಯೋಪಾಧ್ಯಾಯರಾದ ಸ್ಯಾಮುಯೆಲ್ ವಿಲ್ಕಾಕ್ಸ್ ತಮ್ಮ ಚಮಚದಲ್ಲಿ ಲೋಟವನ್ನು ತಗುಲಿಸಿ ಶಬ್ದ ಮಾಡಿದರು. ಇದು ಅವರ ಭಾಷಣದ ಸಮಯ. ವಿದ್ಯಾರ್ಥಿಗಳ ಮಾತು ಒಮ್ಮೆಗೇ ನಿಂತುಹೋಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಅವರು ಶಾಲೆಯ ಘನತೆಯ ಬಗ್ಗೆ ಹೇಳಿದರು. ಮುಂದುವರೆದು,
“ನೀವು ಇನ್ನೇನು ಶಾಲೆಯನ್ನು ಬಿಟ್ಟು ಕಾಲೇಜು ಸೇರಿ ನಂತರ ಎಲ್ಲೆಲ್ಲಿಯೋ ಕೆಲಸಕ್ಕೆ ಸೇರುತ್ತೀರಿ. ಹೋದ ಎಡೆಗಳಲ್ಲಿ ನೀವು ಶಾಲೆಯ ಗೌರವವನ್ನು ಕಾಪಾಡಬೇಕು. ಶಾಲೆಗೆ ಕೆಟ್ಟಹೆಸರು ತರಬಾರದು, ಇತ್ಯಾದಿ, ಇತ್ಯಾದಿ. ನಗುತ್ತಾ ಕುಳಿತರು ಹುಡುಗರು. ಅರ್ಧ ಗಂಟೆಯ ನಂತರ ಅವರ ಭಾಷಣ ಮುಗಿದಾಗ ವಿದ್ಯಾರ್ಥಿಗಳ ಕರತಾಡನ ಮುಗಿಲು ಮುಟ್ಟಿತ್ತು. ಸಧ್ಯ ಮುಗಿಯಿತು ಎಂಬ ಕಾರಣಕ್ಕೆ!
ಆಗ ಡ್ಯಾನ್ಸಿಗೆ ವೇದಿಕೆಯನ್ನು ತೆರೆಯಲಾಯಿತು. ಸಂಗೀತ ಆರಂಭವಾಯಿತು. ಒಮ್ಮೆಗೇ ಶಬ್ದ ತಾರಕಕ್ಕೆ ಹೋಯಿತು. ನೃತ್ಯ ಆರಂಭವಾಯಿತು. ತಂತಮ್ಮ ಗೆಳತಿಯರೊಡನೆ ಎಲ್ಲರೂ ಸ್ವಲ್ಪಕಾಲ ಕುಣಿದರು. ನಂತರ ಮಿಕ್ಕವರ ಗೆಳತಿಯರೊಂದಿಗೆ ಕುಣಿದರು. ಸುರೇಶನಿಗೆ “ಅಯ್ಯೋ ಈ ಮುಖದವಳ ಜೊತೆ ನಾನು ಡ್ಯಾನ್ಸ್ ಮಾಡಬೇಕೇ?” ಎನಿಸಿ ಯಾರಿಗೂ ಹೇಳದೇ ಹೊರಹೋದ. ಅವನಿಲ್ಲದಿರುವುದನ್ನು ನೋಡಿ ಪೆಚ್ಚಾದ ರೀಟಾ ಸಿಕ್ಕ ಯಾರೊಡನೆಯೋ ಕುಣಿದಳು. ಸುರೇಶ್ ಮತ್ತೆ ಸಭೆಯನ್ನು ಪ್ರವೇಶಿಸುವ ಹೊತ್ತಿಗೆ , “ಇನ್ನು ಹತ್ತು ನಿಮಿಷಗಳಲ್ಲಿ ಎಲ್ಲರೂ ಈ ಸ್ಥಳವನ್ನು ಖಾಲಿ ಮಾಡಬೇಕು.” ಎಂದು ಮುಖ್ಯೋಪಾಧ್ಯಾಯರು ಮನವಿಮಾಡಿದರು. ಅಲ್ಲದೆ ಸಿಕ್ಕ ಹುಡುಗರಿಗೆಲ್ಲಾ “ಕತ್ತಲಾಗಿದೆ, ಅಲ್ಲಿಲ್ಲಿ ಓಡಾಡದೆ ನೇರ ಮನೆಗೆ ಹೋಗಿ” ಎಂದು ಆದೇಶ ನೀಡಿದರು.
ಸುರೇಶ್ ತನಗೆ ತೀರಾ ತಲೆ ನೋವು ಬಂದಿದ್ದು, ಅಲ್ಲಿಯ ಶಬ್ದವನ್ನು ತಡೆಯಲಾಗಲಿಲ್ಲ. ಹೊರಹೋಗಿದ್ದೆ ಎಂದು ರಿಟಾಳ ಕ್ಷಮೆ ಬೇಡಿದ. ಅವಳ ಉತ್ತರವನ್ನು ಕೇಳಸಿಕೊಳ್ಳಲೂ ಇಲ್ಲ. ಡೇವಿಡ್ ಬಳಿ ಹೋಗಿ ಥ್ಯಾಂಕ್ಸ್ ಹೇಳಿದ.
ಎರಡು ನಿಮಿಷಗಳಲ್ಲಿ ಶಾಲೆಯ ಮುಂಬಾಗಿಲಿಗೆ ಬಂದಿದ್ದ ಸುರೇಶ್.
ಸಾಮಾನ್ಯವಾಗಿ ಇಂತಹ ದಿನಗಳಂದು ವಿದ್ಯಾರ್ಥಿಗಳು ತಮ್ಮ ಗೆಳತಿಯರೊಡನೆ ರಾತ್ರಿ ಸಂಚಾರ ಮಾಡುವುದು ಪದ್ಧತಿ. ಬೀದಿಗಳಲ್ಲಿ ತಿರುಗಿ ಯಾವುದಾದರೂ ಪಾರ್ಕಿನಲ್ಲಿ ಎಲ್ಲರೂ ಕುಳಿತು ಮೋಜುಮಾಡುವ ಪರಿಪಾಠ. ಕೆಲವರು ಕದ್ದು ಪಾನೀಯಗಳನ್ನು ತಂದು ಎಲ್ಲರೂ ಕುಡಿದು ಸಂತೋಷ ಪಡುತ್ತಾರೆ. ಸಿನೆಮಾ ನೋಡುತ್ತಾರೆ. ಹಿಂದೆ ಸುರೇಶ್ ಕೂಡ ಇಂತಹ ಹುಡುಗರನ್ನು ಕೂಡಿದ್ದುಂಟು. ಆದರೆ ಇಂದು ಅವನಿಗೆ ಏನೂ ಬೇಕಾಗಿರಲಿಲ್ಲ. ಶಾಲೆಯ ಫಾರ್ಮಲ್ ವ್ಯರ್ಥವಾಗಿತ್ತು. ತಾನು ಮೆರೆಯಬೇಕಾಗಿದ್ದ ಸಂಜೆ ಹೇಯವಾಗಿತ್ತು.
ಗೆಳತಿಯೊಂದಿಗೆ ಮೋಜಿಗೆ ಹೊರಟಿದ್ದ ಮಿತ್ರನೊಬ್ಬ ಕಾರ್ ನಿಲ್ಲಿಸಿ “ಸುರೇಶ್, ಏನು ಒಬ್ಬನೇ?” ಎಂದು ಕೇಳಿದ. ಸುರೇಶ್ ಉತ್ತರಿಸಿದ,
“ವಿಪರೀತ ತಲೆನೋವು. ನನ್ನನ್ನ ಸೆಂಟ್ರಲ್ ಸ್ಟೇಷನ್ ಬಳಿ ಬಿಡುವುದು ಸಾಧ್ಯವೇ?”
“ಅದಕ್ಕೇನು, ಹತ್ತು” ಎಂದ ಗೆಳೆಯ ಸೆಂಟ್ರಲ್ ವರೆಗೆ ಅವನನ್ನು ಕರೆದೊಯ್ದ.
ಟ್ರೈನು, ನಂತರ ಊಬರ್. ಸುರೇಶ್ ಅರ್ಧ ಗಂಟೆಯಲ್ಲಿ ಮನೆಗೆ ಬಂದ. ಬಾಗಿಲು ತೆರೆದ ತಾಯಿ ನಗುತ್ತಾ ಕೇಳಿದರು,
“ಹೇಗಿತ್ತು ಪಾರ್ಟಿ?”
“ಚೆನ್ನಾಗಿತ್ತು” ಅಂದವನೇ ಮೆಟ್ಟಿಲುಗಳನ್ನೇರಿ ಮಹಡಿಯಲ್ಲಿದ್ದ ತನ್ನ ರೂಮಿಗೆ ಹೋಗಿ, ಸೂಟು ಬೂಟು ಎಲ್ಲವನ್ನೂ ಕಳಚಿ, ರಾತ್ರಿಯ ಉಡುಪು ಧರಿಸಿ ಮಲಗಿದ.
ಬೆಳಿಗ್ಗೆ ಎದ್ದಾಗ ಒಂಭತ್ತು ಗಂಟೆ. ಶನಿವಾರ. ಶಾಲೆಗೆ ರಜ. ಕ್ರಿಕೆಟ್ ಮೊದಲಾಗಿ ಯಾವುದೇ ಕ್ರೀಡಾ ಚಟುವಟಿಕೆ ಇರಲಿಲ್ಲ. ಹೊತ್ತಾಗಿ ಎದ್ದರೂ ಆಯಿತು. ಎದ್ದವನೇ ಮುಖತೊಳೆದು ಕೆಳಗೆ ಇಳಿದುಬಂದ. ತಂದೆ, ತಾಯಿ, ತಂಗಿ ಎಲ್ಲರೂ ಕಾಫಿ ಕುಡಿಯುತ್ತಾ ಟೀವಿ ನೋಡುತ್ತಿದ್ದರು. ಎಲ್ಲರೂ ಸುರೇಶನಿಗೆ “ಗುಡ್ ಮಾರ್ನಿಂಗ್” ಹೇಳಿ ಗುಸುಗುಸು ನಗುತ್ತಾ ಕುಳಿತರು. ಸುಮ್ಮನಿದ್ದ ಸುರೇಶ್.
ತಂಗಿ ಶೀಲಾ ನಗುತ್ತಾ ಕೇಳಿದಳು,
“ಹೇಗಿತ್ತಪ್ಪಾ ಫಾರ್ಮಲ್?”
“ಫಾರ್ಮಲ್ ಎಲ್ಲಿಬಂತು ನಾನು ಹೋಗಿದ್ದು ಬೇರೆ ಪಾರ್ಟಿಗೆ”
“ಸುಮ್ಮನೆ ಛೋಡ್ ಬೇಡ. ನಿನ್ನೆ ದೇವಸ್ಥಾನದಲ್ಲಿ ವನಿತಾ ಸಿಕ್ಕಿದ್ದ್ರು. ನೀನು ಸ್ಟೇಷನ್‌ನಲ್ಲಿ ಇದ್ದೆಯಂತೆ”, ತಾಯಿ ನುಡಿದರು.
“ಫಾರ್ಮಲ್ ಅಲ್ಲ. ನಾನು ಹೇಳಿದ ಪಾರ್ಟಿಗೇ ಹೊರಟಿದ್ದೆ.”
“ಹಾಗಾದರೆ ಸ್ಟೇಷನ್‌ಗೆ ಯಾಕಪ್ಪಾ ಹೋಗಿದ್ದಿ?”
ನಿರುತ್ತರನಾದ ಸುರೇಶ್.
“ಶಾಲೇಲಿ ಫಾರ್ಮಲ್. ಅದಕ್ಕೆ ಹೋಗಿದ್ದು ಸರಿಯೇ. ಮನೇಲಿ ಹೇಳಬಹುದಾಗಿತ್ತು.” ಎಂದು ತಾಯಿ ಹೇಳಿದರೆ, ಶೀಲಾ ಕೇಳಿದಳು,
“ಯಾರ ಜೊತೆ ಹೋಗಿದ್ಯೋ ಫಾರ್ಮಲ್ ಗೆ?”
“ಒಬ್ಬನೇ ಹೋಗಿದ್ದೆ.”
“ಹಾಗಾದರೆ ಫ್ಲವರ್ ಬೊಕೇ ಏಕಪ್ಪಾ?”
ನಕ್ಕಳು ಶೀಲಾ. ಕೋಪಬಂದವನಂತೆ ಕುಳಿತ ಸುರೇಶ್.
“ಅಲ್ಲಾ ಕಣೋ, ಫಾರ್ಮಲ್ ಇದೆ ಅಂತ ಒಂದು ಸಲಿ ನನಗೆ ಹೇಳಬೇಡವಾ ನೀನು? ನಾನೇ ಎಷ್ಟು ಸಲಿ ಕೇಳಿದ್ದೀನಿ, “ನಿಮ್ಮ ಫಾರ್ಮಲ್ ಯಾವಾಗ” ಅಂತ. ಉತ್ತರ ಕೊಡದೆ ಗುಮ್ಮಂತ ಕೂತಿರ್ತಿದ್ದಿ. ನನಗೆ ಹೇಳಿದ್ರೆ ರಮ್ಯಾನ ನಿನ್ನ ಜೊತೆಗೆ ಕಳಿಸ್ತಾ ಇದ್ದೆ. ದಮ್ಮಯ್ಯಾ ಅಂತ ಬರ್ತಿದ್ದ್ಲು.

ಅವಳಂತೂ ಪ್ರತಿದಿನ ಬಾಯ್ ಬಾಯ್ ಬಿಟ್ಟು ಕೇಳ್ತಾ ಇದ್ದ್ಲು, ನಿಮ್ಮ ಅಣ್ಣನ ಸ್ಕೂಲಿನ ಫಾರ್ಮಲ್ ಯಾವಾಗ ಅಂತ. ಅವಳಿಗೆ ಏನು ಉತ್ತರ ಹೇಳೊದೋ ಈಗ. ಅಂತ ಹುಡುಗೀನ ಬಿಟ್ಟು ಇನ್ನು ಯಾರನ್ನು ಕರಕೊಂಡು ಹೋಗಿದ್ಯೋ? ಯೂ ಆರ್ ಎ ಫೂಲ್. ”

ಮೂಲತಃ ಬೆಂಗಳೂರಿನವರಾದ ಸಿಡ್ನಿ ಶ್ರೀನಿವಾಸ (ಕರ್ಕೆನಹಳ್ಳಿ ಶ್ರೀನಿವಾಸ), ಸದ್ಯ ಆಸ್ಟ್ರೇಲಿಯಾದ ಸಿಡ್ನಿಯಲ್ಲಿದ್ದಾರೆ. ಅಲನ್ ಟೂರಿಂಗ್ ಫೋರ್ಡ್, ಅಲ್ಬರ್ಟ್ ಐನ್ ಸ್ಟಿನ್, ಐಸಾಕ್ ನ್ಯೂಟನ್, ಗೆಲಿಲಿಯೊ, ಮೇರಿ ಕ್ಯೂರಿ, ಶ್ರೀನಿವಾಸ ರಾಮಾನುಜನ್ ಇವರ ಕುರಿತು ಜೀವನ ಚಿತ್ರಗಳನ್ನು ಚಿತ್ರಿಸಿರುವ ಕೃತಿಗಳನ್ನು ರಚಿಸಿದ್ದಾರೆ. ಲ್ಯಾಂಗ್ಲೊ ಪಾರ್ಕರ್ ಎ.ಕೆ. ಅವರ ಕೃತಿಯನ್ನು ‘ಆಸ್ಟ್ರೇಲಿಯಾದ ಜಾನಪದ ಕತೆಗಳು’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ.
