Advertisement
ಯಶಸ್ವಿ ಕಾರ್ಯಕ್ರಮದ ವರದಿ…: ಎಚ್. ಗೋಪಾಲಕೃಷ್ಣ ಸರಣಿ

ಯಶಸ್ವಿ ಕಾರ್ಯಕ್ರಮದ ವರದಿ…: ಎಚ್. ಗೋಪಾಲಕೃಷ್ಣ ಸರಣಿ

ಬಹುಶಃ ಈ ಕಾರ್ಯಕ್ರಮದ ಯಶಸ್ಸು ಮುಂದಿನ ಕಾರ್ಯಕ್ರಮಗಳಿಗೆ ಒಂದು ಮಟ್ಟ ಅಂದರೆ ಮಾಪನ ನಿರ್ಮಿಸಿತು ಎಂದು ಹೇಳಬೇಕು. ಮುಂದಿನ ಕಾರ್ಯಕ್ರಮಗಳು ಈ ಮಟ್ಟ ಅಥವಾ ಇದಕ್ಕಿಂತಲೂ ಮಿಗಿಲಾಗಿರಬೇಕು ಎನ್ನುವ ಸ್ಟ್ಯಾಂಡರ್ಡ್ ನಾವೇ ರೂಪಿಸಿಕೊಳ್ಳಬೇಕಾಯಿತು. ಅದರ ಅಂದರೆ ಮುಂದೆ ನಮ್ಮ ಕಾರ್ಯವ್ಯಾಪ್ತಿ ಹೇಗೆ ಹಿಗ್ಗಿತು ಎನ್ನುವ ನೆನಪುಗಳು ನುಗ್ಗಿ ನುಗ್ಗಿ ಬರುತ್ತಿವೆ… ಹೇಗೆ ಅಂದರೆ ಹಿಂದೆ ನಮ್ಮ ಕಾಲದಲ್ಲಿ ಎಸ್ಸೆಸ್‌ಎಲ್ಸಿ ಪಿಯುಸಿ ರಿಸಲ್ಟ್ ಬಂದ ಮಾರನೇ ದಿವಸ ಮಾತ್ರ ಹೆಚ್ಚಿನ ಅಂಕ ಪಡೆದವರ ವಿವರ ಬರುತ್ತಿತ್ತು. ಈಗ ನೋಡಿ ಆರೇಳು ತಿಂಗಳಾದರೂ ಹೆಚ್ಚಿನ ಅಂಕ ಪಡೆದವರ ಫೋಟೋಗಳು ಬರ್ತಾನೇ ಇರ್ತದೆ, ಇದೂ ಹಾಗೇನೇಯ…
ಎಚ್.
ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೮೪ನೇ ಬರಹ ನಿಮ್ಮ ಓದಿಗೆ

ಹಿಂದಿನ ಕಂತು ಹೀಗೆ ಅಂತ್ಯ ಕಂಡಿತ್ತು….

ಹೀಗೇ ಒಮ್ಮೆ ಗಾಂಧಿ ಸಾಹಿತ್ಯ ಸಂಘದಲ್ಲಿ ಭೇಟಿ ಆದೆವು. ಹಾಗೇ ಮಾತು ಆಡುತ್ತಾ ಆಡುತ್ತಾ ಅಪರಂಜಿ ಆಫೀಸಿಗೆ ಹೋದರೆ ಹೇಗೆ ಅಂತ ಅದರತ್ತ ನಡೆದೆವು. ಆಕಾಶದಲ್ಲಿ ಕರಿ ಕರಿ ಕರಿ ಮೋಡ ಮುಸುಕಿತ್ತು. ಯಾವಾಗ ಬೇಕಾದರೂ ಮಳೆ ಸುರಿಯುವ ಮುನ್ಸೂಚನೆ ಇತ್ತು. ಅಪರಂಜಿ ಆಫೀಸು ಅಂದರೆ ಶ್ರೀ ಶಿವಕುಮಾರ್ ಅವರ ಮನೆ. ಮನೆ ಎದುರು ಕಾಂಪೌಂಡಿನ ಗೇಟು ತೆರೆದು ಒಳ ಹೊಕ್ಕೆವಾ, ದಪ್ಪ ದಪ್ಪನೆಯ ಮಳೆ ಹನಿ ಶುರುವಾಯಿತು….

ಓದುಗ ಪ್ರಭುವೇ ಮುಂದೆ ನಡೆದ ಪ್ರಸಂಗ ಮತ್ತು ಅದರಿಂದ ನಮ್ಮ ಒಳಗೆ ಹೊರಗೆ ಆದ ಪರಿವರ್ತನೆ, ಸಾಹಿತ್ಯ ಲೋಕದಲ್ಲಿ ಇದರ ಪ್ರಭಾವ ಮತ್ತು ಒಂದು ವಿಶಿಷ್ಟ ನೂತನ ಹಾದಿ… ಈ ನೆನಪುಗಳು ಒಂದರ ಮೇಲೆ ಮತ್ತೊಂದು ಈಗಿನ ಅಮೇರಿಕ ಇರಾನ್ ನಡುವಿನ ಯುದ್ಧದಲ್ಲಿನ ಡ್ರೋನ್‌ಗಳಂತೆ. ಮಿಸೈಲ್‌ಗಳಂತೆ ಬರುತ್ತಿವೆ. ಅವುಗಳನ್ನು ನಿಯಂತ್ರಿಸಿ ಕಂಟ್ರೋಲಿಗೆ ತೆಗೆದುಕೊಂಡು ಒಂದರ ನಂತರ ಮತ್ತೊಂದನ್ನು ತಮ್ಮ ಮುಂದೆ ಹರವಲು ತಾವು ಕೊಂಚ ಕಾಯಲೇ ಬೇಕು ಸರ ಅಂಡ್ ಮೇಡಂಮೋರಾ…

ಈಗ ಮುಂದಕ್ಕೆ ನನ್ನ ನೆನಪಿನ ಚಾಪೆಯನ್ನು ಹರವಲೇ?

ಶಿವಕುಮಾರ್ ಅವರ ಮನೆ ಮತ್ತು ಅಪರಂಜಿ ಆಫೀಸು ಎಲ್ಲಾ ಒಂದೇ ಕಡೆ ಅವತ್ತಿಂದಲೂ ಇದೆ. ಅವರ ಮನೆಯ ಕಾಂಪೌಂಡ್ ಗೇಟು ತೆರೆದು ಒಳ ಹೊಕ್ಕರೆ ಅಕ್ಕ ಪಕ್ಕ ಮರಗಳು, ಬಾಗಿಲ ಹತ್ತಿರ ಕೆಲವು ಬಳ್ಳಿಗಳು, ಹೂವಿನ ಗಿಡಗಳು. ಎಡಕ್ಕೆ ಒಂದು ಗ್ಯಾರೇಜು. ಎರಡು ಪುಟ್ಟ ಮೆಟ್ಟಲು ಹತ್ತಿದರೆ ದೊಡ್ಡ ವರಾಂಡ. ಅದು ದಾಟಿದರೆ ದೊಡ್ಡ ಹಾಲ್, ಅದರ ಎದುರು ಒಂದು ರೂಮು. ಹಾಲಿಗೆ ಸೇರಿದ ಹಾಗೆ ಇರುವ ಎರಡು ದೊಡ್ಡ ರೂಮು ಅವಕ್ಕೆ ಸೇರಿರುವ ಬಾತ್ ರೂಮು….. ಹೀಗೆ ಮನೆ ಒಮ್ಮೆ ನೋಡಿದರೆ ಸಾಕು ಕಣ್ಣಲ್ಲಿ ಅಚ್ಚು ಒತ್ತಿದ ಹಾಗೆ. ಎಲ್ಲಾ ಕಡೆಯೂ ಅಂದವಾಗಿ ಕಬೋರ್ಡಿನಲ್ಲಿ ಜೋಡಿಸಿರುವ ಪುಸ್ತಕಗಳು. ಅದರಲ್ಲೂ ಯಾವುದು ಕೇಳ್ತೀರಿ ಅವೆಲ್ಲ ಅಲ್ಲಿ! ಮುಂದೆ ನಮಗೆ ಅವರ ಲೈಬ್ರರಿ ಸಹ ದೊಡ್ಡ ಆಕರ್ಷಣೆಯಾಯಿತು. ಅದರ ಜತೆಗೆ ಪ್ರಶಸ್ತಿಗಳು, ಫಲಕಗಳು, ಗೋಡೆಯ ಮೇಲೆ ಪೇಂಟಿಂಗ್‌ಗಳು… ಹೀಗೆ.

ಬಾಗಿಲು ಬೆಲ್ ಒತ್ತಿದೆವು. ಶಿವಕುಮಾರ್ ಬನ್ನಿ ಬನ್ನಿ ಎಂದು ಬಾಗಿಲು ತೆರೆದು ಒಳಗೆ ಕರೆದರು. ಮಳೆ ಬರ್ತಾ ಇತ್ತು ಅಂತ ಹೇಳಿದೆ. ಕಾಫಿ ಕೊಟ್ಟರು, ಅದರ ಜತೆ ಚಕ್ಕುಲಿ ಕೋಡುಬಳೆ ಸಹ ಇತ್ತು. ಅವರ ಮನೆಗೆ ಹೋದರೆ ಇದೊಂದು ವಿಶೇಷ ಆಕರ್ಷಣೆ ನಮಗೆ! ಸುಮಾರು ಮೂರುವರೆ ದಶಕಗಳಿಂದಲೂ ಈ ವಿಶೇಷ ಆಕರ್ಷಣೆ ಜಾರಿಯಲ್ಲಿದೆ!

ಕಾಫಿ ಮಧ್ಯೆ ಮಳೆಯಲ್ಲಿ ನಮ್ಮ ಮಾತುಕತೆ ಮುಂದುವರೆಯಿತು. ಸಾಹಿತ್ಯ ಲೋಕದ ಬಗ್ಗೆ ಮಾತನಾಡಿದೆವು, ಅಪರಂಜಿ ಬಗ್ಗೆ ಮಾತುಕತೆ ನಡೆಯಿತು. ನಂತರ ನಮ್ಮಬರಹಗಳ ಬಗ್ಗೆ ಮಾತುಕತೆ ನಡೆಯಿತು.

ಅಪರಂಜಿ ಪತ್ರಿಕೆಯ ಓದುಗ ಬಳಗ ಹೆಚ್ಚಿಸುವ ಬಗ್ಗೆ ಮಾತು ಆಡಿದೆವು. ಹೊಸ ಬರಹಗಾರರನ್ನು ಹುಟ್ಟುಹಾಕುವ ಮತ್ತು ಅಪರಂಜಿ ಪತ್ರಿಕೆಗೆ ಅವರನ್ನು ಬಳಸಿಕೊಳ್ಳುವ ಬಗ್ಗೆ ಯೋಚನೆ ಹರಿಯಿತು. ಅಪರಂಜಿ ಪತ್ರಿಕೆಗೆ ಒಂಬತ್ತು ವರ್ಷ ತುಂಬಿ ಹತ್ತನೇ ವರ್ಷಕ್ಕೆ ಕಾಲಿಡುತ್ತಿರುವ ಬಗ್ಗೆ ಶಿವಕುಮಾರ್ ತಿಳಿಸಿದರು.

ಅಪರಂಜಿ ಪತ್ರಿಕೆಯ 10 ವರ್ಷದ ಹುಟ್ಟುಹಬ್ಬ ಮಾಡಿದರೆ ಹೇಗೆ ಎನ್ನುವ ಯೋಚನೆಯನ್ನು ಕೃಷ್ಣಹರಿಯ ಬಿಟ್ಟರು. ಈ ಯೋಜನೆ ಯೋಚನೆಯಾಗಿ ರೂಪಗೊಂಡಿತು ಮತ್ತು ಅಪರಂಜಿ ಪತ್ರಿಕೆ ದಶಮಾನೋತ್ಸವ ಸಮಾರಂಭ ನಡೆಸಲು ಅಲ್ಲೇ ಒಂದು ಯೋಜನೆ ಮತ್ತು ಅದಕ್ಕೆ ಸಂಬಂಧಪಟ್ಟಂತೆ ಒಂದು ಕರಡು ರೂಪುರೇಷೆ ಸಿದ್ಧವಾಯಿತು.

ಸುಮಾರು ಎರಡು ತಿಂಗಳ ಕಾಲ ಈ ಕಾರ್ಯಕ್ರಮದ ಬಗ್ಗೆ ಓಡಾಡಿದೆವು ಎಂದು ಕಾಣಿಸುತ್ತದೆ. ಸುಮಾರು ಭಾಷಣಕಾರರ ಭೇಟಿ ಮಾಡಿದೆವು. ಅಪರಂಜಿ ಹತ್ತನೇ ಹುಟ್ಟಿದ ಹಬ್ಬವಾದ್ದರಿಂದ ಅಪರಂಜಿ ಬಳಗದ ಗುಂಪಿಗೆ ಒಟ್ಟಿಗೆ ಸೇರುವ ಒಂದು ಸಮಾರಂಭ ಆಗಿತ್ತು. ಅದರ ಓದುಗರು ಮತ್ತು ಬರಹಗಾರರು ತುಂಬಾ ಆಸಕ್ತಿ ತೋರಿದರು. ಒಂದೊಂದು ಹಂತ ಮುಗಿದಾಗಲೂ ಅಲ್ಲೇ ಕೂತು ಮುಂದಿನ ಯೋಜನೆಯ ಬಗ್ಗೆ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ಚರ್ಚೆ ಮಾಡುತ್ತಿದ್ದೆವು. ಒಳ್ಳೆಯ ಕಾರ್ಯಕ್ರಮದ ರೂಪುರೇಷೆ ಸಿದ್ಧವಾಯಿತು. ಮಲ್ಲೇಶ್ವರದ ಗಾಂಧಿ ಸಾಹಿತ್ಯ ಸಂಘ ಸಣ್ಣ ಪುಟ್ಟ ಕಾರ್ಯಕ್ರಮಗಳನ್ನು ನಡೆಸುವ ಸ್ಥಳವಾಕಾಶ ಹೊಂದಿತ್ತು. ಅಂದರೆ ಐವತ್ತು ಜನ ಕೂಡಬಹುದಾದಷ್ಟು ದೊಡ್ಡದು ಅದು. ಕೆಲವು ಸಲ ಕುರ್ಚಿ ಹೆಚ್ಚು ಇಕ್ಕಟ್ಟಾಗಿ ಜೋಡಿಸಿದರೆ ಅರವತ್ತು ಸಭಿಕರನ್ನು ಅಳವಡಿಸಬಹುದಾದಷ್ಟು ಸ್ಥಳ!

ಗಾಂಧಿ ಸಾಹಿತ್ಯ ಸಂಘ ನಮ್ಮ ಈ ಕಾರ್ಯಕ್ರಮಕ್ಕೆ ತುಂಬಾ ಚಿಕ್ಕದು ಅನಿಸಿತು. ಮಲ್ಲೇಶ್ವರದಲ್ಲಿ ಗಾಂಧಿ ಸಾಹಿತ್ಯ ಸಂಘ ಬಿಟ್ಟರೆ ಗೋಖಲೆ ಇನ್ಸ್ಟಿಟ್ಯೂಟ್ ಇದೆ, ಆದರೆ ಅದೂ ಸಹ ಚಿಕ್ಕದು. ಬೆಂಗಳೂರಿನ ಮತ್ತೊಂದು ಕಡೆಯಿಂದ ಮಲ್ಲೇಶ್ವರಕ್ಕೆ ಬರುವುದು ತುಸು ತ್ರಾಸು ಅನಿಸಿತು. ನಗರದ ಮಧ್ಯ ಭಾಗ, ಎಲ್ಲರಿಗೂ ಬರಲು ಅನುಕೂಲ ಮತ್ತು ಅಷ್ಟೂ ಸಭಿಕರು ಆರಾಮವಾಗಿ ಕೂತು ಕಾರ್ಯಕ್ರಮ ವೀಕ್ಷಿಸುವ ಸೌಲಭ್ಯ ಇರುವ ಸ್ಥಳ ಎಂದರೆ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿ ಇರುವ ಭಾರತೀಯ ವಿದ್ಯಾ ಭವನ ಎಂದು ನಿರ್ಧಾರವಾಯಿತು. ಭಾರತೀಯ ವಿದ್ಯಾ ಭವನದ ಅಂದಿನ ಅಧ್ಯಕ್ಷರು ಶ್ರೀ ಮತ್ತೂರು ಕೃಷ್ಣಮೂರ್ತಿ ಅವರು.

ಕಾರ್ಯಕ್ರಮ ಭಾನುವಾರ ಸೆಪ್ಟೆಂಬರ್ 26 1993ರಲ್ಲಿ ನಡೆಯಿತು. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿ ಇರುವ ಭಾರತೀಯ ವಿದ್ಯಾ ಭವನ ಇಲ್ಲಿ ಈ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಬಗ್ಗೆ ಒಂದು ಪುಟ್ಟ ವಿವರಣೆ ನಿಮಗೆ ಕೊಡಲೇಬೇಕು. ಕೈಗಾರಿಕಾ ರಂಗದ ಸಾಹಿತ್ಯ ವೇದಿಕೆಯ ಬ್ಯಾನರ್‌ನಲ್ಲಿ ಈ ಕಾರ್ಯಕ್ರಮ ನಡೆಯಿತು. ಇದರ ಬಗ್ಗೆ ಒಂದು ವಿವರ ಹೀಗಿದೆ ನೋಡಿ.

ಇದು ನಮ್ಮ ಇನ್ವಿಟೇಶನ್‌ನ ಮೊದಲ ಪುಟ

ಕೈಗಾರಿಕಾ ರಂಗದ ಸಾಹಿತ್ಯ ವೇದಿಕೆ
ಜಾಲಹಳ್ಳಿ, ಬೆಂಗಳೂರು
ಅವರಿಂದ

ಅಪರಂಜಿಯ ಹತ್ತು ವರ್ಷದ ಹಬ್ಬದ ಆಚರಣೆ

ಸ್ಥಳ:

ಭಾರತೀಯ ವಿದ್ಯಾಭವನ,
ರೇಸ್ ಕೋರ್ಸ್ ರಸ್ತೆ,
ಬೆಂಗಳೂರು

ದಿನಾಂಕ:
ಭಾನುವಾರ, 26 ಸೆಪ್ಟೆಂಬರ್ 1993

ಕಾರ್ಯಕ್ರಮ ಬೆಳಿಗ್ಗೆ 10.30ಕ್ಕೆ ಆರಂಭ ಎಂದು ನಿಗದಿ ಆಗಿತ್ತು. ಯಾವುದೇ ಕಾರಣಕ್ಕೂ ಕಾರ್ಯಕ್ರಮ ಸಮಯಕ್ಕೆ ಸರಿಯಾಗಿ ಆರಂಭವಾಗಬೇಕು ಎಂದು ನಿಶ್ಚಯಿಸಿದ್ದೆವು. ಕಾರ್ಯಕ್ರಮದ ಆರಂಭ ತಡವಾಗುವುದು ರಾಜಕಾರಣಿಗಳನ್ನು, ಮಂತ್ರಿಗಳನ್ನು ಕರೆದಾಗ ಎಂದು ಗೊತ್ತಾಗಿತ್ತು; ಬೇರೆಯವರ ಕಾರ್ಯಕ್ರಮಗಳನ್ನು ನೋಡಿ. ನಮ್ಮ ಅಂದಿನವರೆಗಿನ ಕಾರ್ಯಕ್ರಮಗಳಿಗೂ ರಾಜಕಾರಣಿಗಳನ್ನು ಆಹ್ವಾನಿಸಿರಲಿಲ್ಲ. ಅವತ್ತು ಹಾಕಿಕೊಂಡ ಒಂದು ರೂಲು ಮುಂದೆ ಅನಿರ್ಬಂಧಿತವಾಗಿ ಮುಂದುವರೆಯಿತು.

ಕಾರ್ಯಕ್ರಮದ ಒಂದು ಪುಟ್ಟ ವಿವರ ಇಲ್ಲಿ ಕೊಟ್ಟುಬಿಟ್ಟು ಮುಂದಕ್ಕೆ ಹೋಗುತ್ತೇನೆ. ಕಾರ್ಯಕ್ರಮ ಶ್ರೀ ಶಿವಮೊಗ್ಗ ಸುಬ್ಬಣ್ಣ ಅವರ ಪ್ರಾರ್ಥನೆಯೊಂದಿಗೆ ಶುರುವಾಯಿತು. ನಿರೂಪಣೆ ಡಾ. ಓಂ ಪ್ರಕಾಶ್ ಹಾಗೂ ನನ್ನ ಜವಾಬ್ದಾರಿ.

ಕಾರ್ಯಕ್ರಮ ಶುರುವಿಗೆ ಮೊದಲೇ ಒಳಗೆ ಕೂರಲು ಸ್ಥಳ ಸಿಗದೇ ಪ್ರೇಕ್ಷಕರು ಮೆಟ್ಟಿಲ ಮೇಲೆ, ಬಾಗಿಲಲ್ಲಿ, ಕಿಟಕಿ ಹತ್ತಿರ ಹೊರಗೆ ನಿಂತು ಕೂತು ಬಿಟ್ಟಿದ್ದರು. ಕಾಲ ಸರಿದಹಾಗೆ ತಮ್ಮ ಕಷ್ಟ ಮರೆತು ಕಾರ್ಯಕ್ರಮ ವೀಕ್ಷಿಸಿದರು.

ಆಗ ಎರಡು ಪ್ರಮುಖ ಹಾಸ್ಯಪತ್ರಿಕೆಗಳು ಕನ್ನಡದಲ್ಲಿ. ಒಂದು ಅಪರಂಜಿ, ಮತ್ತೊಂದು ವಿನೋದ. ವಿನೋದ ಹಾಸ್ಯಮಾಸ ಪತ್ರಿಕೆಯ ಸಂಪಾದಕ ಶ್ರೀ ಜಿ. ನಾರಾಯಣ ಅವರು ಉದ್ಘಾಟನಾ ಭಾಷಣ ಮಾಡಿದರು. ಉದ್ಘಾಟನಾ ಭಾಷಣದಲ್ಲಿ ಹಾಸ್ಯಪತ್ರಿಕೆ ಹೇಗೆ ಇರಬೇಕು ಎನ್ನುವುದನ್ನು ಅವರು ತೆಳು ಹಾಸ್ಯದೊಂದಿಗೆ ವಿವರಿಸಿದರು. ಉದ್ಘಾಟನಾ ಭಾಷಣದ ನಂತರ ನಗುವಿನ ಹೊಳೆ ಹರಿಯಿತು. ನಂತರದ ಭಾಷಣಕಾರರು ಆಗಲೇ ವಿವಿಧ ಕ್ಷೇತ್ರಗಳಲ್ಲಿ ಪರಿಣತರು. ಅವರ ಕ್ಷೇತ್ರಕ್ಕೆ ನೇರ ಸಂಬಂಧ ಪಟ್ಟಂತೆ ಸಾಹಿತಿಗಳ ಅತ್ಯಂತ ಆತ್ಮೀಯರೂ ಸಹ. ತಮ್ಮ ತಮ್ಮ ಒಡನಾಟಗಳ ನೆನಪು ಹರಿಯಿತು.

ಕೊರವಂಜಿ ಪತ್ರಿಕೆಯ ಸಂಪಾದಕ ಶ್ರೀ ರಾ. ಶಿ ಅವರನ್ನು ಕುರಿತು ಶ್ರೀ ಅರಾಸೆ ಅವರು ಮಾತನಾಡಿದರು. ಮುಂದಿನ ಭಾಷಣಕಾರರು ಶ್ರೀ ಸಿ ಆರ್ ಸಿಂಹ ಅವರು. ಅರಾಸೆ ಅವರ ಭಾಷಣ ಮುಗಿಯುತ್ತಿದ್ದ ಹಾಗೆ ಸಿಂಹ ಎಂಟ್ರಿ ಕೊಟ್ಟರು. ಕೈಲಿ ಮೈಕ್ ಹಿಡಿದು ಅರಾಸೆ ಅವರಿಗೆ ವಂದನೆ ಅರ್ಪಿಸುತ್ತಿದ್ದ ನಾನು ಓ ಸಿಂಹ ಹಾಜರು ಅಂದೆ. ಸಿಂಹ ಹಾಗೇ ಕೈ ಆಡಿಸುತ್ತಾ ವೇದಿಕೆ ಏರಿದರು. ಅವರು ಶ್ರೀ ಟಿ ಪಿ ಕೈಲಾಸಂ ಅವರ ಕೃತಿಗಳನ್ನು ಕುರಿತು ಒಂದು ಅಮೋಘ ಹಾಸ್ಯಭರಿತ ಉಪನ್ಯಾಸ ಮತ್ತು ನಟನೆ ಮಾಡುತ್ತಾ ಕೈಲಾಸಂ ಅವರನ್ನು ಕಣ್ಣಿಗೆ ಕಟ್ಟಿ ಕೊಟ್ಟರು.

ನಂತರ ನಾ. ಕಸ್ತೂರಿ ಅವರನ್ನು ಕುರಿತು ಶ್ರೀ ಎಚ್. ಕೆ.ರಂಗನಾಥ್ ಅವರ ವಿದ್ವತ್ ಪೂರ್ಣ ಭಾಷಣ, ವ್ಯಕ್ತಿ ಮತ್ತು ಕೃತಿ ಕುರಿತು. ಜತೆಗೆ ಆಕಾಶವಾಣಿ ನಂಟು… ಈ ಭಾಷಣ ಮುಂದೆ ಹೇಗೆ ನಮಗೆ ಒಂದು ಪ್ರೇರಕ ಶಕ್ತಿ ಆಯಿತು ಎನ್ನುವುದು ಒಂದು ಕತೆ. ಅದನ್ನು ಮುಂದೆ ಹೇಳುತ್ತೇನೆ ನೆನಪಿಸಿ.

ಶ್ರೀ ನೀಲತ್ತಹಳ್ಳಿ ಕಸ್ತೂರಿ ಅವರು ಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ನಿಕಟರು. ಗೊರೂರು ಅವರ ಬಗ್ಗೆ ನೀಲತ್ತಹಳ್ಳಿ ನೆನಪು ಹಂಚಿಕೊಂಡರು. ಶ್ರೀ ಜಿ ಪಿ ರಾಜರತ್ನಮ್ ಅವರನ್ನು ಕುರಿತು ಶ್ರೀ ಅರಾ ಮಿತ್ರ ಅವರ ಮಾತು. ಶ್ರೀ ಅರಾ ಮಿತ್ರ ಅವರ ಮಾತು ಎಂದರೆ ಅದು ಒಂದು ವಿದ್ವತ್ ಪ್ರವಾಹ ಮತ್ತು ನಗುವಿನ ಸಮುದ್ರದಲ್ಲಿ ಈಜು ಹೊಡೆದ ಅನುಭವ. ಇವರ ವಿದ್ವತ್, ಭಾಷಣ ತಯಾರಿಕೆ, ಭಾಷಣ…. ಮುಂತಾದವುಗಳ ಬಗ್ಗೆ ಮುಂದೆ ತುಂಬಾ ವಿಸ್ತೃತವಾಗಿ ಹೇಳುತ್ತೇನೆ.

ಒಬ್ಬೊಬ್ಬ ಭಾಷಣಕಾರರಿಗೂ ಸಮಯ ನಿಗದಿ ಪಡಿಸಿ ಸಮಯ ಕಾಪಾಡಿಕೊಳ್ಳುವಂತೆ ಕೋರಿಕೊಂಡಿದ್ದೆವು. ಆದರೂ ಕೆಲವು ಭಾಷಣಕಾರರು ಬೇರೆಯವರ ಸಮಯ ಅಪಹರಿಸಿಬಿಟ್ಟಿದ್ದರು. ಮಧ್ಯಾಹ್ನ ಊಟದ ಮೊದಲಿನ ಕೊನೆ ಭಾಷಣ ಶ್ರೀ ಎಂ ಎಸ್ ಕೆ ಪ್ರಭು ಅವರದ್ದು. Thermodynamics of Hasya ಅಂದರೆ ವೈಜ್ಞಾನಿಕ ಹಾಸ್ಯ ಮನೋಭಾವ ಬಗ್ಗೆ ಪ್ರಭು ಅವರ ಮಾತು. ತುಂಬಾ ಸೊಗಸಾಗಿ ಪ್ರಿಪೇರ್ ಆಗಿ ಬಂದಿದ್ದ ಪ್ರಭು ಒಳ್ಳೆಯ ಭಾಷಣ ಕೊಟ್ಟರು. ಆಕಾಶವಾಣಿಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಪ್ರಭು ನಮಗೆಲ್ಲರಿಗೂ ಒಳ್ಳೆಯ ಸ್ನೇಹಿತರು. ಅದೂ ಅಲ್ಲದೆ ಶ್ರೀ ಭೈರಪ್ಪನವರ ಮೊದಲ ಓದುಗ. ಸ್ವಲ್ಪವೂ ಗತ್ತು ಗಾಂಭೀರ್ಯ ತೋರಿಸದೇ ನನ್ನಂತಹ ಲಿಲಿಪುಟ್‌ಗಳ ಜತೆ ಬೆರೆಯುತ್ತಿದ್ದರು. ಅವರ ಮಾತಿನ ನಂತರ ಊಟದ ಬ್ರೇಕು!

ಊಟದ ನಂತರ ಶ್ರೀಎಸ್.ಕೃಷ್ಣಮೂರ್ತಿ ಮತ್ತು ತಂಡದವರು ಕಣ್ಣು ಮುಚ್ಚಾಲೆ ಎನ್ನುವ ಒಂದು ವಿಶಿಷ್ಟ ನಗೆ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೀ ಕೃಷ್ಣಮೂರ್ತಿ ಅವರು ಸಂಗೀತ ಕಲಾನಿಧಿಗಳು, ಹಲವು ಸಂಗೀತ ಪುಸ್ತಕಗಳ ಕರ್ತೃಗಳು ಮತ್ತು ಮೈಸೂರು ವಾಸುದೇವಚಾರ್ಯರ ಮೊಮ್ಮಗ.

ಕಣ್ಣುಮುಚ್ಚಾಲೆ ನಂತರ “ಸಿಡಿತ” ಹೆಸರಿನ ನಗೆ ಸಿಡಿತಗಳ ಹಬ್ಬ. ಇದನ್ನು ಹೆಸರಾಂತ ನಗೆಗಾರರು ನಡೆಸಿಕೊಟ್ಟರು. ಇದರ ನಂತರ ಕಾಫಿ ಬ್ರೇಕ್.

ನಂತರ ತುತ್ತೂರಿ ಹೆಸರಿನ ಕಾರ್ಯಕ್ರಮ. ಈ ಹೆಸರನ್ನು, ಸಿಡಿತ ಹೆಸರನ್ನೂ ಸಹ ಶ್ರೀ ಶಿವಕುಮಾರ್ ಹುಡುಕಿದ್ದರು. ನಮ್ಮ ಬಗ್ಗೆ ನಾವೇ ಹೇಳಿಕೊಳ್ಳಬೇಕಾದ್ದು ತುತ್ತೂರಿ ಕಾರ್ಯಕ್ರಮವಾಗಿತ್ತು. ಅಪರಂಜಿ ಪತ್ರಿಕೆ ಬೆಳೆದು ಬಂದದ್ದು, ಅದರಲ್ಲಿನ ತಿಳಿ ಹಾಸ್ಯ, ಕೊರವಂಜಿ ಪತ್ರಿಕೆ…. ಇವನ್ನು ಕುರಿತು ಶ್ರೀ ಶ್ರೀನಿವಾಸ ವೈದ್ಯ ಅವರು ಮಾತನಾಡಿದರು. ಶ್ರೀ ಶ್ರೀನಿವಾಸ ವೈದ್ಯ ಅವರು ಕೆನರಾ ಬ್ಯಾಂಕ್‌ನಲ್ಲಿ ಉನ್ನತ ಹುದ್ದೆಯಲ್ಲಿದ್ದು ನಿವೃತ್ತರು ಮತ್ತು ಉತ್ತಮ ಭಾಷಣಕಾರರಾಗಿ ಹೆಸರು ಮಾಡಿದ್ದರು. ಅಪರಂಜಿ ಪತ್ರಿಕೆಗೆ ಲೇಖನ ಬರೆಯುತ್ತಿದ್ದರು. ಇವರು ಹಲವಾರು ಪ್ರಬಂಧ, ಸಣ್ಣಕತೆ ಬರೆದಿದ್ದರು. ಇವರ ಹಳ್ಳ ಬಂತು ಹಳ್ಳ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿತು.

ಕೈಗಾರಿಕಾರಂಗದ ಸಾಹಿತ್ಯ ವೇದಿಕೆಯ ಹುಟ್ಟು ಮತ್ತು ಅದರ ಚಟುವಟಿಕೆ ಕುರಿತು ವೇದಿಕೆಯ ಅಧ್ಯಕ್ಷ ಶ್ರೀ ಪ್ರಸನ್ನ ವೆಂಕಟೇಶ ಮೂರ್ತಿ ಮಾತನಾಡಿದರು. ಇವರು ಐ ಟಿ ಐ ಕಾರ್ಖಾನೆಯಲ್ಲಿ ಉನ್ನತ ಹುದ್ದೆಯಲ್ಲಿದ್ದರು. ಇದರ ನಂತರ ಸರಸ ಕವಿ ಗೋಷ್ಠಿ. ಇದನ್ನು ಆಲ್ ಇಂಡಿಯಾ ರೇಡಿಯೋದ ಡಾ. ಬಸವರಾಜ ಸಾದರ ಅವರು ನಡೆಸಿಕೊಟ್ಟರು. ಅಂದಿನ ಕವಿ ಗೋಷ್ಠಿಯ ಸರಸ ಕವಿಗಳು..

ಎಚ್. ಕೆ ರಂಗನಾಥ್, ಎಚ್. ದುಂಡಿರಾಜ್, ಎಂ ಎನ್ ವ್ಯಾಸರಾವ್, ಚಿಂತಾಮಣಿ ಕೂಡ್ಲಿಕೆರೆ, ಪ್ರಕಾಶ್, ವೇಣುಗೋಪಾಲ ಸೊರಬ, ವಸಂತ ಪ್ರಸಾದ್, ಶಿವಕುಮಾರ್, ಬಿ ಎಸ್ ಚಂದ್ರಶೇಖರ್, ನೀರಗುಂದ ಕೇಶವಮೂರ್ತಿ, ಹೇಮಲತಾ ಪಾಟೀಲ್, ಬೇಲೂರ್ ರಾಮಮೂರ್ತಿ, ಭಾಗ್ಯ ಜಯಸುದರ್ಶನ, ಪ್ರಾಣೇಶ ರಾವ್ ಮತ್ತು ಅರಾಸೆ…

ಕವಿಗೋಷ್ಠಿ ಕುರಿತ ನನ್ನ (ಈ ಕವಿಗೋಷ್ಠಿಗೆ ಕೊಂಚವೂ ನಂಟು ಇಲ್ಲದ) ಲೈಟರ್ ಅನಿಸಿಕೆ ಮುಂದೆ ಯಾವಾಗಲಾದರೂ ನಿಮ್ಮ ಮುಂದೆ ಹೇಳುತ್ತೇನೆ.

ನಾವು ನಿಗದಿಪಡಿಸಿದ್ದ ಸಮಯ over take ಆಗಿತ್ತು. ಆದರೂ ಜನ ಮುಂದೇನು ಮುಂದೇನು ಎಂದು ಕಾಯುತ್ತಿದ್ದರು!

ಕವಿಗೋಷ್ಠಿ ಒಂದು ಹಿಟ್ ಕಾರ್ಯಕ್ರಮ ಅನಿಸಿತು. ಕಾರ್ಯಕ್ರಮದ ಅಂಚಿಗೆ ಸಮಾರೋಪ ಭಾಷಣ ಮಾಡಿದವರು ಖ್ಯಾತ ವಿಮರ್ಶಕ ಶ್ರೀ ಕೆ. ನರಸಿಂಹ ಮೂರ್ತಿ ಅವರು. ಇವರು ಕರ್ನಾಟಕ ಸರ್ಕಾರದಲ್ಲಿ ಹಿರಿಯ ಹುದ್ದೆಯಲ್ಲಿದ್ದು ನಿವೃತ್ತರಾಗಿದ್ದರು ಮತ್ತು ನಮ್ಮಂತಹ ಚಿಲ್ಟಾರಿಗಳನ್ನು ಕಂಡರೆ ಪ್ರೀತಿ ಹೆಚ್ಚು. ಕಾರ್ಯಕ್ರಮಗಳಿಗೆ ಬಂದು ಕೊನೆಯವರೆಗೂ ಕೂತು ಬೆನ್ನು ತಟ್ಟುತ್ತಿದ್ದ ಇಂತಹ ಹಿರಿಯರ ನೆರಳಿನಲ್ಲಿ ನಾವು ಬೆಳೆದೆವು ಎನ್ನುವ ಸಂತೋಷ ನನ್ನ ಪೀಳಿಗೆಯ ಸ್ನೇಹಿತರಿಗೆ.

ಇವೆಲ್ಲದರ ಜತೆಗೆ ಅವತ್ತು ಸುಮಾರು ಪುಸ್ತಕಗಳು ಬಿಡುಗಡೆ, ಪ್ರದರ್ಶನ ಮತ್ತು ಮಾರಾಟದ ಸೌಭಾಗ್ಯ ಪಡೆದವು. ಬೆಳಗಿನಿಂದ ಸಂಜೆವರೆಗೂ ಕೂತು ನಿಂತು ಗೋಡೆಗೆ ಒರಗಿ ನಾವು ಕೊಟ್ಟ ಎಲ್ಲಾ ರೀತಿಯ ಹಿಂಸೆಗಳನ್ನೂ ಸಹಿಸಿಕೊಂಡ ಸಭಿಕರ ಬಗ್ಗೆ ಇಂದಿಗೂ ಎದೆ ತುಂಬುತ್ತದೆ.

ಈ ಅಭೂತಪೂರ್ವ ಕಾರ್ಯಕ್ರಮ ನಮ್ಮಲ್ಲಿ ಒಂದು ಮೋರಲೇ (morale) ಬೂಸ್ಟ್ ಮಾಡಿತು. ಎರಡು ಗಂಟೆ ಮೂರು ಗಂಟೆಗಳ ಕಾರ್ಯಕ್ರಮಕ್ಕೆ ಸೀಮಿತವಾಗಿದ್ದ ನಮಗೆ ಇಡೀ ದಿವಸದ ಕಾರ್ಯಕ್ರಮ ನಡೆಸಬಹುದು ಎನ್ನುವ ಆತ್ಮ ವಿಶ್ವಾಸ ಹುಟ್ಟಿತು. ಇಡೀ ಕಾರ್ಯಕ್ರಮಕ್ಕೆ(ಊಟ ತಿಂಡಿಗೂ ಸಹ) ಆಯೋಜಕರು ಸಿಕ್ಕಿದ್ದು ಮುಂದೆ ಇಂತಹ ಕಾರ್ಯಕ್ರಮ ಹಮ್ಮಿಕೊಂಡರೆ ಹಮ್ಮು ಬಿಮ್ಮು ಬಿಟ್ಟು ಪ್ರಾಯೋಜಕರ ಬಳಿಗೆ ಹೋಗಬಹುದು ಎನ್ನುವ ಧೈರ್ಯ ಬಂದಿತು. ಒಟ್ಟಿನಲ್ಲಿ ಜನ ಮೆಚ್ಚುವ ಕಾರ್ಯಕ್ರಮ ಹಮ್ಮಿಕೊಂಡರೆ ಯಶಸ್ಸು ಅದಾಗಿ ಅದೇ ಬರುತ್ತೆ ಅನಿಸಿತು. ಜನಕ್ಕೆ ತಮ್ಮ ಜಂಜಾಟಗಳ ನಡುವೆ ಕೊಂಚ ನಗು ಬಂದರೆ ಅಂತಹ ಕಾರ್ಯಕ್ರಮಗಳು ಹುಡುಕಿ ಬರುತ್ತಾರೆ ಎಂದು ಮುಂದೆ ಅರಿವಿಗೆ ಬಂತು.

ಬಹುಶಃ ಈ ಕಾರ್ಯಕ್ರಮದ ಯಶಸ್ಸು ಮುಂದಿನ ಕಾರ್ಯಕ್ರಮಗಳಿಗೆ ಒಂದು ಮಟ್ಟ ಅಂದರೆ ಮಾಪನ ನಿರ್ಮಿಸಿತು ಎಂದು ಹೇಳಬೇಕು. ಮುಂದಿನ ಕಾರ್ಯಕ್ರಮಗಳು ಈ ಮಟ್ಟ ಅಥವಾ ಇದಕ್ಕಿಂತಲೂ ಮಿಗಿಲಾಗಿರಬೇಕು ಎನ್ನುವ ಸ್ಟ್ಯಾಂಡರ್ಡ್ ನಾವೇ ರೂಪಿಸಿಕೊಳ್ಳಬೇಕಾಯಿತು. ಅದರ ಅಂದರೆ ಮುಂದೆ ನಮ್ಮ ಕಾರ್ಯವ್ಯಾಪ್ತಿ ಹೇಗೆ ಹಿಗ್ಗಿತು ಎನ್ನುವ ನೆನಪುಗಳು ನುಗ್ಗಿ ನುಗ್ಗಿ ಬರುತ್ತಿವೆ… ಹೇಗೆ ಅಂದರೆ ಹಿಂದೆ ನಮ್ಮ ಕಾಲದಲ್ಲಿ ಎಸ್ಸೆಸ್‌ಎಲ್ಸಿ ಪಿಯುಸಿ ರಿಸಲ್ಟ್ ಬಂದ ಮಾರನೇ ದಿವಸ ಮಾತ್ರ ಹೆಚ್ಚಿನ ಅಂಕ ಪಡೆದವರ ವಿವರ ಬರುತ್ತಿತ್ತು. ಈಗ ನೋಡಿ ಆರೇಳು ತಿಂಗಳಾದರೂ ಹೆಚ್ಚಿನ ಅಂಕ ಪಡೆದವರ ಫೋಟೋಗಳು ಬರ್ತಾನೇ ಇರ್ತದೆ, ಇದೂ ಹಾಗೇನೇಯ ಸರ.

ಮೇಡಂಮೋರೆ, ಸರ ಈ ರಿಸಲ್ಟ್ ಬಂದು ಫೋಟೋಗಳು ಬಂದಹಾಗೇನೇ ಅಂದಿನ ಚಿತ್ರಗಳನ್ನು ಜೋಡಿಸಿಕೊ ಬೇಕ್ರಿ… ಅದೆಲ್ಲಾ ಒಂದರ ಪಕ್ಕ ಒಂದು ಮಡಗಿ (ಮಡಗಿ ಅನ್ನುವ ಪದ ಪ್ರಯೋಗ ಮಾಡಬಾರದು ಅಂತ ನನ್ನವ್ವ ಹೇಳ್ತಾ ಇತ್ತು. ಯಾಕೆ ಅಂತ ತಿಳಿಯದು. ಅಮ್ಮ ಈಗಿಲ್ಲ ಸ್ವರ್ಗದಲ್ಲಿ ಅವರೆ. ಅದರಿಂದ ಮಡಗಿ ಪದ ಬೇಡ್ರಿ) ಒಂದರ ಪಕ್ಕ ಒಂದು ಇಟ್ಟು ಜೋಡಿಸಿ ಹೇಳ್ತೇನೆ, ಕೊಂಚ ಕಾಯಿರಿ….!

ಇನ್ನೂ ಇದೆ…

About The Author

ಎಚ್. ಗೋಪಾಲಕೃಷ್ಣ

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ